003: ಮರುತುತ್ಪತ್ತಿಕಥನಮ್

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಖಿಲಭಾಗೇ ಹರಿವಂಶಃ

ಹರಿವಂಶ ಪರ್ವ

ಅಧ್ಯಾಯ 3

ಸಾರ

19003001 ಜನಮೇಜಯ ಉವಾಚ ।
19003001a ದೇವಾನಾಂ ದಾನವಾನಾಂ ಚ ಗಂಧರ್ವೋರಗರಕ್ಷಸಾಮ್ ।
19003001c ಉತ್ಪತ್ತಿಂ ವಿಸ್ತರೇಣೇಮಾಂ ವೈಶಂಪಾಯನ ಕೀರ್ತಯ ।।

ಜನಮೇಜಯನು ಹೇಳಿದನು: “ವೈಶಂಪಾಯನ! ದೇವ-ದಾನವರ ಗಂಧರ್ವ-ಉರಗ-ರಾಕ್ಷಸರ ಉತ್ಪತ್ತಿಯನ್ನು ವಿಸ್ತಾರವಾಗಿ ಹೇಳು.”

19003002 ವೈಶಂಪಾಯನ ಉವಾಚ
19003002a ಪ್ರಜಾಃ ಸೃಜೇತಿ ವ್ಯಾದಿಷ್ಟಃ ಪೂರ್ವಂ ದಕ್ಷಃ ಸ್ವಯಂಭುವಾ ।
19003002c ಯಥಾ ಸಸರ್ಜ ಭೂತಾನಿ ತಥಾ ಶೃಣು ಮಹೀಪತೇ ।।

ವೈಶಂಪಾಯನನು ಹೇಳಿದನು: “ಮಹೀಪತೇ! ಪೂರ್ವದಲ್ಲಿ ಸ್ವಯಂಭು ಬ್ರಹ್ಮನು “ಪ್ರಜೆಗಳನ್ನು ಸೃಷ್ಟಿಸು!” ಎಂದು ಆದೇಶವನ್ನಿತ್ತಿದ್ದನು. ಅದರಂತೆ ಅವನು ಭೂತಗಳನ್ನು ಹೇಗೆ ಸೃಷ್ಟಿಸಿದನು ಎನ್ನುವುದರ ಕುರಿತು ಕೇಳು.

19003003a ಮಾನಸಾನ್ಯೇವ ಭೂತಾನಿ ಪೂರ್ವಮೇವಾಸೃಜತ್ಪ್ರಭುಃ ।
19003003c ಋಷೀಂದೇವಾನ್ಸಗಂಧರ್ವಾನಸುರಾನಥ ರಾಕ್ಷಸಾನ್ ।
19003003e ಯಕ್ಷಭೂತಪಿಶಾಚಾಂಶ್ಚ ವಯಃ ಪಶುಸರೀಸೃಪಾನ್ ।।

ಮೊದಲು ಪ್ರಭು ಮನುವು ಋಷಿ-ದೇವ-ಗಂಧರ್ವ-ಅಸುರ-ರಾಕ್ಷಸ-ಯಕ್ಷ-ಭೂತ-ಪಿಶಾಚಿ-ಪಕ್ಷಿ-ಪಶು-ಸರೀಸೃಪಗಳನ್ನು ಮನಸ್ಸಿನಿಂದಲೇ (ಸಂಕಲ್ಪಮಾತ್ರದಿಂದಲೇ) ಸೃಷ್ಟಿಸಿದನು.

19003004a ಯದಾಸ್ಯ ತಾಸ್ತು ಮಾನಸ್ಯೋ ನ ವ್ಯವರ್ಧಂತ ವೈ ಪ್ರಜಾಃ ।
19003004c ಅಪಧ್ಯಾತಾ ಭಗವತಾ ಮಹಾದೇವೇನ ಧೀಮತಾ ।।

ಆದರೆ ಧೀಮತ ಮಹಾದೇವನ ವೈರತ್ವ1ದಿಂದ ಅವನ ಮಾನಸ ಪ್ರಜೆಗಳು ವೃದ್ಧಿಹೊಂದಲಿಲ್ಲ.

19003005a ತತಃ ಸಂಚಿಂತ್ಯ ತು ಪುನಃ ಪ್ರಜಾಹೇತೋಃ ಪ್ರಜಾಪತಿಃ ।
19003005c ಸ ಮೈಥುನೇನ ಧರ್ಮೇಣ ಸಿಸೃಕ್ಷುರ್ವಿವಿಧಾಃ ಪ್ರಜಾಃ ।।

ಆಗ ಪುನಃ ಪ್ರಜೆಗಳನ್ನು ಪಡೆಯಲೋಸುಗ ಪ್ರಜಾಪತಿಯು ಮೈಥುನಧರ್ಮದ ಮೂಲಕ ವಿವಿಧ ಪ್ರಜೆಗಳನ್ನು ಸೃಷ್ಟಿಸಲು ಯೋಚಿಸಿದನು.

19003006a ಅಸಿಕ್ನೀಮಾವಹತ್ಪತ್ನೀಂ ವೀರಣಸ್ಯ ಪ್ರಜಾಪತೇಃ ।
19003006c ಸುತಾಂ ಸುತಪಸಾ ಯುಕ್ತಾಂ ಮಹತೀಂ ಲೋಕಧಾರಿಣೀಮ್ ।।

ದಕ್ಷನು ಪ್ರಜಾಪತಿ ವೀರಣನ ಸುತೆ ಮಹಾ ತಪೋಯುಕ್ತಳಾಗಿದ್ದ ಮಹಾಲೋಕಧಾರಿಣೀ ಅಸಿಕ್ನಿಯನ್ನು ಪತ್ನಿಯನ್ನಾಗಿ ಪಡೆದುಕೊಂಡನು.

19003007a ಅಥ ಪುತ್ರಸಹಸ್ರಾಣಿ ವೀರಣ್ಯಾಂ ಪಂಚ ವೀರ್ಯವಾನ್ ।
19003007c ಅಸಿಕ್ನ್ಯಾಂ ಜನಯಾಮಾಸ ದಕ್ಷ ಏವ ಪ್ರಜಾಪತಿಃ ।।

ಆಗ ಪ್ರಜಾಪತಿ ದಕ್ಷನು ವೀರಣನ ಮಗಳು ಅಸಿಕ್ನಿಯಲ್ಲಿ ಐದು ಸಾವಿರ ವೀರ್ಯವಾನ್ ಪುತ್ರರನ್ನು ಹುಟ್ಟಿಸಿದನು.

19003008a ತಾಂಸ್ತು ದೃಷ್ಟ್ವಾ ಮಹಾಭಾಗಾನ್ಸಂವಿವರ್ಧಯಿಷೂನ್ಪ್ರಜಾಃ ।
19003008c ದೇವರ್ಷಿಃ ಪ್ರಿಯಸಂವಾದೋ ನಾರದಃ ಪ್ರಾಬ್ರವೀದಿದಮ್ ।
19003008e ನಾಶಾಯ ವಚನಂ ತೇಷಾಂ ಶಾಪಾಯೈವಾತ್ಮನಸ್ತಥಾ ।।

ಪ್ರಜೆಗಳನ್ನು ವೃದ್ಧಿಸುವುದರಲ್ಲಿ ಉತ್ಸುಕರಾಗಿದ್ದ ಆ ಮಹಾಭಾಗರಿಗೆ ಪ್ರಿಯಸಂವಾದ ದೇವರ್ಷಿ ನಾರದನು ಉಪದೇಶವನ್ನಿತ್ತನು2. ಆ ಉಪದೇಶದಿಂದ ಅವರ ನಾಶವಾಯಿತಲ್ಲದೇ3 ನಾರದನಿಗೆ ಶಾಪವೂ ದೊರಕಿತು.

19003009a ಯಂ ಕಶ್ಯಪಃ ಸುತವರಂ ಪರಮೇಷ್ಠೀ ವ್ಯಜೀಜನತ್ ।
19003009c ದಕ್ಷಸ್ಯ ವೈ ದುಹಿತರಿ ದಕ್ಷಶಾಪಭಯಾನ್ಮುನಿಃ ।।

ಮೊದಲೇ ಪರಮೇಷ್ಠಿಯ ಜ್ಯೇಷ್ಠ ಮಾನಸ ಪುತ್ರನಾಗಿದ್ದ ನಾರದನನ್ನು ಮುನಿ ಕಶ್ಯಪನು ದಕ್ಷಶಾಪಭಯದಿಂದ ದಕ್ಷನ ಮಗಳಿ4ನಲ್ಲಿಯೇ ಪುನಃ ಹುಟ್ಟಿಸಿದನು.

19003010a ಪೂರ್ವಂ ಸ ಹಿ ಸಮುತ್ಪನ್ನೋ ನಾರದಃ ಪರಮೇಷ್ಠಿನಾ ।
19003010c ಅಸಿಕ್ನ್ಯಾಮಥ ವೀರಣ್ಯಾಂ ಭೂಯೋ ದೇವರ್ಷಿಸತ್ತಮಃ ।
19003010e ತಂ ಭೂಯೋ ಜನಯಾಮಾಸ ಪಿತೇವ ಮುನಿಪುಂಗವಮ್ ।।

ಮೊದಲು ಪರಮೇಷ್ಠಿ ಬ್ರಹ್ಮನಿಂದ ಉತ್ಪನ್ನನಾಗಿದ್ದ ಆ ದೇವರ್ಷಿಸತ್ತಮ ನಾರದನು ಪುನಃ ವೀರಣನ ಪುತ್ರಿ ಅಸಿಕ್ನಿಯಲ್ಲಿ ಹುಟ್ಟಿದನು. ಆ ಮುನಿಪುಂಗವನನ್ನು ಪುನಃ ಕಶ್ಯಪ ಮುನಿಯು ತಂದೆಯಾಗಿ ಹುಟ್ಟಿಸಿದನು.

19003011a ತೇನ ದಕ್ಷಸ್ಯ ಪುತ್ರಾ ವೈ ಹರ್ಯಶ್ವಾ ಇತಿ ವಿಶ್ರುತಾಃ ।
19003011c ನಿರ್ಮಥ್ಯ ನಾಶಿತಾಃ ಸರ್ವೇ ವಿಧಿನಾ ಚ ನ ಸಂಶಯಃ ।।

ಆ ನಾರದನು ಹರ್ಯಶ್ವರೆಂದು ವಿಶ್ರುತರಾಗಿದ್ದ ದಕ್ಷನ ಐದು ಸಾವಿರ ಪುತ್ರರನ್ನು ವಿಧಿವತ್ತಾದ ಉಪದೇಶದ ಮೂಲಕ ಅವರ ದೇಹಾಭಿಮಾನವನ್ನು ತೊಲಗಿಸಿ ಈ ಸಂಸಾರದಿಂದ ನಷ್ಟರನ್ನಾಗಿಸಿದ್ದನು. ಇದರಲ್ಲಿ ಸಂಶಯವಿಲ್ಲ.

19003012a ತಸ್ಯೋದ್ಯತಸ್ತದಾ ದಕ್ಷೋ ನಾಶಾಯಾಮಿತವಿಕ್ರಮಃ ।
19003012c ಮಹರ್ಷೀನ್ಪುರತಃ ಕೃತ್ವಾ ಯಾಚಿತಃ ಪರಮೇಷ್ಠಿನಾ ।।

ಅಮಿತವಿಕ್ರಮಿ ದಕ್ಷನು ಆಗ ನಾರದನನ್ನು ನಾಶಗೊಳಿಸಲು ತೊಡಗಿದನು. ಆಗ ಪರಮೇಷ್ಠಿ ಬ್ರಹ್ಮನು ಸಪ್ತರ್ಷಿಗಳನ್ನು ಮುಂದೆಮಾಡಿಕೊಂಡು ದಕ್ಷನನ್ನು ಯಾಚಿಸಿದನು.

19003013a ತತೋಽಭಿಸಂಧಿಂ ಚಕ್ರುಸ್ತೇ ದಕ್ಷಸ್ತು ಪರಮೇಷ್ಠಿನಾ ।
19003013c ಕನ್ಯಾಯಾಂ ನಾರದೋ ಮಹ್ಯಂ ತವ ಪುತ್ರೋ ಭವೇದಿತಿ ।।

ನಂತರ ಮಹರ್ಷಿಗಳು ದಕ್ಷ ಮತ್ತು ಪರಮೇಷ್ಠಿಯರ ನಡುವೆ ಸಂಧಿಯನ್ನು ನಡೆಸಿದರು. ದಕ್ಷನು “ನಿನ್ನ ಪುತ್ರ ನಾರದನು ನನ್ನ ಮಗಳಲ್ಲಿ ಪುತ್ರನಾಗಿ ಹುಟ್ಟುವನು” ಎಂದನು.

19003014a ತತೋ ದಕ್ಷಸ್ತು ತಾಂ ಪ್ರಾದಾತ್ಕನ್ಯಾಂ ವೈ ಪರಮೇಷ್ಠಿನೇ ।
19003014c ಸ ತಸ್ಯಾಂ ನಾರದೋ ಜಜ್ಞೇ ದಕ್ಷಶಾಪಭಯಾದೃಷಿಃ ।।

ಅನಂತರ ದಕ್ಷನು ಆ ಕನ್ಯೆಯನ್ನು ಪರಮೇಷ್ಠಿ ಕಶ್ಯಪನಿಗೆ ನೀಡಿದನು. ದಕ್ಷಶಾಪದ ಭಯದಿಂದ ನಾರದ ಋಷಿಯು ಅವಳಲ್ಲಿ ಹುಟ್ಟಿದನು.”

19003015 ಜನಮೇಜಯ ಉವಾಚ ।
19003015a ಕಥಂ ವಿನಾಶಿತಾಃ ಪುತ್ರಾ ನಾರದೇನ ಮಹರ್ಷಿಣಾ ।
19003015c ಪ್ರಜಾಪತೇರ್ದ್ವಿಜಶ್ರೇಷ್ಠ ಶ್ರೋತುಮಿಚ್ಛಾಮಿ ತತ್ತ್ವತಃ ।।

ಜನಮೇಜಯನು ಹೇಳಿದನು: “ದ್ವಿಜಶ್ರೇಷ್ಠ! ಮಹರ್ಷಿ ನಾರದನಿಂದ ಪ್ರಜಾಪತಿ ದಕ್ಷನ ಪುತ್ರರು ವಿನಾಶರಾದರು ಎನ್ನುವುದನ್ನು ತತ್ತ್ವತಃ ಕೇಳಬಯಸುತ್ತೇನೆ.”

19003016 ವೈಶಂಪಾಯನ ಉವಾಚ ।
19003016a ದಕ್ಷಸ್ಯ ಪುತ್ರಾ ಹರ್ಯಶ್ವಾ ವಿವರ್ಧಯಿಷವಃ ಪ್ರಜಾಃ ।
19003016c ಸಮಾಗತಾ ಮಹಾವೀರ್ಯಾ ನಾರದಸ್ತಾನುವಾಚ ಹ ।।

ವೈಶಂಪಾಯನನು ಹೇಳಿದನು: “ದಕ್ಷನ ಆ ಮಹಾವೀರ್ಯ ಪುತ್ರರು ಪ್ರಜೆಗಳನ್ನು ವರ್ಧಿಸಲು ಸೇರಿದಾಗ ನಾರದನು ಅವರಿಗೆ ಹೇಳಿದ್ದನು:

19003017a ಬಾಲಿಶಾ ಬತ ಯೂಯಂ ವೈ ನಾಸ್ಯಾ ಜಾನೀತ ವೈ ಭುವಃ ।
19003017c ಪ್ರಮಾಣಂ ಸ್ರಷ್ಟುಕಾಮಾಃ ಸ್ಥ ಪ್ರಜಾಃ ಪ್ರಾಚೇತಸಾತ್ಮಜಾಃ ।
19003017e ಅಂತರೂರ್ಧ್ವಮಧಶ್ಚೈವ ಕಥಂ ಸ್ರಕ್ಷ್ಯಥ ವೈ ಪ್ರಜಾಃ ।।

“ಪ್ರಾಚೇತಸನ ಮಕ್ಕಳೇ! ಅಯ್ಯೋ ನೀವು ಬಾಲಿಶರಲ್ಲವೇ? ಪ್ರಜೆಗಳನ್ನು ಸೃಷ್ಟಿಸಲು ಬಯಸುವ ನೀವು ಅವರು ವಾಸಿಸುವ ಈ ಭೂಮಿಯ ಆಳ, ಎತ್ತರ ಮತ್ತು ವಿಸ್ತಾರಗಳ ಪ್ರಮಾಣವು ಎಷ್ಟು ಎನ್ನುವುದನ್ನು ತಿಳಿಯದೇ ಪ್ರಜೆಗಳನ್ನು ಹೇಗೆ ಸೃಷ್ಟಿಸುವಿರಿ?”

19003018a ತೇ ತು ತದ್ವಚನಂ ಶ್ರುತ್ವಾ ಪ್ರಯಾತಾಃ ಸರ್ವತೋದಿಶಮ್ ।
19003018c ಪ್ರಮಾಣಂ ದ್ರಷ್ಟುಕಾಮಾಸ್ತೇ ಗತಾಃ ಪ್ರಾಚೇತಸಾತ್ಮಜಾಃ ।।

ಅವನ ಆ ಮಾತನ್ನು ಕೇಳಿ ಪ್ರಾಚೇತಸನ ಮಕ್ಕಳು ಭೂಮಿಯ ಪ್ರಮಾಣವನ್ನು ಅಳೆಯಲು ಬಯಸಿ ಸರ್ವ ದಿಕ್ಕುಗಳಲ್ಲಿ ಪ್ರಯಾಣಿಸಿದರು.

19003019a ವಾಯೋರನಶನಂ ಪ್ರಾಪ್ಯ ಗತಾಸ್ತೇ ವೈ ಪರಾಭವಮ್ ।
19003019c ಅದ್ಯಾಪಿ ನ ನಿವರ್ತಂತೇ ಸಮುದ್ರೇಭ್ಯ ಇವಾಪಗಾಃ ।।

ಪ್ರಾಣವಾಯುವಿಗೆ ಆಹಾರವನ್ನು ಪಡೆಯದೇ ಅವರು ಪರಾಭವವನ್ನು ಹೊಂದಿದರು. ಸಮುದ್ರವನ್ನು ಸೇರುವ ನದಿಗಳು ಪುನಃ ಹಿಂದಿರುಗಿ ಬರದಂತೆ ಇದೂವರೆಗೆ ಅವರು ಹಿಂದಿರುಗಲಿಲ್ಲ.

19003020a ಹರ್ಯಶ್ವೇಷ್ವಥ ನಷ್ಟೇಷು ದಕ್ಷಃ ಪ್ರಾಚೇತಸಃ ಪುನಃ ।
19003020c ವೈರಿಣ್ಯಾಮೇವ ಪುತ್ರಾಣಾಂ ಸಹಸ್ರಮಸೃಜತ್ಪ್ರಭುಃ ।।

ಹರ್ಯಾಶ್ವಾದಿಗಳು ನಷ್ಟವಾಗಲು ಪ್ರಭು ಪ್ರಾಚೇತಸ ದಕ್ಷನು ಪುನಃ ವೀರಣನ ಪುತ್ರಿಯಲ್ಲಿ ಸಹಸ್ರ ಪುತ್ರರನ್ನು ಸೃಷ್ಟಿಸಿದನು.

19003021a ವಿವರ್ಧಯಿಷವಸ್ತೇ ತು ಶಬಲಾಶ್ವಾಃ ಪ್ರಜಾಸ್ತದಾ ।
19003021c ಪೂರ್ವೋಕ್ತಂ ವಚನಂ ತಾತ ನಾರದೇನೈವ ನೋದಿತಾಃ ।।

ಆ ಶಬಲಾಶ್ವರು ಪ್ರಜೆಗಳನ್ನು ವರ್ಧಿಸಲು ತೊಡಗಿದಾಗ ಹಿಂದಿನಂತೆ ನಾರದನು ಅವರಿಗೆ ಪೃಥ್ವಿಯ ಪ್ರಮಾಣವನ್ನು ಅಳೆಯುವಂತೆ ಹೇಳಿ ಪ್ರಚೋದಿಸಿದನು.

19003022a ಅನ್ಯೋನ್ಯಮೂಚುಸ್ತೇ ಸರ್ವೇ ಸಮ್ಯಗಾಹ ಮಹಾಮುನಿಃ ।
19003022c ಭ್ರಾತೄಣಾಂ ಪದವೀಂ ಜ್ಞಾತುಂ ಗಂತವ್ಯಂ ನಾತ್ರ ಸಂಶಯಃ ।।

ಅವರೆಲ್ಲರೂ ಅನ್ಯೋನ್ಯರಲ್ಲಿ ಹೇಳಿಕೊಂಡರು: “ಮಹಾಮುನಿಯು ನಿಜವನ್ನೇ ಹೇಳುತ್ತಿದ್ದಾನೆ. ಅಣ್ಣಂದಿರ ಮಾರ್ಗವನ್ನು ತಿಳಿದುಕೊಳ್ಳಲು ನಾವೂ ಕೂಡ ಹೋಗಬೇಕು. ಅದರಲ್ಲಿ ಸಂಶಯವಿಲ್ಲ.

19003023a ಜ್ಞಾತ್ವಾ ಪ್ರಮಾಣಂ ಪೃಥ್ವ್ಯಾಶ್ಚ ಸುಖಂ ಸ್ರಕ್ಷ್ಯಾಮಹೇ ಪ್ರಜಾಃ ।
19003023c ಏಕಾಗ್ರಾಃ ಸ್ವಸ್ಥಮನಸಾ ಯಥಾವದನುಪೂರ್ವಶಃ ।।

ಪೃಥ್ವಿಯ ಪ್ರಮಾಣವನ್ನು ತಿಳಿದುಕೊಂಡನಂತರ ನಾವು ಸುಖವಾಗಿ ಪ್ರಜೆಗಳನ್ನು ಸೃಷ್ಟಿಸಬಲ್ಲೆವು.” ಹೀಗೆ ಮಾತನಾಡಿಕೊಂಡು ಏಕಾಗ್ರರಾಗಿ ಸ್ವಸ್ಥಮನಸ್ಸಿನಿಂದ ಅವರು ಹಿಂದಿನವರನ್ನು ಅನುಸರಿಸಿ ಹೋದರು.

19003024a ತೇಽಪಿ ತೇನೈವ ಮಾರ್ಗೇಣ ಪ್ರಯಾತಾಃ ಸರ್ವತೋದಿಶಮ್ ।
19003024c ಅದ್ಯಾಪಿ ನ ನಿವರ್ತಂತೇ ಸಮುದ್ರೇಭ್ಯ ಇವಾಪಗಾಃ ।।

ಅವರ ಮಾರ್ಗದಲ್ಲಿಯೇ ಸರ್ವತೋ ದಿಕ್ಕುಗಳಲ್ಲಿ ಹೊರಟುಹೋದ ಶಬಲಾಶ್ವರೂ ಕೂಡ ಸಮುದ್ರಕ್ಕೆ ಸೇರಿದ ನದಿಗಳಂತೆ ಇದೂವರೆಗೆ ಹಿಂದಿರುಗಿ ಬರಲಿಲ್ಲ.

19003025a ನಷ್ಟೇಶು ಶಬಲಾಶ್ವೇಶು ದಕ್ಷ ಕ್ರುದ್ಧೋಽವದದ್ವಚಃ ।
19003025c ನಾರದಂ ನಾಶಮೇಹೀತಿ ಗರ್ಭವಾಸಂ ವಸೇತಿ ಚ ।।

ಶಬಲಾಶ್ವರ ನಷ್ಟದಿಂದ ಕ್ರುದ್ಧನಾದ ದಕ್ಷನು ನಾರದನಿಗೆ “ನೀನು ನಾಶನಾಗಿ ಪುನಃ ಗರ್ಭದಲ್ಲಿ ವಾಸಿಸುತ್ತೀಯೆ!” ಎಂದು ಹೇಳಿದನು.

19003026a ತದಾ ಪ್ರಭೃತಿ ವೈ ಭ್ರಾತಾ ಭ್ರಾತುರನ್ವೇಷಣಂ ನೃಪ ।
19003026c ಪ್ರಯಾತೋ ನಶ್ಯತಿ ಕ್ಷಿಪ್ರಂ ತನ್ನ ಕಾರ್ಯಂ ವಿಪಶ್ಚಿತಾ ।।

ನೃಪ! ಅಂದಿನಿಂದ ಅಣ್ಣನನ್ನು ಹುಡುಕಲು ತಮ್ಮನು ಹೋಗಬಾರದು. ಹಾಗೆ ಹೋದವರು ಕಾರ್ಯವು ಕೈಗೊಳ್ಳದೇ ಕ್ಷಿಪ್ರವಾಗಿ ನಾಶಹೊಂದುತ್ತಾರೆ.

19003027a ತಾಂಶ್ಚಾಪಿ ನಷ್ಟಾನ್ವಿಜ್ಞಾಯ ಪುತ್ರಾಂದಕ್ಷಃ ಪ್ರಜಾಪತಿಃ ।
19003027c ಷಷ್ಟಿಂ ಭೂಯೋಽಸೃಜತ್ಕನ್ಯಾ ವೀರಣ್ಯಾಮಿತಿ ನಃ ಶ್ರುತಮ್ ।।

ಆ ಪುತ್ರರ ನಾಶವನ್ನೂ ತಿಳಿದ ಪ್ರಜಾಪತಿ ದಕ್ಷನು ವೀರಣನ ಪುತ್ರಿಯಲ್ಲಿ ಪುನಃ ಅರವತ್ತು ಕನ್ಯೆಯರನ್ನು ಸೃಷ್ಟಿಸಿದನೆಂದು ಕೇಳಿದ್ದೇವೆ.

19003028a ತಾಸ್ತದಾ ಪ್ರತಿಜಗ್ರಾಹ ಭಾರ್ಯಾರ್ಥಂ ಕಶ್ಯಪಃ ಪ್ರಭುಃ ।
19003028c ಸೋಮೋ ಧರ್ಮಶ್ಚ ಕೌರವ್ಯ ತಥೈವಾನ್ಯೇ ಮಹರ್ಷಯಃ ।।

ಕೌರವ್ಯ! ಅವರನ್ನು ಪ್ರಭು ಕಶ್ಯಪ, ಸೋಮ, ಧರ್ಮ ಮತ್ತು ಅನ್ಯ ಮಹರ್ಷಿಗಳು ಪತ್ನಿಯರನ್ನಾಗಿ ಸ್ವೀಕರಿಸಿದರು.

19003029a ದದೌ ಸ ದಶ ಧರ್ಮಾಯ ಕಶ್ಯಪಾಯ ತ್ರಯೋದಶ ।
19003029c ಸಪ್ತವಿಂಶತಿಂ ಸೋಮಾಯ ಚತಸ್ರೋಽರಿಷ್ಟನೇಮಿನೇ ।।
19003030a ದ್ವೇ ಚೈವ ಭೃಗುಪುತ್ರಾಯ ದ್ವೇ ಚೈವಾಂಗಿರಸೇ ತಥಾ ।
19003030c ದ್ವೇ ಕೃಶಾಶ್ವಾಯ ವಿದುಷೇ ತಾಸಾಂ ನಾಮಾನಿ ಮೇ ಶೃಣು ।।

ಅವನು ಹತ್ತು ಪುತ್ರಿಯರನ್ನು ಧರ್ಮನಿಗೆ, ಹದಿಮೂರು ಪುತ್ರಿಯರನ್ನು ಕಶ್ಯಪನಿಗೆ, ಇಪ್ಪತ್ತೇಳು ಪುತ್ರಿಯರನ್ನು ಸೋಮನಿಗೆ, ನಾಲ್ವರನ್ನು ಅರಿಷ್ಟನೇಮಿಗೆ, ಇಬ್ಬರನ್ನು ಭೃಗುಪುತ್ರನಿಗೆ, ಇಬ್ಬರನ್ನು ಆಂಗಿರಸನಿಗೆ, ಹಾಗೆಯೇ ಇಬ್ಬರನ್ನು ಕೃಶಾಶ್ವನಿಗೆ ಕೊಟ್ಟನು. ಅವರ ಹೆಸರುಗಳನ್ನು ನನ್ನಿಂದ ಕೇಳು.

19003031a ಅರುಂಧತೀ ವಸುರ್ಯಾಮೀ ಲಂಬಾ ಭಾನುರ್ಮರುತ್ವತೀ ।
19003031c ಸಂಕಲ್ಪಾ ಚ ಮುಹೂರ್ತಾ ಚ ಸಾಧ್ಯಾ ವಿಶ್ವಾ ಚ ಭಾರತ ।
19003031e ಧರ್ಮಪತ್ನ್ಯೋ ದಶ ತ್ವೇತಾಸ್ತಾಸ್ವಪತ್ಯಾನಿ ಮೇ ಶ್ರೃಣು ।।

ಭಾರತ! ಅರುಂಧತೀ, ವಸು, ಯಾಮೀ, ಲಂಬಾ, ಭಾನು, ಮರುತ್ವತೀ, ಸಂಕಲ್ಪಾ, ಮುಹೂರ್ತಾ, ಸಾಧ್ಯಾ, ಮತ್ತು ವಿಶ್ವಾ – ಈ ಹತ್ತು ಮಂದಿ ಧರ್ಮನ ಪತ್ನಿಯರು. ಅವರ ಮಕ್ಕಳ ಕುರಿತು ಕೇಳು.

19003032a ವಿಶ್ವೇದೇವಾಶ್ಚ ವಿಶ್ವಾಯಾಃ ಸಾಧ್ಯಾನ್ಸಾಧ್ಯಾ ವ್ಯಜಾಯತ ।
19003032c ಮರುತ್ವತ್ಯಾಂ ಮರುತ್ವಂತೋ ವಸೋಸ್ತು ವಸವಸ್ತಥಾ ।।

ವಿಶ್ವಾಳಲ್ಲಿ ವಿಶ್ವೇದೇವರು, ಸಾಧ್ಯಳಲ್ಲಿ ಸಾಧ್ಯರು, ಮರುತ್ವತಿಯಲ್ಲಿ ಮರುತ್ವಂತರು, ಮತ್ತು ಹಾಗೆಯೇ ವಸುವಿನಲ್ಲಿ ವಸುಗಳೂ ಜನಿಸಿದರು.

19003033a ಭಾನೋಸ್ತು ಭಾನವಸ್ತಾತ ಮುಹೂರ್ತಾಯಾ ಮುಹೂರ್ತಜಾಃ ।।
19003034a ಲಂಬಾಯಾಶ್ಚೈವ ಘೋಷೋಽಥ ನಾಗವೀಥೀ ಚ ಯಾಮಿಜಾ ।
19003034c ಪೃಥಿವೀವಿಷಯಂ ಸರ್ವಮರುಂಧತ್ಯಾಂ ವ್ಯಜಾಯತ ।।

ತಾತ! ಭಾನುವಿನಲ್ಲಿ ಭಾನವನು, ಮುಹೂರ್ತ5ಳಲ್ಲಿ ಮುಹೂರ್ತಜರು, ಲಂಬಾಳಲ್ಲಿ ಘೋಷ6ನೂ, ಯಾಮಿಯಲ್ಲಿ ನಾಗವೀಥಿಯೂ ಜನಿಸಿದರು. ಮತ್ತು ಅರುಂಧತಿಯಲ್ಲಿ ಪೃಥ್ವಿಗೆ ಸಂಬಂಧ ವಿಷಯಗಳು7 ಜನಿಸಿದವು.

19003035a ಸಂಕಲ್ಪಾಯಾಸ್ತು ಸರ್ವಾತ್ಮಾ ಜಜ್ಞೇ ಸಂಕಲ್ಪ ಏವ ಹಿ ।
19003035c ನಾಗವೀಥ್ಯಾಶ್ಚ ಯಾಮಿನ್ಯಾ ವೃಷಲಂಬಾ ವ್ಯಜಾಯತ ।।

ಸಂಕಲ್ಪಳಿಂದ ಸರ್ವಾತ್ಮ ಸಂಕಲ್ಪರೂ ಹುಟ್ಟಿದರು. ಯಾಮಿ8ಯ ಮಗಳು ನಾಗವೀಥಿಯಲ್ಲಿ ವೃಷಲಂಬಾ9ಳು ಜನಿಸಿದಳು.

19003036a ಯಾ ರಾಜನ್ಸೋಮಪತ್ನ್ಯಸ್ತು ದಕ್ಷಃ ಪ್ರಾಚೇತಸೋ ದದೌ ।
19003036c ಸರ್ವಾ ನಕ್ಷತ್ರನಾಮ್ನ್ಯಸ್ತಾ ಜ್ಯೋತಿಷೇ ಪರಿಕೀರ್ತಿತಾಃ ।।

ರಾಜನ್! ಪ್ರಾಚೇತಸ ದಕ್ಷನು ಸೋಮನಿಗಿತ್ತ ಪತ್ನಿಯರು ಎಲ್ಲರೂ ನಕ್ಷತ್ರಗಳ ಹೆಸರಿನಿಂದ ಜೋತಿಃಶಾಸ್ತ್ರದಲ್ಲಿ ಪ್ರಖ್ಯಾತರಾಗಿದ್ದಾರೆ.

19003037a ಯೇ ತ್ವನ್ಯೇ ಖ್ಯಾತಿಮಂತೋ ವೈ ದೇವಾ ಜ್ಯೋತಿಃ ಪುರೋಗಮಾಃ ।
19003037c ವಸವೋಽಷ್ಟೌ ಸಮಾಖ್ಯಾತಾಸ್ತೇಷಾಂ ವಕ್ಷ್ಯಾಮಿ ವಿಸ್ತರಮ್ ।।

ಈ ಜ್ಯೋತಿಗಳಿಗೂ ಮುಂದಿರುವ ಅನ್ಯ ದೇವತೆಗಳು ಅಷ್ಟವಸುಗಳೆಂದು ಖ್ಯಾತರಾಗಿದ್ದಾರೆ. ಅವರ ಕುರಿತು ನಿನಗೆ ವಿಸ್ತಾರವಾಗಿ ಹೇಳುತ್ತೇನೆ.

19003038a ಆಪೋ ಧ್ರುವಶ್ಚ ಸೋಮಶ್ಚ ಧರಶ್ಚೈವಾನಿಲಾನಲೌ ।
19003038c ಪ್ರತ್ಯೂಷಶ್ಚ ಪ್ರಭಾಸಶ್ಚ ವಸವೋ ನಾಮಭಿಃ ಸ್ಮೃತಾಃ ।।

ಆಪ, ಧ್ರುವ, ಸೋಮ, ಧರ, ಅನಿಲ, ಅನಲ, ಪ್ರತ್ಯೂಷ, ಪ್ರಭಾಸ ಇವುಗಳು ವಸುಗಳ ಹೆಸರುಗಳೆಂದು ಕೇಳಿದ್ದೇವೆ.

19003039a ಆಪಸ್ಯ ಪುತ್ರೋ ವೈತಂಡ್ಯಃ ಶ್ರಮಃ ಶ್ರಾಂತೋ ಮುನಿಸ್ತಥಾ ।
19003039c ಧ್ರುವಸ್ಯ ಪುತ್ರೋ ಭಗವಾನ್ಕಾಲೋ ಲೋಕಪ್ರಕಾಲನಃ ।।

ಆಪನ ಪುತ್ರರು ವೈತಂಡ್ಯ, ಶ್ರಮ, ಶ್ರಾಂತ ಮತ್ತು ಮುನಿ. ಧ್ರುವನ ಪುತ್ರನು ಲೋಕಪ್ರಕಾಲನ ಭಗವಾನ್ ಕಾಲನು.

19003040a ಸೋಮಸ್ಯ ಭಗವಾನ್ವರ್ಚಾ ವರ್ಚಸ್ವೀ ಯೇನ ಜಾಯತೇ ।
19003040c ಧರಸ್ಯ ಪುತ್ರೋ ದ್ರವಿಣೋ ಹುತಹವ್ಯವಹಸ್ತಥಾ ।
19003040e ಮನೋಹರಾಯಾಃ ಶಿಶಿರಃ ಪ್ರಾಣೋಽಥ ರಮಣಸ್ತಥಾ ।।

ಯಾರನ್ನು ಪೂಜಿಸುವುದರಿಂದ ವರ್ಚಸ್ವಿಯಾಗುತ್ತಾನೋ ಆ ಭಗವಾನ್ ವರ್ಚನು ವಸು ಸೋಮನ ಮಗ. ದ್ರವಿಣ ಮತ್ತು ಹುತಹವ್ಯವಹರು ಧರನ ಪುತ್ರರು. ಧರನ ಇನ್ನೊಬ್ಬ ಪತ್ನಿ ಮನೋಹರೆಯಲ್ಲಿ ಅವನಿಗೆ ಶಿಶಿರ, ಪ್ರಾಣ ಮತ್ತು ರಮಣರೆಂಬ ಮಕ್ಕಳು ಹುಟ್ಟಿದರು.

19003041a ಅನಿಲಸ್ಯ ಶಿವಾ ಭಾರ್ಯಾ ತಸ್ಯಾಃ ಪುತ್ರೋ ಮನೋಜವಃ ।
19003041c ಅವಿಜ್ಞಾತಗತಿಶ್ಚೈವ ದ್ವೌ ಪುತ್ರಾವನಿಲಸ್ಯ ತು ।।

ವಸು ಅನಿಲನ ಭಾರ್ಯೆ ಶಿವಾ. ಅವಳ ಪುತ್ರರು ಮನೋಜವ ಮತ್ತು ಅವಿಜ್ಞಾತಗತಿ. ಇಬ್ಬರೂ ಅನಿಲನ ಪುತ್ರರು.

19003042a ಅಗ್ನಿಪುತ್ರಃ ಕುಮಾರಸ್ತು ಶರಸ್ತಂಬೇ ಶ್ರಿಯಾನ್ವಿತಃ ।
19003042c ತಸ್ಯ ಶಾಖೋ ವಿಶಾಖಶ್ಚ ನೈಗಮೇಯಶ್ಚ ಪೃಷ್ಠಜಾಃ ।।

ಅಗ್ನಿಪುತ್ರ ಕುಮಾರನಾದರೋ ಶರಸ್ತಂಭದಲ್ಲಿ ಪ್ರಕಟಗೊಂಡಿದ್ದನು. ಅವನ ನಂತರ ಹುಟ್ಟಿದವರು ಶಾಖ, ವಿಶಾಖ ಮತ್ತು ನೈಗಮೇಯರು.

19003043a ಅಪತ್ಯಂ ಕೃತ್ತಿಕಾನಾಂ ತು ಕಾರ್ತ್ತಿಕೇಯ ಇತಿ ಸ್ಮೃತಃ ।
19003043c ಸ್ಕಂದಃ ಸನತ್ಕುಮಾರಶ್ಚ ಸೃಶ್ಟಃ ಪಾದೇನ ತೇಜಸಃ ।।

ಕೃತ್ತಿಕರ ಮಗನಾಗಿದ್ದುದರಿಂದ ಕುಮಾರನನ್ನು ಕಾರ್ತಿಕೇಯನೆಂದೂ ಹೇಳುತ್ತಾರೆ. ಸ್ಕಂದನೇ ಸನತ್ಕುಮಾರ. ಇವನನ್ನು ಅಗ್ನಿಯು ತನ್ನ ನಾಲ್ಕನೆಯ ಒಂದು ಭಾಗದಿಂದ ಸೃಷ್ಟಿಸಿದನು.

19003044a ಪ್ರತ್ಯೂಷಸ್ಯ ವಿದುಃ ಪುತ್ರ ಋಶ್ಟಿಂ ನಾಮ್ನಾ ಚ ದೇವಲಮ್ ।
19003044c ದ್ವೌ ಪುತ್ರೌ ದೇವಲಸ್ಯಾಪಿ ಕ್ಷಮಾವಂತೌ ತಪಸ್ವಿನೌ ।।

ಪ್ರತ್ಯೂಷನ ಮಗನ ಹೆಸರು ದೇವಲ ಮತ್ತು ಮಗಳು ಋಷ್ಟಿ. ದೇವಲನಿಗೂ ಇಬ್ಬರು ಕ್ಷಮಾವಂತ ತಪಸ್ವೀ ಪುತ್ರರಿದ್ದರು.

19003045a ಬೃಹಸ್ಪತೇಸ್ತು ಭಗಿನೀ ವರಸ್ತ್ರೀ ಬ್ರಹ್ಮಚಾರಿಣೀ ।
19003045c ಯೋಗಸಿದ್ಧಾ ಜಗತ್ಕೃತ್ಸ್ನಮಸಕ್ತಾ ವಿಚಚಾರ ಹ ।।

ಬೃಹಸ್ಪತಿಯ ತಂಗಿ ವರಸ್ತ್ರೀ ಬ್ರಹ್ಮಚಾರಿಣಿಯು ಯೋಗಸಿದ್ಧಳಾಗಿ ಜಗತ್ತಿನಲ್ಲಿಯೇ ಅನಾಸಕ್ತಳಾಗಿ ಸಂಚರಿಸುತ್ತಿದ್ದಳು.

19003046a ಪ್ರಭಾಸಸ್ಯ ಚ ಸಾ ಭಾರ್ಯಾ ವಸೂನಾಮಷ್ಟಮಸ್ಯ ಚ ।
19003046c ವಿಶ್ವಕರ್ಮಾ ಮಹಾಭಾಗಸ್ತಸ್ಯಾಂ ಜಜ್ಞೇ ಪ್ರಜಾಪತಿಃ ।।

ಅವಳು ಎಂಟನೇ ವಸುವಾದ ಪ್ರಭಾಸನ ಪತ್ನಿಯಾದಳು. ಅವಳಲ್ಲಿ ಮಹಾಭಾಗ ಪ್ರಜಾಪತಿ ವಿಶ್ವಕರ್ಮನು ಜನಿಸಿದನು.

19003047a ಕರ್ತಾ ಶಿಲ್ಪಸಹಸ್ರಾಣಾಂ ತ್ರಿದಶಾನಾಂ ಚ ವಾರ್ಧಕಿಃ ।
19003047c ಭೂಷಣಾನಾಂ ಚ ಸರ್ವೇಷಾಂ ಕರ್ತಾ ಶಿಲ್ಪವತಾಂ ವರಃ ।।

ಸಹಸ್ರಾರು ಶಿಲ್ಪಗಳ ಕರ್ತನಾದ ಅವನು ತ್ರಿದಶರ ಬಡಗಿಯಾದನು. ಆ ಶಿಲ್ಪಕಾರರಲ್ಲಿ ಶ್ರೇಷ್ಠನು ಸರ್ವ ಭೂಷಣಗಳನ್ನೂ ರಚಿಸಿದನು.

19003048a ಯಃ ಸರ್ವಾಸಾಂ ವಿಮಾನಾನಿ ದೇವತಾನಾಂ ಚಕಾರ ಹ ।
19003048c ಮಾನುಷ್ಯಾಶ್ಚೋಪಜೀವಂತಿ ಯಸ್ಯ ಶಿಲ್ಪಂ ಮಹಾತ್ಮನಃ ।।

ಅವನು ದೇವತೆಗಳ ಸರ್ವ ವಿಮಾನಗಳನ್ನೂ ನಿರ್ಮಿಸಿದನು. ಈ ಮಹಾತ್ಮ ಶಿಲ್ಪಿಯನ್ನು ಅನುಸರಿಸಿ ಮನುಷ್ಯರೂ ಉಪಜೀವನ ಮಾಡುತ್ತಾರೆ.

19003049a ಸುರಭೀ ಕಶ್ಯಪಾದ್ರುದ್ರಾನೇಕಾದಶ ವಿನಿರ್ಮಮೇ ।
19003049c ಮಹಾದೇವಪ್ರಸಾದೇನ ತಪಸಾ ಭಾವಿತಾ ಸತೀ ।।

ಕಶ್ಯಪನ ಪತ್ನಿ ಸುರಭಿಯು ತಪಸ್ಸಿನಿಂದ ಮಹಾದೇವನನ್ನು ಮೆಚ್ಚಿಸಿ ಅವನಿಂದ ಹನ್ನೊಂದು ರುದ್ರರಿಗೆ ಜನ್ಮವಿತ್ತಳು.

19003050a ಅಜೈಕಪಾದಹಿರ್ಬುಧ್ನ್ಯಸ್ತ್ವಷ್ಟಾ ರುದ್ರಾಶ್ಚ ಭಾರತ ।
19003050c ತ್ವಷ್ಟುಶ್ಚೈವಾತ್ಮಜಃ ಶ್ರೀಮಾನ್ವಿಶ್ವರೂಪೋ ಮಹಾಯಶಾಃ ।।

ಭಾರತ! ಅಜೈಕಪಾದ, ಅಹಿರ್ಬುಧ್ನ್ಯ, ತ್ವಷ್ಟಾ, ಮತ್ತು ರುದ್ರರು ಸುರಭಿಯ ಮಕ್ಕಳು. ತ್ವಷ್ಟನ ಮಗನು ಮಹಾಯಶಸ್ವೀ ಶ್ರೀಮಾನ್ ವಿಶ್ವರೂಪನು.

19003051a ಹರಶ್ಚ ಬಹುರೂಪಶ್ಚ ತ್ರ್ಯಂಬಕಶ್ಚಾಪರಾಜಿತಃ ।
19003051c ವೃಷಾಕಪಿಶ್ಚ ಶಂಭುಶ್ಚ ಕಪರ್ದೀ ರೇವತಸ್ತಥಾ ।।
19003052a ಮೃಗವ್ಯಾಧಶ್ಚ ಸರ್ಪಶ್ಚ ಕಪಾಲೀ ಚ ವಿಶಾಂಪತೇ ।
19003052c ಏಕಾದಶೈತೇ ಕಥಿತಾ ರುದ್ರಾಸ್ತ್ರಿಭುವನೇಶ್ವರಾಃ ।।

ವಿಶಾಂಪತೇ! ಹರ, ಬಹುರೂಪ, ತ್ರ್ಯಂಬಕ, ಅಪರಾಜಿತ, ವೃಷಾಕಪಿ, ಶಂಭು, ಕಪರ್ದೀ, ರೇವತ, ಮೃಗವ್ಯಾಧ, ಸರ್ಪ, ಕಪಾಲೀ ಇವರು ಮೂರೂ ಭುವನಗಳ ಈಶ್ವರರಾದ ಏಕಾದಶ ರುದ್ರರು.

19003053a ಶತಂ ತ್ವೇವಂ ಸಮಾಖ್ಯಾತಂ ರುದ್ರಾಣಾಮಮಿತೌಜಸಾಮ್ ।
19003053c ಪುರಾಣೇ ಭರತಶ್ರೇಷ್ಠ ಯೈರ್ವ್ಯಾಪ್ತಾಃ ಸಚರಾಚರಾಃ ।।

ಭರತಶ್ರೇಷ್ಠ! ಪುರಾಣಗಳಲ್ಲಿ ಅಮಿತೌಜಸ ರುದ್ರರ ನೂರು ರೂಪಗಳನ್ನು ಹೇಳಲಾಗಿದೆ. ಇವರು ಸಚರಾಚರಗಳನ್ನು ವ್ಯಾಪಿಸಿದ್ದಾರೆ.

19003054a ಲೋಕಾ ಭರತಶಾರ್ದೂಲ ಕಶ್ಯಪಸ್ಯ ನಿಬೋಧ ಮೇ ।
19003054c ಅದಿತಿರ್ದಿತಿರ್ದನುಶ್ಚೈವ ಅರಿಷ್ಟಾ ಸುರಸಾ ಖಶಾ ।।
19003055a ಸುರಭಿರ್ವಿನತಾ ಚೈವ ತಾಮ್ರಾ ಕ್ರೋಧವಶಾ ಇರಾ ।
19003055c ಕದ್ರುರ್ಮುನಿಶ್ಚ ರಾಜೇಂದ್ರ ತಾಸ್ವಪತ್ಯಾನಿ ಮೇ ಶೃಣು ।।

ಭರತಶಾರ್ದೂಲ! ಈಗ ಕಶ್ಯಪನ ಪತ್ನಿಯರ ಕುರಿತು ನನ್ನಿಂದ ಕೇಳು. ಅದಿತಿ, ದಿತಿ, ದನು, ಅರಿಷ್ಟಾ, ಸುರಸಾ, ಖಶಾ, ಸುರಭಿ, ವಿನತಾ, ತಾಮ್ರಾ, ಕ್ರೋಧವಶಾ, ಇರಾ ಕದ್ರು ಮತ್ತು ಮುನಿ ಇವರು ಕಶ್ಯಪನ ಪತ್ನಿಯರು. ಅವರ ಸಂತಾನಗಳ ಕುರಿತು ನನ್ನಿಂದ ಕೇಳು.

19003056a ಪೂರ್ವಮನ್ವಂತರೇ ಶ್ರೇಷ್ಠಾ ದ್ವಾದಶಾಸನ್ಸುರೋತ್ತಮಾಃ ।
19003056c ತುಷಿತಾ ನಾಮ ತೇಽನ್ಯೋನ್ಯಮೂಚುರ್ವೈವಸ್ವತೇಽಂತರೇ ।।
19003057a ಉಪಸ್ಥಿತೇಽತಿಯಶಸಿ ಚಾಕ್ಷುಷಸ್ಯಾಂತರೇ ಮನೋಃ ।
19003057c ಹಿತಾರ್ಥಂ ಸರ್ವಸತ್ತ್ವಾನಾಂ ಸಮಾಗಮ್ಯ ಪರಸ್ಪರಮ್ ।।

ಹಿಂದಿನ ಚಾಕ್ಷುಷ ಮನ್ವಂತರದಲ್ಲಿ ತುಷಿತರೆಂಬ ಹೆಸರಿನ ಹನ್ನೆರಡು ಸುರೋತ್ತಮರಿದ್ದರು. ವೈವಸ್ವತ ಮನ್ವಂತರವು ಪ್ರಾರಂಭವಾಗುವಾಗ, ಅತಿ ಯಶಸ್ವೀ ಚಾಕ್ಷುಷಮನ್ವಂತರ ಮುಗಿಯುತ್ತಿರುವಾಗ ಅವರು ಸರ್ವ ಸತ್ತ್ವಗಳ ಹಿತವನ್ನು ಬಯಸಿ ಪರಸ್ಪರರನ್ನು ಭೇಟಿಯಾಗಿ ಅನ್ಯೋನ್ಯರಲ್ಲಿ ಹೀಗೆ ಮಾತನಾಡಿಕೊಂಡರು:

19003058a ಆಗಚ್ಛತ ದ್ರುತಂ ದೇವಾ ಅದಿತಿಂ ಸಂಪ್ರವಿಶ್ಯ ವೈ ।
19003058c ಮನ್ವಂತರೇ ಪ್ರಸೂಯಾಮಸ್ತನ್ನಃ ಶ್ರೇಯೋ ಭವಿಷ್ಯತಿ ।।

“ದೇವತೆಗಳೇ! ಶೀಘ್ರವಾಗಿ ಬನ್ನಿ! ಅದಿತಿಯ ಗರ್ಭವನ್ನು ಪ್ರವೇಶಿಸಿ ಬರುವ ವೈವಸ್ವತ ಮನ್ವಂತರದಲ್ಲಿ ಜನಿಸೋಣ. ಇದರಿಂದ ನಮಗೆ ಶ್ರೇಯಸ್ಸುಂಟಾಗುತ್ತದೆ!””

19003059 ವೈಶಂಪಾಯನ ಉವಾಚ ।
19003059a ಏವಮುಕ್ತ್ವಾ ತು ತೇ ಸರ್ವಂ ಚಾಕ್ಷುಷಸ್ಯಾಂತರೇ ಮನೋಃ ।
19003059c ಮಾರೀಚಾತ್ಕಶ್ಯಪಾಜ್ಜಾತಾಸ್ತೇಽದಿತ್ಯಾ ದಕ್ಷಕನ್ಯಯಾ ।।

ವೈಶಂಪಾಯನನು ಹೇಳಿದನು: “ಹೀಗೆ ಹೇಳಿ ಅವರೆಲ್ಲರೂ ಚಾಕ್ಷುಷ ಮನ್ವಂತರದ ಕೊನೆಯಲ್ಲಿ ಮರೀಚಿಯ ಮಗ ಕಶ್ಯಪನ ತೇಜಸ್ಸಿನಿಂದ ದಕ್ಷಕನ್ಯೆ ಅದಿತಿಯಲ್ಲಿ ಜನಿಸಿದರು.

19003060a ತತ್ರ ವಿಷ್ಣುಶ್ಚ ಶಕ್ರಶ್ಚ ಜಜ್ಞಾತೇ ಪುನರೇವ ಹಿ ।
19003060c ಅರ್ಯಮಾ ಚೈವ ಧಾತಾ ಚ ತ್ವಷ್ಟಾ ಪೂಷಾ ಚ ಭಾರತ ।।
19003061a ವಿವಸ್ವಾನ್ ಸವಿತಾ ಚೈವ ಮಿತ್ರೋ ವರುಣ ಏವ ಚ ।
19003061c ಅಂಶೋ ಭಗಶ್ಚಾತಿತೇಜಾ ಆದಿತ್ಯಾ ದ್ವಾದಶ ಸ್ಮೃತಾಃ ।।

ಅಲ್ಲಿ ವಿಷ್ಣು ಮತ್ತು ಇಂದ್ರರು ಪುನಃ ಜನ್ಮತಳೆದರು. ಅವರೊಂದಿಗೆ ಅರ್ಯಮಾ, ಧಾತಾ, ತ್ವಷ್ಟಾ, ಪೂಷಾ, ವಿವಸ್ವಾನ್, ಸವಿತಾ, ಮಿತ್ರ, ವರುಣ, ಅಂಶ ಮತ್ತು ಅತಿತೇಜಸ್ವೀ ಭಗ ಇವರು ದ್ವಾದಶ ಆದಿತ್ಯರೆಂದು ಕರೆಯಲ್ಪಟ್ಟಿದ್ದಾರೆ.

19003062a ಚಾಕ್ಷುಶಸ್ಯಾಂತರೇ ಪೂರ್ವಮಾಸನ್ಯೇ ತುಶಿತಾಃ ಸುರಾಃ ।
19003062c ವೈವಸ್ವತೇಽಂತರೇ ತೇ ವೈ ಆದಿತ್ಯಾ ದ್ವಾದಶ ಸ್ಮೃತಾಃ ।।

ಹಿಂದೆ ಚಾಕ್ಷುಷ ಮನ್ವಂತರದಲ್ಲಿ ತುಷಿತಾ ಎಂದು ಕರೆಯಲ್ಪಟ್ಟಿದ್ದ ಸುರರೇ ವೈವಸ್ವತ ಮನ್ವಂತರದಲ್ಲಿ ದ್ವಾದಶ ಆದಿತ್ಯರೆಂದಾದರು.

19003063a ಸಪ್ತವಿಂಶತಿರ್ಯಾಃ ಪ್ರೋಕ್ತಾಃ ಸೋಮಪತ್ನ್ಯೋಽಥ ಸುವ್ರತಾಃ ।
19003063c ತಾಸಾಮಪತ್ಯಾನ್ಯಭವಂದೀಪ್ತಾನ್ಯಮಿತತೇಜಸಾಂ ।।

ಸೋಮಪತ್ನಿಯರೆಂದು ಕರೆಯಲ್ಪಡುವ ಇಪ್ಪತ್ತೇಳು ಸುವ್ರತೆಯರ ಅಮಿತತೇಜಸ್ವಿ ಮಕ್ಕಳು ದೀಪ್ತರಾದರು.

19003064a ಅರಿಷ್ಟನೇಮಿಪತ್ನೀನಾಮಪತ್ಯಾನೀಹ ಷೋಡಶ ।
19003064c ಬಹುಪುತ್ರಸ್ಯ ವಿದುಷಶ್ಚತಸ್ರೋ ವಿದ್ಯುತಃ ಸ್ಮೃತಾಃ ।।

ವಿದ್ಯುತ ಎಂದು ಕರೆಯಲ್ಪಡುವ ನಾಲ್ವರು ಪತ್ನಿಯರಿಂದ ಬಹುಪುತ್ರ ಅರಿಷ್ಟನೇಮಿಯು ಹದಿನಾರು ಮಕ್ಕಳನ್ನು ಪಡೆದನು.

19003065a ಪ್ರತ್ಯಂಗಿರಸಜಾಃ ಶ್ರೇಷ್ಠಾ ಋಚೋ ಬ್ರಹ್ಮರ್ಷಿಸತ್ಕೃತಾಃ ।
19003065c ಕೃಶಾಶ್ವಸ್ಯ ತು ರಾಜರ್ಷೇರ್ದೇವಪ್ರಹರಣಾನಿ ಚ ।।

ಪ್ರತ್ಯಂಗಿರಸನ ಮಗಳು ಬ್ರಹ್ಮರ್ಷಿಸತ್ಕೃತೆ ಶ್ರೇಷ್ಠ ಋಚ ಮತ್ತು ರಾಜರ್ಷಿ ಕೃಶಾಶ್ವನಿಂದ ದೇವತೆಗಳ ಆಯುಧಗಳು ಪ್ರಕಟಗೊಂಡವು.

19003066a ಏತೇ ಯುಗಸಹಸ್ರಾಂತೇ ಜಾಯಂತೇ ಪುನರೇವ ಹ ।
19003066c ಸರ್ವದೇವಗಣಾಸ್ತಾತ ತ್ರಯಸ್ತ್ರಿಂಶತ್ತು ಕಾಮಜಾಃ ।।

ತಾತ! ಕಾಮಜರಾದ ಈ ಮೂವತ್ಮೂರು10 ಸರ್ವದೇವಗಣಗಳೂ ಒಂದು ಸಹಸ್ರ ಮಹಾಯುಗಗಳ ಅಂತ್ಯದಲ್ಲಿ11 ಪುನಃ ಹುಟ್ಟುತ್ತಾರೆ.

19003067a ತೇಷಾಮಪಿ ಚ ರಾಜೇಂದ್ರ ನಿರೋಧೋತ್ಪತ್ತಿರುಚ್ಯತೇ ।।
19003068a ಯಥಾ ಸೂರ್ಯಸ್ಯ ಗಗನೇ ಉದಯಾಸ್ತಮನೇ ಇಹ ।
19003068c ಏವಂ ದೇವನಿಕಾಯಾಸ್ತೇ ಸಂಭವಂತಿ ಯುಗೇ ಯುಗೇ ।।

ರಾಜೇಂದ್ರ! ಅವರದ್ದೂ ಕೂಡ ಉತ್ಪತ್ತಿ-ವಿನಾಶಗಳು ಆಗುತ್ತಿರುತ್ತವೆ ಎಂದು ಹೇಳುತ್ತಾರೆ. ಗಗನದಲ್ಲಿ ಸೂರ್ಯನ ಉದಯ-ಅಸ್ತಗಳು ಆಗುತ್ತಿರುವಂತೆ ಪ್ರತಿ ಯುಗದಲ್ಲಿ12 ಈ ದೇವಗಣಗಳ ಉತ್ಪತ್ತಿಯಾಗುತ್ತದೆ.

19003069a ದಿತ್ಯಾಃ ಪುತ್ರದ್ವಯಂ ಜಜ್ಞೇ ಕಶ್ಯಪಾದಿತಿ ನಃ ಶ್ರುತಮ್ ।
19003069c ಹಿರಣ್ಯಕಶಿಪುಶ್ಚೈವ ಹಿರಣ್ಯಾಕ್ಷಶ್ಚ ವೀರ್ಯವಾನ್ ।।

ಕಶ್ಯಪನಿಂದ ದಿತಿಯಲ್ಲಿ ಈರ್ವರು ಪುತ್ರರು ಜನಿಸಿದ್ದರೆಂದು ಕೇಳಿದ್ದೇವೆ: ಹಿರಣ್ಯಕಶಿಪು ಮತ್ತು ವೀರ್ಯವಾನ್ ಹಿರಣ್ಯಾಕ್ಷ.

19003070a ಸಿಂಹಿಕಾ ಚಾಭವತ್ಕನ್ಯಾ ವಿಪ್ರಚಿತ್ತೇಃ ಪರಿಗ್ರಹಃ ।
19003070c ಸೈಂಹಿಕೇಯಾ ಇತಿ ಖ್ಯಾತಾಸ್ತಸ್ಯಾಃ ಪುತ್ರಾ ಮಹಾಬಲಾಃ ।
19003070e ಗಣೈಶ್ಚ ಸಹ ರಾಜೇಂದ್ರ ದಶಸಾಹಸ್ರಮುಚ್ಯತೇ ।।

ರಾಜೇಂದ್ರ! ಕಶ್ಯಪ-ದಿತಿಯರಿಗೆ ಸಿಂಹಿಕಾ ಎನ್ನುವ ಕನ್ಯೆಯೂ ಇದ್ದಳು. ಅವಳನ್ನು ವಿಪ್ರಚಿತ್ತಿಯು ಪತ್ನಿಯಾಗಿ ಸ್ವೀಕರಿಸಿದ್ದನು. ಅವಳ ಮಹಾಬಲ ಪುತ್ರರು ಸೈಂಹಿಕೇಯರೆಂದು ಖ್ಯಾತರಾದರು. ಅವರ ಗಣವು ಹತ್ತುಸಾವಿರವೆಂದು ಹೇಳುತ್ತಾರೆ.

19003071a ತೇಷಾಂ ಪುತ್ರಾಶ್ಚ ಪೌತ್ರಾಶ್ಚ ಶತಶೋಽಥ ಸಹಸ್ರಶಃ ।
19003071c ಅಸಂಖ್ಯಾತಾ ಮಹಾಬಾಹೋ ಹಿರಣ್ಯಕಶಿಪೋಃ ಶೃಣು ।।

ಅವರ ಪುತ್ರ-ಪೌತ್ರರು ಅಸಂಖ್ಯಾತ. ನೂರಾರು ಸಹಸ್ರಾರು. ಮಹಾಬಾಹೋ! ಈಗ ಹಿರಣ್ಯಕಶಿಪುವಿನ ಕುರಿತು ಕೇಳು.

19003072a ಹಿರಣ್ಯಕಶಿಪೋಃ ಪುತ್ರಾಶ್ಚತ್ವಾರಃ ಪ್ರಥಿತೌಜಸಃ ।
19003072c ಅನುಹ್ರಾದಶ್ಚ ಹ್ರಾದಶ್ಚ ಪ್ರಹ್ರಾದಶ್ಚೈವ ವೀರ್ಯವಾನ್ ।।
19003073a ಸಂಹ್ರಾದಶ್ಚ ಚತುರ್ಥೋಽಭೂದ್ಧ್ರಾದಪುತ್ರೋ ಹ್ರದಸ್ತಥಾ ।
19003073c ಸಂಹ್ರಾದಪುತ್ರಃ ಸುಂದಶ್ಚ ನಿಸುಂದಸ್ತಾವುಭೌ ಸ್ಮೃತೌ ।।

ತೇಜಸ್ವೀ ಹಿರಣ್ಯಕಶಿಪುವಿಗೆ ನಾಲ್ವರು ಪುತ್ರರಿದ್ದರೆಂದು ಹೇಳುತ್ತಾರೆ: ಅನುಹ್ರಾದ, ಹ್ರಾದ, ವೀರ್ಯವಾನ್ ಪ್ರಹ್ರಾದ ಮತ್ತು ನಾಲ್ಕನೆಯವನು ಸಂಹ್ರಾದ. ಹ್ರಾದನ ಮಗನು ಹ್ರದನಾದನು. ಸಂಹ್ರಾದನಿಗೆ ಸುಂದ ಮತ್ತು ನಿಸುಂದರೆಂಬ ಪುತ್ರರಿದ್ದರೆಂದು ಹೇಳುತ್ತಾರೆ.

19003074a ಅನುಹ್ರಾದಸುತೌ ಹ್ಯಾಯುಃ ಶಿಬಿಕಾಲಸ್ತಥೈವ ಹ ।
19003074c ವಿರೋಚನಶ್ಚ ಪ್ರಾಹ್ರಾದಿರ್ಬಲಿರ್ಜಜ್ಞೇ ವಿರೋಚನಾತ್ ।।

ಅನುಹ್ರಾದನಿಗೆ ಆಯು ಮತ್ತು ಶಿಬಿಕಾಲರೆಂಬ ಇಬ್ಬರು ಪುತ್ರರು. ವಿರೋಚನನು ಪ್ರಹ್ರಾದನ ಮಗನು. ವಿರೋಚನನಿಂದ ಬಲಿಯು ಜನಿಸಿದನು.

19003075a ಬಲೇಃ ಪುತ್ರಶತಂ ತ್ವಾಸೀದ್ಬಾಣಜ್ಯೇಷ್ಠಂ ನರಾಧಿಪ ।
19003075c ಧೃತರಾಷ್ಟ್ರಶ್ಚ ಸೂರ್ಯಶ್ಚ ಚಂದ್ರಮಾಶ್ಚೇಂದ್ರತಾಪನಃ ।।
19003076a ಕುಂಭನಾಭೋ ಗರ್ದಭಾಕ್ಷಃ ಕುಕ್ಷಿರಿತ್ಯೇವಮಾದಯಃ ।
19003076c ಬಾಣಸ್ತೇಷಾಮತಿಬಲೋ ಜ್ಯೇಷ್ಠಃ ಪಶುಪತೇಃ ಪ್ರಿಯಃ ।।

ಬಲಿಗೆ ನೂರು ಮಕ್ಕಳಿದ್ದರು. ನರಾಧಿಪ! ಅವರಲ್ಲಿ ಬಾಣನು ಜ್ಯೇಷ್ಠನು. ಧೃತರಾಷ್ಟ್ರ, ಸೂರ್ಯ, ಚಂದ್ರಮಾ, ಇಂದ್ರತಾಪನ, ಕುಂಭನಾಭ, ಗರ್ದಭಾಕ್ಷ, ಕುಕ್ಷಿಯೇ ಮೊದಲಾದವರು. ಅವರಲ್ಲಿ ಬಾಣನು ಹಿರಿಯವನಾಗಿದ್ದನು, ಅತಿಬಲಶಾಲಿಯಾಗಿದ್ದನು ಮತ್ತು ಪಶುಪತಿಯ ಪ್ರಿಯನಾಗಿದ್ದನು.

19003077a ಪುರಾಕಲ್ಪೇ ತು ಬಾಣೇನ ಪ್ರಸಾದ್ಯೋಮಾಪತಿಂ ಪ್ರಭುಮ್ ।
19003077c ಪಾರ್ಶ್ವತೋ ವಿಹರಿಷ್ಯಾಮಿ ಇತ್ಯೇವಂ ಯಾಚಿತೋ ವರಃ ।।

ಹಿಂದಿನ ಕಲ್ಪದಲ್ಲಿ ಬಾಣನು ಪ್ರಭು ಉಮಾಪತಿಯನ್ನು ಪ್ರಸನ್ನಗೊಳಿಸಿ “ನಿನ್ನ ಪಕ್ಕದಲ್ಲಿಯೇ ವಿಹರಿಸುತ್ತೇನೆ” ಎಂಬ ವರವನ್ನು ಕೇಳಿಕೊಂಡಿದ್ದನು.

19003078a ಬಾಣಸ್ಯ ಚೇಂದ್ರದಮನೋ ಲೋಹಿತ್ಯಾಮುದಪದ್ಯತ ।
19003078c ಗಣಾಸ್ತಥಾಸುರಾ ರಾಜನ್ ಶತಸಾಹಸ್ರಸಂಮಿತಾಃ ।।

ಬಾಣನಿಗೆ ಲೋಹಿತ್ಯಳಲ್ಲಿ ಇಂದ್ರದಮನನೆಂಬ ಸುತನಾದನು. ರಾಜನ್! ಅಸುರರ ಗಣಗಳು ನೂರುಸಾವಿರದಷ್ಟಿವೆ.

19003079a ಹಿರಣ್ಯಾಕ್ಷಸುತಾಃ ಪಂಚ ವಿದ್ವಾಂಸಃ ಸುಮಹಾಬಲಾಃ ।
19003079c ಝರ್ಝರಃ ಶಕುನಿಶ್ಚೈವ ಭೂತಸಂತಾಪನಸ್ತಥಾ ।
19003079e ಮಹಾನಾಭಶ್ಚ ವಿಕ್ರಾಂತಃ ಕಾಲನಾಭಸ್ತಥೈವ ಚ ।।

ಹಿರಣ್ಯಾಕ್ಷನ ಮಕ್ಕಳು ಐವರು ವಿದ್ವಾಂಸರು ಮತ್ತು ಮಹಾಬಲಶಾಲಿಗಳು: ಝರ್ಝರ, ಶಕುನಿ, ಭೂತಸಂತಾಪನ, ಮಹಾನಾಭ ಮತ್ತು ವಿಕ್ರಾಂತ ಕಾಲನಾಭ.

19003080a ಅಭವಂದನುಪುತ್ರಾಶ್ಚ ಶತಂ ತೀವ್ರಪರಾಕ್ರಮಾಃ
19003080c ತಪಸ್ವಿನೋ ಮಹಾವೀರ್ಯಾಃ ಪ್ರಾಧಾನ್ಯೇನ ನಿಬೋಧ ತಾನ್ ।।

ದನುವಿಗೆ ನೂರು ತೀವ್ರಪರಾಕ್ರಮೀ ತಪಸ್ವಿನೀ ಮಹಾವೀರ್ಯ ಪುತ್ರರು ಆದರು. ಅವರಲ್ಲಿ ಪ್ರಧಾನರ ಕುರಿತು ಕೇಳು:

19003081a ದ್ವಿಮೂರ್ಧಾ ಶಕುನಿಶ್ಚೈವ ತಥಾ ಶಂಕುಶಿರಾ ವಿಭುಃ ।
19003081c ಶಂಕುಕರ್ಣೋ ವಿರಾಧಶ್ಚ ಗವೇಷ್ಠೀ ದುಂಧುಭಿಸ್ತಥಾ ।
19003081e ಅಯೋಮುಖಃ ಶಂಬರ ಶ್ಚ ಕಪಿಲೋ ವಾಮನಸ್ತಥಾ ।
19003082a ಮರೀಚಿರ್ಮಘವಾಂಶ್ಚೈವ ಇರಾ ಶಂಕುಶಿರಾ ವೃಕಃ ।
19003082c ವಿಕ್ಷೋಭಣಶ್ಚ ಕೇತುಶ್ಚ ಕೇತುವೀರ್ಯಶತಹ್ರದೌ ।।
19003083a ಇಂದ್ರಜಿತ್ಸತ್ಯಜಿಚ್ಚೈವ ವಜ್ರನಾಭಸ್ತಥೈವ ಚ ।
19003083c ಮಹಾನಾಭಶ್ಚ ವಿಕ್ರಾಂತಃ ಕಾಲನಾಭಸ್ತಥೈವ ಚ ।।
19003084a ಏಕಚಕ್ರೋ ಮಹಾಬಾಹುಸ್ತಾರಕಶ್ಚ ಮಹಾಬಲಃ ।
19003084c ವೈಶ್ವಾನರಃ ಪುಲೋಮಾ ಚ ವಿದ್ರಾವಣಮಹಾಸುರೌ ।।
19003085a ಸ್ವರ್ಭಾನುರ್ವೃಷಪರ್ವಾ ಚ ತುಹುಂಡಶ್ಚ ಮಹಾಸುರಃ ।
19003085c ಸೂಕ್ಷ್ಮಶ್ಚೈವಾತಿಚಂದ್ರಶ್ಚ ಊರ್ಣನಾಭೋ ಮಹಾಗಿರಿಃ ।।
19003086a ಅಸಿಲೋಮಾ ಚ ಕೇಶೀ ಚ ಶಠಶ್ಚ ಬಲಕೋ ಮದಃ ।
19003086c ತಥಾ ಗಗನಮೂರ್ಧಾ ಚ ಕುಂಭನಾಭೋ ಮಹಾಸುರಃ ।।
19003087a ಪ್ರಮದೋ ಮಯಶ್ಚ ಕುಪಥೋ ಹಯಗ್ರೀವಶ್ಚ ವೀರ್ಯವಾನ್ ।
19003087c ವೈಸೃಪಃ ಸವಿರೂಪಾಕ್ಷಃ ಸುಪಥೋಽಥ ಹರಾಹರೌ ।।
19003088a ಹಿರಣ್ಯಕಶಿಪುಶ್ಚೈವ ಶತಮಾಯುಶ್ಚ ಶಂಬರಃ ।
19003088c ಶರಭಃ ಶಲಭಶ್ಚೈವ ವಿಪ್ರಚಿತ್ತಿಶ್ಚ ವೀರ್ಯವಾನ್ ।।
19003089a ಏತೇ ಸರ್ವೇ ದನೋಃ ಪುತ್ರಾಃ ಕಶ್ಯಪಾದಭಿಜಜ್ಞಿರೇ ।
19003089c ವಿಪ್ರಚಿತ್ತಿಪ್ರಧಾನಾಸ್ತೇ ದಾನವಾಃ ಸುಮಹಾಬಲಾಃ ।।

ದ್ವಿಮೂರ್ಧ, ಶಕುನಿ, ಶಂಕುಶಿರ, ವಿಭು, ಶಂಕುಕರ್ಣ, ವಿರಾಧ, ಗವೇಷ್ಠಿ, ದುಂಧುಭಿ, ಅಯೋಮುಖ, ಶಂಬರ, ಕಪಿಲ, ವಾಮನ, ಮರೀಚಿ, ಮಘವಾನ್, ಇರಾ, ಶಂಕುಶಿರ, ವೃಕ, ವಿಕ್ಷೋಭಣ, ಕೇತು, ಕೇತುವೀರ್ಯ, ಶತಹ್ರದ, ಇಂದ್ರಜಿತ್, ಸತ್ಯಜಿತ್, ವಜ್ರನಾಭ, ಮಹಾನಾಭ, ವಿಕ್ರಾಂತ ಕಾಲನಾಭ, ಏಕಚಕ್ರ, ಮಹಾಬಾಹು ಮಹಾಬಲ ತಾರಕ, ವೈಶ್ವಾನರ, ಪುಲೋಮ, ವಿದ್ರಾವಣ ಮಹಾಸುರ, ಸ್ವರ್ಭಾನು, ವೃಷಪರ್ವ, ತುಹುಂಡ ಮಹಾಸುರ, ಸೂಕ್ಷ್ಮ, ಅತಿಚಂದ್ರ, ಊರ್ಣನಾಭ, ಮಹಾಗಿರಿ, ಅಸಿಲೋಮ, ಕೇಶಿ, ಶಠ, ಬಲಕ, ಮದ, ಗಗನಮೂರ್ಧಾ, ಮಹಾಸುರ ಕುಂಭನಾಭ, ಪ್ರಮದ, ಮಯ, ಕುಪಥ, ವೀರ್ಯವಾನ್ ಹಯಗ್ರೀವ, ವೈಸೃಪ, ವಿರೂಪಾಕ್ಷ, ಸುಪಥ, ಹರ, ಹರಿ, ಹಿರಣ್ಯಕಶಿಪು, ಶತಮಾಯು, ಶಂಭರ, ಶಲಭ, ಶರಭ, ವೀರ್ಯವಾನ್ ವಿಪ್ರಚಿತ್ತಿ – ಇವರೆಲ್ಲರೂ ಕಶ್ಯಪನಿಂದ ದನುವಿನಲ್ಲಿ ಹುಟ್ಟಿದ ಮಕ್ಕಳು. ಅತ್ಯಂತ ಬಲಶಾಲಿಗಳಾದ ದಾನವರಲ್ಲಿ ವಿಪ್ರಚಿತ್ತಿಯು ಪ್ರಧಾನನಾಗಿದ್ದನು.

19003090a ಏತೇಷಾಂ ಯದಪತ್ಯಂ ತು ತನ್ನ ಶಕ್ಯಂ ನರಾಧಿಪ ।
19003090c ಪ್ರಸಂಖ್ಯಾತುಂ ಮಹೀಪಾಲ ಪುತ್ರಪೌತ್ರಾದ್ಯನಂತಕಮ್ ।।

ನರಾಧಿಪ! ಇವರಿಗಾದ ಸಂತಾನವನ್ನು ಎಣಿಸಲು ಸಾಧ್ಯವಿಲ್ಲ. ಮಹೀಪಾಲ! ಇವರ ಪುತ್ರ-ಪೌತ್ರರು ಅನಂತವಾದುದು.

19003091a ಸ್ವರ್ಭಾನೋಸ್ತು ಪ್ರಭಾ ಕನ್ಯಾ ಪುಲೋಮ್ನಶ್ಚ ಸುತಾತ್ರಯಮ್ ।
19003091c ಉಪದಾನವೀ ಹಯಶಿರಾಃ ಶರ್ಮಿಷ್ಠಾ ವಾರ್ಷಪರ್ವಣೀ ।।

ಸ್ವರ್ಭಾನುವಿಗೆ ಪ್ರಭಾ ಎಂಬ ಕನ್ಯೆಯಿದ್ದಳು. ಪುಲೋಮನಿಗೆ ಮೂವರು ಸುತೆಯರಿದ್ದರು: ಉಪದಾನವೀ, ಹಯಶಿರಾ ಮತ್ತು ಶಚೀ. ಶರ್ಮಿಷ್ಠೆಯು ವೃಷಪರ್ವನ ಮಗಳು.

19003092a ಪುಲೋಮಾ ಕಾಲಿಕಾ ಚೈವ ವೈಶ್ವಾನರಸುತೇ ಉಭೇ ।
19003092c ಬಹ್ವಪತ್ಯೇ ಮಹಾವೀರ್ಯೇ ಮಾರೀಚೇಸ್ತು ಪರಿಗ್ರಹಃ ।।

ದಾನವ ವೈಶ್ವಾನರನಿಗೆ ಇಬ್ಬರು ಸುತೆಯರಿದ್ದರು: ಪುಲೋಮಾ ಮತ್ತು ಕಾಲಿಕಾ. ಅವರು ಮರೀಚಿಯ ಮಗ ಕಶ್ಯಪನ ವಿವಾಹವಾಗಿ ಅನೇಕ ಮಹಾವೀರ್ಯ ಮಕ್ಕಳನ್ನು ಪಡೆದರು.

19003093a ತಯೋಃ ಪುತ್ರಸಹಸ್ರಾಣಿ ಷಷ್ಟಿಂ ದಾನವನಂದನಾನ್
19003093c ಚತುರ್ದಶಶತಾನನ್ಯಾನ್ ಹಿರಣ್ಯಪುರವಾಸಿನಃ ।। ೧-೩-೯೩
19003094a ಮಾರೀಚಿರ್ಜನಯಾಮಾಸ ಮಹತಾ ತಪಸಾನ್ವಿತಃ ।
19003094c ಪೌಲೋಮಾಃ ಕಾಲಕೇಯಾಶ್ಚ ದಾನವಾಸ್ತೇ ಮಹಾಬಲಾಃ ।।

ಮಹಾ ತಪಸ್ಸಿನಲ್ಲಿ ನಿರತನಾಗಿದ್ದ ಕಶ್ಯಪನು ಅವರಿಬ್ಬರಿಗೆ ದಾನವರ ಆನಂದದಾಯಕ ಅರವತ್ತು ಸಾವಿರ ಪುತ್ರರನ್ನೂ, ಅನ್ಯ ಹದಿನಾಲ್ಕು ಸಾವಿರ ಪುತ್ರರನ್ನೂ ನೀಡಿದನು. ಅವರು ಹಿರಣ್ಯಪುರದಲ್ಲಿ ವಾಸಿಸಿದರು. ಪೌಲೋಮರು ಮತ್ತು ಕಾಲಕೇಯರೆಂದು ಪ್ರಸಿದ್ಧರಾದ ಅವರು ಮಹಾಬಲಶಾಲಿಗಳಾಗಿದ್ದರು.

19003095a ಅವಧ್ಯಾ ದೇವತಾನಾಂ ಚ ಹಿರಣ್ಯಪುರವಾಸಿನಃ ।
19003095c ಕೃತಾಃ ಪಿತಾಮಹೇನಾಜೌ ನಿಹತಾಃ ಸವ್ಯಸಾಚಿನಾ ।।

ದೇವತೆಗಳಿಗೆ ಅವಧ್ಯರಾಗಿದ್ದ ಹಿರಣ್ಯಪುರವಾಸಿಗಳನ್ನು ನಿನ್ನ ಪಿತಾಮಹ ಸವ್ಯಸಾಚಿಯು ನಾಶಗೊಳಿಸಿದನು.

19003096a ಪ್ರಭಾಯಾ ನಹುಶಃ ಪುತ್ರಃ ಸೃಂಜಯಶ್ಚ ಶಚೀಸುತಃ ।
19003096c ಪೂರುಂ ಜಜ್ಞೇಽಥ ಶರ್ಮಿಶ್ಠಾ ದುಶ್ಯಂತಮುಪದಾನವೀ ।।

ಪ್ರಭಾಳ ಪುತ್ರನು ನಹುಷ ಮತ್ತು ಸೃಂಜಯನು ಶಚಿಯ ಮಗನು. ಶರ್ಮಿಷ್ಠೆಯು ಪೂರುವಿಗೆ ಜನ್ಮವಿತ್ತಳು ಮತ್ತು ಉಪದಾನವಿಯು ದುಷ್ಯಂತನಿಗೆ ಜನ್ಮವಿತ್ತಳು.

19003097a ತತೋಽಪರೇ ಮಹಾವೀರ್ಯಾ ದಾನವಾಸ್ತ್ವತಿದಾರುಣಾಃ ।
19003097c ಸಿಂಹಿಕಾಯಾಮಥೋತ್ಪನ್ನಾ ವಿಪ್ರಚಿತ್ತೇಃ ಸುತಾಸ್ತದಾ ।।
19003098a ದೈತ್ಯದಾನವಸಂಯೋಗಾಜ್ಜಾತಾಸ್ತೀವ್ರಪರಾಕ್ರಮಾಃ ।
19003098c ಸೈಂಹಿಕೇಯಾ ಇತಿ ಖ್ಯಾತಾಸ್ತ್ರಯೋದಶ ಮಹಾಬಲಾಃ ।।

ನಂತರ ಇನ್ನೂ ಇತರ ಮಹಾವೀರ್ಯ ಅತಿದಾರುಣ ದಾನವರು ಸಿಂಹಿಕಾ ಮತ್ತು ವಿಪ್ರಚಿತ್ತಿಯ ಸುತರಾಗಿ ಜನಿಸಿದರು. ದೈತ್ಯ-ದಾನವರ ಸಂಯೋಗದಿಂದ ತೀವ್ರಪರಾಕ್ರಮಿ ಮಹಾಬಲಶಾಲೀ ಹದಿಮೂರು ಸಾವಿರ ಮಕ್ಕಳು ಹುಟ್ಟಿದರು. ಅವರು ಸೈಂಹಿಕೇಯರೆಂದು ಖ್ಯಾತರಾದರು.

19003099a ವ್ಯಂಶಃ ಶಲ್ಯಶ್ಚ ಬಲಿನೌ ನಭಶ್ಚೈವ ಮಹಾಬಲಃ ।
19003099c ವಾತಾಪಿರ್ನಮುಚಿಶ್ಚೈವ ಇಲ್ವಲಃ ಖಸೃಮಸ್ತಥಾ ।।
19003100a ಅಂಜಿಕೋ ನರಕಶ್ಚೈವ ಕಾಲನಾಭಸ್ತಥೈವ ಚ ।
19003100c ಶುಕಃ ಪೋತರಣಶ್ಚೈವ ವಜ್ರನಾಭಶ್ಚ ವೀರ್ಯವಾನ್ ।।

ಅವರಲ್ಲಿ ಬಲಶಾಲಿಗಳಾದ ವ್ಯಂಶ ಮತ್ತು ಬಲಿ, ಮಹಾಬಲ ನಭ, ವಾತಾಪಿ, ನಮುಚಿ, ಇಲ್ವಲ, ಖಸೃಮ, ಅಂಜಿಕ, ನರಕ, ಕಾಲನಾಭ, ಶುಕ, ಪೋತರಣ, ಮತ್ತು ವೀರ್ಯವಾನ ವಜ್ರನಾಭರು ಸೇರಿದ್ದಾರೆ.

19003101a ರಾಹುರ್ಜ್ಯೇಷ್ಠಸ್ತು ತೇಶಾಂ ವೈ ಸೂರ್ಯಚಂದ್ರವಿಮರ್ದನಃ ।
19003101c ಮೂಕಶ್ಚೈವ ತುಹುಂಡಶ್ಚ ಹ್ರಾದಪುತ್ರೌ ಬಭೂವತುಃ ।।

ಇವರಲ್ಲಿ ಸೂರ್ಯ-ಚಂದ್ರರನ್ನು ಪೀಡಿಸುವ ರಾಹುವೇ ಜ್ಯೇಷ್ಠನು. ಮೂಕ ಮತ್ತು ತುಹುಂಡರು ಹ್ರಾದನ ಈರ್ವರು ಪುತ್ರರು.

19003102a ಮಾರೀಚಃ ಸುಂದಪುತ್ರಶ್ಚ ತಾಡಕಾಯಾಂ ವ್ಯಜಾಯತ ।
19003102c ಶಿವಮಾಣಸ್ತಥಾ ಚೈವ ಸುರಕಲ್ಪಶ್ಚ ವೀರ್ಯವಾನ್ ।।

ಸುಂದನಿಗೆ ತಾಡಕಿಯಲ್ಲಿ ಮಾರೀಚನೆಂಬ ಮಗನು ಜನಿಸಿದನು. ಜೊತೆಗೆ ಶಿವಮಾಣ ಮತ್ತು ವೀರ್ಯವಾನ್ ಸುರಕಲ್ಪರೂ ಜನಿಸಿದರು.

19003103a ಏತೇ ವೈ ದಾನವಾಃ ಶ್ರೇಷ್ಠಾ ದನುವಂಶವಿವರ್ಧನಾಃ ।
19003103c ತೇಷಾಂ ಪುತ್ರಾಶ್ಚ ಪೌತ್ರಾಶ್ಚ ಶತಶೋಽಥ ಸಹಸ್ರಶಃ ।।

ಇವರು ದನುವಂಶವನ್ನು ವರ್ಧಿಸುವ ದಾನವ ಶ್ರೇಷ್ಠರು. ಅವರ ಪುತ್ರ-ಪೌತ್ರರು ನೂರಾರು ಸಾವಿರಾರು.

19003104a ಸಂಹ್ರಾದಸ್ಯ ತು ದೈತ್ಯಸ್ಯ ನಿವಾತಕವಚಾಃ ಕುಲೇ ।
19003104c ಸಮುತ್ಪನ್ನಾಃ ಸುತಪಸಾ ಮಹಾಂತೋ ಭಾವಿತಾತ್ಮನಃ ।।

ದೈತ್ಯ ಸಂಹ್ರಾದನ ಕುಲದಲ್ಲಿ ನಿವಾತಕವಚರು ಜನಿಸಿದರು. ಅವರು ಮಹಾತಪಸ್ಸನ್ನಾಚರಿಸಿ ಶುದ್ಧಾತ್ಮರಾದರು.

19003105a ತಿಸ್ರಃ ಕೋಟ್ಯಃ ಸುತಾಸ್ತೇಷಾಂ ಮಣಿಮತ್ಯಾಂ ನಿವಾಸಿನಾಮ್
19003105c ತೇಽಪ್ಯವಧ್ಯಾಸ್ತು ದೇವಾನಾಮರ್ಜುನೇನ ನಿಪಾತಿತಾಃ ।।

ಅವರ ಮೂರು ಕೋಟಿ ಪುತ್ರರು ಮಣಿಮತ್ಯದಲ್ಲಿ ನಿವಾಸಿಸಿದರು. ದೇವತೆಗಳಿಗೆ ಅವಧ್ಯರಾದ ಅವರನ್ನೂ ಕೂಡ ಅರ್ಜುನನು ಸಂಹರಿಸಿದನು.

19003106a ಷಟ್ಸುತಾಃ ಸುಮಹಾಸತ್ತ್ವಾಸ್ತಾಮ್ರಾಯಾಃ ಪರಿಕೀರ್ತಿತಾಃ
19003106c ಕಾಕೀ ಶ್ಯೇನೀ ಚ ಭಾಸೀ ಚ ಸುಗ್ರೀವೀ ಶುಚಿ ಗೃಧ್ರಿಕಾ ।।

ತಾಮ್ರಳಿಗೆ ಆರು ಸುತೆಯರಿದ್ದರೆಂದು ಹೇಳುತ್ತಾರೆ: ಕಾಕೀ, ಶ್ಯೇನೀ, ಭಾಸೀ, ಸುಗ್ರೀವೀ, ಶುಚಿ ಮತ್ತು ಗೃಧ್ರಿಕಾ.

19003107a ಕಾಕೀ ಕಾಕಾನಜನಯದುಲೂಖೀ ಪ್ರತ್ಯುಲೂಕಕಾನ್ ।
19003107c ಶ್ಯೇನೀ ಶ್ಯೇನಾಂಸ್ತಥಾ ಭಾಸೀ ಭಾಸಾನ್ಗೃಧ್ರಾಂಶ್ಚ ಗೃಧ್ರ್ಯಪಿ ।।
19003108a ಶುಚಿರೌದಕಾನ್ಪಕ್ಷಿಗಣಾನ್ಸುಗ್ರೀವೀ ತು ಪರಂತಪ ।
19003108c ಅಶ್ವಾನುಷ್ಟ್ರಾನ್ಗರ್ದಭಾಂಶ್ಚ ತಾಮ್ರಾವಂಶಃ ಪ್ರಕೀರ್ತಿತಃ ।।

ಪರಂತಪ! ಕಾಕಿಯು ಕಾಗೆಗಳಿಗೂ, ಉಲೂಖಿಯು ಗೂಬೆಗಳಿಗೂ ಜನ್ಮವಿತ್ತರು. ಶ್ಯೇನಿಯು ಗಿಡುಗಗಳಿಗೂ, ಭಾಸಿಯು ಭಾಸಪಕ್ಷಿಗಳಿಗೂ, ಗೃಧ್ರಿಕೆಯು ಹದ್ದುಗಳಿಗೂ, ಶುಚಿಯು ನೀರಿನಲ್ಲಿ ವಾಸಿಸುವ ಪಕ್ಷಿಗಳಿಗೂ, ಸುಗ್ರೀವಿಯು ಕುದುರೆ, ಒಂಟೆ ಮತ್ತು ಕತ್ತೆಗಳಿಗೂ ಜನ್ಮನೀಡಿದರು. ಇದು ತಾಮ್ರಾಳ ವಂಶದ ಕೀರ್ತನೆ.

19003109a ವಿನತಾಯಾಸ್ತು ಪುತ್ರೌ ದ್ವಾವರುಣೋ ಗರುಡಸ್ತಥಾ ।
19003109c ಸುಪರ್ಣಃ ಪತತಾಂ ಶ್ರೇಷ್ಠೋ ದಾರುಣಃ ಸ್ವೇನ ಕರ್ಮಣಾ ।।

ವಿನತೆಗಾದರೋ ಈರ್ವರು ಪುತ್ರರಾದರು: ವರುಣ ಮತ್ತು ಗರುಡ. ಸುಪರ್ಣ ಗರುಡನು ಹಾರುವವರಲ್ಲಿ ಶ್ರೇಷ್ಠನು. ತನ್ನದೇ ಕರ್ಮಗಳಿಂದ ದಾರುಣನೆನಿಸಿಕೊಂಡನು.

19003110a ಸುರಸಾಯಾಃ ಸಹಸ್ರಂ ತು ಸರ್ಪಾಣಾಮಮಿತೌಜಸಾಮ್ ।
19003110c ಅನೇಕಶಿರಸಾಂ ತಾತ ಖೇಚರಾಣಾಂ ಮಹಾತ್ಮನಾಮ್ ।।

ತಾತ! ಸುರಸಳು ಸಹಸ್ರ ಅಮಿತೌಜಸ ಸರ್ಪಗಳಿಗೆ ಜನ್ಮವಿತ್ತಳು. ಅನೇಕ ಶಿರಗಳಿದ್ದ ಆ ಮಹಾತ್ಮರು ಆಕಾಶದಲ್ಲಿ ಸಂಚರಿಸುತ್ತಿದ್ದರು.

19003111a ಕಾದ್ರವೇಯಾಶ್ಚ ಬಲಿನಃ ಸಹಸ್ರಮಮಿತೌಜಸಃ ।
19003111c ಸುಪರ್ಣವಶಗಾ ನಾಗಾ ಜಜ್ಞಿರೇಽನೇಕಮಸ್ತಕಾಃ ।।

ಕದ್ರುವಿನಲ್ಲಿ ಅನೇಕ ಶಿರಗಳ ಅಮಿತೌಜಸ ಬಲಶಾಲೀ ಸಹಸ್ರ ನಾಗಗಳು ಜನಿಸಿದರು. ಅವರು ಸುಪರ್ಣ ಗರುಡನ ವಶವಾದರು.

19003112a ತೇಷಾಂ ಪ್ರಧಾನಾಃ ಸತತಂ ಶೇಷವಾಸುಕಿತಕ್ಷಕಾಃ ।
19003112c ಐರಾವತೋ ಮಹಾಪದ್ಮಃ ಕಂಬಲಾಶ್ವತರಾವುಭೌ ।।
19003113a ಏಲಾಪತ್ರಸ್ತಥಾ ಶಂಖಃ ಕರ್ಕೋಟಕಧನಂಜಯೌ ।
19003113c ಮಹಾನೀಲಮಹಾಕರ್ಣೌ ಧೃತರಾಷ್ಟ್ರಬಲಾಹಕೌ ।।
19003114a ಕುಹರಃ ಪುಷ್ಪದಂಷ್ಟ್ರಶ್ಚ ದುರ್ಮುಖಃ ಸುಮುಖಸ್ತಥಾ ।
19003114c ಶಂಖಶ್ಚ ಶಂಖಪಾಲಶ್ಚ ಕಪಿಲೋ ವಾಮನಸ್ತಥಾ ।।
19003115a ನಹುಷಃ ಶಂಖರೋಮಾ ಚ ಮಣಿರಿತ್ಯೇವಮಾದಯಃ ।
19003115c ತೇಷಾಂ ಪುತ್ರಾಶ್ಚ ಪೌತ್ರಾಶ್ಚ ಗರುಡೇನ ನಿಪಾತಿತಾಃ ।।

ಅವರಲ್ಲಿ ನಿತ್ಯವೂ ಪ್ರಧಾನರಾದವರು ಶೇಷ, ವಾಸುಕಿ, ತಕ್ಷಕ, ಐರಾವತ, ಮಹಾಪದ್ಮ, ಕಂಬಲ, ಅಶ್ವತರ, ಏಲಾಪತ್ರ, ಶಂಖ, ಕರ್ಕೋಟಕ, ಧನಂಜಯ, ಮಹಾನೀಲ, ಮಹಾಕರ್ಣ, ಧೃತರಾಷ್ಟ್ರ, ಬಲಾಹಕ, ಕುಹರ, ಪುಷ್ಪದಂಷ್ಟ್ರ, ದುರ್ಮುಖ, ಸುಮುಖ, ಶಂಖ, ಶಂಖಪಾಲ, ಕಪಿಲ, ವಾಮನ, ನಹುಷ, ಶಂಖರೋಮಾ, ಮಣಿ ಇವೇ ಮೊದಲಾದವರು. ಅವರ ಪುತ್ರ-ಪೌತ್ರರನ್ನು ಗರುಡನು ಸಂಹರಿಸಿದನು.

19003116a ಚತುರ್ದಶಸಹಸ್ರಾಣಿ ಕ್ರೂರಾಣಾಮುರಗಾಶಿನಾಮ್ ।
19003116c ಗಣಂ ಕ್ರೋಧವಶಂ ವಿದ್ಧಿ ತಸ್ಯ ಸರ್ವೇ ಚ ದಂಷ್ಟ್ರಿಣಃ ।।

ಗಾಳಿಯನ್ನೇ ಆಹಾರವನ್ನಾಗಿ ಸೇವಿಸುವ ಹದಿನಾಲ್ಕು ಸಾವಿರ ಕ್ರೂರ ಉರಗಗಳ ಗಣವನ್ನು ಕ್ರೋಧವಶ ಎಂಬ ಹೆಸರಿನಿಂದ ತಿಳಿಯಬೇಕು. ಇವೆಲ್ಲವಕ್ಕೂ ಹಲ್ಲುಗಳಿವೆ.

19003117a ಸ್ಥಲಜಾಃ ಪಕ್ಷಿಣೋಽಬ್ಜಾಶ್ಚ ಧರಾಯಾಃ ಪ್ರಸವಾಃ ಸ್ಮೃತಾಃ ।
19003117c ಗಾಸ್ತು ವೈ ಜನಯಾಮಾಸ ಸುರಭಿರ್ಮಹಿಷಾಂಸ್ತಥಾ ।।

ಭೂಮಿಯ ಮೇಲೆ ಮತ್ತು ನೀರಿನ ಮೇಲೆ ಇರುವ ಪಕ್ಷಿಗಳು ಧರೆಯ ಸಂತಾನವೆಂದು ಹೇಳುತ್ತಾರೆ. ಸುರಭಿಯು ಗೋವುಗಳು ಮತ್ತು ಎಮ್ಮೆಗಳಿಗೆ ಜನ್ಮವಿತ್ತಳು.

19003118a ಇರಾ ವೃಕ್ಷಲತಾ ವಲ್ಲೀಸ್ತೃಣಜಾತೀಶ್ಚ ಸರ್ವಶಃ ।
19003118c ಖಶಾ ತು ಯಕ್ಷರಕ್ಷಾಂಸಿ ಮುನೀನಪ್ಸರಸಸ್ತಥಾ ।।

ಇರಾಳು ವೃಕ್ಷ, ಲತೆ, ಬಳ್ಳಿ, ಮತ್ತು ಹುಲ್ಲಿನ ಎಲ್ಲ ಜಾತಿಗಳಿಗೂ ಜನ್ಮವಿತ್ತಳು. ಖಶಾಳು ಯಕ್ಷ-ರಾಕ್ಷಸರಿಗೂ ಮತ್ತು ಮುನಿಯು ಅಪ್ಸರೆಯರಿಗೂ ಜನ್ಮವಿತ್ತಳು.

19003119a ಅರಿಷ್ಟಾ ತು ಮಹಾಸತ್ತ್ವಾನ್ಗಂಧರ್ವಾನಮಿತೌಜಸಃ ।
19003119c ಏತೇ ಕಶ್ಯಪದಾಯಾದಾಃ ಕೀರ್ತಿತಾಃ ಸ್ಥಾಣುಜಂಗಮಾಃ ।।

ಅರಿಷ್ಟಾಳು ಮಹಾಸತ್ತ್ವಯುತ ಅಮಿತೌಜಸ ಗಂಧರ್ವರಿಗೆ ಜನ್ಮವಿತ್ತಳು. ಇವು ಕಶ್ಯಪನ ಸ್ಥಾವರ-ಜಂಗಮ ಸಂತಾನಗಳೆಂದು ಕೀರ್ತಿತಗೊಂಡಿವೆ.

19003120a ತೇಷಾಂ ಪುತ್ರಾಶ್ಚ ಪೌತ್ರಾಶ್ಚ ಶತಶೋಽಥ ಸಹಸ್ರಶಃ ।
19003120c ಏಷ ಮನ್ವಂತರೇ ತಾತ ಸರ್ಗಃ ಸ್ವಾರೋಚಿಷೇ ಸ್ಮೃತಃ ।।

ತಾತ! ಅವರ ಪುತ್ರ-ಪೌತ್ರರು ನೂರಾರು ಸಹಸ್ರಾರು. ಇದು ಸ್ವಾರೋಚಿಷ ಮನ್ವಂತರದಲ್ಲಾದ ಸೃಷ್ಟಿಯೆಂದು ಹೇಳುತ್ತಾರೆ.

19003121a ವೈವಸ್ವತೇ ತು ಮಹತಿ ವಾರುಣೇ ವಿತತೇ ಕ್ರತೌ ।
19003121c ಜುಹ್ವಾನಸ್ಯ ಬ್ರಹ್ಮಣೋ ವೈ ಪ್ರಜಾಸರ್ಗ ಇಹೋಚ್ಯತೇ ।।

ವೈವಸ್ವತ ಮನ್ವಂತರದಲ್ಲಿ ವರುಣನ ಕ್ರತುವು ನಡೆಯುತ್ತಿರುವಾಗ ಬ್ರಹ್ಮನು ಆಹುತಿಯನ್ನಿತ್ತು ಸೃಷ್ಟಿಸಿದುದನ್ನು ಪ್ರಜಾಸರ್ಗ ಎಂದು ಕರೆಯುತ್ತಾರೆ.

19003122a ಪೂರ್ವಂ ಯತ್ರ ತು ಬ್ರಹ್ಮರ್ಷೀನುತ್ಪನ್ನಾನ್ಸಪ್ತ ಮಾನಸಾನ್ ।
19003122c ಪುತ್ರತ್ವೇ ಕಲ್ಪಯಾಮಾಸ ಸ್ವಯಮೇವ ಪಿತಾಮಹಃ ।।

ಆ ಯಜ್ಞದಲ್ಲಿ ಪಿತಾಮಹ ಬ್ರಹ್ಮನು ಹಿಂದೆ ತನ್ನ ಮನಸ್ಸಿನಿಂದ ಉತ್ಪನ್ನರಾಗಿದ್ದ ಏಳು ಬ್ರಹ್ಮರ್ಷಿಗಳನ್ನು ಸ್ವಯಂ ತನ್ನ ಪುತ್ರರೆಂದು ಸ್ವೀಕರಿಸಿದನು.

19003123a ತತೋ ವಿರೋಧೇ ದೇವಾನಾಂ ದಾನವಾನಾಂ ಚ ಭಾರತ ।
19003123c ದಿತಿರ್ವಿನಷ್ಟಪುತ್ರಾ ವೈ ತೋಷಯಾಮಾಸ ಕಶ್ಯಪಮ್ ।।

ಭಾರತ! ಅನಂತರ ದೇವ-ದಾನವರ ವಿರೋಧದಲ್ಲಿ ಪುತ್ರರನ್ನು ಕಳೆದುಕೊಂಡ ದಿತಿಯು ಕಶ್ಯಪನನ್ನು ಪ್ರಸನ್ನಗೊಳಿಸಿದಳು.

19003124a ತಾಂ ಕಶ್ಯಪಃ ಪ್ರಸನ್ನಾತ್ಮಾ ಸಮ್ಯಗಾರಾಧಿತಸ್ತಯಾ ।
19003124c ವರೇಣ ಚ್ಛಂದಯಾಮಾಸ ಸಾ ಚ ವವ್ರೇ ವರಂ ತತಃ ।।

ಅವಳಿಂದ ಉತ್ತಮವಾಗಿ ಆರಾಧಿತನಾದ ಕಶ್ಯಪನು ಪ್ರಸನ್ನನಾಗಿ ವರವನ್ನು ಕೇಳೆಂದು ಹೇಳಿದನು. ಆಗ ಅವಳು ಈ ವರವನ್ನು ಕೇಳಿಕೊಂಡಳು.

19003125a ಪುತ್ರಮಿಂದ್ರವಧಾರ್ಥಾಯ ಸಮರ್ಥಮಮಿತೌಜಸಮ್ ।
19003125c ಸ ಚ ತಸ್ಯೈ ವರಂ ಪ್ರಾದಾತ್ಪ್ರಾರ್ಥಿತಂ ಸುಮಹಾತಪಾಃ ।।

ಅವಳು ಇಂದ್ರನ ವಧೆಗಾಗಿ ಸಮರ್ಥ ಅಮಿತೌಜಸ ಮಗನನ್ನು ಕೇಳಲು ಆ ಮಹಾತಪಸ್ವಿ ಕಶ್ಯಪನು ಅವಳು ಪ್ರಾರ್ಥಿಸಿದ ವರವನ್ನು ನೀಡಿದನು.

19003126a ದತ್ತ್ವಾ ಚ ವರಮವ್ಯಗ್ರೋ ಮಾರೀಚಸ್ತಾಮಭಾಷತ ।
19003126c ಭವಿಶ್ಯತಿ ಸುತಸ್ತೇಽಯಂ ಯದ್ಯೇವಂ ಧಾರಯಿಶ್ಯಸಿ ।।

ವರವನ್ನಿತ್ತು ಅವ್ಯಗ್ರ ಮಾರೀಚನು ಅವಳಿಗೆ ಹೇಳಿದನು: “ಅವನನ್ನು ನೀನು ಧರಿಸಿಕೊಳ್ಳುವೆಯಾದರೆ ನಿನಗೆ ಈ ಸುತನು ಆಗುತ್ತಾನೆ.

19003127a ಇಂದ್ರಂ ಸುತೋ ನಿಹಂತಾ ತೇ ಗರ್ಭಂ ವೈ ಶರದಾಂ ಶತಮ್ ।
19003127c ಯದಿ ಧಾರಯಸೇ ಶೌಚಂ ತತ್ಪರಾ ವ್ರತಮಾಸ್ಥಿತಾ ।।

ನೂರು ವರ್ಷಗಳ ಪರ್ಯಂತ ನೀನು ಶೌಚವ್ರತದಲ್ಲಿ ತತ್ಪರಳಾಗಿ ಈ ಗರ್ಭವನ್ನು ಧರಿಸಿಕೊಂಡಿದ್ದರೆ ನಿನ್ನ ಈ ಸುತನು ಇಂದ್ರನನ್ನು ಸಂಹರಿಸುತ್ತಾನೆ.”

19003128a ತಥೇತ್ಯಭಿಹಿತೋ ಭರ್ತಾ ತಯಾ ದೇವ್ಯಾ ಮಹಾತಪಾಃ ।
19003128c ಧಾರಯಾಮಾಸ ಗರ್ಭಂ ತು ಶುಚಿಃ ಸಾ ವಸುಧಾಧಿಪ ।।

ವಸುಧಾಧಿಪ! ಆ ದೇವಿಯು ಹಾಗೆಯೇ ಆಗಲೆಂದು ಮಹಾತಪಸ್ವೀ ಪತಿಗೆ ಹೇಳಿ ಆ ಗರ್ಭವನ್ನು ಧರಿಸಿ ಶುಚಿಯಾಗಿರತೊಡಗಿದಳು.

19003129a ತತೋಽಭ್ಯುಪಾಗಮದ್ದಿತ್ಯಾಂ ಗರ್ಭಮಾಧಾಯ ಕಶ್ಯಪಃ ।
19003129c ರೋಚಯನ್ವೈ ಗಣಶ್ರೇಷ್ಠಂ ದೇವಾನಾಮಮಿತೌಜಸಮ್ ।।
19003130a ತೇಜಃ ಸಂಭೃತ್ಯ ದುರ್ಧರ್ಷಮವಧ್ಯಮಮರೈರಪಿ ।
19003130c ಜಗಾಮ ಪರ್ವತಾಯೈವ ತಪಸೇ ಸಂಶಿತವ್ರತಃ ।।

ಅನಂತರ ಅಮಿತೌಜಸ ದೇವತೆಗಳ ಶ್ರೇಷ್ಠ ಗಣಗಳನ್ನು ಪ್ರಕಾಶಿಸುವ ಸಂಶಿತವ್ರತ ಕಶ್ಯಪನು ಅಮರಿರಿಗೂ ದುರ್ಧರ್ಷನಾದ ಮತ್ತು ಅವಧ್ಯನಾದ ತೇಜಸ್ಸಿನಿಂದಿರುವ ಗರ್ಭವನ್ನು ದಿತಿಯಲ್ಲಿರಿಸಿ ತಪಸ್ಸಿಗಾಗಿ ಪರ್ವತದ ಕಡೆ ಹೋದನು.

19003131a ತಸ್ಯಾಶ್ಚೈವಾಂತರಪ್ರೇಪ್ಸುರಭವತ್ಪಾಕಶಾಸನಃ ।
19003131c ಊನೇ ವರ್ಷಶತೇ ಚಾಸ್ಯಾ ದದರ್ಶಾಂತರಮಚ್ಯುತಃ ।।

ಪಾಕಶಾಸನ ಇಂದ್ರನು ದಿತಿಯಲ್ಲಿ ದೋಷವನ್ನು ಹುಡುಕಲು ತೊಡಗಿದನು. ನೂರು ವರ್ಷಗಳು ಕಳೆಯುವ ಮೊದಲೇ ಅವನು ಅವಳಲ್ಲಿ ದೋಷವನ್ನು ಕಂಡನು.

19003132a ಅಕೃತ್ವಾ ಪಾದಯೋಃ ಶೌಚಂ ದಿತಿಃ ಶಯನಮಾವಿಶತ್ ।
19003132c ನಿದ್ರಾಂ ಚ ಕಾರಯಾಮಾಸ ತಸ್ಯಾಃ ಕುಕ್ಷಿಂ ಪ್ರವಿಶ್ಯ ಸಃ ।।

ಒಮ್ಮೆ ದಿತಿಯು ಪಾದಗಳನ್ನು ತೊಳೆಯದೆಯೇ ಮಲಗಿಕೊಂಡಳು. ಆಗ ಇಂದ್ರನು ಅವಳ ಹೊಟ್ಟೆಯನ್ನು ಪ್ರವೇಶಿಸಿ, ಅವಳಿಗೆ ನಿದ್ರೆಬರುವಂತೆ ಮಾಡಿದನು.

19003133a ವಜ್ರಪಾಣಿಸ್ತತೋ ಗರ್ಭಂ ಸಪ್ತಧಾ ತಂ ನ್ಯಕೃಂತತ ।
19003133c ಸ ಪಾಠ್ಯಮಾನೋ ವಜ್ರೇಣ ಗರ್ಭಸ್ತು ಪ್ರರುರೋದ ಹ ।।

ಆಗ ವಜ್ರಪಾಣಿಯು ಆ ಗರ್ಭವನ್ನು ಏಳು ಭಾಗಗಳನ್ನಾಗಿ ಕತ್ತರಿಸಿದನು. ವಜ್ರದಿಂದ ಗರ್ಭವನ್ನು ಕೊಯ್ಯುತ್ತಿರಲು ಗರ್ಭವು ರೋದಿಸತೊಡಗಿತು.

19003134a ಮಾ ರೋದೀರಿತಿ ತಂ ಶಕ್ರಃ ಪುನಃ ಪುನರಥಾಬ್ರವೀತ್ ।
19003134c ಸೋಽಭವತ್ಸಪ್ತಧಾ ಗರ್ಭಸ್ತಮಿಂದ್ರೋ ರುಷಿತಃ ಪುನಃ ।।
19003135a ಏಕೈಕಂ ಸಪ್ತಧಾ ಚಕ್ರೇ ವಜ್ರೇಣೈವಾರಿಕರ್ಶನಃ ।
19003135c ಮರುತೋ ನಾಮ ದೇವಾಸ್ತೇ ಬಭೂವುರ್ಭರತರ್ಷಭ ।।

“ಮಾ ರೋದೀಃ” (ಅಳಬೇಡಿರಿ!) ಎಂದು ಶಕ್ರನು ಪುನಃ ಪುನಃ ಅದಕ್ಕೆ ಹೇಳಿದನು. ಹೀಗೆ ಆ ಗರ್ಭವು ಏಳು ಭಾಗವಾಗಿತು. ಕುಪಿತನಾಗಿದ್ದ ಅರಿಕರ್ಶನ ಇಂದ್ರನು ಪುನಃ ಒಂದೊಂದು ಭಾಗವನ್ನೂ ಏಳು ಭಾಗಗಳನ್ನಾಗಿ ತುಂಡರಿಸಿದನು. ಭರತರ್ಷಭ! ಅವರೇ ಮರುತ್ತರೆಂಬ ಹೆಸರಿನ ದೇವತೆಗಳಾದರು.

19003136a ಯಥೈವೋಕ್ತಂ ಮಘವತಾ ತಥೈವ ಮರುತೋಽಭವನ್ ।
19003136c ದೇವಾ ಏಕೋನಪಂಚಾಶತ್ಸಹಾಯಾ ವಜ್ರಪಾಣಿನಃ ।।

ಇಂದ್ರನು ಹೇಗೆ ಹೇಳಿದ್ದನೋ ಹಾಗೆಯೇ ಅವರು ವಜ್ರಪಾಣಿಯ ಸಹಾಯಕರಾದ ನಲ್ವತ್ತೊಂಭತ್ತು ಮರುತ ದೇವತೆಗಳಾದರು.

19003137a ತೇಷಾಮೇವಂ ಪ್ರವೃದ್ಧಾನಾಂ ಭೂತಾನಾಂ ಜನಮೇಜಯ ।
19003137c ರೋಚಯನ್ವೈ ಗಣಶ್ರೇಷ್ಠಂ ದೇವಾನಾಮಮಿತೌಜಸಾಮ್ ।।
19003138a ನಿಕಾಯೇಷು ನಿಕಾಯೇಷು ಹರಿಃ ಪ್ರಾದಾತ್ಪ್ರಜಾಪತೀನ್ ।
19003138c ಕ್ರಮಶಸ್ತಾನಿ ರಾಜ್ಯಾನಿ ಪೃಥುಪೂರ್ವಾಣಿ ಭಾರತ ।।

ಜನಮೇಜಯ! ಹೀಗೆ ಜೀವಿಗಳು ಪ್ರವೃದ್ಧರಾಗಲು ಅಮಿತೌಜಸ ದೇವತೆಗಳನ್ನು ಪ್ರಕಾಶಗೊಳಿಸುವ ಗಣಶ್ರೇಷ್ಠ ಹರಿಯು ಅವರಿಗೆ ಪ್ರಜಾಪತಿತ್ವವನ್ನು ನೀಡಿದನು. ಭಾರತ! ಪೃಥುವಿನಿಂದ ಮೊದಲ್ಗೊಂಡು ಕ್ರಮೇಣವಾಗಿ ಆ ರಾಜ್ಯಗಳು ಸ್ಥಾಪಿತಗೊಂಡವು.

19003139a ಸ ಹರಿಃ ಪುರುಷೋ ವೀರಃ ಕೃಷ್ಣೋ ಜಿಷ್ಣುಃ ಪ್ರಜಾಪತಿಃ ।
19003139c ಪರ್ಜನ್ಯಸ್ತಪನೋ ವ್ಯಕ್ತಸ್ತಸ್ಯ ಸರ್ವಮಿದಂ ಜಗತ್ ।।

ಆ ಹರಿಯೇ ಪುರುಷ, ವೀರ, ಕೃಷ್ಣ, ಜಿಷ್ಣು, ಪ್ರಜಾಪತಿ, ಪರ್ಜನ್ಯ, ತಪನ, ಮತ್ತು ಈ ಜಗತ್ತೆಲ್ಲವುಗಳ ಅವ್ಯಕ್ತ ಸ್ವರೂಪ.

19003140a ಭೂತಸರ್ಗಮಿಮಂ ಸಮ್ಯಗ್ಜಾನತೋ ಭರತರ್ಶಭ ।
19003140c ಮರುತಾಂ ಚ ಶುಭೇ ಜನ್ಮ ಶೃನ್ವತಃ ಪಠೋಽಪಿ ವಾ 19003140e ನಾವೃತ್ತಿಭಯಮಸ್ತೀಹ ಪರಲೋಕಭಯಂ ಕುತಃ ।।

ಭರತರ್ಷಭ! ಈ ಭೂತಸರ್ಗ ಮತ್ತು ಮರುತರ ಶುಭ ಜನ್ಮದ ಕುರಿತು ಕೇಳಿ ಅಥವಾ ಓದಿ ಸಂಪೂರ್ಣವಾಗಿ ತಿಳಿದುಕೊಂಡವರಿಗೆ ಜನ್ಮ-ಮರಣಗಳ ಭಯವಿರುವುದಿಲ್ಲ. ಪರಲೋಕದ ಭಯವಾದರೋ ಎಲ್ಲಿಂದ?”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಖಿಲಭಾಗೇ ಹರಿವಂಶೇ ಹರಿವಂಶಪರ್ವಣಿ ಮರುದುತ್ಪತ್ತಿಕಥನೇ ತೃತೀಯೋಽಧ್ಯಾಯಃ


  1. ಹಿಂದಿನ ಕಲ್ಪದ ವೈರತ್ವದಿಂದ. ↩︎

  2. ಜ್ಞಾನದ ಅಧಿಕಾರಿಗಳೆಂದು ತಿಳಿದು ಅವರಿಗೆ ಆತ್ಮಜ್ಞಾನದ ಉಪದೇಶವನ್ನಿತ್ತನು. ↩︎

  3. ಅರ್ಥಾತ್ ನಾರದ ಆತ್ಮಜ್ಞಾನೋಽಪದೇಶದಿಂದ ಸಂಸಾರದ ಕುರಿತು ಅವರಲ್ಲಿದ್ದ ಆಸಕ್ತಿಯು ನಾಶವಾಯಿತು. ↩︎

  4. ದಕ್ಷನ ಮಗಳು ಮುನಿಯಲ್ಲಿ ಕಶ್ಯಪನು ನಾರದನನ್ನು ಪುನಃ ಹುಟ್ಟಿಸಿದನು. ↩︎

  5. ಕ್ಷಣ, ಲವ ಇತ್ಯಾದಿ ಕಾಲಾಭಿಮಾನೀ ದೇವತೆ. ↩︎

  6. ಮಂತ್ರಾಭಿಮಾನೀ ದೇವತೆ. ↩︎

  7. ತುಪ್ಪ, ಪಶು, ಔಷಧಿ ಮೊದಲಾದವುಗಳು. ↩︎

  8. ಸ್ವರ್ಗಾಭಿಮಾನಿನೀ ದೇವತೆ. ↩︎

  9. ಕಾಲಾಂತರದಲ್ಲಿ ಫಲವೃಷ್ಟಿಯನ್ನುಂಟುಮಾಡುವ ಧರ್ಮ ಅಥವಾ ಈಶ್ವರನ ಅವಲಂಬನ ಮಾಡುವ ದೇವತೆ. ↩︎

  10. ದ್ವಾದಶ ಆದಿತ್ಯರು, ಏಕಾದಶ ರುದ್ರರು. ↩︎

  11. ಅರ್ಥಾತ್ ಪ್ರತಿಯೊಂದು ಕಲ್ಪದಲ್ಲಿ (ಸಹಸ್ರ ಮಹಾಯುಗಗಳು=1 ಕಲ್ಪ). ↩︎

  12. ಪ್ರತಿ ಕಲ್ಪದಲ್ಲಿ ಎಂದರ್ಥ. ↩︎