021: ಪಿತೃಕಲ್ಪಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಖಿಲಭಾಗೇ ಹರಿವಂಶಃ

ಹರಿವಂಶ ಪರ್ವ

ಅಧ್ಯಾಯ 21

ಸಾರ

ಮಾರ್ಕಂಡೇಯನಿಂದ ಶ್ರಾದ್ಧದ ಮಹಿಮೆಯ ವರ್ಣನೆ; ಶ್ರಾದ್ಧದ ಫಲವಾಗಿ ಕೌಶಿಕ ಪುತ್ರರಿಗೆ ಉತ್ತಮ ಜನ್ಮದ ಪ್ರಾಪ್ತಿ (1-45).

ಮಾರ್ಕಂಡೇಯ ಉವಾಚ ।
ಶ್ರಾದ್ಧೇ ಪ್ರತಿಷ್ಠಿತೋ ಲೋಕಃ ಶ್ರಾದ್ಧೇ ಯೋಗಃ ಪ್ರವರ್ತತೇ ।
ಹಂತ ತೇ ವರ್ತಯಿಷ್ಯಾಮಿ ಶ್ರಾದ್ಧಸ್ಯ ಫಲಮುತ್ತಮಮ್ ।। ೧-೨೧-೧

ಮಾರ್ಕಂಡೇಯನು ಹೇಳಿದನು: “ಲೋಕವು ಶ್ರಾದ್ಧದಲ್ಲಿ ಪ್ರತಿಷ್ಠಿತವಾಗಿದೆ ಮತ್ತು ಶ್ರಾದ್ಧದಿಂದಲೇ ಯೋಗವು ಸಂಪನ್ನವಾಗುತ್ತದೆ. ಆದುದರಿಂದ ನಿನಗೆ ನಾನು ಶ್ರಾದ್ಧದ ಉತ್ತಮ ಫಲವನ್ನು ವರ್ಣಿಸುತ್ತೇನೆ.

ಬ್ರಹ್ಮದತ್ತೇನ ಯತ್ಪ್ರಾಪ್ತಂ ಸಪ್ತಜ್ಞಾತಿಷು ಭಾರತ ।
ತತ ಏವ ಹಿ ಧರ್ಮಸ್ಯ ಬುದ್ಧಿರ್ನಿರ್ವರ್ತತೇ ಶನೈಃ ।। ೧-೨೧-೨

ಬ್ರಹ್ಮದತ್ತನು ತನ್ನ ಏಳು ಜನ್ಮಗಳಲ್ಲಿ1 ಶ್ರಾದ್ಧಗಳಿಂದ ಏನು ಫಲವನ್ನು ಪಡೆದುಕೊಂಡನೋ ಅವುಗಳನ್ನು ಕೇಳುವುದರಿಂದ ನಿಧಾನವಾಗಿ ಧರ್ಮಬುದ್ಧಿಯು ಪ್ರಾಪ್ತವಾಗುತ್ತದೆ.

ಪೀಡಯಾಪ್ಯಥ ಧರ್ಮಸ್ಯ ಕೃತೇ ಶ್ರಾದ್ಧೇ ಪುರಾನಘ ।
ಯತ್ಪ್ರಾಪ್ತಂ ಬ್ರಾಹ್ಮಣೈಃ ಪೂರ್ವಂ ತನ್ನಿಬೋಧ ಮಹಾಮತೇ ।। ೧-೨೧-೩

ಅನಘ! ಮಹಾಮತೇ! ಹಿಂದೆ ಬ್ರಾಹ್ಮಣರು ಧರ್ಮವನ್ನು ಪೀಡಿಸಿದ್ದರೂ ಶ್ರಾದ್ಧವನ್ನು ಮಾಡಿ ಪಡೆದುಕೊಂಡ ಪುಣ್ಯಗಳ ಕುರಿತು ಕೇಳು.

ತತೋಽಹಂ ತಾತ ಧರ್ಮಿಷ್ಠಾನ್ಕುರುಕ್ಷೇತ್ರೇ ಪಿತೃವ್ರತಾನ್ ।
ಸನತ್ಕುಮಾರನಿರ್ದಿಷ್ಟಾನಪಶ್ಯಂ ಸಪ್ತ ವೈ ದ್ವಿಜಾನ್ ।। ೧-೨೧-೪
ದಿವ್ಯೇನ ಚಕ್ಷುಷಾ ತೇನ ಯಾನುವಾಚ ಪುರಾ ವಿಭುಃ ।

ಅಯ್ಯಾ! ವಿಭು ಸನತ್ಕುಮಾರನು ವರ್ಣನೆ ಮಾಡಿದ್ದ ಆ ಏಳು ಬ್ರಾಹ್ಮಣರು ಅಧರ್ಮ ಪರಾಯಣರಾಗಿದ್ದರೂ ಕುರುಕ್ಷೇತ್ರದಲ್ಲಿ ಶ್ರಾದ್ಧಮಾಡುತ್ತಿರುವುದನ್ನು ನನ್ನ ದಿವ್ಯ ದೃಷ್ಟಿಯಿಂದ ನೋಡಿದೆನು.

ವಾಗ್ದುಷ್ಟಃ ಕ್ರೋಧನೋ ಹಿಂಸ್ರಃ ಪಿಶುನಃ ಕವಿರೇವ ಚ ।
ಖಸೃಮಃ ಪಿತೃವರ್ತೀ ಚ ನಾಮಭಿರ್ಮರ್ಮಭಿಸ್ತಥಾ ।। ೧-೨೧-೫

ಅವರ ಹೆಸರುಗಳು ಇಂತಿದ್ದವು: ವಾಗ್ದುಷ್ಟ, ಕ್ರೋಧನ, ಹಿಂಸ್ರ, ಪಿಶುನ, ಕವಿ, ಖಸೃಮ2, ಮತ್ತು ಪಿತೃವರ್ತೀ. ಅವರ ಕರ್ಮಗಳೂ ಹೆಸರಿನಂತೆಯೇ ಇದ್ದವು.

ಕೌಶಿಕಸ್ಯ ಸುತಾಸ್ತಾತ ಶಿಷ್ಯಾ ಗಾರ್ಗ್ಯಸ್ಯ ಭಾರತ ।
ಪಿತರ್ಯುಪರತೇ ಸರ್ವೇ ವ್ರತವಂತಸ್ತದಾಭವನ್ ।। ೧-೨೧-೬

ಅಯ್ಯಾ! ಭಾರತ! ಅವರು ಕೌಶಿಕ ವಿಶ್ವಾಮಿತ್ರನ ಪುತ್ರರಾಗಿದ್ದರು. ತಂದೆಯು ಶಾಪವನ್ನಿತ್ತು ಉದಾಸೀನನಾಗಿದ್ದಾಗ3 ಅವರೆಲ್ಲರೂ ಗಾರ್ಗ್ಯನ ಶಿಷ್ಯರ ವ್ರತಪಾಲಿಸುತ್ತಾ ಅವನೊಂದಿಗೆ ವಾಸಿಸುತ್ತಿದ್ದರು.

ವಿನಿಯೋಗಾದ್ಗುರೋಸ್ತಸ್ಯ ಗಾಂ ದೋಗ್ಧ್ರೀಂ ಸಮಕಾಲಯನ್ ।
ಸಮಾನವತ್ಸಾಂ ಕಪಿಲಾಂ ಸರ್ವೇ ನ್ಯಾಯಾಗತಾಂ ತದಾ ।। ೧-೨೧-೭

ಒಮ್ಮೆ ಅವರು ಗುರುವಿನ ವಿನಿಯೋಗದಂತೆ ಅವನಿಗೆ ನ್ಯಾಯಗತವಾಗಿ ದೊರಕಿದ್ದ ಹಾಲುಕೊಡುವ ಗೋವು ಕಪಿಲೆ ಮತ್ತು ಅದೇ ವರ್ಣದ ಕರುವನ್ನು ವನದಲ್ಲಿ ಮೇಯಿಸಲು ಕರೆದುಕೊಂಡು ಹೋದರು.

ತೇಷಾಂ ಪಥಿ ಕ್ಷುಧಾರ್ತಾನಾಂ ಬಾಲ್ಯಾನ್ಮೋಹಾಚ್ಚ ಭಾರತ ।
ಕ್ರೂರಾ ಬುದ್ಧಿಃ ಸಮಭವತ್ತಾಂ ಗಾಂ ವೈ ಹಿಂಸಿತುಂ ತದಾ ।। ೧-೨೧-೮

ಭಾರತ! ಮಾರ್ಗದಲ್ಲಿ ಹಸಿವೆಯಿಂದ ಆರ್ತರಾಗಿದ್ದ ಅವರು ಮೋಹ ಮತ್ತು ಮೂರ್ಖತೆಯಿಂದ ಆ ಗೋವನ್ನು ಸಂಹರಿಸುವ ಕ್ರೂರ ಬುದ್ಧಿಯನ್ನು ಮಾಡಿದರು.

ತಾನ್ಕವಿಃ ಖಸೃಮಶ್ಚೈವ ಯಾಚೇತೇ ನೇತಿ ವೈ ತದಾ ।
ನ ಚಾಶಕ್ಯಂತ ತೇ ತಾಭ್ಯಾಂ ತದಾ ವಾರಯಿತುಂ ದ್ವಿಜಾಃ ।। ೧-೨೧-೯

ಕವಿ ಮತ್ತು ಖಸೃಮರು ಬೇಡವೆಂದು ಅವರನ್ನು ಪ್ರಾರ್ಥಿಸಿದರು. ಆದರೂ ಅವರಿಬ್ಬರಿಂದ ಆ ದ್ವಿಜರನ್ನು ತಡೆಯಲು ಸಾಧ್ಯವಾಗಲಿಲ್ಲ.

ಪಿತೃವರ್ತೀ ತು ಯಸ್ತೇಷಾಂ ನಿತ್ಯಂ ಶ್ರಾದ್ಧಾಹ್ನಿಕೋ ದ್ವಿಜಃ ।
ಸ ಸರ್ವಾನಬ್ರವೀದ್ಭ್ರಾತೄನ್ಕೋಪಾದ್ಧರ್ಮೇ ಸಮಾಹಿತಃ ।। ೧-೨೧-೧೦

ಆಗ ಅವರಲ್ಲಿ ಒಬ್ಬ, ನಿತ್ಯವೂ ಶಾದ್ಧ-ಆಹ್ನಿಕಗಳನ್ನು ಮಾಡುತ್ತಿದ್ದ ಧರ್ಮ ಸಮಾಹಿತ ದ್ವಿಜ ಪಿತೃವರ್ತಿಯು ಕೋಪಗೊಂಡು ಅವರೆಲ್ಲರಿಗೆ ಹೇಳಿದನು:

ಯದ್ಯವಶ್ಯಂ ಪ್ರಹಂತವ್ಯಾ ಪಿತೄನುದ್ದಿಶ್ಯ ಸಾಧ್ವಿಮಾಂ ।
ಪ್ರಕುರ್ವೀಮಹಿ ಗಾಂ ಸಂಯಕ್ಸರ್ವ ಏವ ಸಮಾಹಿತಃ ।। ೧-೨೧-೧೧

“ಒಂದುವೇಳೆ ಇದನ್ನು ಕೊಲ್ಲುವುದು ಅವಶ್ಯಕವೇ ಆದರೆ ನಾವು ಸಮಾಹಿತರಾಗಿ ಈ ಗೋವನ್ನು ಪಿತೃಗಳನ್ನು ಉದ್ದೇಶಿಸಿ ಕೊಲ್ಲುವುದು ಒಳ್ಳೆಯದು.

ಏವಮೇಪಷಾಪಿ ಗೌರ್ಧರ್ಮಂ ಪ್ರಾಪ್ಸ್ಯತೇ ನಾತ್ರ ಸಂಶಯಃ ।
ಪಿತೄನಭ್ಯರ್ಚ್ಯ ಧರ್ಮೇಣ ನಾಧರ್ಮೋಽಸ್ಮಾನ್ಭವಿಷ್ಯತಿ ।। ೧-೨೧-೧೨

ಹೀಗೆ ಮಾಡುವುದರಿಂದ ಈ ಗೋವೂ ಕೂಡ ನಿಸ್ಸಂದೇಹವಾಗಿ ಧರ್ಮವನ್ನು ಪಡೆದುಕೊಳ್ಳುತ್ತದೆ ಮತ್ತು ಧರ್ಮಪೂರ್ವಕ ಪಿತೃಪೂಜೆಯನ್ನು ಮಾಡುವುದರಿಂದ ನಮಗೂ ಅಧರ್ಮವು ತಗಲುವುದಿಲ್ಲ.

ತಥೇತ್ಯುಕ್ತ್ವಾ ಚ ತೇ ಸರ್ವೇ ಪ್ರೋಕ್ಷಯಿತ್ವಾ ಚ ಗಾಂ ತತಃ ।
ಪಿತೃಭ್ಯಃ ಕಲ್ಪಯಿತ್ವೈನಾಮುಪಾಯುಂಜತ ಭಾರತ ।। ೧-೨೧-೧೩

ಭಾರತ! ಹಾಗೆಯೇ ಆಗಲೆಂದು ಹೇಳಿ ಅವರೆಲ್ಲರೂ ಆ ಗೋವಿಗೆ ಪ್ರೋಕ್ಷಣೆ ಮಾಡಿ ಪಿತೃಗಳಿಗೆ ಅರ್ಪಿಸಿ ನಂತರ ಅದನ್ನು ಭೋಜಿಸಿದರು.

ಉಪಯುಜ್ಯ ಚ ಗಾಂ ಸರ್ವೇ ಗುರೋಸ್ತಸ್ಯ ನ್ಯವೇದಯನ್ ।
ಶಾರ್ದೂಲೇನ ಹತಾ ಧೇನುರ್ವತ್ಸೋಽಯಂ ಗೃಹ್ಯತಾಮಿತಿ ।। ೧-೨೧-೧೪

ಗೋವನ್ನು ಉಪಯೋಗಿಸಿ ಅವರೆಲ್ಲರೂ “ಗೋವನ್ನು ಸಿಂಹವು ಕೊಂದುಹಾಕಿತು. ಇದು ಆ ಗೋವಿನ ಕರು. ಇದನ್ನು ನೀನು ಸ್ವೀಕರಿಸಬೇಕು” ಎಂದು ಗುರುವಿಗೆ ನಿವೇದಿಸಿದರು.

ಆರ್ಜವಾತ್ಸ ತು ತಂ ವತ್ಸಂ ಪ್ರತಿಜಗ್ರಾಹ ವೈ ದ್ವಿಜಃ ।
ಮಿಥ್ಯೋಪಚರ್ಯತೇ ತಂ ತು ಗುರುಮನ್ಯಾಯತೋ ದ್ವಿಜಾಃ ।
ಕಾಲೇನ ಸಮಯುಜ್ಯಂತ ಸರ್ವ ಏವಾಯುಷಃ ಕ್ಷಯೇ ।। ೧-೨೧-೧೫

ಸರಳತೆಯಿಂದ ದ್ವಿಜನು ಆ ಕರುವನ್ನು ಸ್ವೀಕರಿಸಿದನು. ಹೀಗೆ ಆ ಎಲ್ಲ ದ್ವಿಜರು ಅನ್ಯಾಯದಿಂದ ಗುರುವಿಗೆ ಮೋಸಮಾಡಿ, ಆಯಸ್ಸು ಕಳೆಯಲು ಕಾಲಕ್ಕೆ ವಶರಾದರು.

ತೇ ವೈ ಕ್ರೂರತಯಾ ಹಿಂಸ್ರಾ ಅನಾರ್ಯತ್ವಾದ್ಗುರೌ ತಥಾ ।
ಉಗ್ರಾ ಹಿಂಸಾವಿಹಾರಾಶ್ಚ ಸಪ್ತಾಜಾಯಂತ ಸೋದರಾಃ ।। ೧-೨೧-೧೬

ತಮ್ಮ ಕ್ರೂರದೇ ಮತ್ತು ಗುರುವಿನೊಂದಿಗೆ ಅನಾರ್ಯರಾಗಿ ವರ್ತಿಸಿದುದರಿಂದ ಆ ಏಳು ಸಹೋದರರು ಉಗ್ರರೂ ಹಿಂಸಾವಿಹಾರಿಗಳೂ ಆದ ವ್ಯಾಧರಾಗಿ ಹುಟ್ಟಿದರು.

ಲುಬ್ಧಕಸ್ಯಾತ್ಮಜಾಸ್ತಾತ ಬಲವಂತೋ ಮನಸ್ವಿನಃ ।
ಪಿತೄನಭ್ಯರ್ಚ್ಯ ಧರ್ಮೇಣ ಪ್ರೋಕ್ಷಯಿತ್ವಾ ಚ ಗಾಂ ತದಾ ।। ೧-೨೧-೧೭
ಸ್ಮೃತಿಃ ಪ್ರತ್ಯವಮರ್ಶಶ್ಚ ತೇಷಾಂ ಜಾತ್ಯಂತರೇಽಭವತ್ ।
ಜಾತಾ ವ್ಯಾಧಾ ದಶಾರ್ಣೇಷು ಸಪ್ತ ಧರ್ಮವಿಚಕ್ಷಣಾಃ ।। ೧-೨೧-೧೮

ಅಯ್ಯಾ! ಅವರು ವ್ಯಾಧನ ಬಲವಂತ ಮತ್ತು ಮನಸ್ವೀ ಮಕ್ಕಳಾಗಿ ಹುಟ್ಟಿದರು. ಪಿತ್ರುಗಳನ್ನು ಅರ್ಚಿಸಿ ಆ ಗೋವಿಗೆ ಪ್ರೋಕ್ಷಣೆ ಮಾಡಿದುದರ ಧರ್ಮದಿಂದ ಅವರಿಗೆ ಪುನರ್ಜನ್ಮದಲ್ಲಿಯೂ ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮಗಳ ಸ್ಮೃತಿಯು ಇತ್ತು. ಆ ಏಳು ಮಂದಿಯೂ ದಶಾರ್ಣ ದೇಶದ ಧರ್ಮಕುಶಲ ವ್ಯಾಧರಾಗಿ ಜನಿಸಿದರು.

ಸ್ವಕರ್ಮನಿರತಾಃ ಸರ್ವೇ ಲೋಭಾನೃತವಿವರ್ಜಿತಾಃ ।
ತಾವನ್ಮಾತ್ರಂ ಪ್ರಕುರ್ವಂತಿ ಯಾವತಾ ಪ್ರಾಣಧಾರಣಮ್ ।। ೧-೨೧-೧೯

ಅವರೆಲ್ಲರೂ ಲೋಭ ಮತ್ತು ಅಸತ್ಯವನ್ನು ತೊರೆದು ಸ್ವಕರ್ಮನಿರತರಾಗಿದ್ದುಕೊಂಡು ಪ್ರಾಣಧಾರಣೆಗೆ ಸಾಕಾಗುವಷ್ಟು ಮಾತ್ರ ಆಹಾರ ಸೇವಿಸುತ್ತಿದ್ದರು.

ಶೇಷಂ ಧ್ಯಾನಪರಾಃ ಕಾಲಾಮನುಧ್ಯಾಯಂತಿ ಕರ್ಮ ತತ್ ।
ನಾಮಧೇಯಾನಿ ಚಾಪ್ಯೇಷಾಮಿಮಾನ್ಯಾಸನ್ನರಾಧಿಪ ।। ೧-೨೧-೨೦

ನರಾಧಿಪ! ಉಳಿದ ಸಮಯದಲ್ಲಿ ಅವರು ಧ್ಯಾನಪರರಾಗಿದ್ದು ಕರ್ಮದ ಚಿಂತನೆಯನ್ನು ಮಾಡುತ್ತಿದ್ದರು. ಈ ಜನ್ಮದಲ್ಲಿ ಅವರ ನಾಮಧೇಯಗಳು ಈ ರೀತಿ ಇದ್ದವು:

ನಿರ್ವೈರೋ ನಿರ್ವೃತಿಃ ಶಾಂತೋ ನಿರ್ಮನ್ಯುಃ ಕೃತಿರೇವ ಚ ।
ವೈಧಸೋ ಮಾತೃವರ್ತೀ ಚ ವ್ಯಾಧಾಃ ಪರಮಧಾರ್ಮಿಕಾಃ ।। ೧-೨೧-೨೧

ನಿರ್ವೈರ, ನಿವೃತ್ತಿ, ಶಾಂತ, ನಿರ್ಮನ್ಯು, ವೈಧಸ ಮತ್ತು ಮಾತೃವರ್ತೀ. ಹೆಸರಿಗೆ ತಕ್ಕಂತೆ ಅವರ ಕೃತಿಗಳೂ ಆಗಿದ್ದವು.

ತೈರೇವಮುಷಿತೈಸ್ತಾತ ಹಿಂಸಾಧಮರತೈಃ ಸದಾ ।
ಮಾತಾ ಚ ಪೂಜಿತಾ ವೃದ್ಧಾ ಪಿತಾ ಚ ಪರಿತೋಷಿತಃ ।। । ೧-೨೧-೨೨

ಅಯ್ಯಾ! ಹೀಗೆ ದಶಾರ್ಣದಲ್ಲಿ ಅವರು ಹಿಂಸಾವೃತ್ತಿಯಲ್ಲಿಯೂ ಸದಾ ಧರ್ಮದ ಪಾಲನೆಮಾಡುತ್ತಾ, ತಾಯಿಯನ್ನು ಪೂಜಿಸುತ್ತಾ ವೃದ್ಧ ತಂದೆಯನ್ನೂ ಸಂತುಷ್ಟಗೊಳಿಸುತ್ತಿದ್ದರು.

ಯದಾ ಮಾತಾ ಪಿತಾ ಚೈವ ಸಂಯುಕ್ತೌ ಕಾಲಧರ್ಮಣಾ ।
ತದಾ ಧನೂಂಷಿ ತೇ ತ್ಯಕ್ತ್ವಾ ವನೇ ಪ್ರಾಣಾನವಾಸೃಜನ್ ।। ೧-೨೧-೨೩

ಮಾತಾ-ಪಿತರಿಬ್ಬರೂ ಕಾಲಧರ್ಮಕ್ಕೊಳಗಾದ ನಂತರ ಅವರು ತಮ್ಮ ತಮ್ಮ ಧನುಸ್ಸುಗಳನ್ನು ತೊರೆದು ವನದಲ್ಲಿ ಪ್ರಾಣತ್ಯಾಗಮಾಡಿದರು.

ಶುಭೇನ ಕರ್ಮಣಾ ತೇನ ಜಾತಾ ಜಾತಿಸ್ಮರಾ ಮೃಗಾಃ ।
ತ್ರಾಸಾನುತ್ಪಾದ್ಯ ಸಂವಿಗ್ನಾ ರಮ್ಯೇ ಕಾಲಂಜರೇ ಗಿರೌ ।। ೧-೨೧-೨೪

ಅವರ ಶುಭಕರ್ಮಗಳಿಂದಾಗಿ ಅವರು ಪೂರ್ವಜನ್ಮದ ಸ್ಮರಣೆಯಿರುವ ಮೃಗಗಳಾಗಿ ಜನಿಸಿದರು. ಇನ್ನೊಬ್ಬರಿಗೆ ತ್ರಾಸನ್ನು ನೀಡುತ್ತಿದ್ದುದರಿಂದ ರಮ್ಯ ಕಾಲಂಜರ ಗಿರಿಯಲ್ಲಿ ಸದಾ ಉದ್ವಿಗ್ನರಾಗಿಯೇ ಇರುತ್ತಿದ್ದರು.

ಉನ್ಮುಖೋ ನಿತ್ಯವಿತ್ರಸ್ತಃ ಸ್ತಬ್ಧಕರ್ಣೋ ವಿಲೋಚನಃ ।
ಪಂಡಿತೋ ಘಸ್ಮರೋ ನಾದೀ ನಾಮತಸ್ತೇಽಭವನ್ಮೃಗಾಃ ।। ೧-೨೧-೨೫

ಆ ಮೃಗಗಳ ಹೆಸರುಗಳು ಉನ್ಮುಖ, ನಿತ್ಯವಿತ್ರಸ್ತ, ಸಬ್ಧಕರ್ಣ, ವಿಲೋಚನ, ಪಂಡಿತ. ಘಸ್ಮರ ಮತ್ತು ನಾದೀ ಎಂದಿತ್ತು.

ತಮೇವಾರ್ಥಮನುಧ್ಯಾಯಂತೋ ಜಾತಿಸ್ಮರಣಸಂಭವಮ್ ।
ಆಸನ್ವನಚರಾಃ ಕ್ಷಾಂತಾ ನಿರ್ದ್ವಂದ್ವಾ ನಿಷ್ಪರಿಗ್ರಹಾಃ ।। ೧-೨೧-೨೬

ಹಿಂದಿನ ಜನ್ಮವನ್ನು ಸ್ಮರಿಸುತ್ತಾ ಮತ್ತು ಕರ್ಮಫಲಗಳನ್ನು ಧ್ಯಾನಿಸುತ್ತಾ ಆ ವನಚರ ಮೃಗಗಳು ಕಷ್ಟಗಳನ್ನು ಸೈರಿಸಿಕೊಂಡು, ನಿರ್ದ್ವಂದ್ವರಾಗಿಯೂ ನಿಷ್ಪರಿಗ್ರಹರಾಗಿಯೂ ಇದ್ದವು.

ತೇ ಸರ್ವೇ ಶುಭಕರ್ಮಾಣಃ ಸಧರ್ಮಾಣೋ ವನೇಚರಾಃ ।
ಯೋಗಧರ್ಮಮನುಪ್ರಾಪ್ತಾ ವಿಹರಂತಿ ಸ್ಮ ತತ್ರ ಹ ।। ೧-೨೧-೨೭

ಆ ಎಲ್ಲ ವನಚರರೂ ಶುಭಕರ್ಮಿಗಳಾಗಿದ್ದರು. ಒಂದೇಧರ್ಮವನ್ನು ಅನುಸರಿಸುತ್ತಿದ್ದರು. ಯೋಗಧರ್ಮವನ್ನು ಹೊಂದಿ ಅಲ್ಲಿ ಇಲ್ಲಿ ವಿಹರಿಸುತ್ತಿದ್ದರು.

ಜಹುಃ ಪ್ರಾಣಾನ್ಮರುಂ ಸಾಧ್ಯ ಲಘ್ವಾಹಾರಾಸ್ತಪಸ್ವಿನಃ ।
ತೇಷಾಂ ಮರುಂ ಸಾಧಯತಾಂ ಪದಸ್ಥಾನಾನಿ ಭಾರತ ।
ತಥೈವಾದ್ಯಾಪಿ ದೃಶ್ಯಂತೇ ಗಿರೌ ಕಾಲಂಜರೇ ನೃಪ ।। ೧-೨೧-೨೮

ಭಾರತ! ಅವು ಲಘುಆಹಾರಿಗಳಾಗಿ ನೀರನ್ನೂ ಸೇವಿಸದೇ ತಪಸ್ಸನ್ನಾಚರಿಸಿ ಪ್ರಾಣಗಳನ್ನು ತೊರೆದವು. ನೃಪ! ನೀರನ್ನು ಕುಡಿಯದೇ ಇರುವ ವ್ರತವನ್ನು ಸಾಧಿಸುತ್ತಿದ್ದ ಅವುಗಳ ಗೊರಸಿನ ಗುರುತುಗಳು ಈಗಲೂ ಕಾಲಂಜರ ಪರ್ವತದಲ್ಲಿ ಕಾಣಸಿಗುತ್ತವೆ.

ಕರ್ಮಣಾ ತೇನ ತೇ ತಾತ ಶುಭೇನಾಶುಭವರ್ಜಿತಾಃ ।
ಶುಭಾಚ್ಛುಭತರಾಂ ಯೋನಿಂ ಚಕ್ರವಾಕತ್ವಮಾಗತಾಃ ।। ೧-೨೧-೨೯

ಅಯ್ಯಾ! ತಮ್ಮ ಆ ಶುಭ ಕರ್ಮಗಳಿಂದಾಗಿ ಅವು ಅಶುಭ ಯೋನಿಯನ್ನು ಬಿಟ್ಟು ಅತ್ಯಂತ ಶುಭವಾದ ಚಕ್ರವಾಕದ ಯೋನಿಯಲ್ಲಿ ಜನಿಸಿದರು.

ಶುಭೇ ದೇಶೇ ಶರದ್ವೀಪೇ ಸಪ್ತೈವಾಸಂಜಲೌಕಸಃ ।
ತ್ಯಕ್ತ್ವಾ ಸಹಚರೀಧರ್ಮಂ ಮುನಯೋ ಬ್ರಹ್ಮಚಾರಿಣಃ।। ೧-೨೧-೩೦ ।।

ಆ ಏಳೂ ಮಂದಿ ಶುಭ ದೇಶ ಶರದ್ವೀಪದಲ್ಲಿ ಜಲಚರ ಪಕ್ಷಿಗಳಾಗಿ ಹುಟ್ಟಿದರು. ಆಗಲೂ ಕೂಡ ಆ ಮುನಿಗಳು ಸಹಚರೀಧರ್ಮವನ್ನು ತ್ಯಜಿಸಿ ಬ್ರಹ್ಮಚಾರಿಗಳಾಗಿದ್ದರು.

ನಿಃಸ್ಪೃಹೋ ನಿರ್ಮಮಃ ಕ್ಷಾಂತೋ ನಿರ್ದ್ವಂದ್ವೋ ನಿಷ್ಪರಿಗ್ರಹಃ ।
ನಿರ್ವೃತ್ತಿರ್ನಿಭೃತಶ್ಚೈವ ಶಕುನಾ ನಾಮತಃ ಸ್ಮೃತಾಃ ।। ೧-೨೧-೩೧

ನಿಃಸ್ಪೃಹ, ನಿರ್ಮಮ, ಕ್ಷಾಂತ, ನಿರ್ದ್ವಂದ್ವ, ನಿಷ್ಪರಿಗ್ರಹ, ನಿರ್ವೃತ್ತಿ, ಮತ್ತು ನಿಭೃತ ಎಂದು ಅವರ ಹೆಸರುಗಳಾಗಿದ್ದವು.

ತೇ ತತ್ರ ಪಕ್ಷಿಣಃ ಸರ್ವೇ ಶಕುನಾ ಧರ್ಮಚಾರಿಣಃ ।
ನಿರಾಹಾರಾ ಜಹುಃ ಪ್ರಾಣಾಂಸ್ತಪೋಯುಕ್ತಾಃ ಸರಿತ್ತಟೇ ।। ೧-೨೧-೩೨

ಆ ಎಲ್ಲ ಧರ್ಮಚಾರೀ ಪಕ್ಷಿಗಳೂ ನದೀ ತೀರದಲ್ಲಿ ನಿರಾಹಾರರಾಗಿ ತಪೋಯುಕ್ತರಾಗಿ ಪ್ರಾಣಗಳನ್ನು ತೊರೆದವು.

ಅಥ ತೇ ಸೋದರಾ ಜಾತಾ ಹಂಸಾ ಮಾನಸಚಾರಿಣಃ ।
ಜಾತಿಸ್ಮರಾಃ ಸುಸಂಯುಕ್ತಾಃ ಸಪ್ತೈವ ಬ್ರಹ್ಮಚಾರಿಣಃ ।। ೧-೨೧-೩೩

ನಂತರ ಆ ಸೋದರರು ಮಾನಸಸರೋವರದಲ್ಲಿ ಸಂಚರಿಸುವ ಹಂಸಗಳಾಗಿ ಹುಟ್ಟಿದರು. ಆ ಏಳು ಬ್ರಹ್ಮಚಾರಿಗಳಿಗೂ ಈ ಜನ್ಮದಲ್ಲಿಯೂ ತಮ್ಮ ಹಿಂದಿನ ಜನ್ಮದ ಸ್ಮರಣೆಯಿತ್ತು.

ವಿಪ್ರಯೋನೌ ಯತೋ ಮೋಹಾನ್ಮಿಥ್ಯೋಪಚರಿತೋ ಗುರುಃ ।
ತಿರ್ಯಗ್ಯೋನೌ ತತೋ ಜಾತಾಃ ಸಂಸಾರೇ ಪರಿಬಭ್ರಮುಃ ।। ೧-೨೧-೩೪

ಅವರು ವಿಪ್ರಯೋನಿಯಲ್ಲಿ ಹುಟ್ಟಿದ್ದಾಗ ಮೋಹದಿಂದ ಗುರುವಿನೊಂದಿಗೆ ಮಿಥ್ಯವಾಗಿ ನಡೆದುಕೊಂಡಿದ್ದರು. ಆದುದರಿಂದ ಅವರು ತಿರ್ಯಗ್ಯೋನಿಗಳಲ್ಲಿ ಹುಟ್ಟಿ ಸಂಸಾರದಲ್ಲಿ ತಿರುಗುತ್ತಿದ್ದರು.

ಯತಶ್ಚ ಪಿತೃವಾಕ್ಯಾರ್ಥಃ ಕೃತಃ ಸ್ವಾರ್ಥೇ ವ್ಯವಸ್ಥಿತೈಃ ।
ತತೋ ಜ್ಞಾನಂ ಚ ಜಾತಿಂ ಚ ತೇ ಹಿ ಪ್ರಾಪುರ್ಗುಣೋತ್ತರಾಮ್ ।। ೧-೨೧-೩೫

ಸ್ವಾರ್ಥದಲ್ಲಿ ತೊಡಗಿದ್ದರೂ ಪಿತೃಗಳ ಶ್ರಾದ್ಧದ ಸಂಕಲ್ಪವನ್ನು ಹೇಳಿಕೊಂಡಿದ್ದರು. ಆದುದರಿಂದ ಅವರಿಗೆ ಮುಂದೆ ಮುಂದೆ ಉತ್ಕೃಷ್ಟ ಜ್ಞಾನ ಮತ್ತು ಜನ್ಮಗಳು ದೊರೆಯತೊಡಗಿದವು.

ಸುಮನಾಃ ಶುಚಿವಾಕ್ಛುದ್ಧಃ ಪಂಚಮಶ್ಛಿದ್ರದರ್ಶನಃ ।
ಸುನೇತ್ರಶ್ಚ ಸ್ವತಂತ್ರಶ್ಚ ಶಕುನಾ ನಾಮತಃ ಸ್ಮೃತಾಃ ।। ೧-೨೧-೩೬

ಆ ಹಂಸಹಳ ಹೆಸರುಗಳು ಇಂತಿದ್ದವು: ಸುಮನಾ, ಶುಚಿವಾಕ್, ಶುದ್ಧ, ಪಂಚಮ, ಛಿದ್ರದರ್ಶನ, ಸುನೇತ್ರ ಮತ್ತು ಸ್ವತಂತ್ರ.

ಪಂಚಮಃ ಪಾಂಚಿಕಸ್ತತ್ರ ಸಪ್ತಜಾತಿಷ್ವಜಾಯತ ।
ಷಷ್ಠಸ್ತು ಕಂಡರೀಕೋಽಭೂದ್ಬ್ರಹ್ಮದತ್ತಸ್ತು ಸಪ್ತಮಃ ।। ೧-೨೧-೩೭

ಐದನೆಯವನು4 ತನ್ನ ಏಳನೆಯ ಜನ್ಮದಲ್ಲಿ ಪಾಂಚಿಕನಾಗಿ ಹುಟ್ಟಿದನು. ಆರನೆಯವನು5 ಕಂಡರೀಕನಾದನು ಮತ್ತು ಏಳನೆಯ ಜನ್ಮದಲ್ಲಿ ಬ್ರಹ್ಮದತ್ತನಾದನು.

ತೇಷಾಂ ತು ತಪಸಾ ತೇನ ಸಪ್ತಜಾತಿಕೃತೇನ ವೈ ।
ಯೋಗಸ್ಯ ಚಾಪಿ ನಿರ್ವೃತ್ತ್ಯಾ ಪ್ರತಿಭಾನಾಚ್ಚ ಶೋಭನಾತ್ ।। ೧-೨೧-೩೮
ಪೂರ್ವಜಾತಿಷು ಯದ್ಬ್ರಹ್ಮ ಶ್ರುತಂ ಗುರುಕುಲೇಷು ವೈ ।
ತಥೈವಾವಸ್ಥಿತಾ ಬುದ್ಧಿಃ ಸಂಸಾರೇಷ್ವಪಿ ವರ್ತತಾಮ್ ।। ೧-೨೧-೩೯

ಆ ಏಳು ಜನ್ಮಗಳಲ್ಲಿ ಮಾಡಿದ್ದ ತಪಸ್ಸಿನ ಯೋಗದಿಂದ ಮತ್ತು ಹಿಂದಿನ ಜನ್ಮಗಳ ಸ್ಮರಣೆಯಿಂದ, ಅವರು ಸಂಸಾರದಲ್ಲಿ ತಿರುಗುತ್ತಿದ್ದರೂ, ಪೂರ್ವಜನ್ಮದಲ್ಲಿ ಗುರುಕುಲದಲ್ಲಿ ಯಾವ ವೇದವನ್ನು ಕೇಳಿದ್ದರೋ ಅದೇ ಅವರ ಬುದ್ಧಿಯಲ್ಲಿ ವ್ಯವಸ್ಥಿತವಾಗಿತ್ತು. ಅದು ಬದಲಾಗಿರಲಿಲ್ಲ.

ತೇ ಬ್ರಹ್ಮಚಾರಿಣಃ ಸರ್ವೇ ವಿಹಂಗಾ ಬ್ರಹ್ಮವಾದಿನಃ ।
ಯೋಗಧರ್ಮಮನುಧ್ಯಾಂತೋ ವಿಹರಂತಿ ಸ್ಮ ತತ್ರ ಹ ।। ೧-೨೧-೪೦

ಆ ಎಲ್ಲ ವಿಹಂಗಗಳೂ ಬ್ರಹ್ಮಚಾರಿಗಳಾಗಿ ಬ್ರಹ್ಮವಾದಿಗಳಾಗಿ ಯೋಗಧರ್ಮವನ್ನು ಧ್ಯಾನಿಸುತ್ತಾ ಅಲ್ಲಿ ವಿಹರಿಸುತ್ತಿದ್ದವು.

ತೇಷಾಂ ತತ್ರ ವಿಹಂಗಾನಾಂ ಚರತಾಂ ಸಹಚಾರಿಣಾಮ್ ।
ನೀಪಾನಾಮೀಶ್ವರೋ ರಾಜಾ ವಿಭ್ರಾಜಃ ಪೌರವಾನ್ವಯಃ ।। ೧-೨೧-೪೧
ವಿಭ್ರಾಜಮಾನೋ ವಪುಷಾ ಪ್ರಭಾವೇನ ಸಮನ್ವಿತಃ ।
ಶ್ರೀಮಾನಂತಃಪುರವೃತೋ ವನಂ ತತ್ಪ್ರವಿವೇಶ ಹ ।। ೧-೨೧-೪೨

ಹೀಗೆ ಆ ಪಕ್ಷಿಗಳು ಅಲ್ಲಿ ಸಹಚಾರಿಗಳಾಗಿ ಸಂಚರಿಸುತ್ತಿರಲು ಪೌರವಾನ್ವಯದ ನೀಪರ ಈಶ್ವರ ರಾಜ ವಿಭ್ರಾಜನು ತನ್ನ ಸಂಪದ್ಭರಿತ ಅಂತಃಪುರದ ಜನರೊಂದಿಗೆ ಪ್ರಭಾವದಿಂದ ಸಮನ್ವಿತನಾಗಿ ವಿಭ್ರಾಜಮಾನ ಶರೀರಕಾಂತಿಯುಕ್ತನಾಗಿ ಆ ವನವನ್ನು ಪ್ರವೇಶಿಸಿದನು.

ಸ್ವತಂತ್ರಶ್ಚ ವಿಹಂಗೋಽಸೌ ಸ್ಪೃಹಯಾಮಾಸ ತಂ ನೃಪಮ್ ।
ದೃಷ್ಟ್ವಾ ಯಾಂತಂ ಶ್ರಿಯೋಪೇತಂ ಭವೇಯಮಹಮೀದೃಶಃ ।। ೧-೨೧-೪೩
ಯದ್ಯಸ್ತಿ ಸುಕೃತಂ ಕಿಂಚಿತ್ತಪೋ ವಾ ನಿಯಮೋಽಪಿ ವಾ ।
ಖಿನ್ನೋಽಸ್ಮಿ ಹ್ಯುಪವಾಸೇನ ತಪಸಾ ನಿಷ್ಫಲೇನ ಚ ।। ೧-೨೧-೪೪

ಆಗ ಸ್ವತಂತ್ರ ಎಂಬ ಪಕ್ಷಿಯು ಅಲ್ಲಿಗೆ ಬಂದಿದ್ದ ಲಕ್ಮೀವಾನ ರಾಜನನ್ನು ನೋಡಿ ಅವನಂತೆ ಆಗಲು ಬಯಸಿದನು. “ನನ್ನಲ್ಲಿ ಸ್ವಲ್ಪವಾದರೂ ಸುಕೃತ, ತಪಸ್ಸು ಅಥವಾ ನಿಯಮಪಾಲನೆಯ ಫಲವಿದ್ದರೆ ನಾನು ಈ ರಾಜನಂತೆಯೇ ಆಗಲಿ. ಈಗ ನಾನು ಈ ಉಪವಾಸ ಮತ್ತು ನಿಷ್ಫಲ ತಪಸ್ಸಿನಿಂದ ಖಿನ್ನನಾಗುತ್ತಿದ್ದೇನೆ” ಎಂದು ಯೋಚಿಸಿತು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ಹರಿವಂಶಪರ್ವಣಿ ಪಿತೃಕಲ್ಪೇ ಏಕವಿಂಶೋಽಧ್ಯಾಯಃ


  1. ಭಾರದ್ವಾಜ, ಕೌಶಿಕ, ವ್ಯಾಧ, ಮೃಗ, ಚಕ್ರವಾಕ, ಹಂಸ ಮತ್ತು ಶ್ರೋತ್ರೀಯ - ಇವೇ ಬ್ರಹ್ಮದತ್ತನ ಏಳು ಜನ್ಮಗಳು. ↩︎

  2. ಆಕಾಶದಲ್ಲಿ ಓಡಾಡುವ ಸ್ವಭಾವವುಳ್ಳ ಪರಲೋಕಾರ್ಥೀ (ಗೀತಾ ಪ್ರೆಸ್). ↩︎

  3. ವಿಶ್ವಾಮಿತ್ರನು ತನ್ನ ಐವತ್ತು ಪುತ್ರರಿಗೆ ಶಾಪವನ್ನು ಕೊಡುವಾಗ ಹೇಳಿದ್ದನು: “ನಿಮ್ಮ ವಂಶಗಳು ನಾಶವಾಗಿ ಹೋಗಲಿ, ನೀವು ನಿಮ್ಮ ಸಂತಾನಗಳನ್ನು ಭಕ್ಷಿಸಿರಿ ಮತ್ತು ಈಗ ನಿಮ್ಮ ಮಕ್ಕಳು ಬ್ರಾಹ್ಮಣರಾಗದಿರಲಿ”. ↩︎

  4. ಕವಿ . ↩︎

  5. ಖಸೃಮ . ↩︎