007: ಅರ್ಜುನವಸುದೇವಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಮೌಸಲ ಪರ್ವ

ಮೌಸಲ ಪರ್ವ

ಅಧ್ಯಾಯ 7

ಸಾರ

ವಸುದೇವ ವಿಲಾಪ (1-22).

16007001 ವೈಶಂಪಾಯನ ಉವಾಚ।
16007001a ತಂ ಶಯಾನಂ ಮಹಾತ್ಮಾನಂ ವೀರಮಾನಕದುಂದುಭಿಮ್।
16007001c ಪುತ್ರಶೋಕಾಭಿಸಂತಪ್ತಂ ದದರ್ಶ ಕುರುಪುಂಗವಃ।।

ವೈಶಂಪಾಯನನು ಹೇಳಿದನು: “ಕುರುಪುಂಗವನು ಪುತ್ರಶೋಕದಿಂದ ಸಂತಪ್ತನಾಗಿ ಮಲಗಿದ್ದ ಮಹಾತ್ಮ ವೀರ ಅನಕದುಂದುಭಿ ವಸುದೇವನನ್ನು ಕಂಡನು.

16007002a ತಸ್ಯಾಶ್ರುಪರಿಪೂರ್ಣಾಕ್ಷೋ ವ್ಯೂಢೋರಸ್ಕೋ ಮಹಾಭುಜಃ।
16007002c ಆರ್ತಸ್ಯಾರ್ತತರಃ ಪಾರ್ಥಃ ಪಾದೌ ಜಗ್ರಾಹ ಭಾರತ।।

ಭಾರತ! ಕಣ್ಣುಗಳು ಕಣ್ಣೀರಿನಿಂದ ತುಂಬಿ ವಸುದೇವನಿಗಿಂತಲೂ ಹೆಚ್ಚು ಆರ್ತನಾಗಿದ್ದ ಆ ವಿಶಾಲ ಎದೆಯ ಮಹಾಭುಜ ಪಾರ್ಥನು ಆರ್ತನಾಗಿದ್ದ ವಸುದೇವನ ಪಾದಗಳನ್ನು ಹಿಡಿದು ನಮಸ್ಕರಿಸಿದನು.

16007003a ಸಮಾಲಿಂಗ್ಯಾರ್ಜುನಂ ವೃದ್ಧಃ ಸ ಭುಜಾಭ್ಯಾಂ ಮಹಾಭುಜಃ।
16007003c ರುದನ್ಪುತ್ರಾನ್ಸ್ಮರನ್ಸರ್ವಾನ್ವಿಲಲಾಪ ಸುವಿಹ್ವಲಃ।
16007003e ಭ್ರಾತೄನ್ಪುತ್ರಾಂಶ್ಚ ಪೌತ್ರಾಂಶ್ಚ ದೌಹಿತ್ರಾಂಶ್ಚ ಸಖೀನಪಿ।।

ಆ ಮಹಾಭುಜ ವೃದ್ಧನು ಅರ್ಜುನನನ್ನು ಬಾಹುಗಳಿಂದ ಆಲಂಗಿಸಿದನು ಮತ್ತು ಪುತ್ರರು, ಸಹೋದರರು, ಮೊಮ್ಮಕ್ಕಳು, ಹೆಣ್ಣುಮಕ್ಕಳ ಮಕ್ಕಳು, ಮತ್ತು ಸಖರು ಎಲ್ಲರನ್ನೂ ನೆನಪಿಸಿಕೊಂಡು ತುಂಬಾ ವಿಹ್ವಲನಾಗಿ ವಿಲಪಿಸಿದನು.

16007004 ವಸುದೇವ ಉವಾಚ।
16007004a ಯೈರ್ಜಿತಾ ಭೂಮಿಪಾಲಾಶ್ಚ ದೈತ್ಯಾಶ್ಚ ಶತಶೋಽರ್ಜುನ।
16007004c ತಾನ್ದೃಷ್ಟ್ವಾ ನೇಹ ಪಶ್ಯಾಮಿ ಜೀವಾಮ್ಯರ್ಜುನ ದುರ್ಮರಃ।।

ವಸುದೇವನು ಹೇಳಿದನು: “ಅರ್ಜುನ! ನೂರಾರು ಭೂಮಿಪಾಲರನ್ನೂ ದೈತ್ಯರನ್ನೂ ಯಾರು ಜಯಿಸಿದ್ದರೋ ಅವರನ್ನು ನೋಡದೇ ಇನ್ನೂ ಜೀವಿಸಿದ್ದೇನೆ! ಅರ್ಜುನ! ನನಗೆ ಮರಣವೇ ಇಲ್ಲವೆನಿಸುತ್ತದೆ!

16007005a ಯೌ ತಾವರ್ಜುನ ಶಿಷ್ಯೌ ತೇ ಪ್ರಿಯೌ ಬಹುಮತೌ ಸದಾ।
16007005c ತಯೋರಪನಯಾತ್ಪಾರ್ಥ ವೃಷ್ಣಯೋ ನಿಧನಂ ಗತಾಃ।।

ಅರ್ಜುನ! ಪಾರ್ಥ! ನಿನ್ನ ಪ್ರಿಯಶಿಷ್ಯರಾಗಿದ್ದ, ನಿನ್ನ ಗೌರವಕ್ಕೆ ಪಾತ್ರರಾಗಿದ್ದ ಆ ಇಬ್ಬರ ದುರ್ವರ್ತನೆಯಿಂದಾಗಿ ವೃಷ್ಣಿಗಳು ನಿಧನರಾದರು!

16007006a ಯೌ ತೌ ವೃಷ್ಣಿಪ್ರವೀರಾಣಾಂ ದ್ವಾವೇವಾತಿರಥೌ ಮತೌ।
16007006c ಪ್ರದ್ಯುಮ್ನೋ ಯುಯುಧಾನಶ್ಚ ಕಥಯನ್ಕತ್ಥಸೇ ಚ ಯೌ।।
16007007a ನಿತ್ಯಂ ತ್ವಂ ಕುರುಶಾರ್ದೂಲ ಕೃಷ್ಣಶ್ಚ ಮಮ ಪುತ್ರಕಃ।
16007007c ತಾವುಭೌ ವೃಷ್ಣಿನಾಶಸ್ಯ ಮುಖಮಾಸ್ತಾಂ ಧನಂಜಯ।।

ಕುರುಶಾರ್ದೂಲ! ಧನಂಜಯ! ಅವರಿಬ್ಬರು ವೃಷ್ಣಿಪ್ರವೀರರನ್ನೂ ಅತಿರಥರೆಂದು ಮನ್ನಿಸುತ್ತಿದ್ದೆವು. ಅದರ ಕುರಿತು ಪ್ರದ್ಯುಮ್ನ, ಯುಯುಧಾನ, ನೀನು ಮತ್ತು ನನ್ನ ಪುತ್ರ ಕೃಷ್ಣರು ಯಾವಾಗಲೂ ಹೇಳಿಕೊಂಡು ಕೊಚ್ಚಿಕೊಳ್ಳುತ್ತಿದ್ದಿರಿ! ಅವರಿಬ್ಬರೂ ವೃಷ್ಣಿನಾಶದ ಮುಖಗಳಾದರು.

16007008a ನ ತು ಗರ್ಹಾಮಿ ಶೈನೇಯಂ ಹಾರ್ದಿಕ್ಯಂ ಚಾಹಮರ್ಜುನ।
16007008c ಅಕ್ರೂರಂ ರೌಕ್ಮಿಣೇಯಂ ಚ ಶಾಪೋ ಹ್ಯೇವಾತ್ರ ಕಾರಣಮ್।।

ಅರ್ಜುನ! ನಾನು ಶೈನೇಯನನ್ನಾಗಲೀ, ಹಾರ್ದಿಕ್ಯನನ್ನಾಗಲೀ, ಅಕ್ರೂರನನ್ನಾಗಲೀ, ರೌಕ್ಮಿಣೇಯನನ್ನಾಗಲೀ ನಿಂದಿಸುವುದಿಲ್ಲ. ಇದಕ್ಕೆ ಆ ಶಾಪವೇ ಕಾರಣ!

16007009a ಕೇಶಿನಂ ಯಸ್ತು ಕಂಸಂ ಚ ವಿಕ್ರಮ್ಯ ಜಗತಃ ಪ್ರಭುಃ।
16007009c ವಿದೇಹಾವಕರೋತ್ಪಾರ್ಥ ಚೈದ್ಯಂ ಚ ಬಲಗರ್ವಿತಮ್।।
16007010a ನೈಷಾದಿಮೇಕಲವ್ಯಂ ಚ ಚಕ್ರೇ ಕಾಲಿಂಗಮಾಗಧಾನ್।
16007010c ಗಾಂಧಾರಾನ್ಕಾಶಿರಾಜಂ ಚ ಮರುಭೂಮೌ ಚ ಪಾರ್ಥಿವಾನ್।।
16007011a ಪ್ರಾಚ್ಯಾಂಶ್ಚ ದಾಕ್ಷಿಣಾತ್ಯಾಂಶ್ಚ ಪಾರ್ವತೀಯಾಂಸ್ತಥಾ ನೃಪಾನ್।
16007011c ಸೋಽಭ್ಯುಪೇಕ್ಷಿತವಾನೇತಮನಯಂ ಮಧುಸೂದನಃ।।

ಪಾರ್ಥ! ಕೇಶಿನಿ ಮತ್ತು ಕಂಸರನ್ನು ಜಯಿಸಿದ, ಬಲಗರ್ವಿತ ಚೈದ್ಯನನ್ನು ಸಂಹರಿಸಿದ, ನೈಷಾದಿ ಏಕಲವ್ಯ, ಕಾಲಿಂಗ, ಮಾಗಧರು, ಗಾಂಧಾರರು, ಕಾಶಿರಾಜ ಮತ್ತು ಮರುಭೂಮಿಯ ಪಾರ್ಥಿವರನ್ನು, ಪೂರ್ವದಿಕ್ಕಿನ, ದಕ್ಷಿಣದಿಕ್ಕಿನ ಮತ್ತು ಪರ್ವತಗಳಲ್ಲಿನ ನೃಪರನ್ನು ಗೆದ್ದ ಆ ಜಗತ್ಪ್ರಭು ಮಧುಸೂದನನು ಯದುಗಳ ಈ ವಿನಾಶವನ್ನು ಉಪೇಕ್ಷಿಸಿದನು!

16007012a ತತಃ ಪುತ್ರಾಂಶ್ಚ ಪೌತ್ರಾಂಶ್ಚ ಭ್ರಾತೄನಥ ಸಖೀನಪಿ।
16007012c ಶಯಾನಾನ್ನಿಹತಾನ್ದೃಷ್ಟ್ವಾ ತತೋ ಮಾಮಬ್ರವೀದಿದಮ್।।

ಪುತ್ರರು, ಪೌತ್ರರು, ಸಹೋದರರು ಮತ್ತು ಸಖರು ಹತರಾಗಿ ಮಲಗಿದುದನ್ನು ನೋಡಿ ಅವನು ನನಗೆ ಹೀಗೆ ಹೇಳಿದನು:

16007013a ಸಂಪ್ರಾಪ್ತೋಽದ್ಯಾಯಮಸ್ಯಾಂತಃ ಕುಲಸ್ಯ ಪುರುಷರ್ಷಭ।
16007013c ಆಗಮಿಷ್ಯತಿ ಬೀಭತ್ಸುರಿಮಾಂ ದ್ವಾರವತೀಂ ಪುರೀಮ್।।

“ಪುರುಷರ್ಷಭ! ಇಂದು ಕುಲದ ಅಂತ್ಯವಾಯಿತು. ಬೀಭತ್ಸುವು ಈ ದ್ವಾರವತೀ ಪುರಕ್ಕೆ ಬರುತ್ತಾನೆ.

16007014a ಆಖ್ಯೇಯಂ ತಸ್ಯ ಯದ್ವೃತ್ತಂ ವೃಷ್ಣೀನಾಂ ವೈಶಸಂ ಮಹತ್।
16007014c ಸ ತು ಶ್ರುತ್ವಾ ಮಹಾತೇಜಾ ಯದೂನಾಮನಯಂ ಪ್ರಭೋ।
16007014e ಆಗಂತಾ ಕ್ಷಿಪ್ರಮೇವೇಹ ನ ಮೇಽತ್ರಾಸ್ತಿ ವಿಚಾರಣಾ।।

ಅವನಿಗೆ ಇಲ್ಲಿ ನಡೆದ ವೃಷ್ಣಿಗಳ ಮಹಾವಿನಾಶದ ಕುರಿತು ಹೇಳು. ಪ್ರಭೋ! ಯದುಗಳ ಈ ವಿನಾಶದ ಕುರಿತು ಕೇಳಿದ ಕೂಡಲೇ ಬೇಗನೇ ಆ ಮಹಾತೇಜಸ್ವಿಯು ಬರುತ್ತಾನೆ. ಅದರ ಕುರಿತು ವಿಚಾರಿಸುವ ಅವಶ್ಯಕತೆಯಿಲ್ಲ.

16007015a ಯೋಽಹಂ ತಮರ್ಜುನಂ ವಿದ್ಧಿ ಯೋಽರ್ಜುನಃ ಸೋಽಹಮೇವ ತು।
16007015c ಯದ್ಬ್ರೂಯಾತ್ತತ್ತಥಾ ಕಾರ್ಯಮಿತಿ ಬುಧ್ಯಸ್ವ ಮಾಧವ।।

ನಾನೇ ಅರ್ಜುನನೆಂದೂ ಅರ್ಜುನನು ನಾನೆಂದೂ ತಿಳಿದುಕೋ! ಮಾಧವ! ಅವನು ಏನು ಮಾಡಬೇಕೆಂದು ಹೇಳುತ್ತಾನೋ ಅದನ್ನೇ ನೀನು ಮಾಡಬೇಕು.

16007016a ಸ ಸ್ತ್ರೀಷು ಪ್ರಾಪ್ತಕಾಲಂ ವಃ ಪಾಂಡವೋ ಬಾಲಕೇಷು ಚ।
16007016c ಪ್ರತಿಪತ್ಸ್ಯತಿ ಬೀಭತ್ಸುರ್ಭವತಶ್ಚೌರ್ಧ್ವದೇಹಿಕಮ್।।

ಪಾಂಡವನು ಸ್ತ್ರೀಯರನ್ನೂ ಬಾಲಕರನ್ನು ರಕ್ಷಿಸುತ್ತಾನೆ. ಕಾಲಬಂದಾಗ ಬೀಭತ್ಸುವು ನಿನ್ನ ಔರ್ಧ್ವದೇಹಿಕವನ್ನೂ ಮಾಡುತ್ತಾನೆ.

16007017a ಇಮಾಂ ಚ ನಗರೀಂ ಸದ್ಯಃ ಪ್ರತಿಯಾತೇ ಧನಂಜಯೇ।
16007017c ಪ್ರಾಕಾರಾಟ್ಟಾಲಕೋಪೇತಾಂ ಸಮುದ್ರಃ ಪ್ಲಾವಯಿಷ್ಯತಿ।।

ಧನಂಜಯನು ಹೊರಟುಹೋದ ಕೂಡಲೇ ಈ ನಗರಿಯು, ಕೋಟೆ-ಕೊತ್ತಲಗಳೊಂದಿಗೆ ಸಮುದ್ರದಲ್ಲಿ ಮುಳುಗಿಹೋಗುತ್ತದೆ.

16007018a ಅಹಂ ಹಿ ದೇಶೇ ಕಸ್ಮಿಂಶ್ಚಿತ್ಪುಣ್ಯೇ ನಿಯಮಮಾಸ್ಥಿತಃ।
16007018c ಕಾಲಂ ಕರ್ತಾ ಸದ್ಯ ಏವ ರಾಮೇಣ ಸಹ ಧೀಮತಾ।।

ನಾನಾದರೋ ಧೀಮಂತ ರಾಮನೊಂದಿಗೆ ಯಾವುದೋ ಪುಣ್ಯ ಪ್ರದೇಶದಲ್ಲಿ ನಿಯಮವನ್ನಾಚರಿಸಿ ಕಾಲವನ್ನು ಕಾಯುತ್ತೇನೆ.”

16007019a ಏವಮುಕ್ತ್ವಾ ಹೃಷೀಕೇಶೋ ಮಾಮಚಿಂತ್ಯಪರಾಕ್ರಮಃ।
16007019c ಹಿತ್ವಾ ಮಾಂ ಬಾಲಕೈಃ ಸಾರ್ಧಂ ದಿಶಂ ಕಾಮಪ್ಯಗಾತ್ಪ್ರಭುಃ।।

ಹೀಗೆ ಹೇಳಿ ಅಚಿಂತ್ಯಪರಾಕ್ರಮಿ ಪ್ರಭುವು ಬಾಲಕರೊಂದಿಗೆ ನನ್ನನ್ನು ಬಿಟ್ಟು ಇಷ್ಟಬಂದಲ್ಲಿಗೆ ಹೊರಟುಹೋದನು.

16007020a ಸೋಽಹಂ ತೌ ಚ ಮಹಾತ್ಮಾನೌ ಚಿಂತಯನ್ಭ್ರಾತರೌ ತವ।
16007020c ಘೋರಂ ಜ್ಞಾತಿವಧಂ ಚೈವ ನ ಭುಂಜೇ ಶೋಕಕರ್ಶಿತಃ।।

ನಾನು ಆ ನಿನ್ನ ಇಬ್ಬರು ಭ್ರಾತೃಗಳ ಮತ್ತು ಘೋರ ಕುಲವಧೆಯ ಕುರಿತು ಚಿಂತಿಸುತ್ತಾ ಶೋಕಕರ್ಶಿತನಾಗಿ ಆಹಾರವನ್ನು ತ್ಯಜಿಸಿದ್ದೇನೆ.

16007021a ನ ಚ ಭೋಕ್ಷ್ಯೇ ನ ಜೀವಿಷ್ಯೇ ದಿಷ್ಟ್ಯಾ ಪ್ರಾಪ್ತೋಽಸಿ ಪಾಂಡವ।
16007021c ಯದುಕ್ತಂ ಪಾರ್ಥ ಕೃಷ್ಣೇನ ತತ್ಸರ್ವಮಖಿಲಂ ಕುರು।।

ಪಾಂಡವ! ನಾನು ಏನನ್ನೂ ತಿನ್ನುವುದಿಲ್ಲ. ಬದುಕಿಯೂ ಇರುವುದಿಲ್ಲ. ಒಳ್ಳೆಯದಾಯಿತು. ನೀನು ಇಲ್ಲಿಗೆ ಬಂದೆ. ಪಾರ್ಥ! ಕೃಷ್ಣನು ಏನೆಲ್ಲ ಹೇಳಿದ್ದನೋ ಅದನ್ನು ಸಂಪೂರ್ಣವಾಗಿ ಮಾಡು!

16007022a ಏತತ್ತೇ ಪಾರ್ಥ ರಾಜ್ಯಂ ಚ ಸ್ತ್ರಿಯೋ ರತ್ನಾನಿ ಚೈವ ಹ।
16007022c ಇಷ್ಟಾನ್ಪ್ರಾಣಾನಹಂ ಹೀಮಾಂಸ್ತ್ಯಕ್ಷ್ಯಾಮಿ ರಿಪುಸೂದನ।।

ಪಾರ್ಥ! ರಿಪುಸೂದನ! ಈ ರಾಜ್ಯ, ಸ್ತ್ರೀಯರು, ಮತ್ತು ರತ್ನಗಳೆಲ್ಲವೂ ಈಗ ನಿನ್ನದೇ! ನಾನು ಈ ಇಷ್ಟ ಪ್ರಾಣಗಳನ್ನು ತ್ಯಜಿಸುತ್ತೇನೆ!””

ಸಮಾಪ್ತಿ

ಇತಿ ಶ್ರೀಮಹಾಭಾರತೇ ಮೌಸಲಪರ್ವಣಿ ಅರ್ಜುನವಸುದೇವಸಂವಾದೇ ಸಪ್ತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಮೌಸಲಪರ್ವಣಿ ಅರ್ಜುನವಸುದೇವಸಂವಾದ ಎನ್ನುವ ಏಳನೇ ಅಧ್ಯಾಯವು.