038: ವ್ಯಾಸಕುಂತೀಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆಶ್ರಮವಾಸಿಕ ಪರ್ವ

ಪುತ್ರದರ್ಶನ ಪರ್ವ

ಅಧ್ಯಾಯ 38

ಸಾರ

ಕುಂತೀ ಮತ್ತು ವ್ಯಾಸರ ಸಂವಾದ (1-23).

15038001 ಕುಂತ್ಯುವಾಚ।
15038001a ಭಗವನ್ಶ್ವಶುರೋ ಮೇಽಸಿ ದೈವತಸ್ಯಾಪಿ ದೈವತಮ್।
15038001c ಸ ಮೇ ದೇವಾತಿದೇವಸ್ತ್ವಂ ಶೃಣು ಸತ್ಯಾಂ ಗಿರಂ ಮಮ।।

ಕುಂತಿಯು ಹೇಳಿದಳು: “ಭಗವನ್! ನೀನು ನನ್ನ ಮಾವ! ದೇವತೆಗಳಿಗೂ ದೇವತೆಯಾಗಿದ್ದೀಯೆ. ನನ್ನ ಪಾಲಿಗೆ ದೇವಾತಿದೇವನಾಗಿದ್ದೀಯೆ. ನನ್ನ ಈ ಸತ್ಯದ ಮಾತನ್ನು ಕೇಳು!

15038002a ತಪಸ್ವೀ ಕೋಪನೋ ವಿಪ್ರೋ ದುರ್ವಾಸಾ ನಾಮ ಮೇ ಪಿತುಃ।
15038002c ಭಿಕ್ಷಾಮುಪಾಗತೋ ಭೋಕ್ತುಂ ತಮಹಂ ಪರ್ಯತೋಷಯಮ್।।

ತಪಸ್ವಿಯೂ ಕೋಪಿಷ್ಟನೂ ಆಗಿದ್ದ ದುರ್ವಾಸನೆಂಬ ಹೆಸರಿನ ವಿಪ್ರನು ನನ್ನ ತಂದೆಯಲ್ಲಿಗೆ ಭಿಕ್ಷೆಯನ್ನು ಸೇವಿಸಲು ಆಗಮಿಸಿದ್ದಾಗ ನಾನು ಅವನನ್ನು ಸೇವೆಗಳಿಂದ ತೃಪ್ತಿಗೊಳಿಸಿದ್ದೆನು.

15038003a ಶೌಚೇನ ತ್ವಾಗಸಸ್ತ್ಯಾಗೈಃ ಶುದ್ಧೇನ ಮನಸಾ ತಥಾ।
15038003c ಕೋಪಸ್ಥಾನೇಷ್ವಪಿ ಮಹತ್ಸ್ವಕುಪ್ಯಂ ನ ಕದಾ ಚನ।।

ಆಗ ನಾನು ಶೌಚಾಚಾರಗಳನ್ನು ಪಾಲಿಸುತ್ತಾ, ಯಾವುದೇ ಅಪರಾಧಗಳನ್ನೂ ಎಸಗದೇ ಶುದ್ಧವಾದ ಮನಸ್ಸಿನಿಂದ, ಅತ್ಯಂತ ಕೋಪಗೊಳ್ಳುವ ಸನ್ನಿವೇಶಗಳು ಬಂದರೂ ಕೋಪಗೊಳ್ಳದೇ ಅವನ ಸೇವೆಗೈದೆನು.

15038004a ಸ ಮೇ ವರಮದಾತ್ಪ್ರೀತಃ ಕೃತಮಿತ್ಯಹಮಬ್ರುವಮ್।
15038004c ಅವಶ್ಯಂ ತೇ ಗ್ರಹೀತವ್ಯಮಿತಿ ಮಾಂ ಸೋಽಬ್ರವೀದ್ವಚಃ।।

ನನ್ನ ಮೇಲೆ ಪ್ರೀತನಾದ ಅವನು ವರವನ್ನು ನೀಡುತ್ತಾ “ನನ್ನಿಂದ ಇದನ್ನು ನೀನು ಅವಶ್ಯವಾಗಿಯೂ ಪಡೆದುಕೊಳ್ಳಬೇಕು!” ಎಂದು ಹೇಳಿದನು.

15038005a ತತಃ ಶಾಪಭಯಾದ್ವಿಪ್ರಮವೋಚಂ ಪುನರೇವ ತಮ್।
15038005c ಏವಮಸ್ತ್ವಿತಿ ಚ ಪ್ರಾಹ ಪುನರೇವ ಸ ಮಾಂ ದ್ವಿಜಃ।।

ಆಗ ನಾನು ಶಾಪಭಯದಿಂದ ಆ ವಿಪ್ರನಿಗೆ ಹಾಗೆಯೇ ಆಗಲಿ ಎಂದು ಪುನಃ ಹೇಳಿದೆನು. ಆ ದ್ವಿಜನು ಪುನಃ ನನ್ನಲ್ಲಿ ಹೇಳಿದನು:

15038006a ಧರ್ಮಸ್ಯ ಜನನೀ ಭದ್ರೇ ಭವಿತ್ರೀ ತ್ವಂ ವರಾನನೇ।
15038006c ವಶೇ ಸ್ಥಾಸ್ಯಂತಿ ತೇ ದೇವಾ ಯಾಂಸ್ತ್ವಮಾವಾಹಯಿಷ್ಯಸಿ।।

“ಭದ್ರೇ! ವರಾನನೇ! ನೀನು ಧರ್ಮನಿಗೆ ಜನನಿಯಾಗುವೆ! ನೀನು ಯಾವ ದೇವತೆಗಳನ್ನು ಆಹ್ವಾನಿಸುವೆಯೋ ಅವರು ನಿನ್ನ ವಶರಾಗಿ ಬರುತ್ತಾರೆ!”

15038007a ಇತ್ಯುಕ್ತ್ವಾಂತರ್ಹಿತೋ ವಿಪ್ರಸ್ತತೋಽಹಂ ವಿಸ್ಮಿತಾಭವಮ್।
15038007c ನ ಚ ಸರ್ವಾಸ್ವವಸ್ಥಾಸು ಸ್ಮೃತಿರ್ಮೇ ವಿಪ್ರಣಶ್ಯತಿ।।

ಹೀಗೆ ಹೇಳಿ ಆ ವಿಪ್ರನು ಅಂತರ್ಧಾನನಾದನು. ಆಗ ನಾನು ವಿಸ್ಮಿತಳಾದೆನು. ಎಲ್ಲ ಅವಸ್ಥೆಗಳಲ್ಲಿಯೂ ಅವನ ಆ ಮಾತು ನನ್ನ ನೆನಪಿನಿಂದ ನಾಶವಾಗುತ್ತಿರಲಿಲ್ಲ.

15038008a ಅಥ ಹರ್ಮ್ಯತಲಸ್ಥಾಹಂ ರವಿಮುದ್ಯಂತಮೀಕ್ಷತೀ।
15038008c ಸಂಸ್ಮೃತ್ಯ ತದೃಷೇರ್ವಾಕ್ಯಂ ಸ್ಪೃಹಯಂತೀ ದಿವಾಕರಮ್।
15038008e ಸ್ಥಿತಾಹಂ ಬಾಲಭಾವೇನ ತತ್ರ ದೋಷಮಬುಧ್ಯತೀ।।

ಒಮ್ಮೆ ನಾನು ಮಹಡಿಯ ಮೇಲಿದ್ದಾಗ ಉದಯಿಸುತ್ತಿರುವ ರವಿಯನ್ನೇ ನೋಡುತ್ತಿದ್ದೆನು. ಆಗ ಆ ಋಷಿಯ ಮಾತನ್ನು ಸ್ಮರಿಸಿಕೊಂಡು ದಿವಾಕರನನ್ನು ಬಯಸಿದೆನು. ಆಗ ನಾನು ಇನ್ನೂ ಬಾಲಭಾವದಲ್ಲಿದ್ದೆನು. ದೋಷಗಳನ್ನು ತಿಳಿದುಕೊಳ್ಳುವ ಹಾಗಿರಲಿಲ್ಲ.

15038009a ಅಥ ದೇವಃ ಸಹಸ್ರಾಂಶುರ್ಮತ್ಸಮೀಪಗತೋಽಭವತ್।
15038009c ದ್ವಿಧಾ ಕೃತ್ವಾತ್ಮನೋ ದೇಹಂ ಭೂಮೌ ಚ ಗಗನೇಽಪಿ ಚ।
15038009e ತತಾಪ ಲೋಕಾನೇಕೇನ ದ್ವಿತೀಯೇನಾಗಮಚ್ಚ ಮಾಮ್।।

ಕೂಡಲೇ ಸಹಸ್ರಾಂಶು ದೇವನು ನನ್ನ ಸಮೀಪಕ್ಕೆ ಬಂದೇಬಿಟ್ಟನು. ಅವನು ತನ್ನ ದೇಹವನ್ನು ಗಗನದಲ್ಲೊಂದು ಮತ್ತು ಭೂಮಿಯಲ್ಲೊಂದು ಹೀಗೆ ಎರಡನ್ನಾಗಿ ಮಾಡಿಕೊಂಡಿದ್ದನು. ಒಂದರಿಂದ ಲೋಕಗಳನ್ನು ಸುಡುತ್ತಿದ್ದವನು ತನ್ನ ಎರಡನೆಯ ರೂಪದಿಂದ ನನ್ನ ಬಳಿ ಬಂದನು.

15038010a ಸ ಮಾಮುವಾಚ ವೇಪಂತೀಂ ವರಂ ಮತ್ತೋ ವೃಣೀಷ್ವ ಹ।
15038010c ಗಮ್ಯತಾಮಿತಿ ತಂ ಚಾಹಂ ಪ್ರಣಮ್ಯ ಶಿರಸಾವದಮ್।।

ತರತರನೆ ನಡುಗುತ್ತಿದ್ದ ನನಗೆ ಅವನು “ವರವನ್ನು ಕೇಳಿಕೋ!” ಎಂದನು. ಆದರೆ ನಾನು ಅವನಿಗೆ ಶಿರಬಾಗಿ ನಮಸ್ಕರಿಸಿ “ಹೋಗಬೇಕು!” ಎಂದು ಕೇಳಿಕೊಂಡೆನು.

15038011a ಸ ಮಾಮುವಾಚ ತಿಗ್ಮಾಂಶುರ್ವೃಥಾಹ್ವಾನಂ ನ ತೇ ಕ್ಷಮಮ್।
15038011c ಧಕ್ಷ್ಯಾಮಿ ತ್ವಾಂ ಚ ವಿಪ್ರಂ ಚ ಯೇನ ದತ್ತೋ ವರಸ್ತವ।।

ಆಗ ತಿಗ್ಮಾಂಶುವು ನನಗೆ ಹೇಳಿದನು: “ವೃಥಾ ಆಹ್ವಾನವನ್ನು ನಾನು ಕ್ಷಮಿಸುವುದಿಲ್ಲ! ನಿನ್ನನ್ನೂ ಮತ್ತು ನಿನಗೆ ಈ ವರವನ್ನಿತ್ತ ವಿಪ್ರನನ್ನೂ ಸುಟ್ಟುಬಿಡುತ್ತೇನೆ!”

15038012a ತಮಹಂ ರಕ್ಷತೀ ವಿಪ್ರಂ ಶಾಪಾದನಪರಾಧಿನಮ್।
15038012c ಪುತ್ರೋ ಮೇ ತ್ವತ್ಸಮೋ ದೇವ ಭವೇದಿತಿ ತತೋಽಬ್ರುವಮ್।।

ಅನಪರಾಧಿಯಾದ ಆ ವಿಪ್ರನನ್ನು ರಕ್ಷಿಸಲೋಸುಗ ನಾನು ಅವನಿಗೆ “ದೇವ! ನನಗೆ ನಿನ್ನ ಸಮನಾದ ಮಗನಾಗಲಿ!” ಎಂದು ಹೇಳಿದೆನು.

15038013a ತತೋ ಮಾಂ ತೇಜಸಾವಿಶ್ಯ ಮೋಹಯಿತ್ವಾ ಚ ಭಾನುಮಾನ್।
15038013c ಉವಾಚ ಭವಿತಾ ಪುತ್ರಸ್ತವೇತ್ಯಭ್ಯಗಮದ್ದಿವಮ್।।

ಆಗ ಭಾನುಮಂತನು ನನ್ನನ್ನು ಮೋಹಗೊಳಿಸಿ ತೇಜಸ್ಸಿನಿಂದ ನನ್ನನ್ನು ಪ್ರವೇಶಿಸಿದನು. “ನಿನಗೊಬ್ಬ ಮಗನಾಗುವನು!” ಎಂದು ಹೇಳಿ ಆಕಾಶಕ್ಕೆ ಹೊರಟುಹೋದನು.

15038014a ತತೋಽಹಮಂತರ್ಭವನೇ ಪಿತುರ್ವೃತ್ತಾಂತರಕ್ಷಿಣೀ।
15038014c ಗೂಢೋತ್ಪನ್ನಂ ಸುತಂ ಬಾಲಂ ಜಲೇ ಕರ್ಣಮವಾಸೃಜಮ್।।

ಈ ವೃತ್ತಾಂತವನ್ನು ತಂದೆಯಿಂದ ರಕ್ಷಿಸಲೋಸುಗ ನಾನು ಭವನದ ಒಳಗೇ ಇದ್ದುಬಿಟ್ಟೆನು. ಗುಟ್ಟಿನಲ್ಲಿ ಹುಟ್ಟಿದ ನನ್ನ ಮಗ ಕರ್ಣ ಬಾಲಕನನ್ನು ನೀರಿನಲ್ಲಿ ಬಿಟ್ಟುಬಿಟ್ಟೆನು.

15038015a ನೂನಂ ತಸ್ಯೈವ ದೇವಸ್ಯ ಪ್ರಸಾದಾತ್ಪುನರೇವ ತು।
15038015c ಕನ್ಯಾಹಮಭವಂ ವಿಪ್ರ ಯಥಾ ಪ್ರಾಹ ಸ ಮಾಮೃಷಿಃ।।

ವಿಪ್ರ! ಆ ಋಷಿಯು ನನಗೆ ಹೇಗೆ ಹೇಳಿದ್ದನೋ ಹಾಗೆ ದೇವನ ಪ್ರಸಾದದಿಂದ ಪುನಃ ನಾನು ಕನ್ಯೆಯಾಗಿಯೇ ಉಳಿದುಕೊಂಡೆನು.

15038016a ಸ ಮಯಾ ಮೂಢಯಾ ಪುತ್ರೋ ಜ್ಞಾಯಮಾನೋಽಪ್ಯುಪೇಕ್ಷಿತಃ।
15038016c ತನ್ಮಾಂ ದಹತಿ ವಿಪ್ರರ್ಷೇ ಯಥಾ ಸುವಿದಿತಂ ತವ।।

ಮೂರ್ಖಳಾದ ನಾನು ಕರ್ಣನು ನನ್ನ ಮಗನೆಂದು ತಿಳಿದಿದ್ದರೂ ಅವನನ್ನು ಉಪೇಕ್ಷಿಸಿಬಿಟ್ಟೆನು. ವಿಪ್ರರ್ಷೇ! ಅದು ನನ್ನನ್ನು ಸುಡುತ್ತಿದೆ. ನಿನಗೆ ಇದೆಲ್ಲವೂ ಚೆನ್ನಾಗಿಯೇ ತಿಳಿದಿದೆ.

15038017a ಯದಿ ಪಾಪಮಪಾಪಂ ವಾ ತದೇತದ್ವಿವೃತಂ ಮಯಾ।
15038017c ತನ್ಮೇ ಭಯಂ ತ್ವಂ ಭಗವನ್ವ್ಯಪನೇತುಮಿಹಾರ್ಹಸಿ।।

ನಾನು ಮಾಡಿದ ಕಾರ್ಯವು ಪಾಪಕರವೋ-ಪುಣ್ಯಕರವೋ - ನಡೆದಹಾಗೆ ನಿನಗೆ ಹೇಳಿದ್ದೇನೆ. ಭಗವನ್! ನನ್ನ ಈ ಭಯವನ್ನು ನೀಗಿಸಬೇಕು!

15038018a ಯಚ್ಚಾಸ್ಯ ರಾಜ್ಞೋ ವಿದಿತಂ ಹೃದಿಸ್ಥಂ ಭವತೋಽನಘ।
15038018c ತಂ ಚಾಯಂ ಲಭತಾಂ ಕಾಮಮದ್ಯೈವ ಮುನಿಸತ್ತಮ।।

ಅನಘ! ಮುನಿಸತ್ತಮ! ರಾಜನ ಹೃದಯದಲ್ಲಿರುವುದನ್ನೂ ನೀನು ತಿಳಿದುಕೊಂಡಿರುವೆ. ಅದೂ ಕೂಡ ಇಂದೇ ಈಡೇರುವಂತೆ ಮಾಡು!”

15038019a ಇತ್ಯುಕ್ತಃ ಪ್ರತ್ಯುವಾಚೇದಂ ವ್ಯಾಸೋ ವೇದವಿದಾಂ ವರಃ।
15038019c ಸಾಧು ಸರ್ವಮಿದಂ ತಥ್ಯಮೇವಮೇವ ಯಥಾತ್ಥ ಮಾಮ್।।

ಅವಳು ಹೀಗೆ ಹೇಳಲು ವೇದವಿದರಲ್ಲಿ ಶ್ರೇಷ್ಠ ವ್ಯಾಸನು ಇಂತೆಂದನು: “ಸಾಧು! ಇವೆಲ್ಲವೂ ಸರಿಯಾಗಿಯೇ ಇವೆ. ಇವು ಹಾಗೆಯೇ ಆಗಬೇಕಾಗಿದ್ದಿತ್ತು.

15038020a ಅಪರಾಧಶ್ಚ ತೇ ನಾಸ್ತಿ ಕನ್ಯಾಭಾವಂ ಗತಾ ಹ್ಯಸಿ।
15038020c ದೇವಾಶ್ಚೈಶ್ವರ್ಯವಂತೋ ವೈ ಶರೀರಾಣ್ಯಾವಿಶಂತಿ ವೈ।।

ಇದರಲ್ಲಿ ನಿನ್ನ ಅಪರಾಧವೇನೂ ಇಲ್ಲ. ಆಗ ನೀನು ಕನ್ಯಾಭಾವದಲ್ಲಿದ್ದೆ. ದೇವತೆಗಳು ಸಿದ್ಧಿಗಳ ಐಶ್ವರ್ಯವಂತರು. ಇತರರ ಶರೀರಗಳನ್ನು ಪ್ರವೇಶಿಸಬಲ್ಲರು.

15038021a ಸಂತಿ ದೇವನಿಕಾಯಾಶ್ಚ ಸಂಕಲ್ಪಾಜ್ಜನಯಂತಿ ಯೇ।
15038021c ವಾಚಾ ದೃಷ್ಟ್ಯಾ ತಥಾ ಸ್ಪರ್ಶಾತ್ಸಂಘರ್ಷೇಣೇತಿ ಪಂಚಧಾ।।

ಸಂಕಲ್ಪ, ವಚನ, ದೃಷ್ಟಿ, ಸ್ಪರ್ಷ ಮತ್ತು ಸಮಾಗಮ - ಈ ಐದು ವಿಧಗಳಲ್ಲಿ ಮಕ್ಕಳನ್ನು ಹುಟ್ಟಿಸುವ ದೇವಸಂಘಗಳಿವೆ.

15038022a ಮನುಷ್ಯಧರ್ಮೋ ದೈವೇನ ಧರ್ಮೇಣ ನ ಹಿ ಯುಜ್ಯತೇ।
15038022c ಇತಿ ಕುಂತಿ ವ್ಯಜಾನೀಹಿ ವ್ಯೇತು ತೇ ಮಾನಸೋ ಜ್ವರಃ।।

ಮನುಷ್ಯಧರ್ಮವು ದೇವಧರ್ಮದೊಡನೆ ಸೇರುವುದಿಲ್ಲ. ಕುಂತಿ! ಇದನ್ನು ಅರ್ಥಮಾಡಿಕೊಂಡು ನಿನ್ನ ಮಾನಸಿಕ ಜ್ವರವನ್ನು ಕಳೆದುಕೋ!

15038023a ಸರ್ವಂ ಬಲವತಾಂ ಪಥ್ಯಂ ಸರ್ವಂ ಬಲವತಾಂ ಶುಚಿ।
15038023c ಸರ್ವಂ ಬಲವತಾಂ ಧರ್ಮಃ ಸರ್ವಂ ಬಲವತಾಂ ಸ್ವಕಮ್।।

ಬಲವಂತರ ಎಲ್ಲವೂ ಒಳ್ಳೆಯದೇ! ಬಲವಂತರ ಎಲ್ಲವೂ ಶುಚಿಯಾದುದೇ! ಬಲವಂತರು ಮಾಡಿದ ಎಲ್ಲವೂ ಧರ್ಮ! ಮತ್ತು ಎಲ್ಲವೂ ಬಲವಂತರದ್ದೇ ಆಗಿರುತ್ತದೆ!”"

ಸಮಾಪ್ತಿ

ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಪುತ್ರದರ್ಶನಪರ್ವಣಿ ವ್ಯಾಸಕುಂತೀಸಂವಾದೇ ಅಷ್ಟತ್ರಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಪುತ್ರದರ್ಶನಪರ್ವದಲ್ಲಿ ವ್ಯಾಸಕುಂತೀಸಂವಾದ ಎನ್ನುವ ಮೂವತ್ತೆಂಟನೇ ಅಧ್ಯಾಯವು.