009: ವ್ಯಾಸಾರ್ಜುನಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಮೌಸಲ ಪರ್ವ

ಮೌಸಲ ಪರ್ವ

ಅಧ್ಯಾಯ 9

ಸಾರ

ಅರ್ಜುನನು ವ್ಯಾಸನಲ್ಲಿ ತನ್ನ ದುಃಖವನ್ನು ಹೇಳಿಕೊಳ್ಳುವುದು (1-24). ವ್ಯಾಸನು ಅರ್ಜುನನಿಗೆ ಸಮಾಧಾನವನ್ನು ಹೇಳಿ “ನೀವೂ ಕೂಡ ಕಾಲದ ಗತಿಯಲ್ಲಿ ಹೋಗುವುದು ಮುಖ್ಯ” ಎಂದುದು (25-38).

16009001 ವೈಶಂಪಾಯನ ಉವಾಚ।
16009001a ಪ್ರವಿಶನ್ನರ್ಜುನೋ ರಾಜನ್ನಾಶ್ರಮಂ ಸತ್ಯವಾದಿನಃ।
16009001c ದದರ್ಶಾಸೀನಮೇಕಾಂತೇ ಮುನಿಂ ಸತ್ಯವತೀಸುತಮ್।।

ವೈಶಂಪಾಯನನು ಹೇಳಿದನು: “ರಾಜನ್! ಸತ್ಯವಾದಿ ಅರ್ಜುನನು ಆಶ್ರಮವನ್ನು ಪ್ರವೇಶಿಸಿ ಏಕಾಂತಲ್ಲಿ ಕುಳಿತಿದ್ದ ಮುನಿ ಸತ್ಯವತೀ ಸುತನನ್ನು ಸಂದರ್ಶಿಸಿದನು.

16009002a ಸ ತಮಾಸಾದ್ಯ ಧರ್ಮಜ್ಞಮುಪತಸ್ಥೇ ಮಹಾವ್ರತಮ್।
16009002c ಅರ್ಜುನೋಽಸ್ಮೀತಿ ನಾಮಾಸ್ಮೈ ನಿವೇದ್ಯಾಭ್ಯವದತ್ತತಃ।।

ಕುಳಿತಿದ್ದ ಆ ಮಹಾವ್ರತ ಧರ್ಮಜ್ಞನ ಬಳಿಸಾರಿ “ನಾನು ಅರ್ಜುನ!” ಎಂದು ಹೇಳಿ ವಂದಿಸಿ ನಿಂತುಕೊಂಡನು.

16009003a ಸ್ವಾಗತಂ ತೇಽಸ್ತ್ವಿತಿ ಪ್ರಾಹ ಮುನಿಃ ಸತ್ಯವತೀಸುತಃ।
16009003c ಆಸ್ಯತಾಮಿತಿ ಚೋವಾಚ ಪ್ರಸನ್ನಾತ್ಮಾ ಮಹಾಮುನಿಃ।।

“ನಿನಗೆ ಸ್ವಾಗತ!” ಎಂದು ಮುನಿ ಸತ್ಯವತೀ ಸುತನು ಹೇಳಿ, ಪ್ರಸನ್ನಾತ್ಮನಾದ ಆ ಮಹಾಮುನಿಯು “ಕುಳಿತುಕೋ!” ಎಂದನು.

16009004a ತಮಪ್ರತೀತಮನಸಂ ನಿಃಶ್ವಸಂತಂ ಪುನಃ ಪುನಃ।
16009004c ನಿರ್ವಿಣ್ಣಮನಸಂ ದೃಷ್ಟ್ವಾ ಪಾರ್ಥಂ ವ್ಯಾಸೋಽಬ್ರವೀದಿದಮ್।।

ಮನಸ್ಸನ್ನೇ ಕಳೆದುಕೊಂಡಿದ್ದ, ಪುನಃ ಪುನಃ ನಿಟ್ಟುಸಿರು ಬಿಡುತ್ತಿದ್ದ, ನಿರ್ವಿಣ್ಣ ಮನಸ್ಕನಾಗಿದ್ದ ಪಾರ್ಥನನ್ನು ನೋಡಿ ವ್ಯಾಸನು ಇಂತೆಂದನು:

16009005a ಅವೀರಜೋಽಭಿಘಾತಸ್ತೇ ಬ್ರಾಹ್ಮಣೋ ವಾ ಹತಸ್ತ್ವಯಾ।
16009005c ಯುದ್ಧೇ ಪರಾಜಿತೋ ವಾಸಿ ಗತಶ್ರೀರಿವ ಲಕ್ಷ್ಯಸೇ।।

“ವೀರನಲ್ಲದವನಿಂದ ಗಾಯಗೊಂಡಿರುವೆಯೇ? ಅಥವಾ ಬ್ರಾಹ್ಮಣನನ್ನು ಕೊಂದೆಯೇ? ಅಥವಾ ಯುದ್ಧದಲ್ಲಿ ಪರಾಜಿತಗೊಂಡೆಯೇ? ನಿನ್ನ ಕಾಂತಿಯನ್ನು ಕಳೆದುಕೊಂಡಂತಿದೆ!

16009006a ನ ತ್ವಾ ಪ್ರತ್ಯಭಿಜಾನಾಮಿ ಕಿಮಿದಂ ಭರತರ್ಷಭ।
16009006c ಶ್ರೋತವ್ಯಂ ಚೇನ್ಮಯಾ ಪಾರ್ಥ ಕ್ಷಿಪ್ರಮಾಖ್ಯಾತುಮರ್ಹಸಿ।।

ಭರತರ್ಷಭ! ಇದೇನಿದು! ನಿನ್ನನ್ನು ನಾನು ಗುರುತಿಸಲಾಗುತ್ತಿಲ್ಲ! ಪಾರ್ಥ! ಅದನ್ನು ನಾನು ಕೇಳಬಹುದಾದರೆ ಬೇಗನೆ ಏನಾಯಿತೆಂದು ಹೇಳು!”

16009007 ಅರ್ಜುನ ಉವಾಚ।
16009007a ಯಃ ಸ ಮೇಧವಪುಃ ಶ್ರೀಮಾನ್ಬೃಹತ್ಪಂಕಜಲೋಚನಃ।
16009007c ಸ ಕೃಷ್ಣಃ ಸಹ ರಾಮೇಣ ತ್ಯಕ್ತ್ವಾ ದೇಹಂ ದಿವಂ ಗತಃ।।

ಅರ್ಜುನನು ಹೇಳಿದನು: “ಆ ಮೇಧವಪು, ಬೃಹತ್ ಕಮಲಲೋಚನ ಶ್ರೀಮಾನ್ ಕೃಷ್ಣನು ರಾಮನೊಂದಿಗೆ ದೇಹವನ್ನು ತೊರೆದು ದಿವಂಗತನಾಗಿದ್ದಾನೆ.

16009008a ಮೌಸಲೇ ವೃಷ್ಣಿವೀರಾಣಾಂ ವಿನಾಶೋ ಬ್ರಹ್ಮಶಾಪಜಃ।
16009008c ಬಭೂವ ವೀರಾಂತಕರಃ ಪ್ರಭಾಸೇ ರೋಮಹರ್ಷಣಃ।।

ಬ್ರಹ್ಮಶಾಪದಿಂದ ಹುಟ್ಟಿದ ಮುಸಲಗಳಿಂದ ಪ್ರಭಾಸದಲ್ಲಿ ವೃಷ್ಣಿವೀರರ ರೋಮಾಂಚಕಾರೀ ವಿನಾಶವಾಯಿತು!

16009009a ಯೇ ತೇ ಶೂರಾ ಮಹಾತ್ಮಾನಃ ಸಿಂಹದರ್ಪಾ ಮಹಾಬಲಾಃ।
16009009c ಭೋಜವೃಷ್ಣ್ಯಂಧಕಾ ಬ್ರಹ್ಮನ್ನನ್ಯೋನ್ಯಂ ತೈರ್ಹತಂ ಯುಧಿ।।

ಬ್ರಹ್ಮನ್! ಆ ಶೂರ, ಮಹಾತ್ಮ, ಸಿಂಹದರ್ಪ ಮಹಾಬಲ ಭೋಜ-ವೃಷ್ಣಿ-ಅಂಧಕರು ಅನ್ಯೋನ್ಯರೊಡನೆ ಹೋರಾಡಿ ಹತರಾದರು.

16009010a ಗದಾಪರಿಘಶಕ್ತೀನಾಂ ಸಹಾಃ ಪರಿಘಬಾಹವಃ।
16009010c ತ ಏರಕಾಭಿರ್ನಿಹತಾಃ ಪಶ್ಯ ಕಾಲಸ್ಯ ಪರ್ಯಯಮ್।।

ಗದೆ-ಪರಿಘ-ಶಕ್ತಿಗಳನ್ನು ಸಹಿಸಬಲ್ಲ ಪರಿಘದಂತಹ ಬಾಹುಗಳಿದ್ದ ಅವರು ಎರಕ ಹುಲ್ಲುಗಳಿಂದ ಹತರಾದರು. ಕಾಲದ ಪಲ್ಲಟನವನ್ನು ನೋಡು!

16009011a ಹತಂ ಪಂಚಶತಂ ತೇಷಾಂ ಸಹಸ್ರಂ ಬಾಹುಶಾಲಿನಾಮ್।
16009011c ನಿಧನಂ ಸಮನುಪ್ರಾಪ್ತಂ ಸಮಾಸಾದ್ಯೇತರೇತರಮ್।।

ಐನೂರು ಸಾವಿರ ಬಾಹುಶಾಲಿಗಳು ಪರಸ್ಪರರೊಡನೆ ಹೋರಾಡಿ ನಿಧನ ಹೊಂದಿದರು.

16009012a ಪುನಃ ಪುನರ್ನ ಮೃಶ್ಯಾಮಿ ವಿನಾಶಮಮಿತೌಜಸಾಮ್।
16009012c ಚಿಂತಯಾನೋ ಯದೂನಾಂ ಚ ಕೃಷ್ಣಸ್ಯ ಚ ಯಶಸ್ವಿನಃ।।

ಅಮಿತೌಜಸ ಯದುಗಳ ಮತ್ತು ಯಶಸ್ವಿ ಕೃಷ್ಣನ ವಿನಾಶವನ್ನು ಪುನಃ ಪುನಃ ಚಿಂತಿಸಿ ತಡೆದುಕೊಳ್ಳದಾಗಿದ್ದೇನೆ.

16009013a ಶೋಷಣಂ ಸಾಗರಸ್ಯೇವ ಪರ್ವತಸ್ಯೇವ ಚಾಲನಮ್।
16009013c ನಭಸಃ ಪತನಂ ಚೈವ ಶೈತ್ಯಮಗ್ನೇಸ್ತಥೈವ ಚ।।
16009014a ಅಶ್ರದ್ಧೇಯಮಹಂ ಮನ್ಯೇ ವಿನಾಶಂ ಶಾಙ್ರಧನ್ವನಃ।
16009014c ನ ಚೇಹ ಸ್ಥಾತುಮಿಚ್ಚಾಮಿ ಲೋಕೇ ಕೃಷ್ಣವಿನಾಕೃತಃ।।

ಸಮುದ್ರವು ಬತ್ತಿಹೋಯಿತೆಂದರೆ ಅಥವಾ ಪರ್ವತವು ಚಲಿಸಿತೆಂದರೆ, ಆಕಾಶವು ಬಿದ್ದಿತೆಂದರೆ ಮತ್ತು ಅಗ್ನಿಯು ಶೀತಲನಾದನೆಂದರೆ ಹೇಗೋ ಹಾಗೆ ಶಾಂಙ್ರಧನ್ವಿಯು ವಿನಾಶನಾದನೆನ್ನುವುದನ್ನು ನಾನು ನಂಬುವುದಿಲ್ಲ. ಕೃಷ್ಣನಿಲ್ಲದ ಈ ಲೋಕದಲ್ಲಿ ನಾನಿರಲು ಬಯಸುವುದಿಲ್ಲ.

16009015a ಇತಃ ಕಷ್ಟತರಂ ಚಾನ್ಯಚ್ಛೃಣು ತದ್ವೈ ತಪೋಧನ।
16009015c ಮನೋ ಮೇ ದೀರ್ಯತೇ ಯೇನ ಚಿಂತಯಾನಸ್ಯ ವೈ ಮುಹುಃ।।

ಇದಕ್ಕಿಂತಲೂ ಕಷ್ಟತರವಾದುದಿದೆ. ತಪೋಧನ! ಅದನ್ನು ಕೇಳು. ಅದನ್ನು ಪುನಃ ಪುನಃ ಯೋಚಿಸಿ ನನ್ನ ಮನಸ್ಸು ಸೀಳಿಹೋಗುತ್ತಿದೆ.

16009016a ಪಶ್ಯತೋ ವೃಷ್ಣಿದಾರಾಶ್ಚ ಮಮ ಬ್ರಹ್ಮನ್ಸಹಸ್ರಶಃ।
16009016c ಆಭೀರೈರನುಸೃತ್ಯಾಜೌ ಹೃತಾಃ ಪಂಚನದಾಲಯೈಃ।।

ಬ್ರಹ್ಮನ್! ನನ್ನ ಎದುರಿಗೇ ಐದು ನದಿಗಳ ಪ್ರದೇಶದಲ್ಲಿ ಅಭೀರರು ಸಹಸ್ರಾರು ವೃಷ್ಣಿಸ್ತ್ರೀಯರನ್ನು ಅನುಸರಿಸಿ ಬಂದು ಅವರನ್ನು ಅಪಹರಿಸಿಕೊಂಡು ಹೋದರು!

16009017a ಧನುರಾದಾಯ ತತ್ರಾಹಂ ನಾಶಕಂ ತಸ್ಯ ಪೂರಣೇ।
16009017c ಯಥಾ ಪುರಾ ಚ ಮೇ ವೀರ್ಯಂ ಭುಜಯೋರ್ನ ತಥಾಭವತ್।।

ಧನುಸ್ಸನ್ನೆತ್ತಿ ನಾನು ಅವರನ್ನು ಸಂಪೂರ್ಣವಾಗಿ ನಾಶಮಾಡಬೇಕೆಂದಿರುವಾಗ ನನ್ನ ಭುಜಗಳಲ್ಲಿ ಹಿಂದೆ ಇದ್ದ ವೀರ್ಯವು ಆಗ ಇಲ್ಲವಾಯಿತು!

16009018a ಅಸ್ತ್ರಾಣಿ ಮೇ ಪ್ರನಷ್ಟಾನಿ ವಿವಿಧಾನಿ ಮಹಾಮುನೇ।
16009018c ಶರಾಶ್ಚ ಕ್ಷಯಮಾಪನ್ನಾಃ ಕ್ಷಣೇನೈವ ಸಮಂತತಃ।।

ಮಹಾಮುನೇ! ಅವರಿಂದ ಸುತ್ತುವರೆಯಲ್ಪಟ್ಟಿದ್ದಾಗ ಕ್ಷಣದಲ್ಲಿಯೇ ನನ್ನ ವಿವಿಧ ಅಸ್ತ್ರಗಳು ಮರೆತು ಹೋದವು ಮತ್ತು ಶರಗಳೂ ಮುಗಿದು ಹೋದವು.

16009019a ಪುರುಷಶ್ಚಾಪ್ರಮೇಯಾತ್ಮಾ ಶಂಖಚಕ್ರಗದಾಧರಃ।
16009019c ಚತುರ್ಭುಜಃ ಪೀತವಾಸಾ ಶ್ಯಾಮಃ ಪದ್ಮಾಯತೇಕ್ಷಣಃ।।
16009020a ಯಃ ಸ ಯಾತಿ ಪುರಸ್ತಾನ್ಮೇ ರಥಸ್ಯ ಸುಮಹಾದ್ಯುತಿಃ।
16009020c ಪ್ರದಹನ್ರಿಪುಸೈನ್ಯಾನಿ ನ ಪಶ್ಯಾಮ್ಯಹಮದ್ಯ ತಮ್।।
16009021a ಯೇನ ಪೂರ್ವಂ ಪ್ರದಗ್ಧಾನಿ ಶತ್ರುಸೈನ್ಯಾನಿ ತೇಜಸಾ।
16009021c ಶರೈರ್ಗಾಂಡೀವನಿರ್ಮುಕ್ತೈರಹಂ ಪಶ್ಚಾದ್ವ್ಯನಾಶಯಮ್।।

ನನ್ನ ರಥದ ಮುಂದೆ ಹೋಗುತ್ತಾ ರಿಪುಸೈನ್ಯಗಳನ್ನು ಸುಡುತ್ತಿದ್ದ ಆ ಪುರುಷ, ಅಪ್ರಮೇಯಾತ್ಮಾ, ಶಂಖಚಕ್ರಗದಾಧರ, ಚತುರ್ಭುಜ, ಪೀತವಾಸ, ಶ್ಯಾಮ, ಪದ್ಮಾಯತೇಕ್ಷಣನನ್ನು ನಾನು ಕಾಣುತ್ತಿಲ್ಲ! ತನ್ನ ತೇಜಸ್ಸಿನಿಂದ ಮೊದಲೇ ಅವನು ಸುಟ್ಟಿದ್ದವರನ್ನು ನಂತರ ನನ್ನ ಶರಗಳನ್ನು ಗಾಂಡೀವದಿಂದ ಪ್ರಯೋಗಿಸಿ ವಿನಾಶಗೊಳಿಸುತ್ತಿದ್ದೆನು.

16009022a ತಮಪಶ್ಯನ್ವಿಷೀದಾಮಿ ಘೂರ್ಣಾಮೀವ ಚ ಸತ್ತಮ।
16009022c ಪರಿನಿರ್ವಿಣ್ಣಚೇತಾಶ್ಚ ಶಾಂತಿಂ ನೋಪಲಭೇಽಪಿ ಚ।।

ಸತ್ತಮ! ಅವನನ್ನು ನೋಡದೇ ನಾನು ನಿರಾಶನಾಗಿ ದುಃಖಿತನಾಗಿದ್ದೇನೆ. ನನ್ನ ಚೇತನವೇ ಉಡುಗಿಹೋಗಿ, ಶಾಂತಿಯು ದೊರೆಯದಾಗಿದೆ.

16009023a ವಿನಾ ಜನಾರ್ದನಂ ವೀರಂ ನಾಹಂ ಜೀವಿತುಮುತ್ಸಹೇ।
16009023c ಶ್ರುತ್ವೈವ ಹಿ ಗತಂ ವಿಷ್ಣುಂ ಮಮಾಪಿ ಮುಮುಹುರ್ದಿಶಃ।।

ವೀರ ಜನಾರ್ದನನಿಲ್ಲದೇ ನಾನು ಜೀವಿಸಿರಲು ಬಯಸುವುದಿಲ್ಲ. ವಿಷ್ಣುವು ಹೊರಟುಹೋದನೆಂದು ಕೇಳುತ್ತಲೇ ನಾನೂ ಕೂಡ ದಿಕ್ಕುತೋಚದವನಾಗಿದ್ದೇನೆ.

16009024a ಪ್ರನಷ್ಟಜ್ಞಾತಿವೀರ್ಯಸ್ಯ ಶೂನ್ಯಸ್ಯ ಪರಿಧಾವತಃ।
16009024c ಉಪದೇಷ್ಟುಂ ಮಮ ಶ್ರೇಯೋ ಭವಾನರ್ಹತಿ ಸತ್ತಮ।।

ನನ್ನ ಬಂಧುವೀರನನ್ನು ಕಳೆದುಕೊಂಡು ನಾನು ಶೂನ್ಯನಾಗಿ ಸುತ್ತುತ್ತಿದ್ದೇನೆ. ಸತ್ತಮ! ನನಗೆ ಶ್ರೇಯವಾದುದನ್ನು ಉಪದೇಶಿಸು!”

16009025 ವ್ಯಾಸ ಉವಾಚ।
16009025a ಬ್ರಹ್ಮಶಾಪವಿನಿರ್ದಗ್ಧಾ ವೃಷ್ಣ್ಯಂಧಕಮಹಾರಥಾಃ।
16009025c ವಿನಷ್ಟಾಃ ಕುರುಶಾರ್ದೂಲ ನ ತಾನ್ಶೋಚಿತುಮರ್ಹಸಿ।।

ವ್ಯಾಸನು ಹೇಳಿದನು: “ಕುರುಶಾರ್ದೂಲ! ವೃಷ್ಣಿ-ಅಂಧಕ ಮಹಾರಥರು ಬ್ರಾಹ್ಮಣರ ಶಾಪದಿಂದ ಸುಟ್ಟು ವಿನಾಶಹೊಂದಿದ್ದಾರೆ. ಅವರ ಕುರಿತು ಶೋಕಿಸಬೇಡ!

16009026a ಭವಿತವ್ಯಂ ತಥಾ ತದ್ಧಿ ದಿಷ್ಟಮೇತನ್ಮಹಾತ್ಮನಾಮ್।
16009026c ಉಪೇಕ್ಷಿತಂ ಚ ಕೃಷ್ಣೇನ ಶಕ್ತೇನಾಪಿ ವ್ಯಪೋಹಿತುಮ್।।

ಅದು ಹಾಗೆಯೇ ಆಗಬೇಕಾಗಿತ್ತು. ಆ ಮಹಾತ್ಮರಿಗೆ ಹಾಗೆಯೇ ಆಗಬೇಕೆಂದು ವಿಧಿಯು ಕಲ್ಪಿಸಿತ್ತು. ಅದನ್ನು ತಡೆಯಬಲ್ಲವನಾಗಿದ್ದರೂ ಕೃಷ್ಣನು ಅದನ್ನು ಹಾಗೆಯೇ ಆಗಲು ಬಿಟ್ಟನು.

16009027a ತ್ರೈಲೋಕ್ಯಮಪಿ ಕೃಷ್ಣೋ ಹಿ ಕೃತ್ಸ್ನಂ ಸ್ಥಾವರಜಂಗಮಮ್।
16009027c ಪ್ರಸಹೇದನ್ಯಥಾ ಕರ್ತುಂ ಕಿಮು ಶಾಪಂ ಮನೀಷಿಣಾಮ್।।

ಏಕೆಂದರೆ ಸ್ಥಾವರ-ಜಂಗಮಗಳುಳ್ಳ ಈ ತ್ರೈಲೋಕ್ಯಗಳನ್ನೂ ಕೂಡ ಸಂಪೂರ್ಣವಾಗಿ ಬದಲಾಯಿಸಬಲ್ಲ ಕೃಷ್ಣನಿಗೆ ಮುನಿಗಳ ಶಾಪವು ಯಾವ ಲೆಖ್ಕದ್ದು?

16009028a ರಥಸ್ಯ ಪುರತೋ ಯಾತಿ ಯಃ ಸ ಚಕ್ರಗದಾಧರಃ।
16009028c ತವ ಸ್ನೇಹಾತ್ಪುರಾಣರ್ಷಿರ್ವಾಸುದೇವಶ್ಚತುರ್ಭುಜಃ।।

ನಿನ್ನ ಮೇಲಿನ ಸ್ನೇಹದಿಂದ ರಥದ ಮುಂದೆ ಹೋಗುತ್ತಿದ್ದ ಅವನು ಪುರಾಣ ಋಷಿ ಚಕ್ರಗದಾಧರ ಚತುರ್ಭುಜ ವಾಸುದೇವನು.

16009029a ಕೃತ್ವಾ ಭಾರಾವತರಣಂ ಪೃಥಿವ್ಯಾಃ ಪೃಥುಲೋಚನಃ।
16009029c ಮೋಕ್ಷಯಿತ್ವಾ ಜಗತ್ಸರ್ವಂ ಗತಃ ಸ್ವಸ್ಥಾನಮುತ್ತಮಮ್।।

ಭೂಮಿಯ ಭಾರವನ್ನು ಕಡಿಮೆ ಮಾಡಿ ಸರ್ವ ಜಗತ್ತನ್ನೂ ಬಿಡುಗಡೆಗೊಳಿಸಿ ಆ ಪೃಥುಲೋಚನನು ತನ್ನ ಉತ್ತಮ ಸ್ಥಾನವನ್ನು ಸೇರಿದ್ದಾನೆ.

16009030a ತ್ವಯಾ ತ್ವಿಹ ಮಹತ್ಕರ್ಮ ದೇವಾನಾಂ ಪುರುಷರ್ಷಭ।
16009030c ಕೃತಂ ಭೀಮಸಹಾಯೇನ ಯಮಾಭ್ಯಾಂ ಚ ಮಹಾಭುಜ।।

ಪುರುಷರ್ಷಭ! ಮಹಾಭುಜ! ನೀನಾದರೋ ಭೀಮ ಮತ್ತು ಯಮಳರ ಸಹಾಯದಿಂದ ದೇವತೆಗಳ ಮಹಾ ಕಾರ್ಯವನ್ನು ಮಾಡಿಕೊಟ್ಟಿದ್ದೀಯೆ.

16009031a ಕೃತಕೃತ್ಯಾಂಶ್ಚ ವೋ ಮನ್ಯೇ ಸಂಸಿದ್ಧಾನ್ಕುರುಪುಂಗವ।
16009031c ಗಮನಂ ಪ್ರಾಪ್ತಕಾಲಂ ಚ ತದ್ಧಿ ಶ್ರೇಯೋ ಮತಂ ಮಮ।।

ಕುರುಪುಂಗವು! ನೀವು ಎಲ್ಲವನ್ನು ಸಾಧಿಸಿದ್ದೀರಿ ಮತ್ತು ಕೃತಕೃತ್ಯರಾಗಿದ್ದೀರಿ. ನೀವು ಹೊರಡುವ ಕಾಲವು ಬಂದೊದಗಿದೆಯೆಂದೂ ಅದೇ ನಿಮಗೆ ಶ್ರೇಯಸ್ಕರವೆಂದು ನನ್ನ ಅಭಿಪ್ರಾಯ.

16009032a ಬಲಂ ಬುದ್ಧಿಶ್ಚ ತೇಜಶ್ಚ ಪ್ರತಿಪತ್ತಿಶ್ಚ ಭಾರತ।
16009032c ಭವಂತಿ ಭವಕಾಲೇಷು ವಿಪದ್ಯಂತೇ ವಿಪರ್ಯಯೇ।।

ಭಾರತ! ಬಲ, ಬುದ್ಧಿ, ತೇಜಸ್ಸು ಮತ್ತು ಸಾಧನೆಗಳು ಏಳಿಗೆಯ ಕಾಲದಲ್ಲಿ ಏಳ್ಗೆ ಹೊಂದುತ್ತವೆ ಮತ್ತು ಕಾಲ ವಿಪರ್ಯಾಸವಾದಾಗ ನಷ್ಟವಾಗುತ್ತವೆ.

16009033a ಕಾಲಮೂಲಮಿದಂ ಸರ್ವಂ ಜಗದ್ಬೀಜಂ ಧನಂಜಯ।
16009033c ಕಾಲ ಏವ ಸಮಾದತ್ತೇ ಪುನರೇವ ಯದೃಚ್ಚಯಾ।।

ಧನಂಜಯ! ಇರುವುದೆಲ್ಲವಕ್ಕೂ ಕಾಲವೇ ಮೂಲ. ಕಾಲವೇ ಸರ್ವಜಗತ್ತಿನ ಬೀಜ. ಕಾಲವೇ, ಬಯಸಿದಾಗ, ಪುನಃ ಎಲ್ಲವನ್ನೂ ಹಿಂದೆ ಸೆಳೆದುಕೊಳ್ಳುತ್ತದೆ.

16009034a ಸ ಏವ ಬಲವಾನ್ಭೂತ್ವಾ ಪುನರ್ಭವತಿ ದುರ್ಬಲಃ।
16009034c ಸ ಏವೇಶಶ್ಚ ಭೂತ್ವೇಹ ಪರೈರಾಜ್ಞಾಪ್ಯತೇ ಪುನಃ।।

ಬಲವಂತನಾಗಿದ್ದವನು ಪುನಃ ದುರ್ಬಲನಾಗುತ್ತಾನೆ. ಒಡೆಯನಾಗಿದ್ದವನಿಗೆ ಪುನಃ ಇತರರು ಆಜ್ಞಾಪಿಸುತ್ತಾರೆ.

16009035a ಕೃತಕೃತ್ಯಾನಿ ಚಾಸ್ತ್ರಾಣಿ ಗತಾನ್ಯದ್ಯ ಯಥಾಗತಮ್।
16009035c ಪುನರೇಷ್ಯಂತಿ ತೇ ಹಸ್ತಂ ಯದಾ ಕಾಲೋ ಭವಿಷ್ಯತಿ।।

ಮಾಡಬೇಕಾದುದನ್ನು ಮಾಡಿ ಮುಗಿಸಿದ ಅಸ್ತ್ರಗಳು ಇಂದು ಎಲ್ಲಿಂದ ಬಂದಿದ್ದವೋ ಅಲ್ಲಿಗೆ ಹೊರಟು ಹೋಗಿವೆ. ಮುಂದೆ ಕಾಲವು ಬಂದಾಗ ಪುನಃ ನಿನ್ನ ಕೈಗೆ ಅವು ಬರುತ್ತವೆ.

16009036a ಕಾಲೋ ಗಂತುಂ ಗತಿಂ ಮುಖ್ಯಾಂ ಭವತಾಮಪಿ ಭಾರತ।
16009036c ಏತಚ್ಛ್ರೇಯೋ ಹಿ ವೋ ಮನ್ಯೇ ಪರಮಂ ಭರತರ್ಷಭ।।

ಭಾರತ! ಭರತರ್ಷಭ! ನೀವೂ ಕೂಡ ಕಾಲದ ಗತಿಯಲ್ಲಿ ಹೋಗುವುದು ಮುಖ್ಯ. ಇದರಲ್ಲಿಯೇ ನಿಮ್ಮ ಪರಮ ಶ್ರೇಯವಿದೆಯೆಂದು ನನಗನ್ನಿಸುತ್ತದೆ.”

16009037a ಏತದ್ವಚನಮಾಜ್ಞಾಯ ವ್ಯಾಸಸ್ಯಾಮಿತತೇಜಸಃ।
16009037c ಅನುಜ್ಞಾತೋ ಯಯೌ ಪಾರ್ಥೋ ನಗರಂ ನಾಗಸಾಹ್ವಯಮ್।।

ಅಮಿತತೇಜಸ್ವಿ ವ್ಯಾಸನ ಈ ಮಾತನ್ನು ಆಜ್ಞೆಯೆಂದು ಸ್ವೀಕರಿಸಿ ಅವನಿಂದ ಅಪ್ಪಣೆಪಡೆದು ಪಾರ್ಥನು ಹಸ್ತಿನಾಪುರಕ್ಕೆ ಬಂದನು.

16009038a ಪ್ರವಿಶ್ಯ ಚ ಪುರೀಂ ವೀರಃ ಸಮಾಸಾದ್ಯ ಯುಧಿಷ್ಠಿರಮ್।
16009038c ಆಚಷ್ಟ ತದ್ಯಥಾವೃತ್ತಂ ವೃಷ್ಣ್ಯಂಧಕಜನಂ ಪ್ರತಿ।।

ಆ ವೀರನು ಪುರವನ್ನು ಪ್ರವೇಶಿಸಿ, ಯುಧಿಷ್ಠಿರನನ್ನು ಸಂದರ್ಶಿಸಿ, ಅವನಿಗೆ ವೃಷ್ಣಿ-ಅಂಧಕ ಜನರಿಗೆ ಆದುದೆಲ್ಲವನ್ನೂ ತಿಳಿಸಿದನು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಮೌಸಲಪರ್ವಣಿ ವ್ಯಾಸಾರ್ಜುನಸಂವಾದೇ ನವಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಮೌಸಲಪರ್ವಣಿ ವ್ಯಾಸಾರ್ಜುನಸಂವಾದ ಎನ್ನುವ ಒಂಭತ್ತನೇ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ಮೌಸಲಪರ್ವಃ।
ಇದು ಶ್ರೀ ಮಹಾಭಾರತದಲ್ಲಿ ಮೌಸಲಪರ್ವವು।
ಇದೂವರೆಗಿನ ಒಟ್ಟು ಮಹಾಪರ್ವಗಳು – 16/18, ಉಪಪರ್ವಗಳು-93/100, ಅಧ್ಯಾಯಗಳು-1987/1995, ಶ್ಲೋಕಗಳು-73484/73784