021: ಧೃತರಾಷ್ಟ್ರನಿರ್ಯಾಣಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆಶ್ರಮವಾಸಿಕ ಪರ್ವ

ಆಶ್ರಮವಾಸ ಪರ್ವ

ಅಧ್ಯಾಯ 21

ಸಾರ

ಧೃತರಾಷ್ಟ್ರನ ವನಗಮನ (1-13)

15021001 ವೈಶಂಪಾಯನ ಉವಾಚ।
15021001a ತತಃ ಪ್ರಭಾತೇ ರಾಜಾ ಸ ಧೃತರಾಷ್ಟ್ರೋಽಂಬಿಕಾಸುತಃ।
15021001c ಆಹೂಯ ಪಾಂಡವಾನ್ವೀರಾನ್ವನವಾಸಕೃತಕ್ಷಣಃ।।

ವೈಶಂಪಾಯನನು ಹೇಳಿದನು: “ಮರುದಿನ ಬೆಳಿಗ್ಗೆ ಅಂಬಿಕಾಸುತ ಧೃತರಾಷ್ಟ್ರನು ವನವಾಸಕ್ಕೆ ಹೊರಡಲು ಸಿದ್ಧನಾಗಿ ವೀರ ಪಾಂಡವರನ್ನು ಕರೆಯಿಸಿದನು.

15021002a ಗಾಂಧಾರೀಸಹಿತೋ ಧೀಮಾನಭಿನಂದ್ಯ ಯಥಾವಿಧಿ।
15021002c ಕಾರ್ತ್ತಿಕ್ಯಾಂ ಕಾರಯಿತ್ವೇಷ್ಟಿಂ ಬ್ರಾಹ್ಮಣೈರ್ವೇದಪಾರಗೈಃ।।

ಗಾಂಧಾರಿಯ ಸಹಿತನಾಗಿ ಆ ಧೀಮಂತನು ಯಥಾವಿಧಿಯಾಗಿ ಅವರನ್ನು ಅಭಿನಂದಿಸಿ, ವೇದಪಾರಗ ಬ್ರಾಹ್ಮಣರಿಂದ ಕಾರ್ತೀಕದ ಹುಣ್ಣಿಮೆಯಂದು ಇಷ್ಟಿಯನ್ನು ನೆರವೇರಿಸಿದನು.

15021003a ಅಗ್ನಿಹೋತ್ರಂ ಪುರಸ್ಕೃತ್ಯ ವಲ್ಕಲಾಜಿನಸಂವೃತಃ।
15021003c ವಧೂಪರಿವೃತೋ ರಾಜಾ ನಿರ್ಯಯೌ ಭವನಾತ್ತತಃ।।

ಅಗ್ನಿಹೋತ್ರವನ್ನು ಮುಂದೆಮಾಡಿಕೊಂಡು, ವಲ್ಕಲ-ಜಿನವಸ್ತ್ರಗಳನ್ನು ಧರಿಸಿ, ಸೊಸೆಯರಿಂದ ಪರಿವೃತನಾಗಿ ರಾಜನು ತನ್ನ ಭವನದಿಂದ ಹೊರಟನು.

15021004a ತತಃ ಸ್ತ್ರಿಯಃ ಕೌರವಪಾಂಡವಾನಾಂ ಯಾಶ್ಚಾಪ್ಯನ್ಯಾಃ ಕೌರವರಾಜವಂಶ್ಯಾಃ।
15021004c ತಾಸಾಂ ನಾದಃ ಪ್ರಾದುರಾಸೀತ್ತದಾನೀಂ ವೈಚಿತ್ರವೀರ್ಯೇ ನೃಪತೌ ಪ್ರಯಾತೇ।।

ವಿಚಿತ್ರವೀರ್ಯನ ಮಗ ನೃಪತಿಯು ಹೊರಟ ಆ ಸಮಯದಲ್ಲಿ ಕೌರವ-ಪಾಂಡವರ ಸ್ತ್ರೀಯರ ಮತ್ತು ಕೌರವ ರಾಜ ವಂಶಜರ ಆರ್ತನಾದಗಳು ಎಲ್ಲ ಕಡೆಗಳಿಂದಲೂ ಕೇಳಿ ಬರುತ್ತಿದ್ದವು.

15021005a ತತೋ ಲಾಜೈಃ ಸುಮನೋಭಿಶ್ಚ ರಾಜಾ ವಿಚಿತ್ರಾಭಿಸ್ತದ್ಗೃಹಂ ಪೂಜಯಿತ್ವಾ।
15021005c ಸಂಯೋಜ್ಯಾರ್ಥೈರ್ಭೃತ್ಯಜನಂ ಚ ಸರ್ವಂ ತತಃ ಸಮುತ್ಸೃಜ್ಯ ಯಯೌ ನರೇಂದ್ರಃ।।

ಅನಂತರ ನರೇಂದ್ರನು ಸುಮನೋಹರ ಅರಳಿನಿಂದಲೂ ವಿಚಿತ್ರ ಪುಷ್ಪಗಳಿಂದಲೂ ತನ್ನ ಅರಮನೆಯನ್ನು ಪೂಜಿಸಿ, ಸೇವಕವರ್ಗದ ಜನರೆಲ್ಲರನ್ನು ಸತ್ಕರಿಸಿ, ಎಲ್ಲವನ್ನೂ ಬಿಟ್ಟು ಹೊರಟನು.

15021006a ತತೋ ರಾಜಾ ಪ್ರಾಂಜಲಿರ್ವೇಪಮಾನೋ ಯುಧಿಷ್ಠಿರಃ ಸಸ್ವನಂ ಬಾಷ್ಪಕಂಠಃ।
15021006c ವಿಲಪ್ಯೋಚ್ಚೈರ್ಹಾ ಮಹಾರಾಜ ಸಾಧೋ ಕ್ವ ಗಂತಾಸೀತ್ಯಪತತ್ತಾತ ಭೂಮೌ।।

ಆಗ ರಾಜಾ ಯುಧಿಷ್ಠಿರನು ಕೈಮುಗಿದು ನಡುಗುತ್ತಾ ಕಣ್ಣೀರಿನಿಂದ ಗಂಟಲು ಕಟ್ಟಿದವನಾಗಿ “ಸತ್ಪುರುಷನೇ! ಮಹಾರಾಜ! ಎಲ್ಲಿಗೆ ಹೋಗುತ್ತಿರುವೆ?” ಎಂದು ಜೋರಾಗಿ ಕೂಗಿಕೊಳ್ಳುತ್ತಾ ಭೂಮಿಯ ಮೇಲೆ ಬಿದ್ದನು.

15021007a ತಥಾರ್ಜುನಸ್ತೀವ್ರದುಃಖಾಭಿತಪ್ತೋ ಮುಹುರ್ಮುಹುರ್ನಿಃಶ್ವಸನ್ಭಾರತಾಗ್ರ್ಯಃ।
15021007c ಯುಧಿಷ್ಠಿರಂ ಮೈವಮಿತ್ಯೇವಮುಕ್ತ್ವಾ ನಿಗೃಹ್ಯಾಥೋದೀಧರತ್ಸೀದಮಾನಃ।।

ಆಗ ತೀವ್ರ ದುಃಖದಿಂದ ಪರಿತಪಿಸುತ್ತಿದ್ದ ಭಾರತಾಗ್ರ್ಯ ಅರ್ಜುನನು ಪುನಃ ಪುನಃ ನಿಟ್ಟುಸಿರು ಬಿಡುತ್ತಾ ಯುಧಿಷ್ಠಿರನಿಗೆ “ನೀನು ಹೀಗೆ ಅಧೀರನಾಗಬಾರದು!” ಎಂದು ಹೇಳುತ್ತಾ ತಾನೂ ಎದೆಗುಂದಿದನು.

15021008a ವೃಕೋದರಃ ಫಲ್ಗುನಶ್ಚೈವ ವೀರೌ ಮಾದ್ರೀಪುತ್ರೌ ವಿದುರಃ ಸಂಜಯಶ್ಚ।
15021008c ವೈಶ್ಯಾಪುತ್ರಃ ಸಹಿತೋ ಗೌತಮೇನ ಧೌಮ್ಯೋ ವಿಪ್ರಾಶ್ಚಾನ್ವಯುರ್ಬಾಷ್ಪಕಂಠಾಃ।।

ವೃಕೋದರ, ಫಲ್ಗುನ, ವೀರ ಮಾದ್ರೀಪುತ್ರರು, ವಿದುರ, ಸಂಜಯ, ವೈಶ್ಯಾಪುತ್ರ ಯುಯುತ್ಸು, ಮತ್ತು ಧೌಮ್ಯನೊಡನೆ ವಿಪ್ರ ಗೌತಮ ಕೃಪರು ಬಾಷ್ಪಗದ್ಗದ ಕಂಠಗಳಿಂದ ಕೂಡಿದವರಾಗಿ ರಾಜನನ್ನು ಅನುಸರಿಸಿ ಹೋದರು.

15021009a ಕುಂತೀ ಗಾಂಧಾರೀಂ ಬದ್ಧನೇತ್ರಾಂ ವ್ರಜಂತೀಂ ಸ್ಕಂಧಾಸಕ್ತಂ ಹಸ್ತಮಥೋದ್ವಹಂತೀ।
15021009c ರಾಜಾ ಗಾಂಧಾರ್ಯಾಃ ಸ್ಕಂಧದೇಶೇಽವಸಜ್ಯ ಪಾಣಿಂ ಯಯೌ ಧೃತರಾಷ್ಟ್ರಃ ಪ್ರತೀತಃ।।

ಕುಂತಿಯು ಕಣ್ಣುಗಳನ್ನು ಕಟ್ಟಿಕೊಂಡಿದ್ದ ಗಾಂಧಾರಿಯ ಎಡತೋಳನ್ನು ತನ್ನ ಹೆಗಲ ಮೇಲೆ ಇಟ್ಟುಕೊಂಡು ಹೋಗುತ್ತಿದ್ದಳು. ರಾಜಾ ಧೃತರಾಷ್ಟ್ರನು ಗಾಂಧಾರಿಯ ಹೆಗಲಿನ ಮೇಲೆ ಕೈಯನ್ನಿಟ್ಟು ನಿಶ್ಚಿಂತನಾಗಿ ಹೋಗುತ್ತಿದ್ದನು.

15021010a ತಥಾ ಕೃಷ್ಣಾ ದ್ರೌಪದೀ ಯಾದವೀ ಚ ಬಾಲಾಪತ್ಯಾ ಚೋತ್ತರಾ ಕೌರವೀ ಚ।
15021010c ಚಿತ್ರಾಂಗದಾ ಯಾಶ್ಚ ಕಾಶ್ಚಿತ್ ಸ್ತ್ರಿಯೋಽನ್ಯಾಃ ಸಾರ್ಧಂ ರಾಜ್ಞಾ ಪ್ರಸ್ಥಿತಾಸ್ತಾ ವಧೂಭಿಃ।।

ಹಾಗೆಯೇ ದ್ರೌಪದೀ ಕೃಷ್ಣೆ, ಯಾದವೀ ಸುಭದ್ರೆ, ಮಗುವನ್ನೆತ್ತಿಕೊಂಡಿದ್ದ ಕೌರವೀ ಉತ್ತರೆ, ಚಿತ್ರಾಂಗದಾ ಮತ್ತು ಇತರ ಸ್ತ್ರೀಯರು ಎಲ್ಲರೂ ಒಟ್ಟಾಗಿ ರಾಜ ಧೃತರಾಷ್ಟ್ರನೊಡನೆ ಹೋಗುತ್ತಿದ್ದರು.

15021011a ತಾಸಾಂ ನಾದೋ ರುದತೀನಾಂ ತದಾಸೀದ್ ರಾಜನ್ದುಃಖಾತ್ಕುರರೀಣಾಮಿವೋಚ್ಚೈಃ।
15021011c ತತೋ ನಿಷ್ಪೇತುರ್ಬ್ರಾಹ್ಮಣಕ್ಷತ್ರಿಯಾಣಾಂ ವಿಟ್ಶೂದ್ರಾಣಾಂ ಚೈವ ನಾರ್ಯಃ ಸಮಂತಾತ್।।

ರಾಜನ್! ಆಗ ಅವರೆಲ್ಲರ ರೋದನವು ದುಃಖದಲ್ಲಿರುವ ಕಡಲಹದ್ದುಗಳ ಕೂಗಿನಂತೆ ಕೇಳಿಬರುತ್ತಿತ್ತು. ಅದನ್ನು ಕೇಳಿ ಬ್ರಾಹ್ಮಣ-ಕ್ಷತ್ರಿಯ-ವೈಶ್ಯ-ಶೂದ್ರ ನಾರಿಯರು ಅಲ್ಲಿಗೆ ಎಲ್ಲಕಡೆಗಳಿಂದ ಬಂದು ಸೇರಿದರು.

15021012a ತನ್ನಿರ್ಯಾಣೇ ದುಃಖಿತಃ ಪೌರವರ್ಗೋ ಗಜಾಹ್ವಯೇಽತೀವ ಬಭೂವ ರಾಜನ್।
15021012c ಯಥಾ ಪೂರ್ವಂ ಗಚ್ಚತಾಂ ಪಾಂಡವಾನಾಂ ದ್ಯೂತೇ ರಾಜನ್ಕೌರವಾಣಾಂ ಸಭಾಯಾಮ್।।

ರಾಜನ್! ಹಿಂದೆ ದ್ಯೂತದ ಸಮಯದಲ್ಲಿ ಕೌರವರ ಸಭೆಯಿಂದ ಪಾಂಡವರು ಹೊರಟಿದ್ದಾಗ ಹೇಗೋ ಹಾಗೆ ಧೃತರಾಷ್ಟ್ರನು ಹೊರಡುವಾಗಲೂ ಕೂಡ ಹಸ್ತಿನಾಪುರದ ಪೌರವರ್ಗವು ಅತೀವ ದುಃಖಿತಗೊಂಡಿತ್ತು.

15021013a ಯಾ ನಾಪಶ್ಯಚ್ಚಂದ್ರಮಾ ನೈವ ಸೂರ್ಯೋ ರಾಮಾಃ ಕದಾ ಚಿದಪಿ ತಸ್ಮಿನ್ನರೇಂದ್ರೇ।
15021013c ಮಹಾವನಂ ಗಚ್ಚತಿ ಕೌರವೇಂದ್ರೇ ಶೋಕೇನಾರ್ತಾ ರಾಜಮಾರ್ಗಂ ಪ್ರಪೇದುಃ।।

ಯಾವ ರಮಣೀಯರು ಸೂರ್ಯ-ಚಂದ್ರರನ್ನು ನೋಡಲೂ ಕೂಡ ಹೊರಗೆ ಬರುತ್ತಿರಲಿಲ್ಲವೋ ಅಂಥವರೆಲ್ಲರೂ ಕೌರವೇಂದ್ರನು ಮಹಾವನಕ್ಕೆ ಹೊರಡುವಾಗ ಶೋಕಾರ್ತರಾಗಿ ರಾಜಬೀದಿಗೆ ಬಂದರು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ಧೃತರಾಷ್ಟ್ರನಿರ್ಯಾಣೇ ಏಕವಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ಧೃತರಾಷ್ಟ್ರನಿರ್ಯಾಣ ಎನ್ನುವ ಇಪ್ಪತ್ತೊಂದನೇ ಅಧ್ಯಾಯವು.