028: ಆಯುವಂಶಕಥನಮ್

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಖಿಲಭಾಗೇ ಹರಿವಂಶಃ

ಹರಿವಂಶ ಪರ್ವ

ಅಧ್ಯಾಯ 28

ಸಾರ

ರಾಜಾ ರಜಿ ಮತ್ತು ಅವನ ಪುತ್ರರ ಚರಿತ್ರೆ; ಇಂದ್ರನು ತನ್ನ ಸ್ಥಾನದಿಂದ ಭ್ರಷ್ಟನಾಗಿ ಪುನಃ ಅಲ್ಲಿ ಪ್ರತಿಷ್ಠಿತನಾದುದು (1-37).

ವೈಶಂಪಾಯನ ಉವಾಚ
ಆಯೋಃ ಪುತ್ರಾಸ್ತಥಾ ಪಂಚ ಸರ್ವೇ ವೀರಾ ಮಹಾರಥಾಃ ।
ಸ್ವರ್ಭಾನುತನಯಾಯಾಂ ಚ ಪ್ರಭಾಯಾಂ ಜಜ್ಞಿರೇ ನೃಪ ।। ೧-೨೮-೧

ವೈಶಂಪಾಯನನು ಹೇಳಿದನು: “ನೃಪ! ಆಯುವಿಗೆ ಐವರು ಪುತ್ರರಾದರು. ಎಲ್ಲರೂ ವೀರರೂ ಮಹಾರಥರೂ ಆಗಿದ್ದರು. ಅವರು ಸ್ವರ್ಭಾನು1ವಿನ ಪುತ್ರಿ ಪ್ರಭಾಳಲ್ಲಿ ಜನಿಸಿದರು.

ನಹುಷಃ ಪ್ರಥಮಂ ಜಜ್ಞೇ ವೃದ್ಧಶರ್ಮಾ ತತಃ ಪರಮ್ ।
ರಂಭೋರಜಿರನೇನಾಶ್ಚ ತ್ರಿಷು ಲೋಕೇಷು ವಿಶ್ರುತಾಃ ।। ೧-೨೮-೨

ಪ್ರಥಮನಾಗಿ ನಹುಷನು ಹುಟ್ಟಿದನು. ಅವನ ನಂತರ ವೃದ್ಧಶರ್ಮ. ನಂತರ ರಂಭ, ರಜಿ ಮತ್ತು ಅನೇನ. ಈ ಮೂವರೂ ಲೋಕವಿಶ್ರುತರಾಗಿದ್ದರು.

ರಜಿಃ ಪುತ್ರಶತಾನೀಹ ಜನಯಾಮಾಸ ಪಂಚ ವೈ ।
ರಾಜೇಯಮಿತಿ ವಿಖ್ಯಾತಂ ಕ್ಷತ್ರಮಿಂದ್ರಭಯಾವಹಮ್ ।। ೧-೨೮-೩

ರಜಿಯು ಐದುನೂರು ಪುತ್ರರನ್ನು ಹುಟ್ಟಿಸಿದನು. ಅವರು ಕ್ಷತ್ರಿಯ ರಾಜೇಯರೆಂದು ವಿಖ್ಯಾತರಾದರು. ಇಂದ್ರನೂ ಅವರಿಗೆ ಹೆದರುತ್ತಿದ್ದನು.

ಯತ್ರ ದೇವಾಸುರೇ ಯುದ್ಧೇ ಸಮುತ್ಪನ್ನೇ ಸುದಾರುಣೇ ।
ದೇವಾಶ್ಚೈವಾಸುರಾಶ್ಚೈವ ಪಿತಾಮಹಮಥಾಬ್ರುವನ್ ।। ೧-೨೮-೪

ದೇವಾಸುರರ ನಡುವೆ ಸುದಾರುಣ ಯುದ್ಧವು ಉಂಟಾದಾಗ ದೇವಾಸುರರಿಬ್ಬರೂ ಪಿತಾಮಹನಿಗೆ ಹೇಳಿದರು:

ಆವಯೋರ್ಭಗವನ್ಯುದ್ಧೇ ಕೋ ವಿಜೇತಾ ಭವಿಷ್ಯತಿ ।
ಬ್ರೂಹಿ ನಃ ಸರ್ವಭೂತೇಶ ಶ್ರೋತುಮಿಚ್ಛಾಮಿ ತೇ ವಚಃ ।। ೧-೨೮-೫

“ಸರ್ವಭೂತೇಶ! ಭಗವನ್! ನಮ್ಮಿಬ್ಬರಲ್ಲಿ ಯಾರು ಯುದ್ಧದಲ್ಲಿ ವಿಜಯಿಯಾಗುತ್ತಾರೆ? ನಮಗೆ ಹೇಳು. ನಿನ್ನ ಮಾತನ್ನು ಕೇಳ ಬಯಸುತ್ತೇವೆ.”

ಬ್ರಹ್ಮೋವಾಚ
ಯೇಷಾಮರ್ಥಾಯ ಸಂಗ್ರಾಮೇ ರಜಿರಾತ್ತಾಯುಧಃ ಪ್ರಭುಃ ।
ಯೋತ್ಸ್ಯತೇ ತೇ ಜಯಿಷ್ಯಂತಿ ತ್ರೀನ್ಲೋಕಾನ್ನಾತ್ರ ಸಂಶಯಃ ।। ೧-೨೮-೬

ಬ್ರಹ್ಮನು ಹೇಳಿದನು: “ಪ್ರಭು ರಜಿಯು ಯಾರ ಪರವಾಗಿ ಸಂಗ್ರಾಮದಲ್ಲಿ ಆಯುಧವನ್ನು ಹಿಡಿದು ಯುದ್ಧಮಾಡುತ್ತಾನೋ ಅವರು ಮೂರೂ ಲೋಕಗಳನ್ನೂ ಜಯಿಸುತ್ತಾರೆ ಎನ್ನುವುದರಲ್ಲಿ ಸಂಶಯವೇ ಇಲ್ಲ.

ಯತೋ ರಜಿರ್ಧೃತಿಸ್ತತ್ರ ಶ್ರೀಶ್ಚ ತತ್ರ ಯತೋ ಧೃತಿಃ ।
ಯತೋ ಧೃತಿಶ್ಚ ಶ್ರೀಶ್ಚೈವ ಧರ್ಮಸ್ತತ್ರ ಜಯಸ್ತಥಾ ।। ೧-೨೮-೭

ಯಾರ ಪಕ್ಷದಲ್ಲಿ ರಜಿಯು ಇರುವನೋ ಅಲ್ಲಿ ಶ್ರೀಯು ಇರುವಳು. ಎಲ್ಲಿ ಶ್ರೀ ಇರುವಳೋ ಅಲ್ಲಿ ಧೃತಿಯೂ ಇರುವಳು. ಮತ್ತು ಎಲ್ಲಿ ಧೃತಿ, ಶ್ರೀ ಮತ್ತು ಧರ್ಮಗಳಿರುವವೋ ಅಲ್ಲಿ ಜಯವಿರುತ್ತದೆ.”

ತೇ ದೇವದಾನವಾಃ ಪ್ರೀತಾ ದೇವೇನೋಕ್ತಾ ರಜೇರ್ಜಯೇ ।
ಅಭ್ಯಯುರ್ಜಯಮಿಚ್ಛಂತೋ ವೃಣ್ವಾನಾ ಭರತರ್ಷಭಮ್ ।। ೧-೨೮-೮

ರಜಿಯಲ್ಲಿ ಜಯವಿದೆಯೆಂದು ದೇವನು ಹೇಳಲು ದೇವ-ದಾನವರು ಪ್ರೀತರಾಗಿ ಜಯವನ್ನು ಇಚ್ಛಿಸಿ ಭರತರ್ಷಭ ರಜಿಯನ್ನು ವರಿಸಲು ಆಗಮಿಸಿದರು.

ಸ ಹಿ ಸ್ವರ್ಭಾನುದೌಹಿತ್ರಃ ಪ್ರಭಾಯಾಂ ಸಮಪದ್ಯತ ।
ರಾಜಾ ಪರಮತೇಜಸ್ವೀ ಸೋಮವಂಶಪ್ರವರ್ಧನಃ ।। ೧-೨೮-೯

ಅವನೇ ರಾಹುವಿನ ಮಗಳ ಮಗನು. ಪ್ರಭೆಯಲ್ಲಿ ಹುಟ್ಟಿದವನು. ಸೋಮವಂಶಪ್ರವರ್ಧನ ಆ ರಾಜನು ಪರಮತೇಜಸ್ವಿಯಾಗಿದ್ದನು.

ತೇ ಹೃಷ್ಟಮನಸಃ ಸರ್ವೇ ರಜಿಂ ದೇವಾಶ್ಚ ದಾನವಾಃ ।
ಊಚುರಸ್ಮಜ್ಜಯಾಯ ತ್ವಂ ಗೃಹಾಣ ವರಕಾರ್ಮುಕಮ್ ।। ೧-೨೮-೧೦

ದೇವ-ದಾನವರೆಲ್ಲರೂ ಹೃಷ್ಟಮನಸ್ಕರಾಗಿ ರಜಿಗೆ “ನಮ್ಮ ಜಯಕ್ಕಾಗಿ ಶ್ರೇಷ್ಠ ಕಾರ್ಮುಕವನ್ನು ಹಿಡಿ!” ಎಂದು ಹೇಳಿದರು.

ಅಥೋವಾಚ ರಜಿಸ್ತತ್ರ ತಯೋರ್ವೈ ದೇವದೈತ್ಯಯೋಃ ।
ಸ್ವಾರ್ಥಜ್ಞಃ ಸ್ವಾರ್ಥಮುದ್ದಿಶ್ಯ ಯಶಃ ಸ್ವಂ ಚ ಪ್ರಕಾಶಯನ್ ।। ೧-೨೮-೧೧

ಆಗ ಸ್ವಾರ್ಥವನ್ನು ತಿಳಿದುಕೊಂಡಿದ್ದ ಮತ್ತು ಸ್ವಾರ್ಥವನ್ನೇ ಉದ್ದೇಶಿಸಿದ್ದ ರಜಿಯು ತನ್ನ ಯಶಸ್ಸನ್ನು ಪ್ರಕಾಶಿಸುತ್ತಾ ಆ ದೇವ-ದೈತ್ಯರಿಗೆ ಹೇಳಿದನು.

ರಜಿರುವಾಚ
ಯದಿ ದೈತ್ಯಗಣಾನ್ಸರ್ವಾಂಜಿತ್ವಾ ಶಕ್ರಪುರೋಗಮಾಃ ।
ಇಂದ್ರೋ ಭವಾಮಿ ಧರ್ಮೇಣ ತತೋ ಯೋತ್ಸ್ಯಾಮಿ ಸಂಯುಗೇ ।। ೧-೨೮-೧೨

ರಜಿಯು ಹೇಳಿದನು: “ಶಕ್ರಪುರೋಗಮರೇ! ಒಂದುವೇಳೆ ನಾನು ದೈತ್ಯಗಣಗಳೆಲ್ಲವನ್ನೂ ಗೆದ್ದು ಧರ್ಮತಃ ಇಂದ್ರನಾಗುತ್ತೇನಾದರೆ ನಾನು ಯುದ್ಧದಲ್ಲಿ ಹೋರಾಡುತ್ತೇನೆ.”

ದೇವಾಃ ಪ್ರಥಮತೋ ಭೂಯಃ ಪ್ರತ್ಯೂಚುರ್ಹೃಷ್ಟಮಾನಸಾಃ ।
ಏವಂ ಯಥೇಷ್ಟಂ ನೃಪತೇ ಕಾಮಃ ಸಂಪದ್ಯತಾಂ ತವ ।। ೧-೨೮-೧೩

ದೇವತೆಗಳು ಪುನಃ ಹೃಷ್ಟಮಾನಸರಾಗಿ ಮೊದಲೇ ಇದನ್ನು ಹೇಳಿದರು: “ನೃಪತೇ! ಅದು ಹಾಗೆಯೇ ಆಗುತ್ತದೆ! ನಿನ್ನ ಕಾಮನೆಯು ಪರಿಪೂರ್ಣವಾಗಲಿ!”

ಶ್ರುತ್ವಾ ಸುರಗಣಾನಾಂ ತು ವಾಕ್ಯಂ ರಾಜಾ ರಜಿಸ್ತತ್ದಾ ।
ಪಪ್ರಚ್ಛಾಸುರಮುಖ್ಯಾಂಸ್ತು ಯಥಾ ದೇವಾನಪೃಚ್ಛತ ।। ೧-೨೮-೧೪

ಸುರಗಣಗಳ ಮಾತನ್ನು ಕೇಳಿ ರಾಜಾ ರಜಿಯು ಅಸುರಮುಖ್ಯರಲ್ಲಿಯೂ ದೇವತೆಗಳಲ್ಲಿ ಕೇಳಿದ ಪ್ರಶ್ನೆಯನ್ನೇ ಕೇಳಿದನು.

ದಾನವಾ ದರ್ಪಪೂರ್ಣಾಸ್ತು ಸ್ವಾರ್ಥಮೇವಾನುಗಮ್ಯ ಹ ।
ಪ್ರತ್ಯೂಚುಸ್ತೇ ನೃಪವರಂ ಸಾಭಿಮಾನಮಿದಂ ವಚಃ ।। ೧-೨೮-೧೫

ದರ್ಪಪೂರ್ಣರಾಗಿದ್ದ ದಾನವರಾದರೋ ಸ್ವಾರ್ಥವನ್ನೇ ಅನುಸರಿಸಿ ಅಭಿಮಾನದಿಂದ ಕೇಳಿದ ನೃಪವರನಿಗೆ ಅಭಿಮಾನದಿಂದಲೇ ಈ ಉತ್ತರವನ್ನಿತ್ತರು:

ಅಸ್ಮಾಕಮಿಂದ್ರಃ ಪ್ರಹ್ರಾದೋ ಯಸ್ಯಾರ್ಥೇ ವಿಜಯಾಮಹೇ ।
ಅಸ್ಮಿಂಸ್ತು ಸಮಯೇ ರಾಜಂಸ್ತಿಷ್ಠೇಥಾ ರಾಜಸತ್ತಮ ।। ೧-೨೮-೧೬

“ರಾಜನ್! ರಾಜಸತ್ತಮ! ನಮ್ಮ ಇಂದ್ರನು ಪ್ರಹ್ರಾದನೇ ಸರಿ. ಅವನಿಗಾಗಿಯೇ ನಾವು ವಿಜಯವನ್ನು ಬಯಸುತ್ತಿದ್ದೇವೆ. ಇದೇ ಒಪ್ಪಂದದ ಮೇರೆಗೆ ನೀನು ನಮ್ಮ ಪಕ್ಷದಲ್ಲಿ ನಿಲ್ಲಬೇಕಾಗುತ್ತದೆ.”

ಸ ತಥೇತಿ ಬ್ರುವನ್ನೇವ ದೇವೈರಪ್ಯಭಿಚೋದಿತಃ ।
ಭವಿಷ್ಯಸೀಂದ್ರೋ ಜಿತ್ವೈವಂ ದೇವೈರುಕ್ತಸ್ತು ಪಾರ್ಥಿವಃ ।
ಜಘಾನ ದಾನವಾನ್ಸರ್ವಾನ್ಯೇ ವಧ್ಯಾ ವಜ್ರಪಾಣಿನಃ ।। ೧-೨೮-೧೭

ಅವನು ಹಾಗೆಯೇ ಆಗಲಿ ಎನ್ನುವುದರ ಮೊದಲೇ ದೇವತೆಗಳು ಪುನಃ “ಗೆದ್ದರೆ ನೀನು ನಮ್ಮ ಇಂದ್ರನಾಗುತ್ತೀಯೆ!” ಎಂದು ಹೇಳಲು ಪಾರ್ಥಿವ ರಜಿಯು ವಜ್ರಪಾಣಿಯಿಂದ ವಧೆಗೆ ಯೋಗ್ಯರಾಗಿದ್ದ ಆ ದಾನವರೆಲ್ಲರನ್ನೂ ಸಂಹರಿಸಿದನು.

ಸ ವಿಪ್ರನಷ್ಟಾಂ ದೇವಾನಾಂ ಪರಮಶ್ರೀಃ ಶ್ರಿಯಂ ವಶೀ ।
ನಿಹತ್ಯ ದಾನವಾನ್ಸರ್ವಾನಾಜಹಾರ ರಜಿಃ ಪ್ರಭುಃ ।। ೧-೨೮-೧೮

ಶ್ರೀಯಿಂದ ತುಂಬಿದ್ದ ಪ್ರಭು ರಜಿಯು ಆ ದಾನವರೆಲ್ಲರನ್ನೂ ಸಂಹರಿಸಿ ಕಳೆದುಹೋಗಿದ್ದ ದೇವತೆಗಳ ಪರಮಶ್ರೀಯನ್ನು ಮರಳಿ ತಂದನು.

ತತೋ ರಜಿಂ ಮಹಾವೀರ್ಯಂ ದೇವೈಃ ಸಹ ಶತಕ್ರತುಃ ।
ರಜೇಃ ಪುತ್ರೋಽಹಮಿತ್ಯುಕ್ತ್ವಾ ಪುನರೇವಾಬ್ರವೀದ್ವಚಹ್ಃ ।। ೧-೨೮-೧೯

ಅನಂತರ ಮಹಾವೀರ್ಯ ರಜಿಗೆ ದೇವತೆಗಳೊಂದಿಗೆ ಶತಕ್ರತುವು “ನಾನು ರಜಿಯ ಪುತ್ರ” ಎಂದು ಹೇಳಿ ಇದನ್ನೂ ಹೇಳಿದನು:

ಇಂದ್ರೋಽಸಿ ತಾತ ದೇವಾನಾಂ ಸರ್ವೇಷಾಂ ನಾತ್ರ ಸಂಶಯಃ ।
ಯಸ್ಯಾಹಮಿಂದ್ರಃ ಪುತ್ರಸ್ತೇ ಖ್ಯಾತಿಂ ಯಾಸ್ಯಾಮಿ ಕರ್ಮಭಿಃ ।। ೧-೨೮-೨೦

“ಅಯ್ಯಾ! ನೀನು ಸರ್ವದೇವತೆಗಳ ಇಂದ್ರ ಎನ್ನುವುದರಲ್ಲಿ ಸಂಶಯವಿಲ್ಲ. ಇಂದ್ರನಾದ ನಾನು ನಿನ್ನ ಪುತ್ರನು ಎಂದೇ ಖ್ಯಾತಿಯನ್ನು ಹೊಂದುತ್ತೇನೆ.”

ಸ ತು ಶಕ್ರವಚಃ ಶ್ರುತ್ವಾ ವಂಚಿತಸ್ತೇನ ಮಾಯಯಾ ।
ತಥೇತ್ಯೇವಾಬ್ರವೀದ್ರಾಜಾ ಪ್ರೀಯಮಾಣಃ ಶತಕ್ರತುಮ್ ।। ೧-೨೮-೨೧

ಶಕ್ರನ ಮಾತನ್ನು ಕೇಳಿ ಅವನ ಮಾಯೆಯಿಂದ ವಂಚಿತನಾದ ರಾಜಾ ರಜಿಯು “ಹಾಗೆಯೇ ಆಗಲಿ!” ಎಂದುಬಿಟ್ಟನು. ಶತಕ್ರತುವಿನ ಮೇಲೆ ಅವನಿಗೆ ಪ್ರೀತಿಯುಂಟಾಯಿತು.

ತಸ್ಮಿಂಸ್ತು ದೇವಸದೃಶೇ ದಿವಂ ಪ್ರಾಪ್ತೇ ಮಹೀಪತೌ ।
ದಾಯಾದ್ಯಮಿಂದ್ರಾದಾಜಹ್ರುರಾಚಾರಾತ್ತನಯಾ ರಜೇಃ ।। ೧-೨೮-೨೨

ದೇವಸದೃಶನಾದ ಮಹೀಪತಿ ರಜಿಯು ದಿವವನ್ನು ಸೇರಲು, ರಜಿಯ ಇತರ ಮಕ್ಕಳು, ಲೋಕವ್ಯವಹಾರಕ್ಕೆ ತಕ್ಕಂತೆ, ಇಂದ್ರನಿಂದ ದಾಯಭಾಗವನ್ನು ಕೇಳಿದರು ಮತ್ತು ಅಪಹರಿಸಿದರು ಕೂಡ.

ಪಂಚ ಪುತ್ರಶತಾನ್ಯಸ್ಯ ತದ್ವೈ ಸ್ಥಾನಂ ಶತಕ್ರತೋಃ ।
ಸಮಾಕ್ರಮಂತ ಬಹುಧಾ ಸ್ವರ್ಗಲೋಕಂ ತ್ರಿವಿಷ್ಟಪಮ್ ।। ೧-೨೮-೨೩

ರಜಿಯ ಐದುನೂರು ಮಕ್ಕಳು ಶತಕ್ರತುವಿನ ಸ್ಥಾನವಾದ ಸ್ವರ್ಗಲೋಕ ತ್ರಿವಿಷ್ಟಪಕ್ಕೆ ಅನೇಕ ಬಾರಿ ಧಾಳಿಯಿಟ್ಟರು.

ತತೋ ಬಹುತಿಥೇ ಕಾಲೇ ಸಮತೀತೇ ಮಹಾಬಲಃ ।
ಹೃತರಾಜ್ಯೋಽಬ್ರವೀಚ್ಛಕ್ರೋ ಹೃತಭಾಗೋ ಬೃಹಸ್ಪತಿಮ್ ।। ೧-೨೮-೨೪

ಅನಂತರ ದೀರ್ಘಕಾಲವು ಕಳೆಯಲು ಮಹಾಬಲ ಶಕ್ರನು ರಾಜ್ಯವನ್ನೂ ಯಜ್ಞಭಾಗಗಳನ್ನೂ ಕಳೆದುಕೊಂಡು ಬ್ರಹಸ್ಪತಿಗೆ ಹೇಳಿದನು.

ಇಂದ್ರ ಉವಾಚ
ಬದರೀಫಲಮಾತ್ರಂ ವೈ ಪುರೋಡಾಶಂ ವಿಧತ್ಸ್ವ ಮೇ ।
ಬ್ರಹ್ಮರ್ಷೇ ಯೇನ ತಿಷ್ಠೇಯಂ ತೇಜಸಾಽಽಪ್ಯಾಯಿತಃ ಸದಾ ।। ೧-೨೮-೨೫

ಇಂದ್ರನು ಹೇಳಿದನು: “ಬ್ರಹ್ಮರ್ಷೇ! ಒಂದು ಬದರೀ ಹಣ್ಣಿನ ಗಾತ್ರದಷ್ಟಾದರೂ ಪುರೋಡೋಶವನ್ನು ನನಗಾಗಿ ಮೀಸಲಾಗಿಡಿ. ಅದರಿಂದ ನಾನು ಸದಾ ತೇಜಸ್ಸಿನಿಂದ ಪರಿಪುಷ್ಟನಾಗುತ್ತಿರುತ್ತೇನೆ.

ಬ್ರಹ್ಮನ್ಕೃಶೋಽಹಂ ವಿಮನಾ ಹೃತರಾಜ್ಯೋ ಹೃತಾಶನಃ ।
ಹತೌಜಾ ದುರ್ಬಲೋ ಮೂಢೋ ರಜಿಪುತ್ರೈಃ ಕೃತಃ ಪ್ರಭೋ ।। ೧-೨೮-೨೬

ಬ್ರಹ್ಮನ್! ಪ್ರಭೋ! ರಜಿಯ ಪುತ್ರರು ನನ್ನ ರಾಜ್ಯ ಮತ್ತು ಆಹಾರವನ್ನು ಕಸಿದುಕೊಂಡಿರುವುದರಿಂದ ನಾನು ಕೃಶನಾಗಿದ್ದೇನೆ. ವಿಮನಸ್ಕನಾಗಿದ್ದೇನೆ. ತೇಜಸ್ಸನ್ನು ಕಳೆದುಕೊಂಡು ದುರ್ಬಲನೂ ಮೂಢನೂ ಆಗಿದ್ದೇನೆ.”

ಬೃಹಸ್ಪತಿರುವಾಚ
ಯದ್ಯೇವಂ ಚೋದಿತಃ ಶಕ್ರ ತ್ವಯಾಸ್ಯಾಂ ಪೂರ್ವಮೇವ ಹಿ ।
ನಾಭವಿಷ್ಯತ್ತ್ವತ್ಪ್ರಿಯಾರ್ಥಮಕರ್ತವ್ಯಂ ಮಮಾನಘ ।। ೧-೨೮-೨೭

ಬೃಹಸ್ಪತಿಯು ಹೇಳಿದನು: “ಶಕ್ರ! ಅನಘ! ವಿಷಯವು ಹೀಗೆಂದಿದ್ದಿದ್ದರೆ ಇದನ್ನು ನೀನು ನನಗೆ ಮೊದಲೇ ಹೇಳಬೇಕಾಗಿತ್ತು. ನಿನಗೆ ಸಂತೋಷವನ್ನುಂಟುಮಾಡುವ ಯಾವ ಕೆಲಸವನ್ನೂ ನಾನು ಮಾಡುವುದಿಲ್ಲ ಎಂದಿಲ್ಲ.

ಪ್ರಯತಿಷ್ಯಾಮಿ ದೇವೇಂದ್ರ ತ್ವತ್ಪ್ರಿಯಾರ್ಥಂ ನ ಸಂಶಯಃ ।
ಯಥಾ ಭಾಗಂ ಚ ರಾಜ್ಯಂ ಚ ನ ಚಿರಾತ್ಪ್ರತಿಲಪ್ಸ್ಯಸೇ ।। ೧-೨೮-೨೮

ದೇವೇಂದ್ರ! ನೀನು ಪ್ರೀತನಾಗಲು ನಾನು ಪ್ರಯತ್ನಿಸುತ್ತೇನೆ. ಅದರಲ್ಲಿ ಸಂಶಯವೇ ಇಲ್ಲ. ಬೇಗನೇ ನೀನು ನಿನ್ನ ರಾಜ್ಯ ಮತ್ತು ಯಜ್ಞಭಾಗಗಳನ್ನು ಪಡೆದುಕೊಳ್ಳುತ್ತೀಯೆ.

ತಥಾ ತಾತ ಕರಿಷ್ಯಾಮಿ ಮಾ ಭೂತ್ತೇ ವಿಕ್ಲವಂ ಮನಃ ।
ತತಃ ಕರ್ಮ ಚಕಾರಾಸ್ಯ ತೇಜಸೋ ವರ್ಧನಂ ತದಾ ।। ೧-೨೮-೨೯

ಅಯ್ಯಾ! ನೀನು ಹೇಳಿದಂತೆಯೇ ಮಾಡುತ್ತೇನೆ. ಇದರ ಕುರಿತು ನಿನ್ನ ಮನಸ್ಸು ಇನ್ನೂ ವ್ಯಾಕುಲವಾಗದಿರಲಿ.” ಅನಂತರ ಬೃಹಸ್ಪತಿಯು ಇಂದ್ರನ ತೇಜಸ್ಸನ್ನು ವರ್ಧಿಸುವಂತಹ ಕಾರ್ಯವನ್ನು ಕೈಗೊಂಡನು.

ತೇಷಾಂ ಚ ಬುದ್ಧಿಸಂಮೋಹಮಕರೋದ್ದ್ವಿಜಸತ್ತಮಃ ।
ನಾಸ್ತಿವಾದಾರ್ಥಶಾಸ್ತ್ರಂ ಹಿ ಧರ್ಮವಿದ್ವೇಷಣಮ್ ಪರಮ್ ।। ೧-೨೮-೩೦

ರಜಿಪುತ್ರರ ಬುದ್ಧಿಸಂಮೋಹನವನ್ನುಂಟುಮಾಡಲು ದ್ವಿಜಸತ್ತಮ ಬೃಹಸ್ಪತಿಯು ಧರ್ಮದ ಕುರಿತು ಪರಮ ದ್ವೇಷವನ್ನುಂಟುಮಾಡುವ ನಾಸ್ತಿಕವಾದದ ಅರ್ಥಶಾಸ್ತ್ರವನ್ನು ನಿರ್ಮಿಸಿದನು.

ಪರಮಂ ತರ್ಕಶಾಸ್ತ್ರಾಣಾಮಸತಾಂ ತನ್ಮನೋಽನುಗಮ್ ।
ನ ಹಿ ಧರ್ಮಪ್ರಧಾನಾನಾಂ ರೋಚತೇ ತತ್ಕಥಾಂತರೇ ।। ೧-೨೮-೩೧

ಕೇವಲ ತರ್ಕದ ಆಧಾರದ ಮೇಲೆ ತನ್ನ ಸಿದ್ಧಾಂತವನ್ನು ಪ್ರತಿಪಾದಿಸುವ ಶಾಸ್ತ್ರಗಳಲ್ಲಿ ಅದಕ್ಕೆ ಉತ್ಕೃಷ್ಟ ಸ್ಥಾನವಿದೆ. ಆ ಶಾಸ್ತ್ರವು ದುಷ್ಟರಿಗೆ ಹಿಡಿಯುವಷ್ಟು ಧರ್ಮಪ್ರಧಾನರಿಗೆ ಹಿಡಿಸುವುದಿಲ್ಲ.

ತೇ ತದ್ಬೃಹಸ್ಪತಿಕೃತಂ ಶಾಸ್ತ್ರಂ ಶ್ರುತ್ವಾಲ್ಪಚೇತಸಃ ।
ಪೂರ್ವೋಕ್ತಧರ್ಮಶಾಸ್ತ್ರಾಣಾಮಭವಂದ್ವೇಷಿಣಃ ಸದಾ ।। ೧-೨೮-೩೨

ಬೃಹಸ್ಪತಿಕೃತ ಆ ಶಾಸ್ತ್ರವನ್ನು ಕೇಳಿ ಅಲ್ಪಚೇತಸ ರಜಿಪುತ್ರರು ಹಿಂದೆ ಹೇಳಿದ್ದ ಧರ್ಮಶಾಸ್ತ್ರಗಳನ್ನು ಸದಾ ದ್ವೇಷಿಸತೊಡಗಿದರು.

ಪ್ರವಕ್ತುರ್ನ್ಯಾಯರಹಿತಂ ತನ್ಮತಂ ಬಹು ಮೇನಿರೇ ।
ತೇನಾಧರ್ಮೇಣ ತೇ ಪಾಪಾಃ ಸರ್ವ ಏವ ಕ್ಷಯಂ ಗತಾಃ ।। ೧-೨೮-೩೩

ನ್ಯಾಯರಹಿತವಾದ ಆ ಮತವನ್ನು ಅವರು ಬಹುವಾಗಿ ಸ್ವೀಕರಿಸಿದರು. ಅವರ ಅಧರ್ಮದಿಂದ ಪಾಪಿಷ್ಟರಾಗಿ ಎಲ್ಲರೂ ನಷ್ಟರಾದರು.

ತ್ರೈಲೋಕ್ಯರಾಜ್ಯಂ ಶಕ್ರಸ್ತು ಪ್ರಾಪ್ಯ ದುಷ್ಪ್ರಾಪಮೇವ ಚ ।
ಬೃಹಸ್ಪತಿಪ್ರಸಾದಾದ್ಧಿ ಪರಾಂ ನಿರ್ವೃತಿಮಭ್ಯಯಾತ್ ।। ೧-೨೮-೩೪

ಹೀಗೆ ಬೃಹಸ್ಪತಿಯ ಪ್ರಸಾದದಿಂದ ಪಡೆಯಲು ಅಸಾಧ್ಯವಾದ ತ್ರೈಲೋಕ್ಯರಾಜ್ಯವನ್ನು ಪಡೆದು ಶಕ್ರನು ಪರಮ ನಿವೃತ್ತಿಯನ್ನು ಹೊಂದಿದನು.

ತೇ ಯದಾ ತು ಸುಸಂಮೂಢಾ ರಾಗೋನ್ಮತ್ತಾ ವಿಧರ್ಮಿಣಃ ।
ಬ್ರಹ್ಮದ್ವಿಷಶ್ಚ ಸಂವೃತ್ತಾ ಹತವೀರ್ಯಪರಾಕ್ರಮಾಃ ।। ೧-೨೮-೩೫
ತತೋ ಲೇಭೇ ಸುರೈಶ್ವರ್ಯಮಿಂದ್ರಃ ಸ್ಥಾನಂ ತಥೋತ್ತಮಮ್ ।
ಹತ್ವಾ ರಜಿಸುತಾನ್ಸರ್ವಾನ್ಕಾಮಕ್ರೋಧಪರಾಯಣಾನ್ ।। ೧-೨೮-೩೬

ರಜಿಯ ಆ ಪುತ್ರರು ನಾಸ್ತಿಕವಾದವನ್ನು ಆಶ್ರಯಿಸಿ ವಿವೇಕಶೂನ್ಯರೂ, ರಾಗೋನ್ಮತ್ತರೂ, ಧರ್ಮದ್ದ ವಿರುದ್ಧ ನಡೆಯುವವರೂ, ಬ್ರಹ್ಮದ್ರೋಹಿಗಳೂ, ಶಕ್ತಿಹೀನರೂ ಮತ್ತು ಪರಾಕ್ರಮಶೂನ್ಯರೂ ಆಗಿಬಿಟ್ಟರು. ಆಗ ಕಾಮ-ಕ್ರೋಧದಲ್ಲಿ ತತ್ಪರರಾಗಿದ್ದ ಆ ಎಲ್ಲ ರಜಿಪುತ್ರರನ್ನೂ ಸಂಹರಿಸಿ ಇಂದ್ರನು ದೇವತೆಗಳ ಐಶ್ವರ್ಯ ಮತ್ತು ಉತ್ತಮ ಸ್ಥಾನವನ್ನು ಪಡೆದುಕೊಂಡನು.

ಯ ಇದಂ ಚ್ಯಾವನಂ ಸ್ಥಾನಾತ್ಪ್ರತಿಷ್ಠಾಂ ಚ ಶತಕ್ರತೋಃ ।
ಶೃಣುಯಾದ್ಧಾರಯೇದ್ವಾಪಿ ನ ಸ ದೌರಾತ್ಮ್ಯಮಾಪ್ನುಯಾತ್ ।। ೧-೨೮-೩೭

ಶತಕ್ರತುವು ತನ್ನ ಸ್ಥಾನದಿಂದ ಭ್ರಷ್ಟನಾದ ಮತ್ತು ಪುನಃ ಪ್ರತಿಷ್ಠಿತನಾದ ಇದನ್ನು ಯಾರು ಕೇಳುತ್ತಾರೋ ಮತ್ತು ಹೃದಯದಲ್ಲಿ ಧರಿಸಿಕೊಳ್ಳುತ್ತಾರೋ ಅವರಲ್ಲಿ ದುರ್ಭಾವನೆಗಳು ಉಂಟಾಗುವುದಿಲ್ಲ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ಹರಿವಂಶಪರ್ವಣಿ ಆಯೋರ್ವಂಶಕೀರ್ತನಂ ನಾಮ ಅಷ್ಟಾವಿಂಶೋಽಧ್ಯಾಯಃ


  1. ರಾಹು . ↩︎