002: ಪ್ರಜಾಸರ್ಗೇ ದಕ್ಷೋತ್ಪತ್ತಿಕಥನಮ್

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಖಿಲಭಾಗೇ ಹರಿವಂಶಃ

ಹರಿವಂಶ ಪರ್ವ

ಅಧ್ಯಾಯ 2

ಸಾರ

19002001 ವೈಶಂಪಾಯನ ಉವಾಚ
19002001a ಸ ಸೃಷ್ಟಾಸು ಪ್ರಜಾಸ್ವೇವಮಾಪವೋ ವೈ ಪ್ರಜಾಪತಿಃ ।
19002001c ಲೇಭೇ ವೈ ಪುರುಷಃ ಪತ್ನೀಂ ಶತರೂಪಾಮಯೋನಿಜಾಮ್ ।।

ವೈಶಂಪಾಯನನು ಹೇಳಿದನು: “ಹೀಗೆ ಸ್ವಯಂ ತಾನೇ ನೀರಿನಲ್ಲಿ ಪ್ರಜೆಗಳನ್ನು ಸೃಷ್ಟಿಸಿದ ಪ್ರಜಾಪತಿಯ ಅರ್ಧದೇಹದಿಂದ ಉಂಟಾದ ಪುರುಷನು ಅಯೋನಿಜೆ ಶತರೂಪಳನ್ನು ಪತ್ನಿಯನ್ನಾಗಿ ಪಡೆದುಕೊಂಡನು.

19002002a ಆಪವಸ್ಯ ಮಹಿಮ್ನಾ ತು ದಿವಮಾವೃತ್ಯ ತಿಷ್ಠತಃ ।
19002002c ಧರ್ಮೇಣೈವ ಮಹಾರಾಜ ಶತರೂಪಾ ವ್ಯಜಾಯತ ।।

ಮಹಾರಾಜ! ತನ್ನ ಮಹಿಮೆಯಿಂದ ದಿವವನ್ನು ಆವರಿಸಿ ನಿಂತಿದ್ದ ಪುರುಷನ ಧರ್ಮದಿಂದಲೇ ಶತರೂಪಳು ಹುಟ್ಟಿಕೊಂಡಳು.

19002003a ಸಾ ತು ವರ್ಷಾಯುತಂ ತಪ್ತ್ವಾ ತಪಃ ಪರಮದುಶ್ಚರಮ್ ।
19002003c ಭರ್ತಾರಂ ದೀಪ್ತತಪಸಂ ಪುರುಷಂ ಪ್ರತ್ಯಪದ್ಯತ ।।

ಅವಳಾದರೋ ಹತ್ತು ಸಾವಿರ ವರ್ಷಗಳ ಪರ್ಯಂತ ಪರಮದುಶ್ಚರ ತಪಸ್ಸನ್ನು ತಪಿಸಿ ತಪಸ್ಸಿನಿಂದ ಬೆಳಗುತ್ತಿದ್ದ ಪತಿ ಪುರುಷನ ಬಳಿಸಾರಿದಳು.

19002004a ಸ ವೈ ಸ್ವಾಯಂಭುವಸ್ತಾತ ಪುರುಷೋ ಮನುರುಚ್ಯತೇ ।
19002004c ತಸ್ಯೈಕಸಪ್ತತಿಯುಗಂ ಮನ್ವಂತರಮಿಹೋಚ್ಯತೇ ।।

ಆ ಪುರುಷನನ್ನು ಸ್ವಾಯಂಭುವ ಮನುವೆಂದು ಹೇಳುತ್ತಾರೆ. ಅವನ ಎಪ್ಪತ್ತೊಂದು ಮಹಾಯುಗ1ಗಳನ್ನು ಮನ್ವಂತರ ಎಂದು ಕರೆಯುತ್ತಾರೆ.

19002005a ವೈರಾಜಾತ್ಪುರುಷಾದ್ವೀರಂ ಶತರೂಪಾ ವ್ಯಜಾಯತ ।
19002005c ಪ್ರಿಯವ್ರತೋತ್ತಾನಪಾದೌ ವೀರಾತ್ಕಾಮ್ಯಾ ವ್ಯಜಾಯತ ।।

ಆ ವಿರಾಜಮಾನ ಪುರುಷನಿಂದ ಶತರೂಪಳು ವೀರನನ್ನು ಹುಟ್ಟಿಸಿದಳು. ವೀರನು ಕಾಮ್ಯಳಿಂದ ಪ್ರಿಯವ್ರತ ಮತ್ತು ಉತ್ತಾನಪಾದರನ್ನು ಹುಟ್ಟಿಸಿದನು.

19002006a ಕಾಮ್ಯಾ ನಾಮ ಮಹಾಬಾಹೋ ಕರ್ದಮಸ್ಯ ಪ್ರಜಾಪತೇಃ ।
19002006c ಕಾಮ್ಯಾಪುತ್ರಾಸ್ತು ಚತ್ವಾರಃ ಸಮ್ರಾಟ್ಕುಕ್ಷಿರ್ವಿರಾಟ್ಪ್ರಭುಃ ।
19002006e ಪ್ರಿಯವ್ರತಂ ಸಮಾಸಾದ್ಯ ಪತಿಂ ಸಾ ಸುಷುವೇ ಸುತಾನ್ ।।

ಮಹಾಬಾಹೋ! ಪ್ರಜಾಪತಿ ಕರ್ದಮನಿಗೆ ಕಾಮ್ಯಾ ಎಂಬ ಹೆಸರಿನ ಪುತ್ರಿಯಿದ್ದಳು. ಆ ಕಾಮ್ಯಳು ಪತಿ ಪ್ರಿಯವ್ರತನನ್ನು ಸೇರಿ ಸಾಮ್ರಾಟ್, ಕುಕ್ಷಿ, ವಿರಾಟ್ ಮತ್ತು ಪ್ರಭು ಎಂಬ ನಾಲ್ವರು ಪುತ್ರರನ್ನು ಪಡೆದಳು.

19002007a ಉತ್ತಾನಪಾದಂ ಜಗ್ರಾಹ ಪುತ್ರಮತ್ರಿಃ ಪ್ರಜಾಪತಿಃ ।
19002007c ಉತ್ತಾನಪಾದಾಚ್ಛತುರಃ ಸೂನೃತಾಜನಯತ್ಸುತಾನ್ ।।

ಪ್ರಜಾಪತಿ ಅತ್ರಿಯು ಉತ್ತಾನಪಾದನನ್ನು ಪುತ್ರನನ್ನಾಗಿ ಸ್ವೀಕರಿಸಿದನು. ಉತ್ತಾನಪಾದನು ಪತ್ನಿ ಸೂನೃತಳಲ್ಲಿ ನಾಲ್ವರು ಪುತ್ರರನ್ನು ಹುಟ್ಟಿಸಿದನು.

19002008a ಧರ್ಮಸ್ಯ ಕನ್ಯಾ ಸುಶ್ರೋಣೀ ಸೂನೃತಾ ನಾಮ ವಿಶ್ರುತಾ ।
19002008c ಉತ್ಪನ್ನಾ ವಾಜಿಮೇಧೇನ ಧ್ರುವಸ್ಯ ಜನನೀ ಶುಭಾ ।।

ಧ್ರುವನ ಶುಭ ಜನನಿ ಸೂನೃತಾ ಎಂದು ವಿಖ್ಯಾತಳಾದ ಸುಶ್ರೋಣಿ ಕನ್ಯೆಯು ಧರ್ಮನ ಅಶ್ವಮೇಧ ಯಾಗದಿಂದ ಜನಿಸಿದ್ದಳು.

19002009a ಧ್ರುವಂ ಚ ಕೀರ್ತಿಮಂತಂ ಚ ಶಿವಂ ಶಾಂತಮಯಸ್ಪತಿಮ್ ।
19002009c ಉತ್ತಾನಪಾದೋಽಜನಯತ್ಸೂನೃತಾಯಾಂ ಪ್ರಜಾಪತಿಃ ।।

ಪ್ರಜಾಪತಿ ಉತ್ತಾನಪಾದನು ಸೂನೃತಳಲ್ಲಿ ಧ್ರುವ, ಕೀರ್ತಿಮಂತ, ಶಿವ, ಶಾಂತ ಮತ್ತು ಅಯಸ್ಪತಿ ಎಂಬ ಪುತ್ರರನ್ನು ಪಡೆದನು.

19002010a ಧ್ರುವೋ ವರ್ಷಸಹಸ್ರಾಣಿ ತ್ರೀಣಿ ದಿವ್ಯಾನಿ ಭಾರತ ।
19002010c ತಪಸ್ತೇಪೇ ಮಹಾರಾಜ ಪ್ರಾರ್ಥಯನ್ಸುಮಹದ್ಯಶಃ ।।

ಭಾರತ! ಮಹಾರಾಜ! ಧ್ರುವನು ಮಹಾಯಶಸ್ಸನ್ನು ಪ್ರಾರ್ಥಿಸಿ ಮೂರು ಸಾವಿರ ದಿವ್ಯ ವರ್ಷಗಳ ಪರ್ಯಂತ ತಪಸ್ಸನ್ನು ತಪಿಸಿದನು.

19002011a ತಸ್ಮೈ ಬ್ರಹ್ಮಾ ದದೌ ಪ್ರೀತಃ ಸ್ಥಾನಮಪ್ರತಿಮಂ ಭುವಿ ।
19002011c ಅಚಲಂ ಚೈವ ಪುರತಃ ಸಪ್ತರ್ಷೀಣಾಂ ಪ್ರಜಾಪತಿಃ ।।

ಅವನ ಮೇಲೆ ಪ್ರೀತನಾಗಿ ಪ್ರಜಾಪತಿ ಬ್ರಹ್ಮನು ಅವನಿಗೆ ಸಪ್ತರ್ಷಿಗಳ ಎದಿರು ಭುವಿಯಲ್ಲಿಯೇ ಅಪ್ರತಿಮ ಅಚಲ ಸ್ಥಾನವನ್ನು ನೀಡಿದನು.

19002012a ತಸ್ಯಾತಿಮಾತ್ರಾಮೃದ್ಧಿಂ ಚ ಮಹಿಮಾನಂ ನಿರೀಕ್ಷ್ಯ ಚ ।
19002012c ದೇವಾಸುರಾಣಾಮಾಚಾರ್ಯಃ ಶ್ಲೋಕಮಪ್ಯುಶನಾ ಜಗೌ ।।

ಧ್ರುವನ ಅತಿಮಾತ್ರದ ವೃದ್ಧಿ ಮತ್ತು ಮಹಿಮೆಗಳನ್ನು ನೀರೀಕ್ಷಿಸಿ ದೇವಾಸುರರ ಆಚಾರ್ಯ ಶುಕ್ರನು ಈ ಶ್ಲೋಕವನ್ನು ಹಾಡಿದನು:

19002013a ಅಹೋಽಸ್ಯ ತಪಸೋ ವೀರ್ಯಮಹೋ ಶ್ರುತಮಹೋ ಬಲಮ್ ।
19002013c ಯದೇನಂ ಪುರತಃ ಕೃತ್ವಾ ಧ್ರುವಂ ಸಪ್ತರ್ಷಯಃ ಸ್ಥಿತಾಃ ।।

“ಅಹೋ! ಇವನ ತಪಸ್ಸು ಮತ್ತು ವೀರ್ಯಬಲಗಳು ಮಹತ್ತರವಾದುವೆಂದು ಕೇಳಿದ್ದೇವೆ. ಇದರಿಂದಲೇ ಸಪ್ತರ್ಷಿಗಳೂ ಕೂಡ ಧ್ರುವನನ್ನು ತಮ್ಮ ಮುಂದೆ ಇರಿಸಿಕೊಂಡಿದ್ದಾರೆ!”

19002014a ತಸ್ಮಾಚ್ಛ್ಲಿಷ್ಟಿಂ ಚ ಭವ್ಯಂ ಚ ಧ್ರುವಾಚ್ಛಂಭುರ್ವ್ಯಜಾಯತ ।
19002014c ಶ್ಲಿಷ್ಟೇರಾಧತ್ತ ಸುಚ್ಛಾಯಾ ಪಂಚ ಪುತ್ರಾನಕಲ್ಮಷಾನ್ ।।
19002015a ರಿಪುಂ ರಿಪುಂಜಯಂ ಪುಣ್ಯಂ ವೃಕಲಂ ವೃಕತೇಜಸಮ್ ।
19002015c ರಿಪೋರಾಧತ್ತ ಬೃಹತೀ ಚಾಕ್ಷುಷಂ ಸರ್ವತೇಜಸಮ್ ।।

ಆ ಧ್ರುವನು ಶಂಭುವಿನಲ್ಲಿ ಶ್ಲಿಷ್ಟಿ ಮತ್ತು ಭವ್ಯ ಎಂಬ ಪುತ್ರರನ್ನು ಹುಟ್ಟಿಸಿದನು. ಶ್ಲಿಷ್ಟನು ಸುಚ್ಛಾಯೆಯಲ್ಲಿ ಐವರು ಅಕಲ್ಮಷ ಪುತ್ರರನ್ನು ಪಡೆದನು: ರಿಪು, ರಿಪುಂಜಯ, ಪುಣ್ಯ, ವೃಕಲ ಮತ್ತು ವೃಕತೇಜಸ. ರಿಪುವು ಬೃಹತಿಯಲ್ಲಿ ಸರ್ವತೇಜಸ್ವಿ ಚಾಕ್ಷುಷನನ್ನು ಪಡೆದನು.

19002016a ಅಜೀಜನತ್ಪುಷ್ಕರಿಣ್ಯಾಂ ವೀರಣ್ಯಾಂ ಚಾಕ್ಷುಷೋ ಮನುಮ್ ।
19002016c ಪ್ರಜಾಪತೇರಾತ್ಮಜಾಯಾಮರಣ್ಯಸ್ಯ ಮಹಾತ್ಮನಃ ।।
19002017a ಮನೋರಜಾಯಂತ ದಶ ನಡ್ವಲಾಯಾಂ ಮಹೌಜಸಃ ।
19002017c ಕನ್ಯಾಯಾಮಭವಚ್ಛ್ರೇಷ್ಠಾ ವೈರಾಜಸ್ಯ ಪ್ರಜಾಪತೇಃ ।।

ಚಾಕ್ಷುಷನು ವೀರಣನ ಪುತ್ರಿ ಪುಷ್ಕರಿಣಿಯಲ್ಲಿ ಮನುವನ್ನು ಹುಟ್ಟಿಸಿದನು. ವೈರಾಜ ಪ್ರಜಾಪತಿಯ ವಂಶದಲ್ಲಿ ಹುಟ್ಟಿದ ಈ ಮಹೌಜಸ ಮನುವು ಪ್ರಜಾಪತಿ ಅರಣ್ಯನ ಪುತ್ರಿ ನಡ್ವಲೆಯಲ್ಲಿ ಹತ್ತು ಪುತ್ರರನ್ನು ಪಡೆದುಕೊಂಡನು.

19002018a ಊರುಃ ಪುರುಃ ಶತದ್ಯುಮ್ನಸ್ತಪಸ್ವೀ ಸತ್ಯವಾನ್ಕವಿಃ ।
19002018c ಅಗ್ನಿಷ್ಟುದತಿರಾತ್ರಶ್ಚ ಸುದ್ಯುಮ್ನಶ್ಚೇತಿ ತೇ ನವ ।।

ಊರು, ಪುರು, ಶತದ್ಯುಮ್ನ, ತಪಸ್ವೀ, ಸತ್ಯವಾನ್, ಕವಿ, ಅಗ್ನಿಷ್ಟುತ್, ಅತಿರಾತ್ರ, ಮತ್ತು ಒಂಭತ್ತನೆಯವನು ಸುದ್ಯುಮ್ನ.

19002019a ಅಭಿಮನ್ಯುಶ್ಚ ದಶಮೋ ನಡ್ವಲಾಯಾಃ ಸುತಾಃ ಸ್ಮೃತಾಃ ।
19002019c ಊರೋರಜನಯತ್ಪುತ್ರಾನ್ಷಡಾಗ್ನೇಯೀ ಮಹಾಪ್ರಭಾನ್ ।
19002019e ಅಂಗಂ ಸುಮನಸಂ ಖ್ಯಾತಿಂ ಕ್ರತುಮಂಗಿರಸಂ ಗಯಮ್ ।।

ಹತ್ತನೆಯವನು ಅಭಿಮನ್ಯು. ಇವರೇ ನಡ್ವಲೆಯ ಸುತರು. ಊರುವು ಅಗ್ನಿಯ ಪುತ್ರಿಯಲ್ಲಿ ಮಹಾಪ್ರಭೆಯಿದ್ದ ಅಂಗ, ಸುಮನಸ, ಖ್ಯಾತಿ, ಕ್ರತು, ಅಂಗಿರಸ ಮತ್ತು ಗಯ ಎಂಬ ಆರು ಪುತ್ರರನ್ನು ಪಡೆದನು.

19002020a ಅಂಗಾತ್ಸುನೀಥಾಪತ್ಯಂ ವೈ ವೇನಮೇಕಮಜಾಯತ ।
19002020c ಅಪಚಾರಾತ್ತು ವೇನಸ್ಯ ಪ್ರಕೋಪಃ ಸುಮಹಾನಭೂತ್ ।।

ಸುನೀಥೆ2ಯು ಅಂಗನಿಂದ ವೈನನೆಂಬ ಒಬ್ಬನೇ ಪುತ್ರನನ್ನು ಪಡೆದಳು. ಅಪಚಾರಿಯಾಗಿದ್ದ ವೇನನ ಮೇಲೆ ಅತಿಭಯಂಕರ ಪ್ರಕೋಪವುಂಟಾಯಿತು3.

19002021a ಪ್ರಜಾರ್ಥಮೃಷಯೋ ಯಸ್ಯ ಮಮಂಥುರ್ದಕ್ಷಿಣಂ ಕರಮ್ ।
19002021c ವೇನಸ್ಯ ಪಾಣೌ ಮಥಿತೇ ಬಭೂವ ಮುನಿಭಿಃ ಪೃಥುಃ ।।

ಸಂತಾನಕ್ಕಾಗಿ ಮುನಿಗಳು ಅವನ ಎಡಗೈಯನ್ನು ಮಥಿಸಲು, ಮಥಿಸಲ್ಪಟ್ಟ ವೇನನ ಕೈಗಳಿಂದ ಪೃಥುವು ಜನಿಸಿದನು.

19002022a ತಂ ದೃಷ್ಟ್ವಾ ಋಷಯಃ ಪ್ರಾಹುರೇಷ ವೈ ಮುದಿತಾಃ ಪ್ರಜಾಃ ।
19002022c ಕರಿಷ್ಯತಿ ಮಹಾತೇಜಾ ಯಶಶ್ಚ ಪ್ರಾಪ್ಸ್ಯತೇ ಮಹತ್ ।।

ಅವನನ್ನು ನೋಡಿ ಋಷಿಗಳು ಹೇಳಿದರು: “ಇವನು ಪ್ರಜೆಗಳನ್ನು ಸಂತೋಷಗೊಳಿಸುತ್ತಾನೆ ಮತ್ತು ಇವನಿಗೆ ಮಹಾತೇಜಸ್ಸು-ಮಹಾಕೀರ್ತಿಗಳು ಪ್ರಾಪ್ತವಾಗುತ್ತವೆ!”

19002023a ಸ ಧನ್ವೀ ಕವಚೀ ಖಡ್ಗೀ ತೇಜಸಾ ನಿರ್ದಹನ್ನಿವ ।
19002023c ಪೃಥುರ್ವೈನ್ಯಸ್ತದಾ ಚೇಮಾಂ ರರಕ್ಷ ಕ್ಷತ್ರಪೂರ್ವಜಃ ।।

ಧನುಸ್ಸು-ಖಡ್ಗ-ಕವಚಗಳನ್ನು ಧರಿಸಿ ತೇಜಸ್ಸಿನಿಂದ ಸುಡುವನೋ ಎಂತಿದ್ದ ಆ ಕ್ಷತ್ರಿಯರ ಪೂರ್ವಜ ವೈನ್ಯ ಪೃಥುವು ಈ ಭೂಮಿಯನ್ನು ರಕ್ಷಿಸಿದನು.

19002024a ರಾಜಸೂಯಾಭಿಷಿಕ್ತಾನಾಮಾದ್ಯಃ ಸ ವಸುಧಾಧಿಪಃ ।
19002024c ತಸ್ಮಾಚ್ಚೈವ ಸಮುತ್ಪನ್ನೌ ನಿಪುಣೌ ಸೂತಮಾಗಧೌ ।।

ರಾಜಸೂಯದಿಂದ ಅಭಿಷಿಕ್ತರಾದ ವಸುಧಾಧಿಪರಲ್ಲಿ ಪೃಥುವು ಮೊದಲನೆಯವನಾಗಿದ್ದನು. ಆ ಯಜ್ಞದಿಂದ ನಿಪುಣ ಸೂತ4-ಮಾಗಧ5ರು ಉತ್ಪನ್ನರಾದರು.

19002025a ತೇನೇಯಂ ಗೌರ್ಮಹಾರಾಜ ದುಗ್ಧಾ ಸಸ್ಯಾನಿ ಭಾರತ ।
19002025c ಪ್ರಜಾನಾಂ ವೃತ್ತಿಕಾಮೇನ ದೇವೈಃ ಸರ್ಷಿಗಣೈಃ ಸಹ ।।

ಭಾರತ! ಮಹಾರಾಜ! ಪ್ರಜೆಗಳಿಗೆ ವೃತ್ತಿಯನ್ನು ಬಯಸಿ ಅವನೇ ದೇವ-ಋಷಿಗಣಗಳೊಂದಿಗೆ ಗೋವಿನ ರೂಪದಲ್ಲಿದ್ದ ಪೃಥ್ವಿಯಿಂದ ಸಸ್ಯಗಳನ್ನು ಕರೆದನು.

19002026a ಪಿತೃಭಿರ್ದಾನವೈಶ್ಚೈವ ಗಂಧರ್ವೈಃ ಸಾಪ್ಸರೋಗಣೈಃ ।
19002026c ಸರ್ಪೈಃ ಪುಣ್ಯಜನೈಶ್ಚೈವ ವೀರುದ್ಭಿಃ ಪರ್ವತೈಸ್ತಥಾ ।।

ಪೃಥುವಿನೊಂದಿಗೆ ಆ ಗೋವನ್ನು ಪಿತೃಗಳು, ದಾನವರು, ಗಂಧರ್ವರು, ಅಪ್ಸರಗಣಗಳು, ಸರ್ಪಗಳು, ಯಕ್ಷರು, ವೃಕ್ಷಗಳು ಮತ್ತು ಪರ್ವತಗಳು ಕರೆದಿದ್ದರು.

19002027a ತೇಷು ತೇಷು ಚ ಪಾತ್ರೇಷು ದುಹ್ಯಮಾನಾ ವಸುಂಧರಾ ।
19002027c ಪ್ರಾದಾದ್ಯಥೇಪ್ಸಿತಂ ಕ್ಷೀರಂ ತೇನ ಪ್ರಾಣಾನಧಾರಯನ್ ।।

ಅವರವರ ಪಾತ್ರೆಗಳಲ್ಲಿ ವಸುಂಧರೆಯ ಹಾಲುಕರೆಯುತ್ತಿದ್ದ ಅವರಿಗೆ ಅವರಿಗಿಷ್ಟವಾದಷ್ಟು ಹಾಲನ್ನು ನೀಡಲು ಅದರಿಂದ ತಮ್ಮ ತಮ್ಮ ಪ್ರಾಣಗಳನ್ನು ಧರಿಸಿದ್ದರು.

19002028a ಪೃಥುಪುತ್ರೌ ತು ಧರ್ಮಜ್ಞೌ ಜಜ್ಞಾತೇಽಂತರ್ಧಿಪಾಲಿತೌ ।
19002028c ಶಿಖಂಡಿನೀ ಹವಿರ್ಧಾನಮಂತರ್ಧಾನಾದ್ವ್ಯಜಾಯತ ।।

ಪೃಥುವಿಗೆ ಅಂತರ್ಧಾನ ಮತ್ತು ಪಾಲಿತ ಎಂಬ ಇಬ್ಬರು ಮಕ್ಕಳು ಜನಿಸಿದರು. ಅಂತರ್ಧಾನನು ಶಿಖಂಡಿನಿಯಲ್ಲಿ ಹವಿರ್ಧಾನನನ್ನು ಹುಟ್ಟಿಸಿದನು.

19002029a ಹವಿರ್ಧಾನಾತ್ ಷಡಾಗ್ನೇಯೀ ಧಿಷಣಾಜನಯತ್ಸುತಾನ್ ।
19002029c ಪ್ರಾಚೀನಬರ್ಹಿಷಂ ಶುಕ್ಲಂ ಗಯಂ ಕೃಷ್ಣಂ ವ್ರಜಾಜಿನೌ ।।

ಅಗ್ನಿಯ ಪುತ್ರಿ ಧಿಷಣಳು ಹವಿರ್ಧಾನನ ಆರು ಪುತ್ರರಿಗೆ ಜನ್ಮವಿತ್ತಳು: ಪ್ರಾಚೀನಬರ್ಹಿ, ಶುಕ್ಲ, ಗಯ, ಕೃಷ್ಣ, ವ್ರಜ ಮತ್ತು ಅಜಿನ.

19002030a ಪ್ರಾಚೀನಬರ್ಹಿರ್ಭಗವಾನ್ಮಹಾನಾಸೀತ್ಪ್ರಜಾಪತಿಃ ।
19002030c ಹವಿರ್ಧಾನಾನ್ಮಹಾರಾಜ ಯೇನ ಸಂವರ್ಧಿತಾಃ ಪ್ರಜಾಃ ।।

ಮಹಾರಾಜ! ಭಗವಾನ್ ಪ್ರಜಾಪತಿ ಪ್ರಾಚೀನಬರ್ಹಿಯು ಪ್ರಜೆಗಳನ್ನು ಅಭಿವೃದ್ಧಿಗೊಳಿಸುವುದರಲ್ಲಿ ಹವಿರ್ಧಾನನಿಗಿಂತಲೂ ಅಧಿಕನಾಗಿದ್ದನು.

19002031a ಪ್ರಾಚೀನಾಗ್ರಾಃ ಕುಶಾಸ್ತಸ್ಯ ಪೃಥಿವ್ಯಾಂ ಜನಮೇಜಯ ।
19002031c ಪ್ರಾಚೀನಬರ್ಹಿರ್ಭಗವಾನ್ಪೃಥಿವೀತಲಚಾರಿಣಃ ।।

ಜನಮೇಜಯ! ಅವನ ಯಜ್ಞದ ಸಮಯದಲ್ಲಿ ಪ್ರಾಚೀನಾಗ್ರ ದರ್ಬೆಗಳನ್ನು ಸಂಪೂರ್ಣ ಭೂಮಿಯ ಮೇಲೆ ಹರಡಿದ್ದಿದುರಿಂದ ಅವನನ್ನು ಪೃಥ್ವೀಚಾರಿಗಳು ಭಗವಾನ್ ಪ್ರಾಚೀನಬರ್ಹನೆಂದು ಕರೆಯುತ್ತಾರೆ.

19002032a ಸಮುದ್ರತನಯಾಯಾಂ ತು ಕೃತದಾರೋಽಭವತ್ಪ್ರಭುಃ ।
19002032c ಮಹತಸ್ತಪಸಃ ಪಾರೇ ಸವರ್ಣಾಯಾಂ ಮಹೀಪತಿಃ ।।

ಪ್ರಭು ಮಹೀಪತಿ ಪ್ರಾಚೀನಬರ್ಹಿಯು ಮಹಾತಪಸ್ಸನ್ನು ತಪಿಸಿದ ನಂತರ ಸಮುದ್ರತನಯೆ ಸವರ್ಣಳನ್ನು ಪತ್ನಿಯನ್ನಾಗಿ ಮಾಡಿಕೊಂಡನು.

19002033a ಸವರ್ಣಾಧತ್ತ ಸಾಮುದ್ರೀ ದಶ ಪ್ರಾಚೀನಬರ್ಹಿಷಃ ।
19002033c ಸರ್ವೇ ಪ್ರಚೇತಸೋ ನಾಮ ಧನುರ್ವೇದಸ್ಯ ಪಾರಗಾಃ ।।

ಸಮುದ್ರನ ಮಗಳು ಸವರ್ಣಳು ಪ್ರಾಚೀನಬರ್ಹನಿಗೆ ಹತ್ತು ಮಕ್ಕಳನ್ನಿತ್ತಳು. ಆ ಎಲ್ಲ ಧನುರ್ವೇದಪಾರಂಗತರೂ ಪ್ರಚೇತಸರೆಂಬ ಹೆಸರಿನಿಂದ ತಿಳಿಯಲ್ಪಟ್ಟಿದ್ದಾರೆ.

19002034a ಅಪೃಥಗ್ಧರ್ಮಚರಣಾಸ್ತೇಽತಪ್ಯಂತ ಮಹತ್ತಪಃ ।
19002034c ದಶವರ್ಷಸಹಸ್ರಾಣಿ ಸಮುದ್ರಸಲಿಲೇಶಯಾಃ ।।

ಒಂದೇ ಧರ್ಮವನ್ನು ಆಚರಿಸುತ್ತಿದ್ದ ಅವರು ಸಮುದ್ರದಲ್ಲಿ ಮುಳುಗಿ ಹತ್ತು ಸಾವಿರ ವರ್ಷಗಳ ಪರ್ಯಂತ ಮಹಾ ತಪಸ್ಸನ್ನು ತಪಿಸಿದರು.

19002035a ತಪಶ್ಚರತ್ಸು ಪೃಥಿವೀಂ ಪ್ರಚೇತಸ್ಸು ಮಹೀರುಹಾಃ ।
19002035c ಅರಕ್ಷ್ಯಮಾಣಾಮಾವವ್ರುರ್ಬಭೂವಾಥ ಪ್ರಜಾಕ್ಷಯಃ ।।

ಪ್ರಚೇತಸರು ತಪಸ್ಸನ್ನಾಚರಿಸುತ್ತಿರಲು ರಕ್ಷಣೆಮಾಡುವ ರಾಜರಿಲ್ಲದ ಈ ಭೂಮಿಯಲ್ಲಿ ವೃಕ್ಷಗಳು ತುಂಬಿಕೊಂಡು ಪ್ರಜೆಗಳ ನಾಶವಾಗತೊಡಗಿತು.

19002036a ನಾಶಕನ್ಮಾರುತೋ ವಾತುಂ ವೃತಂ ಖಮಭವದ್ದ್ರುಮೈಃ ।
19002036c ದಶವರ್ಷಸಹಸ್ರಾಣಿ ನ ಶೇಕುಶ್ಚೇಷ್ಟಿತುಂ ಪ್ರಜಾಃ ।।

ಆ ಹತ್ತು ಸಾವಿರ ವರ್ಷಗಳಲ್ಲಿ ಆಕಾಶದಷ್ಟು ಎತ್ತರವಾಗಿ ಬೆಳೆಯುತ್ತಿದ್ದ ಮರಗಳಿಂದಾಗಿ ಭೂಮಿಯ ಮೇಲೆ ಗಾಳಿಯೇ ಬೀಸಲು ಶಕ್ಯವಾಗಿರಲಿಲ್ಲ. ಇದರಿಂದಾಗಿ ಜನರಿಗೆ ಹಂದಾಡಲೂ ಆಗುತ್ತಿರಲಿಲ್ಲ.

19002037a ತದುಪಸೃತ್ಯ ತಪಸಾ ಯುಕ್ತಾಃ ಸರ್ವೇ ಪ್ರಚೇತಸಃ ।
19002037c ಮುಖೇಭ್ಯೋ ವಾಯುಮಗ್ನಿಂ ಚ ತೇಽಸಸೃಜಂಜಾತಮನ್ಯವಃ ।।

ತಪಸ್ಸಿನಿಂದ ಯುಕ್ತರಾಗಿದ್ದ ಆ ಎಲ್ಲ ಪ್ರಚೇತಸರೂ ಅದರ ಸುಳಿಯನ್ನು ತಿಳಿದುಕೊಂಡು ಕೋಪಗೊಂಡು ತಮ್ಮ ತಮ್ಮ ಮುಖಗಳಿಂದ ವಾಯು ಮತ್ತು ಅಗ್ನಿಯರನ್ನು ಸೃಷ್ಟಿಸಿದರು.

19002038a ಉನ್ಮೂಲಾನಥ ತಾನ್ಕೃತ್ವಾ ವೃಕ್ಷಾನ್ವಾಯುರಶೋಷಯತ್ ।
19002038c ತಾನಗ್ನಿರದಹದ್ಘೋರ ಏವಮಾಸೀದ್ದ್ರುಮಕ್ಷಯಃ ।।

ವಾಯುವು ವೃಕ್ಷಗಳನ್ನು ಬುಡಸಹಿತ ಉರುಳಿಸಿ ಒಣಗಿಸಿದನು. ಘೋರ ಅಗ್ನಿಯು ಅವುಗಳನ್ನು ಸುಟ್ಟನು. ಹೀಗೆ ವೃಕ್ಷಗಳ ನಾಶವಾಗತೊಡಗಿತು.

19002039a ದ್ರುಮಕ್ಷಯಮಥೋ ಬುದ್ಧ್ವಾ ಕಿಂಚಿಚ್ಛಿಷ್ಟೇಷು ಶಾಖಿಷು ।
19002039c ಉಪಗಮ್ಯಾಬ್ರವೀದೇತಾನ್ರಾಜಾ ಸೋಮಃ ಪ್ರಜಾಪತೀನ್ ।।

ಈ ರೀತಿ ವೃಕ್ಷ-ಕ್ಷಯವು ನಡೆಯುತ್ತಿದೆ ಎನ್ನುವುದನ್ನು ಸ್ವಲ್ಪವೇ ಅಳಿದುಳಿದಿದ್ದ ಮರಗಳಿಂದ ತಿಳಿದುಕೊಂಡ ಅವುಗಳ ರಾಜ ಸೋಮನು ಪ್ರಜಾಪತಿ ಪ್ರಾಚೇತಸರ ಬಳಿಬಂದು ಹೇಳಿದನು:

19002040a ಕೋಪಂ ಯಚ್ಛತ ರಾಜಾನಃ ಸರ್ವೇ ಪ್ರಾಚೀನಬರ್ಹಿಷಃ ।
19002040c ವೃಕ್ಷಶೂನ್ಯಾ ಕೃತಾ ಪೃಥ್ವೀ ಶಾಮ್ಯತಾಮಗ್ನಿಮಾರುತೌ ।।

“ಸರ್ವ ಪ್ರಾಚೀನಬರ್ಹಿಷರೇ! ರಾಜರೇ! ಕೋಪಗೊಂಡು ಭೂಮಿಯನ್ನೇ ವೃಕ್ಷಶೂನ್ಯಳನ್ನಾಗಿ ಮಾಡುವುದನ್ನು ನಿಲ್ಲಿಸಿ! ಈ ಅಗ್ನಿ-ವಾಯುಗಳನ್ನು ಶಾಂತಗೊಳಿಸಿ!

19002041a ರತ್ನಭೂತಾ ಚ ಕನ್ಯೇಯಂ ವೃಕ್ಷಾಣಾಂ ವರವರ್ಣಿನೀ ।
19002041c ಭವಿಷ್ಯಂ ಜಾನತಾ ತತ್ತ್ವಂ ಧೃತಾ ಗರ್ಭೇಣ ವೈ ಮಯಾ ।।

ಇಗೋ ಇವಳು ವೃಕ್ಷಗಳ ಕನ್ಯೆ ವರವರ್ಣಿನೀ ರತ್ನಭೂತಾ. ಭವಿಷ್ಯವನ್ನು ತಿಳಿದಿದ್ದ ನಾನು ಇವಳ ತತ್ತ್ವವನ್ನು ನನ್ನ ಗರ್ಭದಲ್ಲಿ ಧರಿಸಿದ್ದೆನು.

19002042a ಮಾರಿಷಾ ನಾಮ ಕನ್ಯೇಯಂ ವೃಕ್ಷಾಣಾಮಿತಿ ನಿರ್ಮಿತಾ ।
19002042c ಭಾರ್ಯಾ ವೋಽಸ್ತು ಮಹಾಭಾಗಾಃ ಸೋಮವಂಶವಿವರ್ಧಿನೀ ।।

ಮಹಾಭಾಗರೇ! ವೃಕ್ಷಗಳಿಗೆಂದು ನಿರ್ಮಿತಳಾಗಿದ್ದ ಮಾರಿಷಾ ಎಂಬ ಹೆಸರಿನ ಈ ಕನ್ಯೆಯು ನಿಮ್ಮ ಭಾರ್ಯೆಯಾಗಲಿ! ಇವಳು ಮುಂದೆ ಸೋಮವಂಶವನ್ನು ವೃದ್ಧಿಗೊಳಿಸುತ್ತಾಳೆ.

19002043a ಯುಷ್ಮಾಕಂ ತೇಜಸೋಽರ್ಧೇನ ಮಮ ಚಾರ್ಧೇನ ತೇಜಸಃ ।
19002043c ಅಸ್ಯಾಮುತ್ಪತ್ಸ್ಯತೇ ಪುತ್ರೋ ದಕ್ಷೋ ನಾಮ ಪ್ರಜಾಪತಿಃ ।।

ನಿಮ್ಮ ಅರ್ಧತೇಜಸ್ಸಿನಿಂದ ಮತ್ತು ನನ್ನ ಅರ್ಧತೇಜಿಸ್ಸಿನಿಂದ ಇವಳಲ್ಲಿ ದಕ್ಷ ಎಂಬ ಹೆಸರಿನ ಪ್ರಜಾಪತಿ ಪುತ್ರನು ಜನಿಸುತ್ತಾನೆ.

19002044a ಯ ಇಮಾಂ ದಗ್ಧಭೂಯಿಷ್ಠಾಂ ಯುಷ್ಮತ್ತೇಜೋಮಯೇನ ವೈ ।
19002044c ಅಗ್ನಿನಾಗ್ನಿಸಮೋ ಭೂಯಃ ಪ್ರಜಾಃ ಸಂವರ್ಧಯಿಷ್ಯತಿ ।।

ನಿಮ್ಮ ತೇಜಸ್ಸಿನ ಅಗ್ನಿಯಿಂದ ಸಂಭವಿಸಿದ ಆ ಅಗ್ನಿಸಮ ದಕ್ಷನು ಅಧಿಕಾಂಶವಾಗಿ ಸುಟ್ಟುಹೋಗಿರುವ ಈ ಭೂಮಿಯಲ್ಲಿ ಪ್ರಜೆಗಳನ್ನು ಪುನಃ ವೃದ್ಧಿಗೊಳಿಸುತ್ತಾನೆ.”

19002045a ತತಃ ಸೋಮಸ್ಯ ವಚನಾಜ್ಜಗೃಹುಸ್ತೇ ಪ್ರಚೇತಸಃ ।
19002045c ಸಂಹೃತ್ಯ ಕೋಪಂ ವೃಕ್ಷೇಭ್ಯಃ ಪತ್ನೀಂ ಧರ್ಮೇಣ ಮಾರಿಷಾಮ್ ।।

ಸೋಮನ ಮಾತನ್ನು ಸ್ವೀಕರಿಸಿ ಪ್ರಚೇತಸರು ವೃಕ್ಷಗಳ ಮೇಲಿನ ತಮ್ಮ ಕೋಪವನ್ನು ಹಿಂತೆಗೆದುಕೊಂಡು ಮಾರಿಷಳನ್ನು ಧರ್ಮಪೂರ್ವಕವಾಗಿ ಪತ್ನಿಯನ್ನಾಗಿ ಮಾಡಿಕೊಂಡರು.

19002046a ಮಾರಿಷಾಯಾಂ ತತಸ್ತೇ ವೈ ಮನಸಾ ಗರ್ಭಮಾದಧುಃ ।
19002046c ದಶಭ್ಯಸ್ತು ಪ್ರಚೇತೋಭ್ಯೋ ಮಾರಿಷಾಯಾಂ ಪ್ರಜಾಪತಿಃ ।
19002046e ದಕ್ಷೋ ಜಜ್ಞೇ ಮಹಾತೇಜಾಃ ಸೋಮಸ್ಯಾಂಶೇನ ಭಾರತ ।।

ನಂತರ ಅವರು ಮನಸ್ಸಿನಿಂದಲೇ ಅವಳಿಗೆ ಗರ್ಭವನ್ನಿತ್ತರು. ಭಾರತ! ಹತ್ತು ಪ್ರಾಚೇತಸರ ಮತ್ತು ಸೋಮನ ಅಂಶದಿಂದ ಮಾರಿಷಳಲ್ಲಿ ಮಹಾತೇಜಸ್ವೀ ಪ್ರಜಾಪತಿ ದಕ್ಷನು ಜನಿಸಿದನು.

19002047a ಪುತ್ರಾನುತ್ಪಾದಯಾಮಾಸ ಸೋಮವಂಶವಿವರ್ಧನಾನ್ ।
19002047c ಅಚರಾಂಶ್ಚ ಚರಾಂಶ್ಚೈವ ದ್ವಿಪದೋಽಥ ಚತುಷ್ಪದಃ ।
19002047e ಸ ದೃಷ್ಟ್ವಾ ಮನಸಾ ದಕ್ಷಃ ಪಶ್ಚಾದಪ್ಯಸೃಜತ್ಸ್ತ್ರಿಯಃ ।।

ಅವನು ಸೋಮವಂಶವನ್ನು ವೃದ್ಧಿಗೊಳಿಸುವ ಪುತ್ರರಿಗೆ ಜನ್ಮವಿತ್ತನು. ಮತ್ತು ಚರಾಚರ ದ್ವಿಪದ-ಚತುಷ್ಪದ ಜೀವಿಗಳ ವೃದ್ಧಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಪುರಾಣ ಸ್ತ್ರೀಯರನ್ನೂ ಸೃಷ್ಟಿಸಿದನು.

19002048a ದದೌ ಸ ದಶ ಧರ್ಮಾಯ ಕಶ್ಯಪಾಯ ತ್ರಯೋದಶ ।
19002048c ಶಿಷ್ಟಾಃ ಸೋಮಾಯ ರಾಜ್ಞೇಽಥ ನಕ್ಷತ್ರಾಖ್ಯಾ ದದೌ ಪ್ರಭುಃ ।।

ಪ್ರಭು ದಕ್ಷನು ಅವರಲ್ಲಿ ಹತ್ತು ಪುತ್ರಿಗಳನ್ನು ಧರ್ಮನಿಗೂ, ಹದಿಮೂರು ಪುತ್ರಿಯರನ್ನು ಕಶ್ಯಪನಿಗೂ ಮತ್ತು ನಕ್ಷತ್ರಗಳೆಂದು ಪ್ರಖ್ಯಾತರಾದ ಉಳಿದ ಪುತ್ರಿಯರನ್ನು ರಾಜ ಸೋಮನಿಗೂ ನೀಡಿದನು.

19002049a ತಾಸು ದೇವಾಃ ಖಗಾ ನಾಗಾ ಗಾವೋ ದಿತಿಜದಾನವಾಃ ।
19002049c ಗಂಧರ್ವಾಪ್ಸರಸಶ್ಚೈವ ಜಜ್ಞಿರೇಽನ್ಯಾಶ್ಚ ಜಾತಯಃ ।।

ಅವರಲ್ಲಿ ದೇವ-ಪಕ್ಷಿ-ನಾಗ-ಗೋವು-ದೈತ್ಯ-ದಾನವ-ಗಂಧರ್ವ-ಅಪ್ಸರೆ ಮತ್ತು ಅನ್ಯ ಜಾತಿಗಳು ಹುಟ್ಟಿದವು.

19002050a ತತಃ ಪ್ರಭೃತಿ ರಾಜೇಂದ್ರಾಃ ಪ್ರಜಾ ಮೈಥುನಸಂಭವಾಃ ।
19002050c ಸಂಕಲ್ಪಾದ್ದರ್ಶನಾತ್ಸ್ಪರ್ಶಾತ್ಪೂರ್ವೇಷಾಂ ಸೃಷ್ಟಿರುಚ್ಯತೇ ।।

ಅಂದಿನಿಂದ ಪ್ರಜೆಗಳು ಮೈಥುನದಿಂದ ಹುಟ್ಟಲು ತೊಡಗಿದರು. ಅದಕ್ಕೆ ಮೊದಲು ಅವುಗಳ ಸೃಷ್ಟಿಯು ಸಂಕಲ್ಪದಿಂದ, ಅಥವಾ ನೋಡುವುದರಿಂದ ಅಥವಾ ಮುಟ್ಟುವುದರಿಂದ ಉಂಟಾಗುತ್ತಿತ್ತು.”

19002051 ಜನಮೇಜಯ ಉವಾಚ ।
19002051a ದೇವಾನಾಂ ದಾನವಾನಾಂ ಚ ಗಂಧರ್ವೋರಗರಕ್ಷಸಾಮ್ ।
19002051c ಸಂಭವಃ ಕಥಿತಃ ಪೂರ್ವಂ ದಕ್ಷಸ್ಯ ಚ ಮಹಾತ್ಮನಃ ।।

ಜನಮೇಜಯನು ಹೇಳಿದನು: “ಈ ಮೊದಲೇ ದೇವ-ದಾನವ-ಗಂಧರ್ವ-ಉರಗ-ರಾಕ್ಷಸರ ಮತ್ತು ಮಹಾತ್ಮ ದಕ್ಷನ ಹುಟ್ಟಿನ ಕುರಿತು ಹೇಳಿಯಾಗಿದೆ.

19002052a ಅಂಗುಷ್ಠಾದ್ಬ್ರಹ್ಮಣೋ ಜಾತೋ ದಕ್ಷಃ ಪ್ರೋಕ್ತಸ್ತ್ವಯಾನಘ ।
19002052c ವಾಮಾಂಗುಷ್ಠಾತ್ತಥಾ ಚೈವ ತಸ್ಯ ಪತ್ನೀ ವ್ಯಜಾಯತ ।।

ಅನಘ! ದಕ್ಷನು ಬ್ರಹ್ಮನ ಬಲ ಅಂಗುಷ್ಠದಿಂದ ಜನಿಸಿದನು ಮತ್ತು ಬ್ರಹ್ಮನ ಎಡ ಅಂಗುಷ್ಠದಿಂದ ಅವನ ಪತ್ನಿಯು ಹುಟ್ಟಿದಳು ಎನ್ನುವುದನ್ನು ನೀನು ಹೇಳಿದ್ದೀಯೆ.

19002053a ಕಥಂ ಪ್ರಾಚೇತಸತ್ವಂ ಸ ಪುನರ್ಲೇಭೇ ಮಹಾತಪಾಃ ।
19002053c ಏತನ್ಮೇ ಸಂಶಯಂ ವಿಪ್ರ ಸಮ್ಯಗಾಖ್ಯಾತುಮರ್ಹಸಿ ।
19002053c ದೌಹಿತ್ರಶ್ಚೈವ ಸೋಮಸ್ಯ ಕಥಂ ಶ್ವಶುರತಾಂ ಗತಃ ।।

ಅವನು ಪುನಃ ಹೇಗೆ ಪ್ರಾಚೇತಸರ ಮಗನಾಗಿ ಹುಟ್ಟಿದನು? ವಿಪ್ರ! ಇದರ ಕುರಿತು ನನಗಿರುವ ಸಂಶಯವನ್ನು ವಿಸ್ತಾರವಾಗಿ ಹೇಳಿ ಪರಿಹರಿಸಬೇಕು. ಸೋಮನ ಮಗಳು ಪುನಃ ಅವಳಿಗೆ ಹೇಗೆ ಅತ್ತೆಯಾದಳು?’

19002054 ವೈಶಂಪಾಯನ ಉವಾಚ ।
19002054a ಉತ್ಪತ್ತಿಶ್ಚ ನಿರೋಧಶ್ಚ ನಿತ್ಯೌ ಭೂತೇಷು ಪಾರ್ಥಿವ ।
19002054c ಋಷಯೋಽತ್ರ ನ ಮುಹ್ಯಂತಿ ವಿದ್ವಾಂಸಶ್ಚೈವ ಯೇ ಜನಾಃ ।।

ವೈಶಂಪಾಯನನು ಹೇಳಿದನು: “ಪಾರ್ಥಿವ! ಭೂತಗಳ ಉತ್ಪತ್ತಿ ಮತ್ತು ವಿನಾಶಗಳು ನಿರಂತರವಾಗಿ ನಡೆಯುತ್ತಿರುತ್ತದೆ. ಇದರ ಕುರಿತು ಋಷಿಗಳು ಮತ್ತು ವಿದ್ವಾಂಸ ಜನರು ಮೋಹಗೊಳ್ಳುವುದಿಲ್ಲ.

19002055a ಯುಗೇ ಯುಗೇ ಭವಂತ್ಯೇತೇ ಸರ್ವೇ ದಕ್ಷಾದಯೋ ನೃಪ ।
19002055c ಪುನಶ್ಚೈವ ನಿರುಧ್ಯಂತೇ ವಿದ್ವಾಂಸ್ತತ್ರ ನ ಮುಹ್ಯತಿ ।।

ನೃಪ! ಯುಗ-ಯಗಗಳಲ್ಲಿಯೂ ದಕ್ಷಾದಿ ಎಲ್ಲರೂ ಹುಟ್ಟುತ್ತಾರೆ ಮತ್ತು ಪುನಃ ನಾಶಹೊಂದುತ್ತಾರೆ. ವಿದ್ವಾಂಸರು ಇದರ ಕುರಿತು ಮೋಹಗೊಳ್ಳುವುದಿಲ್ಲ.

19002056a ಜ್ಯೈಷ್ಠ್ಯಂ ಕಾನಿಷ್ಠ್ಯಮಪ್ಯೇಷಾಂ ಪೂರ್ವಂ ನಾಸೀಜ್ಜನಾಧಿಪ ।
19002057c ತಪ ಏವ ಗರೀಯೋಽಭೂತ್ಪ್ರಭಾವಶ್ಚೈವ ಕಾರಣಮ್ ।।

ಜನಾಧಿಪ! ಮೊದಲು ಇವರಲ್ಲಿ ಜ್ಯೇಷ್ಠ-ಕನಿಷ್ಠ ಎಂಬ ಭಾವವು ಇರಲಿಲ್ಲ. ತಪಸ್ಸೇ ಅವರ ಗರಿಮೆಯನ್ನು ಸೂಚಿಸುತ್ತಿತ್ತು. ಮತ್ತು ಪ್ರಭಾವದ ಕಾರಣದಿಂದಲೇ ಸಂಬಂಧಗಳಾಗುತ್ತಿದ್ದವು.

19002058a ಇಮಾಂ ವಿಸೃಷ್ಟಿಂ ದಕ್ಷಸ್ಯ ಯೋ ವಿದ್ಯಾತ್ಸಚರಾಚರಾಮ್ ।
19002058c ಪ್ರಜಾವಾನಾಪದುತ್ತೀರ್ಣಃ ಸ್ವರ್ಗಲೋಕೇ ಮಹೀಯತೇ ।।

ದಕ್ಷನ ಈ ಚರಾಚರಗಳ ಸೃಷ್ಟಿಯನ್ನು ಯಾರು ಅರಿತುಕೊಳ್ಳುತ್ತಾನೋ ಅವನು ಪ್ರಜಾವಂತನೂ ಉತ್ತೀರ್ಣನೂ ಆಗಿ ಸ್ವರ್ಗಲೋಕದಲ್ಲಿ ಮೆರೆಯುತ್ತಾನೆ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಖಿಲಭಾಗೇ ಹರಿವಂಶೇ ಹರಿವಂಶಪರ್ವಣಿ ಪ್ರಜಾಸರ್ಗೇ ದಕ್ಷೋತ್ಪತ್ತಿಕಥನೇ ದ್ವಿತೀಯೋಽಧ್ಯಾಯಃ।।


  1. ಸತ್ಯಯುಗ, ತ್ರೇತಾಯುಗ, ದ್ವಾಪರಯುಗ ಮತ್ತು ಕಲಿಯುಗಗಳ ಒಂದು ಆವರ್ತನೆಯನ್ನು ಮಹಾಯುಗವೆನ್ನುತ್ತಾರೆ. ↩︎

  2. ಸುನೀಥೆಯು ಮೃತ್ಯುವಿನ ಮಗಳು. ↩︎

  3. ಋಷಿಗಳ ಪ್ರಕೋಪದಿಂದ ವೈನನು ಮೃತನಾದನು. ಋಷಿಗಳು ಅವನ ಸಂತಾನಕ್ಕಾಗಿ ಮೃತ ವೈನನ ಅವಯವಗಳನ್ನು ಕಡೆದರು. ↩︎

  4. ರಾಜರ ಸ್ತುತಿ ಮಾಡುವವರು ↩︎

  5. ರಾಜರ ವಂಶಾವಳಿಗಳನ್ನು ಹೇಳುವವರು. ↩︎