ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆಶ್ರಮವಾಸಿಕ ಪರ್ವ
ಆಶ್ರಮವಾಸ ಪರ್ವ
ಅಧ್ಯಾಯ 34
ಸಾರ
ಯುಧಿಷ್ಠಿರನು ತಾಪಸರಿಗೆ ದಾನಗಳನ್ನಿತ್ತಿದ್ದುದು (1-15). ವ್ಯಾಸನ ಆಗಮನ (16-26).
15034001 ವೈಶಂಪಾಯನ ಉವಾಚ।
15034001a ಏವಂ ಸಾ ರಜನೀ ತೇಷಾಮಾಶ್ರಮೇ ಪುಣ್ಯಕರ್ಮಣಾಮ್।
15034001c ಶಿವಾ ನಕ್ಷತ್ರಸಂಪನ್ನಾ ಸಾ ವ್ಯತೀಯಾಯ ಭಾರತ।।
ವೈಶಂಪಾಯನನು ಹೇಳಿದನು: “ಭಾರತ! ಹೀಗೆ ಆ ಆಶ್ರಮದಲ್ಲಿದ್ದ ಆ ಪುಣ್ಯಕರ್ಮಿಗಳು ನಕ್ಷತ್ರಸಂಪನ್ನವಾದ ಮಂಗಳಕರ ರಾತ್ರಿಯನ್ನು ಸುಖವಾಗಿ ಕಳೆದರು.
15034002a ತತ್ರ ತತ್ರ ಕಥಾಶ್ಚಾಸಂಸ್ತೇಷಾಂ ಧರ್ಮಾರ್ಥಲಕ್ಷಣಾಃ।
15034002c ವಿಚಿತ್ರಪದಸಂಚಾರಾ ನಾನಾಶ್ರುತಿಭಿರನ್ವಿತಾಃ।।
ಅಲ್ಲಲ್ಲಿ ಅವರ ನಡುವೆ ಧರ್ಮಾರ್ಥಲಕ್ಷಣಯುಕ್ತವಾದ, ವಿಚಿತ್ರ ಪದಸಂಚಾರಗಳುಳ್ಳ, ನಾನಾ ಶೃತಿಗಳಿಂದ ಕೂಡಿದ ಸಂಭಾಷಣೆಗಳು ನಡೆಯುತ್ತಿದ್ದವು.
15034003a ಪಾಂಡವಾಸ್ತ್ವಭಿತೋ ಮಾತುರ್ಧರಣ್ಯಾಂ ಸುಷುಪುಸ್ತದಾ।
15034003c ಉತ್ಸೃಜ್ಯ ಸುಮಹಾರ್ಹಾಣಿ ಶಯನಾನಿ ನರಾಧಿಪ।।
ನರಾಧಿಪ! ಪಾಂಡವರಾದರೋ ಬಹುಮೂಲ್ಯ ಹಾಸಿಗೆಗಳನ್ನು ಪರಿತ್ಯಜಿಸಿ ತಾಯಿಯೊಡನೆ ನೆಲದ ಮೇಲೆಯೇ ಮಲಗಿಕೊಂಡರು.
15034004a ಯದಾಹಾರೋಽಭವದ್ರಾಜಾ ಧೃತರಾಷ್ಟ್ರೋ ಮಹಾಮನಾಃ।
15034004c ತದಾಹಾರಾ ನೃವೀರಾಸ್ತೇ ನ್ಯವಸಂಸ್ತಾಂ ನಿಶಾಂ ತದಾ।।
ಮಹಾಮನಸ್ವೀ ರಾಜಾ ಧೃತರಾಷ್ಟ್ರನು ಯಾವ ಆಹಾರವನ್ನು ಉಂಡನೋ ಅದನ್ನೇ ಪಾಂಡವರೂ ಸೇವಿಸಿ ರಾತ್ರಿಯನ್ನು ಕಳೆದರು.
15034005a ವ್ಯತೀತಾಯಾಂ ತು ಶರ್ವರ್ಯಾಂ ಕೃತಪೂರ್ವಾಹ್ಣಿಕಕ್ರಿಯಃ।
15034005c ಭ್ರಾತೃಭಿಃ ಸಹ ಕೌಂತೇಯೋ ದದರ್ಶಾಶ್ರಮಮಂಡಲಮ್।।
15034006a ಸಾಂತಃಪುರಪರೀವಾರಃ ಸಭೃತ್ಯಃ ಸಪುರೋಹಿತಃ।
15034006c ಯಥಾಸುಖಂ ಯಥೋದ್ದೇಶಂ ಧೃತರಾಷ್ಟ್ರಾಭ್ಯನುಜ್ಞಯಾ।।
ರಾತ್ರಿಯನ್ನು ಕಳೆದು, ಪೂರ್ವಾಹ್ಣಿಕ ಕ್ರಿಯೆಗಳನ್ನು ಪೂರೈಸಿ ಕೌಂತೇಯ ಯುಧಿಷ್ಠಿರನು, ಧೃತರಾಷ್ಟ್ರನ ಅನುಜ್ಞೆಯನ್ನು ಪಡೆದು, ತಮ್ಮಂದಿರೊಡನೆ, ಅಂತಃಪುರದ ಪರಿವಾರದವರೊಡನೆ, ಸೇವಕರು ಮತ್ತು ಪುರೋಹಿತರೊಂದಿಗೆ ಅನಾಯಾಸವಾಗಿ ಅಲ್ಲಲ್ಲಿದ್ದ ಆಶ್ರಮ ಮಂಡಲಗಳನ್ನು ನೋಡಿದನು.
15034007a ದದರ್ಶ ತತ್ರ ವೇದೀಶ್ಚ ಸಂಪ್ರಜ್ವಲಿತಪಾವಕಾಃ।
15034007c ಕೃತಾಭಿಷೇಕೈರ್ಮುನಿಭಿರ್ಹುತಾಗ್ನಿಭಿರುಪಸ್ಥಿತಾಃ।।
ಅಲ್ಲಿ ಅವರು ಅಗ್ನಿಗಳು ಪ್ರಜ್ವಲಿಸುತ್ತಿದ್ದ ವೇದಿಗಳನ್ನೂ, ಸ್ನಾನಮಾಡಿ ಅಗ್ನಿಯಲ್ಲಿ ಆಹುತಿಗಳನ್ನು ನೀಡಲು ಕುಳಿತುಕೊಂಡಿದ್ದ ಮುನಿಗಳನ್ನೂ, ನೋಡಿದರು.
15034008a ವಾನೇಯಪುಷ್ಪನಿಕರೈರಾಜ್ಯಧೂಮೋದ್ಗಮೈರಪಿ।
15034008c ಬ್ರಾಹ್ಮೇಣ ವಪುಷಾ ಯುಕ್ತಾ ಯುಕ್ತಾ ಮುನಿಗಣೈಶ್ಚ ತಾಃ।।
ವನ್ಯಪುಷ್ಪಗಳ ಗೊಂಚಲುಗಳಿಂದಲೂ, ತುಪ್ಪದ ಆಹುತಿಯಿಂದಾಗಿ ಮೇಲೆದ್ದ ಹೋಮಧೂಮಗಳಿಂದಲೂ, ಮುನಿಗಣಗಳಿಂದಲೂ ಕೂಡಿದ್ದ ಅವುಗಳು ಬ್ರಾಹ್ಮೀ ಕಾಂತಿಯಿಂದ ಬೆಳಗುತ್ತಿದ್ದವು.
15034009a ಮೃಗಯೂಥೈರನುದ್ವಿಗ್ನೈಸ್ತತ್ರ ತತ್ರ ಸಮಾಶ್ರಿತೈಃ।
15034009c ಅಶಂಕಿತೈಃ ಪಕ್ಷಿಗಣೈಃ ಪ್ರಗೀತೈರಿವ ಚ ಪ್ರಭೋ।।
ಅಲ್ಲಲ್ಲಿ ಮೃಗಗಳ ಗುಂಪುಗಳು ಯಾವುದೇ ಉದ್ವಿಗ್ನತೆಯೂ ಇಲ್ಲದೇ ಸೇರಿಕೊಂಡಿದ್ದವು. ಪ್ರಭೋ! ಪಕ್ಷಿಗಣಗಳು ಶಂಕೆಗಳಿಲ್ಲದೇ ಕಲಕಲನಿನಾದಗಳನ್ನು ಮಾಡುತ್ತಿದ್ದವು.
15034010a ಕೇಕಾಭಿರ್ನೀಲಕಂಠಾನಾಂ ದಾತ್ಯೂಹಾನಾಂ ಚ ಕೂಜಿತೈಃ।
15034010c ಕೋಕಿಲಾನಾಂ ಚ ಕುಹರೈಃ ಶುಭೈಃ ಶ್ರುತಿಮನೋಹರೈಃ।।
15034011a ಪ್ರಾಧೀತದ್ವಿಜಘೋಷೈಶ್ಚ ಕ್ವ ಚಿತ್ಕ್ವ ಚಿದಲಂಕೃತಮ್।
15034011c ಫಲಮೂಲಸಮುದ್ವಾಹೈರ್ಮಹದ್ಭಿಶ್ಚೋಪಶೋಭಿತಮ್।।
ನವಿಲುಗಳ ಕೇಕಾರವಗಳಿಂದಲೂ, ಜಾತಕಪಕ್ಷಿಗಳ ಅವ್ಯಕ್ತ ಮಧುರ ಧ್ವನಿಗಳಿಂದಲೂ, ಕೋಗಿಲೆಗಳ ಇಂಪಾದ ಶುಭಕರ ಕೂಗುಗಳಿಂದಲೂ, ಅಲ್ಲಲ್ಲಿ ಕೇಳಿಬರುತ್ತಿದ್ದ ದ್ವಿಜರ ವೇದಘೋಷಗಳಿಂದಲೂ ಆ ಆಶ್ರಮಮಂಡಲವು ಅಲಂಕೃತವಾಗಿತ್ತು. ಫಲಮೂಲಗಳನ್ನೇ ಸೇವಿಸುತ್ತಿದ್ದ ಅನೇಕ ಮಹಾಪುರುಷರಿಂದ ಅದು ಶೋಭಿಸುತ್ತಿತ್ತು.
15034012a ತತಃ ಸ ರಾಜಾ ಪ್ರದದೌ ತಾಪಸಾರ್ಥಮುಪಾಹೃತಾನ್।
15034012c ಕಲಶಾನ್ಕಾಂಚನಾನ್ರಾಜಂಸ್ತಥೈವೌದುಂಬರಾನಪಿ।।
15034013a ಅಜಿನಾನಿ ಪ್ರವೇಣೀಶ್ಚ ಸ್ರುಕ್ಸ್ರುವಂ ಚ ಮಹೀಪತಿಃ।
15034013c ಕಮಂಡಲೂಂಸ್ತಥಾ ಸ್ಥಾಲೀಃ ಪಿಠರಾಣಿ ಚ ಭಾರತ।।
15034014a ಭಾಜನಾನಿ ಚ ಲೌಹಾನಿ ಪಾತ್ರೀಶ್ಚ ವಿವಿಧಾ ನೃಪ।
15034014c ಯದ್ಯದಿಚ್ಚತಿ ಯಾವಚ್ಚ ಯದನ್ಯದಪಿ ಕಾಂಕ್ಷಿತಮ್।।
ರಾಜನ್! ನೃಪ! ಅನಂತರ ಮಹೀಪತೀ ರಾಜಾ ಯುಧಿಷ್ಠಿರನು ತಾಪಸರಿಗಾಗಿ ತಂದಿದ್ದ ಕಾಂಚನ ಕಲಶಗಳನ್ನೂ, ತಾಮ್ರದ ಕಲಶಗಳನ್ನೂ, ಮೃಗಚರ್ಮಗಳನ್ನೂ, ಕಂಬಳಿಗಳನ್ನೂ, ಸ್ರುಕ್-ಸ್ರುವಗಳನ್ನೂ, ಕಮಂಡಲುಗಳನ್ನೂ, ಸ್ಥಾಲಿಗಳನ್ನೂ, ಮಣ್ಣಿನ ಪಾತ್ರೆಗಳನ್ನೂ, ಮತ್ತು ಯಾರಿಗೆ ಯಾವುದು ಇಷ್ಟವಾಗಿದೆಯೂ ಅವುಗಳನ್ನೂ ಕೊಟ್ಟನು.
15034015a ಏವಂ ಸ ರಾಜಾ ಧರ್ಮಾತ್ಮಾ ಪರೀತ್ಯಾಶ್ರಮಮಂಡಲಮ್।
15034015c ವಸು ವಿಶ್ರಾಣ್ಯ ತತ್ಸರ್ವಂ ಪುನರಾಯಾನ್ಮಹೀಪತಿಃ।।
ಹೀಗೆ ರಾಜಾ ಧರ್ಮಾತ್ಮ ಮಹೀಪತಿ ಯುಧಿಷ್ಠಿರನು ಆಶ್ರಮಮಂಡಲದಲ್ಲಿ ತಿರುಗಾಡಿ ಆ ಎಲ್ಲ ವಸ್ತುಗಳನ್ನೂ ಧನವನ್ನೂ ಹಂಚಿ, ಧೃತರಾಷ್ಟ್ರನ ಆಶ್ರಮಕ್ಕೆ ಹಿಂದಿರುಗಿದನು.
15034016a ಕೃತಾಹ್ನಿಕಂ ಚ ರಾಜಾನಂ ಧೃತರಾಷ್ಟ್ರಂ ಮನೀಷಿಣಮ್।
15034016c ದದರ್ಶಾಸೀನಮವ್ಯಗ್ರಂ ಗಾಂಧಾರೀಸಹಿತಂ ತದಾ।।
ಅಲ್ಲಿ ಆಹ್ನೀಕಗಳನ್ನು ಪೂರೈಸಿ ಗಾಂಧಾರಿಯೊಡನೆ ಕುಳಿತಿದ್ದ ಅವ್ಯಗ್ರ ರಾಜಾ ಮನೀಷೀ ಧೃತರಾಷ್ಟ್ರನನ್ನು ಕಂಡನು.
15034017a ಮಾತರಂ ಚಾವಿದೂರಸ್ಥಾಂ ಶಿಷ್ಯವತ್ಪ್ರಣತಾಂ ಸ್ಥಿತಾಮ್।
15034017c ಕುಂತೀಂ ದದರ್ಶ ಧರ್ಮಾತ್ಮಾ ಸತತಂ ಧರ್ಮಚಾರಿಣೀಮ್।।
ಅನತಿದೂರದಲ್ಲಿಯೇ ಶಿಷ್ಯೆಯಂತೆ ಕೈಮುಗಿದು ನಿಂತಿದ್ದ ಆ ಸತತ ಧರ್ಮಚಾರಿಣೀ ತಾಯಿ ಕುಂತಿಯನ್ನೂ ಅವನು ನೋಡಿದನು.
15034018a ಸ ತಮಭ್ಯರ್ಚ್ಯ ರಾಜಾನಂ ನಾಮ ಸಂಶ್ರಾವ್ಯ ಚಾತ್ಮನಃ।
15034018c ನಿಷೀದೇತ್ಯಭ್ಯನುಜ್ಞಾತೋ ಬೃಸ್ಯಾಮುಪವಿವೇಶ ಹ।।
ರಾಜನಿಗೆ ತನ್ನ ಹೆಸರನ್ನು ಹೇಳಿ ನಮಸ್ಕರಿಸಿ, ಕುಳಿತುಕೋ ಎಂದು ಆಜ್ಞೆಯಿತ್ತನಂತರ ಯುಧಿಷ್ಠಿರನು ದರ್ಭಾಸನದ ಮೇಲೆ ಕುಳಿತುಕೊಂಡನು.
15034019a ಭೀಮಸೇನಾದಯಶ್ಚೈವ ಪಾಂಡವಾಃ ಕೌರವರ್ಷಭಮ್।
15034019c ಅಭಿವಾದ್ಯೋಪಸಂಗೃಹ್ಯ ನಿಷೇದುಃ ಪಾರ್ಥಿವಾಜ್ಞಯಾ।।
ಭೀಮಸೇನಾದಿ ಪಾಂಡವರೂ ಕೂಡ ಆ ಕೌರವರ್ಷಭನನ್ನು ವಂದಿಸಿ, ಪಾರ್ಥಿವನ ಆಜ್ಞೆಯನ್ನು ಪಡೆದು ಒಟ್ಟಾಗಿ ಕುಳಿತುಕೊಂಡರು.
15034020a ಸ ತೈಃ ಪರಿವೃತೋ ರಾಜಾ ಶುಶುಭೇಽತೀವ ಕೌರವಃ।
15034020c ಬಿಭ್ರದ್ಬ್ರಾಹ್ಮೀಂ ಶ್ರಿಯಂ ದೀಪ್ತಾಂ ದೇವೈರಿವ ಬೃಹಸ್ಪತಿಃ।।
ಹೀಗೆ ಅವರಿಂದ ಪರಿವೃತನಾದ ರಾಜ ಕೌರವನು ದೇವತೆಗಳಿಂದ ಸುತ್ತುವರೆಯಲ್ಪಟ್ಟ ಬೃಹಸ್ಪತಿಯಂತೆ ಬೆಳಗುತ್ತಿರುವ ಬ್ರಾಹ್ಮೀ ಕಾಂತಿಯಿಂದ ಕಂಗೊಳಿಸುತ್ತಿದ್ದನು.
15034021a ತಥಾ ತೇಷೂಪವಿಷ್ಟೇಷು ಸಮಾಜಗ್ಮುರ್ಮಹರ್ಷಯಃ।
15034021c ಶತಯೂಪಪ್ರಭೃತಯಃ ಕುರುಕ್ಷೇತ್ರನಿವಾಸಿನಃ।।
ಹೀಗೆ ಅವರು ಕುಳಿತುಕೊಂಡಿರಲು ಅಲ್ಲಿಗೆ ಕುರುಕ್ಷೇತ್ರನಿವಾಸಿಗಳಾಗಿದ್ದ ಶತಯೂಪನೇ ಮೊದಲಾದ ಮಹರ್ಷಿಗಳು ಬಂದು ಸೇರಿದರು.
15034022a ವ್ಯಾಸಶ್ಚ ಭಗವಾನ್ವಿಪ್ರೋ ದೇವರ್ಷಿಗಣಪೂಜಿತಃ।
15034022c ವೃತಃ ಶಿಷ್ಯೈರ್ಮಹಾತೇಜಾ ದರ್ಶಯಾಮಾಸ ತಂ ನೃಪಮ್।।
ದೇವರ್ಷಿಗಣ ಪೂಜಿತನಾದ ಮಹಾತೇಜಸ್ವಿ ವಿಪ್ರ ಭಗವಾನ್ ವ್ಯಾಸನೂ ಕೂಡ ತನ್ನ ಶಿಷ್ಯರಿಂದೊಡಗೂಡಿ ನೃಪನಿಗೆ ಕಾಣಿಸಿಕೊಂಡನು.
15034023a ತತಃ ಸ ರಾಜಾ ಕೌರವ್ಯಃ ಕುಂತೀಪುತ್ರಶ್ಚ ವೀರ್ಯವಾನ್।
15034023c ಭೀಮಸೇನಾದಯಶ್ಚೈವ ಸಮುತ್ಥಾಯಾಭ್ಯಪೂಜಯನ್।।
ಆಗ ರಾಜಾ ಕೌರವ್ಯ, ವೀರ್ಯವಾನ್ ಕುಂತೀಪುತ್ರ, ಮತ್ತು ಭೀಮಸೇನಾದಿಗಳು ಮೇಲೆದ್ದು ಅವನನ್ನು ಪೂಜಿಸಿದರು.
15034024a ಸಮಾಗತಸ್ತತೋ ವ್ಯಾಸಃ ಶತಯೂಪಾದಿಭಿರ್ವೃತಃ।
15034024c ಧೃತರಾಷ್ಟ್ರಂ ಮಹೀಪಾಲಮಾಸ್ಯತಾಮಿತ್ಯಭಾಷತ।।
ಶತಯೂಪಾದಿಗಳಿಂದ ಸುತ್ತುವರೆಯಲ್ಪಟ್ಟು ಆಗಮಿಸಿದ ವ್ಯಾಸನು ಮಹೀಪಾಲ ಧೃತರಾಷ್ಟ್ರನಿಗೆ ಕುಳಿತುಕೊಳ್ಳಲು ಹೇಳಿದನು.
15034025a ನವಂ ತು ವಿಷ್ಟರಂ ಕೌಶ್ಯಂ ಕೃಷ್ಣಾಜಿನಕುಶೋತ್ತರಮ್।
15034025c ಪ್ರತಿಪೇದೇ ತದಾ ವ್ಯಾಸಸ್ತದರ್ಥಮುಪಕಲ್ಪಿತಮ್।।
ಅನಂತರ ದರ್ಭೆಯನ್ನು ಹಾಸಿ ಕೃಷ್ಣಾಜಿನವನ್ನು ಹೊದಿಸಿ, ತನಗಾಗಿಯೇ ಹೊಸದಾಗಿ ಸಿದ್ಧಪಡಿಸಿದ ಶ್ರೇಷ್ಠ ಕುಶಾಸನದಲ್ಲಿ ವ್ಯಾಸನು ಕುಳಿತುಕೊಂಡನು.
15034026a ತೇ ಚ ಸರ್ವೇ ದ್ವಿಜಶ್ರೇಷ್ಠಾ ವಿಷ್ಟರೇಷು ಸಮಂತತಃ।
15034026c ದ್ವೈಪಾಯನಾಭ್ಯನುಜ್ಞಾತಾ ನಿಷೇದುರ್ವಿಪುಲೌಜಸಃ।।
ವಿಪುಲ ತೇಜಸ್ವಿಗಳಾಗಿದ್ದ ಆ ದ್ವಿಜಶ್ರೇಷ್ಠರೆಲ್ಲರೂ ದ್ವೈಪಾಯನನ ಅನುಮತಿಯನ್ನು ಪಡೆದು ಅವನ ಸುತ್ತಲೂ ಕುಳಿತುಕೊಂಡರು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ವ್ಯಾಸಾಗಮನೇ ಚತುಸ್ತ್ರಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ವ್ಯಾಸಾಗಮನ ಎನ್ನುವ ಮೂವತ್ನಾಲ್ಕನೇ ಅಧ್ಯಾಯವು.