023: ಪಿತೃಕಲ್ಪಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಖಿಲಭಾಗೇ ಹರಿವಂಶಃ

ಹರಿವಂಶ ಪರ್ವ

ಅಧ್ಯಾಯ 23

ಸಾರ

ಹಂಸಗಳು ಕಾಂಪಿಲ್ಯ ನಗರಿಯಲ್ಲಿ ಬ್ರಹ್ಮದತ್ತನೇ ಮೊದಲಾದವರ ರೂಪದಲ್ಲಿ ಜನಿಸಿದುದು ಮತ್ತು ನಾಲ್ಕು ಹಂಸಗಳು ತಮ್ಮ ಪಿತನ ಆಜ್ಞೆಯನ್ನು ಪಡೆದು ಮುಕ್ತರಾದುದು (1-36).

ಮಾರ್ಕಂಡೇಯ ಉವಾಚ ।
ತೇ ಯೋಗಧರ್ಮನಿರತಾಃ ಸಪ್ತ ಮಾನಸಚಾರಿಣಃ ।
ಪದ್ಮಗರ್ಭೋಽರವಿಂದಾಕ್ಷಃ ಕ್ಷೀರಗರ್ಭಃ ಸುಲೋಚನಃ ।। ೧-೨೩-೧
ಉರುಬಿಂದುಃ ಸುಬಿಂದುಶ್ಚ ಹೈಮಗರ್ಭಸ್ತು ಸಪ್ತಮಃ ।
ವಾಯ್ವಂಬುಭಕ್ಷಾಃ ಸತತಂ ಶರೀರಾಣ್ಯುಪಶೋಷಯನ್ ।। ೧-೨೩-೨

ಮಾರ್ಕಂಡೇಯನು ಹೇಳಿದನು: “ಪದ್ಮಗರ್ಭ, ಅರವಿಂದಾಕ್ಷ, ಕ್ಷೀರಗರ್ಭ, ಸುಲೋಚನ, ಉರುಬಿಂದು, ಸುಬಿಂದು ಮತ್ತು ಏಳನೆಯ ಹೈಮಗರ್ಭ ಈ ಏಳು ಮಾನಸಸರೋವರ ಸಂಚಾರಿಗಳು ಸತತವೂ ಕೇವಲ ಜಲ ಮತ್ತು ವಾಯುವನ್ನು ಸೇವಿಸುತ್ತಾ ತಮ್ಮ ಶರೀರಗಳನ್ನು ಶೋಷಿಸತೊಡಗಿದವು.

ರಾಜಾ ವಿಭ್ರಾಜಮಾನಸ್ತು ವಪುಷಾ ತದ್ವನಂ ತದಾ ।
ಚಚಾರಾಂತಃಪುರವೃತೋ ನಂದನಂ ಮಘವಾನಿವ ।। ೧-೨೩-೩

ಇತ್ತ ರಾಜನು ತನ್ನ ಶರೀರಕಾಂತಿಯನ್ನು ಪಸರುತ್ತಾ ತನ್ನ ಅಂತಃಪುರಸ್ತ್ರೀಯರೊಂದಿಗೆ ನಂದನದಲ್ಲಿ ಮಘವಾನನು ಹೇಗೋ ಹಾಗೆ ಆ ವನದಲ್ಲಿ ವಿಹರಿಸತೊಡಗಿದನು.

ಸ ತಾನಪಶ್ಯತ್ಖಚರಾನ್ಯೋಗಧರ್ಮಾತ್ಮಕಾನ್ನೃಪ ।
ನಿರ್ವೇದಾಚ್ಚ ತಮೇವಾರ್ಥಮನುಧ್ಯಾಯನ್ಪುರಂ ಯಯೌ ।। ೧-೨೩-೪

ನೃಪ! ಆ ಯೋಗಧರ್ಮಾತ್ಮಕ ಪಕ್ಷಿಗಳನ್ನು ನೋಡಿ ಅದರ ಅರ್ಥವನ್ನೇ ಚಿಂತಿಸುತ್ತಾ ತಾನು ಆ ರೀತಿ ಇಲ್ಲವಲ್ಲಾ ಎಂದು ದುಃಖಿಸುತ್ತಾ ತನ್ನ ಪುರಕ್ಕೆ ಹಿಂದಿರುಗಿದನು.

ಅಣುಹೋ ನಾಮ ತಸ್ಯಾಽಽಸೀತ್ಪುತ್ರಃ ಪರಮಧಾರ್ಮಿಕಃ ।
ಅಣುರ್ಧರ್ಮರತಿರ್ನಿತ್ಯಮಣುಂ ಸೋಽಧ್ಯಗಮತ್ಪದಮ್ ।। ೧-೨೩-೫

ಅವನಿಗೆ ಅಣುಹ1 ಎಂಬ ಹೆಸರಿನ ಪರಮ ಧಾರ್ಮಿಕ ಪುತ್ರನಿದ್ದನು. ಅವನು ಧರ್ಮದ ಸೂಕ್ಷ್ಮ ತತ್ತ್ವಗಳ ಚಿಂತನದಲ್ಲಿ ಅನುರಕ್ತನಾಗಿದ್ದನು. ಆದುದರಿಂದ ಅವನಿಗೆ ಅಣುಪದ2ವು ಪ್ರಾಪ್ತವಾಯಿತು.

ಪ್ರಾದಾತ್ಕನ್ಯಾಂ ಶುಕಸ್ತಸ್ಮೈ ಕೃತ್ವೀಂ ಪೂಜಿತಲಕ್ಷಣಾಮ್ ।
ಸತ್ಯಶೀಲಗುಣೋಪೇತಾಂ ಯೋಗಧರ್ಮರತಾಂ ಸದಾ ।। ೧-೨೩-೬

ಶುಕನು ಅವನಿಗೆ ಪೂಜಿತಲಕ್ಷಣಗಳಿದ್ದ ಸತ್ಯಶೀಲಗುಣೋಪೇತಳಾಗಿದ್ದ ಮತ್ತು ಸದಾ ಯೋಗಧರ್ಮನಿರತಳಾಗಿದ್ದ ತನ್ನ ಕೃತ್ವಿಯನ್ನು ನೀಡಿದನು.

ಸಾ ಹ್ಯುದ್ದಿಷ್ಟಾ ಪುರಾ ಭೀಷ್ಮ ಪಿತೃಕನ್ಯಾ ಮನೀಷಿಣೀ ।
ಸನತ್ಕುಮಾರೇಣ ತದಾ ಸನ್ನಿಧೌ ಮಮ ಶೋಭನಾ ।। ೧-೨೩-೭

ಭೀಷ್ಮ! ಈ ಹಿಂದೆ ಸನತ್ಕುಮಾರನು ನನಗೆ ಹೇಳಿದಂತೆ ಆ ಶೋಭನೆ ಮನೀಷಿಣಿಯು ಪಿತೃಕನ್ಯೆಯಾಗಿದ್ದಳು.

ಸತ್ಯಧರ್ಮಭೃತಾಂ ಶ್ರೇಷ್ಠಾ ದುರ್ವಿಜ್ಞೇಯಾ ಕೃತಾತ್ಮಭಿಃ ।
ಯೋಗಾ ಚ ಯೋಗಪತ್ನೀ ಚ ಯೋಗಮಾತಾ ತಥೈವ ಚ ।। ೧-೨೩-೮

ಸತ್ಯಧರ್ಮಭೃತರಲ್ಲಿ ಶ್ರೇಷ್ಠಳಾಗಿದ್ದ ಅವಳನ್ನು ಕೃತಾತ್ಮರೂ ತಿಳಿದುಕೊಳ್ಳಲು ಕಷ್ಟವಾಗುತ್ತಿತ್ತು. ಸ್ವಯಂ ಯೋಗಿನಿಯಾಗಿದ್ದ ಅವಳು ಯೋಗಿಯ ಪತ್ನಿಯೂ ಯೋಗಿಯ ಮಾತೆಯೂ ಆಗಿದ್ದಳು.

ಯಥಾ ತೇ ಕತಿಥಂ ಪೂರ್ವಂ ಪಿತೃಕಲ್ಪೇಷು ವೈ ಮಯಾ ।
ವಿಭ್ರಾಜಸ್ತ್ವಣುಹಂ ರಾಜ್ಯೇ ಸ್ಥಾಪಯಿತ್ವಾ ನರೇಶ್ವರಃ ।। ೧-೨೩-೯
ಆಮಂತ್ರ್ಯ ಪೌರಾನ್ಪ್ರೀತಾತ್ಮಾ ಬ್ರಾಹ್ಮಣಾನ್ಸ್ವಸ್ತಿ ವಾಚ್ಯ ಚ ।
ಪ್ರಾಯಾತ್ಸರಸ್ತಪಶ್ಚರ್ತುಂ ಯತ್ರ ತೇ ಸಹಚಾರಿಣಃ ।। ೧-೨೩-೧೦

ಪಿತೃಕಲ್ಪದ ಸಮಯದಲ್ಲಿ ಮೊದಲೇ ನಾನು ನಿನಗೆ ಹೇಳಿದ್ದಂತೆ ನರೇಶ್ವರ ವಿಭ್ರಾಜನು ಅಣುಹನನ್ನು ರಾಜ್ಯದಲ್ಲಿ ಸ್ಥಾಪಿಸಿ, ಪೌರರಿಂದ ಅನುಮತಿಯನ್ನು ಪಡೆದು ಬ್ರಾಹ್ಮಣರಿಂದ ಸ್ವಸ್ತಿವಾಚನ ಮಾಡಿಸಿಕೊಂಡು ಪ್ರೀತಾತ್ಮನಾಗಿ ಆ ಸಹಚಾರಿ ಪಕ್ಷಿಗಳಿಂದ ಸರೋವರಕ್ಕೆ ತಪಸ್ಸನ್ನು ಮಾಡಲು ಹೋದನು.

ಸ ವೈ ತತ್ರ ನಿರಾಹಾರೋ ವಾಯುಭಕ್ಷೋ ಮಹಾತಪಾಃ ।
ತ್ಯಕ್ತ್ವಾ ಕಾಮಾಂಸ್ತಪಸ್ತೇಪೇ ಸರಸಸ್ತಸ್ಯ ಪಾರ್ಶ್ವತಃ ।। ೧-೨೩-೧೧

ಆ ಸರೋವರದ ತೀರದಲ್ಲಿ ಅವನು ಕಾಮಗಳನ್ನು ತ್ಯಜಿಸಿ ನಿರಾಹಾರನೂ ವಾಯುಭಕ್ಷನೂ ಆಗಿ ಮಹಾ ತಪಸ್ಸನ್ನು ತಪಿಸಿದನು.

ತಸ್ಯ ಸಂಕಲ್ಪ ಆಸೀಚ್ಚ ತೇಷಾಮೇಕತರಸ್ಯ ವೈ ।
ಪುತ್ರತ್ವಂ ಪ್ರಾಪ್ಯ ಯೋಗೇನ ಯುಜ್ಯೇಯಮಿತಿ ಭಾರತ ।। ೧-೨೩-೧೨

ಭಾರತ! ಆ ಪಕ್ಷಿಗಳಲ್ಲಿ ಒಂದನ್ನಾದರೂ ತನ್ನ ಪುತ್ರನನ್ನಾಗಿ ಪಡೆದು ಯೋಗಯುಕ್ತನಾಗುತ್ತೇನೆ ಎನ್ನುವುದು ಅವನ ಸಂಕಲ್ಪವಾಗಿತ್ತು.

ಕೃತ್ವಾಭಿಸಂಧಿಂ ತಪಸಾ ಮಹತಾ ಸ ಸಮನ್ವಿತಃ ।
ಮಹಾತಪಾಃ ಸ ವಿಭ್ರಾಜೋ ವಿರರಾಜಾಂಶುಮಾನಿವ ।। ೧-೨೩-೧೩

ಈ ಸಂಕಲ್ಪವನ್ನು ಮಾಡಿ ಮಹಾ ತಪಸ್ಸಿನಿಂದ ಸಮನ್ವಿತನಾದ ಆ ಮಹಾತಪಸ್ವೀ ವಿಭ್ರಾಜನು ಸೂರ್ಯನಂತೆ ವಿರಾಜಿಸತೊಡಗಿದನು.

ತತೋ ವಿಭ್ರಾಜಿತಂ ತೇನ ವೈಭ್ರಾಜಂ ನಾಮ ತದ್ವನಮ್ ।
ಸರಸ್ತಚ್ಚ ಕುರುಶ್ರೇಷ್ಠ ವೈಭ್ರಾಜಮಿತಿ ಸಂಜ್ಞಿತಮ್ ।। ೧-೨೩-೧೪

ಕುರುಶ್ರೇಷ್ಠ! ಅವನು ತನ್ನ ಕಾಂತಿಯಿಂದ ಆ ವನವನ್ನೂ ಸರೋವರವನ್ನೂ ವಿಭ್ರಾಜಗೊಳಿಸಿದನು. ಆದುದರಿಂದ ಆ ವನ ಮತ್ತು ಸರೋವರಗಳು ವೈಭ್ರಾಜವೆಂದು ಕರೆಯಲ್ಪಟ್ಟವು.

ಯತ್ರ ತೇ ಶಕುನಾ ರಾಜಂಶ್ಚತ್ವಾರೋ ಯೋಗಧರ್ಮಿಣಃ ।
ಯೋಗಭ್ರಷ್ಟಾಸ್ತ್ರಯಶ್ಚೈವ ದೇಹನ್ಯಾಸಕೃತೋಽಭವನ್ ।। ೧-೨೩-೧೫

ರಾಜನ್! ಆಗ ಅಲ್ಲಿದ್ದ ಯೋಗಧರ್ಮೀ ನಾಲ್ಕು ಪಕ್ಷಿಗಳೂ ಮತ್ತು ಯೋಗಭ್ರಷ್ಟರಾದ ಮೂರು ಪಕ್ಷಿಗಳೂ ದೇಹತ್ಯಾಗಮಾಡಿದವು.

ಕಾಂಪಿಲ್ಯೇ ನಗರೇ ತೇ ತು ಬ್ರಹ್ಮದತ್ತಪುರೋಗಮಾಃ ।
ಜಾತಾಃ ಸಪ್ತ ಮಹಾತ್ಮಾನಃ ಸರ್ವೇ ವಿಗತಕಲ್ಮಷಾಃ ।। ೧-೨೩-೧೬

ಆ ಎಲ್ಲ ಸಪ್ತ ವಿಗತಕಲ್ಮಷ ಮಹಾತ್ಮರೂ ಕಾಂಪಿಲ್ಯ ನಗರದಲ್ಲಿ ಬ್ರಹ್ಮದತ್ತನೇ ಮೊದಲಾದವರಾಗಿ ಜನಿಸಿದರು.

ಜ್ಞಾನಧ್ಯಾನತಪಃಪೂಜಾವೇದವೇದಾಂಗಪಾರಗಾಃ ।
ಸ್ಮೃತಿಮಂತೋಽತ್ರ ಚತ್ವಾರಸ್ತ್ರಯಸ್ತು ಪರಿಮೋಹಿತಾಃ ।। ೧-೨೩-೧೭

ಅವರು ಜ್ಞಾನ-ಧ್ಯಾನ-ತಪಸ್ಸು-ಪೂಜಾ-ವೇದ ಮತ್ತು ವೇದಾಂಗಗಳಲ್ಲಿ ಪಾರಂಗತರಾಗಿದ್ದರು. ಅವರಲ್ಲಿ ನಾಲ್ವರಿಗೆ ಹಿಂದಿನ ಜನ್ಮಗಳ ಸ್ಮರಣೆಯಿತ್ತು. ಆದರೆ ಮೋಹಿತರಾಗಿದ್ದ ಮೂವರಿಗೆ ಪೂರ್ವಜನ್ಮದ ಸ್ಮರಣೆಯಿರಲಿಲ್ಲ.

ಸ್ವತಂತ್ರಸ್ತ್ವಣುಹಾಜ್ಜಜ್ಞೇ ಬ್ರಹ್ಮದತ್ತೋ ಮಹಾಯಶಾಃ ।
ಯಥಾ ಹ್ಯಾಸೀತ್ಪಕ್ಷಿಭಾವೇ ಸಂಕಲ್ಪಃ ಪೂರ್ವಚಿಂತಿತಃ ।
ಜ್ಞಾನಧ್ಯಾನತಪಃಪೂತೋ ವೇದವೇದಾಂಗಪಾರಗಃ ।। ೧-೨೩-೧೮

ಸ್ವತಂತ್ರನು ಮೊದಲೇ ತನ್ನ ಪಕ್ಷಿಭಾವದಲ್ಲಿ ಯೋಚಿಸಿ ಸಂಕಲ್ಪಿಸಿದಂತೆ ಮಹಾಯಶಸ್ವೀ ಬ್ರಹ್ಮದತ್ತನಾಗಿ ಅಣುಹನಿಗೆ ಹುಟ್ಟಿದನು. ಅವನು ಜ್ಞಾನ-ಧ್ಯಾನ-ತಪಸ್ಸುಗಳಿಂದ ಪವಿತ್ರನಾಗಿ ವೇದವೇದಾಂಗಪಾರಂಗತನಾಗಿದ್ದನು.

ಛಿದ್ರದರ್ಶೀ ಸುನೇತ್ರಶ್ಚ ತಥಾ ಬಾಭ್ರವ್ಯವತ್ಸಯೋಃ ।
ಜಾತೌ ಶ್ರೋತ್ರಿಯದಾಯಾದೌ ವೇದವೇದಾಂಗಪಾರಗೌ ।। ೧-೨೩-೧೯

ಛಿದ್ರದರ್ಶೀ ಮತ್ತು ಸುನೇತ್ರರು ಶ್ರೋತ್ರಿಯರಾದ ಬಾಭ್ರವ್ಯ ಮತ್ತು ವತ್ಸ ಎಂಬ ಶ್ರೋತ್ರೀಯ ರಾಜಮಂತ್ರಿಗಳ ಮಕ್ಕಳಾಗಿ ಹುಟ್ಟಿದರು. ಅವರೂ ವೇದವೇದಾಂಗಪಾರಗರಾಗಿದ್ದರು.

ಸಹಾಯೌ ಬ್ರಹ್ಮದತ್ತಸ್ಯ ಪೂರ್ವಜಾತಿಸಹೋಷಿತೌ ।
ಪಾಂಚಾಲಃ ಪಾಂಚಿಕಶ್ಚೈವ ಕಂಡರೀಕಸ್ತಥಾಪರಃ ।। ೧-೨೩-೨೦

ಪೂರ್ವಜನ್ಮದಲ್ಲಿ ಅವರು ಬ್ರಹ್ಮದತ್ತನ ಸಹಾಯಕರಾಗಿದ್ದರು ಮತ್ತು ಜೊತೆಯೇ ವಾಸಿಸುತ್ತಿದ್ದರು. ಐದನೆಯವನು ಪಾಂಚಾಲನಾದನು ಮತ್ತು ಇನ್ನೊಬ್ಬನು ಕಂಡರೀಕನಾದನು.

ಪಾಂಚಾಲೋ ಬಹ್ವೃಚಸ್ತ್ವಾಸೀದಾಚಾರ್ಯತ್ವಂ ಚಕಾರ ಹ ।
ದ್ವಿವೇದಃ ಕಂಡರೀಕಸ್ತು ಛಂದೋಗೋಽಧ್ವರ್ಯುರೇವ ಚ ।। ೧-೨೩-೨೧

ಋಗ್ವೇದಿಯಾಗಿದ್ದ ಪಾಂಚಾಲನು ಆಚಾರ್ಯತ್ವವನ್ನು ಪಡೆದುಕೊಂಡನು. ಕಂಡರೀಕನು ಛಂದಗಳನ್ನು ಹಾಡುವ ಸಾಮವೇದೀ ಮತ್ತು ಅದ್ವರ್ಯು (ಯಜುರ್ವೇದಿ) ವಾದನು.

ಸರ್ವಸತ್ತ್ವರುತಜ್ಞಸ್ತು ರಾಜಾಽಽಸೀದಣುಹಾತ್ಮಜಃ ।
ಪಾಂಚಾಲಕಂಡರೀಕಾಭ್ಯಾಂ ತಸ್ಯ ಸಖ್ಯಮಭೂತ್ತದಾ ।। ೧-೨೩-೨೨

ಅಣುಹಾತ್ಮಜ ಬ್ರಹ್ಮದತ್ತನು ಸರ್ವ ಪ್ರಾಣಿಗಳ ಭಾಷೆಯನ್ನು ಅರಿತಿದ್ದನು. ಅವನಿಗೆ ಪಾಂಚಾಲ ಮತ್ತು ಕಂಡರೀಕರೊಡನೆ ಸಖ್ಯವುಂಟಾಯಿತು.

ತೇ ಗ್ರಾಮ್ಯಧರ್ಮಾಭಿರತಾಃ ಕಾಮಸ್ಯ ವಶವರ್ತಿನಃ ।
ಪೂರ್ವಜಾತಿಕೃತೇನಾಸಂಧರ್ಮಕಾಮಾರ್ಥಕೋವಿದಾಃ ।। ೧-೨೩-೨೩

ಅವರು ಗ್ರಾಮ್ಯಧರ್ಮದಲ್ಲಿ ನಿರತರಾಗಿದ್ದರು ಮತ್ತು ಕಾಮದ ವಶವರ್ತಿಗಳಾಗಿದ್ದರು. ಪೂರ್ವಜನ್ಮದಲ್ಲಿ ಮಾಡಿದ ಕರ್ಮಗಳಿಂದ ಧರ್ಮಕಾಮಾರ್ಥಕೋವಿದರಾಗಿದ್ದರು.

ಅಣುಹಸ್ತು ನೃಪಶ್ರೇಷ್ಠೋ ಬ್ರಹ್ಮದತ್ತಮಕಲ್ಮಷಮ್ ।
ರಾಜ್ಯೇಽಭಿಷಿಚ್ಯ ಯೋಗಾತ್ಮಾ ಪರಾಂ ಗತಿಮವಾಪ್ತವಾನ್ ।। ೧-೨೩-೨೪

ನೃಪಶ್ರೇಶ್ಠ ಅಣುಹನಾದರೋ ಅಕಲ್ಮಷ ಬ್ರಹ್ಮದತ್ತನನ್ನು ರಾಜ್ಯದಲ್ಲಿ ಅಭಿಷೇಕಿಸಿ ಯೋಗಾತ್ಮನಾಗಿ ಪರಮ ಗತಿಯನ್ನು ಪಡೆದುಕೊಂಡನು.

ಬ್ರಹ್ಮದತ್ತಸ್ಯ ಭಾರ್ಯಾ ತು ದೇವಲಸ್ಯಾತ್ಮಜಾಭವತ್ ।
ಅಸಿತಸ್ಯ ಹಿ ದುರ್ಧರ್ಷಾ ಸನ್ನತಿರ್ನಾಮ ನಾಮತಃ ।। ೧-೨೩-೨೫

ಅಸಿತ ದೇವಲನ ಪುತ್ರಿ ಸನ್ನತಿ ಎಂಬ ಹೆಸರಿನ ದುರ್ಧರ್ಷೆಯು ಬ್ರಹ್ಮದತ್ತನ ಭಾರ್ಯೆಯಾದಳು.

ತಾಮೇಕಭಾವಸಂಪನ್ನಾಂ ಲೇಭೇ ಕನ್ಯಾಮನುತ್ತಮಾಮ್ ।
ಸನ್ನತಿಂ ಸನ್ನತಿಮತೀಂ ದೇವಲಾದ್ಯೋಗಧರ್ಮಿಣೀಮ್ ।। ೧-೨೩-೨೬

ಆ ಏಕಭಾವಸಂಪನ್ನೆ, ಅನುತ್ತಮ ಕನ್ಯೆ ಸನ್ನತಿಮತಿ ಯೋಗಧರ್ಮಿಣೀ ಸನ್ನತಿಯನ್ನು ಬ್ರಹ್ಮದತ್ತನು ದೇವಲನಿಂದ ಪತ್ನಿಯನ್ನಾಗಿ ಪಡೆದುಕೊಂಡಿದ್ದನು.

ಪಂಚಮಃ ಪಾಂಚಿಕಸ್ತತ್ರ ಸಪ್ತಜಾತಿಷು ಭಾರತ ।
ಷಷ್ಠಸ್ತು ಕಂಡರೀಕೋಽಭೂದ್ಬ್ರಹ್ಮದತ್ತಸ್ತು ಸಪ್ತಮಃ ।। ೧-೨೩-೨೭

ಭಾರತ! ಆ ಏಳನೆಯ ಜನ್ಮದಲ್ಲಿ ಐದನೆಯವನು ಪಂಚಾಲನಾದನು. ಆರನೆಯವನು ಕಂಡರೀಕನಾದನು ಮತ್ತು ಏಳನೆಯವನು ಬ್ರಹ್ಮದತ್ತನಾದನು.

ಶೇಷಾ ವಿಹಂಗಮಾ ಯೇ ವೈ ಕಾಂಪಿಲ್ಯೇ ಸಹಚಾರಿಣಃ ।
ತೇ ಜಾತಾಃ ಶ್ರೋತ್ರಿಯಕುಲೇ ಸುದರಿದ್ರೇ ಸಹೋದರಾಃ ।। ೧-೨೩-೨೮

ಉಳಿದ ಸಹಚಾರೀ ಪಕ್ಷಿಗಳು ಕಾಂಪಿಲ್ಯನಗರದಲ್ಲಿಯೇ ಅತ್ಯಂತ ದರಿತ್ರ ಶ್ರೋತ್ರಿಯಕುಲದಲ್ಲಿ ಸಹೋದರರಾಗಿ ಹುಟ್ಟಿದರು.

ಧೃತಿಮಾನ್ಸುಮನಾ ವಿದ್ವಾಂಸ್ತತ್ತ್ವದರ್ಶೀ ಚ ನಾಮತಃ ।
ವೇದಾಧ್ಯಯನಸಂಪನ್ನಾಶ್ಚತ್ವಾರಶ್ಛಿದ್ರದರ್ಶಿನಃ ।। ೧-೨೩-೨೯

ಆ ನಾಲ್ವರೂ ಧೃತಿಮಾನ್, ಸುಮನಾ, ವಿದ್ವಾನ್ ಮತ್ತು ತತ್ತ್ವದರ್ಶೀ ಎಂಬ ಹೆಸರಿನಿಂದ ಪ್ರಸಿದ್ಧರಾಗಿದ್ದರು. ವೇದಾಧ್ಯಯನ ಸಂಪನ್ನರಾಗಿದ್ದರು. ಅವರು ಯೋಗಸಾಧನಕ್ಕಾಗಿ ಗೃಹತ್ಯಾಗಮಾಡುವ ಅವಕಾಶವನ್ನು ಹುಡುಕುತ್ತಿದ್ದರು.

ತೇಷಾಂ ಸಂವಿತ್ತಥೋತ್ಪನ್ನಾ ಪೂರ್ವಜಾತಿಕೃತಾ ತದಾ ।
ಯೇ ಯೋಗನಿರತಾಃ ಸಿದ್ಧಾಃ ಪ್ರಸ್ಥಿತಾಃ ಸರ್ವ ಏವ ಹಿ ।। ೧-೨೩-೩೦

ಅವರ ಹಿಂದಿನ ಜನ್ಮದಲ್ಲಿದ್ದ ವೈರಾಗ್ಯ ಬುದ್ಧಿಯು ಈ ಜನ್ಮದಲ್ಲಿಯೇ ಇದ್ದಿತ್ತು. ಅದರಿಂದ ಅವರೆಲ್ಲ ಸಿದ್ಧಪುರುಷರೂ ಯೋಗಪರಾಯಣರಾಗಿ ಮನೆಯಿಂದ ಹೊರಟರು.

ಆಮಂತ್ರ್ಯ ಪಿತರಂ ತಾತ ಪಿತಾ ತಾನಬ್ರವೀತ್ತದಾ ।
ಅಧರ್ಮ ಏಷ ಯುಷ್ಮಾಕಂ ಯನ್ಮಾಂ ತ್ಯಕ್ತ್ವಾ ಗಮಿಷ್ಯಥ ।। ೧-೨೩-೩೧

ಅಯ್ಯಾ! ತಂದೆಯ ಆಜ್ಞೆಯನ್ನು ಕೇಳಲು ತಂದೆಯು ಅವರಿಗೆ ಹೇಳಿದನು: “ನನ್ನನ್ನು ಬಿಟ್ಟು ನೀವು ಹೋದರೆ ಅದು ನಿಮ್ಮ ಪಾಲಿಗೆ ಅಧರ್ಮವೇ ಆಗುತ್ತದೆ.

ದಾರಿದ್ರ್ಯಮನಪಾಕೃತ್ಯ ಪುತ್ರಾರ್ಥಾಂಶ್ಚೈವ ಪುಷ್ಕಲಾನ್ ।
ಶುಶ್ರೂಷಾಮಪ್ರಯುಜ್ಯೈವ ಕಥಂ ವೈ ಗಂತುಮರ್ಹಥ ।। ೧-೨೩-೩೨

ನನ್ನ ದಾರಿದ್ರ್ಯವನ್ನು ಹೋಗಲಾಡಿಸದೇ ಪುಷ್ಕಲ ಪುತ್ರರ ಫಲವಾದ ಶುಶ್ರೂಷೆಯನ್ನೂ ಮಾಡದೇ ನೀವು ಹೇಗೆ ಹೊರಟುಹೋಗುವಿರಿ?”

ತೇ ತಮೂಚುರ್ದ್ವಿಜಾಃ ಸರ್ವೇ ಪಿತರಂ ಪುನರೇವ ಚ ।
ಕರಿಷ್ಯಾಮೋ ವಿಧಾನಂ ತೇ ಯೇನ ತ್ವಂ ವರ್ತಯಿಷ್ಯಸಿ ।। ೧-೨೩-೩೩

ಆಗ ಆ ಎಲ್ಲ ದ್ವಿಜರೂ ತಂದೆಗೆ ಪುನಃ ಹೇಳಿದರು: “ನಾನು ನಿನ್ನ ಜೀವನಿರ್ವಹಣೆಗೆ ವ್ಯವಸ್ಥೆಯನ್ನು ಮಾಡುತ್ತೇವೆ.

ಇಮಂ ಶ್ಲೋಕಂ ಮಹಾರ್ಥಂ ತ್ವಂ ರಾಜಾನಂ ಸಹಮಂತ್ರಿಣಮ್ ।
ಶ್ರಾವಯೇಥಾಃ ಸಮಾಗಮ್ಯ ಬ್ರಹ್ಮದತ್ತಮಕಲ್ಮಷಮ್ ।। ೧-೨೩-೩೪

ನೀನು ಅಕಲ್ಮಷ ರಾಜಾ ಬ್ರಹ್ಮದತ್ತನನ್ನು ಅವನ ಮಂತ್ರಿಗಳೊಂದಿಗೆ ಸಂದರ್ಶಿಸಿ ಮಹಾ ಅರ್ಥವುಳ್ಳ ಈ ಶ್ಲೋಕವನ್ನು ಅವನಿಗೆ ಕೇಳಿಸಬೇಕು.

ಪ್ರೀತಾತ್ಮಾ ದಾಸ್ಯತಿ ಸ ತೇ ಗ್ರಾಮಾನ್ಭೋಗಾಂಶ್ಚ ಪುಷ್ಕಲಾನ್ ।
ಯಥೇಪ್ಸಿತಾಂಶ್ಚ ಸರ್ವಾರ್ಥಾನ್ಗಚ್ಛ ತಾತ ಯಥೇಪ್ಸಿತಮ್ ।। ೧-೨೩-೩೫

ಪ್ರೀತಾತ್ಮನಾದ ಅವನು ನಿನಗೆ ಪುಷ್ಕಲ ಗ್ರಾಮಗಳನ್ನೂ ಭೋಗಗಳನ್ನೂ ನೀನು ಬಯಸಿದ ಎಲ್ಲವನ್ನೂ ನೀಡುತ್ತಾನೆ. ತಂದೇ! ನೀನು ಬಯಸಿದಾಗ ಅವನ ಬಳಿ ಹೋಗು.”

ಏತಾವದುಕ್ತ್ವಾ ತೇ ಸರ್ವೇ ಪೂಜಯಿತ್ವಾ ಚ ತಂ ಗುರುಮ್ ।
ಯೋಗಧರ್ಮಮನುಪ್ರಾಪ್ಯ ಪರಾಂ ನಿರ್ವೃತಿಮಾಯಯುಃ ।। ೧-೨೩-೩೬

ಹೀಗೆ ಹೇಳಿ ಅವರೆಲ್ಲರೂ ಆ ಗುರುವನ್ನು ಪೂಜಿಸಿ ಯೋಗಧರ್ಮವನ್ನು ಹೊಂದಿ ಪರಮ ನಿವೃತ್ತಿಯನ್ನು ಪಡೆದರು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ಹರಿವಂಶಪರ್ವಣಿ ಪಿತೃಕಲ್ಪೇ ತ್ರಯೋವಿಂಶೋಽಧ್ಯಾಯಃ


  1. ಸೂಕ್ಷ್ಮ ತತ್ತ್ವಗಳನ್ನು ತಿಳಿದುಕೊಳ್ಳಲು ಸಮರ್ಥನಾದವನು. ↩︎

  2. ಬ್ರಹ್ಮನ ಸೂಕ್ಷ್ಮ ಸ್ವರೂಪದ ಜ್ಞಾನ (ಗೀತಾ ಪ್ರೆಸ್). ↩︎