044: ಯುಧಿಷ್ಠಿರಪ್ರತ್ಯಾಗಮಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆಶ್ರಮವಾಸಿಕ ಪರ್ವ

ಪುತ್ರದರ್ಶನ ಪರ್ವ

ಅಧ್ಯಾಯ 44

ಸಾರ

ಯುಧಿಷ್ಠಿರನನ್ನು ಕಳುಹಿಸಿ ಕೊಡಬೇಕೆಂದು ವ್ಯಾಸನು ಧೃತರಾಷ್ಟ್ರನಿಗೆ ಹೇಳಿದುದು (1-12). ಧೃತರಾಷ್ಟ್ರನು ಯುಧಿಷ್ಠಿರನಿಗೆ ಹಿಂದಿರುಗಲು ಹೇಳಿದುದು (13-22). ಧೃತರಾಷ್ಟ್ರ, ಗಾಂಧಾರೀ-ಕುಂತಿಯರನ್ನು ಬೀಳ್ಕೊಂಡು ಯುಧಿಷ್ಠಿರನು ಹಸ್ತಿನಾಪುರಕ್ಕೆ ಹಿಂದಿರುಗಿದುದು (23-52).

15044001 ಜನಮೇಜಯ ಉವಾಚ।
15044001a ದೃಷ್ಟ್ವಾ ಪುತ್ರಾಂಸ್ತಥಾ ಪೌತ್ರಾನ್ಸಾನುಬಂಧಾನ್ಜನಾಧಿಪಃ।
15044001c ಧೃತರಾಷ್ಟ್ರಃ ಕಿಮಕರೋದ್ರಾಜಾ ಚೈವ ಯುಧಿಷ್ಠಿರಃ।।

ಜನಮೇಜಯನು ಹೇಳಿದನು: “ತನ್ನ ಪುತ್ರರನ್ನೂ, ಪೌತ್ರರನ್ನೂ, ಸಂಬಂಧಿಗಳನ್ನೂ ನೋಡಿದ ಜನಾಧಿಪ ಧೃತರಾಷ್ಟ್ರ ಮತ್ತು ರಾಜಾ ಯುಧಿಷ್ಠಿರರು ಏನು ಮಾಡಿದರು?”

15044002 ವೈಶಂಪಾಯನ ಉವಾಚ।
15044002a ತದ್ದೃಷ್ಟ್ವಾ ಮಹದಾಶ್ಚರ್ಯಂ ಪುತ್ರಾಣಾಂ ದರ್ಶನಂ ಪುನಃ।
15044002c ವೀತಶೋಕಃ ಸ ರಾಜರ್ಷಿಃ ಪುನರಾಶ್ರಮಮಾಗಮತ್।।

ವೈಶಂಪಾಯನನು ಹೇಳಿದನು: “ಆ ಮಹದಾಶ್ಚರ್ಯಕರವಾದ ಪುತ್ರರ ಪುನಃ ದರ್ಶನವನ್ನು ಕಂಡ ರಾಜರ್ಷಿ ಧೃತರಾಷ್ಟ್ರನು ಶೋಕವನ್ನು ಕಳೆದುಕೊಂಡು ಪುನಃ ಆಶ್ರಮಕ್ಕೆ ಆಗಮಿಸಿದನು.

15044003a ಇತರಸ್ತು ಜನಃ ಸರ್ವಸ್ತೇ ಚೈವ ಪರಮರ್ಷಯಃ।
15044003c ಪ್ರತಿಜಗ್ಮುರ್ಯಥಾಕಾಮಂ ಧೃತರಾಷ್ಟ್ರಾಭ್ಯನುಜ್ಞಯಾ।।

ಇತರ ಜನರೂ, ಪರಮಋಷಿಗಳೆಲ್ಲರೂ, ಧೃತರಾಷ್ಟ್ರನ ಅಪ್ಪಣೆಯನ್ನು ಪಡೆದು ಇಷ್ಟಬಂದಲ್ಲಿಗೆ ಹೊರಟುಹೋದರು.

15044004a ಪಾಂಡವಾಸ್ತು ಮಹಾತ್ಮಾನೋ ಲಘುಭೂಯಿಷ್ಠಸೈನಿಕಾಃ।
15044004c ಅನುಜಗ್ಮುರ್ಮಹಾತ್ಮಾನಂ ಸದಾರಂ ತಂ ಮಹೀಪತಿಮ್।।

ಮಹಾತ್ಮ ಪಾಂಡವರು ಪತ್ನಿಯರೊಂದಿಗೆ ಮತ್ತು ಉಳಿದಿದ್ದ ಅಲ್ಪ ಸೈನಿಕರೊಂದಿಗೆ ಮಹೀಪತಿ ಧೃತರಾಷ್ಟ್ರನನ್ನು ಅನುಸರಿಸಿ ಹೋದರು.

15044005a ತಮಾಶ್ರಮಗತಂ ಧೀಮಾನ್ಬ್ರಹ್ಮರ್ಷಿರ್ಲೋಕಪೂಜಿತಃ।
15044005c ಮುನಿಃ ಸತ್ಯವತೀಪುತ್ರೋ ಧೃತರಾಷ್ಟ್ರಮಭಾಷತ।।

ಆಶ್ರಮಕ್ಕೆ ಬಂದ ಧೀಮಾನ್ ಬ್ರಹ್ಮರ್ಷಿ ಲೋಕಪೂಜಿತ ಮುನಿ ಸತ್ಯವತೀಪುತ್ರನು ಧೃತರಾಷ್ಟ್ರನಿಗೆ ಇಂತೆಂದನು:

15044006a ಧೃತರಾಷ್ಟ್ರ ಮಹಾಬಾಹೋ ಶೃಣು ಕೌರವನಂದನ।
15044006c ಶ್ರುತಂ ತೇ ಜ್ಞಾನವೃದ್ಧಾನಾಮೃಷೀಣಾಂ ಪುಣ್ಯಕರ್ಮಣಾಮ್।।

“ಮಹಾಬಾಹೋ! ಕೌರವನಂದನ! ಧೃತರಾಷ್ಟ್ರ! ಕೇಳು. ಪುಣ್ಯಕರ್ಮಿಗಳೂ ಜ್ಞಾನವೃದ್ಧರೂ ಆದ ಋಷಿಗಳಿಂದ ನೀನು ಕೇಳಿರುವೆ.

15044007a ಋದ್ಧಾಭಿಜನವೃದ್ಧಾನಾಂ ವೇದವೇದಾಂಗವೇದಿನಾಮ್।
15044007c ಧರ್ಮಜ್ಞಾನಾಂ ಪುರಾಣಾನಾಂ ವದತಾಂ ವಿವಿಧಾಃ ಕಥಾಃ।।

ಶ್ರದ್ಧಾವಂತ ಕುಲವೃದ್ಧರಿಂದಲೂ ವೇದ-ವೇದಾಂಗಗಳನ್ನು ತಿಳಿದವರಿಂದಲೂ, ವಿವಿಧ ಕಥೆಗಳನ್ನು ಹೇಳುವ ಧರ್ಮಜ್ಞರಿಂದಲೂ ಅನೇಕ ವಿಷಯಗಳನ್ನು ತಿಳಿದುಕೊಂಡಿರುವೆ.

15044008a ಮಾ ಸ್ಮ ಶೋಕೇ ಮನಃ ಕಾರ್ಷೀರ್ದಿಷ್ಟೇನ ವ್ಯಥತೇ ಬುಧಃ।
15044008c ಶ್ರುತಂ ದೇವರಹಸ್ಯಂ ತೇ ನಾರದಾದ್ದೇವದರ್ಶನಾತ್।।

ಇನ್ನಾದರೂ ನೀನು ಮನಸ್ಸನ್ನು ಶೋಕದಲ್ಲಿರಿಸಿಕೊಳ್ಳಬೇಡ. ದೈವಿಕವಾದ ಆಗುಹೋಗುಗಳ ವಿಷಯಕ್ಕಾಗಿ ವಿದ್ವಾಂಸನು ದುಃಖಿಸುವುದಿಲ್ಲ. ದೇವದರ್ಶನ ನಾರದನಿಂದ ನೀನು ದೇವರಹಸ್ಯವನ್ನು ಕೇಳಿರುವೆ.

15044009a ಗತಾಸ್ತೇ ಕ್ಷತ್ರಧರ್ಮೇಣ ಶಸ್ತ್ರಪೂತಾಂ ಗತಿಂ ಶುಭಾಮ್।
15044009c ಯಥಾ ದೃಷ್ಟಾಸ್ತ್ವಯಾ ಪುತ್ರಾ ಯಥಾಕಾಮವಿಹಾರಿಣಃ।।

ಇವರೆಲ್ಲರೂ ಕ್ಷತ್ರಧರ್ಮದಿಂದ ಶಸ್ತ್ರಪೂತರಾಗಿ ಶುಭಗತಿಗಳನ್ನು ಹೊಂದಿರುತ್ತಾರೆ. ನೀನು ನೋಡಿದಂತೆ ನಿನ್ನ ಪುತ್ರರು ಸ್ವರ್ಗದಲ್ಲಿ ಸ್ವೇಚ್ಛಾವಿಹಾರಿಗಳಾಗಿದ್ದಾರೆ.

15044010a ಯುಧಿಷ್ಠಿರಸ್ತ್ವಯಂ ಧೀಮಾನ್ಭವಂತಮನುರುಧ್ಯತೇ।
15044010c ಸಹಿತೋ ಭ್ರಾತೃಭಿಃ ಸರ್ವೈಃ ಸದಾರಃ ಸಸುಹೃಜ್ಜನಃ।।

ಈ ಧೀಮಾನ್ ಯುಧಿಷ್ಠಿರನಾದರೋ ಎಲ್ಲ ಸಹೋದರೂ, ಪತ್ನಿಯರೂ ಮತ್ತು ಸುಹೃದಯರೊಂದಿಗೆ ನಿನ್ನನ್ನೇ ಸೇವಿಸುತ್ತಿದ್ದಾನೆ.

15044011a ವಿಸರ್ಜಯೈನಂ ಯಾತ್ವೇಷ ಸ್ವರಾಜ್ಯಮನುಶಾಸತಾಮ್।
15044011c ಮಾಸಃ ಸಮಧಿಕೋ ಹ್ಯೇಷಾಮತೀತೋ ವಸತಾಂ ವನೇ।।

ಅವನು ಈ ವನದಲ್ಲಿ ವಾಸಿಸುತ್ತಾ ಒಂದು ತಿಂಗಳಿಗೂ ಹೆಚ್ಚಾಗಿಹೋಯಿತು. ಸ್ವರಾಜ್ಯವನ್ನು ಆಳಲು ಅವನನ್ನು ಕಳುಹಿಸಿಕೊಡು.

15044012a ಏತದ್ಧಿ ನಿತ್ಯಂ ಯತ್ನೇನ ಪದಂ ರಕ್ಷ್ಯಂ ಪರಂತಪ।
15044012c ಬಹುಪ್ರತ್ಯರ್ಥಿಕಂ ಹ್ಯೇತದ್ರಾಜ್ಯಂ ನಾಮ ನರಾಧಿಪ।।

ಪರಂತಪ! ನರಾಧಿಪ! ರಾಜ್ಯವು ಯಾವಾಗಲೂ ಬಹುಶತ್ರುಗಳಿಂದ ಕೂಡಿರುವುದು, ಆದುದರಿಂದ ಅದನ್ನು ಯಾವಾಗಲೂ ಪ್ರಯತ್ನಪೂರ್ವಕವಾಗಿ ರಕ್ಷಿಸಬೇಕು!”

15044013a ಇತ್ಯುಕ್ತಃ ಕೌರವೋ ರಾಜಾ ವ್ಯಾಸೇನಾಮಿತಬುದ್ಧಿನಾ।
15044013c ಯುಧಿಷ್ಠಿರಮಥಾಹೂಯ ವಾಗ್ಮೀ ವಚನಮಬ್ರವೀತ್।।

ಅಮಿತಬುದ್ಧಿ ವ್ಯಾಸನು ಹೀಗೆ ಹೇಳಲು ರಾಜಾ ವಾಗ್ಮೀ ಕೌರವನು ಯುಧಿಷ್ಠಿರನನ್ನು ಕರೆಯಿಸಿ, ಈ ಮಾತುಗಳನ್ನಾಡಿದನು.

15044014a ಅಜಾತಶತ್ರೋ ಭದ್ರಂ ತೇ ಶೃಣು ಮೇ ಭ್ರಾತೃಭಿಃ ಸಹ।
15044014c ತ್ವತ್ಪ್ರಸಾದಾನ್ಮಹೀಪಾಲ ಶೋಕೋ ನಾಸ್ಮಾನ್ಪ್ರಬಾಧತೇ।।

“ಅಜಾತಶತ್ರೋ! ನಿನಗೆ ಮಂಗಳವಾಗಲಿ! ಸಹೋದರರೊಂದಿಗೆ ನನ್ನ ಈ ಮಾತನ್ನು ಕೇಳು. ಮಹೀಪಾಲ! ನಿನ್ನ ಅನುಗ್ರಹದಿಂದ ಈಗ ಶೋಕವು ನಮ್ಮನ್ನು ಬಾಧಿಸುತ್ತಿಲ್ಲ.

15044015a ರಮೇ ಚಾಹಂ ತ್ವಯಾ ಪುತ್ರ ಪುರೇವ ಗಜಸಾಹ್ವಯೇ।
15044015c ನಾಥೇನಾನುಗತೋ ವಿದ್ವನ್ಪ್ರಿಯೇಷು ಪರಿವರ್ತಿನಾ।।

ಪುತ್ರ! ಹಿಂದೆ ನಾವು ಹಸ್ತಿನಾಪುರದಲ್ಲಿ ನಿನ್ನೊಡನೆ ಹೇಗೆ ರಮಿಸುತ್ತಿದ್ದೆವೋ ಹಾಗೆಯೇ ಇಲ್ಲಿಯೂ ಕೂಡ ಸಂತೋಷದಿಂದ ಇದ್ದೇವೆ. ನನ್ನೊಡನೆ ಪ್ರೀತಿಯಿಂದ ಇದ್ದುಕೊಂಡು ನನ್ನ ರಕ್ಷಕನಾಗಿದ್ದೀಯೆ.

15044016a ಪ್ರಾಪ್ತಂ ಪುತ್ರಫಲಂ ತ್ವತ್ತಃ ಪ್ರೀತಿರ್ಮೇ ವಿಪುಲಾ ತ್ವಯಿ।
15044016c ನ ಮೇ ಮನ್ಯುರ್ಮಹಾಬಾಹೋ ಗಮ್ಯತಾಂ ಪುತ್ರ ಮಾ ಚಿರಮ್।।

ಪುತ್ರರಿಂದ ಪಡೆಯಬೇಕಾದ ಫಲವನ್ನು ನಾನು ಸಂಪೂರ್ಣವಾಗಿ ನಿನ್ನಿಂದ ಪಡೆದಿರುತ್ತೇನೆ. ಈ ವಿಷಯದಲ್ಲಿ ನನಗೆ ಅತ್ಯಂತ ಪ್ರೀತಿಯುಂಟಾಗಿದೆ. ಮಹಾಬಾಹೋ! ನಿನ್ನಲ್ಲಿ ನನಗೆ ಸ್ವಲ್ಪವೂ ಕೋಪವಿಲ್ಲ. ಪುತ್ರ! ಆದುದರಿಂದ ನೀನು ತಡಮಾಡದೇ ಹಸ್ತಿನಾಪುರಕ್ಕೆ ಪ್ರಯಾಣಮಾಡು.

15044017a ಭವಂತಂ ಚೇಹ ಸಂಪ್ರೇಕ್ಷ್ಯ ತಪೋ ಮೇ ಪರಿಹೀಯತೇ।
15044017c ತಪೋಯುಕ್ತಂ ಶರೀರಂ ಚ ತ್ವಾಂ ದೃಷ್ಟ್ವಾ ಧಾರಿತಂ ಪುನಃ।।

ನಿನ್ನನ್ನು ನೋಡಿಕೊಂಡೇ ಇದ್ದರೆ ನನ್ನ ತಪಸ್ಸು ಹಾಳಾಗಿಬಿಡುತ್ತದೆ. ತಪೋಯುಕ್ತವಾದ ಈ ಶರೀರವು ನಿನ್ನನ್ನು ನೋಡಿ ಪುನಃ ನನ್ನ ಗಮನವನ್ನು ತನ್ನತ್ತ ಸೆಳೆದಿದೆ.

15044018a ಮಾತರೌ ತೇ ತಥೈವೇಮೇ ಶೀರ್ಣಪರ್ಣಕೃತಾಶನೇ।
15044018c ಮಮ ತುಲ್ಯವ್ರತೇ ಪುತ್ರ ನಚಿರಂ ವರ್ತಯಿಷ್ಯತಃ।।

ನಿನ್ನ ತಾಯಿಯರಾದ ಗಾಂಧಾರಿ-ಕುಂತಿಯರೂ ಕೂಡ ನನ್ನಂತೆಯೇ ವ್ರತಾನುಷ್ಠಾನಗಳಲ್ಲಿ ತೊಡಗಿ ಒಣಗಿದ ತರಗೆಲೆಗಳನ್ನು ತಿನ್ನುತ್ತಾ ಜೀವನ್ನು ಧಾರಣೆಮಾಡಿಕೊಂಡಿದ್ದರು. ಅವರು ಇನ್ನು ಬಹುಕಾಲ ಬದುಕಿರಲಾರರು.

15044019a ದುರ್ಯೋಧನಪ್ರಭೃತಯೋ ದೃಷ್ಟಾ ಲೋಕಾಂತರಂ ಗತಾಃ।
15044019c ವ್ಯಾಸಸ್ಯ ತಪಸೋ ವೀರ್ಯಾದ್ಭವತಶ್ಚ ಸಮಾಗಮಾತ್।।

ನಿನ್ನ ಸಮಾಗಮದಿಂದ ಮತ್ತು ವ್ಯಾಸನ ತಪೋವೀರ್ಯದಿಂದ ಬೇರೆ ಲೋಕಗಳಿಗೆ ಹೋಗಿರುವ ದುರ್ಯೋಧನಾದಿಗಳನ್ನು ನೋಡಿಯಾಯಿತು.

15044020a ಪ್ರಯೋಜನಂ ಚಿರಂ ವೃತ್ತಂ ಜೀವಿತಸ್ಯ ಚ ಮೇಽನಘ।
15044020c ಉಗ್ರಂ ತಪಃ ಸಮಾಸ್ಥಾಸ್ಯೇ ತ್ವಮನುಜ್ಞಾತುಮರ್ಹಸಿ।।

ಅನಘ! ಇದರಿಂದ ನನ್ನ ಜೀವನವು ಸಾರ್ಥಕವಾಯಿತು. ಈಗ ನಾನು ಉಗ್ರ ತಪಸ್ಸಿನಲ್ಲಿ ತೊಡಗುತ್ತೇನೆ. ಇದಕ್ಕೆ ನೀನು ಅನುಮತಿಯನ್ನು ನೀಡಬೇಕು!

15044021a ತ್ವಯ್ಯದ್ಯ ಪಿಂಡಃ ಕೀರ್ತಿಶ್ಚ ಕುಲಂ ಚೇದಂ ಪ್ರತಿಷ್ಠಿತಮ್।
15044021c ಶ್ವೋ ವಾದ್ಯ ವಾ ಮಹಾಬಾಹೋ ಗಮ್ಯತಾಂ ಪುತ್ರ ಮಾ ಚಿರಮ್।।

ಮಹಾಬಾಹೋ! ಇಂದು ಪಿತೃಗಳಿಗೆ ಪಿಂಡಪ್ರದಾನವೂ ಕುಲದ ಕೀರ್ತಿಯೂ ನಿನ್ನಲ್ಲಿಯೇ ನೆಲೆಸಿವೆ. ಇಂದು ಅಥವಾ ನಾಳೆ ನೀನು ಹಸ್ತಿನಾಪುರಕ್ಕೆ ಪ್ರಯಾಣಬೆಳೆಸು. ತಡಮಾಡಬೇಡ.

15044022a ರಾಜನೀತಿಃ ಸುಬಹುಶಃ ಶ್ರುತಾ ತೇ ಭರತರ್ಷಭ।
15044022c ಸಂದೇಷ್ಟವ್ಯಂ ನ ಪಶ್ಯಾಮಿ ಕೃತಮೇತಾವತಾ ವಿಭೋ।।

ಭರತರ್ಷಭ! ವಿಭೋ! ನೀನು ಅನೇಕ ಪ್ರಕಾರವಾದ ರಾಜನೀತಿಗಳನ್ನು ಕೇಳಿ ತಿಳಿದುಕೊಂಡಿರುವೆ. ನಿನಗೆ ಉಪದೇಶಮಾಡಲು ನನಗೇನೂ ಕಾಣುತ್ತಿಲ್ಲ. ನೀನು ನನಗೆ ಬಹಳ ಉಪಕಾರವನ್ನೆಸಗಿರುವೆ!”

15044023a ಇತ್ಯುಕ್ತವಚನಂ ತಾತ ನೃಪೋ ರಾಜಾನಮಬ್ರವೀತ್।
15044023c ನ ಮಾಮರ್ಹಸಿ ಧರ್ಮಜ್ಞ ಪರಿತ್ಯಕ್ತುಮನಾಗಸಮ್।।

ಅಯ್ಯಾ! ಹೀಗೆ ಹೇಳಿದ ರಾಜನಿಗೆ ನೃಪ ಯುಧಿಷ್ಠಿರನು ಹೇಳಿದನು: “ಧರ್ಮಜ್ಞ! ನಿರಪರಾಧಿಯಾದ ನನ್ನನ್ನು ಪರಿತ್ಯಜಿಸುವುದು ಸರಿಯಲ್ಲ!

15044024a ಕಾಮಂ ಗಚ್ಚಂತು ಮೇ ಸರ್ವೇ ಭ್ರಾತರೋಽನುಚರಾಸ್ತಥಾ।
15044024c ಭವಂತಮಹಮನ್ವಿಷ್ಯೇ ಮಾತರೌ ಚ ಯತವ್ರತೇ।।

ಬೇಕಾದರೆ ನನ್ನ ಎಲ್ಲ ಸಹೋದರರೂ ಅನುಚರರೊಂದಿಗೆ ಹಸ್ತಿನಾಪುರಕ್ಕೆ ಹೊರಟುಹೋಗಲಿ. ನಾನು ಮಾತ್ರ ವ್ರತನಿಷ್ಠನಾಗಿದ್ದು ನಿನ್ನ ಮತ್ತು ತಾಯಂದಿರ ಸೇವೆಯನ್ನು ಮಾಡಿಕೊಂಡಿರುತ್ತೇನೆ.”

15044025a ತಮುವಾಚಾಥ ಗಾಂಧಾರೀ ಮೈವಂ ಪುತ್ರ ಶೃಣುಷ್ವ ಮೇ।
15044025c ತ್ವಯ್ಯಧೀನಂ ಕುರುಕುಲಂ ಪಿಂಡಶ್ಚ ಶ್ವಶುರಸ್ಯ ಮೇ।।

ಗಾಂಧಾರಿಯು ಅವನಿಗೆ ಹೇಳಿದಳು: “ಪುತ್ರ! ನೀನು ಹೀಗೆ ಹೇಳಬಾರದು. ನನ್ನ ಮಾತನ್ನು ಕೇಳು. ಕುರುಕುಲ ಮತ್ತು ನನ್ನ ಮಾವನ ಪಿಂಡಪ್ರದಾನ ಇವೆಲ್ಲವುಗಳ ಜವಾಬ್ಧಾರಿಯೂ ಈಗ ನಿನ್ನದಾಗಿದೆ.

15044026a ಗಮ್ಯತಾಂ ಪುತ್ರ ಪರ್ಯಾಪ್ತಮೇತಾವತ್ಪೂಜಿತಾ ವಯಮ್।
15044026c ರಾಜಾ ಯದಾಹ ತತ್ಕಾರ್ಯಂ ತ್ವಯಾ ಪುತ್ರ ಪಿತುರ್ವಚಃ।।

ಪುತ್ರ! ಇಲ್ಲಿಯವರೆಗೆ ನಮ್ಮನ್ನು ಪೂಜಿಸಿದ್ದು ಪರ್ಯಾಪ್ತವಾಯಿತು. ಈಗ ಹೊರಡು. ರಾಜನು ಹೇಳಿದ ಕಾರ್ಯವನ್ನು ಮಾಡು. ಪುತ್ರ! ತಂದೆಯ ವಚನವನ್ನು ನೀನು ಪಾಲಿಸಬೇಕು!”

15044027a ಇತ್ಯುಕ್ತಃ ಸ ತು ಗಾಂಧಾರ್ಯಾ ಕುಂತೀಮಿದಮುವಾಚ ಹ।
15044027c ಸ್ನೇಹಬಾಷ್ಪಾಕುಲೇ ನೇತ್ರೇ ಪ್ರಮೃಜ್ಯ ರುದತೀಂ ವಚಃ।।

ಗಾಂಧಾರಿಯು ಹೀಗೆ ಹೇಳಲು ಸ್ನೇಹಭಾವದಿಂದ ಕಣ್ಣೀರನ್ನು ಸುರಿಸುತ್ತಾ ರೋದಿಸುವ ಧ್ವನಿಯಲ್ಲಿ ಯುಧಿಷ್ಠಿರನು ಕುಂತಿಗೆ ಹೇಳಿದನು:

15044028a ವಿಸರ್ಜಯತಿ ಮಾಂ ರಾಜಾ ಗಾಂಧಾರೀ ಚ ಯಶಸ್ವಿನೀ।
15044028c ಭವತ್ಯಾಂ ಬದ್ಧಚಿತ್ತಸ್ತು ಕಥಂ ಯಾಸ್ಯಾಮಿ ದುಃಖಿತಃ।।

“ರಾಜನೂ ಯಶಸ್ವಿನೀ ಗಾಂಧಾರಿಯೂ ನನ್ನನ್ನು ದೂರಮಾಡಿದ್ದಾರೆ. ನನ್ನ ಚಿತ್ತವು ನಿನ್ನಲ್ಲಿಯೇ ಬದ್ಧವಾಗಿದೆ. ದುಃಖಿತನಾಗಿ ನಾನು ಹೇಗೆ ಹೋಗಲಿ?

15044029a ನ ಚೋತ್ಸಹೇ ತಪೋವಿಘ್ನಂ ಕರ್ತುಂ ತೇ ಧರ್ಮಚಾರಿಣಿ।
15044029c ತಪಸೋ ಹಿ ಪರಂ ನಾಸ್ತಿ ತಪಸಾ ವಿಂದತೇ ಮಹತ್।।

ಧರ್ಮಚಾರಿಣೀ! ನಿನ್ನ ತಪಸ್ಸಿನಲ್ಲಿ ವಿಘ್ನವನ್ನು ತರಲು ಬಯಸುವುದಿಲ್ಲ. ಏಕೆಂದರೆ ತಪಸ್ಸೇ ಹೆಚ್ಚಿನದು. ತಪಸ್ಸಿಗಿಂತ ದೊಡ್ಡದು ಬೇರೆ ಯಾವುದೂ ಇಲ್ಲ.

15044030a ಮಮಾಪಿ ನ ತಥಾ ರಾಜ್ಞಿ ರಾಜ್ಯೇ ಬುದ್ಧಿರ್ಯಥಾ ಪುರಾ।
15044030c ತಪಸ್ಯೇವಾನುರಕ್ತಂ ಮೇ ಮನಃ ಸರ್ವಾತ್ಮನಾ ತಥಾ।।

ರಾಣಿ! ಹಿಂದಿನಂತೆ ನನಗೆ ರಾಜ್ಯದಲ್ಲಿಯೂ ಮನಸ್ಸಿಲ್ಲವಾಗಿದೆ. ನನ್ನ ಮನಸ್ಸು ಸರ್ವಥಾ ತಪಸ್ಸಿನಲ್ಲಿಯೇ ಅನುರಕ್ತವಾಗಿದೆ.

15044031a ಶೂನ್ಯೇಯಂ ಚ ಮಹೀ ಸರ್ವಾ ನ ಮೇ ಪ್ರೀತಿಕರೀ ಶುಭೇ।
15044031c ಬಾಂಧವಾ ನಃ ಪರಿಕ್ಷೀಣಾ ಬಲಂ ನೋ ನ ಯಥಾ ಪುರಾ।।

ಶುಭೇ! ಈ ಭೂಮಿಯಲ್ಲವೂ ನನಗೆ ಶೂನ್ಯವಾಗಿಯೇ ತೋರುತ್ತಿದೆ. ನನಗೆ ಯಾವುದೇ ರೀತಿಯ ಸಂತೋಷವನ್ನೂ ನೀಡುತ್ತಿಲ್ಲ. ಬಾಂಧವರೆಲ್ಲರೂ ನಾಶಹೊಂದಿದರು. ಹಿಂದಿನಂತೆ ನಾವು ಬಲಶಾಲಿಗಳೂ ಆಗಿ ಉಳಿದಿಲ್ಲ.

15044032a ಪಾಂಚಾಲಾಃ ಸುಭೃಶಂ ಕ್ಷೀಣಾಃ ಕನ್ಯಾಮಾತ್ರಾವಶೇಷಿತಾಃ।
15044032c ನ ತೇಷಾಂ ಕುಲಕರ್ತಾರಂ ಕಂ ಚಿತ್ಪಶ್ಯಾಮ್ಯಹಂ ಶುಭೇ।।

ಶುಭೇ! ಪಾಂಚಾಲರು ಸಂಪೂರ್ಣವಾಗಿ ನಾಶಹೊಂದಿದ್ದಾರೆ. ಅವರ ಕನ್ಯೆಯರು ಮಾತ್ರ ಉಳಿದುಕೊಂಡಿದ್ದಾರೆ. ಅವರ ಕುಲವನ್ನು ಉದ್ಧರಿಸುವ ಒಬ್ಬನನ್ನೂ ನಾನು ಕಾಣುತ್ತಿಲ್ಲ.

15044033a ಸರ್ವೇ ಹಿ ಭಸ್ಮಸಾನ್ನೀತಾ ದ್ರೋಣೇನೈಕೇನ ಸಂಯುಗೇ।
15044033c ಅವಶೇಷಾಸ್ತು ನಿಹತಾ ದ್ರೋಣಪುತ್ರೇಣ ವೈ ನಿಶಿ।।

ಅವರೆಲ್ಲರೂ ಯುದ್ಧದಲ್ಲಿ ದ್ರೋಣನೊಬ್ಬನಿಂದಲೇ ಭಸ್ಮೀಭೂತರಾದರು. ಅಳಿದುಳಿದವರನ್ನು ದ್ರೋಣಪುತ್ರನು ರಾತ್ರಿಯಲ್ಲಿ ಸಂಹರಿಸಿದನು.

15044034a ಚೇದಯಶ್ಚೈವ ಮತ್ಸ್ಯಾಶ್ಚ ದೃಷ್ಟಪೂರ್ವಾಸ್ತಥೈವ ನಃ।
15044034c ಕೇವಲಂ ವೃಷ್ಣಿಚಕ್ರಂ ತು ವಾಸುದೇವಪರಿಗ್ರಹಾತ್।
15044034e ಯಂ ದೃಷ್ಟ್ವಾ ಸ್ಥಾತುಮಿಚ್ಚಾಮಿ ಧರ್ಮಾರ್ಥಂ ನಾನ್ಯಹೇತುಕಮ್।।

ನಮ್ಮ ಸಂಬಂಧಿಗಳಾದ ಚೇದಿದೇಶದವರೂ ಮತ್ಸ್ಯದೇಶದವರೂ ಹಿಂದಿನಂತೆ ಈಗ ಇಲ್ಲ. ವಾಸುದೇವನ ಪರಿಗ್ರಹದಿಂದ ಕೇವಲ ವೃಷ್ಣಿವಂಶವು ಸುರಕ್ಷಿತವಾಗಿದೆ. ಅವರನ್ನು ನೋಡಿ ಧರ್ಮ-ಅರ್ಥಗಳನ್ನು ಸ್ಥಾಪಿಸಲು ಬಯಸುತ್ತೇನೆ. ಬೇರೆ ಯಾವ ಕಾರಣದಿಂದಲೂ ಅಲ್ಲ.

15044035a ಶಿವೇನ ಪಶ್ಯ ನಃ ಸರ್ವಾನ್ದುರ್ಲಭಂ ದರ್ಶನಂ ತವ।
15044035c ಭವಿಷ್ಯತ್ಯಂಬ ರಾಜಾ ಹಿ ತೀವ್ರಮಾರಪ್ಸ್ಯತೇ ತಪಃ।।

ಅಮ್ಮ! ನೀನು ನಮ್ಮನ್ನು ಮಂಗಳದೃಷ್ಟಿಯಿಂದ ಕಾಣು. ಮುಂದೆ ನಿನ್ನ ದರ್ಶನವು ದುರ್ಲಭವೇ ಸರಿ. ಏಕೆಂದರೆ ರಾಜನು ಈಗ ತೀವ್ರ ತಪಸ್ಸನ್ನು ಆರಂಭಿಸುತ್ತಿದ್ದಾನೆ.”

15044036a ಏತಚ್ಛೃತ್ವಾ ಮಹಾಬಾಹುಃ ಸಹದೇವೋ ಯುಧಾಂ ಪತಿಃ।
15044036c ಯುಧಿಷ್ಠಿರಮುವಾಚೇದಂ ಬಾಷ್ಪವ್ಯಾಕುಲಲೋಚನಃ।।

ಇದನ್ನು ಕೇಳಿದ ಯೋಧರ ನಾಯಕ ಮಹಾಬಾಹು ಸಹದೇವನು ವ್ಯಾಕುಲದಿಂದ ಕಣ್ಣೀರು ಸುರಿಸುತ್ತಾ ಯುಧಿಷ್ಠಿರನಿಗೆ ಈ ಮಾತನ್ನಾಡಿದನು:

15044037a ನೋತ್ಸಹೇಽಹಂ ಪರಿತ್ಯಕ್ತುಂ ಮಾತರಂ ಪಾರ್ಥಿವರ್ಷಭ।
15044037c ಪ್ರತಿಯಾತು ಭವಾನ್ ಕ್ಷಿಪ್ರಂ ತಪಸ್ತಪ್ಸ್ಯಾಮ್ಯಹಂ ವನೇ।।

“ಪಾರ್ಥಿವರ್ಷಭ! ತಾಯಿಯನ್ನು ಬಿಟ್ಟುಹೋಗಲು ನನಗೆ ಉತ್ಸಾಹವಿಲ್ಲ. ನೀನು ಬೇಗನೆ ಹೊರಟುಹೋಗು. ನಾನು ವನದಲ್ಲಿ ತಪಸ್ಸನ್ನು ತಪಿಸುತ್ತೇನೆ.

15044038a ಇಹೈವ ಶೋಷಯಿಷ್ಯಾಮಿ ತಪಸಾಹಂ ಕಲೇವರಮ್।
15044038c ಪಾದಶುಶ್ರೂಷಣೇ ಯುಕ್ತೋ ರಾಜ್ಞೋ ಮಾತ್ರೋಸ್ತಥಾನಯೋಃ।।

ನಾನು ಇಲ್ಲಿಯೇ ತಪಸ್ಸನ್ನಾಚರಿಸಿಕೊಂಡು ರಾಜ ಮತ್ತು ತಾಯಂದಿರಿಬ್ಬರ ಪಾದಶುಶ್ರೂಷಣೆಯಲ್ಲಿ ನಿರತನಾಗಿ ನನ್ನ ಶರೀರವನ್ನು ಶೋಷಿಸುತ್ತೇನೆ!”

15044039a ತಮುವಾಚ ತತಃ ಕುಂತೀ ಪರಿಷ್ವಜ್ಯ ಮಹಾಭುಜಮ್।
15044039c ಗಮ್ಯತಾಂ ಪುತ್ರ ಮೈವ ತ್ವಂ ವೋಚಃ ಕುರು ವಚೋ ಮಮ।।

ಆಗ ಕುಂತಿಯು ಆ ಮಹಾಭುಜನನ್ನು ಆಲಂಗಿಸಿ ಹೇಳಿದಳು: “ಪುತ್ರ! ನೀನು ಹೋಗಬೇಕು. ಹಾಗೆ ಹೇಳಬೇಡ! ನನ್ನ ಮಾತಿನಂತೆ ಮಾಡು!

15044040a ಆಗಮಾ ವಃ ಶಿವಾಃ ಸಂತು ಸ್ವಸ್ಥಾ ಭವತ ಪುತ್ರಕಾಃ।
15044040c ಉಪರೋಧೋ ಭವೇದೇವಮಸ್ಮಾಕಂ ತಪಸಃ ಕೃತೇ।।

ಪುತ್ರರೇ! ನಿಮ್ಮ ಪ್ರಯಾಣವು ಮಂಗಳಮಯವಾಗಲಿ. ನೀವು ಸ್ವಸ್ಥರಾಗಿರಿ! ನೀವೆಲ್ಲರೂ ಇಲ್ಲಿ ಇದ್ದರೆ ನಮ್ಮ ತಪಸ್ಸಿಗೆ ಭಂಗವಾಗುತ್ತದೆ.

15044041a ತ್ವತ್ಸ್ನೇಹಪಾಶಬದ್ಧಾ ಚ ಹೀಯೇಯಂ ತಪಸಃ ಪರಾತ್।
15044041c ತಸ್ಮಾತ್ಪುತ್ರಕ ಗಚ್ಚ ತ್ವಂ ಶಿಷ್ಟಮಲ್ಪಂ ಹಿ ನಃ ಪ್ರಭೋ।।

ನಿನ್ನ ಸ್ನೇಹಪಾಶದ ಬಂಧನಕ್ಕೆ ಸಿಲುಕಿ ನಾನು ಶ್ರೇಷ್ಠ ತಪಸ್ಸಿನಿಂದ ವಂಚಿತಳಾದೇನು. ಆದುದರಿಂದ ಪುತ್ರಕ! ಪ್ರಭೋ! ನೀನೂ ಹೊರಟುಹೋಗು. ವ್ಯರ್ಥ ಕಾಲಕಳೆಯಬೇಡ!”

15044042a ಏವಂ ಸಂಸ್ತಂಭಿತಂ ವಾಕ್ಯೈಃ ಕುಂತ್ಯಾ ಬಹುವಿಧೈರ್ಮನಃ।
15044042c ಸಹದೇವಸ್ಯ ರಾಜೇಂದ್ರ ರಾಜ್ಞಶ್ಚೈವ ವಿಶೇಷತಃ।।

ರಾಜೇಂದ್ರ! ಹೀಗೆ ಕುಂತಿಯು ಅನೇಕ ಪ್ರಕಾರವಾಗಿ ಸಮಾಧಾನವನ್ನು ಹೇಳಿ ಸಹದೇವನ, ಅದರಲ್ಲಿಯೂ ವಿಶೇಷವಾಗಿ ಯುಧಿಷ್ಠಿರನ ಮನಸ್ಸನ್ನು, ಹಸ್ತಿನಾವತಿಗೆ ತೆರಳುವಂತೆ ಮಾಡಿದಳು.

15044043a ತೇ ಮಾತ್ರಾ ಸಮನುಜ್ಞಾತಾ ರಾಜ್ಞಾ ಚ ಕುರುಪುಂಗವಾಃ।
15044043c ಅಭಿವಾದ್ಯ ಕುರುಶ್ರೇಷ್ಠಮಾಮಂತ್ರಯಿತುಮಾರಭನ್।।

ತಾಯಿಯಿಂದ ಅನುಜ್ಞಾತರಾದ ಕುರುಪುಂಗವರು ರಾಜಾ ಕುರುಶ್ರೇಷ್ಠನನ್ನು ಅಭಿವಂದಿಸಿ ಅವನಿಂದ ಬೀಳ್ಕೊಂಡರು.

15044044a ರಾಜನ್ಪ್ರತಿಗಮಿಷ್ಯಾಮಃ ಶಿವೇನ ಪ್ರತಿನಂದಿತಾಃ।
15044044c ಅನುಜ್ಞಾತಾಸ್ತ್ವಯಾ ರಾಜನ್ಗಮಿಷ್ಯಾಮೋ ವಿಕಲ್ಮಷಾಃ।।

“ರಾಜನ್! ನಿನ್ನ ಶುಭ ಆಶೀರ್ವಾದಗಳಿಂದ ಆನಂದಿತರಾಗಿ ನಾವು ಹೋಗುತ್ತಿದ್ದೇವೆ. ರಾಜನ್! ನಿನ್ನ ಅಪ್ಪಣೆಯಾದರೆ ಬೇಸರವಿಲ್ಲದೇ ನಾವು ಹೋಗುತ್ತೇವೆ.”

15044045a ಏವಮುಕ್ತಃ ಸ ರಾಜರ್ಷಿರ್ಧರ್ಮರಾಜ್ಞಾ ಮಹಾತ್ಮನಾ।
15044045c ಅನುಜಜ್ಞೇ ಜಯಾಶೀರ್ಭಿರಭಿನಂದ್ಯ ಯುಧಿಷ್ಠಿರಮ್।।

ಮಹಾತ್ಮ ಧರ್ಮರಾಜನು ಹೀಗೆ ಹೇಳಲು ರಾಜರ್ಷಿ ಧೃತರಾಷ್ಟ್ರನು ಯುಧಿಷ್ಠಿರನಿಗೆ ಜಯ-ಆಶೀರ್ವಚನಗಳನ್ನಿತ್ತು ಹೊರಡಲು ಅನುಮತಿಯನ್ನಿತ್ತನು.

15044046a ಭೀಮಂ ಚ ಬಲಿನಾಂ ಶ್ರೇಷ್ಠಂ ಸಾಂತ್ವಯಾಮಾಸ ಪಾರ್ಥಿವಃ।
15044046c ಸ ಚಾಸ್ಯ ಸಮ್ಯಗ್ ಮೇಧಾವೀ ಪ್ರತ್ಯಪದ್ಯತ ವೀರ್ಯವಾನ್।।

ಪಾರ್ಥಿವ ಧೃತರಾಷ್ಟ್ರನು ಬಲಿಗಳಲ್ಲಿ ಶ್ರೇಷ್ಠ ಭೀಮನನ್ನು ಸಂತವಿಸಿದನು. ಉತ್ತಮ ಮೇಧಾವಿಯೂ ವೀರ್ಯವಾನನೂ ಆದ ಭೀಮನೂ ಕೂಡ ಅವನ ಸಾಂತ್ವನವನ್ನು ಸ್ವೀಕರಿಸಿದನು.

15044047a ಅರ್ಜುನಂ ಚ ಸಮಾಶ್ಲಿಷ್ಯ ಯಮೌ ಚ ಪುರುಷರ್ಷಭೌ।
15044047c ಅನುಜಜ್ಞೇ ಸ ಕೌರವ್ಯಃ ಪರಿಷ್ವಜ್ಯಾಭಿನಂದ್ಯ ಚ।।

ಕೌರವ್ಯ ಧೃತರಾಷ್ಟ್ರನು ಅರ್ಜುನ ಮತ್ತು ಪುರುಷರ್ಷಭ ಯಮಳರನ್ನೂ ಬಿಗಿದಪ್ಪಿ ಅಭಿನಂದಿಸಿ ಹೊರಡಲು ಅನುಮತಿಯನ್ನಿತ್ತನು.

15044048a ಗಾಂಧಾರ್ಯಾ ಚಾಭ್ಯನುಜ್ಞಾತಾಃ ಕೃತಪಾದಾಭಿವಂದನಾಃ।
15044048c ಜನನ್ಯಾ ಸಮುಪಾಘ್ರಾತಾಃ ಪರಿಷ್ವಕ್ತಾಶ್ಚ ತೇ ನೃಪಮ್।

ಗಾಂಧಾರಿಯ ಪಾದಗಳಿಗೆ ವಂದಿಸಿ ಅವರು ಅವಳ ಅನುಜ್ಞೆಯನ್ನೂ ಪಡೆದುಕೊಂಡರು. ಕುಂತಿಯು ನೃಪ ಯುಧಿಷ್ಠಿರನನ್ನು ಆಲಂಗಿಸಿ ಆಘ್ರಾಣಿಸಿದಳು.

15044048e ಚಕ್ರುಃ ಪ್ರದಕ್ಷಿಣಂ ಸರ್ವೇ ವತ್ಸಾ ಇವ ನಿವಾರಣೇ।।
15044049a ಪುನಃ ಪುನರ್ನಿರೀಕ್ಷಂತಃ ಪ್ರಜಗ್ಮುಸ್ತೇ ಪ್ರದಕ್ಷಿಣಮ್।

ಹಾಲುಕುಡಿಯುವ ಕರುವನ್ನು ಹಿಂದಕ್ಕೆ ಸೆಳೆದಂತೆಲ್ಲಾ ಅದು ಪುನಃ ಪುನಃ ತಾಯಿಯ ಕಡೆ ನೋಡುವಂತೆ ಪಾಂಡವರೆಲ್ಲರೂ ಪುನಃ ಪುನಃ ಅವರನ್ನೇ ನೋಡುತ್ತಾ ಧೃತರಾಷ್ಟ್ರ, ಗಾಂಧಾರೀ ಮತ್ತು ಕುಂತಿಯರಿಗೆ ಪ್ರದಕ್ಷಿಣ ನಮಸ್ಕಾರಗಳನ್ನು ಮಾಡಿದರು.

15044049c ತಥೈವ ದ್ರೌಪದೀ ಸಾಧ್ವೀ ಸರ್ವಾಃ ಕೌರವಯೋಷಿತಃ।।
15044050a ನ್ಯಾಯತಃ ಶ್ವಶುರೇ ವೃತ್ತಿಂ ಪ್ರಯುಜ್ಯ ಪ್ರಯಯುಸ್ತತಃ।
15044050c ಶ್ವಶ್ರೂಭ್ಯಾಂ ಸಮನುಜ್ಞಾತಾಃ ಪರಿಷ್ವಜ್ಯಾಭಿನಂದಿತಾಃ।
15044050e ಸಂದಿಷ್ಟಾಶ್ಚೇತಿಕರ್ತವ್ಯಂ ಪ್ರಯಯುರ್ಭರ್ತೃಭಿಃ ಸಹ।।

ಹಾಗೆಯೇ ಸಾಧ್ವೀ ದ್ರೌಪದೀ ಮತ್ತು ಕೌರವ ನಾರಿಯರೆಲ್ಲರೂ ನ್ಯಾಯವತ್ತಾಗಿ ಮಾವನಿಗೆ ನಮಸ್ಕರಿಸಿದರು. ಆ ಅನಿಂದಿತೆಯರು ಅತ್ತೆಯರಿಬ್ಬರನ್ನೂ ಆಲಂಗಿಸಿ ಅಭಿನಂದಿಸಿ, ಮಾಡಬೇಕಾದ ಕರ್ತವ್ಯಗಳನ್ನು ಕೇಳಿ ತಿಳಿದುಕೊಂಡು ಅವರ ಅನುಮತಿಯನ್ನು ಪಡೆದು, ಗಂಡಂದಿರೊಡನೆ ಹಸ್ತಿನಾಪುರಕ್ಕೆ ಹೊರಟರು.

15044051a ತತಃ ಪ್ರಜಜ್ಞೇ ನಿನದಃ ಸೂತಾನಾಂ ಯುಜ್ಯತಾಮಿತಿ।
15044051c ಉಷ್ಟ್ರಾಣಾಂ ಕ್ರೋಶತಾಂ ಚೈವ ಹಯಾನಾಂ ಹೇಷತಾಮಪಿ।।

ಆಗ ಕುದುರೆಗಳನ್ನು ರಥಗಳಿಗೆ ಕಟ್ಟಿ ಎನ್ನುವ ಸೂತರ ನಿನಾದವೂ, ಒಂಟೆಗಳ ಕೂಗೂ, ಕುದುರೆಗಳ ಹೇಷಾರವವೂ ಕೇಳಿಬಂದಿತು.

15044052a ತತೋ ಯುಧಿಷ್ಠಿರೋ ರಾಜಾ ಸದಾರಃ ಸಹಸೈನಿಕಃ।
15044052c ನಗರಂ ಹಾಸ್ತಿನಪುರಂ ಪುನರಾಯಾತ್ಸಬಾಂಧವಃ।।

ಅನಂತರ ರಾಜಾ ಯುಧಿಷ್ಟಿರನು ಪತ್ನಿಯರೊಂದಿಗೆ, ಸೈನಿಕರೊಡನೆ ಮತ್ತು ಬಾಂಧವರನ್ನೊಡಗೂಡಿ ಪುನಃ ಹಸ್ತಿನಾಪುರ ನಗರಕ್ಕೆ ಆಗಮಿಸಿದನು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಪುತ್ರದರ್ಶನಪರ್ವಣಿ ಯುಧಿಷ್ಠಿರಪ್ರತ್ಯಾಗಮೇ ಚತುಶ್ಚತ್ವಾರಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಪುತ್ರದರ್ಶನಪರ್ವದಲ್ಲಿ ಯುಧಿಷ್ಠಿರಪ್ರತ್ಯಾಗಮ ಎನ್ನುವ ನಲ್ವತ್ನಾಲ್ಕನೇ ಅಧ್ಯಾಯವು. ಇತಿ ಶ್ರೀ ಮಹಾಭಾರತೇ ಆಶ್ರಮವಾಸಿಕಪರ್ವಣಿ ಪುತ್ರದರ್ಶನಪರ್ವಃ।
ಇದು ಶ್ರೀ ಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಪುತ್ರದರ್ಶನಪರ್ವವು।
ಇದೂವರೆಗಿನ ಒಟ್ಟು ಮಹಾಪರ್ವಗಳು – 14/18, ಉಪಪರ್ವಗಳು-91/100, ಅಧ್ಯಾಯಗಳು-1975/1995, ಶ್ಲೋಕಗಳು-73120/73784