ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆಶ್ರಮವಾಸಿಕ ಪರ್ವ
ಆಶ್ರಮವಾಸ ಪರ್ವ
ಅಧ್ಯಾಯ 30
ಸಾರ
ಧೃತರಾಷ್ಟ್ರನ ಆಶ್ರಮದತ್ತ ಪಾಂಡವರ ಪ್ರಯಾಣ (1-18).
15030001 ವೈಶಂಪಾಯನ ಉವಾಚ।
15030001a ಆಜ್ಞಾಪಯಾಮಾಸ ತತಃ ಸೇನಾಂ ಭರತಸತ್ತಮಃ।
15030001c ಅರ್ಜುನಪ್ರಮುಖೈರ್ಗುಪ್ತಾಂ ಲೋಕಪಾಲೋಪಮೈರ್ನರೈಃ।।
ವೈಶಂಪಾಯನನು ಹೇಳಿದನು: “ಅನಂತರ ಭರತಸತ್ತಮನು ಲೋಕಪಾಲರ ಸಮನಾದ ಅರ್ಜುಜಪ್ರಮುಖರ ರಕ್ಷಣೆಯಲ್ಲಿದ್ದ ಸೇನೆಯನ್ನು ಆಜ್ಞಾಪಿಸಿದನು.
15030002a ಯೋಗೋ ಯೋಗ ಇತಿ ಪ್ರೀತ್ಯಾ ತತಃ ಶಬ್ದೋ ಮಹಾನಭೂತ್।
15030002c ಕ್ರೋಶತಾಂ ಸಾದಿನಾಂ ತತ್ರ ಯುಜ್ಯತಾಂ ಯುಜ್ಯತಾಮಿತಿ।।
“ರಥಗಳನ್ನು ಹೂಡಿ! ಹೂಡಿ!” ಎಂಬ ಸಂತೋಷದ ಕೂಗುಗಳೂ, ಕುದುರೆ ಸವಾರರ “ಸಿದ್ಧರಾಗಿ! ಸಿದ್ಧರಾಗಿ!” ಎನ್ನುವ ಕೂಗೂ ಜೋರಾಗಿ ಕೇಳಿಬಂದಿತು.
15030003a ಕೇ ಚಿದ್ಯಾನೈರ್ನರಾ ಜಗ್ಮುಃ ಕೇ ಚಿದಶ್ವೈರ್ಮನೋಜವೈಃ।
15030003c ರಥೈಶ್ಚ ನಗರಾಕಾರೈಃ ಪ್ರದೀಪ್ತಜ್ವಲನೋಪಮೈಃ।।
ಕೆಲವರು ಪಲ್ಲಕ್ಕಿಗಳಲ್ಲಿ ಹೊರಟರೆ ಕೆಲವರು ಮನೋವೇಗದ ಕುದುರೆಗಳನ್ನೇರಿದರು. ಇನ್ನು ಕೆಲವರು ನಗರಾಕಾರದ, ಅಗ್ನಿಯಂತೆ ಬೆಳಗುತ್ತಿರುವ ರಥಗಳಲ್ಲಿ ಹೊರಟರು.
15030004a ಗಜೇಂದ್ರೈಶ್ಚ ತಥೈವಾನ್ಯೇ ಕೇ ಚಿದುಷ್ಟ್ರೈರ್ನರಾಧಿಪ।
15030004c ಪದಾತಿನಸ್ತಥೈವಾನ್ಯೇ ನಖರಪ್ರಾಸಯೋಧಿನಃ।।
ನರಾಧಿಪ! ಅನ್ಯರು ಆನೆಗಳನ್ನು ಸವಾರಿಮಾಡಿದರೆ, ಉಗುರು ಮತ್ತು ಪ್ರಾಸಗಳೊಡನೆ ಯುದ್ಧಮಾಡುವ ಯೋಧರು ಪದಾತಿಗಳಾಗಿ ಹೊರಟರು.
15030005a ಪೌರಜಾನಪದಾಶ್ಚೈವ ಯಾನೈರ್ಬಹುವಿಧೈಸ್ತಥಾ।
15030005c ಅನ್ವಯುಃ ಕುರುರಾಜಾನಂ ಧೃತರಾಷ್ಟ್ರದಿದೃಕ್ಷಯಾ।।
ಕುರುರಾಜ ಧೃತರಾಷ್ಟ್ರನನ್ನು ಕಾಣಲು ಬಯಸಿದ ಪುರ-ಗ್ರಾಮೀಣ ಪ್ರಜೆಗಳು ಬಹುವಿಧದ ಯಾನಗಳಲ್ಲಿ ಹೊರಟರು.
15030006a ಸ ಚಾಪಿ ರಾಜವಚನಾದಾಚಾರ್ಯೋ ಗೌತಮಃ ಕೃಪಃ।
15030006c ಸೇನಾಮಾದಾಯ ಸೇನಾನೀ ಪ್ರಯಯಾವಾಶ್ರಮಂ ಪ್ರತಿ।।
ರಾಜನ ವಚನದಂತೆ ಆಚಾರ್ಯ ಸೇನಾನೀ ಗೌತಮ ಕೃಪನೂ ಸೇನೆಯನ್ನು ತೆಗೆದುಕೊಂಡು ಧೃತರಾಷ್ಟ್ರನ ಆಶ್ರಮದ ಕಡೆ ಪ್ರಯಾಣಿಸಿದನು.
15030007a ತತೋ ದ್ವಿಜೈರ್ವೃತಃ ಶ್ರೀಮಾನ್ಕುರುರಾಜೋ ಯುಧಿಷ್ಠಿರಃ।
15030007c ಸಂಸ್ತೂಯಮಾನೋ ಬಹುಭಿಃ ಸೂತಮಾಗಧಬಂದಿಭಿಃ।।
15030008a ಪಾಂಡುರೇಣಾತಪತ್ರೇಣ ಧ್ರಿಯಮಾಣೇನ ಮೂರ್ಧನಿ।
15030008c ರಥಾನೀಕೇನ ಮಹತಾ ನಿರ್ಯಯೌ ಕುರುನಂದನಃ।।
ಆಗ ಕುರುನಂದನ ಶ್ರೀಮಾನ್ ಕುರುರಾಜ ಯುಧಿಷ್ಠಿರನು ದ್ವಿಜರಿಂದ ಆವೃತನಾಗಿ, ಅನೇಕ ಸೂತ-ಮಾಗಧ-ವಂದಿಗಳ ಸ್ತುತಿಗಳೊಡನೆ, ನೆತ್ತಿಯ ಮೇಲೆ ಬೆಳಗುತ್ತಿದ್ದ ಬಿಳಿಯ ಛತ್ರದಡಿಯಲ್ಲಿ, ಮಹಾ ರಥಸೇನೆಯೊಡನೆ ಹೊರಟನು.
15030009a ಗಜೈಶ್ಚಾಚಲಸಂಕಾಶೈರ್ಭೀಮಕರ್ಮಾ ವೃಕೋದರಃ।
15030009c ಸಜ್ಜಯಂತ್ರಾಯುಧೋಪೇತೈಃ ಪ್ರಯಯೌ ಮಾರುತಾತ್ಮಜಃ।।
ಮಾರುತಾತ್ಮಜ ಭೀಮಕರ್ಮಿ ವೃಕೋದರನು ಯಂತ್ರಾಯುಧಗಳಿಂದ ಸಜ್ಜಾಗಿದ್ದ ಪರ್ವತೋಪಮ ಗಜಸೇನೆಯೊಂದಿಗೆ ಹೊರಟನು.
15030010a ಮಾದ್ರೀಪುತ್ರಾವಪಿ ತಥಾ ಹಯಾರೋಹೈಃ ಸುಸಂವೃತೌ।
15030010c ಜಗ್ಮತುಃ ಪ್ರೀತಿಜನನೌ ಸಂನದ್ಧಕವಚಧ್ವಜೌ।।
ತಾಯಿಗೆ ಪ್ರಿಯರಾಗಿದ್ದ ಮಾದ್ರೀಪುತ್ರರೂ ಕೂಡ ಕವಚ-ಧ್ವಜಗಳಿಂದ ಸನ್ನದ್ಧ ಅಶ್ವಾರೋಹಿಗಳ ಸೇನೆಗಳೊಂದಿಗೆ ಹೊರಟರು.
15030011a ಅರ್ಜುನಶ್ಚ ಮಹಾತೇಜಾ ರಥೇನಾದಿತ್ಯವರ್ಚಸಾ।
15030011c ವಶೀ ಶ್ವೇತೈರ್ಹಯೈರ್ದಿವ್ಯೈರ್ಯುಕ್ತೇನಾನ್ವಗಮನ್ನೃಪಮ್।।
ಮಹಾತೇಜಸ್ವೀ ಅರ್ಜುನನು ಶ್ವೇತವರ್ಣದ ಕುದುರೆಗಳನ್ನು ಕಟ್ಟಿದ್ದ ಆದಿತ್ಯವರ್ಚಸ ರಥದಲ್ಲಿ ಕುಳಿತು ನೃಪ ಯುಧಿಷ್ಠಿರನನ್ನು ಹಿಂಬಾಲಿಸಿದನು.
15030012a ದ್ರೌಪದೀಪ್ರಮುಖಾಶ್ಚಾಪಿ ಸ್ತ್ರೀಸಂಘಾಃ ಶಿಬಿಕಾಗತಾಃ।
15030012c ಸ್ತ್ರ್ಯಧ್ಯಕ್ಷಯುಕ್ತಾಃ ಪ್ರಯಯುರ್ವಿಸೃಜಂತೋಽಮಿತಂ ವಸು।।
ಪಲ್ಲಕ್ಕಿಗಳಲ್ಲಿ ಕುಳಿತಿದ್ದ ದ್ರೌಪದಿಯೇ ಮೊದಲಾದ ಸ್ತ್ರೀಗಣಗಳೂ, ಸ್ತ್ರೀ ಅಧ್ಯಕ್ಷರ ರಕ್ಷಣೆಯಲ್ಲಿ, ಅಮಿತ ಸಂಪತ್ತನ್ನು ದಾನಮಾಡುತ್ತಾ ಹೊರಟರು.
15030013a ಸಮೃದ್ಧನರನಾಗಾಶ್ವಂ ವೇಣುವೀಣಾನಿನಾದಿತಮ್।
15030013c ಶುಶುಭೇ ಪಾಂಡವಂ ಸೈನ್ಯಂ ತತ್ತದಾ ಭರತರ್ಷಭ।।
ಭರತರ್ಷಭ! ಮನುಷ್ಯರು, ಆನೆಗಳು ಮತ್ತು ಕುದುರೆಗಳಿಂದ ಸಮೃದ್ಧವಾಗಿದ್ದ ಮತ್ತು ವೇಣುವೀಣಾನಿನಾದಗಳಿಂದ ತುಂಬಿದ್ದ ಆ ಪಾಂಡವ ಸೇನೆಯು ಶೋಭಿಸುತ್ತಿತ್ತು.
15030014a ನದೀತೀರೇಷು ರಮ್ಯೇಷು ಸರತ್ಸು ಚ ವಿಶಾಂ ಪತೇ।
15030014c ವಾಸಾನ್ಕೃತ್ವಾ ಕ್ರಮೇಣಾಥ ಜಗ್ಮುಸ್ತೇ ಕುರುಪುಂಗವಾಃ।।
ವಿಶಾಂಪತೇ! ರಮ್ಯ ನದೀತೀರಗಳಲ್ಲಿ ಮತ್ತು ಸರೋವರಗಳಲ್ಲಿ ತಂಗುತ್ತಾ ಕ್ರಮೇಣವಾಗಿ ಆ ಕುರುಪುಂಗವರು ಪ್ರಯಾಣಬೆಳೆಸಿದರು.
15030015a ಯುಯುತ್ಸುಶ್ಚ ಮಹಾತೇಜಾ ಧೌಮ್ಯಶ್ಚೈವ ಪುರೋಹಿತಃ।
15030015c ಯುಧಿಷ್ಠಿರಸ್ಯ ವಚನಾತ್ ಪುರಗುಪ್ತಿಂ ಪ್ರಚಕ್ರತುಃ।।
ಯುಧಿಷ್ಠಿರನ ವಚನದಂತೆ ಮಹಾತೇಜಸ್ವೀ ಯುಯುತ್ಸು ಮತ್ತು ಪುರೋಹಿತ ಧೌಮ್ಯರು ರಾಜಧಾನಿಯ ರಕ್ಷಣಿಯಲ್ಲಿದ್ದರು.
15030016a ತತೋ ಯುಧಿಷ್ಠಿರೋ ರಾಜಾ ಕುರುಕ್ಷೇತ್ರಮವಾತರತ್।
15030016c ಕ್ರಮೇಣೋತ್ತೀರ್ಯ ಯಮುನಾಂ ನದೀಂ ಪರಮಪಾವನೀಮ್।।
ರಾಜ ಯುಧಿಷ್ಠಿರನು ಕ್ರಮೇಣವಾಗಿ ಪರಮಪಾವನೀ ಯಮುನಾ ನದಿಯನ್ನು ದಾಟಿ ಕುರುಕ್ಷೇತ್ರವನ್ನು ತಲುಪಿದನು.
15030017a ಸ ದದರ್ಶಾಶ್ರಮಂ ದೂರಾದ್ರಾಜರ್ಷೇಸ್ತಸ್ಯ ಧೀಮತಃ।
15030017c ಶತಯೂಪಸ್ಯ ಕೌರವ್ಯ ಧೃತರಾಷ್ಟ್ರಸ್ಯ ಚೈವ ಹ।।
ದೂರದಿಂದಲೇ ಅವನು ಧೀಮಂತ ರಾಜರ್ಷಿ ಶತಯೂಪನ ಮತ್ತು ಕೌರವ್ಯ ಧೃತರಾಷ್ಟ್ರರ ಆಶ್ರಮವನ್ನು ಕಂಡನು.
15030018a ತತಃ ಪ್ರಮುದಿತಃ ಸರ್ವೋ ಜನಸ್ತದ್ವನಮಂಜಸಾ।
15030018c ವಿವೇಶ ಸುಮಹಾನಾದೈರಾಪೂರ್ಯ ಭರತರ್ಷಭ।।
ಭರತರ್ಷಭ! ಆಗ ಆ ಎಲ್ಲ ಜನರೂ ಸಂತೋಷಗೊಂಡು ಮಹಾನಾದಗೈಯುತ್ತಾ ಆಶ್ರಮಪದವನ್ನು ಪ್ರವೇಶಿಸಿದರು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ಧೃತರಾಷ್ಟ್ರಾಶ್ರಮಗಮನೇ ತ್ರಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ಧೃತರಾಷ್ಟ್ರಾಶ್ರಮಗಮನ ಎನ್ನುವ ಮೂವತ್ತನೇ ಅಧ್ಯಾಯವು.