ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆಶ್ರಮವಾಸಿಕ ಪರ್ವ
ಪುತ್ರದರ್ಶನ ಪರ್ವ
ಅಧ್ಯಾಯ 41
ಸಾರ
ಬೆಳಗಾಗುತ್ತಲೇ ವ್ಯಾಸನು ಮಡಿದವರನ್ನು ಯಥಾಸ್ಥಾನಗಳಿಗೆ ವಿಸರ್ಜಿಸಿದುದು (1-16). ಯುದ್ಧದಲ್ಲಿ ವಿಧವೆಯರಾಗಿದ್ದ ಕುರುಸ್ತ್ರೀಯರು ಗಂಗಾನದಿಯಲ್ಲಿ ಮುಳುಗಿ ತಮ್ಮ ತಮ್ಮ ಪತಿಯರ ಲೋಕಗಳಿಗೆ ತೆರಳಿದುದು (17-28).
15041001 ವೈಶಂಪಾಯನ ಉವಾಚ।
15041001a ತತಸ್ತೇ ಭರತಶ್ರೇಷ್ಠಾಃ ಸಮಾಜಗ್ಮುಃ ಪರಸ್ಪರಮ್।
15041001c ವಿಗತಕ್ರೋಧಮಾತ್ಸರ್ಯಾಃ ಸರ್ವೇ ವಿಗತಕಲ್ಮಷಾಃ।।
15041002a ವಿಧಿಂ ಪರಮಮಾಸ್ಥಾಯ ಬ್ರಹ್ಮರ್ಷಿವಿಹಿತಂ ಶುಭಮ್।
15041002c ಸಂಪ್ರೀತಮನಸಃ ಸರ್ವೇ ದೇವಲೋಕ ಇವಾಮರಾಃ।।
ವೈಶಂಪಾಯನನು ಹೇಳಿದನು: “ಆಗ ಬ್ರಹ್ಮರ್ಷಿಯು ವಿಹಿಸಿದ ಶುಭ ವಿಧಿಯ ಪ್ರಕಾರ ಆ ಭರತಶ್ರೇಷ್ಠರೆಲ್ಲರೂ ದೇವಲೋಕದ ಅಮರರಂತೆ ಕ್ರೋಧ-ಮಾತ್ಸರ್ಯಗಳನ್ನು ತೊರೆದು, ದುಃಖಗಳಿಲ್ಲದೇ, ಪರಸ್ಪರರೊಡನೆ ಕಲೆತರು.
15041003a ಪುತ್ರಃ ಪಿತ್ರಾ ಚ ಮಾತ್ರಾ ಚ ಭಾರ್ಯಾ ಚ ಪತಿನಾ ಸಹ।
15041003c ಭ್ರಾತಾ ಭ್ರಾತ್ರಾ ಸಖಾ ಚೈವ ಸಖ್ಯಾ ರಾಜನ್ಸಮಾಗತಾಃ।।
ರಾಜನ್! ಮಗನು ತಂದೆ-ತಾಯಿಯರೊಂದಿಗೂ, ಪತ್ನಿಯು ಪತಿಯೊಂದಿಗೂ, ಸಹೋದರನು ಸಹೋದರನೊಂದಿಗೂ ಮತ್ತು ಮಿತ್ರನು ಮಿತ್ರನೊಡನೆಯೂ ಕಲೆತರು.
15041004a ಪಾಂಡವಾಸ್ತು ಮಹೇಷ್ವಾಸಂ ಕರ್ಣಂ ಸೌಭದ್ರಮೇವ ಚ।
15041004c ಸಂಪ್ರಹರ್ಷಾತ್ಸಮಾಜಗ್ಮುರ್ದ್ರೌಪದೇಯಾಂಶ್ಚ ಸರ್ವಶಃ।।
ಪಾಂಡವರು ಮಹೇಷ್ವಾಸ ಕರ್ಣನನ್ನೂ, ಸೌಭದ್ರನನ್ನು, ದ್ರೌಪದೇಯರೆಲ್ಲರನ್ನೂ ಅತ್ಯಂತ ಹರ್ಷದಿಂದ ಸೇರಿದರು.
15041005a ತತಸ್ತೇ ಪ್ರೀಯಮಾಣಾ ವೈ ಕರ್ಣೇನ ಸಹ ಪಾಂಡವಾಃ।
15041005c ಸಮೇತ್ಯ ಪೃಥಿವೀಪಾಲಾಃ ಸೌಹೃದೇಽವಸ್ಥಿತಾಭವನ್।।
ಕರ್ಣನೊಡನೆ ಪಾಂಡವರೂ ಮತ್ತು ಪೃಥಿವೀಪಾಲರು ಅನ್ಯೋನ್ಯರನ್ನೂ ಭೇಟಿಮಾಡಿ ಸೌಹಾರ್ದತೆಯಿಂದಿದ್ದರು.
15041006a ಋಷಿಪ್ರಸಾದಾತ್ತೇಽನ್ಯೇ ಚ ಕ್ಷತ್ರಿಯಾ ನಷ್ಟಮನ್ಯವಃ।
15041006c ಅಸೌಹೃದಂ ಪರಿತ್ಯಜ್ಯ ಸೌಹೃದೇ ಪರ್ಯವಸ್ಥಿತಾಃ।।
ಋಷಿಯ ಅನುಗ್ರಹದಿಂದ ಅನ್ಯ ಕ್ಷತ್ರಿಯರೂ ಕೋಪವನ್ನು ಕಳೆದುಕೊಂಡು, ಶತ್ರುಭಾವವನ್ನು ಬಿಟ್ಟು ಸೌಹಾರ್ದತೆಯಿಂದ ವರ್ತಿಸಿದರು.
15041007a ಏವಂ ಸಮಾಗತಾಃ ಸರ್ವೇ ಗುರುಭಿರ್ಬಾಂಧವೈಸ್ತಥಾ।
15041007c ಪುತ್ರೈಶ್ಚ ಪುರುಷವ್ಯಾಘ್ರಾಃ ಕುರವೋಽನ್ಯೇ ಚ ಮಾನವಾಃ।।
ಹೀಗೆ ಕುರು ಪುರುಷವ್ಯಾಘ್ರ ಪುತ್ರರೂ ಅನ್ಯ ಮಾನವರೂ ಹಿರಿಯರು ಮತ್ತು ಬಂಧವರೊಂದಿಗೆ ಸೇರಿ ಕಲೆತರು.
15041008a ತಾಂ ರಾತ್ರಿಮೇಕಾಂ ಕೃತ್ಸ್ನಾಂ ತೇ ವಿಹೃತ್ಯ ಪ್ರೀತಮಾನಸಾಃ।
15041008c ಮೇನಿರೇ ಪರಿತೋಷೇಣ ನೃಪಾಃ ಸ್ವರ್ಗಸದೋ ಯಥಾ।।
ಆ ನೃಪರು ಇಡೀ ರಾತ್ರಿಯನ್ನು ಒಂದಾಗಿ ಪ್ರೀತಮನಸ್ಕರಾಗಿ ವಿಹರಿಸುತ್ತಾ ತಾವು ಸ್ವರ್ಗದ ಸದಸ್ಯರೋ ಎನ್ನುವಂತೆ ಸಂತೋಷದಿಂದ ಕಳೆದರು.
15041009a ನಾತ್ರ ಶೋಕೋ ಭಯಂ ತ್ರಾಸೋ ನಾರತಿರ್ನಾಯಶೋಽಭವತ್।
15041009c ಪರಸ್ಪರಂ ಸಮಾಗಮ್ಯ ಯೋಧಾನಾಂ ಭರತರ್ಷಭ।।
ಭರತರ್ಷಭ! ಆ ಯೋಧರು ಪರಸ್ಪರರನ್ನು ಸೇರಿದಾಗ ಅಲ್ಲಿ ಶೋಕವಾಗಲೀ, ಭಯವಾಗಲೀ, ಕಷ್ಟವಾಗಲೀ, ಅಸಂತೋಷವಾಗಲೀ, ಅಪಯಶಸ್ಸಾಗಲೀ ಉಂಟಾಗಲಿಲ್ಲ.
15041010a ಸಮಾಗತಾಸ್ತಾಃ ಪಿತೃಭಿರ್ಭ್ರಾತೃಭಿಃ ಪತಿಭಿಃ ಸುತೈಃ।
15041010c ಮುದಂ ಪರಮಿಕಾಂ ಪ್ರಾಪ್ಯ ನಾರ್ಯೋ ದುಃಖಮಥಾತ್ಯಜನ್।।
ನಾರಿಯರು ಅಲ್ಲಿ ದುಃಖವನ್ನು ತೊರೆದು ತಂದೆಗಳೊಂದಿಗೂ, ಸಹೋದರರೊಂದಿಗೂ, ಪತಿಗಳೊಂದಿಗೂ, ಮಕ್ಕಳೊಂದಿಗೂ ಕಲೆತು ಅತ್ಯಂತ ಸಂತೋಷವನ್ನು ಅನುಭವಿಸಿದರು.
15041011a ಏಕಾಂ ರಾತ್ರಿಂ ವಿಹೃತ್ಯೈವಂ ತೇ ವೀರಾಸ್ತಾಶ್ಚ ಯೋಷಿತಃ।
15041011c ಆಮಂತ್ರ್ಯಾನ್ಯೋನ್ಯಮಾಶ್ಲಿಷ್ಯ ತತೋ ಜಗ್ಮುರ್ಯಥಾಗತಮ್।।
ಈ ರೀತಿ ಆ ವೀರರೂ ಮತ್ತು ಅವರ ಪತ್ನಿಯರೂ ಒಂದು ರಾತ್ರಿ ವಿಹರಿಸಿ, ರಾತ್ರಿಕಳೆದ ಕೂಡಲೇ ಅನ್ಯೋನ್ಯರನ್ನು ಆಲಂಗಿಸಿ, ಬೀಳ್ಕೊಂಡು ಎಲ್ಲಿಂದ ಬಂದಿದ್ದರೋ ಅಲ್ಲಿಗೆ ಹೊರಟು ಹೋದರು.
15041012a ತತೋ ವಿಸರ್ಜಯಾಮಾಸ ಲೋಕಾಂಸ್ತಾನ್ಮುನಿಪುಂಗವಃ।
15041012c ಕ್ಷಣೇನಾಂತರ್ಹಿತಾಶ್ಚೈವ ಪ್ರೇಕ್ಷತಾಮೇವ ತೇಽಭವನ್।।
ಆಗ ಮುನಿಪುಂಗವನು ಆ ಲೋಕಗಳನ್ನು ವಿಸರ್ಜಿಸಿದನು. ಎಲ್ಲರೂ ನೋಡುತ್ತಿದ್ದಂತೆಯೇ ಕ್ಷಣದಲ್ಲಿಯೇ ಅವರು ಅಂತರ್ಧಾನರಾದರು.
15041013a ಅವಗಾಹ್ಯ ಮಹಾತ್ಮಾನಃ ಪುಣ್ಯಾಂ ತ್ರಿಪಥಗಾಂ ನದೀಮ್।
15041013c ಸರಥಾಃ ಸಧ್ವಜಾಶ್ಚೈವ ಸ್ವಾನಿ ಸ್ಥಾನಾನಿ ಭೇಜಿರೇ।।
ಆ ಮಹಾತ್ಮನು ಪುಣ್ಯ ತ್ರಿಪಥಗಾ ನಧಿಯಲ್ಲಿ ರಥ-ಧ್ವಜ-ಅಶ್ವಗಳೊಂದಿಗೆ ಅವರನ್ನು ಅವರವರ ಸ್ಥಾನಗಳಿಗೆ ಕಳುಹಿಸಿಕೊಟ್ಟನು.
15041014a ದೇವಲೋಕಂ ಯಯುಃ ಕೇ ಚಿತ್ಕೇ ಚಿದ್ಬ್ರಹ್ಮಸದಸ್ತಥಾ।
15041014c ಕೇ ಚಿಚ್ಚ ವಾರುಣಂ ಲೋಕಂ ಕೇ ಚಿತ್ಕೌಬೇರಮಾಪ್ನುವನ್।।
ಕೆಲವರು ದೇವಲೋಕಕ್ಕೆ ಹೋದರೆ ಇನ್ನು ಕೆಲವರು ಬ್ರಹ್ಮಸದನಕ್ಕೆ ಹೋದರು. ಕೆಲವರು ವರುಣಲೋಕವನ್ನೂ ಇನ್ನು ಕೆಲವರು ಕುಬೇರನ ಲೋಕವನ್ನೂ ಸೇರಿದರು.
15041015a ತಥಾ ವೈವಸ್ವತಂ ಲೋಕಂ ಕೇ ಚಿಚ್ಚೈವಾಪ್ನುವನ್ನೃಪಾಃ।
15041015c ರಾಕ್ಷಸಾನಾಂ ಪಿಶಾಚಾನಾಂ ಕೇ ಚಿಚ್ಚಾಪ್ಯುತ್ತರಾನ್ಕುರೂನ್।।
ಹಾಗೆಯೇ ಕೆಲವು ರಾಜರು ವೈವಸ್ವತ ಲೋಕವನ್ನೂ, ಇನ್ನು ಕೆಲವರು ರಾಕ್ಷಸ, ಪಿಶಾಚ ಮತ್ತು ಉತ್ತರ ಕುರುಲೋಕಕ್ಕೂ ಹೊರಟುಹೋದರು.
15041016a ವಿಚಿತ್ರಗತಯಃ ಸರ್ವೇ ಯಾ ಅವಾಪ್ಯಾಮರೈಃ ಸಹ।
15041016c ಆಜಗ್ಮುಸ್ತೇ ಮಹಾತ್ಮಾನಃ ಸವಾಹಾಃ ಸಪದಾನುಗಾಃ।।
ಅಮರರೊಂದಿಗೆ ವಾಹನ-ಅನುಯಾಯಿಗಳೊಂದಿಗೆ ಬಂದಿದ್ದ ಆ ಮಹಾತ್ಮರೆಲ್ಲರೂ ಹೀಗೆ ವಿಚಿತ್ರ ಗತಿಗಳನ್ನು ಪಡೆದರು.
15041017a ಗತೇಷು ತೇಷು ಸರ್ವೇಷು ಸಲಿಲಸ್ಥೋ ಮಹಾಮುನಿಃ।
15041017c ಧರ್ಮಶೀಲೋ ಮಹಾತೇಜಾಃ ಕುರೂಣಾಂ ಹಿತಕೃತ್ಸದಾ।
15041017e ತತಃ ಪ್ರೋವಾಚ ತಾಃ ಸರ್ವಾಃ ಕ್ಷತ್ರಿಯಾ ನಿಹತೇಶ್ವರಾಃ।।
ಅವರೆಲ್ಲರೂ ಹೊರಟು ಹೋದನಂತರ ನದಿಯಲ್ಲಿ ನಿಂತಿದ್ದ ಸದಾ ಕುರುಗಳ ಹಿತವನ್ನೇ ಮಾಡುತ್ತಿದ್ದ ಆ ಮಹಾತೇಜಸ್ವಿ ಧರ್ಮಶೀಲ ಮಹಾಮುನಿಯು ಪತಿಗಳನ್ನು ಕಳೆದುಕೊಂಡಿದ್ದ ಕ್ಷತ್ರಿಯ ಸ್ತ್ರೀಯರಿಗೆ ಹೇಳಿದನು:
15041018a ಯಾ ಯಾಃ ಪತಿಕೃತಾಽಲ್ಲೋಕಾನಿಚ್ಚಂತಿ ಪರಮಸ್ತ್ರಿಯಃ।
15041018c ತಾ ಜಾಹ್ನವೀಜಲಂ ಕ್ಷಿಪ್ರಮವಗಾಹಂತ್ವತಂದ್ರಿತಾಃ।।
“ಪರಮಸ್ತ್ರೀಯರೇ! ನಿಮ್ಮಲ್ಲಿ ಯಾರು ಯಾರು ನಿಮ್ಮ ನಿಮ್ಮ ಗಂಡಂದಿರು ಹೋಗಿರುವ ಲೋಕಗಳಿಗೆ ಹೋಗಲು ಇಚ್ಛಿಸುವಿರೋ ಅವರು ಆಲಸ್ಯವನ್ನು ತೊರೆದು ಬೇಗನೇ ಗಂಗಾನದಿಯಲ್ಲಿ ಮುಳುಗಿರಿ!”
15041019a ತತಸ್ತಸ್ಯ ವಚಃ ಶ್ರುತ್ವಾ ಶ್ರದ್ದಧಾನಾ ವರಾಂಗನಾಃ।
15041019c ಶ್ವಶುರಂ ಸಮನುಜ್ಞಾಪ್ಯ ವಿವಿಶುರ್ಜಾಹ್ನವೀಜಲಮ್।।
ಅವನ ಆ ಮಾತನ್ನು ಕೇಳಿ ಶ್ರದ್ಧೆಯನ್ನಿಟ್ಟಿದ್ದ ವರಾಂಗನೆಯರು ಮಾವನ ಅನುಮತಿಯನ್ನು ಪಡೆದು ಜಾಹ್ನವೀ ನದಿಯನ್ನು ಪ್ರವೇಶಿಸಿದರು.
15041020a ವಿಮುಕ್ತಾ ಮಾನುಷೈರ್ದೇಹೈಸ್ತತಸ್ತಾ ಭರ್ತೃಭಿಃ ಸಹ।
15041020c ಸಮಾಜಗ್ಮುಸ್ತದಾ ಸಾಧ್ವ್ಯಃ ಸರ್ವಾ ಏವ ವಿಶಾಂ ಪತೇ।।
ವಿಶಾಂಪತೇ! ಮಾನುಷ ದೇಹಗಳನ್ನು ತೊರೆದು ಆ ಸಾಧ್ವಿಯರೆಲ್ಲರೂ ತಮ್ಮ ತಮ್ಮ ಪತಿಯರೊಂದಿಗೆ ಹೊರಟುಹೋದರು.
15041021a ಏವಂ ಕ್ರಮೇಣ ಸರ್ವಾಸ್ತಾಃ ಶೀಲವತ್ಯಃ ಕುಲಸ್ತ್ರಿಯಃ।
15041021c ಪ್ರವಿಶ್ಯ ತೋಯಂ ನಿರ್ಮುಕ್ತಾ ಜಗ್ಮುರ್ಭರ್ತೃಸಲೋಕತಾಮ್।।
ಹೀಗೆ ಕ್ರಮೇಣವಾಗಿ ಆ ಎಲ್ಲ ಶೀಲವಂತ ಕುಲಸ್ತ್ರೀಯರು ನೀರಿನಲ್ಲಿ ಮುಳುಗಿ ಮುಕ್ತರಾಗಿ ತಮ್ಮ ತಮ್ಮ ಪತಿಗಳ ಲೋಕಗಳಿಗೆ ಹೊರಟುಹೋದರು.
15041022a ದಿವ್ಯರೂಪಸಮಾಯುಕ್ತಾ ದಿವ್ಯಾಭರಣಭೂಷಿತಾಃ।
15041022c ದಿವ್ಯಮಾಲ್ಯಾಂಬರಧರಾ ಯಥಾಸಾಂ ಪತಯಸ್ತಥಾ।।
15041023a ತಾಃ ಶೀಲಸತ್ತ್ವಸಂಪನ್ನಾ ವಿತಮಸ್ಕಾ ಗತಕ್ಲಮಾಃ।
15041023c ಸರ್ವಾಃ ಸರ್ವಗುಣೈರ್ಯುಕ್ತಾಃ ಸ್ವಂ ಸ್ವಂ ಸ್ಥಾನಂ ಪ್ರಪೇದಿರೇ।।
ಅವರ ಪತಿಗಳಂತೆಯೇ ಆ ಶೀಲಸತ್ತ್ವಸಂಪನ್ನ ಸ್ತ್ರೀಯರು ದಿವ್ಯರೂಪಗಳನ್ನು ಧರಿಸಿ, ದಿವ್ಯಾಭರಣಭೂಷಿತರಾಗಿ, ದಿವ್ಯ ಮಾಲ್ಯಾಂಬರಗಳನ್ನು ಧರಿಸಿ ಸರ್ವಗುಣಗಳಿಂದ ಯುಕ್ತರಾಗಿ, ಆಯಾಸವನ್ನು ಕಳೆದುಕೊಂಡು ತಮ್ಮ ತಮ್ಮ ಸ್ಥಾನಗಳಿಗೆ ತೆರಳಿದರು.
15041024a ಯಸ್ಯ ಯಸ್ಯ ಚ ಯಃ ಕಾಮಸ್ತಸ್ಮಿನ್ಕಾಲೇಽಭವತ್ತದಾ।
15041024c ತಂ ತಂ ವಿಸೃಷ್ಟವಾನ್ವ್ಯಾಸೋ ವರದೋ ಧರ್ಮವತ್ಸಲಃ।।
ವರದ ಧರ್ಮವತ್ಸಲ ವ್ಯಾಸನು ಆ ಸಮಯದಲ್ಲಿ ಯಾರ ಯಾರ ಬಯಕೆಯು ಯಾವುದಿತ್ತೋ ಅವೆಲ್ಲವನ್ನೂ ಪೂರೈಸಿಕೊಟ್ಟು ಬೇಕಾದ ಲೋಕಗಳನ್ನು ಸೃಷ್ಟಿಸಿದನು.
15041025a ತಚ್ಛೃತ್ವಾ ನರದೇವಾನಾಂ ಪುನರಾಗಮನಂ ನರಾಃ।
15041025c ಜಹೃಷುರ್ಮುದಿತಾಶ್ಚಾಸನ್ನನ್ಯದೇಹಗತಾ ಅಪಿ।।
ನರದೇವರ ಪುನರಾಗಮನದ ಕುರಿತು ಕೇಳಿದ ಮನುಷ್ಯರೂ ಅನ್ಯ ದೇಹಗಳಲ್ಲಿ ಹೋದವರೂ ಮುದಿತರಾದರು.
15041026a ಪ್ರಿಯೈಃ ಸಮಾಗಮಂ ತೇಷಾಂ ಯ ಇಮಂ ಶೃಣುಯಾನ್ನರಃ।
15041026c ಪ್ರಿಯಾಣಿ ಲಭತೇ ನಿತ್ಯಮಿಹ ಚ ಪ್ರೇತ್ಯ ಚೈವ ಹ।।
ಆ ಪ್ರಿಯರ ಸಮಾಗಮವನ್ನು ಯಾರು ಕೇಳುತ್ತಾರೋ ಅವರಿಗೆ ಇಹ ಮತ್ತು ಪರಲೋಕಗಳಲ್ಲಿ ನಿತ್ಯವೂ ಪ್ರಿಯವಾದುದು ದೊರೆಯುತ್ತದೆ.
15041027a ಇಷ್ಟಬಾಂಧವಸಂಯೋಗಮನಾಯಾಸಮನಾಮಯಮ್।
15041027c ಯ ಇಮಂ ಶ್ರಾವಯೇದ್ವಿದ್ವಾನ್ಸಂಸಿದ್ಧಿಂ ಪ್ರಾಪ್ನುಯಾತ್ಪರಾಮ್।।
ಇಷ್ಟಬಾಂಧವರೊಡನೆ ಅನಾಯಾಸವಾಗಿ ಸಮಾಗಮವಾಗುತ್ತದೆ. ಇದನ್ನು ಯಾವ ವಿದ್ವಾಂಸನು ಇತರರಿಗೆ ಕೇಳಿಸುತ್ತಾನೋ ಅವನು ಪರಮ ಸಂಸಿದ್ಧಿಯನ್ನು ಪಡೆಯುತ್ತಾನೆ.
15041028a ಸ್ವಾಧ್ಯಾಯಯುಕ್ತಾಃ ಪುರುಷಾಃ ಕ್ರಿಯಾಯುಕ್ತಾಶ್ಚ ಭಾರತ।
15041028c ಅಧ್ಯಾತ್ಮಯೋಗಯುಕ್ತಾಶ್ಚ ಧೃತಿಮಂತಶ್ಚ ಮಾನವಾಃ।
15041028e ಶ್ರುತ್ವಾ ಪರ್ವ ತ್ವಿದಂ ನಿತ್ಯಮವಾಪ್ಸ್ಯಂತಿ ಪರಾಂ ಗತಿಮ್।।
ಭಾರತ! ಸ್ವಾಧ್ಯಾಯದಲ್ಲಿ ನಿರತರಾದವರೂ, ಕ್ರಿಯಾಶೀಲರಾದವರೂ, ಮತ್ತು ಆಧ್ಯಾತ್ಮಯೋಗಯುಕ್ತರಾದ ಧೃತಿಮಂತ ಮನುಷ್ಯರು ಈ ಪರ್ವವನ್ನು ನಿತ್ಯವೂ ಕೇಳಿ ಪರಮ ಗತಿಯನ್ನು ಪಡೆಯುತ್ತಾರೆ.””
ಸಮಾಪ್ತಿ
ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಪುತ್ರದರ್ಶನಪರ್ವಣಿ ಸ್ತ್ರೀಣಾಂ ಸ್ವಸ್ವಪತಿಲೋಕಗಮನೇ ಏಕಚತ್ವಾರಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಪುತ್ರದರ್ಶನಪರ್ವದಲ್ಲಿ ಸ್ತ್ರೀಣಾಂ ಸ್ವಸ್ವಪತಿಲೋಕಗಮನ ಎನ್ನುವ ನಲ್ವತ್ತೊಂದನೇ ಅಧ್ಯಾಯವು.