005: ಶ್ರೀಕೃಷ್ಣಸ್ಯ ಸ್ವಲೋಕಗಮನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಮೌಸಲ ಪರ್ವ

ಮೌಸಲ ಪರ್ವ

ಅಧ್ಯಾಯ 5

ಸಾರ

ಅರ್ಜುನನನ್ನು ಬರಹೇಳಿ ಕೃಷ್ಣನು ದಾರುಕನನ್ನು ಹಸ್ತಿನಾಪುರಕ್ಕೆ ಕಳುಹಿಸಿದುದು; ಸ್ತ್ರೀಯರನ್ನು ರಕ್ಷಿಸಲು ದ್ವಾರಕೆಗೆ ಕಳುಹಿಸಿದ ಬಭ್ರುವೂ ಹತನಾಗಲು ತಾನೇ ದ್ವಾರಕೆಗೆ ಹೋಗಿ ವಸುದೇವನಿಗೆ ಅರ್ಜುನನು ಬರುವವ ವರೆಗೆ ಕಾಯಲು ಹೇಳಿದುದು (1-11). ಬಲರಾಮನು ಮಹಾನಾಗನ ರೂಪವನ್ನು ತಳೆದು ಸಮುದ್ರವನ್ನು ಸೇರಿದುದು (12-15). ಜರನೆಂಬ ವ್ಯಾಧನಿಂದ ಹೊಡೆಯಲ್ಪಟ್ಟ ಕೃಷ್ಣನು ದಿವವನ್ನು ಸೇರಿದುದು (16-25).

16005001 ವೈಶಂಪಾಯನ ಉವಾಚ।
16005001a ತತೋ ಯಯುರ್ದಾರುಕಃ ಕೇಶವಶ್ಚ ಬಭ್ರುಶ್ಚ ರಾಮಸ್ಯ ಪದಂ ಪತಂತಃ।
16005001c ಅಥಾಪಶ್ಯನ್ರಾಮಮನಂತವೀರ್ಯಂ ವೃಕ್ಷೇ ಸ್ಥಿತಂ ಚಿಂತಯಾನಂ ವಿವಿಕ್ತೇ।।

ವೈಶಂಪಾಯನನು ಹೇಳಿದನು: “ಅನಂತರ ದಾರುಕ, ಬಭ್ರು ಮತ್ತು ಕೇಶವರು ಬಲರಾಮನ ಹೆಜ್ಜೆಯ ಗುರುತನ್ನೇ ಹಿಡಿದುಕೊಂಡು ಹೊರಟರು. ಅವರು ಅಲ್ಲಿ ಒಂದು ವೃಕ್ಷದಡಿಯಲ್ಲಿ ಚಿಂತಾಮಗ್ನನಾಗಿ ನಿಂತಿರುವ ಅನಂತವೀರ್ಯ ರಾಮನನ್ನು ಕಂಡರು.

16005002a ತತಃ ಸಮಾಸಾದ್ಯ ಮಹಾನುಭಾವಃ ಕೃಷ್ಣಸ್ತದಾ ದಾರುಕಮನ್ವಶಾಸತ್।
16005002c ಗತ್ವಾ ಕುರೂನ್ಶೀಘ್ರಮಿಮಂ ಮಹಾಂತಂ ಪಾರ್ಥಾಯ ಶಂಸಸ್ವ ವಧಂ ಯದೂನಾಮ್।।

ಅವನ ಬಳಿಹೋದನಂತರ ಮಹಾನುಭಾವ ಕೃಷ್ಣನು ದಾರುಕನಿಗೆ ಆಜ್ಞಾಪಿಸಿದನು: “ಶೀಘ್ರವೇ ಕುರುಗಳಲ್ಲಿಗೆ ಹೋಗಿ ಯದುಗಳ ವಧೆಯನ್ನೂ ಈ ಮಹಾ ಅಂತ್ಯವನ್ನೂ ಪಾರ್ಥನಿಗೆ ತಿಳಿಸು.

16005003a ತತೋಽರ್ಜುನಃ ಕ್ಷಿಪ್ರಮಿಹೋಪಯಾತು ಶ್ರುತ್ವಾ ಮೃತಾನ್ಯಾದವಾನ್ಬ್ರಹ್ಮಶಾಪಾತ್।
16005003c ಇತ್ಯೇವಮುಕ್ತಃ ಸ ಯಯೌ ರಥೇನ ಕುರೂಂಸ್ತದಾ ದಾರುಕೋ ನಷ್ಟಚೇತಾಃ।।

ಬ್ರಾಹ್ಮಣರ ಶಾಪದಿಂದ ಯಾದವರು ಮೃತರಾದುದನ್ನು ಕೇಳಿ ಕೂಡಲೇ ಅರ್ಜುನನು ಇಲ್ಲಿಗೆ ಬರಲಿ!” ಇದನ್ನು ಕೇಳಿದ ದಾರುಕನು ಚೇತನವನ್ನೇ ಕಳೆದುಕೊಂಡಂಥವನಾಗಿ ರಥದಲ್ಲಿ ಕುರುಗಳ ಕಡೆ ನಡೆದನು.

16005004a ತತೋ ಗತೇ ದಾರುಕೇ ಕೇಶವೋಽಥ ದೃಷ್ಟ್ವಾಂತಿಕೇ ಬಭ್ರುಮುವಾಚ ವಾಕ್ಯಮ್।
16005004c ಸ್ತ್ರಿಯೋ ಭವಾನ್ರಕ್ಷತು ಯಾತು ಶೀಘ್ರಂ ನೈತಾ ಹಿಂಸ್ಯುರ್ದಸ್ಯವೋ ವಿತ್ತಲೋಭಾತ್।।

ದಾರುಕನು ಹೊರಟುಹೋಗಲು ಕೇಶವನು ಹತ್ತಿರದಲ್ಲಿದ್ದ ಬಭ್ರುವನ್ನು ನೋಡಿ ಹೇಳಿದನು: “ನೀನು ಶೀಘ್ರವಾಗಿ ಹೋಗಿ ಸ್ತ್ರೀಯರನ್ನು ರಕ್ಷಿಸು. ವಿತ್ತಲೋಭದಿಂದ ದಸ್ಯುಗಳು ಅವರನ್ನು ಹಿಂಸಿಸದಿರಲಿ!”

16005005a ಸ ಪ್ರಸ್ಥಿತಃ ಕೇಶವೇನಾನುಶಿಷ್ಟೋ ಮದಾತುರೋ ಜ್ಞಾತಿವಧಾರ್ದಿತಶ್ಚ।
16005005c ತಂ ವೈ ಯಾಂತಂ ಸಂನಿಧೌ ಕೇಶವಸ್ಯ ತ್ವರಂತಮೇಕಂ ಸಹಸೈವ ಬಭ್ರುಮ್।
16005005e ಬ್ರಹ್ಮಾನುಶಪ್ತಮವಧೀನ್ಮಹದ್ವೈ ಕೂಟೋನ್ಮುಕ್ತಂ ಮುಸಲಂ ಲುಬ್ಧಕಸ್ಯ।।

ಕೇಶವನ ನಿರ್ದೇಶನದಂತೆ ಆ ಬಾಂಧವರ ವಧೆಯಿಂದ ಆರ್ದಿತನಾಗಿದ್ದ ಮತ್ತು ಕುಡಿದು ಅಮಲೇರಿದ್ದ ಬಭ್ರುವು ಹೊರಟನು. ಕೇಶವನ ಸನ್ನಿಧಿಯಿಂದ ಅವನು ಹೊರಟಿದ್ದಷ್ಟೇ ಒಮ್ಮೆಲೇ ಆ ಗುಂಪಿನಿಂದ ಯಾರೋ ಎಸೆದ ಮುಸುಲವೊಂದು ಅವನಿಗೆ ಹೊಡೆದು ಬ್ರಾಹ್ಮಣರ ಶಾಪಕ್ಕೆ ಗುರಿಯಾಗಿದ್ದ ಬಭ್ರುವೂ ಮರಣಹೊಂದಿದನು.

16005006a ತತೋ ದೃಷ್ಟ್ವಾ ನಿಹತಂ ಬಭ್ರುಮಾಹ ಕೃಷ್ಣೋ ವಾಕ್ಯಂ ಭ್ರಾತರಮಗ್ರಜಂ ತು।
16005006c ಇಹೈವ ತ್ವಂ ಮಾಂ ಪ್ರತೀಕ್ಷಸ್ವ ರಾಮ ಯಾವತ್ ಸ್ತ್ರಿಯೋ ಜ್ಞಾತಿವಶಾಃ ಕರೋಮಿ।।

ಬಭ್ರುವು ಹತನಾದುದನ್ನು ನೋಡಿ ಕೃಷ್ಣನು ಅಗ್ರಜ ಅಣ್ಣನಿಗೆ ಹೀಗೆಂದನು: “ರಾಮ! ಸ್ತ್ರೀಯರನ್ನು ಯಾರಾದರೂ ನಮ್ಮ ಬಾಂಧವರಿಗೆ ಒಪ್ಪಿಸಿ ಬರುವವರೆಗೂ ಇಲ್ಲಿಯೇ ನನ್ನ ಪ್ರತೀಕ್ಷೆಯಿಂದಿರು!”

16005007a ತತಃ ಪುರೀಂ ದ್ವಾರವತೀಂ ಪ್ರವಿಶ್ಯ ಜನಾರ್ದನಃ ಪಿತರಂ ಪ್ರಾಹ ವಾಕ್ಯಮ್।
16005007c ಸ್ತ್ರಿಯೋ ಭವಾನ್ರಕ್ಷತು ನಃ ಸಮಗ್ರಾ ಧನಂಜಯಸ್ಯಾಗಮನಂ ಪ್ರತೀಕ್ಷನ್।
16005007e ರಾಮೋ ವನಾಂತೇ ಪ್ರತಿಪಾಲಯನ್ಮಾಮ್ ಆಸ್ತೇಽದ್ಯಾಹಂ ತೇನ ಸಮಾಗಮಿಷ್ಯೇ।।

ಅನಂತರ ದ್ವಾರಕಾಪುರಿಯನ್ನು ಪ್ರವೇಶಿಸಿ ಜನಾರ್ದನನು ತನ್ನ ತಂದೆಗೆ ಹೇಳಿದನು: “ಧನಂಜಯನ ಆಗಮನವನ್ನು ಪ್ರತೀಕ್ಷಿಸುತ್ತಾ ನೀನು ನಮ್ಮ ಸ್ತ್ರೀಯರನ್ನು ರಕ್ಷಿಸಬೇಕು! ಬಲರಾಮನು ವನದಲ್ಲಿ ನನಗಾಗಿ ಕಾಯುತ್ತಿದ್ದಾನೆ. ನಾನು ಅವನನ್ನು ಸೇರುತ್ತೇನೆ.

16005008a ದೃಷ್ಟಂ ಮಯೇದಂ ನಿಧನಂ ಯದೂನಾಂ ರಾಜ್ಞಾಂ ಚ ಪೂರ್ವಂ ಕುರುಪುಂಗವಾನಾಮ್।
16005008c ನಾಹಂ ವಿನಾ ಯದುಭಿರ್ಯಾದವಾನಾಂ ಪುರೀಮಿಮಾಂ ದ್ರಷ್ಟುಮಿಹಾದ್ಯ ಶಕ್ತಃ।।

ನಾನು ಇಲ್ಲಿ ಯದುಗಳ ಈ ನಿಧನವನ್ನೂ ಹಿಂದೆ ಕುರುಪುಂಗವ ರಾಜರ ನಿಧನವನ್ನೂ ನೋಡಿದೆ. ಯಾದವರಿಲ್ಲದ ಈ ಪುರಿಯನ್ನು ನಾನು ಇಂದು ನೋಡಲು ಶಕ್ಯನಿಲ್ಲ.

16005009a ತಪಶ್ಚರಿಷ್ಯಾಮಿ ನಿಬೋಧ ತನ್ಮೇ ರಾಮೇಣ ಸಾರ್ಧಂ ವನಮಭ್ಯುಪೇತ್ಯ।
16005009c ಇತೀದಮುಕ್ತ್ವಾ ಶಿರಸಾಸ್ಯ ಪಾದೌ ಸಂಸ್ಪೃಶ್ಯ ಕೃಷ್ಣಸ್ತ್ವರಿತೋ ಜಗಾಮ।।

ರಾಮನೊಂದಿಗೆ ವನವನ್ನು ಸೇರಿ ತಪಸ್ಸನ್ನಾಚರಿಸುತ್ತೇನೆ!” ಹೀಗೆ ಹೇಳಿ ಶಿರಸಾ ಅವನ ಪಾದಗಳನ್ನು ಸ್ಪರ್ಶಿಸಿ ನಮಸ್ಕರಿಸಿ ಕೃಷ್ಣನು ತ್ವರೆಮಾಡಿ ಹೊರಟುಹೋದನು.

16005010a ತತೋ ಮಹಾನ್ನಿನದಃ ಪ್ರಾದುರಾಸೀತ್ ಸಸ್ತ್ರೀಕುಮಾರಸ್ಯ ಪುರಸ್ಯ ತಸ್ಯ।
16005010c ಅಥಾಬ್ರವೀತ್ಕೇಶವಃ ಸಂನಿವರ್ತ್ಯ ಶಬ್ದಂ ಶ್ರುತ್ವಾ ಯೋಷಿತಾಂ ಕ್ರೋಶತೀನಾಮ್।।

ಆಗ ಪುರದಲ್ಲಿದ್ದ ಸ್ತ್ರೀ-ಕುಮಾರರ ಮಹಾ ಕೂಗು ಕೇಳಿಬಂದಿತು. ರೋದಿಸುತ್ತಿರುವ ಸ್ತ್ರೀಯರ ಶಬ್ಧವನ್ನು ಕೇಳಿ ಕೇಶವನು ಅವರನ್ನು ಹಿಂದಿರುಗಲು ಹೇಳಿದನು.

16005011a ಪುರೀಮಿಮಾಮೇಷ್ಯತಿ ಸವ್ಯಸಾಚೀ ಸ ವೋ ದುಃಖಾನ್ಮೋಚಯಿತಾ ನರಾಗ್ರ್ಯಃ।
16005011c ತತೋ ಗತ್ವಾ ಕೇಶವಸ್ತಂ ದದರ್ಶ ರಾಮಂ ವನೇ ಸ್ಥಿತಮೇಕಂ ವಿವಿಕ್ತೇ।।

“ಈ ಪುರಕ್ಕೆ ಸವ್ಯಸಾಚಿಯು ಬರುತ್ತಾನೆ ಮತ್ತು ಆ ನರಾಗ್ರ್ಯನು ನಿಮ್ಮನ್ನು ದುಃಖದಿಂದ ಬಿಡುಗಡೆಗೊಳಿಸುತ್ತಾನೆ.” ಅನಂತರ ಕೇಶವನು ಹೋಗಿ ವನದ ಪಕ್ಕದಲ್ಲಿ ಏಕಾಂಗಿಯಾಗಿ ಯೋಚನಾಮಗ್ನನಾಗಿ ನಿಂತಿದ್ದ ಬಲರಾಮನನ್ನು ನೋಡಿದನು.

16005012a ಅಥಾಪಶ್ಯದ್ಯೋಗಯುಕ್ತಸ್ಯ ತಸ್ಯ ನಾಗಂ ಮುಖಾನ್ನಿಃಸರಂತಂ ಮಹಾಂತಮ್।
16005012c ಶ್ವೇತಂ ಯಯೌ ಸ ತತಃ ಪ್ರೇಕ್ಷ್ಯಮಾಣೋ ಮಹಾರ್ಣವೋ ಯೇನ ಮಹಾನುಭಾವಃ।।

ಯೋಗಯುಕ್ತನಾಗಿದ್ದ ಅವನ ಮುಖದಿಂದ ಮಹಾನಾಗವೊಂದು ಹೊರಬರುತ್ತಿರುವುದನ್ನು ಅವನು ನೋಡಿದನು. ಅವನು ನೋಡುತ್ತಿದ್ದಂತೆಯೇ ಶ್ವೇತವರ್ಣದ ಆ ಮಹಾ ಸರ್ಪವು ಸಮುದ್ರದ ಕಡೆ ಹರಿದು ಹೋಯಿತು.

16005013a ಸಹಸ್ರಶೀರ್ಷಃ ಪರ್ವತಾಭೋಗವರ್ಷ್ಮಾ ರಕ್ತಾನನಃ ಸ್ವಾಂ ತನುಂ ತಾಂ ವಿಮುಚ್ಯ।
16005013c ಸಮ್ಯಕ್ಚ ತಂ ಸಾಗರಃ ಪ್ರತ್ಯಗೃಹ್ಣಾನ್ ನಾಗಾ ದಿವ್ಯಾಃ ಸರಿತಶ್ಚೈವ ಪುಣ್ಯಾಃ।।

ಆ ದೇಹವನ್ನು ಬಿಟ್ಟು ಹೊರಬಂದ ಪರ್ವತದಷ್ಟೇ ಎತ್ತರ ಹೆಡೆಯನ್ನು ಎತ್ತಿದ್ದ ಆ ಸಾವಿರ ಹೆಡೆಗಳ, ಕೆಂಪು ಬಾಯಿಯ ನಾಗವನ್ನು ದಿವ್ಯ ಪುಣ್ಯ ನದಿಗಳೊಡನೆ ಸಮುದ್ರವು ಸ್ವಾಗತಿಸಿತು.

16005014a ಕರ್ಕೋಟಕೋ ವಾಸುಕಿಸ್ತಕ್ಷಕಶ್ಚ ಪೃಥುಶ್ರವಾ ವರುಣಃ ಕುಂಜರಶ್ಚ।
16005014c ಮಿಶ್ರೀ ಶಂಖಃ ಕುಮುದಃ ಪುಂಡರೀಕಸ್ ತಥಾ ನಾಗೋ ಧೃತರಾಷ್ಟ್ರೋ ಮಹಾತ್ಮಾ।।
16005015a ಹ್ರಾದಃ ಕ್ರಾಥಃ ಶಿತಿಕಂಠೋಽಗ್ರತೇಜಾಸ್ ತಥಾ ನಾಗೌ ಚಕ್ರಮಂದಾತಿಷಂಡೌ।
16005015c ನಾಗಶ್ರೇಷ್ಠೋ ದುರ್ಮುಖಶ್ಚಾಂಬರೀಷಃ ಸ್ವಯಂ ರಾಜಾ ವರುಣಶ್ಚಾಪಿ ರಾಜನ್।
16005015e ಪ್ರತ್ಯುದ್ಗಮ್ಯ ಸ್ವಾಗತೇನಾಭ್ಯನಂದಂಸ್ ತೇಽಪೂಜಯಂಶ್ಚಾರ್ಘ್ಯಪಾದ್ಯಕ್ರಿಯಾಭಿಃ।।

ರಾಜನ್! ಕಾರ್ಕೋಟಕ, ವಾಸುಕಿ, ತಕ್ಷಕ, ಪೃಥುಶ್ರವಾ, ವರುಣ, ಕುಂಜರ, ಮಿಶ್ರೀ, ಶಂಖ, ಕುಮುದ, ಪುಂಡರೀಕ, ಹಾಗೆಯೇ ಮಹಾತ್ಮ ನಾಗ ಧೃತರಾಷ್ಟ್ರ, ಹ್ರಾದ, ಕ್ರಾಥ, ಉಗ್ರತೇಜಸ್ವಿ ಶಿತಿಕಂಠ, ಮತ್ತು ಸ್ವಯಂ ರಾಜಾ ವರುಣನು ಮೇಲೆದ್ದು ಅವನನ್ನು ಅಭಿನಂದಿಸಿ ಸ್ವಾಗತಿಸಿ ಅರ್ಘ್ಯಪಾದ್ಯಗಳಿಂದ ಪೂಜಿಸಿದರು.

16005016a ತತೋ ಗತೇ ಭ್ರಾತರಿ ವಾಸುದೇವೋ ಜಾನನ್ಸರ್ವಾ ಗತಯೋ ದಿವ್ಯದೃಷ್ಟಿಃ।
16005016c ವನೇ ಶೂನ್ಯೇ ವಿಚರಂಶ್ಚಿಂತಯಾನೋ ಭೂಮೌ ತತಃ ಸಂವಿವೇಶಾಗ್ರ್ಯತೇಜಾಃ।।

ಅಣ್ಣನು ಹೊರಟುಹೋಗಲು ದಿವ್ಯದೃಷ್ಟಿಯೆಲ್ಲವೂ ಹೊರಟುಹೋಯಿತೆಂದು ತಿಳಿದು ವಾಸುದೇವನು ಶೂನ್ಯ ವನದಲ್ಲಿ ಚಿಂತಿಸುತ್ತಾ ತಿರುಗಾಡುತ್ತಿದ್ದನು. ಅನಂತರ, ಆ ಅಗ್ರ್ಯತೇಜಸ್ವಿಯು ಭೂಮಿಯ ಮೇಲೆ ಮಲಗಿಕೊಂಡನು.

16005017a ಸರ್ವಂ ಹಿ ತೇನ ಪ್ರಾಕ್ತದಾ ವಿತ್ತಮಾಸೀದ್ ಗಾಂಧಾರ್ಯಾ ಯದ್ವಾಕ್ಯಮುಕ್ತಃ ಸ ಪೂರ್ವಮ್।
16005017c ದುರ್ವಾಸಸಾ ಪಾಯಸೋಚ್ಚಿಷ್ಟಲಿಪ್ತೇ ಯಚ್ಚಾಪ್ಯುಕ್ತಂ ತಚ್ಚ ಸಸ್ಮಾರ ಕೃಷ್ಣಃ।।

ಎಲ್ಲವೂ ಹೀಗೆಯೇ ಆಗುತ್ತದೆ ಎಂದು ಅವನಿಗೆ ಮೊದಲೇ ತಿಳಿದಿತ್ತು. ಹಿಂದೆ ಗಾಂಧಾರಿಯು ಹೇಳಿದ ಮಾತುಗಳನ್ನೂ, ದುರ್ವಾಸನು ಎಂಜಲು ಪಾಯಸವನ್ನು ಮೈಗೆ ಹಚ್ಚಿಕೊಳ್ಳಲು ಹೇಳಿದುದನ್ನೂ ಕೃಷ್ಣನು ನೆನಪಿಸಿಕೊಂಡನು.

16005018a ಸ ಚಿಂತಯಾನೋಽಂಧಕವೃಷ್ಣಿನಾಶಂ ಕುರುಕ್ಷಯಂ ಚೈವ ಮಹಾನುಭಾವಃ।
16005018c ಮೇನೇ ತತಃ ಸಂಕ್ರಮಣಸ್ಯ ಕಾಲಂ ತತಶ್ಚಕಾರೇಂದ್ರಿಯಸಂನಿರೋಧಮ್।।

ಅಂಧಕ-ವೃಷ್ಣಿಗಳ ವಿನಾಶ ಮತ್ತು ಕುರುಕ್ಷಯದ ಕುರಿತು ಚಿಂತಿಸುತ್ತಿದ್ದ ಆ ಮಹಾನುಭಾವನು ಸಂಕ್ರಮಣ1 ಕಾಲವು ಬಂದಿತೆಂದು ತಿಳಿದು ಇಂದ್ರಿಯಗಳನ್ನು ನಿಯಂತ್ರಿಸಿಕೊಂಡನು.

16005019a ಸ ಸಂನಿರುದ್ಧೇಂದ್ರಿಯವಾಙ್ಮನಾಸ್ತು ಶಿಶ್ಯೇ ಮಹಾಯೋಗಮುಪೇತ್ಯ ಕೃಷ್ಣಃ।
16005019c ಜರಾಥ ತಂ ದೇಶಮುಪಾಜಗಾಮ ಲುಬ್ಧಸ್ತದಾನೀಂ ಮೃಗಲಿಪ್ಸುರುಗ್ರಃ।।

ಇಂದ್ರಿಯಗಳು, ಮಾತು, ಮತ್ತು ಮನಸ್ಸುಗಳನ್ನು ನಿಯಂತ್ರಿಸಿಕೊಂಡು ಮಹಾಯೋಗದಲ್ಲಿ ಕೃಷ್ಣನು ಮಲಗಿಕೊಂಡನು. ಆಗ ಉಗ್ರ ಬೇಟೆಗಾರ ಜರನು ಜಿಂಕೆಯನ್ನು ಅರಸುತ್ತಾ ಅಲ್ಲಿಗೆ ಬಂದನು.

16005020a ಸ ಕೇಶವಂ ಯೋಗಯುಕ್ತಂ ಶಯಾನಂ ಮೃಗಾಶಂಕೀ ಲುಬ್ಧಕಃ ಸಾಯಕೇನ।
16005020c ಜರಾವಿಧ್ಯತ್ಪಾದತಲೇ ತ್ವರಾವಾಂಸ್ ತಂ ಚಾಭಿತಸ್ತಜ್ಜಿಙೃಕ್ಷುರ್ಜಗಾಮ।
16005020e ಅಥಾಪಶ್ಯತ್ಪುರುಷಂ ಯೋಗಯುಕ್ತಂ ಪೀತಾಂಬರಂ ಲುಬ್ಧಕೋಽನೇಕಬಾಹುಮ್।।

ಯೋಗಯುಕ್ತನಾಗಿ ಮಲಗಿದ್ದ ಕೇಶವನನ್ನು ಜಿಂಕೆಯೆಂದು ಶಂಕಿಸಿದ ಆ ಬೇಟೆಗಾರ ಜರನು ತಿಳಿಯದೆ ಸಾಯಕದಿಂದ ಅವನ ಪಾದದ ಹಿಮ್ಮಡಿಗೆ ಹೊಡೆದು, ತಾನು ಹೊಡೆದ ಬೇಟೆಯನ್ನು ಹಿಡಿಯಲು ತ್ವರೆಮಾಡಿ ಮುಂದೆ ಹೋದನು. ಅಲ್ಲಿ ಆ ಲುಬ್ಧಕನು ಪೀತಾಂಬರವನ್ನು ಧರಿಸಿದ್ದ ಅನೇಕ ಬಾಹುಗಳನ್ನು ಹೊಂದಿದ್ದ ಯೋಗಯುಕ್ತ ಪುರುಷನನ್ನು ಕಂಡನು.

16005021a ಮತ್ವಾತ್ಮಾನಮಪರಾದ್ಧಂ ಸ ತಸ್ಯ ಜಗ್ರಾಹ ಪಾದೌ ಶಿರಸಾ ಚಾರ್ತರೂಪಃ।
16005021c ಆಶ್ವಾಸಯತ್ತಂ ಮಹಾತ್ಮಾ ತದಾನೀಂ ಗಚ್ಚನ್ನೂರ್ಧ್ವಂ ರೋದಸೀ ವ್ಯಾಪ್ಯ ಲಕ್ಷ್ಮ್ಯಾ।।

ಮಹಾ ಅಪರಾಧವನ್ನೆಸಗಿದೆನೆಂದು ತಿಳಿದು ಆರ್ತರೂಪನಾದ ಅವನು ಕೃಷ್ಣನ ಪಾದಗಳನ್ನು ಶಿರಸಾ ಸಮಸ್ಕರಿಸಿ ಹಿಡಿದುಕೊಂಡನು. ಅವನನ್ನು ಸಮಾಧಾನಪಡಿಸಿ ಮಹಾತ್ಮ ಕೃಷ್ಣನು ತನ್ನ ಕಾಂತಿಯಿಂದ ಭೂಮ್ಯಾಕಾಶಗಳನ್ನು ಬೆಳಗಿಸುತ್ತಾ ಮೇಲೇರಿದನು.

16005022a ದಿವಂ ಪ್ರಾಪ್ತಂ ವಾಸವೋಽಥಾಶ್ವಿನೌ ಚ ರುದ್ರಾದಿತ್ಯಾ ವಸವಶ್ಚಾಥ ವಿಶ್ವೇ।
16005022c ಪ್ರತ್ಯುದ್ಯಯುರ್ಮುನಯಶ್ಚಾಪಿ ಸಿದ್ಧಾ ಗಂಧರ್ವಮುಖ್ಯಾಶ್ಚ ಸಹಾಪ್ಸರೋಭಿಃ।।

ಸ್ವರ್ಗವನ್ನು ಸೇರಿದ ಅವನನ್ನು ವಾಸವ ಇಂದ್ರ, ಅಶ್ವಿನೀ ದೇವತೆಗಳು, ರುದ್ರ-ಆದಿತ್ಯರು, ವಸವರು, ವಿಶ್ವೇದೇವರು, ಮುನಿಗಳು, ಸಿದ್ಧರು, ಗಂಧರ್ವಮುಖ್ಯರು ಮತ್ತು ಜೊತೆಗೆ ಅಪ್ಸರೆಯರು ಸ್ವಾಗತಿಸಿದರು.

16005023a ತತೋ ರಾಜನ್ಭಗವಾನುಗ್ರತೇಜಾ ನಾರಾಯಣಃ ಪ್ರಭವಶ್ಚಾವ್ಯಯಶ್ಚ।
16005023c ಯೋಗಾಚಾರ್ಯೋ ರೋದಸೀ ವ್ಯಾಪ್ಯ ಲಕ್ಷ್ಮ್ಯಾ ಸ್ಥಾನಂ ಪ್ರಾಪ ಸ್ವಂ ಮಹಾತ್ಮಾಪ್ರಮೇಯಮ್।।

ರಾಜನ್! ಅನಂತರ ಆ ಉಗ್ರತೇಜಸ್ವೀ, ಎಲ್ಲವಕ್ಕೂ ಮೂಲನೂ ಅಂತ್ಯನೂ ಆದ, ಯೋಗಾಚಾರ್ಯ ಭಗವಾನ್ ನಾರಾಯಣನು ತನ್ನ ಕಾಂತಿಯಿಂದ ಭೂಮ್ಯಾಕಾಶಗಳನ್ನು ಬೆಳಗಿಸುತ್ತಾ ತನ್ನ ಮಹಾತ್ಮ ಅಪ್ರಮೇಯ ಸ್ಥಾನವನ್ನು ಅಲಂಕರಿಸಿದನು.

16005024a ತತೋ ದೇವೈರೃಷಿಭಿಶ್ಚಾಪಿ ಕೃಷ್ಣಃ ಸಮಾಗತಶ್ಚಾರಣೈಶ್ಚೈವ ರಾಜನ್।
16005024c ಗಂಧರ್ವಾಗ್ರ್ಯೈರಪ್ಸರೋಭಿರ್ವರಾಭಿಃ ಸಿದ್ಧೈಃ ಸಾಧ್ಯೈಶ್ಚಾನತೈಃ ಪೂಜ್ಯಮಾನಃ।।

ರಾಜನ್! ಅಲ್ಲಿ ಕೃಷ್ಣನು ದೇವ-ಋಷಿಗಳು ಮತ್ತು ಚಾರಣರೊಂದಿಗೆ ಸೇರಿದನು. ಗಂಧರ್ವಾಗ್ರರೂ, ಶ್ರೇಷ್ಠ ಅಪ್ಸರೆಯರೂ, ಸಿದ್ಧರೂ, ಸಾಧ್ಯರೂ ಅವನಿಗೆ ತಲೆಬಾಗಿ ಪೂಜಿಸಿದರು.

16005025a ತೇ ವೈ ದೇವಾಃ ಪ್ರತ್ಯನಂದಂತ ರಾಜನ್ ಮುನಿಶ್ರೇಷ್ಠಾ ವಾಗ್ಭಿರಾನರ್ಚುರೀಶಮ್।
16005025c ಗಂಧರ್ವಾಶ್ಚಾಪ್ಯುಪತಸ್ಥುಃ ಸ್ತುವಂತಃ ಪ್ರೀತ್ಯಾ ಚೈನಂ ಪುರುಹೂತೋಽಭ್ಯನಂದತ್।।

ರಾಜನ್! ದೇವತೆಗಳು ಆನಂದದಿಂದ ಅವನನ್ನು ಸ್ವಾಗತಿಸಿದರು. ಮುನಿಶ್ರೇಷ್ಠರು ವೇದಮಂತ್ರಗಳಿಂದ ಆ ಈಶನನ್ನು ಅರ್ಚಿಸಿದರು. ಗಂಧರ್ವರು ಅವನನ್ನು ಸ್ತುತಿಸಿ, ಪೂಜಿಸಿದರು. ಇಂದ್ರನೂ ಕೂಡ ಪ್ರೀತಿಯಿಂದ ಅವನನ್ನು ಅಭಿನಂದಿಸಿದನು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಮೌಸಲಪರ್ವಣಿ ಶ್ರೀಕೃಷ್ಣಸ್ಯ ಸ್ವಲೋಕಗಮನೇ ಪಂಚಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಮೌಸಲಪರ್ವಣಿ ಶ್ರೀಕೃಷ್ಣಸ್ಯ ಸ್ವಲೋಕಗಮನ ಎನ್ನುವ ಐದನೇ ಅಧ್ಯಾಯವು.


  1. ತಾನು ಕಾಲಾತೀತನಾಗುವ ಕಾಲ ↩︎