001: ಆದಿಸರ್ಗಕಥನಮ್

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಖಿಲಭಾಗೇ ಹರಿವಂಶಃ

ಹರಿವಂಶ ಪರ್ವ

ಅಧ್ಯಾಯ 1

ಸಾರ

19001001a ಆದ್ಯಂ ಪುರುಷಮೀಶಾನಂ ಪುರುಹೂತಂ ಪುರುಷ್ಟುತಮ್ ।
19001001c ಋತಮೇಕಾಕ್ಷರಂ ಬ್ರಹ್ಮ ವ್ಯಕ್ತಾವ್ಯಕ್ತಂ ಸನಾತನಮ್ ।।
19001002a ಅಸಚ್ಚ ಸದಸಚ್ಚೈವ ಯದ್ವಿಶ್ವಂ ಸದಸತ್ಪರಮ್ ।
19001002c ಪರಾವರಾಣಾಂ ಸ್ರಷ್ಟಾರಂ ಪುರಾಣಂ ಪರಮವ್ಯಯಮ್ ।।
19001003a ಮಂಗಲ್ಯಂ ಮಂಗಲಂ ವಿಷ್ಣುಂ ವರೇಣ್ಯಮನಘಂ ಶುಚಿಮ್ ।
19001003c ನಮಸ್ಕೃತ್ಯ ಹೃಷೀಕೇಶಂ ಚರಾಚರಗುರುಂ ಹರಿಮ್ ।।
19001004a ನೈಮಿಷಾರಣ್ಯೇ ಕುಲಪತಿಃ ಶೌನಕಸ್ತು ಮಹಾಮುನಿಃ ।
19001004c ಸೌತಿಂ ಪಪ್ರಚ್ಛ ಧರ್ಮಾತ್ಮಾ ಸರ್ವಶಾಸ್ತ್ರವಿಶಾರದಃ ।।

ಆದ್ಯ, ಪುರುಷ, ಈಶಾನ, ಪುರುಹೂತ, ಪುರುಷ್ಟುತ, ಋತ, ಏಕಾಕ್ಷರ, ಬ್ರಹ್ಮ, ವ್ಯಕ್ತ, ಅವ್ಯಕ್ತ, ಸನಾತನ, ಅಸಚ್ಚ, ಸದಸಚ್ಚ, ವಿಶ್ವದ ಪರಮ ಸತ್ತ್ವವಾಗಿರುವ, ಪರಾವರಗಳ ಸೃಷ್ಟಿಕರ್ತ, ಪುರಾಣ, ಪರಮ ಅವ್ಯಯ, ಮಂಗಲ್ಯ, ಮಂಗಲ, ವರೇಣ್ಯ, ಅನಘ, ಶುಚಿ, ಚರಾಚರಗಳ ಗುರು ಹರಿ ವಿಷ್ಣು ಹೃಷೀಕೇಶನನ್ನು ಸಮಸ್ಕರಿಸಿ ನೈಮಿಷಾರಣ್ಯದಲ್ಲಿ ಕುಲಪತಿ ಮಹಾಮುನಿ ಧರ್ಮಾತ್ಮಾ ಸರ್ವಶಾಸ್ತ್ರವಿಶಾರದ ಶೌನಕನು ಸೌತಿಯನ್ನು ಪ್ರಶ್ನಿಸಿದನು.

19001005 ಶೌನಕ ಉವಾಚ ।
19001005a ಸೌತೇ ಸುಮಹದಾಖ್ಯಾನಂ ಭವತಾ ಪರಿಕೀರ್ತಿತಮ್ ।
19001005c ಭಾರತಾನಾಂ ಚ ಸರ್ವೇಷಾಂ ಪಾರ್ಥಿವಾನಾಂ ತಥೈವ ಚ ।।
19001006a ದೇವಾನಾಂ ದಾನವಾನಾಂ ಚ ಗಂಧರ್ವೋರಗರಕ್ಷಸಾಮ್ ।
19001006c ದೈತ್ಯಾನಾಮಥ ಸಿದ್ಧಾನಾಂ ಗುಹ್ಯಕಾನಾಂ ತಥೈವ ಚ ।।
19001007a ಅತ್ಯದ್ಭುತಾನಿ ಕರ್ಮಾಣಿ ವಿಕ್ರಮಾ ಧರ್ಮನಿಶ್ಚಯಾಃ ।
19001007c ವಿಚಿತ್ರಾಶ್ಚ ಕಥಾಯೋಗಾ ಜನ್ಮ ಚಾಗ್ರ್ಯಮನುತ್ತಮಮ್ ।।

ಶೌನಕನು ಹೇಳಿದನು: “ಸೌತೇ! ಭಾರತರ, ಸರ್ವ ಪಾರ್ಥಿವರ ಹಾಗೂ ದೇವತೆಗಳ, ದಾನವರ, ಗಂಧರ್ವ-ಉರಗ-ರಾಕ್ಷಸರ, ದೈತ್ಯರ, ಸಿದ್ಧರ, ಮತ್ತು ಗುಹ್ಯಕರ ಅತ್ಯದ್ಭುತ ಕರ್ಮಗಳನ್ನೂ, ವಿಕ್ರಮಗಳನ್ನೂ, ಧರ್ಮನಿಶ್ಚಯಗಳನ್ನೂ, ಅವರ ವಿಚಿತ್ರ ಅನುತ್ತಮ ಜನ್ಮಗಳನ್ನೂ ಕೂಡಿದ ಮಹಾ ಆಖ್ಯಾನವನ್ನು ಹೇಳಿರುವೆ!

19001008a ಕಥಿತಂ ಭವತಾ ಪುಣ್ಯಂ ಪುರಾಣಂ ಶ್ಲಕ್ಷ್ಣಯಾ ಗಿರಾ ।
19001008c ಮನಃಕರ್ಣಸುಖಂ ಸೌತೇ ಪ್ರೀಣಾತ್ಯಮೃತಸಂಮಿತಮ್ ।।

ನಿನ್ನ ಮಧುರ ಸ್ವರದಲ್ಲಿ ಈ ಪುಣ್ಯ ಪುರಾತನ ಕಥೆಯನ್ನು ಹೇಳಿರುವೆ. ಸೌತೇ! ನಮ್ಮ ಮನಸ್ಸು-ಕಿವಿಗಳು ಅಮೃತದಿಂದ ತುಂಬಿಕೊಂಡಂತೆ ಪರಮ ಸಂತೋಷಗೊಂಡಿವೆ.

19001009a ತತ್ರ ಜನ್ಮ ಕುರೂಣಾಂ ವೈ ತ್ವಯೋಕ್ತಂ ಲೌಮಹರ್ಷಣೇ ।
19001009c ನ ತು ವೃಷ್ಣ್ಯಂಧಕಾನಾಂ ಚ ತದ್ಭವಾನ್ ವಕ್ತುಮರ್ಹತಿ ।।

ಲೌಮಹರ್ಷಣೇ! ನೀನು ಆಗ ಕುರುಗಳ ಜನ್ಮದ ಕುರಿತೂ ಹೇಳಿರುವೆ. ಆದರೆ ನೀನು ವೃಷ್ಣಿ-ಅಂಧಕರ ಜನ್ಮಗಳ ಕುರಿತು ಹೇಳಿಲ್ಲ. ಅದನ್ನು ನೀನು ಹೇಳಬೇಕು!”

19001010 ಸೌತಿರುವಾಚ ।
19001010a ಜನಮೇಜಯೇನ ಯತ್ಪೃಷ್ಟಃ ಶಿಷ್ಯೋ ವ್ಯಾಸಸ್ಯ ಧರ್ಮವಿತ್ ।
19001010c ತತ್ತೇಽಹಂ ಸಂಪ್ರವಕ್ಷ್ಯಾಮಿ ವೃಷ್ಣೀನಾಂ ವಂಶಮಾದಿತಃ ।।

ಸೌತಿಯು ಹೇಳಿದನು: “ಜನಮೇಜನೂ ಇದನ್ನು ವ್ಯಾಸನ ಧರ್ಮವಿದು ಶಿಷ್ಯನಲ್ಲಿ ಕೇಳಿದ್ದನು. ಅದರಂತೆಯೇ ನಾನು ಆದಿಯಿಂದ ವೃಷ್ಣಿಗಳ ವಂಶವನ್ನು ವರ್ಣಿಸುತ್ತೇನೆ.

19001011a ಶ್ರುತ್ವೇತಿಹಾಸಂ ಕಾರ್ತ್ಸ್ನ್ಯೇನ ಭಾರತಾನಾಂ ಸ ಭಾರತಃ ।
19001011c ಜನಮೇಜಯೋ ಮಹಾಪ್ರಾಜ್ಞೋ ವೈಶಂಪಾಯನಮಬ್ರವೀತ್ ।।

ಭಾರತರ ಇತಿಹಾಸವಾದ ಭಾರತವನ್ನು ಸಂಪೂರ್ಣವಾಗಿ ಕೇಳಿದ ಮಹಾಪ್ರಾಜ್ಞ ಜನಮೇಜಯನು ವೈಶಂಪಾಯನನಿಗೆ ಹೇಳಿದನು:

19001012 ಜನಮೇಜಯ ಉವಾಚ ।
19001012a ಮಹಾಭಾರತಮಾಖ್ಯಾನಂ ಬಹ್ವರ್ಥಂ ಶ್ರುತಿವಿಸ್ತರಮ್ ।
19001012c ಕಥಿತಂ ಭವತಾ ಪೂರ್ವಂ ವಿಸ್ತರೇಣ ಮಯಾ ಶ್ರುತಮ್ ।।

ಜನಮೇಜಯನು ಹೇಳಿದನು: “ಅನೇಕ ಅರ್ಥಗಳುಳ್ಳ, ಕೇಳಲು ವಿಸ್ತಾರವಾಗುಳ್ಳ ಮಹಾಭಾರತ ಆಖ್ಯಾನವನ್ನು ನೀನು ಹೇಳಿರುವೆ. ವಿಸ್ತಾರವಾಗಿ ಅದನ್ನು ನಾನು ಕೇಳಿದೆ.

19001013a ತತ್ರ ಶೂರಾಃ ಸಮಾಖ್ಯಾತಾ ಬಹವಃ ಪುರುಷರ್ಷಭಾಃ ।
19001013c ನಾಮಭಿಃ ಕರ್ಮಭಿಶ್ಚೈವ ವೃಷ್ಣ್ಯಂಧಕಮಹಾರಥಾಃ ।।

ಅಲ್ಲಿ ನೀನು ಅನೇಕ ವೃಷ್ಣಿ-ಅಂಧಕ ಪುರುಷರ್ಷಭ ಶೂರ ಮಹಾರಥರ ಹೆಸರುಗಳನ್ನೂ, ಕರ್ಮಗಳನ್ನೂ ಹೇಳಿದ್ದೀಯೆ.

19001014a ತೇಷಾಂ ಕರ್ಮಾವದಾತಾನಿ ತ್ವಯೋಕ್ತಾನಿ ದ್ವಿಜೋತ್ತಮ ।
19001014c ತತ್ರ ತತ್ರ ಸಮಾಸೇನ ವಿಸ್ತರೇಣೈವ ಮೇ ಪ್ರಭೋ ।।

ದ್ವಿಜೋತ್ತಮ! ನೀನು ಅವರ ಕರ್ಮಗಳ ಕುರಿತೂ ಹೇಳಿದ್ದೀಯೆ. ಆದರೆ ಪ್ರಭೋ! ನೀನು ಅಲ್ಲಲ್ಲಿ ಸಂಕ್ಷಿಪ್ತವಾಗಿ ಹೇಳಿದ್ದೀಯೆ. ವಿಸ್ತಾರದಲ್ಲಿ ಹೇಳಿಲ್ಲ.

19001015a ನ ಚ ಮೇ ತೃಪ್ತಿರಸ್ತೀಹ ಕಥ್ಯಮಾನೇ ಪುರಾತನೇ ।
19001015c ಏಕಶ್ಚೈವ ಮತೋ ರಾಶಿರ್ವೃಷ್ಣಯಃ ಪಾಂಡವಾಸ್ತಥಾ ।।

ನೀನು ಇದೂವರೆಗೆ ಹೇಳಿದುದರಲ್ಲಿ ನನಗೆ ತೃಪ್ತಿಯಾಗಿಲ್ಲ. ವೃಷ್ಣಿಗಳು ಮತ್ತು ಪಾಂಡವರು ಒಂದೇ ರಾಶಿಯವರು ಎಂದು ನನಗನ್ನಿಸುತ್ತಿದೆ.

19001016a ಭವಾಂಶ್ಚ ವಂಶಕುಶಲಸ್ತೇಷಾಂ ಪ್ರತ್ಯಕ್ಷದರ್ಶಿವಾನ್ ।
19001016c ಕಥಯಸ್ವ ಕುಲಂ ತೇಷಾಂ ವಿಸ್ತರೇಣ ತಪೋಧನ ।।

ತಪೋಧನ! ನೀನಾದರೋ ಅವರ ವಂಶಕುಶಲವನ್ನು ಪ್ರತ್ಯಕ್ಷವಾಗಿ ಕಂಡಿರುವೆ. ಅವರ ಕುಲದ ಕುರಿತು ವಿಸ್ತಾರವಾಗಿ ಹೇಳು.

19001017a ಯಸ್ಯ ಯಸ್ಯಾನ್ವಯೇ ಯೇ ಯೇ ತಾಂಸ್ತಾನಿಚ್ಛಾಮಿ ವೇದಿತುಮ್ ।
19001017c ಸ ತ್ವಂ ಸರ್ವಮಶೇಷೇಣ ಕಥಯಸ್ವ ಮಹಾಮುನೇ ।
19001017e ತೇಷಾಂ ಪೂರ್ವವಿಸೃಷ್ಟಿಂ ಚ ವಿಚಿಂತ್ಯೇಮಾಂ ಪ್ರಜಾಪತೇಃ ।।

ಮಹಾಮುನೇ! ಅವರು ಯಾವ ಯಾವ ಅನ್ವಯಗಳಲ್ಲಿ ಹುಟ್ಟಿದರು ಎನ್ನುವುದನ್ನು ಕೇಳ ಬಯಸುತ್ತೇನೆ. ಪ್ರಜಾಪತಿಯಿಂದ ಅವರ ಪೂರ್ವ ಸೃಷ್ಟಿ ಹೇಗಿದ್ದಿತು ಎನ್ನುವುದೆಲ್ಲವನ್ನೂ ಸಂಪೂರ್ಣವಾಗಿ ಹೇಳು.””

19001018 ಸೌತಿರುವಾಚ ।
19001018a ಸತ್ಕೃತ್ಯ ಪರಿಪೃಷ್ಟಸ್ತು ಸ ಮಹಾತ್ಮಾ ಮಹಾತಪಾಃ ।
19001018c ವಿಸ್ತರೇಣಾನುಪೂರ್ವ್ಯಾಂ ಚ ಕಥಯಾಮಾಸ ತಾಂ ಕಥಾಮ್ ।।

ಸೌತಿಯು ಹೇಳಿದನು: “ಹೀಗೆ ಕೇಳಿದ ಆ ಮಹಾತ್ಮನನ್ನು ಸತ್ಕರಿಸಿ ಮಹಾತಪಸ್ವಿಯು ವಿಸ್ತಾರವಾಗಿ ಮೊದಲಿನಿಂದ ಹೇಳತೊಡಗಿದನು.

19001019 ವೈಶಂಪಾಯನ ಉವಾಚ ।
19001019a ಶೃಣು ರಾಜನ್ಕಥಾಂ ದಿವ್ಯಾಂ ಪುಣ್ಯಾಂ ಪಾಪಪ್ರಮೋಚನೀಮ್ ।
19001019c ಕಥ್ಯಮಾನಾಂ ಮಯಾ ಚಿತ್ರಾಂ ಬಹ್ವರ್ಥಾಂ ಶ್ರುತಿಸಂಮಿತಾಮ್ ।।

ವೈಶಂಪಾಯನನು ಹೇಳಿದನು: “ರಾಜನ್! ನಾನು ಈಗ ಹೇಳುವ ಬಹಳ ವಿಚಿತ್ರ ಅರ್ಥಗಳುಳ್ಳ ಶೃತಿಸಂಮಿತವಾದ ಪಾಪವನ್ನು ಕಳೆಯುವ ಆ ದಿವ್ಯ ಪುಣ್ಯ ಕಥೆಯನ್ನು ಕೇಳು.

19001020a ಯಶ್ಚೇಮಾಂ ಧಾರಯೇದ್ವಾಪಿ ಶೃಣುಯಾದ್ವಾಪ್ಯಭೀಕ್ಷ್ಣಶಃ ।
19001020c ಸ್ವವಂಶಧಾರಣಂ ಕೃತ್ವಾ ಸ್ವರ್ಗಲೋಕೇ ಮಹೀಯತೇ ।।

ಯಾರು ಇದನ್ನು ಧಾರಣೆಮಾಡಿಕೊಂಡು ಒಂದೇ ಸಮನೆ ಕೇಳುತ್ತಾನೋ ಅವನು ತನ್ನ ವಂಶೋದ್ಧಾರವನ್ನು ಮಾಡಿ ಸ್ವರ್ಗಲೋಕದಲ್ಲಿ ಮೆರೆಯುತ್ತಾನೆ.

19001021a ಅವ್ಯಕ್ತಂ ಕಾರಣಂ ಯತ್ತನ್ನಿತ್ಯಂ ಸದಸದಾತ್ಮಕಮ್ ।
19001021c ಪ್ರಧಾನಂ ಪುರುಷಂ ತಸ್ಮಾನ್ನಿರ್ಮಮೇ ವಿಶ್ವಮೀಶ್ವರಮ್ ।।

ತನ್ನದು ಎಂಬ ಭಾವವಿಲ್ಲದಿರುವ ಅವ್ಯಕ್ತ ಕಾರಣ, ನಿತ್ಯ, ಸದಸದಾತ್ಮಕ, ಪ್ರಧಾನ ಪುರುಷನು ವಿಶ್ವದ ಈಶ್ವರನು.

19001022a ತಂ ವೈ ವಿದ್ಧಿ ಮಹಾರಾಜ ಬ್ರಹ್ಮಾಣಮಮಿತೌಜಸಮ್ ।
19001022c ಸ್ರಷ್ಟಾರಂ ಸರ್ವಭೂತಾನಾಂ ನಾರಾಯಣಪರಾಯಣಮ್ ।।

ಮಹಾರಾಜ! ಅವನನ್ನೇ ಅಮಿತೌಜಸ ಬ್ರಹ್ಮನೆಂದೂ, ಸರ್ವಭೂತಗಳ ಸೃಷ್ಟಾರನೆಂದೂ, ಪರಾಯಣ ನಾರಾಯಣನೆಂದೂ ತಿಳಿ.

19001023a ಅಹಂಕಾರಸ್ತು ಮಹತಸ್ತಸ್ಮಾದ್ಭೂತಾನಿ ಜಜ್ಞಿರೇ ।
19001023c ಭೂತಭೇದಾಶ್ಚ ಭೂತೇಭ್ಯ ಇತಿ ಸರ್ಗಃ ಸನಾತನಃ ।।

ಅವನಿಂದ ಮಹತ್ತು ಉಂಟಾಯಿತು ಮತ್ತು ಮಹತ್ತಿನಿಂದ ಅಹಂಕಾರವುಂಟಾಯಿತು. ಇದರಿಂದ ಎಲ್ಲ ಭೂತಗಳೂ ಸೃಷ್ಟಿಸಲ್ಪಟ್ಟವು. ಸ್ಥೂಲವಾಗುಳ್ಳ ಭೂತಭೇದಗಳು ಸೂಕ್ಷ್ಮ ಅಂಶಗಳಿಂದ ಹುಟ್ಟಿದವು. ಇದೇ ನಿರಂತರವಾಗಿ ನಡೆಯುವ ಸೃಷ್ಟಿ.

19001024a ವಿಸ್ತಾರಾವಯವಂ ಚೈವ ಯಥಾಪ್ರಜ್ಞಂ ಯಥಾಶ್ರುತಿಃ ।
19001024c ಕೀರ್ತ್ಯಮಾನಂ ಶೃಣು ಮಯಾ ಪೂರ್ವೇಷಾಂ ಕೀರ್ತಿವರ್ಧನಮ್ ।।

ನನಗೆ ತಿಳಿದಿರುವಷ್ಟು ಮಟ್ಟಿಗೆ ಮತ್ತು ನಾನು ಕೇಳಿಕೊಂಡಂತೆ ಇದರ ಕುರಿತು ವಿಸ್ತಾರವಾಗಿ ಹೇಳುತ್ತೇನೆ. ನಾನು ಹೇಳುವ ಇದನ್ನು ಕೇಳಿದರೆ ಪೂರ್ವಜರ ಕೀರ್ತಿಯು ವರ್ಧಿಸುತ್ತದೆ.

19001025a ಧನ್ಯಂ ಯಶಸ್ಯಂ ಶತ್ರುಘ್ನಂ ಸ್ವರ್ಗ್ಯಮಾಯುಃಪ್ರವರ್ಧನಮ್ ।
19001025c ಕೀರ್ತನಂ ಸ್ಥಿರಕೀರ್ತೀನಾಂ ಸರ್ವೇಷಾಂ ಪುಣ್ಯಕರ್ಮಣಾಮ್ ।।

ಇದರ ಕೀರ್ತನೆಯಿಂದ ಆ ಎಲ್ಲ ಪುಣ್ಯಕರ್ಮಿಗಳ ಕೀರ್ತಿಯು ಸ್ಥಿರವಾಗುವುದು. ಇದರಿಂದ ಧನ-ಯಶಸ್ಸು-ಆಯುಸ್ಸು ವರ್ಧಿಸುತ್ತವೆ. ಶತ್ರುಗಳು ನಾಶವಾಗುತ್ತಾರೆ. ಸ್ವರ್ಗವು ದೊರೆಯುತ್ತದೆ.

19001026a ತಸ್ಮಾತ್ಕಲ್ಪಾಯ ತೇ ಕಲ್ಪಃ ಸಮಗ್ರಂ ಶುಚಯೇ ಶುಚಿಃ ।
19001026c ಆ ವೃಷ್ಣಿವಂಶಾದ್ವಕ್ಷ್ಯಾಮಿ ಭೂತಸರ್ಗಮನುತ್ತಮಮ್ ।।

ಶುಚಿಯಾಗಿರುವವರಲ್ಲಿ ನೀನು ಅತ್ಯಂತ ಶುಚಿಯಾಗಿರುವೆ. ಆದುದರಿಂದ ನಾನು ಇದನ್ನು ನಿನಗೆ ಹೇಳಬಲ್ಲೆ ಮತ್ತು ನೀನು ಇದನ್ನು ಅರ್ಥಮಾಡಿಕೊಳ್ಳಬಲ್ಲೆ. ಭೂತಗಳ ಈ ಅನುತ್ತಮ ಸೃಷ್ಟಿಯ ಮತ್ತು ವೃಷ್ಣಿವಂಶದ ಕುರಿತು ನಾನು ನಿನಗೆ ಹೇಳುತ್ತೇನೆ.

19001027a ತತಃ ಸ್ವಯಂಭೂರ್ಭಗವಾನ್ ಸಿಸೃಕ್ಷುರ್ವಿವಿಧಾಃ ಪ್ರಜಾಃ ।
19001027c ಅಪ ಏವ ಸಸರ್ಜಾದೌ ತಾಸು ವೀರ್ಯಮವಾಸೃಜತ್ ।।

ಆಗ ಸ್ವಯಂಭೂ ಭಗವಾನನು ವಿವಿಧ ಪ್ರಜೆಗಳನ್ನು ಸೃಷ್ಟಿಸಲು ಬಯಸಿದನು. ಮೊದಲು ನೀರನ್ನು ಸೃಷ್ಟಿಸಿ ಅದರಲ್ಲಿ ವೀರ್ಯವನ್ನು ಬಿಟ್ಟನು.

19001028a ಆಪೋ ನಾರಾ ಇತಿ ಪ್ರೋಕ್ತಾ ಆಪೋ ವೈ ನರಸೂನವಃ ।
19001028c ಅಯನಂ ತಸ್ಯ ತಾಃ ಪೂರ್ವಂ ತೇನ ನಾರಾಯಣಃ ಸ್ಮೃತಃ ।।

ನೀರಿಗೆ ನಾರಾ ಎಂದು ಹೇಳುತ್ತಿದ್ದರು. ನೀರಿನಿಂದಲೇ ನರನು ಹುಟ್ಟಿಕೊಂಡನು. ಹಿಂದೆ ನೀರಿನ ಮೇಲೆ ಮಲಗಿಕೊಂಡಿದ್ದುದರಿಂದ ಅವನು ನಾರಾಯಣನೆಂದಾದನು.

19001029a ಹಿರಣ್ಯವರ್ಣಮಭವತ್ತದಂಡಮುದಕೇಶಯಮ್ ।
19001029c ತತ್ರ ಜಜ್ಞೇ ಸ್ವಯಂ ಬ್ರಹ್ಮಾ ಸ್ವಯಂಭೂರಿತಿ ನಃ ಶ್ರುತಮ್ ।।

ಹಾಗೆ ಅವನು ನೀರಿನಲ್ಲಿ ಮಲಗಿಕೊಂಡಿರುವಾಗ ಅಲ್ಲಿ ಒಂದು ಹಿರಣ್ಯವರ್ಣದ ಅಂಡವು ಉದ್ಭವವಾಯಿತು. ಅದರಲ್ಲಿ ಬ್ರಹ್ಮನು ಸ್ವಯಂ ಜನಿಸಿದನು. ಆದುದರಿಂದ ಅವನು ಸ್ವಯಂಭು ಎನಿಸಿದನು ಎಂದು ನಾವು ಕೇಳಿದ್ದೇವೆ.

19001030a ಹಿರಣ್ಯಗರ್ಭೋ ಭಗವಾನುಷಿತ್ವಾ ಪರಿವತ್ಸರಮ್ ।
19001030c ತದಂಡಮಕರೋದ್ದ್ವೈಧಂ ದಿವಂ ಭುವಮಥಾಪಿ ಚ ।।

ಭಗವಾನ್ ಹಿರಣ್ಯಗರ್ಭನು ಆ ಅಂಡದಲ್ಲಿ ಒಂದು ವರ್ಷ ಪರ್ಯಂತ ಇದ್ದುಕೊಂಡು ನಂತರ ಅದನ್ನು ಎರಡಾಗಿ ಒಡೆದು ಭೂಮಿ-ಸ್ವರ್ಗಗಳನ್ನು ಸೃಷ್ಟಿಸಿದನು.

19001031a ತಯೋಃ ಶಕಲಯೋರ್ಮಧ್ಯೇ ಆಕಾಶಮಸೃಜತ್ಪ್ರಭುಃ ।
19001031c ಅಪ್ಸು ಪಾರಿಪ್ಲವಾಂ ಪೃಥ್ವೀಂ ದಿಶಶ್ಚ ದಶಧಾ ದಧೇ ।।

ಆ ಎರಡು ಭಾಗಗಳ ಮಧ್ಯೆ ಪ್ರಭುವು ಆಕಾಶವನ್ನು ಸೃಷ್ಟಿಸಿದನು. ಪೃಥ್ವಿಯು ನೀರಿನಿಂದ ಸುತ್ತುವರೆಯಲ್ಪಟ್ಟಿರಲು ಅವನು ಹತ್ತು ದಿಕ್ಕುಗಳನ್ನು1 ಸೃಷ್ಟಿಸಿದನು.

19001032a ತತ್ರ ಕಾಲಂ ಮನೋ ವಾಚಂ ಕಾಮಂ ಕ್ರೋಧಮಥೋ ರತಿಮ್ ।
19001032c ಸಸರ್ಜ ಸೃಷ್ಟಿಂ ತದ್ರೂಪಾಂ ಸ್ರಷ್ಟುಮಿಚ್ಛನ್ಪ್ರಜಾಪತೀನ್ ।।

ಸೃಷ್ಟಿಸಲು ಇಚ್ಛಿಸಿ ಅವನು ಕಾಲ, ಮನಸ್ಸು, ಮಾತು, ಕಾಮ, ಕ್ರೋಧ, ರತಿ ಮತ್ತು ಅವುಗಳಿಗೆ ತಕ್ಕ ರೂಪವುಳ್ಳ ಪ್ರಜಾಪತಿಗಳನ್ನು ಸೃಷ್ಟಿಸಿದನು.

19001033a ಮರೀಚಿಮತ್ರ್ಯಂಗಿರಸಂ ಪುಲಸ್ತ್ಯಂ ಪುಲಹಂ ಕ್ರತುಮ್ ।
19001033c ವಸಿಷ್ಠಂ ಚ ಮಹಾತೇಜಾಃ ಸೋಽಸೃಜತ್ಸಪ್ತ ಮಾನಸಾನ್ ।।

ತನ್ನ ಮನಸ್ಸಿನಿಂದ ಏಳು ಮಹಾತೇಜಸ್ಸುಗಳನ್ನು ಸೃಷ್ಟಿಸಿದನು: ಮರೀಚಿ, ಅತ್ರಿ, ಅಂಗಿರಸ, ಪುಲಸ್ತ್ಯ, ಪುಲಹ, ಕ್ರತು, ಮತ್ತು ವಸಿಷ್ಠ.

19001034a ಸಪ್ತ ಬ್ರಹ್ಮಾಣ ಇತ್ಯೇತೇ ಪುರಾಣೇ ನಿಶ್ಚಯಂ ಗತಾಃ ।
19001034c ನಾರಾಯಣಾತ್ಮಕಾನಾಂ ವೈ ಸಪ್ತಾನಾಂ ಬ್ರಹ್ಮಜನ್ಮನಾಮ್ ।।

ಇವರು ಏಳು ಪುರಾಣ ಬ್ರಾಹ್ಮಣರೆಂದು ನಿಶ್ಚಿತರಾದರು. ಈ ಏಳ್ವರು ಬ್ರಹ್ಮಜನ್ಮಿಗಳು ಮತ್ತು ನಾರಾಯಣಾತ್ಮಕರು.

19001035a ತತೋಽಸೃಜತ್ಪುನರ್ಬ್ರಹ್ಮಾ ರುದ್ರಂ ರೋಷಾತ್ಮಸಂಭವಮ್ ।
19001035c ಸನತ್ಕುಮಾರಂ ಚ ವಿಭುಂ ಪೂರ್ವೇಷಾಮಪಿ ಪೂರ್ವಜಮ್ ।।

ಅನಂತರ ಬ್ರಹ್ಮನು ರೋಷದಿಂದ ಹುಟ್ಟಿದ ರುದ್ರನನ್ನು ಸೃಷ್ಟಿಸಿದನು. ನಂತರ ವಿಭುವು ಪೂರ್ವಜರಿಗೂ ಮೊದಲಿಗರಾದ ಸನತ್ಕುಮಾರನೇ ಮೊದಲಾದ ಋಷಿ2ಗಳನ್ನು ಸೃಷ್ಟಿಸಿದನು.

19001036a ಸಪ್ತೈತೇ ಜನಯಂತಿ ಸ್ಮ ಪ್ರಜಾ ರುದ್ರಶ್ಚ ಭಾರತ ।
19001036c ಸ್ಕಂದಃ ಸನತ್ಕುಮಾರಶ್ಚ ತೇಜಃ ಸಂಕ್ಷಿಪ್ಯ ತಿಷ್ಠತಃ ।।

ಭಾರತ! ಆ ಸಪ್ತರ್ಷಿಗಳು ಪ್ರಜೆಗಳನ್ನು ಹುಟ್ಟಿಸಿದರು. ಆದರೆ ರುದ್ರ, ಸ್ಕಂದ ಮತ್ತು ಸನತ್ಕುಮಾರರು ತಮ್ಮ ವೀರ್ಯಗಳನ್ನು ಹಿಡಿದಿಟ್ಟುಕೊಂಡರು.

19001037a ತೇಷಾಂ ಸಪ್ತ ಮಹಾವಂಶಾ ದಿವ್ಯಾ ದೇವಗಣಾನ್ವಿತಾಃ ।
19001037c ಕ್ರಿಯಾವಂತಃ ಪ್ರಜಾವಂತೋ ಮಹರ್ಷಿಭಿರಲಂಕೃತಾಃ ।।

ಅವರ ಏಳು ದಿವ್ಯ ಮಹಾವಂಶಗಳು ಕ್ರಿಯಾವಂತ ಪ್ರಜಾವಂತ ದೇವಗಣಗಳು ಮತ್ತು ಮಹರ್ಷಿಗಳಿಂದ ಅಲಂಕರಿಸಲ್ಪಟ್ಟಿವೆ.

19001038a ವಿದ್ಯುತೋಽಶನಿಮೇಘಾಂಶ್ಚ ರೋಹಿತೇಂದ್ರಧನೂಂಷಿ ಚ ।
19001038c ವಯಾಂಸಿ ಚ ಸಸರ್ಜಾದೌ ಪರ್ಜನ್ಯಂ ಚ ಸಸರ್ಜ ಹ ।।

ನಂತರ ಅವನು ವಿದ್ಯುತ್, ಗುಡುಗು, ಮೋಡಗಳು, ನೇರ ಕಾಮನ ಬಿಲ್ಲು, ಮಳೆ ಮತ್ತು ಜಲವಾಸಿ ಪ್ರಾಣಿಗಳನ್ನು ಸೃಷ್ಟಿಸಿದನು.

19001039a ಋಚೋ ಯಜೂಂಷಿ ಸಾಮಾನಿ ನಿರ್ಮಮೇ ಯಜ್ಞಸಿದ್ಧಯೇ ।
19001039c ಮುಖಾದ್ದೇವಾನಜನಯತ್ಪಿತೄಶ್ಚೇಶೋಽಪಿ ವಕ್ಷಸಃ ।।

ಯಜ್ಞಸಿದ್ಧಿಗಾಗಿ ಅವನು ತನ್ನ ಮುಖದಿಂದ ಋಕ್, ಯಜು ಮತ್ತು ಸಾಮಗಳನ್ನು ಸೃಷ್ಟಿಸಿದನು. ನಂತರ ಮುಖದಿಂದ ಅವನು ದೇವತೆಗಳನ್ನೂ, ಮತ್ತು ವಕ್ಷಸ್ಥಲದಿಂದ ಪಿತೃಗಳನ್ನೂ ಪ್ರಕಟಗೊಳಿಸಿದನು.

19001040a ಪ್ರಜನಾಚ್ಚ ಮನುಷ್ಯಾನ್ವೈ ಜಘನಾನ್ನಿರ್ಮಮೇಽಸುರಾನ್ ।
19001040c ಸಾಧ್ಯಾನಜನಯದ್ದೇವಾನಿತ್ಯೇವಮನುಶುಶ್ರುಮ ।। ೧-೧-೪೦

ತನ್ನ ಪ್ರಜನನದಿಂದ ಮನುಷ್ಯರನ್ನೂ, ತೊಡೆಗಳಿಂದ ಅಸುರರನ್ನೂ ಸೃಷ್ಟಿಸಿದನು. ನಂತರ ಅವನು ಪ್ರಾಚೀನ ದೇವತೆಗಳೆನಿಸಿಕೊಂಡ ಸಾಧ್ಯರನ್ನು ಹುಟ್ಟಿಸಿದನು ಎಂದು ಕೇಳಿದ್ದೇವೆ.

19001041a ಉಚ್ಚಾವಚಾನಿ ಭೂತಾನಿ ಗಾತ್ರೇಭ್ಯಸ್ತಸ್ಯ ಜಜ್ಞಿರೇ ।
19001041c ಆಪವಸ್ಯ ಪ್ರಜಾಸರ್ಗಂ ಸೃಜತೋ ಹಿ ಪ್ರಜಾಪತೇಃ ।।

ನೀರಿನ ಮೇಲಿದ್ದುಕೊಂಡು ಹೀಗೆ ಪ್ರಜೆಗಳನ್ನು ಸೃಷ್ಟಿಸುತ್ತಿದ್ದ ಆ ಪ್ರಜಾಪತಿಯ ವಿವಿಧ ಶರೀರಗಳಿಂದ ಉಚ್ಚ-ನೀಚ ಭೂತಗಳು ಹುಟ್ಟಿಬಂದವು.

19001042a ಸೃಜ್ಯಮಾನಾಃ ಪ್ರಜಾ ನೈವ ವಿವರ್ಧಂತೇ ಯದಾ ತದಾ ।
19001042c ದ್ವಿಧಾ ಕೃತ್ವಾಽಆತ್ಮನೋ ದೇಹಮರ್ಧೇನ ಪುರುಷೋಽಭವತ್ ।।

ಹೀಗೆ ಸೃಷ್ಟಿಸಿದ ಪ್ರಜೆಗಳು ವರ್ಧಿಸುತ್ತಿರುವಾಗ ಅವನು ತನ್ನನ್ನು ತಾನೇ ಎರಡನ್ನಾಗಿಸಿ ಅರ್ಧದೇಹದಲ್ಲಿ ಪುರುಷನಾದನು.

19001043a ಅರ್ಧೇನ ನಾರೀ ತಸ್ಯಾಂ ಸ ಸಸೃಜೇ ವಿವಿಧಾಃ ಪ್ರಜಾಃ ।
19001043c ದಿವಂ ಚ ಪೃಥಿವೀಂ ಚೈವ ಮಹಿಮ್ನಾ ವ್ಯಾಪ್ಯ ತಿಷ್ಠತಃ ।।

ಇನ್ನೊಂದು ಅರ್ಧದೇಹದಿಂದ ನಾರಿಯಾಗಿ ಅವನು ವಿವಿಧ ಪ್ರಜೆಗಳನ್ನು ಸೃಷ್ಟಿಸಿದನು. ಸ್ವರ್ಗ-ಪೃಥ್ವಿಗಳನ್ನು ತನ್ನ ಮಹಿಮೆಯಿಂದ ವ್ಯಾಪಿಸಿಕೊಂಡನು.

19001044a ವಿರಾಜಮಸೃಜದ್ವಿಷ್ಣುಃ ಸೋಽಸೃಜತ್ಪುರುಷಂ ವಿರಾಟ್ ।
19001044c ಪುರುಷಂ ತಂ ಮನುಂ ವಿದ್ಧಿ ತದ್ವೈ ಮನ್ವಂತರಂ ಸ್ಮೃತಮ್ ।।

ವಿಷ್ಣುವು ವಿರಾಜಿಸುವ ವಿರಾಟ್ ಪುರುಷನನ್ನು ಸೃಷ್ಟಿಸಿದನು. ಆ ಪುರುಷನನ್ನೇ ಮನುವೆಂದು ತಿಳಿ. ಅವನಿಂದಲೇ ಮನ್ವಂತರವೆನಿಸಿಕೊಂಡಿತು.

19001045a ದ್ವಿತೀಯಮಾಪವಸ್ಯೈತನ್ಮನೋರಂತರಮುಚ್ಯತೇ ।
19001045c ಸ ವೈರಾಜಃ ಪ್ರಜಾಸರ್ಗಂ ಸಸರ್ಜ ಪುರುಷಃ ಪ್ರಭುಃ ।
19001048e ನಾರಾಯಣವಿಸರ್ಗಃ ಸ ಪ್ರಜಾಸ್ತಸ್ಯಾಪ್ಯಯೋನಿಜಾಃ ।।

ನೀರಿನಲ್ಲಿ ಎರಡನೆಯವನಾದ ಇವನಿಂದಲೇ ಮನ್ವಂತರವು ಪ್ರಾರಂಭವಾಯಿತೆಂದು ಹೇಳುತ್ತಾರೆ. ನೀರಿನಿಂದ ಹುಟ್ಟಿದ ಈ ಪ್ರಜೆಗಳ ಸೃಷ್ಟಿಯನ್ನು ನಾರಾಯಣಸರ್ಗವೆಂದು ಕರೆಯುತ್ತಾರೆ.

19001046a ಆಯುಷ್ಮಾನ್ಕೀರ್ತಿಮಾಂಧನ್ಯಃ ಪ್ರಜಾವಾಂಶ್ರುತವಾಂಸ್ತಥಾ ।
19001046c ಆದಿಸರ್ಗಂ ವಿದಿತ್ವೇಮಂ ಯಥೇಷ್ಟಾಂ ಗತಿಮಾಪ್ನುಯಾತ್ ।।

ಈ ಆದಿಸರ್ಗವನ್ನು ತಿಳಿದುಕೊಂಡವನು ಆಯುಷ್ಮಂತನೂ, ಕೀರ್ತಿವಂತನೂ, ಧನ್ಯನೂ, ಪ್ರಜಾವಂತನೂ, ವಿದ್ವಾಂಸನೂ ಎನಿಸಿಕೊಂಡು ಯಥೇಷ್ಟ ಗತಿಯನ್ನು ಹೊಂದುತ್ತಾನೆ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಖಿಲಭಾಗೇ ಹರಿವಂಶೇ ಹರಿವಂಶಪರ್ವಣಿ ಆದಿಸರ್ಗಕಥನೇ ಪ್ರಥಮೋಽಧ್ಯಾಯಃ


  1. ಉತ್ತರ, ಆಗ್ನೇಯ, ಪೂರ್ವ, ನೈರುತ್ಯ, ದಕ್ಷಿಣ, ವಾಯುವ್ಯ, ಪಶ್ಚಿಮ, ಈಶಾನ್ಯ, ಮೇಲೆ ಮತ್ತು ಕೆಳಗೆ. ↩︎

  2. ಸನಕ, ಸನಂದ, ಸನಾತನ ಮತ್ತು ಸನತ್ಕುಮಾರ. ↩︎