ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಖಿಲಭಾಗೇ ಹರಿವಂಶಃ
ಹರಿವಂಶ ಪರ್ವ
ಅಧ್ಯಾಯ 13
ಸಾರ
ವೈಶಂಪಾಯನ ಉವಾಚ
ಸತ್ಯವ್ರತಸ್ತು ಭಕ್ತ್ಯಾ ಚ ಕೃಪಯಾ ಚ ಪ್ರತಿಜ್ಞಯಾ ।
ವಿಶ್ವಾಮಿತ್ರಕಲತ್ರಂ ತದ್ಬಭಾರ ವಿನಯೇ ಸ್ಥಿತಃ ।। ೧-೧೩-೧
ವೈಶಂಪಾಯನನು ಹೇಳಿದನು: “ಸತ್ಯವ್ರತನಾದರೋ ವಿಶ್ವಾಮಿತ್ರನ ಮೇಲಿನ ಭಕ್ತಿಯಿಂದ, ಅವನ ಕುಟುಂಬದ ಮೇಲಿನ ಕರುಣೆಯಿಂದ ಮತ್ತು ತಾನು ಮಾಡಿದ ಪ್ರತಿಜ್ಞೆಯ ಕಾರಣದಿಂದ ವಿನಯನಾಗಿದ್ದುಕೊಂಡು ವಿಶ್ವಾಮಿತ್ರನ ಪತ್ನಿ-ಪುತ್ರರನ್ನು ಪಾಲಿಸತೊಡಗಿದನು.
ಹತ್ವಾ ಮೃಗಾನ್ವರಾಹಾಂಶ್ಚ ಮಹಿಷಾಂಶ್ಚ ವನೇಚರಾನ್ ।
ವಿಶ್ವಾಮಿತ್ರಾಶ್ರಮಾಭ್ಯಾಶೇ ಮಾಂಸಂ ವೃಕ್ಷೇ ಬಬಂಧ ಸಃ ।। ೧-೧೩-೨
ಅವನು ವನದಲ್ಲಿ ಚರಿಸುತ್ತಿದ್ದ ಮೃಗಗಳನ್ನೂ, ವರಾಹಗಳನ್ನೂ, ಮಹಿಷಗಳನ್ನೂ ಸಂಹರಿಸಿ ಅವುಗಳ ಮಾಂಸವನ್ನು ವಿಶ್ವಾಮಿತ್ರನ ಆಶ್ರಮದ ಬಳಿ ವೃಕ್ಷಗಳಿಗೆ ಕಟ್ಟುತ್ತಿದ್ದನು.
ಉಪಾಂಶುವ್ರತಮಾಸ್ಥಾಯ ದೀಕ್ಷಾಂ ದ್ವಾದಶವಾರ್ಷಿಕೀಮ್ ।
ಪಿತುರ್ನಿಯೋಗಾದವಸತ್ತಸ್ಮಿನ್ವನಗತೇ ನೃಪೇ ।। ೧-೧೩-೩
ನೃಪ ತಂದೆಯು ವನಕ್ಕೆ ತೆರಳಿದ ನಂತರ ಹನ್ನೆರಡು ವರ್ಷಗಳ ಉಪಾಂಶುವ್ರತ1 ದೀಕ್ಷೆಯನ್ನು ಅನುಸರಿಸಿದನು.
ಅಯೋಧ್ಯಾಂ ಚೈವ ರಾಷ್ಟ್ರಂ ಚ ತಥೈವಾಂತಃಪುರಂ ಮುನಿಃ ।
ಯಾಜ್ಯೋಪಾಧ್ಯಾಯಸಂಬಂಧಾದ್ವಸಿಷ್ಠಃ ಪರ್ಯರಕ್ಷತ ।। ೧-೧೩-೪
ಇತ್ತ ಮುನಿ ವಸಿಷ್ಠನು ಅಯೋಧ್ಯೆಯನ್ನೂ, ರಾಷ್ಟ್ರವನ್ನೂ, ಅಂತಃಪುರವನ್ನೂ, ಯಾಜನ-ಉಪಾಧ್ಯಾಯ ಸಂಬಂಧಿ ಎಲ್ಲ ಕಾರ್ಯಗಳನ್ನು ರಕ್ಷಿಸುತ್ತಿದ್ದನು.
ಸತ್ಯವ್ರತಸ್ತು ಬಾಲ್ಯಾಚ್ಚ ಭಾವಿನೋಽರ್ಥಸ್ಯ ವಾ ಬಲಾತ್ ।
ವಸಿಷ್ಠೇಽಭ್ಯಧಿಕಂ ಮನ್ಯುಂ ಧಾರಯಾಮಾಸ ವೈ ತದಾ ।। ೧-೧೩-೫
ಸತ್ಯವ್ರತನಾದರೋ ತನ್ನ ಬಾಲ್ಯತನದಿಂದ ಅಥವಾ ಮುಂದಾಗುವುದರ ಬಲದಿಂದ ವಸಿಷ್ಠನ ಮೇಲೆ ಅಧಿಕ ಕ್ರೋಧವನ್ನಿರಿಸಿಕೊಂಡಿದ್ದನು.
ಪಿತ್ರಾ ಹಿ ತಂ ತದಾ ರಾಷ್ಟ್ರಾತ್ತ್ಯಜ್ಯಮಾನಂ ಸ್ವಮಾತ್ಮಜಮ್ ।
ನ ವಾರಯಾಮಾಸ ಮುನಿರ್ವಸಿಷ್ಠಃ ಕಾರಣೇನ ಹ ।। ೧-೧೩-೬
ತನ್ನ ತಂದೆಯು ತನ್ನದೇ ಪುತ್ರನನ್ನು ರಾಷ್ಟ್ರದಿಂದ ಹೊರಗಟ್ಟುವಾಗ ಮುನಿ ವಸಿಷ್ಠನು ಅವನನ್ನು ತಡೆಯಲಿಲ್ಲವೆನ್ನುವುದೇ ಇದಕ್ಕೆ ಕಾರಣವಾಗಿತ್ತು.
ಪಾಣಿಗ್ರಹಣಮಂತ್ರಾಣಾಂ ನಿಷ್ಠಾ ಸ್ಯಾತ್ ಸಪ್ತಮೇ ಪದೇ ।
ನ ಚ ಸತ್ಯವ್ರತಸ್ತಸ್ಯ ತಮುಪಾಂಶುಮಬುದ್ಧ್ಯತ ।। ೧-೧೩-೭
ಪಾಣಿಗ್ರಹಣ ಮಂತ್ರಗಳ ನಿಷ್ಠೆಯು ಸಪ್ತಪದಿಯಲ್ಲಿ ಇರುತ್ತವೆ. ಸತ್ಯವ್ರತನು ಅದನ್ನು ತಿಳಿದುಕೊಂಡಿರಲಿಲ್ಲ.
ಜಾನಂಧರ್ಮಂ ವಸಿಷ್ಠಸ್ತು ನ ಮಾಂ ತ್ರಾತೀತಿ ಭಾರತ ।
ಸತ್ಯವ್ರತಸ್ತದಾ ರೋಷಂ ವಸಿಷ್ಠೇ ಮನಸಾಕರೋತ್ ।। ೧-೧೩-೮
ಭಾರತ! “ಧರ್ಮವನ್ನು ತಿಳಿದುಕೊಂಡಿದ್ದರೂ ವಸಿಷ್ಠನು ನನ್ನನ್ನು ರಕ್ಷಿಸುತ್ತಿಲ್ಲ!” ಎಂದು ಸತ್ಯವ್ರತನು ವಸಿಷ್ಠನ ಮೇಲೆ ರೋಷ ಮನಸ್ಸನ್ನಿಟ್ಟುಕೊಂಡಿದ್ದನು.
ಗುಣಬುದ್ಧ್ಯಾ ತು ಭಗವಾನ್ವಸಿಷ್ಠಃ ಕೃತವಾಂಸ್ತಥಾ ।
ನ ಚ ಸತ್ಯವ್ರತಸ್ತಸ್ಯ ತಮುಪಾಂಶುಮಬುಧ್ಯತ ।। ೧-೧೩-೯
ಭಗವಾನ್ ವಸಿಷ್ಠನು ತನ್ನ ಗುಣಬುದ್ಧಿಯಿಂದಲೇ ಹಾಗೆ ಮಾಡಿದ್ದನು. ಆದರೆ ಸತ್ಯವ್ರತನು ಅವನ ಗುಟ್ಟನ್ನು ತಿಳಿದುಕೊಂಡಿರಲಿಲ್ಲ.
ತಸ್ಮಿನ್ನಪರಿತೋಷೋ ಯಃ ಪಿತುರಾಸೀನ್ಮಹಾತ್ಮನಃ ।
ತೇನ ದ್ವಾದಶ ವರ್ಷಾಣಿ ನಾವರ್ಷತ್ಪಾಕಶಾಸನಃ ।। ೧-೧೩-೧೦
ಅವನ ಮೇಲೆ ತಂದೆಗಿದ್ದ ಅಸಂತೋಷದ ಕಾರಣದಿಂದ ಮಹಾತ್ಮ ಪಾಕಶಾಸನನು ಅವನ ರಾಜ್ಯದಲ್ಲಿ ಹನ್ನೆರಡು ವರ್ಷಗಳು ಮಳೆಯನ್ನೇ ಸುರಿಸಲಿಲ್ಲ.
ತೇನ ತ್ವಿದಾನೀಂ ವಹತಾ ದೀಕ್ಷಾಂ ತಾಂ ದುರ್ವಹಾಂ ಭುವಿ ।
ಕುಲಸ್ಯ ನಿಷ್ಕೃತಿಸ್ತಾತ ಕೃತಾ ಸಾ ವೈ ಭವೇದಿತಿ ।। ೧-೧೩-೧೧
ನ ತಂ ವಸಿಷ್ಠೋ ಭಗವಾನ್ಪಿತ್ರಾ ತ್ಯಕ್ತಂ ನ್ಯವಾರಯತ್ ।
ಅಭಿಷೇಕ್ಷ್ಯಾಮ್ಯಹಂ ಪುತ್ರಮಸ್ಯೇತ್ಯೇವಂ ಮತಿರ್ಮುನೇಃ ।। ೧-೧೩-೧೨
ತಾತ! “ಒಂದು ವೇಳೆ ಇವನು ಭುವಿಯಲ್ಲಿಯೇ ಕಷ್ಟಕರವಾಗಿರುವ ಈ ದೀಕ್ಷೆಯನ್ನು ಪೂರ್ಣಗೊಳಿಸಿದರೆ ಇವನ ಕುಲದ ಪಾಪವನ್ನು ಹೋಗಲಾಡಿಸಿದಂತಾಗುತ್ತದೆ” ಎಂದು ಭಗವಾನ್ ವಸಿಷ್ಠನು ಅವನ ತಂದೆಯನ್ನು ತಡೆದಿರಲಿಲ್ಲ. “ಇವನ ಪುತ್ರನನ್ನು ರಾಜನನ್ನಾಗಿ ಅಭಿಷೇಕಿಸುತ್ತೇನೆ!” ಎಂದು ಮುನಿಯ ವಿಚಾರವಾಗಿತ್ತು.
ಸ ತು ದ್ವಾದಶ ವರ್ಷಾಣಿ ದೀಕ್ಷಾಂ ತಾಮುದ್ವಹದ್ಬಲೀ ।
ಉಪಾಂಶುವ್ರತಮಾಸ್ಥಾಯ ಮಹತ್ಸತ್ಯವ್ರತೋ ನೃಪ ।। ೧-೧೩-೧೩
ನೃಪ! ಬಲಶಾಲಿ ಸತ್ಯವ್ರತನಾದರೋ ಹನ್ನೆರಡು ವರ್ಷಗಳ ಆ ಉಪಾಂಶುವ್ರತದ ದೀಕ್ಷೆಯನ್ನು ಪಡೆದುಕೊಂಡು ಅದನ್ನು ಯಶಸ್ವಿಯಾಗಿ ಪೂರೈಸಿದನು.
ಅವಿದ್ಯಮಾನೇ ಮಾಂಸೇ ತು ವಸಿಷ್ಠಸ್ಯ ಮಹಾತ್ಮನಃ ।
ಸರ್ವಕಾಮದುಘಾಂ ದೋಗ್ಧ್ರೀಂ ದದರ್ಶ ಸ ನೃಪಾತ್ಮಜಃ ।। ೧-೧೩-೧೪
ಒಮ್ಮೆ ಮಾಂಸವು ದೊರೆಯದೇ ಇದ್ದಾಗ ಆ ನೃಪಾತ್ಮಜನು ಮಹಾತ್ಮ ವಸಿಷ್ಠನ ಸರ್ವಕಾಮಗಳನ್ನೂ ಹಾಲಾಗಿ ಸುರಿಸುವ ಕಾಮದೇನುವನ್ನು ನೋಡಿದನು.
ತಾಂ ವೈ ಕ್ರೋಧಾಚ್ಚ ಮೋಹಾಚ್ಚ ಶ್ರಮಾಚ್ಚೈವ ಕ್ಷುಧಾರ್ದಿತಃ ।
ದಶಧರ್ಮಾನ್ಗತೋ ರಾಜಾ ಜಘಾನ ಜನಮೇಜಯ ।। ೧-೧೩-೧೫
ಜನಮೇಜಯ! ಕ್ರೋಧ-ಮೋಹ-ಶ್ರಮ-ಕ್ಷುಧೆಗಳೇ ಮೊದಲಾದ ದಶಧರ್ಮಗಳನ್ನು2 ಹೊಂದಿದ್ದ ಅವನು ಕಾಮಧೇನುವನ್ನು ಸಂಹರಿಸಿದನು.
ತಚ್ಚ ಮಾಂಸಂ ಸ್ವಯಂ ಚೈವ ವಿಶ್ವಾಮಿತ್ರಸ್ಯ ಚಾತ್ಮಜಾನ್ ।
ಭೋಜಯಾಮಾಸ ತಚ್ಛ್ರುತ್ವಾ ವಸಿಷ್ಠೋಽಪ್ಯಸ್ಯ ಚುಕ್ರುಧೇ ।
ಕ್ರುದ್ಧಸ್ತು ಭಗವಾನ್ವಾಕ್ಯಮಿದಮಾಹ ನೃಪಾತ್ಮಜಮ್ ।। ೧-೧೩-೧೬
ಅದರ ಮಾಂಸವನ್ನು ತಾನೂ ಮತ್ತು ವಿಶ್ವಾಮಿತ್ರನ ಮಕ್ಕಳೂ ಊಟಮಾಡಿದರು. ಅದನ್ನು ಕೇಳಿ ವಸಿಷ್ಠನ ಕೋಪವು ತುಂಬಿಬಂದಿತು. ಕೃದ್ಧನಾದ ಆ ಭಗವಾನನು ನೃಪಾತ್ಮಜ ಸತ್ಯವ್ರತನಿಗೆ ಇದನ್ನು ಹೇಳಿದನು.
ವಸಿಷ್ಠ ಉವಾಚ
ಪಾತಯೇಯಮಹಂ ಕ್ರೂರ ತವ ಶಂಕುಮಸಂಶಯಮ್ ।
ಯದಿ ತೇ ದ್ವಾವಿಮೌ ಶಂಕೂ ನ ಸ್ಯಾತಾಂ ವೈಕೃತೌ ಪುನಃ ।। ೧-೧೩-೧೭
ವಸಿಷ್ಠನು ಹೇಳಿದನು: “ಕ್ರೂರ! ಒಂದುವೇಳೆ ನೀನು ಪುನಃ ಈ ಎರಡು ಕೋಡುಗಳನ್ನು ನೀಡುವ ಪಾಪಗಳನ್ನು ಮಾಡದೇ ಇದ್ದಿದ್ದರೆ ನಿಸ್ಸಂಶಯವಾಗಿಯೂ ನಿನ್ನ ಆ ಒಂದು ಕೋಡನ್ನು ಬೀಳಿಸುತ್ತಿದ್ದೆ.
ಪಿತುಶ್ಚಾಪರಿತೋಷೇಣ ಗುರೋರ್ದೋಗ್ಧ್ರೀವಧೇನ ಚ ।
ಅಪ್ರೋಕ್ಷಿತೋಪಯೋಗಾಚ್ಚ ತ್ರಿವಿಧಸ್ತೇ ವ್ಯತಿಕ್ರಮಃ ।। ೧-೧೩-೧೮
ತಂದೆಗೆ ಅಸಂತೋಷವನ್ನುಂಟುಮಾಡಿದ್ದುದರಿಂದ, ಗುರುವಿನ ಗೋವನ್ನು ವಧಿಸಿದುದರಿಂದ ಮತ್ತು ಪ್ರೋಕ್ಷಣೆಮಾಡದ ಆಹಾರವನ್ನು ಭುಂಜಿಸಿದುದರಿಂದ ನೀನು ಮೂರು ವಿಧದ ಪಾಪಗಳನ್ನು ಮಾಡಿದ್ದೀಯೆ!””
ವೈಶಂಪಾಯನ ಉವಾಚ
ಏವಂ ತ್ರೀಣ್ಯಸ್ಯ ಶಂಕೂನಿ ತಾನಿ ದೃಷ್ಟ್ವಾ ಮಹಾತಪಾಃ ।
ತ್ರಿಶಂಕುರಿತಿ ಹೋವಾಚ ತ್ರಿಶಂಕುರಿತಿ ಸ ಸ್ಮೃತಃ ।। ೧-೧೩-೧೯
ವೈಶಂಪಾಯನನು ಹೇಳಿದನು: “ಹೀಗೆ ಅವನ ಮೂರು ಕೋಡುಗಳನ್ನು ನೋಡಿ ಮಹಾತಪಸ್ವೀ ವಸಿಷ್ಠನು ಅವನನ್ನು ತ್ರಿಶಂಕು ಎಂದು ಕರೆದನು. ಅಂದಿನಿಂದ ಅವನು ತ್ರಿಶಂಕು ಎಂದೇ ಆದನು.
ವಿಶ್ವಾಮಿತ್ರಸ್ತು ದಾರಾಣಾಮಾಗತೋ ಭರಣೇ ಕೃತೇ ।
ಸ ತು ತಸ್ಮೈ ವರಂ ಪ್ರಾದಾನ್ಮುನಿಃ ಪ್ರೀತಸ್ತ್ರಿಶ್ಂಕವೇ ।। ೧-೧೩-೨೦
ವಿಶ್ವಾಮಿತ್ರನಾದರೋ ಹಿಂದಿರುಗಿಬಂದು ತನ್ನ ಪತ್ನಿ-ಮಕ್ಕಳನ್ನು ಭರಣ-ಪೋಷಣ ಮಾಡಿದ ತ್ರಿಶಂಕುವಿನ ಮೇಲೆ ಪ್ರೀತನಾಗಿ ಅವನಿಗೆ ವರವನ್ನಿತ್ತನು.
ಛಂದ್ಯಮಾನೋ ವರೇಣಾಥ ವರಂ ವವ್ರೇ ನೃಪಾತ್ಮಜಃ ।
ಸಶರೀರೋ ವ್ರಜೇ ಸ್ವರ್ಗಮಿತ್ಯೇವಂ ಯಾಚಿತೋ ಮುನಿಃ ।। ೧-೧೩-೨೧
ವರವನ್ನು ಕೇಳು ಎಂದು ಹೇಳಲು ನೃಪಾತ್ಮಜನು ಮುನಿಯಲ್ಲಿ “ಸಶರೀರಿಯಾಗಿ ನಾನು ಸ್ವರ್ಗಕ್ಕೆ ಹೋಗುವಂತಾಗಲಿ!” ಎಂಬ ವರವನ್ನು ಕೇಳಿಕೊಂಡನು.
ಅನಾವೃಷ್ಟಿಭಯೇ ತಸ್ಮಿನ್ಗತೇ ದ್ವಾದಶವಾರ್ಷಿಕೇ ।
ರಾಜ್ಯೇಽಭಿಷಿಚ್ಯ ಪಿತ್ರ್ಯೇ ತು ಯಾಜಯಾಮಾಸ ತಂ ಮುನಿಃ ।। ೧-೧೩-೨೨
ಆಗ ಮುನಿ ವಿಶ್ವಾಮಿತ್ರನು ತನ್ನ ತಪೋಬಲದಿಂದ ಆ ಹನ್ನೆರಡು ವರ್ಷಗಳ ಅನಾವೃಷ್ಟಿಯ ಭಯವನ್ನು ಹೋಗಲಾಡಿಸಿ ಸತ್ಯವ್ರತನ ತಂದೆಯ ರಾಜ್ಯದಲ್ಲಿ ಅವನನ್ನು ಅಭಿಷೇಕಿಸಿ ಅವನ ಯಜ್ಞಗಳನ್ನು ಮಾಡಿಸತೊಡಗಿದನು.
ಮಿಷತಾಂ ದೇವತಾನಾಂ ಚ ವಸಿಷ್ಠಸ್ಯ ಚ ಕೌಶಿಕಃ ।
ಸಶರೀರಂ ತದಾ ತಂ ತು ದಿವಮಾರೋಪಯತ್ಪ್ರಭುಃ ।। ೧-೧೩-೨೩
ದೇವತೆಗಳೂ, ವಸಿಷ್ಠನೂ ಮತ್ತು ಕೌಶಿಕ ವಿಶ್ವಾಮಿತ್ರನೂ ನೋಡುತ್ತಿದ್ದಂತೆಯೇ ಆ ಪ್ರಭು ತ್ರಿಶಂಕುವು ಸಶರೀರನಾಗಿ ದಿವವನ್ನು ಏರಿದನು.
ತಸ್ಯ ಸತ್ಯರಥಾ ನಾಮ ಭಾರ್ಯಾ ಕೈಕೇಯವಂಶಜಾ ।
ಕುಮಾರಂ ಜನಯಾಮಾಸ ಹರಿಶ್ಚಂದ್ರಮಕಲ್ಮಷಮ್ ।। ೧-೧೩-೨೪
ಅವನ ಭಾರ್ಯೆ ಕೈಕೇಯವಂಶದಲ್ಲಿ ಹುಟ್ಟಿದ ಸತ್ಯರಥಾ ಎನ್ನುವವಳು ಅಕಲ್ಮಷನಾದ ಕುಮಾರ ಹರಿಶ್ಚಂದ್ರನಿಗೆ ಜನ್ಮವಿತ್ತಳು.
ಸ ವೈ ರಾಜಾ ಹರಿಶ್ಚಂದ್ರಸ್ತ್ರೈಶಂಕವ ಇತಿ ಸ್ಮೃತಃ ।
ಆಹರ್ತಾ ರಾಜಸೂಯಸ್ಯ ಸ ಸಮ್ರಾಡಿತಿ ವಿಶ್ರುತಃ ।। ೧-೧೩-೨೫
ರಾಜ ಹರಿಶ್ಚಂದ್ರನು ತ್ರೈಶಂಕವ ಎಂದೂ ಕರೆಯಲ್ಪಡುತ್ತಾನೆ. ಅವನು ರಾಜಸೂಯ ಯಜ್ಞವನ್ನು ಮಾಡಿದ್ದನು. ಆದುದರಿಂದ ಅವನು ಸಾಮ್ರಾಟನೆಂದು ಪ್ರಸಿದ್ಧನಾದನು.
ಹರಿಶ್ಚಂದ್ರಸ್ಯ ಪುತ್ರೋಽಭೂದ್ರೋಹಿತೋ ನಾಮ ವೀರ್ಯವಾನ್ ।
ಯೇನೇದಂ ರೋಹಿತಪುರಂ ಕಾರಿತಂ ರಾಜ್ಯಸಿದ್ಧಯೇ ।। ೧-೧೩-೨೬
ಹರಿಶ್ಚಂದ್ರನ ಮಗನು ರೋಹಿತನೆಂಬ ಹೆಸರಿನವನಾಗಿದ್ದನು. ಅವನು ತನ್ನ ರಾಜ್ಯಸಿದ್ಧಿಗಾಗಿ ರೋಹಿತಪುರಿಯನ್ನು ನಿರ್ಮಿಸಿದ್ದನು.
ಕೃತ್ವಾ ರಾಜ್ಯಂ ಸ ರಾಜರ್ಷಿಃ ಪಾಲಯಿತ್ವಾ ತ್ವಥ ಪ್ರಜಾಃ ।
ಸಂಸಾರಾಸಾರತಾಂ ಜ್ಞಾತ್ವಾ ದ್ವಿಜೇಭ್ಯಸ್ತತ್ಪುರಂ ದದೌ ।। ೧-೧೩-೨೭
ಆ ರಾಜರ್ಷಿಯು ರಾಜ್ಯವನ್ನೂ ಪ್ರಜೆಗಳನ್ನೂ ಪರಿಪಾಲಿಸಿದ ನಂತರ, ಸಂಸಾರದ ಅಸಾರತೆಯನ್ನು ತಿಳಿದು ದ್ವಿಜರಿಗೆ ಆ ಪುರವನ್ನು ದಾನವನ್ನಾಗಿತ್ತನು.
ಹರಿತೋ ರೋಹಿತಸ್ಯಾಥ ಚಂಚುರ್ಹಾರೀತ ಉಚ್ಯತೇ ।
ವಿಜಯಶ್ಚ ಸುದೇವಶ್ಚ ಚಂಚುಪುತ್ರೌ ಬಭೂವತುಃ ।। ೧-೧೩-೨೮
ಹರಿತನು ರೋಹಿತನ ಪುತ್ರ. ಮತ್ತು ಚಂಚುವು ಹರಿತನ ಪುತ್ರ – ಹಾರೀತ ಎಂದು ಹೇಳಲ್ಪಟ್ಟಿದ್ದಾನೆ. ವಿಜಯ ಮತ್ತು ಸುದೇವ ಇಬ್ಬರೂ ಚಂಚುವಿನ ಪುತ್ರರಾದರು.
ಜೇತಾ ಕ್ಷತ್ರಸ್ಯ ಸರ್ವಸ್ಯ ವಿಜಯಸ್ತೇನ ಸಂಸ್ಮೃತಃ ।
ರುರುಕಸ್ತನಯಸ್ತಸ್ಯ ರಾಜಧರ್ಮಾರ್ಥಕೋವಿದಃ ।। ೧-೧೩-೨೯
ಸರ್ವ ಕ್ಷತ್ರಿಯರನ್ನೂ ಗೆದ್ದುದರಿಂದ ಅವನನ್ನು ವಿಜಯ ಎಂದು ಕರೆಯುತ್ತಿದ್ದರು. ಅವನಿಗೆ ರಾಜಧರ್ಮಾರ್ಥಕೋವಿದನಾದ ರುರುಕ ಎಂಬ ಮಗನಿದ್ದನು.
ರುರುಕಸ್ಯ ವೃಕಃ ಪುತ್ರೋ ವೃಕಾದ್ಬಾಹುಸ್ತು ಜಜ್ಞಿವಾನ್ ।
ಶಕೈಯವನಕಾಂಬೋಜೈಃ ಪಾರದೈಃ ಪಹ್ಲವೈಃ ಸಹ ।। ೧-೧೩-೩೦
ಹೈಹಯಾಸ್ತಾಲಜಂಘಾಶ್ಚ ನಿರಸ್ಯಂತಿ ಸ್ಮ ತಂ ನೃಪಮ್ ।
ನಾತಯ್ರ್ಥಂ ಧಾರ್ಮಿಕಸ್ತಾತ ಸ ಹಿ ಧರ್ಮಯುಗೇಽಭವತ್ । ೧-೧೩-೩೧
ರುರುಕನ ಮಗನು ವೃಕ ಮತ್ತು ವೃಕನಿಗೆ ಬಾಹುವು ಜನಿಸಿದನು. ತಾತ! ಆ ಧರ್ಮಯುಗದಲ್ಲಿ ಧಾರ್ಮಿಕನಾಗಿರದೇ ಇದ್ದುದರಿಂದ ಆ ನೃಪ ಬಾಹುವನ್ನು ಶಕ-ಯವನ-ಕಾಂಬೋಜ-ಪಾರದ-ಪಹ್ಲವ-ಹೈಹಯ-ತಾಲಜಂಘರು ಸೇರಿ ರಾಜ್ಯಭ್ರಷ್ಟನನ್ನಾಗಿ ಮಾಡಿದರು.
ಸಗರಸ್ತು ಸುತೋ ಬಾಹೋರ್ಜಜ್ಞೇ ಸಹ ಗರೇಣ ಚ ।
ಔರ್ವಸ್ಯಾಶ್ರಮಮಾಗಮ್ಯ ಭಾರ್ಗವೇಣಾಭಿರಕ್ಷಿತಃ । ।। ೧-೧೩-೩೨
ಬಾಹುವಿಗೆ ಗರ ಅರ್ಥಾತ್ ವಿಷದೊಂದಿಗೆ ಹುಟ್ಟಿದ ಮಗನು ಸಗರನೆಂದಾದನು. ಅವನ ತಾಯಿಯು ಔರ್ವನ ಆಶ್ರಮಕ್ಕೆ ಬರಲು ಅಲ್ಲಿ ಭಾರ್ಗವ ಔರ್ವನಿಂದ ಅವನು ರಕ್ಷಿತನಾದನು.
ಆಗ್ನೇಯಮಸ್ತ್ರಂ ಲಬ್ಧ್ವಾ ಚ ಭಾರ್ಗವಾತ್ಸಗರೋ ನೃಪಃ ।
ಜಿಗಾಯ ಪೃಥಿವೀಂ ಹತ್ವಾ ತಾಲಜಂಘಾನ್ಸಹೈಹಯಾನ್ ।। ೧-೧೩-೩೩
ಶಕಾನಾಂ ಪಹ್ಲವಾನಾಂ ಚ ಧರ್ಮಂ ನಿರಸದಚ್ಯುತಃ ।
ಕ್ಷತ್ರಿಯಾಣಾಂ ಕುರುಶ್ರೇಷ್ಠ ಪಾರದಾನಾಂ ಸ ಧರ್ಮವಿತ್ ।। ೧-೧೩-೩೪
ನೃಪ ಸಗರನು ಭಾರ್ಗವ ಔರ್ವನಿಂದ ಆಗ್ನೇಯಾಸ್ತ್ರವನ್ನು ಪಡೆದುಕೊಂಡು ತಾಲಜಂಘ-ಹೈಹಯ ಸಂಹರಿಸಿ ಪೃಥ್ವಿಯನ್ನು ಗೆದ್ದನು. ಕುರುಶ್ರೇಷ್ಠ! ಧರ್ಮವಿದು ಅಚ್ಯುತ ಸಗರನು ಶಕರು, ಪಹ್ಲವರು ಮತ್ತು ಪಾರದರನ್ನು ಧರ್ಮಭ್ರಷ್ಟರನ್ನಾಗಿ ಮಾಡಿದ್ದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಖಿಲೇಷು ಹರಿವಂಶಪರ್ವಣಿ ತ್ರಿಶಂಕುಚರಿತಂ ನಾಮ ತ್ರಯೋದಶೋಽಧ್ಯಾಯಃ