ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಖಿಲಭಾಗೇ ಹರಿವಂಶಃ
ಹರಿವಂಶ ಪರ್ವ
ಅಧ್ಯಾಯ 12
ಸಾರ
ವೈಶಂಪಾಯನ ಉವಾಚ
ತಸ್ಯ ಪುತ್ರಾಸ್ತ್ರಯಃ ಶಿಷ್ಟಾ ದೃಢಾಶ್ವೋ ಜ್ಯೇಷ್ಠ ಉಚ್ಯತೇ ।
ಚಂದ್ರಾಶ್ವಕಪಿಲಾಶ್ವೌ ತು ಕುಮಾರೌ ದ್ವೌ ಕನೀಯಸೌ ।। ೧-೧೨- ೧
ವೈಶಂಪಾಯನನು ಹೇಳಿದನು: “ಕುವಲಾಶ್ವನ ಅಳಿದುಳಿದ ಮೂರು ಮಕ್ಕಳಲ್ಲಿ ದೃಢಾಶ್ವನು ಜ್ಯೇಷ್ಠನೆಂದು ಹೇಳುತ್ತಾರೆ. ಚಂದ್ರಾಶ್ವ ಮತ್ತು ಕಪಿಲಾಶ್ವ ಈ ಇಬ್ಬರು ಕುಮಾರರು ಕಿರಿಯವರು.
ಧೌಂಧುಮಾರಿರ್ದೃಢಾಶ್ವಸ್ತು ಹರ್ಯಶ್ವಸ್ತಸ್ಯ ಚಾತ್ಮಜಃ ।
ಹರ್ಯಶ್ವಸ್ಯ ನಿಕುಂಭೋಽಭೂತ್ಕ್ಷತ್ರಧರ್ಮರತಃ ಸದಾ ।। ೧-೧೨-೨
ಧುಂಧುಮಾರಿಯ ಮಗ ದೃಢಾಶ್ವನಿಗೆ ಹರ್ಯಶ್ವನು ಮಗ. ಹರ್ಯಶ್ವನಿಗೆ ನಿಂಕುಂಭ ಎನ್ನುವ ಸದಾ ಧರ್ಮರತ ಪುತ್ರನಾದನು.
ಸಂಹತಾಶ್ವೋ ನಿಕುಂಭಸ್ಯ ಪುತ್ರೋ ರಣವಿಶಾರದಃ ।
ಅಕೃಶಾಶ್ವಃ ಕೃಶಾಶ್ವಶ್ಚ ಸಂಹತಾಶ್ವಸುತೌ ನೃಪ ।। ೧-೧೨-೩
ನೃಪ! ನಿಕುಂಭನಿಗೆ ರಣವಿಶಾರದ ಸಂಹತಾಶ್ವನೆಂಬ ಮಗನಾದನು. ನೃಪ! ಸಂಹತಾಶ್ವನಿಗೆ ಅಕೃಶಾಶ್ವ ಮತ್ತು ಕೃಶಾಶ್ವರೆಂಬ ಇಬ್ಬರು ಮಕ್ಕಳಿದ್ದರು.
ತಸ್ಯ ಹೈಮವತೀ ಕನ್ಯಾ ಸತಾಂ ಮಾತಾ ದೃಷದ್ವತೀ ।
ವಿಖ್ಯಾತಾ ತ್ರಿಷು ಲೋಕೇಷು ಪುತ್ರಶ್ಚಾಸ್ಯಾಃ ಪ್ರಸೇನಜಿತ್ ।। ೧-೧೨-೪
ಲೇಭೇ ಪ್ರಸೇನಜಿದ್ಭಾರ್ಯಾಂ ಗೌರೀಂ ನಾಮ ಪತಿವ್ರತಾಂ ।
ಅಭಿಶಪ್ತಾ ತು ಸಾ ಭರ್ತ್ರಾ ನದೀ ವೈ ಬಾಹುದಾಭವತ್ ।। ೧-೧೨-೫
ದೃಷದ್ವತೀ ಎಂದು ಮೂರು ಲೋಕಗಳಲ್ಲಿ ವಿಖ್ಯಾತಳಾದ ಹಿಮವತನ ಮಗಳು ಸಂಹತಾಶ್ವನ ಪತ್ನಿಯಾಗಿದ್ದಳು. ಪತಿಯಿಂದ ಶಪಿತಳಾದ ಅವಳು ನದಿಯಾಗಿ ಹರಿಯತೊಡಗಿದಳು, ಅವರಿಗೆ ಪ್ರಸೇನಜಿತ್ ಎಂಬ ಪುತ್ರನಾದನು. ಪ್ರಸೇನಜಿತುವು ಗೌರೀ ಎಂಬ ಹೆಸರಿನ ಪತಿವ್ರತೆಯನ್ನು ವಿವಾಹವಾದನು.
ತಸ್ಯಾಃ ಪುತ್ರೋ ಮಹಾನಾಸೀದ್ಯುವನಾಶ್ವೋ ಮಹೀಪತಿಃ ।
ಮಾಂಧಾತಾ ಯುವನಾಶ್ವಸ್ಯ ತ್ರಿಲೋಕವಿಜಯೀ ಸುತಃ ।। ೧-೧೨-೬
ಅವಳ ಮಹಾಪುತ್ರನು ಮಹೀಪತಿ ಯುವನಾಶ್ವನು. ಮಾಂಧಾತನು ಯುವನಾಶ್ವನ ತ್ರಿಲೋಕವಿಜಯೀ ಸುತನು.
ತಸ್ಯ ಚೈತ್ರರಥೀ ಭಾರ್ಯಾ ಶಶಬಿಂದೋಃ ಸುತಾಭವತ್ ।
ಸಾಧ್ವೀ ಬಿಂದುಮತೀ ನಾಮ ರೂಪೇಣಾಸದೃಶೀ ಭುವಿ ।। ೧-೧೨-೭
ಶಶಬಿಂದುವಿನ ಸುತೆ, ಬಿಂದುಮತೀ ಎಂಬ ಹೆಸರಿನ, ಚೈತ್ರರಥಿಯೆಂದೂ ಕರೆಯಲ್ಪಟ್ಟ, ಭುವಿಯಲ್ಲಿಯೇ ಅಸದೃಶ ರೂಪವತಿಯಾಗಿದ್ದ ಸಾಧ್ವಿಯು ಮಾಂಧಾತನ ಪತ್ನಿಯಾದಳು.
ಪತಿವ್ರತಾ ಚ ಜ್ಯೇಷ್ಠಾ ಚ ಭ್ರಾತೄಣಾಮಯುತಸ್ಯ ಸಾ ।
ತಸ್ಯಾಮುತ್ಪಾದಯಾಮಾಸ ಮಾಂಧಾತಾ ದ್ವೌ ಸುತೌ ನೃಪ ।। ೧-೧೨-೮
ಆ ಪತಿವ್ರತೆಗೆ ಹತ್ತು ಸಾವಿರ ಸಹೋದರರಿದ್ದರು. ಅವರಲ್ಲಿ ಅವಳು ಜ್ಯೇಷ್ಠೆಯಾಗಿದ್ದಳು. ನೃಪ! ಮಾಂಧಾತನು ಅವಳಲ್ಲಿ ಈರ್ವರು ಸುತರನ್ನು ಹುಟ್ಟಿಸಿದನು.
ಪುರುಕುತ್ಸಂ ತು ಧರ್ಮಜ್ಞಂ ಮುಚುಕುಂದಂ ಚ ಧಾರ್ಮಿಕಮ್ ।
ಪುರುಕುತ್ಸಸುತಸ್ತ್ವಾಸೀತ್ತ್ರಸದ್ದಸ್ಯುರ್ಮಹೀಪತಿಃ ।। ೧-೧೨-೯
ಧರ್ಮಜ್ಞ ಪುರುಕುತ್ಸ ಮತ್ತು ಧಾರ್ಮಿಕ ಮುಚುಕುಂದ. ಪುರುಕುತ್ಸನ ಮಗನು ಮಹೀಪತಿ ತ್ರಿಸದ್ದಸ್ಯುವು.
ನರ್ಮದಾಯಾಮಥೋತ್ಪನ್ನಃ ಸಂಭೂತಸ್ತಸ್ಯ ಚಾತ್ಮಜಃ ।
ಸಂಭೂತಸ್ಯ ತು ದಾಯಾದಃ ಸುಧನ್ವಾ ನಾಮ ಪಾರ್ಥಿವಃ ।। ೧-೧೨-೧೦
ತ್ರಿಸದ್ದಸ್ಯುವಿಗೆ ನರ್ಮದೆಯಲ್ಲಿ ಸಂಭೂತ ಎನ್ನುವ ಮಗನು ಹುಟ್ಟಿದನು. ಸುಧನ್ವಾ ಎಂಬ ಹೆಸರಿನ ಪಾರ್ಥಿವನು ಸಂಭೂತನ ಮಗನು.
ಸುಧನ್ವನಃ ಸುತಶ್ಚಾಸೀತ್ತ್ರಿಧನ್ವಾ ರಿಪುಮರ್ದನಃ ।
ರಾಜ್ಞಸ್ತ್ರಿಧನ್ವನಸ್ತ್ವಾಸೀದ್ವಿದ್ವಾಂಸ್ತ್ರಯ್ಯಾರುಣಃ ಸುತಃ ।। ೧-೧೨-೧೧
ರಿಪುಮರ್ದನ ತ್ರಿಧನ್ವನು ಸುಧನ್ವನ ಮಗನಾಗಿದ್ದನು. ರಾಜ ತ್ರಿಧನ್ವನಿಗೆ ವಿದ್ವಾಂಸನಾದ ತ್ರಯ್ಯಾರುಣ ಎಂಬ ಮಗನಿದ್ದನು.
ತಸ್ಯ ಸತ್ಯವ್ರತೋ ನಾಮ ಕುಮಾರೋಽಭೂನ್ಮಹಾಬಲಃ ।
ಪಾಣಿಗ್ರಹಣಮಂತ್ರಾಣಾಂ ವಿಘ್ನಂ ಚಕ್ರೇ ಸುದುರ್ಮತಿಃ ।। ೧-೧೨-೧೨
ತ್ರಯ್ಯಾರುಣನಿಗೆ ಸತ್ಯವ್ರತ ಎಂಬ ಹೆಸರಿನ ಮಹಾಬಲಶಾಲೀ ಕುಮಾರನಾದನು. ಸತ್ಯವ್ರತನು ಅತ್ಯಂತ ದುರ್ಮತಿಯಾಗಿದ್ದು, ಪಾಣಿಗ್ರಹಣಮಂತ್ರಗಳಿಗೆ ವಿಘ್ನವನ್ನುಂಟು ಮಾಡುತ್ತಿದ್ದನು.
ಯೇನ ಭಾರ್ಯಾಹೃತಾ ಪೂರ್ವಂ ಕ್ರಿತೋದ್ವಾಹಾ ಪರಸ್ಯ ವೈ ।
ಬಾಲ್ಯಾತ್ಕಾಮಾಚ್ಚ ಮೋಹಾಚ್ಚ ಸಂಹರ್ಷಾಚ್ಚಾಪಲೇನ ಚ ।। ೧-೧೨-೧೩
ಅವನು ಬಾಲ್ಯತನದಿಂದ, ಮೋಹದಿಂದ, ಹರ್ಷಕ್ಕೋಸ್ಕರ ಮತ್ತು ಚಪಲತೆಯಿಂದ ಮೊದಲೇ ಬೇರೆಯವರಿಗೆ ವಿವಾಹವಾಗಿದ್ದ ಪತ್ನಿಯರನ್ನು ಅಪಹರಿಸುತ್ತಿದ್ದನು.
ಜಹಾರ ಕನ್ಯಾಂ ಕಾಮಾತ್ಸಃ ಕಸ್ಯಚಿತ್ಪುರವಾಸಿನಃ ।
ಅಧರ್ಮಶಂಕುನಾ ತೇನ ರಾಜಾ ತ್ರಯ್ಯಾರುಣೋಽತ್ಯಜತ್ ।। ೧-೧೨-೧೪
ಅಪಧ್ವಂಸೇತಿ ಬಹುಶೋ ವದನ್ಕ್ರೋಧಸಮನ್ವಿತಃ ।
ಪಿತರಂ ಸೋಽಬ್ರವಿತ್ತ್ಯಕ್ತಃ ಕ್ವ ಗಚ್ಛಾಮೀತಿ ವೈ ಮುಹುಃ । ೧-೧೨-೧೫
ಒಮ್ಮೆ ಅವನು ಕಾಮಾರ್ತನಾಗಿ ಯಾವುದೋ ಪುರವಾಸಿನಿಯ ಕನ್ಯೆಯನ್ನು ಕದ್ದನು. ಆಗ ಅಧರ್ಮವನ್ನು ಶಂಕಿಸಿ ರಾಜಾ ತ್ರಯ್ಯಾರುಣನು ಅವನನ್ನು ತ್ಯಜಿಸಿದನು. “ಹೊರಟುಹೋಗು!” ಎಂದು ಕ್ರೋಧದಿಂದ ಎಷ್ಟು ಹೇಳಿದರು ಸತ್ಯವ್ರತನು ತಂದೆಗೆ ಪುನಃ ಪುನಃ “ನಾನು ಎಲ್ಲಿ ಹೋಗಲಿ?” ಎಂದು ಕೇಳುತ್ತಿದ್ದನು.
ಪಿತಾ ತ್ವೇನಮಥೋವಾಚ ಶ್ವಪಾಕೈಃ ಸಹ ವರ್ತಯ ।
ನಾಹಂ ಪುತ್ರೇಣ ಪುತ್ರಾರ್ಥೀ ತ್ವಯಾದ್ಯ ಕುಲಪಾಂಸನ ।। ೧-೧೨-೧೬
ಆಗ ಅವನ ತಂದೆಯು ಅವನಿಗೆ “ಕುಲಪಾಂಸನ! ನೀನು ಶ್ವಪಾಕರೊಂದಿಗೆ ವಾಸಿಸು! ನಿನ್ನಂತಹ ಪುತ್ರನನ್ನು ಪಡೆದಿರುವುದಕ್ಕಿಂತ ಪುತ್ರನಿಲ್ಲದೇ ಇರುತ್ತೇನೆ.” ಎಂದನು.
ಇತ್ಯುಕ್ತಃ ಸ ನಿರಾಕ್ರಾಮನ್ನಗರಾದ್ವಚನಾತ್ಪಿತುಃ ।
ನ ಚ ತಂ ವಾರಯಾಮಾಸ ವಸಿಷ್ಠೋ ಭಗವಾನೃಷಿಃ ।। ೧-೧೨-೧೭
ಇದನ್ನು ಕೇಳಿದ ಸತ್ಯವ್ರತನು ತಂದೆಯ ಮಾತಿನಂತೆ ನಗರದಿಂದ ಹೊರಹೋದನು. ಭಗವಾನ್ ಋಷಿ ವಸಿಷ್ಠನೂ ಅವನನ್ನು ತಡೆಯಲಿಲ್ಲ.
ಸ ತು ಸತ್ಯವ್ರತಸ್ತಾತ ಶ್ವಪಾಕಾವಸಥಾಂತಿಕೇ ।
ಪಿತ್ರಾ ತ್ಯಕ್ತೋಽವಸದ್ಧೀರಃ ಪಿತಾ ತಸ್ಯ ವನಂ ಯಯೌ ।। ೧-೧೨-೧೮
ತಾತ! ತಂದೆಯಿಂದ ತ್ಯಕ್ತನಾದ ಧೀರ ಸತ್ಯವ್ರತನಾದರೋ ಚಾಂಡಾಲರೊಡನೆ ಜೀವಿಸುತ್ತಿದ್ದನು. ಅನಂತರ ಅವನ ತಂದೆಯು ವನಕ್ಕೆ ಹೋದನು.
ತತಸ್ತಸ್ಮಿಂಸ್ತು ವಿಷಯೇ ನಾವರ್ಷತ್ಪಾಕಶಾಸನಃ ।
ಸಮಾ ದ್ವಾದಶ ರಾಜೇಂದ್ರ ತೇನಾಧರ್ಮೇಣ ವೈ ತದಾ ।। ೧-೧೨-೧೯
ರಾಜೇಂದ್ರ! ಸತ್ಯವ್ರತನ ಅಧರ್ಮದಿಂದಾಗಿ ಅವನ ರಾಜ್ಯದಲ್ಲಿ ಪಾಕಶಾಸನ ಇಂದ್ರನು ಹನ್ನೆರಡು ವರ್ಷಗಳ ಪರ್ಯಂತ ಮಳೆಯನ್ನೇ ಸುರಿಸಲಿಲ್ಲ.
ದಾರಾಂಸ್ತು ತಸ್ಯ ವಿಷಯೇ ವಿಶ್ವಾಮಿತ್ರೋ ಮಹಾತಪಾಃ ।
ಸಂನ್ಯಸ್ಯ ಸಾಗರಾನೂಪೇ ಚಚಾರ ವಿಪುಲಂ ತಪಃ ।। ೧-೧೨-೨೦
ಅದೇ ಸಮಯದಲ್ಲಿ ಮಹಾತಪಸ್ವೀ ವಿಶ್ವಾಮಿತ್ರನೂ ಕೂಡ ಅವನ ರಾಜ್ಯದಲ್ಲಿ ತನ್ನ ಪತ್ನಿಯನ್ನು ನ್ಯಾಸರೂಪದಲ್ಲಿಟ್ಟು ಸಮುದ್ರತಟದಲ್ಲಿ ವಿಪುಲ ತಪಸ್ಸನ್ನಾಚರಿಸುತ್ತಿದ್ದನು.
ತಸ್ಯ ಪತ್ನೀ ಗಲೇ ಬದ್ಧ್ವಾ ಮಧ್ಯಮಂ ಪುತ್ರಮೌರಸಮ್ ।
ಶೇಶ್ಹಸ್ಯ ಭರಣಾರ್ಥಾಯ ವ್ಯಕ್ರೀಣಾದ್ಗೋಶತೇನ ವೈ ।। ೧-೧೨-೨೧
ವಿಶ್ವಾಮಿತ್ರನ ಪತ್ನಿಯು ಕುಟುಂಬದಲ್ಲಿ ಉಳಿದವರ ಭರಣ-ಪೋಷಣೆಗಾಗಿ ತನ್ನ ಮಧ್ಯಮ ಮಗನ ಕುತ್ತಿಗೆಗೆ ಹಗ್ಗವನ್ನು ಕಟ್ಟಿ ಅವನನ್ನು ಮಾರುವುದಕ್ಕೆ ತೊಡಗಿದ್ದಳು.
ತಂ ತು ಬದ್ಧಂ ಗಲೇ ದೃಷ್ಟ್ವಾ ವಿಕ್ರೀಯಂತಂ ನೃಪಾತ್ಮಜಃ ।
ಮಹರ್ಷಿಪುತ್ರಂ ಧರ್ಮಾತ್ಮಾ ಮೋಕ್ಷಯಾಮಾಸ ಭಾರತ ।। ೧-೧೨-೨೨
ಭಾರತ! ಕುತ್ತಿಗೆಯನ್ನು ಕಟ್ಟಿ ಮಾರಾಟಕ್ಕಿದ್ದ ಆ ಮಹರ್ಷಿಪುತ್ರನನ್ನು ನೋಡಿ ಧರ್ಮಾತ್ಮಾ ನೃಪಾತ್ಮಜನು ಅವನನ್ನು ಬಿಡುಗಡೆಗೊಳಿಸಿದನು.
ಸತ್ಯವ್ರತೋ ಮಹಾಬಾಹುರ್ಭರಣಂ ತಸ್ಯ ಚಾಕರೋತ್ ।
ವಿಶ್ವಾಮಿತ್ರಸ್ಯ ತುಷ್ಟ್ಯರ್ಥ್ಮನುಕಂಪಾರ್ಥಮೇವ ಚ ।। ೧-೧೨-೨೩
ಮಹಾಬಾಹು ಸತ್ಯವ್ರತನು ವಿಶ್ವಾಮಿತ್ರನನ್ನು ತೃಪ್ತಿಗೊಳಿಸಲು ಮತ್ತು ಅನುಕಂಪದಿಂದಲೂ ಅವನ ಭರಣ-ಪೋಷಣೆಯನ್ನು ಮಾಡಿದನು.
ಸೋಽಭವದ್ಗಾಲವೋ ನಾಮ ಗಲಬಂಧಾನ್ಮಹಾತಪಾಃ ।
ಮಹರ್ಷಿಃ ಕೌಶಿಕಸ್ತಾತ ತೇನ ವೀರೇಣ ಮೋಕ್ಷಿತಃ ।। ೧-೧೨-೨೪
ತಾತ! ಕುತ್ತಿಗೆಯನ್ನು ಕಟ್ಟಿದ್ದುದಕ್ಕಾಗಿ ಆ ಮಹಾತಪಸ್ವಿಯ ಹೆಸರು ಗಾಲವನೆಂದಾಯಿತು. ಈ ರೀತಿ ವೀರ ಸತ್ಯವ್ರತನು ಆ ಕೌಶಿಕ ಮಹರ್ಷಿಯನ್ನು ಬಿಡುಗಡೆಗೊಳಿಸಿದ್ದನು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಖಿಲಭಾಗೇ ಹರಿವಂಶೇ ಹರಿವಂಶಪರ್ವಣಿ ಗಾಲವೋತ್ಪತ್ತೌ ದ್ವಾದಶೋಽಧ್ಯಾಯಃ।।