001: ಉತ್ಪಾತದರ್ಶನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಮೌಸಲ ಪರ್ವ

ಮೌಸಲ ಪರ್ವ

ಅಧ್ಯಾಯ 1

ಸಾರ

ಯುಧಿಷ್ಠಿರನಿಗೆ ಉತ್ಪಾತದರ್ಶನ (1-6). ವಾಸುದೇವ, ಬಲರಾಮ ಮತ್ತು ವೃಷ್ಣಿವೀರರೆಲ್ಲರೂ ಮುಕ್ತರಾದ ವಿಷಯವನ್ನು ಪಾಂಡವರು ಕೇಳಿದುದು (7-11).

16001001 ವೈಶಂಪಾಯನ ಉವಾಚ।
16001001a ಷಟ್ತ್ರಿಂಶೇ ತ್ವಥ ಸಂಪ್ರಾಪ್ತೇ ವರ್ಷೇ ಕೌರವನಂದನಃ।
16001001c ದದರ್ಶ ವಿಪರೀತಾನಿ ನಿಮಿತ್ತಾನಿ ಯುಧಿಷ್ಠಿರಃ।।

ವೈಶಂಪಾಯನನು ಹೇಳಿದನು: “ಮೂವತ್ತಾರನೆಯ ವರ್ಷವು ಬರಲು ಕೌರವನಂದನ ಯುಧಿಷ್ಠಿರನು ವಿಪರೀತ ನಿಮಿತ್ತಗಳನ್ನು ಕಂಡನು.

16001002a ವವುರ್ವಾತಾಃ ಸನಿರ್ಘಾತಾ ರೂಕ್ಷಾಃ ಶರ್ಕರವರ್ಷಿಣಃ।
16001002c ಅಪಸವ್ಯಾನಿ ಶಕುನಾ ಮಂಡಲಾನಿ ಪ್ರಚಕ್ರಿರೇ।।

ಕಲ್ಲು ಮರಳುಗಳೊಂದಿಗೆ ಭಿರುಸಾದ ಒಣ ಗಾಳಿಯು ಎಲ್ಲ ಕಡೆಗಳಿಂದ ಬೀಸತೊಡಗಿತು. ಪಕ್ಷಿಗಳು ಅಪ್ರದಕ್ಷಿಣೆಯಾಗಿ ಸುತ್ತತೊಡಗಿದವು.

16001003a ಪ್ರತ್ಯಗೂಹುರ್ಮಹಾನದ್ಯೋ ದಿಶೋ ನೀಹಾರಸಂವೃತಾಃ।
16001003c ಉಲ್ಕಾಶ್ಚಾಂಗಾರವರ್ಷಿಣ್ಯಃ ಪ್ರಪೇತುರ್ಗಗನಾದ್ಭುವಿ।।

ಮಹಾನದಿಗಳು ವಿರುದ್ಧ ದಿಕ್ಕಿನಲ್ಲಿ ಹರಿಯತೊಡಗಿದವು. ದಿಕ್ಕುಗಳಲ್ಲಿ ಸದಾ ಮುಸುಕು ಕವಿದಿತ್ತು. ಬೆಂಕಿಯ ಉಂಡೆಗಳನ್ನು ಸುರಿಸುತ್ತಾ ಉಲ್ಕೆಗಳು ಗಗನದಿಂದ ಭೂಮಿಯ ಮೇಲೆ ಬಿದ್ದವು.

16001004a ಆದಿತ್ಯೋ ರಜಸಾ ರಾಜನ್ಸಮವಚ್ಚನ್ನಮಂಡಲಃ।
16001004c ವಿರಶ್ಮಿರುದಯೇ ನಿತ್ಯಂ ಕಬಂಧೈಃ ಸಮದೃಶ್ಯತ।।

ರಾಜನ್! ಸೂರ್ಯಮಂಡಲವು ಯಾವಾಗಲೂ ಧೂಳಿನಿಂದ ಮುಸುಕಿದಂತೆ ತೋರುತ್ತಿತ್ತು. ನಿತ್ಯವೂ ಉದಯಕಾಲದಲ್ಲಿ ಸೂರ್ಯನು ಮಂದರಶ್ಮಿಯಾಗಿಯೂ, ತಲೆಗಳಿಲ್ಲದ ಶರೀರಗಳಿಂದ ಮುಚ್ಚಲ್ಪಟ್ಟಂತೆಯೂ ಕಾಣುತ್ತಿದ್ದನು.

16001005a ಪರಿವೇಷಾಶ್ಚ ದೃಶ್ಯಂತೇ ದಾರುಣಾಃ ಚಂದ್ರಸೂರ್ಯಯೋಃ।
16001005c ತ್ರಿವರ್ಣಾಃ ಶ್ಯಾಮರೂಕ್ಷಾಂತಾಸ್ತಥಾ ಭಸ್ಮಾರುಣಪ್ರಭಾಃ।।

ಚಂದ್ರ-ಸೂರ್ಯರ ಸುತ್ತಲೂ ದಾರುಣವಾದ ಮೂರು ಬಣ್ಣದ ಮಂಡಲಗಳು ತೋರುತ್ತಿದ್ದವು – ಹೊರ ಆವರಣವು ಕಪ್ಪುಬಣ್ಣದ ಒರಟು ಮಂಡಲ, ಮತ್ತು ಒಳಗಿನ ಮಂಡಲಗಳು ಭಸ್ಮ ಮತ್ತು ಕೆಂಪುಬಣ್ಣದ್ದಾಗಿದ್ದವು.

16001006a ಏತೇ ಚಾನ್ಯೇ ಚ ಬಹವ ಉತ್ಪಾತಾ ಭಯಶಂಸಿನಃ।
16001006c ದೃಶ್ಯಂತೇಽಹರಹೋ ರಾಜನ್ ಹೃದಯೋದ್ವೇಗಕಾರಕಾಃ।।

ರಾಜನ್! ಇವುಗಳು ಮತ್ತು ಇನ್ನೂ ಅನೇಕ ಭಯಸೂಚಕ, ಹೃದಯದಲ್ಲಿ ಉದ್ವೇಗವನ್ನುಂಟುಮಾಡುವ ಉತ್ಪಾತಗಳು ದಿನ ದಿನವೂ ಕಾಣುತ್ತಿದ್ದವು.

16001007a ಕಸ್ಯ ಚಿತ್ತ್ವಥ ಕಾಲಸ್ಯ ಕುರುರಾಜೋ ಯುಧಿಷ್ಠಿರಃ।
16001007c ಶುಶ್ರಾವ ವೃಷ್ಣಿಚಕ್ರಸ್ಯ ಮೌಸಲೇ ಕದನಂ ಕೃತಮ್।।

ಅದೇ ಸಮಯದಲ್ಲಿ ಕುರುರಾಜ ಯುಧಿಷ್ಠಿರನು ವೃಷ್ಣಿಚಕ್ರವು ಮುಸಲಗಳಿಂದ ಕದನವಾಡಿದುದನ್ನು ಕೇಳಿದನು.

16001008a ವಿಮುಕ್ತಂ ವಾಸುದೇವಂ ಚ ಶ್ರುತ್ವಾ ರಾಮಂ ಚ ಪಾಂಡವಃ।
16001008c ಸಮಾನೀಯಾಬ್ರವೀದ್ ಭ್ರಾತೄನ್ಕಿಂ ಕರಿಷ್ಯಾಮ ಇತ್ಯುತ।।

ವಾಸುದೇವ ಮತ್ತು ರಾಮರೂ ಮುಕ್ತರಾದುದನ್ನು ಕೇಳಿ ಪಾಂಡವನು ತನ್ನ ಸಹೋದರರನ್ನು ಕರೆಯಿಸಿ “ಈಗ ನಾವು ಏನು ಮಾಡಬೇಕು?” ಎಂದು ಕೇಳಿದನು.

16001009a ಪರಸ್ಪರಂ ಸಮಾಸಾದ್ಯ ಬ್ರಹ್ಮದಂಡಬಲಾತ್ಕೃತಾನ್।
16001009c ವೃಷ್ಣೀನ್ವಿನಷ್ಟಾಂಸ್ತೇ ಶ್ರುತ್ವಾ ವ್ಯಥಿತಾಃ ಪಾಂಡವಾಭವನ್।।

ಬ್ರಹ್ಮದಂಡದ ಬಲದಿಂದ ಉತ್ಕರ್ಷಿತರಾಗಿ ವೃಷ್ಣಿಗಳು ಪರಸ್ಪರರನ್ನು ಆಕ್ರಮಣಿಸಿ ವಿನಷ್ಟರಾದರು ಎಂದು ಕೇಳಿ ಪಾಂಡವರು ವ್ಯಥಿತರಾದರು.

16001010a ನಿಧನಂ ವಾಸುದೇವಸ್ಯ ಸಮುದ್ರಸ್ಯೇವ ಶೋಷಣಮ್।
16001010c ವೀರಾ ನ ಶ್ರದ್ದಧುಸ್ತಸ್ಯ ವಿನಾಶಂ ಶಾಂಙ್ರಧನ್ವನಃ।।

ಶಾಂಙ್ರಧನ್ವಿ ವಾಸುದೇವನು ನಿಧನನಾಗಿ ವಿನಾಶಹೊಂದಿದನು ಎಂಬ ಸಮಾಚಾರವನ್ನು, ಸಮುದ್ರವೇ ಒಣಗಿಹೋಯಿತೆನ್ನುವುದನ್ನು ಹೇಗೋ ಹಾಗೆ ಆ ವೀರರು ನಂಬಲೇ ಇಲ್ಲ.

16001011a ಮೌಸಲಂ ತೇ ಪರಿಶ್ರುತ್ಯ ದುಃಖಶೋಕಸಮನ್ವಿತಾಃ।
16001011c ವಿಷಣ್ಣಾ ಹತಸಂಕಲ್ಪಾಃ ಪಾಂಡವಾಃ ಸಮುಪಾವಿಶನ್।।

ಆ ಮೌಸಲ ಯುದ್ಧದ ಕುರಿತು ಕೇಳಿ ವಿಷಣ್ಣರಾಗಿ, ಸಂಕಲ್ಪಗಳನ್ನೇ ಕಳೆದುಕೊಂಡು ಪಾಂಡವರು ಅಲ್ಲಿ ಕುಳಿತುಕೊಂಡರು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಮೌಸಲಪರ್ವಣಿ ಉತ್ಪಾತದರ್ಶನೇ ಪ್ರಥಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಮೌಸಲಪರ್ವಣಿ ಉತ್ಪಾತದರ್ಶನ ಎನ್ನುವ ಮೊದಲನೇ ಅಧ್ಯಾಯವು.