003: ಉತ್ಪಾತದರ್ಶನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಮೌಸಲ ಪರ್ವ

ಮೌಸಲ ಪರ್ವ

ಅಧ್ಯಾಯ 3

ಸಾರ

ಯಾದವರಲ್ಲಿ ಉತ್ಪಾತದರ್ಶನ (1-15). ಕೃಷ್ಣನು ಸಮುದ್ರಯಾತ್ರೆಯನ್ನು ಘೋಷಿಸಿದುದು (16-22).

16003001 ವೈಶಂಪಾಯನ ಉವಾಚ।
16003001a ಏವಂ ಪ್ರಯತಮಾನಾನಾಂ ವೃಷ್ಣೀನಾಮಂಧಕೈಃ ಸಹ।
16003001c ಕಾಲೋ ಗೃಹಾಣಿ ಸರ್ವೇಷಾಂ ಪರಿಚಕ್ರಾಮ ನಿತ್ಯಶಃ।।
16003002a ಕರಾಲೋ ವಿಕಟೋ ಮುಂಡಃ ಪುರುಷಃ ಕೃಷ್ಣಪಿಂಗಲಃ।
16003002c ಗೃಹಾಣ್ಯವೇಕ್ಷ್ಯ ವೃಷ್ಣೀನಾಂ ನಾದೃಶ್ಯತ ಪುನಃ ಕ್ವ ಚಿತ್।।

ವೈಶಂಪಾಯನನು ಹೇಳಿದನು: “ಹೀಗೆ ವೃಷ್ಣಿ-ಅಂಧಕರು ಒಂದಾಗಿ ಪ್ರಯತ್ನಿಸುತ್ತಿದ್ದರೂ ಕಾಲಪುರುಷನು ನಿತ್ಯವೂ ಅವರೆಲ್ಲರ ಮನೆಗಳಿಗೆ ತಿರುಗುತ್ತಿದ್ದನು. ಕಪ್ಪಾಗಿದ್ದ, ವಿಕಟ, ಬೋಳುಮಂಡೆಯ, ಕಪ್ಪು-ಕಿತ್ತಳೆ ಬಣ್ಣಗಳ ಪುರುಷನು ವೃಷ್ಣಿಗಳ ಮನೆಗಳನ್ನು ಹೊಕ್ಕಿ ನೋಡಿ, ಪುನಃ ಎಲ್ಲಿಯೋ ಅದೃಶ್ಯನಾಗುತ್ತಿದ್ದನು.

16003003a ಉತ್ಪೇದಿರೇ ಮಹಾವಾತಾ ದಾರುಣಾಶ್ಚಾ ದಿನೇ ದಿನೇ।
16003003c ವೃಷ್ಣ್ಯಂಧಕವಿನಾಶಾಯ ಬಹವೋ ರೋಮಹರ್ಷಣಾಃ।।

ಪ್ರತಿದಿನವೂ ವೃಷ್ಣಿ-ಅಂಧಕರ ವಿನಾಶವನ್ನು ಸೂಚಿಸುವ ರೋಮಾಂಚಕ ದಾರುಣ ಭಿರುಗಾಳಿಯು ಬೀಸುತ್ತಿತ್ತು.

16003004a ವಿವೃದ್ಧಮೂಷಕಾ ರಥ್ಯಾ ವಿಭಿನ್ನಮಣಿಕಾಸ್ತಥಾ।
16003004c ಚೀಚೀಕೂಚೀತಿ ವಾಶ್ಯಂತ್ಯಃ ಸಾರಿಕಾ ವೃಷ್ಣಿವೇಶ್ಮಸು।
16003004e ನೋಪಶಾಮ್ಯತಿ ಶಬ್ದಶ್ಚ ಸ ದಿವಾರಾತ್ರಮೇವ ಹಿ।।

ಬೀದಿಗಳು ದೊಡ್ಡ ದೊಡ್ಡ ಇಲಿಗಳಿಂದ ತುಂಬಿಹೋಗಿದ್ದವು. ವೃಷ್ಣಿಗಳ ಮನೆಗಳಲ್ಲಿ ಮಡಿಕೆಗಳು ತಾವಾಗಿಯೇ ಒಡೆಯತೊಡಗಿದವು. ಸಾರಂಗ ಪಕ್ಷಿಗಳ ಚೀಚೀ ಕೂಗುಗಳು ಹಗಲಾಗಲೀ ರಾತ್ರಿಯಾಗಲೀ ಕೊನೆಯಿಲ್ಲದೇ ಕೇಳಿಬರುತ್ತಿದ್ದವು.

16003005a ಅನುಕುರ್ವನ್ನುಲೂಕಾನಾಂ ಸಾರಸಾ ವಿರುತಂ ತಥಾ।
16003005c ಅಜಾಃ ಶಿವಾನಾಂ ಚ ರುತಮನ್ವಕುರ್ವತ ಭಾರತ।।

ಸಾರಸ ಪಕ್ಷಿಗಳು ಗೂಬೆಗಳಂತೆ ಕೂಗುತ್ತಿದ್ದವು ಮತ್ತು ಭಾರತ! ಆಡುಗಳು ನರಿಗಳಂತೆ ಕೂಗತೊಡಗಿದವು.

16003006a ಪಾಂಡುರಾ ರಕ್ತಪಾದಾಶ್ಚ ವಿಹಗಾಃ ಕಾಲಚೋದಿತಾಃ।
16003006c ವೃಷ್ಣ್ಯಂಧಕಾನಾಂ ಗೇಹೇಷು ಕಪೋತಾ ವ್ಯಚರಂಸ್ತದಾ।।

ಕಾಲಚೋದಿತ ಕೆಂಪು ಕಾಲುಗಳಿದ್ದ ಬಿಳಿಯ ಪಕ್ಷಿಗಳು ಕಂಡುಬಂದವು ಮತ್ತು ವೃಷ್ಣಿ-ಅಂಧಕರ ಮನೆಗಳ ಮೇಲೆ ಪಾರಿವಾಳಗಳು ಹಾರಾಡುತ್ತಿದ್ದವು.

16003007a ವ್ಯಜಾಯಂತ ಖರಾ ಗೋಷು ಕರಭಾಶ್ವತರೀಷು ಚ।
16003007c ಶುನೀಷ್ವಪಿ ಬಿಡಾಲಾಶ್ಚ ಮೂಷಕಾ ನಕುಲೀಷು ಚ।।

ಗೋವುಗಳು ಕತ್ತೆಗಳಿಗೂ, ಕುದುರೆಗಳು ಆನೆಗಳಿಗೂ, ನಾಯಿಗಳು ಬೆಕ್ಕುಗಳಿಗೂ, ಮತ್ತು ಮುಂಗುಸಿಗಳು ಇಲಿಗಳಿಗೂ ಜನ್ಮವಿತ್ತವು.

16003008a ನಾಪತ್ರಪಂತ ಪಾಪಾನಿ ಕುರ್ವಂತೋ ವೃಷ್ಣಯಸ್ತದಾ।
16003008c ಪ್ರಾದ್ವಿಷನ್ಬ್ರಾಹ್ಮಣಾಂಶ್ಚಾಪಿ ಪಿತೄನ್ದೇವಾಂಸ್ತಥೈವ ಚ।।
16003009a ಗುರೂಂಶ್ಚಾಪ್ಯವಮನ್ಯಂತ ನ ತು ರಾಮಜನಾರ್ದನೌ।
16003009c ಪತ್ನ್ಯಃ ಪತೀನ್ವ್ಯುಚ್ಚರಂತ ಪತ್ನೀಶ್ಚ ಪತಯಸ್ತಥಾ।।

ವೃಷ್ಣಿಗಳು ಪಾಪಕರ್ಮಗಳನ್ನು ಮಾಡಲು ನಾಚುತ್ತಿರಲಿಲ್ಲ. ಬ್ರಾಹ್ಮಣರನ್ನೂ, ಪಿತೃಗಳನ್ನೂ, ದೇವತೆಗಳನ್ನೂ ದ್ವೇಷಿಸತೊಡಗಿದರು. ಬಲರಾಮ-ಕೃಷ್ಣರನ್ನು ಬಿಟ್ಟು ಉಳಿದ ಹಿರಿಯರನ್ನು ಅವಹೇಳನ ಮಾಡತೊಡಗಿದರು. ಪತ್ನಿಯರು ತಮ್ಮ ಪತಿಗಳಿಗೂ, ಪತಿಗಳು ತಮ್ಮ ಪತ್ನಿಯರಿಗೂ ಮೋಸಮಾಡತೊಡಗಿದರು.

16003010a ವಿಭಾವಸುಃ ಪ್ರಜ್ವಲಿತೋ ವಾಮಂ ವಿಪರಿವರ್ತತೇ।
16003010c ನೀಲಲೋಹಿತಮಾಂಜಿಷ್ಠಾ ವಿಸೃಜನ್ನರ್ಚಿಷಃ ಪೃಥಕ್।।

ಅಗ್ನಿಯು ಎಡಗಡೆಯೇ ವಾಲಿಕೊಂಡು ಪ್ರಜ್ವಲಿಸುತ್ತಿದ್ದನು ಮತ್ತು ನೀಲಿ-ಕೆಂಪು-ಬಿಳಿಯ ಕಿಡಿಗಳನ್ನು ಮತ್ತೆ ಮತ್ತೆ ಕಾರುತ್ತಿದ್ದನು.

16003011a ಉದಯಾಸ್ತಮನೇ ನಿತ್ಯಂ ಪುರ್ಯಾಂ ತಸ್ಯಾಂ ದಿವಾಕರಃ।
16003011c ವ್ಯದೃಶ್ಯತಾಸಕೃತ್ಪುಂಭಿಃ ಕಬಂಧೈಃ ಪರಿವಾರಿತಃ।।

ನಿತ್ಯವೂ ಉದಯ-ಅಸ್ತಮಾನಗಳ ಸಮಯದಲ್ಲಿ ನಗರದ ಮೇಲೆ ಸೂರ್ಯನ ಸುತ್ತಲೂ ಶಿರಗಳಿಲ್ಲದ ಕಬಂಧಗಳ ಆಕಾರಗಳು ಕಾಣುತ್ತಿದ್ದವು.

16003012a ಮಹಾನಸೇಷು ಸಿದ್ಧೇಽನ್ನೇ ಸಂಸ್ಕೃತೇಽತೀವ ಭಾರತ।
16003012c ಆಹಾರ್ಯಮಾಣೇ ಕೃಮಯೋ ವ್ಯದೃಶ್ಯಂತ ನರಾಧಿಪ।।

ಭಾರತ! ನರಾಧಿಪ! ಅತೀವ ಸುಸಂಸ್ಕೃತವಾಗಿ ತಯಾರಿಸಿದ ಆಹಾರಗಳನ್ನು ತಿನ್ನಬೇಕು ಎನ್ನುವಾಗ ಅದರಲ್ಲಿ ಕ್ರಿಮಿಗಳು ಕಂಡುಬರುತ್ತಿದ್ದವು!

16003013a ಪುಣ್ಯಾಹೇ ವಾಚ್ಯಮಾನೇ ಚ ಜಪತ್ಸು ಚ ಮಹಾತ್ಮಸು।
16003013c ಅಭಿಧಾವಂತಃ ಶ್ರೂಯಂತೇ ನ ಚಾದೃಶ್ಯತ ಕಶ್ಚನ।।

ಪುಣ್ಯಾಹ ವಾಚನ ಮಾಡುವಾಗ ಮತ್ತು ಮಹಾತ್ಮರು ಜಪಿಸುವಾಗ ಯಾರೋ ಓಡಿಹೋಗುತ್ತಿರುವುದು ಕೇಳಿಬರುತ್ತಿತ್ತು, ಆದರೆ ಯಾರೂ ಓಡಿಹೋಗುತ್ತಿರುವವರು ಕಾಣುತ್ತಿರಲಿಲ್ಲ.

16003014a ಪರಸ್ಪರಂ ಚ ನಕ್ಷತ್ರಂ ಹನ್ಯಮಾನಂ ಪುನಃ ಪುನಃ।
16003014c ಗ್ರಹೈರಪಶ್ಯನ್ಸರ್ವೇ ತೇ ನಾತ್ಮನಸ್ತು ಕಥಂ ಚನ।।

ನಕ್ಷತ್ರಗಳು ಮತ್ತು ಗ್ರಹಗಳು ಪುನಃ ಪುನಃ ಪರಸ್ಪರರೊಡನೆ ಸಂಘರ್ಷಿಸುವುದನ್ನು ಎಲ್ಲರೂ ನೋಡುತ್ತಿದ್ದರು. ಆದರೆ ತಮ್ಮದೇ ಜನ್ಮಕುಂಡಲಿಗಳು ಯಾರಿಗೂ ಕಾಣುತ್ತಿರಲಿಲ್ಲ.

16003015a ನದಂತಂ ಪಾಂಚಜನ್ಯಂ ಚ ವೃಷ್ಣ್ಯಂಧಕನಿವೇಶನೇ।
16003015c ಸಮಂತಾತ್ಪ್ರತ್ಯವಾಶ್ಯಂತ ರಾಸಭಾ ದಾರುಣಸ್ವರಾಃ।।

ಪಾಂಚಜನ್ಯವನ್ನು ಊದಿದಾಗ ವೃಷ್ಣಿ ಮತ್ತು ಅಂಧಕರ ಮನೆಗಳಲ್ಲಿ ಅದರ ಧ್ವನಿಯು ಕತ್ತೆಗಳ ಕಿರುಚಾಟದಂತೆ ಪ್ರತಿಧ್ವನಿಸಿ ಕೇಳುತ್ತಿತ್ತು.

16003016a ಏವಂ ಪಶ್ಯನ್ ಹೃಷೀಕೇಶಃ ಸಂಪ್ರಾಪ್ತಂ ಕಾಲಪರ್ಯಯಮ್।
16003016c ತ್ರಯೋದಶ್ಯಾಮಮಾವಾಸ್ಯಾಂ ತಾಂ ದೃಷ್ಟ್ವಾ ಪ್ರಾಬ್ರವೀದಿದಮ್।।

ಇದನ್ನು ನೋಡಿ ಹೃಷೀಕೇಶನು ಕಾಲಪಲ್ಲಟವು ಬಂದೊದಗಿದೆಯೆಂದು ತಿಳಿದನು. ತ್ರಯೋದಶಿಯಂದೇ ಅಮವಾಸ್ಯೆಯು ಬಂದಿರುವುದನ್ನು ನೋಡಿ ಅವನು ಹೀಗೆ ಅಂದುಕೊಂಡನು:

16003017a ಚತುರ್ದಶೀ ಪಂಚದಶೀ ಕೃತೇಯಂ ರಾಹುಣಾ ಪುನಃ।
16003017c ತದಾ ಚ ಭಾರತೇ ಯುದ್ಧೇ ಪ್ರಾಪ್ತಾ ಚಾದ್ಯ ಕ್ಷಯಾಯ ನಃ।।

“ಪುನಃ ರಾಹುವು ಚತುರ್ದಶಿಯನ್ನು ಅಮವಾಸ್ಯೆಯನ್ನಾಗಿ ಮಾಡಿದ್ದಾನೆ. ಅಂದು ಈ ರೀತಿಯಾದಾಗ ಭಾರತ ಯುದ್ಧವು ನಡೆಯಿತು. ಇಂದು ನಮ್ಮೆಲ್ಲರ ವಿನಾಶವಾಗಲು ಈ ರೀತಿಯಾಗುತ್ತಿದೆ.”

16003018a ವಿಮೃಶನ್ನೇವ ಕಾಲಂ ತಂ ಪರಿಚಿಂತ್ಯ ಜನಾರ್ದನಃ।
16003018c ಮೇನೇ ಪ್ರಾಪ್ತಂ ಸ ಷಟ್ತ್ರಿಂಶಂ ವರ್ಷಂ ವೈ ಕೇಶಿಸೂದನಃ।।
16003019a ಪುತ್ರಶೋಕಾಭಿಸಂತಪ್ತಾ ಗಾಂಧಾರೀ ಹತಬಾಂಧವಾ।
16003019c ಯದನುವ್ಯಾಜಹಾರಾರ್ತಾ ತದಿದಂ ಸಮುಪಾಗತಮ್।।

ಇದನ್ನು ವಿಮರ್ಶಿಸಿ ಮತ್ತು ಕಾಲದ ಕುರಿತು ಚಿಂತಿಸಿ ಜನಾರ್ದನ ಕೇಶಿಸೂದನನು ಯುದ್ಧಮುಗಿದು ಮೂವತ್ತಾರನೆಯ ವರ್ಷವು ಕಾಲಿಡುತ್ತಿದೆ ಮತ್ತು ಬಾಂಧವರನ್ನು ಕಳೆದುಕೊಂಡು ಪುತ್ರ ಶೋಕದಿಂದ ಸಂತಪ್ತಳಾಗಿದ್ದ ಗಾಂಧಾರಿಯು ಯಾವ ಶಾಪವನ್ನು ಶಪಿಸಿದ್ದಳೋ ಅದು ಈಗ ನಿಜವಾಗುತ್ತದೆ ಎಂದು ಅಭಿಪ್ರಾಯಪಟ್ಟನು.

16003020a ಇದಂ ಚ ತದನುಪ್ರಾಪ್ತಮಬ್ರವೀದ್ಯದ್ಯುಧಿಷ್ಠಿರಃ।
16003020c ಪುರಾ ವ್ಯೂಢೇಷ್ವನೀಕೇಷು ದೃಷ್ಟ್ವೋತ್ಪಾತಾನ್ಸುದಾರುಣಾನ್।।

“ಹಿಂದೆ ಸೇನೆಗಳ ವ್ಯೂಹವನ್ನು ರಚಿಸುತ್ತಿದ್ದಾಗ ಯುಧಿಷ್ಠಿರನು ಕಂಡ ದಾರುಣ ಉತ್ಪಾತಗಳು ಈಗ ಪುನಃ ತೋರಿಸಿಕೊಳ್ಳುತ್ತಿವೆ!”

16003021a ಇತ್ಯುಕ್ತ್ವಾ ವಾಸುದೇವಸ್ತು ಚಿಕೀರ್ಷನ್ಸತ್ಯಮೇವ ತತ್।
16003021c ಆಜ್ಞಾಪಯಾಮಾಸ ತದಾ ತೀರ್ಥಯಾತ್ರಾಮರಿಂದಮ।।

ಹೀಗೆ ಹೇಳಿ ಅರಿಂದಮ ವಾಸುದೇವನು ಅದನ್ನು ಸತ್ಯವಾಗಿಸಲು ಬಯಸಿ ತೀರ್ಥಯಾತ್ರೆಗೆ ಆಜ್ಞಾಪಿಸಿದನು.

16003022a ಅಘೋಷಯಂತ ಪುರುಷಾಸ್ತತ್ರ ಕೇಶವಶಾಸನಾತ್।
16003022c ತೀರ್ಥಯಾತ್ರಾ ಸಮುದ್ರೇ ವಃ ಕಾರ್ಯೇತಿ ಪುರುಷರ್ಷಭಾಃ।।

ಕೇಶವನ ಶಾಸನದಂತೆ ಪುರುಷರು “ಪುರುಷರ್ಷಭರೇ! ಸಮುದ್ರತೀರಕ್ಕೆ ತೀರ್ಥಯಾತ್ರೆಗೆ ನಡೆಯಿರಿ!” ಎಂದು ಘೋಷಿಸಿದರು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಮೌಸಲಪರ್ವಣಿ ಉತ್ಪಾತದರ್ಶನೇ ತೃತೀಯೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಮೌಸಲಪರ್ವಣಿ ಉತ್ಪಾತದರ್ಶನ ಎನ್ನುವ ಮೂರನೇ ಅಧ್ಯಾಯವು.