032: ಋಷಿನ್ ಪ್ರತಿ ಯುಧಿಷ್ಠಿರಾದಿಕಥನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆಶ್ರಮವಾಸಿಕ ಪರ್ವ

ಆಶ್ರಮವಾಸ ಪರ್ವ

ಅಧ್ಯಾಯ 32

ಸಾರ

ಋಷಿ-ಮುನಿಗಳಿಗೆ ಸಂಜಯನು ಪಾಂಡವರು ಮತ್ತು ಕುರುಸ್ತ್ರೀಯರ ಪರಿಚಯವನ್ನು ಮಾಡಿಕೊಡುವುದು (1-18).

15032001 ವೈಶಂಪಾಯನ ಉವಾಚ।
15032001a ಸ ತೈಃ ಸಹ ನರವ್ಯಾಘ್ರೈರ್ಭ್ರಾತೃಭಿರ್ಭರತರ್ಷಭ।
15032001c ರಾಜಾ ರುಚಿರಪದ್ಮಾಕ್ಷೈರಾಸಾಂ ಚಕ್ರೇ ತದಾಶ್ರಮೇ।।

ವೈಶಂಪಾಯನನು ಹೇಳಿದನು: “ಭರತರ್ಷಭ! ಆ ಆಶ್ರಮದಲ್ಲಿ ರಾಜಾ ಧೃತರಾಷ್ಟ್ರನು ಸುಂದರ ಕಮಲಗಳಂತಹ ಕಣ್ಣುಗಳುಳ್ಳ ನರವ್ಯಾಘ್ರ ಸಹೋದರರೊಂದಿಗೆ ಕುಳಿತುಕೊಂಡನು.

15032002a ತಾಪಸೈಶ್ಚ ಮಹಾಭಾಗೈರ್ನಾನಾದೇಶಸಮಾಗತೈಃ।
15032002c ದ್ರಷ್ಟುಂ ಕುರುಪತೇಃ ಪುತ್ರಾನ್ಪಾಂಡವಾನ್ಪೃಥುವಕ್ಷಸಃ।।

ಮಹಾಭಾಗ ತಾಪಸರು ಕೂಡ ಪೃಥುವಕ್ಷಸ ಕುರುಪತಿಯ ಪುತ್ರರಾದ ಪಾಂಡವರನ್ನು ನೋಡಲು ನಾನಾದೇಶಗಳಿಂದ ಬಂದು ಸೇರಿದ್ದರು.

15032003a ತೇಽಬ್ರುವನ್ ಜ್ಞಾತುಮಿಚ್ಚಾಮಃ ಕತಮೋಽತ್ರ ಯುಧಿಷ್ಠಿರಃ।
15032003c ಭೀಮಾರ್ಜುನಯಮಾಶ್ಚೈವ ದ್ರೌಪದೀ ಚ ಯಶಸ್ವಿನೀ।।

ಅವರು – “ಇವರಲ್ಲಿ ಯುಧಿಷ್ಠಿರನು ಯಾರು? ಭೀಮಾರ್ಜುನ-ಯಮಳರು ಯಾರು ಮತ್ತು ಯಶಸ್ವಿನೀ ದ್ರೌಪದಿಯು ಯಾರು ಎಂದು ತಿಳಿಯಲು ಬಯಸುತ್ತೇವೆ” – ಎಂದು ಕೇಳಿಕೊಂಡರು.

15032004a ತಾನಾಚಖ್ಯೌ ತದಾ ಸೂತಃ ಸರ್ವಾನ್ನಾಮಾಭಿನಾಮತಃ।
15032004c ಸಂಜಯೋ ದ್ರೌಪದೀಂ ಚೈವ ಸರ್ವಾಶ್ಚಾನ್ಯಾಃ ಕುರುಸ್ತ್ರಿಯಃ।।

ಆಗ ಸೂತ ಸಂಜಯನು ಅವರಿಗೆ ದ್ರೌಪದಿ ಮತ್ತು ಸರ್ವ ಕುರುಸ್ತ್ರೀಯರನ್ನೂ ಸೇರಿಸಿ ಎಲ್ಲರ ಹೆಸರುಗಳನ್ನು ಹೇಳುತ್ತಾ ಪರಿಚಯ ಮಾಡಿಕೊಟ್ಟನು.

15032005a ಯ ಏಷ ಜಾಂಬೂನದಶುದ್ಧಗೌರ ತನುರ್ಮಹಾಸಿಂಹ ಇವ ಪ್ರವೃದ್ಧಃ।
15032005c ಪ್ರಚಂಡಘೋಣಃ ಪೃಥುದೀರ್ಘನೇತ್ರಸ್ ತಾಮ್ರಾಯತಾಸ್ಯಃ ಕುರುರಾಜ ಏಷಃ।।

“ಶುದ್ಧ ಚಿನ್ನದಂತೆ ಗೌರಾಂಗನಾಗಿರುವ, ಮಹಾಸಿಂಹದಂತೆ ಬೆಳೆದ ಶರೀರವುಳ್ಳ, ತೀಕ್ಷ್ಣವಾದ ಮೂಗಿರುವ, ವಿಶಾಲವಾಗಿಯೂ, ತೀಕ್ಷ್ಣವಾಗಿಯೂ ಮತ್ತು ಕೆಂಪಾಗಿಯೂ ಇರುವ ಕಣ್ಣುಗಳುಳ್ಳ ಇವನೇ ಕುರುರಾಜ ಯುಧಿಷ್ಠಿರನು!

15032006a ಅಯಂ ಪುನರ್ಮತ್ತಗಜೇಂದ್ರಗಾಮೀ ಪ್ರತಪ್ತಚಾಮೀಕರಶುದ್ಧಗೌರಃ।
15032006c ಪೃಥ್ವಾಯತಾಂಸಃ ಪೃಥುದೀರ್ಘಬಾಹುರ್ ವೃಕೋದರಃ ಪಶ್ಯತ ಪಶ್ಯತೈನಮ್।।

ಮದಿಸಿದ ಗಜರಾಜನ ನಡುಗೆಯುಳ್ಳ, ಪುಟಕ್ಕೆ ಹಾಕಿದ ಚಿನ್ನದಂತೆ ಶುದ್ಧ ಗೌರವರ್ಣದ, ವಿಶಾಲವಾದ ಮತ್ತು ದಷ್ಟಪುಷ್ಟವಾದ ಹೆಗಲುಗಳುಳ್ಳ, ದಪ್ಪವಾಗಿಯೂ ನೀಳವಾಗಿಯೂ ಇರುವ ತೋಳುಗಳುಳ್ಳ ಇವನೇ ವೃಕೋದರನು. ಇವನನ್ನು ಚೆನ್ನಾಗಿ ನೋಡಿರಿ!

15032007a ಯಸ್ತ್ವೇಷ ಪಾರ್ಶ್ವೇಽಸ್ಯ ಮಹಾಧನುಷ್ಮಾನ್ ಶ್ಯಾಮೋ ಯುವಾ ವಾರಣಯೂಥಪಾಭಃ।
15032007c ಸಿಂಹೋನ್ನತಾಂಸೋ ಗಜಖೇಲಗಾಮೀ ಪದ್ಮಾಯತಾಕ್ಷೋಽರ್ಜುನ ಏಷ ವೀರಃ।।

ಇವನ ಪಕ್ಕದಲ್ಲಿಯೇ ಇರುವ ಶ್ಯಾಮಲ ವರ್ಣದ, ಯುವಕ, ಗಜಗಣಗಳ ಪತಿ ಸಲಗದಂತೆ ಪ್ರಕಾಶಿಸುತ್ತಿರುವ, ಸಿಂಹದ ಹೆಗಲಿನಂತೆ ವಿಸ್ತಾರವಾದ ಹೆಗಲುಳ್ಳ, ಗಜಕ್ರೀಡೆಯಂಥಹ ನಡುಗೆಯುಳ್ಳ, ಕಮಲದಂತೆ ವಿಶಾಲ ಕಣ್ಣುಗಳುಳ್ಳ ಮಹಾಧನುಷ್ಮಂತನಾದ ಇವನೇ ವೀರ ಅರ್ಜುನ!

15032008a ಕುಂತೀಸಮೀಪೇ ಪುರುಷೋತ್ತಮೌ ತು ಯಮಾವಿಮೌ ವಿಷ್ಣುಮಹೇಂದ್ರಕಲ್ಪೌ।
15032008c ಮನುಷ್ಯಲೋಕೇ ಸಕಲೇ ಸಮೋಽಸ್ತಿ ಯಯೋರ್ನ ರೂಪೇ ನ ಬಲೇ ನ ಶೀಲೇ।।

ಕುಂತಿಯ ಸಮೀಪದಲ್ಲಿ ಕುಳಿತಿರುವ, ವಿಷ್ಣು-ಮಹೇಂದ್ರ ಸದೃಶರಾದ, ಪುರುಷೋತ್ತಮರೀರ್ವರು, ಅವಳೀ ಮಕ್ಕಳಾದ ಇವರೇ ನಕುಲ ಸಹದೇವರು. ಮನುಷ್ಯಲೋಕದಲ್ಲಿ ರೂಪದಲ್ಲಾಗಲೀ, ಬಲದಲ್ಲಾಗಲೀ ಅಥವಾ ಶೀಲದಲ್ಲಾಗಲೀ ಇವರಿಗೆ ಸಮನಾದವರು ಬೇರೆ ಯಾರೂ ಇಲ್ಲ!

15032009a ಇಯಂ ಪುನಃ ಪದ್ಮದಲಾಯತಾಕ್ಷೀ ಮಧ್ಯಂ ವಯಃ ಕಿಂ ಚಿದಿವ ಸ್ಪೃಶಂತೀ।
15032009c ನೀಲೋತ್ಪಲಾಭಾ ಪುರದೇವತೇವ ಕೃಷ್ಣಾ ಸ್ಥಿತಾ ಮೂರ್ತಿಮತೀವ ಲಕ್ಷ್ಮೀಃ।।

ಮಧ್ಯ ವಯಸ್ಸಿನ ಈ ಪದ್ಮದಳಾಯತಾಕ್ಷೀ, ನೀಲಕಮಲದ ಕಾಂತಿಯಂಥ ಶ್ಯಾಮಲ ವರ್ಣದವಳು, ದೇವತೆಗಳಿಗೂ ದೇವಿಯಂತಿರುವ, ಮೂರ್ತಿಮತ್ತಾಗಿ ಬಂದಿರುವ ಲಕ್ಷ್ಮಿಯಂತೆ ನಿಂತಿರುವ ಇವಳೇ ಕೃಷ್ಣೆ ದ್ರೌಪದೀ.

15032010a ಅಸ್ಯಾಸ್ತು ಪಾರ್ಶ್ವೇ ಕನಕೋತ್ತಮಾಭಾ ಯೈಷಾ ಪ್ರಭಾ ಮೂರ್ತಿಮತೀವ ಗೌರೀ।
15032010c ಮಧ್ಯೇ ಸ್ಥಿತೈಷಾ ಭಗಿನೀ ದ್ವಿಜಾಗ್ರ್ಯಾ ಚಕ್ರಾಯುಧಸ್ಯಾಪ್ರತಿಮಸ್ಯ ತಸ್ಯ।।

ದ್ವಿಜಾಗ್ರರೇ! ಅವಳ ಪಕ್ಕದಲ್ಲಿ ಸ್ತ್ರೀಯರ ಮಧ್ಯದಲ್ಲಿ ಕುಳಿತಿರುವ, ಚಿನ್ನಕ್ಕೂ ಹೆಚ್ಚಿನ ಕಾಂತಿಯುಳ್ಳ, ಮೂರ್ತಿಮತ್ತಾಗಿ ಬಂದಿರುವ ಗೌರಿಯಂತೆಯೇ ಇರುವ, ಅವಳೇ ಅಪ್ರತಿಮ ಚಕ್ರಾಯುಧ ಕೃಷ್ಣನ ತಂಗಿ ಸುಭದ್ರೆ.

115032011a ಇಯಂ ಸ್ವಸಾ ರಾಜಚಮೂಪತೇಸ್ತು ಪ್ರವೃದ್ಧನೀಲೋತ್ಪಲದಾಮವರ್ಣಾ।
15032011c ಪಸ್ಪರ್ಧ ಕೃಷ್ಣೇನ ನೃಪಃ ಸದಾ ಯೋ ವೃಕೋದರಸ್ಯೈಷ ಪರಿಗ್ರಹೋಽಗ್ರ್ಯಃ।।

ಬೆಳೆದ ನೀಲಕಮಲದ ಹಾರದ ಬಣ್ಣದಂತೆ ಶ್ಯಾಮಲವರ್ಣವುಳ್ಳ ಇವಳು – ಶ್ರೀ ಕೃಷ್ಣನೊಡನೆ ಸಾರಥ್ಯದ ಕೌಶಲ್ಯದಲ್ಲಿ ಸದಾ ಸ್ಪರ್ಧಿಸುತ್ತಿದ್ದ ಮತ್ತು ದುರ್ಯೋಧನನ ಸೇನಾ ನಾಯಕನಾಗಿದ್ದ ಶಲ್ಯನ ತಂಗಿ ಮತ್ತು ಭೀಮಸೇನನ ಶ್ರೇಷ್ಠ ಭಾರ್ಯೆಯು.

15032012a ಇಯಂ ಚ ರಾಜ್ಞೋ ಮಗಧಾಧಿಪಸ್ಯ ಸುತಾ ಜರಾಸಂಧ ಇತಿ ಶ್ರುತಸ್ಯ।
15032012c ಯವೀಯಸೋ ಮಾದ್ರವತೀಸುತಸ್ಯ ಭಾರ್ಯಾ ಮತಾ ಚಂಪಕದಾಮಗೌರೀ।।

ಸಂಪಿಗೆ ಹೂವಿನ ಮಾಲೆಯಂತೆ ಗೌರವರ್ಣವುಳ್ಳ, ಮಗಧಾಧಿಪನೆಂದು ಖ್ಯಾತನಾದ ಜರಾಸಂಧನ ಮಗಳು ಇವಳು ಮಾದ್ರಿಯ ಕಡೆಯ ಮಗ ಸಹದೇವನ ಭಾರ್ಯೆ.

15032013a ಇಂದೀವರಶ್ಯಾಮತನುಃ ಸ್ಥಿತಾ ತು ಯೈಷಾಪರಾಸನ್ನಮಹೀತಲೇ ಚ।
15032013c ಭಾರ್ಯಾ ಮತಾ ಮಾದ್ರವತೀಸುತಸ್ಯ ಜ್ಯೇಷ್ಠಸ್ಯ ಸೇಯಂ ಕಮಲಾಯತಾಕ್ಷೀ।।

ಅವಳ ಸಮೀಪದಲ್ಲಿ ನೆಲದ ಮೇಲೆ ಕುಳಿತುಕೊಂಡಿರುವ, ಇಂದೀವರದಂತೆ ಶ್ಯಾಮಲ ವರ್ಣದ ಶರೀರವುಳ್ಳ, ಕಮಲಾಯತಾಕ್ಷಿಯು ಜ್ಯೇಷ್ಠ ಮಾದ್ರೀ ಸುತ ನಕುಲನ ಭಾರ್ಯೆಯು.

15032014a ಇಯಂ ತು ನಿಷ್ಟಪ್ತಸುವರ್ಣಗೌರೀ ರಾಜ್ಞೋ ವಿರಾಟಸ್ಯ ಸುತಾ ಸಪುತ್ರಾ।
15032014c ಭಾರ್ಯಾಭಿಮನ್ಯೋರ್ನಿಹತೋ ರಣೇ ಯೋ ದ್ರೋಣಾದಿಭಿಸ್ತೈರ್ವಿರಥೋ ರಥಸ್ಥೈಃ।।

ಪುಟಕ್ಕೆ ಹಾಕಿದ ಚಿನ್ನದಂತೆ ಗೌರವರ್ಣವುಳ್ಳ, ಮಗನೊಂದಿಗಿರುವ ಇವಳು ರಾಜ ವಿರಾಟನ ಮಗಳು ಮತ್ತು ವಿರಥನಾಗಿದ್ದಾಗ ರಥಸ್ಥರಾಗಿದ್ದ ದ್ರೋಣಾದಿಗಳು ರಣದಲ್ಲಿ ಸಂಹರಿಸಿದ ಆ ಅಭಿಮನ್ಯುವಿನ ಭಾರ್ಯೆಯು.

15032015a ಏತಾಸ್ತು ಸೀಮಂತಶಿರೋರುಹಾ ಯಾಃ ಶುಕ್ಲೋತ್ತರೀಯಾ ನರರಾಜಪತ್ನ್ಯಃ।
15032015c ರಾಜ್ಞೋಽಸ್ಯ ವೃದ್ಧಸ್ಯ ಪರಂಶತಾಖ್ಯಾಃ ಸ್ನುಷಾ ವಿವೀರಾ ಹತಪುತ್ರನಾಥಾಃ।।

ಬಿಳಿಯ ಉತ್ತರೀಯವನ್ನು ಹೊದೆದಿರುವ ಮತ್ತು ಬೈತಲೆಗಳಲ್ಲಿ ಕುಂಕುಮಗಳಿಲ್ಲದಿರುವ ಇವರು ನರರಾಜ ದುರ್ಯೋಧನನ ಮತ್ತು ಅವನ ತಮ್ಮಂದಿರ ಪತ್ನಿಯರು. ವೃದ್ಧ ರಾಜನ ನೂರಕ್ಕು ಹೆಚ್ಚಿನ ಸಂಖ್ಯೆಯ ಈ ಸೊಸೆಯಂದಿರು ನರವೀರರಾದ ಪತಿ-ಪುತ್ರರನ್ನು ಕಳೆದುಕೊಂಡಿದ್ದಾರೆ.

15032016a ಏತಾ ಯಥಾಮುಖ್ಯಮುದಾಹೃತಾ ವೋ ಬ್ರಾಹ್ಮಣ್ಯಭಾವಾದೃಜುಬುದ್ಧಿಸತ್ತ್ವಾಃ।
15032016c ಸರ್ವಾ ಭವದ್ಭಿಃ ಪರಿಪೃಚ್ಚ್ಯಮಾನಾ ನರೇಂದ್ರಪತ್ನ್ಯಃ ಸುವಿಶುದ್ಧಸತ್ತ್ವಾಃ।।

ಭಾವದಲ್ಲಿ ಸರಳತೆಯನ್ನೂ ಬುದ್ಧಿಗಳಲ್ಲಿ ಸತ್ತ್ವಗಳನ್ನೂ ಪಡೆದಿರುವ ಬ್ರಾಹ್ಮಣರೇ! ನೀವುಗಳೆಲ್ಲ ಕೇಳಿದುದಕ್ಕೆ ನಾನು ಮುಖ್ಯರಾದವರ ಪರಿಚಯ ಮಾಡಿಕೊಟ್ಟಿದ್ದೇನೆ. ಈ ಎಲ್ಲ ನರೇಂದ್ರಪತ್ನಿಯರೂ ವಿಶುದ್ಧಸತ್ತ್ವರು.”

15032017a ಏವಂ ಸ ರಾಜಾ ಕುರುವೃದ್ಧವರ್ಯಃ ಸಮಾಗತಸ್ತೈರ್ನರದೇವಪುತ್ರೈಃ।
15032017c ಪಪ್ರಚ್ಚ ಸರ್ವಾನ್ಕುಶಲಂ ತದಾನೀಂ ಗತೇಷು ಸರ್ವೇಷ್ವಥ ತಾಪಸೇಷು।।

ಸರ್ವ ತಾಪಸರು ಹೊರಟುಹೋದ ನಂತರ ಕುರುವೃದ್ಧವರ್ಯ ರಾಜನು ಸೇರಿರುವ ನರದೇವಪುತ್ರರೆಲ್ಲರ ಕುಶಲವನ್ನು ಪ್ರಶ್ನಿಸಿದನು.

15032018a ಯೋಧೇಷು ಚಾಪ್ಯಾಶ್ರಮಮಂಡಲಂ ತಂ ಮುಕ್ತ್ವಾ ನಿವಿಷ್ಟೇಷು ವಿಮುಚ್ಯ ಪತ್ರಮ್।
15032018c ಸ್ತ್ರೀವೃದ್ಧಬಾಲೇ ಚ ಸುಸಂನಿವಿಷ್ಟೇ ಯಥಾರ್ಹತಃ ಕುಶಲಂ ಪರ್ಯಪೃಚ್ಚತ್।।

ಯೋಧರು ಆಶ್ರಮಮಂಡಲದ ಗಡಿಯಲ್ಲಿಯೇ ವಾಹನಗಳನ್ನು ಬಿಚ್ಚಿ ಅಲ್ಲಿಯೇ ಸ್ತ್ರೀ-ವೃದ್ಧ-ಬಾಲಕರಿಗೆ ಉಳಿಯಲು ವ್ಯವಸ್ಥೆಮಾಡಿದರು. ಆಗ ಧೃತರಾಷ್ಟ್ರನು ಯಥಾರ್ಹವಾಗಿ ಕುಶಲ ಪ್ರಶ್ನೆಗಳನ್ನು ಕೇಳಿದನು.

ಸಮಾಪ್ತಿ

ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ಋಷೀನ್ ಪ್ರತಿ ಯುಧಿಷ್ಠಿರಾದಿಕಥನೇ ದ್ವಿತ್ರಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ಋಷಿನ್ ಪ್ರತಿ ಯುಧಿಷ್ಠಿರಾದಿಕಥನ ಎನ್ನುವ ಮೂವತ್ತೆರಡನೇ ಅಧ್ಯಾಯವು.


  1. ಇದಕ್ಕೆ ಮೊದಲು ಭಾರತದರ್ಶನದಲ್ಲಿ ಈ ಶ್ಲೋಕವಿದೆ: ಇಯಂ ಚ ಚಾಂಬೂನದಶುದ್ಧಗೌರೀ ಪಾರ್ಥಸ್ಯ ಭಾರ್ಯಾ ಭುಜಗೇಂದ್ರಕನ್ಯಾ। ಚಿತ್ರಾಂಗದಾ ಚೈವ ನರೇಂದ್ರಕನ್ಯಾ ಯೈಷಾ ಸವರ್ಣಾರ್ದ್ರಮಧೂಕಪುಷ್ಪಃ।। ಅರ್ಥಾತ್ ವಿಶುದ್ಧ ಚಿನ್ನದಂತೆ ಗೌರಾಂಗಳಾಗಿರುವ, ಭುಜಗೇಂದ್ರನ ಮಗಳು ಅರ್ಜುನನ ಭಾರ್ಯೆ ಇವಳೇ ಉಲೂಪಿಯು. ಅರಳಿದ ಹಿಪ್ಪೇ ಹೂಗಳ ವರ್ಣಕ್ಕೆ ಸಮಾನ ವರ್ಣವುಳ್ಳ ರಾಜಕುಮಾರಿ ಇವಳೇ ಅರ್ಜುನನ ಮತ್ತೊಬ್ಬ ಪತ್ನಿ ಚಿತ್ರಾಂಗದೆಯು. ↩︎