003: ಯುಧಿಷ್ಠಿರತನುತ್ಯಾಗಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಸ್ವರ್ಗಾರೋಹಣ ಪರ್ವ

ಸ್ವರ್ಗಾರೋಹಣ ಪರ್ವ

ಅಧ್ಯಾಯ 3

ಸಾರ

ಇಂದ್ರಾದಿ ದೇವತೆಗಳು ಬಂದು ಯುಧಿಷ್ಠಿರನನ್ನು ಸಂಧಿಸಲು ಮೋಸದ ನರಕವು ಮಾಯವಾದುದು; ಇಂದ್ರನ ಮಾತು (1-27). ಧರ್ಮನ ಮಾತು (28-37). ಯುಧಿಷ್ಠಿರನು ಶರೀರತ್ಯಾಗ ಮಾಡಿ ಸ್ವರ್ಗವನ್ನೇರಿದುದು (38-41).

18003001 ವೈಶಂಪಾಯನ ಉವಾಚ।
18003001a ಸ್ಥಿತೇ ಮುಹೂರ್ತಂ ಪಾರ್ಥೇ ತು ಧರ್ಮರಾಜೇ ಯುಧಿಷ್ಠಿರೇ।
18003001c ಆಜಗ್ಮುಸ್ತತ್ರ ಕೌರವ್ಯ ದೇವಾಃ ಶಕ್ರಪುರೋಗಮಾಃ।।

ವೈಶಂಪಾಯನನು ಹೇಳಿದನು: “ಕೌರವ್ಯ! ಪಾರ್ಥ ಧರ್ಮರಾಜ ಯುಧಿಷ್ಠಿರನು ಅಲ್ಲಿ ಒಂದು ಕ್ಷಣಮಾತ್ರ ನಿಂತಿದ್ದಷ್ಟೇ ಶಕ್ರನನ್ನು ಮುಂದಿರಿಸಿಕೊಂಡ ದೇವತೆಗಳು ಅಲ್ಲಿಗೆ ಆಗಮಿಸಿದರು.

18003002a ಸ್ವಯಂ ವಿಗ್ರಹವಾನ್ಧರ್ಮೋ ರಾಜಾನಂ ಪ್ರಸಮೀಕ್ಷಿತುಮ್।
18003002c ತತ್ರಾಜಗಾಮ ಯತ್ರಾಸೌ ಕುರುರಾಜೋ ಯುಧಿಷ್ಠಿರಃ।।

ಸ್ವಯಂ ಧರ್ಮನು ದೇಹಧಾರಿಯಾಗಿ ರಾಜನನ್ನು ನೋಡಲು ಕುರುರಾಜ ಯುಧಿಷ್ಠಿರನು ಎಲ್ಲಿದ್ದನೋ ಅಲ್ಲಿಗೆ ಆಗಮಿಸಿದನು.

18003003a ತೇಷು ಭಾಸ್ವರದೇಹೇಷು ಪುಣ್ಯಾಭಿಜನಕರ್ಮಸು।
18003003c ಸಮಾಗತೇಷು ದೇವೇಷು ವ್ಯಗಮತ್ತತ್ತಮೋ ನೃಪ।।

ನೃಪ! ಆ ಪುಣ್ಯ ಜನ್ಮ-ಕರ್ಮಗಳ ದೇವತೆಗಳು ಅಲ್ಲಿಗೆ ಆಗಮಿಸುತ್ತಲೇ ಅವರ ಹೊಳೆಯುತ್ತಿರುವ ದೇಹಗಳಿಂದಾಗಿ ಅಲ್ಲಿದ್ದ ಕತ್ತಲೆಯು ಹೊರಟುಹೋಯಿತು.

18003004a ನಾದೃಶ್ಯಂತ ಚ ತಾಸ್ತತ್ರ ಯಾತನಾಃ ಪಾಪಕರ್ಮಿಣಾಮ್।
18003004c ನದೀ ವೈತರಣೀ ಚೈವ ಕೂಟಶಾಲ್ಮಲಿನಾ ಸಹ।।

ಪಾಪಕರ್ಮಿಗಳ ಯಾತನೆಗಳೂ, ವೈತರಣೀ ನದಿಯೂ, ಮುಳ್ಳಿನ ಮರಗಳೂ ಅಲ್ಲಿಂದ ಅದೃಶ್ಯವಾದವು.

18003005a ಲೋಹಕುಂಭ್ಯಃ ಶಿಲಾಶ್ಚೈವ ನಾದೃಶ್ಯಂತ ಭಯಾನಕಾಃ।
18003005c ವಿಕೃತಾನಿ ಶರೀರಾಣಿ ಯಾನಿ ತತ್ರ ಸಮಂತತಃ।
18003005e ದದರ್ಶ ರಾಜಾ ಕೌಂತೇಯಸ್ತಾನ್ಯದೃಶ್ಯಾನಿ ಚಾಭವನ್।।

ಅಲ್ಲಿ ಸುತ್ತಲೂ ಇದ್ದಿದ್ದ ಭಯಾನಕ ಲೋಹದ ಕೊಪ್ಪರಿಗೆಗಳೂ, ಭಯಾನಕ ಶಿಲೆಗಳೂ, ವಿಕೃತ ಶರೀರಗಳೂ ದೃಶ್ಯಗಳೂ ಅದೃಶ್ಯವಾದುದನ್ನು ರಾಜಾ ಕೌಂತೇಯನು ನೋಡಿದನು.

18003006a ತತೋ ವಾಯುಃ ಸುಖಸ್ಪರ್ಶಃ ಪುಣ್ಯಗಂಧವಹಃ ಶಿವಃ।
18003006c ವವೌ ದೇವಸಮೀಪಸ್ಥಃ ಶೀತಲೋಽತೀವ ಭಾರತ।।

ಭಾರತ! ಕೂಡಲೇ ತಂಪಾದ ಮಂಗಳಕರ ಪುಣ್ಯಸುವಾಸನೆಯುಳ್ಳ ಶೀತಲ ಗಾಳಿಯು ಅಲ್ಲಿ ಬಂದ ದೇವತೆಗಳ ಕಡೆಯಿಂದ ಬೀಸತೊಡಗಿತು.

18003007a ಮರುತಃ ಸಹ ಶಕ್ರೇಣ ವಸವಶ್ಚಾಶ್ವಿನೌ ಸಹ।
18003007c ಸಾಧ್ಯಾ ರುದ್ರಾಸ್ತಥಾದಿತ್ಯಾ ಯೇ ಚಾನ್ಯೇಽಪಿ ದಿವೌಕಸಃ।।
18003008a ಸರ್ವೇ ತತ್ರ ಸಮಾಜಗ್ಮುಃ ಸಿದ್ಧಾಶ್ಚ ಪರಮರ್ಷಯಃ।
18003008c ಯತ್ರ ರಾಜಾ ಮಹಾತೇಜಾ ಧರ್ಮಪುತ್ರಃ ಸ್ಥಿತೋಽಭವತ್।।

ಮಹಾತೇಜಸ್ವಿ ರಾಜಾ ಧರ್ಮಪುತ್ರನು ಎಲ್ಲಿ ನಿಂತಿದ್ದನೋ ಅಲ್ಲಿಗೆ ಶಕ್ರನೊಂದಿಗೆ ವಾಯು, ವಸವರು, ಅಶ್ವಿನರು, ಸಾಧ್ಯರು, ರುದ್ರರು, ಆದಿತ್ಯರು, ಅನ್ಯ ದೇವತೆಗಳು, ಸಿದ್ಧರು, ಮತ್ತು ಪರಮ ಋಷಿಗಳೆಲ್ಲರೂ ಬಂದು ಸೇರಿದರು.

18003009a ತತಃ ಶಕ್ರಃ ಸುರಪತಿಃ ಶ್ರಿಯಾ ಪರಮಯಾ ಯುತಃ।
18003009c ಯುಧಿಷ್ಠಿರಮುವಾಚೇದಂ ಸಾಂತ್ವಪೂರ್ವಮಿದಂ ವಚಃ।।

ಆಗ ಪರಮ ಕಾಂತಿಯುಕ್ತ ಸುರಪತಿ ಶಕ್ರನು ಯುಧಿಷ್ಠಿರನಿಗೆ ಈ ಸಾಂತ್ವಪೂರ್ವಕ ಮಾತುಗಳನ್ನಾಡಿದನು:

18003010a ಯುಧಿಷ್ಠಿರ ಮಹಾಬಾಹೋ ಪ್ರೀತಾ ದೇವಗಣಾಸ್ತವ।
18003010c ಏಹ್ಯೇಹಿ ಪುರುಷವ್ಯಾಘ್ರ ಕೃತಮೇತಾವತಾ ವಿಭೋ।
18003010e ಸಿದ್ಧಿಃ ಪ್ರಾಪ್ತಾ ತ್ವಯಾ ರಾಜಽಲ್ಲೋಕಾಶ್ಚಾಪ್ಯಕ್ಷಯಾಸ್ತವ।।

“ಯುಧಿಷ್ಠಿರ! ಮಹಾಬಾಹೋ! ವಿಭೋ! ಪುರುಷವ್ಯಾಘ್ರ! ಇಲ್ಲಿ ಬಾ! ಎಲ್ಲವೂ ಮುಗಿಯಿತು! ರಾಜನ್! ನಿನಗೆ ಸಿದ್ಧಿಯು ಪ್ರಾಪ್ತವಾಯಿತು. ಅಕ್ಷಯ ಲೋಕಗಳೂ ನಿನ್ನದಾಗಿವೆ!

18003011a ನ ಚ ಮನ್ಯುಸ್ತ್ವಯಾ ಕಾರ್ಯಃ ಶೃಣು ಚೇದಂ ವಚೋ ಮಮ।
18003011c ಅವಶ್ಯಂ ನರಕಸ್ತಾತ ದ್ರಷ್ಟವ್ಯಃ ಸರ್ವರಾಜಭಿಃ।।

ನೀನು ಸಿಟ್ಟಾಗಬಾರದು! ನನ್ನ ಮಾತನ್ನು ಕೇಳು! ಮಗೂ! ಎಲ್ಲ ರಾಜರೂ ನರಕವನ್ನು ನೋಡುವುದು ಅವಶ್ಯಕವಾಗಿದೆ!

18003012a ಶುಭಾನಾಮಶುಭಾನಾಂ ಚ ದ್ವೌ ರಾಶೀ ಪುರುಷರ್ಷಭ।
18003012c ಯಃ ಪೂರ್ವಂ ಸುಕೃತಂ ಭುಂಕ್ತೇ ಪಶ್ಚಾನ್ನಿರಯಮೇತಿ ಸಃ।
18003012e ಪೂರ್ವಂ ನರಕಭಾಗ್ಯಸ್ತು ಪಶ್ಚಾತ್ ಸ್ವರ್ಗಮುಪೈತಿ ಸಃ।।

ಪುರುಷರ್ಷಭ! ಶುಭ ಮತ್ತು ಅಶುಭ ಕರ್ಮಗಳೆಂಬ ಎರಡು ರಾಶಿಗಳಿರುತ್ತವೆ. ಮೊದಲು ಸುಕೃತಗಳ ಪುಣ್ಯಗಳನ್ನು ಭೋಗಿಸುವವರು ಅನಂತರ ನರಕವನ್ನು ಕಾಣುತ್ತಾರೆ. ಆದರೆ ಮೊದಲೇ ನರಕವನ್ನು ಅನುಭವಿಸಿದವರು ಅನಂತರ ಸ್ವರ್ಗವನ್ನು ಸೇರುತ್ತಾರೆ.

18003013a ಭೂಯಿಷ್ಠಂ ಪಾಪಕರ್ಮಾ ಯಃ ಸ ಪೂರ್ವಂ ಸ್ವರ್ಗಮಶ್ನುತೇ।
18003013c ತೇನ ತ್ವಮೇವಂ ಗಮಿತೋ ಮಯಾ ಶ್ರೇಯೋರ್ಥಿನಾ ನೃಪ।।

ತುಂಬಾ ಪಾಪಕರ್ಮಗಳನ್ನು ಮಾಡಿರುವವನು ಮೊದಲು ಸ್ವರ್ಗವನ್ನು ಅನುಭವಿಸುತ್ತಾನೆ. ನೃಪ! ನಿನ್ನ ಶ್ರೇಯಸ್ಸನ್ನು ಬಯಸಿದ ನಾನೇ ನೀನು ಇಲ್ಲಿಗೆ ಬರುವಂತೆ ಮಾಡಿದೆ.

18003014a ವ್ಯಾಜೇನ ಹಿ ತ್ವಯಾ ದ್ರೋಣ ಉಪಚೀರ್ಣಃ ಸುತಂ ಪ್ರತಿ।
18003014c ವ್ಯಾಜೇನೈವ ತತೋ ರಾಜನ್ದರ್ಶಿತೋ ನರಕಸ್ತವ।।

ಅವನ ಮಗನ ವಿಷಯದಲ್ಲಿ ನೀನು ದ್ರೋಣನೊಂದಿಗೆ ಮೋಸದಲ್ಲಿ ನಡೆದುಕೊಂಡೆ. ಆದುದರಿಂದ ರಾಜನ್! ಈ ನರಕವನ್ನು ನೋಡಿ ನೀನೂ ಕೂಡ ಮೋಸಹೋದೆ!

18003015a ಯಥೈವ ತ್ವಂ ತಥಾ ಭೀಮಸ್ತಥಾ ಪಾರ್ಥೋ ಯಮೌ ತಥಾ।
18003015c ದ್ರೌಪದೀ ಚ ತಥಾ ಕೃಷ್ಣಾ ವ್ಯಾಜೇನ ನರಕಂ ಗತಾಃ।।

ನಿನ್ನಂತೆಯೇ ಭೀಮ, ಪಾರ್ಥ, ಯಮಳರು ಮತ್ತು ದ್ರೌಪದೀ ಕೃಷ್ಣೆ ಇವರುಗಳು ಕೂಡ ಮೋಸದ ನರಕಕ್ಕೆ ಹೋಗಿದ್ದರು.

18003016a ಆಗಚ್ಚ ನರಶಾರ್ದೂಲ ಮುಕ್ತಾಸ್ತೇ ಚೈವ ಕಿಲ್ಬಿಷಾತ್।
18003016c ಸ್ವಪಕ್ಷಾಶ್ಚೈವ ಯೇ ತುಭ್ಯಂ ಪಾರ್ಥಿವಾ ನಿಹತಾ ರಣೇ।
18003016e ಸರ್ವೇ ಸ್ವರ್ಗಮನುಪ್ರಾಪ್ತಾಸ್ತಾನ್ಪಶ್ಯ ಪುರುಷರ್ಷಭ।।

ಬಾ ನರಶರ್ದೂಲ! ಪುರುಷರ್ಷಭ! ರಣದಲ್ಲಿ ಹತರಾದ ನಿನ್ನ ಪಕ್ಷದ ಪಾರ್ಥಿವರೆಲ್ಲರೂ ಪಾಪಗಳಿಂದ ಮುಕ್ತರಾಗಿ ಸ್ವರ್ಗವನ್ನು ಸೇರಿರುವುದನ್ನು ನೋಡು!

18003017a ಕರ್ಣಶ್ಚೈವ ಮಹೇಷ್ವಾಸಃ ಸರ್ವಶಸ್ತ್ರಭೃತಾಂ ವರಃ।
18003017c ಸ ಗತಃ ಪರಮಾಂ ಸಿದ್ಧಿಂ ಯದರ್ಥಂ ಪರಿತಪ್ಯಸೇ।।

ಯಾರಿಗಾಗಿ ನೀನು ಪರಿತಪಿಸುತ್ತಿದ್ದೆಯೋ ಆ ಮಹೇಷ್ವಾಸ, ಸರ್ವಶಸ್ತ್ರಧಾರಿಗಳಲ್ಲಿ ಶ್ರೇಷ್ಠ ಕರ್ಣನು ಪರಮ ಸಿದ್ಧಿಯನ್ನು ಹೊಂದಿದ್ದಾನೆ.

18003018a ತಂ ಪಶ್ಯ ಪುರುಷವ್ಯಾಘ್ರಮಾದಿತ್ಯತನಯಂ ವಿಭೋ।
18003018c ಸ್ವಸ್ಥಾನಸ್ಥಂ ಮಹಾಬಾಹೋ ಜಹಿ ಶೋಕಂ ನರರ್ಷಭ।।

ವಿಭೋ! ಮಹಾಬಾಹೋ! ನರರ್ಷಭ! ಸ್ವಸ್ಥಾನದಲ್ಲಿ ಕುಳಿತಿರುವ ಆ ಪುರುಷವ್ಯಾಘ್ರ ಆದಿತ್ಯತನಯನನ್ನು ನೋಡಿ ಶೋಕವನ್ನು ತೊರೆ!

18003019a ಭ್ರಾತೄಂಶ್ಚಾನ್ಯಾಂಸ್ತಥಾ ಪಶ್ಯ ಸ್ವಪಕ್ಷಾಂಶ್ಚೈವ ಪಾರ್ಥಿವಾನ್।
18003019c ಸ್ವಂ ಸ್ವಂ ಸ್ಥಾನಮನುಪ್ರಾಪ್ತಾನ್ವ್ಯೇತು ತೇ ಮಾನಸೋ ಜ್ವರಃ।।

ನಿನ್ನ ಇತರ ಸಹೋದರರೂ ನಿನ್ನ ಪಕ್ಷದಲ್ಲಿದ್ದ ಪಾರ್ಥಿವರೂ ತಮ್ಮ ತಮ್ಮ ಸ್ಥಾನಗಳನ್ನು ಪಡೆದು ಕುಳಿತಿರುವುದನ್ನು ನೋಡಿ ನಿನ್ನ ಮಾನಸಿಕ ಜ್ವರವನ್ನು ತೊರೆ!

18003020a ಅನುಭೂಯ ಪೂರ್ವಂ ತ್ವಂ ಕೃಚ್ಚ್ರಮಿತಃ ಪ್ರಭೃತಿ ಕೌರವ।
18003020c ವಿಹರಸ್ವ ಮಯಾ ಸಾರ್ಧಂ ಗತಶೋಕೋ ನಿರಾಮಯಃ।।

ಕೌರವ! ಮೊದಲೇ ನರಕವನ್ನು ಅನುಭವಿಸಿದ ನೀನು ಈ ನಂತರ ಶೋಕವನ್ನು ತೊರೆದು ನಿರಾಮಯನಾಗಿ ನನ್ನೊಡನೆ ವಿಹರಿಸು!

18003021a ಕರ್ಮಣಾಂ ತಾತ ಪುಣ್ಯಾನಾಂ ಜಿತಾನಾಂ ತಪಸಾ ಸ್ವಯಮ್।
18003021c ದಾನಾನಾಂ ಚ ಮಹಾಬಾಹೋ ಫಲಂ ಪ್ರಾಪ್ನುಹಿ ಪಾಂಡವ।।

ಮಗೂ! ಮಹಾಬಾಹೋ! ಪಾಂಡವ! ತಪಸ್ಸು, ದಾನ ಮತ್ತು ಪುಣ್ಯ ಕರ್ಮಗಳಿಂದ ಸ್ವಯಂ ನೀನೇ ಜಯಿಸಿರುವ ಫಲವನ್ನು ಭೋಗಿಸು.

18003022a ಅದ್ಯ ತ್ವಾಂ ದೇವಗಂಧರ್ವಾ ದಿವ್ಯಾಶ್ಚಾಪ್ಸರಸೋ ದಿವಿ।
18003022c ಉಪಸೇವಂತು ಕಲ್ಯಾಣಂ ವಿರಜೋಂಬರವಾಸಸಃ।।

ಶುಭ್ರವಸ್ತ್ರಗಳನ್ನುಟ್ಟ ದೇವಗಂಧರ್ವರು, ದಿವ್ಯ ಅಪ್ಸರೆಯರು ದಿವಿಯಲ್ಲಿ ಇಂದು ಕಲ್ಯಾಣನಾದ ನಿನ್ನನ್ನು ಸೇವಿಸುತ್ತಾರೆ!

18003023a ರಾಜಸೂಯಜಿತಾಽಲ್ಲೋಕಾನಶ್ವಮೇಧಾಭಿವರ್ಧಿತಾನ್।
18003023c ಪ್ರಾಪ್ನುಹಿ ತ್ವಂ ಮಹಾಬಾಹೋ ತಪಸಶ್ಚ ಫಲಂ ಮಹತ್।।

ಮಹಾಬಾಹೋ! ರಾಜಸೂಯ ಯಾಗದಿಂದ ಪಡೆದ ಮತ್ತು ಅಶ್ವಮೇಧದಿಂದ ವೃದ್ಧಿಯಾದ ಮಹಾಲೋಕಗಳನ್ನೂ ತಪಸ್ಸಿನ ಮಹಾಫಲವನ್ನೂ ಭೋಗಿಸು!

18003024a ಉಪರ್ಯುಪರಿ ರಾಜ್ಞಾಂ ಹಿ ತವ ಲೋಕಾ ಯುಧಿಷ್ಠಿರ।
18003024c ಹರಿಶ್ಚಂದ್ರಸಮಾಃ ಪಾರ್ಥ ಯೇಷು ತ್ವಂ ವಿಹರಿಷ್ಯಸಿ।।

ಯುಧಿಷ್ಠಿರ! ನಿನ್ನ ಲೋಕವು ಇತರ ರಾಜರ ಲೋಕಗಳಿಗಿಂತ ಮೇಲಿದೆ. ಪಾರ್ಥ! ಹರಿಶ್ಚಂದ್ರನಿಗೆ ಸಮನಾದ ಲೋಕದಲ್ಲಿ ನೀನು ವಿಹರಿಸುತ್ತೀಯೆ!

18003025a ಮಾಂಧಾತಾ ಯತ್ರ ರಾಜರ್ಷಿರ್ಯತ್ರ ರಾಜಾ ಭಗೀರಥಃ।
18003025c ದೌಃಷಂತಿರ್ಯತ್ರ ಭರತಸ್ತತ್ರ ತ್ವಂ ವಿಹರಿಷ್ಯಸಿ।।

ಎಲ್ಲಿ ರಾಜರ್ಷಿ ಮಾಂಧಾತನಿರುವನೋ, ಎಲ್ಲಿ ರಾಜಾ ಭಗೀರಥನಿರುವನೋ, ಎಲ್ಲಿ ದುಷ್ಯಂತನ ಮಗ ಭರತನಿರುವನೋ ಅಲ್ಲಿ ನೀನು ವಿಹರಿಸುತ್ತೀಯೆ!

18003026a ಏಷಾ ದೇವನದೀ ಪುಣ್ಯಾ ಪಾರ್ಥ ತ್ರೈಲೋಕ್ಯಪಾವನೀ।
18003026c ಆಕಾಶಗಂಗಾ ರಾಜೇಂದ್ರ ತತ್ರಾಪ್ಲುತ್ಯ ಗಮಿಷ್ಯಸಿ।।

ಪಾರ್ಥ! ಇಗೋ ಮೂರುಲೋಕಗಳನ್ನೂ ಪಾವನಗೊಳಿಸುವ ಪುಣ್ಯ ದೇವನದಿ ಆಕಾಶಗಂಗೆಯಿದು! ರಾಜೇಂದ್ರ! ಅಲ್ಲಿ ಸ್ನಾನಮಾಡಿ ನಿನ್ನದೇ ಲೋಕಕ್ಕೆ ನೀನು ಹೋಗುವೆ!

18003027a ಅತ್ರ ಸ್ನಾತಸ್ಯ ತೇ ಭಾವೋ ಮಾನುಷೋ ವಿಗಮಿಷ್ಯತಿ।
18003027c ಗತಶೋಕೋ ನಿರಾಯಾಸೋ ಮುಕ್ತವೈರೋ ಭವಿಷ್ಯಸಿ।।

ಅಲ್ಲಿ ಸ್ನಾನಮಾಡಿದರೆ ನಿನ್ನ ಮನುಷ್ಯ ಭಾವವು ಹೊರಟುಹೋಗುತ್ತದೆ. ಶೋಕವನ್ನು ಕಳೆದುಕೊಂಡು, ನಿರಾಯಾಸನಾಗಿ, ವೈರದಿಂದ ಬಿಡುಗಡೆಯೂ ಆಗುತ್ತದೆ.”

18003028a ಏವಂ ಬ್ರುವತಿ ದೇವೇಂದ್ರೇ ಕೌರವೇಂದ್ರಂ ಯುಧಿಷ್ಠಿರಮ್।
18003028c ಧರ್ಮೋ ವಿಗ್ರಹವಾನ್ಸಾಕ್ಷಾದುವಾಚ ಸುತಮಾತ್ಮನಃ।।

ಕೌರವೇಂದ್ರ ಯುಧಿಷ್ಠಿರನಿಗೆ ದೇವೇಂದ್ರನು ಹೀಗೆ ಹೇಳಲು ಮೂರ್ತಿಮತ್ತಾಗಿದ್ದ ಸಾಕ್ಷಾತ್ ಧರ್ಮನು ತನ್ನ ಮಗನಿಗೆ ಇಂತೆಂದನು:

18003029a ಭೋ ಭೋ ರಾಜನ್ಮಹಾಪ್ರಾಜ್ಞ ಪ್ರೀತೋಽಸ್ಮಿ ತವ ಪುತ್ರಕ।
18003029c ಮದ್ಭಕ್ತ್ಯಾ ಸತ್ಯವಾಕ್ಯೇನ ಕ್ಷಮಯಾ ಚ ದಮೇನ ಚ।।

“ಭೋ ಭೋ! ರಾಜನ್! ಮಹಾಪ್ರಾಜ್ಞ! ಮಗನೇ! ನಿನಗೆ ನನ್ನ ಮೇಲಿರುವ ಭಕ್ತಿ, ಸತ್ಯ ವಾಕ್ಯ, ಕ್ಷಮೆ ಮತ್ತು ದಮಗಳಿಂದ ನಾನು ಪ್ರೀತನಾಗಿದ್ದೇನೆ.

18003030a ಏಷಾ ತೃತೀಯಾ ಜಿಜ್ಞಾಸಾ ತವ ರಾಜನ್ಕೃತಾ ಮಯಾ।
18003030c ನ ಶಕ್ಯಸೇ ಚಾಲಯಿತುಂ ಸ್ವಭಾವಾತ್ಪಾರ್ಥ ಹೇತುಭಿಃ।।

ರಾಜನ್! ಇದು ನಾನು ನಡೆಸಿದ ನಿನ್ನ ಮೂರನೆಯ ಪರೀಕ್ಷೆಯಾಗಿತ್ತು. ಪಾರ್ಥ! ಎಷ್ಟೇ ಪ್ರಯತ್ನಪಟ್ಟರೂ ನಿನ್ನ ಸ್ವಭಾವದಿಂದ ವಿಚಲಿತನನ್ನಾಗಿಸಲು ನನಗೆ ಸಾಧ್ಯವಾಗಲಿಲ್ಲ!

18003031a ಪೂರ್ವಂ ಪರೀಕ್ಷಿತೋ ಹಿ ತ್ವಮಾಸೀರ್ದ್ವೈತವನಂ ಪ್ರತಿ।
18003031c ಅರಣೀಸಹಿತಸ್ಯಾರ್ಥೇ ತಚ್ಚ ನಿಸ್ತೀರ್ಣವಾನಸಿ।।

ಮೊಟ್ಟಮೊದಲನೆಯದಾಗಿ ನೀನು ದ್ವೈತವನದ ಬಳಿಯಲ್ಲಿ ಅರಣಿಯನ್ನು ಹುಡುಕುತ್ತಿದ್ದಾಗ ನಿನ್ನನ್ನು ಪರೀಕ್ಷಿಸಿದ್ದೆ ಮತ್ತು ನೀನು ಅದರಲ್ಲಿ ಉತ್ತೀರ್ಣನಾಗಿದ್ದೆ.

18003032a ಸೋದರ್ಯೇಷು ವಿನಷ್ಟೇಷು ದ್ರೌಪದ್ಯಾಂ ತತ್ರ ಭಾರತ।
18003032c ಶ್ವರೂಪಧಾರಿಣಾ ಪುತ್ರ ಪುನಸ್ತ್ವಂ ಮೇ ಪರೀಕ್ಷಿತಃ।।

ಭಾರತ! ಮಗನೇ! ದ್ರೌಪದಿ ಮತ್ತು ನಿನ್ನ ಸೋದರರು ಅಲ್ಲಿ ವಿನಾಶರಾದಾಗ ನಾಯಿಯ ರೂಪವನ್ನು ಧರಿಸಿ ನಾನು ಪುನಃ ನಿನ್ನನ್ನು ಪರೀಕ್ಷಿಸಿದೆ.

18003033a ಇದಂ ತೃತೀಯಂ ಭ್ರಾತೄಣಾಮರ್ಥೇ ಯತ್ ಸ್ಥಾತುಮಿಚ್ಚಸಿ।
18003033c ವಿಶುದ್ಧೋಽಸಿ ಮಹಾಭಾಗ ಸುಖೀ ವಿಗತಕಲ್ಮಷಃ।।

ಸಹೋದರರಿಗಾಗಿ ಇಲ್ಲಿ ನೀನು ನಿಲ್ಲಲು ಬಯಸಿದ ಇದು ಮೂರನೆಯ ಪರೀಕ್ಷೆಯಾಗಿತ್ತು. ಮಹಾಭಾಗ! ಈಗ ನೀನು ವಿಶುದ್ಧನೂ, ಸುಖಿಯೂ, ಪಾಪಗಳನ್ನು ಕಳೆದುಕೊಂಡವನೂ ಆಗಿರುವೆ!

18003034a ನ ಚ ತೇ ಭ್ರಾತರಃ ಪಾರ್ಥ ನರಕಸ್ಥಾ ವಿಶಾಂ ಪತೇ।
18003034c ಮಾಯೈಷಾ ದೇವರಾಜೇನ ಮಹೇಂದ್ರೇಣ ಪ್ರಯೋಜಿತಾ।।

ಪಾರ್ಥ! ವಿಶಾಂಪತೇ! ನಿನ್ನ ಈ ಸಹೋದರರು ನರಕದಲ್ಲಿಲ್ಲ. ಇದೊಂದು ಮಹೇಂದ್ರ ದೇವರಾಜನು ಆಯೋಜಿಸಿದ ಮಾಯೆಯಾಗಿತ್ತು.

18003035a ಅವಶ್ಯಂ ನರಕಸ್ತಾತ ದ್ರಷ್ಟವ್ಯಃ ಸರ್ವರಾಜಭಿಃ।
18003035c ತತಸ್ತ್ವಯಾ ಪ್ರಾಪ್ತಮಿದಂ ಮುಹೂರ್ತಂ ದುಃಖಮುತ್ತಮಮ್।।

ಮಗೂ! ಎಲ್ಲ ರಾಜರೂ ಅವಶ್ಯಕವಾಗಿ ನರಕವನ್ನು ನೋಡಲೇಬೇಕು. ಆದುದರಿಂದ ನೀನು ಮುಹೂರ್ತಕಾಲ ಈ ಮಹಾದುಃಖವನ್ನು ಅನುಭವಿಸಬೇಕಾಯಿತು.

18003036a ನ ಸವ್ಯಸಾಚೀ ಭೀಮೋ ವಾ ಯಮೌ ವಾ ಪುರುಷರ್ಷಭೌ।
18003036c ಕರ್ಣೋ ವಾ ಸತ್ಯವಾಕ್ ಶೂರೋ ನರಕಾರ್ಹಾಶ್ಚಿರಂ ನೃಪ।।

ನೃಪ! ಸವ್ಯಸಾಚಿಯಾಗಲೀ, ಭೀಮನಾಗಲೀ, ಪುರುಷರ್ಷಭ ಯಮಳರಾಗಲೀ, ಸತ್ಯವಾಗ್ಮಿ ಶೂರ ಕರ್ಣನಾಗಲೀ ದೀರ್ಘಕಾಲ ನರಕಕ್ಕೆ ಅರ್ಹರಾದವರಲ್ಲ.

18003037a ನ ಕೃಷ್ಣಾ ರಾಜಪುತ್ರೀ ಚ ನರಕಾರ್ಹಾ ಯುಧಿಷ್ಠಿರ।
18003037c ಏಹ್ಯೇಹಿ ಭರತಶ್ರೇಷ್ಠ ಪಶ್ಯ ಗಂಗಾಂ ತ್ರಿಲೋಕಗಾಮ್।।

ಯುಧಿಷ್ಠಿರ! ರಾಜಪುತ್ರಿ ಕೃಷ್ಣೆಯೂ ಕೂಡ ನರಕಾರ್ಹಳಲ್ಲ. ಭರತಶ್ರೇಷ್ಠ! ಇಲ್ಲಿ ಬಾ! ತ್ರಿಲೋಕಗಳಲ್ಲಿ ಹರಿಯುವ ಗಂಗೆಯನ್ನು ನೋಡು!”

18003038a ಏವಮುಕ್ತಃ ಸ ರಾಜರ್ಷಿಸ್ತವ ಪೂರ್ವಪಿತಾಮಹಃ।
18003038c ಜಗಾಮ ಸಹ ಧರ್ಮೇಣ ಸರ್ವೈಶ್ಚ ತ್ರಿದಶಾಲಯೈಃ।।
18003039a ಗಂಗಾಂ ದೇವನದೀಂ ಪುಣ್ಯಾಂ ಪಾವನೀಮೃಷಿಸಂಸ್ತುತಾಮ್।
18003039c ಅವಗಾಹ್ಯ ತು ತಾಂ ರಾಜಾ ತನುಂ ತತ್ಯಾಜ ಮಾನುಷೀಮ್।।

ಅವನು ಹೀಗೆ ಹೇಳಲು ನಿನ್ನ ಪೂರ್ವಪಿತಾಮಹ ರಾಜರ್ಷಿಯು ಧರ್ಮ ಮತ್ತು ಸರ್ವ ದೇವತೆಗಳೊಂದಿಗೆ ಋಷಿಗಳು ಸಂಸ್ತುತಿಸುವ ಪಾವನೀ ಪುಣ್ಯೆ ದೇವನದಿ ಗಂಗೆಯಿದ್ದಲ್ಲಿಗೆ ಹೋದನು. ಅಲ್ಲಿ ಮುಳುಗಿ ರಾಜನು ತನ್ನ ಮಾನುಷೀ ಶರೀರವನ್ನು ತ್ಯಜಿಸಿದನು.

18003040a ತತೋ ದಿವ್ಯವಪುರ್ಭೂತ್ವಾ ಧರ್ಮರಾಜೋ ಯುಧಿಷ್ಠಿರಃ।
18003040c ನಿರ್ವೈರೋ ಗತಸಂತಾಪೋ ಜಲೇ ತಸ್ಮಿನ್ಸಮಾಪ್ಲುತಃ।।

ಆ ಜಲದಲ್ಲಿ ಮುಳುಗಿ ಧರ್ಮರಾಜ ಯುಧಿಷ್ಠಿರನು ದಿವ್ಯ ಶರೀರನಾಗಿ ವೈರವಿಲ್ಲದವನಾಗಿ, ಸಂತಾಪಗಳನ್ನು ಕಳೆದುಕೊಂಡನು.

18003041a ತತೋ ಯಯೌ ವೃತೋ ದೇವೈಃ ಕುರುರಾಜೋ ಯುಧಿಷ್ಠಿರಃ।
18003041c ಧರ್ಮೇಣ ಸಹಿತೋ ಧೀಮಾನ್ಸ್ತೂಯಮಾನೋ ಮಹರ್ಷಿಭಿಃ।।

ಅನಂತರ ಧೀಮಂತ ಕುರುರಾಜ ಯುಧಿಷ್ಠಿರನು ಧರ್ಮನ ಸಹಿತ, ದೇವತೆಗಳಿಂದ ಸುತ್ತುವರೆಯಲ್ಪಟ್ಟು, ಸ್ತುತಿಸುತ್ತಿದ್ದ ಮಹರ್ಷಿಗಳೊಂದಿಗೆ ಹೊರಟನು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಸ್ವರ್ಗಾರೋಹಣಪರ್ವಣಿ ಯುಧಿಷ್ಠಿರತನುತ್ಯಾಗೇ ತೃತೀಯೋಽಧ್ಯಾಯಃ ।।
ಇದು ಶ್ರೀಮಹಾಭಾರತದಲ್ಲಿ ಸ್ವರ್ಗಾರೋಹಣಪರ್ವದಲ್ಲಿ ಯುಧಿಷ್ಠಿರತನುತ್ಯಾಗ ಎನ್ನುವ ಮೂರನೇ ಅಧ್ಯಾಯವು.