047: ಶ್ರಾದ್ಧದಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆಶ್ರಮವಾಸಿಕ ಪರ್ವ

ನಾರದಾಗಮನ ಪರ್ವ

ಅಧ್ಯಾಯ 47

ಸಾರ

ಯುಧಿಷ್ಠಿರನನ್ನು ನಾರದನು ಸಮಾಧಾನಗೊಳಿಸಿದುದು (1-9). ಧೃತರಾಷ್ಟ್ರ-ಗಾಂಧಾರೀ-ಕುಂತಿಯರ ಶ್ರಾದ್ಧಕರಣ (10-27).

15047001 ನಾರದ ಉವಾಚ।
15047001a ನಾಸೌ ವೃಥಾಗ್ನಿನಾ ದಗ್ಧೋ ಯಥಾ ತತ್ರ ಶ್ರುತಂ ಮಯಾ।
15047001c ವೈಚಿತ್ರವೀರ್ಯೋ ನೃಪತಿಸ್ತತ್ತೇ ವಕ್ಷ್ಯಾಮಿ ಭಾರತ।।

ನಾರದನು ಹೇಳಿದನು: “ಭಾರತ! ನೃಪತಿ ವೈಚಿತ್ರವೀರ್ಯನು ಅಲ್ಲಿ ವೃಥಾ ಕಾಡ್ಗಿಚ್ಚಿನಲ್ಲಿ ಸುಟ್ಟುಹೋಗಲಿಲ್ಲ. ಅಲ್ಲಿ ನಾನು ಕೇಳಿದುದನ್ನು ಹೇಳುತ್ತೇನೆ. ಕೇಳು.

15047002a ವನಂ ಪ್ರವಿಶತಾ ತೇನ ವಾಯುಭಕ್ಷೇಣ ಧೀಮತಾ।
15047002c ಅಗ್ನಯಃ ಕಾರಯಿತ್ವೇಷ್ಟಿಮುತ್ಸೃಷ್ಟಾ ಇತಿ ನಃ ಶ್ರುತಮ್।।

ವಾಯುವನ್ನೇ ಆಹಾರವನ್ನಾಗಿ ಸೇವಿಸುತ್ತಿದ್ದ ಆ ಧೀಮತ ಧೃತರಾಷ್ಟ್ರನು ವನವನ್ನು ಪ್ರವೇಶಿಸುವಾಗ ತನ್ನ ಅಗ್ನಿಯಲ್ಲಿ ಇಷ್ಟಿಯನ್ನು ಮಾಡಿಸಿ ವಿಸರ್ಜಿಸಿದನೆಂದು ನಾನು ಕೇಳಿದ್ದೇನೆ.

15047003a ಯಾಜಕಾಸ್ತು ತತಸ್ತಸ್ಯ ತಾನಗ್ನೀನ್ನಿರ್ಜನೇ ವನೇ।
15047003c ಸಮುತ್ಸೃಜ್ಯ ಯಥಾಕಾಮಂ ಜಗ್ಮುರ್ಭರತಸತ್ತಮ।।

ಭರತಸತ್ತಮ! ಯಾಜಕರು ಆ ಅಗ್ನಿಯನ್ನು ನಿರ್ಜನ ವನದಲ್ಲಿ ವಿಸರ್ಜಿಸಿ, ಇಷ್ಟಬಂದಲ್ಲಿಗೆ ಹೊರಟುಹೋಗಿದ್ದರು.

15047004a ಸ ವಿವೃದ್ಧಸ್ತದಾ ವಹ್ನಿರ್ವನೇ ತಸ್ಮಿನ್ನಭೂತ್ಕಿಲ।
15047004c ತೇನ ತದ್ವನಮಾದೀಪ್ತಮಿತಿ ಮೇ ತಾಪಸಾಬ್ರುವನ್।।

ಅದೇ ಅಗ್ನಿಯು ಆಗ ಗಾಳಿಗೆ ಸಿಲುಕಿ ಕಾಡ್ಗಿಚ್ಚಾಗಿ ಆ ವನದಲ್ಲಿ ಪಸರಿಸಿಕೊಂಡಿತು ಎಂದು ನನಗೆ ತಾಪಸರು ಹೇಳಿದರು.

15047005a ಸ ರಾಜಾ ಜಾಹ್ನವೀಕಚ್ಚೇ ಯಥಾ ತೇ ಕಥಿತಂ ಮಯಾ।
15047005c ತೇನಾಗ್ನಿನಾ ಸಮಾಯುಕ್ತಃ ಸ್ವೇನೈವ ಭರತರ್ಷಭ।।

ಭರತರ್ಷಭ! ನಾನು ಈ ಮೊದಲೇ ಹೇಳಿದಂತೆ ಜಾಹ್ನವೀ ತೀರದಲ್ಲಿ ರಾಜಾ ಧೃತರಾಷ್ಟ್ರನು ಸ್ವ-ಇಚ್ಛೆಯಿಂದ ಅದೇ ಅಗ್ನಿಯಲ್ಲಿ ಸಮಾಯುಕ್ತನಾದನು.

15047006a ಏವಮಾವೇದಯಾಮಾಸುರ್ಮುನಯಸ್ತೇ ಮಮಾನಘ।
15047006c ಯೇ ತೇ ಭಾಗೀರಥೀತೀರೇ ಮಯಾ ದೃಷ್ಟಾ ಯುಧಿಷ್ಠಿರ।।

ಅನಘ! ಯುಧಿಷ್ಠಿರ! ಹೀಗೆ ಭಾಗೀರಥೀ ತೀರದಲ್ಲಿ ನಾನು ಕಂಡ ಮುನಿಗಳು ನನ್ನಲ್ಲಿ ಹೇಳಿಕೊಂಡರು.

15047007a ಏವಂ ಸ್ವೇನಾಗ್ನಿನಾ ರಾಜಾ ಸಮಾಯುಕ್ತೋ ಮಹೀಪತೇ।
15047007c ಮಾ ಶೋಚಿಥಾಸ್ತ್ವಂ ನೃಪತಿಂ ಗತಃ ಸ ಪರಮಾಂ ಗತಿಮ್।।

ಮಹೀಪತೇ! ಹೀಗೆ ರಾಜಾ ಧೃತರಾಷ್ಟ್ರನು ತನ್ನದೇ ಅಗ್ನಿಯಲ್ಲಿ ಸಮಾಯುಕ್ತನಾದನು. ರಾಜನು ಪರಮ ಗತಿಯನ್ನು ಹೊಂದಿದ್ದಾನೆ. ಅದರ ಕುರಿತು ನೀನು ಶೋಕಿಸಬೇಡ!

15047008a ಗುರುಶುಶ್ರೂಷಯಾ ಚೈವ ಜನನೀ ತವ ಪಾಂಡವ।
15047008c ಪ್ರಾಪ್ತಾ ಸುಮಹತೀಂ ಸಿದ್ಧಿಮಿತಿ ಮೇ ನಾತ್ರ ಸಂಶಯಃ।।

ಪಾಂಡವ! ನಿನ್ನ ಜನನಿಯೂ ಕೂಡ ಗುರುಶುಶ್ರೂಷೆಗಳಿಂದ ಮಹಾ ಸಿದ್ಧಿಯನ್ನೇ ಪಡೆದಿದ್ದಾಳೆ ಎನ್ನುವುದರಲ್ಲಿ ನನಗೆ ಸಂಶಯವಿಲ್ಲ.

15047009a ಕರ್ತುಮರ್ಹಸಿ ಕೌರವ್ಯ ತೇಷಾಂ ತ್ವಮುದಕಕ್ರಿಯಾಮ್।
15047009c ಭ್ರಾತೃಭಿಃ ಸಹಿತಃ ಸರ್ವೈರೇತದತ್ರ ವಿಧೀಯತಾಮ್।।

ಕೌರವ್ಯ! ಸಹೋದರರೊಡಗೂಡಿ ನೀನು ಅವರೆಲ್ಲರ ಉದಕಕ್ರಿಯೆಗಳನ್ನು ಮಾಡಬೇಕಾಗಿದೆ. ಇದನ್ನು ಈಗಲೇ ಮಾಡುವವನಾಗು!”"

15047010 ವೈಶಂಪಾಯನ ಉವಾಚ।
15047010a ತತಃ ಸ ಪೃಥಿವೀಪಾಲಃ ಪಾಂಡವಾನಾಂ ಧುರಂಧರಃ।
15047010c ನಿರ್ಯಯೌ ಸಹ ಸೋದರ್ಯೈಃ ಸದಾರೋ ಭರತರ್ಷಭ।।

ವೈಶಂಪಾಯನನು ಹೇಳಿದನು: “ಭರತರ್ಷಭ! ಆಗ ಪಾಂಡವರ ಧುರಂಧರ ಪೃಥಿವೀಪಾಲ ಯುಧಿಷ್ಠಿರನು ತನ್ನ ಸಹೋದರರೊಂದಿಗೆ ಹಸ್ತಿನಾಪುರದ ಹೊರ ಹೊರಟನು.

15047011a ಪೌರಜಾನಪದಾಶ್ಚೈವ ರಾಜಭಕ್ತಿಪುರಸ್ಕೃತಾಃ।
15047011c ಗಂಗಾಂ ಪ್ರಜಗ್ಮುರಭಿತೋ ವಾಸಸೈಕೇನ ಸಂವೃತಾಃ।।

ರಾಜಭಕ್ತಿಯಿಂದ ಪ್ರೇರಿತರಾದ ಗ್ರಾಮೀಣ-ಪೌರ ಜನರೂ ಕೂಡ ಒಂದೇ ವಸ್ತ್ರವನ್ನು ಸುತ್ತಿಕೊಂಡು ಗಂಗೆಯ ಮುಖವಾಗಿ ಹೊರಟರು.

15047012a ತತೋಽವಗಾಹ್ಯ ಸಲಿಲಂ ಸರ್ವೇ ತೇ ಕುರುಪುಂಗವಾಃ।
15047012c ಯುಯುತ್ಸುಮಗ್ರತಃ ಕೃತ್ವಾ ದದುಸ್ತೋಯಂ ಮಹಾತ್ಮನೇ।।

ಆ ಕುರುಪುಂಗವರೆಲ್ಲರೂ ನದಿಯನ್ನು ಸೇರಿ ಯುಯುತ್ಸುವನ್ನು ಮುಂದೆಮಾಡಿಕೊಂಡು ಮಹಾತ್ಮ ಧೃತರಾಷ್ಟ್ರನಿಗೆ ತರ್ಪಣವನ್ನಿತ್ತರು.

15047013a ಗಾಂಧಾರ್ಯಾಶ್ಚ ಪೃಥಾಯಾಶ್ಚ ವಿಧಿವನ್ನಾಮಗೋತ್ರತಃ।
15047013c ಶೌಚಂ ನಿವರ್ತಯಂತಸ್ತೇ ತತ್ರೋಷುರ್ನಗರಾದ್ ಬಹಿಃ।।

ವಿಧಿವತ್ತಾಗಿ ನಾಮ-ಗೋತ್ರಗಳನ್ನು ಹೇಳಿಕೊಂಡು ಗಾಂಧಾರಿಗೂ ಪೃಥೆಗೂ ತರ್ಪಣಗಳನ್ನಿತ್ತರು. ಶೌಚಕಾರ್ಯದಲ್ಲಿ ನಿರತರಾಗಿ ಅವರು ನಗರದ ಹೊರಗಡೆಯೇ ಉಳಿದುಕೊಂಡರು.

15047014a ಪ್ರೇಷಯಾಮಾಸ ಸ ನರಾನ್ವಿಧಿಜ್ಞಾನಾಪ್ತಕಾರಿಣಃ।
15047014c ಗಂಗಾದ್ವಾರಂ ಕುರುಶ್ರೇಷ್ಠೋ ಯತ್ರ ದಗ್ಧೋಽಭವನ್ನೃಪಃ।।

ಅನಂತರ ನೃಪನು ವಿಧಿವಿಧಾನಗಳನ್ನು ತಿಳಿದಿದ್ದ ಆಪ್ತರನ್ನು ಕುರುಶ್ರೇಷ್ಠ ಧೃತರಾಷ್ಟ್ರನು ಸುಟ್ಟುಹೋಗಿದ್ದ ಗಂಗಾದ್ವಾರದ ಸ್ಥಳಕ್ಕೆ ಕಳುಹಿಸಿಕೊಟ್ಟನು.

15047015a ತತ್ರೈವ ತೇಷಾಂ ಕುಲ್ಯಾನಿ ಗಂಗಾದ್ವಾರೇಽನ್ವಶಾತ್ತದಾ।
15047015c ಕರ್ತವ್ಯಾನೀತಿ ಪುರುಷಾನ್ದತ್ತದೇಯಾನ್ಮಹೀಪತಿಃ।।

ಅಲ್ಲಿಯೇ ಗಂಗಾದ್ವಾರದಲ್ಲಿ ಅವರ ಅಪರಕ್ರಿಯೆಗಳನ್ನು ಮಾಡಲು ಶಾಸನವನ್ನಿತ್ತನು. ಮಹೀಪತಿಯು ಆ ಪುರುಷರಿಗೆ ದಾನನೀಡಲು ಪದಾರ್ಥಗಳನ್ನಿತ್ತನು.

15047016a ದ್ವಾದಶೇಽಹನಿ ತೇಭ್ಯಃ ಸ ಕೃತಶೌಚೋ ನರಾಧಿಪಃ।
15047016c ದದೌ ಶ್ರಾದ್ಧಾನಿ ವಿಧಿವದ್ದಕ್ಷಿಣಾವಂತಿ ಪಾಂಡವಃ।।

ಹನ್ನೆರಡನೆಯ ದಿನ ಅವರ ಶೌಚಕರ್ಮಗಳನ್ನೂ ಶ್ರಾದ್ಧಗಳನ್ನೂ ಮುಗಿಸಿ ಪಾಂಡವ ನರಾಧಿಪನು ವಿಧಿವತ್ತಾಗಿ ದಕ್ಷಿಣೆಗಳನ್ನಿತ್ತನು.

15047017a ಧೃತರಾಷ್ಟ್ರಂ ಸಮುದ್ದಿಶ್ಯ ದದೌ ಸ ಪೃಥಿವೀಪತಿಃ।
15047017c ಸುವರ್ಣಂ ರಜತಂ ಗಾಶ್ಚ ಶಯ್ಯಾಶ್ಚ ಸುಮಹಾಧನಾಃ।।
15047018a ಗಾಂಧಾರ್ಯಾಶ್ಚೈವ ತೇಜಸ್ವೀ ಪೃಥಾಯಾಶ್ಚ ಪೃಥಕ್ ಪೃಥಕ್।
15047018c ಸಂಕೀರ್ತ್ಯ ನಾಮನೀ ರಾಜಾ ದದೌ ದಾನಮನುತ್ತಮಮ್।।

ತೇಜಸ್ವೀ ರಾಜಾ ಪೃಥಿವೀಪತಿಯು ಧೃತರಾಷ್ಟ್ರ, ಗಾಂಧಾರೀ ಮತ್ತು ಪೃಥೆಯರನ್ನು ಪ್ರತ್ಯೇಕ-ಪ್ರತ್ಯೇಕವಾಗಿ ಉದ್ದೇಶಿಸಿ ಅವರವರ ಹೆಸರುಗಳನ್ನು ಹೇಳಿಕೊಳ್ಳುತ್ತಾ ಚಿನ್ನ, ಬೆಳ್ಳಿ, ಹಾಸಿಗೆಗಳು ಮತ್ತು ಅನುತ್ತಮ ಮಹಾಧನವನ್ನು ದಾನವನ್ನಾಗಿತ್ತನು.

15047019a ಯೋ ಯದಿಚ್ಚತಿ ಯಾವಚ್ಚ ತಾವತ್ಸ ಲಭತೇ ದ್ವಿಜಃ।
15047019c ಶಯನಂ ಭೋಜನಂ ಯಾನಂ ಮಣಿರತ್ನಮಥೋ ಧನಮ್।।
15047020a ಯಾನಮಾಚ್ಚಾದನಂ ಭೋಗಾನ್ದಾಸೀಶ್ಚ ಪರಿಚಾರಿಕಾಃ।
15047020c ದದೌ ರಾಜಾ ಸಮುದ್ದಿಶ್ಯ ತಯೋರ್ಮಾತ್ರೋರ್ಮಹೀಪತಿಃ।।

ಯಾವ ದ್ವಿಜನು ಏನನ್ನು ಬಯಸಿದನೋ ಅವನ್ನು - ಶಯನ, ಭೋಜನ, ವಾಹನ, ಮಣಿ-ರತ್ನ-ಧನ, ಹೊದಿಕೆಗಳು, ಭೋಗಗಳು, ದಾಸೀ-ಪರಿಚಾರಕರು - ಇವನ್ನು ರಾಜ ಮಹೀಪತಿಯು ತನ್ನ ಇಬ್ಬರು ತಾಯಿಯರ ಸಲುವಾಗಿ ದಾನಮಾಡಿದನು.

15047021a ತತಃ ಸ ಪೃಥಿವೀಪಾಲೋ ದತ್ತ್ವಾ ಶ್ರಾದ್ಧಾನ್ಯನೇಕಶಃ।
15047021c ಪ್ರವಿವೇಶ ಪುನರ್ಧೀಮಾನ್ನಗರಂ ವಾರಣಾಹ್ವಯಮ್।।

ಧೀಮಾನ್ ಪೃಥಿವೀಪಾಲನು ಅನೇಕ ಶ್ರಾದ್ಧ-ದಾನಗಳನ್ನು ಮಾಡಿ ಪುನಃ ಹಸ್ತಿನಾಪುರ ನಗರವನ್ನು ಪ್ರವೇಶಿಸಿದನು.

15047022a ತೇ ಚಾಪಿ ರಾಜವಚನಾತ್ಪುರುಷಾ ಯೇ ಗತಾಭವನ್।
15047022c ಸಂಕಲ್ಪ್ಯ ತೇಷಾಂ ಕುಲ್ಯಾನಿ ಪುನಃ ಪ್ರತ್ಯಾಗಮಂಸ್ತತಃ।।

ರಾಜನ ವಚನದಂತೆ ಹೋಗಿದ್ದ ಪುರುಷರು ಧೃತರಾಷ್ಟ್ರ-ಗಾಂಧಾರೀ-ಕುಂತಿಯರ ಅಸ್ಥಿಗಳನ್ನು ಸಂಗ್ರಹಿಸಿಕೊಂಡು ಪುನಃ ಅಲ್ಲಿಗೆ ಆಗಮಿಸಿದರು.

15047023a ಮಾಲ್ಯೈರ್ಗಂಧೈಶ್ಚ ವಿವಿಧೈಃ ಪೂಜಯಿತ್ವಾ ಯಥಾವಿಧಿ।
15047023c ಕುಲ್ಯಾನಿ ತೇಷಾಂ ಸಂಯೋಜ್ಯ ತದಾಚಖ್ಯುರ್ಮಹೀಪತೇಃ।।

ವಿವಿಧ ಮಾಲೆ-ಗಂಧಗಳಿಂದ ಯಥಾವಿಧಿಯಾಗಿ ಪೂಜಿಸಿ ಅವರು ಆ ಅಸ್ಥಿಗಳನ್ನು ಗಂಗೆಯಲ್ಲಿ ವಿಸರ್ಜಿಸಿ ಮಹೀಪತಿಗೆ ವರದಿಮಾಡಿದರು.

15047024a ಸಮಾಶ್ವಾಸ್ಯ ಚ ರಾಜಾನಂ ಧರ್ಮಾತ್ಮಾನಂ ಯುಧಿಷ್ಠಿರಮ್।
15047024c ನಾರದೋಽಪ್ಯಗಮದ್ರಾಜನ್ಪರಮರ್ಷಿರ್ಯಥೇಪ್ಸಿತಮ್।।

ರಾಜನ್! ಧರ್ಮಾತ್ಮ ರಾಜಾ ಯುಧಿಷ್ಠಿರನನ್ನು ಸಮಾಧಾನಗೊಳಿಸಿ ಪರಮ ಋಷಿ ನಾರದನು ಇಷ್ಟಬಂದ ಕಡೆ ಹೊರಟುಹೋದನು.

15047025a ಏವಂ ವರ್ಷಾಣ್ಯತೀತಾನಿ ಧೃತರಾಷ್ಟ್ರಸ್ಯ ಧೀಮತಃ।
15047025c ವನವಾಸೇ ತದಾ ತ್ರೀಣಿ ನಗರೇ ದಶ ಪಂಚ ಚ।।
15047026a ಹತಪುತ್ರಸ್ಯ ಸಂಗ್ರಾಮೇ ದಾನಾನಿ ದದತಃ ಸದಾ।
15047026c ಜ್ಞಾತಿಸಂಬಂಧಿಮಿತ್ರಾಣಾಂ ಭ್ರಾತೄಣಾಂ ಸ್ವಜನಸ್ಯ ಚ।।

ಈ ರೀತಿ ಸಂಗ್ರಾಮದಲ್ಲಿ ಪುತ್ರರನ್ನು ಕಳೆದುಕೊಂಡಿದ್ದ ಧೀಮಂತ ಧೃತರಾಷ್ಟ್ರನು ಸದಾ ಮಕ್ಕಳ, ಸಂಬಂಧಿಗಳ, ಮಿತ್ರರ, ಸಹೋದರರ ಮತ್ತು ಸ್ವಜನರ ಸಲುವಾಗಿ ದಾನಗಳನ್ನು ನೀಡುತ್ತಾ ಹಸ್ತಿನಾಪುರದಲ್ಲಿ ಹದಿನೈದು ವರ್ಷಗಳನ್ನೂ ವನವಾಸದಲ್ಲಿ ಮೂರು ವರ್ಷಗಳನ್ನು ಕಳೆದಿದ್ದನು.

15047027a ಯುಧಿಷ್ಠಿರಸ್ತು ನೃಪತಿರ್ನಾತಿಪ್ರೀತಮನಾಸ್ತದಾ।
15047027c ಧಾರಯಾಮಾಸ ತದ್ರಾಜ್ಯಂ ನಿಹತಜ್ಞಾತಿಬಾಂಧವಃ।।

ನೃಪತಿ ಯುಧಿಷ್ಠಿರನಾದರೋ ಜ್ಞಾತಿ-ಬಾಂಧವರನ್ನು ಕಳಿದುಕೊಂಡು ಅಷ್ಟೊಂದು ಸಂತೋಷದಿಂದಿರದಿದ್ದರೂ ರಾಜ್ಯಾಡಳಿತವನ್ನು ಮಾಡುತ್ತಿದ್ದನು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ನಾರದಾಗಮನಪರ್ವಣಿ ಶ್ರಾದ್ಧದಾನೇ ಸಪ್ತಚತ್ವಾರಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ನರದಾಗಮನಪರ್ವದಲ್ಲಿ ಶ್ರಾದ್ಧದಾನ ಎನ್ನುವ ನಲ್ವತ್ತೇಳನೇ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ಆಶ್ರಮವಾಸಿಕ ಪರ್ವಣಿ ನಾರದಾಗಮನಪರ್ವಃ।
ಇದು ಶ್ರೀ ಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ನಾರದಾಗಮನಪರ್ವವು।
ಇತಿ ಶ್ರೀ ಮಹಾಭಾರತೇ ಆಶ್ರಮವಾಸಿಕಪರ್ವಃ।।
ಇದು ಶ್ರೀ ಮಹಾಭಾರತದಲ್ಲಿ ಆಶ್ರಮವಾಸಿಕಪರ್ವವು।।
ಇದೂವರೆಗಿನ ಒಟ್ಟು ಮಹಾಪರ್ವಗಳು – 15/18, ಉಪಪರ್ವಗಳು-92/100, ಅಧ್ಯಾಯಗಳು-1974/1995, ಶ್ಲೋಕಗಳು-73211/73784