002: ದ್ರೌಪದ್ಯಾದಿಪತನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಮಹಾಪ್ರಸ್ಥಾನಿಕ ಪರ್ವ

ಮಹಾಪ್ರಸ್ಥಾನಿಕ ಪರ್ವ

ಅಧ್ಯಾಯ 2

ಸಾರ

ಭೀಮಾದಿಗಳ ಪತನ (1-26).

17002001 ವೈಶಂಪಾಯನ ಉವಾಚ।
17002001a ತತಸ್ತೇ ನಿಯತಾತ್ಮಾನ ಉದೀಚೀಂ ದಿಶಮಾಸ್ಥಿತಾಃ।
17002001c ದದೃಶುರ್ಯೋಗಯುಕ್ತಾಶ್ಚ ಹಿಮವಂತಂ ಮಹಾಗಿರಿಮ್।।

ವೈಶಂಪಾಯನನು ಹೇಳಿದನು: “ನಿಯತಾತ್ಮರೂ ಯೋಗಯುಕ್ತರೂ ಆಗಿ ಉತ್ತರ ದಿಕ್ಕಿನಲ್ಲಿ ಪ್ರಯಾಣಮಾಡುತ್ತಿದ್ದ ಅವರು ಮಹಾಗಿರಿ ಹಿಮಾಲಯವನ್ನು ಕಂಡರು.

17002002a ತಂ ಚಾಪ್ಯತಿಕ್ರಮಂತಸ್ತೇ ದದೃಶುರ್ವಾಲುಕಾರ್ಣವಮ್।
17002002c ಅವೈಕ್ಷಂತ ಮಹಾಶೈಲಂ ಮೇರುಂ ಶಿಖರಿಣಾಂ ವರಮ್।।

ಅದನ್ನೂ ಅತಿಕ್ರಮಿಸಿ ಹೋದ ಅವರು ಮರಳಿನ ಮರುಭೂಮಿಯೊಂದನ್ನು ನೋಡಿದರು. ಅದಕ್ಕಿಂತಲೂ ಆಚೆ ಮಹಾಶೈಲ, ಪರ್ವತಶ್ರೇಷ್ಠ ಮೇರುವನ್ನು ನೋಡಿದರು.

17002003a ತೇಷಾಂ ತು ಗಚ್ಚತಾಂ ಶೀಘ್ರಂ ಸರ್ವೇಷಾಂ ಯೋಗಧರ್ಮಿಣಾಮ್।
17002003c ಯಾಜ್ಞಸೇನೀ ಭ್ರಷ್ಟಯೋಗಾ ನಿಪಪಾತ ಮಹೀತಲೇ।।

ಆ ಎಲ್ಲ ಯೋಗಧರ್ಮಿಗಳೂ ಹಾಗೆ ಶೀಘ್ರವಾಗಿ ಹೋಗುತ್ತಿರಲು, ಯೋಗಭ್ರಷ್ಟಳಾದ ಯಾಜ್ಞಸೇನಿಯು ಕೆಳಕ್ಕೆ ಬಿದ್ದಳು.

17002004a ತಾಂ ತು ಪ್ರಪತಿತಾಂ ದೃಷ್ಟ್ವಾ ಭೀಮಸೇನೋ ಮಹಾಬಲಃ।
17002004c ಉವಾಚ ಧರ್ಮರಾಜಾನಂ ಯಾಜ್ಞಸೇನೀಮವೇಕ್ಷ್ಯ ಹ।।

ಹಾಗೆ ಕೆಳಕ್ಕೆ ಬಿದ್ದ ಯಾಜ್ಞಸೇನಿಯನ್ನು ನೋಡಿ ಮಹಾಬಲ ಭೀಮಸೇನನು ಧರ್ಮರಾಜನಿಗೆ ಇಂತೆಂದನು:

17002005a ನಾಧರ್ಮಶ್ಚರಿತಃ ಕಶ್ಚಿದ್ರಾಜಪುತ್ರ್ಯಾ ಪರಂತಪ।
17002005c ಕಾರಣಂ ಕಿಂ ನು ತದ್ರಾಜನ್ಯತ್ಕೃಷ್ಣಾ ಪತಿತಾ ಭುವಿ।।

“ಪರಂತಪ! ರಾಜಪುತ್ರಿಯು ಎಂದೂ ಅಧರ್ಮದಿಂದ ನಡೆದುಕೊಂಡಿರಲಿಲ್ಲ. ರಾಜನ್! ಆದರೂ ಕೃಷ್ಣೆಯು ಏಕೆ ಬಿದ್ದಳು?”

17002006 ಯುಧಿಷ್ಠಿರ ಉವಾಚ।
17002006a ಪಕ್ಷಪಾತೋ ಮಹಾನಸ್ಯಾ ವಿಶೇಷೇಣ ಧನಂಜಯೇ।
17002006c ತಸ್ಯೈತತ್ಫಲಮದ್ಯೈಷಾ ಭುಂಕ್ತೇ ಪುರುಷಸತ್ತಮ।।

ಯುಧಿಷ್ಠಿರನು ಹೇಳಿದನು: “ಧನಂಜಯನಲ್ಲಿ ವಿಶೇಷವಾಗಿ ಇವಳ ಪಕ್ಷಪಾತವಿತ್ತು. ಪುರುಷಸತ್ತಮ! ಅದರ ಫಲವನ್ನೇ ಇಂದು ಅವಳು ಅನುಭವಿಸಿದ್ದಾಳೆ.””

17002007 ವೈಶಂಪಾಯನ ಉವಾಚ।
17002007a ಏವಮುಕ್ತ್ವಾನವೇಕ್ಷ್ಯೈನಾಂ ಯಯೌ ಧರ್ಮಸುತೋ ನೃಪಃ।
17002007c ಸಮಾಧಾಯ ಮನೋ ಧೀಮಾನ್ಧರ್ಮಾತ್ಮಾ ಪುರುಷರ್ಷಭಃ।।

ವೈಶಂಪಾಯನನು ಹೇಳಿದನು: “ಹೀಗೆ ಹೇಳಿ ಅವಳನ್ನು ನೋಡದೇ ಧರ್ಮಸುತ ನೃಪ ಧೀಮಾನ್ ಧರ್ಮಾತ್ಮ ಪುರುಷರ್ಷಭನು ಮನಸ್ಸನ್ನು ಕೇಂದ್ರೀಕರಿಸಿಟ್ಟುಕೊಂಡು ಮುಂದೆ ಹೋದನು.

17002008a ಸಹದೇವಸ್ತತೋ ಧೀಮಾನ್ನಿಪಪಾತ ಮಹೀತಲೇ।
17002008c ತಂ ಚಾಪಿ ಪತಿತಂ ದೃಷ್ಟ್ವಾ ಭೀಮೋ ರಾಜಾನಮಬ್ರವೀತ್।।

ಅನಂತರ ಧೀಮಾನ್ ಸಹದೇವನು ಮಹೀತಲದಲ್ಲಿ ಬಿದ್ದನು. ಅವನೂ ಬಿದ್ದುದನ್ನು ಕಂಡ ಭೀಮನು ರಾಜನಿಗೆ ಹೇಳಿದನು:

17002009a ಯೋಽಯಮಸ್ಮಾಸು ಸರ್ವೇಷು ಶುಶ್ರೂಷುರನಹಂಕೃತಃ।
17002009c ಸೋಽಯಂ ಮಾದ್ರವತೀಪುತ್ರಃ ಕಸ್ಮಾನ್ನಿಪತಿತೋ ಭುವಿ।।

“ಇವನು ಅಹಂಕಾರವಿಲ್ಲದೇ ನಮ್ಮೆಲ್ಲರ ಶುಶ್ರೂಷೆಮಾಡಿದನು. ಏಕೆ ಈ ಮಾದ್ರವತೀಪುತ್ರನು ಭೂಮಿಯ ಮೇಲೆ ಬಿದ್ದಿದ್ದಾನೆ?”

17002010 ಯುಧಿಷ್ಠಿರ ಉವಾಚ।
17002010a ಆತ್ಮನಃ ಸದೃಶಂ ಪ್ರಾಜ್ಞಂ ನೈಷೋಽಮನ್ಯತ ಕಂ ಚನ।
17002010c ತೇನ ದೋಷೇಣ ಪತಿತಸ್ತಸ್ಮಾದೇಷ ನೃಪಾತ್ಮಜಃ।।

ಯುಧಿಷ್ಠಿರನು ಹೇಳಿದನು: “ಇವನು ತನಗೆ ಸಮಾನ ಪ್ರಾಜ್ಞನು ಬೇರೆ ಯಾರೂ ಇಲ್ಲವೆಂದು ಅಭಿಪ್ರಾಯಪಟ್ಟಿದ್ದನು. ಆ ದೋಷದಿಂದಲೇ ಈ ನೃಪತಾತ್ಮಜನು ಬಿದ್ದಿದ್ದಾನೆ.””

17002011 ವೈಶಂಪಾಯನ ಉವಾಚ।
17002011a ಇತ್ಯುಕ್ತ್ವಾ ತು ಸಮುತ್ಸೃಜ್ಯ ಸಹದೇವಂ ಯಯೌ ತದಾ।
17002011c ಭ್ರಾತೃಭಿಃ ಸಹ ಕೌಂತೇಯಃ ಶುನಾ ಚೈವ ಯುಧಿಷ್ಠಿರಃ।।

ವೈಶಂಪಾಯನನು ಹೇಳಿದನು: “ಹೀಗೆ ಹೇಳಿ ಸಹದೇವನನ್ನು ಅಲ್ಲಿಯೇ ಬಿಟ್ಟು ಸಹೋದರರು ಮತ್ತು ನಾಯಿಯೊಂದಿಗೆ ಕೌಂತೇಯ ಯುಧಿಷ್ಠಿರನು ಮುಂದುವರೆದನು.

17002012a ಕೃಷ್ಣಾಂ ನಿಪತಿತಾಂ ದೃಷ್ಟ್ವಾ ಸಹದೇವಂ ಚ ಪಾಂಡವಮ್।
17002012c ಆರ್ತೋ ಬಂಧುಪ್ರಿಯಃ ಶೂರೋ ನಕುಲೋ ನಿಪಪಾತ ಹ।।

ಕೃಷ್ಣೆ ಮತ್ತು ಪಾಂಡವ ಸಹದೇವರು ಬಿದ್ದುದನ್ನು ನೋಡಿ ಆರ್ತನಾದ ಬಂಧುಪ್ರಿಯ ಶೂರ ನಕುಲನೂ ಬಿದ್ದನು.

17002013a ತಸ್ಮಿನ್ನಿಪತಿತೇ ವೀರೇ ನಕುಲೇ ಚಾರುದರ್ಶನೇ।
17002013c ಪುನರೇವ ತದಾ ಭೀಮೋ ರಾಜಾನಮಿದಮಬ್ರವೀತ್।।

ಆ ಸುಂದರ ವೀರ ನಕುಲನು ಬೀಳಲು ಭೀಮನು ಪುನಃ ರಾಜನಿಗೆ ಹೇಳಿದನು:

17002014a ಯೋಽಯಮಕ್ಷತಧರ್ಮಾತ್ಮಾ ಭ್ರಾತಾ ವಚನಕಾರಕಃ।
17002014c ರೂಪೇಣಾಪ್ರತಿಮೋ ಲೋಕೇ ನಕುಲಃ ಪತಿತೋ ಭುವಿ।।

“ಈ ಭ್ರಾತನು ಧರ್ಮಾತ್ಮನಾಗಿದ್ದು ಧರ್ಮದಿಂದ ಸ್ವಲ್ಪವೂ ಚ್ಯುತನಾಗಿರಲಿಲ್ಲ. ಹೇಳಿದ್ದನ್ನು ಮಾಡುತ್ತಿದ್ದನು. ಲೋಕದಲ್ಲಿ ಅಪ್ರತಿಮ ರೂಪವಂತನಾಗಿದ್ದನು. ಅಂಥಹ ನಕುಲನು ಭೂಮಿಯ ಮೇಲೆ ಬಿದ್ದಿದ್ದಾನೆ.”

17002015a ಇತ್ಯುಕ್ತೋ ಭೀಮಸೇನೇನ ಪ್ರತ್ಯುವಾಚ ಯುಧಿಷ್ಠಿರಃ।
17002015c ನಕುಲಂ ಪ್ರತಿ ಧರ್ಮಾತ್ಮಾ ಸರ್ವಬುದ್ಧಿಮತಾಂ ವರಃ।।

ಭೀಮಸೇನನು ಹೀಗೆ ಹೇಳಲು ಧರ್ಮಾತ್ಮ ಸರ್ವಬುದ್ಧಿವಂತರಲ್ಲಿ ಶ್ರೇಷ್ಠ ಯುಧಿಷ್ಠಿರನು ನಕುಲನ ಕುರಿತು ಹೀಗೆ ಉತ್ತರಿಸಿದನು:

17002016a ರೂಪೇಣ ಮತ್ಸಮೋ ನಾಸ್ತಿ ಕಶ್ಚಿದಿತ್ಯಸ್ಯ ದರ್ಶನಮ್।
17002016c ಅಧಿಕಶ್ಚಾಹಮೇವೈಕ ಇತ್ಯಸ್ಯ ಮನಸಿ ಸ್ಥಿತಮ್।।

“ರೂಪದಲ್ಲಿ ತನ್ನ ಸಮನಾಗಿರುವವರು ಯಾರೂ ಇಲ್ಲವೆಂದೂ, ರೂಪದಲ್ಲಿ ತಾನೊಬ್ಬನೇ ಅಧಿಕನೆಂದೂ ಇವನ ನಂಬಿಕೆಯಾಗಿತ್ತು.

17002017a ನಕುಲಃ ಪತಿತಸ್ತಸ್ಮಾದಾಗಚ್ಚ ತ್ವಂ ವೃಕೋದರ।
17002017c ಯಸ್ಯ ಯದ್ವಿಹಿತಂ ವೀರ ಸೋಽವಶ್ಯಂ ತದುಪಾಶ್ನುತೇ।।

ಆದುದರಿಂದ ನಕುಲನು ಬಿದ್ದಿದ್ದಾನೆ. ಬಾ ವೃಕೋದರ! ವೀರ! ಯಾರಿಗೆ ಏನು ವಿಧಿವಿಹಿತವಾಗಿದೆಯೋ ಅದನ್ನು ಅವನು ಅವಶ್ಯವಾಗಿ ಪಡೆಯುತ್ತಾನೆ!”

17002018a ತಾಂಸ್ತು ಪ್ರಪತಿತಾನ್ದೃಷ್ಟ್ವಾ ಪಾಂಡವಃ ಶ್ವೇತವಾಹನಃ।
17002018c ಪಪಾತ ಶೋಕಸಂತಪ್ತಸ್ತತೋಽನು ಪರವೀರಹಾ।।

ಅವರು ಕೆಳಗೆ ಬಿದ್ದುದನ್ನು ನೋಡಿ ಪಾಂಡವ ಶ್ವೇತವಾಹನ ಪರವೀರಹ ಅರ್ಜುನನೂ ಶೋಕಸಂತಪ್ತನಾಗಿ ಕೆಳಗೆ ಬಿದ್ದನು.

17002019a ತಸ್ಮಿಂಸ್ತು ಪುರುಷವ್ಯಾಘ್ರೇ ಪತಿತೇ ಶಕ್ರತೇಜಸಿ।
17002019c ಮ್ರಿಯಮಾಣೇ ದುರಾಧರ್ಷೇ ಭೀಮೋ ರಾಜಾನಮಬ್ರವೀತ್।।

ಆ ಶಕ್ರತೇಜಸ್ವಿ ದುರಾಧರ್ಷ ಪುರುಷವ್ಯಾಘ್ರನೂ ಸತ್ತು ಬೀಳಲು ಭೀಮನು ರಾಜನಿಗೆ ಹೇಳಿದನು:

17002020a ಅನೃತಂ ನ ಸ್ಮರಾಮ್ಯಸ್ಯ ಸ್ವೈರೇಷ್ವಪಿ ಮಹಾತ್ಮನಃ।
17002020c ಅಥ ಕಸ್ಯ ವಿಕಾರೋಽಯಂ ಯೇನಾಯಂ ಪತಿತೋ ಭುವಿ।।

“ಈ ಮಹಾತ್ಮನೂ ಅನೃತವಾಡಿದುದು ನನ್ನ ನೆನಪಿಗೆ ಬರುತ್ತಿಲ್ಲ. ಅವನು ಏಕೆ ಈ ರೀತಿಯ ವಿಕಾರನಾಗಿ ಭೂಮಿಯಮೇಲೆ ಬಿದ್ದನು?”

17002021 ಯುಧಿಷ್ಠಿರ ಉವಾಚ।
17002021a ಏಕಾಹ್ನಾ ನಿರ್ದಹೇಯಂ ವೈ ಶತ್ರೂನಿತ್ಯರ್ಜುನೋಽಬ್ರವೀತ್।
17002021c ನ ಚ ತತ್ಕೃತವಾನೇಷ ಶೂರಮಾನೀ ತತೋಽಪತತ್।।

ಯುಧಿಷ್ಠಿರನು ಹೇಳಿದನು: “ಒಂದೇ ದಿನದಲ್ಲಿ ನಾನು ಶತ್ರುಗಳನ್ನು ಜಯಿಸುತ್ತೇನೆ!” ಎಂದು ಅರ್ಜುನನು ಹೇಳಿದ್ದನು. ಆ ಶೂರಮಾನಿನಿಯು ಹಾಗೆ ಮಾಡದೇ ಇದ್ದುದರಿಂದ ಈಗ ಬಿದ್ದಿದ್ದಾನೆ.

17002022a ಅವಮೇನೇ ಧನುರ್ಗ್ರಾಹಾನೇಷ ಸರ್ವಾಂಶ್ಚ ಫಲ್ಗುನಃ।
17002022c ಯಥಾ ಚೋಕ್ತಂ ತಥಾ ಚೈವ ಕರ್ತವ್ಯಂ ಭೂತಿಮಿಚ್ಚತಾ।।

ಫಲ್ಗುನನು ಧನುರ್ಧಾರಿಗಳೆಲ್ಲರನ್ನೂ ಕೀಳಾಗಿ ಕಾಣುತ್ತಿದ್ದನು. ವೃದ್ಧಿಯನ್ನು ಬಯಸಿದವನು ತಾನು ಹೇಳಿದಂತೆ ಮಾಡಬೇಕಾಗುತ್ತದೆ.””

17002023 ವೈಶಂಪಾಯನ ಉವಾಚ।
17002023a ಇತ್ಯುಕ್ತ್ವಾ ಪ್ರಸ್ಥಿತೋ ರಾಜಾ ಭೀಮೋಽಥ ನಿಪಪಾತ ಹ।
17002023c ಪತಿತಶ್ಚಾಬ್ರವೀದ್ಭೀಮೋ ಧರ್ಮರಾಜಂ ಯುಧಿಷ್ಠಿರಮ್।।

ವೈಶಂಪಾಯನನು ಹೇಳಿದನು: “ಹೀಗೆ ಹೇಳಿ ರಾಜನು ಮುಂದುವರೆಯಲು ಭೀಮನೂ ಕೆಳಗೆ ಬಿದ್ದನು. ಕೆಳಗೆ ಬಿದ್ದ ಭೀಮನು ಧರ್ಮರಾಜ ಯುಧಿಷ್ಠಿರನಿಗೆ ಹೇಳಿದನು:

17002024a ಭೋ ಭೋ ರಾಜನ್ನವೇಕ್ಷಸ್ವ ಪತಿತೋಽಹಂ ಪ್ರಿಯಸ್ತವ।
17002024c ಕಿಂನಿಮಿತ್ತಂ ಚ ಪತನಂ ಬ್ರೂಹಿ ಮೇ ಯದಿ ವೇತ್ಥ ಹ।।

“ಭೋ ಭೋ! ರಾಜನ್! ನಿನ್ನ ಪ್ರಿಯನಾದ ನಾನೂ ಬಿದ್ದಿದ್ದೇನೆ. ನಿನಗೆ ತಿಳಿದಿದ್ದರೆ ಯಾವ ಕಾರಣದಿಂದ ನಾನು ಬಿದ್ದೆ ಎನ್ನುವುದನ್ನೂ ಹೇಳು!”

17002025 ಯುಧಿಷ್ಠಿರ ಉವಾಚ।
17002025a ಅತಿಭುಕ್ತಂ ಚ ಭವತಾ ಪ್ರಾಣೇನ ಚ ವಿಕತ್ಥಸೇ।
17002025c ಅನವೇಕ್ಷ್ಯ ಪರಂ ಪಾರ್ಥ ತೇನಾಸಿ ಪತಿತಃ ಕ್ಷಿತೌ।।

ಯುಧಿಷ್ಠಿರನು ಹೇಳಿದನು: “ನೀನು ತುಂಬಾ ತಿನ್ನುತ್ತಿದ್ದೆ ಮತ್ತು ನಿನ್ನ ಶಕ್ತಿಯ ಕುರಿತು ಕೊಚ್ಚಿಕೊಳ್ಳುತ್ತಿದ್ದೆ. ಪಾರ್ಥ! ಇತರರನ್ನು ಕೀಳಾಗಿ ಕಾಣುತ್ತಿದ್ದೆ. ಇದರಿಂದಾಗಿ ನೀನು ಭೂಮಿಯಲ್ಲಿ ಬಿದ್ದಿದ್ದೀಯೆ!””

17002026 ವೈಶಂಪಾಯನ ಉವಾಚ।
17002026a ಇತ್ಯುಕ್ತ್ವಾ ತಂ ಮಹಾಬಾಹುರ್ಜಗಾಮಾನವಲೋಕಯನ್।
17002026c ಶ್ವಾ ತ್ವೇಕೋಽನುಯಯೌ ಯಸ್ತೇ ಬಹುಶಃ ಕೀರ್ತಿತೋ ಮಯಾ।।

ವೈಶಂಪಾಯನನು ಹೇಳಿದನು: “ಹೀಗೆ ಹೇಳಿ ಆ ಮಹಾಬಾಹುವು ತಿರುಗಿ ನೋಡದೇ ಮುಂದುವರೆದನು. ನಾನು ಮೊದಲೇ ಬಹಳವಾಗಿ ಹೇಳಿದ್ದಂತೆ ಈಗ ಆ ನಾಯಿಯೊಂದೇ ಅವನನ್ನು ಅನುಸರಿಸಿ ಹೋಗುತ್ತಿತ್ತು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಮಹಾಪ್ರಸ್ಥಾನಿಕೇ ಪರ್ವಣಿ ದ್ರೌಪದ್ಯಾದಿಪತನೇ ದ್ವಿತೀಯೋಽಧ್ಯಾಯಃ ।।
ಇದು ಶ್ರೀಮಹಾಭಾರತದಲ್ಲಿ ಮಹಾಪ್ರಸ್ಥಾನಿಕಪರ್ವದಲ್ಲಿ ದ್ರೌಪದ್ಯಾದಿಪತನ ಎನ್ನುವ ಎರಡನೇ ಅಧ್ಯಾಯವು.