006: ಪೃಥೂಪಾಖ್ಯಾನಮ್

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಖಿಲಭಾಗೇ ಹರಿವಂಶಃ

ಹರಿವಂಶ ಪರ್ವ

ಅಧ್ಯಾಯ 6

ಸಾರ

ಪೃಥುರುವಾಚ
ಏಕಸ್ಯಾರ್ಥಾಯ ಯೋ ಹನ್ಯಾದಾತ್ಮನೋ ವಾ ಪರಸ್ಯ ವಾ ।
ಬಹೂನ್ವೈ ಪ್ರಾಣಿನೋ ಲೋಕೇ ಭವೇತ್ತಸ್ಯೇಹ ಪಾತಕಮ್ ।। ೧-೬-೧

ಪೃಥುವು ಹೇಳಿದನು: “ತನ್ನವರ ಅಥವಾ ಇತರರ ಯಾವುದೇ ಓರ್ವ ವ್ಯಕ್ತಿಗಾಗಿ ಅನೇಕ ಪ್ರಾಣಿಗಳನ್ನು ವಧಿಸುವುದು ಈ ಲೋಕದಲ್ಲಿ ಪಾತಕವೆನಿಸಿಕೊಳ್ಳುತ್ತದೆ.

ಸುಖಮೇಧಂತಿ ಬಹವೋ ಯಸ್ಮಿಂಸ್ತು ನಿಹತೇಽಶುಭೇ ।
ತಸ್ಮಿನ್ನಾಸ್ತಿ ಹತೇ ಭದ್ರೇ ಪಾತಕಂ ಚೋಪಪಾತಕಮ್ ।। ೧-೬-೨

ಭದ್ರೇ! ಅನೇಕ ಪ್ರಾಣಿಗಳಿಗೆ ಸುಖವನ್ನೀಡಲು ಓರ್ವ ಅಶುಭನನ್ನು ಸಂಹರಿಸಿದರೆ ಆ ಕೊಲೆಯು ಪಾತಕ ಅಥವಾ ಉಪಪಾತಕವೆಂದು ಎನಿಸಿಕೊಳ್ಳುವುದಿಲ್ಲ.

ಏಕಸ್ಮಿನ್ಯತ್ರ ನಿಧನಂ ಪ್ರಾಪಿತೇ ದುಷ್ಟಕಾರಿಣಿ ।
ಬಹೂನಾಂ ಭವತಿ ಕ್ಷೇಮಂ ತತ್ರ ಪುಣ್ಯಪ್ರದೋ ವಧಃ ।। ೧-೬-೩

ದುಷ್ಟಕಾರಿಣಿ ಓರ್ವನನ್ನು ಕೊಲ್ಲುವುದರಿಂದ ಅನೇಕರಿಗೆ ಕ್ಷೇಮವೊದಗಿದರೆ ಆ ವಧೆಯು ಪುಣ್ಯಪ್ರದವೇ ಆಗುತ್ತದೆ.

ಸೋಽಹಂ ಪ್ರಜಾನಿಮಿತ್ತಂ ತ್ವಾಂ ಹನಿಷ್ಯಾಮಿ ವಸುಂಧರೇ ।
ಯದಿ ಮೇ ವಚನಾಂ ನಾದ್ಯ ಕರಿಷ್ಯಸಿ ಜಗದ್ಧಿತಮ್ ।। ೧-೬-೪

ವಸುಂಧರೇ! ಇಂದು ನೀನು ಜಗತ್ತಿನ ಹಿತಕ್ಕಾಗಿ ನಾನು ಹೇಳಿದುದನ್ನು ಮಾಡದೇ ಇದ್ದರೆ, ಪ್ರಜೆಗಳ ನಿಮಿತ್ತ ನಾನು ನಿನ್ನನ್ನು ಸಂಹರಿಸುತ್ತೇನೆ.

ತ್ವಾಂ ನಿಹತ್ಯಾದ್ಯ ಬಾಣೇನ ಮಚ್ಛಾಸನಪರಾಙ್ಮುಖೀಮ್ ।
ಆತ್ಮಾನಂ ಪ್ರಥಯಿತ್ವಾಹಂ ಪ್ರಜಾ ಧಾರಯಿತಾ ಚಿರಮ್ ।। ೧-೬-೫

ನನ್ನ ಶಾಸನದಿಂದ ಓಡಿಹೋಗುತ್ತಿರುವ ನಿನ್ನನ್ನು ಇಂದು ಬಾಣದಿಂದ ಸಂಹರಿಸಿ, ನನ್ನನ್ನು ನಾನೇ ಹರಡಿಕೊಂಡು ಚಿರಕಾಲದವರೆಗೆ ಪ್ರಜೆಗಳನ್ನು ಧರಿಸುತ್ತೇನೆ.

ಸಾ ತ್ವಂ ಶಾಸನಮಾಸ್ಥಾಯ ಮಮ ಧರ್ಮಭೃತಾಂ ವರೇ ।
ಸಂಜೀವಯ ಪ್ರಜಾಃ ಸರ್ವಾಃ ಸಮರ್ಥಾ ಹ್ಯಸಿ ಧಾರಣೇ । ೧-೬-೬

ಧರ್ಮಭೃತರಲ್ಲಿ ಶ್ರೇಷ್ಠಳೇ! ನನ್ನ ಶಾಸನವನ್ನನುಸರಿಸಿ ಪ್ರಜೆಗಳೆಲ್ಲರನ್ನೂ ಜೀವಂತವಿಡು. ಅವರನ್ನು ಪೋಷಿಸಲು ನೀನು ಸಮರ್ಥಳಾಗಿದ್ದೀಯೆ.

ದುಹಿತೃತ್ವಂ ಚ ಮೇ ಗಚ್ಛ ತತ ಏನಮಹಂ ಶರಮ್ ।
ನಿಯಚ್ಛೇಯಂ ತ್ವದ್ವಧಾರ್ಥಮುದ್ಯತಂ ಘೋರದರ್ಶನಮ್ ।। ೧-೬-೭

ನೀನು ನನ್ನ ಮಗಳಾಗು. ಆಗ ನಾನು ನಿನ್ನನ್ನು ವಧಿಸಲು ಎತ್ತಿ ಹಿಡಿದಿರುವ ಈ ಘೋರದರ್ಶನ ಶರವನ್ನು ಹಿಂತೆಗೆದುಕೊಳ್ಳುತ್ತೇನೆ.”

ಪೃಥಿವ್ಯುವಾಚ
ಸರ್ವಮೇತದಹಂ ವೀರ ವಿಧಾಸ್ಯಾಮಿ ನ ಸಂಶಯಃ ।
ಉಪಾಯತಃ ಸಮಾರಬ್ಧಾಃ ಸರ್ವೇ ಸಿದ್ಧ್ಯಂತ್ಯುಪಕ್ರಮಾಃ ।। ೧-೬-೮

ಪೃಥ್ವಿಯು ಹೇಳಿದಳು: “ವೀರ! ನಾನು ಇವೆಲ್ಲವನ್ನೂ ಮಾಡುತ್ತೇನೆ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಉಪಾಯದಿಂದ ಪ್ರಾರಂಭಿಸಿದ ಸರ್ವ ಕಾರ್ಯಗಳೂ ಸಿದ್ಧಿಗೊಳ್ಳುತ್ತವೆ.

ಉಪಾಯಂ ಪಶ್ಯ ಯೇನ ತ್ವಂ ಧಾರಯೇಥಾಃ ಪ್ರಜಾ ಇಮಾಃ ।
ವತ್ಸಂ ತು ಮಮ ಸಂಪಶ್ಯ ಕ್ಷರೇಯಂ ಯೇನ ವತ್ಸಲಾ ।। ೧-೬-೯

ಪ್ರಜೆಗಳನ್ನು ನೀನು ಧರಿಸಬಹುದಾದ ಈ ಉಪಾಯವನ್ನು ನೋಡು. ನನಗೊಂದು ಕರುವನ್ನು ಹುಡುಕಿ ತಾ. ಅದರ ಮೇಲಿನ ವಾತ್ಸಲ್ಯದಿಂದ ನಾನು ಹಾಲನ್ನು ನೀಡುತ್ತೇನೆ.

ಸಮಾಂ ಚ ಕುರು ಸರ್ವತ್ರ ಮಾಂ ತ್ವಂ ಧರ್ಮಭೃತಾಂ ವರ ।
ಯಥಾ ನಿಸ್ಪಂದಮಾನಂ ಮೇ ಕ್ಷೀರಂ ಸರ್ವತ್ರ ಭಾವಯೇತ್ ।। ೧-೬-೧೦

ಧರ್ಮಭೃತರಲ್ಲಿ ಶ್ರೇಷ್ಠ! ನೀನು ನನ್ನನ್ನು ಎಲ್ಲಕಡೆ ಸಮತಟ್ಟಾಗಿ ಮಾಡು. ಇದರಿಂದ ನನ್ನ ಹಾಲು ಎಲ್ಲಕಡೆ ಹರಿಯುತ್ತದೆ.””

ವೈಶಂಪಾಯನ ಉವಾಚ
ತತ ಉತ್ಸಾರಯಾಮಾಸ ಶೈಲಾಂಶತಸಹಸ್ರಶಃ ।
ಧನುಷ್ಕೋಟ್ಯಾ ತದಾ ವೈನ್ಯಸ್ತೇನ ಶೈಲಾ ವಿವರ್ಧಿತಾಃ ।। ೧-೬-೧೧

ವೈಶಂಪಾಯನನು ಹೇಳಿದನು: “ಆಗ ವೈನ್ಯನು ತನ್ನ ಧನುಷ್ಕೋಟಿಯಿಂದ ನೂರಾರು ಸಹಸ್ರಾರು ಪರ್ವತಗಳನ್ನು ಮೇಲಕ್ಕೆತ್ತಿದನು. ಅದರಿಂದ ಪರ್ವತಗಳು ವರ್ಧಿಸಿದವು.

ಪೃಥುರ್ವೈನ್ಯಸ್ತದಾ ರಾಜಾ ಮಹೀಂ ಚಕ್ರೇ ಸಮಾಂ ತತಃ ।
ಮನ್ವಂತರೇಷ್ವತೀತೇಷು ವಿಷಮಾಸೀದ್ವಸುಂಧರಾ ।। ೧-೬-೧೨

ಅನಂತರ ವೈನ್ಯ ರಾಜಾ ಪೃಥುವು ಭೂಮಿಯನ್ನು ಸಮತಟ್ಟನ್ನಾಗಿ ಮಾಡಿದನು. ಹಿಂದಿನ ಮನ್ವಂತರದಲ್ಲಿ ವಸುಂಧರೆಯು ಏರು-ಪೇರಾಗಿದ್ದಳು.

ಸ್ವಭಾವೇನಾಭವನ್ ಹ್ಯಸ್ಯಾಃ ಸಮಾನಿ ವಿಷಮಾಣಿ ಚ ।
ಚಾಕ್ಷುಷಸ್ಯಾಂತರೇ ಪೂರ್ವಮಾಸೀದೇವಂ ತದಾ ಕಿಲ ।। ೧-೬-೧೩

ಹಿಂದಿನ ಚಾಕ್ಷುಷ ಮನ್ವಂತರದಲ್ಲಿ ಪೃಥ್ವಿಯು ಸ್ವಭಾವತಃ ಏರು-ಪೇರಾಗಿದ್ದಳು.

ನ ಹಿ ಪೂರ್ವವಿಸರ್ಗೇ ವೈ ವಿಷಮೇ ಪೃಥಿವೀತಲೇ ।
ಪ್ರವಿಭಾಗಃ ಪುರಾಣಾಂ ಚ ಗ್ರಾಮಾಣಾಂ ವಾ ತದಾಭವತ್ ।। ೧-೬-೧೪

ಪೂರ್ವವಿಸರ್ಗದಲ್ಲಿ ಭೂಮಿಯು ವಿಷಮವಾಗಿದ್ದಿದರಿಂದ ನಗರ-ಗ್ರಾಮಗಳ ವಿಭಜನೆಯಿರಲಿಲ್ಲ.

ನ ಸಸ್ಯಾನಿ ನ ಗೋರಕ್ಷಾ ನ ಕೃಷಿರ್ನ ವಣಿಕ್ಪಥಃ ।
ನೈವ ಸತ್ಯಾನೃತಂ ತತ್ರ ನ ಲೋಭೋ ನ ಚ ಮತ್ಸರಃ ।। ೧-೬-೧೫

ಆ ಕಾಲದಲ್ಲಿ ಸಸ್ಯಗಳಿರಲಿಲ್ಲ, ಗೋರಕ್ಷಣೆಯಿರಲಿಲ್ಲ, ಕೃಷಿಯಾಗಲೀ ವ್ಯಾಪಾರಗಳಾಗಲೀ ಇರಲಿಲ್ಲ. ಆಗ ಸತ್ಯ-ಸುಳ್ಳುಗಳಿರಲಿಲ್ಲ, ಲೋಭವಿರಲಿಲ್ಲ ಮತ್ತು ಮತ್ಸರವಿರಲಿಲ್ಲ.

ವೈವಸ್ವತೇಽಂತರೇ ಚಾಸ್ಮಿನ್ ಸಾಂಪ್ರತಂ ಸಮುಪಸ್ಥಿತೇ ।
ವೈನ್ಯಾತ್ಪ್ರಭೃತಿ ರಾಜೇಂದ್ರ ಸರ್ವಸ್ಯೈತಸ್ಯ ಸಂಭವಃ ।। ೧-೬-೧೬

ರಾಜೇಂದ್ರ! ಈ ವೈವಸ್ವತ ಮನ್ವಂತರದಲ್ಲಿಯೇ ವೈನ್ಯನಿಂದ ಪ್ರಾರಂಭವಾಗಿ ಭೂಮಿಯ ಮೇಲೆ ಈ ಎಲ್ಲವುಗಳೂ ಉತ್ಪನ್ನವಾದವು.

ಯತ್ರ ಯತ್ರ ಸಮಂ ತ್ವಸ್ಯಾ ಭೂಮೇರಾಸೀತಿಹಾನಘ ।
ತತ್ರ ತತ್ರ ಪ್ರಜಾಃ ಸರ್ವಾಃ ಸಂವಾಸಂ ಸಮರೋಚಯನ್ ।। ೧-೬-೧೭

ಅನಘ! ಭೂಮಿಯು ಎಲ್ಲೆಲ್ಲಿ ಸಮತಟ್ಟಾಗುತ್ತಿತ್ತೋ ಅಲ್ಲಲ್ಲಿ ಪ್ರಜೆಗಳೆಲ್ಲರೂ ವಾಸಿಸಲು ಬಯಸಿದರು.

ಆಹಾರಃ ಫಲಮೂಲಾನಿ ಪ್ರಜಾನಾಮಭವತ್ತದಾ ।
ಕೃಚ್ಛ್ರೇಣ ಮಹತಾ ಯುಕ್ತ ಇತ್ಯೇವಮನುಶುಶ್ರುಮ ।। ೧-೬-೧೮

ಆಗ ಪೃಥುವು ಮಹಾ ಕಷ್ಟದಿಂದ ಪ್ರಜೆಗಳಿಗೆ ಆಹಾರ, ಫಲ-ಮೂಲಗಳನ್ನು ಒದಗಿಸಿಕೊಟ್ಟನೆಂದು ಕೇಳಿದ್ದೇವೆ.

ಸಂಕಲ್ಪಯಿತ್ವಾ ವತ್ಸಂ ತು ಮನುಂ ಸ್ವಾಯಂಭುವಂ ಪ್ರಭುಮ್ ।
ಸ್ವಪಾಣೌ ಪುರುಷಶ್ರೇಷ್ಠ ದುದೋಹ ಪೃಥಿವೀಂ ತತಃ ।
ಸಸ್ಯಜಾತಾನಿ ಸರ್ವಾಣಿ ಪೃಥುರ್ವೈನ್ಯಃ ಪ್ರತಾಪವಾನ್ ।। ೧-೬-೧೯

ಪುರುಷಶ್ರೇಷ್ಠ! ಪ್ರತಾಪವಾನ್ ವೈನ್ಯ ಪೃಥುವು ಪ್ರಭು ಸ್ವಾಯಂಭುವ ಮನುವನ್ನು ಕರುವನ್ನಾಗಿ ಸಂಕಲ್ಪಿಸಿ, ತನ್ನದೇ ಕೈಗಳಿಂದ ಗೋರೂಪಿಣೀ ಪೃಥ್ವಿಯ ಹಾಲು ಕರೆದನು. ಅದರಿಂದ ಸರ್ವ ಸಸ್ಯಜಾತಿಗಳೂ ಹುಟ್ಟಿಕೊಂಡವು.

ತೇನಾನ್ನೇನ ಪ್ರಜಾಸ್ತಾತ ವರ್ತಂತೇಽದ್ಯಾಪಿ ನಿತ್ಯಶಃ ।
ಋಷಿಭಿಃ ಶ್ರೂಯತೇ ಚಾಪಿ ಪುನರ್ದುಗ್ಧಾ ವಸುಂಧರಾ ।। ೧-೬-೨೦

ತಾತ! ಅದೇ ಅನ್ನದಿಂದ ಈಗಲೂ ನಿತ್ಯವೂ ಪ್ರಜೆಗಳು ಜೀವಿಸುತ್ತಿದ್ದಾರೆ. ಪುನಃ ಋಷಿಗಳೂ ವಸುಂಧರೆಯ ಹಾಲುಕರೆದರೆಂದು ಕೇಳಿದ್ದೇವೆ.

ವತ್ಸಃ ಸೋಮೋಽಭವತ್ತೇಷಾಂ ದೋಗ್ಧಾ ಚಾಂಗಿರಸಃ ಸುತಃ ।
ಬೃಹಸ್ಪತಿರ್ಮಹಾತೇಜಾಃ ಪಾತ್ರಂ ಛಂದಾಂಸಿ ಭಾರತ ।
ಕ್ಷೀರಮಾಸೀದನುಪಮಂ ತಪೋ ಬ್ರಹ್ಮ ಚ ಶಾಶ್ವತಮ್ ।। ೧-೬-೨೧

ಭಾರತ! ಸೋಮನು ಕರುವಾಗಿದ್ದನು. ಆಂಗೀರಸನ ಮಗ ಮಹಾತೇಜಸ್ವಿ ಬೃಹಸ್ಪತಿಯು ಅವರ ಪರವಾಗಿ ಹಾಲುಕರೆದನು. ಛಂದಸ್ಸುಗಳು ಪಾತ್ರೆಯಾಗಿದ್ದವು. ಕರೆದ ಹಾಲು ಅನುಪಮ ತಪಸ್ಸು ಮತ್ತು ಶಾಶ್ವತ ಬ್ರಹ್ಮವಾಗಿತ್ತು.

ಪುನರ್ದೇವಗಣೈಃ ಸರ್ವೈಃ ಪುರಂದರಪುರೋಗಮೈಃ ।
ಕಾಂಚನಂ ಪಾತ್ರಮಾದಾಯ ದುಗ್ಧೇಯಂ ಶ್ರೂಯತೇ ಮಹೀ ।। ೧-೬-೨೨

ಅನಂತರ ಪುರಂದರನ ನಾಯಕತ್ವದಲ್ಲಿ ದೇವಗಣಗಳೆಲ್ಲವೂ ಕಾಂಚನ ಪಾತ್ರೆಯನ್ನು ಹಿಡಿದು ಪುನಃ ಭೂಮಿಯ ಹಾಲುಕರೆದರೆಂದು ಕೇಳಿದ್ದೇವೆ.

ವತ್ಸಸ್ತು ಮಘವಾನಾಸೀದ್ದೋಗ್ಧಾ ಚ ಸವಿತಾ ಪ್ರಭುಃ ।
ಕ್ಷೀರಮೂರ್ಜಸ್ಕರಂ ಚೈವ ವರ್ತಂತೇ ಯೇನ ದೇವತಾಃ ।। ೧-೬-೨೩

ಆಗ ಮಘವಾನನೇ ಕರುವಾಗಿದ್ದನು. ಪ್ರಭು ಸೂರ್ಯನು ಹಾಲುಕರೆದನು. ಯಾವುದರಿಂದ ದೇವತೆಗಳು ಜೀವಿಸಿರುವರೋ ಆ ಅಮೃತರೂಪೀ ಹಾಲನ್ನು ಕರೆಯಲಾಯಿತು.

ಪಿತೃಭಿಃ ಶ್ರೂಯತೇ ಚಾಪಿ ಪುನರ್ದುಗ್ಧಾ ವಸುಂಧರಾ ।
ರಾಜತಂ ಪಾತ್ರಮಾದಾಯ ಸ್ವಧಾಮಮಿತವಿಕ್ರಮೈಃ ।। ೧-೬-೨೪

ಪುನಃ ಅಮಿತವಿಕ್ರಮಿ ಪಿತೃಗಳೂ ಕೂಡ ಬೆಳ್ಳಿಯ ಪಾತ್ರೆಯನ್ನು ಹಿಡಿದು ವಸುಂಧರೆಯಿಂದ ಸ್ವಧಾ ರೂಪಿನ ಹಾಲನ್ನು ಕರೆದರೆಂದು ಕೇಳಿದ್ದೇವೆ.

ಯಮೋ ವೈವಸ್ವರಸ್ತೇಷಾಮಾಸೀದ್ವತ್ಸಃ ಪ್ರತಾಪವಾನ್ ।
ಅಂತಕಶ್ಚಾಭವದ್ದೋಗ್ಧಾ ಕಾಲೋ ಲೋಕಪ್ರಕಾಲನಃ ।। ೧-೬-೨೫

ಪ್ರತಾಪವಾನ್ ವೈವಸ್ವತ ಯಮನು ಅವರ ಕರುವಾಗಿದ್ದನು. ಲೋಕಪ್ರಕಾಲನ ಕಾಲ ಅಂತಕನು ಅವರಿಗೆ ಹಾಲುಕರೆಯುವವನಾಗಿದ್ದನು.

ನಾಗೈಶ್ಚ ಶ್ರೂಯತೇ ದುಗ್ಧ್ದಾ ವತ್ಸಂ ಕೃತ್ವಾ ತು ತಕ್ಷಕಮ್ ।
ಅಲಾಬುಂ ಪಾತ್ರಮಾದಾಯ ವಿಷಂ ಕ್ಷೀರಂ ನರೋತ್ತಮ ।। ೧-೬-೨೬

ನರೋತ್ತಮ! ನಾಗಗಳೂ ಕೂಡ ತಕ್ಷಕನನ್ನು ಕರುವನ್ನಾಗಿ ಮಾಡಿಕೊಂಡು ಸೋರೆಕಾಯಿಯನ್ನು ಪಾತ್ರೆಯನ್ನಾಗಿಸಿಕೊಂಡು, ವಿಷವೆಂಬ ಹಾಲನ್ನು ಕರೆದರೆಂದು ಕೇಳಿದ್ದೇವೆ.

ತೇಷಾಮೈರಾವತೋ ದೋಗ್ಧಾ ಧೃತರಾಷ್ಟ್ರಃ ಪ್ರತಾಪವಾನ್ ।
ನಾಗಾನಾಂ ಭರತಶ್ರೇಷ್ಠ ಸರ್ಪಾಣಾಂ ಚ ಮಹೀಪತೇ ।। ೧-೬-೨೭

ಭರತಶ್ರೇಷ್ಠ! ಮಹೀಪತೇ! ನಾಗಗಳಿಗೆ ಹಾಲುಕರೆಯುವವನು ಐರಾವತನಾಗಿದ್ದನು ಮತ್ತು ಸರ್ಪಗಳಿಗೆ ಪ್ರತಾಪವಾನ್ ಧೃತರಾಷ್ಟನು ಹಾಲುಕರೆಯುವವನಾಗಿದ್ದನು.

ತೇನೈವ ವರ್ತಯಂತ್ಯುಗ್ರಾ ಮಹಾಕಾಯಾ ವಿಷೋಲ್ಬಣಾಃ ।
ತದಾಹಾರಾಸ್ತದಾಚಾರಾಸ್ತದ್ವೀರ್ಯಾಸ್ತದುಪಾಶ್ರಯಾಃ ।। ೧-೬-೨೮

ಈ ವಿಷದಿಂದಲೇ ಆ ಉಗ್ರ ಮಹಾಕಾಯ ವಿಷೋಲ್ಬಣ ನಾಗಗಳು ವರ್ತಿಸುತ್ತವೆ. ಅದರಿಂದಲೇ ತಮಗೆ ಆಹಾರವನ್ನು ಒದಗಿಸಿಕೊಳ್ಳುತ್ತವೆ. ಅದರ ವೀರ್ಯವನ್ನೇ ಉಪಾಶ್ರಯಿಸಿಕೊಂಡಿವೆ.

ಅಸುರೈಃಶ್ರೂಯತೇ ಚಾಪಿ ಪುನರ್ದುಗ್ಧಾ ವಸುಂಧರಾ ।
ಆಯಸಂ ಪಾತ್ರಮಾದಾಯ ಮಾಯಾಂ ಶತ್ರುನಿಬರ್ಹಿಣೀಮ್ ।। ೧-೬-೨೯

ಪುನಃ ಅಸುರರೂ ಕೂಡ ಕಬ್ಬಿಣದ ಪಾತ್ರೆಯನ್ನು ತೆಗೆದುಕೊಂಡು ಶತ್ರುಗಳನ್ನು ನಾಶಗೊಳಿಸಬಲ್ಲ ಮಾಯೆಯನ್ನು ವಸುಂಧರೆಯ ಹಾಲಿನ ರೂಪದಲ್ಲಿ ಕರೆದರೆಂದು ಕೇಳಿದ್ದೇವೆ.

ವಿರೋಚನಸ್ತು ಪ್ರಾಹ್ರಾದಿರ್ವತ್ಸಸ್ತೇಷಾಮಭೂತ್ತದಾ ।
ಋತ್ವಿಗ್ವಿಮೂರ್ದ್ಧಾ ದೈತ್ಯಾನಾಂ ಮಧುರ್ದೋಗ್ಧಾ ಮಹಾಬಲಃ ।। ೧-೬-೩೦

ಪ್ರಹ್ರಾದನ ಮಗ ವಿರೋಚನನು ಅವರ ಕರುವಾಗಿದ್ದನು. ದೈತ್ಯರ ಋತ್ವಿಜ ಎರಡು ಶಿರಸ್ಸುಗಳಿದ್ದ ಮಹಾಬಲ ಮಧುವು ಹಾಲುಕರೆಯುವವನಾಗಿದ್ದನು.

ತಯೈತೇ ಮಾಯಯಾದ್ಯಾಪಿ ಸರ್ವೇ ಮಾಯಾವಿನೋಽಸುರಾಃ ।
ವರ್ತಯಂತ್ಯಮಿತಪ್ರಜ್ಞಾಸ್ತದೇಷಾಮಮಿತಂ ಬಲಮ್ ।। ೧-೬-೩೧

ಆ ಮಾಯೆಯಿಂದಲೇ ಈಗಲೂ ಕೂಡ ಅತ್ಯಂತ ಬುದ್ಧಿಶಾಲೀ ಸರ್ವ ಅಸುರರು ಮಾಯಾವಿಗಳಾಗಿ ವರ್ತಿಸುತ್ತಾರೆ. ಮಾಯೆಯೇ ಅವರ ಅಮಿತ ಬಲವಾಗಿದೆ.

ಯಕ್ಷೈಶ್ಚ ಶ್ರೂಯತೇ ತಾತ ಪುನರ್ದುಗ್ಧಾ ವಸುಂಧರಾ ।
ಆಮಪಾತ್ರೇ ಮಹಾರಾಜ ಪುರಾಂತರ್ದ್ಧಾನಮಕ್ಷಯಮ್ ।। ೧-೬-೩೨

ತಾತ! ಮಹಾರಾಜ! ಪುನಃ ಯಕ್ಷರೂ ಕೂಡ ವಸುಂಧರೆಯ ಕಾಲುಕರೆದರೆಂದು ಕೇಳಿದ್ದೇವೆ. ಅವರು ಬೇಯಿಸದ ಮಣ್ಣಿನ ಪಾತ್ರೆಯಲ್ಲಿ ಅಂತರ್ಧಾನವೆಂಬ ಅಕ್ಷಯ ವಿದ್ಯೆಯನ್ನು ಹಾಲನ್ನಾಗಿ ಕರೆದಿದ್ದರು.

ವತ್ಸಂ ವೈಶ್ರವಣಂ ಕೃತ್ವಾ ಯಕ್ಷೈಃ ಪುಣ್ಯಜನೈಸ್ತದಾ ।
ದೋಗ್ಧಾ ರಜತನಾಭಸ್ತು ಪಿತಾ ಮಣಿವರಸ್ಯ ಚ ।। ೧-೬-೩೩

ಪುಣ್ಯಜನ ಯಕ್ಷರು ವೈಶ್ರವಣ ಕುಬೇರನನ್ನು ಕರುವನ್ನಾಗಿ ಮಾಡಿಕೊಂಡಿದ್ದರು. ಮಣಿವರನ ತಂದೆ ರಜತನಾಭನು ಹಾಲುಕರೆಯುವವನಾಗಿದ್ದನು.

ಯಕ್ಷಾನುಜೋ ಮಹಾತೇಜಾಸ್ತ್ರಿಶೀರ್ಷಾಃ ಸುಮಹಾತಪಾಃ ।
ತೇನ ತೇ ವರ್ತಯಂತೀತಿ ಪರಮರ್ಷಿರುವಾಚ ಹ ।। ೧-೬-೩೪

ಮೂರು ಶಿರಗಳಿದ್ದ ಆ ಯಕ್ಷನ ಅನುಜ ರಜತನಾಭನು ಮಹಾತೇಜಸ್ವಿಯೂ ಮಹಾತಪಸ್ವಿಯೂ ಆಗಿದ್ದನು. ಅಂತರ್ಧಾನ ವಿದ್ಯೆಯಿಂದಲೇ ಯಕ್ಷರು ಜೀವಿಸಿರುತ್ತಾರೆ ಎಂದು ಪರಮಋಷಿಗಳು ಹೇಳುತ್ತಾರೆ.

ರಾಕ್ಷಸೈಶ್ಚ ಪಿಶಾಚೈಶ್ಚ ಪುನರ್ದುಗ್ಧಾ ವಸುಂಧರಾ ।
ಶಾವಂ ಕಪಾಲಮಾದಾಯ ಪ್ರಜಾ ಭೋಕ್ತುಂ ನರರ್ಷಭ ।। ೧-೬-೩೫

ನರರ್ಷಭ! ಪುನಃ ರಾಕ್ಷರರೂ-ಪಿಶಾಚಿಗಳೂ ಶವದ ಕಪಾಲವನ್ನು ಹಿಡಿದು ತಮ್ಮ ಸಂತಾನಗಳನ್ನು ಪೋಷಿಸಲು ವಸುಂಧರೆಯ ಹಾಲುಕರೆದರು.

ದೋಗ್ಧಾ ರಜತನಾಭಸ್ತು ತೇಷಾಮಾಸೀತ್ಕುರೂದ್ವಹ ।
ವತ್ಸಃ ಸುಮಾಲೀ ಕೌರವ್ಯಃ ಕ್ಷೀರಂ ರುಧಿರಮೇವ ಚ ।। ೧-೬-೩೬

ಕುರೂದ್ವಹ! ಅವರಿಗೆ ಹಾಲುಕರೆಯುವವನು ರಜತನಾಭನಾಗಿದ್ದನು. ಕೌರವ್ಯ! ಸುಮಾಲಿಯು ಕರುವಾಗಿದ್ದನು. ಮತ್ತು ರಕ್ತವೇ ಹಾಲಾಗಿತ್ತು.

ತೇನ ಕ್ಷೀರೇಣ ಯಕ್ಷಾಶ್ಚ ರಾಕ್ಷಸಾಶ್ಚಾಮರೋಪಮಾಃ ।
ವರ್ತಯಂತಿ ಪಿಶಾಚಾಶ್ಚ ಭೂತಸಂಘಾಸ್ತಥೈವ ಚ ।। ೧-೬-೩೭

ಆ ಹಾಲಿನಿಂದಲೇ ಅಮರೋಪಮ ಯಕ್ಷರೂ, ರಾಕ್ಷಸರೂ ಮತ್ತು ಪಿಶಾಚ-ಭೂತಗಣಗಳೂ ಜೀವಿತರಾಗಿರುತ್ತಾರೆ.

ಪದ್ಮಪಾತ್ರಂ ಪುನರ್ದುಗ್ಧಾ ಗಂಧರ್ವೈಃ ಸಾಪ್ಸರೋಗಣೈಃ ।
ವತ್ಸಂ ಚಿತ್ರರಥಂ ಕೃತ್ವಾ ಶುಚೀನ್ಗಂಧಾನ್ನರರ್ಷಭ ।। ೧-೬-೩೮

ನರರ್ಷಭ! ಪುನಃ ಅಪ್ಸರಗಣಗಳೊಂದಿಗೆ ಗಂಧರ್ವರು ಪದ್ಮಪಾತ್ರೆಯನ್ನು ಹಿಡಿದು ಚಿತ್ರರಥನನ್ನು ಕರುವನ್ನಾಗಿ ಮಾಡಿಕೊಂಡು ಶುದ್ಧ ಗಂಧವನ್ನು ಕರೆದರು.

ತೇಷಾಂ ಚ ಸುರುಚಿಸ್ತ್ವಾಸೀದ್ದೋಗ್ಧಾ ಭರತಸತ್ತಮ ।
ಗಂಧರ್ವರಾಜೋಽತಿಬಲೋ ಮಹಾತ್ಮಾ ಸೂರ್ಯಸನ್ನಿಭಃ ।। ೧-೬-೩೯

ಭರತಸತ್ತಮ! ಅತಿಬಲ ಮಹಾತ್ಮಾ ಸೂರ್ಯಸನ್ನಿಭ ಗಂಧರ್ವರಾಜ ಸುರುಚಿಯು ಅವರ ಹಾಲುಕರೆಯುವವನಾಗಿದ್ದನು.

ಶೈಲೈಶ್ಚ ಶ್ರೂಯತೇ ರಾಜನ್ ಪುನರ್ದುಗ್ಧಾ ವಸುಂಧರಾ ।
ಔಷಧೀರ್ವೈ ಮೂರ್ತಿಮತೀ ರತ್ನಾನಿ ವಿವಿಧಾನಿ ಚ ।। ೧-೬-೪೦

ರಾಜನ್! ಪರ್ವತಗಳೂ ಕೂಡ ಪುನಃ ವಸುಂಧರೆಯಿಂದ ಮೂರ್ತಿಮತ್ತಾದ ಔಷಧಿಗಳನ್ನೂ ವಿವಿಧ ರತ್ನಗಳನ್ನೂ ಹಾಲಾಗಿ ಕರೆದರೆಂದು ಕೇಳಿದ್ದೇವೆ.

ವತ್ಸಸ್ತು ಹಿಮವಾನಾಸೀನ್ಮೇರುರ್ದೋಗ್ಧಾ ಮಹಾಗಿರಿಃ ।
ಪಾತ್ರಂ ತು ಶೈಲಮೇವಾಸೀತ್ತೇನ ಶೈಲಾ ವಿವರ್ಧಿತಾಃ ।। ೧-೬-೪೧

ಹಿಮವಾನನು ಕರುವಾಗಿದ್ದನು. ಮಹಾಗಿರಿ ಮೇರುವು ಹಾಲುಕರೆಯುವವನಾಗಿದ್ದನು. ಪಾತ್ರೆಯು ಕಲ್ಲಿನದಾಗಿತ್ತು. ಅವರು ಕರೆದ ಹಾಲಿನಿಂದ ಪರ್ವತಗಳು ವರ್ಧಿಸಿದವು.

ವೀರುದ್ಭಿಃ ಶ್ರೂಯತೇ ರಾಜನ್ ಪುನರ್ದುಗ್ಧಾ ವಸುಂಧರಾ ।
ಪಾಲಾಶಂ ಪಾತ್ರಮಾದಾಯ ದಗ್ಧಚ್ಛಿನ್ನಪ್ರರೋಹಣಮ್ ।। ೧-೬-೪೨

ರಾಜನ್! ಪಲಾಶ ಪತ್ರದ ಪಾತ್ರೆಯನ್ನು ಹಿಡಿದು ವೃಕ್ಷಗಳೂ ಕೂಡ ವಸುಂಧರೆಯ ಹಾಲುಕರೆದರೆಂದು ಕೇಳಿಬರುತ್ತದೆ. ಸುಟ್ಟುಹೋದನಂತರವೂ ಪುನಃ ಚಿಗುರುವ ಸಾಮರ್ಥ್ಯವೇ ಹಾಲಾಗಿತ್ತು.

ದುದೋಹ ಪುಷ್ಪಿತಃ ಸಾಲೋ ವತ್ಸಃ ಪ್ಲಕ್ಷೋಽಭವತ್ತದಾ ।
ಸೇಯಂ ಧಾತ್ರೀ ವಿಧಾತ್ರೀ ಚ ಪಾವನೀ ಚ ವಸುಂಧರಾ ।। ೧-೬-೪೩

ಪುಷ್ಪಿತ ಸಾಲವೃಕ್ಷವು ಹಾಲುಕರೆಯುವವನಾಗಿತ್ತು. ಪ್ಲಕ್ಷವು ಕರುವಾಗಿತ್ತು. ಈ ಕಾರಣದಿಂದಲೇ ವಸುಂಧರೆಯು ಧಾತ್ರೀ, ವಿಧಾತ್ರೀ ಮತ್ತು ಪಾವನೀ ಎಂದೆನಿಸಿಕೊಂಡಿದ್ದಾಳೆ.

ಚರಾಚರಸ್ಯ ಸರ್ವಸ್ಯ ಪ್ರತಿಷ್ಠಾ ಯೋನಿರೇವ ಚ ।
ಸರ್ವಕಾಮದುಘಾ ದೋಗ್ಧ್ರೀ ಸರ್ವಸಸ್ಯಪ್ರರೋಹಿಣೀ ।। ೧-೬-೪೪

ಪೃಥ್ವಿಯೇ ಸರ್ವ ಚರಾಚರಗಳ ವಾಸಸ್ಥಾನ ಮತ್ತು ಉಗಮಸ್ಥಾನ. ಸರ್ವ ಕಾಮಗಳನ್ನು ಹಾಲಿನರೂಪದಲ್ಲಿ ನೀಡುವ ಕಾಮಧೇನು. ಸರ್ವ ಸಸ್ಯಗಳನ್ನು ಬೆಳೆಸುವವಳು.

ಆಸೀದಿಯಂ ಸಮುದ್ರಾಂತಾ ಮೇದಿನೀತಿ ಪರಿಶ್ರುತಾ ।
ಮಧುಕೈಟಭಯೋಃ ಕೃತ್ಸ್ನಾ ಮೇದಸಾಭಿಪರಿಪ್ಲುತಾ ।
ತೇನೇಯಂ ಮೇದಿನೀ ದೇವೀ ಪ್ರೋಚ್ಯತೇ ಬ್ರಹ್ಮವಾದಿಭಿಃ ।। ೧-೬-೪೫

ಮೊದಲು ಸಮುದ್ರದ ಅಂತ್ಯದವರೆಗೆ ಮಧು-ಕೈಟಭರ ಮೇದದಿಂದ ತುಂಬಿಹೋಗಿತ್ತು. ಆಗ ಮೇದಿನಿಯೆಂದು ಕರೆಯಲ್ಪಟ್ಟಿದ್ದಳು. ಅವಳನ್ನೇ ದೇವೀ ಮೇದಿನಿಯೆಂದು ಬ್ರಹ್ಮವಾದಿಗಳು ಕರೆಯುತ್ತಾರೆ.

ತತೋಽಭ್ಯುಪಗಮಾದ್ರಾಜ್ಞಃ ಪೃಥೋರ್ವೈನ್ಯಸ್ಯ ಭಾರತ ।
ದುಹಿತೃತ್ವಮನುಪ್ರಾಪ್ತಾ ದೇವೀ ಪೃಥ್ವೀತಿ ಚೋಚ್ಯತೇ ।
ಪೃಥುನಾ ಪ್ರವಿಭಕ್ತಾ ಚ ಶೋಧಿತಾ ಚ ವಸುಂಧರಾ ।। ೧-೬-೪೬

ಭಾರತ! ಅನಂತರ ರಾಜ ವೈನ್ಯ ಪೃಥುವಿನ ಪುತ್ರಿತ್ವವನ್ನು ಸ್ವೀಕರಿಸಿದ ದೇವಿಯನ್ನು ಪೃಥ್ವಿಯೆಂದು ಕರೆಯಲಾಯಿತು. ಪೃಥುವು ವಸುಂಧರೆಯನ್ನು ವಿಭಜಿಸಿ ಶುದ್ಧಗೊಳಿಸಿದನು.

ಸಸ್ಯಾಕರವತೀ ಸ್ಫೀತಾ ಪುರಪತ್ತನಮಾಲಿನೀ ।
ಏವಂಪ್ರಭಾವೋ ವೈನ್ಯಃ ಸ ರಾಜಾಸೀದ್ರಾಜಸತ್ತಮಃ ।। ೧-೬-೪೭

ಅವನು ಭೂಮಿಯನ್ನು ಸಸ್ಯಶಾಲಿನಿಯನ್ನಾಗಿಯೂ, ಪುರ-ಪಟ್ಟಣಗಳಿಂದ ತುಂಬಿತುಳುಕುವಂತೆಯೂ ಮಾಡಿದನು. ರಾಜಸತ್ತಮ! ಹೀಗೆ ರಾಜಾ ವೈನ್ಯನು ಪ್ರಭಾವಶಾಲಿಯಾಗಿದ್ದನು.

ನಮಸ್ಯಶ್ಚೈವ ಪೂಜ್ಯಶ್ಚ ಭೂತಗ್ರಾಮೈರ್ನ ಸಂಶಯಃ ।
ಬ್ರಾಹ್ಮಣೈಶ್ಚ ಮಹಾಭಾಗೈರ್ವೇದವೇದಾಂಗಪಾರಗಃ ।। ೧-೬-೪೮ ಪೃಥುರೇವ ನಮಸ್ಕಾರ್ಯೋ ಬ್ರಹ್ಮಯೋನಿಃ ಸನಾತನಃ ।

ಆದುದರಿಂದ ಇರುವ ಎಲ್ಲ ಗಣಗಳೂ ಅವನನ್ನು ನಮಸ್ಕರಿಸಿ ಪೂಜಿಸಬೇಕು ಎನ್ನುವುದರಲ್ಲಿ ಸಂಶಯವಿಲ್ಲ. ವೇದ-ವೇದಾಂಗ ಪಾರಂಗತ ಮಹಾಭಾಗ ಬ್ರಾಹ್ಮಣರಿಗೂ ಕೂಡ ಆ ಸನಾತನ ಬ್ರಹ್ಮಯೋನಿ ಪೃಥುವು ನಮಸ್ಕಾರ್ಯನು.

ಪಾರ್ಥಿವೈಶ್ಚ ಮಹಾಭಾಗೈಃ ಪಾರ್ಥಿವತ್ವಮಭೀಪ್ಸುಭಿಃ ।। ೧-೬-೪೯ ಆದಿರಾಜೋ ನಮಸ್ಕಾರ್ಯಃ ಪೃಥುರ್ವೈನ್ಯಃ ಪ್ರತಾಪವಾನ್ ।

ಪಾರ್ಥಿವತ್ವವನ್ನು ಬಯಸುವ ಮಹಾಭಾಗ ಪಾರ್ಥಿವರಿಗೂ ಕೂಡ ಆದಿರಾಜ ಪ್ರತಾಪವಾನ್ ವೈನ್ಯ ಪೃಥುವು ನಮಸ್ಕಾರ್ಯನು.

ಯೋಧೈರಪಿ ಚ ವಿಕ್ರಾಂತೈಃ ಪ್ರಾಪ್ತುಕಾಮೈರ್ಜಯಂ ಯುಧಿ ।
ಪೃಥುರೇವ ನಮಸ್ಕಾರ್ಯೋ ಯೋಧಾನಾಂ ಪ್ರಥಮೋ ನೃಪಃ ।। ೧-೬-೫೦

ನೃಪ! ಯುದ್ಧದಲ್ಲಿ ವಿಜಯವನ್ನು ಪಡೆಯಲು ಇಚ್ಛಿಸುವ ವಿಕ್ರಾಂತ ಯೋಧರಿಗೂ ಕೂಡ ಯೋಧರ ಪ್ರಥಮ ಪೃಥುವೇ ನಮಸ್ಕಾರ್ಯನು.

ಯೋ ಹಿ ಯೋದ್ಧಾ ರಣಂ ಯಾತಿ ಕೀರ್ತಯಿತ್ವಾ ಪೃಥುಂ ನೃಪಮ್ ಸ ಘೋರರೂಪಾನ್ಸಂಗ್ರಾಮಾನ್ಕ್ಷಮೀ ತರತಿ ಕೀರ್ತಿಮಾನ್ ।। ೧-೬-೫೧

ನೃಪ ಪೃಥುವನ್ನು ಕೀರ್ತಿಸುತ್ತಾ ಯಾವ ಯೋದ್ಧನು ರಣಕ್ಕೆ ಹೋಗುತ್ತಾನೋ ಅವನು ಘೋರರೂಪದ ಸಂಗ್ರಾಮವನ್ನೂ ಕ್ಷೇಮದಿಂದ ಗೆದ್ದು ಕೀರ್ತಿವಂತನಾಗುತ್ತಾನೆ.

ವೈಶ್ಯೈರಪಿ ಚ ವಿತ್ತಾಢ್ಯೈಃ ಪಣ್ಯವೃತ್ತಿಮನುಷ್ಠಿತೈಃ।
ಪೃಥುರೇವ ನಮಸ್ಕಾರ್ಯೋ ವೃತ್ತಿದಾತಾ ಮಹಾಯಶಾಃ ।। ೧-೬-೫೨

ವ್ಯಾಪಾರವೇ ಮೊದಲಾದ ವೃತ್ತಿಗಳನ್ನು ಅವಲಂಬಿಸಿರುವ ಧನಿಕ ವೈಶ್ಯರಿಗೂ ಕೂಡ ವೃತ್ತಿದಾತಾ ಮಹಾಯಶಸ್ವೀ ಪೃಥುವು ನಮಸ್ಕಾರ್ಯನು.

ತಥೈವ ಶೂದ್ರೈಃ ಶುಚಿಭಿಸ್ತ್ರಿವರ್ಣಪರಿಚಾರಿಭಿಃ ।
ಆದಿರಾಜೋ ನಮಸ್ಕಾರ್ಯಃ ಶ್ರೇಯಃ ಪರಮಭೀಪ್ಸುಭಿಃ ।। ೧-೬-೫೩

ಹಾಗೆಯೇ ಮೂರು ವರ್ಣದವರಿಗೆ ಸೇವಕರಾದ ಪರಮ ಶ್ರೇಯಸ್ಸನ್ನು ಬಯಸುವ ಶುಚಿ ಶೂದ್ರರಿಗೂ ಕೂಡ ಆದಿರಾಜ ಪೃಥುವು ನಮಸ್ಕಾರ್ಯನು.

ಏತೇ ವತ್ಸವಿಶೇಷಾಶ್ಚ ದೋಗ್ಧಾರಃ ಕ್ಷೀರಮೇವ ಚ ।
ಪಾತ್ರಾಣಿ ಚ ಮಯೋಕ್ತಾನಿ ಕಿಂ ಭೂಯೋ ವರ್ಣಯಾಮಿ ತೇ ।। ೧-೬-೫೪

ಹೀಗೆ ಭೂಮಿಯ ಹಾಲುಕರೆಯುವಾಗ ಕರು, ಹಾಲುಕರೆಯುವವರು, ಪಾತ್ರೆ ಮತ್ತು ಹಾಲಿನ ಕುರಿತಾದ ವಿಶೇಷತೆಗಳನ್ನು ಹೇಳಿದ್ದೇನೆ. ಇನ್ನೂ ಯಾವುದರ ಕುರಿತು ನಿನಗೆ ಹೇಳಲಿ?

ಯ ಇದಂ ಶೃಣುಯಾನ್ನಿತ್ಯಂ ಪೃಥೋಶ್ಚರಿತಮಾದಿತಃ ।
ಪುತ್ರಪೌತ್ರಸಮಾಯುಕ್ತೋ ಮೋದತೇ ಸುಚಿರಂ ಭುವಿ ।। ೧-೬-೫೫।।

ಪೃಥುವಿನ ಈ ಚರಿತ್ರೆಯನ್ನು ಮೊದಲಿನಿಂದ ಯಾರು ನಿತ್ಯವೂ ಕೇಳುತ್ತಾರೋ ಅವರು ಪುತ್ರ-ಪೌತ್ರ ಸಮಾಯುಕ್ತರಾಗಿ ಚಿರಕಾಲದ ವರೆಗೆ ಭೂಮಿಯಲ್ಲಿ ಮೋದಿಸುತ್ತಾರೆ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಖಿಲಭಾಗೇ ಹರಿವಂಶೇ ಹರಿವಂಶಪರ್ವಣಿ ಪೃಥೂಪಾಖ್ಯಾನೇ ಷಷ್ಠೋಽಧ್ಯಾಯಃ