ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಮಹಾಪ್ರಸ್ಥಾನಿಕ ಪರ್ವ
ಮಹಾಪ್ರಸ್ಥಾನಿಕ ಪರ್ವ
ಅಧ್ಯಾಯ 1
ಸಾರ
ಹಸ್ತಿನಾಪುರದಲ್ಲಿ ಪರಿಕ್ಷಿತನನ್ನು ಅಭಿಷೇಕಿಸಿ ಪಾಂಡವರು ದ್ರೌಪದಿಯೊಂದಿಗೆ ವಲ್ಕಲಗಳನ್ನು ಧರಿಸಿ ಮಹಾಪ್ರಸ್ಥಾನವನ್ನು ಕೈಗೊಂಡಿದುದು (1-26). ಮಾರ್ಗದಲ್ಲಿ ಅವರನ್ನು ಅಗ್ನಿಯು ತಡೆದು ಗಾಂಡೀವ-ಬತ್ತಳಿಕೆಗಳನ್ನು ವಿಸರ್ಜಿಸಬೇಕೆಂದು ಕೇಳಲು ಅರ್ಜುನನು ಅವುಗಳನ್ನು ಸಮುದ್ರದಲ್ಲಿ ವಿಸರ್ಜಿಸಿದುದು (27-44).
17001001 ಜನಮೇಜಯ ಉವಾಚ।
17001001a ಏವಂ ವೃಷ್ಣ್ಯಂಧಕಕುಲೇ ಶ್ರುತ್ವಾ ಮೌಸಲಮಾಹವಮ್।
17001001c ಪಾಂಡವಾಃ ಕಿಮಕುರ್ವಂತ ತಥಾ ಕೃಷ್ಣೇ ದಿವಂ ಗತೇ।।
ಜನಮೇಜಯನು ಹೇಳಿದನು: “ವೃಷ್ಣಿ-ಅಂಧಕ ಕುಲಗಳಲ್ಲಿ ಈ ರೀತಿ ನಡೆದ ಮುಸುಲ ಯುದ್ಧದ ಕುರಿತು ಮತ್ತು ಕೃಷ್ಣನು ದಿವಂಗತನಾದುದನ್ನು ಕೇಳಿದ ಪಾಂಡವರು ಏನು ಮಾಡಿದರು?”
17001002 ವೈಶಂಪಾಯನ ಉವಾಚ।
17001002a ಶ್ರುತ್ವೈವ ಕೌರವೋ ರಾಜಾ ವೃಷ್ಣೀನಾಂ ಕದನಂ ಮಹತ್।
17001002c ಪ್ರಸ್ಥಾನೇ ಮತಿಮಾಧಾಯ ವಾಕ್ಯಮರ್ಜುನಮಬ್ರವೀತ್।।
ವೈಶಂಪಾಯನನು ಹೇಳಿದನು: “ವೃಷ್ಣಿಗಳ ಮಹಾ ಕದನದ ಕುರಿತು ಕೇಳುತ್ತಲೇ ಕೌರವ ರಾಜನು ಪ್ರಸ್ಥಾನದ ಕುರಿತು ನಿಶ್ಚಯಿಸಿ ಅರ್ಜುನನಿಗೆ ಇಂತೆಂದನು:
17001003a ಕಾಲಃ ಪಚತಿ ಭೂತಾನಿ ಸರ್ವಾಣ್ಯೇವ ಮಹಾಮತೇ।
17001003c ಕರ್ಮನ್ಯಾಸಮಹಂ ಮನ್ಯೇ ತ್ವಮಪಿ ದ್ರಷ್ಟುಮರ್ಹಸಿ।।
“ಮಹಾಮತೇ! ಕಾಲವು ಸರ್ವ ಭೂತಗಳನ್ನೂ ಬೇಯಿಸುತ್ತದೆ. ಕರ್ಮನ್ಯಾಸಮಾಡಬೇಕೆಂದು ನನಗನ್ನಿಸುತ್ತದೆ. ನೀನೂ ಕೂಡ ಇದರ ಕುರಿತು ಯೋಚಿಸಬೇಕಾಗಿದೆ.”
17001004a ಇತ್ಯುಕ್ತಃ ಸ ತು ಕೌಂತೇಯಃ ಕಾಲಃ ಕಾಲ ಇತಿ ಬ್ರುವನ್।
17001004c ಅನ್ವಪದ್ಯತ ತದ್ವಾಕ್ಯಂ ಭ್ರಾತುರ್ಜ್ಯೇಷ್ಠಸ್ಯ ವೀರ್ಯವಾನ್।।
ಇದನ್ನು ಕೇಳಿದ ವೀರ್ಯವಾನ್ ಕೌಂತೇಯನು “ಕಾಲವೇ ಕಾಲ!” ಎಂದು ಹೇಳುತ್ತಾ ಜ್ಯೇಷ್ಠ ಭ್ರಾತರನ ಆ ಮಾತನ್ನು ಒಪ್ಪಿಕೊಂಡನು.
17001005a ಅರ್ಜುನಸ್ಯ ಮತಂ ಜ್ಞಾತ್ವಾ ಭೀಮಸೇನೋ ಯಮೌ ತಥಾ।
17001005c ಅನ್ವಪದ್ಯಂತ ತದ್ವಾಕ್ಯಂ ಯದುಕ್ತಂ ಸವ್ಯಸಾಚಿನಾ।।
ಅರ್ಜುನನ ಮತವನ್ನು ಅರಿತ ಭೀಮಸೇನ ಮತ್ತು ಯಮಳರು ಸವ್ಯಸಾಚಿಯು ಆಡಿದ ಆ ಮಾತನ್ನು ಒಪ್ಪಿಕೊಂಡರು.
17001006a ತತೋ ಯುಯುತ್ಸುಮಾನಾಯ್ಯ ಪ್ರವ್ರಜನ್ಧರ್ಮಕಾಮ್ಯಯಾ।
17001006c ರಾಜ್ಯಂ ಪರಿದದೌ ಸರ್ವಂ ವೈಶ್ಯಾಪುತ್ರೇ ಯುಧಿಷ್ಠಿರಃ।।
ಧರ್ಮಕಾಮನೆಯಿಂದ ಹೊರಟ ಯುಧಿಷ್ಠಿರನು ವೈಶ್ಯಾಪುತ್ರ ಯುಯುತ್ಸುವನ್ನು ಕರೆದು ಅವನಿಗೆ ರಾಜ್ಯವೆಲ್ಲವನ್ನೂ ಕೊಟ್ಟನು.
17001007a ಅಭಿಷಿಚ್ಯ ಸ್ವರಾಜ್ಯೇ ತು ತಂ ರಾಜಾನಂ ಪರಿಕ್ಷಿತಮ್।
17001007c ದುಃಖಾರ್ತಶ್ಚಾಬ್ರವೀದ್ರಾಜಾ ಸುಭದ್ರಾಂ ಪಾಂಡವಾಗ್ರಜಃ।।
ಸ್ವರಾಜ್ಯದಲ್ಲಿ ರಾಜ ಪರಿಕ್ಷಿತನನ್ನು ಅಭಿಷೇಕಿಸಿ, ದುಃಖಾರ್ತನಾದ ಪಾಂಡವಾಗ್ರಜ ರಾಜನು ಸುಭದ್ರೆಗೆ ಹೇಳಿದನು:
17001008a ಏಷ ಪುತ್ರಸ್ಯ ತೇ ಪುತ್ರಃ ಕುರುರಾಜೋ ಭವಿಷ್ಯತಿ।
17001008c ಯದೂನಾಂ ಪರಿಶೇಷಶ್ಚ ವಜ್ರೋ ರಾಜಾ ಕೃತಶ್ಚ ಹ।।
“ಈ ನಿನ್ನ ಮಗನ ಮಗನು ಕುರುರಾಜನಾಗುತ್ತಾನೆ. ಯದುಗಳಲ್ಲಿ ಕೊನೆಯವನಾಗಿ ಉಳಿದುಕೊಂಡಿರುವ ಈ ವಜ್ರನನ್ನೂ ರಾಜನನ್ನಾಗಿ ಮಾಡಿಯಾಗಿದೆ.
17001009a ಪರಿಕ್ಷಿದ್ಧಾಸ್ತಿನಪುರೇ ಶಕ್ರಪ್ರಸ್ಥೇ ತು ಯಾದವಃ।
17001009c ವಜ್ರೋ ರಾಜಾ ತ್ವಯಾ ರಕ್ಷ್ಯೋ ಮಾ ಚಾಧರ್ಮೇ ಮನಃ ಕೃಥಾಃ।।
ಪರಿಕ್ಷಿತನು ಹಸ್ತಿನಾಪುರದಲ್ಲಿಯೂ ಯಾದವ ವಜ್ರನು ಇಂದ್ರಪ್ರಸ್ಥದಲ್ಲಿಯೂ ರಾಜ್ಯವಾಳಲಿ. ರಾಜಾ ವಜ್ರನು ನಿನ್ನ ರಕ್ಷಣೆಯಲ್ಲಿರಲಿ. ಅಧರ್ಮವೆಸಗುವ ಯೋಚನೆಯನ್ನೂ ಮಾಡಬೇಡ!”
17001010a ಇತ್ಯುಕ್ತ್ವಾ ಧರ್ಮರಾಜಃ ಸ ವಾಸುದೇವಸ್ಯ ಧೀಮತಃ।
17001010c ಮಾತುಲಸ್ಯ ಚ ವೃದ್ಧಸ್ಯ ರಾಮಾದೀನಾಂ ತಥೈವ ಚ।।
17001011a ಮಾತೃಭಿಃ ಸಹ ಧರ್ಮಾತ್ಮಾ ಕೃತ್ವೋದಕಮತಂದ್ರಿತಃ।
17001011c ಶ್ರಾದ್ಧಾನ್ಯುದ್ದಿಶ್ಯ ಸರ್ವೇಷಾಂ ಚಕಾರ ವಿಧಿವತ್ತದಾ।।
ಹೀಗೆ ಹೇಳಿ ಧರ್ಮಾತ್ಮ ಧರ್ಮರಾಜನು ತಾಯಿಯೊಂದಿಗೆ ಧೀಮತ ವಾಸುದೇವನ, ವೃದ್ಧ ಸೋದರ ಮಾವನ, ರಾಮಾದಿಗಳೆಲ್ಲರನ್ನೂ ಉದ್ದೇಶಿಸಿ ವಿಧಿವತ್ತಾಗಿ ಶುದ್ಧೋದಕಗಳಿಂದ ಶ್ರಾದ್ಧಗಳನ್ನು ನೆರವೇರಿಸಿದನು.
17001012a ದದೌ ರತ್ನಾನಿ ವಾಸಾಂಸಿ ಗ್ರಾಮಾನಶ್ವಾನ್ರಥಾನಪಿ।
17001012c ಸ್ತ್ರಿಯಶ್ಚ ದ್ವಿಜಮುಖ್ಯೇಭ್ಯೋ ಗವಾಂ ಶತಸಹಸ್ರಶಃ।।
ದ್ವಿಜಮುಖ್ಯರಿಗೆ ರತ್ನಗಳನ್ನೂ, ವಸ್ತ್ರಗಳನ್ನೂ, ಗ್ರಾಮಗಳನ್ನೂ, ಕುದುರೆ-ರಥಗಳನ್ನೂ, ಸ್ತ್ರೀಯರನ್ನೂ, ನೂರು ಸಾವಿರ ಗೋವುಗಳನ್ನೂ ದಾನಮಾಡಿದನು.
17001013a ಕೃಪಮಭ್ಯರ್ಚ್ಯ ಚ ಗುರುಮರ್ಥಮಾನಪುರಸ್ಕೃತಮ್।
17001013c ಶಿಷ್ಯಂ ಪರಿಕ್ಷಿತಂ ತಸ್ಮೈ ದದೌ ಭರತಸತ್ತಮಃ।।
ಆ ಭರತಸತ್ತಮನು ತನ್ನ ಗುರು ಕೃಪನನ್ನು ಧನ ಮತ್ತು ಮಾನ್ಯತೆಗಳಿಂದ ಪೂಜಿಸಿ ಅವನಿಗೆ ಪರಿಕ್ಷಿತನನ್ನು ಶಿಷ್ಯನನ್ನಾಗಿ ಒಪ್ಪಿಸಿದನು.
17001014a ತತಸ್ತು ಪ್ರಕೃತೀಃ ಸರ್ವಾಃ ಸಮಾನಾಯ್ಯ ಯುಧಿಷ್ಠಿರಃ।
17001014c ಸರ್ವಮಾಚಷ್ಟ ರಾಜರ್ಷಿಶ್ಚಿಕೀರ್ಷಿತಮಥಾತ್ಮನಃ।।
ಅನಂತರ ರಾಜರ್ಷಿ ಯುಧಿಷ್ಠಿರನು ತನ್ನ ಸರ್ವ ಪ್ರಜೆಗಳನ್ನೂ ಕರೆಯಿಸಿ ತಾನು ಮಾಡಲು ಹೊರಟಿರುವ ಎಲ್ಲದರ ಕುರಿತು ಹೇಳಿದನು.
17001015a ತೇ ಶ್ರುತ್ವೈವ ವಚಸ್ತಸ್ಯ ಪೌರಜಾನಪದಾ ಜನಾಃ।
17001015c ಭೃಶಮುದ್ವಿಗ್ನಮನಸೋ ನಾಭ್ಯನಂದಂತ ತದ್ವಚಃ।।
ಅವನ ಮಾತನ್ನು ಕೇಳಿದೊಡನೆಯೇ ಪೌರ ಮತ್ತು ಜಾನಪದ ಜನರು ತುಂಬಾ ಉದ್ವಿಗ್ನರಾಗಿ ಆ ಮಾತನ್ನು ಸ್ವೀಕರಿಸಲಿಲ್ಲ.
17001016a ನೈವಂ ಕರ್ತವ್ಯಮಿತಿ ತೇ ತದೋಚುಸ್ತೇ ನರಾಧಿಪಮ್।
17001016c ನ ಚ ರಾಜಾ ತಥಾಕಾರ್ಷೀತ್ಕಾಲಪರ್ಯಾಯಧರ್ಮವಿತ್।।
“ಹೀಗೆ ಮಾಡಬಾರದು! ಕಾಲದ ಪರ್ಯಾಯವನ್ನೂ ಧರ್ಮವನ್ನೂ ತಿಳಿದ ಯಾವ ರಾಜನೂ ಹೀಗೆ ಮಾಡುವುದಿಲ್ಲ!” ಎಂದು ಅವರು ನರಾಧಿಪನಿಗೆ ಹೇಳಿದರು.
17001017a ತತೋಽನುಮಾನ್ಯ ಧರ್ಮಾತ್ಮಾ ಪೌರಜಾನಪದಂ ಜನಮ್।
17001017c ಗಮನಾಯ ಮತಿಂ ಚಕ್ರೇ ಭ್ರಾತರಶ್ಚಾಸ್ಯ ತೇ ತದಾ।।
ಆಗ ಧರ್ಮಾತ್ಮನು ಪೌರ ಜಾನಪದ ಜನರನ್ನು ಒಪ್ಪಿಸಿದನು. ಅನಂತರ ಸಹೋದರರು ಹೊರಡಲು ನಿಶ್ಚಯಿಸಿದರು.
17001018a ತತಃ ಸ ರಾಜಾ ಕೌರವ್ಯೋ ಧರ್ಮಪುತ್ರೋ ಯುಧಿಷ್ಠಿರಃ।
17001018c ಉತ್ಸೃಜ್ಯಾಭರಣಾನ್ಯಂಗಾನ್ಜಗೃಹೇ ವಲ್ಕಲಾನ್ಯುತ।।
ಆಗ ರಾಜಾ ಕೌರವ್ಯ ಧರ್ಮಪುತ್ರ ಯುಧಿಷ್ಠಿರನು ಅಂಗಗಳ ಮೇಲಿದ್ದ ಆಭರಣಗಳನ್ನು ತೆಗೆದಿಟ್ಟು ವಲ್ಕಲವಸ್ತ್ರವನ್ನು ಧರಿಸಿದನು.
17001019a ಭೀಮಾರ್ಜುನೌ ಯಮೌ ಚೈವ ದ್ರೌಪದೀ ಚ ಯಶಸ್ವಿನೀ।
17001019c ತಥೈವ ಸರ್ವೇ ಜಗೃಹುರ್ವಲ್ಕಲಾನಿ ಜನಾಧಿಪ।।
ಜನಾಧಿಪ! ಹಾಗೆಯೇ ಭೀಮಾರ್ಜುನರೂ, ಯಮಳರೂ, ಯಶಸ್ವಿನೀ ದ್ರೌಪದಿ ಎಲ್ಲರೂ ವಲ್ಕಲಗಳನ್ನು ಧರಿಸಿದರು.
17001020a ವಿಧಿವತ್ಕಾರಯಿತ್ವೇಷ್ಟಿಂ ನೈಷ್ಠಿಕೀಂ ಭರತರ್ಷಭ।
17001020c ಸಮುತ್ಸೃಜ್ಯಾಪ್ಸು ಸರ್ವೇಽಗ್ನೀನ್ಪ್ರತಸ್ಥುರ್ನರಪುಂಗವಾಃ।।
ಭರತರ್ಷಭ! ವಿಧಿವತ್ತಾಗಿ ಅಂತ್ಯೇಷ್ಟಿಯನ್ನು ಮಾಡಿಸಿಕೊಂಡು ಆ ಅಗ್ನಿಗಳನ್ನು ನದಿಯಲ್ಲಿ ವಿಸರ್ಜಿಸಿ ನರಪುಂಗವರೆಲ್ಲರೂ ಹೊರಟರು.
17001021a ತತಃ ಪ್ರರುರುದುಃ ಸರ್ವಾಃ ಸ್ತ್ರಿಯೋ ದೃಷ್ಟ್ವಾ ನರರ್ಷಭಾನ್।
17001021c ಪ್ರಸ್ಥಿತಾನ್ದ್ರೌಪದೀಷಷ್ಠಾನ್ಪುರಾ ದ್ಯೂತಜಿತಾನ್ಯಥಾ।।
ಬಹುಕಾಲದ ಹಿಂದೆ ದ್ಯೂತದಲ್ಲಿ ಸೋತು ಹೋಗುತ್ತಿದ್ದಂತೆ ದ್ರೌಪದಿಯೊಡಗೂಡಿ ಹೊರಹೊರಟಿರುವ ಆ ನರರ್ಷಭರನ್ನು ನೋಡಿ ಸರ್ವ ಸ್ತ್ರೀಯರೂ ರೋದಿಸಿದರು.
17001022a ಹರ್ಷೋಽಭವಚ್ಚ ಸರ್ವೇಷಾಂ ಭ್ರಾತೄಣಾಂ ಗಮನಂ ಪ್ರತಿ।
17001022c ಯುಧಿಷ್ಠಿರಮತಂ ಜ್ಞಾತ್ವಾ ವೃಷ್ಣಿಕ್ಷಯಮವೇಕ್ಷ್ಯ ಚ।।
ಆದರೆ ವೃಷ್ಣಿಗಳ ವಿನಾಶವನ್ನು ಕಂಡು ಮತ್ತು ಯುಧಿಷ್ಠಿರನ ಮತವನ್ನು ಅರಿತು ಆ ಸರ್ವ ಭ್ರಾತೃಗಳು ಹೊರಟಿರುವ ವಿಷಯದಲ್ಲಿ ಅವರು ಹರ್ಷವನ್ನೂ ತಾಳಿದ್ದರು.
17001023a ಭ್ರಾತರಃ ಪಂಚ ಕೃಷ್ಣಾ ಚ ಷಷ್ಠೀ ಶ್ವಾ ಚೈವ ಸಪ್ತಮಃ।
17001023c ಆತ್ಮನಾ ಸಪ್ತಮೋ ರಾಜಾ ನಿರ್ಯಯೌ ಗಜಸಾಹ್ವಯಾತ್।।
17001023E ಪೌರೈರನುಗತೋ ದೂರಂ ಸರ್ವೈರಂತಃಪುರೈಸ್ತಥಾ।।
ಐವರು ಸಹೋದರರು, ಆರನೆಯವಳಾಗಿ ಕೃಷ್ಣೆ, ಮತ್ತು ಏಳನೆಯದಾಗಿ ನಾಯಿಯೊಡನೆ ರಾಜನು ಹಸ್ತಿನಾಪುರದಿಂದ ಹೊರಟನು. ಅಂತಃಪುರದವರೂ ಪೌರರೂ ಎಲ್ಲರೂ ಬಹಳ ದೂರ ಅವರನ್ನು ಅನುಸರಿಸಿದರು.
17001024a ನ ಚೈನಮಶಕತ್ಕಶ್ಚಿನ್ನಿವರ್ತಸ್ವೇತಿ ಭಾಷಿತುಮ್।
17001024c ನ್ಯವರ್ತಂತ ತತಃ ಸರ್ವೇ ನರಾ ನಗರವಾಸಿನಃ।।
ಅವರನ್ನು ಹಿಂದಿರುಗಿರೆಂದು ಹೇಳಲು ಯಾರೂ ಸಮರ್ಥರಾಗದೇ ನಗರವಾಸಿಗಳೆಲ್ಲರೂ ಹಿಂದಿರುಗಿದರು.
17001025a ಕೃಪಪ್ರಭೃತಯಶ್ಚೈವ ಯುಯುತ್ಸುಂ ಪರ್ಯವಾರಯನ್।
17001025c ವಿವೇಶ ಗಂಗಾಂ ಕೌರವ್ಯ ಉಲೂಪೀ ಭುಜಗಾತ್ಮಜಾ।।
ಕೃಪನೇ ಮೊದಲಾದವರು ಹಸ್ತಿನಾಪುರದಲ್ಲಿ ಯುಯುತ್ಸುವಿನ ಬಳಿ ಇದ್ದರು. ಕೌರವ್ಯ! ಭುಜಗಾತ್ಮಜೆ ಉಲೂಪಿಯು ಗಂಗೆಯನ್ನು ಪ್ರವೇಶಿಸಿದಳು.
17001026a ಚಿತ್ರಾಂಗದಾ ಯಯೌ ಚಾಪಿ ಮಣಿಪೂರಪುರಂ ಪ್ರತಿ।
17001026c ಶಿಷ್ಟಾಃ ಪರಿಕ್ಷಿತಂ ತ್ವನ್ಯಾ ಮಾತರಃ ಪರ್ಯವಾರಯನ್।।
ಚಿತ್ರಾಂಗದೆಯು ಮಣಿಪೂರಪುರಕ್ಕೆ ಹೋದಳು. ಉಳಿದ ಅನ್ಯ ತಾಯಂದಿರು ಪರಿಕ್ಷಿತನನ್ನು ನೋಡಿಕೊಂಡರು.
17001027a ಪಾಂಡವಾಶ್ಚ ಮಹಾತ್ಮಾನೋ ದ್ರೌಪದೀ ಚ ಯಶಸ್ವಿನೀ।
17001027c ಕೃತೋಪವಾಸಾಃ ಕೌರವ್ಯ ಪ್ರಯಯುಃ ಪ್ರಾಙ್ಮುಖಾಸ್ತತಃ।।
ಕೌರವ್ಯ! ಮಹಾತ್ಮ ಪಾಂಡವರೂ ಯಶಸ್ವಿನೀ ದ್ರೌಪದಿಯೂ ಉಪವಾಸದಲ್ಲಿದ್ದುಕೊಂಡು ಪೂರ್ವಾಭಿಮುಖವಾಗಿ ಹೋದರು.
17001028a ಯೋಗಯುಕ್ತಾ ಮಹಾತ್ಮಾನಸ್ತ್ಯಾಗಧರ್ಮಮುಪೇಯುಷಃ।
17001028c ಅಭಿಜಗ್ಮುರ್ಬಹೂನ್ದೇಶಾನ್ ಸರಿತಃ ಪರ್ವತಾಂಸ್ತಥಾ।।
ಯೋಗಯುಕ್ತರಾದ ಆ ಮಹಾತ್ಮರು ತ್ಯಾಗಧರ್ಮವನ್ನನುಸರಿಸಿ ಅನೇಕ ದೇಶ-ನದೀ-ಪರ್ವತಗಳನ್ನು ದಾಟಿದರು.
17001029a ಯುಧಿಷ್ಠಿರೋ ಯಯಾವಗ್ರೇ ಭೀಮಸ್ತು ತದನಂತರಮ್।
17001029c ಅರ್ಜುನಸ್ತಸ್ಯ ಚಾನ್ವೇವ ಯಮೌ ಚೈವ ಯಥಾಕ್ರಮಮ್।।
ಎಲ್ಲರಿಗಿಂತ ಮುಂದೆ ಯುಧಿಷ್ಠಿರನು ಹೋಗುತ್ತಿದ್ದನು. ಅವನ ನಂತರ ಭೀಮ, ಅರ್ಜುನನು ಅವನ ನಂತರ ಮತ್ತು ಅವನ ಹಿಂದೆ ಯಥಾಕ್ರಮವಾಗಿ ಯಮಳರು ಹೋಗುತ್ತಿದ್ದರು.
17001030a ಪೃಷ್ಠತಸ್ತು ವರಾರೋಹಾ ಶ್ಯಾಮಾ ಪದ್ಮದಲೇಕ್ಷಣಾ।
17001030c ದ್ರೌಪದೀ ಯೋಷಿತಾಂ ಶ್ರೇಷ್ಠಾ ಯಯೌ ಭರತಸತ್ತಮ।।
ಭರತಸತ್ತಮ! ಆರನೆಯವಳಾಗಿ ವರಾರೋಹೆ ಶ್ಯಾಮೆ ಪದ್ಮದಲೇಕ್ಷಣೆ ಸ್ತ್ರೀಶ್ರೇಷ್ಠೆ ದ್ರೌಪದಿಯು ಹೋಗುತ್ತಿದ್ದಳು.
17001031a ಶ್ವಾ ಚೈವಾನುಯಯಾವೇಕಃ ಪಾಂಡವಾನ್ ಪ್ರಸ್ಥಿತಾನ್ವನೇ।
17001031c ಕ್ರಮೇಣ ತೇ ಯಯುರ್ವೀರಾ ಲೌಹಿತ್ಯಂ ಸಲಿಲಾರ್ಣವಮ್।।
ಪಾಂಡವರು ವನಕ್ಕೆ ಹೊರಟಾಗ ಅವರನ್ನು ಹಿಂಬಾಲಿಸಿ ಒಂಟಿ ನಾಯಿಯೂ ಹೊರಟಿತ್ತು. ಕ್ರಮೇಣವಾಗಿ ಆ ವೀರರು ಲೌಹಿತ್ಯವೆಂಬ ಸಮುದ್ರಕ್ಕೆ ಬಂದರು.
17001032a ಗಾಂಡೀವಂ ಚ ಧನುರ್ದಿವ್ಯಂ ನ ಮುಮೋಚ ಧನಂಜಯಃ।
17001032c ರತ್ನಲೋಭಾನ್ಮಹಾರಾಜ ತೌ ಚಾಕ್ಷಯ್ಯೌ ಮಹೇಷುಧೀ।।
ಮಹಾರಾಜ! ಧನಂಜಯನು ತನ್ನ ಆ ದಿವ್ಯ ಧನುಸ್ಸು ಗಾಂಡೀವವನ್ನೂ ಎರಡು ಅಕ್ಷಯ ಭತ್ತಳಿಕೆಗಳನ್ನೂ ಬಿಟ್ಟಿರಲಿಲ್ಲ. ಪ್ರಿಯವಾದುದನ್ನು ಹಿಡಿದಿಟ್ಟುಕೊಳ್ಳುವ ಮೋಹವನ್ನಾದರೂ ನೋಡು!
17001033a ಅಗ್ನಿಂ ತೇ ದದೃಶುಸ್ತತ್ರ ಸ್ಥಿತಂ ಶೈಲಮಿವಾಗ್ರತಃ।
17001033c ಮಾರ್ಗಮಾವೃತ್ಯ ತಿಷ್ಠಂತಂ ಸಾಕ್ಷಾತ್ಪುರುಷವಿಗ್ರಹಮ್।।
ಆಗ ಅವರು ಪರ್ವತದಂತಹ ಪುರುಷಾಕೃತಿಯಲ್ಲಿ ಎದಿರು ಮಾರ್ಗಕ್ಕೆ ಅಡ್ಡಕಟ್ಟಿ ನಿಂತಿರುವ ಅಗ್ನಿಯನ್ನು ನೋಡಿದರು.
17001034a ತತೋ ದೇವಃ ಸ ಸಪ್ತಾರ್ಚಿಃ ಪಾಂಡವಾನಿದಮಬ್ರವೀತ್।
17001034c ಭೋ ಭೋ ಪಾಂಡುಸುತಾ ವೀರಾಃ ಪಾವಕಂ ಮಾಂ ವಿಬೋಧತ।।
ಆಗ ದೇವ ಸಪ್ತಾರ್ಚಿಯು ಪಾಂಡವರಿಗೆ ಇದನ್ನು ಹೇಳಿದನು: “ಭೋ! ಭೋ! ವೀರ ಪಾಂಡುಸುತರೇ! ನನ್ನನ್ನು ಪಾವಕನೆಂದು ತಿಳಿಯಿರಿ!
17001035a ಯುಧಿಷ್ಠಿರ ಮಹಾಬಾಹೋ ಭೀಮಸೇನ ಪರಂತಪ।
17001035c ಅರ್ಜುನಾಶ್ವಿಸುತೌ ವೀರೌ ನಿಬೋಧತ ವಚೋ ಮಮ।।
ಯುಧಿಷ್ಠಿರ ಮಹಾಬಾಹೋ! ಪರಂತಪ ಭೀಮಸೇನ! ಅರ್ಜುನ ಮತ್ತು ವೀರ ಅಶ್ವಿನೀಸುತರೇ! ನನ್ನ ಮಾತನ್ನು ಕೇಳಿ!
17001036a ಅಹಮಗ್ನಿಃ ಕುರುಶ್ರೇಷ್ಠಾ ಮಯಾ ದಗ್ಧಂ ಚ ಖಾಂಡವಮ್।
17001036c ಅರ್ಜುನಸ್ಯ ಪ್ರಭಾವೇಣ ತಥಾ ನಾರಾಯಣಸ್ಯ ಚ।।
ಕುರುಶ್ರೇಷ್ಠರೇ! ನಾನು ಅಗ್ನಿಯು! ಅರ್ಜುನ ಮತ್ತು ನಾರಾಯಣರ ಪ್ರಭಾವದಿಂದ ನಾನು ಖಾಂಡವವನ್ನು ದಹಿಸಿ ಭಸ್ಮಗೊಳಿಸಿದೆನು.
17001037a ಅಯಂ ವಃ ಫಲ್ಗುನೋ ಭ್ರಾತಾ ಗಾಂಡೀವಂ ಪರಮಾಯುಧಮ್।
17001037c ಪರಿತ್ಯಜ್ಯ ವನಂ ಯಾತು ನಾನೇನಾರ್ಥೋಽಸ್ತಿ ಕಶ್ಚನ।।
ನಿನ್ನ ಈ ಭ್ರಾತಾ ಫಲ್ಗುನನು ಪರಮಾಯುಧ ಗಾಂಡಿವವನ್ನು ಇಲ್ಲಿಯೇ ಬಿಟ್ಟು ವನಕ್ಕೆ ತೆರಳಬೇಕು. ಅವನಿಗೆ ಇನ್ನು ಮುಂದೆ ಇದರ ಅವಶ್ಯಕತೆಯಿರುವುದಿಲ್ಲ.
17001038a ಚಕ್ರರತ್ನಂ ತು ಯತ್ಕೃಷ್ಣೇ ಸ್ಥಿತಮಾಸೀನ್ಮಹಾತ್ಮನಿ।
17001038c ಗತಂ ತಚ್ಚ ಪುನರ್ಹಸ್ತೇ ಕಾಲೇನೈಷ್ಯತಿ ತಸ್ಯ ಹ।।
ಮಹಾತ್ಮ ಕೃಷ್ಣನಲ್ಲಿದ್ದ ಚಕ್ರರತ್ನವು ಆಗಲೇ ಹೊರಟು ಹೋಗಿ ಕಾಲಾಂತರದಲ್ಲಿ ಪುನಃ ಅವನ ಹಸ್ತವನ್ನು ಸೇರುತ್ತದೆ.
17001039a ವರುಣಾದಾಹೃತಂ ಪೂರ್ವಂ ಮಯೈತತ್ಪಾರ್ಥಕಾರಣಾತ್।
17001039c ಗಾಂಡೀವಂ ಕಾರ್ಮುಕಶ್ರೇಷ್ಠಂ ವರುಣಾಯೈವ ದೀಯತಾಮ್।।
ಹಿಂದೆ ಅರ್ಜುನನಿಗೋಸ್ಕರ ವರುಣನಿಂದ ನಾನು ಪಡೆದಿದ್ದ ಈ ಕಾರ್ಮುಕಶ್ರೇಷ್ಠ ಗಾಂಡೀವವನ್ನು ವರುಣನಿಗೆ ಹಿಂದಿರುಗಿಸಬೇಕಾಗಿದೆ.”
17001040a ತತಸ್ತೇ ಭ್ರಾತರಃ ಸರ್ವೇ ಧನಂಜಯಮಚೋದಯನ್।
17001040c ಸ ಜಲೇ ಪ್ರಾಕ್ಷಿಪತ್ತತ್ತು ತಥಾಕ್ಷಯ್ಯೌ ಮಹೇಷುಧೀ।।
ಆಗ ಅವನ ಸಹೋದರರೆಲ್ಲರೂ ಧನಂಜಯನನ್ನು ಒತ್ತಾಯಿಸಲು ಅವನು ಮಹಾ ಧನುಸ್ಸನ್ನೂ ಹಾಗೆಯೇ ಅಕ್ಷಯ ಭತ್ತಳಿಕೆಗಳನ್ನೂ ನೀರಿನಲ್ಲಿ ಹಾಕಿದನು.
17001041a ತತೋಽಗ್ನಿರ್ಭರತಶ್ರೇಷ್ಠ ತತ್ರೈವಾಂತರಧೀಯತ।
17001041c ಯಯುಶ್ಚ ಪಾಂಡವಾ ವೀರಾಸ್ತತಸ್ತೇ ದಕ್ಷಿಣಾಮುಖಾಃ।।
ಭರತಶ್ರೇಷ್ಠ! ಆಗ ಅಗ್ನಿಯು ಅಲ್ಲಿಯೇ ಅಂತರ್ಧಾನನಾದನು. ಅನಂತರ ವೀರ ಪಾಂಡವರು ಅಲ್ಲಿಂದ ದಕ್ಷಿಣಾಭಿಮುಖರಾಗಿ ನಡೆದರು.
17001042a ತತಸ್ತೇ ತೂತ್ತರೇಣೈವ ತೀರೇಣ ಲವಣಾಂಭಸಃ।
17001042c ಜಗ್ಮುರ್ಭರತಶಾರ್ದೂಲ ದಿಶಂ ದಕ್ಷಿಣಪಶ್ಚಿಮಮ್।।
ಭರತಶಾರ್ದೂಲ! ಆ ಸಮುದ್ರದ ಉತ್ತರ ತೀರದಿಂದ ಹೊರಟು ಅವರು ಅದರ ದಕ್ಷಿಣ-ಪಶ್ಚಿಮ ದಿಕ್ಕಿನಲ್ಲಿ ಹೋದರು.
17001043a ತತಃ ಪುನಃ ಸಮಾವೃತ್ತಾಃ ಪಶ್ಚಿಮಾಂ ದಿಶಮೇವ ತೇ।
17001043c ದದೃಶುರ್ದ್ವಾರಕಾಂ ಚಾಪಿ ಸಾಗರೇಣ ಪರಿಪ್ಲುತಾಮ್।।
ಅಲ್ಲಿಂದ ಪುನಃ ಪಶ್ಚಿಮ ದಿಕ್ಕಿಗೆ ತಿರುಗಿ ನಡೆದು ಅಲ್ಲಿ ಸಮುದ್ರದಲ್ಲಿ ಮುಳುಗಿಹೋಗಿದ್ದ ದ್ವಾರಕೆಯನ್ನು ನೋಡಿದರು.
17001044a ಉದೀಚೀಂ ಪುನರಾವೃತ್ತ್ಯ ಯಯುರ್ಭರತಸತ್ತಮಾಃ।
17001044c ಪ್ರಾದಕ್ಷಿಣ್ಯಂ ಚಿಕೀರ್ಷಂತಃ ಪೃಥಿವ್ಯಾ ಯೋಗಧರ್ಮಿಣಃ।।
ಭೂಮಿಯನ್ನು ಪ್ರದಕ್ಷಿಣೆ ಮಾಡುತ್ತಿರುವಂತೆ ಆ ಯೋಗಧರ್ಮಿ ಭರತಸತ್ತಮರು ಪುನಃ ಉತ್ತರ ದಿಕ್ಕಿನಲ್ಲಿ ನಡೆದರು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಮಹಾಪ್ರಸ್ಥಾನಿಕೇ ಪರ್ವಣಿ ಪಾಂಡವಪ್ರವ್ರಜನೇ ಪ್ರಥಮೋಽಧ್ಯಾಯಃ ।।
ಇದು ಶ್ರೀಮಹಾಭಾರತದಲ್ಲಿ ಮಹಾಪ್ರಸ್ಥಾನಿಕಪರ್ವದಲ್ಲಿ ಪಾಂಡವಪ್ರವ್ರಜನ ಎನ್ನುವ ಮೊದಲನೇ ಅಧ್ಯಾಯವು.