ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆಶ್ರಮವಾಸಿಕ ಪರ್ವ
ಆಶ್ರಮವಾಸ ಪರ್ವ
ಅಧ್ಯಾಯ 29
ಸಾರ
ಪಾಂಡವರ ಶೋಕ (1-8). ಪಾಂಡವರು ಧೃತರಾಷ್ಟ್ರನ ಆಶ್ರಮಕ್ಕೆ ಹೊರಟಿದುದು (9-26).
15029001 ವೈಶಂಪಾಯನ ಉವಾಚ।
15029001a ಏವಂ ತೇ ಪುರುಷವ್ಯಾಘ್ರಾಃ ಪಾಂಡವಾ ಮಾತೃನಂದನಾಃ।
15029001c ಸ್ಮರಂತೋ ಮಾತರಂ ವೀರಾ ಬಭೂವುರ್ಭೃಶದುಃಖಿತಾಃ।।
ವೈಶಂಪಾಯನನು ಹೇಳಿದನು: “ಹೀಗೆ ಆ ಮಾತೃನಂದನ ಪುರುಷವ್ಯಾಘ್ರ ವೀರ ಪಾಂಡವರು ತಾಯಿಯನ್ನು ಸ್ಮರಿಸಿಕೊಂಡು ಬಹಳ ದುಃಖಿತರಾದರು.
15029002a ಯೇ ರಾಜಕಾರ್ಯೇಷು ಪುರಾ ವ್ಯಾಸಕ್ತಾ ನಿತ್ಯಶೋಽಭವನ್।
15029002c ತೇ ರಾಜಕಾರ್ಯಾಣಿ ತದಾ ನಾಕಾರ್ಷುಃ ಸರ್ವತಃ ಪುರೇ।।
ಹಿಂದೆ ರಾಜಕಾರ್ಯಗಳಲ್ಲಿ ನಿತ್ಯವೂ ಆಸಕ್ತಿಯನ್ನಿಟ್ಟುಕೊಂಡಿದ್ದ ಅವರು ರಾಜ್ಯದ ಎಲ್ಲ ರಾಜಕಾರ್ಯಗಳನ್ನು ಮಾಡುತ್ತಿರಲಿಲ್ಲ.
15029003a ಆವಿಷ್ಟಾ ಇವ ಶೋಕೇನ ನಾಭ್ಯನಂದಂತ ಕಿಂ ಚನ।
15029003c ಸಂಭಾಷ್ಯಮಾಣಾ ಅಪಿ ತೇ ನ ಕಿಂ ಚಿತ್ಪ್ರತ್ಯಪೂಜಯನ್।।
ಶೋಕದಿಂದ ಆವಿಷ್ಟರಾಗಿರುವರೋ ಎನ್ನುವಂತೆ ಯಾವುದರಿಂದಲೂ ಅವರು ಸಂತೋಷಗೊಳ್ಳುತ್ತಿರಲಿಲ್ಲ. ಸಂಭಾಷಣೆಗಳಲ್ಲಿ ಕೂಡ ಇತರರನ್ನು ಗೌರವಿಸುತ್ತಿರಲಿಲ್ಲ.
15029004a ತೇ ಸ್ಮ ವೀರಾ ದುರಾಧರ್ಷಾ ಗಾಂಭೀರ್ಯೇ ಸಾಗರೋಪಮಾಃ।
15029004c ಶೋಕೋಪಹತವಿಜ್ಞಾನಾ ನಷ್ಟಸಂಜ್ಞಾ ಇವಾಭವನ್।।
ದುರ್ಧರ್ಷರೂ ಸಾಗರದಂತೆ ಗಂಭೀರರೂ ಆಗಿದ್ದ ಆ ವೀರರು ಶೋಕದಿಂದ ಪೀಡಿತರಾಗಿ ಬುದ್ಧಿಯನ್ನೇ ಕಳೆದುಕೊಂಡಿರುವರೋ ಎನ್ನುವಂತೆ ತೋರುತ್ತಿದ್ದರು.
15029005a ಅನುಸ್ಮರಂತೋ ಜನನೀಂ ತತಸ್ತೇ ಕುರುನಂದನಾಃ।
15029005c ಕಥಂ ನು ವೃದ್ಧಮಿಥುನಂ ವಹತ್ಯದ್ಯ ಪೃಥಾ ಕೃಶಾ।।
ಜನನಿಯನ್ನು ಸ್ಮರಿಸಿಕೊಳ್ಳುತ್ತಾ ಆ ಕುರುನಂದನರು ಚಿಂತಿಸುತ್ತಿದ್ದರು: “ಕೃಶಳಾದ ಪೃಥೆಯು ಆ ವೃದ್ಧ ದಂಪತಿಗಳ ಸೇವೆಯನ್ನು ಹೇಗೆ ತಾನೇ ಮಾಡಬಲ್ಲಳು?
15029006a ಕಥಂ ಚ ಸ ಮಹೀಪಾಲೋ ಹತಪುತ್ರೋ ನಿರಾಶ್ರಯಃ।
15029006c ಪತ್ನ್ಯಾ ಸಹ ವಸತ್ಯೇಕೋ ವನೇ ಶ್ವಾಪದಸೇವಿತೇ।।
ಪುತ್ರರನ್ನು ಕಳೆದುಕೊಂಡು ನಿರಾಶ್ರಯನಾದ ಆ ಮಹೀಪಾಲನು ಪತ್ನಿಯ ಸಹಿತ ಏಕಾಂಗಿಯಾಗಿ ಆ ಕ್ರೂರ ಮೃಗಗಳಿರುವ ವನದಲ್ಲಿ ಹೇಗೆ ವಾಸಿಸುತ್ತಿದ್ದಾನೆ?
15029007a ಸಾ ಚ ದೇವೀ ಮಹಾಭಾಗಾ ಗಾಂಧಾರೀ ಹತಬಾಂಧವಾ।
15029007c ಪತಿಮಂಧಂ ಕಥಂ ವೃದ್ಧಮನ್ವೇತಿ ವಿಜನೇ ವನೇ।।
ಬಾಂಧವರನ್ನು ಕಳೆದುಕೊಂಡ ಆ ದೇವೀ ಮಹಾಭಾಗೆ ಗಾಂಧಾರಿಯೂ ಕೂಡ ನಿರ್ಜನ ವನದಲ್ಲಿ ಹೇಗೆ ತಾನೇ ಆ ವೃದ್ಧ ಪತಿಯನ್ನು ಅನುಸರಿಸಿ ಹೋಗುತ್ತಿದ್ದಾಳೆ?”
15029008a ಏವಂ ತೇಷಾಂ ಕಥಯತಾಮೌತ್ಸುಕ್ಯಮಭವತ್ತದಾ।
15029008c ಗಮನೇ ಚಾಭವದ್ ಬುದ್ಧಿರ್ಧೃತರಾಷ್ಟ್ರದಿದೃಕ್ಷಯಾ।।
ಹೀಗೆ ಅವರ ಕುರಿತು ಮಾತನಾಡಿಕೊಳ್ಳುತ್ತಿರುವಾಗ ಉತ್ಸುಕತೆಯಿಂದ ಧೃತರಾಷ್ಟ್ರನನ್ನು ನೋಡಲು ಹೋಗುವ ಮನಸ್ಸುಮಾಡಿದರು.
15029009a ಸಹದೇವಸ್ತು ರಾಜಾನಂ ಪ್ರಣಿಪತ್ಯೇದಮಬ್ರವೀತ್।
15029009c ಅಹೋ ಮೇ ಭವತೋ ದೃಷ್ಟಂ ಹೃದಯಂ ಗಮನಂ ಪ್ರತಿ।।
ಸಹದೇವನಾದರೋ ರಾಜನಿಗೆ ಬಗ್ಗಿ ನಮಸ್ಕರಿಸಿ ಹೇಳಿದನು: “ಅಯ್ಯಾ! ನೀನು ಅರಣ್ಯಕ್ಕೆ ಹೋಗಲು ಬಯಸಿದುದನ್ನು ಕಂಡು ನನಗೆ ಸಂತೋಷವಾಗುತ್ತಿದೆ.
15029010a ನ ಹಿ ತ್ವಾ ಗೌರವೇಣಾಹಮಶಕಂ ವಕ್ತುಮಾತ್ಮನಾ।
15029010c ಗಮನಂ ಪ್ರತಿ ರಾಜೇಂದ್ರ ತದಿದಂ ಸಮುಪಸ್ಥಿತಮ್।।
ನಿನ್ನ ಮೇಲಿನ ಗೌರವದಿಂದಾಗಿ ನಾನೇ ಇದನ್ನು ಪ್ರಸ್ತಾವಿಸಲು ಶಕ್ಯನಾಗಿರಲಿಲ್ಲ. ರಾಜೇಂದ್ರ! ಆದರೆ ಅದೃಷ್ಟವಶಾತ್ ವನಕ್ಕೆ ಹೋಗುವ ವಿಚಾರವನ್ನು ನೀನೇ ಪ್ರಸ್ತಾವಿಸಿರುವೆ!
15029011a ದಿಷ್ಟ್ಯಾ ದ್ರಕ್ಷ್ಯಾಮಿ ತಾಂ ಕುಂತೀಂ ವರ್ತಯಂತೀಂ ತಪಸ್ವಿನೀಮ್।
15029011c ಜಟಿಲಾಂ ತಾಪಸೀಂ ವೃದ್ಧಾಂ ಕುಶಕಾಶಪರಿಕ್ಷತಾಮ್।।
ತಪಸ್ವಿನಿಯಂತೆ ಜೀವಿಸುತ್ತಿರುವ, ಜಟಾಧಾರಿ, ತಾಪಸೀ, ಕುಶ-ಕಾಶಗಳ ಆಸನ-ಹಾಸಿಗೆಗಳಿಂದ ಗಾಯಗೊಂಡಿರುವ ಆ ವೃದ್ಧ ಕುಂತಿಯನ್ನು ನಾನು ನೋಡಬಲ್ಲೆನೆಂದರೆ ಅದೊಂದು ಅದೃಷ್ಟವೇ ಸರಿ!
15029012a ಪ್ರಾಸಾದಹರ್ಮ್ಯಸಂವೃದ್ಧಾಮತ್ಯಂತಸುಖಭಾಗಿನೀಮ್।
15029012c ಕದಾ ನು ಜನನೀಂ ಶ್ರಾಂತಾಂ ದ್ರಕ್ಷ್ಯಾಮಿ ಭೃಶದುಃಖಿತಾಮ್।।
ಪ್ರಾಸಾದ-ಉಪ್ಪರಿಗೆಗಳಲ್ಲಿಯೇ ಅತ್ಯಂತ ಸುಖಭಾಗಿನಿಯಾಗಿ ಬೆಳೆದು ಈಗ ಬಳಲಿರುವ ಮತ್ತು ಅತ್ಯಂತ ದುಃಖಿತಳಾಗಿರುವ ಆ ಜನನಿಯನ್ನು ನಾನು ಯಾವಾಗ ಕಾಣುತ್ತೇನೆ?
15029013a ಅನಿತ್ಯಾಃ ಖಲು ಮರ್ತ್ಯಾನಾಂ ಗತಯೋ ಭರತರ್ಷಭ।
15029013c ಕುಂತೀ ರಾಜಸುತಾ ಯತ್ರ ವಸತ್ಯಸುಖಿನೀ ವನೇ।।
ಭರತರ್ಷಭ! ರಾಜಸುತೆ ಕುಂತಿಯು ಅಸುಖಿಯಾಗಿ ಜೀವಿಸುತ್ತಿದ್ದಾಳೆ ಎಂದರೆ ಮನುಷ್ಯರ ಸ್ಥಿತಿಗತಿಗಳು ಅನಿತ್ಯವಾದವುಗಳು ಎಂದಲ್ಲವೇ?”
15029014a ಸಹದೇವವಚಃ ಶ್ರುತ್ವಾ ದ್ರೌಪದೀ ಯೋಷಿತಾಂ ವರಾ।
15029014c ಉವಾಚ ದೇವೀ ರಾಜಾನಮಭಿಪೂಜ್ಯಾಭಿನಂದ್ಯ ಚ।।
ಸಹದೇವನ ಮಾತನ್ನು ಕೇಳಿ ಸ್ತ್ರೀಯರಲ್ಲಿಯೇ ಶ್ರೇಷ್ಠಳಾದ ದೇವೀ ದ್ರೌಪದಿಯು ರಾಜನಿಗೆ ನಮಸ್ಕರಿಸಿ ಹೇಳಿದಳು:
15029015a ಕದಾ ದ್ರಕ್ಷ್ಯಾಮಿ ತಾಂ ದೇವೀಂ ಯದಿ ಜೀವತಿ ಸಾ ಪೃಥಾ।
15029015c ಜೀವಂತ್ಯಾ ಹ್ಯದ್ಯ ನಃ ಪ್ರೀತಿರ್ಭವಿಷ್ಯತಿ ನರಾಧಿಪ।।
“ನರಾಧಿಪ! ಆ ದೇವೀ ಪೃಥೆಯನ್ನು ಎಂದು ನೋಡುತ್ತೇನೆ? ಅವಳು ಜೀವಿತಳಾಗಿರುವಳಲ್ಲವೇ? ಅವಳು ಜೀವಂತಳಾಗಿದ್ದರೆ ನನಗೆ ತುಂಬಾ ಸಂತೋಷವಾಗುತ್ತದೆ.
15029016a ಏಷಾ ತೇಽಸ್ತು ಮತಿರ್ನಿತ್ಯಂ ಧರ್ಮೇ ತೇ ರಮತಾಂ ಮನಃ।
15029016c ಯೋಽದ್ಯ ತ್ವಮಸ್ಮಾನ್ರಾಜೇಂದ್ರ ಶ್ರೇಯಸಾ ಯೋಜಯಿಷ್ಯಸಿ।।
ನಿನ್ನ ಬುದ್ಧಿಯು ನಿತ್ಯವೂ ಹೀಗೆಯೇ ಇರಲಿ! ನಿನ್ನ ಮನಸ್ಸು ಧರ್ಮದಲ್ಲಿಯೇ ರಮಿಸಲಿ! ರಾಜೇಂದ್ರ! ಇಂದು ನೀನು ನಮಗೆ ಶ್ರೇಯಸ್ಸಿಗೆ ಭಾಗಿಗಳನ್ನಾಗಿ ಮಾಡುತ್ತಿರುವೆ!
15029017a ಅಗ್ರಪಾದಸ್ಥಿತಂ ಚೇಮಂ ವಿದ್ಧಿ ರಾಜನ್ವಧೂಜನಮ್।
15029017c ಕಾಂಕ್ಷಂತಂ ದರ್ಶನಂ ಕುಂತ್ಯಾ ಗಾಂಧಾರ್ಯಾಃ ಶ್ವಶುರಸ್ಯ ಚ।।
ರಾಜನ್! ಕುಂತಿ, ಗಾಂಧಾರಿ ಮತ್ತು ಮಾವನನ್ನು ಕಾಣಲು ಕಾತರರಾಗಿ ಈ ಎಲ್ಲ ಸೊಸೆಯಂದಿರೂ ತುದಿಗಾಲ ಮೇಲೆ ನಿಂತಿದ್ದಾರೆಂದು ತಿಳಿ!”
15029018a ಇತ್ಯುಕ್ತಃ ಸ ನೃಪೋ ದೇವ್ಯಾ ಪಾಂಚಾಲ್ಯಾ ಭರತರ್ಷಭ।
15029018c ಸೇನಾಧ್ಯಕ್ಷಾನ್ಸಮಾನಾಯ್ಯ ಸರ್ವಾನಿದಮಥಾಬ್ರವೀತ್।।
ಭರತರ್ಷಭ! ದೇವೀ ಪಾಂಚಾಲಿಯು ಹೀಗೆ ಹೇಳಲು ನೃಪನು ಸೇನಾಧ್ಯಕ್ಷರೆಲ್ಲರನ್ನು ಕರೆದು ಹೀಗೆ ಹೇಳಿದನು:
15029019a ನಿರ್ಯಾತಯತ ಮೇ ಸೇನಾಂ ಪ್ರಭೂತರಥಕುಂಜರಾಮ್।
15029019c ದ್ರಕ್ಷ್ಯಾಮಿ ವನಸಂಸ್ಥಂ ಚ ಧೃತರಾಷ್ಟ್ರಂ ಮಹೀಪತಿಮ್।।
“ರಥ-ಕುಂಜರಗಳಿಂದ ಸಮೃದ್ಧವಾದ ನನ್ನ ಸೇನೆಯನ್ನು ಹೊರಡಿಸಿ! ವನದಲ್ಲಿರುವ ಮಹೀಪತಿ ಧೃತರಾಷ್ಟ್ರನನ್ನು ನೋಡಲು ಬಯಸುತ್ತೇನೆ!”
15029020a ಸ್ತ್ರ್ಯಧ್ಯಕ್ಷಾಂಶ್ಚಾಬ್ರವೀದ್ರಾಜಾ ಯಾನಾನಿ ವಿವಿಧಾನಿ ಮೇ।
15029020c ಸಜ್ಜೀಕ್ರಿಯಂತಾಂ ಸರ್ವಾಣಿ ಶಿಬಿಕಾಶ್ಚ ಸಹಸ್ರಶಃ।।
ಸ್ತ್ರೀ-ಅಧ್ಯಕ್ಷರಿಗೆ ರಾಜನು ಹೇಳಿದನು: “ಸಹಸ್ರಾರು ವಿವಿಧ ವಾಹನಗಳನ್ನೂ ಪಲ್ಲಕ್ಕಿಗಳೆಲ್ಲವನ್ನೂ ಸಜ್ಜುಗೊಳಿಸಿರಿ!
15029021a ಶಕಟಾಪಣವೇಶಾಶ್ಚ ಕೋಶಶಿಲ್ಪಿನ ಏವ ಚ।
15029021c ನಿರ್ಯಾಂತು ಕೋಶಪಾಲಾಶ್ಚ ಕುರುಕ್ಷೇತ್ರಾಶ್ರಮಂ ಪ್ರತಿ।।
ಬಂಡಿಗಳು, ಅಂಗಡಿಗಳು, ಶಿಲ್ಪಿಗಳು ಮತ್ತು ಕೋಶಪಾಲರು ಕುರುಕ್ಷೇತ್ರದಲ್ಲಿರುವ ಆಶ್ರಮಕ್ಕೆ ಹೊರಡಲಿ!
15029022a ಯಶ್ಚ ಪೌರಜನಃ ಕಶ್ಚಿದ್ದ್ರಷ್ಟುಮಿಚ್ಚತಿ ಪಾರ್ಥಿವಮ್।
15029022c ಅನಾವೃತಃ ಸುವಿಹಿತಃ ಸ ಚ ಯಾತು ಸುರಕ್ಷಿತಃ।।
ಪಾರ್ಥಿವನನ್ನು ನೋಡಲು ಬಯಸುವ ಪೌರಜನರೂ ಕೂಡ ಎಲ್ಲ ಸುವಿಧಗಳೊಂದಿಗೆ ಸುರಕ್ಷಿತರಾಗಿ ಹೊರಡಲಿ!
15029023a ಸೂದಾಃ ಪೌರೋಗವಾಶ್ಚೈವ ಸರ್ವಂ ಚೈವ ಮಹಾನಸಮ್।
15029023c ವಿವಿಧಂ ಭಕ್ಷ್ಯಭೋಜ್ಯಂ ಚ ಶಕಟೈರುಹ್ಯತಾಂ ಮಮ।।
ಅಡಿಗೆಗೆ ಬೇಕಾದ ವಸ್ತುಗಳನ್ನೂ, ಎಲ್ಲ ವಿಧದ ಭಕ್ಷ್ಯ-ಭೋಜ್ಯಗಳೆಲ್ಲವನ್ನೂ ನನ್ನ ಬಂಡಿಗಳಲ್ಲಿ ತುಂಬಿಕೊಂಡು ಅಡುಗೆ ಮಾಡುವವರೂ ಹೊರಡಿರಿ!
15029024a ಪ್ರಯಾಣಂ ಘುಷ್ಯತಾಂ ಚೈವ ಶ್ವೋಭೂತ ಇತಿ ಮಾ ಚಿರಮ್।
15029024c ಕ್ರಿಯಂತಾಂ ಪಥಿ ಚಾಪ್ಯದ್ಯ ವೇಶ್ಮಾನಿ ವಿವಿಧಾನಿ ಚ।।
ತಡೆಮಾಡದೇ ನಾಳೆಯೇ ಬೆಳಿಗ್ಗೆ ಹೊರಡುವಂತೆ ಘೋಷಿಸಿರಿ! ಮಾರ್ಗದಲ್ಲಿ ವಿವಿಧ ಶಿಬಿರಗಳನ್ನೂ ಇಂದೇ ನಿರ್ಮಿಸಿರಿ!”
15029025a ಏವಮಾಜ್ಞಾಪ್ಯ ರಾಜಾ ಸ ಭ್ರಾತೃಭಿಃ ಸಹ ಪಾಂಡವಃ।
15029025c ಶ್ವೋಭೂತೇ ನಿರ್ಯಯೌ ರಾಜಾ ಸಸ್ತ್ರೀಬಾಲಪುರಸ್ಕೃತಃ।।
ಹೀಗೆ ಆಜ್ಞಾಪಿಸಿ ರಾಜಾ ಪಾಂಡವನು ಸಹೋದರರೊಂದಿಗೆ ಸ್ತ್ರೀಯರು ಮಕ್ಕಳನ್ನು ಮುಂದಿಟ್ಟುಕೊಂಡು ಮರುದಿನ ಬೆಳಗಾಗುತ್ತಲೇ ಹೊರಟನು.
15029026a ಸ ಬಹಿರ್ದಿವಸಾನೇವಂ ಜನೌಘಂ ಪರಿಪಾಲಯನ್।
15029026c ನ್ಯವಸನ್ನೃಪತಿಃ ಪಂಚ ತತೋಽಗಚ್ಚದ್ವನಂ ಪ್ರತಿ।।
ಪುರದಿಂದ ಹೊರಟು ಐದು ದಿನಗಳು ಅಲ್ಲಿಯೇ ಕಾಯುತ್ತಿದ್ದು ಎಲ್ಲರೂ ಬಂದು ಸೇರಿದನಂತರ ನೃಪತಿಯು ವನದ ಕಡೆ ಪ್ರಯಾಣಬೆಳೆಸಿದನು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ಯುಧಿಷ್ಠಿರಯಾತ್ರಾಯಾಂ ಎಕೋನತ್ರಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ಯುಧಿಷ್ಠಿರಯಾತ್ರಾ ಎನ್ನುವ ಇಪ್ಪತ್ತೊಂಭತ್ತನೇ ಅಧ್ಯಾಯವು.