ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಮೌಸಲ ಪರ್ವ
ಮೌಸಲ ಪರ್ವ
ಅಧ್ಯಾಯ 8
ಸಾರ
ವಸುದೇವನೊಂದಿಗೆ ಮಾತನಾಡಿ ಅರ್ಜುನನು ಸುಧರ್ಮ ಸಭೆಯಲ್ಲಿ ಬಂದು ಸೇರಿದ ವೃಷ್ಣಿವೀರರ ಅಮಾತ್ಯರಿಗೆ ತಾನೇ ವೃಷ್ಣಿ-ಅಂಧಕ ಜನರನ್ನು ಇಂದ್ರಪ್ರಸ್ಥಕ್ಕೆ ಕೊಂಡೊಯ್ಯುತ್ತೇನೆಂದು ಹೇಳಿದುದು (1-13). ವಸುದೇವನ ನಿಧನ; ತರ್ಪಣ (14-27). ಮೃತರಾದ ಯಾದವ ವೀರರ ಪ್ರೇತಸಂಸ್ಕಾರಗಳನ್ನು ಪೂರೈಸಿ ಅರ್ಜುನನು ಯಾದವ ಸ್ತ್ರೀಯರು ಮತ್ತು ಪುರಜನರೊಂದಿಗೆ ಇಂದ್ರಪ್ರಸ್ಥದ ಕಡೆ ಪ್ರಯಾಣಿಸಿದುದು; ಅವರು ದ್ವಾರಕೆಯಿಂದ ಹೊರಡುತ್ತಿದ್ದಲೇ ಸಮುದ್ರವು ದ್ವಾರಕೆಯನ್ನು ಮುಳುಗಿಸಿದುದು (28-43). ದಾರಿಯಲ್ಲಿ ದರೋಡೆಕೋರ ಅಭೀರರು ಪಾರ್ಥನನ್ನು ಆಕ್ರಮಣಿಸಿದುದು (44-52). ಅರ್ಜುನನ ಪರಾಭವ (53-64). ವಜ್ರ ನನ್ನು ಇಂದ್ರಪ್ರಸ್ಥದಲ್ಲಿ ಅಭಿಷೇಕಿಸಿ ಅರ್ಜುನನು ಶೋಕದಿಂದ ವ್ಯಾಸಾಶ್ರಮಕ್ಕೆ ತೆರಳಿದುದು (65-74).
16008001 ವೈಶಂಪಾಯನ ಉವಾಚ।
16008001a ಏವಮುಕ್ತಃ ಸ ಬೀಭತ್ಸುರ್ಮಾತುಲೇನ ಪರಂತಪಃ।
16008001c ದುರ್ಮನಾ ದೀನಮನಸಂ ವಸುದೇವಮುವಾಚ ಹ।।
ವೈಶಂಪಾಯನನು ಹೇಳಿದನು: “ದೀನಮನಸ್ಕನಾದ ಸೋದರಮಾವನು ಹೀಗೆ ಹೇಳಲು ಪರಂತಪ ಬೀಭತ್ಸುವು ದುರ್ಮನಸ್ಸಿನಿಂದ ವಸುದೇವನಿಗೆ ಹೇಳಿದನು:
16008002a ನಾಹಂ ವೃಷ್ಣಿಪ್ರವೀರೇಣ ಮಧುಭಿಶ್ಚೈವ ಮಾತುಲ।
16008002c ವಿಹೀನಾಂ ಪೃಥಿವೀಂ ದ್ರಷ್ಟುಂ ಶಕ್ತಶ್ಚಿರಮಿಹ ಪ್ರಭೋ।।
“ಪ್ರಭೋ! ಮಾವ! ವೃಷ್ಣಿಪ್ರವೀರರು ಮತ್ತು ಮಧುಗಳಿಂದ ವಿಹೀನವಾದ ಈ ಭೂಮಿಯನ್ನು ನಾನು ಹೆಚ್ಚು ಕಾಲ ನೋಡಲು ಶಕ್ತನಿಲ್ಲ.
16008003a ರಾಜಾ ಚ ಭೀಮಸೇನಶ್ಚ ಸಹದೇವಶ್ಚ ಪಾಂಡವಃ।
16008003c ನಕುಲೋ ಯಾಜ್ಞಸೇನೀ ಚ ಷಡೇಕಮನಸೋ ವಯಮ್।।
ರಾಜಾ ಯುಧಿಷ್ಠಿರ, ಭೀಮಸೇನ, ಪಾಂಡವ ಸಹದೇವ, ನಕುಲ ಮತ್ತು ಯಾಜ್ಞಸೇನೀ ಈ ನಾವು ಆರು ಮಂದಿ ಒಂದೇ ಮನಸ್ಸುಳ್ಳವರು.
16008004a ರಾಜ್ಞಃ ಸಂಕ್ರಮಣೇ ಚಾಪಿ ಕಾಲೋಽಯಂ ವರ್ತತೇ ಧ್ರುವಮ್।
16008004c ತಮಿಮಂ ವಿದ್ಧಿ ಸಂಪ್ರಾಪ್ತಂ ಕಾಲಂ ಕಾಲವಿದಾಂ ವರ।।
ರಾಜನೂ ಕಾಲಾವತೀತನಾಗುವ ಸಮಯವು ಬಂದಿದೆಯೆನ್ನುವುದು ನಿಶ್ಚಯವೆನಿಸುತ್ತದೆ. ಕಾಲವನ್ನು ಅರಿತವರಲ್ಲಿ ಶ್ರೇಷ್ಠನಾದ ನಿನಗೆ ಬಂದಿರುವ ಕಾಲದ ಕುರಿತು ತಿಳಿದೇ ಇದೆ.
16008005a ಸರ್ವಥಾ ವೃಷ್ಣಿದಾರಾಂಸ್ತು ಬಾಲವೃದ್ಧಾಂಸ್ತಥೈವ ಚ।
16008005c ನಯಿಷ್ಯೇ ಪರಿಗೃಹ್ಯಾಹಮಿಂದ್ರಪ್ರಸ್ಥಮರಿಂದಮ।।
ಅರಿಂದಮ! ವೃಷ್ಣಿ ಸ್ತ್ರೀಯರನ್ನೂ, ಬಾಲ-ವೃದ್ಧರನ್ನೂ ನಾನು ಇಂದ್ರಪ್ರಸ್ಥಕ್ಕೆ ಕರೆದುಕೊಂಡು ಹೋಗುತ್ತೇನೆ.”
16008006a ಇತ್ಯುಕ್ತ್ವಾ ದಾರುಕಮಿದಂ ವಾಕ್ಯಮಾಹ ಧನಂಜಯಃ।
16008006c ಅಮಾತ್ಯಾನ್ವೃಷ್ಣಿವೀರಾಣಾಂ ದ್ರಷ್ಟುಮಿಚ್ಚಾಮಿ ಮಾಚಿರಮ್।।
16008007a ಇತ್ಯೇವಮುಕ್ತ್ವಾ ವಚನಂ ಸುಧರ್ಮಾಂ ಯಾದವೀಂ ಸಭಾಮ್।
16008007c ಪ್ರವಿವೇಶಾರ್ಜುನಃ ಶೂರಃ ಶೋಚಮಾನೋ ಮಹಾರಥಾನ್।।
ಹೀಗೆ ಹೇಳಿ ಧನಂಜಯನು ದಾರುಕನಿಗೆ “ಕೂಡಲೇ ವೃಷ್ಣಿವೀರರ ಅಮಾತ್ಯರನ್ನು ಕಾಣಲು ಬಯಸುತ್ತೇನೆ” ಎಂದನು. ಹೀಗೆ ಹೇಳಿ ಮಹಾರಥರ ಕುರಿತು ಶೋಕಿಸುತ್ತಾ ಆ ಶೂರ ಅರ್ಜುನನು ಯಾದವರ ಸುಧರ್ಮ ಸಭೆಯನ್ನು ಪ್ರವೇಶಿಸಿದನು.
16008008a ತಮಾಸನಗತಂ ತತ್ರ ಸರ್ವಾಃ ಪ್ರಕೃತಯಸ್ತಥಾ।
16008008c ಬ್ರಾಹ್ಮಣಾ ನೈಗಮಾಶ್ಚೈವ ಪರಿವಾರ್ಯೋಪತಸ್ಥಿರೇ।।
ಅವನು ಆಸನ ಗ್ರಹಣ ಮಾಡಲು ಅವನ ಸುತ್ತಲೂ ಪ್ರಜೆಗಳು, ಬ್ರಾಹ್ಮಣರು, ಮಂತ್ರಿಗಳು ಮತ್ತು ವರ್ತಕರು ಕುಳಿತುಕೊಂಡರು.
16008009a ತಾನ್ದೀನಮನಸಃ ಸರ್ವಾನ್ನಿಭೃತಾನ್ಗತಚೇತಸಃ।
16008009c ಉವಾಚೇದಂ ವಚಃ ಪಾರ್ಥಃ ಸ್ವಯಂ ದೀನತರಸ್ತದಾ।।
ಒಡೆಯರಿಗಾಗಿ ಚೇತನವನ್ನೇ ಕಳೆದುಕೊಂಡು ದೀನಮನಸ್ಕರಾಗಿದ್ದ ಅವರೆಲ್ಲರಿಗೆ ಸ್ವಯಂ ದೀನನಾಗಿದ್ದ ಪಾರ್ಥನು ಈ ಮಾತನ್ನಾಡಿದನು:
16008010a ಶಕ್ರಪ್ರಸ್ಥಮಹಂ ನೇಷ್ಯೇ ವೃಷ್ಣ್ಯಂಧಕಜನಂ ಸ್ವಯಮ್।
16008010c ಇದಂ ತು ನಗರಂ ಸರ್ವಂ ಸಮುದ್ರಃ ಪ್ಲಾವಯಿಷ್ಯತಿ।।
“ಸ್ವಯಂ ನಾನೇ ವೃಷ್ಣಿ-ಅಂಧಕ ಜನರನ್ನು ಇಂದ್ರಪ್ರಸ್ಥಕ್ಕೆ ಕೊಂಡೊಯ್ಯುತ್ತೇನೆ. ಈ ನಗರವೆಲ್ಲವನ್ನೂ ಸಮುದ್ರವು ಮುಳುಗಿಸಲಿಕ್ಕಿದೆ.
16008011a ಸಜ್ಜೀಕುರುತ ಯಾನಾನಿ ರತ್ನಾನಿ ವಿವಿಧಾನಿ ಚ।
16008011c ವಜ್ರೋಽಯಂ ಭವತಾಂ ರಾಜಾ ಶಕ್ರಪ್ರಸ್ಥೇ ಭವಿಷ್ಯತಿ।।
ರಥಗಳನ್ನೂ, ವಿವಿಧರತ್ನಗಳನ್ನೂ ಸಜ್ಜುಗೊಳಿಸಿ. ಈ ವಜ್ರನು ಇಂದ್ರಪ್ರಸ್ಥದಲ್ಲಿ ನಿಮ್ಮೆಲ್ಲರ ರಾಜನಾಗುತ್ತಾನೆ.
16008012a ಸಪ್ತಮೇ ದಿವಸೇ ಚೈವ ರವೌ ವಿಮಲ ಉದ್ಗತೇ।
16008012c ಬಹಿರ್ವತ್ಸ್ಯಾಮಹೇ ಸರ್ವೇ ಸಜ್ಜೀಭವತ ಮಾಚಿರಮ್।।
ಇಂದಿನಿಂದ ಏಳನೇ ದಿವಸದಂದು ವಿಮಲ ರವಿಯು ಉದಯಿಸುವಾಗ ನಾವೆಲ್ಲರೂ ಇಲ್ಲಿಂದ ಹೊರಡೋಣ! ಸಜ್ಜುಗೊಳಿಸಿ! ತಡಮಾಡಬೇಡಿ!”
16008013a ಇತ್ಯುಕ್ತಾಸ್ತೇನ ತೇ ಪೌರಾಃ ಪಾರ್ಥೇನಾಕ್ಲಿಷ್ಟಕರ್ಮಣಾ।
16008013c ಸಜ್ಜಮಾಶು ತತಶ್ಚಕ್ರುಃ ಸ್ವಸಿದ್ಧ್ಯರ್ಥಂ ಸಮುತ್ಸುಕಾಃ।।
ಅಕ್ಲಿಷ್ಟಕರ್ಮಿ ಪಾರ್ಥನು ಹೀಗೆ ಹೇಳಲು ಪೌರರು ತಮ್ಮದೇ ಏಳ್ಗೆಗಾಗಿ ಉತ್ಸಾಹದಿಂದ ತಯಾರಿ ನಡೆಸಿದರು.
16008014a ತಾಂ ರಾತ್ರಿಮವಸತ್ಪಾರ್ಥಃ ಕೇಶವಸ್ಯ ನಿವೇಶನೇ।
16008014c ಮಹತಾ ಶೋಕಮೋಹೇನ ಸಹಸಾಭಿಪರಿಪ್ಲುತಃ।।
ಆ ರಾತ್ರಿಯನ್ನು ಪಾರ್ಥನು ಕೇಶವನ ಮನೆಯಲ್ಲಿ ಕಳೆದನು. ಅಲ್ಲಿ ಅವನು ಒಮ್ಮೆಲೇ ಶೋಕಮೋಹಗಳಲ್ಲಿ ಮುಳುಗಿಹೋದನು.
16008015a ಶ್ವೋಭೂತೇಽಥ ತತಃ ಶೌರಿರ್ವಸುದೇವಃ ಪ್ರತಾಪವಾನ್।
16008015c ಯುಕ್ತ್ವಾತ್ಮಾನಂ ಮಹಾತೇಜಾ ಜಗಾಮ ಗತಿಮುತ್ತಮಾಮ್।।
ಮರುದಿನ ಬೆಳಿಗ್ಗೆ ಪ್ರತಾಪವಾನ್ ಮಹಾತೇಜಸ್ವಿ ಶೌರಿ ವಸುದೇವನು ತನ್ನನ್ನು ಯೋಗದಲ್ಲಿ ತೊಡಗಿಸಿಕೊಂಡು ಉತ್ತಮ ಗತಿಯನ್ನು ಹೊಂದಿದನು.
16008016a ತತಃ ಶಬ್ಧೋ ಮಹಾನಾಸೀದ್ವಸುದೇವಸ್ಯ ವೇಶ್ಮನಿ।
16008016c ದಾರುಣಃ ಕ್ರೋಶತೀನಾಂ ಚ ರುದತೀನಾಂ ಚ ಯೋಷಿತಾಮ್।।
16008017a ಪ್ರಕೀರ್ಣಮೂರ್ಧಜಾಃ ಸರ್ವಾ ವಿಮುಕ್ತಾಭರಣಸ್ರಜಃ।
16008017c ಉರಾಂಸಿ ಪಾಣಿಭಿರ್ಘ್ನಂತ್ಯೋ ವ್ಯಲಪನ್ಕರುಣಂ ಸ್ತ್ರಿಯಃ।।
ಆಗ ವಸುದೇವನ ಮನೆಯಲ್ಲಿ ಸ್ತ್ರೀಯರ ದಾರುಣ ಕೂಗು ಮತ್ತು ರೋದನಗಳ ಮಹಾ ಶಬ್ಧವು ಕೇಳಿಬಂದಿತು. ಆ ಎಲ್ಲ ಸ್ತ್ರೀಯರೂ ತಲೆಗೂದಲನ್ನು ಕೆದರಿಕೊಂಡು, ಆಭರಣ-ಹಾರಗಳನ್ನು ಕಳಚಿಕೊಂಡು, ಕೈಗಳಿಂದ ಎದೆಗಳನ್ನು ಹೊಡೆದುಕೊಳ್ಳುತ್ತಾ ದೀನರಾಗಿ ವಿಲಪಿಸುತ್ತಿದ್ದರು.
16008018a ತಂ ದೇವಕೀ ಚ ಭದ್ರಾ ಚ ರೋಹಿಣೀ ಮದಿರಾ ತಥಾ।
16008018c ಅನ್ವಾರೋಢುಂ ವ್ಯವಸಿತಾ ಭರ್ತಾರಂ ಯೋಷಿತಾಂ ವರಾಃ।।
ಸ್ತ್ರೀಶ್ರೇಷ್ಠರಾದ ದೇವಕೀ, ಭದ್ರಾ, ರೋಹಿಣೀ ಮತ್ತು ಮದಿರೆಯರು ಪತಿಯ ಚಿತೆಯನ್ನು ಏರುವ ಮನಸ್ಸುಮಾಡಿದರು.
16008019a ತತಃ ಶೌರಿಂ ನೃಯುಕ್ತೇನ ಬಹುಮಾಲ್ಯೇನ ಭಾರತ।
16008019c ಯಾನೇನ ಮಹತಾ ಪಾರ್ಥೋ ಬಹಿರ್ನಿಷ್ಕ್ರಾಮಯತ್ತದಾ।।
ಭಾರತ! ಆಗ ಪಾರ್ಥನು ಮನುಷ್ಯರು ಎತ್ತಿಕೊಂಡು ಹೋಗುವ ಬಹುಮಾಲೆಗಳಿಂದ ಅಲಂಕೃತಗೊಂಡ ದೊಡ್ಡ ಯಾನದಲ್ಲಿ ಶೌರಿಯ ಮೃತಶರೀರವನ್ನು ಹೊರತರಿಸಿದನು.
16008020a ತಮನ್ವಯುಸ್ತತ್ರ ತತ್ರ ದುಃಖಶೋಕಸಮಾಹತಾಃ।
16008020c ದ್ವಾರಕಾವಾಸಿನಃ ಪೌರಾಃ ಸರ್ವ ಏವ ನರರ್ಷಭ।।
ನರರ್ಷಭ! ದುಃಖ ಶೋಕ ಸಮಾಹತರಾದ ದ್ವಾರಕಾವಾಸೀ ಪೌರರೆಲ್ಲರೂ ಅವನನ್ನು ಅನುಸರಿಸಿದರು.
16008021a ತಸ್ಯಾಶ್ವಮೇಧಿಕಂ ಚತ್ರಂ ದೀಪ್ಯಮಾನಾಶ್ಚ ಪಾವಕಾಃ।
16008021c ಪುರಸ್ತಾತ್ತಸ್ಯ ಯಾನಸ್ಯ ಯಾಜಕಾಶ್ಚ ತತೋ ಯಯುಃ।।
ಆ ಯಾನದ ಮುಂದೆ ಅಶ್ವಮೇಧದ ಚತ್ರ, ಉರಿಯುತ್ತಿರುವ ಅಗ್ನಿ, ಮತ್ತು ಯಾಜಕರು ನಡೆದರು.
16008022a ಅನುಜಗ್ಮುಶ್ಚ ತಂ ವೀರಂ ದೇವ್ಯಸ್ತಾ ವೈ ಸ್ವಲಂಕೃತಾಃ।
16008022c ಸ್ತ್ರೀಸಹಸ್ರೈಃ ಪರಿವೃತಾ ವಧೂಭಿಶ್ಚ ಸಹಸ್ರಶಃ।।
ಸಹಸ್ರಾರು ಸೊಸೆಯರು ಮತ್ತು ಸಹಸ್ರಾರು ಇತರ ಸ್ತ್ರೀಯರಿಂದ ಪರಿವೃತರಾಗಿ ಅಲಂಕೃತರಾದ ದೇವಿಯರು ಆ ವೀರನನ್ನು ಹಿಂಬಾಲಿಸಿ ಹೋದರು.
16008023a ಯಸ್ತು ದೇಶಃ ಪ್ರಿಯಸ್ತಸ್ಯ ಜೀವತೋಽಭೂನ್ಮಹಾತ್ಮನಃ।
16008023c ತತ್ರೈನಮುಪಸಂಕಲ್ಪ್ಯ ಪಿತೃಮೇಧಂ ಪ್ರಚಕ್ರಿರೇ।।
ಜೀವಂತವಾಗಿರುವಾಗ ಆ ಮಹಾತ್ಮನಿಗೆ ಯಾವ ಪ್ರದೇಶವು ಪ್ರಿಯವಾಗಿತ್ತೋ ಅದೇ ಪ್ರದೇಶದಲ್ಲಿ ಸಂಕಲ್ಪಿಸಿ ಪಿತೃಮೇಧವನ್ನು ನೆರವೇರಿಸಿದರು.
16008024a ತಂ ಚಿತಾಗ್ನಿಗತಂ ವೀರಂ ಶೂರಪುತ್ರಂ ವರಾಂಗನಾಃ।
16008024c ತತೋಽನ್ವಾರುರುಹುಃ ಪತ್ನ್ಯಶ್ಚತಸ್ರಃ ಪತಿಲೋಕಗಾಃ।।
ಅವನ ನಾಲ್ವರು ವರಾಂಗನೆ ಪತ್ನಿಯರೂ ಚಿತಾಗ್ನಿಗತನಾದ ಆ ವೀರ ಶೂರಪುತ್ರನ ಚಿತೆಯನ್ನು ಏರಿ ಪತಿಯು ಹೋದ ಲೋಕವನ್ನು ಸೇರಿದರು.
16008025a ತಂ ವೈ ಚತಸೃಭಿಃ ಸ್ತ್ರೀಭಿರನ್ವಿತಂ ಪಾಂಡುನಂದನಃ।
16008025c ಅದಾಹಯಚ್ಚಂದನೈಶ್ಚ ಗಂಧೈರುಚ್ಚಾವಚೈರಪಿ।।
ಪಾಂಡುನಂದನನು ಹಿಂಬಾಲಿಸಿ ಹೋದ ಆ ನಾಲ್ವರು ಸ್ತ್ರೀಯರನ್ನೂ ಚಂದನ-ಗಂಧಗಳಿಂದ ದಹನಮಾಡಿದನು.
16008026a ತತಃ ಪ್ರಾದುರಭೂಚ್ಛಬ್ಧಃ ಸಮಿದ್ಧಸ್ಯ ವಿಭಾವಸೋಃ।
16008026c ಸಾಮಗಾನಾಂ ಚ ನಿರ್ಘೋಷೋ ನರಾಣಾಂ ರುದತಾಮಪಿ।।
ಆಗ ಅಗ್ನಿಯು ಸಮಿತ್ತನ್ನು ಸುಡುತ್ತಿರುವ ಶಬ್ಧ, ಸಾಮಗಾನದ ನಿರ್ಘೋಷ ಮತ್ತು ಮನುಷ್ಯರ ರೋದನಗಳು ಮಾತ್ರ ಕೇಳಿಬರುತ್ತಿದ್ದವು.
16008027a ತತೋ ವಜ್ರಪ್ರಧಾನಾಸ್ತೇ ವೃಷ್ಣಿವೀರಕುಮಾರಕಾಃ।
16008027c ಸರ್ವ ಏವೋದಕಂ ಚಕ್ರುಃ ಸ್ತ್ರಿಯಶ್ಚೈವ ಮಹಾತ್ಮನಃ।।
ಅನಂತರ ವಜ್ರನ ನಾಯಕತ್ವದಲ್ಲಿ ವೃಷ್ಣಿವೀರ ಕುಮಾರರು ಮತ್ತು ಸ್ತ್ರೀಯರು ಎಲ್ಲರೂ ಮಹಾತ್ಮ ವಸುದೇವನಿಗೆ ತರ್ಪಣ ಕ್ರಿಯೆಗಳನ್ನು ನಡೆಸಿದರು.
16008028a ಅಲುಪ್ತಧರ್ಮಸ್ತಂ ಧರ್ಮಂ ಕಾರಯಿತ್ವಾ ಸ ಫಲ್ಗುನಃ।
16008028c ಜಗಾಮ ವೃಷ್ಣಯೋ ಯತ್ರ ವಿನಷ್ಟಾ ಭರತರ್ಷಭ।।
ಭರತರ್ಷಭ! ಧರ್ಮದಿಂದ ಲುಪ್ತನಾಗದ ಫಲ್ಗುನನು ಆ ಧರ್ಮಕಾರ್ಯವನ್ನು ಎಸಗಿ ವೃಷ್ಣಿಯರು ನಾಶವಾದ ಸ್ಥಳಕ್ಕೆ ಹೋದನು.
16008029a ಸ ತಾನ್ದೃಷ್ಟ್ವಾ ನಿಪತಿತಾನ್ಕದನೇ ಭೃಶದುಃಖಿತಃ।
16008029c ಬಭೂವಾತೀವ ಕೌರವ್ಯಃ ಪ್ರಾಪ್ತಕಾಲಂ ಚಕಾರ ಚ।।
ಕದನದಲ್ಲಿ ಹತರಾಗಿ ಬಿದ್ದಿದ್ದ ಅವರನ್ನು ನೋಡಿ ಕೌರವ್ಯನು ತುಂಬಾ ದುಃಖಿತನಾದನು. ಸಮಯಕ್ಕೆ ತಕ್ಕ ಕಾರ್ಯವನ್ನೆಸಗಲು ಅನುವಾದನು.
16008030a ಯಥಾಪ್ರಧಾನತಶ್ಚೈವ ಚಕ್ರೇ ಸರ್ವಾಃ ಕ್ರಿಯಾಸ್ತದಾ।
16008030c ಯೇ ಹತಾ ಬ್ರಹ್ಮಶಾಪೇನ ಮುಸಲೈರೇರಕೋದ್ಭವೈಃ।।
ಹಿರಿಯರಿಂದ ಮೊದಲ್ಗೊಂಡು ಆ ಬ್ರಾಹ್ಮಣ ಶಾಪದಿಂದ ಉದ್ಭವಿಸಿದ್ದ ಎರಕಗಳಿಂದ ಹತರಾದ ಅವರೆಲ್ಲರ ಕ್ರಿಯೆಗಳನ್ನೂ ನಡೆಸಿದನು.
16008031a ತತಃ ಶರೀರೇ ರಾಮಸ್ಯ ವಾಸುದೇವಸ್ಯ ಚೋಭಯೋಃ।
16008031c ಅನ್ವಿಷ್ಯ ದಾಹಯಾಮಾಸ ಪುರುಷೈರಾಪ್ತಕಾರಿಭಿಃ।।
ಅನಂತರ ರಾಮ ಮತ್ತು ವಾಸುದೇವ ಇಬ್ಬರ ಶರೀರಗಳನ್ನೂ ಹುಡುಕಿಸಿ ಆಪ್ತಜನರಿಂದ ದಹನಸಂಸ್ಕಾರವನ್ನು ಮಾಡಿಸಿದನು.
16008032a ಸ ತೇಷಾಂ ವಿಧಿವತ್ಕೃತ್ವಾ ಪ್ರೇತಕಾರ್ಯಾಣಿ ಪಾಂಡವಃ।
16008032c ಸಪ್ತಮೇ ದಿವಸೇ ಪ್ರಾಯಾದ್ರಥಮಾರುಹ್ಯ ಸತ್ವರಃ।
ಅವರ ಪ್ರೇತಕಾರ್ಯಗಳನ್ನು ವಿಧಿವತ್ತಾಗಿ ಪೂರೈಸಿ ಸತ್ವರ ಪಾಂಡವನು ಏಳನೆಯ ದಿವಸ ರಥವನ್ನೇರಿ ಹೊರಟನು.
16008032e ಅಶ್ವಯುಕ್ತೈ ರಥೈಶ್ಚಾಪಿ ಗೋಖರೋಷ್ಟ್ರಯುತೈರಪಿ।।
16008033a ಸ್ತ್ರಿಯಸ್ತಾ ವೃಷ್ಣಿವೀರಾಣಾಂ ರುದತ್ಯಃ ಶೋಕಕರ್ಶಿತಾಃ।
16008033c ಅನುಜಗ್ಮುರ್ಮಹಾತ್ಮಾನಂ ಪಾಂಡುಪುತ್ರಂ ಧನಂಜಯಮ್।।
ಕುದುರೆಗಳು, ಎತ್ತುಗಳು, ಮತ್ತು ಕತ್ತೆಗಳನ್ನು ಹೂಡಿದ ರಥಗಳ ಮೇಲೆ ಶೋಕಕರ್ಶಿತ ವೃಷ್ಣಿವೀರರ ಸ್ತ್ರೀಯರು ರೋದಿಸುತ್ತಾ ಪಾಂಡುಪುತ್ರ ಮಹಾತ್ಮ ಧನಂಜಯನನ್ನು ಅನುಸರಿಸಿ ಹೋದರು.
16008034a ಭೃತ್ಯಾಸ್ತ್ವಂಧಕವೃಷ್ಣೀನಾಂ ಸಾದಿನೋ ರಥಿನಶ್ಚ ಯೇ।
16008034c ವೀರಹೀನಂ ವೃದ್ಧಬಾಲಂ ಪೌರಜಾನಪದಾಸ್ತಥಾ।
16008034e ಯಯುಸ್ತೇ ಪರಿವಾರ್ಯಾಥ ಕಲತ್ರಂ ಪಾರ್ಥಶಾಸನಾತ್।।
ಪಾರ್ಥನ ಆಜ್ಞೆಯಂತೆ ವೀರರನ್ನು ಕಳೆದುಕೊಂಡ ವೃಷ್ಣಿ-ಅಂಧಕರ ಸೇವಕರು, ಅಶ್ವಾರೋಹಿಗಳು, ರಥಾರೂಢರು, ವೃದ್ಧ-ಬಾಲಕ ಪೌರಜನರು ಎಲ್ಲರೂ ಸ್ತ್ರೀಯರನ್ನು ಸುತ್ತುವರೆದು ನಡೆದರು.
16008035a ಕುಂಜರೈಶ್ಚ ಗಜಾರೋಹಾ ಯಯುಃ ಶೈಲನಿಭೈಸ್ತಥಾ।
16008035c ಸಪಾದರಕ್ಷೈಃ ಸಂಯುಕ್ತಾಃ ಸೋತ್ತರಾಯುಧಿಕಾ ಯಯುಃ।।
ಪರ್ವತದಂತಿದ್ದ ಆನೆಗಳನ್ನೇರಿ, ಪಾದರಕ್ಷಕರೊಂದಿಗೆ ಗಜಾರೋಹಿಗಳೂ ಮೀಸಲು ಪಡೆಗಳೂ ನಡೆದವು.
16008036a ಪುತ್ರಾಶ್ಚಾಂಧಕವೃಷ್ಣೀನಾಂ ಸರ್ವೇ ಪಾರ್ಥಮನುವ್ರತಾಃ।
16008036c ಬ್ರಾಹ್ಮಣಾಃ ಕ್ಷತ್ರಿಯಾ ವೈಶ್ಯಾಃ ಶೂದ್ರಾಶ್ಚೈವ ಮಹಾಧನಾಃ।।
ಅಂಧಕ-ವೃಷ್ಣಿಯರ ಮಕ್ಕಳೆಲ್ಲರೂ, ಶ್ರೀಮಂತ ಬ್ರಾಹ್ಮಣ-ಕ್ಷತ್ರಿಯ-ವೈಶ್ಯ- ಶೂದ್ರರೂ ಪಾರ್ಥನನ್ನು ಅನುಸರಿಸಿ ಹೋದರು.
16008037a ದಶ ಷಟ್ಚ ಸಹಸ್ರಾಣಿ ವಾಸುದೇವಾವರೋಧನಮ್।
16008037c ಪುರಸ್ಕೃತ್ಯ ಯಯುರ್ವಜ್ರಂ ಪೌತ್ರಂ ಕೃಷ್ಣಸ್ಯ ಧೀಮತಃ।।
ವಾಸುದೇವನ ಹದಿನಾರು ಸಾವಿರ ಪತ್ನಿಯರು ಧೀಮತ ಕೃಷ್ಣನ ಮೊಮ್ಮಗ ವಜ್ರನನ್ನು ಮುಂದಿರಿಸಿಕೊಂಡು ಹೋದರು.
16008038a ಬಹೂನಿ ಚ ಸಹಸ್ರಾಣಿ ಪ್ರಯುತಾನ್ಯರ್ಬುದಾನಿ ಚ।
16008038c ಭೋಜವೃಷ್ಣ್ಯಂಧಕಸ್ತ್ರೀಣಾಂ ಹತನಾಥಾನಿ ನಿರ್ಯಯುಃ।।
ನಾಥರನ್ನು ಕಳೆದುಕೊಂಡ ಅನೇಕ ಸಾವಿರ, ಅನೇಕ ಕೋಟಿ, ಅನೇಕ ಅರ್ಬುದ ಭೋಜ-ವೃಷ್ಣಿ-ಅಂಧಕ ಸ್ತ್ರೀಯರು ಹಿಂಬಾಲಿಸಿ ಹೋದರು.
16008039a ತತ್ಸಾಗರಸಮಪ್ರಖ್ಯಂ ವೃಷ್ಣಿಚಕ್ರಂ ಮಹರ್ದ್ಧಿಮತ್।
16008039c ಉವಾಹ ರಥಿನಾಂ ಶ್ರೇಷ್ಠಃ ಪಾರ್ಥಃ ಪರಪುರಂಜಯಃ।।
ಮಹಾ ಸಾಗರದಂತಿದ್ದ ಆ ವೃಷ್ಣಿಚಕ್ರವನ್ನೂ, ಮಹಾ ಸಂಪತ್ತನ್ನೂ ರಥಿಗಳಲ್ಲಿ ಶ್ರೇಷ್ಠ, ಪರಪುರಂಜಯ ಪಾರ್ಥನು ಕರೆದುಕೊಂಡು ಹೋದನು.
16008040a ನಿರ್ಯಾತೇ ತು ಜನೇ ತಸ್ಮಿನ್ಸಾಗರೋ ಮಕರಾಲಯಃ।
16008040c ದ್ವಾರಕಾಂ ರತ್ನಸಂಪೂರ್ಣಾಂ ಜಲೇನಾಪ್ಲಾವಯತ್ತದಾ।।
ಆ ಜನರು ಹೊರಟುಹೋದ ಕೂಡಲೇ ಮಕರಾಲಯ ಸಾಗರವು ರತ್ನಗಳಿಂದ ತುಂಬಿದ್ದ ದ್ವಾರಕೆಯನ್ನು ತನ್ನ ನೀರಿನಿಂದ ಮುಳುಗಿಸಿತು.
16008041a ತದದ್ಭುತಮಭಿಪ್ರೇಕ್ಷ್ಯ ದ್ವಾರಕಾವಾಸಿನೋ ಜನಾಃ।
16008041c ತೂರ್ಣಾತ್ತೂರ್ಣತರಂ ಜಗ್ಮುರಹೋ ದೈವಮಿತಿ ಬ್ರುವನ್।।
ಆ ಅದ್ಭುತವನ್ನು ನೋಡಿದ ದ್ವಾರಕಾಪುರವಾಸೀ ಜನರು ಅಯ್ಯೋ ದೈವವೇ ಎನ್ನುತ್ತಾ ಜೋರುಜೋರಾಗಿ ಮುಂದುವರೆದರು.
16008042a ಕಾನನೇಷು ಚ ರಮ್ಯೇಷು ಪರ್ವತೇಷು ನದೀಷು ಚ।
16008042c ನಿವಸನ್ನಾನಯಾಮಾಸ ವೃಷ್ಣಿದಾರಾನ್ಧನಂಜಯಃ।।
ಧನಂಜಯನು ಕಾನನಗಳಲ್ಲಿ, ರಮ್ಯ ಪರ್ವತಗಳಲ್ಲಿ ಮತ್ತು ನದೀ ತೀರಗಳಲ್ಲಿ ತಂಗುತ್ತಾ ವೃಷ್ಣಿಸ್ತ್ರೀಯರನ್ನು ಕರೆದುಕೊಂಡು ಹೋದನು.
16008043a ಸ ಪಂಚನದಮಾಸಾದ್ಯ ಧೀಮಾನತಿಸಮೃದ್ಧಿಮತ್।
16008043c ದೇಶೇ ಗೋಪಶುಧಾನ್ಯಾಢ್ಯೇ ನಿವಾಸಮಕರೋತ್ಪ್ರಭುಃ।।
ಐದು ನದಿಗಳ ಪ್ರದೇಶವನ್ನು ತಲುಪಿ ಧೀಮಾನ್ ಪ್ರಭು ಅರ್ಜುನನು ಗೋಪಶುಗಳು ಮತ್ತು ಧನ ಸಮೃದ್ಧವಾಗಿದ್ದ ಆ ಪ್ರದೇಶದಲ್ಲಿ ಬೀಡುಬಿಟ್ಟನು.
16008044a ತತೋ ಲೋಭಃ ಸಮಭವದ್ದಸ್ಯೂನಾಂ ನಿಹತೇಶ್ವರಾಃ।
16008044c ದೃಷ್ಟ್ವಾ ಸ್ತ್ರಿಯೋ ನೀಯಮಾನಾಃ ಪಾರ್ಥೇನೈಕೇನ ಭಾರತ।।
ಭಾರತ! ಪತಿಗಳನ್ನು ಕಳೆದುಕೊಂಡ ಸ್ತ್ರೀಯರನ್ನು ಪಾರ್ಥನೊಬ್ಬನೇ ಕರೆದುಕೊಂಡು ಹೋಗುತ್ತಿದ್ದಾನೆನ್ನುವುದನ್ನು ನೋಡಿ ದಸ್ಯುಗಳಿಗೆ ಲೋಭವುಂಟಾಯಿತು.
16008045a ತತಸ್ತೇ ಪಾಪಕರ್ಮಾಣೋ ಲೋಭೋಪಹತಚೇತಸಃ।
16008045c ಆಭೀರಾ ಮಂತ್ರಯಾಮಾಸುಃ ಸಮೇತ್ಯಾಶುಭದರ್ಶನಾಃ।।
ಆಗ ಲೋಭದಿಂದ ಬುದ್ಧಿಯನ್ನೇ ಕಳೆದುಕೊಂಡು ಅಶುಭರಂತೆ ಕಾಣುತ್ತಿದ್ದ ಆ ಪಾಪಕರ್ಮಿ ಅಭೀರರು ಒಂದಾಗಿ ಸಮಾಲೋಚನೆಮಾಡಿದರು:
16008046a ಅಯಮೇಕೋಽರ್ಜುನೋ ಯೋದ್ಧಾ ವೃದ್ಧಬಾಲಂ ಹತೇಶ್ವರಮ್।
16008046c ನಯತ್ಯಸ್ಮಾನತಿಕ್ರಮ್ಯ ಯೋಧಾಶ್ಚೇಮೇ ಹತೌಜಸಃ।।
“ಈ ಯೋಧ ಅರ್ಜುನನೊಬ್ಬನೇ ಗಂಡಸರನ್ನು ಕಳೆದುಕೊಂಡಿರುವ ವೃದ್ಧಬಾಲರನ್ನು ಕರೆದುಕೊಂಡು, ನಮ್ಮ ಈ ಪ್ರದೇಶವನ್ನು ದಾಟಿ, ಹೋಗುತ್ತಿದ್ದಾನೆ! ಅವನಲ್ಲಿದ್ದ ಯೋಧರೂ ಕೂಡ ತಮ್ಮ ತೇಜಸ್ಸನ್ನು ಕಳೆದುಕೊಂಡಿದ್ದಾರೆ!”
16008047a ತತೋ ಯಷ್ಟಿಪ್ರಹರಣಾ ದಸ್ಯವಸ್ತೇ ಸಹಸ್ರಶಃ।
16008047c ಅಭ್ಯಧಾವಂತ ವೃಷ್ಣೀನಾಂ ತಂ ಜನಂ ಲೋಪ್ತ್ರಹಾರಿಣಃ।।
ಆಗ ದಂಡಗಳನ್ನು ಹಿಡಿದ ಸಹಸ್ರಾರು ದರೋಡೆಕೋರ ದಸ್ಯುಗಳು ವೃಷ್ಣಿಗಳ ಜನರನ್ನು ಅಕ್ರಮಣಿಸಿದರು.
16008048a ಮಹತಾ ಸಿಂಹನಾದೇನ ದ್ರಾವಯಂತಃ ಪೃಥಗ್ಜನಮ್।
16008048c ಅಭಿಪೇತುರ್ಧನಾರ್ಥಂ ತೇ ಕಾಲಪರ್ಯಾಯಚೋದಿತಾಃ।।
ಕಾಲದ ಬದಲಾವಣೆಯಿಂದ ಪ್ರೇರಿತರಾದ ಅವರು ಮಹಾಸಿಂಹನಾದದೊಂದಿಗೆ ಓಡಿಬಂದು, ದರೋಡೆ ಮಾಡುವ ಸಲುವಾಗಿ, ಸಾಮಾನ್ಯ ಜನರ ಆ ಗುಂಪಿನ ಮೇಲೆ ಎರಗಿದರು.
16008049a ತತೋ ನಿವೃತ್ತಃ ಕೌಂತೇಯಃ ಸಹಸಾ ಸಪದಾನುಗಃ।
16008049c ಉವಾಚ ತಾನ್ಮಹಾಬಾಹುರರ್ಜುನಃ ಪ್ರಹಸನ್ನಿವ।।
ಕೂಡಲೇ ಮಹಾಬಾಹು ಕೌಂತೇಯ ಅರ್ಜುನನು ತನ್ನ ಅನುಯಾಯಿಗಳೊಂದಿಗೆ ಹಿಂದಿರುಗಿ ನಗುತ್ತಾ ಅವರಿಗೆ ಹೇಳಿದನು:
16008050a ನಿವರ್ತಧ್ವಮಧರ್ಮಜ್ಞಾ ಯದಿ ಸ್ಥ ನ ಮುಮೂರ್ಷವಃ।
16008050c ನೇದಾನೀಂ ಶರನಿರ್ಭಿನ್ನಾಃ ಶೋಚಧ್ವಂ ನಿಹತಾ ಮಯಾ।।
“ಅಧರ್ಮಜ್ಞರೇ! ಸಾವನ್ನು ಬಯಸದಿದ್ದರೆ ಹಿಂದೆ ಸರಿಯಿರಿ! ನನ್ನ ಈ ಶರಗಳಿಂದ ಗಾಯಗೊಂಡು ಶೋಕದಿಂದ ಹತರಾಗಬೇಡಿ!”
16008051a ತಥೋಕ್ತಾಸ್ತೇನ ವೀರೇಣ ಕದರ್ಥೀಕೃತ್ಯ ತದ್ವಚಃ।
16008051c ಅಭಿಪೇತುರ್ಜನಂ ಮೂಢಾ ವಾರ್ಯಮಾಣಾಃ ಪುನಃ ಪುನಃ।।
ವೀರ ಅರ್ಜುನನು ಹಾಗೆ ಹೇಳಿದರೂ ಅವನ ಮಾತನ್ನು ಅನಾದರಿಸಿ, ಅವನು ಪುನಃ ಪುನಃ ತಡೆಯುತ್ತಿದ್ದರೂ, ಆ ಮೂಢಜನರು ಆಕ್ರಮಣಿಸಿದರು.
16008052a ತತೋಽರ್ಜುನೋ ಧನುರ್ದಿವ್ಯಂ ಗಾಂಡೀವಮಜರಂ ಮಹತ್।
16008052c ಆರೋಪಯಿತುಮಾರೇಭೇ ಯತ್ನಾದಿವ ಕಥಂ ಚನ।।
ಆಗ ಅರ್ಜುನನು ಅಜರವಾಗಿದ್ದ ದಿವ್ಯ ಮಹಾಧನುಸ್ಸು ಗಾಂಡೀವಕ್ಕೆ ಶಿಂಜಿನಿಯನ್ನು ಬಿಗಿಯಲು ಪ್ರಯತ್ನಿಸಿದರೂ ಅದು ಅವನಿಗೆ ಸಾಧ್ಯವಾಗಲಿಲ್ಲ.
16008053a ಚಕಾರ ಸಜ್ಯಂ ಕೃಚ್ಚ್ರೇಣ ಸಂಭ್ರಮೇ ತುಮುಲೇ ಸತಿ।
16008053c ಚಿಂತಯಾಮಾಸ ಚಾಸ್ತ್ರಾಣಿ ನ ಚ ಸಸ್ಮಾರ ತಾನ್ಯಪಿ।।
ಆ ತುಮುಲ ಸಂಭ್ರಮದಲ್ಲಿ ಕಷ್ಟಪಟ್ಟು ಶಿಂಜಿನಿಯನ್ನು ಬಿಗಿದು ಅವನು ಅಸ್ತ್ರಗಳ ಕುರಿತು ಯೋಚಿಸಲು, ಅವುಗಳ್ಯಾವುವೂ ಅವನ ಸ್ಮರಣೆಗೆ ಬರಲಿಲ್ಲ.
16008054a ವೈಕೃತ್ಯಂ ತನ್ಮಹದ್ದೃಷ್ಟ್ವಾ ಭುಜವೀರ್ಯೇ ತಥಾ ಯುಧಿ।
16008054c ದಿವ್ಯಾನಾಂ ಚ ಮಹಾಸ್ತ್ರಾಣಾಂ ವಿನಾಶಾದ್ವ್ರೀಡಿತೋಽಭವತ್।।
ಯುದ್ಧದ ಸಮಯದಲ್ಲಿದ್ದ ಅವನ ಆ ಮಹಾ ಭುಜವೀರ್ಯವು ಮತ್ತು ದಿವ್ಯ ಮಹಾಸ್ತ್ರಗಳು ಅಸಫಲವಾಗಲು ಅರ್ಜುನನಿಗೆ ನಾಚಿಕೆಯಾಯಿತು.
16008055a ವೃಷ್ಣಿಯೋಧಾಶ್ಚ ತೇ ಸರ್ವೇ ಗಜಾಶ್ವರಥಯಾಯಿನಃ।
16008055c ನ ಶೇಕುರಾವರ್ತಯಿತುಂ ಹ್ರಿಯಮಾಣಂ ಚ ತಂ ಜನಮ್।।
ಆನೆ-ಕುದುರೆ-ರಥಗಳನ್ನೇರಿದ್ದ ವೃಷ್ಣಿಯೋಧರು ಎಲ್ಲರೂ ಬಲಾತ್ಕಾರವಾಗಿ ಅಪಹರಿಸುತ್ತಿದ್ದ ಅವರನ್ನು ತಡೆಯಲು ಶಕ್ಯರಾಗಲಿಲ್ಲ.
16008056a ಕಲತ್ರಸ್ಯ ಬಹುತ್ವಾತ್ತು ಸಂಪತತ್ಸು ತತಸ್ತತಃ।
16008056c ಪ್ರಯತ್ನಮಕರೋತ್ಪಾರ್ಥೋ ಜನಸ್ಯ ಪರಿರಕ್ಷಣೇ।।
ರಕ್ಷಿಸಲು ಅಲ್ಲಲ್ಲಿ ಅನೇಕ ಸ್ತ್ರೀಯರಿದ್ದರು ಮತ್ತು ಸಂಪತ್ತುಗಳಿತ್ತು. ಪಾರ್ಥನು ಆ ಜನರನ್ನು ರಕ್ಷಿಸಲು ಪ್ರಯತ್ನಿಸಿದನು.
16008057a ಮಿಷತಾಂ ಸರ್ವಯೋಧಾನಾಂ ತತಸ್ತಾಃ ಪ್ರಮದೋತ್ತಮಾಃ।
16008057c ಸಮಂತತೋಽವಕೃಷ್ಯಂತ ಕಾಮಾಚ್ಚಾನ್ಯಾಃ ಪ್ರವವ್ರಜುಃ।।
ಸರ್ವ ಯೋಧರು ನೋಡುತ್ತಿದ್ದಂತೆಯೇ ದಸ್ಯುಗಳು ಎಲ್ಲಕಡೆಗಳಿಂದ ಬಂದು ಆ ಉತ್ತಮ ಸ್ತ್ರೀಯರನ್ನು ಎಳೆದುಕೊಂಡು ಹೋದರು ಮತ್ತು ಅನ್ಯರು ಭಯದಿಂದ ಎತ್ತಲೋ ಓಡಿ ಹೋದರು.
16008058a ತತೋ ಗಾಂಡೀವನಿರ್ಮುಕ್ತೈಃ ಶರೈಃ ಪಾರ್ಥೋ ಧನಂಜಯಃ।
16008058c ಜಘಾನ ದಸ್ಯೂನ್ಸೋದ್ವೇಗೋ ವೃಷ್ಣಿಭೃತ್ಯೈಃ ಸಹ ಪ್ರಭುಃ।।
ವೃಷ್ಣಿಸೇವಕರೊಡನೆ ಉದ್ವೇಗಗೊಂಡ ಪ್ರಭು ಪಾರ್ಥ ಧನಂಜಯನು ಗಾಂಡೀವದಿಂದ ಪ್ರಯೋಗಿಸಿದ ಶರಗಳಿಂದ ಆ ದಸ್ಯುಗಳನ್ನು ಸಂಹರಿಸಿದನು.
16008059a ಕ್ಷಣೇನ ತಸ್ಯ ತೇ ರಾಜನ್ ಕ್ಷಯಂ ಜಗ್ಮುರಜಿಹ್ಮಗಾಃ।
16008059c ಅಕ್ಷಯಾ ಹಿ ಪುರಾ ಭೂತ್ವಾ ಕ್ಷೀಣಾಃ ಕ್ಷತಜಭೋಜನಾಃ।।
ರಾಜನ್! ಆದರೆ ಕ್ಷಣದಲ್ಲಿಯೇ ಅವನಲ್ಲಿದ್ದ ಜಿಹ್ಮಗಗಳು ಮುಗಿದುಹೋದವು. ಮೊದಲು ಅಕ್ಷಯವಾಗಿದ್ದ ಆ ರಕ್ತವನ್ನು ಕುಡಿಯುವ ಶರಗಳು ಈಗ ಮುಗಿದುಹೋದವು.
16008060a ಸ ಶರಕ್ಷಯಮಾಸಾದ್ಯ ದುಃಖಶೋಕಸಮಾಹತಃ।
16008060c ಧನುಷ್ಕೋಟ್ಯಾ ತದಾ ದಸ್ಯೂನವಧೀತ್ಪಾಕಶಾಸನಿಃ।।
ಶರಗಳು ಮುಗಿದುಹೋಗಲು ದುಃಖಶೋಕಗಳಿಂದ ಸಮಾಹತನಾಗಿ ಪಾಕಶಾಸನಿಯು ತನ್ನ ಧನುಸ್ಸಿನ ತುದಿಯಿಂದಲೇ ದಸ್ಯುಗಳನ್ನು ವಧಿಸತೊಡಗಿದನು.
16008061a ಪ್ರೇಕ್ಷತಸ್ತ್ವೇವ ಪಾರ್ಥಸ್ಯ ವೃಷ್ಣ್ಯಂಧಕವರಸ್ತ್ರಿಯಃ।
16008061c ಜಗ್ಮುರಾದಾಯ ತೇ ಮ್ಲೇಚ್ಚಾಃ ಸಮಂತಾಜ್ಜನಮೇಜಯ।।
ಜನಮೇಜಯ! ಆದರೆ ಪಾರ್ಥನು ನೋಡುತ್ತಿದ್ದಂತೆಯೇ ಮ್ಲೇಚ್ಛರು ವೃಷ್ಣಿ-ಅಂಧಕರ ಶ್ರೇಷ್ಠ ಸ್ತ್ರೀಯರನ್ನು ಎತ್ತಿಕೊಂಡು ಎಲ್ಲ ಕಡೆಗಳಲ್ಲಿ ಓಡಿ ಹೋದರು.
16008062a ಧನಂಜಯಸ್ತು ದೈವಂ ತನ್ಮನಸಾಚಿಂತಯತ್ಪ್ರಭುಃ।
16008062c ದುಃಖಶೋಕಸಮಾವಿಷ್ಟೋ ನಿಃಶ್ವಾಸಪರಮೋಽಭವತ್।।
ಪ್ರಭು ಧನಂಜಯನಾದರೋ ಅದು ದೈವವೆಂದು ಮನಸಾ ಯೋಚಿಸಿದನು. ಪರಮ ದುಃಖ ಶೋಕ ಸಮಾವಿಷ್ಟನಾಗಿ ನಿಟ್ಟುಸಿರು ಬಿಟ್ಟನು.
16008063a ಅಸ್ತ್ರಾಣಾಂ ಚ ಪ್ರಣಾಶೇನ ಬಾಹುವೀರ್ಯಸ್ಯ ಸಂಕ್ಷಯಾತ್।
16008063c ಧನುಷಶ್ಚಾವಿಧೇಯತ್ವಾಚ್ಚರಾಣಾಂ ಸಂಕ್ಷಯೇಣ ಚ।।
16008064a ಬಭೂವ ವಿಮನಾಃ ಪಾರ್ಥೋ ದೈವಮಿತ್ಯನುಚಿಂತಯನ್।
16008064c ನ್ಯವರ್ತತ ತತೋ ರಾಜನ್ನೇದಮಸ್ತೀತಿ ಚಾಬ್ರವೀತ್।।
ಅಸ್ತ್ರಗಳ ವಿನಾಶ, ಬಾಹುವೀರ್ಯದ ಕುಂಠಿತ, ಧನುಸ್ಸಿನ ಅವಿಧೇಯತೆ ಮತ್ತು ಶರಗಳು ಮುಗಿದುಹೋದುದು ಇವುಗಳಿಂದ ವಿಮನಸ್ಕನಾದ ಪಾರ್ಥನು ಇದು ದೈವವೆಂದೇ ಆಲೋಚಿಸಿದನು. ರಾಜನ್! ಅನಂತರ ಅವನು “ಎಲ್ಲವೂ ಹೋಯಿತು!” ಎಂದು ಹೇಳಿ ಹಿಂದಿರುಗಿದನು.
16008065a ತತಃ ಸ ಶೇಷಮಾದಾಯ ಕಲತ್ರಸ್ಯ ಮಹಾಮತಿಃ।
16008065c ಹೃತಭೂಯಿಷ್ಠರತ್ನಸ್ಯ ಕುರುಕ್ಷೇತ್ರಮವಾತರತ್।।
ಅನಂತರ ಆ ಮಹಾಮತಿಯು ಉಳಿದಿದ್ದ ಸ್ತ್ರೀಯರನ್ನೂ, ಅಪಹರಿಸಲ್ಪಡದೇ ಇದ್ದ ಸ್ವಲ್ಪ ರತ್ನಗಳನ್ನೂ ಕುರುಕ್ಷೇತ್ರಕ್ಕೆ ಬಂದು ಇಳಿಸಿದನು.
16008066a ಏವಂ ಕಲತ್ರಮಾನೀಯ ವೃಷ್ಣೀನಾಂ ಹೃತಶೇಷಿತಮ್।
16008066c ನ್ಯವೇಶಯತ ಕೌರವ್ಯಸ್ತತ್ರ ತತ್ರ ಧನಂಜಯಃ।।
ಅಪಹರಿಸಲ್ಪಡದೇ ಉಳಿದಿದ್ದ ವೃಷ್ಣಿ ಸ್ತ್ರೀಯರನ್ನು ಕರೆದುಕೊಂಡು ಬಂದು ಕೌರವ್ಯ ಧನಂಜಯನು ಅಲ್ಲಲ್ಲಿ ನೆಲೆಗೊಳಿಸಿದನು.
16008067a ಹಾರ್ದಿಕ್ಯತನಯಂ ಪಾರ್ಥೋ ನಗರಂ ಮಾರ್ತಿಕಾವತಮ್।
16008067c ಭೋಜರಾಜಕಲತ್ರಂ ಚ ಹೃತಶೇಷಂ ನರೋತ್ತಮಃ।।
ನರೋತ್ತಮ ಪಾರ್ಥನು ಅಪಹರಿಸದೆ ಉಳಿದಿದ್ದ ಭೋಜರಾಜನ ಸ್ತ್ರೀಯರನ್ನು ಹಾರ್ದಿಕ್ಯ ಕೃತವರ್ಮನ ಮಗನ ಜೊತೆಗೆ ಮಾರ್ತಿಕಾವತಕ್ಕೆ ಕಳುಹಿಸಿದನು.
16008068a ತತೋ ವೃದ್ಧಾಂಶ್ಚ ಬಾಲಾಂಶ್ಚ ಸ್ತ್ರಿಯಶ್ಚಾದಾಯ ಪಾಂಡವಃ।
16008068c ವೀರೈರ್ವಿಹೀನಾನ್ಸರ್ವಾಂಸ್ತಾನ್ಶಕ್ರಪ್ರಸ್ಥೇ ನ್ಯವೇಶಯತ್।।
ಅನಂತರ ವೀರರಿಂದ ವಿಹೀನರಾಗಿದ್ದ ಎಲ್ಲ ವೃದ್ಧರನ್ನೂ, ಬಾಲಕರನ್ನೂ, ಮತ್ತು ಸ್ತ್ರೀಯರನ್ನೂ ಪಾಂಡವನು ಇಂದ್ರಪ್ರಸ್ಥದಲ್ಲಿ ವಾಸಿಸುವಂತೆ ಮಾಡಿದನು.
16008069a ಯೌಯುಧಾನಿಂ ಸರಸ್ವತ್ಯಾಂ ಪುತ್ರಂ ಸಾತ್ಯಕಿನಃ ಪ್ರಿಯಮ್।
16008069c ನ್ಯವೇಶಯತ ಧರ್ಮಾತ್ಮಾ ವೃದ್ಧಬಾಲಪುರಸ್ಕೃತಮ್।।
ಸಾತ್ಯಕಿಯ ಪ್ರಿಯಪುತ್ರ ಯೌಯುಧಾನಿಯನ್ನು ವೃದ್ಧ-ಬಾಲಕರೊಂದಿಗೆ ಸರಸ್ವತೀ ತೀರದಲ್ಲಿ ಧರ್ಮಾತ್ಮ ಅರ್ಜುನನು ನೆಲೆಸುವಂತೆ ಮಾಡಿದನು.
16008070a ಇಂದ್ರಪ್ರಸ್ಥೇ ದದೌ ರಾಜ್ಯಂ ವಜ್ರಾಯ ಪರವೀರಹಾ।
16008070c ವಜ್ರೇಣಾಕ್ರೂರದಾರಾಸ್ತು ವಾರ್ಯಮಾಣಾಃ ಪ್ರವವ್ರಜುಃ।।
ಆ ಪರವೀರಹನು ಇಂದ್ರಪ್ರಸ್ಥವನ್ನು ವಜ್ರನಿಗೆ ಕೊಟ್ಟನು. ವಜ್ರನು ತಡೆಯಲು ಪ್ರಯತ್ನಿಸಿದರೂ ಅಕ್ರೂರನ ಪತ್ನಿಯರು ವನವನ್ನು ಸೇರಿದರು.
16008071a ರುಕ್ಮಿಣೀ ತ್ವಥ ಗಾಂಧಾರೀ ಶೈಬ್ಯಾ ಹೈಮವತೀತ್ಯಪಿ।
16008071c ದೇವೀ ಜಾಂಬವತೀ ಚೈವ ವಿವಿಶುರ್ಜಾತವೇದಸಮ್।।
ರುಕ್ಮಿಣೀ, ಗಾಂಧಾರೀ, ಶೈಬ್ಯೆ, ಹೈಮವತೀ, ಮತ್ತು ದೇವೀ ಜಾಂಬವತಿಯರು ಅಗ್ನಿಪ್ರವೇಶ ಮಾಡಿದರು.
16008072a ಸತ್ಯಭಾಮಾ ತಥೈವಾನ್ಯಾ ದೇವ್ಯಃ ಕೃಷ್ಣಸ್ಯ ಸಂಮತಾಃ।
16008072c ವನಂ ಪ್ರವಿವಿಶೂ ರಾಜಂಸ್ತಾಪಸ್ಯೇ ಕೃತನಿಶ್ಚಯಾಃ।।
ರಾಜನ್! ತಪಸ್ಸಿನ ನಿಶ್ಚಯವನ್ನು ಮಾಡಿದ ಸತ್ಯಭಾಮೆ ಮತ್ತು ಕೃಷ್ಣನ ಇತರ ಪತ್ನಿಯರು ವನವನ್ನು ಪ್ರವೇಶಿಸಿದರು.
16008073a ದ್ವಾರಕಾವಾಸಿನೋ ಯೇ ತು ಪುರುಷಾಃ ಪಾರ್ಥಮನ್ವಯುಃ।
16008073c ಯಥಾರ್ಹಂ ಸಂವಿಭಜ್ಯೈನಾನ್ವಜ್ರೇ ಪರ್ಯದದಜ್ಜಯಃ।।
ಪಾರ್ಥನನ್ನು ಅನುಸರಿಸಿ ಬಂದಿದ್ದ ದ್ವಾರಕಾವಾಸಿ ಪುರುಷರನ್ನು ಯಥಾರ್ಹವಾಗಿ ವಿಂಗಡಿಸಿ ಜಯನು ವಜ್ರನಿಗೆ ಒಪ್ಪಿಸಿದನು.
16008074a ಸ ತತ್ಕೃತ್ವಾ ಪ್ರಾಪ್ತಕಾಲಂ ಬಾಷ್ಪೇಣಾಪಿಹಿತೋಽರ್ಜುನಃ।
16008074c ಕೃಷ್ಣದ್ವೈಪಾಯನಂ ರಾಜನ್ದದರ್ಶಾಸೀನಮಾಶ್ರಮೇ।।
ರಾಜನ್! ಸಮಯದೊಡನೆ ಬಂದಿದ್ದ ಆ ಎಲ್ಲ ಕಾರ್ಯಗಳನ್ನೂ ಪೂರೈಸಿ ಕಣ್ಣೀರುತುಂಬಿದ ಅರ್ಜುನನು ಆಶ್ರಮದಲ್ಲಿ ಕುಳಿತಿದ್ದ ಕೃಷ್ಣದ್ವೈಪಾಯನನನ್ನು ಕಂಡನು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಮೌಸಲಪರ್ವಣಿ ವೃಷ್ಣಿಕಲತ್ರಾದ್ಯಾನಯನೇ ಅಷ್ಟಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಮೌಸಲಪರ್ವಣಿ ವೃಷ್ಣಿಕಲತ್ರಾದ್ಯಾನಯನ ಎನ್ನುವ ಎಂಟನೇ ಅಧ್ಯಾಯವು.