006: ಅರ್ಜುನಾಗಮನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಮೌಸಲ ಪರ್ವ

ಮೌಸಲ ಪರ್ವ

ಅಧ್ಯಾಯ 6

ಸಾರ

ದ್ವಾರಕೆಗೆ ಅರ್ಜುನನ ಆಗಮನ (1-15).

16006001 ವೈಶಂಪಾಯನ ಉವಾಚ।
16006001a ದಾರುಕೋಽಪಿ ಕುರೂನ್ಗತ್ವಾ ದೃಷ್ಟ್ವಾ ಪಾರ್ಥಾನ್ಮಹಾರಥಾನ್।
16006001c ಆಚಷ್ಟ ಮೌಸಲೇ ವೃಷ್ಣೀನನ್ಯೋನ್ಯೇನೋಪಸಂಹೃತಾನ್।।

ವೈಶಂಪಾನನು ಹೇಳಿದನು: “ದಾರುಕನೂ ಕೂಡ ಕುರುಗಳಲ್ಲಿಗೆ ಹೋಗಿ ಮಹಾರಥ ಪಾರ್ಥರನ್ನು ಕಂಡು ವೃಷ್ಣಿಗಳು ಮೌಸಲಗಳಿಂದ ಅನ್ಯೋನ್ಯರನ್ನು ಸಂಹರಿಸಿದುದನ್ನು ಹೇಳಿದನು.

16006002a ಶ್ರುತ್ವಾ ವಿನಷ್ಟಾನ್ವಾರ್ಷ್ಣೇಯಾನ್ಸಭೋಜಕುಕುರಾಂಧಕಾನ್।
16006002c ಪಾಂಡವಾಃ ಶೋಕಸಂತಪ್ತಾ ವಿತ್ರಸ್ತಮನಸೋಽಭವನ್।।

ಭೋಜ-ಕುಕುರ-ಅಂಧಕರೊಂದಿಗೆ ವಾರ್ಷ್ಣೇಯರ ವಿನಾಶವನ್ನು ಕೇಳಿದ ಪಾಂಡವರು ಶೋಕಸಂತಪ್ತರಾಗಿ ವಿತ್ರಸ್ತ ಮನಸ್ಸುಳ್ಳವರಾದರು.

16006003a ತತೋಽರ್ಜುನಸ್ತಾನಾಮಂತ್ರ್ಯ ಕೇಶವಸ್ಯ ಪ್ರಿಯಃ ಸಖಾ।
16006003c ಪ್ರಯಯೌ ಮಾತುಲಂ ದ್ರಷ್ಟುಂ ನೇದಮಸ್ತೀತಿ ಚಾಬ್ರವೀತ್।।

ಅನಂತರ ಕೇಶವನ ಪ್ರಿಯಸಖ ಅರ್ಜುನನು ಅವರಿಂದ ಬೀಳ್ಕೊಂಡು, “ಇದು ಹೀಗಲ್ಲ!” ಎಂದು ಹೇಳುತ್ತಾ ತನ್ನ ಸೋದರಮಾವನನ್ನು ನೋಡಲು ಹೊರಟನು.

16006004a ಸ ವೃಷ್ಣಿನಿಲಯಂ ಗತ್ವಾ ದಾರುಕೇಣ ಸಹ ಪ್ರಭೋ।
16006004c ದದರ್ಶ ದ್ವಾರಕಾಂ ವೀರೋ ಮೃತನಾಥಾಮಿವ ಸ್ತ್ರಿಯಮ್।।

ಪ್ರಭೋ! ಆ ವೀರನು ದಾರುಕನೊಂದಿಗೆ ವೃಷ್ಣಿನಿಲಯಕ್ಕೆ ಹೋಗಿ ಅಲ್ಲಿ ಪತಿಯನ್ನು ಕಳೆದುಕೊಂಡ ಸ್ತ್ರೀಯಂತಿದ್ದ ದ್ವಾರಕೆಯನ್ನು ನೋಡಿದನು.

16006005a ಯಾಃ ಸ್ಮ ತಾ ಲೋಕನಾಥೇನ ನಾಥವತ್ಯಃ ಪುರಾಭವನ್।
16006005c ತಾಸ್ತ್ವನಾಥಾಸ್ತದಾ ನಾಥಂ ಪಾರ್ಥಂ ದೃಷ್ಟ್ವಾ ವಿಚುಕ್ರುಶುಃ।।

ಹಿಂದೆ ಲೋಕನಾಥನೇ ಯಾರ ನಾಥನಾಗಿದ್ದನೋ ಆ ಅನಾಥರು ನಾಥ ಪಾರ್ಥನನ್ನು ಕಂಡು ಜೋರಾಗಿ ರೋದಿಸಿದರು.

16006006a ಷೋಡಶಸ್ತ್ರೀಸಹಸ್ರಾಣಿ ವಾಸುದೇವಪರಿಗ್ರಹಃ।
16006006c ತಾಸಾಮಾಸೀನ್ಮಹಾನ್ನಾದೋ ದೃಷ್ಟ್ವೈವಾರ್ಜುನಮಾಗತಮ್।।

ಅರ್ಜುನನು ಬಂದುದನ್ನು ನೋಡಿ ವಾಸುದೇವನ ಕೈಹಿಡಿದಿದ್ದ ಹದಿನಾರು ಸಾವಿರ ಸ್ತ್ರೀಯರು ಜೋರಾಗಿ ಕೂಗಿಕೊಂಡು ರೋದಿಸಿದರು.

16006007a ತಾಸ್ತು ದೃಷ್ಟ್ವೈವ ಕೌರವ್ಯೋ ಬಾಷ್ಪೇಣ ಪಿಹಿತೋಽರ್ಜುನಃ।
16006007c ಹೀನಾಃ ಕೃಷ್ಣೇನ ಪುತ್ರೈಶ್ಚ ನಾಶಕತ್ಸೋಽಭಿವೀಕ್ಷಿತುಮ್।।

ಅವರನ್ನು ನೋಡುತ್ತಲೇ ಕೌರವ್ಯ ಅರ್ಜುನನು ಕಣ್ಣೀರು ತುಂಬಿದವನಾಗಿ ಕೃಷ್ಣನಿಂದಲೂ ಪುತ್ರರಿಂದಲೂ ವಿಹೀನರಾದ ಅವರನ್ನು ನೋಡಲೂ ಅಶಕ್ತನಾದನು.

16006008a ತಾಂ ಸ ವೃಷ್ಣ್ಯಂಧಕಜಲಾಂ ಹಯಮೀನಾಂ ರಥೋಡುಪಾಮ್।
16006008c ವಾದಿತ್ರರಥಘೋಷೌಘಾಂ ವೇಶ್ಮತೀರ್ಥಮಹಾಗ್ರಹಾಮ್।।
16006009a ರತ್ನಶೈವಲಸಂಘಾಟಾಂ ವಜ್ರಪ್ರಾಕಾರಮಾಲಿನೀಮ್।
16006009c ರಥ್ಯಾಸ್ರೋತೋಜಲಾವರ್ತಾಂ ಚತ್ವರಸ್ತಿಮಿತಹ್ರದಾಮ್।।
16006010a ರಾಮಕೃಷ್ಣಮಹಾಗ್ರಾಹಾಂ ದ್ವಾರಕಾಸರಿತಂ ತದಾ।
16006010c ಕಾಲಪಾಶಗ್ರಹಾಂ ಘೋರಾಂ ನದೀಂ ವೈತರಣೀಮಿವ।।

ವೃಷ್ಣಿ-ಅಂಧಕರೇ ನೀರಾಗಿದ್ದ, ಕುದುರೆಗಳು ಮೀನಾಗಿದ್ದ, ರಥಗಳು ತೆಪ್ಪದಂತಿದ್ದ, ವಾದ್ಯ-ರಥಘೋಷಗಳೇ ಅಲೆಗಳಂತಿದ್ದ, ಮನೆ-ಉದ್ಯಾನವನಗಳೇ ತೀರ್ಥ-ಮಡುಗಳಂತಿದ್ದ, ರತ್ನ-ಹವಳಗಳೇ ಪಾಚೆಯಂತಿದ್ದ, ವಜ್ರದ ಕೋಟೆಗಳೇ ಮಾಲೆಗಳಂತಿದ್ದ, ರಥಬೀದಿಗಳೇ ಸುಳಿಗಳಂತಿದ್ದ, ಚತ್ವಾರಗಳೇ ಸರೋವರಗಳಂತಿದ್ದ, ರಾಮ-ಕೃಷ್ಣರೇ ಮಹಾ ಮೊಸಳೆಗಳಂತಿದ್ದ ದ್ವಾರಕಾ ಎನ್ನುವ ನದಿಯು ಈಗ ಕಾಲನ ಪಾಶಕ್ಕೆ ಸಿಲುಕಿದ ಘೋರ ವೈತರಣೀ ನದಿಯಂತೆ ತೋರುತ್ತಿತ್ತು.

16006011a ತಾಂ ದದರ್ಶಾರ್ಜುನೋ ಧೀಮಾನ್ವಿಹೀನಾಂ ವೃಷ್ಣಿಪುಂಗವೈಃ।
16006011c ಗತಶ್ರಿಯಂ ನಿರಾನಂದಾಂ ಪದ್ಮಿನೀಂ ಶಿಶಿರೇ ಯಥಾ।।

ವೃಷ್ಣಿಪುಂಗವರಿಂದ ವಿಹೀನವಾಗಿ, ಕಾಂತಿಯನ್ನು ಕಳೆದುಕೊಂಡು, ಆನಂದವಿಲ್ಲದೇ ಇದ್ದ ದ್ವಾರಕಾ ಪುರಿಯು ಧೀಮಾನ್ ಅರ್ಜುನನಿಗೆ ಶಿಶಿರ ಋತುವಿನಲ್ಲಿರುವ ಕಮಲದ ಹೂವಿನಂತೆ ತೋರಿತು.

16006012a ತಾಂ ದೃಷ್ಟ್ವಾ ದ್ವಾರಕಾಂ ಪಾರ್ಥಸ್ತಾಶ್ಚ ಕೃಷ್ಣಸ್ಯ ಯೋಷಿತಃ।
16006012c ಸಸ್ವನಂ ಬಾಷ್ಪಮುತ್ಸೃಜ್ಯ ನಿಪಪಾತ ಮಹೀತಲೇ।।

ಅಂಥಹ ದ್ವಾರಕೆಯನ್ನೂ ಕೃಷ್ಣನ ಮಡದಿಯರನ್ನೂ ನೋಡಿದ ಪಾರ್ಥನು ಜೋರಾಗಿ ಅಳುತ್ತಾ ಕಣ್ಣೀರು ಸುರಿಸಿ ನೆಲದ ಮೇಲೆ ಬಿದ್ದನು.

16006013a ಸಾತ್ರಾಜಿತೀ ತತಃ ಸತ್ಯಾ ರುಕ್ಮಿಣೀ ಚ ವಿಶಾಂ ಪತೇ।
16006013c ಅಭಿಪತ್ಯ ಪ್ರರುರುದುಃ ಪರಿವಾರ್ಯ ಧನಂಜಯಮ್।।

ವಿಶಾಂಪತೇ! ಆಗ ಸತ್ರಾಜಿತನ ಮಗಳು ಸತ್ಯಭಾಮೆ ಮತ್ತು ರುಕ್ಮಿಣಿಯರು ಕೂಡ ಕೆಳಗೆ ಬಿದ್ದು ಧನಂಜಯನನ್ನು ಸುತ್ತುವರೆದು ರೋದಿಸತೊಡಗಿದರು.

16006014a ತತಸ್ತಾಃ ಕಾಂಚನೇ ಪೀಠೇ ಸಮುತ್ಥಾಯೋಪವೇಶ್ಯ ಚ।
16006014c ಅಬ್ರುವಂತ್ಯೋ ಮಹಾತ್ಮಾನಂ ಪರಿವಾರ್ಯೋಪತಸ್ಥಿರೇ।।

ಅನಂತರ ಅವನನ್ನು ಎಬ್ಬಿಸಿ ಕಾಂಚನಪೀಠದಲ್ಲಿ ಕುಳ್ಳಿರಿಸಿ, ಆ ಮಹಾತ್ಮನನ್ನು ಸುತ್ತುವರೆದು ಅವನೊಡನೆ ಹೇಳಿಕೊಂಡರು.

16006015a ತತಃ ಸಂಸ್ತೂಯ ಗೋವಿಂದಂ ಕಥಯಿತ್ವಾ ಚ ಪಾಂಡವಃ।
16006015c ಆಶ್ವಾಸ್ಯ ತಾಃ ಸ್ತ್ರಿಯಶ್ಚಾಪಿ ಮಾತುಲಂ ದ್ರಷ್ಟುಮಭ್ಯಗಾತ್।।

ಗೋವಿಂದನನ್ನು ಸಂಸ್ತುತಿಸಿ ಅವರೊಂದಿಗೆ ಮಾತನಾಡಿ ಆ ಸ್ತ್ರೀಯರನ್ನು ಸಮಾಧಾನಪಡಿಸಿ ಪಾಂಡವನು ತನ್ನ ಸೋದರಮಾವನನ್ನು ನೋಡಲು ಹೋದನು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಮೌಸಲಪರ್ವಣಿ ಆರ್ಜುನಾಗಮನೇ ಷಷ್ಟೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಮೌಸಲಪರ್ವಣಿ ಅರ್ಜುನಾಗಮನ ಎನ್ನುವ ಆರನೇ ಅಧ್ಯಾಯವು.