ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆಶ್ರಮವಾಸಿಕ ಪರ್ವ
ಆಶ್ರಮವಾಸ ಪರ್ವ
ಅಧ್ಯಾಯ 31
ಸಾರ
ಪಾಂಡವರ ಮತ್ತು ಧೃತರಾಷ್ಟ್ರಾದಿಗಳ ಮಿಲನ (1-20).
15031001 ವೈಶಂಪಾಯನ ಉವಾಚ।
15031001a ತತಸ್ತೇ ಪಾಂಡವಾ ದೂರಾದವತೀರ್ಯ ಪದಾತಯಃ।
15031001c ಅಭಿಜಗ್ಮುರ್ನರಪತೇರಾಶ್ರಮಂ ವಿನಯಾನತಾಃ।।
ವೈಶಂಪಾಯನನು ಹೇಳಿದನು: “ಅನಂತರ ಪಾಂಡವರು ದೂರದಲ್ಲಿಯೇ ಇಳಿದು ವಿನಯದಿಂದ ಕಾಲ್ನಡುಗೆಯಲ್ಲಿಯೇ ನರಪತಿಯ ಆಶ್ರಮದ ಕಡೆ ನಡೆದರು.
15031002a ಸ ಚ ಪೌರಜನಃ ಸರ್ವೋ ಯೇ ಚ ರಾಷ್ಟ್ರನಿವಾಸಿನಃ।
15031002c ಸ್ತ್ರಿಯಶ್ಚ ಕುರುಮುಖ್ಯಾನಾಂ ಪದ್ಭಿರೇವಾನ್ವಯುಸ್ತದಾ।।
ಸರ್ವ ಪೌರಜನರೂ, ರಾಷ್ಟ್ರ ನಿವಾಸಿಗಳೂ, ಕುರುಮುಖ್ಯ ಸ್ತ್ರೀಯರೂ ಕೂಡ ಪದಾತಿಗಳಾಗಿಯೇ ಆಶ್ರಮವನ್ನು ಪ್ರವೇಶಿಸಿದರು.
15031003a ಆಶ್ರಮಂ ತೇ ತತೋ ಜಗ್ಮುರ್ಧೃತರಾಷ್ಟ್ರಸ್ಯ ಪಾಂಡವಾಃ।
15031003c ಶೂನ್ಯಂ ಮೃಗಗಣಾಕೀರ್ಣಂ ಕದಲೀವನಶೋಭಿತಮ್।।
ಅನಂತರ ಆ ಪಾಂಡವರು ನಿರ್ಜನವಾಗಿದ್ದ, ಮೃಗಗಣಗಳಿಂದ ತುಂಬಿದ್ದ, ಬಾಳೆಯ ತೋಟದಿಂದ ಶೋಭಿಸುತ್ತಿದ್ದ ಧೃತರಾಷ್ಟ್ರನ ಆಶ್ರಮವನ್ನು ತಲುಪಿದರು.
15031004a ತತಸ್ತತ್ರ ಸಮಾಜಗ್ಮುಸ್ತಾಪಸಾ ವಿವಿಧವ್ರತಾಃ।
15031004c ಪಾಂಡವಾನಾಗತಾನ್ದ್ರಷ್ಟುಂ ಕೌತೂಹಲಸಮನ್ವಿತಾಃ।।
ಆಗ ಅಲ್ಲಿಗೆ ಆಗಮಿಸಿದ್ದ ಪಾಂಡವರನ್ನು ನೋಡಲು ಕುತೂಹಲದಿಂದ ಕೂಡಿದ್ದ ವಿವಿಧ ವ್ರತಗಳಲ್ಲಿ ನಿರತರಾಗಿದ್ದ ತಾಪಸರು ಬಂದು ಸೇರಿದರು.
15031005a ತಾನಪೃಚ್ಚತ್ತತೋ ರಾಜಾ ಕ್ವಾಸೌ ಕೌರವವಂಶಭೃತ್।
15031005c ಪಿತಾ ಜ್ಯೇಷ್ಠೋ ಗತೋಽಸ್ಮಾಕಮಿತಿ ಬಾಷ್ಪಪರಿಪ್ಲುತಃ।।
ಅವರನ್ನು ಕೌರವವಂಶಧಾರಕನಾದ ರಾಜಾ ಯುಧಿಷ್ಠಿರನು ಕಂಬನಿದುಂಬಿದವನಾಗಿ – “ನಮ್ಮ ಜ್ಯೇಷ್ಠ ಪಿತನು ಎಲ್ಲಿಗೆ ಹೋಗಿದ್ದಾನೆ?” ಎಂದು ಪ್ರಶ್ನಿಸಿದನು.
15031006a ತಮೂಚುಸ್ತೇ ತತೋ ವಾಕ್ಯಂ ಯಮುನಾಮವಗಾಹಿತುಮ್।
15031006c ಪುಷ್ಪಾಣಾಮುದಕುಂಭಸ್ಯ ಚಾರ್ಥೇ ಗತ ಇತಿ ಪ್ರಭೋ।।
ಹಾಗೆ ಕೇಳಲು ಅವರು “ಪ್ರಭೋ! ಅವನು ಸ್ನಾನಕ್ಕೆಂದು, ಮತ್ತು ಹೂವು-ನೀರನ್ನು ತರಲು ಯಮುನಾ ನದಿಗೆ ಹೋಗಿದ್ದಾನೆ” ಎಂದರು.
15031007a ತೈರಾಖ್ಯಾತೇನ ಮಾರ್ಗೇಣ ತತಸ್ತೇ ಪ್ರಯಯುಸ್ತದಾ।
15031007c ದದೃಶುಶ್ಚಾವಿದೂರೇ ತಾನ್ಸರ್ವಾನಥ ಪದಾತಯಃ।।
ಅವರು ಹೇಳಿದ ಮಾರ್ಗದಲ್ಲಿಯೇ ಮುಂದುವರೆಯಲು ಪಾಂಡವರು ಅನತಿದೂರದಲ್ಲಿಯೇ ಕಾಲ್ನಡುಗೆಯಲ್ಲಿ ಬರುತ್ತಿದ್ದ ಧೃತರಾಷ್ಟ್ರಾದಿ ಎಲ್ಲರನ್ನೂ ಕಂಡರು.
15031008a ತತಸ್ತೇ ಸತ್ವರಾ ಜಗ್ಮುಃ ಪಿತುರ್ದರ್ಶನಕಾಂಕ್ಷಿಣಃ।
15031008c ಸಹದೇವಸ್ತು ವೇಗೇನ ಪ್ರಾಧಾವದ್ಯೇನ ಸಾ ಪೃಥಾ।।
15031009a ಸಸ್ವನಂ ಪ್ರರುದನ್ಧೀಮಾನ್ಮಾತುಃ ಪಾದಾವುಪಸ್ಪೃಶನ್।
15031009c ಸಾ ಚ ಬಾಷ್ಪಾವಿಲಮುಖೀ ಪ್ರದದರ್ಶ ಪ್ರಿಯಂ ಸುತಮ್।।
ತಂದೆಯನ್ನು ಕಾಣುವ ಬಯಕೆಯಿಂದ ಅವರು ಬಹಳ ಶೀಘ್ರವಾಗಿ ಮುಂದುವರೆದರು. ಸಹದೇವನಾದರೋ ಬಹಳ ವೇಗವಾಗಿ ಓಡಿ ಹೋಗಿ ಪೃಥೆಯ ಕಾಲುಗಳನ್ನು ಹಿಡುದುಕೊಂಡು ಜೋರಾಗಿ ಅಳತೊಡಗಿದನು. ಕುಂತಿಯೂ ಕೂಡ ಕಂಬನಿದುಂಬಿದ ಕಣ್ಣುಗಳಿಂದ ತನ್ನ ಪ್ರಿಯ ಸುತನನ್ನು ನೋಡಿದಳು.
15031010a ಬಾಹುಭ್ಯಾಂ ಸಂಪರಿಷ್ವಜ್ಯ ಸಮುನ್ನಾಮ್ಯ ಚ ಪುತ್ರಕಮ್।
15031010c ಗಾಂಧಾರ್ಯಾಃ ಕಥಯಾಮಾಸ ಸಹದೇವಮುಪಸ್ಥಿತಮ್।।
ಮಗನನ್ನು ಮೇಲಕ್ಕೆತ್ತಿ ಬಾಹುಗಳಿಂದ ಬಿಗಿದಪ್ಪಿ ಕುಂತಿಯು ಸಹದೇವನು ಬಂದಿರುವುದನ್ನು ಗಾಂಧಾರಿಗೂ ತಿಳಿಸಿದಳು.
15031011a ಅನಂತರಂ ಚ ರಾಜಾನಂ ಭೀಮಸೇನಮಥಾರ್ಜುನಮ್।
15031011c ನಕುಲಂ ಚ ಪೃಥಾ ದೃಷ್ಟ್ವಾ ತ್ವರಮಾಣೋಪಚಕ್ರಮೇ।।
ಹತ್ತಿರದಲ್ಲಿಯೇ ಇದ್ದ ರಾಜ ಯುಧಿಷ್ಠಿರ, ಭೀಮಸೇನ, ಅರ್ಜುನ ಮತ್ತು ನಕುಲರನ್ನು ನೋಡಿ ಪೃಥೆಯು ತ್ವರೆಮಾಡಿ ಮುಂದೆಬಂದಳು.
15031012a ಸಾ ಹ್ಯಗ್ರೇಽಗಚ್ಚತ ತಯೋರ್ದಂಪತ್ಯೋರ್ಹತಪುತ್ರಯೋಃ।
15031012c ಕರ್ಷಂತೀ ತೌ ತತಸ್ತೇ ತಾಂ ದೃಷ್ಟ್ವಾ ಸಂನ್ಯಪತನ್ಭುವಿ।।
ಪುತ್ರರನ್ನು ಕಳೆದುಕೊಂಡ ಆ ದಂಪತಿಗಳನ್ನು ಎಳೆದುಕೊಂಡು ಮುಂದೆ ಮುಂದೆ ಬರುತ್ತಿದ್ದ ಅವಳನ್ನು ನೋಡಿ ಪಾಂಡವರು ಭೂಮಿಯ ಮೇಲೆಯೇ ಅಡ್ಡಬಿದ್ದರು.
15031013a ತಾನ್ರಾಜಾ ಸ್ವರಯೋಗೇನ ಸ್ಪರ್ಶೇನ ಚ ಮಹಾಮನಾಃ।
15031013c ಪ್ರತ್ಯಭಿಜ್ಞಾಯ ಮೇಧಾವೀ ಸಮಾಶ್ವಾಸಯತ ಪ್ರಭುಃ।।
ಮಹಾಮನಸ್ವಿ ಮೇಧಾವೀ ಪ್ರಭು ರಾಜಾ ಧೃತರಾಷ್ಟ್ರನು ಸ್ವರಗಳಿಂದ ಮತ್ತು ಸ್ಪರ್ಶದಿಂದ ಪ್ರತಿಯೊಬ್ಬರನ್ನೂ ಗುರುತಿಸಿ ಸಮಾಧಾನಗೊಳಿಸಿದನು.
15031014a ತತಸ್ತೇ ಬಾಷ್ಪಮುತ್ಸೃಜ್ಯ ಗಾಂಧಾರೀಸಹಿತಂ ನೃಪಮ್।
15031014c ಉಪತಸ್ಥುರ್ಮಹಾತ್ಮಾನೋ ಮಾತರಂ ಚ ಯಥಾವಿಧಿ।।
ಆಗ ಆ ಮಹಾತ್ಮರು ಕಣ್ಣೀರು ಸುರಿಸುತ್ತಾ ಗಾಂಧಾರೀ ಸಹಿತನಾದ ನೃಪನಿಗೂ ಮತ್ತು ತಾಯಿಗೂ ಯಥಾವಿಧಿಯಾಗಿ ನಮಸ್ಕರಿಸಿದರು.
15031015a ಸರ್ವೇಷಾಂ ತೋಯಕಲಶಾನ್ಜಗೃಹುಸ್ತೇ ಸ್ವಯಂ ತದಾ।
15031015c ಪಾಂಡವಾ ಲಬ್ಧಸಂಜ್ಞಾಸ್ತೇ ಮಾತ್ರಾ ಚಾಶ್ವಾಸಿತಾಃ ಪುನಃ।।
ತಾಯಿಯಿಂದ ಸಮಾಧಾನಗೊಳಿಸಲ್ಪಟ್ಟ ಪಾಂಡವರು ಪುನಃ ಚೇತರಿಸಿಕೊಂಡು ನೀರಿನ ಎಲ್ಲ ಕೊಡಗಳನ್ನೂ ಸ್ವಯಂ ತಾವೇ ಎತ್ತಿಕೊಂಡರು.
15031016a ತತೋ ನಾರ್ಯೋ ನೃಸಿಂಹಾನಾಂ ಸ ಚ ಯೋಧಜನಸ್ತದಾ।
15031016c ಪೌರಜಾನಪದಾಶ್ಚೈವ ದದೃಶುಸ್ತಂ ನರಾಧಿಪಮ್।।
ಅನಂತರ ನರಸಿಂಹರ ನಾರಿಯರು, ಯೋಧಜನರು, ಪೌರ-ಜಾನಪದ ಜನರು ನರಾಧಿಪ ಧೃತರಾಷ್ಟ್ರನನ್ನು ಸಂದರ್ಶಿಸಿದರು.
15031017a ನಿವೇದಯಾಮಾಸ ತದಾ ಜನಂ ತಂ ನಾಮಗೋತ್ರತಃ।
15031017c ಯುಧಿಷ್ಠಿರೋ ನರಪತಿಃ ಸ ಚೈನಾನ್ಪ್ರತ್ಯಪೂಜಯತ್।।
ಯುಧಿಷ್ಠಿರನು ಅವರೆಲ್ಲರನ್ನೂ ನಾಮ-ಗೋತ್ರಗಳನ್ನು ಹೇಳಿ ಪರಿಚಯ ಮಾಡಿಕೊಟ್ಟ ನಂತರ ನರಪತಿ ಧೃತರಾಷ್ಟ್ರನು ಅವರನ್ನು ಅಭಿನಂದಿಸಿದನು.
15031018a ಸ ತೈಃ ಪರಿವೃತೋ ಮೇನೇ ಹರ್ಷಬಾಷ್ಪಾವಿಲೇಕ್ಷಣಃ।
15031018c ರಾಜಾತ್ಮಾನಂ ಗೃಹಗತಂ ಪುರೇವ ಗಜಸಾಹ್ವಯೇ।।
ಪುರಜನರಿಂದ ಪರಿವೃತನಾದ ರಾಜನು ಆನಂದ ಭಾಷ್ಪಗಳನ್ನು ಸುರಿಸುತ್ತಾ ತಾನು ಹಿಂದಿನಂತೆಯೇ ಹಸ್ತಿನಾಪುರದ ಅರಮನೆಯಲ್ಲಿರುವನೋ ಎಂದು ಭಾವಿಸಿದನು.
15031019a ಅಭಿವಾದಿತೋ ವಧೂಭಿಶ್ಚ ಕೃಷ್ಣಾದ್ಯಾಭಿಃ ಸ ಪಾರ್ಥಿವಃ।
15031019c ಗಾಂಧಾರ್ಯಾ ಸಹಿತೋ ಧೀಮಾನ್ಕುಂತ್ಯಾ ಚ ಪ್ರತ್ಯನಂದತ।।
ಕೃಷ್ಣೆಯೇ ಮೊದಲಾದ ಸೊಸೆಯಂದಿರೂ ಕೂಡ ಕುಂತಿ-ಗಾಂಧಾರಿಯರ ಸಹಿತ ಪಾರ್ಥಿವನನ್ನು ಅಭಿನಂದಿಸಲು ಪ್ರತಿಯಾಗಿ ಅವನೂ ಅವರನ್ನು ಅಭಿನಂದಿಸಿದನು.
15031020a ತತಶ್ಚಾಶ್ರಮಮಾಗಚ್ಚತ್ಸಿದ್ಧಚಾರಣಸೇವಿತಮ್।
15031020c ದಿದೃಕ್ಷುಭಿಃ ಸಮಾಕೀರ್ಣಂ ನಭಸ್ತಾರಾಗಣೈರಿವ।।
ಅನಂತರ ಅವನು ಸಿದ್ಧ-ಚಾರಣರಿಂದ ಸಂಸೇವಿತವಾಗಿದ್ದ ತನ್ನ ಆಶ್ರಮಕ್ಕೆ ಹೋದನು. ಪ್ರೇಕ್ಷಕರಿಂದ ತುಂಬಿಹೋಗಿದ್ದ ಆ ಆಶ್ರಮವು ಆಗ ನಕ್ಷತ್ರಗಳಿಂದ ತುಂಬಿದ ಆಕಾಶದಂತೆ ಕಾಣುತ್ತಿತ್ತು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ಯುಧಿಷ್ಠಿರಾದಿಧೃತರಾಷ್ಟ್ರಸಮಾಗಮೇ ಏಕತ್ರಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ಯುಧಿಷ್ಠಿರಾದಿಧೃತರಾಷ್ಟ್ರಸಮಾಗಮ ಎನ್ನುವ ಮೂವತ್ತೊಂದನೇ ಅಧ್ಯಾಯವು.