ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಮಹಾಪ್ರಸ್ಥಾನಿಕ ಪರ್ವ
ಮಹಾಪ್ರಸ್ಥಾನಿಕ ಪರ್ವ
ಅಧ್ಯಾಯ 3
ಸಾರ
ಯುಧಿಷ್ಠಿರನನ್ನು ಸಶರೀರವಾಗಿಯೇ ಸ್ವರ್ಗಕ್ಕೆ ಕೊಂಡೊಯ್ಯಲು ಸಾಕ್ಷಾತ್ ಇಂದ್ರನೇ ಬಂದುದು; ನಾಯಿಯ ರೂಪದಲ್ಲಿದ್ದ ಧರ್ಮನಿಂದ ಯುಧಿಷ್ಠಿರನ ಪರೀಕ್ಷೆ (1-22). ಇಂದ್ರ-ಯುಧಿಷ್ಠಿರರ ಸಂವಾದ (23-36).
17003001 ವೈಶಂಪಾಯನ ಉವಾಚ।
17003001a ತತಃ ಸಂನಾದಯನ್ ಶಕ್ರೋ ದಿವಂ ಭೂಮಿಂ ಚ ಸರ್ವಶಃ।
17003001c ರಥೇನೋಪಯಯೌ ಪಾರ್ಥಮಾರೋಹೇತ್ಯಬ್ರವೀಚ್ಚ ತಮ್।।
ವೈಶಂಪಾಯನನು ಹೇಳಿದನು: “ಆಗ ತನ್ನ ರಥದಿಂದ ಭೂಮಿ-ಆಕಾಶ ಎಲ್ಲವನ್ನೂ ಮೊಳಗಿಸುತ್ತ ಶಕ್ರನು ಆಗಮಿಸಿ ಪಾರ್ಥನಿಗೆ “ಮೇಲೇರು!” ಎಂದನು.
17003002a ಸ ಭ್ರಾತೄನ್ಪತಿತಾನ್ದೃಷ್ಟ್ವಾ ಧರ್ಮರಾಜೋ ಯುಧಿಷ್ಠಿರಃ।
17003002c ಅಬ್ರವೀಚ್ಛೋಕಸಂತಪ್ತಃ ಸಹಸ್ರಾಕ್ಷಮಿದಂ ವಚಃ।।
ಸಹೋದರರು ಬಿದ್ದುದನ್ನು ನೋಡಿ ಧರ್ಮರಾಜ ಯುಧಿಷ್ಠಿರನು ಶೋಕಸಂತಪ್ತನಾಗಿ ಸಹಸ್ರಾಕ್ಷನಿಗೆ ಈ ಮಾತನ್ನಾಡಿದನು:
17003003a ಭ್ರಾತರಃ ಪತಿತಾ ಮೇಽತ್ರ ಆಗಚ್ಚೇಯುರ್ಮಯಾ ಸಹ।
17003003c ನ ವಿನಾ ಭ್ರಾತೃಭಿಃ ಸ್ವರ್ಗಮಿಚ್ಚೇ ಗಂತುಂ ಸುರೇಶ್ವರ।।
“ನನ್ನ ಸಹೋದರರು ಅಲ್ಲಿ ಬಿದ್ದಿದ್ದಾರೆ. ಅವರೂ ಕೂಡ ನನ್ನೊಡನೆ ಬರಲಿ. ಸುರೇಶ್ವರ! ಭ್ರಾತೃಗಳನ್ನು ಬಿಟ್ಟು ಸ್ವರ್ಗಕ್ಕೆ ಬರಲು ನಾನು ಬಯಸುವುದಿಲ್ಲ!
17003004a ಸುಕುಮಾರೀ ಸುಖಾರ್ಹಾ ಚ ರಾಜಪುತ್ರೀ ಪುರಂದರ।
17003004c ಸಾಸ್ಮಾಭಿಃ ಸಹ ಗಚ್ಚೇತ ತದ್ಭವಾನನುಮನ್ಯತಾಮ್।।
ಪುರಂದರ! ಸುಕುಮಾರೀ, ಸುಖಕ್ಕೆ ಅರ್ಹಳಾದ ರಾಜಪುತ್ರಿಯೂ ಕೂಡ ನಮ್ಮೊಡನೆ ಬರುವಂತಾಗಲೆಂದು ನೀನು ಅನುಮತಿಯನ್ನು ನೀಡಬೇಕು!”
17003005 ಇಂದ್ರ ಉವಾಚ।
17003005a ಭ್ರಾತೄನ್ದ್ರಕ್ಷ್ಯಸಿ ಪುತ್ರಾಂಸ್ತ್ವಮಗ್ರತಸ್ತ್ರಿದಿವಂ ಗತಾನ್।
17003005c ಕೃಷ್ಣಯಾ ಸಹಿತಾನ್ಸರ್ವಾನ್ಮಾ ಶುಚೋ ಭರತರ್ಷಭ।।
ಇಂದ್ರನು ಹೇಳಿದನು: “ಮಗನೇ! ಮೊದಲೇ ಸ್ವರ್ಗಕ್ಕೆ ಹೋಗಿರುವ ಕೃಷ್ಣೆಯ ಸಹಿತ ಭ್ರಾತೃಗಳೆಲ್ಲರನ್ನೂ ನೀನು ನೋಡುವೆ. ಭರತರ್ಷಭ! ದುಃಖಿಸಬೇಡ!
17003006a ನಿಕ್ಷಿಪ್ಯ ಮಾನುಷಂ ದೇಹಂ ಗತಾಸ್ತೇ ಭರತರ್ಷಭ।
17003006c ಅನೇನ ತ್ವಂ ಶರೀರೇಣ ಸ್ವರ್ಗಂ ಗಂತಾ ನ ಸಂಶಯಃ।।
ಭರತರ್ಷಭ! ಅವರು ಮನುಷ್ಯದೇಹವನ್ನು ಇಲ್ಲಿಯೇ ಇಟ್ಟು ಹೋಗಿದ್ದಾರೆ. ನೀನು ನಿನ್ನ ಈ ಶರೀರದಿಂದಲೇ ಸ್ವರ್ಗಕ್ಕೆ ಹೋಗುತ್ತೀಯೆ. ಅದರಲ್ಲಿ ಸಂಶಯವಿಲ್ಲ!”
17003007 ಯುಧಿಷ್ಠಿರ ಉವಾಚ।
17003007a ಅಯಂ ಶ್ವಾ ಭೂತಭವ್ಯೇಶ ಭಕ್ತೋ ಮಾಂ ನಿತ್ಯಮೇವ ಹ।
17003007c ಸ ಗಚ್ಚೇತ ಮಯಾ ಸಾರ್ಧಮಾನೃಶಂಸ್ಯಾ ಹಿ ಮೇ ಮತಿಃ।।
ಯುಧಿಷ್ಠಿರನು ಹೇಳಿದನು: “ಭೂತಭವ್ಯೇಶ! ಈ ನಾಯಿಯು ನಿತ್ಯವೂ ನನ್ನ ಭಕ್ತನಾಗಿದ್ದಿತು. ಅದೂ ಕೂಡ ನನ್ನೊಡನೆ ಬರಲಿ. ಅದರ ಮೇಲೆ ನನಗೆ ದಯಾಭಾವವುಂಟಾಗಿದೆ!”
17003008 ಇಂದ್ರ ಉವಾಚ।
17003008a ಅಮರ್ತ್ಯತ್ವಂ ಮತ್ಸಮತ್ವಂ ಚ ರಾಜನ್ ಶ್ರಿಯಂ ಕೃತ್ಸ್ನಾಂ ಮಹತೀಂ ಚೈವ ಕೀರ್ತಿಮ್।
17003008c ಸಂಪ್ರಾಪ್ತೋಽದ್ಯ ಸ್ವರ್ಗಸುಖಾನಿ ಚ ತ್ವಂ ತ್ಯಜ ಶ್ವಾನಂ ನಾತ್ರ ನೃಶಂಸಮಸ್ತಿ।।
ಇಂದ್ರನು ಹೇಳಿದನು: “ರಾಜನ್! ಇಂದು ನೀನು ನನ್ನ ಸಮನಾಗಿ ಅಮರತ್ವವನ್ನೂ, ಶ್ರೀಯನ್ನೂ, ವಿಶಾಲ ಬೃಹತ್ಕೀರ್ತಿಯನ್ನೂ ಸ್ವರ್ಗಸುಖಗಳನ್ನೂ ಪಡೆದಿದ್ದೀಯೆ. ಈ ನಾಯಿಯನ್ನು ತೊರೆ. ಇದರಲ್ಲಿ ಅಹಿಂಸೆಯೇನೂ ಇಲ್ಲ!”
17003009 ಯುಧಿಷ್ಠಿರ ಉವಾಚ।
17003009a ಅನಾರ್ಯಮಾರ್ಯೇಣ ಸಹಸ್ರನೇತ್ರ ಶಕ್ಯಂ ಕರ್ತುಂ ದುಷ್ಕರಮೇತದಾರ್ಯ।
17003009c ಮಾ ಮೇ ಶ್ರಿಯಾ ಸಂಗಮನಂ ತಯಾಸ್ತು ಯಸ್ಯಾಃ ಕೃತೇ ಭಕ್ತಜನಂ ತ್ಯಜೇಯಮ್।।
ಯುಧಷ್ಠಿರನು ಹೇಳಿದನು: “ಸಹಸ್ರನೇತ್ರ! ಆರ್ಯ! ಆರ್ಯನಾದವನಿಗೆ ಅನಾರ್ಯ ಕೃತ್ಯವನ್ನು ಮಾಡುವುದು ದುಷ್ಕರವಾದುದು, ಅಶಕ್ಯವಾದುದು. ಭಕ್ತಜನರನ್ನು ತೊರೆದು ನಾನು ಶ್ರೀಯನ್ನು ಸಂಪಾದಿಸುವಂತಾಗದಿರಲಿ!”
17003010 ಇಂದ್ರ ಉವಾಚ।
17003010a ಸ್ವರ್ಗೇ ಲೋಕೇ ಶ್ವವತಾಂ ನಾಸ್ತಿ ಧಿಷ್ಣ್ಯಮ್ ಇಷ್ಟಾಪೂರ್ತಂ ಕ್ರೋಧವಶಾ ಹರಂತಿ।
17003010c ತತೋ ವಿಚಾರ್ಯ ಕ್ರಿಯತಾಂ ಧರ್ಮರಾಜ ತ್ಯಜ ಶ್ವಾನಂ ನಾತ್ರ ನೃಶಂಸಮಸ್ತಿ।।
ಇಂದ್ರನು ಹೇಳಿದನು: “ಧರ್ಮರಾಜ! ನಾಯಿಯ ಒಡೆಯರಿಗೆ ಸ್ವರ್ಗಲೋಕದಲ್ಲಿ ಸ್ಥಾನವಿಲ್ಲ. ಅವರ ಇಷ್ಟಿ-ಯಾಗಗಳ ಪುಣ್ಯಗಳನ್ನು ಕ್ರೋಧವಶ ರಾಕ್ಷಸರು ಅಪಹರಿಸುತ್ತಾರೆ. ಆದುದರಿಂದ ವಿಚಾರಿಸಿ ಕಾರ್ಯಮಾಡು. ನಾಯಿಯನ್ನು ಇಲ್ಲಿಯೇ ಬಿಟ್ಟುಬಿಡು. ಅದರಲ್ಲಿ ಅಹಿಂಸೆಯೇನೂ ಇಲ್ಲ.”
17003011 ಯುಧಿಷ್ಠಿರ ಉವಾಚ।
17003011a ಭಕ್ತತ್ಯಾಗಂ ಪ್ರಾಹುರತ್ಯಂತಪಾಪಂ ತುಲ್ಯಂ ಲೋಕೇ ಬ್ರಹ್ಮವಧ್ಯಾಕೃತೇನ।
17003011c ತಸ್ಮಾನ್ನಾಹಂ ಜಾತು ಕಥಂ ಚನಾದ್ಯ ತ್ಯಕ್ಷ್ಯಾಮ್ಯೇನಂ ಸ್ವಸುಖಾರ್ಥೀ ಮಹೇಂದ್ರ।।
ಯುಧಿಷ್ಠಿರನು ಹೇಳಿದನು: “ಭಕ್ತರನ್ನು ತ್ಯಜಿಸುವುದು ಅತ್ಯಂತ ಪಾಪವೆಂದು ಹೇಳುತ್ತಾರೆ. ಲೋಕದಲ್ಲಿ ಆ ಪಾಪವು ಬ್ರಹ್ಮವಧೆಯನ್ನು ಮಾಡಿದುದಕ್ಕೆ ಸಮಾನ. ಮಹೇಂದ್ರ! ಆದುದರಿಂದ ನನ್ನ ಸುಖಕ್ಕಾಗಿ ಇಂದು ಇದನ್ನು ನಾನು ತ್ಯಜಿಸುವುದಿಲ್ಲ!”
17003012 ಇಂದ್ರ ಉವಾಚ।
17003012a ಶುನಾ ದೃಷ್ಟಂ ಕ್ರೋಧವಶಾ ಹರಂತಿ ಯದ್ದತ್ತಮಿಷ್ಟಂ ವಿವೃತಮಥೋ ಹುತಂ ಚ।
17003012c ತಸ್ಮಾಚ್ಛುನಸ್ತ್ಯಾಗಮಿಮಂ ಕುರುಷ್ವ ಶುನಸ್ತ್ಯಾಗಾತ್ಪ್ರಾಪ್ಸ್ಯಸೇ ದೇವಲೋಕಮ್।।
ಇಂದ್ರನು ಹೇಳಿದನು: “ನಾಯಿಯು ನೋಡಿದ ದಾನ, ಯಜ್ಞ ಮತ್ತು ಆಹುತಿಗಳನ್ನು ಕ್ರೋಧವಶ ರಾಕ್ಷಸರು ಅಪಹರಿಸುತ್ತಾರೆ. ಆದುದರಿಂದ ಈ ನಾಯಿಯನ್ನು ತ್ಯಜಿಸು. ನಾಯಿಯನ್ನು ತ್ಯಜಿಸಿದರೆ ನಿನಗೆ ದೇವಲೋಕವು ದೊರೆಯುತ್ತದೆ.
17003013a ತ್ಯಕ್ತ್ವಾ ಭ್ರಾತೄನ್ದಯಿತಾಂ ಚಾಪಿ ಕೃಷ್ಣಾಂ ಪ್ರಾಪ್ತೋ ಲೋಕಃ ಕರ್ಮಣಾ ಸ್ವೇನ ವೀರ।
17003013c ಶ್ವಾನಂ ಚೈನಂ ನ ತ್ಯಜಸೇ ಕಥಂ ನು ತ್ಯಾಗಂ ಕೃತ್ಸ್ನಂ ಚಾಸ್ಥಿತೋ ಮುಹ್ಯಸೇಽದ್ಯ।।
ವೀರ! ಸಹೋದರರನ್ನೂ ಪತ್ನಿ ಕೃಷ್ಣೆಯನ್ನೂ ಇಲ್ಲಿ ಬಿಟ್ಟು ನಿನ್ನದೇ ಕರ್ಮಗಳಿಂದ ಲೋಕಗಳನ್ನು ಪಡೆದಿದ್ದೀಯೆ. ಈ ನಾಯಿಯನ್ನೇಕೆ ನೀನು ತ್ಯಜಿಸುತ್ತಿಲ್ಲ? ಸರ್ವವನ್ನೂ ತ್ಯಾಗಮಾಡಿರುವ ನೀನು ಈ ವಿಷಯದಲ್ಲಿ ಏಕೆ ಮೋಹಗೊಳ್ಳುತ್ತಿದ್ದೀಯೆ?”
17003014 ಯುಧಿಷ್ಠಿರ ಉವಾಚ।
17003014a ನ ವಿದ್ಯತೇ ಸಂಧಿರಥಾಪಿ ವಿಗ್ರಹೋ ಮೃತೈರ್ಮರ್ತ್ಯೈರಿತಿ ಲೋಕೇಷು ನಿಷ್ಠಾ।
17003014c ನ ತೇ ಮಯಾ ಜೀವಯಿತುಂ ಹಿ ಶಕ್ಯಾ ತಸ್ಮಾತ್ತ್ಯಾಗಸ್ತೇಷು ಕೃತೋ ನ ಜೀವತಾಮ್।।
ಯುಧಿಷ್ಠಿರನು ಹೇಳಿದನು: “ಮೃತರಾದ ಮನುಷ್ಯರೊಡನೆ ಸ್ನೇಹವಾಗಲೀ ದ್ವೇಶವಾಗಲೀ ಇರಲಾರದು ಎನ್ನುವುದು ಲೋಕಗಳ ನಿಷ್ಠೆ. ಅವರನ್ನು ಜೀವಗೊಳಿಸಲೂ ನಾನು ಶಕ್ಯನಾಗಿರಲಿಲ್ಲ. ಆದುದರಿಂದ ನಾನು ಅವರನ್ನು ತೊರೆದೆ. ಅವರು ಜೀವಿತವಿರುವಾಗ ಎಂದೂ ನಾನು ಅವರನ್ನು ತೊರೆದಿರಲಿಲ್ಲ!
17003015a ಪ್ರತಿಪ್ರದಾನಂ ಶರಣಾಗತಸ್ಯ ಸ್ತ್ರಿಯಾ ವಧೋ ಬ್ರಾಹ್ಮಣಸ್ವಾಪಹಾರಃ।
17003015c ಮಿತ್ರದ್ರೋಹಸ್ತಾನಿ ಚತ್ವಾರಿ ಶಕ್ರ ಭಕ್ತತ್ಯಾಗಶ್ಚೈವ ಸಮೋ ಮತೋ ಮೇ।।
ಶಕ್ರ! ಶರಣಾಗತನಾದವನನ್ನು ಅವನ ಶತ್ರುವಿಗೆ ಒಪ್ಪಿಸುವುದು, ಸ್ತ್ರೀಯನ್ನು ವಧಿಸುವುದು, ಬ್ರಾಹ್ಮಣನದ್ದನ್ನು ಅಪಹರಿಸುವುದು, ಮತ್ತು ಮಿತ್ರದ್ರೋಹ ಈ ನಾಲ್ಕೂ ಭಕ್ತತ್ಯಾಗಕ್ಕೆ ಸಮವೆಂದು ನನ್ನ ಅಭಿಪ್ರಾಯ!””
17003016 ವೈಶಂಪಾಯನ ಉವಾಚ।
17003016a ತದ್ಧರ್ಮರಾಜಸ್ಯ ವಚೋ ನಿಶಮ್ಯ ಧರ್ಮಸ್ವರೂಪೀ ಭಗವಾನುವಾಚ।
17003016c ಯುಧಿಷ್ಠಿರಂ ಪ್ರೀತಿಯುಕ್ತೋ ನರೇಂದ್ರಂ ಶ್ಲಕ್ಷ್ಣೈರ್ವಾಕ್ಯೈಃ ಸಂಸ್ತವಸಂಪ್ರಯುಕ್ತೈಃ।।
ವೈಶಂಪಾಯನನು ಹೇಳಿದನು: “ಧರ್ಮರಾಜನ ಆ ಮಾತನ್ನು ಕೇಳಿ ನಾಯಿಯ ರೂಪದಲ್ಲಿದ್ದ ಧರ್ಮ ಭಗವಾನನು ಪ್ರೀತಿಯುಕ್ತನಾಗಿ ಮಧುರವಾಕ್ಯಗಳಿಂದ ಅವನನ್ನು ಪ್ರಶಂಸಿಸುತ್ತಾ ಹೇಳಿದನು:
17003017a ಅಭಿಜಾತೋಽಸಿ ರಾಜೇಂದ್ರ ಪಿತುರ್ವೃತ್ತೇನ ಮೇಧಯಾ।
17003017c ಅನುಕ್ರೋಶೇನ ಚಾನೇನ ಸರ್ವಭೂತೇಷು ಭಾರತ।।
“ರಾಜೇಂದ್ರ! ಭಾರತ! ತಂದೆಯಂತೆ ಉತ್ತಮ ನಡತೆ, ಬುದ್ಧಿ ಮತ್ತು ಸರ್ವಭೂತಗಳ ಮೇಲೆ ಅನುಕ್ರೋಶದಿಂದ ಕೂಡಿರುವ ನಿನ್ನ ಜನ್ಮವು ಉತ್ತಮವಾದುದು!
17003018a ಪುರಾ ದ್ವೈತವನೇ ಚಾಸಿ ಮಯಾ ಪುತ್ರ ಪರೀಕ್ಷಿತಃ।
17003018c ಪಾನೀಯಾರ್ಥೇ ಪರಾಕ್ರಾಂತಾ ಯತ್ರ ತೇ ಭ್ರಾತರೋ ಹತಾಃ।।
ಪುತ್ರ! ಹಿಂದೆ ದ್ವೈತವನದಲ್ಲಿ ನೀರಿಗಾಗಿ ನಿನ್ನ ಪರಾಕ್ರಾಂತ ಸಹೋದರರು ಹತರಾದಾಗ ನಾನು ನಿನ್ನನ್ನು ಪರೀಕ್ಷಿಸಿದ್ದೆ.
17003019a ಭೀಮಾರ್ಜುನೌ ಪರಿತ್ಯಜ್ಯ ಯತ್ರ ತ್ವಂ ಭ್ರಾತರಾವುಭೌ।
17003019c ಮಾತ್ರೋಃ ಸಾಮ್ಯಮಭೀಪ್ಸನ್ವೈ ನಕುಲಂ ಜೀವಮಿಚ್ಚಸಿ।।
ಮಾತೆಯರಲ್ಲಿ ಸಾಮ್ಯತೆಯನ್ನು ಬಯಸಿದ ನೀನು ನಿನ್ನ ಇಬ್ಬರು ಸಹೋದರರು ಭೀಮಾರ್ಜುನರನ್ನು ಬಿಟ್ಟು ನಕುಲನು ಜೀವಿತನಾಗಲಿ ಎಂದು ಬಯಸಿದೆ.
17003020a ಅಯಂ ಶ್ವಾ ಭಕ್ತ ಇತ್ಯೇವ ತ್ಯಕ್ತೋ ದೇವರಥಸ್ತ್ವಯಾ।
17003020c ತಸ್ಮಾತ್ಸ್ವರ್ಗೇ ನ ತೇ ತುಲ್ಯಃ ಕಶ್ಚಿದಸ್ತಿ ನರಾಧಿಪ।।
ಈ ನಾಯಿಯು ಭಕ್ತನೆಂದು ನೀನು ದೇವರಥವನ್ನು ತೊರೆದೆ. ನರಾಧಿಪ! ಆದುದರಿಂದ ಸ್ವರ್ಗದಲ್ಲಿ ಯಾರೂ ನಿನ್ನ ತುಲ್ಯರಾದವರು ಇಲ್ಲ!
17003021a ಅತಸ್ತವಾಕ್ಷಯಾ ಲೋಕಾಃ ಸ್ವಶರೀರೇಣ ಭಾರತ।
17003021c ಪ್ರಾಪ್ತೋಽಸಿ ಭರತಶ್ರೇಷ್ಠ ದಿವ್ಯಾಂ ಗತಿಮನುತ್ತಮಾಮ್।।
ಭಾರತ! ಭರತಶ್ರೇಷ್ಠ! ಆದುದರಿಂದ ನೀನು ನಿನ್ನದೇ ಶರೀರದಲ್ಲಿ ಅಕ್ಷಯ ಲೋಕಗಳನ್ನೂ ದಿವ್ಯ ಅನುತ್ತಮ ಗತಿಯನ್ನೂ ಹೊಂದುತ್ತೀಯೆ.”
17003022a ತತೋ ಧರ್ಮಶ್ಚ ಶಕ್ರಶ್ಚ ಮರುತಶ್ಚಾಶ್ವಿನಾವಪಿ।
17003022c ದೇವಾ ದೇವರ್ಷಯಶ್ಚೈವ ರಥಮಾರೋಪ್ಯ ಪಾಂಡವಮ್।।
ಅನಂತರ ಧರ್ಮ, ಶಕ್ರ, ಮರುತರು, ಅಶ್ವಿನಿಯರು, ದೇವತೆಗಳು, ಮತ್ತು ದೇವರ್ಷಿಗಳು ಪಾಂಡವನನ್ನು ರಥಕ್ಕೇರಿಸಿದರು.
17003023a ಪ್ರಯಯುಃ ಸ್ವೈರ್ವಿಮಾನೈಸ್ತೇ ಸಿದ್ಧಾಃ ಕಾಮವಿಹಾರಿಣಃ।
17003023c ಸರ್ವೇ ವಿರಜಸಃ ಪುಣ್ಯಾಃ ಪುಣ್ಯವಾಗ್ಬುದ್ಧಿಕರ್ಮಿಣಃ।।
ಬೇಕಾದಲ್ಲಿ ಹೋಗ ಬಲ್ಲ ಆ ಸಿದ್ಧರೆಲ್ಲರೂ ತಮ್ಮ ತಮ್ಮ ವಿಮಾನಗಳಲ್ಲಿ ಪ್ರಯಾಣಿಸಿದರು. ಅವರೆಲ್ಲರೂ ಶುದ್ಧರೂ, ಪುಣ್ಯರೂ ಆಗಿದ್ದರು ಮತ್ತು ಪುಣ್ಯ ಮಾತು, ಯೋಚನೆ ಮತ್ತು ಕರ್ಮಗಳುಳ್ಳವರಾಗಿದ್ದರು.
17003024a ಸ ತಂ ರಥಂ ಸಮಾಸ್ಥಾಯ ರಾಜಾ ಕುರುಕುಲೋದ್ವಹಃ।
17003024c ಊರ್ಧ್ವಮಾಚಕ್ರಮೇ ಶೀಘ್ರಂ ತೇಜಸಾವೃತ್ಯ ರೋದಸೀ।।
ಕುರುಕುಲೋದ್ವಹ ರಾಜನು ಆ ರಥದಲ್ಲಿ ಕುಳಿತು ತನ್ನ ತೇಜಸ್ಸಿನಿಂದ ಆಕಾಶ-ಪೃಥ್ವಿಗಳನ್ನು ಬೆಳಗಿಸುತ್ತಾ ಶೀಘ್ರವಾಗಿ ಮೇಲೆ ಹೋದನು.
17003025a ತತೋ ದೇವನಿಕಾಯಸ್ಥೋ ನಾರದಃ ಸರ್ವಲೋಕವಿತ್।
17003025c ಉವಾಚೋಚ್ಛೈಸ್ತದಾ ವಾಕ್ಯಂ ಬೃಹದ್ವಾದೀ ಬೃಹತ್ತಪಾಃ।।
ಆಗ ದೇವತೆಗಳ ಮಧ್ಯದಲ್ಲಿದ್ದ ಸರ್ವಲೋಕಗಳನ್ನು ತಿಳಿದಿರುವ ಮಹಾವಾದೀ ಮಹಾತಪಸ್ವೀ ನಾರದನು ಉಚ್ಛಸ್ವರದಲ್ಲಿ ಈ ಮಾತನ್ನಾಡಿದನು:
17003026a ಯೇಽಪಿ ರಾಜರ್ಷಯಃ ಸರ್ವೇ ತೇ ಚಾಪಿ ಸಮುಪಸ್ಥಿತಾಃ।
17003026c ಕೀರ್ತಿಂ ಪ್ರಚ್ಚಾದ್ಯ ತೇಷಾಂ ವೈ ಕುರುರಾಜೋಽಧಿತಿಷ್ಠತಿ।।
“ಈ ಕುರುರಾಜನು ಈ ಮೊದಲು ಇಲ್ಲಿಗೆ ಆಗಮಿಸಿದ್ದ ಅ ಎಲ್ಲ ರಾಜರ್ಷಿಗಳ ಕೀರ್ತಿಯನ್ನು ಮರೆಸಿದ್ದಾನೆ.
17003027a ಲೋಕಾನಾವೃತ್ಯ ಯಶಸಾ ತೇಜಸಾ ವೃತ್ತಸಂಪದಾ।
17003027c ಸ್ವಶರೀರೇಣ ಸಂಪ್ರಾಪ್ತಂ ನಾನ್ಯಂ ಶುಶ್ರುಮ ಪಾಂಡವಾತ್।।
ತನ್ನ ನಡತೆಯಿಂದ ಸಂಪಾದಿಸಿದ ತೇಜಸ್ಸು ಮತ್ತು ಯಶಸ್ಸಿನಿಂದ ಇವನು ಲೋಕಗಳನ್ನೇ ತುಂಬಿಸಿಬಿಟ್ಟಿದ್ದಾನೆ. ಪಾಂಡವನಲ್ಲದೇ ಬೇರೆ ಯಾರೂ ಸ್ವಶರೀರದಿಂದ ಇವೆಲ್ಲವನ್ನೂ ಸಂಪಾದಿಸಿದುದನ್ನು ನಾನು ಕೇಳಿಲ್ಲ!”
17003028a ನಾರದಸ್ಯ ವಚಃ ಶ್ರುತ್ವಾ ರಾಜಾ ವಚನಮಬ್ರವೀತ್।
17003028c ದೇವಾನಾಮಂತ್ರ್ಯ ಧರ್ಮಾತ್ಮಾ ಸ್ವಪಕ್ಷಾಂಶ್ಚೈವ ಪಾರ್ಥಿವಾನ್।।
ನಾರದನ ಮಾತನ್ನು ಕೇಳಿ ಧರ್ಮಾತ್ಮ ರಾಜನು ದೇವತೆಗಳಿಗೂ ಮತ್ತು ತನ್ನ ಪಕ್ಷದಲ್ಲಿದ್ದ ಪಾರ್ಥಿವರಿಗೂ ವಂದಿಸಿ ಹೀಗೆ ಹೇಳಿದನು:
17003029a ಶುಭಂ ವಾ ಯದಿ ವಾ ಪಾಪಂ ಭ್ರಾತೄಣಾಂ ಸ್ಥಾನಮದ್ಯ ಮೇ।
17003029c ತದೇವ ಪ್ರಾಪ್ತುಮಿಚ್ಚಾಮಿ ಲೋಕಾನನ್ಯಾನ್ನ ಕಾಮಯೇ।।
“ಶುಭವಾಗಿರಲಿ ಅಥವಾ ಪಾಪದ್ದಾಗಿರಲಿ ಇಂದು ನಾನು ನನ್ನ ಸಹೋದರರು ಎಲ್ಲಿದ್ದಾರೋ ಅದೇ ಲೋಕವನ್ನು ಪಡೆಯಲು ಇಚ್ಛಿಸುತ್ತೇನೆ. ಬೇರಾವ ಲೋಕವನ್ನೂ ಬಯಸುವುದಿಲ್ಲ!”
17003030a ರಾಜ್ಞಸ್ತು ವಚನಂ ಶ್ರುತ್ವಾ ದೇವರಾಜಃ ಪುರಂದರಃ।
17003030c ಆನೃಶಂಸ್ಯಸಮಾಯುಕ್ತಂ ಪ್ರತ್ಯುವಾಚ ಯುಧಿಷ್ಠಿರಮ್।।
ರಾಜನ ಮಾತನ್ನು ಕೇಳಿ ದೇವರಾಜ ಪುರಂದರನು ಈ ದಯಾಯುಕ್ತ ಮಾತುಗಳನ್ನು ಯುಧಿಷ್ಠಿರನಿಗೆ ಹೇಳಿದನು:
17003031a ಸ್ಥಾನೇಽಸ್ಮಿನ್ವಸ ರಾಜೇಂದ್ರ ಕರ್ಮಭಿರ್ನಿರ್ಜಿತೇ ಶುಭೈಃ।
17003031c ಕಿಂ ತ್ವಂ ಮಾನುಷ್ಯಕಂ ಸ್ನೇಹಮದ್ಯಾಪಿ ಪರಿಕರ್ಷಸಿ।।
“ರಾಜನ್! ನಿನ್ನ ಕರ್ಮಗಳಿಂದ ಗಳಿಸಿರುವ ಈ ಶುಭ ಸ್ಥಾನಗಳಲ್ಲಿ ವಾಸಿಸು. ಈಗಲೂ ಕೂಡ ಮಾನುಷ್ಯಕ ಸ್ನೇಹದಿಂದ ಸೆಳೆಯಲ್ಪಡುತ್ತಿದ್ದೀಯೆ!
17003032a ಸಿದ್ಧಿಂ ಪ್ರಾಪ್ತೋಽಸಿ ಪರಮಾಂ ಯಥಾ ನಾನ್ಯಃ ಪುಮಾನ್ಕ್ವ ಚಿತ್।
17003032c ನೈವ ತೇ ಭ್ರಾತರಃ ಸ್ಥಾನಂ ಸಂಪ್ರಾಪ್ತಾಃ ಕುರುನಂದನ।।
ಬೇರೆ ಯಾವ ಪುರುಷನೂ ಎಂದೂ ಗಳಿಸಿರದ ಪರಮ ಸಿದ್ಧಿಯನ್ನು ನೀನು ಗಳಿಸಿರುವೆ. ಕುರುನಂದನ! ನಿನ್ನ ಭ್ರಾತರಿಗೆ ಈ ಸ್ಥಾನವು ದೊರಕಿಲ್ಲ!
17003033a ಅದ್ಯಾಪಿ ಮಾನುಷೋ ಭಾವಃ ಸ್ಪೃಶತೇ ತ್ವಾಂ ನರಾಧಿಪ।
17003033c ಸ್ವರ್ಗೋಽಯಂ ಪಶ್ಯ ದೇವರ್ಷೀನ್ಸಿದ್ಧಾಂಶ್ಚ ತ್ರಿದಿವಾಲಯಾನ್।।
ನರಾಧಿಪ! ಈಗಲೂ ಮಾನುಷ ಭಾವವು ನಿನ್ನನ್ನು ಸ್ಪರ್ಶಿಸುತ್ತಿವೆ. ಇದು ಸ್ವರ್ಗ! ದೇವರ್ಷಿಗಳ ಮತ್ತು ಸಿದ್ಧರ ಆಲಯವಾದ ಈ ತ್ರಿದಿವವನ್ನು ನೋಡು!”
17003034a ಯುಧಿಷ್ಠಿರಸ್ತು ದೇವೇಂದ್ರಮೇವಂವಾದಿನಮೀಶ್ವರಮ್।
17003034c ಪುನರೇವಾಬ್ರವೀದ್ಧೀಮಾನಿದಂ ವಚನಮರ್ಥವತ್।।
ದೇವತೆಗಳ ಈಶ್ವರ ಇಂದ್ರನು ಹೀಗೆ ಹೇಳುತ್ತಿದ್ದರೂ ಯುಧಿಷ್ಠಿರನು ಪುನಃ ಈ ಬುದ್ಧಿಪೂರ್ವಕ ಮಾತನ್ನಾಡಿದನು:
17003035a ತೈರ್ವಿನಾ ನೋತ್ಸಹೇ ವಸ್ತುಮಿಹ ದೈತ್ಯನಿಬರ್ಹಣ।
17003035c ಗಂತುಮಿಚ್ಚಾಮಿ ತತ್ರಾಹಂ ಯತ್ರ ಮೇ ಭ್ರಾತರೋ ಗತಾಃ।।
17003036a ಯತ್ರ ಸಾ ಬೃಹತೀ ಶ್ಯಾಮಾ ಬುದ್ಧಿಸತ್ತ್ವಗುಣಾನ್ವಿತಾ।
17003036c ದ್ರೌಪದೀ ಯೋಷಿತಾಂ ಶ್ರೇಷ್ಠಾ ಯತ್ರ ಚೈವ ಪ್ರಿಯಾ ಮಮ।।
“ದೈತ್ಯಸಂಹಾರೀ! ಅವರಿಲ್ಲದೇ ನನಗೆ ಇಲ್ಲಿ ವಾಸಿಸಲು ಉತ್ಸಾಹವಿಲ್ಲ! ನನ್ನ ಸಹೋದರರು ಎಲ್ಲಿಗೆ ಹೋಗಿದ್ದಾರೋ ಮತ್ತು ಶ್ಯಾಮೆ, ಬುದ್ಧಿಸತ್ತ್ವಗುಣಾನ್ವಿತೆ, ಸ್ತ್ರೀಯರಲ್ಲಿ ಶ್ರೇಷ್ಠೆ, ನನ್ನ ಪ್ರಿಯೆ ದ್ರೌಪದಿಯು ಎಲ್ಲಿದ್ದಾಳೋ ಅಲ್ಲಿಗೆ ಹೋಗಲು ಬಯಸುತ್ತೇನೆ.””
ಸಮಾಪ್ತಿ
ಇತಿ ಶ್ರೀಮಹಾಭಾರತೇ ಮಹಾಪ್ರಸ್ಥಾನಿಕೇ ಪರ್ವಣಿ ಯುಧಿಷ್ಠಿರಸ್ವರ್ಗಾರೋಹೇ ತೃತೀಯೋಽಧ್ಯಾಯಃ ।।
ಇದು ಶ್ರೀಮಹಾಭಾರತದಲ್ಲಿ ಮಹಾಪ್ರಸ್ಥಾನಿಕಪರ್ವದಲ್ಲಿ ಯುಧಿಷ್ಠಿರಸ್ವರ್ಗಾರೋಹ ಎನ್ನುವ ಮೂರನೇ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ಮಹಾಪ್ರಸ್ಥಾನಿಕ ಪರ್ವಃ।
ಇದು ಶ್ರೀ ಮಹಾಭಾರತದಲ್ಲಿ ಮಹಾಪ್ರಸ್ಥಾನಿಕ ಪರ್ವವು।
ಇದೂವರೆಗಿನ ಒಟ್ಟು ಮಹಾಪರ್ವಗಳು – 17/18, ಉಪಪರ್ವಗಳು-94/100, ಅಧ್ಯಾಯಗಳು-1990/1995, ಶ್ಲೋಕಗಳು-73590/73784