002: ಯುಧಿಷ್ಠಿರನರಕದರ್ಶನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಸ್ವರ್ಗಾರೋಹಣ ಪರ್ವ

ಸ್ವರ್ಗಾರೋಹಣ ಪರ್ವ

ಅಧ್ಯಾಯ 2

ಸಾರ

ಕರ್ಣ, ತಮ್ಮಂದಿರು ಮತ್ತು ದ್ರೌಪದಿಯು ಇರುವಲ್ಲಿಗೆ ತಾನು ಹೋಗಲು ಬಯಸುತ್ತೇನೆಂದು ಯುಧಿಷ್ಠಿರನು ಹೇಳಿದುದು (1-13). ದೇವದೂತನು ಯುಧಿಷ್ಠಿರನನ್ನು ನರಕಕ್ಕೆ ಕರೆದುಕೊಂಡು ಹೋದುದು (14-29). ಅಲ್ಲಿಂದ ಹಿಂದಿರುಗಲು ಹೊರಟ ಯುಧಿಷ್ಠಿರನು ಕರ್ಣನೇ ಮೊದಲಾದ ತನ್ನ ಸಹೋದರರ ಮತ್ತು ಸುಹೃದಯರ ಆರ್ತ ಕೂಗುಗಳನ್ನು ಕೇಳಿದುದು (30-41). ವಿಸ್ಮಿತನಾಗಿ ತಾನು ನರಕದಲ್ಲಿ ತನ್ನ ಸಹೋದರ-ಸುಹೃದರೊಂದಿಗೇ ಇರುತ್ತೇನೆಂದು ಯುಧಿಷ್ಠಿರನು ದೇವದೂತನನ್ನು ಹಿಂದೆ ಕಳುಹಿಸಿದುದು (42-54).

18002001 ಯುಧಿಷ್ಠಿರ ಉವಾಚ।
18002001a ನೇಹ ಪಶ್ಯಾಮಿ ವಿಬುಧಾ ರಾಧೇಯಮಮಿತೌಜಸಮ್।
18002001c ಭ್ರಾತರೌ ಚ ಮಹಾತ್ಮಾನೌ ಯುಧಾಮನ್ಯೂತ್ತಮೌಜಸೌ।।

ಯುಧಿಷ್ಠಿರನು ಹೇಳಿದನು: “ವಿಬುಧರೇ! ನಾನು ಇಲ್ಲಿ ಅಮಿತೌಜಸ ರಾಧೇಯ ಮತ್ತು ಮಹಾತ್ಮ ಯುಧಾಮನ್ಯು-ಉತ್ತಮೌಜಸ ಸಹೋದರರನ್ನೂ ಕಾಣುತ್ತಿಲ್ಲ!

18002002a ಜುಹುವುರ್ಯೇ ಶರೀರಾಣಿ ರಣವಹ್ನೌ ಮಹಾರಥಾಃ।
18002002c ರಾಜಾನೋ ರಾಜಪುತ್ರಾಶ್ಚ ಯೇ ಮದರ್ಥೇ ಹತಾ ರಣೇ।।
18002003a ಕ್ವ ತೇ ಮಹಾರಥಾಃ ಸರ್ವೇ ಶಾರ್ದೂಲಸಮವಿಕ್ರಮಾಃ।
18002003c ತೈರಪ್ಯಯಂ ಜಿತೋ ಲೋಕಃ ಕಚ್ಚಿತ್ಪುರುಷಸತ್ತಮೈಃ।।

ನನಗೋಸ್ಕರವಾಗಿ ರಣವೆಂಬ ಅಗ್ನಿಯಲ್ಲಿ ತಮ್ಮ ಶರೀರಗಳನ್ನು ಆಹುತಿಯನ್ನಾಗಿತ್ತು ರಣದಲ್ಲಿ ಹತರಾದ, ವಿಕ್ರಮದಲ್ಲಿ ಶಾರ್ದೂಲಸಮರಾಗಿದ್ದ ಆ ಎಲ್ಲ ಮಹಾರಥ ರಾಜರು ಮತ್ತು ರಾಜಪುತ್ರರು ಎಲ್ಲಿದ್ದಾರೆ? ಆ ಪುರುಷಸತ್ತಮರೂ ಈ ಲೋಕವನ್ನು ಗೆದ್ದಿರಬೇಕಲ್ಲವೇ?

18002004a ಯದಿ ಲೋಕಾನಿಮಾನ್ಪ್ರಾಪ್ತಾಸ್ತೇ ಚ ಸರ್ವೇ ಮಹಾರಥಾಃ।
18002004c ಸ್ಥಿತಂ ವಿತ್ತ ಹಿ ಮಾಂ ದೇವಾಃ ಸಹಿತಂ ತೈರ್ಮಹಾತ್ಮಭಿಃ।।

ದೇವತೆಗಳೇ! ಒಂದುವೇಳೆ ಆ ಎಲ್ಲ ಮಹಾರಥರೂ ಈ ಲೋಕವನ್ನೇ ಪಡೆದಿದ್ದಾರೆ ಎಂದರೆ ಆ ಮಹಾತ್ಮರೊಂದಿಗೆ ನಾನೂ ಕೂಡ ಇಲ್ಲಿಯೇ ಇರುತ್ತೇನೆಂದು ತಿಳಿಯಿರಿ.

18002005a ಕಚ್ಚಿನ್ನ ತೈರವಾಪ್ತೋಽಯಂ ನೃಪೈರ್ಲೋಕೋಽಕ್ಷಯಃ ಶುಭಃ।
18002005c ನ ತೈರಹಂ ವಿನಾ ವತ್ಸ್ಯೇ ಜ್ಞಾತಿಭಿರ್ಭ್ರಾತೃಭಿಸ್ತಥಾ।।

ಆದರೆ ಆ ನೃಪರು ಈ ಅಕ್ಷಯ ಶುಭ ಲೋಕವನ್ನು ಪಡೆಯಲಿಲ್ಲವೆಂದಾದರೆ ನನ್ನ ಬಂಧು-ಬಾಂಧವರಿಲ್ಲದ ಈ ಲೋಕದಲ್ಲಿ ನಾನು ವಾಸಿಸುವುದಿಲ್ಲ.

18002006a ಮಾತುರ್ಹಿ ವಚನಂ ಶ್ರುತ್ವಾ ತದಾ ಸಲಿಲಕರ್ಮಣಿ।
18002006c ಕರ್ಣಸ್ಯ ಕ್ರಿಯತಾಂ ತೋಯಮಿತಿ ತಪ್ಯಾಮಿ ತೇನ ವೈ।।

ತರ್ಪಣವನ್ನು ಕೊಡುವ ಸಮಯದಲ್ಲಿ “ಕರ್ಣನಿಗೂ ತರ್ಪಣವನ್ನು ಕೊಡು!” ಎಂಬ ನನ್ನ ತಾಯಿಯ ಮಾತನ್ನು ಕೇಳಿದಾಗಲಿಂದ ನಾನು ಪರಿತಪಿಸುತ್ತಿದ್ದೇನೆ.

18002007a ಇದಂ ಚ ಪರಿತಪ್ಯಾಮಿ ಪುನಃ ಪುನರಹಂ ಸುರಾಃ।
18002007c ಯನ್ಮಾತುಃ ಸದೃಶೌ ಪಾದೌ ತಸ್ಯಾಹಮಮಿತೌಜಸಃ।।
18002008a ದೃಷ್ಟ್ವೈವ ತಂ ನಾನುಗತಃ ಕರ್ಣಂ ಪರಬಲಾರ್ದನಮ್।
18002008c ನ ಹ್ಯಸ್ಮಾನ್ಕರ್ಣಸಹಿತಾನ್ಜಯೇಚ್ಚಕ್ರೋಽಪಿ ಸಂಯುಗೇ।।

ಸುರರೇ! ಆ ಅಮಿತೌಜಸನ ಪಾದಗಳು ಮಾತೆಯ ಪಾದಗಳಂತಿದ್ದುದನ್ನು ನೋಡಿಯೂ ಕೂಡ ನಾನು ಆ ಪರಬಲಾರ್ದನ ಕರ್ಣನನ್ನು ಅನುಸರಿಸಲಿಲ್ಲ ಎಂದು ಪುನಃ ಪುನಃ ಪರಿತಪಿಸುತ್ತಿದ್ದೇನೆ. ಕರ್ಣನು ನಮ್ಮ ಜೊತೆಗಿದ್ದಿದ್ದರೆ ಯುದ್ಧದಲ್ಲಿ ಶಕ್ರನೂ ಕೂಡ ನಮ್ಮನ್ನು ಜಯಿಸಲಾಗುತ್ತಿರಲಿಲ್ಲ!

18002009a ತಮಹಂ ಯತ್ರತತ್ರಸ್ಥಂ ದ್ರಷ್ಟುಮಿಚ್ಚಾಮಿ ಸೂರ್ಯಜಮ್।
18002009c ಅವಿಜ್ಞಾತೋ ಮಯಾ ಯೋಽಸೌ ಘಾತಿತಃ ಸವ್ಯಸಾಚಿನಾ।।

ಯಾರೆಂದು ತಿಳಿಯದೇ ನಾನು ಸವ್ಯಸಾಚಿಯಿಂದ ಕೊಲ್ಲಿಸಿದ ಆ ಸೂರ್ಯಜನು ಎಲ್ಲಿಯೇ ಇರಲಿ ಅವನನ್ನು ನೋಡಲು ಬಯಸುತ್ತೇನೆ.

18002010a ಭೀಮಂ ಚ ಭೀಮವಿಕ್ರಾಂತಂ ಪ್ರಾಣೇಭ್ಯೋಽಪಿ ಪ್ರಿಯಂ ಮಮ।
18002010c ಅರ್ಜುನಂ ಚೇಂದ್ರಸಂಕಾಶಂ ಯಮೌ ತೌ ಚ ಯಮೋಪಮೌ।।
18002011a ದ್ರಷ್ಟುಮಿಚ್ಚಾಮಿ ತಾಂ ಚಾಹಂ ಪಾಂಚಾಲೀಂ ಧರ್ಮಚಾರಿಣೀಮ್।
18002011c ನ ಚೇಹ ಸ್ಥಾತುಮಿಚ್ಚಾಮಿ ಸತ್ಯಮೇತದ್ಬ್ರವೀಮಿ ವಃ।।

ನನ್ನ ಪ್ರಾಣಕ್ಕಿಂತಲೂ ಪ್ರಿಯನಾದ ಆ ಭೀಮವಿಕ್ರಾಂತ ಭೀಮನನ್ನು, ಇಂದ್ರನಂತಿದ್ದ ಅರ್ಜುನನನ್ನೂ, ಯಮರಂತಿದ್ದ ಯಮಳರನ್ನೂ, ಮತ್ತು ಧರ್ಮಚಾರಿಣೀ ಪಾಂಚಾಲಿಯನ್ನೂ ನೋಡಲು ಬಯಸುತ್ತೇನೆ. ನಾನು ಇಲ್ಲಿ ಉಳಿಯಲು ಇಚ್ಛಿಸುವುದಿಲ್ಲ; ನಾನು ನಿಮಗೆ ಸತ್ಯವನ್ನೇ ಹೇಳುತ್ತಿದ್ದೇನೆ.

18002012a ಕಿಂ ಮೇ ಭ್ರಾತೃವಿಹೀನಸ್ಯ ಸ್ವರ್ಗೇಣ ಸುರಸತ್ತಮಾಃ।
18002012c ಯತ್ರ ತೇ ಸ ಮಮ ಸ್ವರ್ಗೋ ನಾಯಂ ಸ್ವರ್ಗೋ ಮತೋ ಮಮ।।

ಸುರಸತ್ತಮರೇ! ನಾನೇನು ಭ್ರಾತೃವಿಹೀನನಾಗಿದ್ದೇನೆಯೇ? ಅವರಿರುವುದೇ ನನಗೆ ಸ್ವರ್ಗ; ಇದು ನನ್ನ ಸ್ವರ್ಗವೆಂದು ಅನ್ನಿಸುವುದಿಲ್ಲ!”

18002013 ದೇವಾ ಊಚುಃ।
18002013a ಯದಿ ವೈ ತತ್ರ ತೇ ಶ್ರದ್ಧಾ ಗಮ್ಯತಾಂ ಪುತ್ರ ಮಾಚಿರಮ್।
18002013c ಪ್ರಿಯೇ ಹಿ ತವ ವರ್ತಾಮೋ ದೇವರಾಜಸ್ಯ ಶಾಸನಾತ್।।

ದೇವತೆಗಳು ಹೇಳಿದರು: “ಪುತ್ರ! ಅಲ್ಲಿಗೇ ಹೋಗಲು ನಿನಗೆ ಶ್ರದ್ಧೆಯಿದ್ದರೆ ಹೋಗು! ದೇವರಾಜನ ಶಾಸನದಂತೆ ನಾವು ನಿನಗೆ ಪ್ರಿಯವಾಗುವ ರೀತಿಯಲ್ಲಿಯೇ ವರ್ತಿಸುತ್ತೇವೆ.””

18002014 ವೈಶಂಪಾಯನ ಉವಾಚ।
18002014a ಇತ್ಯುಕ್ತ್ವಾ ತಂ ತತೋ ದೇವಾ ದೇವದೂತಮುಪಾದಿಶನ್।
18002014c ಯುಧಿಷ್ಠಿರಸ್ಯ ಸುಹೃದೋ ದರ್ಶಯೇತಿ ಪರಂತಪ।।

ವೈಶಂಪಾಯನನು ಹೇಳಿದನು: “ಪರಂತಪ! ಹೀಗೆ ಹೇಳಿ ದೇವತೆಗಳು “ಯುಧಿಷ್ಠಿರನಿಗೆ ಅವನ ಸುಹೃದಯರನ್ನು ತೋರಿಸು!” ಎಂದು ದೇವದೂತನಿಗೆ ಆದೇಶವನ್ನಿತ್ತರು.

18002015a ತತಃ ಕುಂತೀಸುತೋ ರಾಜಾ ದೇವದೂತಶ್ಚ ಜಗ್ಮತುಃ।
18002015c ಸಹಿತೌ ರಾಜಶಾರ್ದೂಲ ಯತ್ರ ತೇ ಪುರುಷರ್ಷಭಾಃ।।

ರಾಜಶಾರ್ದೂಲ! ಅನಂತರ ರಾಜಾ ಕುಂತೀಸುತನು ದೇವದೂತನೊಂದಿಗೆ ಆ ಪುರುಷರ್ಷಭರಿರುವಲ್ಲಿಗೆ ಹೋದನು.

18002016a ಅಗ್ರತೋ ದೇವದೂತಸ್ತು ಯಯೌ ರಾಜಾ ಚ ಪೃಷ್ಠತಃ।
18002016c ಪಂಥಾನಮಶುಭಂ ದುರ್ಗಂ ಸೇವಿತಂ ಪಾಪಕರ್ಮಭಿಃ।।

ಪಾಪಕರ್ಮಿಗಳು ಹೋಗುವ ಆ ದುರ್ಗಮ ಅಶುಭ ಮಾರ್ಗದಲ್ಲಿ ಮುಂದೆ ದೇವದೂತನೂ ಹಿಂದಿನಿಂದ ರಾಜ ಯುಧಿಷ್ಠಿರನೂ ಹೋದರು.

18002017a ತಮಸಾ ಸಂವೃತಂ ಘೋರಂ ಕೇಶಶೈವಲಶಾದ್ವಲಮ್।
18002017c ಯುಕ್ತಂ ಪಾಪಕೃತಾಂ ಗಂಧೈರ್ಮಾಂಸಶೋಣಿತಕರ್ದಮಮ್।।

ಪಾಪಕೃತರಿಂದ ತುಂಬಿ ದುರ್ಗಂಧವನ್ನು ಸೂಸುತ್ತಿದ್ದ ಆ ಪ್ರದೇಶವನ್ನು ಘೋರ ಕತ್ತಲೆಯು ಆವರಿಸಿತ್ತು. ಪಾಚಿ-ಕಳೆಗಳಿರುವಲ್ಲಿ ಕೂದಲುಗಳಿದ್ದವು; ಕೆಸರಿರುವಲ್ಲಿ ರಕ್ತ-ಮಾಂಸಗಳಿದ್ದವು.

18002018a ದಂಶೋತ್ಥಾನಂ ಸಝಿಲ್ಲೀಕಂ ಮಕ್ಷಿಕಾಮಶಕಾವೃತಮ್।
18002018c ಇತಶ್ಚೇತಶ್ಚ ಕುಣಪೈಃ ಸಮಂತಾತ್ಪರಿವಾರಿತಮ್।।

ಝೊಯ್ಯೆಂದು ಕಡಿಯಲು ಬರುತ್ತಿದ್ದ ನೊಣ-ಸೊಳ್ಳೆ ಮತ್ತು ಇತರ ಕೀಟಗಳು ಎಲ್ಲಕಡೆಗಳಿಂದಲೂ ಬಂದು ಮುತ್ತಿಗೆ ಹಾಕುತ್ತಿದ್ದವು.

18002019a ಅಸ್ಥಿಕೇಶಸಮಾಕೀರ್ಣಂ ಕೃಮಿಕೀಟಸಮಾಕುಲಮ್।
18002019c ಜ್ವಲನೇನ ಪ್ರದೀಪ್ತೇನ ಸಮಂತಾತ್ಪರಿವೇಷ್ಟಿತಮ್।।

ಎಲುಬು ಮತ್ತು ಕೂದಲುಗಳ ರಾಶಿಗಳ ಮೇಲೆ ಕೃಮಿ-ಕೀಟಗಳು ತುಂಬಿಹೋಗಿದ್ದವು. ಉರಿಯುತ್ತಿರುವ ಬೆಂಕಿಯು ಎಲ್ಲ ಕಡೆಗಳಿಂದ ಬೇಲಿಯ ರೂಪದಂತೆ ಸುತ್ತುವರೆದಿತ್ತು.

18002020a ಅಯೋಮುಖೈಶ್ಚ ಕಾಕೋಲೈರ್ಗೃಧ್ರೈಶ್ಚ ಸಮಭಿದ್ರುತಮ್।
18002020c ಸೂಚೀಮುಖೈಸ್ತಥಾ ಪ್ರೇತೈರ್ವಿಂಧ್ಯಶೈಲೋಪಮೈರ್ವೃತಮ್।।

ಕಾಗೆಗಳು ಮತ್ತು ಹದ್ದುಗಳು ಅಲ್ಲಿ ತುಂಬಿಹೋಗಿದ್ದವು. ಕೆಲವಕ್ಕೆ ಉಕ್ಕಿನಂತಹ ಕೊಕ್ಕುಗಳಿದ್ದವು. ಕೆಲವೊಕ್ಕೆ ಸೂಜಿಯಂತಹ ತೀಕ್ಷ್ಣ ಕೊಕ್ಕುಗಳಿದ್ದವು. ವಿಂದ್ಯಪರ್ವತದಷ್ಟು ದೊಡ್ಡದಾಗಿದ್ದ ಪ್ರೇತಗಳಿದ್ದವು.

18002021a ಮೇದೋರುಧಿರಯುಕ್ತೈಶ್ಚ ಚಿನ್ನಬಾಹೂರುಪಾಣಿಭಿಃ।
18002021c ನಿಕೃತ್ತೋದರಪಾದೈಶ್ಚ ತತ್ರ ತತ್ರ ಪ್ರವೇರಿತೈಃ।।

ಕೊಬ್ಬು ಮತ್ತು ರಕ್ತಗಳಿಂದ ಲೇಪಿತ ತುಂಡಾದ ಬಾಹುಗಳು, ತೊಡೆಗಳು, ಕೈಗಳು, ಕತ್ತರಿಸಲ್ಪಟ್ಟ ಹೊಟ್ಟೆಗಳು ಮತ್ತು ಕಾಲುಗಳು ಅಲ್ಲಲ್ಲಿ ಚೆಲ್ಲಿ ಬಿದ್ದಿದ್ದವು.

18002022a ಸ ತತ್ಕುಣಪದುರ್ಗಂಧಮಶಿವಂ ರೋಮಹರ್ಷಣಮ್।
18002022c ಜಗಾಮ ರಾಜಾ ಧರ್ಮಾತ್ಮಾ ಮಧ್ಯೇ ಬಹು ವಿಚಿಂತಯನ್।।

ರೋಮಗಳನ್ನು ನಿಮಿರಿಸುವಂಥಹ ಕೀಟ-ದುರ್ಗಂಧಗಳಿಂದ ಕೂಡಿದ್ದ ಆ ಅಮಂಗಳಕರ ದಾರಿಯ ಮಧ್ಯೆ ಧರ್ಮಾತ್ಮ ರಾಜನು ಯೋಚಿಸುತ್ತಾ ಮುಂದುವರೆದನು.

18002023a ದದರ್ಶೋಷ್ಣೋದಕೈಃ ಪೂರ್ಣಾಂ ನದೀಂ ಚಾಪಿ ಸುದುರ್ಗಮಾಮ್।
18002023c ಅಸಿಪತ್ರವನಂ ಚೈವ ನಿಶಿತಕ್ಷುರಸಂವೃತಮ್।।

ಅಲ್ಲಿ ಅವನು ಕುದಿಯುತ್ತಿರುವ ನೀರಿನಿಂದ ತುಂಬಿದ ದಾಟಲಸಾಧ್ಯ ನದಿಯನ್ನೂ, ತೀಕ್ಷ್ಣ ಖಡ್ಗಗಳಂತಿರುವ ಎಲೆಗಳುಳ್ಳ ವೃಕ್ಷಗಳ ವನವನ್ನೂ ನೋಡಿದನು.

18002024a ಕರಂಭವಾಲುಕಾಸ್ತಪ್ತಾ ಆಯಸೀಶ್ಚ ಶಿಲಾಃ ಪೃಥಕ್।
18002024c ಲೋಹಕುಂಭೀಶ್ಚ ತೈಲಸ್ಯ ಕ್ವಾಥ್ಯಮಾನಾಃ ಸಮಂತತಃ।।
18002025a ಕೂಟಶಾಲ್ಮಲಿಕಂ ಚಾಪಿ ದುಸ್ಪರ್ಶಂ ತೀಕ್ಷ್ಣಕಂಟಕಮ್।
18002025c ದದರ್ಶ ಚಾಪಿ ಕೌಂತೇಯೋ ಯಾತನಾಃ ಪಾಪಕರ್ಮಿಣಾಮ್।।

ಎಲ್ಲ ಕಡೆಗಳಲ್ಲಿ ಸುಡುತ್ತಿರುವ ಮರಳುರಾಶಿಯನ್ನೂ, ಕಬ್ಬಿಣದ ಬಂಡೆಗಳನ್ನೂ, ಕುದಿಯುತ್ತಿರುವ ಎಣ್ಣೆಯಿಂದ ತುಂಬಿದ್ದ ಲೋಹದ ಕೊಪ್ಪರಿಗೆಗಳನ್ನೂ, ಮುಟ್ಟಲು ಅಸಾಧ್ಯವಾದ ತೀಕ್ಷ್ಣ ಮುಳ್ಳುಗಳಿದ್ದ ಶಾಲ್ಮಲೀವನವನ್ನೂ, ಪಾಪಕರ್ಮಿಗಳ ಯಾತನೆಯನ್ನೂ ಕೌಂತೇಯನು ನೋಡಿದನು.

18002026a ಸ ತಂ ದುರ್ಗಂಧಮಾಲಕ್ಷ್ಯ ದೇವದೂತಮುವಾಚ ಹ।
18002026c ಕಿಯದಧ್ವಾನಮಸ್ಮಾಭಿರ್ಗಂತವ್ಯಮಿದಮೀದೃಶಮ್।।

ಆ ದುರ್ಗಂಧವನ್ನು ನೋಡಿ ಅವನು ದೇವದೂತನಿಗೆ ಹೇಳಿದನು: “ಈ ರೀತಿಯ ಮಾರ್ಗದಲ್ಲಿ ನಾವು ಇನ್ನೂ ಎಷ್ಟು ದೂರ ಹೋಗಬೇಕು?

18002027a ಕ್ವ ಚ ತೇ ಭ್ರಾತರೋ ಮಹ್ಯಂ ತನ್ಮಮಾಖ್ಯಾತುಮರ್ಹಸಿ।
18002027c ದೇಶೋಽಯಂ ಕಶ್ಚ ದೇವಾನಾಮೇತದಿಚ್ಚಾಮಿ ವೇದಿತುಮ್।।

ನನ್ನ ಆ ಸಹೋದರರು ಎಲ್ಲಿದ್ದಾರೆ ಎಂದು ನನಗೆ ಹೇಳಬೇಕು. ದೇವತೆಗಳ ಈ ಪ್ರದೇಶವು ಯಾವುದು ಎನ್ನುವುದನ್ನೂ ತಿಳಿಯಲು ಬಯಸುತ್ತೇನೆ!”

18002028a ಸ ಸಂನಿವವೃತೇ ಶ್ರುತ್ವಾ ಧರ್ಮರಾಜಸ್ಯ ಭಾಷಿತಮ್।
18002028c ದೇವದೂತೋಽಬ್ರವೀಚ್ಚೈನಮೇತಾವದ್ಗಮನಂ ತವ।।

ಧರ್ಮರಾಜನಾಡಿದ ಮಾತನ್ನು ಕೇಳಿ ದೇವದೂತನು ಹಿಂದೆ ತಿರುಗಿ ಹೇಳಿದನು: “ಇಲ್ಲಿಗೇ ನೀನು ಬರಬೇಕಾಗಿದ್ದುದು!

18002029a ನಿವರ್ತಿತವ್ಯಂ ಹಿ ಮಯಾ ತಥಾಸ್ಮ್ಯುಕ್ತೋ ದಿವೌಕಸೈಃ।
18002029c ಯದಿ ಶ್ರಾಂತೋಽಸಿ ರಾಜೇಂದ್ರ ತ್ವಮಥಾಗಂತುಮರ್ಹಸಿ।।

ನಾನೀಗ ಹಿಂದಿರುಗಬೇಕು. ದಿವೌಕಸರು ನನಗೆ ಹೀಗೆಂದೇ ಹೇಳಿದ್ದರು. ರಾಜೇಂದ್ರ! ಒಂದು ವೇಳೆ ನೀನು ಬಳಲಿದ್ದರೆ ನನ್ನೊಡನೆ ನೀನೂ ಬರಬಹುದು!”

18002030a ಯುಧಿಷ್ಠಿರಸ್ತು ನಿರ್ವಿಣ್ಣಸ್ತೇನ ಗಂಧೇನ ಮೂರ್ಚಿತಃ।
18002030c ನಿವರ್ತನೇ ಧೃತಮನಾಃ ಪರ್ಯಾವರ್ತತ ಭಾರತ।।

ಭಾರತ! ವಾಸನೆಯಿಂದ ಮೂರ್ಛಿತನಾಗಿ ನಿರ್ವಿಣ್ಣನಾಗಿದ್ದ ಯುಧಿಷ್ಠಿರನು ಹಿಂದಿರುಗಲು ನಿರ್ಧರಿಸಿ ಹಿಂದಕ್ಕೆ ತಿರುಗಿದನು.

18002031a ಸ ಸಂನಿವೃತ್ತೋ ಧರ್ಮಾತ್ಮಾ ದುಃಖಶೋಕಸಮನ್ವಿತಃ।
18002031c ಶುಶ್ರಾವ ತತ್ರ ವದತಾಂ ದೀನಾ ವಾಚಃ ಸಮಂತತಃ।।

ದುಃಖಶೋಕಸಮನ್ವಿತನಾದ ಆ ಧರ್ಮಾತ್ಮನು ಹಿಂದೆ ತಿರುಗುತ್ತಲೇ ಎಲ್ಲ ಕಡೆಗಳಿಂದ ದೀನಧ್ವನಿಯಲ್ಲಿ ತನ್ನನ್ನು ಉದ್ದೇಶಿಸಿ ಕೂಗಿ ಕರೆಯುವುದನ್ನು ಕೇಳಿದನು.

18002032a ಭೋ ಭೋ ಧರ್ಮಜ ರಾಜರ್ಷೇ ಪುಣ್ಯಾಭಿಜನ ಪಾಂಡವ।
18002032c ಅನುಗ್ರಹಾರ್ಥಮಸ್ಮಾಕಂ ತಿಷ್ಠ ತಾವನ್ಮುಹೂರ್ತಕಮ್।।

“ಭೋ! ಭೋ! ಧರ್ಮಜ! ರಾಜರ್ಷೇ! ಪುಣ್ಯವಂತ ಪಾಂಡವ! ನಮ್ಮ ಅನುಗ್ರಹಾರ್ಥವಾಗಿ ಒಂದು ಕ್ಷಣಕಾಲ ನಿಲ್ಲು!

18002033a ಆಯಾತಿ ತ್ವಯಿ ದುರ್ಧರ್ಷೇ ವಾತಿ ಪುಣ್ಯಃ ಸಮೀರಣಃ।
18002033c ತವ ಗಂಧಾನುಗಸ್ತಾತ ಯೇನಾಸ್ಮಾನ್ಸುಖಮಾಗಮತ್।।

ದುರ್ಧರ್ಷೇ! ನಿನ್ನೊಂದಿಗೆ ಪುಣ್ಯಗಂಧವುಳ್ಳ ಗಾಳಿಯು ಇಲ್ಲಿ ಬೀಸತೊಡಗಿದೆ. ನಿನ್ನ ಆ ಸುವಾಸನೆಯಿಂದ ನಮಗೆ ಸುಖವೆನಿಸುತ್ತಿದೆ!

18002034a ತೇ ವಯಂ ಪಾರ್ಥ ದೀರ್ಘಸ್ಯ ಕಾಲಸ್ಯ ಪುರುಷರ್ಷಭ।
18002034c ಸುಖಮಾಸಾದಯಿಷ್ಯಾಮಸ್ತ್ವಾಂ ದೃಷ್ಟ್ವಾ ರಾಜಸತ್ತಮ।।

ಪಾರ್ಥ! ಪುರುಷರ್ಷಭ! ರಾಜಸತ್ತಮ! ಇನ್ನೂ ಸ್ವಲ್ಪಸಮಯ ಇಲ್ಲಿ ನಿಲ್ಲು. ಅಷ್ಟು ಸಮಯ ನಿನ್ನನ್ನು ನೋಡಿ ನಾವು ಸುಖವನ್ನು ಅನುಭವಿಸುತ್ತೇವೆ.

18002035a ಸಂತಿಷ್ಠಸ್ವ ಮಹಾಬಾಹೋ ಮುಹೂರ್ತಮಪಿ ಭಾರತ।
18002035c ತ್ವಯಿ ತಿಷ್ಠತಿ ಕೌರವ್ಯ ಯಾತನಾಸ್ಮಾನ್ನ ಬಾಧತೇ।।

ಭಾರತ! ಮಹಾಬಾಹೋ! ಸ್ವಲ್ಪಹೊತ್ತು ಇಲ್ಲಿಯೇ ಇರು. ಕೌರವ್ಯ! ನೀನಿಲ್ಲಿದ್ದರೆ ಈ ಯಾತನೆಗಳು ನಮ್ಮನ್ನು ಬಾಧಿಸುವುದಿಲ್ಲ!”

18002036a ಏವಂ ಬಹುವಿಧಾ ವಾಚಃ ಕೃಪಣಾ ವೇದನಾವತಾಮ್।
18002036c ತಸ್ಮಿನ್ದೇಶೇ ಸ ಶುಶ್ರಾವ ಸಮಂತಾದ್ವದತಾಂ ನೃಪ।।

ನೃಪ! ಆ ಸ್ಥಳದ ಎಲ್ಲ ಕಡೆಗಳಿಂದ ಈ ರೀತಿಯ ದೈನ್ಯ-ವೇದನೆಗಳಿಂದ ತುಂಬಿದ ಬಹುವಿಧದ ಮಾತುಗಳನ್ನು ಅವನು ಕೇಳಿದನು.

18002037a ತೇಷಾಂ ತದ್ವಚನಂ ಶ್ರುತ್ವಾ ದಯಾವಾನ್ದೀನಭಾಷಿಣಾಮ್।
18002037c ಅಹೋ ಕೃಚ್ಚ್ರಮಿತಿ ಪ್ರಾಹ ತಸ್ಥೌ ಸ ಚ ಯುಧಿಷ್ಠಿರಃ।।

ದೀನರಾಗಿ ಕೂಗುತ್ತಿದ್ದ ಅವರ ಆ ಮಾತುಗಳನ್ನು ಕೇಳಿ ದಯಾವಂತ ಯುಧಿಷ್ಠಿರನು “ಅಯ್ಯೋ ಕಷ್ಟವೇ!” ಎಂದು ಹೇಳಿ ಅಲ್ಲಿಯೇ ನಿಂತುಕೊಂಡನು.

18002038a ಸ ತಾ ಗಿರಃ ಪುರಸ್ತಾದ್ವೈ ಶ್ರುತಪೂರ್ವಾಃ ಪುನಃ ಪುನಃ।
18002038c ಗ್ಲಾನಾನಾಂ ದುಃಖಿತಾನಾಂ ಚ ನಾಭ್ಯಜಾನತ ಪಾಂಡವಃ।।

ಆ ಸ್ವರಗಳನ್ನು ಹಿಂದೆ ಕೂಡ ಪುನಃ ಪುನಃ ಕೇಳಿದ್ದರೂ ದುಃಖದಿಂದ ಬಳಲಿದ್ದವರ ಆ ಧ್ವನಿಗಳು ಯಾರದ್ದೆಂದು ಪಾಂಡವನಿಗೆ ಗುರುತಿಸಲಾಗಲಿಲ್ಲ.

18002039a ಅಬುಧ್ಯಮಾನಸ್ತಾ ವಾಚೋ ಧರ್ಮಪುತ್ರೋ ಯುಧಿಷ್ಠಿರಃ।
18002039c ಉವಾಚ ಕೇ ಭವಂತೋ ವೈ ಕಿಮರ್ಥಮಿಹ ತಿಷ್ಠಥ।।

ಹಾಗೆ ಯಾರು ಮಾತನಾಡುತ್ತಿದ್ದಾರೆಂದು ತಿಳಿಯದ ಧರ್ಮಪುತ್ರ ಯುಧಿಷ್ಠಿರನು “ನೀವು ಯಾರು ಮತ್ತು ಇಲ್ಲಿ ಏಕೆ ಇದ್ದೀರಿ?” ಎಂದು ಕೇಳಿದನು.

18002040a ಇತ್ಯುಕ್ತಾಸ್ತೇ ತತಃ ಸರ್ವೇ ಸಮಂತಾದವಭಾಷಿರೇ।
18002040c ಕರ್ಣೋಽಹಂ ಭೀಮಸೇನೋಽಹಮರ್ಜುನೋಽಹಮಿತಿ ಪ್ರಭೋ।।
18002041a ನಕುಲಃ ಸಹದೇವೋಽಹಂ ಧೃಷ್ಟದ್ಯುಮ್ನೋಽಹಮಿತ್ಯುತ।
18002041c ದ್ರೌಪದೀ ದ್ರೌಪದೇಯಾಶ್ಚ ಇತ್ಯೇವಂ ತೇ ವಿಚುಕ್ರುಶುಃ।।

ಅನಂತರ ಎಲ್ಲ ಕಡೆಗಳಿಂದ ಎಲ್ಲರೂ “ನಾನು ಕರ್ಣ!” “ನಾನು ಭೀಮಸೇನ!” “ನಾನು ಅರ್ಜುನ ಪ್ರಭೋ!” “ನಾನು ನಕುಲ, ಸಹದೇವ!” “ನಾನು ಧೃಷ್ಟದ್ಯುಮ್ನ, ದ್ರೌಪದೀ, ದ್ರೌಪದೇಯರು!” ಇವೇ ಮುಂತಾಗಿ ಕೂಗುತ್ತಿರುವುದನ್ನು ಅವನು ಕೇಳಿದನು.

18002042a ತಾ ವಾಚಃ ಸಾ ತದಾ ಶ್ರುತ್ವಾ ತದ್ದೇಶಸದೃಶೀರ್ನೃಪ।
18002042c ತತೋ ವಿಮಮೃಶೇ ರಾಜಾ ಕಿಂ ನ್ವಿದಂ ದೈವಕಾರಿತಮ್।।

ನೃಪ! ಅಂತಹ ಪ್ರದೇಶದಲ್ಲಿ ಅವರ ಆ ಮಾತುಗಳನ್ನು ಕೇಳಿ ರಾಜನು ತನ್ನಲ್ಲಿಯೇ ವಿಮರ್ಶಿಸಿದನು: “ದೈವವು ಹೀಗೇಕೆ ಮಾಡಿತು?

18002043a ಕಿಂ ನು ತತ್ಕಲುಷಂ ಕರ್ಮ ಕೃತಮೇಭಿರ್ಮಹಾತ್ಮಭಿಃ।
18002043c ಕರ್ಣೇನ ದ್ರೌಪದೇಯೈರ್ವಾ ಪಾಂಚಾಲ್ಯಾ ವಾ ಸುಮಧ್ಯಯಾ।।
18002044a ಯ ಇಮೇ ಪಾಪಗಂಧೇಽಸ್ಮಿನ್ದೇಶೇ ಸಂತಿ ಸುದಾರುಣೇ।
18002044c ನ ಹಿ ಜಾನಾಮಿ ಸರ್ವೇಷಾಂ ದುಷ್ಕೃತಂ ಪುಣ್ಯಕರ್ಮಣಾಮ್।।

ಮಹಾತ್ಮರಾದ ಈ ಕರ್ಣನಾಗಲೀ, ಸುಮದ್ಯಮೆ ಪಾಂಚಾಲೀ ದ್ರೌಪದಿಯಾಗಲೀ ಯಾವ ಕಲುಷ ಕರ್ಮಗಳನ್ನು ಮಾಡಿದ್ದಾರೆಂದು ಪಾಪಗಂಧದಿಂದ ಕೂಡಿರುವ ಈ ದಾರುಣ ಸ್ಥಳದಲ್ಲಿದ್ದಾರೆ? ಈ ಎಲ್ಲ ಪುಣ್ಯಕರ್ಮಿಗಳೂ ಮಾಡಿದ ಪಾಪಕರ್ಮಗಳ್ಯಾವುವೂ ನನಗೆ ಗೊತ್ತಿಲ್ಲ!

18002045a ಕಿಂ ಕೃತ್ವಾ ಧೃತರಾಷ್ಟ್ರಸ್ಯ ಪುತ್ರೋ ರಾಜಾ ಸುಯೋಧನಃ।
18002045c ತಥಾ ಶ್ರಿಯಾ ಯುತಃ ಪಾಪಃ ಸಹ ಸರ್ವೈಃ ಪದಾನುಗೈಃ।।

ಧೃತರಾಷ್ಟ್ರ ಪುತ್ರ ಪಾಪಿ ರಾಜಾ ಸುಯೋಧನನು ಏನು ಮಾಡಿದನೆಂದು ತನ್ನ ಅನುಯಾಯಿಗಳೆಲ್ಲರೊಂದಿಗೆ ಸಂಪತ್ತು-ಸಂತೋಷಗಳಿಂದ ಮೆರೆಯುತ್ತಿದ್ದಾನೆ?

18002046a ಮಹೇಂದ್ರ ಇವ ಲಕ್ಷ್ಮೀವಾನಾಸ್ತೇ ಪರಮಪೂಜಿತಃ।
18002046c ಕಸ್ಯೇದಾನೀಂ ವಿಕಾರೋಽಯಂ ಯದಿಮೇ ನರಕಂ ಗತಾಃ।।
18002047a ಸರ್ವಧರ್ಮವಿದಃ ಶೂರಾಃ ಸತ್ಯಾಗಮಪರಾಯಣಾಃ।
18002047c ಕ್ಷಾತ್ರಧರ್ಮಪರಾಃ ಪ್ರಾಜ್ಞಾ ಯಜ್ವಾನೋ ಭೂರಿದಕ್ಷಿಣಾಃ।।

ಇಂದ್ರನೋ ಎನ್ನುವಂತೆ ಲಕ್ಷ್ಮೀವಂತನಾಗಿ ಅವನು ಅಲ್ಲಿ ಪರಮಪೂಜಿತನಾಗಿದ್ದಾನೆ. ಸರ್ವಧರ್ಮವಿದ, ಶೂರ, ಸತ್ಯ, ಆಗಮಪರಾಯಣ, ಕ್ಷಾತ್ರಧರ್ಮಪರಾಯಣ, ಪ್ರಾಜ್ಞ, ಭೂರಿದಕ್ಷಿಣೆಗಳನ್ನಿತ್ತು ಯಾಗನಡೆಸಿದ ನಾವು ಈ ನರಕದಲ್ಲಿದ್ದೇವೆಂದರೆ ಇದೆಂತಹ ವಿಕಾರ?

18002048a ಕಿಂ ನು ಸುಪ್ತೋಽಸ್ಮಿ ಜಾಗರ್ಮಿ ಚೇತಯಾನೋ ನ ಚೇತಯೇ।
18002048c ಅಹೋ ಚಿತ್ತವಿಕಾರೋಽಯಂ ಸ್ಯಾದ್ವಾ ಮೇ ಚಿತ್ತವಿಭ್ರಮಃ।।

ನಾನೇನು ಸ್ವಪ್ನವನ್ನು ಕಾಣುತ್ತಿದ್ದೇನೆಯೇ ಅಥವಾ ಎಚ್ಚರವಾಗಿಯೇ ಇದ್ದೇನೆಯೇ? ಎಚ್ಚರದಿಂದಿರುವೆನೆಂದು ಅನಿಸಿದರೂ ಚೇತನವು ಉಡುಗಿಹೋದಂತಾಗಿದೆ. ಇಂದು ನಾನು ಹುಚ್ಚನಾಗಿಬಿಟ್ಟಿದ್ದೇನೆಯೇ? ಅಯ್ಯೋ! ಈ ಚಿತ್ತವಿಕಾರವೇ!”

18002049a ಏವಂ ಬಹುವಿಧಂ ರಾಜಾ ವಿಮಮರ್ಶ ಯುಧಿಷ್ಠಿರಃ।
18002049c ದುಃಖಶೋಕಸಮಾವಿಷ್ಟಶ್ಚಿಂತಾವ್ಯಾಕುಲಿತೇಂದ್ರಿಯಃ।।

ದುಃಖಶೋಕಸಮಾವಿಷ್ಟನಾದ, ಚಿಂತೆಯಿಂದ ವ್ಯಾಕುಲಿತನಾಗಿದ್ದ ರಾಜಾ ಯುಧಿಷ್ಠಿರನು ಈ ರೀತಿ ಬಹುವಿಧಗಳಲ್ಲಿ ವಿಮರ್ಶಿಸಿದನು.

18002050a ಕ್ರೋಧಮಾಹಾರಯಚ್ಚೈವ ತೀವ್ರಂ ಧರ್ಮಸುತೋ ನೃಪಃ।
18002050c ದೇವಾಂಶ್ಚ ಗರ್ಹಯಾಮಾಸ ಧರ್ಮಂ ಚೈವ ಯುಧಿಷ್ಠಿರಃ।।

ಕೂಡಲೇ ತೀವ್ರ ಕ್ರೋಧಿತನಾಗಿ ನೃಪ ಧರ್ಮಸುತ ಯುಧಿಷ್ಠಿರನು ದೇವತೆಗಳನ್ನೂ, ಧರ್ಮನನ್ನೂ ಹಳಿದನು.

18002051a ಸ ತೀವ್ರಗಂಧಸಂತಪ್ತೋ ದೇವದೂತಮುವಾಚ ಹ।
18002051c ಗಮ್ಯತಾಂ ಭದ್ರ ಯೇಷಾಂ ತ್ವಂ ದೂತಸ್ತೇಷಾಮುಪಾಂತಿಕಮ್।।

ತೀವ್ರ ದುರ್ಗಂಧದಿಂದ ಸಂತಪ್ತನಾದ ಅವನು ದೇವದೂತನಿಗೆ ಹೇಳಿದನು: “ಭದ್ರ! ದೂತ! ನಿನ್ನನ್ನು ಕಳುಹಿಸಿದವರ ಬಳಿ ನೀನು ಹೋಗು!

18002052a ನ ಹ್ಯಹಂ ತತ್ರ ಯಾಸ್ಮ್ಯಾಮಿ ಸ್ಥಿತೋಽಸ್ಮೀತಿ ನಿವೇದ್ಯತಾಮ್।
18002052c ಮತ್ಸಂಶ್ರಯಾದಿಮೇ ದೂತ ಸುಖಿನೋ ಭ್ರಾತರೋ ಹಿ ಮೇ।।

ನಾನು ಅಲ್ಲಿಗೆ ಬರುವುದಿಲ್ಲ. ಇಲ್ಲಿಯೇ ಉಳಿದುಕೊಂಡಿದ್ದೇನೆಂದು ಅವರಿಗೆ ಹೇಳು. ದೂತ! ನಾನು ಇಲ್ಲಿ ಇರುವುದರಿಂದ ನನ್ನ ಸಹೋದರರು ಸುಖವನ್ನನುಭವಿಸುತ್ತಿದ್ದಾರೆ!”

18002053a ಇತ್ಯುಕ್ತಃ ಸ ತದಾ ದೂತಃ ಪಾಂಡುಪುತ್ರೇಣ ಧೀಮತಾ।
18002053c ಜಗಾಮ ತತ್ರ ಯತ್ರಾಸ್ತೇ ದೇವರಾಜಃ ಶತಕ್ರತುಃ।।

ಧೀಮಂತ ಪಾಂಡುಪುತ್ರನು ಹೀಗೆ ಹೇಳಲು ದೂತನು ದೇವರಾಜ ಶತ್ರಕ್ರತುವಿರುವಲ್ಲಿಗೆ ಹೋದನು.

18002054a ನಿವೇದಯಾಮಾಸ ಚ ತದ್ಧರ್ಮರಾಜಚಿಕೀರ್ಷಿತಮ್।
18002054c ಯಥೋಕ್ತಂ ಧರ್ಮಪುತ್ರೇಣ ಸರ್ವಮೇವ ಜನಾಧಿಪ।।

ಜನಾಧಿಪ! ಧರ್ಮಪುತ್ರನು ಹೇಳಿದ್ದಂತೆ ಧರ್ಮರಾಜನ ಇಂಗಿತವೆಲ್ಲವನ್ನೂ ಅವನಿಗೆ ನಿವೇದಿಸಿದನು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಸ್ವರ್ಗಾರೋಹಣಪರ್ವಣಿ ಯುಧಿಷ್ಠಿರನರಕದರ್ಶನೇ ದ್ವಿತೀಯೋಽಧ್ಯಾಯಃ ।।
ಇದು ಶ್ರೀಮಹಾಭಾರತದಲ್ಲಿ ಸ್ವರ್ಗಾರೋಹಣಪರ್ವದಲ್ಲಿ ಯುಧಿಷ್ಠಿರನರಕದರ್ಶನ ಎನ್ನುವ ಎರಡನೇ ಅಧ್ಯಾಯವು.