ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಮೌಸಲ ಪರ್ವ
ಮೌಸಲ ಪರ್ವ
ಅಧ್ಯಾಯ 2
ಸಾರ
ಮುನಿಗಳಿಂದ ಯಾದವರಿಗೆ ಶಾಪ (1-11). ಸಾಂಬನಿಂದ ಮುಸಲದ ಜನನ; ಮುಸಲವನ್ನು ಚೂರ್ಣವನ್ನಾಗಿಸಿ ಸಮುದ್ರದಲ್ಲಿ ಎಸೆದುದು; ದ್ವಾರಕೆಯಲ್ಲಿ ಸುರಾಪಾನದ ನಿಷೇದ (12-20).
16002001 ಜನಮೇಜಯ ಉವಾಚ।
16002001a ಕಥಂ ವಿನಷ್ಟಾ ಭಗವನ್ನಂಧಕಾ ವೃಷ್ಣಿಭಿಃ ಸಹ।
16002001c ಪಶ್ಯತೋ ವಾಸುದೇವಸ್ಯ ಭೋಜಾಶ್ಚೈವ ಮಹಾರಥಾಃ।।
ಜನಮೇಜಯನು ಹೇಳಿದನು: “ಭಗವನ್! ವಾಸುದೇವನ ಕಣ್ಣೆದುರಿಗೇ ಹೇಗೆ ವೃಷ್ಣಿಗಳೊಂದಿಗೆ ಅಂಧಕರು ಮತ್ತು ಮಹಾರಥ ಭೋಜರು ವಿನಾಶರಾದರು?”
16002002 ವೈಶಂಪಾಯನ ಉವಾಚ।
16002002a ಷಟ್ತ್ರಿಂಶೇಽಥ ತತೋ ವರ್ಷೇ ವೃಷ್ಣೀನಾಮನಯೋ ಮಹಾನ್।
16002002c ಅನ್ಯೋನ್ಯಂ ಮುಸಲೈಸ್ತೇ ತು ನಿಜಘ್ನುಃ ಕಾಲಚೋದಿತಾಃ।।
ವೈಶಂಪಾಯನನು ಹೇಳಿದನು: “ಯುದ್ಧವು ಕಳೆದ ಮೂವತ್ತಾರನೆಯ ವರ್ಷದಲ್ಲಿ ವೃಷ್ಣಿಗಳಿಗೆ ಮಹಾ ಕಂಟಕವುಂಟಾಯಿತು. ಕಾಲ ಪ್ರಚೋದಿತರಾದ ಅವರು ಮುಸಲಗಳಿಂದ ಅನ್ಯೋನ್ಯರನ್ನು ಸಂಹರಿಸಿದರು.”
16002003 ಜನಮೇಜಯ ಉವಾಚ।
16002003a ಕೇನಾನುಶಪ್ತಾಸ್ತೇ ವೀರಾಃ ಕ್ಷಯಂ ವೃಷ್ಣ್ಯಂಧಕಾ ಯಯುಃ।
16002003c ಭೋಜಾಶ್ಚ ದ್ವಿಜವರ್ಯ ತ್ವಂ ವಿಸ್ತರೇಣ ವದಸ್ವ ಮೇ।।
ಜನಮೇಜಯನು ಹೇಳಿದನು: “ದ್ವಿಜವರ್ಯ! ಯಾರ ಶಾಪದಿಂದಾಗಿ ವೃಷ್ಣಿ-ಅಂಧಕ-ಭೋಜ ವೀರರು ನಾಶಹೊಂದಿದರು? ವಿಸ್ತಾರವಾಗಿ ನೀನು ನನಗೆ ಹೇಳಬೇಕು!”
16002004 ವೈಶಂಪಾಯನ ಉವಾಚ।
16002004a ವಿಶ್ವಾಮಿತ್ರಂ ಚ ಕಣ್ವಂ ಚ ನಾರದಂ ಚ ತಪೋಧನಮ್।
16002004c ಸಾರಣಪ್ರಮುಖಾ ವೀರಾ ದದೃಶುರ್ದ್ವಾರಕಾಗತಾನ್।।
ವೈಶಂಪಾಯನನು ಹೇಳಿದನು: “ದ್ವಾರಕೆಗೆ ಬಂದಿದ್ದ ವಿಶ್ವಾಮಿತ್ರ, ಕಣ್ವ, ಮತ್ತು ತಪೋಧನ ನಾರದರನ್ನು ಸಾರಣ ಪ್ರಮುಖ ವೀರರು ಕಂಡರು.
16002005a ತೇ ವೈ ಸಾಂಬಂ ಪುರಸ್ಕೃತ್ಯ ಭೂಷಯಿತ್ವಾ ಸ್ತ್ರಿಯಂ ಯಥಾ।
16002005c ಅಬ್ರುವನ್ನುಪಸಂಗಮ್ಯ ದೈವದಂಡನಿಪೀಡಿತಾಃ।।
ದೈವದಂಡದಿಂದ ಪೀಡಿತರಾದ ಅವರು ಸಾಂಬನಿಗೆ ಸ್ತ್ರೀಯ ವೇಷಧರಿಸಿ ಆಗಮಿಸಿರುವವರ ಎದಿರು ಕರೆದುಕೊಂಡು ಹೋಗಿ ಹೇಳಿದರು:
16002006a ಇಯಂ ಸ್ತ್ರೀ ಪುತ್ರಕಾಮಸ್ಯ ಬಭ್ರೋರಮಿತತೇಜಸಃ।
16002006c ಋಷಯಃ ಸಾಧು ಜಾನೀತ ಕಿಮಿಯಂ ಜನಯಿಷ್ಯತಿ।।
“ಇವಳು ಪುತ್ರನನ್ನು ಬಯಸುವ ಅಮಿತತೇಜಸ್ವಿ ಬಭ್ರುವಿನ ಪತ್ನಿ. ಋಷಿಗಳೇ! ಇವಳು ಏನನ್ನು ಹುಟ್ಟಿಸುತ್ತಾಳೆ ಎನ್ನುವುದು ನಿಮಗೆ ತಿಳಿದಿದ್ದರೆ ಸತ್ಯವನ್ನು ಹೇಳಿ!”
16002007a ಇತ್ಯುಕ್ತಾಸ್ತೇ ತದಾ ರಾಜನ್ವಿಪ್ರಲಂಭಪ್ರಧರ್ಷಿತಾಃ।
16002007c ಪ್ರತ್ಯಬ್ರುವಂಸ್ತಾನ್ಮುನಯೋ ಯತ್ತಚ್ಛೃಣು ನರಾಧಿಪ।।
ರಾಜನ್! ನರಾಧಿಪ! ಅವರು ಹೀಗೆ ಹೇಳಲು ಆ ವಂಚನೆಯಿಂದ ಋಷಿಗಳು ಕುಪಿತರಾದರು. ಅವರು ಏನು ಉತ್ತರವಿತ್ತರೆನ್ನುವುದನ್ನು ಕೇಳು.
16002008a ವೃಷ್ಣ್ಯಂಧಕವಿನಾಶಾಯ ಮುಸಲಂ ಘೋರಮಾಯಸಮ್।
16002008c ವಾಸುದೇವಸ್ಯ ದಾಯಾದಃ ಸಾಂಬೋಽಯಂ ಜನಯಿಷ್ಯತಿ।।
“ವೃಷ್ಣಿ-ಅಂಧಕರ ವಿನಾಶಕ್ಕಾಗಿ ವಾಸುದೇವನ ಮಗ ಈ ಸಾಂಬನು ಲೋಹದ ಘೋರ ಮುಸಲಕ್ಕೆ ಜನ್ಮನೀಡುತ್ತಾನೆ!
16002009a ಯೇನ ಯೂಯಂ ಸುದುರ್ವೃತ್ತಾ ನೃಶಂಸಾ ಜಾತಮನ್ಯವಃ।
16002009c ಉಚ್ಚೇತ್ತಾರಃ ಕುಲಂ ಕೃತ್ಸ್ನಮೃತೇ ರಾಮಜನಾರ್ದನೌ।।
ಬಲರಾಮ-ಕೃಷ್ಣರನ್ನು ಬಿಟ್ಟು ನೀವು ಇದನ್ನೇ ಬಳಸಿ ಕೆಟ್ಟ ನಡತೆಯ, ದುಷ್ಟ, ಕೋಪಿಷ್ಟ ವೃಷ್ಣಿಕುಲವೆಲ್ಲವನ್ನೂ ಸಂಪೂರ್ಣವಾಗಿ ನಾಶಗೊಳಿಸುತ್ತೀರಿ!
16002010a ಸಮುದ್ರಂ ಯಾಸ್ಯತಿ ಶ್ರೀಮಾಂಸ್ತ್ಯಕ್ತ್ವಾ ದೇಹಂ ಹಲಾಯುಧಃ।
16002010c ಜರಾ ಕೃಷ್ಣಂ ಮಹಾತ್ಮಾನಂ ಶಯಾನಂ ಭುವಿ ಭೇತ್ಸ್ಯತಿ।।
ಶ್ರೀಮಾನ್ ಹಲಾಯುಧನು ದೇಹವನ್ನು ತ್ಯಜಿಸಿ ಸಮುದ್ರವನ್ನು ಸೇರುವನು. ಜರಾ ಎನ್ನುವವನು ನೆಲದ ಮೇಲೆ ಮಲಗಿದ್ದ ಮಹಾತ್ಮ ಕೃಷ್ಣನನ್ನು ಹೊಡೆದುರುಳಿಸುತ್ತಾನೆ!”
16002011a ಇತ್ಯಬ್ರುವಂತ ತೇ ರಾಜನ್ಪ್ರಲಬ್ಧಾಸ್ತೈರ್ದುರಾತ್ಮಭಿಃ।
16002011c ಮುನಯಃ ಕ್ರೋಧರಕ್ತಾಕ್ಷಾಃ ಸಮೀಕ್ಷ್ಯಾಥ ಪರಸ್ಪರಮ್।।
ರಾಜನ್! ಆ ದುರಾತ್ಮರಿಂದ ವಂಚಿತರಾದ ಆ ಮುನಿಗಳು ಹೀಗೆ ಹೇಳಿ ಕ್ರೋಧದಿಂದ ಕೆಂಪಾಗಿದ್ದ ಕಣ್ಣುಗಳಿಂದ ಪರಸ್ಪರರನ್ನು ನೋಡಿದರು.
16002012a ತಥೋಕ್ತ್ವಾ ಮುನಯಸ್ತೇ ತು ತತಃ ಕೇಶವಮಭ್ಯಯುಃ।।
16002013a ಅಥಾಬ್ರವೀತ್ತದಾ ವೃಷ್ಣೀನ್ಶ್ರುತ್ವೈವಂ ಮಧುಸೂದನಃ।
16002013c ಅಂತಜ್ಞೋ ಮತಿಮಾಂಸ್ತಸ್ಯ ಭವಿತವ್ಯಂ ತಥೇತಿ ತಾನ್।।
ಹಾಗೆ ಹೇಳಿ ಮುನಿಗಳು ಕೇಶವನಿದ್ದಲ್ಲಿಗೆ ಹೋದರು. ಅವರಿಂದ ಕೇಳಿದುದನ್ನು ಮಧುಸೂದನನು ವೃಷ್ಣಿಗಳಿಗೆ ಹೇಳಿದನು. ಅಂತ್ಯವು ಬಂದಿದೆಯೆಂದು ತಿಳಿದಿದ್ದ ಆ ಮತಿವಂತನು “ಇದು ಹಾಗೆಯೇ ಆಗುತ್ತದೆ!” ಎಂದನು.
16002014a ಏವಮುಕ್ತ್ವಾ ಹೃಷೀಕೇಶಃ ಪ್ರವಿವೇಶ ಪುನರ್ಗೃಹಾನ್।
16002014c ಕೃತಾಂತಮನ್ಯಥಾ ನೈಚ್ಚತ್ಕರ್ತುಂ ಸ ಜಗತಃ ಪ್ರಭುಃ।।
ಹೀಗೆ ಹೇಳಿ ಜಗತ್ಪ್ರಭು ಹೃಷೀಕೇಶನು ನಡೆಯುವಂಥಹುದನ್ನು ಬದಲಾಯಿಸಲು ಬಯಸದೇ ಪುನಃ ತನ್ನ ಸದನವನ್ನು ಪ್ರವೇಶಿಸಿದನು.
16002015a ಶ್ವೋಭೂತೇಽಥ ತತಃ ಸಾಂಬೋ ಮುಸಲಂ ತದಸೂತ ವೈ।
16002015c ವೃಷ್ಣ್ಯಂಧಕವಿನಾಶಾಯ ಕಿಂಕರಪ್ರತಿಮಂ ಮಹತ್।।
ಮಾರನೆಯ ದಿನ ಸಾಂಬನು ವೃಷ್ಣಿ-ಅಂಧಕರ ವಿನಾಶಕ್ಕೆ ಕಾರಣವಾಗುವ ರಾಕ್ಷಸ ಕಿಂಕರನಂತೆ ದೊಡ್ಡದಾಗಿದ್ದ ಮುಸಲವನ್ನು ಹೆತ್ತನು.
16002016a ಪ್ರಸೂತಂ ಶಾಪಜಂ ಘೋರಂ ತಚ್ಚ ರಾಜ್ಞೇ ನ್ಯವೇದಯನ್।
16002016c ವಿಷಣ್ಣರೂಪಸ್ತದ್ರಾಜಾ ಸೂಕ್ಷ್ಮಂ ಚೂರ್ಣಮಕಾರಯತ್।।
16002017a ಪ್ರಾಕ್ಷಿಪನ್ಸಾಗರೇ ತಚ್ಚ ಪುರುಷಾ ರಾಜಶಾಸನಾತ್।
16002017c ಅಘೋಷಯಂಶ್ಚ ನಗರೇ ವಚನಾದಾಹುಕಸ್ಯ ಚ।।
ಶಾಪದಿಂದಾಗಿ ಆ ಘೋರ ಮುಸಲವು ಹುಟ್ಟಿದುದನ್ನು ತಿಳಿದ ರಾಜ ಆಹುಕನು ದುಃಖಿತನಾದನು. ಅದನ್ನು ಸೂಕ್ಷ್ಮ ಚೂರ್ಣವನ್ನಾಗಿ ತಳೆಯಿಸಿ ಸಮುದ್ರದಲ್ಲಿ ಹಾಕಿಸಿದನು. ಅನಂತರ ಆಹುಕನ ವಚನದಂತೆ ಈ ಕಠೋರ ರಾಜಶಾಸನವನ್ನು ನಗರದಲ್ಲೆಲ್ಲಾ ಘೋಷಿಸಲಾಯಿತು:
16002018a ಅದ್ಯ ಪ್ರಭೃತಿ ಸರ್ವೇಷು ವೃಷ್ಣ್ಯಂಧಕಗೃಹೇಷ್ವಿಹ।
16002018c ಸುರಾಸವೋ ನ ಕರ್ತವ್ಯಃ ಸರ್ವೈರ್ನಗರವಾಸಿಭಿಃ।।
“ಇಂದಿನಿಂದ ಸರ್ವ ನಗರವಾಸಿಗಳಿಗೂ ವೃಷ್ಣಿ-ಅಂಧಕರ ಎಲ್ಲ ಮನೆಗಳಲ್ಲಿಯೂ ಸುರಾಪಾನವನ್ನು ನಿಷೇಧಿಸಲಾಗಿದೆ!
16002019a ಯಶ್ಚ ನೋಽವಿದಿತಂ ಕುರ್ಯಾತ್ಪೇಯಂ ಕಶ್ಚಿನ್ನರಃ ಕ್ವ ಚಿತ್।
16002019c ಜೀವನ್ಸ ಶೂಲಮಾರೋಹೇತ್ಸ್ವಯಂ ಕೃತ್ವಾ ಸಬಾಂಧವಃ।।
ಯಾರಾದರೂ ಇಂತಹ ಮಾದಕ ಪಾನೀಯವನ್ನು ತಯಾರಿಸಿದ್ದುದು ತಿಳಿದುಬಂದರೆ ಅವನನ್ನು ಅವನ ಬಾಂಧವರೊಂದಿಗೆ ಶೂಲಕ್ಕೇರಿಸಲಾಗುವುದು!”
16002020a ತತೋ ರಾಜಭಯಾತ್ಸರ್ವೇ ನಿಯಮಂ ಚಕ್ರಿರೇ ತದಾ।
16002020c ನರಾಃ ಶಾಸನಮಾಜ್ಞಾಯ ತಸ್ಯ ರಾಜ್ಞೋ ಮಹಾತ್ಮನಃ।।
ಅನಂತರ ಆ ಮಹಾತ್ಮ ರಾಜನ ಶಾಸನವನ್ನು ತಿಳಿದ ನರರೆಲ್ಲರೂ ರಾಜನ ಭಯದಿಂದ ಅದೇ ನಿಯಮದಂತೆ ನಡೆದುಕೊಂಡರು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಮೌಸಲಪರ್ವಣಿ ಮುಸಲೋತ್ಪತ್ತೌ ದ್ವಿತೀಯೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಮೌಸಲಪರ್ವಣಿ ಮುಸಲೋತ್ಪತ್ತಿ ಎನ್ನುವ ಎರಡನೇ ಅಧ್ಯಾಯವು.