ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಖಿಲಭಾಗೇ ಹರಿವಂಶಃ
ಹರಿವಂಶ ಪರ್ವ
ಅಧ್ಯಾಯ 22
ಸಾರ
ಶುಚಿವಾಕನು ಸ್ವತಂತ್ರ ಮತ್ತು ಇತರ ಎರಡು ಪಕ್ಷಿಗಳಿಗೆ ಶಾಪವನ್ನಿತ್ತುದು ಮತ್ತು ಸುಮನನು ಪಕ್ಷಿಗಳಿಗೆ ಅನುಗ್ರಹಪೂರ್ವಕ ಶಾಪವಿಮುಕ್ತಿಯನ್ನು ಸೂಚಿಸಿದುದು (1-11).
ಮಾರ್ಕಂಡೇಯ ಉವಾಚ।
ತತಸ್ತಂ ಚಕ್ರವಾಕೌ ದ್ವಾವೂಚತುಃ ಸಹಚಾರಿಣೌ ।
ಆವಾಂ ತೇ ಸಚಿವೌ ಸ್ಯಾವಸ್ತವ ಪ್ರಿಯಹಿತೈಷಿಣೌ ।। ೧-೨೨-೧
ಮಾರ್ಕಂಡೇಯನು ಹೇಳಿದನು: “ಆಗ ಜೊತೆಯಲ್ಲಿ ಸಂಚರಿಸುತ್ತಿದ್ದ ಎರಡು ಚಕ್ರವಾಕಗಳು ಅವನಿಗೆ ಹೇಳಿದವು: “ನಾವು ನಿನ್ನ ಪ್ರಿಯ ಮತ್ತು ಹಿತೈಷೀ ಸಚಿವರಾಗುವೆವು!”
ತಥೇತ್ಯುಕ್ತ್ವಾ ಚ ತಸ್ಯಾಸೀತ್ತದಾ ಯೋಗಾತ್ಮಿಕಾ ಮತಿಃ ।
ಏವಂ ತೇ ಸಮಯಂ ಚಕ್ರುಃ ಶುಚಿವಾಕ್ತಮುವಾಚ ಹ ।। ೧-೨೨-೨
ಹಾಗೆಯೇ ಆಗಲೆಂದು ಹೇಳಿ ಅವನು ಯೋಗಧರ್ಮದ ಕುರಿತು ವಿಚಾರಿಸತೊಡಗಿದನು. ಹೀಗೆ ಅವರು ಪರಸ್ಪರರಲ್ಲಿ ಒಪ್ಪಂದವನ್ನು ಮಾಡಿಕೊಳ್ಳಲು ಶುಚಿವಾಕನು ಹೇಳಿದನು:
ಯಸ್ಮಾತ್ಕಾಮಪ್ರಧಾನಸ್ತ್ವಂ ಯೋಗಧರ್ಮಮಪಾಸ್ಯ ವೈ ।
ಏವಂ ವರಂ ಪ್ರಾರ್ಥಯಸೇ ತಸ್ಮಾದ್ವಾಕ್ಯಂ ನಿಬೋಧ ಮೇ ।। ೧-೨೨-೩
ಕಾಮಪ್ರಧಾನವಾದ ಇದಕ್ಕೆ ನೀನು ಯೋಗಧರ್ಮವನ್ನು ಉಪಯೋಗಿಸಿ ಈ ವರವನ್ನು ಕೇಳಿಕೊಳ್ಳುತ್ತಿದ್ದೀಯೆ. ಆದುದರಿಂದ ನನ್ನ ಈ ಮಾತನ್ನು ಕೇಳು.
ರಾಜಾ ತ್ವಂ ಭವಿತಾ ತಾತ ಕಾಂಪಿಲ್ಯೇ ನಾತ್ರ ಸಂಶಯಃ ।
ಭವಿಷ್ಯತಃ ಸಖಾಯೌ ಚ ದ್ವಾವಿಮೌ ಸಚಿವೌ ತವ ।। ೧-೨೨-೪
“ಅಯ್ಯಾ! ನೀನು ಕಾಂಪಿಲ್ಯ ನಗರದ ರಾಜನಾಗುವೆ. ಈ ಇಬ್ಬರು ಸಖರೂ ನಿನ್ನ ಸಚಿವರಾಗುತ್ತಾರೆ. ಇದರಲ್ಲಿ ಸಂಶಯವಿಲ್ಲ.”
ಶಪ್ತ್ವಾ ಚಾನಭಿಭಾಷ್ಯಾಂಸ್ತಾಂಚತ್ವಾರಶ್ಚಕ್ರುರಂಡಜಾಃ ।
ತಾಂಸ್ತ್ರೀನಭೀಪ್ಸತೋ ರಾಜ್ಯಂ ವ್ಯಭಿಚಾರಪ್ರದರ್ಶಿತಾನ್ ।। ೧-೨೨-೫
ರಾಜ್ಯವನ್ನು ಬಯಸಿ ತಮ್ಮ ವ್ಯಭಿಚಾರವನ್ನು ಪ್ರದರ್ಶಿಸಿದ ಆ ಮೂರು ಪಕ್ಷಿಗಳನ್ನೂ ಶಪಿಸಿ ಉಳಿದ ನಾಲ್ಕು ಪಕ್ಷಿಗಳು ಅವುಗಳೊಂದಿಗೆ ಮಾತನಾಡುವುದನ್ನೂ ನಿಲ್ಲಿಸಿದವು.
ಶಪ್ತಾಃ ಖಗಾಸ್ತ್ರಯಸ್ತೇ ತು ಯೋಗಭ್ರಷ್ಟಾ ವಿಚೇತಸಃ ।
ತಾನಯಾಚಂತ ಚತುರಸ್ತ್ರಯಸ್ತೇ ಸಹಚಾರಿಣಃ ।। ೧-೨೨-೬
ಶಪಿತರಾದ ಆ ಮೂರು ಪಕ್ಷಿಗಳಾದರೋ ಯೋಗಭ್ರಷ್ಠರಾಗಿ ವಿಚೇತಸಗೊಂಡವು. ಆ ಮೂರು ಪಕ್ಷಿಗಳೂ ಸಹಚಾರಿಗಳಾದ ನಾಲ್ಕು ಪಕ್ಷಿಗಳನ್ನು ಬೇಡಿಕೊಂಡವು.
ತೇಷಾಂ ಪ್ರಸಾದಂ ತೇ ಚಕ್ರುರಥೈತಾನ್ಸುಮನಾಬ್ರವೀತ್ ।
ಸರ್ವೇಷಾಮೇವ ವಚನಾತ್ಪ್ರಸಾದಾನುಗತಂ ವಚಃ ।। ೧-೨೨-೭
ಅವರಮೇಲೆ ಪ್ರಸನ್ನರಾಗಿ ಎಲ್ಲರ ಸಮ್ಮತಿಯಂತೆ ಸುಮನನು ಈ ಅನುಗ್ರಹಪೂರ್ವಕ ಮಾತನ್ನು ಆಡಿದನು:
ಅಂತವಾನ್ಭವಿತಾ ಶಾಪೋ ಯುಷ್ಮಾಕಂ ನಾತ್ರ ಸಂಶಯಃ ।
ಇತಶ್ಚ್ಯುತಾಶ್ಚ ಮಾನುಷ್ಯಂ ಪ್ರಾಪ್ಯ ಯೋಗಮವಾಪ್ಸ್ಯಥ ।। ೧-೨೨-೮
“ನಿಮ್ಮ ಈ ಶಾಪವು ಬೇಗನೇ ಅಂತ್ಯವಾಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಇಲ್ಲಿಂದ ಯೋಗಭ್ರಷ್ಠರಾಗಿ ಮನುಷ್ಯಯೋನಿಯನ್ನು ಪಡೆದು ನಂತರ ಯೋಗಜ್ಞಾನವನ್ನು ಪಡೆದುಕೊಳ್ಳುವಿರಿ.
ಸರ್ವಸತ್ತ್ವರುತಜ್ಞಶ್ಚ ಸ್ವತಂತ್ರೋಽಯಂ ಭವಿಷ್ಯತಿ ।
ಪಿತೃಪ್ರಸಾದೋ ಹ್ಯಸ್ಮಾಭಿರಸ್ಯ ಪ್ರಾಪ್ತಃ ಕೃತೇನ ವೈ ।। ೧-೨೨-೯
ಗಾಂ ಪ್ರೋಕ್ಷಯಿತ್ವಾ ಧರ್ಮೇಣ ಪಿತೄಭ್ಯ ಉಪಕಲ್ಪ್ಯತಾಮ್ ।
ಅಸ್ಮಾಕಂ ಜ್ಞಾನಸಂಯೋಗಃ ಸರ್ವೇಷಾಂ ಯೋಗಸಾಧನಃ ।। ೧-೨೨-೧೦
ಈ ಸ್ವತಂತ್ರನು ಸರ್ವಜೀವಿಗಳ ಭಾಷೆಯನ್ನು ಅರ್ಥಮಾಡಿಕೊಳ್ಳುವವನಾಗುತ್ತಾನೆ. ಪೂರ್ವಜನ್ಮದಲ್ಲಿ ನಾವು ಇವನ ಮಾತಿನಂತೆ ಮಾಡಿದುದಕ್ಕಾಗಿ ನಮಗೆ ಪಿತೃಗಳ ಕೃಪೆಯು ದೊರಕಿತ್ತು. ಇವನು “ಗೋವಿಗೆ ಪ್ರೋಕ್ಷಣೆ ಮಾಡಿ ಪಿತೃಗಳಿಗೆ ಅರ್ಪಿಸೋಣ” ಎಂದು ಹೇಳಿದ್ದನು. ಅದರಂತೆ ಮಾಡಿದ್ದುದಕ್ಕಾಗಿಯೇ ನಮಗೆ ಎಲ್ಲರಿಗೂ ಯೋಗಸಾಧಕ ಜ್ಞಾನವು ಪ್ರಾಪ್ತವಾಗಿದೆ.
ಇಮಂ ಚ ವಾಕ್ಯಸಂದರ್ಭಶ್ಲೋಕಮೇಕಮುದಾಹೃತಮ್ ।
ಪುರುಷಾಂತರಿತಂ ಶ್ರುತ್ವಾ ತತೋ ಯೋಗಮವಾಪ್ಸ್ಯಥ ।। ೧-೨೨-೧೧
ಆ ಮನುಷ್ಯಜನ್ಮದಲ್ಲಿ ನಿನಗೆ ಮುಂದೆ ಹೇಳುವ ಶ್ಲೋಕವನ್ನು ಸಂದರ್ಭರೂಪದಲ್ಲಿ ಯಾರಾದರೂ ಪುರುಷನು ಹೇಳಿದರೆ ಆಗ ನಿನಗೆ ಮೋಕ್ಷವನ್ನೀಯುವ ಈ ಯೋಗಧರ್ಮವು ಪುನಃ ಪ್ರಾಪ್ತವಾಗುತ್ತದೆ.””
ಸಮಾಪ್ತಿ
ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ಹರಿವಂಶಪರ್ವಣಿ ಪಿತೃವಾಕ್ಯೇ ದ್ವಾವಿಂಶೋಽಧ್ಯಾಯಃ