010: ಐಲೋತ್ಪತ್ತಿವರ್ಣನಂ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಖಿಲಭಾಗೇ ಹರಿವಂಶಃ

ಹರಿವಂಶ ಪರ್ವ

ಅಧ್ಯಾಯ 10

ಸಾರ

ವೈಶಂಪಾಯನ ಉವಾಚ
ಮನೋರ್ವೈವಸ್ವತಸ್ಯಾಸನ್ ಪುತ್ರಾ ವೈ ನವ ತತ್ಸಮಾಃ ।
ಇಕ್ಷ್ವಾಕುಶ್ಚೈವ ನಾಭಾಗೋ ಧೃಷ್ಣುಃ ಶರ್ಯಾತಿರೇವ ಚ ।। ೧-೧೦-೧
ನರಿಷ್ಯಂಶ್ಚ ತಥಾ ಪ್ರಾಂಶುರ್ನಾಭಾಗಾರಿಷ್ಟಸಪ್ತಮಾಃ ।
ಕರೂಷಶ್ಚ ಪೃಷಧ್ರಶ್ಚ ನವೈತೇ ಭರತರ್ಷಭ ।। ೧-೧೦-೨

ವೈಶಂಪಾಯನನು ಹೇಳಿದನು: “ವೈವಸ್ವತ ಮನುವಿಗೆ ಅವನ ಸಮರಾದ ಒಂಭತ್ತು ಪುತ್ರರಾದರು. ಭರತರ್ಷಭ! ಇಕ್ಷ್ವಾಕು, ನಾಭಾಗ, ಧೃಷ್ಣು, ಶರ್ಯಾತಿ, ನರಿಷ್ಯ, ಪ್ರಾಂಶು, ಏಳನೇ ನಾಭಾಗಾರಿಷ್ಟ, ಕರೂಷ ಮತ್ತು ಪೃಷದ – ಇವರೇ ಆ ಒಂಭತ್ತು ಮಂದಿ.

ಅಕರೋತ್ಪುತ್ರಕಾಮಸ್ತು ಮನುರಿಷ್ಟಿಂ ಪ್ರಜಾಪತಿಃ ।
ಮಿತ್ರಾವರುಣಯೋಸ್ತಾತ ಪೂರ್ವಮೇವ ವಿಶಾಂಪತೇ ।। ೧-೧೦-೩
ಅನುತ್ಪನ್ನೇಷು ನವಸು ಪುತ್ರೇಷ್ವೇತೇಷು ಭಾರತ ।

ವಿಶಾಂಪತೇ! ತಾತ! ಭಾರತ! ಈ ಒಂಭತ್ತು ಪುತ್ರರು ಹುಟ್ಟುವುದಕ್ಕೆ ಮೊದಲು ಪ್ರಜಾಪತಿ ಮನುವು ಪುತ್ರರನ್ನು ಬಯಸಿ ಮಿತ್ರಾವರುಣರ ಇಷ್ಟಿಯನ್ನು ನಡೆಸಿದ್ದನು.

ತಸ್ಯಾಂ ತು ವರ್ತಮಾನಾಯಾಮಿಷ್ಟ್ಯಾಂ ಭರತಸತ್ತಮ ।। ೧-೧೦-೪
ಮಿತ್ರಾವರುಣಯೋರಂಶೇ ಮುನಿರಾಹುತಿಮಾಜುಹೋತ್ ।

ಭರತಸತ್ತಮ! ಆ ಇಷ್ಟಿಯು ನಡೆಯುತ್ತಿರುವಾಗ ಮುನಿಗಳು ಮಿತ್ರಾವರುಣರಿಗೆ ಆಹುತಿಯನ್ನು ಹೋಮಮಾಡಿದರು.

ಆಹುತ್ಯಾಂ ಹೂಯಮಾನಾಯಾಂ ದೇವಗಂಧರ್ವಮಾನುಶಾಃ ।। ೧-೧೦- ೫
ತುಶ್ಟಿಂ ತು ಪರಮಾಂ ಜಗ್ಮುರ್ಮುನಯಶ್ಚ ತಪೋಧನಾಃ ।
ಅಹೋಽಸ್ಯ ತಪಸೋ ವೀರ್ಯಮಹೋಽಸ್ಯ ಶ್ರುತಮದ್ಭುತಮ್ ।। ೧-೧೦- ೬

ಆಹುತಿಯನ್ನು ಹೋಮಮಾಡುತ್ತಿದ್ದಾಗ ದೇವ-ಗಂಧರ್ವ-ಮನುಷ್ಯರು ಪರಮ ತುಷ್ಟರಾದರು. “ಅಹೋ! ಇವನ ತಪಸ್ಸು ವೀರ್ಯಗಳು ಅತಿ ಮಹತ್ತರ!” ಎಂಬ ಅದ್ಭುತ ಘೋಷಗಳನ್ನು ತಪೋಧನ ಮುನಿಗಳು ಕೇಳಿದರು.

ತತ್ರ ದಿವ್ಯಾಂಬರಧರಾ ದಿವ್ಯಾಭರಣಭೂಷಿತಾ ।
ದಿವ್ಯಸಂಹನನಾ ಚೈವ ಇಲಾ ಜಜ್ಞ ಇತಿ ಶ್ರುತಿಃ ।। ೧-೧೦-೭

ಅಲ್ಲಿ ದಿವ್ಯಾಂಬರಧರೆ, ದಿವ್ಯಾಭರಣಭೂಷಿತೆ, ದಿವ್ಯಶರೀರೇ ಇಲೆಯು ಹುಟ್ಟಿದಳೆಂದು ಕೇಳಿದ್ದೇವೆ.

ತಾಮಿಲೇತ್ಯೇವ ಹೋವಾಚ ಮನುರ್ದಂಡಧರಸ್ತದಾ ।
ಅನುಗಚ್ಛಸ್ವ ಮಾಂ ಭದ್ರೇ ತಮಿಲಾ ಪ್ರತ್ಯುವಾಚ ಹ ।
ಧರ್ಮಯುಕ್ತಮಿದಂ ವಾಕ್ಯಂ ಪುತ್ರಕಾಮಂ ಪ್ರಜಾಪತಿಮ್ ।। ೧-೧೦-೮

ಆಗ ದಂಡಧರ ಮನುವು ಇಲೆಗೆ “ಭದ್ರೇ! ನನ್ನನ್ನೇ ಅನುಸರಿಸಿ ಬಾ!” ಎಂದು ಹೇಳಿದನು. ಪುತ್ರನನ್ನು ಬಯಸಿದ್ದ ಆ ಪ್ರಜಾಪತಿಗೆ ಇಲೆಯು ಧರ್ಮಯುಕ್ತವಾದ ಈ ಮಾತನ್ನಾಡಿದಳು.

ಇಲೋವಾಚ
ಮಿತ್ರಾವರುಣಯೋರಂಶೇ ಜಾತಾಸ್ಮಿ ವದತಾಂ ವರ ।
ತಯೋಃ ಸಕಾಶಂ ಯಾಸ್ಯಾಮಿ ನ ಮಾಂ ಧರ್ಮೋ ಹತೋಽವಧೀತ್ ।। ೧-೧೦-೯

ಇಲೆಯು ಹೇಳಿದಳು: “ಮಾತನಾಡುವವರಲ್ಲಿ ಶ್ರೇಷ್ಠ! ನಾನು ಧರ್ಮವನ್ನು ನಾಶಗೊಳಿಸುವುದಿಲ್ಲ. ಅದೇ ನನ್ನನ್ನು ಕೊಂದೀತು! ನಾನು ಮಿತ್ರಾವರುಣರ ಅಂಶದಿಂದ ಹುಟ್ಟಿದ್ದೇನೆ. ಅವರ ಬಳಿಯೇ ಹೋಗುತ್ತೇನೆ.”

ಸೈವಮುಕ್ತ್ವಾ ಮನುಂ ದೇವಂ ಮಿತ್ರಾವರುಣಯೋರಿಲಾ ।
ಗತ್ವಾಂತಿಕಂ ವರಾರೋಹಾ ಪ್ರಾಂಜಲಿರ್ವಾಕ್ಯಮಬ್ರವೀತ್ ।। ೧-೧೦-೧೦

ದೇವ ಮನುವಿಗೆ ಹೀಗೆ ಹೇಳಿ ವರಾರೋಹೆ ಇಲೆಯು ಮಿತ್ರಾವರುಣರ ಬಳಿಸಾರಿ ಕೈಮುಗಿದು ಈ ಮಾತನ್ನಾಡಿದಳು.

ಇಲೋವಾಚ
ಅಂಶೇಽಸ್ಮಿ ಯುವಯೋರ್ಜಾತಾ ದೇವೌ ಕಿಂ ಕರವಾಣಿ ವಾಮ್ ।
ಮನುನಾ ಚಾಹಮುಕ್ತಾ ವೈ ಅನುಗಚ್ಛಸ್ವ ಮಾಮಿತಿ ।। ೧-೧೦-೧೧
ತಾಂ ತಥಾವಾದಿನೀಂ ಸಾಧ್ವೀಮಿಲಾಂ ಧರ್ಮಪರಾಯಣಾಮ್ ।
ಮಿತ್ರಶ್ಚ ವರುಣಶ್ಚೋಭಾವೂಚತುರ್ಯನ್ನಿಬೋಧ ತತ್ ।। ೧-೧೦-೧೨

ಇಲೆಯು ಹೇಳಿದಳು: “ದೇವತೆಗಳೇ! ನಾನು ನಿಮ್ಮಅಂಶದಿಂದ ಹುಟ್ಟಿದವಳು. ನಾನು ಏನು ಮಾಡಬೇಕು ಹೇಳಿ!” ಹಾಗೆ ಹೇಳಿದ ಆ ಧರ್ಮಪರಾಯಣೇ ಸಾಧ್ವೀ ಇಲೆಗೆ ಮಿತ್ರ-ವರುಣರಿಬ್ಬರೂ ಏನು ಹೇಳಿದರೆನ್ನುವುದನ್ನು ಕೇಳು.

ಮಿತ್ರಾವರುಣಾವೂಚತುಃ
ಅನೇನ ತವ ಧರ್ಮೇಣ ಪ್ರಶ್ರಯೇಣ ದಮೇನ ಚ ।
ಸತ್ಯೇನ ಚೈವ ಸುಶ್ರೋಣಿ ಪ್ರೀತೌ ಸ್ವೋ ವರವರ್ಣಿನಿ ।। ೧-೧೦-೧೩

ಮಿತ್ರಾವರುಣರು ಹೇಳಿದರು: “ಸುಶ್ರೋಣೀ! ವರವರ್ಣಿನೀ! ನಿನ್ನ ಈ ಧರ್ಮ, ವಿನಯ, ಇಂದ್ರಿಯ ಸಂಯಮ ಮತ್ತು ಸತ್ಯದಿಂದ ನಾವು ಪ್ರಿತರಾಗಿದ್ದೇವೆ.

ಆವಯೋಸ್ತ್ವಂ ಮಹಾಭಾಗೇ ಖ್ಯಾತಿಂ ಕನ್ಯೇತಿ ಯಾಸ್ಯಸಿ ।
ಮನೋರ್ವಂಶಧರಃ ಪುತ್ರಸ್ತ್ವಮೇವ ಚ ಭವಿಷ್ಯಸಿ । ೧-೧೦-೧೪

ಮಹಾಭಾಗೇ! ನೀನು ನಮ್ಮ ಕನ್ಯೆಯೆಂದು ಖ್ಯಾತಿಯನ್ನು ಹೊಂದುತ್ತೀಯೆ. ಅಲ್ಲದೇ ಭವಿಷ್ಯದಲ್ಲಿ ಮನುವಿನ ವಂಶೋದ್ಧಾರಕ ಪುತ್ರನೂ ಆಗುತ್ತೀಯೆ.

ಸುದ್ಯುಮ್ನ ಇತಿ ವಿಖ್ಯಾತಸ್ತ್ರಿಷು ಲೋಕೇಷು ಶೋಭನೇ ।
ಜಗತ್ಪ್ರಿಯೋ ಧರ್ಮಶೀಲೋ ಮನೋರ್ವಂಶವಿವರ್ಧನಃ ।। ೧-೧೦-೧೫

ಶೋಭನೇ! ನೀನು ಜಗತ್ತಿಗೇ ಪ್ರಿಯನಾದ ಧರ್ಮಶೀಲನಾದ ಮತ್ತು ಮನುವಿನ ವಂಶವನ್ನು ವರ್ಧಿಸುವ ಸುದ್ಯುಮ್ನ ಎಂದು ಮೂರು ಲೋಕಗಳಲ್ಲಿ ವಿಖ್ಯಾತಳಾಗುವೆ!”

ನಿವೃತ್ತಾ ಸಾ ತು ತಚ್ಛ್ರುತ್ವಾ ಗಚ್ಛಂತೀ ಪಿತುರಂತಿಕಮ್ ।
ಬುಧೇನಾಂತರಮಾಸಾದ್ಯ ಮೈಥುನಾಯೋಪಮಂತ್ರಿತಾ ।। ೧-೧೦-೧೬

ಅದನ್ನು ಕೇಳಿದ ಅವಳು ತಂದೆಯ ಬಳಿಗೆ ಹಿಂದಿರುತ್ತಿದ್ದಾಗ ಮಧ್ಯಮಾರ್ಗದಲ್ಲಿಯೇ ಬುಧನು ಅವಳ ಬಳಿಸಾರಿ ಮೈಥುನಕ್ಕೆ ಆಮಂತ್ರಿಸಿದನು.

ಸೋಮಪುತ್ರಾದ್ಬುಧಾದ್ರಾಜಂಸ್ತಸ್ಯಾಂ ಜಜ್ಞೇ ಪುರೂರವಾಃ ।
ಜನಯಿತ್ವಾ ಸುತಂ ಸಾ ತಮಿಲಾ ಸುದ್ಯುಮ್ನತಾಂ ಗತಾ ।। ೧-೧೦-೧೭

ರಾಜನ್! ಸೋಮಪುತ್ರ ಬುಧನಿಂದ ಅವಳಲ್ಲಿ ಪುರೂರವನು ಜನಿಸಿದನು. ಮಗನನ್ನು ಹೆತ್ತು ಇಲೆಯು ನಂತರ ಸುದ್ಯುಮ್ನನಾದಳು.

ಸುದ್ಯುಮ್ನಸ್ಯ ತು ದಾಯಾದಾಸ್ತ್ರಯಃ ಪರಮಧಾರ್ಮಿಕಾಃ ।
ಉತ್ಕಲಶ್ಚ ಗಯಶ್ಚೈವ ವಿನತಾಶ್ವಶ್ಚ ಭಾರತ ।। ೧-೧೦-೧೮

ಭಾರತ! ಸುದ್ಯುಮ್ನನಿಗೆ ಮೂರು ಪರಮಧಾರ್ಮಿಕ ಪುತ್ರರಾದರು: ಉತ್ಕಲ, ಗಯ ಮತ್ತು ವಿನತಾಶ್ವ.

ಉತ್ಕಲಸ್ಯೋತ್ಕಲಾ ರಾಜನ್ವಿನತಾಶ್ವಸ್ಯ ಪಶ್ಚಿಮಾ ।
ದಿಕ್ಪೂರ್ವಾ ಭರತಶ್ರೇಷ್ಠ ಗಯಸ್ಯ ತು ಗಯಾ ಪುರೀ । ೧-೧೦-೧೯

ರಾಜನ್! ಭರತಶ್ರೇಷ್ಠ! ಉತ್ಕಲನ ರಾಜ್ಯವು ಉತ್ಕಲವಾಯಿತು. ವಿನತಾಶ್ವನು ಪಶ್ಚಿಮ ರಾಜ್ಯವನ್ನಾಳಿದನು. ಗಯನು ಪೂರ್ವದಿಕ್ಕಿನಲ್ಲಿ ಗಯಾ ಪುರಿಯಲ್ಲಿ ರಾಜ್ಯವಾಳಿದನು.

ಪ್ರವಿಷ್ಟೇ ತು ಮನೌ ತಾತ ದಿವಾಕರಮರಿಂದಮ ।
ದಶಧಾ ತದ್ದಧತ್ಕ್ಷತ್ರಮಕರೋತ್ಪೃಥಿವೀಮಿಮಾಮ್ ।। ೧-೧೦-೨೦

ತಾತ! ಅರಿಂದಮ! ಮನುವು ದಿವಾಕರನನ್ನು ಪ್ರವೇಶಿಸಿದಾಗ ಅವನ ಹತ್ತು ಪುತ್ರರು ಈ ಭೂಮಿಯನ್ನು ಹತ್ತು ಭಾಗಗಳನ್ನಾಗಿ ವಿಭಾಜಿಸಿದರು.

ಯೂಪಾಂಕಿತಾ ವಸುಮತೀ ಯಸ್ಯೇಯಂ ಸವನಾಕರಾ ।
ಇಕ್ಷ್ವಾಕುರ್ಜ್ಯೇಷ್ಠದಾಯಾದೋ ಮಧ್ಯದೇಶಮವಾಪ್ತವಾನ್ ।। ೧-೧೦-೨೧

ಜ್ಯೇಷ್ಠ ಪುತ್ರ ಇಕ್ಷ್ವಾಕುವು ಮಧ್ಯದೇಶವನ್ನು ಪಡೆದನು. ಯಜ್ಞಸ್ತಂಭಗಳಿಂದ ಅಲಂಕೃತಗೊಂಡಿರುವ ಮತ್ತು ಕೋನೆಗಳನ್ನು ಹೊಂದಿರುವ ಈ ವಸುಮತಿಯು ಅವನದ್ದೇ ಆಗಿದೆ.

ಕನ್ಯಾಭಾವಾಚ್ಚ ಸುದ್ಯುಮ್ನೋ ನೈನಂ ಗುಣಮವಾಪ್ತವಾನ್ ।
ವಸಿಷ್ಠವಚನಾಚ್ಚಾಸೀತ್ಪ್ರತಿಷ್ಠಾನೇ ಮಹಾತ್ಮನಃ ।। ೧-೧೦-೨೨

ಕನ್ಯಾಭಾವವಿದ್ದ ಸುದ್ಯುಮ್ನನಿಗೆ ರಾಜ್ಯವು ದೊರಕಲಿಲ್ಲ. ಆದರೆ ವಸಿಷ್ಠನ ವಚನದಂತೆ ಆ ಮಹಾತ್ಮನು ಪ್ರತಿಷ್ಠಾನ1ದಲ್ಲಿ ವಾಸಿಸಿದನು.

ಪ್ರತಿಷ್ಠಾ ಧರ್ಮರಾಜಸ್ಯ ಸುದ್ಯುಮ್ನಸ್ಯ ಕುರೂದ್ವಹ ।
ತತ್ಪುರೂರವಸೇ ಪ್ರಾದಾದ್ರಾಜ್ಯಂ ಪ್ರಾಪ್ಯ ಮಹಾಯಶಾಃ ।। ೧-೧೦-೨೩
ಸುದ್ಯುಮ್ನಃ ಕಾರಯಾಮಾಸ ಪ್ರತಿಷ್ಠಾನೇ ನೄಪಕ್ರಿಯಾಮ್ ।

ಕುರೂದ್ವಹ! ಧರ್ಮರಾಜ ಸುದ್ಯುಮ್ನನು ಪ್ರತಿಷ್ಠಾನದಲ್ಲಿ ರಾಜ್ಯಭಾರಮಾಡಿ ನಂತರ ಅದನ್ನು ಮಹಾಯಶಸ್ವೀ ಪುರೂರವನಿಗೆ ಕೊಟ್ಟನು.

ಉತ್ಕಲಸ್ಯ ತ್ರಯಃ ಪುತ್ರಾಸ್ತ್ರಿಷು ಲೋಕೇಷು ವಿಶ್ರುತಾಃ ।
ಧೃಷ್ಟಕಶ್ಚಾಂಬರೀಷಶ್ಚ ದಂಡಶ್ಚೇತಿ ಸುತಾಸ್ತ್ರಯಃ ।। ೧-೧೦-೨೪

ಉತ್ಕಲನಿಗೆ ಲೋಕಗಳಲ್ಲಿ ವಿಶ್ರುತರಾದ ಮೂರು ಪುತ್ರರಿದ್ದರು: ಧೃಷ್ಟಕ, ಅಂಬರೀಷ, ಮತ್ತು ದಂಡ ಇವರೇ ಆ ಮೂರು ಸುತರು.

ಯಶ್ಚಕಾರ ಮಹಾತ್ಮಾ ವೈ ದಂಡಕಾರಣ್ಯಮುತ್ತಮಮ್ ।
ವನಂ ತಲ್ಲೋಕವಿಖ್ಯಾತಂ ತಾಪಸಾನಾಮನುತ್ತಮಮ್ ।। ೧-೧೦-೨೫
ತತ್ರ ಪ್ರವಿಷ್ಟಮಾತ್ರಸ್ತು ನರಃ ಪಾಪಾತ್ಪ್ರಮುಚ್ಯತೇ ।

ಮಹಾತ್ಮಾ ದಂಡನು ತಾಪಸರಿಗೆ ಅನುತ್ತಮವಾದ ಮತ್ತು ಲೋಕವಿಖ್ಯಾತವಾದ ಉತ್ತಮ ದಂಡಕಾರಣ್ಯವನ್ನು ನಿರ್ಮಿಸಿದನು. ಅದರ ಪ್ರವೇಶಮಾತ್ರದಿಂದಲೇ ನರನು ಪಾಪಗಳಿಂದ ಮುಕ್ತನಾಗುತ್ತಾನೆ.

ಸುದ್ಯುಮ್ನಶ್ಚ ದಿವಂ ಯಾತ ಐಲಮುತ್ಪಾದ್ಯ ಭಾರತ ।। ೧-೧೦-೨೬
ಮಾನವೇಯೋ ಮಹಾರಾಜ ಸ್ತ್ರೀಪುಂಸೋರ್ಲಕ್ಷಣೈರ್ಯುತಃ ।
ಧೃತವಾನ್ಯ ಇಲೇತ್ಯೇವ ಸುದ್ಯುಮ್ನಶ್ಚಾತಿವಿಶ್ರುತಃ ।। ೧-೧೦-೨೭

ಮಹಾರಾಜ! ಭಾರತ! ಸ್ತ್ರೀ ಮತ್ತು ಪುರುಷ ಇಬ್ಬರ ಲಕ್ಷಣಗಳನ್ನೂ ಹೊಂದಿದ್ದ ಮನುವಿನ ಮಗ ಸುದ್ಯುಮ್ನನು ಐಲ ಪುರೂರವನನ್ನು ಹುಟ್ಟಿಸಿ ದಿವವನ್ನು ಸೇರಿದನು. ಇಲೆಯು ಧೃತವಾನ್ ಸುದ್ಯುಮ್ನನೆಂದೂ ವಿಶ್ರುತಳಾಗಿದ್ದಳು.

ನಾರಿಷ್ಯತಃ ಶಕಾಃ ಪುತ್ರಾ ನಾಭಾಗಸ್ಯ ತು ಭಾರತ ।
ಅಂಬರೀಷೋಽಭವತ್ಪುತ್ರಃ ಪಾರ್ಥಿವರ್ಷಭಸತ್ತಮಃ ।। ೧-೧೦-೨೮

ಭಾರತ! ಮನುವಿನ ಐದನೆಯ ಪುತ್ರ ನರಿಷ್ಯನ ಪುತ್ರನು ಶಕ. ಮನುವಿನ ಎರಡನೇ ಪುತ್ರ ನಭಾಗನ ಪುತ್ರನು ಪಾರ್ಥಿವರ್ಷಭಸತ್ತಮ ಅಂಬರೀಷ.

ಧೃಷ್ಣೋಸ್ತು ಧಾರ್ಷ್ಟಕಂ ಕ್ಷತ್ರಂ ರಣದೃಷ್ಟಂ ಬಭೂವ ಹ ।
ಕರೂಷಸ್ಯ ತು ಕಾರೂಷಾಃ ಕ್ಷತ್ರಿಯಾ ಯುದ್ಧದುರ್ಮದಾಃ ।। ೧-೧೦-೨೯

ಮನುವಿನ ಇನ್ನೊಬ್ಬ ಪುತ್ರ ಧೃಷ್ಣುವಿಗೆ ಧಾರ್ಷ್ಟಕನೆಂಬ ಕ್ಷತ್ರಿಯ ಮಗನಿದ್ದನು. ಅವನು ರಣದೃಷ್ಟನಾದನು. ಮನುವಿನ ಮಗ ಕರೂಷನ ಮಕ್ಕಳು ಯುದ್ಧದುರ್ಮದರಾದ ಕ್ಷತ್ರಿಯ ಕಾರೂಷರು.

ಸಹಸ್ರಂ ಕ್ಷತ್ರಿಯಗಣೋ ವಿಕ್ರಾಂತಃ ಸಮ್ಬಭೂವ ಹ ।
ನಾಭಾಗಾರಿಷ್ಟಪುತ್ರಾಶ್ಚ ಕ್ಷತ್ರಿಯಾ ವೈಶ್ಯತಾಂ ಗತಾಃ ।। ೧-೧೦-೩೦

ಅವರು ವಿಕ್ರಾಂತರಾದ ಸಾವಿರ ಕ್ಷತ್ರಿಯಗಣಗಳಾದರು. ನಾಭಾಗಾರಿಷ್ಟನ ಕ್ಷತ್ರಿಯ ಪುತ್ರನು ವೈಶ್ಯತ್ವವನ್ನು ಪಡೆದುಕೊಂಡನು.

ಪ್ರಾಂಶೋರೇಕೋಽಭವತ್ಪುತ್ರಃ ಶರ್ಯಾತಿರಿತಿ ವಿಶ್ರುತಃ ।
ನರಿಷ್ಯತಸ್ಯ ದಾಯಾದೋ ರಾಜಾ ದಂಡಧರೋ ದಮಃ ।

ಮನುವಿನ ಇನ್ನೊಬ್ಬ ಮಗ ಪ್ರಾಂಶುವಿಗೆ ಶರ್ಯಾತಿ2ಯೆಂದು ವಿಶ್ರುತನಾದ ಒಬ್ಬನೇ ಮಗನಿದ್ದನು. ಮನುವಿನ ಮಗ ನರಿಷ್ಯತನ ಮಗನು ರಾಜಾ ದಂಡಧಾರೀ ದಮನು.

ಶರ್ಯಾತೇರ್ಮಿಥುನಂ ಚಾಆಸೀದಾನರ್ತೋ ನಾಮ ವಿಶ್ರುತಃ ।। ೧-೧೦-೩೧
ಪುತ್ರಃ ಕನ್ಯಾ ಸುಕನ್ಯಾಖ್ಯಾ ಯಾ ಪತ್ನೀ ಚ್ಯವನಸ್ಯ ಹ ।
ಆನರ್ತಸ್ಯ ತು ದಾಯಾದೋ ರೇವೋ ನಾಮ ಮಹಾದ್ಯುತಿಃ ।। ೧-೧೦-೩೨

ಮನುವಿನ ಮಗ ಶರ್ಯಾತಿಗೆ ಅವಳಿಗಳಾದರು. ಅವರಲ್ಲಿ ಒಬ್ಬನು ಮಗ ಆನರ್ತ ಎಂಬ ಹೆಸರಿನಿಂದ ಪ್ರಸಿದ್ಧನಾದನು. ಇನ್ನೊಬ್ಬಳು ಕನ್ಯೆ ಸುಕನ್ಯೆಯೆಂಬ ಹೆಸರಿನವಳು. ಅವಳು ಚ್ಯವನನ ಪತ್ನಿಯಾದಳು.

ಆನರ್ತವಿಷಯಶ್ಚಾಸೀತ್ಪುರೀ ಚಾಸ್ಯ ಕುಶಸ್ಥಲೀ ।
ರೇವಸ್ಯ ರೈವತಃ ಪುತ್ರಃ ಕಕುದ್ಮೀ ನಾಮ ಧಾರ್ಮಿಕಃ ।। ೧-೧೦-೩೩

ಆನರ್ತನ ರಾಜ್ಯವು ಆನರ್ತ3ವೆನಿಸಿತು. ಅವನ ಪುರಿಯು ಕುಶಸ್ಥಲಿಯಾಗಿತ್ತು. ರೇವನಿಗೆ ರೈವತನೆಂಬ ಪುತ್ರನಿದ್ದನು. ಕುಕುದ್ಮೀ ಎಂಬ ಹೆಸರಿದ್ದ ಅವನು ಧಾರ್ಮಿಕನಾಗಿದ್ದನು.

ಜ್ಯೇಷ್ಠಃ ಪುತ್ರಶತಸ್ಯಾಸೀದ್ರಾಜ್ಯಂ ಪ್ರಾಪ್ಯ ಕುಶಸ್ಥಲೀಮ್ ।
ಸ ಕನ್ಯಾಸಹಿತಃ ಶ್ರುತ್ವಾ ಗಾಂಧರ್ವಂ ಬ್ರಹ್ಮಣೋಽಂತಿಕೇ ।। ೧-೧೦-೩೪

ಅವನು ನೂರು ಪುತ್ರರಲ್ಲಿ ಜ್ಯೇಷ್ಠನಾಗಿದ್ದನು. ಕುಶಸ್ಥಲಿಯನ್ನು ಪಡೆದು ಅವನು ತನ್ನ ಕನ್ಯೆಯ ಸಹಿತ ಗಾಂಧರ್ವ ಗಾನವನ್ನು ಕೇಳಲು ಬ್ರಹ್ಮನ ಬಳಿ ಹೋಗಿದ್ದನು.

ಮುಹೂರ್ತಭೂತಂ ದೇವಸ್ಯ ಗತಂ ಬಹುಯುಗಂ ಪ್ರಭೋ ।
ಆಜಗಾಮಯುವೈವಾಥ ಸ್ವಾಂ ಪುರೀಂ ಯಾದವೈರ್ವೃತಾಮ್ ।। ೧-೧೦-೩೫

ಪ್ರಭೋ! ಒಂದು ಮುಹೂರ್ತಮಾತ್ರ ಅವನು ಬ್ರಹ್ಮನಲ್ಲಿಗೆ ಹೋಗಿರಲು ಮಾನವ ಲೋಕದಲ್ಲಿ ಅನೇಕ ಯುಗಗಳು ಕಳೆದುಹೋಗಿದ್ದವು. ಅವನು ತನ್ನ ಪುರಿಗೆ ಹಿಂದಿರುಗಿದಾಗ ಅದು ಯಾದವರಿಂದ ತುಂಬಿಹೋಗಿತ್ತು.

ಕೃತಾಂ ದ್ವಾರವತೀಂ ನಾಮ್ನಾ ಬಹುದ್ವಾರಾಂ ಮನೋರಮಾಮ್ ।
ಭೋಜವೃಷ್ಣ್ಯಂಧಕೈರ್ಗುಪ್ತಾಂ ವಾಸುದೇವಪುರೋಗಮೈಃ ।। ೧-೧೦-೩೬

ಅಲ್ಲಿ ಬಹುದ್ವಾರಗಳಿಂದ ಕೂಡಿದ್ದ ದ್ವಾರವತೀ ಎಂಬ ಮನೋಹರ ನಗರವನ್ನು ನಿರ್ಮಿಸಿಕೊಂಡು ವಾಸುದೇವನ ನಾಯಕತ್ವದಲ್ಲಿ ಭೋಜ-ವೃಷ್ಣಿ-ಅಂಧಕರು ಸುರಕ್ಷಿತರಾಗಿದ್ದರು.

ತತಃ ಸ ರೈವತೋ ಜ್ಞಾತ್ವಾ ಯಥಾತತ್ತ್ವಮರಿಂದಮ ।
ಕನ್ಯಾಂ ತಾಂ ಬಲದೇವಾಯ ಸುವ್ರತಾಂ ನಾಮ ರೇವತೀಮ್ ।। ೧-೧೦-೩೭
ದತ್ತ್ವಾ ಜಗಾಮ ಶಿಖರಂ ಮೇರೋಸ್ತಪಸಿ ಸಂಸ್ಥಿತಃ ।
ರೇಮೇ ರಾ೧ಮೋಽಪಿ ಧರ್ಮಾತ್ಮಾ ರೇವತ್ಯಾ ಸಹಿತಃ ಸುಖೀ ।। ೧-೧೦-೩೮

ಅರಿಂದಮ! ಆಗ ರೈವತನು ಯಥಾತತ್ತ್ವನ್ನು ತಿಳಿದುಕೊಂಡು ತನ್ನ ಕನ್ಯೆ ಸುವ್ರತಾ ಎಂಬ ಹೆಸರಿನ ರೇವತಿಯನ್ನು ಬಲದೇವನಿಗೆ ಕೊಟ್ಟು ಹೋದನು. ಅವನು ಮೇರುಪರ್ವತದಲ್ಲಿ ತಪೋನಿರತನಾಗಿದ್ದಾನೆ. ಧರ್ಮಾತ್ಮ ರಾಮನಾದರೋ ರೇವತಿಯೊಡನೆ ಸುಖವಾಗಿ ರಮಿಸಿದನು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಖಿಲಭಾಗೇ ಹರಿವಂಶೇ ಹರಿವಂಶಪರ್ವಣಿ ಐಲೋತ್ಪತ್ತಿವರ್ಣನಂ ನಾಮ ದಶಮೋಽಧ್ಯಾಯಃ ।। ।


  1. ಈಗಿನ ಪ್ರಯಾಗಸ್ಥಾನ. ↩︎

  2. ಈ ಶರ್ಯಾತಿಯೇ ಬೇರೆ. ಮನುವಿನ ಮಗ, ಚ್ಯವನನ ಪತ್ನಿ ಸುಕನ್ಯೆಯ ತಂದೆ, ಮನುವಿನ ಮಗ ಶರ್ಯಾತಿಯೇ ಬೇರೆ. ↩︎

  3. ಈಗ ದ್ವಾರಕೆಯಿರುವ ಪ್ರದೇಶ. ↩︎