ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆಶ್ರಮವಾಸಿಕ ಪರ್ವ
ಪುತ್ರದರ್ಶನ ಪರ್ವ
ಅಧ್ಯಾಯ 37
ಸಾರ
ಯುದ್ಧದಲ್ಲಿ ಮೃತರಾದವರನ್ನು ತೋರಿಸಬೇಕೆಂದು ಗಾಂಧಾರಿಯು ವ್ಯಾಸನಲ್ಲಿ ಕೇಳಿಕೊಂಡಿದುದು (1-14). ಗಾಂಧರಿಯ ಮಾತುಗಳನ್ನು ಕೇಳಿ ಕರ್ಣನನ್ನು ನೆನೆಸಿಕೊಂಡು ದುಃಖಿತಳಾದ ಕುಂತಿಗೆ “ನಿನ್ನ ಮನಸ್ಸಿನಲ್ಲಿರುವುದನ್ನು ಇದ್ದಹಾಗೆ ಹೇಳು!" ಎಂದು ವ್ಯಾಸನು ಕೇಳಿದುದು (15-18).
15037001 ವೈಶಂಪಾಯನ ಉವಾಚ।
15037001a ತಚ್ಛೃತ್ವಾ ವಿವಿಧಂ ತಸ್ಯ ರಾಜರ್ಷೇಃ ಪರಿದೇವಿತಮ್।
15037001c ಪುನರ್ನವೀಕೃತಃ ಶೋಕೋ ಗಾಂಧಾರ್ಯಾ ಜನಮೇಜಯ।।
ವೈಶಂಪಾಯನನು ಹೇಳಿದನು: “ಜನಮೇಜಯ! ರಾಜರ್ಷಿಯ ವಿಧವಿಧವಾದ ಆ ಪರಿವೇದನೆಯನ್ನು ಕೇಳಿ ಗಾಂಧಾರಿಯ ಶೋಕವೂ ನವೀಕೃತವಾಯಿತು.
15037002a ಕುಂತ್ಯಾ ದ್ರುಪದಪುತ್ರ್ಯಾಶ್ಚ ಸುಭದ್ರಾಯಾಸ್ತಥೈವ ಚ।
15037002c ತಾಸಾಂ ಚ ವರನಾರೀಣಾಂ ವಧೂನಾಂ ಕೌರವಸ್ಯ ಹ।।
ಹಾಗೆಯೇ ಕುಂತಿ, ದ್ರುಪದಪುತ್ರಿ, ಸುಭದ್ರೆ, ಮತ್ತು ಕೌರವನ ಸುಂದರ ಸೊಸೆಯಂದಿರ ದುಃಖವೂ ನವೀಕೃತವಾಯಿತು.
15037003a ಪುತ್ರಶೋಕಸಮಾವಿಷ್ಟಾ ಗಾಂಧಾರೀ ತ್ವಿದಮಬ್ರವೀತ್।
15037003c ಶ್ವಶುರಂ ಬದ್ಧನಯನಾ ದೇವೀ ಪ್ರಾಂಜಲಿರುತ್ಥಿತಾ।।
ಕಣ್ಣುಗಳಿಗೆ ಬಟ್ಟೆಯನ್ನು ಕಟ್ಟಿಕೊಂಡಿದ್ದ ದೇವೀ ಗಾಂಧಾರಿಯು ಪುತ್ರಶೋಕದ ಆವೇಶದಿಂದ ಎದ್ದು ನಿಂತು ಕೈಮುಗಿದು ತನ್ನ ಮಾವ ವ್ಯಾಸನಿಗೆ ಹೇಳಿದಳು:
15037004a ಷೋಡಶೇಮಾನಿ ವರ್ಷಾಣಿ ಗತಾನಿ ಮುನಿಪುಂಗವ।
15037004c ಅಸ್ಯ ರಾಜ್ಞೋ ಹತಾನ್ಪುತ್ರಾನ್ಶೋಚತೋ ನ ಶಮೋ ವಿಭೋ।।
“ವಿಭೋ! ಮುನಿಪುಂಗವ! ಈ ರಾಜನು ಪುತ್ರರನ್ನು ಕಳೆದುಕೊಂಡು ಶೋಕಿಸುತ್ತಾ ಹದಿನಾರು ವರ್ಷಗಳು ಕಳೆದುಹೋದವು. ಆದರೂ ಅವನಿಗೆ ಶಾಂತಿಯಿಲ್ಲದಾಗಿದೆ.
15037005a ಪುತ್ರಶೋಕಸಮಾವಿಷ್ಟೋ ನಿಃಶ್ವಸನ್ ಹ್ಯೇಷ ಭೂಮಿಪಃ।
15037005c ನ ಶೇತೇ ವಸತೀಃ ಸರ್ವಾ ಧೃತರಾಷ್ಟ್ರೋ ಮಹಾಮುನೇ।।
ಮಹಾಮುನೇ! ಪುತ್ರಶೋಕದಿಂದ ಸಮಾವಿಷ್ಟನಾಗಿ ಈ ಭೂಮಿಪ ಧೃತರಾಷ್ಟ್ರನು ಇಡೀ ರಾತ್ರಿ ನಿಟ್ಟುಸಿರು ಬಿಡುತ್ತಲೇ ಇರುತ್ತಾನೆ. ನಿದ್ರೆಯನ್ನೇ ಮಾಡುವುದಿಲ್ಲ.
15037006a ಲೋಕಾನನ್ಯಾನ್ಸಮರ್ಥೋಽಸಿ ಸ್ರಷ್ಟುಂ ಸರ್ವಾಂಸ್ತಪೋಬಲಾತ್।
15037006c ಕಿಮು ಲೋಕಾಂತರಗತಾನ್ರಾಜ್ಞೋ ದರ್ಶಯಿತುಂ ಸುತಾನ್।।
ನಿನ್ನ ತಪೋಬಲದಿಂದ ಅನ್ಯ ಸರ್ವ ಲೋಕಗಳನ್ನೇ ಸೃಷ್ಟಿಸಲು ಸಮರ್ಥನಾಗಿರುವೆ. ಇನ್ನು ಬೇರೆಯೇ ಲೋಕಕ್ಕೆ ಹೋಗಿರುವ ಮಕ್ಕಳನ್ನು ರಾಜನಿಗೆ ತೋರಿಸುವುದು ಯಾವ ಮಹಾ ದೊಡ್ಡ ವಿಷಯ?
15037007a ಇಯಂ ಚ ದ್ರೌಪದೀ ಕೃಷ್ಣಾ ಹತಜ್ಞಾತಿಸುತಾ ಭೃಶಮ್।
15037007c ಶೋಚತ್ಯತೀವ ಸಾಧ್ವೀ ತೇ ಸ್ನುಷಾಣಾಂ ದಯಿತಾ ಸ್ನುಷಾ।।
ಸೊಸೆಯಂದಿರಲ್ಲಿಯೇ ಅತ್ಯಂತ ಪ್ರಿಯಸೊಸೆಯಾಗಿರುವ ಸಾಧ್ವೀ ದ್ರೌಪದೀ ಕೃಷ್ಣೆಯೂ ಇಲ್ಲಿ ಮಕ್ಕಳು-ಬಾಂಧವರನ್ನು ಕಳೆದುಕೊಂಡು ಅತೀವವಾಗಿ ಶೋಕಿಸುತ್ತಿದ್ದಾಳೆ.
15037008a ತಥಾ ಕೃಷ್ಣಸ್ಯ ಭಗಿನೀ ಸುಭದ್ರಾ ಭದ್ರಭಾಷಿಣೀ।
15037008c ಸೌಭದ್ರವಧಸಂತಪ್ತಾ ಭೃಶಂ ಶೋಚತಿ ಭಾಮಿನೀ।।
ಹಾಗೆಯೇ ಕೃಷ್ಣನ ತಂಗಿ, ಭದ್ರಭಾಷಿಣೀ ಭಾಮಿನೀ ಸುಭದ್ರೆಯೂ ಕೂಡ ಸೌಭದ್ರನ ವಧೆಯಿಂದ ಸಂತಪ್ತಳಾಗಿ ತುಂಬಾ ಶೋಕಿಸುತ್ತಿದ್ದಾಳೆ.
15037009a ಇಯಂ ಚ ಭೂರಿಶ್ರವಸೋ ಭಾರ್ಯಾ ಪರಮದುಃಖಿತಾ।
15037009c ಭರ್ತೃವ್ಯಸನಶೋಕಾರ್ತಾ ನ ಶೇತೇ ವಸತೀಃ ಪ್ರಭೋ।।
ಪ್ರಭೋ! ಪರಮದುಃಖಿತಳಾಗಿರುವ ಭೂರಿಶ್ರವಸನ ಈ ಭಾರ್ಯೆಯೂ ಕೂಡ ಪತಿಯ ವ್ಯಸನಶೋಕಾರ್ತಳಾಗಿ ನಿದ್ದೆಮಾಡುತ್ತಿಲ್ಲ!
15037010a ಯಸ್ಯಾಸ್ತು ಶ್ವಶುರೋ ಧೀಮಾನ್ಬಾಹ್ಲೀಕಃ ಸ ಕುರೂದ್ವಹಃ।
15037010c ನಿಹತಃ ಸೋಮದತ್ತಶ್ಚ ಪಿತ್ರಾ ಸಹ ಮಹಾರಣೇ।।
ಮಾವ ಧೀಮಾನ್ ಕುರೂದ್ವಹ ಬಾಹ್ಲೀಕನೂ ಮತ್ತು ತಂದೆಯೊಂದಿಗೆ ಸೋಮದತ್ತನೂ ಮಹಾರಣದಲ್ಲಿ ಹತರಾದರು.
15037011a ಶ್ರೀಮಚ್ಚಾಸ್ಯ ಮಹಾಬುದ್ಧೇಃ ಸಂಗ್ರಾಮೇಷ್ವಪಲಾಯಿನಃ।
15037011c ಪುತ್ರಸ್ಯ ತೇ ಪುತ್ರಶತಂ ನಿಹತಂ ಯದ್ರಣಾಜಿರೇ।।
ರಣಾಂಗಣದಲ್ಲಿ ನಿನ್ನ ಪುತ್ರನ ನೂರು ಮಕ್ಕಳು - ಶ್ರೀಮಂತರೂ, ಮಹಾಬುದ್ಧಿಯುಳ್ಳವರೂ, ಸಂಗ್ರಾಮದಲ್ಲಿ ಪಲಾಯನಮಾಡದಿಲ್ಲದಿದ್ದವರೂ ಆಗಿದ್ದವರು - ಹತರಾದರು.
15037012a ತಸ್ಯ ಭಾರ್ಯಾಶತಮಿದಂ ಪುತ್ರಶೋಕಸಮಾಹತಮ್।
15037012c ಪುನಃ ಪುನರ್ವರ್ಧಯಾನಂ ಶೋಕಂ ರಾಜ್ಞೋ ಮಮೈವ ಚ।
15037012e ತೇನಾರಂಭೇಣ ಮಹತಾ ಮಾಮುಪಾಸ್ತೇ ಮಹಾಮುನೇ।।
ಶೋಕದಿಂದ ಪೀಡಿತರಾದ, ಆ ನೂರು ಭಾರ್ಯೆಯರೂ ಇಲ್ಲಿದ್ದಾರೆ. ಇವರೆಲ್ಲರೂ ನನ್ನ ಮತ್ತು ರಾಜನ ದುಃಖವನ್ನು ಪುನಃ ಪುನಃ ಹೆಚ್ಚಿಸುತ್ತಿದ್ದಾರೆ. ಮಹಾಮುನೇ! ಮಹಾ ಉದ್ವೇಗದಿಂದ ಕೂಡಿದ ಅವರು ನನ್ನ ಸುತ್ತಲೂ ಕುಳಿತುಕೊಂಡಿದ್ದಾರೆ.
15037013a ಯೇ ಚ ಶೂರಾ ಮಹಾತ್ಮಾನಃ ಶ್ವಶುರಾ ಮೇ ಮಹಾರಥಾಃ।
15037013c ಸೋಮದತ್ತಪ್ರಭೃತಯಃ ಕಾ ನು ತೇಷಾಂ ಗತಿಃ ಪ್ರಭೋ।।
ಪ್ರಭೋ! ಶೂರರೂ ಮಹಾತ್ಮರೂ ಆಗಿದ್ದ ಸೋಮದತ್ತನೇ ಮೊದಲಾದ ನನ್ನ ಮಾವಂದಿರು ಯಾವ ಗತಿಯನ್ನು ಪಡೆದುಕೊಂಡಿದ್ದಾರೆ?
15037014a ತವ ಪ್ರಸಾದಾದ್ಭಗವನ್ವಿಶೋಕೋಽಯಂ ಮಹೀಪತಿಃ।
15037014c ಕುರ್ಯಾತ್ಕಾಲಮಹಂ ಚೈವ ಕುಂತೀ ಚೇಯಂ ವಧೂಸ್ತವ।।
ಭಗವನ್! ನಿನ್ನ ಅನುಗ್ರಹದಿಂದ ಈ ಮಹೀಪತಿಯೂ, ನಾನೂ ಮತ್ತು ನಿನ್ನ ಸೊಸೆಯಾದ ಈ ಕುಂತಿಯೂ ವಿಶೋಕರಾಗುವಂತೆ ಮಾಡು!”
15037015a ಇತ್ಯುಕ್ತವತ್ಯಾಂ ಗಾಂಧಾರ್ಯಾಂ ಕುಂತೀ ವ್ರತಕೃಶಾನನಾ।
15037015c ಪ್ರಚ್ಚನ್ನಜಾತಂ ಪುತ್ರಂ ತಂ ಸಸ್ಮಾರಾದಿತ್ಯಸಂಭವಮ್।।
ಗಾಂಧಾರಿಯೂ ಈ ರೀತಿ ಮಾತನಾಡುತ್ತಿದ್ದಾಗ ವ್ರತಗಳಿಂದ ಕೃಶಳಾಗಿದ್ದ ಕುಂತಿಯು ಆದಿತ್ಯನಿಂದ ಹುಟ್ಟಿದ್ದ ತನ್ನ ಆ ಮಗನನ್ನು ಸ್ಮರಿಸಿಕೊಂಡು ಮುಖವನ್ನು ಮುಚ್ಚಿಕೊಂಡಳು.
15037016a ತಾಮೃಷಿರ್ವರದೋ ವ್ಯಾಸೋ ದೂರಶ್ರವಣದರ್ಶನಃ।
15037016c ಅಪಶ್ಯದ್ದುಃಖಿತಾಂ ದೇವೀಂ ಮಾತರಂ ಸವ್ಯಸಾಚಿನಃ।।
ದೂರದಲ್ಲಿರುವುದನ್ನು ಕೇಳಲೂ ಮತ್ತು ನೋಡಲೂ ಸಮರ್ಥನಾಗಿದ್ದ ಆ ವರದ ಋಷಿ ವ್ಯಾಸನು ಸವ್ಯಸಾಚಿಯ ತಾಯಿ ಆ ದೇವಿಯು ದುಃಖಿತಳಾಗಿದ್ದುದ್ದನು ಗಮನಿಸಿದನು.
15037017a ತಾಮುವಾಚ ತತೋ ವ್ಯಾಸೋ ಯತ್ತೇ ಕಾರ್ಯಂ ವಿವಕ್ಷಿತಮ್।
15037017c ತದ್ಬ್ರೂಹಿ ತ್ವಂ ಮಹಾಪ್ರಾಜ್ಞೇ ಯತ್ತೇ ಮನಸಿ ವರ್ತತೇ।।
ಆಗ ವ್ಯಾಸನು ಅವಳಿಗೆ ಹೀಗೆ ಹೇಳಿದನು: “ಮಹಾಪ್ರಾಜ್ಞೆ! ನೀನು ನನ್ನಿಂದ ಯಾವ ಕಾರ್ಯವನ್ನು ಬಯಸುತ್ತೀಯೆ ಅದನ್ನು ಹೇಳು. ನಿನ್ನ ಮನಸ್ಸಿನಲ್ಲಿರುವುದನ್ನು ಇದ್ದಹಾಗೆ ಹೇಳು!”
15037018a ತತಃ ಕುಂತೀ ಶ್ವಶುರಯೋಃ ಪ್ರಣಮ್ಯ ಶಿರಸಾ ತದಾ।
15037018c ಉವಾಚ ವಾಕ್ಯಂ ಸವ್ರೀಡಂ ವಿವೃಣ್ವಾನಾ ಪುರಾತನಮ್।।
ಆಗ ಕುಂತಿಯು ತನ್ನ ಮಾವನಿಗೆ ಶಿರಬಾಗಿ ನಮಸ್ಕರಿಸಿ, ನಾಚಿಕೆಯಿಂದ ಮುಖಕುಂದಿದವಳಾಗಿ, ಹಿಂದೆ ನಡೆದುಹೋಗಿದ್ದುದರ ಕುರಿತು ಈ ಮಾತುಗಳನ್ನಾಡಿದಳು.
ಸಮಾಪ್ತಿ
ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಪುತ್ರದರ್ಶನಪರ್ವಣಿ ವ್ಯಾಸಕುಂತೀಸಂವಾದೇ ಸಪ್ತತ್ರಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಪುತ್ರದರ್ಶನಪರ್ವದಲ್ಲಿ ವ್ಯಾಸಕುಂತೀಸಂವಾದ ಎನ್ನುವ ಮೂವತ್ತೇಳನೇ ಅಧ್ಯಾಯವು.