025: ಸೋಮೋತ್ಪತ್ತಿವರ್ಣನಮ್

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಖಿಲಭಾಗೇ ಹರಿವಂಶಃ

ಹರಿವಂಶ ಪರ್ವ

ಅಧ್ಯಾಯ 25

ಸಾರ

ವೈಶಂಪಾಯನ ಉವಾಚ
ಪಿತಾ ಸೋಮಸ್ಯ ವೈ ರಾಜಂಜಜ್ಞೇಽತ್ರಿರ್ಭಗವಾನೃಷಿಃ ।
ಬ್ರಹ್ಮಣೋ ಮಾನಸಾತ್ಪೂರ್ವಂ ಪ್ರಜಾಸರ್ಗಂ ವಿಧಿತ್ಸತಃ ।। ೧-೨೫-೧

ವೈಶಂಪಾಯನನು ಹೇಳಿದನು: “ರಾಜನ್! ಹಿಂದೆ ಬ್ರಹ್ಮನು ಪ್ರಜಾಸೃಷ್ಟಿಯನ್ನು ನಡೆಸುತ್ತಿದ್ದಾಗ ಅವನ ಮನಸ್ಸಿನಿಂದ ಸೋಮನ ಪಿತ ಭಗವಾನ್ ಋಷಿ ಅತ್ರಿಯ ಜನ್ಮವಾಯಿತು.

ತತ್ರಾತ್ರಿಃ ಸರ್ವಭೂತಾನಾಂ ತಸ್ಥೌ ಸ್ವತನಯೈರ್ಯುತಃ ।
ಕರ್ಮಣಾ ಮನಸಾ ವಾಚಾ ಶುಭಾನ್ಯೇವ ಚಚಾರ ಸಃ ।। ೧-೨೫-೨

ಆಗ ಅತ್ರಿಯು ತನ್ನ ಮಗನೊಂದಿಗೆ, ಕರ್ಮ-ಮನಸ್ಸು-ಮಾತುಗಳಲ್ಲಿ ಸರ್ವಭೂತಗಳಿಗೂ ಶುಭವನ್ನಾಗುವುದನ್ನೇ ಆಚರಿಸುತ್ತಿದ್ದರು.

ಅಹಿಂಸ್ರಃ ಸರ್ವಭೂತೇಷು ಧರ್ಮಾತ್ಮಾ ಸಂಶಿತವ್ರತಃ ।
ಕಾಷ್ಠಕುಡ್ಯಶಿಲಾಭೂತ ಊರ್ಧ್ವಬಾಹುರ್ಮಹಾದ್ಯುತಿಃ ।। ೧-೨೫-೩
ಅನುತ್ತರಂ ನಾಮ ತಪೋ ಯೇನ ತಪ್ತಂ ಮಹತ್ಪುರಾ ।
ತ್ರೀಣಿ ವರ್ಷಸಹಸ್ರಾಣಿ ದಿವ್ಯಾನೀತಿ ಹಿ ನಃ ಶ್ರುತಮ್ ।। ೧-೨೫-೪

ಆ ಧರ್ಮಾತ್ಮಾ ಸಂಶಿತವ್ರತ ಮಹಾದ್ಯುತಿ ಅತ್ರಿಯು ಸರ್ವಭೂತಗಳಲ್ಲಿಯೂ ಅಹಿಂಸಾಭಾವದಿಂದ ಬಾಹುಗಳನ್ನು ಮೇಲಕ್ಕೆತ್ತಿ ಕಟ್ಟಿಗೆ, ಗೋಡೆ ಅಥವಾ ಶಿಲೆಯಂತೆ ಮೂರು ಸಹಸ್ರ ದಿವ ವರ್ಷಗಳು ಅನುತ್ತರ ಎಂಬ ಹೆಸರಿನ ಮಹಾ ತಪಸ್ಸನ್ನು ತಪಿಸಿದನು ಎಂದು ಕೇಳಿದ್ದೇವೆ.

ತತ್ರೋರ್ಧ್ವರೇತಸಸ್ತಸ್ಯ ಸ್ಥಿತಸ್ಯಾನಿಮಿಷಸ್ಯ ಹ ।
ಸೋಮತ್ವಂ ತನುರಾಪೇದೇ ಮಹಾಸತ್ತ್ವಸ್ಯ ಭಾರತ ।। ೧-೨೫-೫

ಭಾರತ! ಆ ಮಹಾಸತ್ತ್ವನು ರೆಪ್ಪೆಬಡಿಯದೇ ಊರ್ಧ್ವರೇತಸನಾಗಿ ನಿಂತಿರಲು ಅವನ ದೇಹವು ಸೋಮತ್ವವನ್ನು ಪಡೆದುಕೊಂಡಿತು.

ಊರ್ಧ್ವಮಾಚಕ್ರಮೇ ತಸ್ಯ ಸೋಮತ್ವಂ ಭಾವಿತಾತ್ಮನಃ ।
ನೇತ್ರಾಭ್ಯಾಂ ವಾರಿ ಸುಸ್ರಾವ ದಶಧಾ ದ್ಯೋತಯದ್ದಿಶಃ ।। ೧-೨೫-೬

ಆ ಭಾವಿತಾತ್ಮನ ಸೋಮತ್ವವು ಅವನ ಎರಡೂ ಕಣ್ಣುಗಳಿಂದ ನೀರಾಗಿ ಸುರಿದು ಹತ್ತು ದಿಕ್ಕುಗಳನ್ನೂ ಪ್ರಕಾಶಗೊಳಿಸುತ್ತಾ ಆಕಾಶವನ್ನೇರತೊಡಗಿತು.

ತಂ ಗರ್ಭಂ ವಿಧಿನಾ ಹೃಷ್ಟಾ ದಶ ದೇವ್ಯೋ ದಧುಸ್ತದಾ ।
ಸಮೇತ್ಯ ಧಾರಯಾಮಾಸುರ್ನ ಚ ತಾಃ ಸಮಶಕ್ನುವನ್ ।। ೧-೨೫-೭

ಆ ಗರ್ಭವನ್ನು ವಿಧಿವತ್ತಾಗಿ ದಶದಿಕ್ಕಿನ ದೇವಿಯರು ಹೃಷ್ಟರಾಗಿ ಒಂದಾಗಿ ಧಾರಣೆಮಾಡಿಕೊಂಡರು. ಆದರೆ ಅವರಿಗೆ ಅದನ್ನು ಧಾರಣೆಮಾಡಿಕೊಳ್ಳಲು ಶಕ್ಯವಾಗಲಿಲ್ಲ.

ಸ ತಾಭ್ಯಃ ಸಹಸೈವಾಥ ದಿಗ್ಭ್ಯೋ ಗರ್ಭಃ ಪ್ರಭಾನ್ವಿತಃ ।
ಪಪಾತ ಭಾಸಯನ್ಲೋಕಾಂಶೀತಾಂಶುಃ ಸರ್ವಭಾವನಃ ।। ೧-೨೫-೮

ಕೂಡಲೇ ಆ ದಿಶಾದೇವಿಯರ ಪ್ರಭಾನ್ವಿತ ಗರ್ಭದಿಂದ ಸರ್ವಭಾವನ ಶೀತಾಂಶುವು ಲೋಕಗಳನ್ನು ಬೆಳಗುತ್ತಾ ಕೆಳಕ್ಕುರುಳಿದನು.

ಯದಾ ನ ಧಾರಣೇ ಶಕ್ತಾಸ್ತಸ್ಯ ಗರ್ಭಸ್ಯ ತಾ ದಿಶಃ ।
ತತಸ್ತಾಭಿಃ ಸಹೈವಾಶು ನಿಪಪಾತ ವಸುಂಧರಾಮ್ ।। ೧-೨೫-೯

ಅವನ ಗರ್ಭವನ್ನು ಧರಿಸಲು ಅಶಕ್ಯರಾದ ಆ ದಿಶಗಳು ಅವನೊಂದಿಗೆ ಕೂಡಲೇ ಮಸುಂಧರೆಯ ಮೇಲೆ ಬಿದ್ದರು.

ಪತಿತಂ ಸೋಮಮಾಲೋಕ್ಯ ಬ್ರಹ್ಮಾ ಲೋಕಪಿತಾಮಹಃ ।
ರಥಮಾರೋಪಯಾಮಾಸ ಲೋಕಾನಾಂ ಹಿತಕಾಮ್ಯಯಾ ।। ೧-೨೫-೧೦

ಬೀಳುತ್ತಿದ್ದ ಸೋಮನನ್ನು ನೋಡಿದ ಲೋಕಪಿತಾಮಹ ಬ್ರಹ್ಮನು ಲೋಕಗಳ ಹಿತವನ್ನು ಬಯಸಿ ಅವನನ್ನು ಒಂದು ರಥದಲ್ಲಿ ಏರಿಸಿದನು.

ಸ ಹಿ ವೇದಮಯಸ್ತಾತ ಧರ್ಮಾತ್ಮಾ ಸತ್ಯಸಂಗ್ರಹಃ ।
ಯುಕ್ತೋ ವಾಜಿಸಹಸ್ರೇಣ ಸಿತೇನೇತಿ ಹಿ ನಃ ಶ್ರುತಮ್ ।। ೧-೨೫-೧೧

ಅಯ್ಯಾ! ಆ ರಥವು ವೇದಮಯವೂ, ಧರ್ಮಾತ್ಮವೂ ಮತ್ತು ಸತ್ಯಸಂಗ್ರಹವೂ ಆಗಿದ್ದಿತು. ಅದಕ್ಕೆ ಸಾವಿರ ಶ್ವೇತವರ್ಣದ ಕುದುರೆಗಳನ್ನು ಕಟ್ಟಲಾಗಿತ್ತು ಎಂದು ನಾವು ಕೇಳಿದ್ದೇವೆ.

ತಸ್ಮಿನ್ನಿಪತಿತೇ ದೇವಾಃ ಪುತ್ರೇಽತ್ರೇಃ ಪರಮಾತ್ಮನಿ ।
ತುಷ್ಟುವುರ್ಬ್ರಹ್ಮಣಃ ಪುತ್ರಾ ಮಾನಸಾಃ ಸಪ್ತ ಯೇ ಶ್ರುತಾಃ ।। ೧-೨೫-೧೨

ಅತ್ರಿಯ ಪುತ್ರ ಪರಮಾತ್ಮನು ಹಾಗೆ ಬೀಳುತ್ತಿರುವಾಗ ದೇವತೆಗಳು ಮತ್ತು ಬ್ರಹ್ಮನ ಏಳು ವೇದಪಾರಂಗತ ಮಾನಸಪುತ್ರರು ಸ್ತುತಿಸತೊಡಗಿದರು.

ತಥೈವಾಂಗಿರಸಸ್ತತ್ರ ಭೃಗುರೇವಾತ್ಮಜೈಃ ಸಹ ।
ಋಗ್ಭಿರ್ಯಜುರ್ಭಿರ್ಬಹುಲೈರಥರ್ವಾಂಗಿರಸೈರಪಿ ।। ೧-೨೫-೧೩

ಹಾಗೆಯೇ ಆಂಗಿರಸ ಮತ್ತು ಭೃಗು ಇವರು ತಮ್ಮ ಮಕ್ಕಳೊಂದಿಗೆ ಋಗ್ವೇದ-ಯಜುರ್ವೇದ-ಅಥರ್ವ ವೇದಗಳಿಂದ ಬಹಳವಾಗಿ ಸೋಮನ ಸ್ತುತಿಗೈದರು.

ತಸ್ಯ ಸಂಸ್ತೂಯಮಾನಸ್ಯ ತೇಜಃ ಸೋಮಸ್ಯ ಭಾಸ್ವತಃ ।
ಆಪ್ಯಾಯಮಾನಂ ಲೋಕಾಂಸ್ತ್ರೀನ್ಭಾಸಯಾಮಾಸ ಸರ್ವಶಃ ।। ೧-೨೫-೧೪

ಅವರು ಹಾಗೆ ಸ್ತುತಿಸುತ್ತಿರಲು ಬೆಳಗುತ್ತಿದ್ದ ಸೋಮನ ತೇಜಸ್ಸು ಮೂರುಲೋಕಗಳನ್ನೂ ಸಂತೋಷಗೊಳಿಸುತ್ತಾ ಎಲ್ಲಕಡೆ ಬೆಳಗತೊಡಗಿತು.

ಸ ತೇನ ರಥಮುಖ್ಯೇನ ಸಾಗರಾಂತಾಂ ವಸುಂಧರಾಮ್ ।
ತ್ರಿಃಸಪ್ತಕೃತ್ವೋಽತಿಯಶಾಶ್ಚಕಾರಾಭಿಪ್ರದಕ್ಷಿಣಮ್ ।। ೧-೨೫-೧೫

ಆ ಅತಿಯಶಸ್ವಿಯು ಆ ರಥಮುಖ್ಯದಲ್ಲಿ ಸೋಮನನ್ನು ಇಪ್ಪತ್ತೊಂದು ಬಾರಿ ಸಾಗರಾಂತಿಕೆ ವಸುಂಧರೆಯ ಪ್ರದಕ್ಷಿಣೆಯನ್ನು ಮಾಡಿಸಿದನು.

ತಸ್ಯ ಯಚ್ಚ್ಯಾವಿತಂ ತೇಜಃ ಪೃಥಿವೀಮನ್ವಪದ್ಯತ ।
ಓಷಧ್ಯಸ್ತಾಃ ಸಮುದ್ಭೂತಾಸ್ತೇಜಸಾ ಪ್ರಜ್ವಲಂತ್ಯುತ ।। ೧-೨೫-೧೬

ಸೋಮನ ರಥದಿಂದ ಕೆಳಗೆ ಬಿದ್ದ ತೇಜಸ್ಸಿನ ಬಿಂದುಗಳು ಭೂಮಿಯನ್ನು ಸೇರಿ ಪ್ರಕಾಶಪೂರ್ಣ ಓಷಧಿಗಳು ಹುಟ್ಟಿಕೊಂಡವು.

ತಾಭಿರ್ಧಾರ್ಯಾಸ್ತ್ರಯೋ ಲೋಕಾಃ ಪ್ರಜಾಶ್ಚೈವ ಚತುರ್ವಿಧಾಃ ।
ಪೋಷ್ಟಾ ಹಿ ಭಗವಾನ್ಸೋಮೋ ಜಗತೋ ಜಗತೀಪತೇ ।। ೧-೨೫-೧೭

ಜಗತೀಪತೇ! ಅವುಗಳಿಂದ ಭೂಲೋಕ-ಭುವರ್ಲೋಕ ಮತ್ತು ಸ್ವರ್ಗಲೋಕಗಳೆಂಬ ಮೂರು ಲೋಕಗಳೂ, ಜರಾಯುಜ-ಅಂಡಜ-ಸ್ವೇದಜ ಮತ್ತು ಉದ್ವಿಜ ಈ ನಾಲ್ಕು ವಿಧದ ಜೀವಿಗಳ ಪೋಷಣೆಯೂ ನಡೆಯುತ್ತದೆ. ಭಗವಾನ್ ಸೋಮನಿಂದಲೇ ಜಗತ್ತಿನ ಪೋಷಣೆಯ ನಡೆಯುತ್ತದೆ.

ಸ ಲಬ್ಧತೇಜಾ ಭಗವಾನ್ಸಂಸ್ತವೈಸ್ತೈಶ್ಚ ಕರ್ಮಭಿಃ ।
ತಪಸ್ತೇಪೇ ಮಹಾಭಾಗ ಪದ್ಮಾನಾಂ ದಶತೀರ್ದಶ ।। ೧-೨೫-೧೮

ಅಂಥಹ ಸ್ತವ ಕರ್ಮಗಳಿಂದ ತೇಜಸ್ಸನ್ನು ಪಡೆದ ಭಗವಾನ್ ಸೋಮನು ಒಂದು ಸಾವಿರ ಪದ್ಮ ವರ್ಷಗಳ ಪರ್ಯಂತ ತಪಸ್ಸನ್ನು ತಪಿಸಿದನು.

ಹಿರಣ್ಯವರ್ಣಾಂ ಯಾ ದೇವ್ಯೋ ಧಾರಯಂತ್ಯಾತ್ಮನಾ ಜಗತ್ ।
ನಿಧಿಸ್ತಾಸಾಮಭೂದ್ದೇವಃ ಪ್ರಖ್ಯಾತಃ ಸ್ವೇನ ಕರ್ಮಣಾ ।। ೧-೨೫-೧೯

ತನ್ನದೇ ಕರ್ಮಗಳಿಂದ ಪ್ರಖ್ಯಾತ ಸೋಮನು ಜಗತ್ತನ್ನು ತಮ್ಮ ಆತ್ಮಗಳಿಂದ ಧರಿಸಿರುವ ಹಿರಣ್ಯವರ್ಣದ ದೇವಿಯರ ನಿಧಿಯಾದನು.

ತತಸ್ತಸ್ಮೈ ದದೌ ರಾಜ್ಯಂ ಬ್ರಹ್ಮಾ ಬ್ರಹ್ಮವಿದಾಂ ವರಃ ।
ಬೀಜೌಷಧೀನಾಂ ವಿಪ್ರಾಣಾಮಪಾಂ ಚ ಜನಮೇಜಯ ।। ೧-೨೫-೨೦

ಜನಮೇಜಯ! ಅನಂತರ ಬ್ರಹ್ಮವಿದರಲ್ಲಿ ಶ್ರೇಷ್ಠ ಬ್ರಹ್ಮನು ಸೋಮನಿಗೆ ಬೀಜ, ಔಷಧಿ, ವಿಪ್ರರು ಮತ್ತು ಜಲದ ರಾಜ್ಯಾಧಿಕಾರವನ್ನು ವಹಿಸಿದನು.

ಸೋಽಭಿಷಿಕ್ತೋ ಮಹಾರಾಜ ರಾಜರಾಜ್ಯೇನ ರಾಜರಾಟ್ ।
ಲೋಕಾಂಸ್ತ್ರೀನ್ಭಾಸಯಾಮಾಸ ಸ್ವಭಾಸಾ ಭಾಸ್ವತಾಂ ವರಃ ।। ೧-೨೫-೨೧

ಮಹಾರಾಜ! ಹೊಳೆಯುವವರಲ್ಲಿ ಶ್ರೇಷ್ಠನಾದ ಸೋಮನು ರಾಜರಾಜ್ಯದ ರಾಜನಾಗಿ ಅಭಿಷಿಕ್ತನಾಗಲು ತನ್ನದೇ ಕಾಂತಿಯಿಂದ ಮೂರು ಲೋಕಗಳನ್ನೂ ಬೆಳಗತೊಡಗಿದನು.

ಸಪ್ತವಿಂಶತಿಮಿಂದೋಸ್ತು ದಾಕ್ಷಾಯಣ್ಯೋ ಮಹಾವ್ರತಾಃ ।
ದದೌ ಪ್ರಾಚೇತಸೋ ದಕ್ಷೋ ನಕ್ಷತ್ರಾಣೀತಿ ಯಾ ವಿದುಃ ।। ೧-೨೫-೨೨

ಪ್ರಾಚೇತಸ ದಕ್ಷನು ಮಹಾವ್ರತೆಯರಾದ ಇಪ್ಪತ್ತೇಳು ದಾಕ್ಷಾಯಿಣಿಯರನ್ನು ಇಂದುವಿಗೆ ಕೊಟ್ಟನು. ಅವರು ನಕ್ಷತ್ರಗಳೆಂದೂ ತಿಳಿಯಲ್ಪಟ್ಟಿದ್ದಾರೆ.

ಸ ತತ್ಪ್ರಾಪ್ಯ ಮಹದ್ರಾಜ್ಯಂ ಸೋಮಃ ಸೋಮವತಾಂ ವರಃ ।
ಸಮಾಜಹ್ರೇ ರಾಜಸೂಯಂ ಸಹಸ್ರಶತದಕ್ಷಿಣಮ್ ।। ೧-೨೫-೨೩

ಸೋಮವಂತರಲ್ಲಿ ಶ್ರೇಷ್ಠ ಸೋಮನು ಆ ಮಹಾರಾಜ್ಯವನ್ನು ಪಡೆದುಕೊಂಡು ಲಕ್ಷ ದಕ್ಷಿಣೆಗಳಿದ್ದ ರಾಜಸೂಯವನ್ನು ನೆರವೇರಿಸಿದನು.

ಹೋತಾಽಸ್ಯ ಭಗವಾನತ್ರಿರಧ್ವರ್ಯುರ್ಭಗವಾನ್ಭೃಗುಃ ।
ಹಿರಣ್ಯಗರ್ಭಶ್ಚೋದ್ಗಾತಾ ಬ್ರಹ್ಮಾ ಬ್ರಹ್ಮತ್ವಮೇಯಿವಾನ್ ।। ೧-೨೫-೨೪

ಆ ಯಜ್ಞದಲ್ಲಿ ಭಗವಾನ್ ಅತ್ರಿಯು ಹೋತನಾಗಿದ್ದನು. ಭಗವಾನ್ ಭೃಗುವು ಅಧ್ವರ್ಯುವಾಗಿದ್ದನು. ಹಿರಣ್ಯಗರ್ಭನು ಉದ್ಗಾತನಾಗಿದ್ದನು. ವಸಿಷ್ಠನು ಬ್ರಹ್ಮತ್ವವನ್ನು ವಹಿಸಿದ್ದನು.

ಸದಸ್ಯಸ್ತತ್ರ ಭಗವಾನ್ಹರಿರ್ನಾರಾಯಣಃ ಸ್ವಯಮ್ ।
ಸನತ್ಕುಮಾರಪ್ರಮುಖೈರಾದ್ಯೈರ್ಬ್ರಹ್ಮರ್ಷಿಭಿರ್ವೃತಃ ।। ೧-೨೫-೨೫

ಅಲ್ಲಿ ಸನತ್ಕುಮಾರರೇ ಮೊದಲಾದ ಆದಿ ಬ್ರಹ್ಮರ್ಷಿಗಳು ಸ್ವಯಂ ಭಗವಾನ್ ಹರಿ ನಾರಾಯಣನನ್ನು ಸದಸ್ಯನನ್ನಾಗಿ ಮಾಡಿದ್ದರು.

ದಕ್ಷಿಣಾಮದದಾತ್ಸೋಮಸ್ತ್ರೀಽಣ್ಲ್ಲೋಕಾನಿತಿ ನಃ ಶ್ರುತಮ್ ।
ತೇಭ್ಯೋ ಬ್ರಹ್ಮರ್ಷಿಮುಖ್ಯೇಭ್ಯಃ ಸದಸ್ಯೇಭ್ಯಶ್ಚ ಭಾರತ ।। ೧-೨೫-೨೬

ಭಾರತ! ಆ ಬ್ರಹ್ಮರ್ಷಿಮುಖ್ಯ ಸದಸ್ಯರಲ್ಲಿ ಕೆಲವರಿಗೆ ಸೋಮನು ಮೂರುಲೋಕಗಳನ್ನೂ ದಕ್ಷಿಣೆಯನ್ನಾಗಿ ಕೊಟ್ಟಿದ್ದನೆಂದು ನಾವು ಕೇಳಿದ್ದೇವೆ.

ತಂ ಸಿನಿಶ್ಚ ಕುಹೂಶ್ಚೈವ ದ್ಯುತಿಃ ಪುಷ್ಟಿಃ ಪ್ರಭಾ ವಸುಃ ಕೀರ್ತಿರ್ಧೃತಿಶ್ಚ ಲಕ್ಶ್ಮೀಶ್ಚ ನವ ದೇವ್ಯಃ ಸಿಷೇವಿರೇ ।। ೧-೨೫-೨೭

ಆಗ ಸಿನಿವಾಲೀ, ಕುಹೂ, ದ್ಯುತಿ, ಪುಷ್ಟಿ, ಪ್ರಭಾ, ವಸು, ಕೀರ್ತಿ, ಧೃತಿ ಮತ್ತು ಲಕ್ಷ್ಮಿ ಈ ನವ ದೇವಿಯರು ಸೋಮನ ಸೇವೆಗೈಯುತ್ತಿದ್ದರು.

ಪ್ರಾಪ್ಯಾವಭೃಥಮವ್ಯಗ್ರಃ ಸರ್ವದೇವರ್ಷಿಪೂಜಿತಃ ।
ವಿರರಾಜಾಧಿರಾಜೇಂದ್ರೋ ದಶಧಾ ಭಾಸಯಂದಿಶಃ ।। ೧-೨೫-೨೮

ಈ ರೀತಿ ಸರ್ವದೇವರ್ಷಿಪೂಜಿತನಾದ ಆ ಅವ್ಯಗ್ರ ಅಧಿರಾಜೇಂದ್ರನು ಅವಭೃತವನ್ನು ಪಡೆದು ಹತ್ತೂ ದಿಕ್ಕುಗಳನ್ನೂ ಬೆಳಗತೊಡಗಿದನು.

ತಸ್ಯ ತತ್ಪ್ರಾಪ್ಯ ದುಷ್ಪ್ರಾಪ್ಯಮೈಶ್ವರ್ಯಂ ಮುನಿಸತ್ಕೃತಮ್ ।
ವಿಬಭ್ರಾಮ ಮತಿಸ್ತಾತ ವಿನಯಾದನಯಾಽಽಹತಾ ।। ೧-೨೫-೨೯

ಅಯ್ಯಾ! ಮುನಿಸತ್ಕೃತವಾದ ಅಂತಹ ದುಷ್ಪ್ರಾಪ್ಯ ಐಶ್ವರ್ಯವನ್ನು ಪಡೆದು ಸೋಮನ ಮತಿಯು ವಿನಯದಿಂದ ಭ್ರಷ್ಟಗೊಂಡಿತು ಮತ್ತು ಅನೀತಿಯು ಅವನನ್ನು ಆವರಿತು.

ಬೃಹಸ್ಪತೇಃ ಸ ವೈ ಭಾರ್ಯಾಂ ತಾರಾಂ ನಾಮ ಯಶಸ್ವಿನೀಮ್ ।
ಜಹಾರ ತರಸಾ ಸರ್ವಾನವಮತ್ಯಾಂಗಿರಃಸುತಾನ್ ।। ೧-೨೫-೩೦

ಅನಂತರ ಅವನು ಅಂಗಿರಸನ ಮಕ್ಕಳೆಲ್ಲರನ್ನೂ ತಿರಸ್ಕರಿಸಿ ಅವಸರದಲ್ಲಿ ಬೃಹಸ್ಪತಿಯ ಭಾರ್ಯೆ ತಾರಾ ಎಂಬ ಹೆಸರಿನ ಯಶಸ್ವಿನಿಯನ್ನು ಬಲಪೂರ್ವಕವಾಗಿ ಅಪಹರಿಸಿದನು.

ಸ ಯಾಚ್ಯಮಾನೋ ದೇವೈಶ್ಚ ಯಥಾ ದೇವರ್ಷಿಭಿಃ ಸಹ ।
ನೈವ ವ್ಯಸರ್ಜಯತ್ತಾರಾಂ ತಸ್ಮಾ ಆಂಗಿರಸೇ ತದಾ ।
ಸ ಸಂರಬ್ಧಸ್ತತಸ್ತಸ್ಮಿಂದೇವಾಚಾರ್ಯೋ ಬೃಹಸ್ಪತಿಃ ।। ೧-೨೫-೩೧

ದೇವತೆಗಳು ಮತ್ತು ದೇವರ್ಷಿಗಳು ಕೂಡಿ ಬೇಡಿಕೊಂಡರೂ ಅವನು ತಾರೆಯನ್ನು ಆಂಗಿರಸನಿಗೆ ಬಿಟ್ಟುಕೊಡಲಿಲ್ಲ. ಆಗ ದೇವತೆಗಳ ಆಚಾರ್ಯ ಬೃಹಸ್ಪತಿಯಾದರೋ ಸೋಮನ ಮೇಲೆ ಅತ್ಯಂತ ಕುಪಿತನಾದನು.

ಉಶನಾ ತಸ್ಯ ಜಗ್ರಾಹ ಪಾರ್ಷ್ಣಿಮಾಂಗಿರಸಸ್ತದಾ ।
ಸ ಹಿ ಶಿಷ್ಯೋ ಮಹಾತೇಜಾಃ ಪಿತುಃ ಪೂರ್ವೋ ಬೃಹಸ್ಪತೇಃ ।। ೧-೨೫-೩೨

ಆಗ ಉಶನ ಶುಕ್ರನು ಚಂದ್ರನ ಪಕ್ಷವನ್ನೂ ರುದ್ರನು ಆಂಗಿರಸ ಬೃಹಸ್ಪತಿಯ ಪಕ್ಷವನ್ನೂ ಸೇರಿಕೊಂಡರು. ಮಹಾತೇಜಸ್ವೀ ರುದ್ರನು ಹಿಂದೆ ಬೃಹಸ್ಪತಿಯ ತಂದೆಯ ಶಿಷ್ಯನಾಗಿದ್ದನು.

ತೇನ ಸ್ನೇಹೇನ ಭಗವಾನ್ರುದ್ರಸ್ತಸ್ಯ ಬೃಹಸ್ಪತೇಃ ।
ಪಾರ್ಷ್ಣಿಗ್ರಾಹೋಽಭವದ್ದೇವಃ ಪ್ರಗೃಹ್ಯಾಜಗವಂ ಧನುಃ ।। ೧-೨೫-೩೩

ಅದೇ ಸ್ನೇಹದಿಂದ ಭಗವಾನ್ ರುದ್ರ ದೇವನು ಅಜಗವ ಧನುಸ್ಸನ್ನು ಹಿಡಿದು ಬೃಹಸ್ಪತಿಯ ಪಕ್ಷವನ್ನು ಸೇರಿಕೊಂಡನು.

ತೇನ ಬ್ರಹ್ಮಶಿರೋ ನಾಮ ಪರಮಾಸ್ತ್ರಂ ಮಹಾತ್ಮನಾ ।
ಉದ್ದಿಶ್ಯ ದೈತ್ಯಾನುತ್ಸೃಷ್ಟಂ ಯೇನೈಷಾಂ ನಾಶಿತಂ ಯಶಃ ।। ೧-೨೫-೩೪

ಮಹಾತ್ಮ ರುದ್ರನು ದೈತ್ಯರನ್ನು ಉದ್ದೇಶಿಸಿ ಬ್ರಹ್ಮಶಿರವೆಂಬ ಹೆಸರಿನ ಪರಮಾಸ್ತ್ರವನ್ನು ಪ್ರಯೋಗಿಸಿ ಅವರ ಯಶಸ್ಸನ್ನು ನಾಶಗೊಳಿಸಿದನು.

ತತ್ರ ತದ್ಯುದ್ಧಮಭವತ್ಪ್ರಖ್ಯಾತಂ ತಾರಕಾಮಯಮ್ ।
ದೇವಾನಾಂ ದಾನವಾನಾಂ ಚ ಲೋಕಕ್ಷಯಕರಂ ಮಹತ್ ।। ೧-೨೫-೩೫

ಅಲ್ಲಿ ದೇವತೆಗಳ ಮತ್ತು ದಾನವರ ಲೋಕಕ್ಷಯಕಾರಕ ಮಹಾ ಯುದ್ಧವು ನಡೆಯಿತು. ಆ ಯುದ್ಧವು ತಾರಕಾಮಯ ಯುದ್ಧವೆಂದು ಪ್ರಖ್ಯಾತವಾಯಿತು.

ತತ್ರ ಶಿಷ್ಟಾಸ್ತು ಯೇ ದೇವಾಸ್ತುಷಿತಾಶ್ಚೈವ ಭಾರತ ।
ಬ್ರಹ್ಮಾಣಂ ಶರಣಂ ಜಗ್ಮುರಾದಿದೇವಂ ಸನಾತನಮ್ ।। ೧-೨೫-೩೬

ಭಾರತ! ಅಲ್ಲಿ ಅಳಿದುಳಿದ ದೇವ ಮತ್ತು ತುಷಿತ ಗಣಗಳು ಆದಿದೇವ ಸನಾತನ ಬ್ರಹ್ಮನ ಶರಣು ಹೊಕ್ಕರು.

ತತೋ ನಿವಾರ್ಯೋಶನಸಂ ರುದ್ರಂ ಜ್ಯೇಷ್ಠಂ ಚ ಶಂಕರಮ್ ।
ದದಾವಂಗಿರಸೇ ತಾರಾಂ ಸ್ವಯಮೇವ ಪಿತಾಮಹಃ ।। ೧-೨೫-೩೭

ಅಗ ಪಿತಾಮಹನು ಉಶಸನ ಮತ್ತು ರುದ್ರ ಜ್ಯೇಷ್ಠ ಶಂಕರರನ್ನು ಯುದ್ಧಮಾಡುವುದರಿಂದ ನಿಲ್ಲಿಸಿ ಸ್ವಯಂ ತಾನೇ ತಾರೆಯನ್ನು ಆಂಗಿರಸ ಬೃಹಸ್ಪತಿಗಿತ್ತನು.

ತಾಮಂತಃಪ್ರಸವಾಂ ದೃಷ್ಟ್ವಾ ತಾರಾಂ ಪ್ರಾಹ ಬೃಹಸ್ಪತಿಃ।
ಮದೀಯಾಯಾಂ ನ ತೇ ಯೋನೌ ಗರ್ಭೋ ಧಾರ್ಯಃ ಕಥಂಚನ ।। ೧-೨೫-೩೮

ಅವಳು ಗರ್ಭಿಣಿಯಾಗಿದ್ದುದನ್ನು ನೋಡಿ ಬೃಹಸ್ಪತಿಯು ತಾರೆಗೆ ಹೇಳಿದನು: “ನನ್ನದಾದ ಯೋನಿಯಲ್ಲಿ ಪರರ ಗರ್ಭವನ್ನು ನೀನು ಎಂದೂ ಧರಿಸಬಾರದು.”

ಅಯೋನಾವುತ್ಸೃಜತ್ತಂ ಸಾ ಕುಮಾರಂ ದಸ್ಯುಹಂತಮಮ್ ।
ಇಷೀಕಾಸ್ತಂಬಮಾಸಾದ್ಯ ಜ್ವಲಂತಮಿವ ಪಾವಕಮ್ ।। ೧-೨೫-೩೯

ಆಗ ತಾರೆಯು ಇಷೀಕ ಹುಲ್ಲಿನ ಪ್ರದೇಶಕ್ಕೆ ಹೋಗಿ ಅಲ್ಲಿ ಪಾವಕನಂತೆ ಪ್ರಜ್ವಲಿಸುತ್ತಿದ್ದ ದಸ್ಯುಹಂತಕ ಕುಮಾರನನ್ನು ಹೆತ್ತಳು.

ಜಾತಮಾತ್ರಃ ಸ ಭಗವಾಂದೇವಾನಾಮಕ್ಷಿಪದ್ವಪುಃ ।
ತತಃ ಸಂಶಯಮಾಪನ್ನಾ ಇಮಾಮಕಥಯನ್ಸುರಾಃ ।। ೧-೨೫-೪೦

ಹುಟ್ಟುತ್ತಲೇ ಆ ಭಗವಾನನು ತನ್ನ ಶರೀರಕಾಂತಿಯಿಂದ ದೇವತೆಗಳ ಕಾಂತಿಯನ್ನು ಕುಗ್ಗುವಂತೆ ಮಾಡಿದನು. ಆಗ ಸಂಶಯಪಟ್ಟ ಸುರರು ಇದನ್ನು ಹೇಳತೊಡಗಿದರು:

ಸತ್ಯಂ ಬ್ರುಹಿ ಸುತಃ ಕಸ್ಯ ಸೋಮಸ್ಯಾಥ ಬೃಹಸ್ಪತೇಃ ।
ಪೃಚ್ಛ್ಯಮಾನಾ ಯದಾ ದೇವೈರ್ನಾಹ ಸಾ ಸಾಧ್ವಸಾಧು ವಾ ।। ೧-೨೫-೪೧

“ಸತ್ಯವನ್ನೇ ಹೇಳು. ಇವನು ಯಾರ ಸುತ? ಸೋಮನದ್ದೋ ಅಥವಾ ಬೃಹಸ್ಪತಿಯದ್ದೋ?” ಈ ರೀತಿ ದೇವತೆಗಳು ಕೇಳುತ್ತಿದ್ದರೂ ತಾರೆಯು ಸಾಧುವಾದ ಅಸಾಧುವಾದ ಏನನ್ನೂ ಹೇಳಲೇ ಇಲ್ಲ.

ತದಾ ತಾಂ ಶಪ್ತುಮಾರಬ್ಧಃ ಕುಮಾರೋ ದಸ್ಯುಹಂತಮಃ ।
ತಂ ನಿವಾರ್ಯ ತತೋ ಬ್ರಹ್ಮಾ ತಾರಾಂ ಪಪ್ರಚ್ಛ ಸಂಶಯಮ್ ।। ೧-೨೫-೪೨

ಆಗ ದಸ್ಯುಹಂತಕ ಕುಮಾರನು ಅವಳಿಗೆ ಶಾಪವನ್ನು ಕೊಡಲು ಹೊರಟಾಗ ಬ್ರಹ್ಮನು ಅವನನ್ನು ತಡೆದು ತಾರೆಯಲ್ಲಿ ಸಂಶಯವನ್ನು ಕೇಳಿದನು:

ತದತ್ರ ತಥ್ಯಂ ತದ್ಬ್ರೂಹಿ ತಾರೇ ಕಸ್ಯ ಸುತಸ್ತ್ವಯಮ್ ।
ಸಾ ಪ್ರಾಂಜಲಿರುವಾಚೇದಂ ಬ್ರಹ್ಮಾಣಂ ವರದಂ ಪ್ರಭುಮ್ ।। ೧-೨೫-೪೩

“ತಾರೇ! ಇವನು ಯಾರ ಪುತ್ರನು! ನಿಜವಾಗಿ ಹೇಳು!” ಆಗ ಅವಳು ಕೈಮುಗಿದು ವರದ ಪ್ರಭು ಬ್ರಹ್ಮನಿಗೆ ಹೇಳಿದಳು:

ಸೋಮಸ್ಯೇತಿ ಮಹಾತ್ಮಾನಂ ಕುಮಾರಂ ದಸ್ಯುಹಂತಮಮ್ ।
ತತಸ್ತಂ ಮೂರ್ಧ್ನ್ಯುಪಾಘ್ರಾಯ ಸೋಮೋ ಧಾತಾ ಪ್ರಜಾಪತಿಃ ।। ೧-೨೫-೪೪

“ಇವನು ಸೋಮನ ಮಗ.” ಆಗ ಪ್ರಜಾಪತಿ ಧಾತಾ ಸೋಮನು ದಸ್ಯುಹಂತಕ ಮಹಾತ್ಮ ಕುಮಾರನ ನೆತ್ತಿಯನ್ನು ಆಘ್ರಾಣಿಸಿದನು.

ಬುಧ ಇತ್ಯಕರೋನ್ನಾಮ ತಸ್ಯ ಪುತ್ರಸ್ಯ ಧೀಮತಃ ।
ಪ್ರತಿಕೂಲಂ ಚ ಗಗನೇ ಸಮಭ್ಯುತ್ಥಿಷ್ಠತೇ ಬುಧಃ ।। ೧-೨೫-೪೫

ಆ ಧೀಮಂತ ಪುತ್ರನಿಗೆ ಬುಧ ಎಂದು ನಾಮಕರಣವನ್ನು ಮಾಡಿದನು. ಬುಧನು ಗಗನದಲ್ಲಿ ಪ್ರತಿಕೂಲವನ್ನು ಸೂಚಿಸುತ್ತಾ ಉದಯವಾಗತೊಡಗಿದನು.

ಉತ್ಪಾದಯಾಮಾಸ ತತಃ ಪುತ್ರಂ ವೈ ರಾಜಪುತ್ರಿಕಾ ।
ತಸ್ಯಾಪತ್ಯಂ ಮಹಾರಾಜೋ ಬಭೂವೈಲಃ ಪುರೂರವಾಃ ।। ೧-೨೫-೪೬

ಅನಂತರ ಬುಧನು ವೈರಾಜ ಮನುವಿನ ಪುತ್ರಿ ಇಲೆಯಲ್ಲಿ ಪುತ್ರನೋರ್ವನನ್ನು ಹುಟ್ಟಿಸಿದನು. ಅವರ ಆ ಪುತ್ರನು ಮಹಾರಾಜ ಪುರೂರವನಾಗಿದ್ದನು.

ಊರ್ವಶ್ಯಾಂ ಜಜ್ಞಿರೇ ಯಸ್ಯ ಪುತ್ರಾಃ ಸಪ್ತ ಮಹಾತ್ಮನಃ ।
ಪ್ರಸಹ್ಯ ಧರ್ಷಿತಸ್ತತ್ರ ಸೋಮೋ ವೈ ರಾಜಯಕ್ಷ್ಮಣಾ ।। ೧-೨೫-೪೭

ಮಹಾತ್ಮ ಪುರೂರವನಿಗೆ ಊರ್ವಶಿಯಲ್ಲಿ ಏಳು ಪುತ್ರರು ಹುಟ್ಟಿದರು. ಇತ್ತ ಹಠದಿಂದಾಗಿ ಸೋಮನು ರಾಜಯಕ್ಷ್ಮದಿಂದ ಪೀಡಿತನಾದನು.

ತತೋ ಯಕ್ಷ್ಮಾಭಿಭೂತಸ್ತು ಸೋಮಃ ಪ್ರಕ್ಷೀಣಮಂಡಲಃ ।
ಜಗಾಮ ಶರಣಾರ್ಥಾಯ ಪಿತರಂ ಸೋಽತ್ರಿಮೇವ ತು ।। ೧-೨೫-೪೮

ಯಕ್ಷ್ಮದ ಕಾರಣದಿಂದ ತನ್ನ ಮಂಡಲವನ್ನು ಕಳೆದುಕೊಳ್ಳುತ್ತಿದ್ದ ಸೋಮನು ಶರಣನಾಗಿ ತಂದೆ ಅತ್ರಿಯಲ್ಲಿಗೇ ಹೋದನು.

ತಸ್ಯ ತತ್ತಾಪಶಮನಂ ಚಕಾರಾತ್ರಿರ್ಮಹಾತಪಾಃ ।
ಸ ರಾಜಯಕ್ಷ್ಮಣಾ ಮುಕ್ತಃ ಶ್ರಿಯಾ ಜಜ್ವಾಲ ಸರ್ವತಃ ।। ೧-೨೫-೪೯

ಮಹಾತಪಸ್ವಿ ಅತ್ರಿಯು ಅವನ ಆ ತಾಪವನ್ನು ತಣಿಸಿದನು. ಸೋಮನು ರಾಜಯಕ್ಷ್ಮದಿಂದ ಮುಕ್ತನಾಗಿ ಎಲ್ಲ ಕಡೆಯು ಶ್ರೀಯಿಂದ ಪ್ರಜ್ವಲಿಸಿದನು.

ಏವಂ ಸೋಮಸ್ಯ ವೈ ಜನ್ಮ ಕೀರ್ತಿತಂ ಕೀರ್ತಿವರ್ಧನಮ್ ।
ವಂಶಮಸ್ಯ ಮಹಾರಾಜ ಕೀರ್ತ್ಯಮಾನಂ ಚ ಮೇ ಶೃಣು ।। ೧-೨೫-೫೦

ಮಹಾರಾಜ! ಇಗೋ ನಾನು ಕೀರ್ತಿಯನ್ನು ವರ್ಧಿಸುವ ಸೋಮನ ಜನ್ಮದ ಕುರಿತು ಹೇಳಿದ್ದೇನೆ. ಅವನ ವಂಶವನ್ನೂ ವರ್ಣಿಸುತ್ತೇನೆ. ಕೇಳು.

ಧನ್ಯಮಾರೋಗ್ಯಮಾಯುಷ್ಯಂ ಪುಣ್ಯಂ ಸಂಕಲ್ಪಸಾಧನಮ್ ।
ಸೋಮಸ್ಯ ಜನ್ಮ ಶ್ರುತ್ವೈವ ಪಾಪೇಭ್ಯೋ ವಿಪ್ರಮುಚ್ಯತೇ ।। ೧-೨೫-೫೧

ಸೋಮನ ಜನ್ಮದ ಕುರಿತು ಕೇಳುವುದರಿಂದಲೇ ಮನುಷ್ಯನು ಆರೋಗ್ಯ-ಆಯುಷ್ಯ-ಪುಣ್ಯ ಮತ್ತು ಸಂಕಲ್ಪಸಾಧನೆಗಳಿಂದ ಧನ್ಯನಾಗಿ ಪಾಪಗಳಿಂದಲೂ ವಿಮೋಚನನಾಗುತ್ತಾನೆ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ಹರಿವಂಶಪರ್ವಣಿ ಸೋಮೋತ್ಪತ್ತಿಕಥನೇ ಪಂಚವಿಂಶೋಽಧ್ಯಾಯಃ