036: ಧೃತರಾಷ್ಟ್ರಾದಿಕೃತಪ್ರಾರ್ಥನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆಶ್ರಮವಾಸಿಕ ಪರ್ವ

ಪುತ್ರದರ್ಶನ ಪರ್ವ

ಅಧ್ಯಾಯ 36

ಸಾರ

“ನಿನ್ನ ಯಾವ ಕಾಮನೆಯನ್ನು ನಡೆಯಿಸಿಕೊಡಲಿ? ನಾನೀಗ ವರವನ್ನು ಕೊಡಲು ಉತ್ಸುಕನಾಗಿದ್ದೇನೆ. ನನ್ನ ತಪಸ್ಸಿನ ಬಲವನ್ನು ನೋಡು!” ಎಂದು ವ್ಯಾಸನು ಧೃತರಾಷ್ಟ್ರನಿಗೆ ಹೇಳಿದುದು (1-21). ಧೃತರಾಷ್ಟ್ರನು ತನ್ನ ಸಂಶಯ-ದುಃಖಗಳನ್ನು ಹೇಳಿಕೊಂಡಿದುದು (22-33).

15036001 ಜನಮೇಜಯ ಉವಾಚ।
15036001a ವನವಾಸಂ ಗತೇ ವಿಪ್ರ ಧೃತರಾಷ್ಟ್ರೇ ಮಹೀಪತೌ।
15036001c ಸಭಾರ್ಯೇ ನೃಪಶಾರ್ದೂಲೇ ವಧ್ವಾ ಕುಂತ್ಯಾ ಸಮನ್ವಿತೇ।।
15036002a ವಿದುರೇ ಚಾಪಿ ಸಂಸಿದ್ಧೇ ಧರ್ಮರಾಜಂ ವ್ಯಪಾಶ್ರಿತೇ।
15036002c ವಸತ್ಸು ಪಾಂಡುಪುತ್ರೇಷು ಸರ್ವೇಷ್ವಾಶ್ರಮಮಂಡಲೇ।।
15036003a ಯತ್ತದಾಶ್ಚರ್ಯಮಿತಿ ವೈ ಕರಿಷ್ಯಾಮೀತ್ಯುವಾಚ ಹ।
15036003c ವ್ಯಾಸಃ ಪರಮತೇಜಸ್ವೀ ಮಹರ್ಷಿಸ್ತದ್ವದಸ್ವ ಮೇ।।

ಜನಮೇಜಯನು ಹೇಳಿದನು: “ವಿಪ್ರ! ನೃಪಶಾರ್ದೂಲ ಮಹೀಪತಿ ಧೃತರಾಷ್ಟ್ರನು ಭಾರ್ಯೆ ಮತ್ತು ಸೊಸೆ ಕೊಂತಿಯೊಡನೆ ವನವಾಸಕ್ಕೆ ಹೋದಾಗ, ವಿದುರನೂ ಕೂಡ ಸಿದ್ಧಿಯನ್ನು ಪಡೆದು ಧರ್ಮರಾಜನಲ್ಲಿ ಸೇರಿಕೊಂಡ ನಂತರ, ಪಾಂಡುಪುತ್ರರೆಲ್ಲರೂ ಆ ಆಶ್ರಮ ಮಂಡಲದಲ್ಲಿ ವಾಸಿಸುತ್ತಿದ್ದಾಗ ಮಹರ್ಷಿ ಪರಮ ತೇಜಸ್ವಿ ವ್ಯಾಸನು ಆಶ್ಚರ್ಯವೊಂದನ್ನು ಮಾಡಿತೋರಿಸುತ್ತೇನೆ ಎಂದು ಹೇಳಿದುದರ ಕುರಿತು ನನಗೆ ಹೇಳು.

15036004a ವನವಾಸೇ ಚ ಕೌರವ್ಯಃ ಕಿಯಂತಂ ಕಾಲಮಚ್ಯುತಃ।
15036004c ಯುಧಿಷ್ಠಿರೋ ನರಪತಿರ್ನ್ಯವಸತ್ಸಜನೋ ದ್ವಿಜ।।

ದ್ವಿಜ! ಅಚ್ಯುತ ಕೌರವ್ಯ ನರಪತಿ ಯುಧಿಷ್ಠಿರನು ಸಜನರೊಂದಿಗೆ ಎಷ್ಟು ಸಮಯ ಆ ವನದಲ್ಲಿ ವಾಸಮಾಡಿಕೊಂಡಿದ್ದನು?

15036005a ಕಿಮಾಹಾರಾಶ್ಚ ತೇ ತತ್ರ ಸಸೈನ್ಯಾ ನ್ಯವಸನ್ಪ್ರಭೋ।
15036005c ಸಾಂತಃಪುರಾ ಮಹಾತ್ಮಾನ ಇತಿ ತದ್ಬ್ರೂಹಿ ಮೇಽನಘ।।

ಪ್ರಭೋ! ಅನಘ! ಸೇನೆಗಳೊಂದಿಗೆ ಅಲ್ಲಿ ವಾಸಿಸುತ್ತಿದ್ದ ಆ ಮಹಾತ್ಮ ಮತ್ತು ಅಂತಃಪುರದ ಸ್ತ್ರೀಯರು ಆಹಾರಕ್ಕೆ ಏನು ಮಾಡುತ್ತಿದ್ದರು? ಅದನ್ನು ನನಗೆ ಹೇಳು.”

15036006 ವೈಶಂಪಾಯನ ಉವಾಚ।
15036006a ತೇಽನುಜ್ಞಾತಾಸ್ತದಾ ರಾಜನ್ಕುರುರಾಜೇನ ಪಾಂಡವಾಃ।
15036006c ವಿವಿಧಾನ್ಯನ್ನಪಾನಾನಿ ವಿಶ್ರಾಮ್ಯಾನುಭವಂತಿ ತೇ।।

ವೈಶಂಪಾಯನನು ಹೇಳಿದನು: “ರಾಜನ್! ಕುರುರಾಜ ಧೃತರಾಷ್ಟ್ರನ ಅನುಜ್ಞೆ ಪಡೆದು ಪಾಂಡವರು ವಿವಿಧ ಅನ್ನ-ಪಾನಗಳನ್ನು ಸೇವಿಸುತ್ತಾ ವಿಶ್ರಮಿಸುತ್ತಿದ್ದರು.

15036007a ಮಾಸಮೇಕಂ ವಿಜಹ್ರುಸ್ತೇ ಸಸೈನ್ಯಾಂತಃಪುರಾ ವನೇ।
15036007c ಅಥ ತತ್ರಾಗಮದ್ವ್ಯಾಸೋ ಯಥೋಕ್ತಂ ತೇ ಮಯಾನಘ।।

ಅನಘ! ಹೀಗೆ ಅವರು ವನದಲ್ಲಿ ಸೈನ್ಯ-ಸ್ತ್ರೀಯರೊಂದಿಗೆ ಒಂದು ತಿಂಗಳು ವಾಸಿಸುತ್ತಿರಲು ಅಲ್ಲಿಗೆ ನಾನು ಮೊದಲೇ ಹೇಳಿದಂತೆ ವ್ಯಾಸನು ಆಗಮಿಸಿದನು.

15036008a ತಥಾ ತು ತೇಷಾಂ ಸರ್ವೇಷಾಂ ಕಥಾಭಿರ್ನೃಪಸಂನಿಧೌ।
15036008c ವ್ಯಾಸಮನ್ವಾಸತಾಂ ರಾಜನ್ನಾಜಗ್ಮುರ್ಮುನಯೋಽಪರೇ।।
15036009a ನಾರದಃ ಪರ್ವತಶ್ಚೈವ ದೇವಲಶ್ಚ ಮಹಾತಪಾಃ।
15036009c ವಿಶ್ವಾವಸುಸ್ತುಂಬುರುಶ್ಚ ಚಿತ್ರಸೇನಶ್ಚ ಭಾರತ।।

ರಾಜನ್! ನೃಪನ ಸನ್ನಿಧಿಯಲ್ಲಿ ಅವರೆಲ್ಲರೂ ವ್ಯಾಸನನ್ನು ಸುತ್ತುವರೆದು ಮಾತನಾಡುತ್ತಿರಲು ಇತರ ಮಹಾತಪಸ್ವಿ ಮುನಿಗಳಾದ ನಾರದ, ಪರ್ವತ, ದೇವಲ, ವಿಶ್ವಾವಸು, ತುಂಬುರು ಮತ್ತು ಚಿತ್ರಸೇನರೂ ಅಲ್ಲಿಗೆ ಆಗಮಿಸಿದರು.

15036010a ತೇಷಾಮಪಿ ಯಥಾನ್ಯಾಯಂ ಪೂಜಾಂ ಚಕ್ರೇ ಮಹಾಮನಾಃ।
15036010c ಧೃತರಾಷ್ಟ್ರಾಭ್ಯನುಜ್ಞಾತಃ ಕುರುರಾಜೋ ಯುಧಿಷ್ಠಿರಃ।।

ಧೃತರಾಷ್ಟ್ರನಿಂದ ಅನುಜ್ಞಾತನಾದ ಕುರುರಾಜಾ ಯುಧಿಷ್ಠಿರನು ಮಹಾಮನಸ್ಕರಾದ ಅವರೆಲ್ಲರನ್ನೂ ಯಥಾನ್ಯಾಯವಾಗಿ ಪೂಜಿಸಿದನು.

15036011a ನಿಷೇದುಸ್ತೇ ತತಃ ಸರ್ವೇ ಪೂಜಾಂ ಪ್ರಾಪ್ಯ ಯುಧಿಷ್ಠಿರಾತ್।
15036011c ಆಸನೇಷ್ವಥ ಪುಣ್ಯೇಷು ಬರ್ಹಿಷ್ಕೇಷು ವರೇಷು ಚ।।

ಯುಧಿಷ್ಠಿರನಿಂದ ಪೂಜೆಗಳನ್ನು ಸ್ವೀಕರಿಸಿ ಅವರೆಲ್ಲರೂ ಶ್ರೇಷ್ಠ ನವಿಲುಗರಿಗಳಿಂದ ಮಾಡಲ್ಪಟ್ಟ ಪುಣ್ಯ ಆಸನಗಳಲ್ಲಿ ಕುಳಿತುಕೊಂಡರು.

15036012a ತೇಷು ತತ್ರೋಪವಿಷ್ಟೇಷು ಸ ತು ರಾಜಾ ಮಹಾಮತಿಃ।
15036012c ಪಾಂಡುಪುತ್ರೈಃ ಪರಿವೃತೋ ನಿಷಸಾದ ಕುರೂದ್ವಹಃ।।

ಹಾಗೆ ಅವರು ಅಲ್ಲಿ ಕುಳಿತುಕೊಳ್ಳಲು ಮಹಾಮತಿ ರಾಜಾ ಕುರೂದ್ವಹ ಧೃತರಾಷ್ಟ್ರನು ಪಾಂಡುಪುತ್ರರಿಂದ ಪರಿವೃತನಾಗಿ ಕುಳಿತುಕೊಂಡನು.

15036013a ಗಾಂಧಾರೀ ಚೈವ ಕುಂತೀ ಚ ದ್ರೌಪದೀ ಸಾತ್ವತೀ ತಥಾ।
15036013c ಸ್ತ್ರಿಯಶ್ಚಾನ್ಯಾಸ್ತಥಾನ್ಯಾಭಿಃ ಸಹೋಪವಿವಿಶುಸ್ತತಃ।।

ಗಾಂಧಾರೀ, ಕುಂತೀ, ದ್ರೌಪದೀ, ಸಾತ್ವತೀ ಸುಭದ್ರೆ ಹಾಗೂ ಅನ್ಯ ಸ್ತ್ರೀಯರೂ ಕೂಡ ಒಟ್ಟಿಗೇ ಅಲ್ಲಲ್ಲಿ ಕುಳಿತುಕೊಂಡರು.

15036014a ತೇಷಾಂ ತತ್ರ ಕಥಾ ದಿವ್ಯಾ ಧರ್ಮಿಷ್ಠಾಶ್ಚಾಭವನ್ನೃಪ।
15036014c ಋಷೀಣಾಂ ಚ ಪುರಾಣಾನಾಂ ದೇವಾಸುರವಿಮಿಶ್ರಿತಾಃ।।

ನೃಪ! ಅಲ್ಲಿ ಧರ್ಮಿಷ್ಠರಾದ ಋಷಿಗಳ ಮತ್ತು ದೇವಾಸುರರ ಮಿಶ್ರಿತ ಪುರಾಣಕಥೆಗಳು ನಡೆದವು.

15036015a ತತಃ ಕಥಾಂತೇ ವ್ಯಾಸಸ್ತಂ ಪ್ರಜ್ಞಾಚಕ್ಷುಷಮೀಶ್ವರಮ್।
15036015c ಪ್ರೋವಾಚ ವದತಾಂ ಶ್ರೇಷ್ಠಃ ಪುನರೇವ ಸ ತದ್ವಚಃ।
15036015e ಪ್ರೀಯಮಾಣೋ ಮಹಾತೇಜಾಃ ಸರ್ವವೇದವಿದಾಂ ವರಃ।।

ಆಗ ಕಥೆಗಳ ಅಂತ್ಯದಲ್ಲಿ ಮಾತನಾಡುವವರಲ್ಲಿ ಶ್ರೇಷ್ಠ ಮಹಾತೇಜಸ್ವಿ ಸರ್ವವೇದವಿದರಲ್ಲಿ ಶ್ರೇಷ್ಠ ವ್ಯಾಸನು ಪ್ರಜ್ಞಾಚಕ್ಷು ರಾಜಾ ಧೃತರಾಷ್ಟ್ರನಿಗೆ ಪುನಃ ಪ್ರೀತಿಪೂರ್ವಕವಾದ ಅದೇ ಮಾತನಾಡಿದನು:

15036016a ವಿದಿತಂ ಮಮ ರಾಜೇಂದ್ರ ಯತ್ತೇ ಹೃದಿ ವಿವಕ್ಷಿತಮ್।
15036016c ದಹ್ಯಮಾನಸ್ಯ ಶೋಕೇನ ತವ ಪುತ್ರಕೃತೇನ ವೈ।।

“ರಾಜೇಂದ್ರ! ನಿನ್ನ ಪುತ್ರರ ಕರ್ಮಗಳ ಕುರಿತಾದ ಶೋಕಿಸಿ ಸುಡುತ್ತಿರುವ ನಿನ್ನ ಹೃದಯದಲ್ಲಿ ಅಡಗಿಕೊಂಡಿರುವುದನ್ನು ನಾನು ತಿಳಿದುಕೊಂಡಿದ್ದೇನೆ.

15036017a ಗಾಂಧಾರ್ಯಾಶ್ಚೈವ ಯದ್ದುಃಖಂ ಹೃದಿ ತಿಷ್ಠತಿ ಪಾರ್ಥಿವ।
15036017c ಕುಂತ್ಯಾಶ್ಚ ಯನ್ಮಹಾರಾಜ ದ್ರೌಪದ್ಯಾಶ್ಚ ಹೃದಿ ಸ್ಥಿತಮ್।।
15036018a ಯಚ್ಚ ಧಾರಯತೇ ತೀವ್ರಂ ದುಃಖಂ ಪುತ್ರವಿನಾಶಜಮ್।
15036018c ಸುಭದ್ರಾ ಕೃಷ್ಣಭಗಿನೀ ತಚ್ಚಾಪಿ ವಿದಿತಂ ಮಮ।।

ಪಾರ್ಥಿವ! ಮಹಾರಾಜ! ಹಾಗೆಯೇ ಗಾಂಧಾರಿಯ ಹೃದಯದಲ್ಲಿ ನೆಲೆಸಿರುವ ದುಃಖವೇನಿದೆಯೋ, ಕುಂತಿ ಮತ್ತು ದ್ರೌಪದಿಯರ ಹೃದಯದಲ್ಲಿರುವ ದುಃಖವನ್ನೂ, ಕೃಷ್ಣನ ತಂಗಿ ಸುಭದ್ರೆಯು ಸಹಿಸಿಕೊಂಡಿರುವ ಪುತ್ರವಿನಾಶದಿಂದುಂಟಾದ ತೀವ್ರ ದುಃಖವನ್ನೂ ನಾನು ತಿಳಿದುಕೊಂಡಿರುವೆನು.

15036019a ಶ್ರುತ್ವಾ ಸಮಾಗಮಮಿಮಂ ಸರ್ವೇಷಾಂ ವಸ್ತತೋ ನೃಪ।
15036019c ಸಂಶಯಚ್ಚೇದನಾಯಾಹಂ ಪ್ರಾಪ್ತಃ ಕೌರವನಂದನ।।

ನೃಪ! ಕೌರವನಂದನ! ವಾಸ್ತವವಾಗಿ ಎಲ್ಲರೂ ಇಲ್ಲಿ ಬಂದು ಸೇರಿರುವರೆಂದೇ ನಿನ್ನಲ್ಲಿರುವ ಸಂಶಯವನ್ನು ನಿವಾರಿಸುವ ಸಲುವಾಗಿಯೇ ನಾನು ಇಲ್ಲಿಗೆ ಬಂದಿದ್ದೇನೆ.

15036020a ಇಮೇ ಚ ದೇವಗಂಧರ್ವಾಃ ಸರ್ವೇ ಚೈವ ಮಹರ್ಷಯಃ।
15036020c ಪಶ್ಯಂತು ತಪಸೋ ವೀರ್ಯಮದ್ಯ ಮೇ ಚಿರಸಂಭೃತಮ್।।

ಬಹುಕಾಲದಿಂದ ಸಂಗ್ರಹಿಸಿ ಇಟ್ಟುಕೊಂಡಿರುವ ನನ್ನ ತಪಸ್ಸಿನ ವೀರ್ಯವನ್ನು ಇಂದು ಈ ಎಲ್ಲ ದೇವಗಂಧರ್ವರೂ ಮಹರ್ಷಿಗಳೂ ನೋಡಲಿ!

15036021a ತದುಚ್ಯತಾಂ ಮಹಾಬಾಹೋ ಕಂ ಕಾಮಂ ಪ್ರದಿಶಾಮಿ ತೇ।
15036021c ಪ್ರವಣೋಽಸ್ಮಿ ವರಂ ದಾತುಂ ಪಶ್ಯ ಮೇ ತಪಸೋ ಬಲಮ್।।

ಮಹಾಬಾಹೋ! ಹೇಳು! ನಿನ್ನ ಯಾವ ಕಾಮನೆಯನ್ನು ನಡೆಯಿಸಿಕೊಡಲಿ? ನಾನೀಗ ವರವನ್ನು ಕೊಡಲು ಉತ್ಸುಕನಾಗಿದ್ದೇನೆ. ನನ್ನ ತಪಸ್ಸಿನ ಬಲವನ್ನು ನೋಡು!”

15036022a ಏವಮುಕ್ತಃ ಸ ರಾಜೇಂದ್ರೋ ವ್ಯಾಸೇನಾಮಿತಬುದ್ಧಿನಾ।
15036022c ಮುಹೂರ್ತಮಿವ ಸಂಚಿಂತ್ಯ ವಚನಾಯೋಪಚಕ್ರಮೇ।।

ಅಮಿತಬುದ್ಧಿ ವ್ಯಾಸನು ಹೀಗೆ ಹೇಳಲು ರಾಜೇಂದ್ರ ಧೃತರಾಷ್ಟ್ರನು ಒಂದು ಕ್ಷಣ ಯೋಚಿಸಿ ಈ ಮಾತನ್ನಾಡಲು ಪ್ರಾರಂಭಿಸಿದನು:

15036023a ಧನ್ಯೋಽಸ್ಮ್ಯನುಗೃಹೀತೋಽಸ್ಮಿ ಸಫಲಂ ಜೀವಿತಂ ಚ ಮೇ।
15036023c ಯನ್ಮೇ ಸಮಾಗಮೋಽದ್ಯೇಹ ಭವದ್ಭಿಃ ಸಹ ಸಾಧುಭಿಃ।।

“ನಿಮ್ಮಂಥಹ ಸಾಧುಗಳೊಡನೆ ನನ್ನ ಸಮಾಗಮವಾಯಿತೆಂದರೆ ನನ್ನ ಜೀವಿತವು ಸಫಲವಾಯಿತೆಂದೇ! ಧನ್ಯನಾಗಿದ್ದೇನೆ. ಅನುಗೃಹೀತನಾಗಿದ್ದೇನೆ!

15036024a ಅದ್ಯ ಚಾಪ್ಯವಗಚ್ಚಾಮಿ ಗತಿಮಿಷ್ಟಾಮಿಹಾತ್ಮನಃ।
15036024c ಭವದ್ಭಿರ್ಬ್ರಹ್ಮಕಲ್ಪೈರ್ಯತ್ಸಮೇತೋಽಹಂ ತಪೋಧನಾಃ।।

ತಪೋಧನರೇ! ಬ್ರಹ್ಮಕಲ್ಪರಾದ ನಿಮ್ಮೊಡನೆ ಸಮಾಗಮವಾಗಿರುವುದರಿಂದಲೇ ನನಗೆ ಇಷ್ಟವಾದ ಈ ಸ್ಥಿತಿಯನ್ನು ಪಡೆದಿದ್ದೇನೆ.

15036025a ದರ್ಶನಾದೇವ ಭವತಾಂ ಪೂತೋಽಹಂ ನಾತ್ರ ಸಂಶಯಃ।
15036025c ವಿದ್ಯತೇ ನ ಭಯಂ ಚಾಪಿ ಪರಲೋಕಾನ್ಮಮಾನಘಾಃ।।

ಅನಘರೇ! ನಿಮ್ಮ ದರ್ಶನಮಾತ್ರದಿಂದಲೇ ನಾನು ಪವಿತ್ರನಾಗಿರುವೆನೆನ್ನುವುದರಲ್ಲಿ ಸಂಶಯವಿಲ್ಲ. ನನಗೆ ಪರಲೋಕದ ಯಾವ ಭಯವೂ ಇಲ್ಲವಾಗಿದೆ.

15036026a ಕಿಂ ತು ತಸ್ಯ ಸುದುರ್ಬುದ್ಧೇರ್ಮಂದಸ್ಯಾಪನಯೈರ್ಭೃಶಮ್।
15036026c ದೂಯತೇ ಮೇ ಮನೋ ನಿತ್ಯಂ ಸ್ಮರತಃ ಪುತ್ರಗೃದ್ಧಿನಃ।।

ಆದರೆ ಅತ್ಯಂತ ದುರ್ಬುದ್ಧಿಯಾಗಿದ್ದ, ಮೂಡ ದುರ್ಯೋಧನನ ಅನ್ಯಾಯದಿಂದ ನನ್ನ ಎಲ್ಲ ಮಕ್ಕಳೂ ಹತರಾದರೆನ್ನುವುದನ್ನು ಸ್ಮರಿಸಿಕೊಂಡು ನಿತ್ಯವೂ ನನ್ನ ಮನಸ್ಸು ನೋಯುತ್ತದೆ.

15036027a ಅಪಾಪಾಃ ಪಾಂಡವಾ ಯೇನ ನಿಕೃತಾಃ ಪಾಪಬುದ್ಧಿನಾ।
15036027c ಘಾತಿತಾ ಪೃಥಿವೀ ಚೇಯಂ ಸಹಸಾ ಸನರದ್ವಿಪಾ।।

ಪಾಪಬುದ್ಧಿಯ ಅವನು ಪಾಪಿಗಳಲ್ಲದ ಪಾಂಡವರನ್ನು ಮೋಸಗೊಳಿಸಿ, ಬಹುಬೇಗ ಸೈನಿಕರು-ವಾಹನಗಳೊಂದಿಗೆ ಇಡೀ ಪೃಥ್ವಿಯನ್ನೇ ನಾಶಗೊಳಿಸಿಬಿಟ್ಟನು.

15036028a ರಾಜಾನಶ್ಚ ಮಹಾತ್ಮಾನೋ ನಾನಾಜನಪದೇಶ್ವರಾಃ।
15036028c ಆಗಮ್ಯ ಮಮ ಪುತ್ರಾರ್ಥೇ ಸರ್ವೇ ಮೃತ್ಯುವಶಂ ಗತಾಃ।।

ನಾನಾ ಜನಪದಗಳ ಒಡೆಯರು ಮಹಾತ್ಮ ರಾಜರು ಎಲ್ಲರೂ ನನ್ನ ಮಗನಿಗಾಗಿ ಬಂದು ಎಲ್ಲರೂ ಮೃತ್ಯುವಶರಾದರು.

15036029a ಯೇ ತೇ ಪುತ್ರಾಂಶ್ಚ ದಾರಾಶ್ಚ ಪ್ರಾಣಾಂಶ್ಚ ಮನಸಃ ಪ್ರಿಯಾನ್।
15036029c ಪರಿತ್ಯಜ್ಯ ಗತಾಃ ಶೂರಾಃ ಪ್ರೇತರಾಜನಿವೇಶನಮ್।।

ಆ ಶೂರರು ಪುತ್ರರನ್ನು, ಪತ್ನಿಯರನ್ನು ಮತ್ತು ಮನಸ್ಸಿಗೆ ಅತ್ಯಂತ ಪ್ರಿಯವಾದ ಪ್ರಾಣಗಳನ್ನೂ ತೊರೆದು ಪ್ರೇತರಾಜನ ನಿವೇಶನವನ್ನು ಸೇರಿಬಿಟ್ಟರು.

15036030a ಕಾ ನು ತೇಷಾಂ ಗತಿರ್ಬ್ರಹ್ಮನ್ಮಿತ್ರಾರ್ಥೇ ಯೇ ಹತಾ ಮೃಧೇ।
15036030c ತಥೈವ ಪುತ್ರಪೌತ್ರಾಣಾಂ ಮಮ ಯೇ ನಿಹತಾ ಯುಧಿ।।

ಬ್ರಹ್ಮನ್! ಮಿತ್ರನಿಗಾಗಿ ಯುದ್ಧದಲ್ಲಿ ಹತರಾದ ಅವರ ಗತಿಯೇನಾಗಿರಬಹುದು? ಹಾಗೆಯೇ ಯುದ್ಧದಲ್ಲಿ ಹತರಾದ ನನ್ನ ಪುತ್ರ-ಪೌತ್ರರ ಗತಿಯೇನಾಗಿರಬಹುದು?

15036031a ದೂಯತೇ ಮೇ ಮನೋಽಭೀಕ್ಷ್ಣಂ ಘಾತಯಿತ್ವಾ ಮಹಾಬಲಮ್।
15036031c ಭೀಷ್ಮಂ ಶಾಂತನವಂ ವೃದ್ಧಂ ದ್ರೋಣಂ ಚ ದ್ವಿಜಸತ್ತಮಮ್।।

ಮಹಾಬಲ ಶಾಂತನವ ಬೀಷ್ಮ ಮತ್ತು ದ್ವಿಜಸತ್ತಮ ವೃದ್ಧ ದ್ರೋಣರನ್ನು ಸಾವಿಗೀಡುಮಾಡಿ ನನ್ನ ಮನಸ್ಸಿಗೆ ಸತತವೂ ನೋವಾಗುತ್ತಿದೆ.

15036032a ಮಮ ಪುತ್ರೇಣ ಮೂಢೇನ ಪಾಪೇನ ಸುಹೃದದ್ವಿಷಾ।
15036032c ಕ್ಷಯಂ ನೀತಂ ಕುಲಂ ದೀಪ್ತಂ ಪೃಥಿವೀರಾಜ್ಯಮಿಚ್ಚತಾ।।

ಭೂಮಿ-ರಾಜ್ಯಗಳನ್ನು ಬಯಸಿದ್ದ ನನ್ನ ಮೂಢ ಪುತ್ರನ ಪಾಪದಿಂದಾಗಿ ಸುಹೃದಯರೊಂದಿಗೆ ದ್ವೇಷಕಟ್ಟಿಕೊಂಡು ಬೆಳಗುತ್ತಿದ್ದ ಈ ಕುಲವು ನಾಶವಾಗಿಬಿಟ್ಟಿತು.

15036033a ಏತತ್ಸರ್ವಮನುಸ್ಮೃತ್ಯ ದಹ್ಯಮಾನೋ ದಿವಾನಿಶಮ್।
15036033c ನ ಶಾಂತಿಮಧಿಗಚ್ಚಾಮಿ ದುಃಖಶೋಕಸಮಾಹತಃ।
15036033e ಇತಿ ಮೇ ಚಿಂತಯಾನಸ್ಯ ಪಿತಃ ಶರ್ಮ ನ ವಿದ್ಯತೇ।।

ಇವೆಲ್ಲವನ್ನೂ ಸ್ಮರಿಸಿಕೊಂಡು ಹಗಲು-ರಾತ್ರಿ ಚಿಂತಾಗ್ನಿಯಿಂದ ಬೆಂದುಹೋಗುತ್ತಿರುವ ದುಃಖಶೋಕಗಳಿಂದ ಪೀಡಿತನಾಗಿರುವ ನನಗೆ ಶಾಂತಿಯೇ ಇಲ್ಲವಾಗಿದೆ. ತಂದೆಯೇ! ಹೀಗೆ ಚಿಂತಿಸುತ್ತಿರುವ ನನಗೆ ನೆಲೆಯೇ ಇಲ್ಲದಂತಾಗಿದೆ!”"

ಸಮಾಪ್ತಿ

ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಪುತ್ರದರ್ಶನಪರ್ವಣಿ ಧೃತರಾಷ್ಟ್ರಾದಿಕೃತಪ್ರಾರ್ಥನೇ ಷಟ್ತ್ರಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಪುತ್ರದರ್ಶನಪರ್ವದಲ್ಲಿ ಧೃತರಾಷ್ಟ್ರಾದಿಕೃತಪ್ರಾರ್ಥನ ಎನ್ನುವ ಮೂವತ್ತಾರನೇ ಅಧ್ಯಾಯವು.