ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆಶ್ರಮವಾಸಿಕ ಪರ್ವ
ಆಶ್ರಮವಾಸ ಪರ್ವ
ಅಧ್ಯಾಯ 24
ಸಾರ
ಧೃತರಾಷ್ಟ್ರ-ಗಾಂಧಾರಿಯರ ಮಾತನ್ನೂ ಕೇಳದೇ ಕುಂತಿಯು ವನಕ್ಕೆ ನಿರ್ಗಮಿಸಲು ಮುಂದುವರಿದುದು (1-11). ಧೃತರಾಷ್ಟ್ರನ ವನವಾಸದ ಮೊದಲ ರಾತ್ರಿ (12-24).
15024001 ವೈಶಂಪಾಯನ ಉವಾಚ।
15024001a ಕುಂತ್ಯಾಸ್ತು ವಚನಂ ಶ್ರುತ್ವಾ ಪಾಂಡವಾ ರಾಜಸತ್ತಮ।
15024001c ವ್ರೀಡಿತಾಃ ಸಂನ್ಯವರ್ತಂತ ಪಾಂಚಾಲ್ಯಾ ಸಹಿತಾನಘಾಃ।।
ವೈಶಂಪಾಯನನು ಹೇಳಿದನು: “ಕುಂತಿಯ ಆ ಮಾತನ್ನು ಕೇಳಿ ರಾಜಸತ್ತಮ ಪಾಂಡವನು ನಾಚಿಕೆಗೊಂಡು ಪಾಂಚಾಲೀ ಮತ್ತು ಅನಘ ತಮ್ಮಂದಿರೊಡನೆ ಹಿಂದಿರುಗಿದನು.
15024002a ತತಃ ಶಬ್ದೋ ಮಹಾನಾಸೀತ್ಸರ್ವೇಷಾಮೇವ ಭಾರತ।
15024002c ಅಂತಃಪುರಾಣಾಂ ರುದತಾಂ ದೃಷ್ಟ್ವಾ ಕುಂತೀಂ ತಥಾಗತಾಮ್।।
ಭಾರತ! ಹಾಗೆ ಕುಂತಿಯು ಹೊರಟಾಗ ಅಂತಃಪುರದ ಸ್ತ್ರೀಯರೆಲ್ಲರ ಜೋರಾದ ರೋದನವು ಕೇಳಿಬಂದಿತು.
15024003a ಪ್ರದಕ್ಷಿಣಮಥಾವೃತ್ಯ ರಾಜಾನಂ ಪಾಂಡವಾಸ್ತದಾ।
15024003c ಅಭಿವಾದ್ಯ ನ್ಯವರ್ತಂತ ಪೃಥಾಂ ತಾಮನಿವರ್ತ್ಯ ವೈ।।
ಆಗ ಪಾಂಡವರು ರಾಜನಿಗೆ ಪ್ರದಕ್ಷಿಣೆ ಮಾಡಿ ನಮಸ್ಕರಿಸಿ ಹಿಂದಿರುಗಿದರು. ಪೃಥೆಯು ಮಾತ್ರ ಹಿಂದಿರುಗಲಿಲ್ಲ.
15024004a ತತೋಽಬ್ರವೀನ್ಮಹಾರಾಜೋ ಧೃತರಾಷ್ಟ್ರೋಽಂಬಿಕಾಸುತಃ।
15024004c ಗಾಂಧಾರೀಂ ವಿದುರಂ ಚೈವ ಸಮಾಭಾಷ್ಯ ನಿಗೃಹ್ಯ ಚ।।
ಆಗ ಮಹಾರಾಜ ಅಂಬಿಕಾಸುತ ಧೃತರಾಷ್ಟ್ರನು ಗಾಂಧಾರೀ ಮತ್ತು ವಿದುರರ ಕೈಹಿಡಿದು ಹೇಳಿದನು:
15024005a ಯುಧಿಷ್ಠಿರಸ್ಯ ಜನನೀ ದೇವೀ ಸಾಧು ನಿವರ್ತ್ಯತಾಮ್।
15024005c ಯಥಾ ಯುಧಿಷ್ಠಿರಃ ಪ್ರಾಹ ತತ್ಸರ್ವಂ ಸತ್ಯಮೇವ ಹಿ।।
“ಯುಧಿಷ್ಠಿರನ ಜನನಿ ದೇವೀ ಸಾಧ್ವಿಯು ಹಿಂದಿರುಗಲಿ. ಯುಧಿಷ್ಠಿರನು ಹೇಳಿದುದೆಲ್ಲವೂ ಸತ್ಯವೇ ಸರಿ!
15024006a ಪುತ್ರೈಶ್ವರ್ಯಂ ಮಹದಿದಮಪಾಸ್ಯ ಚ ಮಹಾಫಲಮ್।
15024006c ಕಾ ನು ಗಚ್ಚೇದ್ವನಂ ದುರ್ಗಂ ಪುತ್ರಾನುತ್ಸೃಜ್ಯ ಮೂಢವತ್।।
ಮಹಾಫಲವುಳ್ಳ ಈ ಮಹಾ ಪುತ್ರೈಶ್ವರ್ಯ ಮತ್ತು ಪುತ್ರರನ್ನು ತೊರೆದು ಮೂಢರಂತೆ ಯಾರು ತಾನೇ ದುರ್ಗಮ ವನಕ್ಕೆ ತೆರಳುತ್ತಾರೆ?
15024007a ರಾಜ್ಯಸ್ಥಯಾ ತಪಸ್ತಪ್ತಂ ದಾನಂ ದತ್ತಂ ವ್ರತಂ ಕೃತಮ್।
15024007c ಅನಯಾ ಶಕ್ಯಮದ್ಯೇಹ ಶ್ರೂಯತಾಂ ಚ ವಚೋ ಮಮ।।
ರಾಜ್ಯದಲ್ಲಿದ್ದುಕೊಂಡೇ ತಪಸ್ಸನ್ನು ತಪಿಸಬಹುದು, ದಾನಗಳನ್ನು ನೀಡಬಹುದು ಮತ್ತು ವ್ರತಗಳನ್ನು ಆಚರಿಸಲು ಇವಳಿಗೆ ಶಕ್ಯವಾಗುತ್ತದೆ. ನನ್ನ ಮಾತನ್ನು ಕೇಳಿರಿ.
15024008a ಗಾಂಧಾರಿ ಪರಿತುಷ್ಟೋಽಸ್ಮಿ ವಧ್ವಾಃ ಶುಶ್ರೂಷಣೇನ ವೈ।
15024008c ತಸ್ಮಾತ್ತ್ವಮೇನಾಂ ಧರ್ಮಜ್ಞೇ ಸಮನುಜ್ಞಾತುಮರ್ಹಸಿ।।
ಗಾಂಧಾರೀ! ಸೊಸೆ ಕುಂತಿಯ ಶುಶ್ರೂಷಣೆಯಿಂದ ನಾನು ಪರಿತುಷ್ಟನಾಗಿದ್ದೇನೆ. ಧರ್ಮಜ್ಞೇ! ಆದುದರಿಂದ ನೀನು ಅವಳಿಗೆ ಹಿಂದಿರುಗಲು ಅನುಮತಿಯನ್ನು ನೀಡಬೇಕು!”
15024009a ಇತ್ಯುಕ್ತಾ ಸೌಬಲೇಯೀ ತು ರಾಜ್ಞಾ ಕುಂತೀಮುವಾಚ ಹ।
15024009c ತತ್ಸರ್ವಂ ರಾಜವಚನಂ ಸ್ವಂ ಚ ವಾಕ್ಯಂ ವಿಶೇಷವತ್।।
ಇದನ್ನು ಕೇಳಿ ಸೌಬಲೇಯಿಯು ರಾಜನ ಮಾತನ್ನು ಕುಂತಿಗೆ ಹೇಳಿದಳು. ರಾಜನ ಮಾತುಗಳೆಲ್ಲವನ್ನು ಮಾತ್ರವಲ್ಲದೇ ವಿಶೇಷವಾಗಿ ತನ್ನ ಮಾತನ್ನೂ ಅವಳಿಗೆ ತಿಳಿಸಿದಳು.
15024010a ನ ಚ ಸಾ ವನವಾಸಾಯ ದೇವೀಂ ಕೃತಮತಿಂ ತದಾ।
15024010c ಶಕ್ನೋತ್ಯುಪಾವರ್ತಯಿತುಂ ಕುಂತೀಂ ಧರ್ಮಪರಾಂ ಸತೀಮ್।।
ಆದರೆ ವನವಾಸದ ದೃಢನಿಶ್ಚಯವನ್ನು ಮಾಡಿದ್ದ ಆ ದೇವೀ ಧರ್ಮಪರ ಸತಿ ಕುಂತಿಯನ್ನು ಹಿಂದಿರುಗುವಂತೆ ಮಾಡಲು ಅವಳಿಗೂ ಶಕ್ಯವಾಗಲಿಲ್ಲ.
15024011a ತಸ್ಯಾಸ್ತು ತಂ ಸ್ಥಿರಂ ಜ್ಞಾತ್ವಾ ವ್ಯವಸಾಯಂ ಕುರುಸ್ತ್ರಿಯಃ।
15024011c ನಿವೃತ್ತಾಂಶ್ಚ ಕುರುಶ್ರೇಷ್ಠಾನ್ದೃಷ್ಟ್ವಾ ಪ್ರರುರುದುಸ್ತದಾ।।
ಅವಳ ನಿಶ್ಚಯವು ಸ್ಥಿರವಾಗಿರುವುದನ್ನು ತಿಳಿದು ಕುರುಶ್ರೇಷ್ಠರು ನಿರಾಶರಾಗಿ ಹಿಂದಿರುಗುತ್ತಿರುವುದನ್ನು ನೋಡಿ ಕುರುಸ್ತ್ರೀಯರು ರೋದಿಸಿದರು.
15024012a ಉಪಾವೃತ್ತೇಷು ಪಾರ್ಥೇಷು ಸರ್ವೇಷ್ವಂತಃಪುರೇಷು ಚ।
15024012c ಯಯೌ ರಾಜಾ ಮಹಾಪ್ರಾಜ್ಞೋ ಧೃತರಾಷ್ಟ್ರೋ ವನಂ ತದಾ।।
ಸರ್ವ ಪಾರ್ಥರೂ ಮತ್ತು ಅಂತಃಪುರದವರೂ ಹಿಂದಿರುಗಿದ ನಂತರ ಮಹಾಪ್ರಾಜ್ಞ ರಾಜಾ ಧೃತರಾಷ್ಟ್ರನು ವನಕ್ಕೆ ಹೋದನು.
15024013a ಪಾಂಡವಾ ಅಪಿ ದೀನಾಸ್ತೇ ದುಃಖಶೋಕಪರಾಯಣಾಃ।
15024013c ಯಾನೈಃ ಸ್ತ್ರೀಸಹಿತಾಃ ಸರ್ವೇ ಪುರಂ ಪ್ರವಿವಿಶುಸ್ತದಾ।।
ಪಾಂಡವರೂ ಕೂಡ ದುಃಖಶೋಕಪರಾಯಣರಾಗಿ ದೀನರಾಗಿ ಸ್ತ್ರೀಗಳೆಲ್ಲರ ಸಹಿತ ಯಾನಗಳಲ್ಲಿ ಪುರವನ್ನು ಪ್ರವೇಶಿಸಿದರು.
15024014a ತದಹೃಷ್ಟಮಿವಾಕೂಜಂ ಗತೋತ್ಸವಮಿವಾಭವತ್।
15024014c ನಗರಂ ಹಾಸ್ತಿನಪುರಂ ಸಸ್ತ್ರೀವೃದ್ಧಕುಮಾರಕಮ್।।
ಹಸ್ತಿನಾಪುರ ನಗರದ ಸ್ತ್ರೀ-ವೃದ್ಧ-ಕುಮಾರಕರೆಲ್ಲರಿಗೂ ಹರ್ಷವೇ ಇಲ್ಲದಂತಾಯಿತು. ಉತ್ಸವಾದಿಗಳು ನಡೆಯಲಿಲ್ಲ.
15024015a ಸರ್ವೇ ಚಾಸನ್ನಿರುತ್ಸಾಹಾಃ ಪಾಂಡವಾ ಜಾತಮನ್ಯವಃ।
15024015c ಕುಂತ್ಯಾ ಹೀನಾಃ ಸುದುಃಖಾರ್ತಾ ವತ್ಸಾ ಇವ ವಿನಾಕೃತಾಃ।।
ಎಲ್ಲರೂ ನಿರುತ್ಸಾಹರಾಗಿದ್ದರು. ಕುಂತಿಯಿಲ್ಲದೇ ಪಾಂಡವರು ಹಸುವಿಲ್ಲದ ಕರುಗಳಂತೆ ಅತ್ಯಂತ ದುಃಖಾರ್ತರಾಗಿದ್ದರು.
15024016a ಧೃತರಾಷ್ಟ್ರಸ್ತು ತೇನಾಹ್ನಾ ಗತ್ವಾ ಸುಮಹದಂತರಮ್।
15024016c ತತೋ ಭಾಗೀರಥೀತೀರೇ ನಿವಾಸಮಕರೋತ್ ಪ್ರಭುಃ।।
ಪ್ರಭು ಧೃತರಾಷ್ಟ್ರನಾದರೋ ಆ ದಿನ ಬಹಳ ದೂರ ನಡೆದು ಭಾಗೀರಥೀತೀರದಲ್ಲಿ ನಿವಾಸವನ್ನು ಮಾಡಿದನು.
15024017a ಪ್ರಾದುಷ್ಕೃತಾ ಯಥಾನ್ಯಾಯಮಗ್ನಯೋ ವೇದಪಾರಗೈಃ।
15024017c ವ್ಯರಾಜಂತ ದ್ವಿಜಶ್ರೇಷ್ಠೈಸ್ತತ್ರ ತತ್ರ ತಪೋಧನೈಃ।
15024017e ಪ್ರಾದುಷ್ಕೃತಾಗ್ನಿರಭವತ್ ಸ ಚ ವೃದ್ಧೋ ನರಾಧಿಪಃ।।
ಅಲ್ಲಲ್ಲಿ ಇದ್ದ ದ್ವಿಜಶ್ರೇಷ್ಠ ತಪೋಧನರು ಮತ್ತು ವೇದಪಾರಂಗತರು ಪ್ರತಿಷ್ಠಾಪಿಸಿದ್ದ ಅಗ್ನಿಗಳು ಪ್ರಕಾಶಮಾನವಾಗಿ ಕಾಣುತ್ತಿದ್ದವು. ವೃದ್ಧ ನರಾಧಿಪನು ಅಲ್ಲಿಯೇ ಅಗ್ನಿಯನ್ನು ಪ್ರತಿಷ್ಠಾಪಿಸಿದನು.
15024018a ಸ ರಾಜಾಗ್ನೀನ್ಪರ್ಯುಪಾಸ್ಯ ಹುತ್ವಾ ಚ ವಿಧಿವತ್ತದಾ।
15024018c ಸಂಧ್ಯಾಗತಂ ಸಹಸ್ರಾಂಶುಮುಪಾತಿಷ್ಠತ ಭಾರತ।।
ಭಾರತ! ರಾಜನು ವಿಧಿವತ್ತಾಗಿ ಮೂರು ಅಗ್ನಿಗಳಲ್ಲಿ ಆಹುತಿಗಳನ್ನಿತ್ತು ಉಪಾಸನೆ ಮಾಡಿದನು. ಸಂಧ್ಯಾಗತ ಸಹಸ್ರಾಂಶು ಸೂರ್ಯನನ್ನೂ ಉಪಾಸಿಸಿದನು.
15024019a ವಿದುರಃ ಸಂಜಯಶ್ಚೈವ ರಾಜ್ಞಃ ಶಯ್ಯಾಂ ಕುಶೈಸ್ತತಃ।
15024019c ಚಕ್ರತುಃ ಕುರುವೀರಸ್ಯ ಗಾಂಧಾರ್ಯಾಶ್ಚಾವಿದೂರತಃ।।
ವಿದುರ ಮತ್ತು ಸಂಜಯರು ಕುಶಗಳಿಂದ ರಾಜನ ಹಾಸಿಗೆಯನ್ನೂ, ಕುರುವೀರನ ಹತ್ತಿರದಲ್ಲಿಯೇ ಗಾಂಧಾರಿಯ ಹಾಸಿಗೆಯನ್ನೂ ಮಾಡಿದರು.
15024020a ಗಾಂಧಾರ್ಯಾಃ ಸಂನಿಕರ್ಷೇ ತು ನಿಷಸಾದ ಕುಶೇಷ್ವಥ।
15024020c ಯುಧಿಷ್ಠಿರಸ್ಯ ಜನನೀ ಕುಂತೀ ಸಾಧುವ್ರತೇ ಸ್ಥಿತಾ।।
ಗಾಂಧಾರಿಯ ಪಕ್ಕದಲ್ಲಿಯೇ ಕುಶದ ಹಾಸಿಗೆಯ ಮೇಲೆ ಯುಧಿಷ್ಠಿರನ ಜನನಿ ಸಾಧುವ್ರತೇ ಕುಂತಿಯು ಮಲಗಿದಳು.
15024021a ತೇಷಾಂ ಸಂಶ್ರವಣೇ ಚಾಪಿ ನಿಷೇದುರ್ವಿದುರಾದಯಃ।
15024021c ಯಾಜಕಾಶ್ಚ ಯಥೋದ್ದೇಶಂ ದ್ವಿಜಾ ಯೇ ಚಾನುಯಾಯಿನಃ।।
ಅವರಿಗೆ ಕೇಳಿಸುವಷ್ಟು ದೂರದಲ್ಲಿಯೇ ವಿದುರಾದಿಗಳು, ಯಾಜಕರು, ಮತ್ತು ಅನುಯಾಯಿಗಳಾಗಿ ಬಂದ ದ್ವಿಜರು ಸ್ಥಳವಿದ್ದ ಹಾಗೆ ಮಲಗಿಕೊಂಡರು.
15024022a ಪ್ರಾಧೀತದ್ವಿಜಮುಖ್ಯಾ ಸಾ ಸಂಪ್ರಜ್ವಾಲಿತಪಾವಕಾ।
15024022c ಬಭೂವ ತೇಷಾಂ ರಜನೀ ಬ್ರಾಹ್ಮೀವ ಪ್ರೀತಿವರ್ಧನೀ।।
ಸ್ವಾಧ್ಯಾಯದಲ್ಲಿ ನಿರತರಾಗಿದ ಬ್ರಾಹ್ಮಣರಿಂದ ಮತ್ತು ಪ್ರಜ್ವಲಿಸುತ್ತಿದ್ದ ಪಾವಕಗಳಿಂದ ಅ ರಜನಿಯು ಅವರಿಗೆ ಬ್ರಾಹ್ಮೀ ರಾತ್ರಿಯಂತೆ ಸಂತೋಷವನ್ನುಂಟು ಮಾಡಿತು.
15024023a ತತೋ ರಾತ್ರ್ಯಾಂ ವ್ಯತೀತಾಯಾಂ ಕೃತಪೂರ್ವಾಹ್ಣಿಕಕ್ರಿಯಾಃ।
15024023c ಹುತ್ವಾಗ್ನಿಂ ವಿಧಿವತ್ ಸರ್ವೇ ಪ್ರಯಯುಸ್ತೇ ಯಥಾಕ್ರಮಮ್।
15024023e ಉದಙ್ಮುಖಾ ನಿರೀಕ್ಷಂತ ಉಪವಾಸಪರಾಯಣಾಃ।।
ರಾತ್ರಿಯು ಕಳೆಯಲು ಪೂರ್ವಾಹ್ಣಿಕ ಕ್ರಿಯೆಗಳನ್ನು ಪೂರೈಸಿ ವಿಧಿವತ್ತಾಗಿ ಅಗ್ನಿಗಳಲ್ಲಿ ಹೋಮಮಾಡಿ, ಎಲ್ಲರೂ ಯಥಾಕ್ರಮವಾಗಿ ಪ್ರಯಾಣ ಬೆಳೆಸಿದರು. ಉಪವಾಸವ್ರತನಿಷ್ಠರಾಗಿದ್ದ ಅವರು ಉತ್ತರಾಭಿಮುಖವಾಗಿ ಹೊರಟರು.
15024024a ಸ ತೇಷಾಮತಿದುಃಖೋಽಭೂನ್ನಿವಾಸಃ ಪ್ರಥಮೇಽಹನಿ।
15024024c ಶೋಚತಾಂ ಶೋಚ್ಯಮಾನಾನಾಂ ಪೌರಜಾನಪದೈರ್ಜನೈಃ।।
ಶೋಕ ಪಡುತ್ತಿದ್ದ ನಗರ-ಗ್ರಾಮೀಣ ಜನರನ್ನು ನೋಡಿ ಶೋಕಿಸುತ್ತಿದ್ದ ಅವರಿಗೆ ಆ ಮೊದಲನೆಯ ದಿನವು ಅತಿದುಃಖಕರವಾಗಿತ್ತು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ಚತುರ್ವಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ಇಪ್ಪತ್ನಾಲ್ಕನೇ ಅಧ್ಯಾಯವು.