ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆಶ್ರಮವಾಸಿಕ ಪರ್ವ
ಪುತ್ರದರ್ಶನ ಪರ್ವ
ಅಧ್ಯಾಯ 39
ಸಾರ
ಯುದ್ಧದಲ್ಲಿ ಮಡಿದವರನ್ನು ತೋರಿಸುತ್ತೇನೆಂದು ವ್ಯಾಸನು ಹೇಳಿದುದು (1-18). ಜನಸ್ತೋಮವು ಗಂಗಾತೀರವನ್ನು ಸೇರಿದುದು (19-24).
15039001 ವ್ಯಾಸ ಉವಾಚ।
15039001a ಭದ್ರೇ ದ್ರಕ್ಷ್ಯಸಿ ಗಾಂಧಾರಿ ಪುತ್ರಾನ್ ಭ್ರಾತೄನ್ಸಖೀಂಸ್ತಥಾ।
15039001c ವಧೂಶ್ಚ ಪತಿಭಿಃ ಸಾರ್ಧಂ ನಿಶಿ ಸುಪ್ತೋತ್ಥಿತಾ ಇವ।।
ವ್ಯಾಸನು ಹೇಳಿದನು: “ಭದ್ರೇ ಗಾಂಧಾರೀ! ಇಂದು ರಾತ್ರಿ ನೀನು ನಿನ್ನ ಮಕ್ಕಳನ್ನೂ, ಸಹೋದರರನ್ನೂ, ಮಿತ್ರರನ್ನೂ ನೋಡುತ್ತೀಯೆ! ನಿನ್ನ ಸೊಸೆಯಂದಿರೂ ಕೂಡ ತಮ್ಮ ಪತಿಗಳೊಂದಿಗೆ ಮಲಗಿ ಎದ್ದು ಬಂದವರಂತೆ ಕಾಣುತ್ತಾರೆ.
15039002a ಕರ್ಣಂ ದ್ರಕ್ಷ್ಯತಿ ಕುಂತೀ ಚ ಸೌಭದ್ರಂ ಚಾಪಿ ಯಾದವೀ।
15039002c ದ್ರೌಪದೀ ಪಂಚ ಪುತ್ರಾಂಶ್ಚ ಪಿತೄನ್ ಭ್ರಾತೄಂಸ್ತಥೈವ ಚ।।
ಕುಂತಿಯು ಕರ್ಣನನ್ನು ನೋಡುತ್ತಾಳೆ. ಯಾದವೀ ಸುಭದ್ರೆಯು ಅಭಿಮನ್ಯುವನ್ನು ನೋಡುತ್ತಾಳೆ. ದ್ರೌಪದಿಯು ಐವರು ಪುತ್ರರನ್ನೂ, ತಂದೆಯನ್ನೂ ಮತ್ತು ಸಹೋದರರನ್ನೂ ನೋಡುತ್ತಾಳೆ.
15039003a ಪೂರ್ವಮೇವೈಷ ಹೃದಯೇ ವ್ಯವಸಾಯೋಽಭವನ್ಮಮ।
15039003c ಯಥಾಸ್ಮಿ ಚೋದಿತೋ ರಾಜ್ಞಾ ಭವತ್ಯಾ ಪೃಥಯೈವ ಚ।।
ರಾಜ ಧೃತರಾಷ್ಟ್ರ, ನೀನು ಮತ್ತು ಪೃಥೆಯು ನನ್ನನ್ನು ಕೇಳುವ ಮೊದಲೇ ಇದನ್ನು ಮಾಡಿ ತೋರಿಸಬೇಕೆಂದು ನನ್ನ ಮನಸ್ಸಿನಲ್ಲಿದ್ದಿತ್ತು.
15039004a ನ ತೇ ಶೋಚ್ಯಾ ಮಹಾತ್ಮಾನಃ ಸರ್ವ ಏವ ನರರ್ಷಭಾಃ।
15039004c ಕ್ಷತ್ರಧರ್ಮಪರಾಃ ಸಂತಸ್ತಥಾ ಹಿ ನಿಧನಂ ಗತಾಃ।।
ಆ ಮಹಾತ್ಮರ ಕುರಿತಾಗಿ ನೀನು ಶೋಕಿಸಬಾರದು. ಆ ಎಲ್ಲ ನರರ್ಷಭರೂ ಕ್ಷತ್ರಧರ್ಮಪರಾಯಣರಾಗಿದ್ದರು, ಮತ್ತು ಅವರ ಧರ್ಮಕ್ಕನುಸಾರವಾಗಿಯೇ ನಿಧನ ಹೊಂದಿದರು.
15039005a ಭವಿತವ್ಯಮವಶ್ಯಂ ತತ್ಸುರಕಾರ್ಯಮನಿಂದಿತೇ।
15039005c ಅವತೇರುಸ್ತತಃ ಸರ್ವೇ ದೇವಭಾಗೈರ್ಮಹೀತಲಮ್।।
ಅನಿಂದಿತೇ! ಸುರರ ಕಾರ್ಯವಾದ ಅದು ಅವಶ್ಯವಾಗಿಯೂ ಹಾಗೆಯೇ ಆಗಬೇಕಿತ್ತು. ಅವರೆಲ್ಲರೂ ದೇವತೆಗಳ ಅಂಶಗಳಿಂದ ಭೂಮಿಯಮೇಲೆ ಅವತರಿಸಿದ್ದರು.
15039006a ಗಂಧರ್ವಾಪ್ಸರಸಶ್ಚೈವ ಪಿಶಾಚಾ ಗುಹ್ಯರಾಕ್ಷಸಾಃ।
15039006c ತಥಾ ಪುಣ್ಯಜನಾಶ್ಚೈವ ಸಿದ್ಧಾ ದೇವರ್ಷಯೋಽಪಿ ಚ।।
15039007a ದೇವಾಶ್ಚ ದಾನವಾಶ್ಚೈವ ತಥಾ ಬ್ರಹ್ಮರ್ಷಯೋಽಮಲಾಃ।
15039007c ತ ಏತೇ ನಿಧನಂ ಪ್ರಾಪ್ತಾಃ ಕುರುಕ್ಷೇತ್ರೇ ರಣಾಜಿರೇ।।
ಕುರುಕ್ಷೇತ್ರದ ರಣಭೂಮಿಯಲ್ಲಿ ನಿಧನ ಹೊಂದಿದ ಇವರು ಗಂಧರ್ವರೂ, ಅಪ್ಸರೆಯರೂ, ಪಿಶಾಚರೂ, ಗುಹ್ಯರೂ, ರಾಕ್ಷಸರೂ, ಹಾಗೆಯೇ ಪುಣ್ಯಜನರಾದ ಸಿದ್ಧರೂ, ದೇವರ್ಷಿಗಳೂ, ದೇವತೆಗಳೂ, ದಾನವರೂ, ಮತ್ತು ಹಾಗೆಯೇ ಅಮಲ ಬ್ರಹ್ಮರ್ಷಿಗಳೂ ಆಗಿದ್ದರು.
15039008a ಗಂಧರ್ವರಾಜೋ ಯೋ ಧೀಮಾನ್ಧೃತರಾಷ್ಟ್ರ ಇತಿ ಶ್ರುತಃ।
15039008c ಸ ಏವ ಮಾನುಷೇ ಲೋಕೇ ಧೃತರಾಷ್ಟ್ರಃ ಪತಿಸ್ತವ।।
ಧೃತರಾಷ್ಟ್ರನೆಂದು ಖ್ಯಾತಿಹೊಂದಿದ್ದ ಯಾವ ಧೀಮಾನ್ ಗಂಧರ್ವರಾಜನಿದ್ದನೋ ಅವನೇ ಮನುಷ್ಯಲೋಕದಲ್ಲಿ ನಿನ್ನ ಪತಿ ಧೃತರಾಷ್ಟ್ರನಾಗಿದ್ದಾನೆ.
15039009a ಪಾಂಡುಂ ಮರುದ್ಗಣಂ ವಿದ್ಧಿ ವಿಶಿಷ್ಟತಮಮಚ್ಯುತಮ್।
15039009c ಧರ್ಮಸ್ಯಾಂಶೋಽಭವತ್ಕ್ಷತ್ತಾ ರಾಜಾ ಚಾಯಂ ಯುಧಿಷ್ಠಿರಃ।।
ಪಾಂಡುವು ಅತ್ಯಂತ ವಿಶಿಷ್ಠವಾದ ಚ್ಯುತಿಯಿಲ್ಲದ ಮರುದ್ಗಣವೆಂದು ತಿಳಿ. ಕ್ಷತ್ತ ವಿದುರ ಮತ್ತು ಈ ರಾಜಾ ಯುಧಿಷ್ಠಿರನು ಧರ್ಮನ ಅಂಶಗಳಾಗಿದ್ದಾರೆ.
15039010a ಕಲಿಂ ದುರ್ಯೋಧನಂ ವಿದ್ಧಿ ಶಕುನಿಂ ದ್ವಾಪರಂ ತಥಾ।
15039010c ದುಃಶಾಸನಾದೀನ್ವಿದ್ಧಿ ತ್ವಂ ರಾಕ್ಷಸಾನ್ಶುಭದರ್ಶನೇ।।
ದುರ್ಯೋಧನನು ಕಲಿಯೆಂದೂ ಶಕುನಿಯು ದ್ವಾಪರನೆಂದೂ ತಿಳಿ. ಶುಭದರ್ಶನೆಯೇ! ದುಃಶಾಸನಾದಿಗಳು ರಾಕ್ಷಸರೆಂದು ತಿಳಿ.
15039011a ಮರುದ್ಗಣಾದ್ಭೀಮಸೇನಂ ಬಲವಂತಮರಿಂದಮಮ್।
15039011c ವಿದ್ಧಿ ಚ ತ್ವಂ ನರಮೃಷಿಮಿಮಂ ಪಾರ್ಥಂ ಧನಂಜಯಮ್।
15039011e ನಾರಾಯಣಂ ಹೃಷೀಕೇಶಮಶ್ವಿನೌ ಯಮಜಾವುಭೌ।।
ಬಲವಂತ ಅರಿಂದಮ ಭೀಮಸೇನನು ಮರುದ್ಗಣಗಳಿಂದ, ಈ ಪಾರ್ಥ ಧನಂಜಯನು ಋಷಿ ನರನೆಂದೂ, ಹೃಷೀಕೇಶನು ನಾರಯಣನೆಂದೂ, ಮತ್ತು ಈ ಇಬ್ಬರು ಅವಳಿಮಕ್ಕಳು ಅಶ್ವಿನಿಯರ ಅಂಶಜರೆಂದೂ ತಿಳಿ.
15039012a ದ್ವಿಧಾ ಕೃತ್ವಾತ್ಮನೋ ದೇಹಮಾದಿತ್ಯಂ ತಪತಾಂ ವರಮ್।
15039012c ಲೋಕಾಂಶ್ಚ ತಾಪಯಾನಂ ವೈ ವಿದ್ಧಿ ಕರ್ಣಂ ಚ ಶೋಭನೇ।
15039012e ಯಶ್ಚ ವೈರಾರ್ಥಮುದ್ಭೂತಃ ಸಂಘರ್ಷಜನನಸ್ತಥಾ।।
ಶೋಭನೇ! ವೈರವನ್ನು ಹುಟ್ಟಿಸಲು ಮತ್ತು ಸಂಘರ್ಷವನ್ನುಂಟುಮಾಡಲು ಜನಿಸಿದ್ದ ಕರ್ಣನು ತನ್ನ ದೇಹವನ್ನೇ ಎರಡನ್ನಾಗಿಸಿಕೊಂಡ, ಸುಡುವವರಲ್ಲಿ ಶ್ರೇಷ್ಠನಾದ, ಲೋಕಗಳನ್ನು ಸುಡುತ್ತಿರುವ ಆದಿತ್ಯನೆಂದು ತಿಳಿ.
15039013a ಯಶ್ಚ ಪಾಂಡವದಾಯಾದೋ ಹತಃ ಷಡ್ಭಿರ್ಮಹಾರಥೈಃ।
15039013c ಸ ಸೋಮ ಇಹ ಸೌಭದ್ರೋ ಯೋಗಾದೇವಾಭವದ್ದ್ವಿಧಾ।।
ಷಡ್ಮಹಾರಥರಿಂದ ಹತನಾದ ಪಾಂಡವರ ಮಗ ಸೌಭದ್ರನು ಯೋಗದಿಂದ ಎರಡಾಗಿ ಇಲ್ಲಿಗೆ ಬಂದ ಸೋಮನೆಂದು ತಿಳಿ.
15039014a ದ್ರೌಪದ್ಯಾ ಸಹ ಸಂಭೂತಂ ಧೃಷ್ಟದ್ಯುಮ್ನಂ ಚ ಪಾವಕಾತ್।
15039014c ಅಗ್ನೇರ್ಭಾಗಂ ಶುಭಂ ವಿದ್ಧಿ ರಾಕ್ಷಸಂ ತು ಶಿಖಂಡಿನಮ್।।
ದ್ರೌಪದಿಯೊಡನೆ ಅಗ್ನಿಯಿಂದ ಹುಟ್ಟಿದ ಧೃಷ್ಟದ್ಯುಮ್ನನು ಅಗ್ನಿಯ ಶುಭ ಅಂಶದವನು ಮತ್ತು ಶಿಖಂಡಿಯು ರಾಕ್ಷಸನಾಗಿದ್ದನೆಂದು ತಿಳಿ.
15039015a ದ್ರೋಣಂ ಬೃಹಸ್ಪತೇರ್ಭಾಗಂ ವಿದ್ಧಿ ದ್ರೌಣಿಂ ಚ ರುದ್ರಜಮ್।
15039015c ಭೀಷ್ಮಂ ಚ ವಿದ್ಧಿ ಗಾಂಗೇಯಂ ವಸುಂ ಮಾನುಷತಾಂ ಗತಮ್।।
ದ್ರೋಣನು ಬೃಹಸ್ಪತಿಯ ಅಂಶವೆಂದೂ ದ್ರೌಣಿ ಅಶ್ವತ್ಥಾಮನು ರುದ್ರಜನೆಂದೂ ತಿಳಿ. ಗಾಂಗೇಯ ಭೀಷ್ಮನು ಮಾನುಷತ್ವವನ್ನು ಪಡೆದ ವಸುವೆಂದು ತಿಳಿ.
15039016a ಏವಮೇತೇ ಮಹಾಪ್ರಾಜ್ಞೇ ದೇವಾ ಮಾನುಷ್ಯಮೇತ್ಯ ಹಿ।
15039016c ತತಃ ಪುನರ್ಗತಾಃ ಸ್ವರ್ಗಂ ಕೃತೇ ಕರ್ಮಣಿ ಶೋಭನೇ।।
ಮಹಾಪ್ರಾಜ್ಞೇ! ಶೋಭನೇ! ಹೀಗೆ ಈ ದೇವತೆಗಳು ಮಾನುಷತ್ವವನ್ನು ಪಡೆದು ಕಾರ್ಯಗಳು ಮುಗಿದನಂತರ ಪುನಃ ಸ್ವರ್ಗಕ್ಕೆ ತೆರಳಿದ್ದಾರೆ.
15039017a ಯಚ್ಚ ವೋ ಹೃದಿ ಸರ್ವೇಷಾಂ ದುಃಖಮೇನಚ್ಚಿರಂ ಸ್ಥಿತಮ್।
15039017c ತದದ್ಯ ವ್ಯಪನೇಷ್ಯಾಮಿ ಪರಲೋಕಕೃತಾದ್ಭಯಾತ್।।
ಪರಲೋಕದ ಭಯದಿಂದಾಗಿ ನಿಮ್ಮೆಲ್ಲರ ಹೃದಯದಲ್ಲಿ ಬಹುಕಾಲ ನೆಲೆಸಿರುವ ದುಃಖವನ್ನು ಇಂದು ನಾನು ದೂರೀಕರಿಸುತ್ತೇನೆ.
15039018a ಸರ್ವೇ ಭವಂತೋ ಗಚ್ಚಂತು ನದೀಂ ಭಾಗೀರಥೀಂ ಪ್ರತಿ।
15039018c ತತ್ರ ದ್ರಕ್ಷ್ಯಥ ತಾನ್ಸರ್ವಾನ್ಯೇ ಹತಾಸ್ಮಿನ್ರಣಾಜಿರೇ।।
ನೀವೆಲ್ಲರೂ ಭಾಗೀರಥೀ ನದಿಯ ಕಡೆ ಹೊರಡಬೇಕು. ಅಲ್ಲಿ ನಾನು ರಣಾಂಗಣದಲ್ಲಿ ಮಡಿದ ಅವರೆಲ್ಲರನ್ನೂ ಅನ್ಯರನ್ನೂ ತೋರಿಸುತ್ತೇನೆ.”"
15039019 ವೈಶಂಪಾಯನ ಉವಾಚ।
15039019a ಇತಿ ವ್ಯಾಸಸ್ಯ ವಚನಂ ಶ್ರುತ್ವಾ ಸರ್ವೋ ಜನಸ್ತದಾ।
15039019c ಮಹತಾ ಸಿಂಹನಾದೇನ ಗಂಗಾಮಭಿಮುಖೋ ಯಯೌ।।
ವೈಶಂಪಾಯನನು ಹೇಳಿದನು: “ವ್ಯಾಸನ ಈ ಮಾತನ್ನು ಕೇಳಿ ಸರ್ವ ಜನಸ್ತೋಮವೂ ಮಹಾ ಸಿಂಹನಾದದೊಡನೆ ಗಂಗಾಭಿಮುಖವಾಗಿ ಹೊರಟಿತು.
15039020a ಧೃತರಾಷ್ಟ್ರಶ್ಚ ಸಾಮಾತ್ಯಃ ಪ್ರಯಯೌ ಸಹ ಪಾಂಡವೈಃ।
15039020c ಸಹಿತೋ ಮುನಿಶಾರ್ದೂಲೈರ್ಗಂಧರ್ವೈಶ್ಚ ಸಮಾಗತೈಃ।।
ಪಾಂಡವರೊಂದಿಗೆ ಮತ್ತು ಅಮಾತ್ಯರೊಂದಿಗೆ ಧೃತರಾಷ್ಟ್ರನೂ, ಅಲ್ಲಿ ಸೇರಿದ್ದ ಮುನಿಶಾರ್ದೂಲರು ಮತ್ತು ಗಂಧರ್ವರನ್ನು ಕೂಡಿಕೊಂಡು ಹೊರಟರು.
15039021a ತತೋ ಗಂಗಾಂ ಸಮಾಸಾದ್ಯ ಕ್ರಮೇಣ ಸ ಜನಾರ್ಣವಃ।
15039021c ನಿವಾಸಮಕರೋತ್ಸರ್ವೋ ಯಥಾಪ್ರೀತಿ ಯಥಾಸುಖಮ್।।
ಕ್ರಮೇಣ ಆ ಜನಸಾಗರವು ಗಂಗೆಯನ್ನು ಸೇರಿ ಅಲ್ಲಿ ಯಥಾಪ್ರೀತಿಯಾಗಿ ಯಥಾಸುಖವಾಗಿ ಬೀಡುಬಿಟ್ಟಿತು.
15039022a ರಾಜಾ ಚ ಪಾಂಡವೈಃ ಸಾರ್ಧಮಿಷ್ಟೇ ದೇಶೇ ಸಹಾನುಗಃ।
15039022c ನಿವಾಸಮಕರೋದ್ಧೀಮಾನ್ಸಸ್ತ್ರೀವೃದ್ಧಪುರಃಸರಃ।।
ಧೀಮಂತ ರಾಜಾ ಯುಧಿಷ್ಠಿರನು ಪಾಂಡವರೊಡನೆ, ತನ್ನ ಅನುಯಾಯಿಗಳಿಂದೊಡಗೂಡಿ, ಸ್ತ್ರೀಯರು ಮತ್ತು ವೃದ್ಧರನ್ನು ಮುಂದಿರಿಸಿಕೊಂಡು ಇಷ್ಟ ಪ್ರದೇಶದಲ್ಲಿ ಬೀಡುಬಿಟ್ಟನು.
15039023a ಜಗಾಮ ತದಹಶ್ಚಾಪಿ ತೇಷಾಂ ವರ್ಷಶತಂ ಯಥಾ।
15039023c ನಿಶಾಂ ಪ್ರತೀಕ್ಷಮಾಣಾನಾಂ ದಿದೃಕ್ಷೂಣಾಂ ಮೃತಾನ್ನೃಪಾನ್।।
ಮೃತರಾಗಿದ್ದ ನೃಪರನ್ನು ನೋಡಲು ರಾತ್ರಿಯನ್ನೇ ಕಾಯುತ್ತಿದ್ದ ಅವರಿಗೆ ಆ ಒಂದು ಹಗಲೂ ಕೂಡ ನೂರು ವರ್ಷಗಳಂತೆ ಕಳೆದವು.
15039024a ಅಥ ಪುಣ್ಯಂ ಗಿರಿವರಮಸ್ತಮಭ್ಯಗಮದ್ರವಿಃ।
15039024c ತತಃ ಕೃತಾಭಿಷೇಕಾಸ್ತೇ ನೈಶಂ ಕರ್ಮ ಸಮಾಚರನ್।।
ಬಳಿಕ ರವಿಯು ಪುಣ್ಯಗಿರಿಶ್ರೇಷ್ಠನನ್ನು ಸೇರಿದ ನಂತರ ಅವರೆಲ್ಲರೂ ಸ್ನಾನಮಾಡಿ ಸಂಧ್ಯಾವಂದನಾದಿ ಕರ್ಮಗಳನ್ನೆಸಗಿದರು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಪುತ್ರದರ್ಶನಪರ್ವಣಿ ಗಂಗಾತಿರಗಮನೇ ಏಕೋನಚತ್ವಾರಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಪುತ್ರದರ್ಶನಪರ್ವದಲ್ಲಿ ಗಂಗಾತೀರಗಮನ ಎನ್ನುವ ಮೂವತ್ತೊಂಭತ್ತನೇ ಅಧ್ಯಾಯವು.