ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆಶ್ರಮವಾಸಿಕ ಪರ್ವ
ನಾರದಾಗಮನ ಪರ್ವ
ಅಧ್ಯಾಯ 46
ಸಾರ
ಯುಧಿಷ್ಠಿರನ ಶೋಕ (1-20).
15046001 ಯುಧಿಷ್ಠಿರ ಉವಾಚ।
15046001a ತಥಾ ಮಹಾತ್ಮನಸ್ತಸ್ಯ ತಪಸ್ಯುಗ್ರೇ ಚ ವರ್ತತಃ।
15046001c ಅನಾಥಸ್ಯೇವ ನಿಧನಂ ತಿಷ್ಠತ್ಸ್ವಸ್ಮಾಸು ಬಂಧುಷು।।
ಯುಧಿಷ್ಠಿರನು ಹೇಳಿದನು: “ಬಂಧುಗಳಾದ ನಾವು ಇದ್ದರೂ ಉಗ್ರತಪಸ್ಸಿನಲ್ಲಿ ನಿರತನಾಗಿದ್ದ ಆ ಮಹಾತ್ಮನ ನಿಧನವು ಅನಾಥನ ರೀತಿಯಲ್ಲಿ ಆಗಿಹೋಯಿತು!
15046002a ದುರ್ವಿಜ್ಞೇಯಾ ಹಿ ಗತಯಃ ಪುರುಷಾಣಾಂ ಮತಾ ಮಮ।
15046002c ಯತ್ರ ವೈಚಿತ್ರವೀರ್ಯೋಽಸೌ ದಗ್ಧ ಏವಂ ದವಾಗ್ನಿನಾ।।
ವೈಚಿತ್ರವೀರ್ಯನು ಈ ರೀತಿ ಕಾಡ್ಗಿಚ್ಚಿನಲ್ಲಿ ಸುಟ್ಟುಹೋದನೆಂದರೆ ಮನುಷ್ಯನ ಗತಿಯನ್ನು ತಿಳಿದುಕೊಳ್ಳುವುದು ಕಷ್ಟಸಾಧ್ಯ ಎಂದು ನನ್ನ ಮತ.
15046003a ಯಸ್ಯ ಪುತ್ರಶತಂ ಶ್ರೀಮದಭವದ್ಬಾಹುಶಾಲಿನಃ।
15046003c ನಾಗಾಯುತಬಲೋ ರಾಜಾ ಸ ದಗ್ಧೋ ಹಿ ದವಾಗ್ನಿನಾ।।
ನೂರು ಮಕ್ಕಳನ್ನು ಹೊಂದಿದ್ದ, ಸ್ವಯಂ ತಾನೇ ಹತ್ತು ಸಾವಿರ ಆನೆಗಳ ಬಲವುಳ್ಳವನಾಗಿದ್ದ ಆ ಶ್ರೀಮಾನ್ ರಾಜನು ಕಾಡ್ಗಿಚ್ಚಿನಿಂದ ಸುಟ್ಟುಹೋದನು!
15046004a ಯಂ ಪುರಾ ಪರ್ಯವೀಜಂತ ತಾಲವೃಂತೈರ್ವರಸ್ತ್ರಿಯಃ।
15046004c ತಂ ಗೃಧ್ರಾಃ ಪರ್ಯವೀಜಂತ ದಾವಾಗ್ನಿಪರಿಕಾಲಿತಮ್।।
ಹಿಂದೆ ಯಾರಿಗೆ ಸುಂದರ ಸ್ತ್ರೀಯರು ತಾಳೇಗರಿಯ ಬೀಸಣಿಗೆಗಳಿಂದ ಗಾಳಿಯನ್ನು ಬೀಸುತ್ತಿದ್ದರೋ ಅವನು ಈಗ ಕಾಡ್ಗಿಚ್ಚಿಗೆ ಸಿಲುಕಿ ರಣಹದ್ದುಗಳು ರೆಕ್ಕೆಗಳಿಂದ ಗಾಳಿಯನ್ನು ಬೀಸುವಂತೆ ಆಗಿಹೋಯಿತು!
15046005a ಸೂತಮಾಗಧಸಂಘೈಶ್ಚ ಶಯಾನೋ ಯಃ ಪ್ರಬೋಧ್ಯತೇ।
15046005c ಧರಣ್ಯಾಂ ಸ ನೃಪಃ ಶೇತೇ ಪಾಪಸ್ಯ ಮಮ ಕರ್ಮಭಿಃ।।
ಮಲಗಿದ್ದಾಗ ಯಾವ ಪ್ರಭುವನ್ನು ಸೂತ-ಮಾಗಧ ಗುಂಪುಗಳು ಎಬ್ಬಿಸುತ್ತಿದ್ದವೋ ಆ ನೃಪತಿಯು ನನ್ನ ಪಾಪಕರ್ಮಗಳಿಂದಾಗಿ ನೆಲದಮೇಲೆ ಮಲಗಿಕೊಳ್ಳುವಂತಾಯಿತು!
15046006a ನ ತು ಶೋಚಾಮಿ ಗಾಂಧಾರೀಂ ಹತಪುತ್ರಾಂ ಯಶಸ್ವಿನೀಮ್।
15046006c ಪತಿಲೋಕಮನುಪ್ರಾಪ್ತಾಂ ತಥಾ ಭರ್ತೃವ್ರತೇ ಸ್ಥಿತಾಮ್।।
ಪುತ್ರರನ್ನು ಕಳೆದುಕೊಂಡ ಯಶಸ್ವಿನೀ ಗಾಂಧಾರಿಯು ಕುರಿತು ನಾನು ಶೋಕಿಸುತ್ತಿಲ್ಲ. ಪತಿವ್ರತೆಯಾಗಿದ್ದ ಅವಳು ಪತಿಲೋಕವನ್ನು ಪಡೆದುಕೊಂಡಿದ್ದಾಳೆ.
15046007a ಪೃಥಾಮೇವ ತು ಶೋಚಾಮಿ ಯಾ ಪುತ್ರೈಶ್ವರ್ಯಮೃದ್ಧಿಮತ್।
15046007c ಉತ್ಸೃಜ್ಯ ಸುಮಹದ್ದೀಪ್ತಂ ವನವಾಸಮರೋಚಯತ್।।
ಆದರೆ ಸಮೃದ್ಧವಾದ ಮತ್ತು ಉಜ್ವಲವಾದ ಪುತ್ರೈಶ್ವರವನ್ನು ತ್ಯಜಿಸಿ ವನವಾಸವನ್ನು ಬಯಸಿದ ಪೃಥೆಯ ಕುರಿತು ದುಃಖಿಸುತ್ತಿದ್ದೇನೆ.
15046008a ಧಿಗ್ರಾಜ್ಯಮಿದಮಸ್ಮಾಕಂ ಧಿಗ್ಬಲಂ ಧಿಕ್ಪರಾಕ್ರಮಮ್।
15046008c ಕ್ಷತ್ರಧರ್ಮಂ ಚ ಧಿಗ್ಯಸ್ಮಾನ್ಮೃತಾ ಜೀವಾಮಹೇ ವಯಮ್।।
ನಮ್ಮ ಈ ರಾಜ್ಯಕ್ಕೆ ಧಿಕ್ಕಾರ! ಈ ಬಲಕ್ಕೆ ಧಿಕ್ಕಾರ! ಪರಾಕ್ರಮಕ್ಕೆ ಧಿಕ್ಕಾರ! ಕ್ಷತ್ರಧರ್ಮಕ್ಕೆ ಧಿಕ್ಕಾರ! ಜೀವಿತರಾಗಿರುವ ನಾವೂ ಮೃತರಾದಂತೆಯೇ!
15046009a ಸುಸೂಕ್ಷ್ಮಾ ಕಿಲ ಕಾಲಸ್ಯ ಗತಿರ್ದ್ವಿಜವರೋತ್ತಮ।
15046009c ಯತ್ಸಮುತ್ಸೃಜ್ಯ ರಾಜ್ಯಂ ಸಾ ವನವಾಸಮರೋಚಯತ್।।
ದ್ವಿಜವರೋತ್ತಮ! ರಾಜ್ಯವನ್ನು ತೊರೆದು ವನವಾಸವನ್ನು ಆಕೆಯು ಬಯಸಿದಳೆಂದರೆ ಕಾಲದ ಗತಿಯು ಅತ್ಯಂತ ಸೂಕ್ಷ್ಮವಾದುದಷ್ಟೇ!
15046010a ಯುಧಿಷ್ಠಿರಸ್ಯ ಜನನೀ ಭೀಮಸ್ಯ ವಿಜಯಸ್ಯ ಚ।
15046010c ಅನಾಥವತ್ಕಥಂ ದಗ್ಧಾ ಇತಿ ಮುಹ್ಯಾಮಿ ಚಿಂತಯನ್।।
ಯುಧಿಷ್ಠಿರನ, ಭೀಮನ ಮತ್ತು ವಿಜಯನ ಜನನಿಯು ಅನಾಥೆಯಂತೆ ಹೇಗೆ ಸುಟ್ಟುಹೋದಳು ಎಂದು ಚಿಂತಿಸಿಯೇ ನಾನು ಮೂರ್ಛೆಗೊಳ್ಳುತ್ತಿದ್ದೇನೆ.
15046011a ವೃಥಾ ಸಂತೋಷಿತೋ ವಹ್ನಿಃ ಖಾಂಡವೇ ಸವ್ಯಸಾಚಿನಾ।
15046011c ಉಪಕಾರಮಜಾನನ್ಸ ಕೃತಘ್ನ ಇತಿ ಮೇ ಮತಿಃ।।
ಖಾಂಡವದಲ್ಲಿ ಸವ್ಯಸಾಚಿಯು ಅಗ್ನಿಯನ್ನು ತೃಪ್ತಿಗೊಳಿಸಿದುದು ವ್ಯರ್ಥವಾಗಿ ಹೋಯಿತು. ಆ ಉಪಕಾರವನ್ನು ಸ್ಮರಿಸದೆಯೇ ಇದ್ದ ಅಗ್ನಿಯು ಕೃತಘ್ನನೆಂದು ನನಗನ್ನಿಸುತ್ತಿದೆ.
15046012a ಯತ್ರಾದಹತ್ಸ ಭಗವಾನ್ಮಾತರಂ ಸವ್ಯಸಾಚಿನಃ।
15046012c ಕೃತ್ವಾ ಯೋ ಬ್ರಾಹ್ಮಣಚ್ಚದ್ಮ ಭಿಕ್ಷಾರ್ಥೀ ಸಮುಪಾಗತಃ।
15046012e ಧಿಗಗ್ನಿಂ ಧಿಕ್ಚ ಪಾರ್ಥಸ್ಯ ವಿಶ್ರುತಾಂ ಸತ್ಯಸಂಧತಾಮ್।।
ಬ್ರಾಹ್ಮಣನ ವೇಷಧರಿಸಿ ಭಿಕ್ಷಾರ್ಥಿಯಾಗಿ ಸವ್ಯಸಾಚಿಯ ಬಳಿಬಂದಿದ್ದ ಆ ಭಗವಂತನು ತಾಯಿಯನ್ನು ಸುಟ್ಟನೆಂದರೆ ಆ ಅಗ್ನಿಗೆ ಧಿಕ್ಕಾರ! ಪಾರ್ಥನ ವಿಶ್ರುತ ಸತ್ಯಸಂಧತೆಗೂ ಧಿಕ್ಕಾರ!
15046013a ಇದಂ ಕಷ್ಟತರಂ ಚಾನ್ಯದ್ಭಗವನ್ಪ್ರತಿಭಾತಿ ಮೇ।
15046013c ವೃಥಾಗ್ನಿನಾ ಸಮಾಯೋಗೋ ಯದಭೂತ್ಪೃಥಿವೀಪತೇಃ।।
ಭಗವನ್! ಪೃಥಿವೀಪತಿಯು ವೃಥಾ ಅಗ್ನಿಯಲ್ಲಿ ಸಮಾವೇಶನಾದನೆಂದರೆ ಇದಕ್ಕಿಂತಲೂ ಕಷ್ಟತರವಾದುದು ಬೇರೆ ಏನೂ ನನಗೆ ತೋಚುತ್ತಿಲ್ಲ.
15046014a ತಥಾ ತಪಸ್ವಿನಸ್ತಸ್ಯ ರಾಜರ್ಷೇಃ ಕೌರವಸ್ಯ ಹ।
15046014c ಕಥಮೇವಂವಿಧೋ ಮೃತ್ಯುಃ ಪ್ರಶಾಸ್ಯ ಪೃಥಿವೀಮಿಮಾಮ್।।
ತಪಸ್ವಿಯೂ ರಾಜರ್ಷಿಯೂ ಆಗಿದ್ದುಕೊಂಡು ಈ ಭೂಮಿಯನ್ನೇ ಆಳಿದ ಆ ಕೌರವನಿಗೆ ಈ ವಿಧದ ಮೃತ್ಯುವು ಹೇಗಾಯಿತು?
15046015a ತಿಷ್ಠತ್ಸು ಮಂತ್ರಪೂತೇಷು ತಸ್ಯಾಗ್ನಿಷು ಮಹಾವನೇ।
15046015c ವೃಥಾಗ್ನಿನಾ ಸಮಾಯುಕ್ತೋ ನಿಷ್ಠಾಂ ಪ್ರಾಪ್ತಃ ಪಿತಾ ಮಮ।।
ಮಂತ್ರಪೂತವಾದ ಅವನ ಮೂರು ಅಗ್ನಿಗಳು ಜೊತೆಯಲ್ಲಿದ್ದಿದ್ದರೂ ನನ್ನ ತಂದೆಯು ವೃಥಾ ಮಹಾವನದ ಕಾಡ್ಗಿಚ್ಚಿಗೆ ಸೇರಿ ನಿಧನ ಹೊಂದಿದನು!
15046016a ಮನ್ಯೇ ಪೃಥಾ ವೇಪಮಾನಾ ಕೃಶಾ ಧಮನಿಸಂತತಾ।
15046016c ಹಾ ತಾತ ಧರ್ಮರಾಜೇತಿ ಸಮಾಕ್ರಂದನ್ಮಹಾಭಯೇ।।
ಕೃಶಳಾಗಿ ನರನಾಡಿಗಳನ್ನು ಮಾತ್ರವೇ ಹೊಂದಿದ್ದ ಪೃಥೆಯು ಮಹಾಭಯದಿಂದ “ಹಾ ಮಗೂ! ಹಾ ಧರ್ಮರಾಜ!” ಎಂದು ಕೂಗಿಕೊಂಡಿರಬಹುದೆಂದು ನನಗನ್ನಿಸುತ್ತಿದೆ.
15046017a ಭೀಮ ಪರ್ಯಾಪ್ನುಹಿ ಭಯಾದಿತಿ ಚೈವಾಭಿವಾಶತೀ।
15046017c ಸಮಂತತಃ ಪರಿಕ್ಷಿಪ್ತಾ ಮಾತಾ ಮೇಽಭೂದ್ದವಾಗ್ನಿನಾ।।
“ಭೀಮ! ಕಾಪಾಡು!” ಎಂದು ಭಯದಿಂದ ಕೂಗಿಕೊಳ್ಳುತ್ತಾ ಅರಣ್ಯದಲ್ಲೆಲ್ಲಾ ಎದ್ದು-ಬಿದ್ದು ಒದ್ದಾಡುತ್ತಿದ್ದ ನನ್ನ ತಾಯಿಯನ್ನು ದಾವಾಗ್ನಿಯು ಸುಟ್ಟು ಭಸ್ಮಮಾಡಿರಬಹುದು!
15046018a ಸಹದೇವಃ ಪ್ರಿಯಸ್ತಸ್ಯಾಃ ಪುತ್ರೇಭ್ಯೋಽಧಿಕ ಏವ ತು।
15046018c ನ ಚೈನಾಂ ಮೋಕ್ಷಯಾಮಾಸ ವೀರೋ ಮಾದ್ರವತೀಸುತಃ।।
ಅವಳಿಗೆ ಪ್ರಿಯನಾಗಿದ್ದ, ಪುತ್ರರಲ್ಲಿಯೇ ಅಧಿಕನಾಗಿದ್ದ ವೀರ ಮಾದ್ರವತೀಸುತ ಸಹದೇವನೂ ಕೂಡ ಅವಳನ್ನು ಆ ಆಪತ್ತಿನಿಂದ ಬಿಡಿಸಲಾಗಲಿಲ್ಲ!”
15046019a ತಚ್ಛೃತ್ವಾ ರುರುದುಃ ಸರ್ವೇ ಸಮಾಲಿಂಗ್ಯ ಪರಸ್ಪರಮ್।
15046019c ಪಾಂಡವಾಃ ಪಂಚ ದುಃಖಾರ್ತಾ ಭೂತಾನೀವ ಯುಗಕ್ಷಯೇ।।
ಅವನ ಆ ಮಾತುಗಳನ್ನು ಕೇಳಿ ಪಂಚ ಪಾಂಡವರೆಲ್ಲರೂ ದುಃಖಾರ್ತರಾಗಿ ಪರಸ್ಪರರನ್ನು ಆಲಂಗಿಸಿಕೊಂಡು ಯುಗಕ್ಷಯದಲ್ಲಿ ಪೀಡೆಗೊಳಗಾಗುವ ಭೂತಗಳಂತೆ ಗೋಳಾಡಿದರು.
15046020a ತೇಷಾಂ ತು ಪುರುಷೇಂದ್ರಾಣಾಂ ರುದತಾಂ ರುದಿತಸ್ವನಃ।
15046020c ಪ್ರಾಸಾದಾಭೋಗಸಂರುದ್ಧೋ ಅನ್ವರೌತ್ಸೀತ್ಸ ರೋದಸೀ।।
ಗಟ್ಟಿಯಾಗಿ ರೋದಿಸುತ್ತಿದ್ದ ಆ ಪುರುಷೇಂದ್ರರ ಅಳುವಿನ ಧ್ವನಿಯು ಪ್ರಾಸಾದದ ಆವರಣವೆಲ್ಲವನ್ನೂ ತುಂಬಿಕೊಂಡು ಹೊರಹೋಗಲಾರದೇ ಭೂಮ್ಯಂತರಿಕ್ಷಗಳಲ್ಲಿ ಪ್ರತಿಧ್ವನಿಸಿತು.
ಸಮಾಪ್ತಿ
ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ನಾರದಾಗಮನಪರ್ವಣಿ ಯುಧಿಷ್ಠಿರವಿಲಾಪೇ ಷಟ್ಚತ್ವಾರಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ನರದಾಗಮನಪರ್ವದಲ್ಲಿ ಯುಧಿಷ್ಠಿರವಿಲಾಪ ಎನ್ನುವ ನಲ್ವತ್ತಾರನೇ ಅಧ್ಯಾಯವು.