ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಮೌಸಲ ಪರ್ವ
ಮೌಸಲ ಪರ್ವ
ಅಧ್ಯಾಯ 4
ಸಾರ
ಬಲರಾಮ ಕೃಷ್ಣರ ಆಯುಧ-ಧ್ವಜ-ರಥ-ಕುದುರೆಗಳು ಅದೃಶ್ಯವಾದುದು (1-5). ಸಮುದ್ರತೀರದಲ್ಲಿ ಯಾದವರ ಸುರಾಪಾನ ಕೂಟ (6-15). ಸಾತ್ಯಕಿಯು ಕೃತವರ್ಮನ ಶಿರವನ್ನು ಕತ್ತರಿಸಿದುದು (16-27). ಭೋಜ-ಅಂಧಕರಿಂದ ಸಾತ್ಯಕಿ-ಪ್ರದ್ಯುಮ್ನರ ವಧೆ (28-34). ಎರಕದ ಹುಲ್ಲು ಮುಸಲವಾಗಿ, ಅದರಿಂದಲೇ ವೃಷ್ಣಿ-ಅಂಧಕ-ಭೋಜ-ಯಾದವರು ಪರಸ್ಪರರನ್ನು ಹೊಡೆದು ಸಂಹರಿಸಿದುದು (35-46).
16004001 ವೈಶಂಪಾಯನ ಉವಾಚ।
16004001a ಕಾಲೀ ಸ್ತ್ರೀ ಪಾಂಡುರೈರ್ದಂತೈಃ ಪ್ರವಿಶ್ಯ ಹಸತೀ ನಿಶಿ।
16004001c ಸ್ತ್ರಿಯಃ ಸ್ವಪ್ನೇಷು ಮುಷ್ಣಂತೀ ದ್ವಾರಕಾಂ ಪರಿಧಾವತಿ।।
ವೈಶಂಪಾಯನನು ಹೇಳಿದನು: “ದ್ವಾರಕೆಯಲ್ಲಿ ಓಡಾಡಿಕೊಂಡಿದ್ದ ಕಪ್ಪು ಬಣ್ಣದ ಬಿಳಿಯ ಹಲ್ಲುಗಳ ಸ್ತ್ರೀಯೊಬ್ಬಳು ರಾತ್ರಿವೇಳೆಯಲ್ಲಿ ನಗುತ್ತಾ ಸ್ತ್ರೀಯರ ಸ್ವಪ್ನದಲ್ಲಿ ಅವರ ವಸ್ತುಗಳನ್ನು ಕದಿಯುತ್ತಿದ್ದಳು.
16004002a ಅಲಂಕಾರಾಶ್ಚ ಚತ್ರಂ ಚ ಧ್ವಜಾಶ್ಚ ಕವಚಾನಿ ಚ।
16004002c ಹ್ರಿಯಮಾಣಾನ್ಯದೃಶ್ಯಂತ ರಕ್ಷೋಭಿಃ ಸುಭಯಾನಕೈಃ।।
ಭಯಾನಕ ರಾಕ್ಷಸರು ಅಲಂಕಾರಗಳನ್ನೂ, ಚತ್ರ-ಧ್ವಜ-ಕವಚಗಳನ್ನೂ ಅಪಹರಿಸಿಕೊಂಡು ಹೋಗುವುದು ಕಾಣುತ್ತಿತ್ತು.
16004003a ತಚ್ಚಾಗ್ನಿದತ್ತಂ ಕೃಷ್ಣಸ್ಯ ವಜ್ರನಾಭಮಯಸ್ಮಯಮ್।
16004003c ದಿವಮಾಚಕ್ರಮೇ ಚಕ್ರಂ ವೃಷ್ಣೀನಾಂ ಪಶ್ಯತಾಂ ತದಾ।।
ಕೃಷ್ಣನಿಗೆ ಅಗ್ನಿಯು ಕೊಟ್ಟಿದ್ದ ಲೋಹದ ವಜ್ರನಾಭ ಚಕ್ರವು ವೃಷ್ಣಿಗಳು ನೋಡುತ್ತಿದ್ದಂತೆಯೇ ಆಕಾಶಕ್ಕೆ ಹಾರಿಹೋಯಿತು.
16004004a ಯುಕ್ತಂ ರಥಂ ದಿವ್ಯಮಾದಿತ್ಯವರ್ಣಂ ಹಯಾಹರನ್ ಪಶ್ಯತೋ ದಾರುಕಸ್ಯ।
16004004c ತೇ ಸಾಗರಸ್ಯೋಪರಿಷ್ಠಾದವರ್ತನ್ ಮನೋಜವಾಶ್ಚತುರೋ ವಾಜಿಮುಖ್ಯಾಃ।।
ದಾರುಕನು ನೋಡುತ್ತಿದ್ದಂತೆಯೇ ಸಿದ್ಧಗೊಳಿಸಿದ್ದ ಆದಿತ್ಯ ವರ್ಣದ ದಿವ್ಯ ರಥವನ್ನು ಕುದುರೆಗಳು ಅಪಹರಿಸಿಕೊಂಡು ಹೋದವು. ಮನೋವೇಗದಲ್ಲಿ ಹೋಗಬಲ್ಲ ಆ ನಾಲ್ಕು ಮುಖ್ಯ ಕುದುರೆಗಳು ಸಾಗರದ ಮೇಲೆಯೇ ಓಡಿ ಹೊರಟು ಹೋದವು.
16004005a ತಾಲಃ ಸುಪರ್ಣಶ್ಚ ಮಹಾಧ್ವಜೌ ತೌ ಸುಪೂಜಿತೌ ರಾಮಜನಾರ್ದನಾಭ್ಯಾಮ್।
16004005c ಉಚ್ಚೈರ್ಜಹ್ರುರಪ್ಸರಸೋ ದಿವಾನಿಶಂ ವಾಚಶ್ಚೋಚುರ್ಗಮ್ಯತಾಂ ತೀರ್ಥಯಾತ್ರಾ।।
ಬಲರಾಮ ಮತ್ತು ಜನಾರ್ದನರು ಪೂಜಿಸುತ್ತಿದ್ದ ಆ ಎರಡು ಮಹಾಧ್ವಜಗಳನ್ನು – ತಾಲ ಮತ್ತು ಗರುಡ ಧ್ವಜಗಳನ್ನು – “ನೀವೂ ತೀರ್ಥಯಾತ್ರೆಗೆ ಹೋಗಬೇಕು” ಎಂದು ಹಗಲೂ ರಾತ್ರಿಯೂ ಜೋರಾಗಿ ಕೂಗಿಕೊಳ್ಳುತ್ತಿದ್ದ ಅಪ್ಸರೆಯರು ಅಪಹರಿಸಿಕೊಂಡು ಹೋದರು.
16004006a ತತೋ ಜಿಗಮಿಷಂತಸ್ತೇ ವೃಷ್ಣ್ಯಂಧಕಮಹಾರಥಾಃ।
16004006c ಸಾಂತಃಪುರಾಸ್ತದಾ ತೀರ್ಥಯಾತ್ರಾಮೈಚ್ಚನ್ನರರ್ಷಭಾಃ।।
ಆಗ ವೃಷ್ಣಿ-ಅಂಧಕ ಮಹಾರಥ ನರರ್ಷಭರು ಮತ್ತು ಅವರ ಸ್ತ್ರೀಯರು ತೀರ್ಥಯಾತ್ರೆಗೆ ಹೋಗಲು ನಿಶ್ಚಯಿಸಿದರು.
16004007a ತತೋ ಭೋಜ್ಯಂ ಚ ಭಕ್ಷ್ಯಂ ಚ ಪೇಯಂ ಚಾಂಧಕವೃಷ್ಣಯಃ।
16004007c ಬಹು ನಾನಾವಿಧಂ ಚಕ್ರುರ್ಮದ್ಯಂ ಮಾಂಸಮನೇಕಶಃ।।
ಅನಂತರ ಅಂಧಕ-ವೃಷ್ಣಿಗಳು ಅನೇಕ ವಿಧದ ಭೋಜನಗಳನ್ನೂ, ಭಕ್ಷ್ಯಗಳನ್ನೂ, ಪಾನೀಯಗಳನ್ನೂ ಮತ್ತು ಅನೇಕ ಮಾಂಸ ಪದಾರ್ಥಗಳನ್ನೂ ತಯಾರಿಸಿದರು.
16004008a ತತಃ ಸೀಧುಷು ಸಕ್ತಾಶ್ಚ ನಿರ್ಯಯುರ್ನಗರಾದ್ಬಹಿಃ।
16004008c ಯಾನೈರಶ್ವೈರ್ಗಜೈಶ್ಚೈವ ಶ್ರೀಮಂತಸ್ತಿಗ್ಮತೇಜಸಃ।।
ಅತಿಯಾಗಿ ಕುಡಿಯಬಲ್ಲ ಆ ತಿಗ್ಮತೇಜಸ್ವಿಗಳು ಶ್ರೀಮಂತಿಕೆಯಿಂದ ರಥ-ಕುದುರೆ-ಆನೆಗಳ ಮೇಲೆ ಕುಳಿತು ನಗರದಿಂದ ಹೊರ ಹೊರಟರು.
16004009a ತತಃ ಪ್ರಭಾಸೇ ನ್ಯವಸನ್ಯಥೋದ್ದೇಶಂ ಯಥಾಗೃಹಮ್।
16004009c ಪ್ರಭೂತಭಕ್ಷ್ಯಪೇಯಾಸ್ತೇ ಸದಾರಾ ಯಾದವಾಸ್ತದಾ।।
ಪ್ರಭಾಸ ಕ್ಷೇತ್ರಕ್ಕೆ ಬಂದು ಅಲ್ಲಿ ತಮಗಾಗಿಯೇ ನಿರ್ಮಿಸಿಕೊಂಡಿದ್ದ ಮನೆಗಳಲ್ಲಿ ಯಾದವರು ತಮ್ಮ ಭಕ್ಷ್ಯ-ಪಾನೀಯಗಳು ಮತ್ತು ಪತ್ನಿಯರೊಂದಿಗೆ ಬೀಡುಬಿಟ್ಟರು.
16004010a ನಿವಿಷ್ಟಾಂಸ್ತಾನ್ನಿಶಮ್ಯಾಥ ಸಮುದ್ರಾಂತೇ ಸ ಯೋಗವಿತ್।
16004010c ಜಗಾಮಾಮಂತ್ರ್ಯ ತಾನ್ವೀರಾನುದ್ಧವೋಽರ್ಥವಿಶಾರದಃ।।
ಅವರು ಸಮುದ್ರತೀರದಲ್ಲಿ ಬೀಡು ಬಿಟ್ಟಿದ್ದಾರೆಂದು ಕೇಳಿದ ಯೋಗವಿದು ಅರ್ಥವಿಶಾರದ ಉದ್ಧವನು ಅವರನ್ನು ಬೀಳ್ಕೊಡಲು ಅಲ್ಲಿಗೆ ಹೋದನು.
16004011a ತಂ ಪ್ರಸ್ಥಿತಂ ಮಹಾತ್ಮಾನಮಭಿವಾದ್ಯ ಕೃತಾಂಜಲಿಮ್।
16004011c ಜಾನನ್ವಿನಾಶಂ ವೃಷ್ಣೀನಾಂ ನೈಚ್ಚದ್ವಾರಯಿತುಂ ಹರಿಃ।।
ಅಲ್ಲಿಂದ ಕೈಮುಗಿದುಕೊಂಡು ಹೊರಟ ಆ ಮಹಾತ್ಮನನ್ನು ಅಭಿವಂದಿಸಿದ ಹರಿಯು ವೃಷ್ಣಿಗಳ ವಿನಾಶವಾಗುತ್ತದೆಯೆಂದು ತಿಳಿದಿದ್ದರೂ ಅದನ್ನು ತಡೆಯಲಿಲ್ಲ.
16004012a ತತಃ ಕಾಲಪರೀತಾಸ್ತೇ ವೃಷ್ಣ್ಯಂಧಕಮಹಾರಥಾಃ।
16004012c ಅಪಶ್ಯನ್ನುದ್ಧವಂ ಯಾಂತಂ ತೇಜಸಾವೃತ್ಯ ರೋದಸೀ।।
ಕಾಲವು ಮುಗಿದುಹೋದ ವೃಷ್ಣಿ-ಅಂಧಕ ಮಹಾರಥರು ಭೂಮ್ಯಾಕಾಶಗಳನ್ನು ತನ್ನ ತೇಜಸ್ಸಿನಿಂದ ತುಂಬಿಕೊಳ್ಳುತ್ತಾ ಹೋಗುತ್ತಿದ್ದ ಉದ್ಧವನನ್ನು ನೋಡಿದರು.
16004013a ಬ್ರಾಹ್ಮಣಾರ್ಥೇಷು ಯತ್ಸಿದ್ಧಮನ್ನಂ ತೇಷಾಂ ಮಹಾತ್ಮನಾಮ್।
16004013c ತದ್ವಾನರೇಭ್ಯಃ ಪ್ರದದುಃ ಸುರಾಗಂಧಸಮನ್ವಿತಮ್।।
ಆ ಮಹಾತ್ಮರು ಬ್ರಾಹ್ಮಣರಿಗಾಗಿ ಸಿದ್ಧಪಡಿಸಿದ್ದ ಆಹಾರವನ್ನು ಸುರೆಯೊಂದಿಗೆ ಕಲಸಿ ಅಲ್ಲಿದ್ದ ಮಂಗಗಳಿಗೆ ತಿನ್ನಿಸಿದರು.
16004014a ತತಸ್ತೂರ್ಯಶತಾಕೀರ್ಣಂ ನಟನರ್ತಕಸಂಕುಲಮ್।
16004014c ಪ್ರಾವರ್ತತ ಮಹಾಪಾನಂ ಪ್ರಭಾಸೇ ತಿಗ್ಮತೇಜಸಾಮ್।।
ಆಗ ಪ್ರಭಾಸದಲ್ಲಿ ಆ ಮಹಾತೇಜಸ್ವಿಗಳ ಅತಿದೊಡ್ಡ ಸುರಾಪಾನ ಕೂಟವು ಪ್ರಾರಂಭವಾಯಿತು. ನೂರಾರು ತೂರ್ಯಗಳು ಮೊಳಗಿದವು, ನಾಟಕ-ನರ್ತನಗಳು ನಡೆಯುತ್ತಿದ್ದವು.
16004015a ಕೃಷ್ಣಸ್ಯ ಸನ್ನಿಧೌ ರಾಮಃ ಸಹಿತಃ ಕೃತವರ್ಮಣಾ।
16004015c ಅಪಿಬದ್ಯುಯುಧಾನಶ್ಚ ಗದೋ ಬಭ್ರುಸ್ತಥೈವ ಚ।।
ಕೃಷ್ಣನ ಸನ್ನಿಧಿಯಲ್ಲಿ ಬಲರಾಮನು ಕುಡಿಯ ತೊಡಗಿದನು, ಮತ್ತು ಅವನೊಡನೆ ಕೃತವರ್ಮ, ಯುಯುಧಾನ ಸಾತ್ಯಕಿ, ಗದ, ಬಭ್ರುಗಳೂ ಕುಡಿಯ ತೊಡಗಿದರು.
16004016a ತತಃ ಪರಿಷದೋ ಮಧ್ಯೇ ಯುಯುಧಾನೋ ಮದೋತ್ಕಟಃ।
16004016c ಅಬ್ರವೀತ್ಕೃತವರ್ಮಾಣಮವಹಸ್ಯಾವಮನ್ಯ ಚ।।
ಆಗ ಆ ಪರಿಷತ್ತಿನಲ್ಲಿ ಅಮಲೇರಿದ್ದ ಯುಯುಧಾನನು ಕೃತವರ್ಮನನ್ನು ಹೀಯಾಳಿಸಿ ನಗುತ್ತಾ ಹೀಗೆ ಹೇಳಿದನು:
16004017a ಕಃ ಕ್ಷತ್ರಿಯೋ ಮನ್ಯಮಾನಃ ಸುಪ್ತಾನ್ ಹನ್ಯಾನ್ಮೃತಾನಿವ।
16004017c ನ ತನ್ಮೃಷ್ಯಂತಿ ಹಾರ್ದಿಕ್ಯ ಯಾದವಾ ಯತ್ತ್ವಯಾ ಕೃತಮ್।।
“ಮೃತರಂತೆ ಮಲಗಿದ್ದವರನ್ನು ಸಂಹರಿಸಿದ ಯಾರು ತಾನೇ ತನ್ನನ್ನು ಕ್ಷತ್ರಿಯನೆಂದು ಕರೆದುಕೊಳ್ಳುತ್ತಾನೆ? ಹಾರ್ದಿಕ್ಯ! ನಿನ್ನ ಆ ಕೃತ್ಯವನ್ನು ಯಾದವರು ಎಂದೂ ಕ್ಷಮಿಸುವುದಿಲ್ಲ!”
16004018a ಇತ್ಯುಕ್ತೇ ಯುಯುಧಾನೇನ ಪೂಜಯಾಮಾಸ ತದ್ವಚಃ।
16004018c ಪ್ರದ್ಯುಮ್ನೋ ರಥಿನಾಂ ಶ್ರೇಷ್ಠೋ ಹಾರ್ದಿಕ್ಯಮವಮನ್ಯ ಚ।।
ಯುಯುಧಾನನು ಹೀಗೆ ಹೇಳಲು ರಥಿಗಳಲ್ಲಿ ಶ್ರೇಷ್ಠ ಪ್ರದ್ಯುಮ್ನನು ಅವನ ಮಾತನ್ನು ಗೌರವಿಸಿದನು ಮತ್ತು ಹಾರ್ದಿಕ್ಯನನ್ನು ಅಪಮಾನಿಸಿದನು.
16004019a ತತಃ ಪರಮಸಂಕ್ರುದ್ಧಃ ಕೃತವರ್ಮಾ ತಮಬ್ರವೀತ್।
16004019c ನಿರ್ದಿಶನ್ನಿವ ಸಾವಜ್ಞಂ ತದಾ ಸವ್ಯೇನ ಪಾಣಿನಾ।।
ಆಗ ಪರಮ ಸಂಕ್ರುದ್ಧನಾದ ಕೃತವರ್ಮನು ತನ್ನ ಎಡಗೈಯನ್ನು ಚಾಚಿ ತೋರಿಸಿ ಹೀಯಾಳಿಸುತ್ತಾ ಹೇಳಿದನು:
16004020a ಭೂರಿಶ್ರವಾಶ್ಚಿನ್ನಬಾಹುರ್ಯುದ್ಧೇ ಪ್ರಾಯಗತಸ್ತ್ವಯಾ।
16004020c ವಧೇನ ಸುನೃಶಂಸೇನ ಕಥಂ ವೀರೇಣ ಪಾತಿತಃ।।
“ವೀರನಾದವನು ಹೇಗೆ ತಾನೇ ಯುದ್ಧದಲ್ಲಿ ಬಾಹುಗಳು ಕತ್ತರಿಸಲ್ಪಟ್ಟು ಪ್ರಾಯೋಪವೇಶಮಾಡಿದ್ದ ಭೂರಿಶ್ರವನನ್ನು ಹಿಂಸಾತ್ಮಕವಾಗಿ ಕೊಂದು ಕೆಳಗುರುಳಿಸಿದನು?”
16004021a ಇತಿ ತಸ್ಯ ವಚಃ ಶ್ರುತ್ವಾ ಕೇಶವಃ ಪರವೀರಹಾ।
16004021c ತಿರ್ಯಕ್ಸರೋಷಯಾ ದೃಷ್ಟ್ಯಾ ವೀಕ್ಷಾಂ ಚಕ್ರೇ ಸ ಮನ್ಯುಮಾನ್।।
ಅವನ ಈ ಮಾತನ್ನು ಕೇಳಿ ಪರವೀರಹ ಕೇಶವನು ತೀವ್ರ ರೋಷದಿಂದ ಕೋಪದೃಷ್ಟಿಯಲ್ಲಿ ಅವನನ್ನು ನೋಡಿದನು.
16004022a ಮಣಿಃ ಸ್ಯಮಂತಕಶ್ಚೈವ ಯಃ ಸ ಸತ್ರಾಜಿತೋಽಭವತ್।
16004022c ತಾಂ ಕಥಾಂ ಸ್ಮಾರಯಾಮಾಸ ಸಾತ್ಯಕಿರ್ಮಧುಸೂದನಮ್।।
ಆಗ ಸಾತ್ಯಕಿಯು ಮಧುಸೂದನನಿಗೆ ಸತ್ರಾಜಿತನ ಸ್ಯಮಂತಕ ಮಣಿಯ ಪ್ರಕರಣದಲ್ಲಿ ಕೃತವರ್ಮನು ನಡೆದುಕೊಂಡ ರೀತಿಯ ಕುರಿತು ನಡೆದುದನ್ನು ನೆನಪಿಸಿಕೊಟ್ಟನು.
16004023a ತಚ್ಛೃತ್ವಾ ಕೇಶವಸ್ಯಾಂಕಮಗಮದ್ರುದತೀ ತದಾ।
16004023c ಸತ್ಯಭಾಮಾ ಪ್ರಕುಪಿತಾ ಕೋಪಯಂತೀ ಜನಾರ್ದನಮ್।।
ಅದನ್ನು ಕೇಳಿ ಕುಪಿತಳಾದ ಸತ್ಯಭಾಮೆಯು ರೋದಿಸುತ್ತ ಬಂದು ಕೇಶವನ ತೊಡೆಯ ಮೇಲೆ ಕುಳಿತುಕೊಂಡು ಕೃತವರ್ಮನ ಮೇಲೆ ಜನಾರ್ದನನ ಕೋಪವನ್ನು ಇನ್ನೂ ಹೆಚ್ಚಿಸಿದಳು.
16004024a ತತ ಉತ್ಥಾಯ ಸಕ್ರೋಧಃ ಸಾತ್ಯಕಿರ್ವಾಕ್ಯಮಬ್ರವೀತ್।
16004024c ಪಂಚಾನಾಂ ದ್ರೌಪದೇಯಾನಾಂ ಧೃಷ್ಟದ್ಯುಮ್ನಶಿಖಂಡಿನೋಃ।।
16004025a ಏಷ ಗಚ್ಚಾಮಿ ಪದವೀಂ ಸತ್ಯೇನ ಚ ತಥಾ ಶಪೇ।
16004025c ಸೌಪ್ತಿಕೇ ಯೇ ಚ ನಿಹತಾಃ ಸುಪ್ತಾನೇನ ದುರಾತ್ಮನಾ।।
16004026a ದ್ರೋಣಪುತ್ರಸಹಾಯೇನ ಪಾಪೇನ ಕೃತವರ್ಮಣಾ।
16004026c ಸಮಾಪ್ತಮಾಯುರಸ್ಯಾದ್ಯ ಯಶಶ್ಚಾಪಿ ಸುಮಧ್ಯಮೇ।।
ಆಗ ಸಾತ್ಯಕಿಯು ಕ್ರೋಧದಿಂದ ಮೇಲೆದ್ದು ಹೀಗೆ ಹೇಳಿದನು: “ಆ ರಾತ್ರಿ ಪಾಪಿ ದ್ರೋಣಪುತ್ರನ ಸಹಾಯದಿಂದ ಮಲಗಿದ್ದವರನ್ನು ಸಂಹರಿಸಿದ ಈ ದುರಾತ್ಮ ಕೃತವರ್ಮನನ್ನು ಆ ಐವರು ದ್ರೌಪದೇಯರ ಮತ್ತು ಧೃಷ್ಟದ್ಯುಮ್ನ-ಶಿಖಂಡಿಯರ ಪದವಿಗೆ ಕಳುಹಿಸುತ್ತೇನೆಂದು ಸತ್ಯ ಶಪಥಮಾಡುತ್ತೇನೆ! ಸುಮಧ್ಯಮೇ ಸತ್ಯಭಾಮಾ! ಇಂದು ಇವನ ಯಶಸ್ಸು ಮತ್ತು ಆಯಸ್ಸು ಮುಗಿದುಹೋಯಿತು!”
16004027a ಇತೀದಮುಕ್ತ್ವಾ ಖಡ್ಗೇನ ಕೇಶವಸ್ಯ ಸಮೀಪತಃ।
16004027c ಅಭಿದ್ರುತ್ಯ ಶಿರಃ ಕ್ರುದ್ಧಶ್ಚಿಚ್ಚೇದ ಕೃತವರ್ಮಣಃ।।
ಹೀಗೆ ಹೇಳಿ ಕ್ರುದ್ಧ ಸಾತ್ಯಕಿಯು ಖಡ್ಗದಿಂದ ಕೇಶವನ ಸಮೀಪದಲ್ಲಿದ್ದ ಕೃತವರ್ಮನನ್ನು ಆಕ್ರಮಣಿಸಿ ಅವನ ಶಿರವನ್ನು ಕತ್ತರಿಸಿದನು.
16004028a ತಥಾನ್ಯಾನಪಿ ನಿಘ್ನಂತಂ ಯುಯುಧಾನಂ ಸಮಂತತಃ।
16004028c ಅಭ್ಯಧಾವದ್ಧೃಷೀಕೇಶೋ ವಿನಿವಾರಯಿಷುಸ್ತದಾ।।
ಹಾಗೆಯೇ ಸುತ್ತಲಿದ್ದ ಇತರರನ್ನೂ ಸಂಹರಿಸುತ್ತಿದ್ದ ಯುಯುಧಾನನನ್ನು ತಡೆಯಲು ಹೃಷೀಕೇಶನು ಧಾವಿಸಿದನು.
16004029a ಏಕೀಭೂತಾಸ್ತತಃ ಸರ್ವೇ ಕಾಲಪರ್ಯಾಯಚೋದಿತಾಃ।
16004029c ಭೋಜಾಂಧಕಾ ಮಹಾರಾಜ ಶೈನೇಯಂ ಪರ್ಯವಾರಯನ್।।
ಮಹಾರಾಜ! ಆಗ ಕಾಲಪಲ್ಲಟದಿಂದ ಪ್ರಚೋದಿತ ಭೋಜ-ಅಂಧಕರೆಲ್ಲರೂ ಒಂದಾಗಿ ಶೈನೇಯ ಸಾತ್ಯಕಿಯನ್ನು ಸುತ್ತುವರೆದರು.
16004030a ತಾನ್ದೃಷ್ಟ್ವಾ ಪತತಸ್ತೂರ್ಣಮಭಿಕ್ರುದ್ಧಾನ್ಜನಾರ್ದನಃ।
16004030c ನ ಚುಕ್ರೋಧ ಮಹಾತೇಜಾ ಜಾನನ್ಕಾಲಸ್ಯ ಪರ್ಯಯಮ್।।
ಕ್ರುದ್ಧರಾದ ಅವರು ಸಾತ್ಯಕಿಯ ಮೇಲೆ ಬೀಳುತ್ತಿರುವುದನ್ನು ನೋಡಿಯೂ ಮಹಾತೇಜಸ್ವಿ ಜನಾರ್ದನನು ಕಾಲದ ಬದಲಾವಣೆಯನ್ನು ತಿಳಿದು ಕ್ರೋಧಿತನಾಗಲಿಲ್ಲ.
16004031a ತೇ ತು ಪಾನಮದಾವಿಷ್ಟಾಶ್ಚೋದಿತಾಶ್ಚೈವ ಮನ್ಯುನಾ।
16004031c ಯುಯುಧಾನಮಥಾಭ್ಯಘ್ನನ್ನುಚ್ಚಿಷ್ಟೈರ್ಭಾಜನೈಸ್ತದಾ।।
ಪಾನಮದದಿಂದ ಆವಿಷ್ಟರಾಗಿದ್ದ ಅವರು ಕೋಪದಿಂದ ಪ್ರಚೋದಿತರಾಗಿ ಯುಯುಧಾನನನ್ನು ಎಂಜಲು ಆಹಾರಗಳಿದ್ದ ಪಾತ್ರೆಗಳಿಂದಲೇ ಹೊಡೆಯತೊಡಗಿದರು.
16004032a ಹನ್ಯಮಾನೇ ತು ಶೈನೇಯೇ ಕ್ರುದ್ಧೋ ರುಕ್ಮಿಣಿನಂದನಃ।
16004032c ತದಂತರಮುಪಾಧಾವನ್ಮೋಕ್ಷಯಿಷ್ಯನ್ಶಿನೇಃ ಸುತಮ್।।
ಶೈನೇಯನನ್ನು ಹಾಗೆ ಹೊಡೆಯುತ್ತಿರಲು ಕ್ರುದ್ಧನಾದ ರುಕ್ಮಿಣೀನಂದನ ಪ್ರದ್ಯುಮ್ನನು ಓಡಿ ಬಂದು ಶೈನಿಯ ಮಗ ಸಾತ್ಯಕಿಯನ್ನು ಬಿಡಿಸಲು ಪ್ರಯತ್ನಿಸಿದನು.
16004033a ಸ ಭೋಜೈಃ ಸಹ ಸಂಯುಕ್ತಃ ಸಾತ್ಯಕಿಶ್ಚಾಂಧಕೈಃ ಸಹ।
16004033c ಬಹುತ್ವಾನ್ನಿಹತೌ ತತ್ರ ಉಭೌ ಕೃಷ್ಣಸ್ಯ ಪಶ್ಯತಃ।।
ಸಾತ್ಯಕಿ-ಪ್ರದ್ಯುಮ್ನರಿಬ್ಬರೂ ಒಂದಾಗಿ ಭೋಜ-ಅಂಧಕರೊಂದಿಗೆ ಸೆಣೆಸಾಡಿದರು. ಆದರೆ ಅನೇಕರಿದ್ದ ಭೋಜ-ಅಂಧಕರು ಅವರಿಬ್ಬರನ್ನೂ, ಕೃಷ್ಣನು ನೋಡುತ್ತಿದ್ದಂತೆಯೇ, ಸಂಹರಿಸಿದರು.
16004034a ಹತಂ ದೃಷ್ಟ್ವಾ ತು ಶೈನೇಯಂ ಪುತ್ರಂ ಚ ಯದುನಂದನಃ।
16004034c ಏರಕಾಣಾಂ ತದಾ ಮುಷ್ಟಿಂ ಕೋಪಾಜ್ಜಗ್ರಾಹ ಕೇಶವಃ।।
ಶೈನೇಯನೂ ತನ್ನ ಮಗನೂ ಹತರಾದುದನ್ನು ನೋಡಿದ ಯದುನಂದನ ಕೇಶವನು ಕೋಪದಿಂದ ಒಂದು ಮುಷ್ಟಿ ಎರಕ ಹುಲ್ಲನ್ನು ಹಿಡಿದುಕೊಂಡನು.
16004035a ತದಭೂನ್ಮುಸಲಂ ಘೋರಂ ವಜ್ರಕಲ್ಪಮಯೋಮಯಮ್।
16004035c ಜಘಾನ ತೇನ ಕೃಷ್ಣಸ್ತಾನ್ಯೇಽಸ್ಯ ಪ್ರಮುಖತೋಽಭವನ್।।
ಅದು ಲೋಹಮಯವಾದ ವಜ್ರದಂಥಹ ಘೋರ ಮುಸಲವಾಯಿತು. ಅದರಿಂದ ಕೃಷ್ಣನು ತನ್ನ ಎದುರಿದ್ದ ಅನ್ಯರೆಲ್ಲರನ್ನೂ ಸಂಹರಿಸಿದನು.
16004036a ತತೋಽಂಧಕಾಶ್ಚ ಭೋಜಾಶ್ಚ ಶೈನೇಯಾ ವೃಷ್ಣಯಸ್ತಥಾ।
16004036c ಜಘ್ನುರನ್ಯೋನ್ಯಮಾಕ್ರಂದೇ ಮುಸಲೈಃ ಕಾಲಚೋದಿತಾಃ।।
ಅನಂತರ ಅಂಧಕರು, ಭೋಜರು, ಶೈನೇಯರು, ಮತ್ತು ವೃಷ್ಣಿಗಳು ಕಾಲಚೋದಿತರಾಗಿ ಮುಸಲಗಳಿಂದ ಅನ್ಯೋನ್ಯರನ್ನು ಆಕ್ರಮಣಿಸಿ ಸಂಹರಿಸಿದರು.
16004037a ಯಸ್ತೇಷಾಮೇರಕಾಂ ಕಶ್ಚಿಜ್ಜಗ್ರಾಹ ರುಷಿತೋ ನೃಪ।
16004037c ವಜ್ರಭೂತೇವ ಸಾ ರಾಜನ್ನದೃಶ್ಯತ ತದಾ ವಿಭೋ।।
ನೃಪ! ವಿಭೋ! ರಾಜನ್! ಅವರಲ್ಲಿ ರೋಷದಿಂದ ಯಾರು ಆ ಎರಕದ ಹುಲ್ಲನ್ನು ಹಿಡಿದರೋ ಅವರ ಕೈಯಲ್ಲೆಲ್ಲಾ ಆ ಹುಲ್ಲು ವಜ್ರಾಯುಧದಂತೆ ಕಾಣುತ್ತಿತ್ತು.
16004038a ತೃಣಂ ಚ ಮುಸಲೀಭೂತಮಪಿ ತತ್ರ ವ್ಯದೃಶ್ಯತ।
16004038c ಬ್ರಹ್ಮದಂಡಕೃತಂ ಸರ್ವಮಿತಿ ತದ್ವಿದ್ಧಿ ಪಾರ್ಥಿವ।।
ಪಾರ್ಥಿವ! ಹುಲ್ಲೂ ಮುಸಲವಾದುದು ಕಂಡುಬಂದಿತೆಂದರೆ ಅದೆಲ್ಲವೂ ಆ ಋಷಿಗಳ ಶಾಪದಿಂದ ಆಯಿತೆಂದು ತಿಳಿದುಕೋ.
16004039a ಆವಿಧ್ಯಾವಿಧ್ಯ ತೇ ರಾಜನ್ಪ್ರಕ್ಷಿಪಂತಿ ಸ್ಮ ಯತ್ತೃಣಮ್।
16004039c ತದ್ವಜ್ರಭೂತಂ ಮುಸಲಂ ವ್ಯದೃಶ್ಯತ ತದಾ ದೃಢಮ್।।
ರಾಜನ್! ಆ ಹುಲ್ಲನ್ನು ಎಸೆದಾಗಲೆಲ್ಲ ಅದು ವಜ್ರದಂಥಹ ಗಟ್ಟಿಯಾದ ಮುಸಲ ರೂಪವನ್ನು ತಾಳುತ್ತಿತ್ತು.
16004040a ಅವಧೀತ್ಪಿತರಂ ಪುತ್ರಃ ಪಿತಾ ಪುತ್ರಂ ಚ ಭಾರತ।
16004040c ಮತ್ತಾಃ ಪರಿಪತಂತಿ ಸ್ಮ ಪೋಥಯಂತಃ ಪರಸ್ಪರಮ್।।
ಭಾರತ! ಮಗನು ತಂದೆಯನ್ನೂ, ತಂದೆಯು ಮಗನನ್ನೂ ಮತ್ತರಾಗಿ ಪರಸ್ಪರರನ್ನು ಹೊಡೆದು ಉರುಳಿಸಿದರು.
16004041a ಪತಂಗಾ ಇವ ಚಾಗ್ನೌ ತೇ ನ್ಯಪತನ್ಕುಕುರಾಂಧಕಾಃ।
16004041c ನಾಸೀತ್ಪಲಾಯನೇ ಬುದ್ಧಿರ್ವಧ್ಯಮಾನಸ್ಯ ಕಸ್ಯ ಚಿತ್।।
ಬೆಂಕಿಯಲ್ಲಿ ಬೀಳುವ ಪತಂಗಗಳಂತೆ ಕುಕುರ-ಅಂಧಕರು ಕೆಳಗುರುಳಿದರು. ಅಲ್ಲಿ ವಧಿಸಲ್ಪಡುತ್ತಿದ್ದ ಯಾರೂ ಪಲಾಯನದ ಕುರಿತು ಯೋಚಿಸಲಿಲ್ಲ.
16004042a ತಂ ತು ಪಶ್ಯನ್ಮಹಾಬಾಹುರ್ಜಾನನ್ಕಾಲಸ್ಯ ಪರ್ಯಯಮ್।
16004042c ಮುಸಲಂ ಸಮವಷ್ಟಭ್ಯ ತಸ್ಥೌ ಸ ಮಧುಸೂದನಃ।।
ಕಾಲದ ತಿರುವನ್ನು ನೋಡಿ ತಿಳಿದುಕೊಂಡ ಮಹಾಬಾಹು ಮಧುಸೂದನನು ಮುಸಲವನ್ನು ತಿರುಗಿಸುತ್ತಾ ನಿಂತನು.
16004043a ಸಾಂಬಂ ಚ ನಿಹತಂ ದೃಷ್ಟ್ವಾ ಚಾರುದೇಷ್ಣಂ ಚ ಮಾಧವಃ।
16004043c ಪ್ರದ್ಯುಮ್ನಂ ಚಾನಿರುದ್ಧಂ ಚ ತತಶ್ಚುಕ್ರೋಧ ಭಾರತ।।
ಭಾರತ! ಸಾಂಬ, ಚಾರುದೇಷ್ಣ, ಪ್ರದ್ಯುಮ್ನ ಮತ್ತು ಅನಿರುದ್ಧರು ಹತರಾದುದನ್ನು ನೋಡಿ ಮಾಧವನು ಕುಪಿತನಾದನು.
16004044a ಗದಂ ವೀಕ್ಷ್ಯ ಶಯಾನಂ ಚ ಭೃಶಂ ಕೋಪಸಮನ್ವಿತಃ।
16004044c ಸ ನಿಃಶೇಷಂ ತದಾ ಚಕ್ರೇ ಶಾಙ್ರಚಕ್ರಗದಾಧರಃ।।
ಗದನೂ ಮಲಗಿದ್ದುದನ್ನು ನೋಡಿ ತುಂಬಾ ಕೋಪಸಮನ್ವಿತನಾದ ಶಾಂಙ್ರಚಕ್ರಗದಾಧರನು ಎಲ್ಲರನ್ನೂ ನಿಃಶೇಷರನ್ನಾಗಿ ಮಾಡಿದನು.
16004045a ತಂ ನಿಘ್ನಂತಂ ಮಹಾತೇಜಾ ಬಭ್ರುಃ ಪರಪುರಂಜಯಃ।
16004045c ದಾರುಕಶ್ಚೈವ ದಾಶಾರ್ಹಮೂಚತುರ್ಯನ್ನಿಬೋಧ ತತ್।।
ಅವರನ್ನು ಸಂಹರಿಸುತ್ತಿದ್ದ ಆ ಮಹಾತೇಜಸ್ವಿ ದಾಶಾರ್ಹನನ್ನು ಪರಪುರಂಜಯ ಬಭ್ರು ಮತ್ತು ದಾರುಕರು ನೋಡಿ ಹೀಗೆಂದರು:
16004046a ಭಗವನ್ಸಂಹೃತಂ ಸರ್ವಂ ತ್ವಯಾ ಭೂಯಿಷ್ಠಮಚ್ಯುತ।
16004046c ರಾಮಸ್ಯ ಪದಮನ್ವಿಚ್ಚ ತತ್ರ ಗಚ್ಚಾಮ ಯತ್ರ ಸಃ।।
“ಭಗವನ್! ನೀನು ಹೆಚ್ಚಾಗಿ ಎಲ್ಲರನ್ನೂ ಸಂಹರಿಸಿದ್ದೀಯೆ! ಈಗ ಬಲರಾಮನು ಹಿಡಿದ ದಾರಿಯಲ್ಲಿಯೇ ನಡೆದು ಅವನಿದ್ದಲ್ಲಿಗೆ ಹೋಗೋಣ!””
ಸಮಾಪ್ತಿ
ಇತಿ ಶ್ರೀಮಹಾಭಾರತೇ ಮೌಸಲಪರ್ವಣಿ ಕೃತವರ್ಮಾದೀನಾಂ ಪರಸ್ಪರಹನನೇ ಚತುರ್ಥೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಮೌಸಲಪರ್ವಣಿ ಕೃತವರ್ಮಾದೀನಾಂ ಪರಸ್ಪರಹನನ ಎನ್ನುವ ನಾಲ್ಕನೇ ಅಧ್ಯಾಯವು.