018: ಪಿತೃಕಲ್ಪಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಖಿಲಭಾಗೇ ಹರಿವಂಶಃ

ಹರಿವಂಶ ಪರ್ವ

ಅಧ್ಯಾಯ 18

ಸಾರ ಮಾರ್ಕಂಡೇಯನು ಪ್ರಶ್ನಿಸಲು ಸನತ್ಕುಮಾರನು ಪಿತೃಗಳ ಏಳು ಗಣಗಳ ಕುರಿತು ಹೇಳಲು ಪ್ರಾರಂಭಿಸಿದುದು (1-6). ವೈರಾಜ ಪಿತೃಗಳ ಪರಿಚಯ (7-24). ಅಗ್ನಿಷ್ವಾತ್ತಾ ಪಿತೃಗಳ ಪರಿಚಯ (25-45). ಬರ್ಹಿಷದ್ ಪಿತೃಗಳ ಪರಿಚಯ (46-56). ಸುಕಾಲ ಪಿತೃಗಳ ಪರಿಚಯ (57-58). ಆಂಗಿರಸ ಪಿತೃಗಳ ಪರಿಚಯ (59-63). ಸುಸ್ವಧಾ ಪಿತೃಗಳ ಪರಿಚಯ (64-66). ಸೋಮಪ ಪಿತೃಗಳ ಪರಿಚಯ (67-69). ಪಿತೃಗಳ ಮಹಾತ್ಮೆ (70-76). ಸನತ್ಕುಮಾರನು ಮಾರ್ಕಂಡೇಯನಿಗೆ ದಿವ್ಯದೃಷ್ಟಿಯನ್ನು ನೀಡಿದುದು (77-82).

ಮಾರ್ಕಂಡೇಯ ಉವಾಚ
ಇತ್ಯುಕ್ತೋಽಹಂ ಭಗವತಾ ದೇವದೇವೇನ ಭಾಸ್ವತಾ ।
ಸನತ್ಕುಮಾರೇಣ ಪುನಃ ಪೃಷ್ಟವಾಂದೇವಮವ್ಯಯಮ್ ।। ೧-೧೮-೧
ಸಂದೇಹಮಮರಶ್ರೇಷ್ಠಂ ಭಗವಂತಮರಿಂದಮಮ್ ।
ನಿಬೋಧ ತನ್ಮೇ ಗಾಂಗೇಯ ನಿಖಿಲಂ ಸರ್ವಮಾದಿತಃ ।। ೧-೧೮-೨

ಮಾರ್ಕಂಡೇಯನು ಹೇಳಿದನು: “ಗಾಂಗೇಯ! ಹೊಳೆಯುತ್ತಿದ್ದ ಆ ದೇವದೇವ ಭಗವಾನ್ ಸನತ್ಕುಮಾರನು ನನಗೆ ಹೀಗೆ ಹೇಳಲು ನಾನು ಆ ದೇವ ಅವ್ಯಯ ಅಮರಶ್ರೇಷ್ಠ ಭಗವಂತ ಅರಿಂದಮನಲ್ಲಿ ಪುನಃ ಕೇಳಿದೆನು. ಅವನು ಹೇಳಿದ ಸರ್ವವನ್ನೂ ನೀನು ಕೇಳು!

ಕಿಯಂತೋ ವೈ ಪಿತೃಗಣಾಃ ಕಸ್ಮಿಽಣ್ಲ್ಲೋಕೇ ಪ್ರತಿಷ್ಠಿತಾಃ ।
ವರ್ತಂತೇ ದೇವಪ್ರವರಾ ದೇವಾನಾಂ ಸೋಮವರ್ದ್ಧನಾಃ ।। ೧-೧೮-೩

ದೇವತೆಗಳಿಗೂ ದೇವತೆಗಳಾಗಿರುವ ಮತ್ತು ಸೋಮನನ್ನು ವರ್ಧಿಸುವ ಆ ಪಿತೃಗಳ ಗಣಗಳು ಎಷ್ಟು? ಮತ್ತು ಅವರು ಯಾವ ಲೋಕದಲ್ಲಿ ವಾಸಿಸುತ್ತಾರೆ?”

ಸನತ್ಕುಮಾರ ಉವಾಚ
ಸಪ್ತೈತೇ ಯಜತಾಂ ಶ್ರೇಷ್ಠ ಸ್ವರ್ಗೇ ಪಿತೃಗಣಾಃ ಸ್ಮೄತಾಃ ।
ಚತ್ವಾರೋ ಮೂರ್ತಿಮಂತಶ್ಚ ತ್ರಯಸ್ತೇಷಾಮಮೂರ್ತಯಃ ।। ೧-೧೮-೪

ಸನತ್ಕುಮಾರನು ಹೇಳಿದನು: “ಯಾಜಕರಲ್ಲಿ ಶ್ರೇಷ್ಠ! ಸ್ವರ್ಗದಲ್ಲಿರುವ ಪಿತೃಗಣಗಳು ಏಳು ಎಂದು ಹೇಳುತ್ತಾರೆ. ಅವುಗಳಲ್ಲಿ ನಾಲ್ಕು ಗಣಗಳು ಮೂರ್ತಿಮಂತರು ಮತ್ತು ಮೂರು ಅಮೂರ್ತಯರು1.

ತೇಷಾಂ ಲೋಕಂ ವಿಸರ್ಗಂ ಚ ಕಿರ್ತಯಿಷ್ಯಾಮಿ ತಚ್ಛೃಣು ।
ಪ್ರಭಾವಂ ಚ ಮಹತ್ತ್ವಂ ಚ ವಿಸ್ತರೇಣ ತಪೋಧನ ।। ೧-೧೮-೫

ತಪೋಧನ! ಅವರ ಲೋಕ, ಸೃಷ್ಟಿ, ಪ್ರಭಾವ ಮತ್ತು ಮಹತ್ವಗಳನ್ನು ವಿಸ್ತಾರವಾಗಿ ಹೇಳುತ್ತೇನೆ. ಅದನ್ನು ಕೇಳು.

ಧರ್ಮಮೂರ್ತಿಧರಾಸ್ತೇಷಾಂ ತ್ರಯೋ ಯೇ ಪರಮಾ ಗಣಾಃ ।
ತೇಷಾಂ ನಾಮಾನಿ ಲೋಕಾಶ್ಚ ಕಥಯಿಷ್ಯಾಮಿ ತಚ್ಛೃಣು।। ೧-೧೮-೬

ಧರ್ಮಮಯ ಶರೀರಗಳನ್ನು ಧರಿಸಿರುವ ಯಾವ ಮೂರು ಪರಮ ಗಣಗಳಿವೆಯೋ ಅವುಗಳ ನಾಮ-ಲೋಕಗಳನ್ನು ಹೇಳುತ್ತೇನೆ. ಅದನ್ನು ಕೇಳು.

ಲೋಕಾಃ ಸನಾತನಾ ನಾಮ ಯತ್ರ ತಿಷ್ಠಂತಿ ಭಾಸ್ವರಾಃ ।
ಅಮೂರ್ತಯಃ ಪಿತೃಗಣಾಸ್ತೇ ವೈ ಪುತ್ರಾಃ ಪ್ರಜಾಪತೇಃ ।। ೧-೧೮-೭

ಪ್ರಜಾಪತಿಯ ಪುತ್ರರಾದ ಆ ಅಮೂರ್ತ ಪ್ರಭಾಯುಕ್ತ ಪಿತೃಗಣಗಳು ವಾಸಿಸುವ ಲೋಕಕ್ಕೆ ಸನಾತನಾ ಎಂಬ ಹೆಸರು.

ವಿರಾಜಸ್ಯ ದ್ವಿಜಶ್ರೇಷ್ಠ ವೈರಾಜಾ ಇತಿ ವಿಶ್ರುತಾಃ ।
ಯಜಂತಿ ತಾಂದೇವಗಣಾಃ ವಿಧಿದೃಷ್ಟೇನ ಕರ್ಮಣಾ ।। ೧-೧೮-೮

ದ್ವಿಜಶ್ರೇಷ್ಠ! ವಿರಾಜ ಪ್ರಜಾಪತಿಯ ಪುತ್ರರು ವೈರಾಜರೆಂದು ವಿಶ್ರುತರಾಗಿದ್ದಾರೆ. ಅವರನ್ನು ದೇವಗಣಗಳು ವಿಧಿದೃಷ್ಟ ಕರ್ಮಗಳಿಂದ ಪೂಜಿಸುತ್ತವೆ.

ಏತೇ ವೈ ಯೋಗವಿಭ್ರಷ್ಟಾ ಲೋಕಾನ್ಪ್ರಾಪ್ಯ ಸನಾತನಾನ್ ।
ಪುನರ್ಯುಗಸಹಸ್ರಾಂತೇ ಜಾಯಂತೇ ಬ್ರಹ್ಮವಾದಿನಃ ।। ೧-೧೮-೯

ಯೋಗವಿಭ್ರಷ್ಟರಾದ ಇವರು ಸನಾತನ ಲೋಕವನ್ನು ಹೊಂದಿ ಪುನಃ ಸಹಸ್ರ ಯುಗಗಳ ಅಂತ್ಯದಲ್ಲಿ ಬ್ರಹ್ಮವಾದೀ ಮುನಿಗಳ ರೂಪದಲ್ಲಿ ಹುಟ್ಟುತ್ತಾರೆ.

ತೇ ತು ಪ್ರಾಪ್ಯ ಸ್ಮೃತಿಂ ಭೂಯಃ ಸಾಂಖ್ಯಂ ಯೋಗಮನುತ್ತಮಮ್ ।
ಯಾಂತಿ ಯೋಗಗತಿಂ ಸಿದ್ಧಾಃ ಪುನರಾವೃತ್ತಿದುರ್ಲಭಾಮ್ ।। ೧-೧೮-೧೦

ಅವರು ತಮ್ಮ ಹಿಂದಿನ ಸ್ಮೃತಿಯನ್ನು ಪಡೆದುಕೊಂಡು ಅನುತ್ತಮ ಸಾಂಖ್ಯಯೋಗದಿಂದ ಯೋಗಗತಿಯನ್ನು ಹೊಂದಿ ಪುನಃ ಜನ್ಮವಿಲ್ಲದ ಸಿದ್ಧರಾಗುತ್ತಾರೆ.

ಏತೇ ಸ್ಯುಃ ಪಿತರಸ್ತಾತ ಯೋಗಿನಾಂ ಯೋಗವರ್ಧನಾಃ ।
ಆಪ್ಯಾಯಯಂತಿ ಯೇ ಪೂರ್ವಂ ಸೋಮಂ ಯೋಗಬಲೇನ ಚ ।। ೧-೧೮-೧೧

ತಾತ! ಯೋಗಬಲದಿಂದ ಮೊದಲು ಸೋಮನನ್ನು ತೃಪ್ತಿಗೊಳಿಸುವ ಈ ಪಿತೃಗಳೇ ಯೋಗಿಗಳ ಯೋಗವನ್ನು ವರ್ಧಿಸುತ್ತಾರೆ.

ತಸ್ಮಾಚ್ಛ್ರಾದ್ಧಾನಿ ದೇಯಾನಿ ಯೋಗಿನಾಂ ತು ವಿಶೇಷತಃ ।
ಏಷ ವೈ ಪ್ರಥಮಃ ಸರ್ಗಃ ಸೋಮಪಾನಾಂ ಮಹಾತ್ಮನಾಮ್ ।। ೧-೧೮-೧೨

ಆದುದರಿಂದ ಈ ಯೋಗಿಗಳಿಗೆ ವಿಶೇಷರೂಪದ ಶ್ರಾದ್ಧಗಳನ್ನು ನೀಡಬೇಕು. ಇದೇ ಮಹಾತ್ಮ ಸೋಮಪರ ಪ್ರಥಮ ಸೃಷ್ಟಿ.

ಏತೇಷಾಂ ಮಾನಸೀ ಕನ್ಯಾ ಮೇನಾ ನಾಮ ಮಹಾಗಿರೇಃ ।
ಪತ್ನೀ ಹಿಮವತಃ ಶ್ರೇಷ್ಠಾ ಯಸ್ಯಾ ಮೈನಾಕ ಉಚ್ಯತೇ ।। ೧-೧೮-೧೩

ವೈರಾಜ ಪಿತೃಗಳ ಮಾನಸಿ ಕನ್ಯೆಯ ಹೆಸರು ಮೇನಾ. ಅವಳು ಮಹಾಗಿರಿ ಹಿಮವತನ ಶ್ರೇಷ್ಠ ಪತ್ನಿ. ಅವಳ ಮಗನೇ ಮೈನಾಕ ಎಂದು ಕರೆಯಲ್ಪಟ್ಟನು.

ಮೈನಾಕಸ್ಯ ಸುತಃ ಶ್ರೀಮಾನ್ಕ್ರೌಂಚೋ ನಾಮ ಮಹಾಗಿರಿಃ ।
ಪರ್ವತಪ್ರವರಃ ಪುತ್ರೋ ನಾನಾರತ್ನಸಮನ್ವಿತಃ ।। ೧-೧೮-೧೪

ಮೈನಾಕನ ಮಗನು ಶ್ರೀಮಾನ್ ಕ್ರೌಂಚ ಎಂಬ ಹೆಸರಿನ ಮಹಾಗಿರಿ. ಈ ಪರ್ವತಪ್ರವರ ಪುತ್ರನು ನಾನಾರತ್ನಗಳಿಂದ ಸಮನ್ವಿತನಾಗಿದ್ದಾನೆ.

ತಿಸ್ರಃ ಕನ್ಯಾಸ್ತು ಮೇನಾಯಾಂ ಜನಯಾಮಾಸ ಶೈಲರಾಟ್ ।
ಅಪರ್ಣಾಮೇಕಪರ್ಣಾಂ ಚ ತ್ರಿತೀಯಾಮೇಕಪಾಟಲಾಮ್ ।। ೧-೧೮-೧೫

ಶೈಲರಾಜ ಹಿವವತನು ಮೇನೆಯಲ್ಲಿ ಮೂರು ಕನ್ಯೆಯರನ್ನು ಹುಟ್ಟಿಸಿದನು: ಅಪರ್ಣಾ, ಏಕಪರ್ಣಾ ಮತ್ತು ಮೂರನೆಯವಳು ಏಕಪಾಟಲಾ.

ತಪಶ್ಚರಂತ್ಯಃ ಸುಮಹದ್ದುಶ್ಚರಂ ದೇವದಾನವೈಃ ।
ಲೋಕಾನ್ಸಂತಾಪಯಾಮಾಸುಸ್ತಾಸ್ತಿಸ್ರಃ ಸ್ಥಾಣೂಜಂಗಮಾನ್ ।। ೧-೧೮-೧೬

ಈ ಮೂವರು ಕನ್ಯೆಯರು ದೇವ-ದಾನವರಿಗೂ ಮಹಾ ದುಶ್ಚರವಾಗಿದ್ದ ತಪಸ್ಸನ್ನು ತಪಿಸಿದರು. ಇದರಿಂದ ಸ್ಥಾವರ-ಜಂಗಮಗಳ ಮೂರು ಲೋಕಗಳೂ ಸುಡತೊಡಗಿದವು.

ಆಹಾರಮೇಕಪರ್ಣೇನ ಏಕಪರ್ಣಾ ಸಮಾಚರತ್ ।
ಪಾಟಲಾಪುಷ್ಪಮೇಕಂ ಚ ಆದಧಾವೇಕಪಾಟಲಾ ।। ೧-೧೮-೧೭

ಏಕಪರ್ಣಳು ಒಂದೇ ಒಂದು ಎಲೆಯನ್ನು ಆಹಾರವನ್ನಾಗಿ ಮತ್ತು ಏಕಪಾಟಲಳು ಒಂದೇ ಒಂದು ಪಾಟಲಾ ಪುಷ್ಪವನ್ನು ಆಹಾರವನ್ನಾಗಿ ಸ್ವೀಕರಿಸಿ ತಪಸ್ಸನ್ನಾಚರಿಸಿದರು.

ಏಕಾ ತತ್ರ ನಿರಾಹಾರಾ ತಾಂ ಮಾತಾ ಪ್ರತ್ಯಷೇಧಯತ್ ।
ಉ ಮಾ ಇತಿ ನಿಷೇಧಂತೀ ಮಾತೃಸ್ನೇಹೇನ ದುಃಖಿತಾ ।। ೧-೧೮-೧೮

ಅವರಲ್ಲಿ ಒಬ್ಬಳು (ಅಪರ್ಣಳು) ನಿರಾಹಾರಿಯಾಗಿದ್ದಳು. ಆಗ ಅವರ ತಾಯಿಯು ಮಾತೃಸ್ನೇಹದಿಂದ ದುಃಖಿತಳಾಗಿ “ಉ ಮಾ” ಅರ್ಥಾತ್ “ಹೀಗೆ ಮಾಡಬೇಡ!” ಎಂದು ಹೇಳಿ ಅವಳಿಗೆ ಉಪವಾಸವನ್ನು ನಿಷೇಧಿಸಿದಳು.

ಸ ತಥೋಕ್ತಾ ತಯಾ ಮಾತ್ರಾ ದೇವೀ ದುಶ್ಚರಚಾರಿಣೀ।
ಉಮೇತ್ಯೇವಾಭವತ್ಖ್ಯಾತಾ ತ್ರಿಷು ಲೋಕೇಷು ಸುಂದರೀ ।। ೧-೧೮-೧೯

ತಾಯಿಯು ಹೀಗೆ ಹೇಳಿದುದರಿಂದ ಆ ದುಶ್ಚರ ತಪಸ್ಸನ್ನು ನಡೆಸುತ್ತಿದ್ದ ಸುಂದರೀ ದೇವಿಯು ಉಮಾ ಎಂದು ಮೂರು ಲೋಕಗಳಲ್ಲಿ ವಿಖ್ಯಾತಳಾದಳು.

ತಥೈವ ನಾಮ್ನಾ ತೇನೇಹ ವಿಶ್ರುತಾ ಯೋಗಧರ್ಮಿಣೀ ।
ಏತತ್ತು ತ್ರಿಕುಮಾರೀಕಂ ಜಗತ್ಸ್ಥಾಸ್ಯತಿ ಭಾರ್ಗವ ।। ೧- ೧೮-೨೦

ಹಾಗೆಯೇ ಅವಳು ಯೋಗಧರ್ಮಿಣೀ ಎಂಬ ಹೆಸರಿನಿಂದಲೂ ವಿಶ್ರುತಳಾದಳು. ಭಾರ್ಗವ! ಈ ಮೂರು ಕುಮಾರಿಯರ ತಪೋಬಲದಿಂದ ಜಗತ್ತು ನಿಂತಿದೆ.

ತಪಃಶರೀರಾಸ್ತಾಃ ಸರ್ವಾಸ್ತಿಸ್ರೋ ಯೋಗಬಲಾನ್ವಿತಾಃ ।
ಸರ್ವಾಶ್ಚ ಬ್ರಹ್ಮವಾದಿನ್ಯಃ ಸರ್ವಾಶ್ಚೈವೋರ್ಧ್ವರೇತಸಃ ।। ೧-೧೮-೨೧

ಇವರ ಶರೀರಗಳು ತಪಸ್ಸಿನಿಂದ ತುಂಬಿವೆ. ಈ ಮೂವರೂ ಯೋಗಬಲಾನ್ವಿತರು ಎಲ್ಲರೂ ಬ್ರಹ್ಮವಾದಿಗಳು. ಎಲ್ಲರೂ ಊರ್ಧ್ವರೇತಸರು.

ಉಮಾ ತಾಸಾಂ ವರಿಷ್ಠಾ ಚ ಜ್ಯೇಷ್ಠಾ ಚ ವರವರ್ಣಿನೀ ।
ಮಹಾಯೋಗಬಲೋಪೇತಾ ಮಹಾದೇವಮುಪಸ್ಥಿತಾ ।। ೧-೧೮-೨೨

ಅವರಲ್ಲಿ ಜ್ಯೇಷ್ಠಳಾದ ಉಮೆಯು ವರವರ್ಣಿನಿಯೂ, ಶ್ರೇಷ್ಠೆಯೂ ಮತ್ತು ಮಹಾಯೋಗಬಲಾನ್ವಿತಳೂ ಆಗಿದ್ದಳು. ಅವಳ ವಿವಾಹವು ಮಹಾದೇವನೊಂದಿಗೆ ಆಯಿತು.

ಅಸಿತಸ್ಯೈಕಪರ್ಣಾ ತು ದೇವಲಸ್ಯ ಮಹಾತ್ಮನಃ ।
ಪತ್ನೀ ದತ್ತಾ ಮಹಾಬ್ರಹ್ಮನ್ಯೋಗಾಚಾರ್ಯಾಯ ಧೀಮತೇ ।। ೧-೧೮-೨೩

ಏಕಪರ್ಣಳು ಮಹಾತ್ಮ ಮಹಾಬ್ರಹ್ಮನ್ ಯೋಗಾಚಾರ್ಯ ಧೀಮಂತ ಅಸಿತ-ದೇವಲನ ಪತ್ನಿಯಾದಳು.

ಜೈಗೀಷವ್ಯಾಯ ತು ತಥಾ ವಿದ್ಧಿ ತಾಮೇಕಪಾತಲಾಮ್ ।
ಏತೇ ಚಾಪಿ ಮಹಾಭಾಗೇ ಯೋಗಾಚಾರ್ಯಾವುಪಸ್ಥಿತೇ ।। ೧-೧೮-೨೪

ಮಹಾಭಾಗೇ ಏಕಪಾಟಲಳು ಯೋಗಾಚಾರ್ಯ ಜೈಗೀಷವ್ಯನ ಪತ್ನಿಯಾದಳು ಎಂದು ತಿಳಿ.

ಲೋಕಾಃ ಸೋಮಪದಾ ನಾಮ ಮರೀಚೇರ್ಯತ್ರ ವೈ ಸುತಾಃ ।
ಪಿತರೋ ಯತ್ರ ವರ್ತಂತೇ ದೇವಾಸ್ತಾನ್ಭಾವಯಂತ್ಯುತ ।। ೧-೧೮-೨೫

ಪಿತೃಗಳಿಗೆ ಸೋಮಪದಾ ಎನ್ನುವ ಇನ್ನೊಂದು ಲೋಕವಿದೆ. ಅಲ್ಲಿ ಮರೀಚಿಯ ಸುತರು ಪಿತೃಗಳಾಗಿ ವಾಸಿಸುತ್ತಾರೆ ಮತ್ತು ದೇವತೆಗಳು ಅವರನ್ನು ಪೂಜಿಸುತ್ತಾರೆ.

ಅಗ್ನಿಷ್ವಾತ್ತಾ ಇತಿ ಖ್ಯಾತಾಃ ಸರ್ವ ಏವಾಮಿತೌಜಸಃ ।
ಏತೇಷಾಂ ಮಾನಸೀ ಕನ್ಯಾ ಅಚ್ಛೋದಾ ನಾಮ ನಿಮ್ನಗಾ ।। ೧-೧೮-೨೬

ಈ ಎಲ್ಲ ಅಮಿತೌಜಸರೂ ಅಗ್ನಿಷ್ವಾತ್ತಾ ಎಂದು ಖ್ಯಾತರಾಗಿದ್ದಾರೆ. ಅಚ್ಛೋದಾ ಎಂಬ ಹೆಸರಿನ ನದಿಯು ಅವರ ಮಾನಸೀ ಕನ್ಯೆ.

ಅಚ್ಛೋದಂ ನಾಮ ವಿಖ್ಯಾತಂ ಸರೋ ಯಸ್ಯಾಃ ಸಮುತ್ಥಿತಮ್ ।
ತಯಾ ನ ದೃಷ್ಟಪೂರ್ವಾಸ್ತೇ ಪಿತರಸ್ತು ಕದಾಚನ ।। ೧-೧೮-೨೭

ಅವಳಿಂದಲೇ ಅಚ್ಛೋದ ಎಂಬ ಹೆಸರಿನ ವಿಖ್ಯಾತ ಸರೋವರವು ಹುಟ್ಟಿಕೊಂಡಿತು. ಅವಳು ತನ್ನ ಪಿತೃಗಳನ್ನು ಹಿಂದೆ ಎಂದೂ ನೋಡಿರಲಿಲ್ಲ.

ಅಪ್ಯಮೂರ್ತಾನಥ ಪಿತೄನ್ಸಾ ದದರ್ಶ ಶುಚಿಸ್ಮಿತಾ ।
ಸಂಭೂತಾ ಮನಸಾ ತೇಷಾಂ ಪಿತೄನ್ಸ್ವಾನ್ನಾಭಿಜಾನತೀ ।। ೧-೧೮-೨೮

ಅಮೂರ್ತರಾಗಿದ್ದ ಪಿತೃಗಳನ್ನು ಕಂಡಮೇಲೂ ಆ ಶುಚಿಸ್ಮಿತೆಯು ಅವರು ಪಿತೃಗಳೆಂದೂ ಮತ್ತು ಅವರ ಮನಸ್ಸಿನಿಂದ ತಾನು ಹುಟ್ಟಿದವಳೆಂದೂ ತಿಳಿದುಕೊಳ್ಳಲಿಲ್ಲ.

ವ್ರೀಡಿತಾ ತೇನ ದುಃಖೇನ ಬಭೂವ ವರವರ್ಣಿನೀ ।
ಸಾ ದೃಷ್ಟ್ವಾ ಪಿತರಂ ವವ್ರೇ ವಸುಂ ನಾಮಾಂತರಿಕ್ಷಗಮ್ ।। ೧-೧೮-೨೯
ಅಮಾವಸುರಿತಿ ಖ್ಯಾತಮಾಯೋಃ ಪುತ್ರಂ ಯಶಸ್ವಿನಮ್ ।
ಅದ್ರಿಕಾಽಪ್ಸರಸಾಯುಕ್ತಂ ವಿಮಾನೇಽಧಿಷ್ಠಿತಂ ದಿವಿ ।। ೧-೧೮-೩೦

ಆ ದುಃಖದಿಂದ ಆ ವರವರ್ಣಿನಿಯು ನಾಚಿಕೊಂಡಳು. ತನ್ನ ಪಿತೃಗಳನ್ನು ಕಂಡ ಅವಳು ಅಪ್ಸರೆ ಅದ್ರಿಕೆಯೊಡನೆ ವಿಮಾನದಲ್ಲಿ ಕುಳಿತು ಅಂತರಿಕ್ಷದಲ್ಲಿ ಹೋಗುತ್ತಿದ್ದ ಆಯುವಿನ ಪುತ್ರ ಅಮಾವಸುವೆಂದು ಖ್ಯಾತನಾಗಿದ್ದ ಯಶಸ್ವಿನೀ ವಸುವನ್ನು ತನ್ನ ತಂದೆಯೆಂದು ತಿಳಿದುಕೊಂಡಳು.

ಸಾ ತೇನ ವ್ಯಭಿಚಾರೇಣ ಮನಸಃ ಕಾಮರೂಪಿಣೀ ।
ಪಿತರಂ ಪ್ರಾರ್ಥಯಿತ್ವಾನ್ಯಂ ಯೋಗಭ್ರಷ್ಟಾ ಪಪಾತ ಹ ।। ೧-೧೮-೩೧

ಮನಸ್ಸಿನಲ್ಲಿ ಅನ್ಯನನ್ನು ತಂದೆಯನ್ನಾಗಿ ಸ್ವೀಕರಿಸಿದ ಆ ಕಾಮರೂಪಿಣಿಯು ಯೋಗಭ್ರಷ್ಟಳಾಗಿ ಬೀಳತೊಡಗಿದಳು.

ತ್ರೀಣ್ಯಪಶ್ಯದ್ವಿಮಾನಾನಿ ಪತಮಾನಾ ದಿವಶ್ಚ್ಯುತಾ ।
ತ್ರಸರೇಣುಪ್ರಮಾಣಾನಿ ಸಾಽಪಶ್ಯತ್ತೇಷೂ ತಾನ್ಪಿತೄನ್ ।। ೧-೧೮-೩೨
ಸುಸೂಕ್ಷ್ಮಾನಪರಿವ್ಯಕ್ತಾನಗ್ನೀನಗ್ನೀಷ್ವಿವಾಹಿತಾನ್ ।
ತ್ರಾಯಧ್ವಮಿತ್ಯುವಾಚಾರ್ತಾ ಪತಂತೀ ತಾನವಾಕ್ಶಿರಾಃ ।। ೧-೧೮-೩೩

ದಿವದಿಂದ ಚ್ಯುತಳಾಗಿ ಬೀಳುತ್ತಿರುವಾಗ ಅವಳು ಕಿಟಕಿಯ ಸಂಧಿಯಿಂದ ಬೀಳುವ ಸೂರ್ಯನ ಕಿರಣಗಳ ಮಧ್ಯದಲ್ಲಿ ಕಾಣುವ ಧೂಳಿನ ಕಣದ ಪ್ರಮಾಣದ ಮೂರು ವಿಮಾನಗಳನ್ನು ನೋಡಿದಳು. ಅವುಗಳಲ್ಲಿ ಅತ್ಯಂತ ಸೂಕ್ಷ್ಮಾಕಾರಗಳಲ್ಲಿ ಅಗ್ನಿಯಲ್ಲಿ ಉರಿಯುತ್ತಿರುವ ಅಗ್ನಿಯಂತೆ ಜ್ವಾಜಲ್ಯಮಾನರಾಗಿರುವ ಅಗ್ನಿಷ್ವಾತ್ತಾ ಪಿತೃಗಳನ್ನು ನೋಡಿದಳು. ಕೆಳಗೆ ಬೀಳುತ್ತಿದ್ದ ಅವಳು ಅವರನ್ನು ಉದ್ದೇಶಿಸಿ “ಕಾಪಾಡಿ!” ಎಂದು ಕೂಗಿಕೊಂಡಳು.

ತೈರುಕ್ತಾ ಸಾ ತು ಮಾ ಭೈಷೀರಿತಿ ವ್ಯೋಮ್ನಿ ವ್ಯವಸ್ಥಿತಾ ।
ತತಃ ಪ್ರಸಾದಯಾಮಾಸ ತಾನ್ಪಿತೄಂದೀನಯಾ ಗಿರಾ ।। ೧-೧೮-೩೪

“ಹೆದರಬೇಡ!” ಎಂದು ಅವರು ಹೇಳಲು ಅವಳು ಆಕಾಶದಲ್ಲಿಯೇ ನಿಂತುಕೊಂಡಳು. ಆಗ ಅವಳು ದೀನಸ್ವರದಲ್ಲಿ ಆ ಪಿತೃಗಳನ್ನು ಪ್ರಸನ್ನಗೊಳಿಸತೊಡಗಿದಳು.

ಊಚುಸ್ತೇ ಪಿತರಃ ಕನ್ಯಾಂ ಭ್ರಷ್ಟೈಶ್ವರ್ಯಾಂ ವ್ಯತಿಕ್ರಮಾತ್ ।
ಭ್ರಷ್ಟೈಶ್ವರ್ಯಾ ಸ್ವದೋಷೇಣ ಪತಸಿ ತ್ವಂ ಶುಚಿಸ್ಮಿತೇ ।। ೧-೧೮-೩೫

ವ್ಯತಿಕ್ರಮದ ಕಾರಣದಿಂದ ಐಶ್ವರ್ಯಗಳಿಂದ ಭ್ರಷ್ಟಳಾದ ಅವಳಿಗೆ ಪಿತೃಗಳು ಹೇಳಿದರು: “ಶುಚಿಸ್ಮಿತೇ! ನಿನ್ನದೇ ದೋಷದ ಕಾರಣದಿಂದ ನೀನು ಐಶ್ವರ್ಯ-ಭ್ರಷ್ಟಳಾಗಿ ಬೀಳುತ್ತಿರುವೆ.

ಯೈಃ ಕ್ರಿಯಂತೇ ಹಿ ಕರ್ಮಾಣಿ ಶರೀರೈರ್ದಿವಿ ದೇವತೈಃ ।
ತೈರೇವ ತತ್ಕರ್ಮಫಲಂ ಪ್ರಾಪ್ನುವಂತೀಹ ದೇವತಾಃ ।। ೧-೧೮-೩೬

ದಿವಿಯಲ್ಲಿ ದೇವತೆಗಳು ತಮ್ಮ ಶರೀರಗಳಿಂದ ಯಾವ ಕರ್ಮಗಳನ್ನು ಮಾಡುತ್ತಾರೋ ಆ ಕರ್ಮಫಲಗಳನ್ನು ದೇವತೆಗಳು ಅದೇ ಶರೀರಗಳಲ್ಲಿ ಹೊಂದುತ್ತಾರೆ.

ಸದ್ಯಃ ಫಲಂತಿ ಕರ್ಮಾಣಿ ದೇವತ್ವೇ ಪ್ರೇತ್ಯ ಮಾನುಷೇ ।
ತಸ್ಮಾತ್ತ್ವಂ ತಪಸಃ ಪುತ್ರಿ ಪ್ರೇತ್ಯೇದಂ ಪ್ರಾಪ್ಸ್ಯಸೇ ಫಲಮ್ ।। ೧-೧೮-೩೭

ದೇವತೆಗಳು ತಮ್ಮ ಕರ್ಮಫಲಗಳನ್ನು ತಕ್ಷಣವೇ ಹೊಂದುತ್ತಾರೆ. ಮನುಷ್ಯರು ತಮ್ಮ ಕರ್ಮಫಲಗಳನ್ನು ಮರಣದ ನಂತರ ಹೊಂದುತ್ತಾರೆ. ಆದುದರಿಂದ ಪುತ್ರಿ! ಮರಣದ ನಂತರ ನೀನು ತಪಸ್ಸಿನ ಫಲವನ್ನು ಪಡೆದುಕೊಳ್ಳುತ್ತೀಯೆ.”

ಇತ್ಯುಕ್ತಾ ಪಿತೃಭಿಃ ಸಾ ತು ಪಿತೄನ್ಪ್ರಾಸಾದಯತ್ಸ್ವಕಾನ್ ।
ಧ್ಯಾತ್ವಾ ಪ್ರಸಾದಂ ತೇ ಚಕ್ರುಸ್ತಸ್ಯಾಃ ಸರ್ವೇಽನುಕಂಪಯಾ ।। ೧-೧೮-೩೮

ಪಿತೃಗಳು ಹೀಗೆ ಹೇಳಲು ಅವಳು ತನ್ನ ಪಿತೃಗಳನ್ನು ಪ್ರಸನ್ನಗೊಳಿಸಿದಳು. ಆಗ ಅವರೆಲ್ಲರೂ ಅನುಕಂಪಗೊಂಡು ಅವಳಿಗೆ ಒಳ್ಳೆಯದನ್ನು ಮಾಡಲು ಯೋಚಿಸಿದರು.

ಅವಶ್ಯಂ ಭಾವಿನಂ ಜ್ಞಾತ್ವಾ ತೇಽರ್ಥಮೂಚುಸ್ತತಸ್ತು ತಾಮ್ ।
ಅಸ್ಯ ರಾಜ್ಞೋ ವಸೋಃ ಕನ್ಯಾ ತ್ವಮಪತ್ಯಂ ಭವಿಷ್ಯಸಿ ।। ೧-೧೮-೩೯

ಅವಶ್ಯವಾಗಿ ಮುಂದೆ ನಡೆಯುವ ಘಟನೆಯ ಅರ್ಥವನ್ನು ತಿಳಿದು ಅವರು ಅವಳಿಗೆ ಹೇಳಿದರು: “ಈ ರಾಜಾ ವಸುವಿನ ಕನ್ಯೆ ಮಗಳಾಗುತ್ತೀಯೆ.

ಉತ್ಪನ್ನಸ್ಯ ಪೃಥಿವ್ಯಾಂ ತು ಮಾನುಷೇಷು ಮಹಾತ್ಮನಃ ।
ಕನ್ಯಾ ಚ ಭೂತ್ವಾ ಲೋಕಾನ್ಸ್ವಾನ್ಪುನಃ ಪ್ರಾಪ್ಸ್ಯಸಿ ದುರ್ಲಭಾನ್ ।। ೧-೧೮-೪೦

ಈ ಮಹಾತ್ಮನು ಪೃಥ್ವಿಯಲ್ಲಿ ಮನುಷ್ಯನಾಗಿ ಹುಟ್ಟಿದಾಗ ನೀನು ಅವನ ಕನ್ಯೆಯಾಗಿ ಪುನಃ ನಿನ್ನ ದುರ್ಲಭ ಲೋಕಗಳನ್ನು ಪಡೆಯುತ್ತೀಯೆ.

ಪರಾಶರಸ್ಯ ದಾಯಾದಂ ತ್ವಂ ಪುತ್ರಂ ಜನಯಿಷ್ಯಸಿ ।
ಸ ವೇದಮೇಕಂ ಬ್ರಹ್ಮರ್ಷೀಶ್ಚತುರ್ಧಾ ವಿಭಜಿಷ್ಯತಿ ।। ೧-೧೮-೪೧

ನೀನು ಪರಾಶರನ ಸಂತಾನ ಪುತ್ರನಿಗೆ ಜನ್ಮನೀಡುತ್ತೀಯೆ. ಆ ಬ್ರಹ್ಮರ್ಷಿಯು ಒಂದೇ ವೇದವನ್ನು ನಾಲ್ಕು ಭಾಗಗಳನ್ನಾಗಿ ವಿಭಜಿಸುತ್ತಾನೆ.

ಮಹಾಭಿಷಸ್ಯ ಪುತ್ರೌ ದ್ವೌ ಶಂತನೋಃ ಕೀರ್ತಿವರ್ಧನೌ ।
ವಿಚಿತ್ರವೀರ್ಯಂ ಧರ್ಮಜ್ಞಂ ತಥಾ ಚಿತ್ರಾಂಗದಂ ಶುಭಮ್ ।। ೧-೧೮-೪೨

ಮಹಾಭಿಷನ ಪುತ್ರ ಶಂತನುವಿನಲ್ಲಿ ಅವನ ಕೀರ್ತಿವರ್ಧನ ಇಬ್ಬರು ಮಕ್ಕಳಿಗೆ ಜನ್ಮ ನೀಡುತ್ತೀಯೆ: ಧರ್ಮಜ್ಞ ವಿಚಿತ್ರವೀರ್ಯ ಮತ್ತು ಶುಭ ಚಿತ್ರಾಂಗದ.

ಏತಾನುತ್ಪಾದ್ಯ ಪುತ್ರಾಂಸ್ತ್ವಂ ಪುನರ್ಲೋಕಾನವಾಪ್ಸ್ಯಸಿ ।
ವ್ಯತಿಕ್ರಮಾತ್ಪಿತೄಣಾಂ ಚ ಜನ್ಮ ಪ್ರಾಪ್ಸ್ಯಸಿ ಕುತ್ಸಿತಮ್ ।। ೧-೧೮-೪೩

ಈ ಪುತ್ರರನ್ನು ಹುಟ್ಟಿಸಿ ನೀನು ಪುನಃ ನಿನ್ನ ಲೋಕಗಳನ್ನು ಪಡೆಯುತ್ತೀಯೆ. ಪಿತೃಗಳನ್ನು ವ್ಯತಿಕ್ರಮಿಸಿದುದಕ್ಕಾಗಿ ನಿನಗೆ ಕುತ್ಸಿತ ಜನ್ಮವು ದೊರೆಯುತ್ತದೆ.

ಅಸ್ಯೈವ ರಾಜ್ಞಃ ಕನ್ಯಾ ತ್ವಮದ್ರಿಕಾಯಾಂ ಭವಿಷ್ಯಸಿ ।
ಅಷ್ಟಾವಿಂಶೇ ಭವಿತ್ರೀ ತ್ವಂ ದ್ವಾಪರೇ ಮತ್ಸ್ಯಯೋನಿಜಾ ।। ೧-೧೮-೪೪

ಅದ್ರಿಕೆಯಲ್ಲಿ ಇದೇ ರಾಜನ ಕನ್ಯೆಯಾಗಿ ನೀನು ಹುಟ್ಟುತ್ತೀಯೆ. ಇಪ್ಪತ್ತೆಂಟನೇ ದ್ವಾಪರದಲ್ಲಿ ನೀನು ಮತ್ಸ್ಯಯೋನಿಜೆಯಾಗುತ್ತೀಯೆ.”

ಏವಮುಕ್ತ್ವಾ ತು ದಾಶೇಯೀ ಜಾತಾ ಸತ್ಯವತೀ ತದಾ ।
ಮತ್ಸ್ಯಯೋನೌ ಸಮುತ್ಪನ್ನಾ ರಾಜ್ಞಸ್ತಸ್ಯ ವಸೋಃ ಸುತಾ ।। ೧-೧೮-೪೫

ಅವರು ಹೀಗೆ ಹೇಳಲು ಅವಳು ರಾಜಾ ವಸು ಉಪರಿಚರನ ಮಗಳಾಗಿ ಮತ್ಸ್ಯಯೋನಿಯಲ್ಲಿ ಹುಟ್ಟಿದಳು. ಅವಳೇ ದಾಶೇಯೀ (ದಾಶರಾಜನ ಪುತ್ರಿ) ಸತ್ಯವತೀ.

ವೈಭ್ರಾಜಾ ನಾಮ ತೇ ಲೋಕಾ ದಿವಿ ಸಂತಿ ಸುದರ್ಶನಾಃ ।
ಯತ್ರ ಬರ್ಹಿಷದೋ ನಾಮ ಪಿತರೋ ದಿವಿ ವಿಶ್ರುತಾಃ ।। ೧-೧೮-೪೬

ದಿವಿಯಲ್ಲಿ ವೈಭ್ರಾಜಾ ಎಂಬ ಹೆಸರಿನ ಸುಂದರ ಲೋಕವಿದೆ. ಅಲ್ಲಿ ದಿವಿಯಲ್ಲಿ ವಿಶ್ರುತರಾದ ಬರ್ಹಿಷದ ಎಂಬ ಹೆಸರಿನ ಪಿತೃಗಳು ವಾಸಿಸುತ್ತಾರೆ.

ತಾನ್ವೈ ದೇವಗಣಾಃ ಸರ್ವೇ ಯಕ್ಷಗಂಧರ್ವರಾಕ್ಷಸಾಃ ।
ನಾಗಾಃ ಸರ್ಪಾಃ ಸುಪರ್ಣಾಶ್ಚ ಭಾವಯಂತ್ಯಮಿತೌಜಸಃ ।। ೧-೧೮-೪೭

ಸರ್ವ ದೇವಗಣಗಳೂ, ಯಕ್ಷ-ಗಂಧರ್ವ-ರಾಕ್ಷಸರೂ, ನಾಗಗಳೂ, ಸರ್ಪಗಳೂ, ಮತ್ತು ಅಮಿತತೇಜಸ್ವೀ ಸುಪರ್ಣನೂ ಅವರನ್ನು ಆರಾಧಿಸುತ್ತಾರೆ.

ಏತೇ ಪುತ್ರಾ ಮಹಾತ್ಮಾನಃ ಪುಲಸ್ತ್ಯಸ್ಯ ಪ್ರಜಾಪತೇಃ ।
ಮಹಾತ್ಮಾನೋ ಮಹಾಭಾಗಾಸ್ತೇಜೋಯುಕ್ತಾಸ್ತಪಸ್ವಿನಃ ।। ೧-೧೮-೪೮

ಈ ಮಹಾತ್ಮರು ಪ್ರಜಾಪತಿ ಪುಲಸ್ತ್ಯನ ಪುತ್ರರು. ಈ ಮಹಾತ್ಮ ಮಹಾಭಾಗರು ತೇಜೋಯುಕ್ತ ತಪಸ್ವಿಗಳು.

ಏತೇಷಾಂ ಮಾನಸೀ ಕನ್ಯಾ ಪೀವರೀ ನಾಮ ವಿಶ್ರುತಾ ।
ಯೋಗಾ ಚ ಯೋಗಿಪತ್ನೀ ಚ ಯೋಗಿಮಾತಾ ತಥೈವ ಚ ।। ೧-೧೮-೪೯

ಇವರ ಮಾನಸೀ ಕನ್ಯೆಯು ಪೀವರೀ ಎಂಬ ಹೆಸರಿನಿಂದ ವಿಶ್ರುತಳಾಗಿದ್ದಾಳೆ. ಇವಳು ಯೋಗಿನೀ, ಯೋಗಿಯ ಪತ್ನಿ ಮತ್ತು ಯೋಗಿಯ ಮಾತೆಯೂ ಕೂಡ.

ಭವಿತ್ರೀ ದ್ವಾಪರಂ ಪ್ರಾಪ್ಯ ಯುಗಂ ಧರ್ಮಭೃತಾಂ ವರಾ ಪರಾಶರಕುಲೋದ್ಭೂತಃ ಶುಕೋ ನಾಮ ಮಹಾತಪಾಃ ।। ೧-೧೮ ೫೦
ಭವಿಷ್ಯತಿ ಯುಗೇ ತಸ್ಮಿನ್ಮಹಾಯೋಗೀ ದ್ವಿಜರ್ಷಭಃ ।
ವ್ಯಾಸಾದರಣ್ಯಾಂ ಸಂಭೂತೋ ವಿಧೂಮೋಽಗ್ನಿರಿವ ಜ್ವಲನ್ ।। ೧-೧೮-೫೧
ಸ ತಸ್ಯಾಂ ಪಿತೃಕನ್ಯಾಯಾಂ ಪೀವರ್ಯಾಂ ಜನಯಿಷ್ಯತಿ ।
ಕನ್ಯಾಂ ಪುತ್ರಾಂಶ್ಚ ಚತುರೋ ಯೋಗಾಚಾರ್ಯಾನ್ಮಹಾಬಲಾನ್ ।। ೧-೧೮-೫೨
ಕೃಷ್ಣಂ ಗೌರಂ ಪ್ರಭುಂ ಶಂಭುಂ ಕೃತ್ವೀಂ ಕನ್ಯಾಂ ತಥೈವ ಚ ।
ಬ್ರಹ್ಮದತ್ತಸ್ಯ ಜನನೀಂ ಮಹಿಷೀಂ ತ್ವಣುಹಸ್ಯ ಚ ।। ೧-೧೮-೫೩

ಧರ್ಮಭೃತರಲ್ಲಿ ಶ್ರೇಷ್ಠಳಾದ ಇವಳು ದ್ವಾಪರಯುಗದಲ್ಲಿ ಹುಟ್ಟುತ್ತಾಳೆ. ಆ ಯುಗದಲ್ಲಿ ಪರಾಶರಕುಲದಲ್ಲಿ ವ್ಯಾಸನ ಅರಣಿಯಿಂದ ಹೊಗೆಯಿಲ್ಲದ ಅಗ್ನಿಯಂತೆ ಪ್ರಜ್ವಲಿಸುವ ಶುಕ ಎಂಬ ಹೆಸರಿನ ಮಹಾತಪಸ್ವೀ ಮಹಾಯೋಗಿ ದ್ವಿಜರ್ಷಭನು ಹುಟ್ಟುತ್ತಾನೆ. ಅವನು ಪಿತೃಕನ್ಯೆ ಪೀವರಿಯಲ್ಲಿ ನಾಲ್ವರು ಮಹಾಬಲಶಾಲೀ ಯೋಗಾಚಾರ್ಯರನ್ನು ಹುಟ್ಟಿಸುತ್ತಾನೆ – ಕೃಷ್ಣ, ಗೌರ, ಪ್ರಭು ಮತ್ತು ಶಂಭು. ಹಾಗೆಯೇ ಬ್ರಹ್ಮದತ್ತನ ಜನನಿ ಮತ್ತು ತ್ವಣುಹನ ಪತ್ನಿ ಕೃತ್ವೀ ಎಂಬ ಕನ್ಯೆಯನ್ನೂ ಹುಟ್ಟಿಸುತ್ತಾನೆ.

ಏತಾನುತ್ಪಾದ್ಯ ಧರ್ಮಾತ್ಮಾ ಯೋಗಾಚಾರ್ಯಾನ್ಮಹಾವ್ರತಾನ್ ।
ಶ್ರುತ್ವಾ ಸ್ವಜನಕಾದ್ಧರ್ಮಾನ್ವ್ಯಾಸಾದಮಿತಬುದ್ಧಿಮಾನ್ ।। ೧-೧೮-೫೪
ಮಹಾಯೋಗೀ ತತೋ ಗಂತಾ ಪುನರಾವರ್ತಿನೀಂ ಗತಿಂ ।
ಯತ್ತತ್ಪದಮನುದ್ವಿಗ್ನಮವ್ಯಯಂ ಬ್ರಹ್ಮ ಶಾಶ್ವತಮ್ ।। ೧-೧೮-೫೫

ಈ ಮಹಾವ್ರತ ಯೋಗಾಚಾರ್ಯರನ್ನು ಹುಟ್ಟಿಸಿ ಧರ್ಮಾತ್ಮ ಶುಕನು ತನ್ನ ತಂದೆ ಅಮಿತಬುದ್ಧಿಮಾನ್ ವ್ಯಾಸನಿಂದ ಧರ್ಮಗಳನ್ನು ಕೇಳುತ್ತಾನೆ. ನಂತರ ಆ ಮಹಾಯೋಗಿಯು ಅನುದ್ವಿಗ್ನವೂ ಅವ್ಯಯವೂ ಶಾಶ್ವತವೂ ಪುನಃ ಹಿಂದಿರುಗದ ಬ್ರಹ್ಮಗತಿಯನ್ನು ಹೊಂದುತ್ತಾನೆ.

ಅಮೂರ್ತಿಮಂತಃ ಪಿತರೋ ಧರ್ಮಮೂರ್ತಿಧರಾ ಮುನೇ ।
ಕಥಾ ಯತ್ರೇಯಮುತ್ಪನ್ನಾ ವೃಷ್ಣ್ಯಂಧಕಕುಲಾನ್ವಯಾ ।। ೧-೧೮-೫೬

ಮುನೇ! ಅಮೂರ್ತಿಮಂತ ಪಿತೃಗಳು ಧರ್ಮಮಯ ಶರೀರವನ್ನು ಧರಿಸಿರುವರು. ಇವರಿಂದಲೇ ವೃಷ್ಣಿ-ಅಂಧಕರ ಅನ್ವಯದ ಕಥೆಯು ಪ್ರಾರಂಭವಾಯಿತು.

ಸುಕಾಲಾ ನಾಮ ಪಿತರೋ ವಸಿಷ್ಠಸ್ಯ ಪ್ರಜಾಪತೇಃ ।
ನಿರತಾ ದಿವಿ ಲೋಕೇಷು ಜ್ಯೋತಿರ್ಭಾಸಿಷು ಭಾಸುರಾಃ ।
ಸರ್ವಕಾಮಸಮೃದ್ಧೇಷು ದ್ವಿಜಾಸ್ತಾನ್ಭಾವಯಂತ್ಯುತ ।। ೧-೧೮-೫೭

ಪ್ರಜಾಪತಿ ವಸಿಷ್ಠನ ಪುತ್ರರಾದ ಸುಕಾಲಾ ಎಂಬ ಹೆಸರಿನ ಥಳಥಳಿಸುವ ಪಿತೃಗಳು ದಿವಿಯಲ್ಲಿ ಸರ್ವಕಾಮ ಸಮೃದ್ಧಗಳಿಂದ ಕೂಡಿದ ಜ್ಯೋತಿಯಿಂದ ಬೆಳಗುವ ಲೋಕಗಳಲ್ಲಿ ವಾಸಿಸುತ್ತಾರೆ. ಅವರನ್ನು ಬ್ರಾಹ್ಮಣರು ಪೂಜಿಸುತ್ತಾರೆ.

ತೇಷಾಂ ವೈ ಮಾನಸೀ ಕನ್ಯಾ ಗೌರ್ನಾಮ್ನಾ ದಿವಿ ವಿಶ್ರುತಾ ।
ತವೈವ ವಂಶೇ ಯಾ ದತ್ತಾ ಶುಕಸ್ಯ ಮಹಿಷೀ ಪ್ರಿಯಾ ।
ಏಕಶೃಂಗೇತಿ ವಿಖ್ಯಾತಾ ಸಾಧ್ಯಾನಾಂ ಕಿರ್ತಿವರ್ಧಿನೀ ।। ೧-೧೮-೫೮

ಅವರ ಮಾನಸೀ ಕನ್ಯೆಯು ಗೌ ಎಂಬ ಹೆಸರಿನಿಂದ ದಿವಿಯಲ್ಲಿ ವಿಶ್ರುತಳಾಗಿದ್ದಾಳೆ. ಅವಳನ್ನು ನಿನ್ನ ವಂಶಕ್ಕೇ ಕೊಡಲಾಯಿತು. ಅವಳೇ ಶುಕನ ಪ್ರಿಯ ಪತ್ನಿ. ಸಾಧ್ಯರ ಕೀರ್ತಿಯನ್ನು ವರ್ಧಿಸುವ ಅವಳು ಏಕಶೃಂಗ ಎಂದೂ ವಿಖ್ಯಾತಳಾಗಿದ್ದಾಳೆ.

ಮರೀಚಿಗರ್ಭಾಂಸ್ತಾನ್ಲೋಕಾನ್ಸಮಾಶ್ರಿತ್ಯ ವ್ಯವಸ್ಥಿತಾಃ ।
ಯೇ ತ್ವಥಾಂಗಿರಸಃ ಪುತ್ರಾಃ ಸಾಧ್ಯೈಃ ಸಂವರ್ಧಿತಾಃ ಪುರಾ ।। ೧-೧೮-೫೯

ಹಿಂದೆ ಸಾಧ್ಯರಿಂದ ಸಂವರ್ಧಿತರಾದ ಅಂಗಿರಸನ ಪುತ್ರರು ಸೂರ್ಯನ ಕಿರಣಗಳಿಂದ ಪ್ರಕಾಶಿತಗೊಳ್ಳುವ ಲೋಕಗಳನ್ನು ಆಶ್ರಯಿಸಿ ವಾಸಿಸುತ್ತಾರೆ.

ತಾನ್ಕ್ಷತ್ರಿಯಗಣಾಂಸ್ತಾತ ಭಾವಯಂತಿ ಫಲಾರ್ಥಿನಃ ।
ತೇಷಾಂ ತು ಮಾನಸೀ ಕನ್ಯಾ ಯಶೋದಾ ನಾಮ ವಿಶ್ರುತಾ ।। ೧-೧೮-೬೦

ತಾತ! ಫಲಾರ್ಥಿ ಕ್ಷತ್ರಿಯಗಣಗಳು ಈ ಅಂಗಿರಾ ಪಿತೃಗಳನ್ನು ಪೂಜಿಸುತ್ತಾರೆ. ಅವರ ಮಾನಸೀ ಕನ್ಯೆಯು ಯಶೋದಾ ಎಂಬ ಹೆಸರಿನಿಂದ ವಿಶ್ರುತಳಾಗಿದ್ದಾಳೆ.

ಪತ್ನೀ ಸಾ ವಿಶ್ವಮಹತಃ ಸ್ನುಷಾ ವೈ ವೃದ್ಧಶರ್ಮಣಃ ।
ರಾಜರ್ಷೇರ್ಜನನೀ ಚಾಪಿ ದಿಲೀಪಸ್ಯ ಮಹಾತ್ಮನಃ ।। ೧-೧೮-೬೧

ಅವಳು ವಿಶ್ವಮಹನ ಪತ್ನಿ, ವೃದ್ಧಶರ್ಮನ ಸೊಸೆ ಮತ್ತು ರಾಜರ್ಷಿ ಮಹಾತ್ಮ ದಿಲೀಪನ ಜನನಿಯೂ ಹೌದು.

ತಸ್ಯ ಯಜ್ಞೇ ಪುರಾ ಗೀತಾ ಗಾಥಾಃ ಪ್ರೀತೈರ್ಮಹರ್ಷಿಭಿಃ ।
ತದಾ ದೇವಯುಗೇ ತಾತ ವಾಜಿಮೇಧೇ ಮಹಾಮಖೇ ।। ೧-೧೮-೬೨

ತಾತ! ಹಿಂದೆ ದೇವಯುಗದಲ್ಲಿ ದಿಲೀಪನ ಅಶ್ವಮೇಧ ಮಹಾಯಜ್ಞದಲ್ಲಿ ಪ್ರೀತರಾದ ಮಹರ್ಷಿಗಳು ಈ ಗೀತೆಯನ್ನು ಹಾಡಿದ್ದರು.

ಅಗ್ನೇರ್ಜನ್ಮ ತಥಾ ಶ್ರುತ್ವಾ ಶಾಂಡಿಲ್ಯಸ್ಯ ಮಹಾತ್ಮನಃ ।
ದಿಲೀಪಂ ಯಜಮಾನಂ ಯೇ ಪಶ್ಯಂತಿ ಸುಸಮಾಹಿತಾಃ ।
ಸತ್ಯವಂತಂ ಮಹಾತ್ಮಾನಂ ತೇಽಪಿ ಸ್ವರ್ಗಜಿತೋ ನರಾಃ ।। ೧-೧೮-೬೩

“ಮಹಾತ್ಮ ಶಾಂಡಿಲ್ಯನ ಗೋತ್ರದಲ್ಲಿ ಹುಟ್ಟಿದ ಅಗ್ನಿಯ ಜನ್ಮವನ್ನು ಕೇಳಿ ಯಜ್ಞಮಾಡುತ್ತಿರುವ ಸತ್ಯವಂತ ಮಹಾತ್ಮ ದಿಲೀಪನನ್ನು ಯಾರು ಸಮಾಹಿತರಾಗಿ ನೋಡುತ್ತಾರೋ ಆ ನರರು ಸ್ವರ್ಗವನ್ನು ಗೆಲ್ಲುತ್ತಾರೆ!”

ಸುಸ್ವಧಾ ನಾಮ ಪಿತರಃ ಕರ್ದಮಸ್ಯ ಪ್ರಜಾಪತೇಃ ।
ಸಮುತ್ಪನ್ನಾಸ್ತು ಪುಲಹಾನ್ಮಹಾತ್ಮಾನೋ ದ್ವಿಜರ್ಷಭಾಃ ।। ೧-೧೮-೬೪

ಕರ್ದಮ ಪ್ರಜಾಪತಿಯ ಸುಸ್ವಧಾ ಎಂಬ ಹೆಸರಿನ ಪಿತೃಗಳು ಮಹಾತ್ಮಾ ಪುಲಹನಿಂದ ಸಮುತ್ಪನ್ನರಾದ ದ್ವಿಜರ್ಷಿಗಳು.

ಲೋಕೇಷು ದಿವಿ ವರ್ತಂತೇ ಕಾಮಗೇಷು ವಿಹಂಗಮಾಃ ।
ತಾಂಶ್ಚ ವೈಶ್ಯಗಣಾಂಸ್ತಾತ ಭಾವಯಂತಿ ಫಲಾರ್ಥಿನಃ ।। ೧-೧೮-೬೫

ಅವರು ದಿವಿಯಲ್ಲಿ ಬೇಕಾದಲ್ಲಿ ಹೋಗಬಲ್ಲ ವಿಹಂಗಮ ಲೋಕಗಳಲ್ಲಿ ವಾಸಿಸುತ್ತಾರೆ. ಫಲಾರ್ಥಿ ವೈಶ್ಯಗಣಗಳು ಅವರನ್ನು ಪೂಜಿಸುತ್ತವೆ.

ತೇಷಾಂ ವೈ ಮಾನಸೀ ಕನ್ಯಾ ವಿರಜಾ ನಾಮ ವಿಶ್ರುತಾ ।
ಯಯಾತೇರ್ಜನನೀ ಬ್ರಹ್ಮನ್ಮಹಿಷೀ ನಹುಷಸ್ಯ ಚ ।। ೧-೧೮-೬೬

ಅವರ ಮಾನಸೀ ಕನ್ಯೆಯು ವಿರಜಾ ಎಂಬ ಹೆಸರಿನಿಂದ ವಿಶ್ರುತಳಾಗಿದ್ದಾಳೆ. ಬ್ರಹ್ಮನ್! ಅವಳು ನಹುಷನ ಪತ್ನಿ ಮತ್ತು ಯಯಾತಿಯ ಜನನಿ.

ತ್ರಯ ಏತೇ ಗಣಾಃ ಪ್ರೋಕ್ತಾಶ್ಚತುರ್ಥಂ ತು ನಿಬೋಧ ಮೇ ।
ಉತ್ಪನ್ನಾ ಯೇ ಸ್ವಧಾಯಾಂ ತೇ ಸೋಮಪಾ ವೈ ಕವೇಃ ಸುತಾಃ ।। ೧-೧೮-೬೭

ಇದೂವರೆಗೆ ನಾನು ಮೂರು (ಮೂರ್ತಿಮತ್ತ) ಪಿತೃಗಣಗಳ ಕುರಿತು ಹೇಳಿದ್ದೇನೆ. ಈಗ ನಾಲ್ಕನೆಯದರ ಕುರಿತು ಹೇಳುತ್ತೇನೆ. ಕೇಳು. ಕವಿಯ ಮಗಳು ಸ್ವಧಾಳಲ್ಲಿ ಉತ್ಪನ್ನರಾದ ಇವರು ಸೋಮಪರೆಂಬ ಪಿತೃಗಳು.

ಹಿರಣ್ಯಗರ್ಭಸ್ಯ ಸುತಾಃ ಶೂದ್ರಾಸ್ತಾನ್ಭಾವಯಂತ್ಯುತ ।
ಮಾನಸಾ ನಾಮ ತೇ ಲೋಕಾ ಯತ್ರ ತಿಷ್ಠಂತಿ ತೇ ದಿವಿ ।
ತೇಷಾಂ ವೈ ಮಾನಸೀ ಕನ್ಯಾ ನರ್ಮದಾ ಸರಿತಾಂ ವರಾ ।। ೧-೧೮-೬೮

ಹಿರಣ್ಯಗರ್ಭ ಅಗ್ನಿಯ ಪುತ್ರರಾದ ಇವರನ್ನು ಶೂದ್ರರು ಪೂಜಿಸುತ್ತಾರೆ. ದಿವಿಯಲ್ಲಿ ಅವರು ವಾಸಿಸುವ ಲೋಕದ ಹೆಸರು ಮಾನಸಾ. ಅವರ ಮಾನಸೀ ಕನ್ಯೆಯು ನದಿಗಳಲ್ಲಿ ಶ್ರೇಷ್ಠೆ ನರ್ಮದಾ.

ಯಾ ಭಾವಯತಿ ಭೂತಾನಿ ದಕ್ಷಿಣಾಪಥಗಾಮಿನೀ ।
ಪುರುಕುತ್ಸಸ್ಯ ಯಾ ಪತ್ನೀ ತ್ರಸದ್ದಸ್ಯೋರ್ಜನನ್ಯಪಿ ।। ೧-೧೮-೬೯

ದಕ್ಷಿಣಾಪಥಗಾಮಿನಿಯಾದ ಇವಳು ಭೂತಗಳನ್ನು ಪವಿತ್ರಗೊಳಿಸುತ್ತಾಳೆ. ಅವಳು ಪುರುಕುತ್ಸನ ಪತ್ನಿ ಮತ್ತು ತ್ರಸದ್ದನ ಜನನಿಯೂ ಕೂಡ.

ತೇಷಾಮಥಾಭ್ಯುಪಗಮಾನ್ಮನುಸ್ತಾತ ಯುಗೇ ಯುಗೇ ।
ಪ್ರವರ್ತಯತಿ ಶ್ರಾದ್ಧಾನಿ ನಷ್ಟೇ ಧರ್ಮೇ ಪ್ರಜಾಪತಿಃ ।। ೧-೧೮-೭೦

ತಾತ! ಯುಗಯುಗಳಲ್ಲಿಯೂ ಪ್ರಜಾಪತಿ ಮನುವು ಪಿತೃಗಳನ್ನು ಪೂಜ್ಯರೆಂದು ತಿಳಿದು ನಷ್ಟವಾದ ಧರ್ಮವನ್ನು ಉದ್ಧರಿಸಲು ಶ್ರಾದ್ಧಗಳನ್ನು ಪುನಃ ಪ್ರಚಲಿತಗೊಳಿಸುತ್ತಾನೆ.

ಪಿತೄಣಾಮಾದಿಸರ್ಗೇಣ ಸರ್ವೇಷಾಂ ದ್ವಿಜಸತ್ತಮ ।
ತಸ್ಮಾದೇನಂ ಸ್ವಧರ್ಮೇಣ ಶ್ರಾದ್ಧದೇವಂ ವದಂತಿ ವೈ।। ೧-೧೮-೭೧

ದ್ವಿಜಸತ್ತಮ! ಈ ಏಳು ಪಿತೃಗಣಗಳು ಎಲ್ಲರೂ ಆದಿಯಲ್ಲಿಯೇ ಸೃಷ್ಟಿಗೊಳ್ಳುತ್ತಾರೆ. ಅವರ ಸ್ವಧರ್ಮಾನುಸಾರವಾಗಿ ಅವರನ್ನು ಶ್ರಾದ್ಧದೇವರೆಂದೂ ಕರೆಯುತ್ತಾರೆ.

ಸರ್ವೇಷಾಂ ರಾಜತಂ ಪಾತ್ರಮಥ ವಾ ರಜತಾನ್ವಿತಮ್ ।
ದತ್ತಂ ಸ್ವಧಾಂ ಪುರೋಧಾಯ ಶ್ರಾದ್ಧಂ ಪ್ರೀಣಾತಿ ವೈ ಪಿತೄನ್ ।। ೧-೧೮-೭೨

ಇವರೆಲ್ಲರೂ ಬೆಳ್ಳಿಯ ಪಾತ್ರೆ ಅಥವಾ ಬೆಳ್ಳಿಯನ್ನು ಸೇರಿಸಿರುವ ಪಾತ್ರೆಗಳಲ್ಲಿ “ಸ್ವಧಾ ಪಿತೃಭ್ಯಃ” ಎಂದು ಹೇಳಿ ನೀಡುವ ಶ್ರಾದ್ಧದಿಂದ ತೃಪ್ತರಾಗುತ್ತಾರೆ.

ಸೋಮಸ್ಯಾಪ್ಯಾಯನಂ ಕೃತ್ವಾ ಅಗ್ನೇರ್ವೈವಸ್ವತಸ್ಯ ಚ ।
ಉದಗಾಯನಮಪ್ಯಗ್ನಾವಗ್ನ್ಯಭಾವೇಽಪ್ಸು ವಾ ಪುನಃ ।। ೧-೧೮-೭೩
ಪಿತೄನ್ಪ್ರೀಣಾತಿ ಯೋ ಭಕ್ತ್ಯಾ ಪಿತರಃ ಪ್ರೀಣಯಂತಿ ತಮ್ ।
ಯಚ್ಛಂತಿ ಪಿತರಃ ಪುಷ್ಟಿಂ ಪ್ರಜಾಶ್ಚ ವಿಪುಲಾಸ್ತಥಾ ।। ೧-೧೮-೭೪
ಸ್ವರ್ಗಮಾರೋಗ್ಯಮೇವಾಥ ಯದನ್ಯದಪಿ ಚೇಪ್ಸಿತಮ್ ।
ದೇವಕಾರ್ಯಾದಪಿ ಮುನೇ ಪಿತೃಕಾರ್ಯಂ ವಿಶಿಷ್ಯತೇ ।। ೧-೧೮-೭೫

ಸೋಮ, ಅಗ್ನಿ ಮತ್ತು ವೈವಸ್ವತ ಯಮರ ಆಪ್ಯಾಯನ ಮಾಡಿ ನಂತರ ಅಗ್ನಿಯಲ್ಲಿ ಉದ್ಗಾಯನ ಮಾಡಿ ಅಥವಾ ಅಗ್ನಿಯ ಅಭಾವದಲ್ಲಿ ಜಲದಲ್ಲಿ ಉದ್ಗಾಯನ ಮಾಡಿ ಭಕ್ತಿಪೂರ್ವಕವಾಗಿ ಪಿತೃಗಳನ್ನು ತೃಪ್ತಿಗೊಳಿಸುವ ನರನನ್ನು ಪಿತೃಗಳು ತೃಪ್ತಗೊಳಿಸುತ್ತಾರೆ. ಹಾಗೆಯೇ ಅವನಿಗೆ ಪಿತೃಗಳು ವಿಪುಲ ಸಂತಾನ, ಪುಷ್ಟಿ, ಸ್ವರ್ಗ ಮತ್ತು ಆರೋಗ್ಯ ಹಾಗೂ ಬೇರೆ ಬಯಸಿದುದೆಲ್ಲವನ್ನೂ ನೀಡುತ್ತಾರೆ. ಮುನೇ! ದೇವಕಾರ್ಯಗಳಿಗಿಂತಲೂ ಪಿತೃಕಾರ್ಯವು ಹೆಚ್ಚಿನದು.

ದೇವತಾನಾಂ ಹಿ ಪಿತರಃ ಪೂರ್ವಮಾಪ್ಯಾಯನಂ ಸ್ಮೃತಮ್ ।
ಶೀಘ್ರಪ್ರಸಾದಾ ಹ್ಯಕ್ರೋಧಾ ಲೋಕಸ್ಯಾಪ್ಯಾಯನಂ ಪರಮ್ ।। ೧-೧೮-೭೬

ಆಪ್ಯಾಯನ ಅಥವಾ ತೃಪ್ತಗೊಳಿಸಲು ಪಿತೃಗಳು ದೇವತೆಗಳಿಗಿಂತಲೂ ಮೊದಲೇ ಪ್ರಸನ್ನರಾಗುತ್ತಾರೆಂದು ಹೇಳುತ್ತಾರೆ. ಪಿತೃಗಳು ಶೀಘ್ರವಾಗಿ ಪ್ರಸನ್ನರಾಗುತ್ತಾರೆ ಮತ್ತು ಕ್ರೋಧರಹಿತರು. ಇವರು ಲೋಕಗಳನ್ನು ಪರಮ ತೃಪ್ತರನ್ನಾಗಿಸುತ್ತಾರೆ.

ಸ್ಥಿರಪ್ರಸಾದಾಶ್ಚ ಸದಾ ತಾನ್ನಮಸ್ಯಸ್ವ ಭಾರ್ಗವ ।
ಪಿತೃಭಕ್ತೋಽಸಿ ವಿಪ್ರರ್ಷೇ ಮದ್ಭಕ್ತಶ್ಚ ವಿಶೇಷತಃ ।। ೧-೧೮-೭೭

ಭಾರ್ಗವ! ಪಿತೃಗಳ ಪ್ರಸಾದವು ಸ್ಥಿರವಾಗಿರುತ್ತದೆ. ಆದುದರಿಂದ ಅವರನ್ನು ಸದಾ ನಮಸ್ಕರಿಸು. ವಿಪ್ರರ್ಷೇ! ನೀನು ಪಿತೃಭಕ್ತನಾಗಿದ್ದೀಯೆ ಮತ್ತು ವಿಶೇಷವಾಗಿ ನನ್ನ ಭಕ್ತನೂ ಹೌದು.

ಶ್ರೇಯಸ್ತೇಽದ್ಯ ವಿಧಾಸ್ಯಾಮಿ ಪ್ರತ್ಯಕ್ಷಂ ಕುರು ತತ್ಸ್ವಯಮ್ ।
ದಿವ್ಯಂ ಚಕ್ಷುಃ ಸವಿಜ್ಞಾನಂ ಪ್ರದಿಶಾಮಿ ಚ ತೇಽನಘ ।। ೧-೧೮-೭೮

ಇಂದು ನಾನು ನಿನಗೆ ಶ್ರೇಯಸ್ಸನ್ನುಂಟುಮಾಡುತ್ತೇನೆ. ಅವರನ್ನು ಸ್ವಯಂ ನೀನಾಗಿಯೇ ಪ್ರತ್ಯಕ್ಷ ನೋಡು! ಅನಘ! ನಿನಗೆ ದಿವ್ಯ ದೃಷ್ಟಿಯನ್ನೂ ಸವಿಜ್ಞಾನವನ್ನೂ ನೀಡುತ್ತೇನೆ.

ಗತಿಮೇತಾಮಪ್ರಮತ್ತೋ ಮಾರ್ಕಂಡೇಯ ನಿಶಾಮಯ ।
ನ ಹಿ ಯೋಗಗತಿರ್ದಿವ್ಯಾ ಪಿತೄಣಾಂ ಚ ಪರಾ ಗತಿಃ ।। ೧-೧೮-೭೯
ತ್ವದ್ವಿಧೇನಾಪಿ ಸಿದ್ಧೇನ ದೃಶ್ಯತೇ ಮಾಂಸಚಕ್ಷುಷಾ ।
ಸ ಏವಮುಕ್ತ್ವಾ ದೇವೇಶೋ ಮಾಮುಪಸ್ಥಿತಮಗ್ರತಃ ।। ೧-೧೮-೮೦
ಚಕ್ಷುರ್ದತ್ತ್ವಾ ಸವಿಜ್ಞಾನಂ ದೇವಾನಾಮಪಿ ದುರ್ಲಭಮ್ ।
ಜಗಾಮ ಗತಿಮಿಷ್ಟಾಂ ವೈ ದ್ವಿತೀಯೋಽಗ್ನಿರಿವ ಜ್ವಲನ್ ।। ೧-೧೮-೮೧

ಮಾರ್ಕಂಡೇಯ! ಅಪ್ರಮತ್ತನಾಗಿ ಈ ಗತಿಯನ್ನು ನೋಡು! ನಿನ್ನಂಥಹ ಸಿದ್ಧರೂ ತಮ್ಮ ಮಾಂಸದ ಕಣ್ಣುಗಳಿಂದ ಪಿತೃಗಳ ದಿವ್ಯವಾದ ಮತ್ತು ಪರಮ ಗತಿಯನ್ನು ನೋಡಲಾರರು. ಹೀಗೆ ಹೇಳಿ ಆ ದೇವೇಶನು ಎದಿರು ನಿಂತಿದ್ದ ನನಗೆ ದೇವತೆಗಳಿಗೂ ದುರ್ಲಭವಾದ ಸವಿಜ್ಞಾನ ದೃಷ್ಟಿಯನ್ನಿತ್ತು ಎರಡನೇ ಅಗ್ನಿಯಂತೆ ಪ್ರಜ್ವಲಿಸುತ್ತಾ ತನಗಿಷ್ಟ ಮಾರ್ಗದಲ್ಲಿ ಹೊರಟುಹೋದನು.

ತನ್ನಿಬೋಧ ಕುರುಶ್ರೇಷ್ಠ ಯನ್ಮಯಾಸೀನ್ನಿಶಾಮಿತಮ್ ।
ಪ್ರಸಾದಾತ್ತಸ್ಯ ದೇವಸ್ಯ ದುರ್ಜ್ಞೇಯಂ ಭುವಿ ಮಾನುಷೈಃ ।। ೧-೧೮-೮೨

ಕುರುಶ್ರೇಷ್ಠ! ಆ ದೇವನ ಪ್ರಸಾದದಿಂದ, ಭುವಿಯಲ್ಲಿರುವ ಮನುಷ್ಯರಿಗೆ ತಿಳಿಯಲಸಾಧ್ಯವಾದ ಏನನ್ನು ನಾನು ನೋಡಿದೆನೋ ಅದರ ಕುರಿತು ಕೇಳು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ಹರಿವಂಶಪರ್ವಣಿ ಪಿತೃಕಲ್ಪೇ ಅಷ್ಟಾದಶೋಽಧ್ಯಾಯಃ


  1. ಸುಕಾಲ, ಆಂಗಿರಸ, ಸುಸ್ವಧಾ ಮತ್ತು ಸೋಮಪಾ ಈ ನಾಲ್ವರು ಮೂರ್ತಿಮಂತರು. ಅವರಿಗೆ ದಿವ್ಯ ಶರೀರಗಳಿವೆ. ವೈರಾಜ, ಅಗ್ನಿಷ್ವಾತ್ತ ಮತ್ತು ಬರ್ಹಿಷದ್ ಈ ಮೂವರು ಅಮೂರ್ತರು. ಅವರಿಗೆ ಶರೀರಗಳಿಲ್ಲ. (ನೀಲಕಂಠ) ↩︎