ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆಶ್ರಮವಾಸಿಕ ಪರ್ವ
ಆಶ್ರಮವಾಸ ಪರ್ವ
ಅಧ್ಯಾಯ 26
ಸಾರ
ನಾರದನು ಇಂದ್ರಲೋಕಕ್ಕೆ ಹೋಗಿರುವ ರಾಜರ್ಷಿಗಳ ಕುರಿತು ಹೇಳಿ, ಧೃತರಾಷ್ಟ್ರಾದಿಗಳೂ ಉತ್ತಮ ಲೋಕಗಳನ್ನು ಪಡೆಯುವರೆಂದು ಹೇಳಿದುದು (1-22).
15026001 ವೈಶಂಪಾಯನ ಉವಾಚ।
15026001a ತತಸ್ತಸ್ಮಿನ್ಮುನಿಶ್ರೇಷ್ಠಾ ರಾಜಾನಂ ದ್ರಷ್ಟುಮಭ್ಯಯುಃ।
15026001c ನಾರದಃ ಪರ್ವತಶ್ಚೈವ ದೇವಲಶ್ಚ ಮಹಾತಪಾಃ।।
15026002a ದ್ವೈಪಾಯನಃ ಸಶಿಷ್ಯಶ್ಚ ಸಿದ್ಧಾಶ್ಚಾನ್ಯೇ ಮನೀಷಿಣಃ।
15026002c ಶತಯೂಪಶ್ಚ ರಾಜರ್ಷಿರ್ವೃದ್ಧಃ ಪರಮಧಾರ್ಮಿಕಃ।।
ವೈಶಂಪಾಯನನು ಹೇಳಿದನು: “ಆಗ ಅಲ್ಲಿಗೆ ರಾಜನನ್ನು ಕಾಣಲು ಮುನಿಶ್ರೇಷ್ಠ ನಾರದ-ಪರ್ವತರೂ, ಮಹಾತಪಸ್ವೀ ದೇವಲನೂ, ಶಿಷ್ಯರೊಂದಿಗೆ ದ್ವೈಪಾಯನನೂ, ಅನ್ಯ ಮನೀಷೀ ಸಿದ್ಧರೂ, ಪರಮ ಧಾರ್ಮಿಕ ವೃದ್ಧ ರಾಜರ್ಷಿ ಶತಯೂಪನೂ ಆಗಮಿಸಿದರು.
15026003a ತೇಷಾಂ ಕುಂತೀ ಮಹಾರಾಜ ಪೂಜಾಂ ಚಕ್ರೇ ಯಥಾವಿಧಿ।
15026003c ತೇ ಚಾಪಿ ತುತುಷುಸ್ತಸ್ಯಾಸ್ತಾಪಸಾಃ ಪರಿಚರ್ಯಯಾ।।
ಮಹಾರಾಜ! ಕುಂತಿಯು ಅವರನ್ನು ಯಥಾವಿಧಿಯಾಗಿ ಪೂಜಿಸಿದಳು. ಆ ತಾಪಸರೂ ಕೂಡ ಅವಳ ಪರಿಚರ್ಯೆಯಿಂದ ತೃಪ್ತರಾದರು.
15026004a ತತ್ರ ಧರ್ಮ್ಯಾಃ ಕಥಾಸ್ತಾತ ಚಕ್ರುಸ್ತೇ ಪರಮರ್ಷಯಃ।
15026004c ರಮಯಂತೋ ಮಹಾತ್ಮಾನಂ ಧೃತರಾಷ್ಟ್ರಂ ಜನಾಧಿಪಮ್।।
ಮಗೂ! ಅಲ್ಲಿ ಆ ಪರಮಋಷಿಗಳು ಧಾರ್ಮಿಕ ವಿಷಯಗಳ ಕುರಿತು ಮಾತನಾಡುತ್ತಾ ಮಹಾತ್ಮ ಜನಾಧಿಪ ಧೃತರಾಷ್ಟ್ರನನ್ನು ರಮಿಸುತ್ತಿದ್ದರು.
15026005a ಕಥಾಂತರೇ ತು ಕಸ್ಮಿಂಶ್ಚಿದ್ದೇವರ್ಷಿರ್ನಾರದಸ್ತದಾ।
15026005c ಕಥಾಮಿಮಾಮಕಥಯತ್ಸರ್ವಪ್ರತ್ಯಕ್ಷದರ್ಶಿವಾನ್।।
ಆ ಮಾತುಕಥೆಯ ಮಧ್ಯದಲ್ಲಿ ಎಲ್ಲದರ ಪ್ರತ್ಯಕ್ಷದರ್ಶಿಯಾದ ದೇವರ್ಷಿ ನಾರದನು ಈ ಕಥೆಯನ್ನು ಹೇಳಲು ಉಪಕ್ರಮಿಸಿದನು:
15026006a ಪುರಾ ಪ್ರಜಾಪತಿಸಮೋ ರಾಜಾಸೀದಕುತೋಭಯಃ।
15026006c ಸಹಸ್ರಚಿತ್ಯ ಇತ್ಯುಕ್ತಃ ಶತಯೂಪಪಿತಾಮಹಃ।।
“ಹಿಂದೆ ಶತಯೂಪನ ಪಿತಾಮಹ ಪ್ರಜಾಪತಿಯಂತಿದ್ದ ಮತ್ತು ಭಯವೇನೆಂಬುದನ್ನೇ ತಿಳಿಯದಿದ್ದ ಸಹಸ್ರಚಿತ್ಯ ಎಂಬ ಹೆಸರಿನ ರಾಜನಿದ್ದನು.
15026007a ಸ ಪುತ್ರೇ ರಾಜ್ಯಮಾಸಜ್ಯ ಜ್ಯೇಷ್ಠೇ ಪರಮಧಾರ್ಮಿಕೇ।
15026007c ಸಹಸ್ರಚಿತ್ಯೋ ಧರ್ಮಾತ್ಮಾ ಪ್ರವಿವೇಶ ವನಂ ನೃಪಃ।।
ಧರ್ಮಾತ್ಮ ನೃಪ ಸಹಸ್ರಚಿತ್ಯನು ರಾಜ್ಯವನ್ನು ತನ್ನ ಪರಮಧಾರ್ಮಿಕ ಜ್ಯೇಷ್ಠ ಪುತ್ರನಿಗೆ ಒಪ್ಪಿಸಿ ವನವನ್ನು ಪ್ರವೇಶಿಸಿದನು.
15026008a ಸ ಗತ್ವಾ ತಪಸಃ ಪಾರಂ ದೀಪ್ತಸ್ಯ ಸ ನರಾಧಿಪಃ।
15026008c ಪುರಂದರಸ್ಯ ಸಂಸ್ಥಾನಂ ಪ್ರತಿಪೇದೇ ಮಹಾಮನಾಃ।।
ಆ ಮಹಾಮನಸ್ವಿ ನರಾಧಿಪನು ದೀಪ್ತ ತಪಸ್ಸನ್ನು ಪೂರೈಸಿ ಪುರಂದರನ ಸಂಸ್ಥಾನವನ್ನು ಪಡೆದನು.
15026009a ದೃಷ್ಟಪೂರ್ವಃ ಸ ಬಹುಶೋ ರಾಜನ್ಸಂಪತತಾ ಮಯಾ।
15026009c ಮಹೇಂದ್ರಸದನೇ ರಾಜಾ ತಪಸಾ ದಗ್ಧಕಿಲ್ಬಿಷಃ।।
ರಾಜನ್! ತಪಸ್ಸಿನಿಂದ ಪಾಪಗಳನ್ನು ಸುಟ್ಟ ಆ ರಾಜನನ್ನು ನಾನು ಈ ಮೊದಲು ಅನೇಕ ಬಾರಿ ಮಹೇಂದ್ರಸದನದಲ್ಲಿ ನೋಡಿದ್ದೇನೆ.
15026010a ತಥಾ ಶೈಲಾಲಯೋ ರಾಜಾ ಭಗದತ್ತಪಿತಾಮಹಃ।
15026010c ತಪೋಬಲೇನೈವ ನೃಪೋ ಮಹೇಂದ್ರಸದನಂ ಗತಃ।।
ಹಾಗೆಯೇ ಭಗದತ್ತನ ಪಿತಾಮಹ ರಾಜಾ ಶೈಲಾಲಯ ನೃಪನು ತಪೋಬಲದಿಂದಲೇ ಮಹೇಂದ್ರಸದನಕ್ಕೆ ಹೋಗಿದ್ದಾನೆ.
15026011a ತಥಾ ಪೃಷಧ್ರೋ ನಾಮಾಸೀದ್ರಾಜಾ ವಜ್ರಧರೋಪಮಃ।
15026011c ಸ ಚಾಪಿ ತಪಸಾ ಲೇಭೇ ನಾಕಪೃಷ್ಠಮಿತೋ ನೃಪಃ।।
ಹಾಗೆಯೇ ವಜ್ರಧರನಿಗೆ ಸಮನಾಗಿದ್ದ ಪೃಷಧ್ರ ಎಂಬ ರಾಜ ನೃಪನೂ ಕೂಡ ತಪಸ್ಸಿನಿಂದ ಸ್ವರ್ಗಲೋಕವನ್ನು ಪಡೆದನು.
15026012a ಅಸ್ಮಿನ್ನರಣ್ಯೇ ನೃಪತೇ ಮಾಂಧಾತುರಪಿ ಚಾತ್ಮಜಃ।
15026012c ಪುರುಕುತ್ಸೋ ನೃಪಃ ಸಿದ್ಧಿಂ ಮಹತೀಂ ಸಮವಾಪ್ತವಾನ್।।
ನೃಪತೇ! ಇದೇ ಅರಣ್ಯದಲ್ಲಿ ಮಾಂಧಾತನ ಮಗ ನೃಪ ಪುರುಕುತ್ಸನೂ ಕೂಡ ಮಹಾ ಸಿದ್ಧಿಯನ್ನು ಪಡೆದನು.
15026013a ಭಾರ್ಯಾ ಸಮಭವದ್ಯಸ್ಯ ನರ್ಮದಾ ಸರಿತಾಂ ವರಾ।
15026013c ಸೋಽಸ್ಮಿನ್ನರಣ್ಯೇ ನೃಪತಿಸ್ತಪಸ್ತಪ್ತ್ವಾ ದಿವಂ ಗತಃ।।
ನದಿಗಳಲ್ಲಿ ಶ್ರೇಷ್ಠಳಾದ ನರ್ಮದೆಯು ಅವನ ಪತ್ನಿಯಾಗಿದ್ದಳು. ಆ ನೃಪತಿಯು ಇದೇ ಅರಣ್ಯದಲ್ಲಿ ತಪಸ್ಸನ್ನು ತಪಿಸಿ ಸ್ವರ್ಗಕ್ಕೆ ಹೋದನು.
15026014a ಶಶಲೋಮಾ ಚ ನಾಮಾಸೀದ್ರಾಜಾ ಪರಮಧಾರ್ಮಿಕಃ।
15026014c ಸ ಚಾಪ್ಯಸ್ಮಿನ್ವನೇ ತಪ್ತ್ವಾ ತಪೋ ದಿವಮವಾಪ್ತವಾನ್।।
ಶಶಲೋಮ ಎಂಬ ಹೆಸರಿನ ಪರಮಧಾರ್ಮಿಕ ರಾಜನಿದ್ದನು. ಅವನೂ ಕೂಡ ಇದೇ ವನದಲ್ಲಿ ತಪಸ್ಸನ್ನು ತಪಿಸಿ ಸ್ವರ್ಗವನ್ನು ಪಡೆದುಕೊಂಡನು.
15026015a ದ್ವೈಪಾಯನಪ್ರಸಾದಾಚ್ಚ ತ್ವಮಪೀದಂ ತಪೋವನಮ್।
15026015c ರಾಜನ್ನವಾಪ್ಯ ದುಷ್ಪ್ರಾಪಾಂ ಸಿದ್ಧಿಮಗ್ರ್ಯಾಂ ಗಮಿಷ್ಯಸಿ।।
ರಾಜನ್! ದ್ವೈಪಾಯನನ ಪ್ರಸಾದದಿಂದ ನೀನೂ ಕೂಡ ಈ ತಪೋವನಕ್ಕೆ ಬಂದಿರುವೆ. ನೀನು ಕಷ್ಟಕರ ಹೆಚ್ಚಿನ ಸಿದ್ಧಿಯನ್ನು ಪಡೆದು ಮೇಲೆ ಹೋಗುತ್ತೀಯೆ!
15026016a ತ್ವಂ ಚಾಪಿ ರಾಜಶಾರ್ದೂಲ ತಪಸೋಽಂತೇ ಶ್ರಿಯಾ ವೃತಃ।
15026016c ಗಾಂಧಾರೀಸಹಿತೋ ಗಂತಾ ಗತಿಂ ತೇಷಾಂ ಮಹಾತ್ಮನಾಮ್।।
ರಾಜಶಾರ್ದೂಲ! ನೀನೂ ಕೂಡ ತಪಸ್ಸಿನ ಅಂತ್ಯದಲ್ಲಿ ಶ್ರೀಯಿಂದ ಆವೃತನಾಗಿ ಗಾಂಧಾರಿಯ ಸಹಿತ ಆ ಮಹಾತ್ಮರು ಹೋದ ಗತಿಯಲ್ಲಿಯೇ ಹೋಗುತ್ತೀಯೆ.
15026017a ಪಾಂಡುಃ ಸ್ಮರತಿ ನಿತ್ಯಂ ಚ ಬಲಹಂತುಃ ಸಮೀಪತಃ।
15026017c ತ್ವಾಂ ಸದೈವ ಮಹೀಪಾಲ ಸ ತ್ವಾಂ ಶ್ರೇಯಸಿ ಯೋಕ್ಷ್ಯತಿ।।
ಬಲಹಂತು ಇಂದ್ರನ ಸಮೀಪದಲ್ಲಿರುವ ಪಾಂಡುವು ನಿತ್ಯವೂ ನಿನ್ನನ್ನು ಸ್ಮರಿಸಿಕೊಳ್ಳುತ್ತಾನೆ. ಮಹೀಪಾಲ! ಅವನು ಸದೈವ ನಿನಗೆ ಶ್ರೇಯಸ್ಸನ್ನುಂಟುಮಾಡಲು ನಿರತನಾಗಿದ್ದಾನೆ.
15026018a ತವ ಶುಶ್ರೂಷಯಾ ಚೈವ ಗಾಂಧಾರ್ಯಾಶ್ಚ ಯಶಸ್ವಿನೀ।
15026018c ಭರ್ತುಃ ಸಲೋಕತಾಂ ಕುಂತೀ ಗಮಿಷ್ಯತಿ ವಧೂಸ್ತವ।।
ನಿನ್ನ ಸೊಸೆ ಯಶಸ್ವಿನೀ ಕುಂತಿಯು ನಿನ್ನ ಮತ್ತು ಗಾಂಧಾರಿಯರ ಶುಶ್ರೂಷೆಯಿಂದಾಗಿ ತನ್ನ ಪತಿಯ ಲೋಕಕ್ಕೇ ಹೋಗುತ್ತಾಳೆ.
15026019a ಯುಧಿಷ್ಠಿರಸ್ಯ ಜನನೀ ಸ ಹಿ ಧರ್ಮಃ ಸನಾತನಃ।
15026019c ವಯಮೇತತ್ ಪ್ರಪಶ್ಯಾಮೋ ನೃಪತೇ ದಿವ್ಯಚಕ್ಷುಷಾ।।
ಯುಧಿಷ್ಠಿರನ ಜನನಿಯು ಅನುಸರಿಸುತ್ತಿರುವುದೇ ಸನಾತನ ಧರ್ಮವಾಗಿದೆ. ನೃಪತೇ! ದಿವ್ಯದೃಷ್ಟಿಯಿಂದ ನಾನು ಇದನ್ನು ಕಂಡಿದ್ದೇನೆ.
15026020a ಪ್ರವೇಕ್ಷ್ಯತಿ ಮಹಾತ್ಮಾನಂ ವಿದುರಶ್ಚ ಯುಧಿಷ್ಠಿರಮ್।
15026020c ಸಂಜಯಸ್ತ್ವದನುಧ್ಯಾನಾತ್ಪೂತಃ ಸ್ವರ್ಗಮವಾಪ್ಸ್ಯತಿ।।
ವಿದುರನು ಮಹಾತ್ಮ ಯುಧಿಷ್ಠಿರನನ್ನು ಪ್ರವೇಶಿಸುವನು. ಧ್ಯಾನಮಾಡುತ್ತಿದ್ದಾಗ ಸಂಜಯನು ಪವಿತ್ರ ಸ್ವರ್ಗವನ್ನು ಪಡೆಯುತ್ತಾನೆ.”
15026021a ಏತಚ್ಛೃತ್ವಾ ಕೌರವೇಂದ್ರೋ ಮಹಾತ್ಮಾ ಸಹೈವ ಪತ್ನ್ಯಾ ಪ್ರೀತಿಮನ್ಪ್ರತ್ಯಗೃಹ್ಣಾತ್।
15026021c ವಿದ್ವಾನ್ ವಾಕ್ಯಂ ನಾರದಸ್ಯ ಪ್ರಶಸ್ಯ ಚಕ್ರೇ ಪೂಜಾಂ ಚಾತುಲಾಂ ನಾರದಾಯ।।
ಇದನ್ನು ಕೇಳಿ ಮಹಾತ್ಮಾ ಕೌರವೇಂದ್ರನು ಪತ್ನಿಯೊಡನೆ ಸುಪ್ರೀತನಾದನು. ನಾರದನ ವಾಕ್ಯವನ್ನು ಕೇಳಿ ವಿದ್ವಾನ್ ಧೃತರಾಷ್ಟ್ರನು ನಾರದನಿಗೆ ಅತುಲ ಪೂಜೆಯನ್ನೂ ಮಾಡಿದನು.
15026022a ತಥಾ ಸರ್ವೇ ನಾರದಂ ವಿಪ್ರಸಂಘಾಃ ಸಂಪೂಜಯಾಮಾಸುರತೀವ ರಾಜನ್।
15026022c ರಾಜ್ಞಃ ಪ್ರೀತ್ಯಾ ಧೃತರಾಷ್ಟ್ರಸ್ಯ ತೇ ವೈ ಪುನಃ ಪುನಃ ಸಮಹೃಷ್ಟಾಸ್ತದಾನೀಮ್।।
ರಾಜನ್! ಹಾಗೆಯೇ ವಿಪ್ರಸಂಘಗಳೆಲ್ಲವೂ ನಾರದನನ್ನು ಅತೀವವಾಗಿ ಪೂಜಿಸಿದವು. ರಾಜ ಧೃತರಾಷ್ಟ್ರನು ಸಂತೋಷಗೊಂಡಿದ್ದುದನ್ನು ನೋಡಿ ಅವರೂ ಕೂಡ ಪುನಃ ಪುನಃ ನಾರದನನ್ನು ಶ್ಲಾಘಿಸಿದರು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ಶತಯೂಪಾಶ್ರಮನಿವಾಸೇ ಷಡ್ವಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ಶತಯೂಪಾಶ್ರಮನಿವಾಸ ಎನ್ನುವ ಇಪ್ಪತ್ತಾರನೇ ಅಧ್ಯಾಯವು.