025: ಶತಯೂಪಾಶ್ರಮನಿವಾಸಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆಶ್ರಮವಾಸಿಕ ಪರ್ವ

ಆಶ್ರಮವಾಸ ಪರ್ವ

ಅಧ್ಯಾಯ 25

ಸಾರ

ಧೃತರಾಷ್ಟ್ರಾದಿಗಳು ಶತಯೂಪನ ಆಶ್ರಮಕ್ಕೆ ತೆರಳಿದುದು (1-18).

15025001 ವೈಶಂಪಾಯನ ಉವಾಚ।
15025001a ತತೋ ಭಾಗೀರಥೀತೀರೇ ಮೇಧ್ಯೇ ಪುಣ್ಯಜನೋಚಿತೇ।
15025001c ನಿವಾಸಮಕರೋದ್ರಾಜಾ ವಿದುರಸ್ಯ ಮತೇ ಸ್ಥಿತಃ।।

ವೈಶಂಪಾಯನನು ಹೇಳಿದನು: “ಅನಂತರ ವಿದುರನ ಅಭಿಪ್ರಾಯದಂತೆ ರಾಜಾ ಧೃತರಾಷ್ಟ್ರನು ಭಾಗೀರಥೀ ತೀರದಲ್ಲಿ ಪುಣ್ಯಜನರಿಗೆ ಉಚಿತವಾದ ನಿವಾಸವನ್ನು ಮಾಡಿಸಿಕೊಂಡನು.

15025002a ತತ್ರೈನಂ ಪರ್ಯುಪಾತಿಷ್ಠನ್ಬ್ರಾಹ್ಮಣಾ ರಾಷ್ಟ್ರವಾಸಿನಃ।
15025002c ಕ್ಷತ್ರವಿಟ್ಶೂದ್ರಸಂಘಾಶ್ಚ ಬಹವೋ ಭರತರ್ಷಭ।।

ಭರತರ್ಷಭ! ಅಲ್ಲಿಗೆ ಅನೇಕ ಬ್ರಾಹ್ಮಣ-ಕ್ಷತ್ರಿಯ-ವೈಶ್ಯ-ಶೂದ್ರ ರಾಷ್ಟ್ರವಾಸೀ ಗಣಗಳು ಬಂದು ಸೇರಿದವು.

15025003a ಸ ತೈಃ ಪರಿವೃತೋ ರಾಜಾ ಕಥಾಭಿರಭಿನಂದ್ಯ ತಾನ್।
15025003c ಅನುಜಜ್ಞೇ ಸಶಿಷ್ಯಾನ್ವೈ ವಿಧಿವತ್ಪ್ರತಿಪೂಜ್ಯ ಚ।।

ಅವರಿಂದ ಪರಿವೃತನಾಗಿದ್ದ ರಾಜನು ಸಮಯೋಚಿತ ಮಾತುಕಥೆಗಳಿಂದ ಅವರನ್ನು ಅಭಿನಂದಿಸಿ, ವಿಧಿವತ್ತಾಗಿ ಪ್ರತಿಪೂಜೆಗೊಳಗೊಂಡು ಶಿಷ್ಯರೊಂದಿಗೆ ಅವರಿಗೆ ಅನುಮತಿಯನ್ನಿತ್ತನು.

15025004a ಸಾಯಾಹ್ನೇ ಸ ಮಹೀಪಾಲಸ್ತತೋ ಗಂಗಾಮುಪೇತ್ಯ ಹ।
15025004c ಚಕಾರ ವಿಧಿವಚ್ಛೌಚಂ ಗಾಂಧಾರೀ ಚ ಯಶಸ್ವಿನೀ।।

ಸಾಯಂಕಾಲವಾಗುತ್ತಲೇ ಮಹೀಪಾಲ ಮತ್ತು ಯಶಸ್ವಿನೀ ಗಾಂಧಾರಿಯರು ಗಂಗೆಯಲ್ಲಿ ಇಳಿದು ವಿಧಿವತ್ತಾಗಿ ಸ್ನಾನಾದಿಗಳನ್ನು ಮಾಡಿದರು.

15025005a ತಥೈವಾನ್ಯೇ ಪೃಥಕ್ಸರ್ವೇ ತೀರ್ಥೇಷ್ವಾಪ್ಲುತ್ಯ ಭಾರತ।
15025005c ಚಕ್ರುಃ ಸರ್ವಾಃ ಕ್ರಿಯಾಸ್ತತ್ರ ಪುರುಷಾ ವಿದುರಾದಯಃ।।

ಭಾರತ! ಹಾಗೆಯೇ ವಿದುರಾದಿ ಅನ್ಯ ಪುರುಷರೂ ಪ್ರತ್ಯೇಕ ಪ್ರತ್ಯೇಕ ತೀರ್ಥಗಳಲ್ಲಿ ಮುಳುಗಿ ಸಂಧ್ಯಾಕ್ರಿಯೆಗಳನ್ನು ಪೂರೈಸಿದರು.

15025006a ಕೃತಶೌಚಂ ತತೋ ವೃದ್ಧಂ ಶ್ವಶುರಂ ಕುಂತಿಭೋಜಜಾ।
15025006c ಗಾಂಧಾರೀಂ ಚ ಪೃಥಾ ರಾಜನ್ಗಂಗಾತೀರಮುಪಾನಯತ್।।

ರಾಜನ್! ಶೌಚಗಳನ್ನು ಪೂರೈಸಿದ ವೃದ್ಧ ಮಾವ ಮತ್ತು ಗಾಂಧಾರಿಯರನ್ನು ಕುಂತಿಭೋಜನ ಮಗಳು ಪೃಥೆಯು ಗಂಗಾತೀರಕ್ಕೆ ಕರೆತಂದಳು.

15025007a ರಾಜ್ಞಸ್ತು ಯಾಜಕೈಸ್ತತ್ರ ಕೃತೋ ವೇದೀಪರಿಸ್ತರಃ।
15025007c ಜುಹಾವ ತತ್ರ ವಹ್ನಿಂ ಸ ನೃಪತಿಃ ಸತ್ಯಸಂಗರಃ।।

ಅಲ್ಲಿ ಯಾಜಕರು ಮಾಡಿದ್ದ ವೇದಿಯಲ್ಲಿ ರಾಜ ಸತ್ಯಸಂಗರ ನೃಪತಿಯು ಹೋಮಮಾಡಿದನು.

15025008a ತತೋ ಭಾಗೀರಥೀತೀರಾತ್ಕುರುಕ್ಷೇತ್ರಂ ಜಗಾಮ ಸಃ।
15025008c ಸಾನುಗೋ ನೃಪತಿರ್ವಿದ್ವಾನ್ನಿಯತಃ ಸಂಯತೇಂದ್ರಿಯಃ।।

ಅನಂತರ ಆ ಸಂಯತೇಂದ್ರಿಯ ನೃಪತಿಯು ನಿಯಮಬದ್ಧನಾಗಿದ್ದುಕೊಂಡು ಭಾಗೀರಥೀ ತೀರದಿಂದ ಕುರುಕ್ಷೇತ್ರಕ್ಕೆ ಹೋದನು.

15025009a ತತ್ರಾಶ್ರಮಪದಂ ಧೀಮಾನಭಿಗಮ್ಯ ಸ ಪಾರ್ಥಿವಃ।
15025009c ಆಸಸಾದಾಥ ರಾಜರ್ಷಿಃ ಶತಯೂಪಂ ಮನೀಷಿಣಮ್।।

ಅಲ್ಲಿಗೆ ಹೋಗಿ ಧೀಮಾನ್ ಪಾರ್ಥಿವನು ಮನೀಷೀ ರಾಜರ್ಷಿ ಶತಯೂಪನ ಆಶ್ರಮವನ್ನು ತಲುಪಿದನು.

15025010a ಸ ಹಿ ರಾಜಾ ಮಹಾನಾಸೀತ್ಕೇಕಯೇಷು ಪರಂತಪಃ।
15025010c ಸ ಪುತ್ರಂ ಮನುಜೈಶ್ವರ್ಯೇ ನಿವೇಶ್ಯ ವನಮಾವಿಶತ್।।

ಆ ಪರಂತಪನು ಕೇಕಯರ ಮಹಾರಾಜನಾಗಿದ್ದನು. ಮಗನಿಗೆ ಮನುಜೈಶ್ವರ್ಯಗಳನ್ನು ಒಪ್ಪಿಸಿ ವನವನ್ನು ಪ್ರವೇಶಿಸಿದ್ದನು.

15025011a ತೇನಾಸೌ ಸಹಿತೋ ರಾಜಾ ಯಯೌ ವ್ಯಾಸಾಶ್ರಮಂ ತದಾ।
15025011c ತತ್ರೈನಂ ವಿಧಿವದ್ರಾಜನ್ಪ್ರತ್ಯಗೃಹ್ಣಾತ್ಕುರೂದ್ವಹಮ್।।

ಅವನೊಡನೆ ರಾಜನು ವ್ಯಾಸನ ಆಶ್ರಮಕ್ಕೆ ಹೋದನು. ರಾಜನ್! ಅಲ್ಲಿ ವ್ಯಾಸನು ಕುರೂದ್ವಹನನ್ನು ವಿಧಿವತ್ತಾಗಿ ಸ್ವಾಗತಿಸಿದನು.

15025012a ಸ ದೀಕ್ಷಾಂ ತತ್ರ ಸಂಪ್ರಾಪ್ಯ ರಾಜಾ ಕೌರವನಂದನಃ।
15025012c ಶತಯೂಪಾಶ್ರಮೇ ತಸ್ಮಿನ್ನಿವಾಸಮಕರೋತ್ತದಾ।।

ರಾಜಾ ಕೌರವನಂದನನು ಅಲ್ಲಿ ದೀಕ್ಷೆಯನ್ನು ಪಡೆದು ಶತಯೂಪನ ಆಶ್ರಮದಲ್ಲಿ ನಿವಾಸ ಮಾಡಿದನು.

15025013a ತಸ್ಮೈ ಸರ್ವಂ ವಿಧಿಂ ರಾಜನ್ರಾಜಾಚಖ್ಯೌ ಮಹಾಮತಿಃ।
15025013c ಆರಣ್ಯಕಂ ಮಹಾರಾಜ ವ್ಯಾಸಸ್ಯಾನುಮತೇ ತದಾ।।

ರಾಜನ್! ಆಗ ವ್ಯಾಸನ ಅನುಮತಿಯಂತೆ ಮಹಾಮತಿ ಶತಯೂಪನು ರಾಜನಿಗೆ ಆರಣ್ಯಕದ ಎಲ್ಲ ವಿಧಿಗಳನ್ನೂ ತಿಳಿಸಿದನು.

15025014a ಏವಂ ಸ ತಪಸಾ ರಾಜಾ ಧೃತರಾಷ್ಟ್ರೋ ಮಹಾಮನಾಃ।
15025014c ಯೋಜಯಾಮಾಸ ಚಾತ್ಮಾನಂ ತಾಂಶ್ಚಾಪ್ಯನುಚರಾಂಸ್ತದಾ।।

ಹೀಗೆ ಮಹಾಮನಸ್ವಿ ರಾಜಾ ಧೃತರಾಷ್ಟ್ರನು ಅವುಗಳನ್ನು ಅನುಚರಿಸುತ್ತಾ ತನ್ನನ್ನು ತಾನೇ ತಪಸ್ಸಿನಲ್ಲಿ ತೊಡಗಿಸಿಕೊಂಡನು.

15025015a ತಥೈವ ದೇವೀ ಗಾಂಧಾರೀ ವಲ್ಕಲಾಜಿನವಾಸಿನೀ।
15025015c ಕುಂತ್ಯಾ ಸಹ ಮಹಾರಾಜ ಸಮಾನವ್ರತಚಾರಿಣೀ।।

ಮಹಾರಾಜ! ಹಾಗೆಯೇ ವಲ್ಕಲ-ಜಿನವಸ್ತ್ರಗಳನ್ನು ಧರಿಸಿದ್ದ ದೇವೀ ಗಾಂಧಾರಿಯು ಕುಂತಿಯೊಡನೆ ಸಮಾನವ್ರತಗಳನ್ನು ಆಚರಿಸುತ್ತಿದ್ದಳು.

15025016a ಕರ್ಮಣಾ ಮನಸಾ ವಾಚಾ ಚಕ್ಷುಷಾ ಚಾಪಿ ತೇ ನೃಪ।
15025016c ಸಂನಿಯಮ್ಯೇಂದ್ರಿಯಗ್ರಾಮಮಾಸ್ಥಿತಾಃ ಪರಮಂ ತಪಃ।।

ನೃಪ! ಕರ್ಮ-ಮನಸ್ಸು-ಮಾತು-ಕಣ್ಣುಗಳಿಂದ ಇಂದ್ರಿಯಗ್ರಾಮಗಳನ್ನು ನಿಗ್ರಹಿಸಿಕೊಂಡು ಅವರು ಪರಮ ತಪಸ್ಸಿನಲ್ಲಿ ನಿರತರಾಗಿದ್ದರು.

15025017a ತ್ವಗಸ್ಥಿಭೂತಃ ಪರಿಶುಷ್ಕಮಾಂಸೋ ಜಟಾಜಿನೀ ವಲ್ಕಲಸಂವೃತಾಂಗಃ।
15025017c ಸ ಪಾರ್ಥಿವಸ್ತತ್ರ ತಪಶ್ಚಚಾರ ಮಹರ್ಷಿವತ್ತೀವ್ರಮಪೇತದೋಷಃ।।

ಮಾಂಸಗಳು ಒಣಗಿ ಕೇವಲ ಅಸ್ಥಿಭೂತನಾಗಿ, ಜಟಾಧಾರಿಯಾಗಿ ವಲ್ಕಲ-ಜಿನವಸ್ತ್ರಗಳನ್ನು ಉಟ್ಟು ಮಹರ್ಷಿಗಳಂತೆಯೇ ತೀವ್ರ ತಪಸ್ಸನ್ನು ಮಾಡುತ್ತಿದ್ದ ಆ ಪಾರ್ಥಿವನು ದೋಷಗಳೆಲ್ಲವನ್ನೂ ಕಳೆದುಕೊಂಡನು.

15025018a ಕ್ಷತ್ತಾ ಚ ಧರ್ಮಾರ್ಥವಿದಗ್ರ್ಯಬುದ್ಧಿಃ ಸಸಂಜಯಸ್ತಂ ನೃಪತಿಂ ಸದಾರಮ್।
15025018c ಉಪಾಚರದ್ ಘೋರತಪೋ ಜಿತಾತ್ಮಾ ತದಾ ಕೃಶೋ ವಲ್ಕಲಚೀರವಾಸಾಃ।।

ಧರ್ಮಾರ್ಥಗಳನ್ನು ತಿಳಿದಿದ್ದ ಮಹಾಮತಿ ಘೋರತಪಸ್ವೀ ಜಿತಾತ್ಮ ವಿದುರನೂ ಕೂಡ ಕೃಶನಾಗಿ, ವಲ್ಕಲ-ಚೀರವಸ್ತ್ರಗಳನ್ನುಟ್ಟು, ಸಂಜಯನೊಡನೆ ನೃಪತಿ ಮತ್ತು ಅವನ ಪತ್ನಿಯ ಸೇವೆಯನ್ನು ಮಾಡುತ್ತಿದ್ದನು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ಶತಯೂಪಾಶ್ರಮನಿವಾಸೇ ಪಂಚವಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ಶತಯೂಪಾಶ್ರಮನಿವಾಸ ಎನ್ನುವ ಇಪ್ಪತ್ತೈದನೇ ಅಧ್ಯಾಯವು.