ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಖಿಲಭಾಗೇ ಹರಿವಂಶಃ
ಹರಿವಂಶ ಪರ್ವ
ಅಧ್ಯಾಯ 9
ಸಾರ
ವೈಶಂಪಾಯನ ಉವಾಚ
ವಿವಸ್ವಾನ್ ಕಶ್ಯಪಾಜ್ಜಜ್ಞೇ ದಾಕ್ಷಾಯಣ್ಯಾಮರಿಂದಮ ।
ತಸ್ಯ ಭಾರ್ಯಾಭವತ್ಸಂಜ್ಞಾ ತ್ವಾಷ್ಟ್ರೀ ದೇವೀ ವಿವಸ್ವತಃ ।। ೧-೯-೧
ವೈಶಂಪಾಯನನು ಹೇಳಿದನು: “ಅರಿಂದಮ! ದಕ್ಷನ ಪುತ್ರಿಯಲ್ಲಿ ಕಶ್ಯಪನಿಗೆ ವಿವಸ್ವಾನನು ಹುಟ್ಟಿದನು. ತ್ವಷ್ಟನ ಪುತ್ರಿ ದೇವೀ ಸಂಜ್ಞಾ ಅವನ ಭಾರ್ಯೆಯಾದಳು.
ಸುರೇಣುರಿತಿ ವಿಖ್ಯಾತಾ ತ್ರಿಷು ಲೋಕೇಷು ಭಾಮಿನೀ ।
ಸಾ ವೈ ಭಾರ್ಯಾ ಭಗವತೋ ಮಾರ್ತಂಡಸ್ಯ ಮಹಾತ್ಮನಃ ।। ೧-೯-೨
ಆ ಮಹಾತ್ಮ ಮಾರ್ತಂಡನ ಭಾರ್ಯೆ ಭಗವತಿ ಭಾಮಿನಿಯು ಸುರೇಣು ಎಂದು ಮೂರು ಲೋಕಗಳಲ್ಲಿಯೂ ವಿಖ್ಯಾತಳಾಗಿದ್ದಳು.
ಭರ್ತೃರೂಪೇಣ ನಾತುಷ್ಯದ್ರೂಪಯೌವನಶಾಲಿನೀ ।
ಸಂಜ್ಞಾನಾ ಸ್ತ್ರೀ ಸುತಪಸಾ ದೀಪ್ತೇನೇಹ ಸಮನ್ವಿತಾ ।। ೧-೯-೩
ರೂಪಯೌವನ ಶಾಲಿನೀ ಸ್ತ್ರೀ ಸಂಜ್ಞೆಯು ತನ್ನ ಪತಿಯ ಮಹಾತಪಸ್ಸಿನಿಂದ ಬೆಳಗುತ್ತಿದ್ದ ರೂಪದಿಂದ ಸಂತುಷ್ಟಳಾಗಿರಲಿಲ್ಲ.
ಆದಿತ್ಯಸ್ಯ ಹಿ ತದ್ರೂಪಂ ಮಂಡಲಸ್ಯ ಸುತೇಜಸಾ ।
ಗಾತ್ರೇಷು ಪರಿದಗ್ಧಂ ವೈ ನಾತಿಕಾಂತಮಿವಾಭವತ್ ।। ೧-೯-೪
ಅತ್ಯಂತ ತೇಜಸ್ಸಿದ್ದ ಆದಿತ್ಯನ ಮಂಡಲದ ರೂಪದಿಂದಾಗಿ ಅವಳ ಶರೀರವು ಸುಡುತ್ತಿದ್ದುದರಿಂದ ಅವಳಿಗೆ ಅವನ ಹತ್ತಿರ ಹೋಗಲೂ ಆಗುತ್ತಿರಲಿಲ್ಲ.
ನ ಖಲ್ವಯಂ ಮೃತೋಽಂಡಸ್ಥ ಇತಿ ಸ್ನೇಹಾದಭಾಷತ ।
ಅಜ್ಞಾನಾತ್ ಕಶ್ಯಪಸ್ತಸ್ಮಾನ್ಮಾರ್ತಂಡ ಇತಿ ಚೋಚ್ಯತೇ ।। ೧-೯-೫
ಅದಿತಿಯು ಅಜ್ಞಾನದಲ್ಲಿದ್ದಾಗ ಕಶ್ಯಪನು “ಇವನು ಮೃತನಾಗಿಲ್ಲ. ಅಂಡದಲ್ಲಿಯೇ ಇದ್ದಾನೆ!” ಎಂದು ಸ್ನೇಹದಿಂದ ಹೇಳಿದ ಕಾರಣ ಅವನನ್ನು ಮಾರ್ತಂಡ ಎಂದು ಹೇಳುತ್ತಾರೆ.
ತೇಜಸ್ತ್ವಭ್ಯಧಿಕಂ ತಾತ ನಿತ್ಯಮೇವ ವಿವಸ್ವತಃ ।
ಯೇನಾತಿತಾಪಯಾಮಾಸ ತ್ರೀಽಣ್ಲ್ಲೋಕಾನ್ಕಶ್ಯಪಾತ್ಮಜಃ ।। ೧-೯-೬
ತಾತ! ವಿವಸ್ವತನ ತೇಜಸ್ಸು ಅತ್ಯಧಿಕ. ಇದರಿಂದಲೇ ಆ ಕಶ್ಯಪಾತ್ಮಜನು ಮೂರೂ ಲೋಕಗಳನ್ನು ಸುಡುತ್ತಿರುತ್ತಾನೆ.
ತ್ರೀಣ್ಯಪತ್ಯಾನಿ ಕೌರವ್ಯ ಸಂಜ್ಞಾಯಾಂ ತಪತಾಂ ವರಃ ।
ಆದಿತ್ಯೋ ಜನಯಾಮಾಸ ಕನ್ಯಾಂ ದ್ವೌ ಚ ಪ್ರಜಾಪತೀ ।। ೧-೯-೭
ಕೌರವ್ಯ! ಸುಡುವವರಲ್ಲಿ ಶ್ರೇಷ್ಠ ಆದಿತ್ಯನು ಸಂಜ್ಞೆಯಲ್ಲಿ ಇಬ್ಬರು ಪ್ರಜಾಪತಿಗಳನ್ನೂ ಮತ್ತು ಓರ್ವ ಕನ್ಯೆಯನ್ನೂ ಹುಟ್ಟಿಸಿದನು.
ಮನುರ್ವೈವಸ್ವತಃ ಪೂರ್ವಂ ಶ್ರಾದ್ಧದೇವಃ ಪ್ರಜಾಪತಿಃ ।
ಯಮಶ್ಚ ಯಮುನಾ ಚೈವ ಯಮಜೌ ಸಮ್ಬಭೂವತುಃ ।। ೧-೯-೮
ಮೊದಲನೆಯವನು ವೈವಸ್ವತ ಮನು ಮತ್ತು ಎರಡನೆಯವನು ಪ್ರಜಾಪತಿ ಶ್ರಾದ್ಧದೇವ ಅಥವಾ ಯಮ. ಯಮ ಮತ್ತು ಯಮುನೆಯರು ಅವಳೀ ಮಕ್ಕಳಾಗಿ ಜನಿಸಿದ್ದರು.
ಸಾ ವಿವರ್ಣಂ ತು ತದ್ರೂಪಂ ದೃಷ್ಟ್ವಾ ಸಂಜ್ಞಾ ವಿವಸ್ವತಃ ।
ಅಸಹಂತೀ ಚ ಸ್ವಾಂ ಛಾಯಾಂ ಸವರ್ಣಾಂ ನಿರ್ಮಮೇ ತತಃ ।। ೧-೯-೯
ವಿವಸ್ವತನ ಆ ವಿವರ್ಣ ರೂಪವನ್ನು ನೋಡಿ ಸಹಿಸಲಾಗದ ಸಂಜ್ಞೆಯು ತನ್ನ ಛಾಯೆಗೆ ತನ್ನದೇ ರೂಪವನ್ನಿತ್ತಳು.
ಮಾಯಾಮಯೀ ತು ಸಾ ಸಂಜ್ಞಾ ತಸ್ಯಾಶ್ಛಾಯಾ ಸಮುತ್ಥಿತಾ ।
ಪ್ರಾಂಜಲಿಃ ಪ್ರಣತಾ ಭೂತ್ವಾ ಛಾಯಾ ಸಂಜ್ಞಾಂ ನರೇಶ್ವರ ।। ೧-೯-೧೦
ಉವಾಚ ಕಿಂ ಮಯಾ ಕಾರ್ಯಂ ಕಥಯಸ್ವ ಶುಚಿಸ್ಮಿತೇ ।
ಸ್ಥಿತಾಸ್ಮಿ ತವ ನಿರ್ದೇಶೇ ಶಾಧಿ ಮಾಂ ವರವರ್ಣಿನಿ ।। ೧-೯-೧೧
ಆ ಮಾಯಾಮಯಿಯು ಅವಳ ಛಾಯೆಯಿಂದಲೇ ಉತ್ಪನ್ನಳಾಗಿದ್ದಳು. ನರೇಶ್ವರ! ಆ ಛಾಯೆಯು ಸಂಜ್ಞೆಗೆ ಶಿರಬಾಗಿ ಕೈಮುಗಿದು “ಶುಚಿಸ್ಮಿತೇ! ನನ್ನಿಂದ ಏನಾಗಬೇಕೆಂದು ಹೇಳು. ವರವರ್ಣಿನೀ! ನಿನ್ನ ಆದೇಶಕ್ಕೇ ನಿಂತಿದ್ದೇನೆ. ನನಗೆ ಆಜ್ಞೆಮಾಡು!” ಎಂದಳು.
ಸಂಜ್ಞೋವಾಚ
ಅಹಂ ಯಾಸ್ಯಾಮಿ ಭದ್ರಂ ತೇ ಸ್ವಮೇವ ಭವನಂ ಪಿತುಃ ।
ತ್ವಯೇಹ ಭವನೇ ಮಹ್ಯಂ ವಸ್ತವ್ಯಂ ನಿರ್ವಿಕಾರಯಾ ।। ೧-೯-೧೨
ಸಂಜ್ಞೆಯು ಹೇಳಿದಳು: “ನಿನಗೆ ಮಂಗಳವಾಗಲಿ! ನಾನು ನನ್ನ ತಂದೆಯ ಮನಗೆ ಹೋಗುತ್ತಿದ್ದೇನೆ. ನೀನು ಈ ಭವನದಲ್ಲಿ ನಿರ್ವಿಕಾರಳಾಗಿ ವಾಸಿಸು.
ಇಮೌ ಚ ಬಾಲಕೌ ಮಹ್ಯಂ ಕನ್ಯಾ ಚೇಯಂ ಸುಮಧ್ಯಮಾ ।
ಸಂಭಾವ್ಯಾಸ್ತೇ ನ ಚಾಖ್ಯೇಯಮಿದಂ ಭಗವತೇ ಕ್ವಚಿತ್ ।। ೧-೯-೧೩
ಈ ಇಬ್ಬರು ಬಾಲಕರು ಮತ್ತು ಸುಮಧ್ಯಮೆ ಕನ್ಯೆ ನನ್ನವರು. ಇವರನ್ನು ನೋಡಿಕೋ ಮತ್ತು ಈ ವಿಷಯವನ್ನು ಭಗವಾನ್ ಸೂರ್ಯನಲ್ಲಿ ಎಂದೂ ಹೇಳಬೇಡ!”
ಛಾಯೋವಾಚ।
ಆ ಕಚಗ್ರಹಣಾದ್ದೇವಿ ಆ ಶಾಪಾನ್ನೈವ ಕರ್ಹಿಚಿತ್ ।
ಆಖ್ಯಾಸ್ಯಾಮಿ ಮತಂ ತುಭ್ಯಂ ಗಚ ದೇವಿ ಯಥಾಸುಖಮ್ ।। ೧-೯-೧೪
ಛಾಯೆಯು ಹೇಳಿದಳು: “ದೇವೀ! ನನ್ನ ಕೂದಲನ್ನು ಹಿಡಿದುಕೊಂಡಾಗ ಮತ್ತು ಶಾಪವು ದೊರೆಯುವ ಪರಿಸ್ಥಿತಿಯಲ್ಲದೇ ಬೇರೆ ಯಾವಾಗಲೂ ಈ ವಿಷಯವನ್ನು ಹೇಳುವುದಿಲ್ಲ. ದೇವೀ! ನೀನು ಯಥಾಸುಖವಾಗಿ ಹೋಗು!””
ವೈಶಂಪಾಯನ ಉವಾಚ
ಸಮಾದಿಶ್ಯ ಸವರ್ಣಾಂ ತಾಂ ತಥೇತ್ಯುಕ್ತಾ ಚ ಸಾ ತಯಾ ।
ತ್ವಷ್ಟುಃ ಸಮೀಪಮಗಮದ್ವ್ರೀಡಿತೇವ ತಪಸ್ವಿನೀ ।। ೧-೯-೧೫
ವೈಶಂಪಾಯನನು ಹೇಳಿದನು: “ತನ್ನದೇ ರೂಪ-ನಾಮಗಳಿರುವ ಅವಳಿಗೆ ಆ ಆದೇಶವನ್ನಿತ್ತ ಅವಳು ಹಾಗೆಯೇ ಮಾಡುತ್ತೇನೆ ಎಂದು ವಚನವನ್ನಿತ್ತ ನಂತರ ತಪಸ್ವಿನೀ ಸಂಜ್ಞೆಯು ನಾಚಿಕೊಂಡೇ ತ್ವಷ್ಟನ ಬಳಿ ಹೋದಳು.
ಪಿತುಃ ಸಮೀಪಗಾ ಸಾ ತು ಪಿತ್ರಾ ನಿರ್ಭರ್ತ್ಸಿತಾ ತದಾ ।
ಭರ್ತುಃ ಸಮೀಪಂ ಗಚ್ಛೇತಿ ನಿಯುಕ್ತಾ ಚ ಪುನಃ ಪುನಃ ।। ೧-೯-೧೬
ತಂದೆಯ ಸಮೀಪ ಹೋದ ಅವಳನ್ನು ಅವಳ ತಂದೆಯು ಜೋರಾಗಿ ಬೈದನು ಮತ್ತು ಪತಿಯ ಸಮೀಪ ಹೋಗೆಂದು ಪುನಃ ಪುನಃ ಹೇಳಿದನು.
ಅಗಚದ್ವಡವಾ ಭೂತ್ವಾಽಽಚ್ಛಾದ್ಯ ರೂಪಮನಿಂದಿತಾ ।
ಕುರೂನಥೋತ್ತರಾನ್ ಗತ್ವಾ ತೃಣಾನ್ಯೇವ ಚಚಾರ ಹ ।। ೧-೯-೧೭
ಆಗ ಆ ಅನಿಂದಿತೆಯು ತನ್ನ ರೂಪವನ್ನು ಬದಲಾಯಿಸಿಕೊಂಡು ಹೆಣ್ಣು ಕುದುರೆಯಾಗಿ ಉತ್ತರಕುರು ಪ್ರದೇಶಕ್ಕೆ ಹೋಗಿ ಅಲ್ಲಿ ಹುಲ್ಲನ್ನು ಮೇಯತೊಡಗಿದಳು.
ದ್ವಿತೀಯಾಯಾಂ ತು ಸಂಜ್ಞಾಯಾಂ ಸಂಜ್ಞೇಯಮಿತಿ ಚಿಂತಯನ್ ।
ಆದಿತ್ಯೋ ಜನಯಾಮಾಸ ಪುತ್ರಮಾತ್ಮಸಮಂ ತದಾ ।। ೧-೯-೧೮
ಅನಂತರ ಎರಡನೇ ಸಂಜ್ಞೆಯನ್ನು ಸಂಜ್ಞೆಯೆಂದೇ ತಿಳಿದು ಆದಿತ್ಯನು ಅವಳಲ್ಲಿ ಆತ್ಮಸಮ ಪುತ್ರನನ್ನು ಹುಟ್ಟಿಸಿದನು.
ಪೂರ್ವಜಸ್ಯ ಮನೋಸ್ತಾತ ಸದೃಶೋಽಯಮಿತಿ ಪ್ರಭುಃ ।
ಸವರ್ಣತ್ವಾನ್ಮನೋರ್ಭೂಯಃ ಸಾರ್ವರ್ಣ ಇತಿ ಚೋಕ್ತವಾನ್ ।। ೧-೯-೧೯
ತಾತ! ಆ ಪ್ರಭುವು ವರ್ಣ-ಪರಾಕ್ರಮಗಳಲ್ಲಿ ತನ್ನ ಅಣ್ಣ ಮನುವಿನಂತೆಯೇ ಇದ್ದುದರಿಂದ ಸಾವರ್ಣ ಎಂದಾದನು.
ಮನುರೇವಾಭವನ್ನಾಮ್ನಾ ಸಾವರ್ಣ ಇತಿ ಚೋಚ್ಯತೇ ।
ದ್ವಿತೀಯೋ ಯಃ ಸುತಸ್ತಸ್ಯಾಃ ಸ ವಿಜ್ಞೇಯಃ ಶನೈಶ್ಚರಃ ।। ೧-೯-೨೦
ಅವನೂ ಸಾವರ್ಣ ಎಂಬ ಹೆಸರಿನ ಮನುವಾದನು ಎಂದು ಹೇಳುತ್ತಾರೆ. ಅವಳ ಎರಡನೆಯ ಮಗನು ಶನೈಶ್ಚರನೆಂದು ತಿಳಿಯಬೇಕು.
ಸಂಜ್ಞಾ ತು ಪಾರ್ಥಿವೀ ತಾತ ಸ್ವಸ್ಯ ಪುತ್ರಸ್ಯ ವೈ ತದಾ ।
ಚಕಾರಾಭ್ಯಧಿಕಂ ಸ್ನೇಹಂ ನ ತಥಾ ಪೂರ್ವಜೇಷು ವೈ ।। ೧-೯-೨೧
ತಾತ! ಪಾರ್ಥಿವೀ1 ಸಂಜ್ಞೆಯಾದರೋ ತನ್ನ ಪುತ್ರರಲ್ಲಿ ಎಷ್ಟು ಅಧಿಕಸ್ನೇಹವನ್ನಿಟ್ಟುಕೊಂಡಿದ್ದಳೋ ಅಷ್ಟು ಸ್ನೇಹವನ್ನು ಮೊದಲು ಹುಟ್ಟಿದವರಲ್ಲಿ ತೋರಿಸುತ್ತಿರಲಿಲ್ಲ.
ಮನುಸ್ತಸ್ಯಾಕ್ಷಮತ್ತತ್ತು ಯಮಸ್ತಸ್ಯಾ ನ ಚಕ್ಷಮೇ ।
ತಾಂ ಸ ರೋಷಾಚ್ಚ ಬಾಲ್ಯಾಚ್ಚ ಭಾವಿನೋಽರ್ಥಸ್ಯ ವೈ ಬಲಾತ್ ।
ಯದಾ ಸಂತರ್ಜ್ಜಯಾಮಾಸ ಸಂಜ್ಞಾಂ ವೈವಸ್ವತೋ ಯಮಃ ।। ೧-೯-೨೨
ಮನುವಾದರೋ ಇದನ್ನು ಕ್ಷಮಿಸಿದನು. ಆದರೆ ಯಮನಿಗೆ ಅವಳನ್ನು ಕ್ಷಮಿಸಲಾಗಲಿಲ್ಲ. ವೈವಸ್ವತ ಯಮನು ರೋಷ-ಬಾಲ್ಯತನಗಳಿಂದ ಮತ್ತು ಮುಂದೆ ಆಗಬೇಕಾದುದರ ಬಲದಿಂದ, ಸಂಜ್ಞೆಗೆ ಕಾಲು ತೋರಿಸಿ ಅವಳನ್ನು ಬೈದನು.
ತಂ ಶಶಾಪ ತತಃ ಕ್ರೋಧಾತ್ಸಾವರ್ಣಂ ಜನನೀ ನೃಪ ।
ಚರಣಃ ಪತತಾಮೇವ ತವೇತಿ ಭೃಶದುಃಖಿತಾ ।। ೧-೯-೨೩
ನೃಪ! ಆಗ ಸಾವರ್ಣನ ಜನನಿಯು ತುಂಬಾ ದುಃಖಿತಳಾಗಿ ಕೋಪದಿಂದ “ನಿನ್ನ ಕಾಲು ಬಿದ್ದುಹೋಗಲಿ!” ಎಂದು ಯಮನಿಗೆ ಶಪಿಸಿದಳು.
ಯಮಸ್ತು ತತ್ಪಿತುಃ ಸರ್ವಂ ಪ್ರಾಂಜಲಿಃ ಪರ್ಯವೇದಯತ್ ।
ಭೃಶಂ ಶಾಪಭಯೋದ್ವಿಗ್ನಃ ಸಂಜ್ಞಾವಾಕ್ಯಪ್ರತೋದಿತಃ ।। ೧-೯-೨೪
ಸಂಜ್ಞೆಯ ಮಾತಿನಿಂದ ತುಂಬಾ ನೋವನ್ನನುಭವಿಸಿದ ಯಮನು ಶಾಪದ ಭಯದಿಂದ ಉದ್ವಿಗ್ನನಾಗಿ ತನ್ನ ತಂದೆಗೆ ಕೈಮುಗಿದು ನಡೆದುದೆಲ್ಲವನ್ನೂ ತಿಳಿಸಿದನು.
ಶಾಪೋಽಯಂ ವಿನಿವರ್ತೇತ ಪ್ರೋವಾಚ ಪಿತರಂ ತದಾ ।
ಮಾತ್ರಾ ಸ್ನೇಹೇನ ಸರ್ವೇಷು ವರ್ತಿತವ್ಯಂ ಸುತೇಷು ವೈ ।। ೧-೯-೨೫
ಅವನು ತಂದೆಗೆ ಹೇಳಿದನು: “ನನಗೆ ಈ ಶಾಪವು ತಗಲದಿರಲಿ! ಮಾತೆಯಾದವಳು ತನ್ನ ಎಲ್ಲ ಮಕ್ಕಳೊಂಡನೆ ಸ್ನೇಹದಿಂದ ವರ್ತಿಸಬೇಕು!
ಸೇಯಮಸ್ಮಾನಪಾಹಾಯ ಯವೀಯಾಂಸಂ ಬುಭೂಷತಿ ।
ತಸ್ಯಾಂ ಮಯೋದ್ಯತಃ ಪಾದೌ ನ ತು ದೇಹೇ ನಿಪಾತಿತಃ ।। ೧-೯-೨೬
ಇವಳು ನಮ್ಮನ್ನು ಬಿಟ್ಟು ಕಿರಿಯವರೊಂದಿಗೆ ಮಾತ್ರ ಸ್ನೇಹದಿಂದ ವರ್ತಿಸುತ್ತಿದ್ದಾಳೆ. ಆದುದರಿಂದ ನಾನು ನನ್ನ ಕಾಲನ್ನು ಎತ್ತಿದುದು ಹೌದು. ಆದರೆ ಅವಳ ಶರೀರಕ್ಕೆ ಒದೆಯಲಿಲ್ಲ.
ಬಾಲ್ಯಾದ್ವಾ ಯದಿ ವಾ ಮೋಹಾತ್ತದ್ಭವಾನ್ಕ್ಷಂತುಮರ್ಹತಿ ।
ಯಸ್ಮಾತ್ತೇ ಪೂಜನೀಯಾಹಂ ಲಂಘಿತಾಸ್ಮಿ ತ್ವಯಾ ಸುತ ।। ೧-೯-೨೭
ಬಾಲ್ಯತನದಿಂದಲೋ ಅಥವಾ ಮೋಹಪರವಶನಾಗಿಯೋ ನಾನು ಆ ರೀತಿ ಮಾಡಿದೆ. ಅದನ್ನು ಕ್ಷಮಿಸಬೇಕು. ಆಗ ತಾಯಿಯು ನನಗೆ ಹೇಳಿದಳು: “ಮಗನೇ! ಪೂಜನೀಯಳಾದ ನನ್ನನ್ನು ನೀನು ಉಲ್ಲಂಘಿಸಿದ್ದೀಯೆ!
ತಸ್ಮಾತ್ತವೈಷ ಚರಣಃ ಪತಿಷ್ಯತಿ ನ ಸಂಶಯಃ ।
ಅಪತ್ಯಂ ದುರಪತ್ಯಂ ಸ್ಯಾನ್ನಾಮ್ಬಾ ಕುಜನನೀ ಭವೇತ್ ।। ೧-೯-೨೮
ಆದುದರಿಂದ ನಿನ್ನ ಈ ಕಾಲು ನಿಸ್ಸಂದೇಹವಾಗಿ ಬೀಳುತ್ತದೆ. ಸಂತಾನವು ಕುಸಂತಾನವಾಗಬಹುದು. ಆದರೆ ಮಾತೆಯು ಎಂದೂ ಕುಮಾತೆಯಾಗುವುದಿಲ್ಲ.”
ಶಪ್ತೋಽಹಮಸ್ಮಿ ಲೋಕೇಶ ಜನನ್ಯಾ ತಪತಾಂ ವರ ।
ತವ ಪ್ರಸಾದಾಚ್ಚರಣೋ ನ ಪತೇನ್ಮಮ ಗೋಪತೇ ।। ೧-೯-೨೯
ಲೋಕೇಶ! ಸುಡುವವರಲ್ಲಿ ಶ್ರೇಷ್ಠ! ಗೋಪತೇ! ಜನನಿಯಿಂದ ಶಪಿಸಲ್ಪಟ್ಟಿದ್ದೇನೆ. ನಿನ್ನ ಕರುಣೆಯಿಂದ ನನ್ನ ಚರಣವು ಬೀಳದಿರಲಿ!”
ವಿವಸ್ವಾನುವಾಚ
ಅಸಂಶಯಂ ಪುತ್ರ ಮಹದ್ಭವಿಷ್ಯತ್ಯತ್ರ ಕಾರಣಮ್ ।
ಯೇನ ತ್ವಾಮಾವಿಶತ್ಕ್ರೋಧೋ ಧರ್ಮಜ್ಞಂ ಸತ್ಯವಾದಿನಮ್ ।। ೧-೯-೩೦
ವಿವಸ್ವಾನನು ಹೇಳಿದನು: “ಪುತ್ರ! ನೀನು ಧರ್ಮಜ್ಞ ಮತ್ತು ಸತ್ಯವಾದಿ. ನೀನು ಈ ರೀತಿ ಕ್ರೋಧಾವಿಷ್ಟನಾದೆಯೆಂದರೆ ನಿಸ್ಸಂಶಯವಾಗಿಯೂ ಅದರ ಹಿಂದೆ ಅತಿ ದೊಡ್ಡ ಕಾರಣವಿರಬೇಕು.
ನ ಶಕ್ಯಮನ್ಯಥಾ ಕರ್ತುಂ ಮಯಾ ಮಾತುರ್ವಚಸ್ತವ ।
ಕೃಮಯೋ ಮಾಂಸಮಾದಾಯ ಯಾಸ್ಯಂತಿ ಧರಣೀತಲಮ್ ।। ೧-೯-೩೧
ತವ ಪಾದಾನ್ಮಹಾಪ್ರಾಜ್ಞ ತತಸ್ತ್ವಂ ಪ್ರಾಪ್ಸ್ಯಸೇ ಸುಖಮ್ ।
ಕೃತಮೇವಂ ವಚಸ್ತಥ್ಯಂ ಮಾತುಸ್ತವ ಭವಿಷ್ಯತಿ ।। ೧-೯-೩೨
ನಿನ್ನ ಮಾತೆಯ ವಚನವನ್ನು ಅನ್ಯಥಾ ಮಾಡಲು ನಾನು ಶಕ್ಯನಿಲ್ಲ. ಕ್ರಿಮಿಗಳು ನಿನ್ನ ಕಾಲಿನ ಮಾಂಸವನ್ನು ತಿಂದು ಭೂಮಿಯ ಮೇಲೆ ಬೀಳಿಸುತ್ತವೆ. ಮಹಾಪ್ರಾಜ್ಞ! ಇದರಿಂದ ನಿನಗೆ ಸುಖವಾಗುತ್ತದೆ. ಹೀಗೆ ನಿನ್ನ ತಾಯಿಯ ಮಾತಿನಂತೆಯೂ ಮಾಡಿದಂತಾಗುತ್ತದೆ.
ಶಾಪಸ್ಯ ಪರಿಹಾರೇಣ ತ್ವಂ ಚ ತ್ರಾತೋ ಭವಿಷ್ಯಸಿ ।
ಆದಿತ್ಯೋಽಥಾಬ್ರವೀತ್ಸಂಜ್ಞಾಂ ಕಿಮರ್ಥಂ ತನಯೇಷು ವೈ ।। ೧-೯-೩೩
ತುಲ್ಯೇಷ್ವಭ್ಯಧಿಕಃ ಸ್ನೇಹಃ ಕ್ರಿಯತೇಽತಿ ಪುನಃ ಪುನಃ ।
ಸಾ ತತ್ ಪರಿಹರಂತೀ ತು ನಾಚಚಕ್ಷೇ ವಿವಸ್ವತೇ ।। ೧-೯-೩೪
ಶಾಪದ ಈ ಪರಿಹಾರದಿಂದ ನೀನೂ ಬಿಡುಗಡೆಹೊಂದುತ್ತೀಯೆ!” ಅನಂತರ ಆದಿತ್ಯನು ಸಂಜ್ಞೆಗೆ “ನಿನ್ನ ತನಯರಲ್ಲಿ ಸಮಾನ ಸ್ನೇಹವನ್ನಿಟ್ಟಿರಬೇಕಾಗಿದ್ದ ನೀನು ಕಿರಿಯವರಲ್ಲಿಯೇ ಏಕೆ ಅಧಿಕ ಸ್ನೇಹವನ್ನು ತೋರಿಸುತ್ತಿದ್ದೀಯೆ?” ಎಂದು ಪುನಃ ಪುನಃ ಕೇಳಿದನು. ಆಗ ಅವಳು ನಸುನಗುತ್ತಿದ್ದಳೇ ಹೊರತು ವಿವಸ್ವತನಿಗೆ ಏನನ್ನೂ ಹೇಳಲಿಲ್ಲ.
ಆತ್ಮಾನಂ ಸುಸಮಾಧಾಯ ಯೋಗಾತ್ತಥ್ಯಮಪಶ್ಯತ ।
ತಾಂ ಶಪ್ತುಕಾಮೋ ಭಗವಾನ್ನಾಶಾಯ ಕುರುನಂದನ ।। ೧-೯-೩೫
ಮೂರ್ಧಜೇಷು ಚ ಜಗ್ರಾಹ ಸಮಯೇಽತಿಗತೇಽಪಿ ಚ ।
ಸಾ ತತ್ಸರ್ವಂ ಯಥಾವೃತ್ತಮಾಚಚಕ್ಷೇ ವಿವಸ್ವತೇ ।। ೧-೯-೩೬
ಕುರುನಂದನ! ಆಗ ಸೂರ್ಯನು ಯೋಗದಿಂದ ತನ್ನ ಆತ್ಮನಲ್ಲಿ ಏಕಾಗ್ರಚಿತ್ತನಾಗಿ ಸತ್ಯವೇನೆಂದು ಕಂಡುಕೊಂಡನು. ಅವಳನ್ನು ಶಪಿಸಿ ನಾಶಪಡಿಸಲು ಬಯಸಿದ ಭಗವಾನನು ಅವಳ ತಲೆಗೂದಲನ್ನು ಹಿಡಿದನು. ಸಂಜ್ಞೆಯೊಂದಿಗೆ ಮಾಡಿಕೊಂಡಿದ್ದ ಒಪ್ಪಂದವು ಹೀಗೆ ಮುರಿದುಹೋಗಲು ಛಾಯೆಯು ವಿವಸ್ವತನಿಗೆ ನಡೆದುದೆಲ್ಲವನ್ನೂ ತಿಳಿಸಿದಳು.
ವಿವಸ್ವಾನಥ ತಚ್ಛ್ರುತ್ವಾ ಕ್ರುದ್ಧಸ್ತ್ವಷ್ಟಾರಮಭ್ಯಗಾತ್ ।
ತ್ವಷ್ಟಾ ತು ತಂ ಯಥಾನ್ಯಾಯಮರ್ಚಯಿತ್ವಾ ವಿಭಾವಸುಮ್ ।
ನಿರ್ದಗ್ಧುಕಾಮಂ ರೋಷೇಣ ಸಾಂತ್ವಯಾಮಾಸ ವೈ ತದಾ ।। ೧-೯-೩೭
ಅದನ್ನು ಕೇಳಿದ ವಿವಸ್ವಾನನು ಕ್ರುದ್ಧನಾಗಿ ತ್ವಷ್ಟನಲ್ಲಿಗೆ ಹೋದನು. ತ್ವಷ್ಟನಾದರೋ ಯಥಾನ್ಯಾಯವಾಗಿ ವಿಭಾವಸುವನ್ನು ಪೂಜಿಸಿ, ರೋಷದಿಂದ ಸುಡಲು ಬಯಸಿದ ಅವನನ್ನು ಸಂತವಿಸತೊಡಗಿದನು.
ತ್ವಷ್ಟೋವಾಚ
ತವಾತಿತೇಜಸಾವಿಷ್ಟಮಿದಂ ರೂಪಂ ನ ಶೋಭತೇ ।
ಅಸಹಂತೀ ಚ ತತ್ಸಂಜ್ಞಾ ವನೇ ಚರತಿ ಶಾಡ್ವಲೇ ।। ೧-೯-೩೮
ತ್ವಷ್ಟನು ಹೇಳಿದನು: “ನಿನ್ನ ಈ ಅತಿತೇಜಸಮಾವಿಷ್ಟ ರೂಪವು ಶೋಭಿಸುವುದಿಲ್ಲ. ಇದನ್ನು ಸಹಿಸಿಕೊಳ್ಳಲಾರದೇ ಸಂಜ್ಞೆಯು ಹಸಿರು ಹುಲ್ಲಿನ ವನಗಳಲ್ಲಿ ಸಂಚರಿಸುತ್ತಿದ್ದಾಳೆ.
ದ್ರಷ್ಟಾ ಹಿ ತಾಂ ಭವಾನದ್ಯ ಸ್ವಾಂ ಭಾರ್ಯಾಂ ಶುಭಚಾರಿಣೀಮ್ ।
ನಿತ್ಯಂ ತಪಸ್ಯಭಿರತಾಂ ವಡವಾರೂಪಧಾರಿಣೀಮ್ ।। ೧-೯-೩೯
ಪರ್ಣಾಹಾರಾಂ ಕೃಶಾಂ ದೀನಾಂ ಜಟಿಲಾಂ ಬ್ರಹ್ಮಚಾರಿಣೀಮ್ ।
ಹಸ್ತಿಹಸ್ತಪರಿಕ್ಲಿಷ್ಟಾಂ ವ್ಯಾಕುಲಾಂ ಪದ್ಮಿನೀಮಿವ ।
ಶ್ಲಾಘ್ಯಾಂ ಯೋಗಬಲೋಪೇತಾಂ ಯೋಗಮಾಸ್ಥಾಯ ಗೋಪತೇ ।। ೧-೯-೪೦
ಗೋಪತೇ! ಇಂದು ಆ ನಿನ್ನ ಪತ್ನಿ ಶುಭಚಾರಿಣಿಯನ್ನು – ಸಲಗವು ಕೈಹಾಕಿದ ವ್ಯಾಕುಲ ಪದ್ಮಿನಿಯಂತೆ - ಕುದುರೆಯ ರೂಪವನ್ನು ಧರಿಸಿಕೊಂಡು ಪರ್ಣಾಹಾರಿಯಾಗಿ ಕೃಶಳೂ, ದೀನಳೂ, ಜಟಿಲೆಯೂ, ಬ್ರಹ್ಮಚಾರಿಣಿಯೂ ಆಗಿ, ಶ್ಲಾಘನೀಯ ಯೋಗಬಲದಿಂದ ಯೋಗಸ್ಥಳಾಗಿರುವುದನ್ನು ನೀನು ನೋಡುತ್ತೀಯೆ.
ಅನುಕೂಲಂ ತು ದೇವೇಶ ಯದಿ ಸ್ಯಾನ್ಮಮ ತನ್ಮತಮ್ ।
ರೂಪಂ ನಿರ್ವರ್ತಯಾಮ್ಯದ್ಯ ತವ ಕಾಂತಮರಿಂದಮ ।। ೧-೯-೪೧
ದೇವೇಶ! ಅರಿಂದಮ! ಒಂದು ವೇಳೆ ನಿನಗೆ ನನ್ನ ಮಾತು ಸರಿಯೆನಿಸಿದರೆ, ನಾನು ನಿನ್ನ ರೂಪವನ್ನು ಮನೋಹರವನ್ನಾಗಿ ಮಾಡುತ್ತೇನೆ.”
ರೂಪಂ ವಿವಸ್ವತಶ್ಚಾಸೀತ್ತಿರ್ಯಗೂರ್ಧ್ವಸಮಂ ತು ವೈ ।
ತೇನಾಸೌ ಸಂಭೃತೋ ದೇವರೂಪೇಣ ತು ವಿಭಾವಸುಃ ।। ೧-೯-೪೨
ವಿವಸ್ವತನ ರೂಪವು ಎಲ್ಲಕಡೆ ಏರು-ಪೇರಾಗಿತ್ತು. ಆ ದೇವರೂಪದಲ್ಲಿದ್ದುದರಿಂದ ಅವನಿಗೆ ವಿಭಾವಸು ಎಂಬ ಹೆಸರಾಗಿತ್ತು.
ತಸ್ಮಾತ್ತ್ವಷ್ಟುಃ ಸ ವೈ ವಾಕ್ಯಂ ಬಹು ಮೇನೇ ಪ್ರಜಾಪತಿಃ ।
ಸಮನುಜ್ಞಾತವಾಂಶ್ಚೈವ ತ್ವಷ್ಟಾರಂ ರೂಪಸಿದ್ಧಯೇ ।। ೧-೯-೪೩
ಆದುದರಿಂದ ಪ್ರಜಾಪತಿಯು ತ್ವಷ್ಟನ ಮಾತನ್ನು ಒಪ್ಪಿಕೊಂಡನು ಮತ್ತು ತನ್ನ ರೂಪವನ್ನು ಸರಿಪಡಿಸಲು ತ್ವಷ್ಟನಿಗೆ ಅನುಮತಿಯನ್ನಿತ್ತನು.
ತತೋಽಭ್ಯುಪಗಮಾತ್ತ್ವಷ್ಟಾ ಮಾರ್ತಂಡಸ್ಯ ವಿವಸ್ವತಃ ।
ಭ್ರಮಿಮಾರೋಪ್ಯ ತತ್ತೇಜಃ ಶಾತಯಾಮಾಸ ಭಾರತ ।। ೧-೯-೪೪
ಭಾರತ! ತ್ವಷ್ಟನು ವಿವಸ್ವತ ಮಾರ್ತಂಡನ ಸಮೀಪ ಹೋಗಿ ಅವನ ಮೇಲೆ ಸಾಣೆಯನ್ನು ಇಟ್ಟು ಅವನ ತೇಜಸ್ಸನ್ನು ಕೊರೆಯತೊಡಗಿದನು.
ತತೋ ನಿರ್ಭಾಸಿತಂ ರೂಪಂ ತೇಜಸಾ ಸಂಹೃತೇನ ವೈ ।
ಕಾಂತಾತ್ಕಾಂತತರಂ ದ್ರಷ್ಟುಮಧಿಕಂ ಶುಶುಭೇ ತದಾ ।। ೧-೯-೪೫
ತೇಜಸ್ಸನ್ನು ಕೊರೆದುದರಿಂದ ಸೂರ್ಯನ ರೂಪವು ಅರಳಿತು ಮತ್ತು ರೂಪವು ರಮ್ಯಾತಿರಮ್ಯವಾಗಿ ಅವನು ನೋಡಲು ಅಧಿಕವಾಗಿ ಶೋಭಿಸಿದನು.
ಮುಖೇ ನಿವರ್ತಿತಂ ರೂಪಂ ತಸ್ಯ ದೇವಸ್ಯ ಗೋಪತೇಃ ।
ತತಃ ಪ್ರಭೃತಿ ದೇವಸ್ಯ ಮುಖಮಾಸೀತ್ತು ಲೋಹಿತಮ್ ।
ಮುಖರಾಗಂ ತು ಯತ್ಪೂರ್ವಂ ಮಾರ್ತಂಡಸ್ಯ ಮುಖಚ್ಯುತಮ್ ।। ೧-೯- ೪೬
ಆದಿತ್ಯಾ ದ್ವಾದಶೈವೇಹ ಸಂಭೂತಾ ಮುಖಸಂಭವಾಃ ।
ಧಾತಾರ್ಯಮಾ ಚ ಮಿತ್ರಶ್ಚ ವರುಣೋಽಂಶೋ ಭಗಸ್ತಥಾ ।। ೧-೯-೪೭
ಇಂದ್ರೋ ವಿವಸ್ವಾನ್ ಪೂಷಾ ಚ ಪರ್ಜನ್ಯೋ ದಶಮಸ್ತಥಾ ।
ತತಸ್ತ್ವಷ್ಟಾ ತತೋ ವಿಷ್ಣುರಜಘನ್ಯೋ ಜಘನ್ಯಜಃ ।। ೧-೯-೪೮
ಅಂದಿನಿಂದ ದೇವ ಗೋಪತಿಯ ರೂಪವು ಬದಲಾಯಿತು. ಅವನ ಮುಖವು ರಕ್ತವರ್ಣದ್ದಾಯಿತು. ಹೊರಹೊಮ್ಮಿದ ಮಾರ್ತಂಡನ ಮುಖರಾಗದಿಂದ ದ್ವಾದಶ ಆದಿತ್ಯರು ಉತ್ಪನ್ನರಾದರು. ಅವನ ಮುಖದಿಂದ ಧಾತಾ, ಆರ್ಯಮಾ, ಮಿತ್ರ, ವರುಣ, ಅಂಶ, ಭಗ, ಇಂದ್ರ, ವಿವಸ್ವಾನ್, ಪೂಷಾ, ಹತ್ತನೆಯ ಪರ್ಜನ್ಯ, ತ್ವಷ್ಟಾ, ಮತ್ತು ಹನ್ನೆರಡನೆಯ ವಿಷ್ಣು ಉತ್ಪನ್ನರಾದರು. ಕಿರಿಯವನಾಗಿದ್ದರೂ ವಿಷ್ಣುವು ಎಲ್ಲರಿಗಿಂತಲೂ ಶ್ರೇಷ್ಠನಾಗಿದ್ದನು.
ಹರ್ಷಂ ಲೇಭೇ ತತೋ ದೇವೋ ದೃಷ್ಟ್ವಾಽಽದಿತ್ಯಾನ್ಸ್ವದೇಹಜಾನ್ ।
ಗಂಧೈಃ ಪುಷ್ಪೈರಲಂಕಾರೈರ್ಭಾಸ್ವತಾ ಮುಕುಟೇನ ಚ ।। ೧-೯-೪೯
ಗಂಧ-ಪುಷ್ಪ-ಅಲಂಕಾರಗಳಿಂದ ಮತ್ತು ಹೊಳೆಯುವ ಮುಕುಟಗಳಿಂದ ಶೋಭಿತರಾಗಿ ತನ್ನ ದೇಹದಿಂದ ಹುಟ್ಟಿದ ಆ ಆದಿತ್ಯರನ್ನು ನೋಡಿ ಸೂರ್ಯದೇವನು ಹರ್ಷಿತನಾದನು.
ಏವಂ ಸಂಪೂಜಯಾಮಾಸ ತ್ವಷ್ಟಾ ವಾಕ್ಯಮುವಾಚ ಹ ।
ಗಚ ದೇವ ನಿಜಾಂ ಭಾರ್ಯಾಂ ಕುರೂಂಶ್ಚರತಿ ಸೋತ್ತರಾನ್ ।। ೧-೯-೫೦
ಬಡವಾರೂಪಮಾಸ್ಥಾಯ ವನೇ ಚರತಿ ಶಾದ್ವಲೇ ।
ಹೀಗೆ ಸಂಪೂಜಿಸಿ ತ್ವಷ್ಟನು ಅವನಿಗೆ ಹೇಳಿದನು: “ದೇವ! ಹೋಗು! ನಿನ್ನ ಭಾರ್ಯೆಯು ಉತ್ತರ ಕುರುವಿನಲ್ಲಿ ಸಂಚರಿಸುತ್ತಿದ್ದಾಳೆ. ಕುದುರೆಯ ರೂಪವನ್ನು ಧರಿಸಿ ಅವಳು ಹಸಿರು ಹುಲ್ಲಿನ ಬಯಲುಪ್ರದೇಶದಲ್ಲಿ ಸುತ್ತುತ್ತಿದ್ದಾಳೆ.”
ಸ ತಥಾ ರೂಪಮಾಸ್ಥಾಯ ಸ್ವಭಾರ್ಯಾರೂಪಲೀಲಯಾ ।। ೧-೯-೫೧
ದದರ್ಶ ಯೋಗಮಾಸ್ಥಾಯ ಸ್ವಾಂ ಭಾರ್ಯಾಂ ಬಡವಾಂ ತತಃ ।
ಅಧೃಷ್ಯಾಂ ಸರ್ವಭೂತಾನಾಂ ತೇಜಸಾ ನಿಯಮೇನ ಚ ।। ೧-೯-೫೨
ಅನಂತರ ತನ್ನ ಭಾರ್ಯೆಯ ರೂಪವನ್ನೇ ಧರಿಸಿಕೊಂಡು ಅವನು ಯೋಗಸ್ಥನಾಗಿ ತನ್ನ ತೇಜಸ್ಸು-ನಿಯಮಗಳಿಂದ ಸರ್ವಭೂತಗಳಿಗೂ ಅದೃಶ್ಯಳಾಗಿ ಕುದುರೆಯ ರೂಪದಲ್ಲಿದ್ದ ತನ್ನ ಪತ್ನಿಯನ್ನು ಕಂಡನು.
ವಡವಾವಪುಷಾ ರಾಜಂಶ್ಚರಂತೀಮಕುತೋಭಯಾಮ್ ।
ಸೋಽಶ್ವರೂಪೇಣ ಭಗವಾಂಸ್ತಾಂ ಮುಖೇ ಸಮಭಾವಯತ್ ।। ೧-೯-೫೩
ರಾಜನ್! ಭಗವಾನ್ ಸೂರ್ಯನು ಅಶ್ವರೂಪದಲ್ಲಿ ಯಾವುದೇ ಭಯವಿಲ್ಲದೇ ಕುದುರೆಯ ರೂಪಧರಿಸಿದ್ದ ಅವಳ ಮುಖದ ಎದಿರು ಬಂದನು.
ಮೈಥುನಾಯ ವಿಚೇಷ್ಟಂತೀ ಪರಪುಂಸೋಪಶಂಕಯಾ ।
ಸಾ ತನ್ನಿರವಮಚ್ಛುಕ್ರಂ ನಾಸಿಕಾಯಾಂ ವಿವಸ್ವತಃ ।। ೧-೯-೫೪
ಪರಪುರುಷನೊಂದಿಗೆ ಮೈಥುನವಾಗಬರದೆಂದು ಶಂಕಿಸಿ ಅವಳು ವಿವಸ್ವತ ವೀರ್ಯವನ್ನು ತನ್ನ ಮೂಗುಗಳಿಂದ ಹೊರಚೆಲ್ಲಿದಳು.
ದೇವೌ ತಸ್ಯಾಮಜಾಯೇತಾಮಶ್ವಿನೌ ಭಿಷಜಾಂ ವರೌ ।
ನಾಸತ್ಯಶ್ಚೈವ ದಸ್ರಶ್ಚ ಸ್ಮೃತೌ ದ್ವಾವಶ್ವಿನಾವಿತಿ ।। ೧-೯-೫೫
ಅದರಿಂದ ವೈದ್ಯರಲ್ಲಿ ಶ್ರೇಷ್ಠ ಅಶ್ವಿನೀ ದೇವತೆಗಳಿಬ್ಬರು ಹುಟ್ಟಿದರು. ಅವರಿಬ್ಬರು ಅಶ್ವಿನಿಯರೂ ನಾಸತ್ಯ ಮತ್ತು ದಸ್ರ ಎಂದೂ ಕರೆಯಲ್ಪಡುತ್ತಾರೆ.
ಮಾರ್ತಂಡಸ್ಯಾತ್ಮಜಾವೇತಾವಷ್ಟಮಸ್ಯ ಪ್ರಜಾಪತೇಃ ।
ಸಂಜ್ಞಾಯಾಂ ಜನಯಾಮಾಸ ವಡವಾಯಾಂ ಸ ಭಾರತ ।
ತಾಂ ತು ರೂಪೇಣ ಕಾಂತೇನ ದರ್ಶಯಾಮಾಸ ಭಾಸ್ಕರಃ ।। ೧-೯-೫೬
ಭಾರತ! ಇವರಿಬ್ಬರೂ ಕುದುರೆಯ ರೂಪದಲ್ಲಿದ್ದ ಸಂಜ್ಞೆಯಲ್ಲಿ ಹುಟ್ಟಿದ ಪ್ರಜಾಪತಿ ಮಾರ್ತಂಡನ ಏಳನೆಯ ಸಂತಾನ. ಆಗ ಭಾಸ್ಕರನು ತನ್ನ ಮನೋಹರ ರೂಪವನ್ನು ಅವಳಿಗೆ ತೋರಿಸಿದನು.
ಸಾ ಚ ದೃಷ್ಟ್ವೈವ ಭರ್ತಾರಂ ತುತೋಷ ಜನಮೇಜಯ ।
ಯಮಸ್ತು ಕರ್ಮಣಾ ತೇನ ಭೃಶಂ ಪೀಡಿತಮಾನಸಃ ।। ೧-೯-೫೭
ಜನಮೇಜಯ! ಸಂಜ್ಞೆಯಾದರೋ ತನ್ನ ಪತಿಯನ್ನು ನೋಡಿ ತುಂಬಾ ಸಂತೋಷಗೊಂಡಳು. ಇತ್ತ ಯಮನಾದರೋ ತನ್ನ ಕರ್ಮದಿಂದ ಮನಸ್ಸಿನಲ್ಲಿಯೇ ಅತ್ಯಂತ ಪೀಡಿತನಾಗಿದ್ದನು.
ಧರ್ಮೇಣ ರಂಜಯಾಮಾಸ ಧರ್ಮರಾಜ ಇವ ಪ್ರಜಾಃ ।
ಸ ಲೇಭೇ ಕರ್ಮಣಾ ತೇನ ಪರಮೇಣ ಮಹಾದ್ಯುತಿಃ ।। ೧-೯-೫೮
ಪಿತೄಣಾಮಾಧಿಪತ್ಯಂ ಚ ಲೋಕಪಾಲತ್ವಮೇವ ಚ ।
ಅವನು ಧರ್ಮರಾಜನಂತೆ ಧರ್ಮದಿಂದ ಪ್ರಜೆಗಳನ್ನು ರಂಜಿಸತೊಡಗಿದನು. ಆ ಮಹಾದ್ಯುತಿಯ ಪರಮ ಕರ್ಮಗಳಿಂದ ಅವನಿಗೆ ಪಿತೃಗಳ ಅಧಿಪತ್ಯವೂ ಲೋಕಪಾಲತ್ವವೂ ದೊರೆಯಿತು.
ಮನುಃ ಪ್ರಜಾಪತಿಸ್ತ್ವಾಸೀತ್ಸಾವರ್ಣಃ ಸ ತಪೋಧನಃ ।। ೧-೯-೫೯
ಭಾವ್ಯಃ ಸೋಽನಾಗತೇ ಕಾಲೇ ಮನುಃ ಸಾವರ್ಣಿಕೇಽಂತರೇ ।
ಮೇರುಪೃಷ್ಠೇ ತಪೋ ಘೋರಮದ್ಯಾಪಿ ಚರತಿ ಪ್ರಭುಃ ।। ೧-೯-೬೦
ಮನುವು ಪ್ರಜಾಪತಿಯಾದನು. ತಪೋಧನ ಸಾವರ್ಣನು ಮುಂದೆ ಬರುವ ಕಾಲದಲ್ಲಿ ಸಾವರ್ಣಿಕ ಮನ್ವಂತರದಲ್ಲಿ ಮನುವಾಗುವನು. ಅವನು ಇಂದಿಗೂ ಮೇರುಪರ್ವತದ ಮೇಲೆ ಘೋರ ತಪಸ್ಸನ್ನು ಆಚರಿಸುತ್ತಿದ್ದಾನೆ.
ಭ್ರಾತಾ ಶನೈಶ್ಚರಶ್ಚಾಸ್ಯ ಗ್ರಹತ್ವಮುಪಲಬ್ಧವಾನ್ ।
ನಾಸತ್ಯೌ ಯೌ ಸಮಾಖ್ಯಾತೌ ಸ್ವರ್ವೈದ್ಯೌ ತೌ ಬಭೂವತುಃ ।। ೧-೯-೬೧
ಸಹೋದರ ಶನೈಶ್ಚರನಿಗೆ ಗ್ರಹತ್ವವು ದೊರಕಿತು. ಮತ್ತು ನಾಸತ್ಯರೆಂದು ವಿಖ್ಯಾತರಾದ ಅಶ್ವಿನಿಯರು ದೇವತೆಗಳ ವೈದ್ಯರಾದರು.
ಸೇವತೋಽಪಿ ತಥಾ ರಾಜನ್ನಶ್ವಾನಾಂ ಶಾಂತಿದೋಽಭವತ್ ।
ತ್ವಷ್ಟಾ ತು ತೇಜಸಾ ತೇನ ವಿಷ್ಣೋಶ್ಚಕ್ರಮಕಲ್ಪಯತ್ ।। ೧-೯-೬೨
ತದಪ್ರತಿಹತಂ ಯುದ್ಧೇ ದಾನವಾಂತಚಿಕೀರ್ಷಯಾ ।
ಅವರು ಕುದುರೆಗಳ ಸೇವೆಮಾಡುವವರಿಗೆ ಶಾಂತಿಯನ್ನು ನೀಡುತ್ತಾರೆ. ತ್ವಷ್ಟನಾದರೋ ಕೊರೆದ ಸೂರ್ಯನ ತೇಜಸ್ಸಿನಿಂದ ದಾನವರ ಸಂಹಾರಕ್ಕಾಗಿ ಯುದ್ಧಗಳಲ್ಲಿ ಎಂದೂ ವ್ಯರ್ಥವಾಗದ ವಿಷ್ಣುವಿನ ಚಕ್ರವನ್ನು ನಿರ್ಮಿಸಿದನು.
ಯವೀಯಸೀ ತಯೋರ್ಯಾ ತು ಯಮೀ ಕನ್ಯಾ ಯಶಸ್ವಿನೀ ।। ೧-೯-೬೩ ಅಭವತ್ಸಾ ಸರಿಛ್ರೇಷ್ಠಾ ಯಮುನಾ ಲೋಕಭಾವಿನೀ ।
ಅವಳಿಗಳಲ್ಲಿ ಒಬ್ಬಳಾದ ಯಶಸ್ವಿನೀ ಕನ್ಯೆ ಯಮಿಯು ಲೋಕಭಾವಿನೀ ಸರಿತ ಶ್ರೇಷ್ಠೆ ಯಮುನೆಯಾದಳು.
ಮನುರಿತ್ಯುಚ್ಯತೇ ಲೋಕೇ ಸಾವರ್ಣ ಇತಿ ಚೋಚ್ಯತೇ ।। ೧-೯-೬೪
ದ್ವಿತೀಯೋ ಯಃ ಸುತಸ್ತಸ್ಯ ಮನೋರ್ಭ್ರಾತಾ ಶನೈಶ್ಚರಃ ।
ಗ್ರಹತ್ವಂ ಸ ಚ ಲೇಭೇ ವೈ ಸರ್ವಲೋಕಾಭಿಪೂಜಿತಮ್ ।। ೧-೯-೬೫
ಮನುವನ್ನು ಲೋಕದಲ್ಲಿ ಮನುವೆಂದೂ ಮತ್ತು ಸಾವರ್ಣನೆಂದೂ ಕರೆಯುತ್ತಾರೆ. ಸೂರ್ಯನ ಎರಡನೆಯ ಮಗ, ಮನುವಿನ ಸಹೋದರ, ಶನೈಶ್ಚರನು ಗ್ರಹತ್ವವನ್ನು ಪಡೆದು ಸರ್ವಲೋಕಗಳಲ್ಲಿ ಪೂಜಿತನಾಗಿದ್ದಾನೆ.
ಯ ಇದಂ ಜನ್ಮ ದೇವಾನಾಂ ಶೃಣುಯಾದ್ವಾಪಿ ಧಾರಯೇತ್ ।
ಆಪದ್ಭ್ಯಃ ಸ ವಿಮುಚ್ಯೇತ ಪ್ರಾಪ್ನುಯಾಚ್ಚ ಮಹದ್ಯಶಃ ।। ೧-೯-೬೬
ದೇವತೆಗಳ ಜನ್ಮಗಳ ಕುರಿತಾದ ಇದನ್ನು ಯಾರು ಕೇಳುತ್ತಾರೋ ಅಥವಾ ಮನಸ್ಸಿನಲ್ಲಿ ಧಾರಣೆಮಾಡಿಕೊಳ್ಳುತ್ತಾರೋ ಅವರು ಆಪತ್ತುಗಳಿಂದ ಮುಕ್ತರಾಗುತ್ತಾರೆ ಮತ್ತು ಮಹಾ ಯಶಸ್ಸನ್ನು ಪಡೆಯುತ್ತಾರೆ.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಖಿಲಭಾಗೇ ಹರಿವಂಶೇ ಹರಿವಂಶಪರ್ವಣಿ ವೈವಸ್ವತೋತ್ಪತ್ತೌ ನವಮೋಽಧ್ಯಾಯಃ
-
ಸಂಜ್ಞೆಯ ನೆರಳು ಪೃಥ್ವಿಯ ಮೇಲೆ ಬೀಳುತ್ತಿದ್ದ ಕಾರಣ ಅದರಿಂದ ಹುಟ್ಟಿದ ಛಾಯೆಯು ಪೃಥಿವೀ ಎಂದಾದಳು. ↩︎