ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಖಿಲಭಾಗೇ ಹರಿವಂಶಃ
ಹರಿವಂಶ ಪರ್ವ
ಅಧ್ಯಾಯ 24
ಸಾರ
ವಿಭ್ರಾಜನು ಬ್ರಹ್ಮದತ್ತನ ಪುತ್ರನಾಗಿ ಜನಿಸುವುದು; ಸನ್ನತಿಯು ಬ್ರಹ್ಮದತ್ತನ ಮೇಲೆ ಕೋಪಗೊಳ್ಳುವುದು; ಓರ್ವ ಬ್ರಾಹ್ಮಣನು ಹೇಳಿದ ಶ್ಲೋಕದಿಂದ ಬ್ರಹ್ಮದತ್ತ, ಪಾಂಚಾಲ್ಯ ಮತ್ತು ಕಂಡರೀಕರಿಗೆ ತಮ್ಮ ಪೂರ್ವಜನ್ಮದ ಸ್ಮರಣೆಯುಂಟಾದುದು, ಮತ್ತು ಅವರು ತಪಸ್ಸನ್ನು ಮಾಡಿ ಮುಕ್ತರಾದುದು (1-38).
ಮಾರ್ಕಂಡೇಯ ಉವಾಚ।
ಬ್ರಹ್ಮದತ್ತಸ್ಯ ತನಯಃ ಸ ವಿಭ್ರಾಜಸ್ತ್ವಜಾಯತ ।
ಯೋಗಾತ್ಮಾ ತಪಸಾ ಯುಕ್ತೋ ವಿಷ್ವಕ್ಸೇನ ಇತಿ ಶ್ರುತಃ ।। ೧-೨೪-೧
ಮಾರ್ಕಂಡೇಯನು ಹೇಳಿದನು: “ತಪಸ್ಸಿನಿಂದ ಯುಕ್ತನಾಗಿದ್ದ ಯೋಗಾತ್ಮಾ ವಿಭ್ರಾಜನು ಬ್ರಹ್ಮದತ್ತನ ತನಯನಾಗಿ ಹುಟ್ಟಿ, ವಿಷ್ವಕ್ಸೇನ ಎಂದು ಪ್ರಸಿದ್ಧನಾದನು.
ಕದಾಚಿದ್ಬ್ರಹ್ಮದತ್ತಸ್ತು ಭಾರ್ಯಯಾ ಸಹಿತೋ ವನೇ ।
ವಿಜಹಾರ ಪ್ರಹೃಷ್ಟಾತ್ಮಾ ಯಥಾ ಶಚ್ಯಾ ಶಚೀಪತಿಃ ।। ೧-೨೪-೨
ಒಮ್ಮೆ ಬ್ರಹ್ಮದತ್ತನು ಪ್ರಹೃಷ್ಟಾತ್ಮನಾಗಿ ಶಚೀಪತಿಯು ಶಚಿಯೊಂದಿಗೆ ಹೇಗೋ ಹಾಗೆ ಭಾರ್ಯೆಯ ಸಹಿತ ವನದಲ್ಲಿ ವಿಹರಿಸುತ್ತಿದ್ದನು.
ತತಃ ಪಿಪೀಲಿಕರುತಂ ಸ ಶುಶ್ರಾವ ನರಾಧಿಪಃ ।
ಕಾಮಿನೀಂ ಕಾಮಿನಸ್ತಸ್ಯ ಯಾಚತಃ ಕ್ರೋಶತೋ ಭೃಶಮ್ ।। ೧-೨೪-೩
ಆಗ ಆ ನರಾಧಿಪನು ಒಂದು ಇರುವೆಯ ಸ್ವರವನ್ನು ಕೇಳಿದನು. ಕಾಮವಶದಲ್ಲಿದ್ದ ಗಂಡು ಇರುವೆಯೊಂದು ತನ್ನ ಕಾಮಿನೀ ಹೆಣ್ಣು ಇರುವೆಯೊಂದಿಗೆ ಉಚ್ಚಸ್ವರದಲ್ಲಿ ಯಾಚಿಸುತ್ತಿತ್ತು.
ಶ್ರುತ್ವಾ ತು ಯಾಚ್ಯಮಾನಾಂ ತಾಂ ಕ್ರುದ್ಧಾಂ ಸೂಕ್ಷ್ಮಾಂ ಪಿಪೀಲಿಕಾಮ್।
ಬ್ರಹ್ಮದತ್ತೋ ಮಹಾಹಾಸಮಕಸ್ಮಾದೇವ ಚಾಹಸತ್ ।। ೧-೨೪-೪
ಕ್ರುದ್ಧಳಾಗಿದ್ದ ಆ ಸೂಕ್ಷ್ಮ ಇರುವೆಯನ್ನು ಯಾಚಿಸುತ್ತಿದ್ದುದನ್ನು ನೋಡಿ ಮತ್ತು ಕೇಳಿ ಬ್ರಹ್ಮದತ್ತನು ಅಕಸ್ಮಾತ್ತಾಗಿ ಜೋರಾಗಿ ನಕ್ಕುಬಿಟ್ಟನು.
ತತಃ ಸಾ ಸಂನತಿರ್ದೀನಾ ವ್ರೀಡಿತೇವಾಭವತ್ತದಾ ।
ನಿರಾಹಾರಾ ಬಹುತಿಥಂ ಬಭೂವ ವರವರ್ಣಿನೀ ।। ೧-೨೪-೫
ಆಗ ವರವರ್ಣಿನೀ ಸನ್ನತಿಯು ನಾಚಿಕೊಂಡಳು ಮತ್ತು ದೀನಳಾಗಿ ಬಹಳ ದಿನಗಳು ನಿರಾಹಾರಳಾಗಿಯೇ ಇದ್ದಳು.
ಪ್ರಸಾದ್ಯಮಾನಾ ಭರ್ತ್ರಾ ಸಾ ತಮುವಾಚ ಶುಚಿಸ್ಮಿತಾ ।
ತ್ವಯಾ ಚ ಹಸಿತಾ ರಾಜನ್ನಾಹಂ ಜೀವಿತುಮುತ್ಸಹೇ ।। ೧-೨೪-೬
ಪತಿಯು ಅವಳನ್ನು ಪ್ರಸನ್ನಗೊಳಿಸಲು ತೊಡಗಿದಾಗ ಆ ಶುಚಿಸ್ಮಿತೆಯು ಹೇಳಿದಳು: “ರಾಜನ್! ನೀನು ನನ್ನನ್ನು ನೋಡಿ ನಕ್ಕಿದ್ದೀಯೆ. ಆದುದರಿಂದ ನಾನು ಜೀವಿತದಿಂದಿರಲು ಬಯಸುವುದಿಲ್ಲ.”
ಸ ತತ್ಕಾರಣಮಾಚಖ್ಯೌ ನ ಚ ಸಾ ಶ್ರದ್ದಧಾತಿ ತತ್ ।
ಉವಾಚ ಚೈನಂ ಕುಪಿತಾ ನೈಷ ಭಾವೋಽಸ್ತಿ ಮಾನುಷೇ ।। ೧-೨೪-೭
ಆಗ ರಾಜನು ತಾನು ನಕ್ಕಿದ್ದುದರ ಕಾರಣವನ್ನು ಹೇಳಿದನು. ಆದರೆ ಸನ್ನತಿಯು ಅವನ ಮಾತಿನ ಮೇಲೆ ವಿಶ್ವಾಸವನ್ನಿಡಲಿಲ್ಲ. ಮತ್ತು ಕುಪಿತಳಾಗಿ ಹೇಳಿದಳು: “ಮನುಷ್ಯರಲ್ಲಿ ಈ ಶಕ್ತಿಯು ಇರುವುದಿಲ್ಲ!
ಕೋ ವೈ ಪಿಪೀಲಿಕರುತಂ ಮಾನುಷೋ ವೇತ್ತುಮರ್ಹತಿ ।
ಋತೇ ದೇವಪ್ರಸಾದಾದ್ವಾ ಪೂರ್ವಜಾತಿಕೃತೇನ ವಾ ।। ೧-೨೪-೮
ತಪೋಬಲೇನ ವಾ ರಾಜನ್ವಿದ್ಯಯಾ ವಾ ನರಾಧಿಪ ।
ರಾಜನ್! ನರಾಧಿಪ! ದೇವತೆಗಳ ಕೃಪೆಯಿಲ್ಲದೇ ಅಥವಾ ಪೂರ್ವಜನ್ಮದ ಪುಣ್ಯಕರ್ಮಗಳಿಲ್ಲದಿದ್ದರೆ ಅಥವಾ ತಪೋಬಲವಿಲ್ಲದಿದ್ದರೆ ಅಥವಾ ವಿದ್ಯೆಯಿಲ್ಲದಿದ್ದರೆ ಯಾವ ಮನುಷ್ಯನು ತಾನೇ ಇರುವೆಯ ಭಾಷೆಯನ್ನು ತಿಳಿಯಬಲ್ಲ?
ಯದ್ಯೇಷ ವೈ ಪ್ರಭಾವಸ್ತೇ ಸರ್ವಸತ್ತ್ವರುತಜ್ಞತಾ ।। ೧-೨೪-೯
ಯಥಾಹಮೇತಜ್ಜಾನೀಯಾಂ ತಥಾ ಪ್ರತ್ಯಾಯಯಸ್ವ ಮಾಮ್ ।
ಪ್ರಾಣಾನ್ವಾಪಿ ಪರಿತ್ಯಕ್ಷ್ಯೇ ರಾಜನ್ಸತ್ಯೇನ ತೇ ಶಪೇ ।। ೧-೨೪-೧೦
ಒಂದು ವೇಳೆ ನಿನ್ನಲ್ಲಿ ಸರ್ವಜೀವಿಗಳ ಭಾಷೆಯನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವಿರುವುದಾದರೆ ಅದನ್ನು ನನಗೆ ಅರ್ಥವಾಗುವ ರೀತಿಯಲ್ಲಿ ನನಗೆ ತೋರಿಸಿಕೊಡು. ರಾಜನ್! ನೀನು ಹೀಗೆ ಮಾಡದೇ ಇದ್ದರೆ ನಾನು, ಸತ್ಯದ ಮೇಲೆ ಆಣೆಯನ್ನಿಟ್ಟು ಹೇಳುತ್ತಿದ್ದೇನೆ, ಪ್ರಾಣಗಳನ್ನು ತೊರೆಯುತ್ತೇನೆ.”
ತತ್ತಸ್ಯಾ ವಚನಂ ಶ್ರುತ್ವಾ ಮಹಿಷ್ಯಾಃ ಪರುಷಾಕ್ಷರಮ್ ।
ಸ ರಾಜಾ ಪರಮಾಪನ್ನೋ ದೇವಶ್ರೇಷ್ಠಮಗಾತ್ತತಃ ।। ೧-೨೪-೧೧
ಶರಣ್ಯಂ ಸರ್ವಭೂತೇಶಂ ಭಕ್ತ್ಯಾ ನಾರಾಯಣಂ ಹರಿಮ್ ।
ಸಮಾಹಿತೋ ನಿರಾಹಾರಃ ಷಡ್ರಾತ್ರೇಣ ಮಹಾಯಶಾಃ ।। ೧-೨೪-೧೨
ರಾಣಿಯ ಆ ಕಠೋರ ಮಾತುಗಳನ್ನು ಕೇಳಿದ ರಾಜನು ಪರಮ ವಿಪತ್ತಿನಲ್ಲಿ ಸಿಲುಕಿದನು. ಆಗ ಆ ಮಹಾಯಶನು ಭಕ್ತಿಯಿಂದ ಆರು ರಾತ್ರಿಗಳು ಸಮಾಹಿತನಾಗಿ ನಿರಾಹಾರನಾಗಿ ಶರಣಾಗತ ರಕ್ಷಕ, ಸರ್ವಭೂತೇಶ, ದೇವಶ್ರೇಷ್ಠ, ಹರಿ ನಾರಾಯಣನ ಮೊರೆಹೊಕ್ಕನು.
ದದರ್ಶ ದರ್ಶನೇ ರಾಜಾ ದೇವಂ ನಾರಾಯಣಂ ಪ್ರಭುಮ್ ।
ಉವಾಚ ಚೈನಂ ಭಗವಾನ್ಸರ್ವಭೂತಾನುಕಂಪಕಃ ।। ೧-೨೪-೧೩
ಬ್ರಹ್ಮದತ್ತ ಪ್ರಭಾತೇ ತ್ವಂ ಕಲ್ಯಾಣಂ ಸಮವಾಪ್ಸ್ಯಸಿ ।
ಇತ್ಯುಕ್ತ್ವಾ ಭಗವಾಂದೇವಸ್ತತ್ರೈವಾಂತರಧೀಯತ ।। ೧-೨೪-೧೪
ರಾಜನು ದೇವ ಪ್ರಭು ನಾರಾಯಣನ ದರ್ಶನವನ್ನು ಪಡೆದುಕೊಂಡನು. ಸರ್ವಭೂತಾನುಕಂಪಕ ಭಗವಂತನು ಅವನಿಗೆ “ಬ್ರಹ್ಮದತ್ತ! ಪ್ರಭಾತದಲ್ಲಿ ನಿನಗೆ ಕಲ್ಯಾಣವಾಗುತ್ತದೆ” ಎಂದು ಹೇಳಿದನು. ಹೀಗೆ ಹೇಳಿ ಭಗವಂತನು ಅಲ್ಲಿಯೇ ಅಂತರ್ಧಾನನಾದನು.
ಚತುರ್ಣಾಂ ತು ಪಿತಾ ಯೋಽಸೌ ಬ್ರಾಹ್ಮಣಾನಾಂ ಮಹಾತ್ಮನಾಮ್ ।
ಶ್ಲೋಕಂ ಸೋಽಧೀತ್ಯ ಪುತ್ರೇಭ್ಯಃ ಕೃತಕೃತ್ಯ ಇವಾಭವತ್ ।। ೧-೨೪-೧೫
ಇತ್ತ ಆ ನಾಲ್ವರು ಮಹಾತ್ಮ ಬ್ರಾಹ್ಮಣರ ತಂದೆಯು ಪುತ್ರರಿಂದ ಶ್ಲೋಕವನ್ನು ಕಲಿತುಕೊಂಡು ಕೃತಕೃತ್ಯನಾದನೆಂದು ಭಾವಿಸಿದನು.
ಸ ರಾಜಾನಮಥಾನ್ವಿಚ್ಛನ್ಸಹಮಂತ್ರಿಣಮಚ್ಯುತಮ್ ।
ನ ದದರ್ಶಾಂತರಂ ಕಿಂಚಿತ್ ಶ್ಲೋಕಂ ಶ್ರಾವಯಿತುಂ ತದಾ ।। ೧-೨೪-೧೬
ಅಚ್ಯುತ ರಾಜ ಮತ್ತು ಅವನ ಮಂತ್ರಿಗಳಿಗೆ ಆ ಶ್ಲೋಕವನ್ನು ಹೇಳಲು ಬಯಸಿದ್ದ ಅವನಿಗೆ ಯಾವ ಅವಕಾಶವೂ ದೊರಕಿರಲಿಲ್ಲ.
ಅಥ ರಾಜಾ ಸರಃಸ್ನಾತೋ ಲಬ್ಧ್ವಾ ನಾರಾಯಣಾದ್ವರಮ್ ।
ಪ್ರವಿವೇಶ ಪುರೀಂ ಪ್ರೀತೋ ರಥಮಾರುಹ್ಯ ಕಾಂಚನಮ್ ।
ತಸ್ಯ ರಶ್ಮೀನ್ಪ್ರತ್ಯಗೃಹ್ಣಾತ್ಕಂಡರೀಕೋ ದ್ವಿಜರ್ಷಭಃ ।। ೧-೨೪-೧೭
ಚಾಮರಂ ವ್ಯಜನಂ ಚಾಪಿ ಬಾಭ್ರವ್ಯಃ ಸಮವಾಕ್ಷಿಪತ್ ।। ೧-೨೪-೧೮
ಅಷ್ಟರಲ್ಲೇ ನಾರಾಯಣನಿಂದ ವರವನ್ನು ಪಡೆದ ರಾಜನು ಸರೋವರದಲ್ಲಿ ಸ್ನಾನಮಾಡಿ ಪ್ರೀತನಾಗಿ ಕಾಂಚನ ರಥವನ್ನೇರಿ ಪುರಿಯನ್ನು ಪ್ರವೇಶಿಸಿದನು. ಅವನ ಕುದುರೆಗಳ ಕಡಿವಾಣಗಳನ್ನು ದ್ವಿಜರ್ಷಭ ಕಂಡರೀಕನು ಹಿಡಿದಿದ್ದನು ಮತ್ತು ಬಾಭ್ರವ್ಯ ಪುತ್ರ ಪಾಂಚಲನು ಅವನ ಮೇಲೆ ಚಾಮರವನ್ನು ಬೀಸುತ್ತಿದ್ದನು.
ಇದಮಂತರಮಿತ್ಯೇವ ತತಃ ಸ ಬ್ರಾಹ್ಮಣಸ್ತದಾ ।
ಶ್ರಾವಯಾಮಾಸ ರಾಜಾನಂ ಶ್ಲೋಕಂ ತಂ ಸಚಿವೌ ಚ ತೌ ।। ೧-೨೪-೧೯
ಇದೇ ಸಮಯವೆಂದು ತಿಳಿದು ಆ ಬ್ರಾಹ್ಮಣನು ರಾಜನಿಗೆ ಮತ್ತು ಅವನ ಇಬ್ಬರು ಸಚಿವರಿಗೆ ಕೇಳುವಂತೆ ಆ ಶ್ಲೋಕವನ್ನು ಹೇಳಿದನು.
ಸಪ್ತ ವ್ಯಾಧಾ ದಶಾರ್ಣೇಷು ಮೃಗಾಃ ಕಾಲಂಜರೇ ಗಿರೌ ।
ಚಕ್ರವಾಕಾಃ ಶರದ್ವೀಪೇ ಹಂಸಾಃ ಸರಸಿ ಮಾನಸೇ ।। ೧-೨೪-೨೦
ತೇಽಭಿಜಾತಾಃ ಕುರುಕ್ಷೇತ್ರೇ ಬ್ರಾಹ್ಮಣಾ ವೇದಪಾರಗಾಃ ।
ಪ್ರಸ್ಥಿತಾ ದೀರ್ಘಮಧ್ವಾನಂ ಯೂಯಂ ಕಿಮವಸೀದಥ ।। ೧-೨೪-೨೧
“ಕುರುಕ್ಷೇತ್ರದಲ್ಲಿ ವೇದಪಾರಂತ ಬ್ರಾಹ್ಮಣರಾಗಿದ್ದ ಏಳು ಮಂದಿ ದಶಾರ್ಣದಲ್ಲಿ ವ್ಯಾಧರಾಗಿಯೂ, ಕಾಲಂಜರ ಗಿರಿಯಲ್ಲಿ ಮೃಗಗಳಾಗಿಯೂ, ಶರದ್ವೀಪದಲ್ಲಿ ಚಕ್ರವಾಕಗಳಾಗಿಯೂ ಮತ್ತು ಮಾನಸ ಸರೋವರದಲ್ಲಿ ಹಂಸಗಾಳಿಯೂ ಹುಟ್ಟಿದರು. ದೀರ್ಘ ಮಾಗದಲ್ಲಿ ಹೋಗುತ್ತಿರುವಾಗ ನೀವು ಏಕೆ ಈ ಅಧೋಗತಿಯನ್ನು ಹೊಂದಿದ್ದೀರಿ?”
ತಚ್ಛ್ರುತ್ವಾ ಮೋಹಮಗಮದ್ಬ್ರಹ್ಮದತ್ತೋ ನರಾಧಿಪಃ ।
ಸಚಿವಶ್ಚಾಸ್ಯ ಪಾಂಚಾಲ್ಯಃ ಕಂಡರೀಕಶ್ಚ ಭಾರತ ।। ೧-೨೪-೨೨
ಭಾರತ! ಅದನ್ನು ಕೇಳಿ ನರಾಧಿಪ ಬ್ರಹ್ಮದತ್ತ, ಸಚಿವ ಪಾಂಚಾಲ್ಯ ಮತ್ತು ಕಂಡರೀಕರು ಮೂರ್ಛಿತನಾದರು.
ಸ್ರಸ್ತರಶ್ಮಿಪ್ರತೋದೌ ತೌ ಪತಿತವ್ಯಜನಾವುಭೌ ।
ದೃಷ್ಟ್ವಾ ಬಭೂವುರಸ್ವಸ್ಥಾಃ ಪೌರಾಶ್ಚ ಸುಹೃದಸ್ತಥಾ ।। ೧-೨೪-೨೩
ಕಡಿವಾಣ ಚಾವಟಿಗಳು ಕೆಳಗೆ ಬಿದ್ದವು ಮತ್ತು ಚಾಮರವೂ ಕೆಳಗೆ ಬಿದ್ದಿತು. ಅದನ್ನು ನೋಡಿ ಪೌರರೂ ಸುಹೃದಯರೂ ಅಸ್ವಸ್ಥರಾದರು.
ಮುಹೂರ್ತಮೇವ ರಾಜಾ ಸ ಸಹ ತಾಭ್ಯಾಂ ರಥೇ ಸ್ಥಿತಃ ।
ಪ್ರತಿಲಭ್ಯ ತತಃ ಸಂಜ್ಞಾಂ ಪ್ರತ್ಯಾಗಚ್ಛದರಿಂದಮಃ ।। ೧-೨೪-೨೪
ಮುಹೂರ್ತಕಾಲ ಮಾತ್ರ ಆ ರಾಜನು ಅವರಿಬ್ಬರೊಂದಿಗೆ ರಥದಲ್ಲಿ ಮೂರ್ಛಿತನಾಗಿದ್ದನು. ಕೂಡಲೇ ಸಂಜ್ಞೆಗಳನ್ನು ಪಡೆದುಕೊಂಡು ಆ ಅರಿಂದಮನು ನಗರವನ್ನು ಪ್ರವೇಶಿಸಿದನು.
ತತಸ್ತೇ ತತ್ಸರಃ ಸ್ಮೃತ್ವಾ ಯೋಗಂ ತಮುಪಲಭ್ಯ ಚ ।
ಬ್ರಾಹ್ಮಣಂ ವಿಪುಲೈರರ್ಥೈರ್ಭೋಗೈಶ್ಚ ಸಮಯೋಜಯನ್ ।। ೧-೨೪-೨೫
ಆಗ ಅವರಿಗೆ ಆ ಸರೋವರದ ನೆನಪಾಯಿತು ಮತ್ತು ಅವರು ಯೋಗವನ್ನೂ ಪಡೆದುಕೊಂಡರು. ಬ್ರಾಹ್ಮಣನಿಗೆ ವಿಪುಲ ಧನ-ಭೋಗಗಳನ್ನಿತ್ತು ಸತ್ಕರಿಸಿದರು.
ಅಭಿಷಿಚ್ಯ ಸ್ವರಾಜ್ಯೇ ತು ವಿಷ್ವಕ್ಸೇನಮರಿಂದಮಮ್ ।
ಜಗಾಮ ಬ್ರಹ್ಮದತ್ತೋಽಥ ಸದಾರೋ ವನಮೇವ ಹ ।। ೧-೨೪-೨೬
ಸ್ವರಾಜ್ಯದಲ್ಲಿ ಅರಿಂದಮ ವಿಷ್ವಕ್ಸೇನನನ್ನು ಅಭಿಷೇಕಿಸಿ ಪತ್ನಿಯೊಂದಿಗೆ ಬ್ರಹ್ಮದತ್ತನು ವನಕ್ಕೆ ತೆರಳಿದನು.
ಅಥೈನಂ ಸನ್ನತಿರ್ಧೀರಾ ದೇವಲಸ್ಯ ಸುತಾ ತದಾ ।
ಉವಾಚ ಪರಮಪ್ರೀತಾ ಯೋಗಾದ್ವನಗತಂ ನೃಪಮ್ ।। ೧-೨೪-೨೭
ಯೋಗಸಾಧನೆಗೆ ವನಕ್ಕೆ ಬಂದ ನೃಪನಿಗೆ ದೇವಲನ ಸುತೆ ಧೀರೆ ಸನ್ನತಿಯು ಪರಮಪ್ರೀತಳಾಗಿ ಹೇಳಿದಳು:
ಜಾನಂತ್ಯಾ ತೇ ಮಹಾರಾಜ ಪಿಪೀಲಿಕರುತಜ್ಞತಾಮ್ ।
ಚೋದಿತಃ ಕ್ರೋಧಮುದ್ದಿಶ್ಯ ಸಕ್ತಃ ಕಾಮೇಷು ವೈ ಮಯಾ ।। ೧-೨೪-೨೮
“ಮಹಾರಾಜ! ನೀನು ಇರುವೆಯ ಭಾಷೆಯನ್ನು ಅರ್ಥಮಾಡಿಕೊಳ್ಳಬಲ್ಲೆ ಎಂದು ನನಗೆ ತಿಳಿದಿತ್ತು. ಆದರೂ ನೀನು ಕಾಮದಲ್ಲಿ ಆಸಕ್ತನಾಗಿರುವುದನ್ನು ಕಂಡು ಈ ಕ್ರೋಧದ ನಾಟಕವನ್ನಾಡಿದೆನು.
ಇತೋ ವಯಂ ಗಮಿಷ್ಯಾಮೋ ಗತಿಮಿಷ್ಟಾಮನುತ್ತಮಾಮ್ ।
ತವ ಚಾಂತರ್ಹಿತೋ ಯೋಗಸ್ತತಃ ಸಂಸ್ಮಾರಿತೋ ಮಯಾ ।। ೧-೨೪-೨೯
ಈಗ ನಾವು ಅನುತ್ತಮವಾದ ಬಯಸಿದ ಗತಿಯಲ್ಲಿ ಹೋಗೋಣ. ಆದುದರಿಂದ ನಿನ್ನಲ್ಲಿ ಅಂತರ್ಹಿತವಾಗಿದ್ದ ಯೋಗವನ್ನು ನಾನು ಸ್ಮರಣೆಗೆ ತಂದುಕೊಟ್ಟೆ.”
ಸ ರಾಜಾ ಪರಮಪ್ರೀತಃ ಪತ್ನ್ಯಾಃ ಶ್ರುತ್ವಾ ವಚಸ್ತದಾ ।
ಪ್ರಾಪ್ಯ ಯೋಗಂ ಬಲಾದೇವ ಗತಂ ಪ್ರಾಪ ಸುದುರ್ಲಭಾಮ್ ।। ೧-೨೪-೩೦
ಪತ್ನಿಯ ಮಾತನ್ನು ಕೇಳಿ ಪರಮಪ್ರೀತನಾದ ರಾಜನು ಯೋಗಬಲವನ್ನು ಪಡೆದುಕೊಂಡು ದುರ್ಲಭ ಗತಿಯನ್ನು ಪಡೆದುಕೊಂಡನು.
ಕಂಡರೀಕೋಽಪಿ ಧರ್ಮಾತ್ಮಾ ಸಾಂಖ್ಯಯೋಗಮನುತ್ತಮಮ್ ।
ಪ್ರಾಪ್ಯ ಯೋಗಗತಿಃ ಸಿದ್ಧೌ ವಿಶುದ್ಧಸ್ತೇನ ಕರ್ಮಣಾ ।। ೧-೨೪-೩೧
ಧರ್ಮಾತ್ಮಾ ಕಂಡರೀಕನೂ ಕೂಡ ಅನುತ್ತಮ ಸಾಂಖ್ಯಯೋಗವನ್ನು ಪಡೆದು ವಿಶುದ್ಧ ಕರ್ಮಗಳಿಂದ ಯೋಗಗತಿಯನ್ನು ಪಡೆದು ಸಿದ್ಧನಾದನು.
ಕ್ರಮಂ ಪ್ರಣೀಯ ಪಾಂಚಾಲ್ಯಃ ಶಿಕ್ಷಾಂ ಚೋತ್ಪಾದ್ಯ ಕೇವಲಾಮ್ ।
ಯೋಗಾಚಾರ್ಯಗತಿಂ ಪ್ರಾಪ ಯಶಶ್ಚಾಗ್ರ್ಯಂ ಮಹಾತಪಾಃ ।। ೧-೨೪-೩೨
ಮಹಾತಪಸ್ವೀ ಪಾಂಚಾಲ್ಯನೂ ಕೂಡ ವೈದೀಕ ಕ್ರಮಪಾಠದ ವಿಧಿ ಶಿಕ್ಷಾ ವನ್ನು ರಚಿಸಿ ಯೋಗಾಚಾರ್ಯಗತಿಯನ್ನು ಪಡೆದು ಮಹಾ ಪ್ರಸಿದ್ಧಿಯನ್ನು ಹೊಂದಿದನು.
ಏವಮೇತತ್ಪುರಾವೃತ್ತಂ ಮಮ ಪ್ರತ್ಯಕ್ಷಮಚ್ಯುತ ।
ತದ್ಧಾರಯಸ್ವ ಗಾಂಗೇಯ ಶ್ರೇಯಸಾ ಯೋಕ್ಷ್ಯಸೇ ತತಃ ।। ೧-೨೪-೩೩
ಅಚ್ಯುತ! ಗಾಂಗೇಯ! ಇದು ನಾನು ಪ್ರತ್ಯಕ್ಷವಾಗಿ ಕಂಡ ಪುರಾತನ ಸಂಗತಿ. ಇದನ್ನು ಧಾರಣೆ ಮಾಡು. ಇದರಿಂದ ಶ್ರೇಯಸ್ಸನ್ನು ಹೊಂದುತ್ತೀಯೆ.
ಯೇ ಚಾನ್ಯೇ ಧಾರಯಿಷ್ಯಂತಿ ತೇಷಾಂ ಚರಿತಮುತ್ತಮಮ್ ।
ತಿರ್ಯಗ್ಯೋನಿಷು ತೇ ಜಾತು ನ ಗಮಿಷ್ಯಂತಿ ಕರ್ಹಿಚಿತ್ ।। ೧-೨೪-೩೪
ಈ ಉತ್ತಮ ಚರಿತ್ರೆಯನ್ನು ಧಾರಣೆಮಾಡುವ ಅನ್ಯರೂ ಕೂಡ ಯಾವಾಗಲೂ ತಿರ್ಯಗ್ಯೋನಿಗಳಲ್ಲಿ ಜನ್ಮತಾಳುವುದಿಲ್ಲ.
ಶ್ರುತ್ವಾ ಚೇದಮುಪಾಖ್ಯಾನಂ ಮಹಾರ್ಥಂ ಮಹತಾಂ ಗತಿಮ್ ।
ಯೋಗಧರ್ಮೋ ಹೃದಿ ಸದಾ ಪರಿವರ್ತತಿ ಭಾರತ ।। ೧-೨೪-೩೫
ಭಾರತ! ಮಹಾತ್ಮರಿಗೆ ಸದ್ಗತಿಯನ್ನು ನೀಡುವ ಮಹಾರ್ಥವುಳ್ಳ ಈ ಉಪಾಖ್ಯಾನವನ್ನು ಕೇಳಿದರೆ ಯೋಗಧರ್ಮವು ಸದಾ ಹೃದಯದಲ್ಲಿ ಜಾಗೃತವಾಗಿರುತ್ತದೆ.
ಸ ತೇನೈವಾನುಬಂಧೇನ ಕದಾಚಿಲ್ಲಭತೇ ಶಮಮ್ ।
ತತೋ ಯೋಗಗತಿಂ ಯಾತಿ ಶುದ್ಧಾಂ ತಾಂ ಭುವಿ ದುರ್ಲಭಾಮ್ ।। ೧-೨೪-೩೬
ಹೃದಯದಲ್ಲಿ ಈ ಯೋಗಧರ್ಮವನ್ನು ಧಾರಣೆ ಮಾಡುವುದರಿಂದಲೇ ಮನುಷ್ಯನು ಶಾಂತಿಯನ್ನು ಪಡೆಯಬಲ್ಲನು. ಮತ್ತು ಅವನಿಗೆ ಭುವಿಯಲ್ಲಿ ದುರ್ಲಭ ಯೋಗಿಗಳ ಶುದ್ಧ ಗತಿಯು ಪ್ರಾಪ್ತವಾಗುತ್ತದೆ.”””
ವೈಶಂಪಾಯನ ಉವಾಚ ।
ಏವಮೇತತ್ಪುರಾ ಗೀತಂ ಮಾರ್ಕಂಡೇಯೇನ ಧೀಮತಾ ।
ಶ್ರಾದ್ಧಸ್ಯ ಫಲಮುದ್ದಿಶ್ಯ ಸೋಮಸ್ಯಾಪ್ಯಾಯನಾಯ ವೈ ।। ೧-೨೪-೩೭
ವೈಶಂಪಾಯನನು ಹೇಳಿದನು: “ಹಿಂದೆ ಧೀಮತ ಮಾರ್ಕಂಡೇಯನು ಶ್ರಾದ್ಧ ಫಲವನ್ನು ಲಕ್ಷಿಸಿ ಸೋಮನ ಪೋಷಣೆಗಾಗಿ ಈ ಕಥೆಯನ್ನು ಹೇಳಿದ್ದನು.
ಸೋಮೋ ಹಿ ಭಗವಾಂದೇವೋ ಲೋಕಸ್ಯಾಪ್ಯಾಯನಂ ಪರಮ್ ।
ವೃಷ್ಣಿವಂಶಪ್ರಸಂಗೇನ ತಸ್ಯ ವಂಶಂ ನಿಬೋಧ ಮೇ ।। ೧-೨೪-೩೮
ಭಗವಾನ್ ಸೋಮನೇ ಲೋಕಗಳಿಗೆ ಪರಮ ತೃಪ್ತಿಯನ್ನು ನೀಡುತ್ತಾನೆ. ವೃಷ್ಣಿವಂಶದ ಪ್ರಸಂಗದಲ್ಲಿ ಸೋಮನ ವಂಶದ ಕುರಿತು ಕೇಳು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ಹರಿವಂಶಪರ್ವಣಿ ಪಿತೃಕಲ್ಪಸಮಾಪ್ತಿರ್ನಾಮ ಚತುರ್ವಿಂಶೋಽಧ್ಯಾಯಃ