011: ಧುಂಧುವಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಖಿಲಭಾಗೇ ಹರಿವಂಶಃ

ಹರಿವಂಶ ಪರ್ವ

ಅಧ್ಯಾಯ 11

ಸಾರ

ಜನಮೇಜಯ ಉವಾಚ
ಕಥಂ ಬಹುಯುಗೇ ಕಾಲೇ ಸಮತೀತೇ ದ್ವಿಜೋತ್ತಮ ।
ನ ಜರಾ ರೇವತೀಂ ಪ್ರಾಪ್ತಾ ರೈವತಂ ಚ ಕಕುದ್ಮಿನಮ್ ।। ೧-೧೧-೧

ಜನಮೇಜಯನು ಹೇಳಿದನು: “ದ್ವಿಜೋತ್ತಮ! ಅನೇಕ ಯುಗಗಳ ಕಾಲವು ಕಳೆದುಹೋದರೂ ರೇವತೀ ಮತ್ತು ರೈವತ ಕಕುದ್ಮಿಯರು ಹೇಗೆ ವೃದ್ಧರಾಗದೇ ಇದ್ದರು?

ಮೇರುಂ ಗತಸ್ಯ ವಾ ತಸ್ಯ ಶರ್ಯಾತೇಃ ಸಂತತಿಃ ಕಥಮ್ ।
ಸ್ಥಿತಾ ಪೃಥಿವ್ಯಾಮದ್ಯಾಪಿ ಶ್ರೋತುಮಿಚ್ಛಾಮಿ ತತ್ತ್ವತಃ ।। ೧-೧೧-೨

ಶರ್ಯಾತಿಯ ಪ್ರಪೌತ್ರನು ಮೇರುಪರ್ವತಕ್ಕೆ ಹೊರಟು ಹೋದರೂ ಪೃಥ್ವಿಯಲ್ಲಿ ಈಗಲೂ ಅವನ ಸಂತತಿಯು ಹೇಗೆ ಇದೆ ಎನ್ನುವುದರ ಕುರಿತು ತತ್ತ್ವತಃ ಕೇಳಬಯಸುತ್ತೇನೆ.”

ವೈಶಂಪಾಯನ ಉವಾಚ
ನ ಜರಾ ಕ್ಷುತ್ಪಿಪಾಸೇ ವಾ ನ ಮೃತ್ಯುರ್ಭರತರ್ಷಭ ।
ಋತುಚಕ್ರಂ ನ ಭವತಿ ಬ್ರಹ್ಮಲೋಕೇ ಸದಾನಘ ।। ೧-೧೧-೩

ವೈಶಂಪಾಯನನು ಹೇಳಿದನು: “ಭರತರ್ಷಭ! ಅನಘ! ಬ್ರಹ್ಮಲೋಕದಲ್ಲಿ ಸದಾ ಮುಪ್ಪು, ಹಸಿವೆ, ಬಾಯಾರಿಕೆ ಮತ್ತು ಮೃತ್ಯುವು ಇಲ್ಲ. ಅಲ್ಲಿ ಋತುಚಕ್ರವೂ ನಡೆಯುವುದಿಲ್ಲ.

ಕಕುದ್ಮಿನಸ್ತು ತಂ ಲೋಕಂ ರೈವತಸ್ಯ ಗತಸ್ಯ ಹ ।
ಹತಾ ಪುಣ್ಯಜನೈಸ್ತಾತ ರಾಕ್ಷಸೈಃ ಸಾ ಕುಶಸ್ಥಲೀ ।। ೧-೧೧-೪

ತಾತ! ರೈವತ ಕಕುದ್ಮಿಯು ಬ್ರಹ್ಮ ಲೋಕಕ್ಕೆ ಹೋಗಿದ್ದಾಗ ಕುಶಸ್ಥಲಿಯು ಯಕ್ಷ-ರಾಕ್ಷಸರಿಂದ ನಾಶಗೊಂಡಿತು.

ತಸ್ಯ ಭ್ರಾತೃಶತಂ ಚಾಸೀದ್ಧಾರ್ಮಿಕಸ್ಯ ಮಹಾತ್ಮನಃ ।
ತದ್ವಧ್ಯಮಾನಂ ರಕ್ಷೋಭಿರ್ದಿಶಃ ಪ್ರಾದ್ರವದಚ್ಯುತಮ್ ।। ೧-೧೧-೫

ಆ ಧಾರ್ಮಿಕ ಮಹಾತ್ಮ ರೈವತನಿಗೆ ನೂರು ಸಹೋದರರಿದ್ದರು. ರಾಕ್ಷಸರಿಂದ ಪೀಡಿತರಾದ ಅವರು ದಿಕ್ಕಾಪಾಲಾಗಿ ಓಡಿಹೋದರು.

ವಿದ್ರುತಸ್ಯ ತು ರಾಜೇಂದ್ರ ತಸ್ಯ ಭ್ರಾತೃಶತಸ್ಯ ವೈ ।
ತೇಷಾಂ ತು ತೇ ಭಯಾಕ್ರಾಂತಾಃ ಕ್ಷತ್ರಿಯಾಸ್ತತ್ರ ತತ್ರ ಹ ।। ೧-೧೧-೬

ರಾಜೇಂದ್ರ! ಆ ನೂರು ಸಹೋದರರು ಓಡಿಹೋಗಲು ರಾಕ್ಷಸರ ಭಯದಿಂದ ಆಕ್ರಂತರಾದ ಕ್ಷತ್ರಿಯರು ಅಲ್ಲಲ್ಲಿ ನೆಲೆಸಿದರು.

ಅನ್ವವಾಯಸ್ತು ಸುಮಹಾಂಸ್ತತ್ರ ತತ್ರ ವಿಶಾಂಪತೇ ।
ಯೇಷಾಮೇತೇ ಮಹಾರಾಜ ಶರ್ಯಾತಾ ಇತಿ ವಿಶ್ರುತಾಃ।। ೧-೧೧-೭

ವಿಶಾಂಪತೇ! ಮಹಾರಾಜ! ಅಲ್ಲಲ್ಲಿ ನೆಲೆಸಿದ್ದ ಈ ಮಹಾ ಕುಲದಲ್ಲಿ ಹುಟ್ಟಿದವರೇ ಶರ್ಯಾತರು ಎಂದು ವಿಶ್ರುತರಾದರು.

ಕ್ಷತ್ರಿಯಾ ಭರತಶ್ರೇಷ್ಠ ದಿಕ್ಷು ಸರ್ವಾಸು ಧಾರ್ಮಿಕಾಃ ।
ಸರ್ವಶಃ ಪರ್ವತಗಣಾನ್ಪ್ರವಿಷ್ಟಾಃ ಕುರುನನದನ।। ೧-೧೧-೮

ಭರತಶ್ರೇಷ್ಠ! ಕುರುನಂದನ! ಈ ಎಲ್ಲ ಧಾರ್ಮಿಕ ಕ್ಷತ್ರಿಯರೂ ಎಲ್ಲಕಡೆ ಪರ್ವತ-ಕಣಿವೆಗಳಲ್ಲಿ ವಾಸಿಸುತ್ತಿದ್ದರು.

ನಾಭಾಗಾರಿಷ್ಟಪುತ್ರೌ ದ್ವೌ ವೈಶ್ಯೌ ಬ್ರಾಹ್ಮಣತಾಂ ಗತೌ ।
ಕರೂಷಸ್ಯ ತು ಕಾರೂಷಾಃ ಕ್ಷತ್ರಿಯಾ ಯುದ್ಧದುರ್ಮದಾಃ ।। ೧-೧೧-೯

ನಾಭಾಗ ಮತ್ತು ಅರಿಷ್ಟರ ಇಬ್ಬರು ಮಕ್ಕಳೂ ಮೊದಲು ವೈಶ್ವತ್ವವನ್ನು ಪಡೆತು ನಂತರ ಬ್ರಾಹ್ಮಣತ್ವವನ್ನು ಪಡೆದರು. ಕರೂಷನ ಸಂತಾನವು ಯುದ್ಧದುರ್ಮದ ಕ್ಷತ್ರಿಯ ಕಾರೂಷರು.

ಪ್ರಾಂಶೋರೇಕೋಽಭವತ್ಪುತ್ರಃ ಪ್ರಜಾತಿರಿತಿ ನಃ ಶ್ರುತಮ್ ।
ಪೃಷಧ್ರೋ ಹಿಂಸಯಿತ್ವಾ ತು ಗುರೋರ್ಗಾಂ ಜನಮೇಜಯ। ೧-೧೧-೧೦
ಶಾಪಾಚ್ಛೂದ್ರತ್ವಮಾಪನ್ನೋ ನವೈತೇ ಪರಿಕೀರ್ತಿತಾಃ ।
ವೈವಸ್ವತಸ್ಯ ತನಯಾ ಮನೋರ್ವೈ ಭರತರ್ಷಭ ।। ೧-೧೧-೧೧

ಜನಮೇಜಯ! ಪ್ರಾಂಶುವಿಗೆ ಪ್ರಜಾತಿ ಎಂಬ ಓರ್ವನೇ ಪುತ್ರನಾದನೆಂದು ಕೇಳಿದ್ದೇವೆ. ಪೃಷಧ್ರನು ಗುರುವಿನ ಗೋವನ್ನು ಹಿಂಸಿಸಿದ ಕಾರಣ ಶಾಪವನ್ನು ಪಡೆದು ಶೂದ್ರತ್ವವನ್ನು ಹೊಂದಿದನು ಎಂದು ಹೇಳುತ್ತಾರೆ. ಭರತರ್ಷಭ! ಇದೂವರೆಗೆ ನಾನು ವೈವಸ್ವತ ಮನುವಿನ ಒಂಭತ್ತು ಮಕ್ಕಳ ಕುರಿತು ಹೇಳಿದೆ.

ಕ್ಷುವತಶ್ಚ ಮನೋಸ್ತಾತ ಇಕ್ಷ್ವಾಕುರಭವತ್ಸುತಃ ।
ತಸ್ಯ ಪುತ್ರಶತಂ ತ್ವಾಸೀದಿಕ್ಷ್ವಾಕೋರ್ಭೂರಿದಕ್ಷಿಣಮ್ ।। ೧-೧೧-೧೨

ತಾತ! ಮನುವಿನ ಸೀನುವಿಕೆಯಿಂದ ಅವನ ಸುತ ಇಕ್ಷ್ವಾಕುವು ಹುಟ್ಟಿದ್ದನು. ಇಕ್ಷ್ವಾಕುವಿಗೆ ಭೂರಿದಕ್ಷಿಣ ನೂರು ಪುತ್ರರಾದರು.

ತೇಷಾಂ ವಿಕುಕ್ಷಿರ್ಜ್ಯೇಷ್ಠಸ್ತು ವಿಕುಕ್ಷಿತ್ವಾದಯೋಧತಾಮ್ ।
ಪ್ರಾಪ್ತಃ ಪರಮಧರ್ಮಜ್ಞಃ ಸೋಽಯೋಧ್ಯಾಧಿಪತಿಃ ಪ್ರಭುಃ ।। ೧-೧೧-೧೩

ಅವರಲ್ಲಿ ವಿಕುಕ್ಷಿಯು ಜ್ಯೇಷ್ಠನಾಗಿದ್ದನು. ಅವನ ವಕ್ಷಸ್ಥಲವು ವಿಶಾಲವಾಗಿದ್ದುದರಿಂದ ಯುದ್ಧದಲ್ಲಿ ಅವನು ಜಯಿಸಲಸಾಧ್ಯನಾಗಿದ್ದನು. ಅಯೋಧನಾದ ಆ ಪ್ರಭುವೇ ಅಯೋಧ್ಯೆಯ ಅಧಿಪತಿಯಾದನು.

ಶಕುನಿಪ್ರಮುಖಾಸ್ತಸ್ಯ ಪುತ್ರಾಃ ಪಂಚಾಶದುತ್ತಮಾಃ ।
ಉತ್ತರಾಪಥದೇಶಸ್ಥಾ ರಕ್ಷಿತಾರೋ ಮಹೀಪತೇ । ೧-೧೧-೧೪

ಅವನಿಗೆ ಶಕುನಿಯೇ ಮೊದಲಾದ ಐವತ್ತು ಉತ್ತಮ ಪುತ್ರರಿದ್ದರು. ಮಹೀಪತೇ! ಉತ್ತರಾಪಥ ಪ್ರದೇಶದಲ್ಲಿದ್ದುಕೊಂಡು ಅವರು ಉತ್ತರದಿಕ್ಕನ್ನು ರಕ್ಷಿಸುತ್ತಿದ್ದರು.

ಚತ್ವಾರಿಂಶದಥಾಷ್ಟೌ ಚ ದಕ್ಷಿಣಸ್ಯಾಂ ತಥಾ ದಿಶಿ ।
ಶಶಾದಪ್ರಮುಖಾಶ್ಚಾನ್ಯೇ ರಕ್ಷಿತಾರೋ ವಿಶಾಂಪತೇ । ೧-೧೧-೧೫

ವಿಶಾಂಪತೇ! ಶಶಾದನೇ ಮೊದಲಾದ ಅವನ ನಲವತ್ತೆಂಟು ಅನ್ಯ ಪುತ್ರರು ದಕ್ಷಿಣಭಾಗದಲ್ಲಿದ್ದುಕೊಂಡು ಆ ದಿಕ್ಕನ್ನು ರಕ್ಷಿಸಿದರು.

ಇಕ್ಷ್ವಾಕುಸ್ತು ವಿಕುಕ್ಷಿರ್ವೈ ಅಷ್ಟಕಾಯಾಮಥಾದಿಶತ್ ।
ಮಾಂಸಮಾನಯ ಶ್ರಾದ್ಧಾರ್ಥಂ ಮೃಗಾನ್ಹತ್ವಾ ಮಹಾಬಲಃ।। ೧-೧೧-೧೬

ಮಹಾಬಲ ಇಕ್ಷ್ವಾಕುವು ಅಷ್ಟಕನ ಶ್ರಾದ್ಧಕ್ಕಾಗಿ ತನ್ನ ಮಗ ವಿಕುಕ್ಷಿಗೆ ಮೃಗವನ್ನು ಕೊಂದು ಮಾಂಸವನ್ನು ತರಲು ಅದೇಶವಿತ್ತನು.

ಶ್ರಾದ್ಧಕರ್ಮಣಿ ಚೋದ್ದಿಷ್ಟ ಅಕೃತೇ ಶ್ರಾದ್ಧಕರ್ಮಣಿ ।
ಭಕ್ಷಯಿತ್ವಾ ಶಶಂ ತಾತ ಶಶಾದೋ ಮೃಗಯಾಂ ಗತಃ ।। ೧-೧೧-೧೭

ತಾತ! ಆದರೆ ವಿಕುಕ್ಷಿಯು ಶ್ರಾದ್ಧಕರ್ಮಕ್ಕಾಗಿ ಕೊಂದ ವೃಗ ಶಶವನ್ನು ಶ್ರಾದ್ಧದ ಮೊದಲೇ ತಿಂದು ಹಿಂದಿರುಗಿದನು ಮತ್ತು ಶಶಾದನಾದನು.

ಇಕ್ಷ್ವಾಕುಣಾ ಪರಿತ್ಯಕ್ತೋ ವಸಿಷ್ಠವಚನಾತ್ ಪ್ರಭುಃ ।
ಇಕ್ಷ್ವಾಕೌ ಸಂಸ್ಥಿತೇ ತಾತ ಶಶಾದಃ ಪುರಮಾವಸತ್ ।। ೧ -೧೧-೧೮

ವಸಿಷ್ಠನ ವಚನದಂತೆ ಪ್ರಭು ಇಕ್ಷ್ವಾಕುವಿನಿಂದ ಪರಿತ್ಯಕ್ತನಾದ ಶಶಾದನು ಇಕ್ಷ್ವಾಕುವಿನ ನಂತರ ಪುರಕ್ಕೆ ಹಿಂದಿರುಗಿದನು.

ಶಶಾದಸ್ಯ ತು ದಾಯಾದಃ ಕಕುತ್ಸ್ಥೋ ನಾಮ ವೀರ್ಯವಾನ್ ।
ಇಂದ್ರಸ್ಯ ವೃಷಭೂತಸ್ಯ ಕಕುತ್ಸ್ಥೋ ಽಜಯತಾಸುರಾನ್ ।। ೧-೧೧-೧೯
ಪೂರ್ವಂ ದೇವಾಸುರೇ ಯುದ್ಧೇ ಕಕುತ್ಸ್ಥಸ್ತೇನ ಹಿ ಸ್ಮೃತಃ ।
ಅನೇನಾಸ್ತು ಕಕುತ್ಸ್ಥಸ್ಯ ಪೃಥುರಾನೇನಸಃ ಸ್ಮೃತಃ ।। ೧-೧೧-೨೦

ಶಶಾದನಿಗೆ ಕುಕುತ್ಸ್ಥ ಎಂಬ ಹೆಸರಿನ ವೀರ್ಯವಾನ್ ಪುತ್ರನಿದ್ದನು. ಹಿಂದೆ ದೇವಾಸುರರ ಯುದ್ಧದಲ್ಲಿ ಇಂದ್ರನು ಕಕುತ್ಸ್ಥನನ್ನು ಸ್ಮರಿಸಿದ್ದನು. ಆಗ ಇಂದ್ರನು ಕಕುತ್ಸ್ಥನನ್ನು ವೃಷಭನನ್ನಾಗಿಸಿ ಅವನ ಬೆನ್ನಮೇಲೆ ಕುಳಿತು ಅಸುರರನ್ನು ಗೆದ್ದಿದನು. ಆದುದರಿಂದ ಅವನ ಹೆಸರು ಕಕುತ್ಸ್ಥ ಎಂದಾಯಿತು. ಕಕುತ್ಸ್ಥನಿಗೆ ಅನೇನ ಎಂಬ ಮಗನಿದ್ದನು. ಅನೇನನ ಮಗನು ಪೃಥು ಎಂದು ಹೇಳುತ್ತಾರೆ.

ವಿಷ್ಟರಾಶ್ವಃ ಪೃಥೋಃ ಪುತ್ರಸ್ತಸ್ಮಾದಾರ್ದ್ರಸ್ತ್ವಜಾಯತ ।
ಆರ್ದ್ರಸ್ಯ ಯುವನಾಶ್ವಸ್ತು ಶ್ರಾವಸ್ತಸ್ಯ ತು ಚಾತ್ಮಜಃ ।। ೧-೧೧-೨೧

ಪೃಥುವಿನ ಮಗ ವಿಷ್ಟರಾಶ್ವ, ಮತ್ತು ಆರ್ದ್ರನು ವಿಷ್ಟರಾಶ್ವನ ಮಗ. ಆರ್ದ್ರನ ಮಗ ಯುವನಾಶ್ವ ಮತ್ತು ಶ್ರಾವನು ಯುವನಾಶ್ವನ ಮಗನಾಗಿದ್ದನು.

ಜಜ್ಞೇ ಶ್ರಾವಸ್ತಕೋ ರಾಜಾ ಶ್ರಾವಸ್ತೀ ಯೇನ ನಿರ್ಮಿತಾ ।
ಶ್ರಾವಸ್ತಸ್ಯ ತು ದಾಯಾದೋ ಬೃಹದಶ್ವೋ ಮಹಯಶಾಃ ।। ೧-೧೧-೨೨

ಅವನು ಶ್ರಾವಸ್ತಕನೆಂಬ ಹೆಸರಿನಿಂದ ರಾಜನಾದನು ಮತ್ತು ಶ್ರಾವಸ್ತಿಯು ಅವನಿಂದಲೇ ನಿರ್ಮಿತಗೊಂಡಿತು.

ಕುವಲಾಶ್ವಃ ಸುತಸ್ತಸ್ಯ ರಾಜಾ ಪರಮಧಾರ್ಮಿಕಃ ।
ಯಃ ಸ ಧುಂಧುವಧಾದ್ರಾಜಾ ಧುಂಧುಮಾರತ್ವಮಾಗತಃ ।। ೧-೧೧-೨೩

ರಾಜ ಶ್ರಾವಸ್ತನ ಮಗನು ರಾಜ ಕುವಲಾಶ್ವ. ಪರಮಧಾರ್ಮಿಕನಾದ ಅವನು ಧುಂಧುವಧೆಯಿಂದ ಧುಂಧುಮಾರನೆಂದಾದನು.”

ಜನಮೇಜಯ ಉವಾಚ
ಧುಂಧೋರ್ವಧಮಹಂ ಬ್ರಹ್ಮ~ನ್ಶ್ರೋತುಮಿಚ್ಛಾಮಿ ತತ್ತ್ವತಃ ।
ಯದರ್ಥಂ ಕುವಲಾಶ್ವಃ ಸಂಧುಂಧುಮಾರತ್ವಮಾಗತಃ ।। ೧-೧೧-೨೪

ಜನಮೇಜಯನು ಹೇಳಿದನು: “ಬ್ರಹ್ಮನ್! ಯಾವ ಕಾರಣದಿಂದ ಕುವಲಾಶ್ವನು ಧುಂಧುಮಾರನೆಂದಾದನೋ ಆ ಧುಂಧುವಿನ ವಧೆಯಕುರಿತು ತತ್ತ್ವತಃ ಕೇಳಲು ಬಯಸುತ್ತೇನೆ.”

ವೈಶಂಪಾಯನ ಉವಾಚ
ಕುವಲಾಶ್ವಸ್ಯ ಪುತ್ರಾಣಾಂ ಶತಮುತ್ತಮಧನ್ವಿನಾಮ್ ।
ಸರ್ವೇ ವಿದ್ಯಾಸು ನಿಷ್ಣಾತಾ ಬಲವಂತೋ ದುರಾಸದಾಃ ।। ೧-೧೧-೨೫

ವೈಶಂಪಾಯನನು ಹೇಳಿದನು: “ಕುವಲಾಶ್ವನಿಗೆ ಉತ್ತಮ ಧನ್ವಿಗಳಾದ ನೂರು ಪುತ್ರರಿದ್ದರು. ಅವರು ಸರ್ವ ವಿದ್ಯೆಗಳಲ್ಲಿ ನಿಷ್ಣಾತರಾಗಿದ್ದರು. ಬಲವಂತರೂ ಯುದ್ಧದಲ್ಲಿ ದುರಾಸದರೂ ಆಗಿದ್ದರು.

ಬಭೂವುರ್ಧಾರ್ಮಿಕಾಃ ಸರ್ವೇ ಯಜ್ವಾನೋ ಭೂರಿದಕ್ಷಿಣಾಃ ।
ಕುವಲಾಶ್ವಂ ಸುತಂ ರಾಜ್ಯೇ ಬೃಹದಶ್ವೋ ನ್ಯಯೋಜಯತ್ ।। ೧-೧೧-೨೬

ಅವರೆಲ್ಲರೂ ಧಾರ್ಮಿಕರಾಗಿದ್ದು ಭೂರಿದಕ್ಷಿಣ ಯಜ್ಞಗಳನ್ನು ನೆರವೇರಿಸಿದ್ದರು. ಬೃಹದಶ್ವನು ಕುವಲಾಶ್ವನನ್ನು ರಾಜ್ಯಭಾರಕ್ಕೆ ನಿಯೋಜಿಸಿದನು.

ಪುತ್ರಸಂಕ್ರಾಮಿತಶ್ರೀಸ್ತು ವನಂ ರಾಜಾ ಸಮಾವಿಶತ್ ।
ತಮುತ್ತಂಕೋಽಥ ವಿಪ್ರರ್ಷಿಃ ಪ್ರಯಾಂತಂ ಪ್ರತ್ಯವಾರಯತ್ ।। ೧-೧೧-೨೭

ರಾಜಾ ಬೃಹದಶ್ವನು ರಾಜ್ಯಶ್ರೀಯನ್ನು ತನ್ನ ಮಗನಿಗೆ ಒಪ್ಪಿಸಿ ವನವನ್ನು ಸೇರಿದನು. ಆಗ ವಿಪ್ರರ್ಷಿ ಉತ್ತಂಕನು ಅವನ ವನಪ್ರಯಾಣವನ್ನು ತಡೆದನು.

ಉತ್ತಂಕ ಉವಾಚ
ಭವತಾ ರಕ್ಷಣಂ ಕಾರ್ಯಂ ತತ್ತಾವತ್ಕರ್ತುಮರ್ಹಸಿ ।
ನಿರುದ್ವಿಗ್ನಸ್ತಪಶ್ಚರ್ತುಂ ನ ಹಿ ಶಕ್ನೋಷಿ ಪಾರ್ಥಿವ ।। ೧-೧೧-೨೮

ಉತ್ತಂಕನು ಹೇಳಿದನು: “ಪಾರ್ಥಿವ! ನೀನು ನಮ್ಮ ರಕ್ಷಣೆಯ ಕಾರ್ಯವನ್ನು ಮಾಡಬೇಕು. ಅದನ್ನು ಮಾಡದೇ ನೀನು ನಿರುದ್ವಿಗ್ನನಾಗಿ ತಪಸ್ಸನ್ನಾಚರಿಸಲು ಶಕ್ಯನಾಗುವುದಿಲ್ಲ.

ತ್ವಯಾ ಹಿ ಪೃಥಿವೀ ರಾಜನ್ರಕ್ಷ್ಯಮಣಾ ಮಹಾತ್ಮನಾ ।
ಭವಿಷ್ಯತಿ ನಿರುದ್ವಿಗ್ನಾ ನಾರಣ್ಯಂ ಗಂತುಮರ್ಹಸಿ ।। ೧-೧೧-೨೯

ರಾಜನ್! ನಿನ್ನಂತಹ ಮಹಾತ್ಮರು ಪೃಥ್ವಿಯನ್ನು ರಕ್ಷಿಸಿದರೇ ಇಲ್ಲಿ ಶಾಂತಿಯುಂಟಾಗುತ್ತದೆ. ಆದುದರಿಂದ ಈಗ ನೀನು ಅರಣ್ಯಕ್ಕೆ ಹೋಗಬಾರದು.

ಪಾಲನೇ ಹಿ ಮಹಾಂಧರ್ಮಃ ಪ್ರಜಾನಾಮಿಹ ದೃಶ್ಯತೇ ।
ನ ತಥಾ ದೃಶ್ಯತೇಽರಣ್ಯೇ ಮಾ ತೇಽಭೂದ್ಬುದ್ಧಿರೀದೃಶೀ।। ೧-೧೧-೩೦

ಇಲ್ಲಿ ಇದ್ದುಕೊಂಡು ಪ್ರಜೆಗಳನ್ನು ಪಾಲಿಸುವುದೇ ಮಹಾ ಧರ್ಮವೆಂದು ಕಾಣುತ್ತಿದೆ. ಅರಣ್ಯದಲ್ಲಿದ್ದರೆ ಹಾಗಾಗುವುದಿಲ್ಲ ಎಂದು ಕಾಣುತ್ತಿದೆ. ಆದುದರಿಂದ ಈ ರೀತಿಯ ನಿರ್ಧಾರವನ್ನು ಕೈಗೊಳ್ಳಬೇಡ!

ಈದೃಶೋ ನ ಹಿ ರಾಜೇಂದ್ರ ಧರ್ಮಃ ಕ್ವಚನ ದೃಶ್ಯತೇ ।
ಪ್ರಜಾನಾಂ ಪಾಲನೇ ಯೋ ವೈ ಪುರಾ ರಾಜರ್ಷಿಭಿಃ ಕೃತಃ ।
ರಕ್ಷಿತವ್ಯಾಃ ಪ್ರಜಾ ರಾಜ್ಞಾ ತಾಸ್ತ್ವಂ ರಕ್ಷಿತುಮರ್ಹಸಿ ।। ೧-೧೧-೩೧

ರಾಜೇಂದ್ರ! ಹಿಂದೆ ರಾಜರ್ಷಿಗಳು ಮಾಡಿದ ಪ್ರಜಾಪಾಲನೆ ಮತ್ತು ಧರ್ಮಪಾಲನೆಯು ಬೇರೆ ಎಲ್ಲಿಯೂ ಕಾಣಸಿಗುವುದಿಲ್ಲ. ರಾಜರು ಪ್ರಜೆಗಳನ್ನು ರಕ್ಷಿಸಬೇಕು. ನೀನೂ ಕೂಡ ಅವರನ್ನು ರಕ್ಷಿಸಬೇಕು.

ಮಮಾಶ್ರಮಸಮೀಪೇ ಹಿ ಸಮೇಷು ಮರುಧನ್ವಸು ।
ಸಮುದ್ರೋ ವಾಲುಕಾಪೂರ್ಣ ಉಜ್ಜಾನಕ ಇತಿ ಶ್ರುತಃ ।
ದೇವತಾನಾಮವಧ್ಯಶ್ಚ ಮಹಾಕಾಯೋ ಮಹಾಬಲಃ ।। ೧-೧೧-೩೨
ಅಂತರ್ಭೂಮಿಗತಸ್ತತ್ರ ವಾಲುಕಾಂತರ್ಹಿತೋ ಮಹಾನ್ ।
ರಾಕ್ಷಸಸ್ಯ ಮಧೋಃ ಪುತ್ರೋ ಧುಂಧುನಾಮಾ ಮಹಾಸುರಃ ।
ಶೇತೇ ಲೋಕವಿನಾಶಾಯ ತಪ ಆಸ್ಥಾಯ ದಾರುಣಮ್ ।। ೧-೧೧-೩೩

ನನ್ನ ಆಶ್ರಮದ ಸಮೀಪದ ಮರುಪ್ರದೇಶದ ಸಮತಟ್ಟಿನಲ್ಲಿ ಉಜ್ಜಾನಕ ಎಂದು ವಿಖ್ಯಾತವಾದ ಮರಳಿನಿಂದ ತುಂಬಿದ ಸಮುದ್ರವಿದೆ. ಅಲ್ಲಿ ದೇವತೆಗಳಿಗೂ ಅವಧ್ಯನಾದ ಮಹಾಕಾಯ ಮಹಾಬಲ ರಾಕ್ಷಸನಿದ್ದಾನೆ. ಅವನು ಮಹಾನ್ ರಾಕ್ಷಸ ಮಧುವಿನ ಪುತ್ರ. ಆ ಮಹಾಸುರನ ಹೆಸರು ಧುಂಧು. ಅವನು ಮರಳಿನಲ್ಲಿ ಮುಚ್ಚಿಕೊಂಡು ಭೂಮಿಯ ಒಳಗೆ ಮಲಗಿ ಲೋಕವಿನಾಶಕ್ಕಾಗಿ ದಾರುಣ ತಪಸ್ಸನ್ನು ಆಚರಿಸುತ್ತಿದ್ದಾನೆ.

ಸಂವತ್ಸರಸ್ಯ ಪರ್ಯಂತೇ ಸ ನಿಶ್ವಾಸಂ ಪ್ರಮುಂಚತಿ ।
ಯದಾ ತದಾ ಭೂಶ್ಚಲತಿ ಸಶೈಲವನಕಾನನಾ ।। ೧-೧೧-೩೪

ವರ್ಷದ ನಂತರ ಅವನು ನಿಶ್ವಾಸವನ್ನು ಬಿಟ್ಟಾಗ ಶೈಲ-ವನ-ಕಾನನಗಳೊಂದಿಗೆ ಭೂಮಿಯು ನಡುಗುತ್ತದೆ.

ತಸ್ಯ ನಿಃಶ್ವಾಸವಾತೇನ ರಜ ಉದ್ಧೂಯತೇ ಮಹತ್ ।
ಆದಿತ್ಯಪಥಮಾವೃತ್ಯ ಸಪ್ತಾಹಂ ಭೂಮಿಕಂಪನಮ್ ।। ೧-೧೧-೩೫

ಅವನ ನಿಃಶ್ವಾಸದಿಂದ ಮಹಾ ಧೂಳು ಮೇಲೆದ್ದು ಸೂರ್ಯನ ಪಥವನ್ನೂ ಮುತ್ತುತ್ತದೆ ಮತ್ತು ಒಂದು ವಾರದ ವರೆಗೆ ಭೂಕಂಪನವಾಗುತ್ತಿರುತ್ತದೆ.

ಸವಿಸ್ಫುಲಿಂಗಂ ಸಾಂಗಾರಂ ಸಧೂಮಮತಿದಾರುಣಮ್ ।
ತೇನ ತಾತ ನ ಶಕ್ನೋಮಿ ತಸ್ಮಿನ್ಸ್ಥಾತುಂ ಸ್ವಕಾಶ್ರಮೇ ।। ೧-೧೧-೩೬

ಆ ಸಮಯದಲ್ಲಿ ಭೂಮಿಯೊಳಗಿನಿಂದ ಕಿಡಿಗಳು ಮತ್ತು ಹೊಗೆಯೊಂದಿಗೆ ಕೆಂಡಗಳು ಹೊರಹೊಮ್ಮುತ್ತಿರುತ್ತವೆ. ತಾತ! ಇದರಿಂದಾಗಿ ನಾನು ನನ್ನ ಆಶ್ರಮದಲ್ಲಿ ಇರಲು ಶಕ್ಯನಾಗಿಲ್ಲ.

ತಂ ಮಾರಯ ಮಹಾಕಾಯಂ ಲೋಕಾನಾಂ ಹಿತಕಾಮ್ಯಯಾ ।
ಲೋಕಾಃ ಸ್ವಸ್ಥಾ ಭವಂತ್ಯದ್ಯ ತಸ್ಮಿನ್ವಿನಿಹತೇಽಸುರೇ ।। ೧-೧೧-೩೭

ಲೋಕಗಳ ಹಿತವನ್ನು ಬಯಸಿ ನೀನು ಆ ಮಹಾಕಾಯನನ್ನು ಸಂಹರಿಸು. ಆ ಅಸುರನ ವಧೆಯಿಂದ ಇಂದು ಲೋಕಗಳು ಸುಖಿಯಾಗಲಿ.

ತ್ವಂ ಹಿ ತಸ್ಯ ವಧಾಯೈಕಃ ಸಮರ್ಥಃ ಪೃಥಿವೀಪತೇ ।
ವಿಷ್ಣುನಾ ಚ ವರೋ ದತ್ತೋ ಮಹ್ಯಂ ಪೂರ್ವಯುಗೇಽನಘ ।। ೧-೧೧-೩೮

ಪೃಥಿವೀಪತೇ! ಅನಘ! ನೀನೊಬ್ಬನೇ ಅವನನ್ನು ವಧಿಸಲು ಸಮರ್ಥನು. ಏಕೆಂದರೆ ಪೂರ್ವಯುಗದಲ್ಲಿ ವಿಷ್ಣುವು ನನಗೆ ಒಂದು ವರವನ್ನಿತ್ತಿದ್ದನು.

ಯಸ್ತ್ವಂ ಮಹಾಸುರಂ ರೌದ್ರಂ ಹನಿಷ್ಯಸಿ ಮಹಾಬಲಮ್ ।
ತಸ್ಯ ತ್ವಂ ವರದಾನೇನ ತೇಜ ಆಪ್ಯಾಯಯಿಷ್ಯಸಿ ।। ೧-೧೧-೩೯

ಈ ರೌದ್ರ ಮಹಾಬಲ ಮಹಾಸುರನನ್ನು ಸಂಹರಿಸುವಾಗ ವಿಷ್ಣುವಿನ ವರದಾನದಿಂದ ನೀನು ಅವನ ತೇಜಸ್ಸನ್ನು ಪಡೆದುಕೊಳ್ಳುತ್ತೀಯೆ.

ನ ಹಿ ಧುಂಧುರ್ಮಹಾತೇಜಾಸ್ತೇಜಸಾಲ್ಪೇನ ಶಕ್ಯತೇ ।
ನಿರ್ದಗ್ಧುಂ ಪೃಥಿವೀಪಾಲ ಸ ಹಿ ವರ್ಷಶತೈರಪಿ ।
ವೀರ್ಯಂ ಹಿ ಸುಮಹತ್ತಸ್ಯ ದೇವೈರಪಿ ದುರಾಸದಮ್ ।। ೧-೧೧-೪೦

ಪೃಥಿವೀಪಾಲ! ಮಹಾತೇಜಸ್ವೀ ಧುಂಧುವನ್ನು ಅಲ್ಪತೇಜಸ್ಸಿನಿಂದ ನೂರು ವರ್ಷಗಳು ಹೋರಾಡಿದರೂ ಸುಡಲು ಸಾಧ್ಯವಿಲ್ಲ. ಅವನ ಆ ಮಹಾವೀರ್ಯವು ದೇವತೆಗಳಿಗೂ ದುರಾಸದವಾದುದು.”

ಸ ಏವಮುಕ್ತೋ ರಾಜರ್ಷಿರುತ್ತಂಕೇನ ಮಹಾತ್ಮನಾ ।
ಕುವಲಾಶ್ವಂ ಸುತಂ ಪ್ರಾದಾತ್ತಸ್ಮೈ ಧುಂಧುನಿವಾರಣೇ ।। ೧-೧೧-೪೧

ಮಹಾತ್ಮ ಉತ್ತಂಕನು ಹೀಗೆ ಹೇಳಲು ಆ ರಾಜರ್ಷಿಯು ಧುಂಧುವನ್ನು ನಿವಾರಿಸಲು ಅವನಿಗೆ ತನ್ನ ಮಗ ಕುವಲಾಶ್ವನನ್ನು ನೀಡಿದನು.

ಬೃಹದಶ್ವ ಉವಾಚ
ಭಗವನ್ನ್ಯಸ್ತಶಸ್ತ್ರೋಽಹಮಯಂ ತು ತನಯೋ ಮಮ ।
ಭವಿಷ್ಯತಿ ದ್ವಿಜಶ್ರೇಷ್ಠ ಧುಂಧುಮಾರೋ ನ ಸಂಶಯಃ ।। ೧-೧೧-೪೨

ಬೃಹದಶ್ವನು ಹೇಳಿದನು: “ಭಗವನ್! ನಾನು ಈಗಾಗಲೇ ಶಸ್ತ್ರತ್ಯಾಗ ಮಾಡಿಬಿಟ್ಟಿದ್ದೇನೆ. ದ್ವಿಜಶ್ರೇಷ್ಠ! ಆದರೆ ನನ್ನ ಈ ಮಗನು ಧುಂಧುಮಾರನಾಗುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.”

ಸ ತಂ ವ್ಯಾದಿಶ್ಯ ತನಯಂ ರಾಜರ್ಷಿರ್ಧುಂಧುಮಾರಣೇ ।
ಜಗಾಮ ಪರ್ವತಾಯೈವ ತಪಸೇ ಸಂಶಿತವ್ರತಃ ।। ೧-೧೧-೪೩

ಹೀಗೆ ಮಗನಿಗೆ ಧುಂಧುವನ್ನು ವಧಿಸಲು ಆದೇಶವನ್ನಿತ್ತು ಆ ಸಂಶಿತವ್ರತ ರಾಜರ್ಷಿಯು ತಪಸ್ಸಿಗಾಗಿ ಪರ್ವತಕ್ಕೆ ಹೊರಟುಹೋದನು.

ವೈಶಂಪಾಯನ ಉವಾಚ
ಕುವಲಾಶ್ವಸ್ತು ಪುತ್ರಾಣಾಂ ಶತೇನ ಸಹ ಪಾರ್ಥಿವಃ ।
ಪ್ರಾಯಾದುತ್ತಂಕಸಹಿತೋ ಧುಂಧೋಸ್ತಸ್ಯ ವಿನಿಗ್ರಹೇ ।। ೧-೧೧- ೪೪

ಪಾರ್ಥಿವ ಕುವಲಾಶ್ವನಾದರೋ ತನ್ನ ನೂರು ಪುತ್ರರೊಂದಿಗೆ ಧುಂಧುವನ್ನು ನಿಗ್ರಹಿಸಲು ಉತ್ತಂಕನೊಡಗೂಡಿ ಹೊರಟನು.

ತಮಾವಿಶತ್ತದಾ ವಿಷ್ಣುರ್ಭಗವಾಂಸ್ತೇಜಸಾ ಪ್ರಭುಃ ।
ಉತ್ತಂಕಸ್ಯ ನಿಯೋಗಾದ್ವೈ ಲೋಕಾಸ್ಯ ಹಿತಕಾಮ್ಯಯಾ ।। ೧-೧೧-೪೫

ಲೋಕಗಳ ಹಿತಕಾಮನೆಯಿಂದ ಮತ್ತು ಉತ್ತಂಕನ ನಿಯೋಗದಿಂದ ಪ್ರಭು ಭಗವಾನ್ ವಿಷ್ಣುವು ಕುವಲಾಶ್ವನನ್ನು ಆವೇಶಿಸಿದನು.

ತಸ್ಮಿನ್ಪ್ರಯಾತೇ ದುರ್ಧರ್ಷೇ ದಿವಿ ಶಬ್ದೋ ಮಹಾನಭೂತ್ ।
ಏಷ ಶ್ರೀಮಾನವಧ್ಯೋಽದ್ಯ ಧುಂಧುಮಾರೋ ಭವಿಷ್ಯತಿ ।। ೧-೧೧-೪೬

ಆ ದುರ್ಧರ್ಷನು ಪ್ರಯಾಣಿಸುತ್ತಿದ್ದಾಗ ದಿವಿಯಲ್ಲಿ ಮಹಾ ಶಬ್ಧವುಂಟಾಯಿತು: “ಈ ಶ್ರೀಮನ್ ರಾಜನು ಅವಧ್ಯನು. ಇಂದು ಅವನು ಧುಂಧುಮಾರನಾಗುತ್ತಾನೆ!”

ದಿವ್ಯೈರ್ಗಂಧೈಶ್ಚ ತಂ ದೇವಾಃ ಸಮಂತಾತ್ಸಮವಾಕಿರನ್ ।
ದೇವದುಂದುಭಯಶ್ಚಾಪಿ ಪ್ರಣೇದುರ್ಭರತರ್ಷಭ ।। ೧-೧೧-೪೭

ಭರತರ್ಷಭ! ದೇವತೆಗಳು ತಮ್ಮ ದೇವದುಂದುಭಿಗಳನ್ನು ಬಾರಿಸಿ, ಎಲ್ಲಕಡೆಗಳಿಂದಲೂ ದಿವ್ಯಗಂಧ ಪುಷ್ಪಗಳನ್ನು ಸುರಿಸಿದರು.

ಸ ಗತ್ವಾ ಜಯತಾಂ ಶ್ರೇಷ್ಠಸ್ತನಯೈಃ ಸಹ ವೀರ್ಯವಾನ್ ।
ಸಮುದ್ರಂ ಖಾನಯಾಮಾಸ ವಾಲುಕಾರ್ಣವಮವ್ಯಯಮ್ । ೧-೧೧-೪೮

ಆ ವಿಜಯಿಗಳಲ್ಲಿ ಶ್ರೇಷ್ಠ ವೀರ್ಯವಾನ್ ರಾಜನು ತನ್ನ ತನಯರೊಂದಿಗೆ ಮರಳಿನಿಂದ ತುಂಬಿದ್ದ ಅವ್ಯಯ ಸಮುದ್ರವನ್ನು ಅಗೆಯಿಸತೊಡಗಿದನು.

ನಾರಾಯಣೇನ ಕೌರವ್ಯ ತೇಜಸಾಽಽಪ್ಯಾಯಿತಃ ಸ ವೈ ।
ಬಭೂವ ಸ ಮಹಾತೇಜಾಃ ಭೂಯೋ ಬಲಸಮನ್ವಿತಃ ।। ೧-೧೧-೪೯

ಕೌರವ್ಯ! ನಾರಾಯಣನ ತೇಜಸ್ಸನ್ನು ಪಡೆದುಕೊಂಡಿದ್ದ ಅವನು ಮಹಾತೇಜಸ್ವಿಯೂ ಇನ್ನೂ ಹೆಚ್ಚಿನ ಬಲವಂತನೂ ಆದನು.

ತಸ್ಯ ಪುತ್ರೈಃ ಖನದ್ಭಿಸ್ತು ವಾಲುಕಾಂತರ್ಹಿತಸ್ತದಾ ।
ಧುಂಧುರಾಸಾದಿತೋ ರಾಜಂದಿಶಮಾವೃತ್ಯ ಪಶ್ಚಿಮಾಮ್ ।। ೧-೧೧-೫೦

ರಾಜನ್! ಅವನ ಪುತ್ರರು ಮರಳಿನ ರಾಶಿಯನ್ನು ಅಗೆದು ಅದರೊಳಗೆ ಪಶ್ಚಿಮ ದಿಕ್ಕನ್ನೇ ಆವರಿಸಿದ್ದ ಧುಂಧುವನ್ನು ಕಂಡರು.

ಮುಖಜೇನಾಗ್ನಿನಾ ಕ್ರೋಧಾಲ್ಲೋಕಾನುದ್ವರ್ತಯನ್ನಿವ ।
ವಾರಿ ಸುಸ್ರಾವ ವೇಗೇನ ಮಹೋದಧಿರಿವೋದಯೇ ।। ೧-೧೧-೫೧
ಸೋಮಸ್ಯ ಭರತಶ್ರೇಷ್ಠ ಧಾರೋರ್ಮಿಕಲಿಲಂ ಮಹತ್ ।
ತಸ್ಯ ಪುತ್ರಶತಂ ದಗ್ಧಂ ತ್ರಿಭಿರೂನಂ ತು ರಕ್ಷಸಾ ।। ೧-೧೧-೫೨

ಭರತಶ್ರೇಷ್ಠ! ಕ್ರೋಧಿತನಾದ ಅವನ ಮುಖದಿಂದ ಹುಟ್ಟಿದ ಅಗ್ನಿಯು ಲೋಕವನ್ನೇ ದಹಿಸಿಬಿಡುವಂತಿತ್ತು. ಚಂದ್ರನ ಉದಯಕಾಲದಲ್ಲಿ ಸಮುದ್ರವು ಉಕ್ಕಿಬರುವಂತೆ ಅಲ್ಲಿ ವೇಗದಿಂದ ಕೆಸರಿನೊಂದಿಗೆ ನೀರು ಚಿಮ್ಮಿ ಬಂದಿತು. ಆ ರಕ್ಷಸನು ರಾಜನ ಮೂರು ಮಕ್ಕಳನ್ನು ಬಿಟ್ಟು ನೂರು ಮಕ್ಕಳನ್ನೂ ಸುಟ್ಟುಹಾಕಿದನು.

ತತಃ ಸ ರಾಜಾ ಕೌರವ್ಯ ರಾಕ್ಷಸಂ ತಂ ಮಹಾಬಲಮ್ ।
ಆಸಸಾದ ಮಹಾತೇಜಾ ಧುಂಧುಂ ಧುಂಧುನಿಬರ್ಹಣಃ ।। ೧-೧೧-೫೩

ಕೌರವ್ಯ! ಆಗ ಮಹಾತೇಜಸ್ವೀ ಧುಂಧುನಿಬರ್ಹಣ ರಾಜನು ಆ ಮಹಾಬಲ ರಾಕ್ಷಸ ಧುಂಧುವಿನ ಸಮೀಪ ಹೋದನು.

ತಸ್ಯ ವಾರಿಮಯಂ ವೇಗಮಾಪೀಯ ಸ ನರಾಧಿಪಃ ।
ಯೋಗೀ ಯೋಗೇನ ವಹ್ನಿಂ ಚ ಶಮಯಾಮಾಸ ವಾರಿಣಾ ।। ೧-೧೧-೫೪

ಆ ನರಾಧಿಪ ಯೋಗಿಯು ಯೋಗದಿಂದ ವೇಗವಾಗಿ ಚಿಮ್ಮುತ್ತಿದ್ದ ನೀರಿನ ರಾಶಿಯನ್ನು ಕುಡಿದು ಆ ನೀರಿನಿಂದ ಬೆಂಕಿಯನ್ನು ಆರಿಸಿದನು.

ನಿಹತ್ಯ ತಂ ಮಹಾಕಾಯಂ ಬಲೇನೋದಕರಾಕ್ಷಸಮ್ ।
ಉತ್ತಂಕಂ ದರ್ಶಯಾಮಾಸ ಕೃತಕರ್ಮಾ ನರಾಧಿಪಃ ।। ೧-೧೧-೫೫

ಆ ಮಹಾಕಾಯ ಉದಕರಾಕ್ಷಸನನ್ನು ಬಲದಿಂದ ಸಂಹರಿಸಿ ಕೃತಕರ್ಮಿಯಾದ ನರಾಧಿಪನು ಅದನ್ನು ಉತ್ತಂಕನಿಗೆ ತೋರಿಸಿದನು.

ಉತ್ತಂಕಸ್ತು ವರಂ ಪ್ರಾದಾತ್ತಸ್ಮೈ ರಾಜ್ಞೇ ಮಹಾತ್ಮನೇ ।
ದದೌ ತಸ್ಯಾಕ್ಷಯಂ ವಿತ್ತಂ ಶತ್ರುಭಿಶ್ಚಾಪರಾಜಯಮ್ ।। ೧-೧೧-೫೬
ಧರ್ಮೇ ರತಿಂ ಚ ಸತತಂ ಸ್ವರ್ಗವಾಸಂ ತಥಾಕ್ಷಯಮ್ ।
ಪುತ್ರಾಣಾಂ ಚಾಕ್ಷಯಾನ್ಲೋಕಾನ್ಸ್ವರ್ಗೇ ಯೇ ರಕ್ಷಸಾ ಹತಾಃ ।। ೧-೧೧-೫೭

ಉತ್ತಂಕನಾದರೋ ಆ ಮಹಾತ್ಮ ರಾಜನಿಗೆ ಅಕ್ಷಯ ವಿತ್ತವನ್ನಿತ್ತು ಶತ್ರುಗಳೊಂದಿಗೆ ಪರಾಜಯಗೊಳ್ಳದೇ ಇರುವ ವರವನ್ನಿತ್ತನು. ಜೊತೆಗೆ ಧರ್ಮದಲ್ಲಿ ಸತತ ಶ್ರದ್ಧೆ, ಅಕ್ಷಯ ಸ್ವರ್ಗವಾಸ, ಮತ್ತು ರಾಕ್ಷಸನಿಂದ ಹತರಾದ ಪುತ್ರರಿಗೂ ಅಕ್ಷಯ ಲೋಕ-ಸ್ವರ್ಗವಾಸವನ್ನು ಕರುಣಿಸಿದನು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಖಿಲಭಾಗೇ ಹರಿವಂಶೇ ಹರಿವಂಶಪರ್ವಣಿ ಧುಂಧುವಧೇ ಏಕಾದಶೋಽಧ್ಯಾಯಃ ।।