007: ಮನ್ವಂತರವರ್ಣನಮ್

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಖಿಲಭಾಗೇ ಹರಿವಂಶಃ

ಹರಿವಂಶ ಪರ್ವ

ಅಧ್ಯಾಯ 7

ಸಾರ

ಜನಮೇಜಯ ಉವಾಚ
ಮನ್ವಂತರಾಣಿ ಸರ್ವಾಣಿ ವಿಸ್ತರೇಣ ತಪೋಧನ ।
ತೇಷಾಂ ಸೃಷ್ಟಿಂ ವಿಸೃಷ್ಟಿಂ ಚ ವೈಶಂಪಾಯನ ಕೀರ್ತಯ ।। ೧-೭-೧

ಜನಮೇಜಯನು ಹೇಳಿದನು: “ತಪೋಧನ! ವೈಶಂಪಾಯನ! ಎಲ್ಲ ಮನ್ವಂತರಗಳು, ಅವುಗಳ ಸೃಷ್ಟಿ ಮತ್ತು ಲಯಗಳ ಕುರಿತು ವಿಸ್ತಾರವಾಗಿ ವರ್ಣಿಸು!

ಯಾವಂತೋ ಮನವಶ್ಚೈವ ಯಾವಂತಂ ಕಾಲಮೇವ ಚ ।
ಮನ್ವಂತರಂ ತಥಾ ಬ್ರಹ್ಮಂಶ್ರೋತುಮಿಚ್ಛಾಮಿ ತತ್ತ್ವತಃ ।। ೧-೭-೨

ಬ್ರಹ್ಮನ್! ಎಷ್ಟು ಮನ್ವಂತರಗಳು ಮತ್ತು ಮನುಗಳು ಎಷ್ಟು ಕಾಲದ ಪರ್ಯಂತ ಇರುತ್ತಾರೆ ಎನ್ನುವುದನ್ನು ತತ್ತ್ವತಃ ಕೇಳಲು ಬಯಸುತ್ತೇನೆ.”

ವೈಶಂಪಾಯನ ಊವಾಚ
ನ ಶಕ್ಯೋ ವಿಸ್ತರಸ್ತಾತ ವಕ್ತುಂ ವರ್ಷಶತೈರಪಿ ।
ಮನ್ವಂತರಾಣಾಂ ಕೌರವ್ಯ ಸಂಕ್ಷೇಪಂ ತ್ವೇವ ಮೇ ಶೃಣು ।। ೧-೭-೩

ವೈಶಂಪಾಯನನು ಹೇಳಿದನು: “ತಾತ! ಕೌರವ್ಯ! ಮನ್ವಂತರಗಳ ಕುರಿತು ವಿಸ್ತಾರವಾಗಿ ಹೇಳಲು ನೂರು ವರ್ಷಗಳೂ ಸಾಲದು. ಅವುಗಳ ಕುರಿತು ಸಂಕ್ಷೇಪವಾಗಿ ನನ್ನಿಂದ ಕೇಳು.

ಸ್ವಾಯಂಭುವೋ ಮನುಸ್ತಾತ ಮನುಃ ಸ್ವಾರೋಚಿಷಸ್ತಥಾ ।
ಉತ್ತಮಸ್ತಾಮಸಶ್ಚೈವ ರೈವತಶ್ಚಾಕ್ಷುಷಸ್ತಥಾ ।। ೧-೭-೪

ತಾತ! ಸ್ವಾಯಂಭುವ ಮನು, ಸ್ವಾರೋಚಿಷ ಮನು, ಉತ್ತಮ ಮನು, ತಾಮಸ ಮನು, ರೈವತ ಮನು ಮತ್ತು ನಂತರ ಚಾಕ್ಷುಷ ಮನು.

ವೈವಸ್ವತಸ್ಯ ಕೌರವ್ಯ ಸಾಂಪ್ರತೋ ಮನುರುಚ್ಯತೇ ।
ಸಾವರ್ಣಿಶ್ಚ ಮನುಸ್ತಾತ ಭೌತ್ಯೋ ರೌಚ್ಯಸ್ತಥೈವ ಚ ।। ೧-೭-೫
ತಥೈವ ಮೇರುಸಾವರ್ಣಾಶ್ಚತ್ವಾರೋ ಮನವಃ ಸ್ಮೃತಾಃ ।
ಅತೀತಾ ವರ್ತಮಾನಾಶ್ಚ ತಥೈವಾನಾಗತಾಶ್ಚ ಯೇ ।। ೧-೭-೬

ಕೌರವ್ಯ! ವರ್ತಮಾನದಲ್ಲಿ ವೈವಸ್ವತನು ಮನುವೆಂದು ಹೇಳುತ್ತಾರೆ. ತಾತ! ಸಾವರ್ಣಿ ಮನು, ಭೌತ್ಯ ಮನು, ರೌಚ್ಯಮನು ಮತ್ತು ನಾಲ್ವರು ಮೇರು ಸಾವರ್ಣರು1 ಮನುಗಳೆಂದು ತಿಳಿಯಲ್ಪಟ್ಟಿದ್ದಾರೆ. ಇವರು ಆಗಿ ಹೋದ, ವರ್ತಮಾನ ಮತ್ತು ಮುಂದೆ ಬರುವ ಮನುಗಳಾಗಿರುತ್ತಾರೆ.

ಕೀರ್ತಿತಾ ಮನವಸ್ತಾತ ಮಯೈತೇ ತು ಯಥಾಶ್ರುತಮ್ ।
ಋಷೀಂಸ್ತೇಷಾಂ ಪ್ರವಕ್ಷ್ಯಾಮಿ ಪುತ್ರಾಂದೇವಗಣಾಂಸ್ತಥಾ ।। ೧-೭-೭

ತಾತ! ನಾನು ಕೇಳಿದಂತೆ ಈ ಮನುಗಳ ಹೆಸರುಗಳನ್ನು ಹೇಳಿದ್ದೇನೆ. ಈಗ ಅವರ ಋಷಿಗಳು, ಪುತ್ರರು ಮತ್ತು ದೇವಗಣಗಳ ಕುರಿತು ಹೇಳುತ್ತೇನೆ.

ಮರೀಚಿರತ್ರಿರ್ಭಗವಾನಂಗಿರಾಃ ಪುಲಹಃ ಕ್ರತುಃ ।
ಪುಲಸ್ತ್ಯಶ್ಚ ವಸಿಷ್ಠಶ್ಚ ಸಪ್ತೈತೇ ಬ್ರಹ್ಮಣಃ ಸುತಾಃ ।। ೧-೭-೮
ಉತ್ತರಸ್ಯಾಂ ದಿಶಿ ತಥಾ ರಾಜನ್ ಸಪ್ತರ್ಷಯೋಽಪರೇ ।
ದೇವಾಶ್ಚ ಶಾಂತರಜಸಸ್ತಥಾ ಪ್ರಕೃತಯಃ ಪರೇ ।
ಯಾಮಾ ನಾಮ ತಥಾ ದೇವಾ ಆಸನ್ಸ್ವಾಯಂಭುವೇಽಂತರೇ ।। ೧-೭-೯

ರಾಜನ್! ಸ್ವಾಯಂಭುವ ಮನ್ವಂತರದಲ್ಲಿ ಬೇರೆಯೇ ಸಪ್ತರ್ಷಿಗಳಿದ್ದರು: ಮರೀಚಿ, ಅತ್ರಿ, ಭಗವಾನ್ ಅಂಗಿರಾ, ಪುಲಹ, ಕ್ರತು, ಪುಲಸ್ತ್ಯ ಮತ್ತು ವಸಿಷ್ಠ ಈ ಏಳು ಬ್ರಹ್ಮನ ಸುತರು ಉತ್ತರ ದಿಕ್ಕಿನಲ್ಲಿ ವಾಸಿಸುತ್ತಿದ್ದರು. ಆ ಮನ್ವಂತರದಲ್ಲಿ ಶಾಂತರಜಾ, ಪ್ರಕೃತಿ ಮತ್ತು ಯಾಮಾ ಎಂಬ ಹೆಸರಿನ ದೇವತೆಗಳು ಪೂಜಿಸಲ್ಪಡುತ್ತಿದ್ದರು.

ಅಗ್ನೀಧ್ರಶ್ಚಾಗ್ನಿಬಾಹುಶ್ಚ ಮೇಧಾ ಮೇಧಾತಿಥಿರ್ವಸುಃ ।
ಜ್ಯೋತಿಷ್ಮಾಂದ್ಯುತಿಮಾನ್ ಹವ್ಯಃ ಸವನಃ ಪುತ್ರ ಏವ ಚ ।। ೧-೭-೧೦
ಮನೋಃ ಸ್ವಾಯಂಭುವಸ್ಯೈತೇ ದಶ ಪುತ್ರಾ ಮಹೌಜಸಃ ।
ಏತತ್ತೇ ಪ್ರಥಮಂ ರಾಜನ್ಮನ್ವಂತರಮುದಾಹೃತಮ್ ।। ೧-೭-೧೧

ಸ್ವಾಯಂಭುವ ಮನುವಿಗೆ ಹತ್ತು ಮಹೌಜಸ ಪುತ್ರರಿದ್ದರು: ಅಗ್ನೀಧ್ರ, ಅಗ್ನಿಬಾಹು, ಮೇಧಾ, ಮೇಧಾತಿಥಿ, ವಸು, ಜ್ಯೋತಿಷ್ಮಾನ್, ದ್ಯುತಿಮಾನ್, ಹವ್ಯ, ಸವನ ಮತ್ತು ಪುತ್ರ. ರಾಜನ್! ಹೀಗೆ ಮೊದಲನೆಯ ಮನ್ವಂತರದ ಕುರಿತು ಹೇಳಿಯಾಯಿತು.

ಔರ್ವೋ ವಸಿಷ್ಠಪುತ್ರಶ್ಚ ಸ್ತಂಬಃ ಕಾಶ್ಯಪ ಏವ ಚ ।
ಪ್ರಾಣೋ ಬೃಹಸ್ಪತಿಶ್ಚೈವ ದತ್ತೋ ನಿಶ್ಚ್ಯವನಸ್ತಥಾ ।। ೧-೭-೧೨
ಏತೇ ಮಹರ್ಷಯಸ್ತಾತ ವಾಯುಪ್ರೋಕ್ತಾ ಮಹಾವ್ರತಾಃ ।
ದೇವಾಶ್ಚ ತುಷಿತಾ ನಾಮ ಸ್ಮೃತಾಃ ಸ್ವಾರೋಚಿಷೇಽಂತರೇ ।। ೧-೭-೧೩

ತಾತ! ಸ್ವಾರೋಚಿಷ ಮನ್ವಂತರದಲ್ಲಿ ವಸಿಷ್ಠನ ಮಗ ಔರ್ವ, ಸ್ತಂಬ, ಕಾಶ್ಯಪ, ಪ್ರಾಣ, ಬೃಹಸ್ಪತಿ, ದತ್ತ ಮತ್ತು ನಿಶ್ಚ್ಯವನರು ಮಹಾವ್ರತ ಮಹರ್ಷಿಗಳೆಂದು ವಾಯುವು ಹೇಳಿದ್ದಾನೆ. ಆ ಮನ್ವಂತರದ ದೇವತೆಯ ಹೆಸರು ತುಷಿತಾ ಎಂದು ಹೇಳಲಾಗಿದೆ.

ಹವಿರ್ಧ್ರಃ ಸುಕೃತಿರ್ಜ್ಯೋತಿರಾಪೋಮೂರ್ತಿರಯಸ್ಮಯಃ ।
ಪ್ರತಿಥಶ್ಚ ನಭಸ್ಯಶ್ಚ ನಭ ಊರ್ಜಸ್ತಥೈವ ಚ ।। ೧-೭-೧೪
ಸ್ವಾರೋಚಿಷಸ್ಯ ಪುತ್ರಾಸ್ತೇ ಮನೋಸ್ತಾತ ಮಹಾತ್ಮನಃ ।
ಕೀರ್ತಿತಾಃ ಪೃಥಿವೀಪಾಲ ಮಹಾವೀರ್ಯಪರಾಕ್ರಮಾಃ ।। ೧-೭-೧೫

ತಾತ! ಪೃಥಿವೀಪಾಲ! ಹವಿರ್ಧ, ಸುಕೃತಿ, ಜ್ಯೋತಿ, ಆಪ, ಮೂರ್ತಿ, ಅಯಸ್ಮಯ, ಪ್ರತಿಥ, ನಭಸ, ನಭ, ಊರ್ಜಸ ಈ ಮಹಾತ್ಮರು ಸ್ವಾರೋಚಿಷ ಮನುವಿನ ಮಹಾವೀರ್ಯಪರಾಕ್ರಮೀ ಪುತ್ರರೆಂದು ಹೇಳಿದ್ದಾರೆ.

ದ್ವಿತೀಯಮೇತತ್ಕಥಿತಂ ತವ ಮನ್ವಂತರಂ ಮಯಾ ।
ಇದಂ ತೃತೀಯಂ ವಕ್ಷ್ಯಾಮಿ ತನ್ನಿಬೋಧ ನರಾಧಿಪ ।। ೧-೭-೧೬

ಎರಡನೆಯ ಮನ್ವಂತರದ ಕುರಿತು ನಾನು ಹೇಳಿಯಾಯಿತು. ನರಾಧಿಪ! ಇನ್ನು ಮೂರನೆಯದರ ಕುರಿತು ಹೇಳುತ್ತೇನೆ. ಕೇಳು.

ವಸಿಷ್ಠಪುತ್ರಾಃ ಸಪ್ತಾಸನ್ವಾಸಿಷ್ಠಾ ಇತಿ ವಿಶ್ರುತಾಃ ।
ಹಿರಣ್ಯಗರ್ಭಸ್ಯ ಸುತಾ ಊರ್ಜ್ಜಾ ನಾಮ ಸುತೇಜಸಃ ।। ೧-೭-೧೭
ಋಷಯೋಽತ್ರ ಮಯಾ ಪ್ರೋಕ್ತಾಃ ಕೀರ್ತ್ಯಮಾನಾನ್ನಿಬೋಧ ಮೇ ।
ಔತ್ತಮೇಯಾನ್ಮಹಾರಾಜ ದಶ ಪುತ್ರಾನ್ಮನೋರಮಾನ್ ।। ೧-೭-೧೮
ಇಷ ಊರ್ಜಸ್ತನೂಜಶ್ಚ ಮಧುರ್ಮಾಧವ ಏವ ಚ ।
ಶುಚಿಃ ಶುಕ್ರಃ ಸಹಶ್ಚೈವ ನಭಸ್ಯೋ ನಭ ಏವ ಚ ।। ೧-೭-೧೯

ಮಹಾರಾಜ! ಉತ್ತಮ ಮನ್ವಂತರದಲ್ಲಿ ವಾಸಿಷ್ಠರೆಂದು ವಿಶ್ರುತರಾದ ಏಳು ವಸಿಷ್ಠಪುತ್ರರು ಋಷಿಗಳಾಗಿದ್ದರು. ಅವರು ಮೊದಲು ಹಿರಣ್ಯಗರ್ಭನ ಮಹಾತೇಜಸ್ವೀ ಊರ್ಜ್ವಾ ಎಂಬ ಹೆಸರಿನ ಮಕ್ಕಳಾಗಿದ್ದರು. ಈಗ ಉತ್ತಮ ಮನುವಿನ ಹತ್ತು ಮನೋರಮ ಪುತ್ರರ ಕುರಿತು ಹೇಳುತ್ತೇನೆ: ಇಷ, ಊರ್ಜ, ತನೂಜ, ಮಧು, ಮಾಧವ, ಶುಚಿ, ಶುಕ್ರ, ಸಹಶ, ನಭಸ ಮತ್ತು ನಭ.

ಭಾನವಸ್ತತ್ರ ದೇವಾಶ್ಚ ಮನ್ವಂತರಮುದಾಹೃತಮ್ ।
ಮನ್ವಂತರಂ ಚತುರ್ಥಂ ತೇ ಕಥಯಿಷ್ಯಾಮಿ ತಚ್ಛೃಣು ।। ೧-೭-೨೦

ಆ ಮನ್ವಂತರದಲ್ಲಿ ಭಾನುವು ದೇವತೆಯಾಗಿದ್ದನು. ಈಗ ನಾಲ್ಕನೆಯ ಮನ್ವಂತರದ ಕುರಿತು ಹೇಳುತ್ತೇನೆ. ಕೇಳು.

ಕಾವ್ಯಃ ಪೃಥುಸ್ತಥೈವಾಗ್ನಿರ್ಜನ್ಯುರ್ಧಾತಾ ಚ ಭಾರತ ।
ಕಪೀವಾನಕಪೀವಾಂಶ್ಚ ತತ್ರ ಸಪ್ತರ್ಷಯೋಽಪರೇ ।। ೧-೭-೨೧

ಭಾರತ! ನಾಲ್ಕನೆಯ ತಾಮಸ ಮನ್ವಂತರದಲ್ಲಿ ಕಾವ್ಯ, ಪೃಥು, ಅಗ್ನಿ, ಜನ್ಯು, ಧಾತಾ, ಕಪೀವಾನ ಮತ್ತು ಅಕಪೀವಾನ ಇವರು ಸಪ್ತರ್ಷಿಗಳಾಗಿದ್ದರು.

ಪುರಾಣೇ ಕಥಿತಾಸ್ತಾತ ಪುತ್ರಾಃ ಪೌತ್ರಾಶ್ಚ ಭಾರತ ।
ಸತ್ಯಾ ದೇವಗಣಾಶ್ಚೈವ ತಾಮಸಸ್ಯಾಂತರೇ ಮನೋಃ ।। ೧-೭-೨೨

ಭಾರತ! ತಾತ! ಪುರಾಣಗಳಲ್ಲಿ ಇವರ ಪುತ್ರ-ಪೌತ್ರರ ಕುರಿತಾದ ವರ್ಣನೆಯಿದೆ. ತಾಮಸ ಮನುವಿನ ಕಾಲದಲ್ಲಿ ಸತ್ಯಾ ಎಂಬ ದೇವಗಣವು ಪೂಜಿಸಲ್ಪಡುತ್ತಿತ್ತು.

ಪುತ್ರಾಂಶ್ಚೈವ ಪ್ರವಕ್ಷ್ಯಾಮಿ ತಾಮಸಸ್ಯ ಮನೋರ್ನೃಪ ।
ದ್ಯುತಿಸ್ತಪಸ್ಯಃ ಸುತಪಾಸ್ತಪೋಮೂಲಸ್ತಪೋಧನಃ ।। ೧-೭-೨೩
ತಪೋರತಿರಕಲ್ಮಾಷಸ್ತನ್ವೀ ಧನ್ವೀ ಪರಂತಪಃ ।
ತಾಮಸಸ್ಯ ಮನೋರೇತೇ ದಶ ಪುತ್ರಾ ಮಹಾಬಲಾಃ ।। ೧-೭-೨೪

ನೃಪ! ಈಗ ನಾನು ತಾಮಸ ಮನುವಿನ ಪುತ್ರರ ಕುರಿತು ಹೇಳುತ್ತೇನೆ. ದ್ಯುತಿ, ತಪಸ್ಯ, ಸುತಪಾ, ತಪೋಮೂಲ, ತಪೋಧನ, ತಪೋರತಿ, ಕಲ್ಮಾಷ, ತನ್ವೀ, ಧರ್ಮೀ ಮತ್ತು ಪರಂತಪ ಈ ಮಹಾಬಲರು ತಾಮಸ ಮನುವಿನ ಹತ್ತು ಮಕ್ಕಳು.

ವಾಯುಪ್ರೋಕ್ತಾ ಮಹಾರಾಜ ಪಂಚಮಂ ತದನಂತರಮ್ ।
ವೇದಬಾಹುರ್ಯದುಧ್ರಶ್ಚ ಮುನಿರ್ವೇದಶಿರಾಸ್ತಥಾ ।। ೧-೭-೨೫
ಹಿರಣ್ಯರೋಮಾ ಪರ್ಜನ್ಯ ಊರ್ಧ್ವಬಾಹುಶ್ಚ ಸೋಮಜಃ ।
ಸತ್ಯನೇತ್ರಸ್ತಥಾತ್ರೇಯ ಏತೇ ಸಪ್ತರ್ಷಯೋಽಪರೇ ।। ೧-೭-೨೬

ಮಹಾರಾಜ! ವಾಯುವು ಹೇಳಿದಂತೆ ಐದನೆಯ ಮನ್ವಂತರದಲ್ಲಿ ವೇದಬಾಹು, ಯದುಧ್ರ, ವೇದಶಿರಾ ಮುನಿ, ಹಿರಣ್ಯರೋಮಾ, ಪರ್ಜನ್ಯ, ಸೋಮನ ಮಗ ಊರ್ಧ್ವಬಾಹು ಮತ್ತು ಅತ್ರಿಯ ಮಗ ಸತ್ಯನೇತ್ರ ಇವರು ಸಪ್ತರ್ಷಿಗಳಾಗಿದ್ದರು.

ದೇವಾಶ್ಚ ಭೂತರಜಸಸ್ತಥಾ ಪ್ರಕೃತಯೋಽಪರೇ ।
ಪಾರಿಪ್ಲವಶ್ಚ ರೈಭ್ಯಶ್ಚ ಮನೋರಂತರಮುಚ್ಯತೇ ।। ೧-೭-೨೭

ಆ ಮನ್ವಂತರದಲ್ಲಿ ಭೂತರಜಸ, ಪೃಕೃತಿ, ಪಾರಿಪ್ಲವ ಮತ್ತು ರೈಭ್ಯರು ದೇವತೆಗಳಾಗಿದ್ದರು ಎಂದು ಹೇಳುತ್ತಾರೆ.

ಅಥ ಪುತ್ರಾನಿಮಾಂಸ್ತಸ್ಯ ನಿಬೋಧ ಗದತೋ ಮಮ ।
ಧೃತಿಮಾನವ್ಯಯೋ ಯುಕ್ತಸ್ತತ್ತ್ವದರ್ಶೀ ನಿರುತ್ಸುಕಃ ।। ೧-೭-೨೮
ಅರಣ್ಯಶ್ಚ ಪ್ರಕಾಶಶ್ಚ ನಿರ್ಮೋಹಃ ಸತ್ಯವಾಕ್ಕವಿಃ ।
ರೈವತಸ್ಯ ಮನೋಃ ಪುತ್ರಾಃ ಪಂಚಮಂ ಚೈತದಂತರಮ್ ।। ೧-೭-೨೯

ಐದನೆಯ ಮನ್ವಂತರದಲ್ಲಿ ಮನುವಾಗಿದ್ದ ರೈವತನ ಪುತ್ರರ ಕುರಿತು ನಾನು ಹೇಳುವುದನ್ನು ಕೇಳು: ಧೃತಿಮಾನ, ಅವ್ಯಯ, ಯುಕ್ತ, ತತ್ತ್ವದರ್ಶಿ, ನಿರುತ್ಸುಕ, ಅರಣ್ಯ, ಪ್ರಕಾಶ, ನಿರ್ಮೋಹ, ಸತ್ಯವಾಕ್ ಮತ್ತು ಕವಿ.

ಷಷ್ಠಂ ತೇ ಸಂಪ್ರವಕ್ಷ್ಯಾಮಿ ತನ್ನಿಬೋಧ ನರಾಧಿಪ ।
ಭೃಗುರ್ನಭೋ ವಿವಸ್ವಾಂಶ್ಚ ಸುಧಾಮಾ ವಿರಜಾಸ್ತಥಾ ।। ೧-೭-೩೦
ಅತಿನಾಮಾ ಸಹಿಷ್ಣುಶ್ಚ ಸಪ್ತೈತೇ ವೈ ಮಹರ್ಷಯಃ ।
ಚಾಕ್ಷುಷಸ್ಯಾಂತರೇ ತಾತ ಮನೋರ್ದೇವಾನಿಮಾಂಶೃಣು।। ೧-೭-೩೧

ನರಾಧಿಪ! ಆರನೆಯದಾದ ಚಾಕ್ಷುಷ ಮನ್ವಂತರದ ಕುರಿತು ಹೇಳುತ್ತೇನೆ. ಕೇಳು. ಭೃಗು, ನಭ, ವಿವಸ್ವಾನ್, ಸುಧಾಮಾ, ವಿರಜಾ, ಅತಿನಾಮಾ, ಮತ್ತು ಸಹಿಷ್ಣು ಇವರುಗಳು ಆ ಮನ್ವಂತರದ ಸಪ್ತಮಹರ್ಷಿಗಳು. ಆ ಸಮಯದ ದೇವತೆಗಳ ಕುರಿತು ಕೇಳು.

ಆದ್ಯಾಃ ಪ್ರಭೂತಾ ಋಭವಃ ಪೃಥಗ್ಭಾವಾ ದಿವೌಕಸಃ ।
ಲೇಖಾಶ್ಚ ನಾಮ ರಾಜೇಂದ್ರ ಪಂಚ ದೇವಗಣಾಃ ಸ್ಮೃತಾಃ ।
ಋಷೇರಂಗಿರಸಃ ಪುತ್ರಾಃ ಮಹಾತ್ಮಾನೋ ಮಹೌಜಸಃ ।। ೧-೭-೩೨
ನಾಡ್ವಲೇಯಾ ಮಹಾರಾಜ ದಶ ಪುತ್ರಾಶ್ಚ ವಿಶ್ರುತಾಃ ।
ಊರುಪ್ರಭೃತಯೋ ರಾಜನ್ಷಷ್ಠಂ ಮನ್ವಂತರಂ ಸ್ಮೃತಮ್।। ೧-೭-೩೩

ರಾಜೇಂದ್ರ! ಆದ್ಯ, ಪ್ರಭೂತ, ಋಭು, ಭಾವಾ, ಮತ್ತು ಲೇಖಾ ಎನ್ನುವ ಐದು ಪಂಚ ದೇವಗಣಗಳನ್ನು ಹೇಳುತ್ತಾರೆ. ಅವರು ಸ್ವರ್ಗದಲ್ಲಿ ವಾಸಿಸುತ್ತಿದ್ದರು. ಆ ಮಹಾತ್ಮ ಮಹೌಜಸರು ಋಷಿ ಅಂಗಿರಸನ ಪುತ್ರರಾಗಿದ್ದರು. ಅವರ ತಾಯಿ ನಡ್ವಲಾ. ಮಹಾರಾಜ! ರಾಜನ್! ಊರುವೇ ಮೊದಲಾದ ಹತ್ತು ಮಕ್ಕಳು ಆರನೆಯ ಮನು ಚಾಕ್ಷುಷನ ಮಕ್ಕಳೆಂದು ವಿಶ್ರುತರಾಗಿದ್ದರು.

ಅತ್ರಿರ್ವಸಿಷ್ಠೋ ಭಗವಾನ್ ಕಶ್ಯಪಶ್ಚ ಮಹಾನೃಷಿಃ ।
ಗೌತಮೋಽಥ ಭರದ್ವಾಜೋ ವಿಶ್ವಾಮಿತ್ರಸ್ತಥೈವ ಚ ।। ೧-೭-೩೪
ತಥೈವ ಪುತ್ರೋ ಭಗವಾನೃಚೀಕಸ್ಯ ಮಹಾತ್ಮನಃ ।
ಸಪ್ತಮೋ ಜಮದಗ್ನಿಶ್ಚ ಋಷಯಃ ಸಾಂಪ್ರತಂ ದಿವಿ ।। ೧-೭-೩೫

ಏಳನೆಯ ಈ ವೈವಸ್ವತ ಮನ್ವಂತರದಲ್ಲಿ ಅತ್ರಿ, ವಸಿಷ್ಠ, ಭಗವಾನ್ ಕಶ್ಯಪ ಮಹಾನೃಷಿ, ಗೌತಮ, ಭರದ್ವಾಜ, ವಿಶ್ವಾಮಿತ್ರ ಮತ್ತು ಭಗವಾನ್ ಮಹಾತ್ಮ ಋಚೀಕನ ಪುತ್ರ ಜಮದಗ್ನಿ ಈ ಸಪ್ತ ಋಷಿಗಳು ದಿವಿಯಲ್ಲಿ ನೆಲೆಸಿದ್ದಾರೆ.

ಸಾಧ್ಯಾ ರುದ್ರಾಶ್ಚ ವಿಶ್ವೇ ಚ ಮರುತೋ ವಸವಸ್ತಥಾ ।
ಆದಿತ್ಯಾಶ್ಚಾಶ್ವಿನೌ ಚೈವ ದೇವೌ ವೈವಸ್ವತೌ ಸ್ಮೃತೌ ।। ೧-೭-೩೬
ಮನೋರ್ವೈವಸ್ವತಸ್ಯೈತೇ ವರ್ತಂತೇ ಸಾಂಪ್ರತೇಽಂತರೇ ।
ಈಕ್ಷ್ವಾಕುಪ್ರಮುಖಾಶ್ಚೈವ ದಶ ಪುತ್ರಾ ಮಹಾತ್ಮನಃ ।। ೧-೭-೩೭

ನಡೆಯುತ್ತಿರುವ ಈ ವೈವಸ್ವತ ಮನ್ವಂತರದಲ್ಲಿ ಸಾಧ್ಯರು, ರುದ್ರರು, ವಿಶ್ವೇದೇವರು, ಮರುತ್ತರು, ವಸುಗಳು, ಆದಿತ್ಯರು, ಮತ್ತು ವಿವಸ್ವತನ ಮಕ್ಕಳು ಅಶ್ವಿನಿಯರಿಬ್ಬರು ದೇವತೆಗಳೆಂದು ಹೇಳುತ್ತಾರೆ. ಮಹಾತ್ಮ ವೈವಸ್ವತನಿಗೆ ಇಕ್ಷ್ವಾಕುವೇ ಮೊದಲಾದ ಹತ್ತು ಪುತ್ರರಿದ್ದಾರೆ.

ಏತೇಷಾಂ ಕೀರ್ತಿತಾನಾಂ ತು ಮಹರ್ಷೀಣಾಂ ಮಹೌಜಸಾಮ್ ।
ರಾಜಪುತ್ರಾಶ್ಚ ಪೌತ್ರಾಶ್ಚ ದಿಕ್ಷು ಸರ್ವಾಸು ಭಾರತ ।। ೧-೭-೩೮

ಈ ಮಹೌಜಸ ಮಹರ್ಷಿಗಳ ರಾಜಪುತ್ರರು ಮತ್ತು ಪೌತ್ರರ ಕೀರ್ತಿಗಳು ಸರ್ವ ದಿಕ್ಕುಗಳಲ್ಲಿಯೂ ಹರಡಿವೆ.

ಮನ್ವಂತರೇಷು ಸರ್ವೇಷು ಪ್ರಾಗ್ದಿಶಃ ಸಪ್ತಸಪ್ತಕಾಃ ।
ಸ್ಥಿತಾ ಲೋಕವ್ಯವಸ್ಥಾರ್ಥಂ ಲೋಕಸಂರಕ್ಷಣಾಯ ಚ ।। ೧-೭-೩೯

ಎಲ್ಲ ಮನ್ವಂತರಗಳಲ್ಲಿಯೂ ಹಿಂದೆ ಹೇಳಿದ ನಲವತ್ತೊಂಭತ್ತು ಋಷಿಗಳು ಲೋಕವನ್ನು ವ್ಯವಸ್ಥೆಯಲ್ಲಿಡಲೂ ಮತ್ತು ಲೋಕ ಸಂರಕ್ಷಣೆಗೂ ನೆಲೆಸಿರುತ್ತಾರೆ.

ಮನ್ವಂತರೇ ವ್ಯತಿಕ್ರಾಂತೇ ಚತ್ವಾರಃ ಸಪ್ತಕಾ ಗಣಾಃ ।
ಕೃತ್ವಾ ಕರ್ಮ ದಿವಂ ಯಾಂತಿ ಬ್ರಹ್ಮಲೋಕಮನಾಮಯಮ್।। ೧-೭-೪೦

ಪ್ರತಿ ಮನ್ವಂತರವು ಮುಗಿಯಲು ಅವರಲ್ಲಿ ಇಪ್ಪತ್ತೆಂಟು ಋಷಿಗಳು ತಮ್ಮ ಕರ್ಮಗಳನ್ನು ಪೂರೈಸಿ ಸ್ವರ್ಗವನ್ನು ಸೇರಿ ಅನಾಯಮ ಬ್ರಹ್ಮಲೋಕವನ್ನು ಪಡೆಯುತ್ತಾರೆ.

ತತೋಽನ್ಯೇ ತಪಸಾ ಯುಕ್ತಾಃ ಸ್ಥಾನಮಾಪೂರಯಂತ್ಯುತ ।
ಅತೀತಾ ವರ್ತಮಾನಾಶ್ಚ ಕ್ರಮೇಣೈತೇನ ಭಾರತ ।। ೧-೭-೪೧

ಭಾರತ! ಮನ್ವಂತರದ ಅಂತ್ಯದಲ್ಲಿ ಇತರ ಋಷಿಗಳು ತಪೋಬಲದಿಂದ ಅವರ ಪದವನ್ನು ಪಡೆದು ಸ್ಥಾನಗಳನ್ನು ಪೂರೈಸುತ್ತಾರೆ.

ಏತಾನ್ಯುಕ್ತಾನಿ ಕೌರವ್ಯ ಸಪ್ತಾತೀತಾನಿ ಭಾರತ ।
ಮನ್ವಂತರಾಣಿ ಷಟ್ಚಾಪಿ ನಿಬೋಧಾನಾಗತಾನಿ ಮೇ ।। ೧-೭-೪೨

ಭಾರತ! ಕೌರವ್ಯ! ಹೀಗೆ ಕಳೆದು ಹೋಗಿರುವ ಆರನ್ನು ಸೇರಿ ಏಳು ಮನ್ವಂತರಗಳ ಕುರಿತು ಹೇಳಿಯಾಯಿತು. ಈಗ ಮುಂದೆ ಬರುವ ಮನ್ವಂತರಗಳ ಕುರಿತು ಕೇಳು.

ಸಾವರ್ಣಾ ಮನವಸ್ತಾತ ಪಂಚ ತಾಂಶ್ಚ ನಿಬೋಧ ಮೇ ।
ಏಕೋ ವೈವಸ್ವತಸ್ತೇಷಾಂ ಚತ್ವಾರಸ್ತು ಪ್ರಜಾಪತೇಃ ।। ೧-೭-೪೩
ಪರಮೇಷ್ಠಿಸುತಾಸ್ತಾತ ಮೇರುಸಾವರ್ಣತಾಂಗತಾಃ ।
ದಕ್ಷಸ್ಯೈತೇ ಹಿ ದೌಹಿತ್ರಾಃ ಪ್ರಿಯಾಯಾಸ್ತನಯಾ ನೃಪ ।
ಮಹಾಂತಸ್ತಪಸಾ ಯುಕ್ತಾ ಮೇರುಪೃಷ್ಠೇ ಮಹೌಜಸಃ ।। ೧-೭-೪೪

ತಾತ! ಸಾವರ್ಣ ಮನುಗಳು ಐವರು. ಅವರ ಕುರಿತು ನನ್ನಿಂದ ಕೇಳು. ಅವರಲ್ಲಿ ಓರ್ವನು ವಿವಸ್ವತ ಸೂರ್ಯನ ಪುತ್ರನು. ಉಳಿದ ನಾಲ್ವರು ಪ್ರಜಾಪತಿ ಪರಮೇಷ್ಠಿಯ ಸುತರು. ಅವರು ದಕ್ಷನ ಮಗಳು ಪ್ರಿಯೆಯ ಪುತ್ರರು. ಆ ಮಹೌಜಸರು ಮೇರುಪರ್ವತದ ಮೇಲೆ ಮಹಾ ತಪಸ್ಸನ್ನು ಗೈಯುತ್ತಿರುವುದರಿಂದ ಅವರು ಮೇರುಸಾವರ್ಣಿಯರಾದರು.

ರುಚೇಃ ಪ್ರಜಾಪತೇಃ ಪುತ್ರೋ ರೌಚ್ಯೋ ನಾಮ ಮನುಃ ಸ್ಮೃತಃ ।
ಭೂತ್ಯಾಂ ಚೋತ್ಪಾದಿತೋ ದೇವ್ಯಾಂ ಭೌತ್ಯೋ ನಾಮ ರುಚೇಃ ಸುತಃ ।। ೧-೭-೪೫

ಪ್ರಜಾಪತಿ ರುಚಿಯ ಪುತ್ರನನ್ನು ರೌಚ್ಯ ಮನುವೆಂದು ಹೇಳುತ್ತಾರೆ. ದೇವಿ ಭೂತಿಯಲ್ಲಿ ಹುಟ್ಟಿದ ರುಚಿಯ ಸುತನನ್ನು ಭೌತ್ಯ ಎಂದು ಕರೆಯುತ್ತಾರೆ.

ಅನಾಗತಾಶ್ಚ ಸಪ್ತೈತೇ ಸ್ಮೃತಾ ದಿವಿ ಮಹರ್ಷಯಃ ।
ಮನೋರಂತರಮಾಸಾದ್ಯ ಸಾವರ್ಣಸ್ಯ ಹ ತಾಂಶೃಣು ।। ೧-೭-೪೬

ಬರುವ ಸಾವರ್ಣಿ ಮನ್ವಂತರದಲ್ಲಿ ದಿವಿಯಲ್ಲಿ ಕಾಣುವ ಸಪ್ತರ್ಷಿಗಳ ಕುರಿತು ಕೇಳು.

ರಾಮೋ ವ್ಯಾಸಸ್ತಥಾತ್ರೇಯೋ ದೀಪ್ತಿಮಾನಿತಿ ವಿಶ್ರುತಃ ।
ಭಾರದ್ವಾಜಸ್ತಥಾ ದ್ರೌಣೀರಶ್ವತ್ಥಾಮಾ ಮಹಾದ್ಯುತಿಃ ।। ೧-೭-೪೭
ಗೌತಮಸ್ಯಾತ್ಮಜಶ್ಚೈವ ಶರದ್ವಾನ್ ಗೌತಮಃ ಕೃಪಃ ।
ಕೌಶಿಕೋ ಗಾಲವಶ್ಚೈವ ರುರುಃ ಕಾಶ್ಯಪ ಏವ ಚ ।। ೧-೭-೪೮
ಏತೇ ಸಪ್ತ ಮಹಾತ್ಮಾನೋ ಭವಿಷ್ಯಾ ಮುನಿಸತ್ತಮಾಃ ।
ಬ್ರಹ್ಮಣಃ ಸದೃಶಾಶ್ಚೈತೇ ಧನ್ಯಾಃ ಸಪ್ತರ್ಷಯಃ ಸ್ಮೃತಾಃ ।। ೧-೭-೪೯

ಪರಶುರಾಮ, ವ್ಯಾಸ, ದೀಪ್ತಿಮಾನನೆಂದು ವಿಶ್ರುತನಾದ ಅತ್ರಿಯ ಮಗ, ಭರದ್ವಾಜನ ವಂಶದಲ್ಲಿ ಹುಟ್ಟಿದ ದ್ರೌಣಿ ಮಹಾದ್ಯುತಿ ಅಶ್ವತ್ಥಾಮಾ, ಗೌತಮನ ಮಗ ಶರದ್ವತನ ಮಗ ಗೌತಮಿ ಕೃಪ, ಕೌಶಿಕ ಗಾಲವ ಮತ್ತು ಕಾಶ್ಯಪ ರುರು – ಈ ಮಹಾತ್ಮಾ ಮುನಿಸತ್ತಮರು ಭವಿಷ್ಯದ ಸಪ್ತರ್ಷಿಗಳು. ಬ್ರಹ್ಮನ ಸಮಾನರಾಗಿರುವ ಇವರು ಧನ್ಯ ಸಪ್ತರ್ಷಿಗಳೆಂದು ತಿಳಿಯಲ್ಪಟ್ಟಿದ್ದಾರೆ.

ಅಭಿಜಾತ್ಯಾಚ ತಪಸಾ ಮಂತ್ರವ್ಯಾಕರಣೈಸ್ತಥಾ ।
ಬ್ರಹ್ಮಲೋಕಪ್ರತಿಷ್ಠಾಸ್ತು ಸ್ಮೃತಾಃ ಸಪ್ತರ್ಷಯೋಽಮಲಾಃ ।। ೧-೭-೫೦

ಈ ಅಮಲ ಸಪ್ತರ್ಷಿಗಳು ಜನ್ಮ, ತಪ, ಮಂತ್ರ ಮತ್ತು ವ್ಯಾಕರಣಗಳ ಪ್ರಭಾವದಿಂದ ಬ್ರಹ್ಮಲೋಕದಲ್ಲಿದ್ದಾರೆ.

ಭೂತಭವ್ಯಭವಜ್ಜ್ಞಾನಂ ಬುದ್ಧ್ವಾ ಚೈವ ತು ಯೈಃ ಸ್ವಯಮ್ ।
ತಪಸಾ ವೈ ಪ್ರಸಿದ್ಧಾ ಯೇ ಸಂಗತಾಃ ಪ್ರವಿಚಿಂತಕಾಃ ।। ೧-೭-೫೧

ಈ ಋಷಿಗಳು ತಮ್ಮದೇ ತಪಸ್ಸಿನ ಪ್ರಭಾವದಿಂದ ಭೂತ-ಭವ್ಯ-ಭವಿಷ್ಯಗಳ ಜ್ಞಾನವನ್ನು ಪಡೆದು ಪರಸ್ಪರರೊಡನೆ ಪರಮಾತ್ಮ ತತ್ತ್ವದ ಚಿಂತನೆ ಮಾಡುತ್ತಿರುತ್ತಾರೆ.

ಮಂತ್ರವ್ಯಾಕರಣಾದ್ಯೈಶ್ಚ ಐಶ್ವರ್ಯಾತ್ಸರ್ವಶಶ್ಚ ಯೇ ।
ಏತಾನ್ಭಾರ್ಯಾಂದ್ವಿಜೋ ಜ್ಞಾತ್ವಾ ನೈಷ್ಠಿಕಾನಿ ಚ ನಾಮ ಚ ।। ೧-೭-೫೨

ಇವರೆಲ್ಲರೂ ಮಂತ್ರ-ವ್ಯಾಕರಣಾದಿಗಳು ಮತ್ತು ಐಶ್ವರ್ಯಗಳಿಂದ ಪ್ರಸಿದ್ಧರಾಗಿದ್ದಾರೆ. ದ್ವಿಜರು ಇವರ ಹೆಸರುಗಳು ಮತ್ತು ನೈಷ್ಠಿಕಗಳನ್ನು ತಿಳಿದು ಶುಭವನ್ನು ಪಡೆಯುತ್ತಾರೆ.

ಸಪ್ತೈತೇ ಸಪ್ತಭಿಶ್ಚೈವ ಗುಣೈಃ ಸಪ್ತರ್ಷಯಃ ಸ್ಮೃತಾಃ ।
ದೀರ್ಘಾಯುಷೋ ಮಂತ್ರಕೃತ ಈಶ್ವರಾ ದೀರ್ಘಚಕ್ಷುಷಃ ।। ೧-೭-೫೩

ಈ ಏಳು ಮಂದಿ ತಮ್ಮ ಏಳು ಗುಣಗಳಿಂದ ಸಪ್ತರ್ಷಿಗಳೆಂದು ಕರೆಯಲ್ಪಟ್ಟಿದ್ದಾರೆ. ಇವರು ದೀರ್ಘಾಯುಗಳು. ಮಂತ್ರಕೃತರು. ಈಶ್ವರರು ಮತ್ತು ದೀರ್ಘದರ್ಶಿಗಳು.

ಬುದ್ಧ್ಯಾ ಪ್ರತ್ಯಕ್ಷಧರ್ಮಾಣೋ ಗೋತ್ರಪ್ರಾವರ್ತಕಾಸ್ತಥಾ ।
ಕೃತಾದಿಷು ಯುಗಾಖ್ಯೇಷು ಸರ್ವೇಷ್ವೇವ ಪುನಃ ಪುನಃ ।। ೧-೭-೫೪
ಪ್ರಾವರ್ತಯಂತಿ ತೇ ವರ್ಣಾನಾಶ್ರಮಾಂಶ್ಚೈವ ಸರ್ವಶಃ ।
ಸಪ್ತರ್ಷಯೋ ಮಹಾಭಾಗಾಃಸತ್ಯಧರ್ಮಪರಾಯಣಾಃ ।। ೧-೭-೫೫

ಧರ್ಮಗಳನ್ನು ಪ್ರತ್ಯಕ್ಷ ತಿಳಿದುಕೊಂಡಿರುವ ಇವರು ಗೋತ್ರಪ್ರವರ್ತಕರೂ ಆಗಿದ್ದಾರೆ. ಕೃತಾದಿ ಪ್ರತಿಯೊಂದು ಯುಗದಲ್ಲಿಯೂ ಸತ್ಯಧರ್ಮ ಪರಾಯಣರಾದ ಈ ಮಹಾಭಾಗ ಸಪ್ತರ್ಷಿಗಳು ಪುನಃ ಪುನಃ ವರ್ಣಗಳ ಮತ್ತು ಆಶ್ರಮಗಳ ಧರ್ಮಗಳನ್ನು ಎಲ್ಲಕಡೆ ನಡೆಸಿಕೊಂಡು ಬರುತ್ತಾರೆ.

ತೇಷಾಂಚೈವಾನ್ವಯೋತ್ಪನ್ನಾಃ ಜಾಯಂತೀಹ ಪುನಃ ಪುನಃ ।
ಮಂತ್ರಬ್ರಾಹ್ಮಣಕರ್ತಾರೋ ಧರ್ಮೇ ಪ್ರಶಿಥಿಲೇ ತಥಾ ।। ೧-೭-೫೬

ಧರ್ಮವು ಶಿಥಿಲವಾದಾಗಲೆಲ್ಲಾ ಇವರ ಕುಲದಲ್ಲೇ ಉತ್ಪನ್ನರಾದವರು ಪುನಃ ಪುನಃ ಜನ್ಮತಾಳಿ ಮಂತ್ರ-ಬ್ರಾಹ್ಮಣರನ್ನು ಪುನಃಸ್ಥಾಪಿಸುತ್ತಾರೆ.

ಯಸ್ಮಾಚ್ಚ ವರದಾಃ ಸಪ್ತ ಪರೇಭ್ಯಶ್ಚಾಪರಾಃ ಸ್ಮೃತಾಃ ।
ತಸ್ಮಾನ್ನ ಕಾಲೋ ನ ವಯಃ ಪ್ರಮಾಣಮೃಷಿಭಾವನೇ ।। ೧-೭-೫೭

ವರಗಳನ್ನು ನೀಡುವ ಮತ್ತು ಇತರರು ಸ್ಮರಿಸಿಕೊಳ್ಳುವ ಈ ಸಪ್ತರ್ಷಿಗಳ ಕಾಲ-ವಯಸ್ಸುಗಳ ಪರಿಣಾಮಗಳನ್ನು ಯೋಚಿಸಲೂ ಸಾಧ್ಯವಿಲ್ಲ.

ಏಷ ಸಪ್ತರ್ಷಿಕೋದ್ದೇಶೋ ವ್ಯಾಖ್ಯಾತಸ್ತೇ ಮಯಾ ನೃಪ ।
ಸಾವರ್ಣಸ್ಯ ಮನೋಃ ಪುತ್ರಾನ್ಭವಿಷ್ಯಾಂಶೃಣು ಸತ್ತಮ ।। ೧-೭-೫೮

ನೃಪ! ಸತ್ತಮ! ಈ ಸಪ್ತರ್ಷಿಗಳ ಕುರಿತು ನಿನಗೆ ಹೇಳಿದ್ದೇನೆ. ಈಗ ಸಾವರ್ಣ ಮನುವಿಗೆ ಮುಂದಾಗುವ ಮಕ್ಕಳ ಕುರಿತು ಕೇಳು.

ವರೀಯಾಂಶ್ಚಾವರೀಯಾಂಶ್ಚ ಸಂಮತೋ ಧೃತಿಮಾನ್ ವಸುಃ ।
ಚರಿಷ್ಣುರಪ್ಯಧೃಷ್ಣುಶ್ಚ ವಾಜಃ ಸುಮತಿರೇವ ಚ ।
ಸಾವರ್ಣಸ್ಯ ಮನೋಃ ಪುತ್ರಾಃ ಭವಿಷ್ಯಾ ದಶ ಭಾರತ ।। ೧-೭-೫೯

ಭಾರತ! ವರೀಯಾನ್, ಅವರೀಯಾನ್, ಸಂಮತ, ಧೃತಿಮಾನ್, ವಸು, ಚರಿಷ್ಣು, ಅಧೃಷ್ಣು, ವಾಜ, ಸುಮತಿ ಮತ್ತು ಇನ್ನೊಬ್ಬನು – ಇವರು ಸಾವರ್ಣ ಮನುವಿಗೆ ಭವಿಷ್ಯದಲ್ಲಾಗುವ ಹತ್ತು ಮಕ್ಕಳು.

ಪ್ರಥಮೇ ಮೇರುಸಾವರ್ಣಃ ಪ್ರವಕ್ಷ್ಯಾಮಿ ಮುನೀಂಶೃಣು ।
ಮೇಧಾತಿಥಿಸ್ತು ಪೌಲಸ್ತ್ಯೋ ವಸುಃ ಕಾಶ್ಯಪ ಏವ ಚ ।। ೧-೭-೬೦
ಜ್ಯೋತಿಷ್ಮಾನ್ಭಾರ್ಗವಶ್ಚೈವ ದ್ಯುತಿಮಾನಂಗಿರಾಸ್ತಥಾ ।
ಸಾವನಶ್ಚೈವ ವಾಸಿಷ್ಠ ಆತ್ರೇಯೋ ಹವ್ಯವಾಹನಃ ।। ೧-೭-೬೧
ಪೌಲಹಃ ಸಪ್ತ ಇತ್ಯೇತೇ ಮುನಯೋ ರೋಹಿತೇಽಂತರೇ ।
ದೇವತಾನಾಂ ಗಣಾಸ್ತತ್ರ ತ್ರಯ ಏವ ನರಾಧಿಪ ।। ೧-೭-೬೨

ಮೊದಲು ಮೇರುಸಾವರ್ಣಿಯ ಸಮಕಾಲೀನ ಮುನಿಗಳ ಕುರಿತು ಹೇಳುತ್ತೇನೆ. ಕೇಳು. ಪೌಲಸ್ತ್ಯ ಮೇಧಾತಿಥಿ, ಕಾಶ್ಯಪ ವಸು, ಭಾರ್ಗವ ಜ್ಯೋತಿಷ್ಮಾನ್, ಆಂಗಿರಸ ದ್ಯುತಿಮಾನ್, ವಾಸಿಷ್ಠ ಸಾವನ, ಆತ್ರೇಯ ಹವ್ಯವಾಹನ, ಮತ್ತು ಪೌಲಹ ಇವರು ರೋಹಿತ2 ಮನ್ವಂತರದಲ್ಲಿರುವ ಸಪ್ತರ್ಷಿಗಳು. ನರಾಧಿಪ! ಆ ಮನ್ವಂತರದಲ್ಲಿ ಮೂರು ದೇವತಾಗಣಗಳಿರುತ್ತವೆ.

ದಕ್ಷಪುತ್ರಸ್ಯ ಪುತ್ರಾಸ್ತೇ ರೋಹಿತಸ್ಯ ಪ್ರಜಾಪತೇಃ ।
ಮನೋಃ ಪುತ್ರೋ ಧೃಷ್ಟಕೇತುಃ ಪಂಚಹೋತ್ರೋ ನಿರಾಕೃತಿಃ ।। ೧-೭-೬೩
ಪೃಥುಃಶ್ರವಾ ಭೂರಿಧಾಮಾ ಋಚೀಕೋಷ್ಟಹತೋ ಗಯಃ ।
ಪ್ರಥಮಸ್ಯ ತು ಸಾವರ್ಣೇರ್ನವ ಪುತ್ರಾ ಮಹೌಜಸಃ । ೧-೭-೬೪

ಪ್ರಜಾಪತಿ ದಕ್ಷಪುತ್ರ ರೋಹಿತ ಮನುವಿನ ಪುತ್ರರು ಧೃಷ್ಟಕೇತು, ಪಂಚಹೋತ್ರ, ನಿರಾಕೃತಿ, ಪೃಥು, ಶ್ರವ, ಭೂರಿಧಾಮಾ, ಋಚೀಕ, ಅಷ್ಟಹತ, ಮತ್ತು ಗಯ. ಈ ಮಹೌಜಸರು ಪ್ರಥಮ ಸಾವರ್ಣಿಯಲ್ಲಿ ಹುಟ್ಟುವ ಒಂಭತ್ತು ಮಕ್ಕಳು.

ದಶಮೇ ತ್ವಥ ಪರ್ಯಾಯೇ ದ್ವಿತೀಯಸ್ಯಾಂತರೇ ಮನೋಃ ಹವಿಷ್ಮಾನ್ ಪೌಲಹಶ್ಚೈವ ಸುಕೃತಿಶ್ಚೈವ ಭಾರ್ಗವಃ ।। ೧-೭-೬೫
ಅಪೋಮೂರ್ತಿಸ್ತಥಾತ್ರೇಯೋ ವಾಸಿಷ್ಠಶ್ಚಾಷ್ಟಮಃ ಸ್ಮೃತಃ ।
ಪೌಲಸ್ತ್ಯಃ ಪ್ರಮಿತಿಶ್ಚೈವ ನಭೋಗಶ್ಚೈವ ಕಾಶ್ಯಪಃ ।
ಅಂಗಿರಾ ನಭಸಃ ಸತ್ಯಃ ಸಪ್ತೈತೇ ಪರಮರ್ಷಯಃ ।। ೧-೭-೬೬

ಹತ್ತನೆಯ ಮನ್ವಂತರ ಅಥವಾ ಎರಡನೇ ದಕ್ಷಸಾವರ್ಣಿ ಮನುವಿನ ಸಮಯದಲ್ಲಿ ಪೌಲಹ ಹವಿಷ್ಮಾನ್, ಭಾರ್ಗವ ಸುಕೃತಿ, ಆತ್ರೇಯ ಅಪೋಮೂರ್ತಿ, ವಾಷಿಷ್ಠ ಅಷ್ಟಮ, ಪೌಲಸ್ತ್ಯ ಪ್ರಮಿತಿ, ಕಾಶ್ಯಪ ನಭೋಗ ಮತ್ತು ಅಂಗಿರಾ ನಭಸನ ಮಗ ಸತ್ಯ – ಈ ಏಳು ಮಂದಿ ಪರಮ ಋಷಿಗಳಾಗುತ್ತಾರೆ.

ದೇವತಾನಾಂ ಗಣೌ ದ್ವೌ ತೌ ಋಷಿಮಂತ್ರಾಶ್ಚ ಯೇ ಸ್ಮೃತಾಃ ।
ಮನೋಃ ಸುತೋತ್ತಮೌಜಾಶ್ಚ ನಿಕುಷಂಜಶ್ಚ ವೀರ್ಯವಾನ್ ।। ೧-೭-೬೭
ಶತಾನೀಕೋ ನಿರಾಮಿತ್ರೋ ವೃಷಸೇನೋ ಜಯದ್ರಥಃ ।
ಭೂರಿದ್ಯುಮ್ನಃ ಸುವರ್ಚಾಶ್ಚ ದಶ ತ್ವೇತೇ ಮನೋಃ ಸುತಾಃ ।। ೧-೭-೬೮

ಆ ಮನ್ವಂತರದಲ್ಲಿ ದೇವತೆಗಳ ಎರಡು ಗಣಗಳಿರುತ್ತವೆ ಮತ್ತು ಋಷಿಮಂತ್ರದ ಮೂಲಕ ಯಾವದೇವತೆಯನ್ನೂ ಆಹ್ವಾನಿಸಬಹುದೆಂದು ಹೇಳುತ್ತಾರೆ. ಮನುಸುತ, ಉತ್ತಮೌಜ, ನಿಕುಷಂಜ, ವೀರ್ಯವಾನ್, ಶತಾನೀಕ, ನಿರಾಮಿತ್ರ, ವೃಷಸೇನ, ಜಯದ್ರಥ, ಭೂರಿದ್ಯುಮ್ನ ಮತ್ತು ಸುವರ್ಚ – ಇವರು ಆ ಮನುವಿಗಾಗುವ ಹತ್ತು ಮಕ್ಕಳು.

ಏಕಾದಶೇಽಥ ಪರ್ಯಾಯೇ ತೃತೀಯಸ್ಯಾಂತರೇ ಮನೋಃ ।
ತಸ್ಯ ಸಪ್ತ ಋಷೀಂಶ್ಚಾಪಿ ಕೀರ್ತ್ಯಮಾನಾನ್ನಿಬೋಧ ಮೇ ।। ೧-೭-೬೯

ಈಗ ಹನ್ನೊಂದನೆಯ ಅಥವಾ ಮೂರನೆಯ ಸಾವರ್ಣಿ ಮನ್ವಂತರದಲ್ಲಿ ಆಗುವ ಸಪ್ತರ್ಷಿಗಳ ಕುರಿತು ಹೇಳುತ್ತೇನೆ. ಕೇಳು.

ಹವಿಷ್ಮಾನ್ಕಾಶ್ಯಪಶ್ಚಾಪಿ ಹವಿಷ್ಮಾನ್ಯಶ್ಚ ಭಾರ್ಗವಃ ।
ತರುಣಶ್ಚ ತಥಾತ್ರೇಯೋ ವಾಸಿಷ್ಠಸ್ತ್ವನಘಸ್ತಥಾ ।। ೧-೭-೭೦
ಅಂಗಿರಾಶ್ಚೋದಧಿಷ್ಣ್ಯಶ್ಚ ಪೌಲಸ್ತ್ಯೋ ನಿಶ್ಚರಸ್ತಥಾ ।
ಪುಲಹಶ್ಚಾಗ್ನಿತೇಜಾಶ್ಚ ಭಾವ್ಯಾಃ ಸಪ್ತ ಮಹರ್ಷಯಃ ।। ೧-೭-೭೧

ಕಾಶ್ಯಪ ಹವಿಷ್ಮಾನ್, ಭಾರ್ಗವ ಹವಿಷ್ಮಾನ್, ಆತ್ರೇಯ ತರುಣ, ವಾಸಿಷ್ಠ ಅನಘ, ಅಂಗಿರಾ ಚೋದಧಿಷ್ಣ, ಪೌಲಸ್ತ್ಯ ನಿಶ್ಚರ ಮತ್ತು ಪುಲಹ ಅಗ್ನಿತೇಜ ಇವರುಗಳು ಮುಂದಾಗುವ ಸಪ್ತರ್ಷಿಗಳು.

ಬ್ರಹ್ಮಣಸ್ತು ಸುತಾ ದೇವಾ ಗಣಾಸ್ತೇಷಾಂ ತ್ರಯಃ ಸ್ಮೃತಾಃ ।
ಸಂವರ್ತಕಃ ಸುಶರ್ಮಾ ಚ ದೇವಾನೀಕಃ ಪುರೂಡ್ವಹಃ ।। ೧-೭-೭೨
ಕ್ಷೇಮಧನ್ವಾ ದೃಢಾಯುಶ್ಚ ಆದರ್ಶಃ ಪಂಡಕೋ ಮನುಃ ।
ಸಾವರ್ಣಸ್ಯ ತು ಪುತ್ರಾ ವೈ ತೃತೀಯಸ್ಯ ನವ ಸ್ಮೃತಾಃ ।। ೧-೭-೭೩

ಇವರೆಲ್ಲರೂ ಬ್ರಹ್ಮನ ಮಾನಸ ಪುತ್ರರು. ಆ ಮನ್ವಂತರದಲ್ಲಿ ಮೂರು ದೇವಗಣಗಳಿರುತ್ತವೆಯೆಂದಿದೆ. ಸಂವರ್ತಕ, ಸುಶರ್ಮಾ, ದೇವಾನೀಕ, ಪುರೂಡ್ವಹ, ಕ್ಷೇಮಧನ್ವಾ, ದೃಢಾಯು, ಆದರ್ಶ, ಪಂಡಕ ಮತ್ತು ಮನು ಇವರು ಮೂರನೇ ಸಾವರ್ಣಿಗಾಗುವ ಒಂಭತ್ತು ಮಕ್ಕಳು.

ಚತುರ್ಥಸ್ಯ ತು ಸಾವರ್ಣೇರೃಷೀನ್ಸಪ್ತ ನಿಬೋಧ ಮೇ ।
ದ್ಯುತಿರ್ವಸಿಷ್ಠಪುತ್ರಶ್ಚ ಆತ್ರೇಯಃ ಸುತಪಾಸ್ತಥಾ ।। ೧-೭-೭೪
ಅಂಗಿರಾಸ್ತಪಸೋ ಮೂರ್ತಿಸ್ತಪಸ್ವೀ ಕಾಶ್ಯಪಸ್ತಥಾ ।
ತಪೋಶನಶ್ಚ ಪೌಲಸ್ತ್ಯಃ ಪೌಲಹಶ್ಚ ತಪೋ ರವಿಃ ।। ೧-೭-೭೫
ಭಾರ್ಗವಃ ಸಪ್ತಮಸ್ತೇಷಾಂ ವಿಜ್ಞೇಯಸ್ತು ತತೋ ಧೃತಿಃ ।
ಪಂಚ ದೇವಗಣಾಃ ಪ್ರೋಕ್ತಾ ಮಾನಸಾ ಬ್ರಹ್ಮಣಶ್ಚ ತೇ ।। ೧-೭-೭೬

ನಾಲ್ಕನೇ ಸಾವರ್ಣಿಯ ಮನ್ವಂತರದಲ್ಲಾಗುವ ಸಪ್ತರ್ಷಿಗಳ ಕುರಿತು ಕೇಳು. ವಸಿಷ್ಠಪುತ್ರ ದ್ಯುತಿ, ಆತ್ರೇಯ ಸುತಪಾ, ಅಂಗಿರ ತಪೋಮೂರ್ತಿ, ಕಾಶ್ಯಪ ತಪಸ್ವಿ, ಪೌಲಸ್ತ್ಯ ತಪೋಶನ, ಪೌಲಹ ತಪೋರವಿ ಮತ್ತು ಭಾರ್ಗವ ತಪೋಧೃತಿ – ಇವರು ಆ ಸಪ್ತರ್ಷಿಗಳು. ಆಗ ಐದು ದೇವಗಣಗಳಿರುತ್ತವೆ. ಇವರೆಲ್ಲರೂ ಬ್ರಹ್ಮನ ಮಾನಸಪುತ್ರರಾಗುತ್ತಾರೆ ಎಂದು ಹೇಳುತ್ತಾರೆ.

ದೇವವಾಯುರದೂರಶ್ಚ ದೇವಶ್ರೇಷ್ಠೋ ವಿದೂರಥಃ ।
ಮಿತ್ರವಾನ್ಮಿತ್ರದೇವಶ್ಚ ಮಿತ್ರಸೇನಶ್ಚ ಮಿತ್ರಕೃತ್ ।
ಮಿತ್ರಬಾಹುಃ ಸುವರ್ಚಾಶ್ಚ ದ್ವಾದಶಸ್ಯ ಮನೋಃ ಸುತಾಃ ।। ೧-೭-೭೭

ದೇವವಾಯು, ಅದೂರ, ದೇವಶ್ರೇಷ್ಠ, ವಿದೂರಥ, ಮಿತ್ರವಾನ್, ಮಿತ್ರದೇವ, ಮಿತ್ರಸೇನ, ಮಿತ್ರಕೃತ್, ಮಿತ್ರಬಾಹು, ಮತ್ತು ಸುವರ್ಚ ಇವರು ಹನ್ನೆರಡನೇ ಮನುವಿನ ಪುತ್ರರಾಗುತ್ತಾರೆ.

ತ್ರಯೋದಶೇ ಚ ಪರ್ಯಾಯೇ ಭಾವ್ಯೇ ಮನ್ವಂತರೇ ಮನೋಃ ।
ಅಂಗಿರಾಶ್ಚೈವ ಧೃತಿಮಾನ್ಪೌಲಸ್ತ್ಯೋ ಹವ್ಯಪಸ್ತು ಯಃ ।। ೧-೭-೭೮
ಪೌಲಹಸ್ತತ್ತ್ವದರ್ಶೀ ಚ ಭಾರ್ಗವಶ್ಚ ನಿರುತ್ಸುಕಃ ।
ನಿಷ್ಪ್ರಕಂಪಸ್ತಥಾತ್ರೇಯೋ ನಿರ್ಮೋಹಃ ಕಾಶ್ಯಪಸ್ತಥಾ ।। ೧-೭-೭೯
ಸುತಪಾಶ್ಚೈವ ವಾಸಿಷ್ಠಃ ಸಪ್ತೈತೇ ತು ಮಹರ್ಷಯಃ ।
ತ್ರಯ ಏವ ಗಣಾಃ ಪ್ರೋಕ್ತಾ ದೇವತಾನಾಂ ಸ್ವಯಂಭುವಾ ।। ೧-೭-೮೦

ಬರುವ ಹದಿಮೂರನೇ ಮನ್ವಂತರದಲ್ಲಿ ಆಂಗಿರ ಧೃತಿಮಾನ್, ಪೌಲಸ್ತ್ಯ ಹವ್ಯಪಸ್ತು, ಪೌಲಹ ತತ್ತ್ವದರ್ಶೀ, ಭಾರ್ಗವ ನಿರುತ್ಸುಕ, ಆತ್ರೇಯ ನಿಷ್ಪ್ರಕಂಪ, ಕಾಶ್ಯಪ ನಿರ್ಮೋಹ ಮತ್ತು ವಾಸಿಷ್ಠ ಸುತಪಾ ಇವರು ಸಪ್ತ ಮಹರ್ಷಿಗಳಾಗುತ್ತಾರೆ. ಆಗ ಮೂರು ದೇವತಾಗಣಗಳಿರುತ್ತಾರೆ ಎಂದು ಸ್ವಯಂಭುವು ಹೇಳಿದ್ದಾನೆ.

ತ್ರಯೋದಶಸ್ಯ ಪುತ್ರಾಸ್ತೇ ವಿಜ್ಞೇಯಾಸ್ತು ರುಚೇಃ ಸುತಾಃ ।
ಚಿತ್ರಸೇನೋ ವಿಚಿತ್ರಶ್ಚ ನಯೋ ಧರ್ಮಭೃತೋ ಧೃತಃ ।। ೧-೭-೮೧
ಸುನೇತ್ರಃ ಕ್ಷತ್ರವೃದ್ಧಿಶ್ಚ ಸುತಪಾ ನಿರ್ಭಯೋ ದೃಢಃ ।
ರೌಚ್ಯಸ್ಯೈತೇ ಮನೋಃ ಪುತ್ರಾಃ ಅಂತರೇ ತು ತ್ರಯೋದಶೇ ।। ೧-೭-೮೨

ಹದಿಮೂರನೇ ಮನು ರುಚಿಯ ಮಕ್ಕಳ ಕುರಿತು ತಿಳಿದುಕೋ. ಚಿತ್ರಸೇನ, ವಿಚಿತ್ರ, ನಯ, ಧರ್ಮಭೃತ, ಧೃತ, ಸುನೇತ್ರ, ಕ್ಷತ್ರವೃದ್ಧಿ, ಸುತಪಾ, ನಿರ್ಭಯ, ದೃಢ – ಇವರು ಹದಿಮೂರನೆಯ ಮನ್ವಂತರದಲ್ಲಿ ರುಚಿ ಮನುವಿನ ಮಕ್ಕಳಾಗುತ್ತಾರೆ.

ಚತುರ್ದಶೇಽಥ ಪರ್ಯಾಯೇ ಭೌತ್ಯಸ್ಯೈವಾಂತರೇ ಮನೋಃ ।
ಭಾರ್ಗವೋ ಹ್ಯತಿಬಾಹುಶ್ಚ ಶುಚಿರಾಂಗಿರಸಸ್ತಥಾ ।। ೧-೭-೮೩
ಯುಕ್ತಶ್ಚೈವ ತಥಾತ್ರೇಯಃ ಶುಕ್ರೋ ವಾಸಿಷ್ಠ ಏವ ಚ ।
ಅಜಿತಃ ಪೌಲಹಶ್ಚೈವ ಅಂತ್ಯಾಃ ಸಪ್ತರ್ಷಯಶ್ಚ ತೇ ।। ೧-೭-೮೪

ಹದಿನಾಲ್ಕನೇ ಭೌತ್ಯ ಮನ್ವಂತರದಲ್ಲಿ ಭಾರ್ಗವ ಅತಿಬಾಹು, ಆಂಗಿರ ಶುಚಿ, ಆಂಗಿರ ಯುಕ್ತ, ಆತ್ರೇಯ ಯುಕ್ತ, ಆತ್ರೇಯ ಶುಕ್ರ, ವಾಸಿಷ್ಠ ಶುಕ್ರ, ಮತ್ತು ಪೌಲಹ ಅಜಿತ – ಇವರು ಅಂತಿಮ ಸಪ್ತರ್ಷಿಗಳಾಗುತ್ತಾರೆ.

ಏತೇಷಾಂ ಕಲ್ಯ ಉತ್ಥಾಯ ಕೀರ್ತನಾತ್ಸುಖಮೇಧತೇ ।
ಯಶಶ್ಚಾಪ್ನೋತಿ ಸುಮಹದಾಯುಷ್ಮಾಂಶ್ಚ ಭವೇನ್ನರಃ ।। ೧-೭-೮೫
ಅತೀತಾನಾಗತಾನಾಂ ವೈ ಮಹರ್ಷೀಣಾಂಸದಾ ನರಃ ।
ದೇವತಾನಾಂ ಗಣಾಃ ಪ್ರೋಕ್ತಾಃ ಪಂಚ ವೈ ಭರತರ್ಷಭ ।। ೧-೭-೮೬

ಬೆಳಿಗ್ಗೆ ಎದ್ದು ಈ ಹಿಂದೆ ಆಗಿಹೋದ ಮತ್ತು ಮುಂದೆ ಆಗಲಿರುವ ಮಹರ್ಷಿಗಳ ಕೀರ್ತನೆಯನ್ನು ಸದಾ ಮಾಡುವುದರಿಂದ ಮನುಷ್ಯನು ಸುಖವನ್ನು ಪಡೆಯುತ್ತಾನೆ. ಯಶಸ್ಸನ್ನು ಹೊಂದುತ್ತಾನೆ. ಮತ್ತು ಮಹಾ ಆಯುಷ್ಮಂತನಾಗುತ್ತಾನೆ. ಭರತರ್ಷಭ! ಆ ಮನ್ವಂತರದಲ್ಲಿ ದೇವತಾಗಣಗಳು ಐದು ಎಂದು ಹೇಳುತ್ತಾರೆ.

ತರಂಗಭೀರುರ್ವಪ್ರಶ್ಚ ತರಸ್ವಾನುಗ್ರ ಏವ ಚ ।
ಅಭಿಮಾನೀ ಪ್ರವೀಣಶ್ಚ ಜಿಷ್ಣುಃ ಸಂಕ್ರಂದನಸ್ತಥಾ ।। ೧-೭-೮೭
ತೇಜಸ್ವೀ ಸಬಲಶ್ಚೈವ ಭೌತ್ಯಸ್ಯೈತೇ ಮನೋಃ ಸುತಾಃ ।
ಭೌತ್ಯಸ್ಯೈವಾಧಿಕಾರೇ ತು ಪೂರ್ಣಂ ಕಲ್ಪಸ್ತು ಪೂರ್ಯತೇ ।। ೧-೭-೮೮

ತರಂಗಭೀರು, ವಪ್ರ, ತರಸ್ವಾನ್, ಉಗ್ರ, ಅಭಿಮಾನಿ, ಪ್ರವೀಣ, ಜಿಷ್ಣು, ಸಂಕ್ರಂದನ, ತೇಜಸ್ವೀ, ಮತ್ತು ಸಬಲ ಇವರು ಭೌತ್ಯ ಮನುವಿನ ಮಕ್ಕಳು. ಭ್ಯೌತ್ಯನ ಅಧಿಕಾರವು ಪೂರ್ಣವಾದಾಗ ಕಲ್ಪವೂ ಪೂರ್ಣವಾಗುತ್ತದೆ.

ಇತ್ಯೇತೇ ನಾಮತೋಽತೀತಾಃ ಮನವಃ ಕೀರ್ತಿತಾ ಮಯಾ ।
ತೈರಿಯಂ ಪೃಥಿವೀ ತಾತ ಸಮುದ್ರಾಂತಾ ಸಪತ್ತನಾ ।। ೧-೭-೮೯
ಪೂರ್ಣಂ ಯುಗಸಹಸ್ರಂ ತು ಪರಿಪಾಲ್ಯಾ ನರಾಧಿಪ ।
ಪ್ರಜಾಭಿಶ್ಚೈವ ತಪಸಾ ಸಂಹಾರಸ್ತೇಷು ನಿತ್ಯಶಃ ।। ೧-೭-೯೦

ಹೀಗೆ ನಾನು ಕಳೆದುಹೋದ ಮತ್ತು ಮುಂದೆ ಬರಲಿರುವ ಮನ್ವಂತರಗಳ ಹೆಸರುಗಳನ್ನು ಹೇಳಿರುತ್ತೇನೆ. ತಾತ! ನರಾಧಿಪ! ಇವರುಗಳು ಪ್ರತಿಯೊಬ್ಬರೂ ತಮ್ಮ ತಪಸ್ಸಿನ ಮೂಲಕ ಸಹಸ್ರ ಯುಗಗಳು ಪೂರ್ಣವಾಗುವವರೆಗೆ ಪಟ್ಟಣಗಳೊಂದಿಗೆ ಸಮುದ್ರದ ಪರ್ಯಂತದವರೆಗಿನ ಈ ಪೃಥ್ವಿಯನ್ನು ಮತ್ತು ಪ್ರಜೆಗಳನ್ನು ಪಾಲಿಸುತ್ತಾರೆ. ನಿತ್ಯವೂ ಸಂಹಾರಮಾಡುತ್ತಾರೆ ಕೂಡ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಖಿಲಭಾಗೇ ಹರಿವಂಶೇ ಹರಿವಂಶಪರ್ವಣಿ ಮನ್ವಂತರವರ್ಣನಂ ಸಪ್ತಮೋಽಧ್ಯಾಯಃ


  1. ಬ್ರಹ್ಮಸಾವರ್ಣಿ, ರುದ್ರಸಾವರ್ಣಿ, ಮೇರುಸಾವರ್ಣಿ ಮತ್ತು ದಕ್ಷಸಾವರ್ಣಿ – ಈ ನಾಲ್ವರೂ ಮೇರುಸಾವರ್ಣಿ ಮನುಗಳು. ಇವರು ಮೇರು ಪರ್ವತದ ಮೇಲೆ ತಪಸ್ಸನ್ನಾಚರಿಸುತ್ತಿದ್ದಾರೆ. ↩︎

  2. ಮೇರು ಸಾವರ್ಣಿಯ ಇನ್ನೊಂದು ಹೆಸರು ರೋಹಿತ. ↩︎