026: ಐಲೋತ್ಪತ್ತಿಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಖಿಲಭಾಗೇ ಹರಿವಂಶಃ

ಹರಿವಂಶ ಪರ್ವ

ಅಧ್ಯಾಯ 26

ಸಾರ

ವೈಶಂಪಾಯನ ಉವಾಚ
ಬುಧಸ್ಯ ತು ಮಹಾರಾಜ ವಿದ್ವಾನ್ಪುತ್ರಃ ಪುರೂರವಾಃ ।
ತೇಜಸ್ವೀ ದಾನಶೀಲಶ್ಚ ಯಜ್ವಾ ವಿಪುಲದಕ್ಷಿಣಃ ।। ೧-೨೬-೧
ಬ್ರಹ್ಮವಾದೀ ಪರಾಕ್ರಾಂತಃ ಶತ್ರುಭಿರ್ಯುಧಿ ದುರ್ಜಯಃ ।
ಅಹರ್ತಾ ಚಾಗ್ನಿಹೋತ್ರಸ್ಯ ಯಜ್ಞಾನಾಂ ಚ ಮಹೀಪತಿಃ ।। ೧-೨೬-೨

ವೈಶಂಪಾಯನನು ಹೇಳಿದನು: “ಮಹಾರಾಜ! ಬುಧನ ಪುತ್ರ ಪುರೂರವನಾದರೋ ವಿದ್ವಾನನಾಗಿದ್ದನು. ಆ ತೇಜಸ್ವಿಯು ದಾನಶೀಲನೂ ವಿಪುಲದಕ್ಷಿಣೆಗಳನ್ನಿತ್ತು ಯಜ್ಞಮಾಡುವವನೂ ಆಗಿದ್ದನು. ಆ ಮಹೀಪತಿಯು ಬ್ರಹ್ಮವಾದಿಯೂ, ಪರಾಕ್ರಾಂತನೂ ಮತ್ತು ಯುದ್ಧದಲ್ಲಿ ಶತ್ರುಗಳಿಗೆ ದುರ್ಜಯನೂ ಆಗಿದ್ದನು. ಅವನು ಅಗ್ನಿಹೋತ್ರ ಮತ್ತು ಯಜ್ಞಗಳನ್ನು ನಡೆಸುವವನಾಗಿದ್ದನು.

ಸತ್ಯವಾದೀ ಪುಣ್ಯಮತಿಃ ಕಾಮ್ಯಃ ಸಂವೃತಮೈಥುನಃ ।
ಅತೀವ ತ್ರಿಷು ಲೋಕೇಷು ಯಶಸಾಪ್ರತಿಮಃ ಸದಾ ।। ೧-೨೬-೩

ಸತ್ಯವಾದಿಯೂ ಪುಣ್ಯಮತಿಯೂ ಆದ ಅವನು ಸುಂದರನೂ ಗುಪ್ತವಾಗಿ ಮೈಥುನದಲ್ಲಿ ತೊಡಗುವವನೂ ಆಗಿದ್ದನು. ಮೂರು ಲೋಕಗಳಲ್ಲಿಯೂ ಅವನು ಅಪ್ರತಿಮ ಮತ್ತು ಅತೀವ ಯಶಸ್ಸಿನಿಂದ ಪ್ರಸಿದ್ಧನಾಗಿದ್ದನು.

ತಂ ಬ್ರಹ್ಮವಾದಿನಂ ಕ್ಷಾಂತಂ ಧರ್ಮಜ್ಞಂ ಸತ್ಯವಾದಿನಮ್।
ಉರ್ವಶೀ ವರಯಾಮಾಸ ಹಿತ್ವಾ ಮಾನಂ ಯಶಸ್ವಿನೀ ।। ೧-೨೬-೪

ಆ ಬ್ರಹ್ಮವಾದಿ ಕ್ಷಾಂತ ಧರ್ಮಜ್ಞ ಸತ್ಯವಾದಿನಿಯನ್ನು ಯಶಸ್ವಿನೀ ಉರ್ವಶಿಯು ಗರ್ವವನ್ನು ತೊರೆದು ವರಿಸಿದಳು.

ತಯಾ ಸಹಾವಸದ್ರಾಜಾ ವರ್ಷಾಣಿ ದಶ ಪಂಚ ಚ ।
ಪಂಚ ಷಟ್ಸಪ್ತ ಚಾಷ್ಟೌ ಚ ದಶ ಚಾಷ್ಟೌ ಚ ಭಾರತ ।। ೧-೨೬-೫
ವನೇ ಚೈತ್ರರಥೇ ರಮ್ಯೇ ತಥಾ ಮಂದಾಕಿನೀತಟೇ ।
ಅಲಕಾಯಾಂ ವಿಶಾಲಾಯಾಂ ನಂದನೇ ಚ ವನೋತ್ತಮೇ ।। ೧-೨೬-೬
ಉತ್ತರಾನ್ಸ ಕುರೂನ್ಪ್ರಾಪ್ಯ ಮನೋರಥಫಲದ್ರುಮಾನ್ ।
ಗಂಧಮಾದನಪಾದೇಷು ಮೇರುಪೃಷ್ಠೇ ತಥೋತ್ತರೇ ।। ೧-೨೬-೭

ಭಾರತ! ರಾಜಾ ಪುರೂರವನು ಅವಳೊಂದಿಗೆ ಹತ್ತು ವರ್ಷಗಳ ಪರ್ಯಂತ ರಮಣೀಯ ಚೈತ್ರರಥ ವನದಲ್ಲಿ, ಐದು ವರ್ಷಗಳ ಪರ್ಯಂತ ಮಂದಾಕಿನೀತಟದ ಅಲಕಾನಗರಿಯಲ್ಲಿ, ಐದು ವರ್ಷಗಳ ಪರ್ಯಂತ ಬದರಿಕಾ ವನದಲ್ಲಿ, ಆರು ವರ್ಷಗಳ ಪರ್ಯಂತ ಉತ್ತಮ ನಂದನ ವನದಲ್ಲಿ, ಏಳು ವರ್ಷಗಳ ಪರ್ಯಂತ ಮನೋರಥಫಲಗಳನ್ನೀಯುವ ವೃಕ್ಷಗಳಿಂದ ಕೂಡಿದ ಉತ್ತರ ಕುರುವಿನಲ್ಲಿ, ಎಂಟು ವರ್ಷಗಳ ಪರ್ಯಂತ ಗಂಧಮಾಧನ ಪರ್ವತದ ತಪ್ಪಲಿನಲ್ಲಿ, ಹತ್ತು ವರ್ಷಗಳ ಪರ್ಯಂತ ಮೇರುಪರ್ವತದಲ್ಲಿ ಮತ್ತು ಎಂಟು ವರ್ಷಗಳ ಪರ್ಯಂತ ಉತ್ತರಾಚಲದಲ್ಲಿ ವಿಹರಿಸಿದನು.

ಏತೇಷು ವನಮುಖ್ಯೇಷು ಸುರೈರಾಚರಿತೇಷು ಚ ।
ಉರ್ವಶ್ಯಾ ಸಹಿತೋ ರಾಜಾ ರೇಮೇ ಪರಮಯಾ ಮುದಾ ।। ೧-೨೬-೮

ಸುರರು ಸಂಚರಿಸುತ್ತಿದ್ದ ಈ ಎಲ್ಲ ಮುಖ್ಯ ವನಗಳಲ್ಲಿ ರಾಜಾ ಪುರೂರವನು ಉರ್ವಶಿಯ ಸಹಿತ ಪರಮ ಮುದದಿಂದ ರಮಿಸಿದನು.

ದೇಶೇ ಪುಣ್ಯತಮೇ ಚೈವ ಮಹರ್ಷಿಭಿರಭಿಷ್ಟುತೇ ।
ರಾಜ್ಯಂ ಚ ಕಾರಯಾಮಾಸ ಪ್ರಯಾಗೇ ಪೃಥಿವೀಪತಿಃ ।। ೧-೨೬-೯

ಆ ಪೃಥಿವೀಪತಿಯು ಮಹರ್ಷಿಗಳಿಂದ ಸೇವಿತ ಪುಣ್ಯತಮ ದೇಶ ಪ್ರಯಾಗದಲ್ಲಿ ರಾಜ್ಯಭಾರ ಮಾಡುತ್ತಿದ್ದನು.

ತಸ್ಯ ಪುತ್ರಾ ಬಭೂವುಸ್ತೇ ಸಪ್ತ ದೇವಸುತೋಪಮಾಃ ।
ದಿವಿ ಜಾತಾ ಮಹಾತ್ಮಾನ ಆಯುರ್ಧೀಮಾನಮಾವಸುಃ ।। ೧-೨೬-೧೦
ವಿಶ್ವಾಯುಶ್ಚೈವ ಧರ್ಮಾತ್ಮಾ ಶ್ರುತಾಯುಶ್ಚ ತಥಾಪರಃ ।
ದೃಢಾಯುಶ್ಚ ವನಾಯುಶ್ಚ ಶತಾಯುಶ್ಚೋರ್ವಶೀಸುತಾಃ ।। ೧-೨೬-೧೧

ಅವನಿಗೆ ದಿವಿಯಲ್ಲಿ ಹುಟ್ಟಿದ ದೇವಸುತರಂತಿದ್ದ ಏಳು ಪುತ್ರರಾದರು. ಮಹಾತ್ಮ ಆಯು. ಧೀಮಾನ್ ಅಮಾವಸು, ವಿಶ್ವಾಯು, ಧರ್ಮಾತ್ಮ ಶ್ರುತಾಯು, ಅನಂತರ ದೃಢಾಯು, ವನಾಯು, ಶತಾಯು ಇವರೇ ಉರ್ವಶಿಯ ಪುತ್ರರು.”

ಜನಮೇಜಯ ಉವಾಚ
ಗಾಂಧರ್ವೀ ಚೋರ್ವಶೀ ದೇವೀ ರಾಜಾನಂ ಮಾನುಷಂ ಕಥಮ್ ।
ದೇವಾನುತ್ಸೃಜ್ಯ ಸಂಪ್ರಾಪ್ತಾ ತನ್ನೋ ಬ್ರೂಹಿ ಬಹುಶ್ರುತ ।। ೧-೨೬-೧೨

ಜನಮೇಜಯನು ಹೇಳಿದನು: “ಬಹುಶ್ರುತ! ಗಾಂಧರ್ವೀ ದೇವೀ ಉರ್ವಶಿಯು ದೇವತೆಗಳನ್ನು ಬಿಟ್ಟು ಮನುಷ್ಯ ರಾಜನನ್ನು ಹೇಗೆ ಪಡೆದುಕೊಂಡಳು ಎನ್ನುವುದನ್ನು ನನಗೆ ಹೇಳು.”

ವೈಶಂಪಾಯನ ಉವಾಚ
ಬ್ರಹ್ಮಶಾಪಾಭಿಭೂತಾ ಸಾ ಮಾನುಷಂ ಸಮಪದ್ಯತ ।
ಐಲಂ ತು ಸಾ ವರಾರೋಹಾ ಸಮಯಾತ್ಸಮುಪಸ್ಥಿತಾ ।। ೧-೨೬-೧೩

ವೈಶಂಪಾಯನನು ಹೇಳಿದನು: “ಬ್ರಹ್ಮಶಾಪದಿಂದ ಪೀಡಿತಳಾದ ಉರ್ವಶಿಯು ಮನುಷ್ಯಲೋಕಕ್ಕೆ ಬರುವಂಥವಳಾದಳು. ಆ ವರಾರೋಹೆಯು ಒಂದು ಒಪ್ಪಂದಮಾಡಿಕೊಂಡು ಇಲೆಯ ಪುತ್ರ ಪುರೂರವನೊಂದಿಗೆ ವಾಸಿಸುತ್ತಿದ್ದಳು.

ಆತ್ಮನಃ ಶಾಪಮೋಕ್ಷಾರ್ಥಂ ಸಮಯಂ ಸಾ ಚಕಾರ ಹ ।
ಅನಗ್ನದರ್ಶನಂ ಚೈವ ಸಕಾಮಾಯಾಂ ಚ ಮೈಥುನಮ್ ।। ೧-೨೬-೧೪
ದ್ವೌ ಮೇಷೌ ಶಯನಾಭ್ಯಾಶೇ ಸದಾ ಬದ್ಧೌ ಚ ತಿಷ್ಠತಃ ।
ಘೃತಮಾತ್ರೋ ತಥಾಽಽಹಾರಃ ಕಾಲಮೇಕಂ ತು ಪಾರ್ಥಿವ ।। ೧-೨೬-೧೫

ತನ್ನ ಶಾಪವಿಮೋಚನೆಗಾಗಿ ಅವಳು ಈ ಒಪ್ಪಂದವನ್ನು ಮಾಡಿಕೊಂಡಳು: “ಪಾರ್ಥಿವ! ನಾನು ನಿನ್ನನ್ನು ನಗ್ನನಾಗಿರುವಾಗ ನೋಡಬಾರದು. ನನಗೆ ಇಷ್ಟವಾದಾಗ ಮಾತ್ರ ನಾವು ಮೈಥುನದಲ್ಲಿ ತೊಡಗಬಹುದು. ನನ್ನ ಶಯನದ ಪಕ್ಕದಲ್ಲಿ ಎರಡು ಆಡುಗಳನ್ನು ಸದಾ ಕಟ್ಟಿರಬೇಕು. ಮತ್ತು ನಾನು ದಿನಕ್ಕೊಮ್ಮೆ ಕೇವಲ ಘೃತವನ್ನೇ ಆಹಾರವನ್ನಾಗಿ ಸೇವಿಸುತ್ತೇನೆ.

ಯದ್ಯೇಷ ಸಮಯೋ ರಾಜನ್ಯಾವತ್ಕಾಲಂ ಚ ತೇ ದೃಢಃ ।
ತಾವತ್ಕಾಲಂ ತು ವತ್ಸ್ಯಾಮಿ ತ್ವತ್ತಃ ಸಮಯ ಏಷ ನಃ ।। ೧-೨೬-೧೬

ರಾಜನ್! ಎಷ್ಟು ಸಮಯದವರೆಗೆ ದೃಢನಾಗಿ ನೀನು ಇವುಗಳನ್ನು ಪಾಲಿಸುತ್ತೀಯೋ ಅಲ್ಲಿಯವರೆಗೆ ನಾನು ನಿನ್ನೊಡನೆ ಇರುತ್ತೇನೆ. ಇದು ನನ್ನ ಪ್ರತಿಜ್ಞೆ.”

ತಸ್ಯಾಸ್ತಂ ಸಮಯಂ ಸರ್ವಂ ಸ ರಾಜಾ ಸಮಪಾಲಯತ್ ।
ಏವಂ ಸಾ ವಸತೇ ತತ್ರ ಪುರೂರವಸಿ ಭಾಮಿನೀ ।। ೧-೨೬-೧೭

ರಾಜನು ಅವಳ ಎಲ್ಲ ನಿರ್ಬಂಧಗಳನ್ನೂ ಪಾಲಿಸತೊಡಗಿದನು. ಹೀಗೆ ಆ ಭಾಮಿನಿಯು ಪುರೂರವನೊಂದಿಗೆ ವಾಸಿಸತೊಡಗಿದಳು.

ವರ್ಷಾಣ್ಯೇಕೋನಷಷ್ಟಿಸ್ತು ತತ್ಸಕ್ತಾ ಶಾಪಮೋಹಿತಾ ।
ಉರ್ವಶ್ಯಾಂ ಮಾನುಷಸ್ಥಾಯಾಂ ಗಂಧರ್ವಾಶ್ಚಿಂತಯಾನ್ವಿತಾಃ ।। ೧-೨೬-೧೮

ಶಾಪಮೋಹಿತಳಾದ ಉರ್ವಶಿಯು ಮಾನುಷಲೋಕದಲ್ಲಿ ಪುರೂರವನೊಂದಿಗೆ ಸಕ್ತಳಾಗಿ ವಾಸಿಸುತ್ತಾ ಐವತ್ತೊಂಭತ್ತು ವರ್ಷಗಳು ಕಳೆದುಹೋದವು. ಆಗ ಗಂಧರ್ವರು ಚಿಂತಿತರಾದರು.

ಗಂಧರ್ವಾ ಊಚುಃ
ಚಿಂತಯಧ್ವಂ ಮಹಾಭಾಗಾ ಯಥಾ ಸಾ ತು ವರಾಂಗನಾ ।
ಸಮಾಗಚ್ಛೇತ್ಪುನರ್ದೇವಾನುರ್ವಶೀ ಸ್ವರ್ಗಭೂಷಣಮ್ ।। ೧-೨೬-೧೯

ಗಂಧರ್ವರು ಹೇಳಿದರು: “ಮಹಾಭಾಗರೇ! ಆ ವರಾಂಗನೆ ಉರ್ವಶಿಯು ಪುನಃ ದೇವತೆಗಳನ್ನು ಸೇರಿ ಹೇಗೆ ಸ್ವರ್ಗಭೂಷಣಳಾಗುತ್ತಾಳೆ ಎನ್ನುವುದರ ಕುರಿತು ಚಿಂತಿಸಿ!”

ತತೋ ವಿಶ್ವಾವಸುರ್ನಾಮ ತತ್ರಾಹ ವದತಾಂ ವರಃ ।
ಮಯಾ ತು ಸಮಯಸ್ತಾಭ್ಯಾಂ ಕ್ರಿಯಮಾಣಃ ಶ್ರುತಃ ಪುರಾ ।। ೧-೨೬-೨೦

ಆಗ ವಿಶ್ವಾವಸು ಎಂಬ ಹೆಸರಿನ ಮಾತನಾಡುವವರಲ್ಲಿ ಶ್ರೇಷ್ಠನು ಹೇಳಿದನು: “ಹಿಂದೆ ಅವರು ಮಾಡಿಕೊಂಡಿದ್ದ ಒಪ್ಪಂದದ ಕುರಿತು ನಾನು ಕೇಳಿದ್ದೇನೆ.

ವ್ಯುತ್ಕ್ರಾಂತಸಮಯಂ ಸಾ ವೈ ರಾಜಾನಂ ತ್ಯಕ್ಷ್ಯತೇ ಯಥಾ ।
ತದಹಂ ವೇದ್ಮ್ಯಶೇಷೇಣ ಯಥಾ ಭೇತ್ಸ್ಯತ್ಯಸೌ ನೃಪಃ ।। ೧-೨೬-೨೧

ರಾಜನು ಆ ಒಪ್ಪಂದವನ್ನು ಮುರಿದರೆ ಅವಳು ಅವನನ್ನು ತ್ಯಜಿಸುತ್ತಾಳೆ. ಆ ನೃಪನ ಪ್ರತಿಜ್ಞೆಯು ಹೇಗೆ ಭಂಗವಾಗುವುದು ಎನ್ನುವುದರ ಕುರಿತೂ ನಾನು ಯೋಚಿಸಿದ್ದೇನೆ.

ಸಸಹಾಯೋ ಗಮಿಷ್ಯಾಮಿ ಯುಷ್ಮಾಕಂ ಕಾರ್ಯಸಿದ್ಧಯೇ ।
ಏವಮುಕ್ತ್ವಾ ಗತಸ್ತತ್ರ ಪ್ರತಿಷ್ಠಾನಂ ಮಹಾಯಶಾಃ ।। ೧-೨೬-೨೨

ನಿಮ್ಮ ಕಾರ್ಯಸಿದ್ಧಿಗಾಗಿ ನನ್ನ ಸಹಾಯಕರೊಂದಿಗೆ ಹೋಗುತ್ತೇನೆ.” ಹೀಗೆ ಹೇಳಿ ಆ ಮಹಾಯಶಸ್ವಿಯು ಪ್ರತಿಷ್ಠಾನ1 ಪುರಕ್ಕೆ ಹೋದನು.

ನಿಶಾಯಾಮಥ ಚಾಗಮ್ಯ ಮೇಷಮೇಕಂ ಜಹಾರ ಸಃ ।
ಮಾತೃವದ್ವರ್ತತೇ ಸಾ ತು ಮೇಷಯೋಶ್ಚಾರುಹಾಸಿನೀ ।। ೧-೨೬ ೨೩

ಅಲ್ಲಿಗೆ ಹೋಗಿ ಅವನು ರಾತ್ರಿವೇಳೆಯಲ್ಲಿ ಉರ್ವಶಿಯ ಒಂದು ಆಡನ್ನು ಕದ್ದನು. ಚಾರುಹಾಸಿನಿ ಉರ್ವಶಿಯಾದರೋ ಆ ಆಡುಗಳೊಡನೆ ತಾಯಿಯಂತೆ ವರ್ತಿಸುತ್ತಿದ್ದಳು.

ಗಂಧರ್ವಾಗಮನಂ ಶ್ರುತ್ವಾ ಶಾಪಾಂತಂ ಚ ಯಶಸ್ವಿನೀ ।
ರಾಜಾನಮಬ್ರವಿತ್ತತ್ರ ಪುತ್ರೋ ಮೇಽಹ್ರಿಯತೇತಿ ಸಾ ।। ೧-೨೬-೨೪

ಗಂಧರ್ವರ ಆಗಮನವನ್ನು ಕೇಳಿ ಯಶಸ್ವಿನಿಯು ತನ್ನ ಶಾಪವು ಅಂತ್ಯವಾಗುತ್ತಿದೆ ಎಂದು ತಿಳಿದು ರಾಜನಿಗೆ “ನನ್ನ ಮಗನನ್ನು ಯಾರೋ ಕದ್ದುಕೊಂಡುಹೋಗುತ್ತಿದ್ದಾರೆ” ಎಂದಳು.

ಏವಮುಕ್ತೋ ವಿನಿಶ್ಚಿತ್ಯ ನಗ್ನೋ ನೈವೋದತಿಷ್ಠತ ।
ನಗ್ನಾಂ ಮಾಂ ದ್ರಕ್ಷ್ಯತೇ ದೇವೀ ಸಮಯೋ ವಿತಥೋ ಭವೇತ್ ।। ೧-೨೬-೨೫

ಅವಳು ಹೀಗೆ ಹೇಳಿದರೂ ನಗ್ನನಾಗಿದ್ದ ರಾಜನು “ನಗ್ನನಾಗಿರುವ ನನ್ನನ್ನು ಈ ದೇವಿಯು ನೋಡಿದರೆ ಪ್ರತಿಜ್ಞಾಭಂಗನಾಗುತ್ತೇನೆ” ಎಂದು ನಿಶ್ಚಯಿಸಿ ಮೇಲಕ್ಕೇಳಲಿಲ್ಲ.

ತತೋ ಭೂಯಸ್ತು ಗಂಧರ್ವಾ ದ್ವಿತೀಯಂ ಮೇಷಮಾದದುಃ ।
ದ್ವಿತೀಯೇ ತು ಹೃತೇ ಮೇಷೇ ಐಲಂ ದೇವ್ಯಬ್ರವೀದಿದಮ್ ।। ೧-೨೬-೨೬

ಅನಂತರ ಗಂಧರ್ವರು ಪುನಃ ಬಂದು ಎರಡನೆಯ ಆಡನ್ನೂ ಎತ್ತಿಕೊಂಡು ಹೋದರು. ಎರಡನೇ ಆಡೂ ಅಪಹೃತವಾಗಲು ದೇವೀ ಉರ್ವಶಿಯು ಐಲ ಪುರೂರವನಿಗೆ ಹೇಳಿದಳು:

ಪುತ್ರೋ ಮೇಽಪಹೃತೋ ರಾಜನ್ನನಾಥಾಯಾ ಇವ ಪ್ರಭೋ ।
ಏವಮುಕ್ತಸ್ತಥೋತ್ಥಾಯ ನಗ್ನೋ ರಾಜಾ ಪ್ರಧಾವಿತಃ ।। ೧-೨೬-೨೭
ಮೇಷಯೋಃ ಪದಮನ್ವಿಚ್ಛನ್ಗಂಧರ್ವೈರ್ವಿದ್ಯುದಪ್ಯಥ ।
ಉತ್ಪಾದಿತಾ ಸುಮಹತೀ ಯಯೌ ತದ್ಭವನಂ ಮಹತ್ ।। ೧-೨೬-೨೮

“ಪ್ರಭೋ! ರಾಜನ್! ನನ್ನ ಪುತ್ರರನ್ನು ಅನಾಥರಂತೆ ಅಪಹರಿಸಿಕೊಂಡು ಹೋಗುತ್ತಿದ್ದಾರೆ!” ಹೀಗೆ ಹೇಳಲು ರಾಜನು ನಗ್ನನಾಗಿಯೇ ಎದ್ದು ಆಡುಗಳ ಹೆಜ್ಜೆಗಳ ಗುರುತನ್ನೇ ಹಿಡಿದು ಓಡಿದನು. ಆಗ ಕೂಡಲೇ ಗಂಧರ್ವರು ಅತಿ ದೊಡ್ಡ ಮಿಂಚನ್ನು ಸೃಷ್ಟಿಸಿದರು. ಒಮ್ಮೆಲೇ ಆ ವಿಶಾಲ ಭವನವು ಪ್ರಕಾಶಿತವಾಯಿತು.

ಪ್ರಕಾಶಿತಂ ವೈ ಸಹಸಾ ತತೋ ನಗ್ನಮವೈಕ್ಷತ ।
ನಗ್ನಂ ದೃಷ್ಟ್ವಾ ತಿರೋಭೂತಾ ಸಾಪ್ಸರಾ ಕಾಮರೂಪಿಣೀ ।। ೧-೨೬-೨೯

ಆ ಮಿಂಚಿನ ಬೆಳಕಿನಲ್ಲಿ ಉರ್ವಶಿಯು ನಗ್ನನಾಗಿದ್ದ ರಾಜನನ್ನು ನೋಡಿಬಿಟ್ಟಳು. ಕಾಮರೂಪಿಣೀ ಆ ಅಪ್ಸರೆಯು ನಗ್ನನಾಗಿದ್ದ ಅವನನ್ನು ನೋಡಿದೊಡನೆಯೇ ಅಂತರ್ಧಾನಳಾದಳು.

ಉತ್ಸೃಷ್ಟಾವುರಣೌ ದೃಷ್ಟ್ವಾ ರಾಜಾ ಗೃಹ್ಯಾಗತೋ ಗೃಹೇ ।
ಅಪಶ್ಯನ್ನುರ್ವಶೀಂ ತತ್ರ ವಿಲಲಾಪ ಸುದುಃಖಿತಃ ।। ೧-೨೬-೩೦

ರಾಜನಾದರೋ ಗಂಧರ್ವರು ಬಿಟ್ಟುಹೋಗಿದ್ದ ಆಡುಗಳನ್ನು ನೋಡಿ ಅವುಗಳನ್ನು ಜೊತೆಯಲ್ಲಿ ಕರೆದುಕೊಂಡು ಅರಮನೆಯನ್ನು ಪ್ರವೇಶಿಸಿದನು. ಅಲ್ಲಿ ಉರ್ವಶಿಯನ್ನು ಕಾಣದೇ ಅತ್ಯಂತ ದುಃಖಿತನಾಗಿ ವಿಲಪಿಸಿದನು.

ಚಚಾರ ಪೃಥಿವೀಂ ಸರ್ವಾಂ ಮಾರ್ಗಮಾಣ ಇತಸ್ತತಃ ।
ಅಥಾಪಶ್ಯತ್ಸ ತಾಂ ರಾಜಾ ಕುರುಕ್ಷೇತ್ರೇ ಮಹಾಬಲಃ ।। ೧-೨೬-೩೧
ಪ್ಲಕ್ಷತೀರ್ಥೇ ಪುಷ್ಕರಿಣ್ಯಾಂ ಹೈಮವತ್ಯಾಂ ಸಮಾಪ್ಲುತಾಮ್ ।
ಕ್ರೀಡಂತೀಮಪ್ಸರೋಭಿಶ್ಚ ಪಂಚಭಿಃ ಸಹ ಶೋಭನಾಮ್ ।। ೧-೨೬-೩೨

ಅವಳನ್ನು ಹುಡುಕುತ್ತಾ ಪೃಥ್ವಿಯ ಎಲ್ಲ ಕಡೆ ಸುತ್ತಾಡತೊಡಗಿದನು. ಆಗ ಆ ಮಹಾಬಲ ರಾಜನು ಕುರುಕ್ಷೇತ್ರದ ಪ್ಲಕ್ಷತೀರ್ಥದಲ್ಲಿ ಹೈಮವತೀ ಎಂಬ ಹೆಸರಿನ ಪುಷ್ಕರಿಣಿಯಲ್ಲಿ ಐವರು ಅಪ್ಸರೆಯರೊಂದಿಗೆ ಜಲಕ್ರೀಡೆಯಾಡುತ್ತಿದ್ದ ಶೋಭನೆ ಉರ್ವಶಿಯನ್ನು ನೋಡಿದನು.

ತಾಂ ಕ್ರೀಡಂತೀಂ ತತೋ ದೃಷ್ಟ್ವಾ ವಿಲಲಾಪ ಸ ದುಃಖಿತಃ ।
ಸಾ ಚಾಪಿ ತತ್ರ ತಂ ದೃಷ್ಟ್ವಾ ರಾಜಾನಮವಿದೂರತಃ ।। ೧-೨೬-೩೩
ಉರ್ವಶೀ ತಾಃ ಸಖೀಃ ಪ್ರಾಹ ಸ ಏಷ ಪುರುಷೋತ್ತಮಃ ।
ಯಸ್ಮಿನ್ನಹಮವಾತ್ಸಂ ವೈ ದರ್ಶಯಾಮಾಸ ತಂ ನೃಪಮ್ ।। ೧-೨೬-೩೪

ಕ್ರೀಡಿಸುತ್ತಿದ್ದ ಅವಳನ್ನು ನೋಡಿ ರಾಜನು ದುಃಖಿತನಾಗಿ ವಿಲಪಿಸಿದನು. ಉರ್ವಶಿಯೂ ಕೂಡ ರಾಜನನ್ನು ಹತ್ತಿರದಿಂದಲೇ ನೋಡಿ ತನ್ನ ಸಖಿಯರಿಗೆ ಅವನನ್ನು ತೋರಿಸಿ “ಯಾರೊಂದಿಗೆ ನಾನು ವಾಸಿಸುತ್ತಿದ್ದೆನೋ ಅವನೇ ಈ ಪುರುಷೋತ್ತಮನು!”

ಸಮಾವಿಗ್ನಾಸ್ತು ತಾಃ ಸರ್ವಾಃ ಪುನರೇವ ನರಾಧಿಪ ।
ಜಾಯೇ ಹ ತಿಷ್ಠ ಮನಸಾ ಘೋರೇ ವಚಸಿ ತಿಷ್ಠ ಹ ।। ೧-೨೬-೩೫

ಅಪ್ಸರೆಯರೆಲ್ಲರೂ ಪುನಃ ಉರ್ವಶಿಯು ಎಲ್ಲಿ ಹೊರಟುಹೋಗುತ್ತಾಳೋ ಎಂದು ಉದ್ವಿಗ್ನರಾದರು. ನರಾಧಿಪನಾದರೋ ಪುನಃ ಪುನಃ “ಸ್ವಲ್ಪ ಹೊತ್ತು ನಿಲ್ಲು! ಕಠೋರ ಮನಸ್ಸಿನವಳೇ! ವಚನಬದ್ಧಳಾಗಿರು!” ಎಂದು ಹೇಳುತ್ತಿದ್ದನು.

ಏವಮಾದೀನಿ ಸೂಕ್ತಾನಿ ಪರಸ್ಪರಮಭಾಷತ ।
ಉರ್ವಶೀ ಚಾಬ್ರವೀದೈಲಂ ಸಗರ್ಭಾಹಂ ತ್ವಯಾ ಪ್ರಭೋ ।। ೧-೨೬-೩೬

ಹೀಗೆ ಮೊದಲಾಗಿ ಅವರು ಪರಸ್ಪರರಲ್ಲಿ ವೇದ ಸೂಕ್ತಗಳ ಮುಖಾಂತರ ಮಾತನಾಡತೊಡಗಿದರು. ಆಗ ಉರ್ವಶಿಯು ಇಲೆಯ ಮಗನಿಗೆ ಹೇಳಿದಳು: “ಪ್ರಭೋ! ನಾನು ನಿನ್ನಿಂದ ಗರ್ಭವತಿಯಾಗಿದ್ದೇನೆ.

ಸಂವತ್ಸರಾತ್ಕುಮಾರಾಸ್ತೇ ಭವಿಷ್ಯಂತಿ ನ ಸಂಶಯಃ ।
ನಿಶಾಮೇಕಾಂ ಚ ನೃಪತೇ ನಿವತ್ಸ್ಯಸಿ ಮಯಾ ಸಹ ।। ೧-೨೬-೩೭

ನೃಪತೇ! ನಿಸ್ಸಂದೇಹ ಒಂದೊಂದು ವರ್ಷವೂ ನಿನಗೆ ನನ್ನಲ್ಲಿ ಕುಮಾರರಾಗುತ್ತಾರೆ. ಮತ್ತು ಪ್ರತಿವರ್ಷ ನೀನು ನನ್ನೊಡನೆ ಒಂದು ರಾತ್ರಿ ಕಳೆಯಬಲ್ಲೆ.”

ಹೃಷ್ಟೋ ಜಗಾಮ ರಾಜಾಥ ಸ್ವಪುರಂ ತು ಮಹಾಯಶಾಃ ।
ಗತೇ ಸಂವತ್ಸರೇ ಭೂಯ ಉರ್ವಶೀ ಪುನರಾಗಮತ್ ।। ೧-೨೬-೩೮

ಹೃಷ್ಟನಾದ ಮಹಾಯಶಸ್ವೀ ರಾಜನು ತನ್ನ ಪುರಕ್ಕೆ ತೆರಳಿದನು. ಒಂದು ವರ್ಷವು ಕಳೆಯಲು ಉರ್ವಶಿಯು ಪುನಃ ಆಗಮಿಸಿದಳು.

ಉಷಿತಶ್ಚ ತಯಾ ಸಾರ್ಧಮೇಕರಾತ್ರಂ ಮಹಾಯಶಾಃ ।
ಉರ್ವಶ್ಯಥಾಬ್ರವೀದೈಲಂ ಗಂಧರ್ವಾ ವರದಾಸ್ತವ ।। ೧-೨೬-೩೯
ತಾನ್ವೃಣೀಷ್ವ ಮಹಾರಾಜ ಬ್ರೂಹಿ ಚೈನಾಂಸ್ತ್ವಮೇವ ಹಿ ।
ವೃಣೀಷ್ವ ಸಮತಾಂ ರಾಜನ್ಗಂಧರ್ವಾಣಾಂ ಮಹಾತ್ಮನಾಮ್ ।। ೧-೨೬-೪೦

ಮಹಾಯಶಸ್ವೀ ಪುರೂರವನು ಅವಳೊಂದಿಗೆ ಒಂದು ರಾತ್ರಿಯನ್ನು ಕಳೆದನು. ಆಗ ಉರ್ವಶಿಯು “ಗಂಧರ್ವರು ನಿನಗೆ ವರವನ್ನು ನೀಡಲು ಬಯಸುತ್ತಾರೆ. ಮಹಾರಾಜ! ವರವನ್ನು ಕೇಳಿಕೋ! ರಾಜನ್! ನಿನ್ನ ಮಕ್ಕಳಿಗೆ ಮಹಾತ್ಮ ಗಂಧರ್ವರ ಸಮಾನತ್ವವನ್ನು ಕೇಳಿಕೋ!”

ತಥೇತ್ಯುಕ್ತ್ವಾ ವರಂ ವವ್ರೇ ಗಂಧರ್ವಾಶ್ಚ ತಥಾಸ್ತ್ವಿತಿ ।
ಪೂರಯಿತ್ವಾಗ್ನಿನಾ ಸ್ಥಾಲೀಂ ಗಂಧರ್ವಾಶ್ಚ ತಮಬ್ರುವನ್ ।। ೧-೨೬-೪೧

ಹಾಗೆಯೇ ಆಗಲೆಂದು ಹೇಳಿ ಅವನು ವರವನ್ನು ಕೇಳಿಕೊಂಡನು. ಗಂಧರ್ವರೂ ಕೂಡ ತಥಾಸ್ತು ಎಂದು ಹೇಳಿ, ಒಂದು ಹರಿವಾಣದಲ್ಲಿ ಅಗ್ನಿಯನ್ನು ತುಂಬಿಸಿ ಹೇಳಿದರು:

ಅನೇನೇಷ್ಟ್ವಾ ಚ ಲೋಕಾನ್ನಃ ಪ್ರಾಪ್ಸ್ಯಸಿ ತ್ವಂ ನರಾಧಿಪ ।
ತಾನಾದಾಯ ಕುಮಾರಾಂಸ್ತು ನಗರಾಯೋಪಚಕ್ರಮೇ ।। ೧-೨೬-೪೨

“ನರಾಧಿಪ! ಈ ಅಗ್ನಿಯಿಂದ ಯಜ್ಞವನ್ನು ಮಾಡಿ ನೀನು ನಮ್ಮ ಲೋಕವನ್ನು ಪಡೆದುಕೊಳ್ಳುತ್ತೀಯೆ!” ಆಗ ಅವನು ಅಗ್ನಿ ಮತ್ತು ಕುಮಾರರೊಡನೆ ನಗರದ ಕಡೆ ಪ್ರಯಾಣಿಸಿದನು.

ನಿಕ್ಷಿಪ್ಯಾಗ್ನಿಮರಣ್ಯೇ ತು ಸಪುತ್ರಸ್ತು ಗೃಹಂ ಯಯೌ ।
ಸ ತ್ರೇತಾಗ್ನಿಂ ತು ನಾಪಶ್ಯದಶ್ವತ್ಥಂ ತತ್ರ ದೃಷ್ಟವಾನ್ ।। ೧-೨೬-೪೩

ಆ ಅಗ್ನಿಯನ್ನು ಅರಣ್ಯದಲ್ಲಿ ಇಟ್ಟು ಪುತ್ರರೊಂದಿಗೆ ಅರಮನೆಯನ್ನು ಪ್ರವೇಶಿಸಿದನು. ಅರಣ್ಯದಲ್ಲಿ ಅವನು ಆ ತ್ರೇತಾಗ್ನಿಯನ್ನು ನೋಡದೇ ಅಲ್ಲಿ ಅಶ್ವತ್ಥ ಮರವನ್ನು ನೋಡಿದನು.

ಶಮೀಜಾತಂ ತು ತಂ ದೃಷ್ಟ್ವಾ ಅಶ್ವತ್ಥಂ ವಿಸ್ಮಿತಸ್ತದಾ ।
ಗಂಧರ್ವೇಭ್ಯಸ್ತದಾಶಂಸದಗ್ನಿನಾಶಂ ತತಸ್ತು ಸಃ ।। ೧-೨೬-೪೪

ಆ ಅಗ್ನಿಯು ಅಶ್ವತ್ಥವೃಕ್ಷವಾದುದನ್ನು ನೋಡಿ ಅತ್ಯಂತ ವಿಸ್ಮಿತನಾಗಿ ಅವನು ಅಗ್ನಿಯು ನಾಶವಾದುದರ ಕುರಿತು ಗಂಧರ್ವರಿಗೆ ಹೇಳಿದನು.

ಶ್ರುತ್ವಾ ತಮರ್ಥಮಖಿಲಮರಣೀಂ ತು ಸಮಾದಿಶತ್ ।
ಅಶ್ವತ್ಥಾದರಣೀಂ ಕೃತ್ವಾ ಮಥಿತ್ವಾಗ್ನಿಂ ಯಥಾವಿಧಿ ।। ೧-೨೬-೪೫

ಅದನ್ನು ಸಂಪೂರ್ಣವಾಗಿ ಕೇಳಿ ಗಂಧರ್ವರು ಅರಣಿಯನ್ನು ಮಾಡಲು ಉಪದೇಶಿಸಿದರು. ರಾಜನು ಅಶ್ವತ್ಥದಿಂದ ಅರಣಿಯನ್ನು ಮಾಡಿ ಯಥಾವಿಧಿಯಾಗಿ ಮಥಿಸಿದನು.

ಮಥಿತ್ವಾಗ್ನಿಂ ತ್ರಿಧಾ ಕೃತ್ವಾ ಅಯಜತ್ಸ ನರಾಧಿಪಃ ।
ಇಷ್ಟ್ವಾ ಯಜ್ಞೈರ್ಬಹುವಿಧೈರ್ಗತಸ್ತೇಷಾಂ ಸಲೋಕತಾಮ್ ।। ೧-೨೬-೪೬

ಮಥಿಸಿ ನರಾಧಿಪನು ಅಗ್ನಿಯನ್ನು ಹುಟ್ಟಿಸಿದನು. ಅದನ್ನು ಮೂರು ಭಾಗಗಳನ್ನಾಗಿ ವಿಂಗಡಿಸಿದನು. ಅದರಿಂದ ಬಹುವಿಧದ ಇಷ್ಟಿ-ಯಜ್ಞಗಳನ್ನು ಮಾಡಿ ಗಂಧರ್ವರ ಲೋಕಕ್ಕೆ ಹೋದನು.

ಗಂಧರ್ವೇಭ್ಯೋ ವರಂ ಲಬ್ಧ್ವಾ ತ್ರೇತಾಗ್ನಿಂ ಸಮಕಾರಯತ್ ।
ಏಕೋಽಗ್ನಿಃ ಪೂರ್ವಮೇವಾಸೀದೈಲಸ್ತ್ರೇತಾಮಕಾರಯತ್ ।। ೧-೨೬-೪೭

ಗಂಧರ್ವರಿಂದ ವರವನ್ನು ಪಡೆದು ಅವನು ತ್ರೇತಾಗ್ನಿಯನ್ನು ರಚಿಸಿದನು. ಅದಕ್ಕೆ ಮೊದಲು ಒಂದೇ ಅಗ್ನಿಯು ಇತ್ತು. ಐಲನು ಮೂರು ಅಗ್ನಿಗಳನ್ನಾಗಿ ಮಾಡಿದನು.

ಏವಂಪ್ರಭಾವೋ ರಾಜಾಸೀದೈಲಸ್ತು ನರಸತ್ತಮ ।
ದೇಶೇ ಪುಣ್ಯತಮೇ ಚೈವ ಮಹರ್ಷಿಭಿರಭಿಷ್ಟುತೇ ।। ೧-೨೬-೪೮
ರಾಜ್ಯಂ ಸ ಕಾರಯಾಮಾಸ ಪ್ರಯಾಗೇ ಪೃಥಿವೀಪತಿಃ ।
ಉತ್ತರೇ ಜಾಹ್ನವೀತೀರೇ ಪ್ರತಿಷ್ಠಾನೇ ಮಹಾಯಶಾಃ ।। ೧-೨೬-೪೯

ನರಸತ್ತಮ! ಹೀಗೆ ರಾಜಾ ಐಲನು ಪ್ರಭಾವಶಾಲಿಯಾಗಿದ್ದನು. ಆ ಮಹಾಯಶಸ್ವೀ ಪೃಥ್ವೀಪತಿಯು ಮಹರ್ಷಿಗಳ ಪ್ರಶಂಸೆಗೆ ಪಾತ್ರವಾದ ಉತ್ತರ ಜಾಹ್ನವೀತೀರದ ಪ್ರಯಾಗ ಪ್ರತಿಷ್ಠಾನದಲ್ಲಿ ರಾಜ್ಯವನ್ನಾಳಿದನು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ಹರಿವಂಶಪರ್ವಣಿ ಐಲೋತ್ಪತ್ತಿರ್ನಾಮ ಷಡ್ವಿಂಶೋಽಧ್ಯಾಯಃ


  1. ಈಗಿನ ಝಾಂಸಿ ಅಥವಾ ಪ್ರಯಾಗ. ↩︎