020: ಪೂಜನೀಯೋಪಾಖ್ಯಾನಂ; ಚಟಕಾಖ್ಯಾನಂ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಖಿಲಭಾಗೇ ಹರಿವಂಶಃ

ಹರಿವಂಶ ಪರ್ವ

ಅಧ್ಯಾಯ 20

ಸಾರ

ಮಾರ್ಕಂಡೇಯ ಉವಾಚ
ತಸ್ಮಿನ್ನಂತರ್ಹಿತೇ ದೇವೇ ವಚನಾತ್ತಸ್ಯ ವೈ ಪ್ರಭೋಃ ।
ಚಕ್ಷುರ್ದಿವ್ಯಂ ಸವಿಜ್ಞಾನಂ ಪ್ರಾದುರಾಸೀತ್ತದಾ ಮಮ । ೧-೨೦-೧

ಮಾರ್ಕಂಡೇಯನು ಹೇಳಿದನು: “ಆ ದೇವನು ಅಂತರ್ಧಾನನಾಗಲು, ಆ ಪ್ರಭುವಿನ ದಿವ್ಯ ವಚನದಂತೆ ನನಗೆ ವಿಜ್ಞಾನಮಯ ಕಣ್ಣು ಪ್ರಾಪ್ತವಾಯಿತು.

ತತೋಽಹಂ ತಾನಪಶ್ಯಂ ವೈ ಬ್ರಾಹ್ಮಣಾನ್ ಕೌಶಿಕಾತ್ಮಜಾನ್ ।
ಆಪಗೇಯ ಕುರುಕ್ಷೇತ್ರೇ ಯಾನುವಾಚ ವಿಭುರ್ಮಮ ।। ೧-೨೦-೨

ಆಪಗೇಯ! ಆಗ ನಾನು ವಿಭುವು ನನಗೆ ಯಾರ ಕುರಿತು ಹೇಳಿದ್ದನೋ ಆ ಬ್ರಾಹ್ಮಣ ಕೌಶಿಕಾತ್ಮಜರನ್ನು ಕುರುಕ್ಷೇತ್ರದಲ್ಲಿ ನೋಡಿದೆನು.

ಬ್ರಹ್ಮದತ್ತೋಽಭವದ್ರಾಜಾ ಯಸ್ತೇಷಾಂ ಸಪ್ತಮೋ ದ್ವಿಜಃ ।
ಪಿತೃವರ್ತೀತಿ ವಿಖ್ಯಾತೋ ನಾಮ್ನಾ ಶೀಲೇನ ಕರ್ಮಣಾ ।। ೧-೨೦-೩

ಅವರಲ್ಲಿ ಏಳನೆಯ ಪಿತೃವರ್ತಿ ಎಂಬ ಹೆಸರಿನಿಂದ ವಿಖ್ಯಾತನಾದ ದ್ವಿಜನು ತನ್ನ ಶೀಲಕರ್ಮಗಳಿಂದ ಅವನ ಏಳನೇ ಜನ್ಮದಲ್ಲಿ ಬ್ರಹ್ಮದತ್ತನೆಂಬ ರಾಜನಾಗಿದ್ದನು.

ಶುಕಸ್ಯ ಕನ್ಯಾ ಕೃತ್ವೀ ತಂ ಜನಯಾಮಾಸ ಪಾರ್ಥಿವಮ್ ।
ಅಣುಹಾತ್ಪಾರ್ಥಿವಶ್ರೇಷ್ಠಾತ್ಕಾಂಪಿಲ್ಯೇ ನಗರೋತ್ತಮೇ ।। ೧-೨೦-೪

ಉತ್ತಮ ಕಾಂಪಿಲ್ಯ ನಗರದಲ್ಲಿ ಅಣುಹಾ ಎಂಬ ಶ್ರೇಷ್ಠ ಪಾರ್ಥಿವನು ಶುಕನ ಕನ್ಯೆ ಕೃತ್ವೀ ಎನ್ನುವವಳಲ್ಲಿ ಪಾರ್ಥಿವ ಬ್ರಹ್ಮದತ್ತನನ್ನು ಹುಟ್ಟಿಸಿದ್ದನು.””

ಭೀಷ್ಮ ಉವಾಚ
ಯಥೋವಾಚ ಮಹಾಭಾಗೋ ಮಾರ್ಕಂಡೇಯೋ ಮಹಾತಪಾಃ ।
ತಸ್ಯ ವಂಶಮಹಂ ರಾಜನ್ಕೀರ್ತಯಿಷ್ಯಾಮಿ ತಚ್ಛೃಣು ।। ೧-೨೦-೫

ಭೀಷ್ಮನು ಹೇಳಿದನು: “ರಾಜನ್! ಮಹಾಭಾಗ ಮಹಾತಪಸ್ವಿ ಮಾರ್ಕಂಡೇಯನು ಅವನ ವಂಶದ ಕುರಿತು ಹೇಳಿದುದನ್ನು ನಾನು ನಿನಗೆ ಹೇಳುತ್ತೇನೆ. ಕೇಳು.”

ಯುಧಿಷ್ಠಿರ ಉವಾಚ
ಅಣುಹಃ ಕಸ್ಯ ವೈ ಪುತ್ರಃ ಕಸ್ಮಿನ್ಕಾಲೇ ಬಭೂವ ಹ ।
ರಾಜಾ ಧರ್ಮಭೃತಾಂ ಶ್ರೇಷ್ಠೋ ಯಸ್ಯ ಪುತ್ರೋ ಮಹಾಯಶಾಃ ।। ೧-೨೦-೬

ಯುಧಿಷ್ಠಿರನು ಹೇಳಿದನು: “ಯಾರ ಮಹಾಯಶ ಪುತ್ರನು ಬ್ರಹ್ಮದತ್ತನೋ ಆ ಧರ್ಮಭೃತರಲ್ಲಿ ಶ್ರೇಷ್ಠ ಅಣುಹನು ಯಾರ ಪುತ್ರ? ಮತ್ತು ಅವನು ಯಾವ ಕಾಲದಲ್ಲಿ ರಾಜನಾಗಿದ್ದನು?

ಬ್ರಹ್ಮದತ್ತೋ ನರಪತಿಃ ಕಿಂವೀರ್ಯಃ ಸ ಬಭೂವ ಹ ।
ಕಥಂ ಚ ಸಪ್ತಮಸ್ತೇಷಾಂ ಸ ಬಭೂವ ನರಾಧಿಪಃ ।। ೧-೨೦-೭

ನರಪತಿ ಬ್ರಹ್ಮದತ್ತನ ಪರಾಕ್ರಮವೇನಿತ್ತು? ಆ ನರಾಧಿಪನು ಭಾರದ್ವಾಜನ ಮಕ್ಕಳಲ್ಲಿ ಏಳನೆಯನು ಹೇಗಾದನು?

ನ ಹ್ಯಲ್ಪವೀರ್ಯಾಯ ಶುಕೋ ಭಗವಾಽಣ್ಲ್ಲೋಕಪೂಜಿತಃ ।
ಕನ್ಯಾಂ ಪ್ರಾದಾದ್ಯದ್ಯೋಗಾತ್ಮಾ ಕೃತ್ವೀಂ ಕೀರ್ತಿಮತೀಂ ಪ್ರಭುಃ ।। ೧–೨೦-೮

ಲೋಕಪೂಜಿತನಾದ ಭಗವಾನ್ ಪ್ರಭು ಶುಕನು ತನ್ನ ಕೀರ್ತಿಮತೀ ಕನ್ಯೆ ಕೃತ್ವಿಯನ್ನು ಓರ್ವ ಸಾಧಾರಣ ಪರಾಕ್ರಮಿಗೆ ಕೊಟ್ಟಿರಲಿಕ್ಕಿಲ್ಲ.

ಏತದಿಚ್ಛಾಮ್ಯಹಂ ಶ್ರೋತುಂ ವಿಸ್ತರೇಣ ಮಹಾದ್ಯುತೇ ।
ಬ್ರಹ್ಮದತ್ತಸ್ಯ ಚರಿತಂ ತದ್ಭವಾನ್ವಕ್ಕ್ತುಮರ್ಹತಿ ।। ೧-೨೦-೯

ಮಹಾದ್ಯುತೇ! ಇದನ್ನು ವಿಸ್ತಾರವಾಗಿ ಕೇಳಬಯುಸುತ್ತೇನೆ. ಬ್ರಹ್ಮದತ್ತನ ಚರಿತವನ್ನು ನೀನು ಹೇಳಬೇಕು.

ಯಥಾ ಚ ವರ್ತಮಾನಾಸ್ತೇ ಸಂಸಾರೇ ಚ ದ್ವಿಜಾತಯಃ ।
ಮಾರ್ಕಂಡೇಯೇನ ಕಥಿತಾಸ್ತದ್ಭವಾನ್ಪ್ರಬ್ರವೀತು ಮೇ ।। ೧-೨೦-೧೦

ಆ ದ್ವಿಜರು ಸಂಸಾರದಲ್ಲಿ ಹೇಗೆ ಇದ್ದರು ಎನ್ನುವುದನ್ನು ಮಾರ್ಕಂಡೇಯನು ನಿನಗೆ ಹೇಳಿದಂತೆ ನೀನು ನನಗೆ ಹೇಳಬೇಕು.”

ಭೀಷ್ಮ ಉವಾಚ
ಪ್ರತೀಪಸ್ಯ ತು ರಾಜರ್ಷೇಸ್ತುಲ್ಯಕಾಲೋ ನರಾಧಿಪ ।
ಪಿತಾಮಹಸ್ಯ ಮೇ ರಾಜನ್ಬಭೂವೇತಿ ಮಯಾ ಶ್ರುತಮ್ ।। ೧-೨೦-೧೧

ಭೀಷ್ಮನು ಹೇಳಿದನು: “ರಾಜನ್! ನರಾಧಿಪ ಬ್ರಹ್ಮದತ್ತನು ನನ್ನ ಪಿತಾಮಹ ಪ್ರತೀಪನ ಸಮಕಾಲೀನನೆಂದು ನಾನು ಕೇಳಿದ್ದೇನೆ.

ಬ್ರಹ್ಮದತ್ತೋ ಮಹಾಭಾಗೋ ಯೋಗೀ ರಾಜರ್ಷಿಸತ್ತಮಃ ।
ರುತಜ್ಞಃ ಸರ್ವಭೂತಾನಾಂ ಸರ್ವಭೂತಹಿತೇ ರತಃ ।। ೧-೨೦-೧೨

ಮಹಾಭಾಗ ಯೋಗೀ ರಾಜಸತ್ತಮ ಬ್ರಹ್ಮದತ್ತನು ಸರ್ವಭೂತಗಳ ಹಿತಗಳಲ್ಲಿ ನಿರತನಾಗಿದ್ದನು. ಮತ್ತು ಅವನಿಗೆ ಎಲ್ಲ ಪ್ರಾಣಿಗಳ ಮಾತುಗಳನ್ನು ಅರ್ಥಮಾಡಿಕೊಳ್ಳುತ್ತಿದ್ದನು.

ಸಖಾಽಽಸ ಗಾಲವೋ ಯಸ್ಯ ಯೋಗಾಚಾರ್ಯೋ ಮಹಾಯಶಾಃ ।
ಶಿಕ್ಷಾಮುತ್ಪಾದ್ಯ ತಪಸಾ ಕ್ರಮೋ ಯೇನ ಪ್ರವರ್ತಿತಃ।
ಕಂಡರೀಕಶ್ಚ ಯೋಗಾತ್ಮಾ ತಸ್ಯೈವ ಸಚಿವೋ ಮಹಾನ್ ।। ೧-೨೦-೧೩

ತಪಸ್ಸಿನಿಂದ ಶಿಕ್ಷಾಕ್ರಮವನ್ನು ಹುಟ್ಟಿಸಿದ ಆ ಯೋಗಾಚಾರ್ಯ ಮಹಾಯಶಸ್ವೀ ಗಾಲವನು ಬ್ರಹ್ಮದತ್ತನ ಸಖನಾಗಿದ್ದನು ಮತ್ತು ಯೋಗಾತ್ಮಾ ಕಂಡರೀಕನು ಅವನ ಮಹಾ ಸಚಿವನಾಗಿದ್ದನು.

ಜಾತ್ಯಂತರೇಷು ಸರ್ವೇಷು ಸಖಾಯಃ ಸರ್ವ ಏವ ತೇ ।
ಸಪ್ತಜಾತಿಷು ಸಪ್ತೈಅವ ಬಭೂವುರಮಿತೌಜಸಃ ।
ಯಥೋವಾಚ ಮಹಾಭಾಗೋ ಮಾರ್ಕಂಡೇಯೋ ಮಹಾತಪಾಃ ।। ೧-೨೦-೧೪
ತಸ್ಯ ವಂಶಮಹಂ ರಾಜನ್ಕೀರ್ತಯಿಷ್ಯಾಮಿ ತಚ್ಛೃಣು ।
ಬ್ರಹ್ಮದತ್ತಸ್ಯ ಪೌರಾಣಾಂ ಪೌರವಸ್ಯ ಮಹಾತ್ಮನಃ ।। ೧-೨೦-೧೫

ಈ ಏಳು ಭಾರದ್ವಾಜ ಪುತ್ರರು ಏಳು ಜಾತಿಗಳಲ್ಲಿ ಏಳು ಬಾರಿ ಜನ್ಮತಾಳಿದರು ಮತ್ತು ಆ ಎಲ್ಲ ಅಮಿತತೇಜಸ್ವೀ ದ್ವಿಜರೂ ಈ ಎಲ್ಲ ಜನ್ಮಾಂತರಗಳಲ್ಲಿ ಪರಸ್ಪರರ ಮಿತ್ರರಾಗಿದ್ದರು. ರಾಜನ್! ಮಹಾತಪಸ್ವೀ ಮಹಾಭಾಗ ಮಾರ್ಕಂಡೆಯನು ಹೇಗೆ ಹೇಳಿದ್ದನೋ ಹಾಗೆ ಪುರುವಂಶೀಯರ ಮತ್ತು ಮಹಾತ್ಮ ಪೌರವ ಬ್ರಹ್ಮದತ್ತನ ವಂಶವನ್ನು ವರ್ಣಿಸುತ್ತೇನೆ. ಅದನ್ನು ಕೇಳು.

ಬೃಹತ್ಕ್ಷತ್ರಸ್ಯ ದಾಯಾದಃ ಸುಹೋತ್ರೋ ನಾಮ ಧಾರ್ಮಿಕಃ ।
ಸುಹೋತ್ರಸ್ಯಾಪಿ ದಾಯಾದೋ ಹಸ್ತೀ ನಾಮ ಬಭೂವ ಹ ।। ೧-೨೦-೧೬

ಬೃಹತ್ಕ್ಷತ್ರನ ಮಗನು ಸುಹೋತ್ರ ಎಂಬ ಹೆಸರಿನ ಧಾರ್ಮಿಕನು. ಸುಹೋತ್ರನಿಗೂ ಹಸ್ತೀ ಎಂಬ ಹೆಸರಿನವನು ಮಗನಾದನು.

ತೇನೇದಂ ನಿರ್ಮಿತಂ ಪೂರ್ವಂ ಹಸ್ತಿನಾಪುರಮುತ್ತಮಮ್ ।
ಹಸ್ತಿನಶ್ಚಾಪಿ ದಾಯಾದಾಸ್ತ್ರಯಃ ಪರಮಧಾರ್ಮಿಕಾಃ ।। ೧-೨೦-೧೭

ಅವನಿಂದಲೇ ಪೂರ್ವದಲ್ಲಿ ಈ ಉತ್ತಮ ಹಸ್ತಿನಾಪುರವು ನಿರ್ಮಿತಗೊಂಡಿತ್ತು. ಹಸ್ತಿಗೆ ಪರಮಧಾರ್ಮಿಕರಾದ ಮೂವರು ಪುತ್ರರಿದ್ದರು.

ಅಜಮೀಢೋ ದ್ವಿಮೀಢಶ್ಚ ಪುರುಮೀಢಸ್ತಥೈವ ಚ ।
ಅಜಮೀಢಸ್ಯ ಧೂಮಿನ್ಯಾಂ ಜಜ್ಞೇ ಬೃಹದಿಷುರ್ನೃಪ ।
ಬೃಹದ್ಧನುರ್ಬೃಹದಿಷೋಃ ಪುತ್ರಸ್ತಸ್ಯ ಮಹಾಯಶಾಃ ।। ೧-೨೦-೧೮

ಅಜಮೀಢ, ದ್ವಿಮೀಢ ಮತ್ತು ಪುರುಮೀಢ. ಅಜಮೀಢನಿಗೆ ಧೂಮಿನಿಯಲ್ಲಿ ನೃಪ ಬೃಹದಿಷುವು ಜನಿಸಿದನು. ಬೃಹದಿಷನ ಪುತ್ರನು ಮಹಾಯಶಸ್ವಿ ಬೃಹದ್ಧನುವು.

ಬೃಹದ್ಧರ್ಮೇತಿ ವಿಖ್ಯಾತೋ ರಾಜಾ ಪರಮಧಾರ್ಮಿಕಃ ।
ಸತ್ಯಜಿತ್ತನಯಸ್ತಸ್ಯ ವಿಶ್ವಜಿತ್ತಸ್ಯ ಚಾತ್ಮಜಃ ।। ೧-೨೦-೧೯

ಈ ಪರಮಧಾರ್ಮಿಕ ರಾಜನು ಬೃಹದ್ಧರ್ಮನೆಂದೂ ವಿಖ್ಯಾತನಾಗಿದ್ದನು. ಅವನ ಮಗನು ಸತ್ಯಜಿತ್ ಮತ್ತು ವಿಶ್ವಜಿತುವು ಅವನ ಮಗ.

ಪುತ್ರೋ ವಿಶ್ವಜಿತಶ್ಚಾಪಿ ಸೇನಜಿತ್ಪೃಥಿವೀಪತಿಃ ।
ಪುತ್ರಾಃ ಸೇನಜಿತಶ್ಚಾಸಂಶ್ಚತ್ವಾರೋ ಲೋಕವಿಶ್ರುತಾಃ ।। ೧-೨೦-೨೦

ವಿಶ್ವಜಿತುವಿನ ಪುತ್ರನು ಪೃಥಿವೀಪತಿ ಸೇನಜಿತುವು. ಸೇನಜಿತುವಿಗೆ ಲೋಕವಿಶ್ರುತರಾದ ನಾಲ್ವರು ಪುತ್ರರಿದ್ದರು.

ರುಚಿರಃ ಶ್ವೇತಕೇತುಶ್ಚ ಮಹಿಮ್ನಾರಸ್ತಥೈವ ಚ ।
ವತ್ಸಶ್ಚಾವಂತಕೋ ರಾಜಾ ಯಸ್ಯೈತೇ ಪರಿವತ್ಸಕಾಃ ।। ೧-೨೦-೨೧

ಅವಂತಿಯಲ್ಲಿ ವಾಸಿಸುತ್ತಿದ್ದ ರಾಜಾ ಸೇನಜಿತುವಿಗೆ ರುಚಿರ, ಶ್ವೇತಕೇತು, ಮಹಿಮ್ನಾರ ಮತ್ತು ವತ್ಸ ಎಂಬ ಹೆಸರಿನ ಪುತ್ರರಿದ್ದರು.

ರುಚಿರಸ್ಯ ತು ದಾಯಾದಃ ಪೃಥುಸೇನೋ ಮಹಾಯಶಾಃ ।
ಪೃಥುಸೇನಸ್ಯ ಪಾರಸ್ತು ಪಾರಾನ್ನೀಪಸ್ತು ಜಜ್ಞಿವಾನ್ ।। ೧-೨೦-೨೨

ಮಹಾಯಶಸ್ವೀ ಪೃಥುಸೇನನು ರುಚಿರನ ಮಗನು. ಪೃಥುಸೇನನಿಗೆ ಪಾರನು ಹುಟ್ಟಿದನು ಮತ್ತು ಪಾರನಲ್ಲಿ ನೀಪನು ಹುಟ್ಟಿದನು.

ನೀಪಸ್ಯೈಕಶತಂ ತಾತ ಪುತ್ರಾಣಾಮಮಿತೌಜಸಾಮ್ ।
ಮಹಾರಥಾನಾಂ ರಾಜೇಂದ್ರ ಶೂರಾಣಾಂ ಬಾಹುಶಾಲಿನಾಮ್ ।
ನೀಪಾ ಇತಿ ಸಮಾಖ್ಯಾತಾ ರಾಜಾನಃ ಸರ್ವ ಏವ ತೇ ।। ೧-೨೦-೨೩

ಅಯ್ಯಾ! ರಾಜೇಂದ್ರ! ನೀಪನಿಗೆ ಅಮಿತೌಜಸ ಮಹಾರಥ ಬಾಹುಶಾಲೀ ಶೂರ ನೂರು ಮಕ್ಕಳಾದರು. ಈ ಎಲ್ಲ ರಾಜರೂ ನೀಪಾ ಎಂದು ವಿಖ್ಯಾತರಾಗಿದ್ದರು.

ತೇಷಾಂ ವಂಶಕರೋ ರಾಜಾ ನೀಪಾನಾಂ ಕಿರ್ತಿವರ್ಧನಃ ।
ಕಾಂಪಿಲ್ಯೇ ಸಮರೋ ನಾಮ ಸಚೇಷ್ಟಸಮರೋಽಭವತ್ ।। ೧-೨೦-೨೪

ನೀಪರ ಕೀರ್ತಿವರ್ಧನ ವಂಶಕರನು ಕಾಂಪಿಲ್ಯದಲ್ಲಿ ಸಮರ ಎಂಬ ಹೆಸರಿನ ರಾಜನು. ಅವನಿಗೆ ಸಮರವು ಇಷ್ಟವಾಗಿತ್ತು.

ಸಮರಸ್ಯ ಪರಃ ಪಾರಃ ಸದಶ್ವ ಇತಿ ತೇ ತ್ರಯಃ ।
ಪುತ್ರಾಃ ಪರಮಧರ್ಮಜ್ಞಾಃ ಪರಪುತ್ರಃ ಪೃಥುರ್ಬಭೌ ।। ೧-೨೦-೨೫

ಸಮರನಿಗೆ ಪರ, ಪಾರ ಮತ್ತು ಸದಶ್ವ ಎಂಬ ಮೂವರು ಪರಮಧರ್ಮಜ್ಞ ಮಕ್ಕಳಾದರು. ಪರನ ಪುತ್ರನು ಪೃಥುವಾದನು.

ಪೃಥೋಸ್ತು ಸುಕೃತೋ ನಾಮ ಸುಕೃತೇನೇಹ ಕರ್ಮಣಾ ।
ಜಜ್ಞೇ ಸರ್ವಗುಣೋಪೇತೋ ವಿಭ್ರಾಜಸ್ತಸ್ಯ ಚಾತ್ಮಜಃ ।। ೧-೨೦-೨೬

ಸುಕೃತ ಕರ್ಮಗಳಿಂದ ಪೃಥುವಿಗೆ ಸುಕೃತ ಎಂಬ ಹೆಸರಿನ ಪುತ್ರನು ಜನಿಸಿದನು. ಸರ್ವಗುಣೋಪೇತ ವಿಭ್ರಾಜನು ಅವನ ಪುತ್ರನು.

ವಿಭ್ರಾಜಸ್ಯ ತು ಪುತ್ರೋಽಭೂದಣುಹೋ ನಾಮ ಪಾರ್ಥಿವಃ ।
ಬಭೌ ಶುಕಸ್ಯ ಜಾಮಾತಾ ಕೃತ್ವೀಭರ್ತಾ ಮಹಾಯಶಾಃ ।। ೧-೨೦-೨೭

ಅಣುಹ ಎಂಬ ಹೆಸರಿನ ಪಾರ್ಥಿವನು ವಿಭ್ರಾಜನ ಪುತ್ರನು. ಅವನು ಮಹಾಯಶಸ್ವೀ ಶುಕನ ಜಾಮಾತಾ ಮತ್ತು ಕೃತ್ವಿಯ ಭರ್ತನಾದನು.

ಪುತ್ರೋಽಣುಹಸ್ಯ ರಾಜರ್ಷಿರ್ಬ್ರಹ್ಮದತ್ತೋಽಭವತ್ಪ್ರಭುಃ ।
ಯೋಗಾತ್ಮಾ ತಸ್ಯ ತನಯೋ ವಿಷ್ವಕ್ಸೇನಃ ಪರಂತಪಃ ।। ೧-೨೦-೨೮
ವಿಭ್ರಾಜಃ ಪುನರಾಯಾತಃ ಸ್ವಕೃತೇನೇಹ ಕರ್ಮಣಾ ।
ಬ್ರಹ್ಮದತ್ತಸ್ಯ ಪುತ್ರೋಽನ್ಯಃ ಸರ್ವಸೇನ ಇತಿ ಶ್ರುತಃ ।। ೧-೨೦-೨೯
ಚಕ್ಷುಷೀ ತ್ಯಸ್ಯ ನಿರ್ಭಿನ್ನೇ ಪಕ್ಷಿಣ್ಯಾ ಪೂಜನೀಯಯಾ ।
ಸುಚಿರೋಷಿತಯಾ ರಾಜನ್ಬ್ರಹ್ಮದತ್ತಸ್ಯ ವೇಶ್ಮನಿ ।। ೧-೨೦-೩೦

ರಾಜರ್ಷಿ ಪ್ರಭು ಬ್ರಹ್ಮದತ್ತನು ಅಣುಹನ ಪುತ್ರನಾದನು. ಅವನ ತನಯನು ಪರಂತಪ ಯೋಗಾತ್ಮಾ ವಿಷ್ವಕ್ಸೇನನು. ತನ್ನ ಸ್ವಕೃತ ಕರ್ಮಗಳಿಂದ ವಿಭ್ರಾಜನು ಪುನಃ ಬ್ರಹ್ಮದತ್ತನ ಪುತ್ರನಾಗಿ ಜನಿಸಿದ್ದನು. ಬ್ರಹ್ಮದತ್ತನ ಇನ್ನೊಬ್ಬ ಪುತ್ರನು ಸರ್ವಸೇನ ಎಂದು ವಿಶ್ರುತನಾಗಿದ್ದನು. ರಾಜನ್! ಅವನ ಎರಡೂ ಕಣ್ಣುಗಳನ್ನು ಬಹುಕಾಲದಲ್ಲಿ ಬ್ರಹ್ಮದತ್ತನ ಮನೆಯಲ್ಲಿ ವಾಸಿಸುತ್ತಿದ್ದ ಪೂಜನೀಯಾ ಎಂಬ ಹೆಸರಿನ ಪಕ್ಷಿಯು ಒಡೆದುಬಿಟ್ಟಿದ್ದಳು.

ಆಥಾಸ್ಯ ಪುತ್ರಸ್ತ್ವಪರೋ ಬ್ರಹ್ಮದತ್ತಸ್ಯ ಜಜ್ಞಿವಾನ್ ।
ವಿಷ್ವಕ್ಸೇನ ಇತಿ ಖ್ಯಾತೋ ಮಹಾಬಲಪರಾಕ್ರಮಃ ।। ೧-೨೦-೩೧

ಅದರ ನಂತರ ಬ್ರಹ್ಮದತ್ತನಿಗೆ ಬೇರೊಬ್ಬ ಮಹಾಬಲಪರಾಕ್ರಮ ವಿಷ್ವಕ್ಸೇನ ಎಂದು ವಿಖ್ಯಾತನಾದ ಪುತ್ರನು ಜನಿಸಿದನು.

ವಿಷ್ವಕ್ಸೇನಸ್ಯ ಪುತ್ರೋಽಭೂದ್ದಂಡಸೇನೋ ಮಹೀಪತಿಃ ।
ಭಲ್ಲಾಟೋಽಸ್ಯ ಕುಮಾರೋಽಭೂದ್ರಾಧೇಯೇನ ಹತಃ ಪುರಾ ।। ೧-೨೦-೩೨

ವಿಷ್ವಕ್ಸೇನನ ಪುತ್ರನು ಮಹೀಪತಿ ದಂಡಸೇನನಾಗಿದ್ದನು. ಅವನ ಕುಮಾರನು ಭಲ್ಲಾಟನು. ಹಿಂದೆ ಅವನು ರಾಧೇಯ ಕರ್ಣನಿಂದ ಹತನಾದನು.

ದಂಡಸೇನಾತ್ಮಜಃ ಶೂರೋ ಮಹಾತ್ಮಾ ಕುಲವರ್ಧನಃ ।
ಭಲ್ಲಾಟಪುತ್ರೋ ದುರ್ಬುದ್ಧಿರಭವಚ್ಚ ಯುಧಿಷ್ಠಿರ ।। ೧-೨೦-೩೩

ದಂಡಸೇನಾತ್ಮಜ ಭಲ್ಲಾಟನು ಶೂರನೂ ಮಹಾತ್ಮನೂ ಕುಲವರ್ಧನನೂ ಆಗಿದ್ದನು. ಆದರೆ ಯುಧಿಷ್ಠಿರ! ಭಲ್ಲಾಟನ ಪುತ್ರನು ದುರ್ಬುದ್ಧಿಯಾಗಿದ್ದನು.

ಸ ತೇಷಾಮಭವದ್ರಾಜಾ ನೀಪಾನಾಮಂತಕೃನ್ನೃಪ ।
ಉಗ್ರಾಯುಧೇನ ಯಸ್ಯಾರ್ಥೇ ಸರ್ವೇ ನೀಪಾ ವಿನಾಶಿತಾಃ ।। ೧-೨೦-೩೪

ನೃಪ! ಅವನು ನೀಪರ ಅಂತಕನಾದನು. ಉಗ್ರಾಯುಧನಿಗಾಗಿ ಅವನು ಸರ್ವ ನೀಪರನ್ನೂ ವಿನಾಶಗೊಳಿಸಿದನು.

ಉಗ್ರಾಯುಧೋ ಮದೋತ್ಸಿಕ್ತೋ ಮಯಾ ವಿನಿಹತೋ ಯುಧಿ ।
ದರ್ಪಾನ್ವಿತೋ ದರ್ಪರುಚಿಃ ಸತತಂ ಚಾನಯೇ ರತಃ ।। ೧-೨೦-೩೫

ಸತತವೂ ಅನ್ಯಾಯದಿಂದ ನಡೆದುಕೊಳ್ಳುತ್ತಿದ್ದ, ಆ ದರ್ಪಾನ್ವಿತ, ದರ್ಪರುಚಿ ಮದೋನ್ಮತ್ತ ಉಗ್ರಾಯುಧನನ್ನು ನಾನೇ ಯುದ್ಧದಲ್ಲಿ ಸಂಹರಿಸಿದೆನು.”

ಯುಧಿಷ್ಠಿರ ಉವಾಚ।
ಉಗ್ರಾಯುಧಃ ಕಸ್ಯ ಸುತಃ ಕಸ್ಮಿನ್ವಂಶೇಽಥ ಜಜ್ಞಿವಾನ್ ।
ಕಿಮರ್ಥಂ ಚೈವ ಭವತಾ ನಿಹತಸ್ತದ್ಬ್ರವೀಹಿ ಮೇ ।। ೧-೨೦-೩೬

ಯುಧಿಷ್ಠಿರನು ಹೇಳಿದನು: “ಉಗ್ರಾಯುಧನು ಯಾರ ಸುತನಾಗಿದ್ದನು? ಯಾವ ವಂಶದಲ್ಲಿ ಅವನು ಜನಿಸಿದ್ದನು. ಮತ್ತು ಯಾವ ಕಾರಣಕ್ಕಾಗಿ ನೀನು ಅವನನ್ನು ಸಂಹರಿಸಿದೆ ಎನ್ನುವುದನ್ನು ನನಗೆ ಹೇಳಬೇಕು.”

ಭೀಷ್ಮ ಉವಾಚ।
ಅಜಮೀಢಸ್ಯ ದಾಯಾದೋ ವಿದ್ವಾನ್ರಾಜಾ ಯವಿನರಃ ।
ಧೃತಿಮಾಂಸ್ತಸ್ಯ ಪುತ್ರಸ್ತು ತಸ್ಯ ಸತ್ಯಧೃತಿಃ ಸುತಃ ।। ೧-೨೦-೩೭

ಭೀಷ್ಮನು ಹೇಳಿದನು: “ಅಜಮೀಢನ ಪುತ್ರನು ವಿದ್ವಾನ್ ರಾಜಾ ಯವಿನರನು. ಧೃತಿಮಾನನು ಅವನ ಪುತ್ರ ಮತ್ತು ಸತ್ಯಧೃತಿಯು ಧೃತಿಮಾನನ ಪುತ್ರ.

ಜಜ್ಞೇ ಸತ್ಯಧೃತೇಃ ಪುತ್ರೋ ಧೃಢನೇಮಿಃ ಪ್ರತಾಪವಾನ್ ।
ಧೃಢನೇಮಿಸುತಶ್ಚಾಪಿ ಸುಧರ್ಮಾ ನಾಮ ಪಾರ್ಥಿವಃ ।। ೧-೨೦-೩೮

ಸತ್ಯದೃತನಿಗೆ ಪ್ರತಾಪವಾನ್ ಧೃಢನೇಮಿಯು ಪುತ್ರನಾಗಿ ಜನಿಸಿದನು. ಧೃಢನೇಮಿಯ ಸುತನು ಸುಧರ್ಮಾ ಎಂಬ ಹೆಸರಿನ ಪಾರ್ಥಿವನು.

ಆಸೀತ್ಸುಧರ್ಮಣಃ ಪುತ್ರಃ ಸಾರ್ವಭೌಮಃ ಪ್ರಜೇಶ್ವರಃ ।
ಸಾರ್ವಭೌಮ ಇತಿ ಖ್ಯಾತಃ ಪೃಥಿವ್ಯಾಮೇಕರಾಡ್ವಿಭುಃ ।। ೧-೨೦-೩೯

ಸುಧರ್ಮನ ಪುತ್ರನು ಸಾರ್ವಭೌಮ ಪ್ರಜೇಶ್ವರ ಸಾರ್ವಭೌಮ ಎಂದು ಖ್ಯಾತನಾದನು. ಇಡೀ ಭೂಮಿಗೆ ಅವನೇ ಪ್ರಭುವಾಗಿದ್ದನು.

ತಸ್ಯಾನ್ವವಾಯೇ ಮಹತಿ ಮಹಾನ್ಪೌರವನಂದನ ।
ಮಹತಶ್ಚಾಪಿ ಪುತ್ರಸ್ತು ರಾಜಾ ರುಕ್ಮರಥಃ ಸ್ಮೃತಃ ।। ೧-೨೦-೪೦

ಅವನ ಮಹನೀಯ ವಂಶದಲ್ಲಿ ಪೌರವರನ್ನು ಆನಂದಗೊಳಿಸುವ ಮಹಾನ್ ಎಂಬ ರಾಜನಾದನು. ಮಹಾನನ ಪುತ್ರನು ರಾಜಾ ರುಕ್ಮರಥನೆಂದು ಹೇಳುತ್ತಾರೆ.

ಪುತ್ರೋ ರುಕ್ಮರಥಸ್ಯಾಪಿ ಸುಪಾರ್ಶ್ವೋ ನಾಮ ಪಾರ್ಥಿವಃ ।
ಸುಪಾರ್ಶ್ವತನಯಶ್ಚಾಪಿ ಸುಮತಿರ್ನಾಮ ಧಾರ್ಮಿಕಃ ।। ೧-೨೦-೪೧

ರುಕ್ಮರಥನ ಪುತ್ರನು ಸುಪಾರ್ಶ್ವ ಎಂಬ ಹೆಸರಿನ ಪಾರ್ಥಿವನು. ಸುಪಾರ್ಶ್ವನ ತನಯನು ಸುಮತಿ ಎಂಬ ಹೆಸರಿನ ಧಾರ್ಮಿಕನು.

ಸುಮತೇರಪಿ ಧರ್ಮಾತ್ಮಾ ಸನ್ನತಿರ್ನಾಮ ವೀರ್ಯವಾನ್ ।
ತಸ್ಯ ವೈ ಸನ್ನತೇಃ ಪುತ್ರಃ ಕೃತೋ ನಾಮ ಮಹಾಬಲಃ ।। ೧-೨೦-೪೨

ಸುಮತಿಯ ಪುತ್ರನು ಸನ್ನತಿ ಎಂಬ ಹೆಸರಿನ ಧರ್ಮಾತ್ಮಾ ವೀರ್ಯವಾನನು. ಸನ್ನತಿಯ ಪುತ್ರನು ಕೃತ ಎಂಬ ಹೆಸರಿನ ಮಹಾಬಲನು.

ಶಿಷ್ಯೋ ಹಿರಣ್ಯನಾಭಸ್ಯ ಕೌಶಲಸ್ಯ ಮಹಾತ್ಮನಃ ।
ಚತುರ್ವಿಂಶತಿಧಾ ತೇನ ಸಪ್ರಾಚ್ಯಾಃ ಸಾಮಸಂಹಿತಾಃ ।। ೧-೨೦-೪೩

ಅವನು ಕೋಸಲ ದೇಶದ ಮಹಾತ್ಮ ಹಿರಣ್ಯನಾಭನ ಶಿಷ್ಯನಾಗಿದ್ದನು. ಅವನು ಪ್ರಾಚೀನ ಸಾಮಸಂಹಿತೆಯನ್ನು ಇಪ್ಪತ್ನಾಲ್ಕು ಭಾಗಗಳನ್ನಾಗಿ ವಿಂಗಡಿಸಿದ್ದನು.

ಸ್ಮೃತಾಸ್ತೇ ಪ್ರಾಚ್ಯಸಾಮಾನಃ ಕಾರ್ತಯೋ ನಾಮ ಸಾಮಗಾಃ ।
ಕಾರ್ತಿರುಗ್ರಾಯುಧಃ ಸೋಽಥ ವೀರಃ ಪೌರವನಂದನಃ ।। ೧-೨೦-೪೪

ಅವುಗಳನ್ನು ಪ್ರಾಚ್ಯಸಾಮಗಗಳೆಂದೂ ಅದನ್ನು ಪಠಿಸುವವರು ಸಾಮಗರೆಂದೂ ಕರೆಯಲ್ಪಟ್ಟಿದ್ದಾರೆ. ಅದೇ ಕೃತನ ಪುತ್ರನು ಪೌರವನಂದನ ವೀರ ಉಗ್ರಾಯುಧನಾಗಿದ್ದನು.

ಬಭೂವ ಯೇನ ವಿಕ್ರಮ್ಯ ಪೃಷತಸ್ಯ ಪಿತಾಮಹಃ ।
ನೀಪೋ ನಾಮ ಮಹತೇಜಾಃ ಪಾಂಚಾಲಾಧಿಪತಿರ್ಹತಃ ।। ೧-೨೦-೪೫

ಅವನೇ ವಿಕ್ರಮದಿಂದ ಪಾಂಚಾಲಾಧಿಪತಿ ಪೃಷತನ ಪಿತಾಮಹ ನೀಪ ಎಂಬ ಹೆಸರಿನ ಮಹಾತೇಜಸ್ವಿಯನ್ನು ಸಂಹರಿಸಿದ್ದನು.

ಉಗ್ರಾಯುಧಸ್ಯ ದಾಯಾದಃ ಕ್ಷೇಮ್ಯೋ ನಾಮ ಮಹಾಯಶಾಃ ।
ಕ್ಷೇಮ್ಯಾತ್ಸುವೀರೋ ನೃಪತಿಃ ಸುವೀರಾತ್ತು ನೃಪಂಜಯಃ ।। ೧-೨೦-೪೬

ಉಗ್ರಾಯುಧನ ಪುತ್ರನು ಮಹಾಯಶಸ್ವೀ ಕ್ಷೇಮ ಎಂಬ ಹೆಸರಿನವನು. ಕ್ಷೇಮನಿಂದ ಸುವೀರನಾದನು ಮತ್ತು ಸುವೀರನಿಂದ ನೃಪತಿ ನೃಪಂಜಯನಾದನು.

ನೃಪಂಜಯಾದ್ಬಹುರಥ ಇತ್ಯೇತೇ ಪೌರವಾಃ ಸ್ಮೃತಾಃ ।
ಸ ಚಾಪ್ಯುಗ್ರಾಯುಧಸ್ತಾತ ದುರ್ಬುದ್ಧಿರಭವತ್ತದಾ ।। ೧-೨೦-೪೭

ನೃಪಂಜಯನಿಂದ ಬಹುರಥನಾದನು. ಇವರೆಲ್ಲರನ್ನೂ ಪೌರವರೆಂದು ಹೇಳುತ್ತಾರೆ. ಅಯ್ಯಾ! ಅವರಲ್ಲಿ ಉಗ್ರಾಯುಧನು ದುರ್ಬುದ್ಧಿಯವನಾಗಿದ್ದನು.

ಪ್ರವೃದ್ಧಚಕ್ರೋ ಬಲವಾನ್ನೀಪಾಂತಕರಣೋ ಮಹಾನ್ ।
ಸ ದರ್ಪಪೂರ್ಣೋ ಹತ್ವಾಽಽಜೌ ನೀಪಾನನ್ಯಾಂಶ್ಚ ಪಾರ್ಥಿವಾನ್ ।। ೧-೨೦-೪೮

ಆ ಬಲವಾನನ ಮಹಾ ಚಕ್ರವು ಚಲಿಸುತ್ತಿತ್ತು. ಅವನು ನೀಪರ ಘೋರ ಸಂಹಾರವನ್ನು ನಡೆಸಿದನು. ನೀಪರನ್ನೂ ಮತ್ತು ಇತರ ಪಾರ್ಥಿವರನ್ನೂ ಸಂಹರಿಸಿದ ಅವನು ದರ್ಪದಿಂದ ತುಂಬಿಹೋಗಿದ್ದನು.

ಪಿತರ್ಯುಪರತೇ ಮಹ್ಯಂ ಶ್ರಾವಯಾಮಾಸ ಕಿಲ್ಬಿಷಮ್ ।
ಮಾಮಮಾತ್ಯೈಃ ಪರಿವೃತಂ ಶಯಾನಂ ಧರಣೀತಲೇ ।। ೧-೨೦-೪೯

ನನ್ನ ತಂದೆಯ ಮರಣಾನಂತರ ನಾನು ಅಮಾತ್ಯರಿಂದ ಪರಿವೃತನಾಗಿ ಧರಣೀತಲದಲ್ಲಿ ಮಲಗುತ್ತಿದ್ದಾಗ ಅವನ ಅತಿ ಕಿಲ್ಬಿಷವಾದ ಮಾತನ್ನು ಕೇಳುವಂತಾಯಿತು.

ಉಗ್ರಾಯುಧಸ್ಯ ರಾಜೇಂದ್ರ ದೂತೋಽಭ್ಯೇತ್ಯ ವಚೋಽಬ್ರವೀತ್ ।
ಅದ್ಯ ತ್ವಂ ಜನನೀಂ ಭೀಷ್ಮ ಗಂಧಕಾಲೀಂ ಯಶಸ್ವಿನೀಮ್ ।
ಸ್ತ್ರೀರತ್ನಂ ಮಮ ಭಾರ್ಯಾರ್ಥೇ ಪ್ರಯಚ್ಛ ಕುರುಪುಂಗವ ।। ೧-೨೦-೫೦

ರಾಜೇಂದ್ರ! ಉಗ್ರಾಯುಧನು ದೂತನ ಮೂಲಕ ನನಗೆ ಈ ಮಾತನ್ನು ಹೇಳಿ ಕಳುಹಿಸಿದನು: “ಭೀಷ್ಮ! ಕುರುಪುಂಗವ! ಇಂದು ನಿನ್ನ ಜನನಿ ಸ್ತ್ರೀರತ್ನ ಯಶಸ್ವಿನೀ ಗಂಧಕಾಲಿಯನ್ನು ನನ್ನ ಭಾರ್ಯೆಯಾಗಲು ಕಳುಹಿಸು!

ಏವಂ ರಾಜ್ಯಂ ಚ ತೇ ಸ್ಫೀತಂ ಧನಾನಿ ಚ ನ ಸಂಶಯಃ ।
ಪ್ರದಾಸ್ಯಾಮಿ ಯಥಾಕಾಮಮಹಂ ವೈ ರತ್ನಭಾಗ್ಭುವಿ ।। ೧-೨೦-೫೧

ಹೀಗೆ ಮಾಡಿದರೆ ನಿನಗೆ ಈ ಸಮೃದ್ಧ ರಾಜ್ಯವನ್ನೂ ಧನವನ್ನೂ ನೀಡುತ್ತೇನೆ ಎನ್ನುವುದರಲ್ಲಿ ಸಂಶಯವಿಲ್ಲ. ಆಗ ನಾನು ಕಾಮಿಸಿದಂತೆ ಆ ಸ್ತ್ರೀರತ್ನವನ್ನು ಭುವಿಯಲ್ಲಿ ಭೋಗಿಸುತ್ತೇನೆ.

ಮಮ ಪ್ರಜ್ವಲಿತಂ ಚಕ್ರಂ ನಿಶಮ್ಯೇದಂ ಸುದುರ್ಜಯಮ್ ।
ಶತ್ರವೋ ವಿದ್ರವಂತ್ಯಾಜೌ ದರ್ಶನಾದೇವ ಭಾರತ ।। ೧-೨೦-೫೨

ಭಾರತ! ಪ್ರಜ್ವಲಿಸುತ್ತಿರುವ ಈ ಸುದುರ್ಜಯ ಚಕ್ರವನ್ನು ನೋಡು! ಇದರ ದರ್ಶನದಿಂದಲೇ ಶತ್ರುಗಳು ಪಲಾಯನಮಾಡುತ್ತಾರೆ.

ರಾಷ್ಟ್ರಸ್ಯೇಚ್ಛಸಿ ಚೇತ್ಸ್ವಸ್ತಿ ಪ್ರಾಣಾನಾಂ ವಾ ಕುಲಸ್ಯ ವಾ ।
ಶಾಸನೇ ಮಮ ತಿಷ್ಠಸ್ವ ನ ಹಿ ತೇ ಶಾಂತಿರನ್ಯಥಾ ।। ೧-೨೦-೫೩

ನೀನು ನಿನ್ನ ಈ ರಾಷ್ಟ್ರ, ಪ್ರಾಣ ಅಥವಾ ಕುಲವನ್ನು ಬಯಸುವೆಯಾದರೆ ನನ್ನ ಶಾಸನದಡಿಯಲ್ಲಿ ನಿಲ್ಲು. ಅನ್ಯಥಾ ನಿನಗೆ ಶಾಂತಿಯಿರುವುದಿಲ್ಲ.”

ಅಧಃ ಪ್ರಸ್ತಾರಶಯನೇ ಶಯಾನಸ್ತೇನ ಚೋದಿತಃ ।
ದೂತಾಂತರ್ಹಿತಮೇತದ್ವೈ ವಾಕ್ಯಮಗ್ನಿಶಿಖೋಪಮಮ್ ।। ೧-೨೦-೫೪

ನಾನು ನೆಲದಲ್ಲಿ ದರ್ಬೆಗಳ ಹಾಸಿಗೆಯ ಮೇಲೆ ಮಲಗುತ್ತಿರುವಾಗ ಅವನು ದೂತನ ಮೂಲಕ ನನಗೆ ಈ ಅಗ್ನಿಯ ಜ್ವಾಲೆಗಳಂತಿದ್ದ ಮಾತುಗಳನ್ನು ಆಡಿದ್ದನು.

ತತೋಽಹಂ ತಸ್ಯ ದುರ್ಬುದ್ಧೇರ್ವಿಜ್ಞಾಯ ಮತಮಚ್ಯುತ ।
ಆಜ್ಞಾಪಯಂ ವೈ ಸಂಗ್ರಾಮೇ ಸೇನಾಧ್ಯಕ್ಷಾಂಶ್ಚ ಸರ್ವಶಃ ।। ೧-೨೦-೫೫

ಅಚ್ಯುತ! ಆಗ ನಾನು ಆ ದುರ್ಬುದ್ಧಿಯನ್ನು ಅರ್ಥಮಾಡಿಕೊಂಡು ಎಲ್ಲ ಸೇನಾಧ್ಯಕ್ಷರಿಗೂ ಸಂಗ್ರಾಮಗೈಯಲು ಆಜ್ಞಾಪಿಸಿದೆನು.

ವಿಚಿತ್ರವೀರ್ಯಂ ಬಾಲಂ ಚ ಮದುಪಾಶ್ರಯಮೇವ ಚ ।
ದೃಷ್ಟ್ವಾ ಕ್ರೋಧಪರೀತಾತ್ಮಾ ಯುದ್ಧಾಯೈವ ಮನೋ ದಧೇ ।। ೧-೨೦-೫೬

ನನ್ನ ಉಪಾಶ್ರಯದಲ್ಲಿಯೇ ಇದ್ದ ಬಾಲಕ ವಿಚಿತ್ರವೀರ್ಯನನ್ನು ನೋಡಿ ಕ್ರೋಧಪರೀತಾತ್ಮನಾಗಿ ನಾನೇ ಯುದ್ಧಮಾಡುವ ಮನಸ್ಸು ಮಾಡಿದೆನು.

ನಿಗೃಹೀತಸ್ತದಾಹಂ ತೈಃ ಸಚಿವೈರ್ಮಂತ್ರಕೋವಿದೈಃ ।
ಋತ್ವಿದ್ಭಿರ್ವೇದಕಲ್ಪೈಶ್ಚ ಸುಹೃದ್ಭಿಶ್ಚಾರ್ಥದರ್ಶಿಭಿಃ ।। ೧-೨೦-೫೭
ಸ್ನಿಗ್ಧೈಶ್ಚ ಶಾಸ್ತ್ರವಿದ್ಭಿಶ್ಚ ಸಂಯುಗಸ್ಯ ನಿವರ್ತನೇ ।
ಕಾರಣಂ ಶ್ರಾವಿತಶ್ಚಾಸ್ಮಿ ಯುಕ್ತರೂಪಂ ತದಾನಘ ।। ೧-೨೦-೫೮

ಅಜಘ! ಆ ಸಮಯದಲ್ಲಿ ಮಂತ್ರಕೋವಿದ ಸಚಿವರೂ, ವೇದಕಲ್ಪ ಋತ್ವಿಜರೂ ಮತ್ತು ಅರ್ಥದರ್ಶೀ ಸುಹೃದಯರೂ ಹಾಗೂ ಶಾಸ್ತ್ರವಿದು ಮಿತ್ರರೂ ಯುಕ್ತವಾಗಿ ಕಾಣುತ್ತಿದ್ದ ಕಾರಣಗಳನ್ನು ಹೇಳಿ ನನ್ನನ್ನು ಯುದ್ಧದಿಂದ ತಡೆದರು.

ಮಂತ್ರಿಣ ಊಚುಃ ।
ಪ್ರವೃತ್ತಚಕ್ರಃ ಪಾಪೋಽಸೌ ತ್ವಂ ಚಾಶೌಚಗತಃ ಪ್ರಭೋ ।
ನ ಚೈಷ ಪ್ರಥಮಃ ಕಲ್ಪೋ ಯುದ್ಧಂ ನಾಮ ಕದಾಚನ ।। ೧-೨೦-೫೯

ಮಂತ್ರಿಗಳು ಹೇಳಿದರು: “ಪ್ರಭೋ! ಆ ಪಾಪಿಯ ಚಕ್ರವು ಚಲಿಸುತ್ತಿದೆ ಮತ್ತು ನಿನಗೆ ಅಶೌಚವಾಗಿದೆ. ಆದುದರಿಂದ ಯಾವ ಕಾರಣಕ್ಕೂ ಈಗ ಯುದ್ಧವು ಪ್ರಥಮ ಆಯ್ಕೆಯಾಗುವುದಿಲ್ಲ.

ತೇ ವಯಂ ಸಾಮಪೂರ್ವಂ ವೈ ದಾನಂ ಭೇದಂ ತಥೈವ ಚ ।
ಪ್ರಯೋಕ್ಷ್ಯಾಮಸ್ತತಃ ಶುದ್ಧೋ ದೈವತಾನ್ಯಭಿವಾದ್ಯ ಚ ।। ೧-೨೦-೬೦
ಕೃತಸ್ವಸ್ತ್ಯಯನೋ ವಿಪ್ರೈರ್ಹುತ್ವಾಗ್ನೀನರ್ಚ್ಯ ಚ ದ್ವಿಜಾನ್ ।
ಬ್ರಾಹ್ಮಣೈರಭ್ಯನುಜ್ಞಾತಃ ಪ್ರಯಾಸ್ಯಸಿ ಜಯಾಯ ವೈ ।। ೧-೨೦-೬೧

ಮೊದಲು ನಾವು ಅವನ ಮೇಲೆ ಸಾಮ, ದಾನ ಮತ್ತು ಭೇದ ಉಪಾಯಗಳನ್ನು ಬಳಸುತ್ತೇವೆ. ಅಷ್ಟರಲ್ಲಿ ನೀನು ಶುದ್ಧನಾಗುತ್ತೀಯೆ. ನಂತರ ನೀನು ದೇವತೆಗಳಿ ಅಭಿವಂದಿಸಿ, ಬ್ರಾಹ್ಮಣರಿಂದ ಸ್ವಸ್ತಿವಾಚನಗಳನ್ನು ಮಾಡಿಸಿಕೊಂಡು, ಅಗ್ನಿ ಮತ್ತು ಬ್ರಾಹ್ಮಣರನ್ನು ಅರ್ಚಿಸಿ, ಬ್ರಾಹ್ಮಣರ ಅನುಜ್ಞೆಯನ್ನು ಪಡೆದು ವಿಜಯಕ್ಕಾಗಿ ಹೊರಡು.

ಅಸ್ತ್ರಾಣಿ ಚ ಪ್ರಯೋಜ್ಯಾನಿ ನ ಪ್ರವೇಶ್ಯಶ್ಚ ಸಂಗರಃ ।
ಆಶೌಚೇ ವರ್ತಮಾನೇ ತು ವೃದ್ಧಾನಾಮಿತಿ ಶಾಸನಮ್ ।। ೧-೨೦-೬೨

ಅಶೌಚವು ನಡೆಯುತ್ತಿರುವಾಗ ಅಸ್ತ್ರಗಳನ್ನು ಪ್ರಯೋಗಿಸಬಾರದು ಮತ್ತು ಸಂಗರವನ್ನು ಪ್ರವೇಶಿಸಬಾರದು ಎಂದು ವೃದ್ಧರ ಶಾಸನವಿದೆ.

ಸಾಮದಾನಾದಿಭಿಃ ಪೂರ್ಣಮಪಿ ಭೇದೇನ ವಾ ತತಃ ।
ತಾಂ ಹನಿಷ್ಯಸಿ ವಿಕ್ರಮ್ಯ ಶಂಬರಂ ಮಘವಾನಿವ ।। ೧-೨೦-೬೩

ಸಾಮ-ದಾನ-ಭೇದಗಳಿಂದಲೂ ಅವನನ್ನು ವಶಪಡಿಸಿಕೊಳ್ಳಲು ಆಗದಿದ್ದರೆ ನಂತರ ನೀನು ಮಘವಾನನು ಶಂಬರನನ್ನು ಹೇಗೋ ಹಾಗೆ ವಿಕ್ರಮದಿಂದ ಅವನನ್ನು ಸಂಹರಿಸು.”

ಪ್ರಾಜ್ಞಾನಾಂ ವಚನಂ ಕಾಲೇ ವೃದ್ಧಾನಾಂ ಚ ವಿಶೇಷತಃ ।
ಶ್ರೋತವ್ಯಮಿತಿ ತಚ್ಛ್ರುತ್ವಾ ನಿವೃತ್ತೋಽಸ್ಮಿ ನರಾಧಿಪ ।। ೧-೨೦-೬೪

ನರಾಧಿಪ! ಸಮಯಬಂದಾಗ ಪ್ರಾಜ್ಞರ, ಅದರಲ್ಲೂ ವಿಶೇಷವಾಗಿ ವೃದ್ಧರ. ಮಾತನ್ನು ಕೇಳಬೇಕಾದುದರಿಂದ ಅದನ್ನು ಕೇಳಿ ನಾನು ಯುದ್ಧದಿಂದ ನಿವೃತ್ತನಾದೆನು.

ತತಸ್ತೈಃ ಸಂಕ್ರಮಃ ಸರ್ವಃ ಪ್ರಯುಕ್ತಃ ಶಾಸ್ತ್ರಕೋವಿದೈಃ ।
ತಸ್ಮಿನ್ಕಾಲೇ ಕುರುಶ್ರೇಷ್ಠ ಕರ್ಮ ಚಾರಬ್ಧಮುತ್ತಮಮ್ ।। ೧-೨೦-೬೫

ಕುರುಶ್ರೇಷ್ಠ! ಶಾಸ್ತ್ರಕೋವಿದರು ಸಾಮ-ದನ-ಭೇದೋಪಾಯಗಳನ್ನು ಪ್ರಯೋಗಿಸಲು ಆ ಸಮಯದಲ್ಲಿ ಕಾರ್ಯಗಳನ್ನು ಆರಂಭಿಸಿದರು.

ಸ ಸಾಮಾದಿಭಿರೇವಾದಾವುಪಾಯೈಃ ಪ್ರಾಜ್ಞಚಿಂತಿತೈಃ ಅನುನೀಯಮಾನೋ ದುರ್ಬುದ್ಧಿರನುನೇತುಂ ನ ಶಕ್ಯತೇ ।। ೧-೨೦-೬೬

ಪ್ರಾಜ್ಞರು ಯೋಚಿಸಿದ್ದ ಸಾಮಾದಿ ಉಪಾಯಗಳಿಂದಲೂ ಅ ದುರ್ಬುದ್ಧಿಯನ್ನು ನ್ಯಾಯಮಾರ್ಗಕ್ಕೆ ತರಲು ಸಾಧ್ಯವಾಗಲಿಲ್ಲ.

ಪ್ರವೃತ್ತಂ ತಸ್ಯ ತಚ್ಚಕ್ರಮಧರ್ಮನಿರತಸ್ಯ ವೈ ।
ಪರದಾರಾಭಿಲಾಷೇಣ ಸದ್ಯಸ್ತಾತ ನಿವರ್ತಿತಮ್ ।। ೧-೨೦-೬೭

ಅಯ್ಯಾ! ಅದೇ ಸಮಯದಲ್ಲಿ ಪರದಾರೆಯನ್ನು ಬಯಸಿದ ಆ ಅಧರ್ಮನಿರತನ ಚಕ್ರವು ಮುಂದುವರೆಯದೇ ನಿಂತುಬಿಟ್ಟಿತು.

ನ ತ್ವಹಂ ತಸ್ಯ ಜಾನೇ ತನ್ನಿವೃತ್ತಂ ಚಕ್ರಮುತ್ತಮಮ್ ।
ಹತಂ ಸ್ವಕರ್ಮಣಾ ತಂ ತು ಪೂರ್ವಂ ಸದ್ಭಿಶ್ಚ ನಿಂದಿತಮ್।। ೧-೨೦-೬೮

ಅವನ ಉತ್ತಮ ಚಕ್ರವು ನಿಂತುಹೋಗಿದೆ ಮತ್ತು ಅದರ ಹಿಂದೆಯೇ ಸತ್ಪುರುಷರಿಂದ ನಿಂದಿತನಾದ ಅವನು ತನ್ನದೇ ಕರ್ಮಗಳಿಂದ ಹತನಾಗಿಬಿಟ್ಟಿದ್ದನ್ನು ಎನ್ನುವುದು ನನಗೆ ತಿಳಿದಿರಲಿಲ್ಲ.

ಕೃತಶೌಚಃ ಶರೀ ಚಾಪೀ ರಥೀ ನಿಷ್ಕ್ರಮ್ಯ ವೈ ಪುರಾತ್ ।
ಕೃತಸ್ವಸ್ತ್ಯಯನೋ ವಿಪ್ರೈಃ ಪ್ರಾಯೋಧಯಮಹಂ ರಿಪುಮ್ ।। ೧-೨೦-೬೯

ಶೌಚವನ್ನು ಮಾಡಿಕೊಂಡು, ವಿಪ್ರರರಿಂದ ಸ್ವಸ್ತಿವಾಚನಗಳನ್ನು ಮಾಡಿಸಿಕೊಂಡು ಧನುಸ್ಸು ಬಾಣಗಳನ್ನು ಹಿಡಿದು ರಥವನ್ನೇರಿ ಪುರದಿಂದ ಹೊರಟು ನಾನು ಶತ್ರುವಿನೊಂದಿಗೆ ಯುದ್ಧಮಾಡಿದೆನು.

ತತಃ ಸಂಸರ್ಗಮಾಗಮ್ಯ ಬಲೇನಾಸ್ತ್ರಬಲೇನ ಚ ।
ತ್ರ್ಯಹಮುನ್ಮತ್ತವದ್ಯುದ್ಧಂ ದೇವಾಸುರಮಿವಾಭವತ್ ।। ೧-೨೦-೭೦

ಅವನ ಸಂಸರ್ಗಕ್ಕೆ ಬಂದು ಶರೀರ ಬಲ ಮತ್ತು ಅಸ್ತ್ರಬಲಗಳಿಂದ ದೇವಾಸುರರ ಯುದ್ಧದಂಥಹ ಮೂರು ದಿನಗಳ ಉನ್ಮತ್ತ ಯುದ್ಧವು ನಡೆಯಿತು.

ಸ ಮಯಾಸ್ತ್ರಪ್ರತಾಪೇನ ನಿರ್ದಗ್ಧೋ ರಣಮೂರ್ಧನಿ ।
ಪಪಾಟಾಭಿಮುಖಃ ಶೂರಸ್ತ್ಯಕ್ತ್ವಾ ಪ್ರಾಣಾನರಿಂದಮ ।। ೧-೨೦-೭೧

ಅರಿಂದಮ! ನನ್ನ ಅಸ್ತ್ರಪ್ರತಾಪದಿಂದ ಆ ಶೂರನು ದಗ್ಧನಾಗಿ ರಣಮೂರ್ಧನಿಯಲ್ಲಿ ಪಪಾಟಾಭಿಮುಖನಾಗಿ ಪ್ರಾಣಗಳನ್ನು ತೊರೆದನು.

ಏತಸ್ಮಿನ್ನಂತರೇ ತಾತ ಕಾಂಪಿಲ್ಯೇ ಪೃಷತೋಽಭ್ಯಯಾತ್ ।
ಹತೇ ನೀಪೇಶ್ವರೇ ಚೈವ ಹತೇ ಚೋಗ್ರಾಯುಧೇ ನೃಪೇ ।। ೧-೨೯-೭೨

ಅಯ್ಯಾ! ನೀಪೇಶ್ವರನು ಹತನಾದ ಮತ್ತು ನೃಪ ಉಗ್ರಾಯುಧನು ಹತನಾದ ಮಧ್ಯದಲ್ಲಿ ಪೃಷತನು ಕಾಂಪಿಲ್ಯವನ್ನು ಆಕ್ರಮಣಿಸಿದನು.

ಆಹಿಚ್ಛತ್ರಂ ಸ್ವಕಂ ರಾಜ್ಯಂ ಪಿತ್ರ್ಯಂ ಪ್ರಾಪ ಮಹಾದ್ಯುತಿಃ ।
ದ್ರುಪದಸ್ಯ ಪಿತಾ ರಾಜನ್ಮಮೈವಾನುಮತೇ ತದಾ ।। ೧-೨೦-೭೩

ರಾಜನ್! ಆಗ ದ್ರುಪದನ ತಂದೆ ಮಹಾದ್ಯುತಿ ಪೃಷತನು ನನ್ನ ಅನುಮತಿಯಂತೆ ತನ್ನ ಪಿತೃ ರಾಜ್ಯವಾದ ಆಹಿಚ್ಛತ್ರವನ್ನು ಪಡೆದುಕೊಂಡನು.

ತತೋಽರ್ಜುನೇನ ತರಸಾ ನಿರ್ಜಿತ್ಯ ದ್ರುಪದಂ ರಣೇ ।
ಆಹಿಚ್ಛತ್ರಂ ಸಕಾಂಪಿಲ್ಯಂ ದ್ರೋಣಾಯಾಥಾಪವರ್ಜಿತಮ್ ।। ೧-೨೦-೭೪

ತದನಂತರ ಅರ್ಜುನನು ರಣದಲ್ಲಿ ಬಲಪೂರ್ವಕವಾಗಿ ದ್ರುಪದನನ್ನು ಸೋಲಿಸಿ ಕಾಂಪಿಲ್ಯದೊಂದಿಗೆ ಆಹಿಚ್ಛತ್ರವನ್ನು ದ್ರೋಣನಿಗೆ ಸಮರ್ಪಿಸಿದನು.

ಪ್ರತಿಗೃಹ್ಯ ತತೋ ದ್ರೋಣ ಉಭಯಂ ಜಯತಾಂ ವರಃ ।
ಕಾಂಪಿಲ್ಯಂ ದ್ರುಪದಾಯೈವ ಪ್ರಾಯಚ್ಛದ್ವಿದಿತಂ ತವ ।। ೧-೨೦-೭೫

ಆಗ ವಿಜಯಿಗಳಲ್ಲಿ ಶ್ರೇಷ್ಠ ದ್ರೋಣನು ಅವೆರಡನ್ನೂ ಸ್ವೀಕರಿಸಿ ಕಾಂಪಿಲ್ಯವನ್ನು ದ್ರುಪದನಿಗೆ ಹಿಂದಿರುಗಿಸಿದನು. ಅದು ನಿನಗೆ ತಿಳಿದೇ ಇದೆ.

ಏಷ ತೇ ದ್ರುಪದಸ್ಯಾದೌ ಬ್ರಹ್ಮದತ್ತಸ್ಯ ಚೈವ ಹ ।
ವಂಶಃ ಕಾರ್ತ್ಸ್ಯೇನ ವೈ ಪ್ರೋಕ್ತೋ ನೀಪಸ್ಯೋಗ್ರಾಯುಧಸ್ಯ ಚ ।। ೧-೨೦-೭೬

ಇದೋ ನಾನು ನಿನಗೆ ದ್ರುಪದನ, ಬ್ರಹ್ಮದತ್ತನ, ನೀಪನ ಮತ್ತು ಉಗ್ರಾಯುಧನ ವಂಶದ ಕುರಿತು ಸಂಪೂರ್ಣವಾಗಿ ಹೇಳಿದ್ದೇನೆ.”

ಯುಧಿಷ್ಠಿರ ಉವಾಚ।
ಕಿಮರ್ಥಂ ಬ್ರಹ್ಮದತ್ತಸ್ಯ ಪೂಜನೀಯಾ ಶಕುಂತಿಕಾ ।
ಅಂಧಂ ಚಕಾರ ಗಾಂಗೇಯ ಜ್ಯೇಷ್ಠಂ ಪುತ್ರಂ ಪುರಾ ವಿಭೋ ।। ೧-೨೦-೭೭

ಯುಧಿಷ್ಠಿರನು ಹೇಳಿದನು: “ವಿಭೋ! ಗಾಂಗೇಯ! ಹಿಂದೆ ಯಾವ ಕಾರಣಕ್ಕಾಗಿ ಪೂಜನೀಯಾ ಪಕ್ಷಿಯು ಬ್ರಹ್ಮದತ್ತನ ಜ್ಯೇಷ್ಠ ಪುತ್ರನನ್ನು ಅಂಧನನ್ನಾಗಿಸಿದಳು?

ಚಿರೋಷಿತಾ ಗೃಹೇ ಚಾಪಿ ಕಿಮರ್ಥಂ ಚೈವ ಯಸ್ಯ ಸಾ ।
ಚಕಾರ ವಿಪ್ರಿಯಮಿದಂ ತಸ್ಯ ರಾಜ್ಞೋ ಮಹಾತ್ಮನಃ ।। ೧-೨೦-೭೮

ಅವಳು ಯಾರ ಮನೆಯಲ್ಲಿ ಬಹಳ ಕಾಲದಿಂದ ವಾಸಿಸುತ್ತಿದ್ದಳು? ಮತ್ತು ಅವಳು ಏಕೆ ಆ ಮಹಾತ್ಮ ರಾಜನಿಗೆ ವಿಪ್ರಿಯವಾದುದನ್ನು ಮಾಡಿದಳು?

ಪೂಜನೀಯಾ ಚಕಾರಾಸೌ ಕಿಂ ಸಖ್ಯಂ ತೇನ ಚೈವ ಹ ।
ಏತನ್ಮೇ ಸಂಶಯಂ ಛಿಂಧಿ ಸರ್ವಮುಕ್ತ್ವಾ ಯಥಾತಥಮ್ ।। ೧-೨೦-೭೯

ಆ ಪೂಜನೀಯಳು ಅವನೊಂದಿಗೆ ಏಕೆ ಸಖ್ಯವನ್ನು ಬೆಳೆಸಿದ್ದಳು? ನಡೆದಹಾಗೆ ಎಲ್ಲವನ್ನೂ ಹೇಳಿ ನನ್ನ ಈ ಸಂಶಯವನ್ನು ಹೋಗಲಾಡಿಸು.”

ಭೀಷ್ಮ ಉವಾಚ।
ಶೃಣು ಸರ್ವಂ ಮಹಾರಾಜ ಯಥಾವೃತ್ತಮಭೂತ್ಪುರಾ ।
ಬ್ರಹ್ಮದತ್ತಸ್ಯ ಭವನೇ ತನ್ನಿಬೋಧ ಯುಧಿಷ್ಠಿರ ।। ೧-೨೦-೮೦

ಭೀಷ್ಮನು ಹೇಳಿದನು: “ಮಹಾರಾಜ! ಯುಧಿಷ್ಠಿರ! ಹಿಂದೆ ಬ್ರಹ್ಮದತ್ತನ ಭವನದಲ್ಲಿ ಏನು ನಡೆಯಿತೋ ಅವೆಲ್ಲವನ್ನೂ ಕೇಳು.

ಕಾಚಿಚ್ಛಕುಂತಿಕಾ ರಾಜನ್ಬ್ರಹ್ಮದತ್ತಸ್ಯ ವೈ ಸಖೀ ।
ಶಿತಿಪಕ್ಷಾ ಶೋಣಶಿರಾಃ ಶಿತಿಪೃಷ್ಠಾ ಶಿತೋದರೀ ।। ೧-೨೦-೮೧

ಕಪ್ಪು ರೆಕ್ಕೆಗಳ, ಕೆಂಪು ತಲೆಯ, ಕಪ್ಪು ಪುಚ್ಛದ ಮತ್ತು ಕಪ್ಪು ಹೊಟ್ಟೆಯ ಯಾವುದೋ ಒಂದು ಪಕ್ಷಿಯು ಬ್ರಹ್ಮದತ್ತನ ಸಖಿಯಾಗಿತ್ತು.

ಸಖೀ ಸಾ ಬ್ರಹ್ಮದತ್ತಸ್ಯ ಸುದೃಢಂ ಬದ್ಧಸೌಹೃದಾ ।
ತಸ್ಯಾಃ ಕುಲಾಯಮಭವದ್ಗೇಹೇ ತಸ್ಯ ನರೋತ್ತಮ ।। ೧-೨೦-೮೨

ಆ ಸಖಿಯು ತನ್ನ ಸುಹಾರ್ದತೆಯಿಂದ ಬ್ರಹ್ಮದತ್ತನನ್ನು ಸುದೃಢವಾಗಿ ಬಂಧಿಸಿಬಿಟ್ಟಿದ್ದಳು. ನರೋತ್ತಮ! ಆದುದರಿಂದ ಅವಳ ಗೂಡು ಅವನ ಭವನದಲ್ಲಿಯೇ ಆಗಿದ್ದಿತ್ತು.

ಸಾ ಸದಾಹನಿ ನಿರ್ಗತ್ಯ ತಸ್ಯ ರಾಜ್ಞೋ ಗೃಹೋತ್ತಮಾತ್ ।
ಚಚಾರಾಂಭೋಧಿತೀರೇಷು ಪಲ್ವಲೇಷು ಸರಸ್ಸು ಚ ।। ೧-೨೦-೮೩

ಆ ಪಕ್ಷಿಯು ಪ್ರತಿದಿನವೂ ರಾಜನ ಉತ್ತಮ ಗೃಹದಿಂದ ಹೊರಟು ಸಮುದ್ರತೀರಗಳಲ್ಲಿ, ಕೆರೆ-ಸರೋವರಗಳಲ್ಲಿ ಸಂಚರಿಸುತ್ತಿತ್ತು.

ನದೀಪರ್ವತಕುಂಜೇಷು ವನೇಷೂಪವನೇಷು ಚ ।
ಪ್ರಫುಲ್ಲೇಷು ತಡಾಗೇಷು ಕಹ್ಲಾರೇಷು ಸುಗಂಧಿಷು ।। ೧-೨೦-೮೪
ಕುಮುದೋತ್ಪಲಕಿಂಜಲ್ಕಸುರಭೀಕೃತವಾಯುಷು ।
ಹಂಸಸಾರಸಘುಷ್ಟೇಷು ಕಾರಂಡವರುತೇಷು ಚ ।। ೧-೨೦-೮೫
ಚರಿತ್ವಾ ತೇಷು ಸಾ ರಾಜನ್ನಿಶಿ ಕಾಂಪಿಲ್ಯಮಾಗಮತ್ ।

ರಾಜನ್! ಅದು ಸುಗಂಧಿತ ಕಮಲಗಳು ಅರಳಿರುವ, ಗಾಳಿಯು ಕುಮುದ, ಉತ್ಪಲ ಮತ್ತು ಕಿಂಜಲ್ಕಗಳ ಸುಂಗಂಧಗಳಿಂದ ತುಂಬಿರುವ , ಮತ್ತು ಹಂಸ, ಸಾಅಸ, ಕಾರಂಡಗಳ ಕಲರವಗಳಿಂದ ಗುಂಜಿಸುತ್ತಿದ್ದ ನದೀ, ಪರ್ವತ, ಕುಂಜ, ವನ ಮತ್ತು ಉಪವನಗಳಲ್ಲಿ ಸುತ್ತಾಡಿ ಅದು ರಾತ್ರಿವೇಳೆ ಕಾಂಪಿಲ್ಯನಗರಕ್ಕೆ ಹಿಂದಿರುಗುತ್ತಿತ್ತು.

ನೃಪತೇರ್ಭವನಂ ಪ್ರಾಪ್ಯ ಬ್ರಹ್ಮದತ್ತಸ್ಯ ಧೀಮತಃ ।। ೧-೨೦-೮೬
ರಾಜ್ಞಾ ತೇನ ಸದಾ ರಾಜನ್ ಕಥಾಯೋಗಂ ಚಕಾರ ಸಾ ।
ಆಶ್ಚರ್ಯಾಣಿ ಚ ದೃಷ್ಟಾನಿ ಯಾನಿ ವೃತ್ತಾನಿ ಕಾನಿಚಿತ್ ।। ೧-೨೦-೮೭
ಚರಿತ್ವಾ ವಿವಿಧಾಂದೇಶಾನ್ಕಥಯಾಮಾಸ ಸಾ ನಿಶಿ ।

ರಾಜನ್! ಧೀಮಂತ ನೃಪತಿ ಬ್ರಹ್ಮದತ್ತನ ಭವನವನ್ನು ಸೇರಿ ಅದು ಸದಾ ನಡೆದ ಆಶ್ಚರ್ಯಗಳನ್ನು, ನೋಡಿದ ಯಾವುದೇ ವೃತ್ತಾಂತಗಳನ್ನು, ವಿವಿಧದೇಶಗಳಲ್ಲಿ ನಡೆದುದನ್ನು ರಾಜನಿಗೆ ಪ್ರತಿ ರಾತ್ರಿ ಹೇಳುತ್ತಿತ್ತು.

ಕದಾಚಿತ್ತಸ್ಯ ನೃಪತೇರ್ಬ್ರಹ್ಮದತ್ತಸ್ಯ ಕೌರವ ।। ೧-೨೦-೮೮
ಪುತ್ರೋಽಭೂದ್ರಾಜಶಾರ್ದೂಲ ಸರ್ವಸೇನೇತಿ ವಿಶ್ರುತಃ ।
ಪೂಜನೀಯಾಽಥ ಸಾ ತಸ್ಮಿನ್ಪ್ರಾಸೂತಾಂಡಮಥಾಪಿ ಚ ।। ೧-೨೦-೮೯

ಕೌರವ! ರಾಜಶಾರ್ದೂಲ! ಒಮ್ಮೆ ನೃಪತಿ ಬ್ರಹ್ಮದತ್ತನಿಗೆ ಸರ್ವಸೇನ ಎಂದು ವಿಶ್ರುತನಾದ ಪುತ್ರನು ಜನಿಸಿದನು. ಅದೇ ಸಮಯದಲ್ಲಿ ಪೂಜನೀಯಳೂ ಕೂಡ ಒಂದು ಅಂಡವನ್ನಿತ್ತಳು.

ತಸ್ಮಿನ್ನೀಡೇ ಪುರಾ ಹ್ಯೇಕಂ ತತ್ಕಿಲ ಪ್ರಾಸ್ಫುಟತ್ತದಾ ।
ಸ್ಫುಟಿತೋ ಮಾಂಸಪಿಂಡಸ್ತು ಬಾಹುಪಾದಾಸ್ಯಸಂಯುತಃ ।। ೧-೨೦-೯೦

ಒಂದು ದಿನ ಆ ಅಂಡವು ಗೂಡಿನಿಂದ ಕೆಳಗೆ ಬಿದ್ದು ಒಡೆಯಲು, ಅದರಿಂದ ಮುಖ ಮತ್ತು ಕೈಕಾಲುಗಳನ್ನು ಹೊಂದಿದ್ದ ಮಾಂಸದ ಪಿಂಡವೊಂದು ಹೊರಬಿದ್ದಿತು.

ಬಭ್ರುವಕ್ತ್ರಶ್ಚಕ್ಷುರ್ಹೀನೋ ಬಭೂವ ಪೃಥಿವೀಪತೇ ।
ಚಕ್ಷುಷ್ಮಾನಪ್ಯಭೂತ್ಪಶ್ಚಾದೀಷತ್ಪಕ್ಷೋತ್ಥಿತಶ್ಚ ಹ ।। ೧-೨೦-೯೧

ಪೃಥಿವೀಪತೇ! ಅದರ ಮುಖವು ಕೆಟ್ಟ ಬಣ್ಣದ್ದಾಗಿತ್ತು, ಕಣ್ಣುಗಳಿರಲಿಲ್ಲ. ಕೆಲವು ಸಮಯದ ನಂತರ ಅದರ ಕಣ್ಣುಗಳು ತೆರೆದುಕೊಂಡವು ಮತ್ತು ಸಣ್ಣ ಸಣ್ಣ ರೆಪ್ಪೆಗಳೂ ಮೂಡಿಬಂದವು.

ಅಥ ಸಾ ಪೂಜನೀಯಾ ವೈ ರಾಜಪುತ್ರಸ್ವಪುತ್ರಯೋಃ ।
ತುಲ್ಯಸ್ನೇಹಾತ್ಪ್ರೀತಿಮತೀ ದಿವಸೇ ದಿವಸೇಽಭವತ್ ।। ೧-೨೦-೯೨

ಪೂಜನೀಯಳಾದರೋ ರಾಜಪುತ್ರ ಮತ್ತು ತನ್ನ ಪುತ್ರರಲ್ಲಿ ಸಮಾನ ಸ್ನೇಹವನ್ನಿಟ್ಟುಕೊಂಡು ಅವರಿಬ್ಬರನ್ನೂ ಸಮನಾಗಿ ಪ್ರೀತಿಸುತ್ತಿದ್ದಳು. ಹೀಗೆ ದಿನಗಳು ಕಳೆದವು.

ಆಜಹಾರ ಸದಾ ಸಾಯಂ ಚಂಚ್ವಾಮೃತಫಲದ್ವಯಮ್ ।
ಅಮೃತಾಸ್ವಾದಸದೃಶಂ ಸರ್ವಸೇನತನೂಜಯೋಃ ।। ೧-೨೦-೯೩

ಅದು ಸದಾ ಸಾಯಂಕಾಲ ಎರಡು ಅಮೃತದಂತೆ ಸ್ವಾದಯುಕ್ತವಾದ ಅಮೃತಫಲಗಳನ್ನು ಸರ್ವಸೇನ ಮತ್ತು ತನ್ನ ಮರಿಗೆ ಕೊಕ್ಕಿನಲ್ಲಿ ಕಚ್ಚಿ ತರುತ್ತಿತ್ತು.

ಸ ಬಾಲೋ ಬ್ರಹ್ಮದತ್ತಸ್ಯ ಪೂಜನೀಯಾಸುತಶ್ಚ ಹ ।
ತೇ ಫಲೇ ಭಕ್ಷಯಿತ್ವಾ ಚ ಪೃಥುಕೌ ಪ್ರೀತಮಾನಸೌ ।। ೧-೨೦-೯೪

ಬ್ರಹ್ಮದತ್ತನ ಬಾಲಕ ಮತ್ತು ಪೂಜನೀಯಳ ಸುತ ಇಬ್ಬರೂ ಆ ಫಲಗಳನ್ನು ತಿಂದು ತಮ್ಮದೇ ರೀತಿಯಲ್ಲಿ ಪ್ರೀತರಾಗುತ್ತಿದ್ದರು.

ಅಭೂತಾಂ ನಿತ್ಯಮೇವೇಹ ಖಾದೇತಾಂ ತೌ ಚ ತೇ ಫಲೇ ।
ತಸ್ಯಾಂ ಗತಾಯಾಮಥ ಚ ಪೂಜನ್ಯಾಂ ವೈ ಸದಾಹನಿ ।। ೧-೨೦-೯೫
ಶಿಶುನಾ ಚಟಕೇನಾಥ ಧಾತ್ರೀ ತಂ ತು ಶಿಶುಂ ನೃಪ ।
ತೇನ ಪ್ರಕ್ರೀಡಯಾಮಾಸ ಬ್ರಹ್ಮದತ್ತಾತ್ಮಜಂ ಸದಾ ।। ೧-೨೦-೯೬
ನೀಡಾತ್ತಮಾಕೃಷ್ಯ ತದಾ ಪೂಜನೀಯಾ ಕೃತಾ ತತಃ ।

ಹೀಗೆ ನಿತ್ಯವೂ ಅವರಿಬ್ಬರೂ ಆ ಫಲಗಳನ್ನು ತಿನ್ನುತ್ತಿದ್ದರು. ಪ್ರತಿದಿನ ಬೆಳಿಗ್ಗೆ ಪೂಜನಿಯು ಹೊರಟುಹೋದ ನಂತರ ಸೇವಕಿಯರು ಗೂಡಿನಿಂದ ಆ ಪಕ್ಷಿಯ ಮರಿಯನ್ನು ಹೊರತೆಗೆದು ಬ್ರಹ್ಮದತ್ತನ ಮಗುವಿನೊಂದಿಗೆ ಆಡಿಸುತ್ತಿದ್ದರು.

ಕ್ರೀಡತಾ ರಾಜಪುತ್ರೇಣ ಕದಾಚಿಚ್ಚಟಕಃ ಸ ತು ।। ೧-೨೦-೯೭
ನಿಗೃಹೀತಃ ಕಂಧರಾಯಾಂ ಶಿಶುನಾ ದೃಢಮುಷ್ಟಿನಾ ।
ದುರ್ಭಂಗಮುಷ್ಟಿನಾ ರಾಜನ್ನಸೂನ್ಸದ್ಯಸ್ತ್ವಜೀಜಹತ್ ।। ೧-೨೦-೯೮

ಒಮ್ಮೆ ರಾಜಪುತ್ರನು ಆಟವಾಡುತ್ತಾ ತನ್ನ ದೃಢಮುಷ್ಟಿಯಿಂದ ಆ ಮರಿಪಕ್ಷಿಯ ಕುತ್ತಿಗೆಯನ್ನು ಹಿಡಿದುಬಿಟ್ಟನು. ರಾಜನ್! ಅವನ ಮುಷ್ಟಿಯನ್ನು ಬಿಡಿಸುವುದರಲ್ಲಿಯೇ ಆ ಪಕ್ಷಿಯು ಜೀವವನ್ನು ತೊರೆದುಬಿಟ್ಟಿತು.

ತಂ ತು ಪಂಚತ್ವಮಾಪನ್ನಂ ವ್ಯಾತ್ತಾಸ್ಯಂ ಬಾಲಘಾತಿತಮ್ ।
ಕಥಂಚಿನ್ಮೋಚಿತಂ ದೃಷ್ಟ್ವಾ ನೃಪತಿರ್ದುಃಖಿತೋಽಭವತ್।। ೧-೨೦-೯೯

ಹೇಗೋ ಮಾಡಿ ಆ ಬಾಲಕನ ಮುಷ್ಟಿಯನ್ನು ಬಿಡಿಸಲು ಆಗಾಗಲೇ ಪಂಚತ್ವವನ್ನು ಹೊಂದಿ ಬಾಯಿಕಳೆದು ಸತ್ತು ಬಿದ್ದಿದ್ದ ಪಕ್ಷಿಯ ಮರಿಯನ್ನು ನೃಪತಿಯು ದುಃಖಿತನಾದನು.

ಧಾತ್ರೀಂ ತಸ್ಯ ಜಗರ್ಹೇ ತಾಂ ತದಾಽಶ್ರುಪರಮೋ ನೃಪಃ ।
ತಸ್ಥೌ ಶೋಕಾನ್ವಿತೋ ರಾಜಂಶೋಚಂಸ್ತಂ ಚಟಕಂ ತದಾ ।। ೧-೨೦-೧೦೦

ಅಶ್ರುಗಳನ್ನು ಸುರಿಸುತ್ತಿದ್ದ ನೃಪನು ರಾಜಕುಮಾರನ ಧಾತ್ರಿಯನ್ನು ನಿಂದಿಸಿದನು. ರಾಜನ್! ಆಗ ಆ ಮರಿಪಕ್ಷಿಗಾಗಿ ರಾಜನು ಶೋಕಾನ್ವಿತನಾಗಿ ಶೋಕಿಸುತ್ತಾ ನಿಂತುಬಿಟ್ಟನು.

ಪೂಜನೀಯಾಪಿ ತತ್ಕಾಲೇ ಗೃಹೀತ್ವಾ ತು ಫಲದ್ವಯಮ್ ।
ಬ್ರಹ್ಮದತ್ತಸ್ಯ ಭವನಮಾಜಗಾಮ ವನೇಚರೀ ।। ೧-೨೦-೧೦೧

ಆ ಸಮಯದಲ್ಲಿ ವನೇಚರೀ ಪೂಜನೀಯಳು ಎರಡು ಫಲಗಳನ್ನು ಹಿಡಿದುಕೊಂಡು ಬ್ರಹ್ಮದತ್ತನ ಭವನಕ್ಕೆ ಆಗಮಿಸಿದಳು.

ಅಥಾಪಶ್ಯತ್ತಮಾಗಮ್ಯ ಗೃಹೇ ತಸ್ಮಿನ್ನರಾಧಿಪ ।
ಪಂಚಭೂತಪರಿತ್ಯಕ್ತಂ ಶೋಚ್ಯಂ ತಂ ಸ್ವತನೂದ್ಭವಮ್ ।। ೧-೨೦-೧೦೨

ನರಾಧಿಪ! ಮನೆಗೆ ಬಂದು ಅಲ್ಲಿ ಪಂಚಭೂತಗಳನ್ನು ಪರಿತ್ಯಜಿಸಿ ಮೃತವಾಗಿದ್ದ ತನ್ನ ಮರಿಯನ್ನು ನೋಡಿ ಶೋಕಿಸಿದಳು.

ಮುಮೋಹ ದೃಷ್ಟ್ವಾ ತಂ ಪುತ್ರಂ ಪುನಃ ಸಂಜ್ಞಾಮಥಾಲಭತ್ ।
ಲಬ್ಧಸಂಜ್ಞಾ ಚ ಶಾ ರಾಜನ್ವಿಲಲಾಪ ತಪಸ್ವಿನೀ ।। ೧-೨೦-೧೦೩

ರಾಜನ್! ಆ ಪುತ್ರನನ್ನು ನೋಡಿ ಮೂರ್ಛೆಹೋದಳು. ಪುನಃ ಸಂಜ್ಞೆಗಳನ್ನು ಪಡೆದುಕೊಂಡು ಎಚ್ಚೆತ್ತು ಆ ತಪಸ್ವಿನಿಯು ವಿಲಪಿಸತೊಡಗಿದಳು.

ಪೂಜನೀಯೋವಾಚ ।
ನ ತು ತ್ವಮಾಗತಾಂ ಪುತ್ರ ವಾಶಂತೀಂ ಪರಿಸರ್ಪಸಿ ।
ಕುರ್ವಂಶ್ಚಾಟುಸಹಸ್ರಾಣಿ ಅವ್ಯಕ್ತಕಲಯಾ ಗಿರಾ ।। ೧-೨೦-೧೦೪

ಪೂಜನೀಯಳು ಹೇಳಿದಳು: “ಪುತ್ರ! ನಾನಾದರೂ ನಿನ್ನ ಬಳಿ ಕೂ-ಕೂ ಎಂದು ಶಬ್ಧಮಾಡುತ್ತಾ ಬರುತ್ತಿದ್ದೇನೆ. ನೀನು ಏಕೆ ನಿನ್ನ ಮಧುರ ವಾಣಿಯಿಂದ ಸಹಸ್ರಾರು ಅವ್ಯಕ್ತ ಶಬ್ಧಗಳನ್ನು ಮಾಡುತ್ತಾ ನನ್ನ ಬಳಿಬರುತ್ತಿಲ್ಲ?

ವ್ಯಾದಿತಾಸ್ಯಃ ಕ್ಷುಧಾರ್ತಶ್ಚ ಪೀತೇನಾಸ್ಯೇನ ಪುತ್ರಕ ।
ಶೋಣೇನ ತಾಲುನಾ ಪುತ್ರ ಕಥಮದ್ಯ ನ ಸರ್ಪಸಿ ।। ೧-೨೦-೧೦೫

ಪುತ್ರಕ! ಪುತ್ರ! ಕ್ಷುಧಾರ್ತನಾಗಿ ಹಳದೀ ಮುಖದ ಮತ್ತು ಕೆಂಪು ಕೊಕ್ಕಿನ ನಿನ್ನ ಬಾಯಿಯನ್ನು ಕಳೆದು ಇಂದು ನನ್ನ ಬಳಿ ಏಕೆ ಬರುತ್ತಿಲ್ಲ?

ಪಕ್ಷಾಭ್ಯಾಂ ತ್ವಾಂ ಪರಿಷ್ವಜ್ಯ ನನು ವಾಶಾಮಿ ಚಾಪ್ಯಹಮ್ ।
ಚಿಚೀಕೂಚೀತಿ ವಾಶಂತಂ ತ್ವಾಮದ್ಯ ನ ಶೃಣೋಮಿ ಕಿಮ್ ।। ೧-೨೦-೧೦೬

ರೆಕ್ಕೆಗಳಿಂದ ನಾನು ನಿನ್ನನ್ನು ಬಿಗಿದಪ್ಪುತ್ತಿದ್ದರೂ ಇಂದು ನಿನ್ನ ಚೀ ಚೀ ಕೂಗನ್ನು ಏಕೆ ಕೇಳುತ್ತಿಲ್ಲ?

ಮನೋರಥೋ ಯಸ್ತು ಮಮ ಪಶ್ಯೇಯಂ ಪುತ್ರಕಂ ಕದಾ ।
ವ್ಯಾತ್ತಾಸ್ಯಂ ವಾರಿ ಯಾಚಂತಂ ಸ್ಫುರತ್ಪಕ್ಷಂ ಮಮಾಗ್ರತಃ ।। ೧-೨೦-೧೦೭
ಸ ಮೇ ಮನೋರಥೋ ಭಗ್ನಸ್ತ್ವಯಿ ಪಂಚತ್ವಮಾಗತೇ ।
ವಿಲಪ್ಯೈವಂ ಬಹುವಿಧಂ ರಾಜಾನಮಥ ಸಾಬ್ರವೀತ್ ।। ೧-೨೦-೧೦೮

ಎಂದು ನನ್ನ ಪುತ್ರನನ್ನು ನೋಡಿ ಬಾಯಿ ಕಳೆದು ನೀರು ಕೇಳುತ್ತಾ ನನ್ನೆದುರು ಹಾರಾಡುತ್ತಿರುವುದನ್ನು ಯಾವಾಗ ಕಾಣೆತ್ತೇನೆ ಎಂಬ ನನ್ನ ಮನೋರಥವಿತ್ತು. ನೀನು ಪಂಚತ್ವವನ್ನು ಹೊಂದಿ ನನ್ನ ಆ ಮನೋರಥವು ಭಗ್ನವಾಗಿ ಹೋಯಿತು!” ಹೀಗೆ ಬಹುವಿಧವಾಗಿ ವಿಲಪಿಸುತ್ತಾ ಅವಳು ರಾಜನಿಗೆ ಹೇಳಿದಳು:

ನನು ಮೂರ್ಧಾಭಿಷಿಕ್ತಸ್ತ್ವಂ ಧರ್ಮಂ ವೇತ್ಸಿ ಸನಾತನಮ್ ।
ಅದ್ಯ ಕಸ್ಮಾನ್ಮಮ ಸುತಂ ಧಾತ್ರ್ಯಾ ಘಾತಿತವಾನಸಿ ।। ೧-೨೦-೧೦೯
ತವ ಪುತ್ರೇಣ ಚಾಕೃಷ್ಯ ಕ್ಷತ್ರಿಯಾಧಮ ಶಂಸ ಮೇ ।

“ಕ್ಷತ್ರಿಯಾಧಮ! ನೀನಾಧರೋ ಮೂರ್ಧಾಭಿಷಿಕ್ತನಾಗಿದ್ದೀಯೆ. ಸನಾತನ ಧರ್ಮವನ್ನು ತಿಳಿದಿದ್ದೀಯೆ. ಆದರೂ ಇಂದು ಈ ನನ್ನ ಮಗನನ್ನು ಧಾತ್ರಿ ಮತ್ತು ನಿನ್ನ ಪುತ್ರನಿಂದ ಎಳೆಸಿ ಏಕೆ ಕೊಲ್ಲಿಸಿದೆ? ನನಗೆ ಹೇಳು.

ನ ಚ ನೂನಂ ಶ್ರುತಾ ತೇಽಭೂದಿಯದಿಯಮಾಂಗೀರಸೀ ಶ್ರುತಿಃ ।। ೧-೨೦-೧೧೦
ಶರಣಾಗತಃ ಕ್ಷುಧಾರ್ತಶ್ಚ ಶತ್ರುಭಿಶ್ಚಾಭ್ಯುಪದ್ರುತಃ ಚಿರೋಷಿತಶ್ಚ ಸ್ವಗೃಹೇ ಪಾತವ್ಯಃ ಸರ್ವದಾ ಭವೇತ್ ।। ೧-೨೦-೧೧೧

ಶರಣಾಗತರಾದವರ, ಕ್ಷುಧಾರ್ತರಾದವರು, ಶತ್ರುವಿನಿಂದ ಬೆನ್ನಟ್ಟಲ್ಪಟ್ಟವರು, ಮತ್ತು ತನ್ನ ಮನೆಯಲ್ಲಿ ಬಹಳ ಕಾಲದಿಂದ ವಾಸಿಸುತ್ತಿರುವವರನ್ನು ಸದಾ ರಕ್ಷಿಸಬೇಕು ಎನ್ನುವ ಆಂಗೀರಸೀ ಶೃತಿಯನ್ನು ನೀನು ಕೇಳಿಲ್ಲವೇ?

ಅಪಾಲಯನ್ನರೋ ಯಾತಿ ಕುಂಭೀಪಾಕಮಸಂಶಯಮ್ ।
ಕಥಮಸ್ಯ ಹವಿರ್ದೇವಾ ಗೃಹ್ಣಂತಿ ಪಿತರಃ ಸ್ವಧಾಮ್ ।। ೧-೨೦-೧೧೨

ಇವರನ್ನು ಪಾಲಿಸದೇ ಇದ್ದ ನರನು ಕುಂಭೀಪಾಕ ನರಕಕ್ಕೆ ಹೋಗುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ. ಅಂಥವನಿಂದ ಹೇಗೆ ದೇವತೆಗಳು ಹವಿಸ್ಸನ್ನೂ ಪಿತೃಗಳು ಸ್ವಧಾವನ್ನೂ ಸ್ವೀಕರಿಸುತ್ತಾರೆ?”

ಏವಮುಕ್ತ್ವಾ ಮಹಾರಾಜ ದಶಧರ್ಮಗತಾ ಸತೀ ।
ಶೋಕಾರ್ತಾ ತಸ್ಯ ಬಾಲಸ್ಯ ಚಕ್ಷುಷೀ ನಿರ್ಬಿಭೇದ ಸಾ।। ೧-೨೦-೧೧೩
ಕರಾಭ್ಯಾಂ ರಾಜಪುತ್ರಸ್ಯ ತತಸ್ತಚ್ಚಕ್ಷುರಸ್ಫುಟತ್ ।
ಕೃತ್ವಾ ಚಾಂಧಂ ನೃಪಸುತಮುತ್ಪಪಾತ ತತೋಽಂಬರಮ್ ।। ೧-೨೦-೧೧೪

ಮಹಾರಾಜ! ಹೀಗೆ ಹೇಳಿ ಶೋಕಾರ್ತಳಾಗಿ ದಶಧರ್ಮವನ್ನು1 ಪಡೆದ ಅವಳು ರಾಜನ ಬಾಲಕನ ಎರಡೂ ಕಣ್ಣುಗಳನ್ನು ತನ್ನ ಎರಡು ಪಂಜುಗಳಿಂದ ಹರಿದು, ಒಡೆದುಹಾಕಿದಳು. ಈ ರೀತಿ ರಾಜಕುಮಾರನನ್ನು ಕುರುಡನನ್ನಾಗಿ ಮಾಡಿ ಪೂಜನೀಯಾ ಆಕಾಶಕ್ಕೆ ಹಾರಿದಳು.

ಅಥ ರಾಜಾ ಸುತಂ ದೃಷ್ಟ್ವಾ ಪೂಜನೀಯಾಮುವಾಚ ಹ ।
ವಿಶೋಕಾ ಭವ ಕಲ್ಯಾಣಿ ಕೃತಂ ತೇ ಭೀರು ಶೋಭನಮ್ ।। ೧-೨೦-೧೧೫

ಆಗ ರಾಜನು ಸುತನನ್ನು ನೋಡಿ ಪೂಜನೀಯಾಳಿಗೆ ಹೇಳಿದನು: “ಕಲ್ಯಾಣೀ! ಭೀರು! ಶೋಕರಹಿತಳಾಗು. ನೀನು ಶೋಭನೀಯವಾದುದನ್ನೇ ಮಾಡಿದ್ದೀಯೆ.

ಗತಶೋಕಾ ನಿವರ್ತಸ್ವ ಅಜರ್ಯಂ ಸಖ್ಯಮಸ್ತು ತೇ ।
ಪುರೇವ ವಸ ಭದ್ರಂ ತೇ ನಿವರ್ತಸ್ವ ರಮಸ್ವ ಚ ।। ೧-೨೦-೧೧೬

ಈಗ ನೀನು ಶೋಕವನ್ನು ತೊರೆದು ಹಿಂದಿರುಗಿ ಬಾ. ನಿನ್ನ ಸ್ನೇಹವು ಸದೃಢವಾಗಿರಲಿ. ನಿನಗೆ ಮಂಗಳವಾಗಲಿ. ಹಿಂದಿರುಗಿ ಬಾ ಮತ್ತು ಹಿಂದಿನಂತೆಯೇ ಆನಂದಪೂರ್ವಕವಾಗಿ ಇಲ್ಲಿಯೇ ವಾಸವಾಗಿರು.

ಪುತ್ರಪೀಡೋದ್ಭವಶ್ಚಾಪಿ ನ ಕೋಪಃ ಪರಮಸ್ತ್ವಯಿ ।
ಮಮಾಸ್ತಿ ಸಖಿ ಭದ್ರಂ ತೇ ಕರ್ತವ್ಯಂ ಚ ಕೃತಂ ತ್ವಯಾ ।। ೧-೨೦-೧೧೭

ಸಖೀ! ನಿನಗೆ ಮಂಗಳವಾಗಲಿ! ಪುತ್ರನಿಗೆ ಪೀಡೆಯನ್ನೊದಗಿಸಿದರೂ ನಿನ್ನ ಮೇಲೆ ನನಗೆ ಸ್ವಲ್ಪವೂ ಕೋಪವಿಲ್ಲ. ಯಾವುದನ್ನು ಮಾಡಬೇಕಾಗಿತ್ತೋ ಅದನ್ನೇ ನೀನು ಮಾಡಿದ್ದೀಯೆ.”

ಪೂಜನೀಯೋವಾಚ।
ಆತ್ಮೌಪಮ್ಯೇನ ಜಾನಾಮಿ ಪುತ್ರಸ್ನೇಹಂ ತವಾಪ್ಯಹಮ್ ।
ನ ಚಾಹಂ ವಸ್ತುಮಿಚ್ಛಾಮಿ ತವ ಪುತ್ರಮಚಕ್ಷುಷಮ್ ।
ಕೃತ್ವಾ ವೈ ರಾಜಶಾರ್ದೂಲ ತ್ವದ್ಗೃಹೇ ಕೃತಕಿಲ್ಬಿಷಾ ।। ೧-೨೦-೧೧೮

ಪೂಜನೀಯಳು ಹೇಳಿದಳು: “ರಾಜಶರ್ದೂಲ! ನಾನು ನಿನ್ನ ಪುತ್ರಸ್ನೇಹವನ್ನು ಅರಿಯಬಲ್ಲೆ ಏಕೆಂದರೆ ಅದು ನನ್ನಲ್ಲಿಯೂ ಇದೆ. ನಿನ್ನ ಪುತ್ರನನ್ನು ಕುರುಡನನ್ನಾಗಿ ಮಾಡಿದ ಪಾಪಕರ್ಮಿ ನಾನು ನಿನ್ನ ಮನೆಯಲ್ಲಿ ವಾಸಿಸಲು ಬಯಸುವುದಿಲ್ಲ.

ಗಾಥಾಶ್ಚಾಪ್ಯುಶನೋ ಗೀತಾ ಇಮಾಃ ಶೃಣು ಮಯೇರಿತಾಃ ।
ಕುಮಿತ್ರಂ ಚ ಕುದೇಶಂ ಚ ಕುರಾಜಾನಂ ಕುಸೌಹೃದಮ್ ।
ಕುಪುತ್ರಂ ಚ ಕುಭಾರ್ಯಾಂ ಚ ದೂರತಃ ಪರಿವರ್ಜಯೇತ್ ।। ೧-೨೦-೧೧೯

ನೀನು ನನ್ನಿಂದ ಉಶನ ಶುಕ್ರಾಚಾರ್ಯಾನು ಹಾಡಿದ ಈ ಗೀತೆಯನ್ನು ಕೇಳು: “ಕುಮಿತ್ರನನ್ನು, ಕುದೇಶವನ್ನು, ಕುರಾಜನನ್ನು, ಕುಸೌಹೃದನನ್ನು, ಕುಪುತ್ರನನ್ನು. ಮತ್ತು ಕುಭಾರ್ಯೆಯನ್ನು ದೂರದಿಂದಲೇ ಪರಿತ್ಯಜಿಸಬೇಕು.

ಕುಮಿತ್ರೇ ಸೌಹೃದಂ ನಾಸ್ತಿ ಕುಭಾರ್ಯಾಯಾಂ ಕುತೋ ರತಿಃ ।
ಕುತಃ ಪಿಂಡಃ ಕುಪುತ್ರೇ ವೈ ನಾಸ್ತಿ ಸತ್ಯಂ ಕುರಾಜನಿ ।। ೧-೨೦-೧೨೦

ಕುಮಿತ್ರನಲ್ಲಿ ಸೌಹಾರ್ದತೆಯಿರುವುದಿಲ್ಲ. ಕುಭಾರ್ಯೆಯಿಂದ ಸುಖವು ದೊರೆಯುವುದಿಲ್ಲ. ಕುಪುತ್ರನಿಂದ ಪಿಂಡವು ದೊರಕುವುದು ಕಷ್ಟ ಮತ್ತು ಕುರಾಜನಲ್ಲಿ ಸತ್ಯವಿರುವುದಿಲ್ಲ.

ಕುಸೌಹೃದೇ ಕ್ವ ವಿಶ್ವಾಸಃ ಕುದೇಶೇ ನ ತು ಜೀವ್ಯತೇ ।
ಕುರಾಜನಿ ಭಯಂ ನಿತ್ಯಂ ಕುಪುತ್ರೇ ಸರ್ವತೋಽಸುಖಮ್ ।। ೧-೨೦-೧೨೧

ಕುಸೌಹೃದನಲ್ಲಿ ಎಲ್ಲಿಯ ವಿಶ್ವಾಸ? ಕುದೇಶದಲ್ಲಿ ಜೀವಿಸಬಾರದು. ಕುರಾಜನಿಂದ ನಿತ್ಯವೂ ಭಯವಿರುತ್ತದೆ ಮತ್ತು ಕುಪುತ್ರನಿಂದ ಎಲ್ಲೆಡೆಯೂ ಅಸುಖವೇ ಉಂಟಾಗುತ್ತದೆ.

ಅಪಕಾರಿಣಿ ವಿಸ್ರಂಭಂ ಯಃ ಕರೋತಿ ನರಾಧಮಃ ।
ಅನಾಥೋ ದುರ್ಬಲೋ ಯದ್ವನ್ನ ಚಿರಂ ಸ ತು ಜೀವತಿ ।। ೧-೨೦-೧೨೨

ಅಪಕಾರಣಿಯೊಂದಿಗೆ ಯಾವ ನರಾಧಮನು ವಿಶ್ವಾಸವನ್ನಿಡುತ್ತಾನೋ ಅವನು ಅನಾಥ ದುರ್ಬಲನಂತೆ ಬಹುಕಾಲ ಜೀವಿಸಿರುವುದಿಲ್ಲ.

ನ ವಿಶ್ವಸೇದವಿಶ್ವಸ್ತೇ ವಿಶ್ವಸ್ತೇ ನಾತಿವಿಶ್ವಸೇತ್ ।
ವಿಶ್ವಾಸಾದ್ಭಯಮುತ್ಪನ್ನಂ ಮೂಲಾನ್ಯಪಿ ನಿಕೃಂತತಿ ।। ೧-೨೦-೧೨೩

ಅವಿಶ್ವಾಸಿಯಲ್ಲಿ ವಿಶ್ವಾಸವಿಲ್ಲದಿರಲಿ ಮತ್ತು ವಿಶ್ವಾಸಿಯಲ್ಲಿಯೂ ಅತಿಯಾದ ವಿಶ್ವಾಸವಿಲ್ಲದಿರಲಿ. ಏಕೆಂದರೆ ವಿಶ್ವಾಸದಿಂದ ಉತ್ಪನ್ನವಾಗುವ ಭಯವು ಮೂಲವನ್ನೇ ಕತ್ತರಿಸಿಬಿಡುತ್ತದೆ.

ರಾಜಸೇವಿಶು ವಿಶ್ವಾಸಂ ಗರ್ಭಸಂಕರಿತೇಷು ಚ ।
ಯಃ ಕರೋತಿ ನರೋ ಮೂಢೋ ನ ಚಿರಂ ಸ ತು ಜೀವತಿ ।। ೧-೨೦-೧೨೪

ರಾಜಸೇವಕರು ಮತ್ತು ಗರ್ಭಸಂಕರರಲ್ಲಿ ವಿಶ್ವಾಸವನ್ನಿಡುವ ಮೂಢ ನರನು ಬಹುಕಾಲ ಜೀವಿಸಿರುವುದಿಲ್ಲ.

ಅಪ್ಯುನ್ನತಿಂ ಪ್ರಾಪ್ಯ ನರಃ ಪ್ರಾವಾರಃ ಕೀಟಕೋ ಯಥಾ ।
ಸ ವಿನಶ್ಯತ್ಯಸಂದೇಹಮಾಹೈವಮುಶನಾ ನೃಪ ।। ೧-೨೦-೧೨೫

ನೃಪ! ಮೇಲೆ ಹಾರುತ್ತಿದ್ದ ಕೀಟವು ರೆಕ್ಕೆಗಳು ಉದುರಿದ ನಂತರ ಹೇಗೆ ಮೃತ್ಯುವಿನ ಬಾಯಿಯಲ್ಲಿ ಬೀಳುವುದೋ ಅದೇರೀತಿ ಇಂತಹ ಪುರುಷರಲ್ಲಿ ವಿಶ್ವಾಸವನ್ನಿಟ್ಟವನು ನಿಸ್ಸಂದೇಹವಾಗಿ ವಿನಾಶ ಹೊಂದುತ್ತಾನೆ.” ಹೀಗೆ ಶುಕ್ರಾಚಾರ್ಯನು ಹೇಳಿದ್ದನು.

ಅಪಿ ಮಾರ್ದವಭಾವೇನ ಗಾತ್ರಂ ಸಂಲೀಯ ಬುದ್ಧಿಮಾನ್ ।
ಅರಿಂ ನಾಶಯತೇ ನಿತ್ಯಂ ಯಥಾ ವಲ್ಲಿರ್ಮಹಾದ್ರುಮಮ್ ।। ೧-೨೦-೧೨೬

ಬಳ್ಳಿಯು ಮಹಾವೃಕ್ಷವನ್ನು ಹೇಗೆ ಮೃದುಭಾವದಿಂದ ಆಲಂಗಿಸಿಕೊಂಡಿರುತ್ತದೆಯೋ ಹಾಗೆ ಬುದ್ಧಿಮಾನನೂ ಕೂಡ ಶತ್ರುವನ್ನು ನಿತ್ಯವೂ ಮೃದುಭಾವದಿಂದ ನಾಶಪಡಿಸಬೇಕು.

ಮೃದುರಾರ್ದ್ರಃ ಕೃಶೋ ಭೂತ್ವಾ ಶನೈಃ ಸಂಲೀಯತೇ ರಿಪುಃ ।
ವಲ್ಮೀಕ ಇವ ವೃಕ್ಷಸ್ಯ ಪಶ್ಚಾನ್ಮೂಲಾನಿ ಕೃಂತತಿ ।। ೧-೨೦-೧೨೭

ಒರಲೆಯು ಮರವನ್ನು ಹೇಗೋ ಹಾಗೆ ಮೃದುವೂ, ತೇವವುಳ್ಳವನೂ, ಕೃಶನೂ ಆಗಿ ರಿಪುವನ್ನು ಮೆಲ್ಲನೇ ಅಪ್ಪಿಕೊಳ್ಳುತ್ತಾ ನಂತರ ಮೂಲವನ್ನೇ ಕತ್ತರಿಸಬೇಕು.

ಅದ್ರೋಹಸಮಯಂ ಕೃತ್ವಾ ಮುನೀನಾಮಗ್ರತೋ ಹರಿಃ ।
ಜಘಾನ ನಮುಚಿಂ ಪಶ್ಚಾದಪಾಂ ಫೇನೇನ ಪಾರ್ಥಿವ ।। ೧-೨೦-೧೨೮

ಪಾರ್ಥಿವ! ಇಂದ್ರನು ಎದುರಿನಲ್ಲಿ ಮುನಿಗಳಿಗೆ ದ್ರೋಹವನ್ನೆಸಗುವುದಿಲ್ಲ ಎಂದು ಒಪ್ಪಂದ ಮಾಡಿಕೊಂಡು ಹಿಂದಿನಿಂದ ನೀರಿನ ನೊರೆಯ ಮೂಲಕ ನಮುಚಿಯನ್ನು ಸಂಹರಿಸಿದನು.

ಸುಪ್ತಂ ಮತ್ತಂ ಪ್ರಮತ್ತಂ ವಾ ಘಾತಯಂತಿ ರಿಪುಂ ನರಾಃ ।
ವಿಷೇಣ ವಹ್ನಿನಾ ವಾಽಪಿ ಶಸ್ತ್ರೇಣಾಪ್ಯಥ ಮಾಯಯಾ।। ೧-೨೦-೧೨೯

ಮನುಷರು ಮಲಗಿರುವ, ಮತ್ತರಾಗಿರುವ, ಅಥವಾ ಪ್ರಮತ್ತರಾಗಿರುವ ಶತ್ರುಗಳನ್ನೂ ವಿಷದಿಂದಗಾಲೀ ಬೆಂಕಿಯಿಂದಾಗಲೀ ಶಸ್ತ್ರದಿಂದಾಗಲೀ ಮೋಸದಿಂದ ಕೊಲ್ಲುತ್ತಾರೆ.

ನ ಚ ಶೇಷಂ ಪ್ರಕುರ್ವಂತಿ ಪುನರ್ವೈರಭಯಾನ್ನರಾಃ ।
ಘಾತಯಂತಿ ಸಮೂಲಂ ಹಿ ಶ್ರುತ್ವೇಮಾಮುಪಮಾಂ ನೃಪ ।। ೧-೨೦-೧೩೦

ನೃಪ! ಪುನಃ ವೈರವುಂಟಾಗಬಹುದೆಂಬ ಭಯದಿಂದ ನರರು ಶತ್ರುಗಳನ್ನು ಉಳಿಸುವುದಿಲ್ಲ. ಈ ಉಪಮೆಯನ್ನು ಕೇಳಿ ಸಮೂಲವಾಗಿ ಶತ್ರುಗಳನ್ನು ಸಂಹರಿಸುತ್ತಾರೆ.

ಶತ್ರುಶೇಷಮೃಣಾಚ್ಛೇಷಂ ಶೇಷಮಗ್ನೇಶ್ಚ ಭೂಮಿಪ ।
ಪುನರ್ವರ್ಧೇತ ಸಂಭೂಯ ತಸ್ಮಾಚ್ಛೇಷಂ ನ ಶೇಷಯೇತ್ ।। ೧-೨೦-೧೩೧

ಭೂಮಿಪ! ಶತ್ರುಗಳು ಮತ್ತು ಅಗ್ನಿ ಇವುಗಳಲ್ಲಿ ಸ್ವಲ್ಪವೇ ಉಳಿದುಕೊಂಡರೂ ಅವು ಪುನಃ ಒಟ್ಟಾಗಿ ಹೆಚ್ಚಾಗುತ್ತವೆ. ಆದುರದಿಂದ ಇವುಗಳಲ್ಲಿ ಏನೂ ಉಳಿಯದಂತೆ ನಾಶಗೊಳಿಸಬೇಕು.

ಹಸತೇ ಜಲ್ಪತೇ ವೈರೀ ಏಕಪಾತ್ರೇ ಭುನಕ್ತಿ ಚ ।
ಏಕಾಸನಂ ಚಾರೋಹತಿ ಸ್ಮರತೇ ತಚ್ಚ ಕಿಲ್ಬಿಷಮ್ ।। ೧-೨೦-೧೩೨

ವೈರಿಯು ಒಟ್ಟಿಗೇ ನಗುತ್ತಿದ್ದರೂ, ಮಾತನಾಡುತ್ತಿದ್ದರೂ, ಒಂದೇ ಪಾತ್ರೆಯಿಂದ ಊಟಮಾಡುತ್ತಿದ್ದರೂ, ಮತ್ತು ಒಂದೇ ಆಸನದಲ್ಲಿ ಕುಳಿತುಕೊಂಡಿದ್ದರೂ ಸದಾ ಅವನು ವೈರತ್ವವನ್ನು ಸ್ಮರಿಸಿಕೊಂಡಿರುತ್ತಾನೆ.

ಕೃತ್ವಾ ಸಂಬಂಧಕಂ ಚಾಪಿ ವಿಶ್ವಸೇಚ್ಛತ್ರುಣಾ ನ ಹಿ ।
ಪುಲೋಮಾನಂ ಜಘಾನಾಜೌ ಜಾಮಾತಾ ಸಂಶತಕ್ರತುಃ ।। ೧-೨೦-೩೩

ಶತ್ರುವನ್ನು ಸಂಬಂಧಿಕನನ್ನಾಗಿ ಮಾಡಿಕೊಂಡರೂ ಅವನ ಮೇಲೆ ವಿಶ್ವಾಸವನ್ನಿಡಬಾರದು. ಏಕೆಂದರೆ ಅಳಿಯನಾಗಿದ್ದರೂ ಶತಕ್ರತುವು ಪುಲೋಮನನ್ನು ಯುದ್ಧದಲ್ಲಿ ಸಂಹರಿಸಿದನು.

ನಿಧಾಯ ಮನಸಾ ವೈರಂ ಪ್ರಿಯಂ ವಕ್ತೀಹ ಯೋ ನರಃ ।
ಉಪಸರ್ಪೇನ್ನ ತಂ ಪ್ರಾಜ್ಞಃ ಕುರಂಗ ಇವ ಲುಬ್ಧಕಮ್ ।। ೧-೨೦-೧೩೪

ಮನಸ್ಸಿನಲ್ಲಿ ವೈರವನ್ನಿಟ್ಟುಕೊಂಡು ಪ್ರಿಯವಾಗಿ ಮಾತನಾಡುವ ನರನ ಬಳಿ ಪ್ರಾಜ್ಞನಾದವನು ಜಿಂಕೆಯು ನರಿಯ ಬಳಿಹೋಗದಂತೆ ಬಳಿಸಾರಬಾರದು.

ನ ಚಾಸನ್ನೇ ನಿವಸ್ತವ್ಯಂ ಸವೈರೇ ವರ್ಧಿತೇ ರಿಪೌ ।
ಪಾತಯೇತ್ತಂ ಸಮೂಲಂ ಹಿ ನದೀರಯ ಇವ ದ್ರುಮಮ್ ।। ೧-೨೦-೧೩೫

ವೈರದಿಂದ ವರ್ಧಿಸುತ್ತಿರುವ ರಿಪುವಿನ ಬಳಿ ವಾಸಿಸಬಾರದು. ಪ್ರವಾಹದಿಂದಿರುವ ನದಿಯು ಸಮೂಲವಾಗಿ ವೃಕ್ಷವನ್ನು ಬೀಳಿಸುವಂತೆ ಶತ್ರುವೂ ಅವನನ್ನು ಬೀಳಿಸುತ್ತಾನೆ.

ಅಮಿತ್ರಾದುನ್ನತಿಂ ಪ್ರಾಪ್ಯ ನೋನ್ನತೋಽಸ್ಮೀತಿ ವಿಶ್ವಸೇತ್ ।
ತಸ್ಮಾತ್ಪ್ರಾಪ್ಯೋನ್ನತಿಂ ನಶ್ಯೇತ್ಪ್ರಾವಾರ ಇವ ಕೀಟಕಃ ।। ೧-೨೦-೧೩೬

ಅಮಿತ್ರನಿಗಿಂತ ಉನ್ನತಿಯನ್ನು ಪಡೆದು ನಾನು ಉನ್ನತನಾಗಿದ್ದೇನೆ ಎಂದು ವಿಶ್ವಾಸದಿಂದಿರಬಾರದು. ಅವನು ಉನ್ನತಿಯನ್ನು ಪಡೆದುಕೊಂಡಿದ್ದರೂ ರೆಕ್ಕೆಗಳಿರುವ ಕೀಟದಂತೆ ನಾಶಹೊಂದುತ್ತಾನೆ.

ಇತ್ಯೇತಾ ಹ್ಯುಶನೋಗೀತಾ ಗಾಥಾ ಧಾರ್ಯಾ ವಿಪಶ್ಚಿತಾ ।
ಕುರ್ವತಾ ಚಾತ್ಮರಕ್ಷಾಂ ವೈ ನರೇಣ ಪೃಥಿವೀಪತೇ ।। ೧-೨೦-೧೩೭

ಪೃಥಿವೀಪತೇ! ವಿದ್ವಾನ ನರನು ಆತ್ಮರಕ್ಷಣೆಯನ್ನು ಮಾಡಿಕೊಳ್ಳುತ್ತಾ ಶುಕ್ರಾಚಾರ್ಯನು ಹಾಡಿರುವ ಈ ಗಾಥಗಳನ್ನು ಮನಸ್ಸಿನಲ್ಲಿ ಸ್ಮರಿಸಿಕೊಂಡಿರಬೇಕು.

ಮಯಾ ಸಕಿಲ್ಬಿಷಂ ತುಭ್ಯಂ ಪ್ರಯುಕ್ತಮತಿದಾರುಣಮ್ ।
ಪುತ್ರಮಂಧಂ ಪ್ರಕುರ್ವಂತ್ಯಾ ತಸ್ಮಾನ್ನೋ ವಿಶ್ವಸೇ ತ್ವಯಿ ।। ೧-೨೦-೧೩೮

ನಾನು ನಿನ್ನ ಪುತ್ರನನ್ನು ಅಂಧನನ್ನಾಗಿಸಿ ಅತಿ ದಾರುಣ ಅಪರಾಧವನ್ನು ಮಾಡಿದ್ದೇನೆ. ಆದುದರಿಂದ ಇನ್ನು ನಾನು ನಿನ್ನ ಮೇಲೆ ವಿಶ್ವಾಸವನ್ನಿಡುವುದಿಲ್ಲ.”

ಏವಮುಕ್ತ್ವಾ ಪ್ರದುದ್ರಾವ ತದಾಽಕಾಶಂ ಪತಂಗಿನೀ ।
ಇತ್ಯೇತತ್ತೇ ಮಯಾಖ್ಯಾತಂ ಪುರಾಭೂತಮಿದಂ ನೃಪ ।। ೧-೨೦-೧೩೯
ಬ್ರಹ್ಮದತ್ತಸ್ಯ ರಾಜೇಂದ್ರ ಯದ್ವೃತ್ತಂ ಪೂಜನೀಯಯಾ ।
ಶ್ರಾದ್ಧಂ ಚ ಪೃಚ್ಛಸೇ ಯನ್ಮಾಂ ಯುಧಿಷ್ಠಿರ ಮಹಾಮತೇ ।। ೧-೨೦-೧೪೦

ಹೀಗೆ ಹೇಳಿ ಆ ಪತಂಗಿನಿಯು ಆಕಾಶಕ್ಕೆ ಹಾರಿಹೋಯಿತು. ನೃಪ! ರಾಜೇಂದ್ರ! ಯುಧಿಷ್ಠಿರ! ಮಹಾಮತೇ! ನೀನು ಶ್ರಾದ್ಧದ ಕುರಿತು ಕೇಳಿದಂತೆ ಹಿಂದೆ ನಡೆದ ಬ್ರಹ್ಮದತ್ತ-ಪೂಜನೀಯರ ವೃತ್ತಾಂತವನ್ನು ನಿನಗೆ ಹೇಳಿದ್ದೇನೆ.

ಅತಸ್ತೇ ವರ್ತಯಿಷ್ಯೇಽಹಮಿತಿಹಾಸಂ ಪುರಾತನಮ್ ।
ಗೀತಂ ಸನತ್ಕುಮಾರೇಣ ಮಾರ್ಕಂಡೇಯಾಯ ಪೃಚ್ಛತೇ ।। ೧-೨೦-೧೪೧

ಈಗ ನಾನು ಪುರಾತನ ಇತಿಹಾಸವಾದ ಮಾರ್ಕಂಡೇಯನು ಕೇಳಿದ ಸನತ್ಕುಮಾರನ ಗೀತೆಯನ್ನು ಹೇಳುತ್ತೇನೆ.

ಶ್ರಾದ್ಧಸ್ಯ ಫಲಮುದ್ದಿಶ್ಯ ನಿಯತಂ ಸುಕೃತಸ್ಯ ಚ ।
ತನ್ನಿಬೋಧ ಮಹಾರಾಜ ಸಪ್ತಜಾತಿಷು ಭಾರತ ।। ೧-೨೦-೧೪೨
ಸಗಾಲವಸ್ಯ ಚರಿತಂ ಕಂಡರೀಕಸ್ಯ ಚೈವ ಹಿ ।
ಬ್ರಹ್ಮದತ್ತತೃತೀಯಾನಾಂ ಯೋಗಿನಾಂ ಬ್ರಹ್ಮಚಾರಿಣಾಮ್ ।। ೧-೨೦-೧೪೩

ಭಾರತ! ಮಹಾರಾಜ! ಉತ್ತಮವಾಗಿ ನಡೆಸಿದ ಶ್ರಾದ್ಧದ ಪುಣ್ಯಫಲಗಳನ್ನು ಲಕ್ಷ್ಯದಲ್ಲಿಟ್ಟುಕೊಂಡು ಹೇಳಿರುವ ಗಾಲವ, ಕಂಡರೀಕ ಮತ್ತು ಮೂರನೆಯ ಬ್ರಹ್ಮದತ್ತ – ಈ ಬ್ರಹ್ಮಚಾರಿ ಯೋಗಿಗಳ ಏಳು ಜನ್ಮಗಳ ಚರಿತ್ರೆಯನ್ನು ಸಾವಧಾನಚಿತ್ತದಿಂದ ಕೇಳು.

ಸಮಾಪ್ತಿ

ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ಹರಿವಂಶಪರ್ವಣಿ ಪೂಜನೀಯೋಪಾಖ್ಯಾನೇ ಚಟಕಾಖ್ಯಂ ನಾಮ ವಿಂಶೋಽಧ್ಯಾಯಃ


  1. ಮನುಷ್ಯನನ್ನು ವ್ಯಾಕುಲ ಮತ್ತು ವಿವೇಕಹೀನನನ್ನಾಗಿ ಮಾಡುವ ಕ್ರೋಧಾದಿಗಳ ಹತ್ತು ದಶೆಗಳನ್ನು ದಶಧರ್ಮವೆಂದು ಕರೆಯುತ್ತಾರೆ. ↩︎